ಭಾರತದ ಹೃದಯ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ ನಿಸರ್ಗ ಸೌಂದರ್ಯ, ಗೌರವಶಾಲಿ ಇತಿಹಾಸ ಮತ್ತು ಆಧುನಿಕತೆಯ ಅದ್ಭುತ ಸಮನ್ವಯತೆ ಇದೆ. ವಿಂದ್ಯ ಮತ್ತು ಸತ್ಪುಡಾ ಪರ್ವತಗಳಿಂದ ಆವೃತ್ತವಾದ ಈ ರಾಜ್ಯ ಬುಂದೇಲದ ರಜಪೂತರ ಬಳಿಕ ಮೊಘಲ್ ಸಾಮ್ರಾಜ್ಯದ ಆಳ್ವಿಕೆಗೂ ಒಳಪಟ್ಟಿತ್ತು. ಈ ರಾಜ್ಯದ ಪುನರ್ರಚನೆ 1956 ರಲ್ಲಾಯಿತು.

ಮಧ್ಯಪ್ರದೇಶದ ಏರುಪೇರುಗಳ ಇತಿಹಾಸದ ಕಥೆ ಇಲ್ಲಿನ ಕೋಟೆ ಕೊತ್ತಲುಗಳು, ಸ್ತೂಪಗಳು ಮತ್ತು ಅರಮನೆಗಳಿಂದ ಅರಿವಿಗೆ ಬರುತ್ತದೆ. ನಿಸರ್ಗವಂತೂ ಇಲ್ಲಿ ತನ್ನ ಪ್ರೀತಿಯನ್ನು ಉದಾರವಾಗಿ ಹರಿಬಿಟ್ಟಿದೆ. ಅದಕ್ಕೊಂದು ಜೀವಂತ ಉದಾಹರಣೆಯೆಂದರೆ, ಇಲ್ಲಿನ ಅಭಯಾರಣ್ಯಗಳು ಮತ್ತು ಗಿರಿಧಾಮಗಳು.

ಪ್ರೀತಿ ಹಾಗೂ ತ್ಯಾಗದ ಕಥೆಗಳನ್ನು ಇಲ್ಲಿನ ಅರಮನೆಗಳ ಒಂದೊಂದು ಕಲ್ಲುಗಳು ಹೇಳುತ್ತವೆ. ಅದು ಮಾಂಡುವಿನ ರಾಣಿ ರೂಪಮತಿ ಮತ್ತು ಬಾಜ್‌ ಬಹದ್ದೂರ್‌ ಪ್ರೇಮ ಕಥೆಯಾಗಿರಬಹುದು ಅಥವಾ ಗ್ವಾಲಿಯರ್‌ನ ರಾಜಾ ಮಾನ್‌ಸಿಂಗ್‌ ಮತ್ತು ಗುರ್ಜರಿ ರಾಣಿ ಮೃಗನಯನಿಯದ್ದು.

ಮಧ್ಯಪ್ರದೇಶದ ಪ್ರಮುಖ ಪ್ರವಾಸಿ ಸ್ಥಳಗಳು

ಮಾಂಡೂ : ಮಧ್ಯಪ್ರದೇಶದ ಮಧ್ಯ ಭಾಗದಲ್ಲಿರುವ ಮಾಂಡೂ ನಗರ ಗೌಜಲು ಗದ್ದಲದಿಂದ ದೂರವಿದ್ದು ನಿಸರ್ಗ ಸಿರಿಯಿಂದ ಆವೃತ್ತವಾಗಿದೆ. ಈ ಭಾಗಕ್ಕೆ ಐತಿಹಾಸಿಕ ಹಿನ್ನೆಲೆ ಇರುವುದರಿಂದ ಇಲ್ಲಿ ಹಾಗೂ ಆಸುಪಾಸು ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಅಪ್ಘನ್‌ ವಾಸ್ತುಶೈಲಿಯಿಂದ ನಿರ್ಮಾಣಗೊಂಡ ಇಲ್ಲಿನ ಕಟ್ಟಡ ಹಾಗೂ ಅರಮನೆಗಳು ಮೊಘಲರು ಮತ್ತು ಅಪ್ಘನ್‌ರ ಇತಿಹಾಸವನ್ನು ನೆನಪಿಸುತ್ತವೆ.

ಮಾಂಡೂದ ಹೆಸರು ಮೊದಲು `ಶಾದಿಯಾಬಾದ್‌ (ಆನಂದದ ನಗರ) ಎಂದಿತ್ತು. ಅಪ್ಘನ್ನರು ಮತ್ತು ಮೊಘಲರ ಮಿಶ್ರ ಸಂಸ್ಕೃತಿಯ ಈ ಪ್ರವಾಸಿ ಸ್ಥಳ. ರಾಜರ ಆಡಳಿತ, ಪ್ರೀತಿ, ನಾಗರಿಕತೆ, ಸಂಸ್ಕೃತಿಯ ಕಥೆಯನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ. ಈ ಕಾರಣದಿಂದ ಈ ಪ್ರವಾಸಿ ಸ್ಥಳ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಹಿಂಡೋಲಾ ಮಹ್‌, ಜಹಾಜ್‌ಮಹಲ್, ರೇವಾ ಕುಂಡ್‌, ಅಶರ್ಫಿ ಮಹಲ್, ಹಾಥಿ ಪೋಲ್‌, ಉಜಲಿ ಔರ್‌ ಅಂಧೇರಿ ಬಾಡಿ (ಕತ್ತಿ ಬಾವಿ) ಹಾಗೂ ತೀಲಿ ಮಹಲ್ ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳಾಗಿವೆ.

ಹಿಂಡೋಲಾ ಮಹಲ್ : ಹಿಂಡೋಲಾ ಎಂದರೆ ‘ತೂಗು’ ಎಂದರ್ಥ. ಈ ಹೆಸರನ್ನು ಇಲ್ಲಿನ ಅರಮನೆಯ ಇಳಿಜಾರು ಗೋಡೆಯಿಂದಾಗಿ ಇಡಲಾಯಿತು. ಕೆಂಪು ಕಲ್ಲಿನಿಂದ ನಿರ್ಮಾಣವಾದ ಈ ಅರಮನೆಯ ಆಕಾರ ಆಂಗ್ಲದ `ಟಿ’ ಅಕ್ಷರದಂತೆ ಇದೆ. ಇಲ್ಲಿ ಗಯಾಸುದ್ದೀನನ ಆಡಳಿತಾವಧಿಯ ಒಂದು ಸಭಾಭವನ ಕೂಡ ಇದೆ. ಅರಮನೆಯ ಪಶ್ಚಿಮ ಭಾಗಕ್ಕೆ ಸುಂದರ ಚಂಪಾ ಬಾಡಿ (ಬಾವಿ) ಇದೆ.

ಜಹಾಜ್‌ ಮಹಲ್ : ಈ ಮಹಲಿನ ನಿರ್ಮಾಣ ಅದೆಷ್ಟು ಕಲಾತ್ಮಕವಾಗಿದೆಯೆಂದರೆ, ಇದು ಗುಂಜ್‌ ಮತ್ತು ಕಪೂರ್‌ ಕೆರೆಗಳ ಮಧ್ಯದಲ್ಲಿ ಲಂಗರು ಹಾಕಿದಂತೆ ಕಂಡುಬರುತ್ತದೆ. ಇದರ ನಿರ್ಮಾಣವನ್ನು ಗಯಾಸುದ್ದೀನ ಖಿಲ್ಜಿ ಮಾಡಿದ್ದ. ಅವನು ಇದನ್ನು ತನ್ನ ಅಂತಃಪುರಕ್ಕಾಗಿ ನಿರ್ಮಿಸಿದ್ದ.

ರೇವಾ ಕುಂಡ : ಮಾಳವದ ರಾಜ ಬಾಜ್‌ ಬಹಾದ್ದೂರ್‌ ಮತ್ತು ರಾಣಿ ರೂಪಮತಿಯ ಪ್ರೀತಿಯ ಪ್ರತೀಕ ಈ ಹೊಂಡ. ರಾಜಸ್ಥಾನಿ ಮತ್ತು ಮೊಘಲ್‌ ಕಲೆಯ ಅದ್ಭುತ ನಮೂನೆಯಾಗಿದೆ. ಮಾಂಡು ಕೋಟೆಯ ಬಳಿ ನಿರ್ಮಾಣವಾದ ಈ ಹೊಂಡದಿಂದ ರೂಪಮತಿಯ ಅಂತಃಪುರದೊಳಗೆ ನೀರು ರವಾನೆಯಾಗುತ್ತಿತ್ತು. ಅದರ ಬಳಿ ರೂಪಮತಿಯ ಮಂಟಪ, ಬಾಜ್‌ ಬಹದ್ದೂರ್‌ ಮಹಲ್, ನೀಲಕಂಠ ಮಹಲ್, ಹಾಥಿ ಮಹಲ್ ಹೋಶಂಗಶಾಹ ಸಮಾಧಿ ಮತ್ತು ಜುಮ್ಮಾ ಮಸೀದಿ ಕೂಡ ಇದೆ.

ಹೇಗೆ ತಲುಪುದು?

ವಾಯು ಮಾರ್ಗದ ಮುಖಾಂತರ : ಹತ್ತಿರದ ವಿಮಾನ ನಿಲ್ದಾಣವೆಂದರೆ ಇಂದೋರ್‌ (99 ಕಿ.ಮೀ.)

ರೈಲು ಮಾರ್ಗ : ಮುಂಬೈ ದೆಹಲಿ ರೈಲು ಮಾರ್ಗದಲ್ಲಿ ರತ್ನಾ (124 ಕಿ.ಮೀ.) ಹಾಗೂ ಇಂದೋರ್‌ (99 ಕಿ.ಮೀ.) ಸಮೀಪದ ರೈಲು ಮಾರ್ಗಗಳಾಗಿವೆ.

ವಾಸ್ತವ್ಯಕ್ಕೆ : ಇಲ್ಲಿ ವಾಸಿಸಲು ಎಲ್ಲ ಬಗೆಯ ಹೋಟೆಲ್‌ಗಳಿವೆ. ಮಧ್ಯಪ್ರದೇಶ ಪ್ರವಾಸೋದ್ಯಮ ವಿಭಾಗದ ಮಾಳ್ವ ರೆಸಾರ್ಟ್‌ಮತ್ತು ಮಾಳ್ವ ಸ್ಟ್ರೀಟ್‌ ಕೂಡ ಇದೆ.

ಧಾರ್‌ : ಇಂದೋರ್‌ನಿಂದ 60 ಕಿ.ಮೀ. ದೂರದಲ್ಲಿರುಲ ಹಸಿರು ಪರ್ವತಗಳಿಂದ ಆವೃತ್ತವಾಗಿರುವ ಈ ನಗರ ಕೋಟೆಗಳಿಗೆ ಪ್ರಸಿದ್ಧವಾಗಿದೆ. ಈ ಕೋಟೆ ಮಹಮ್ಮದ್‌ ಬಿನ್‌ ತುಘಲಕ್‌ನಿಂದ ನಿರ್ಮಾಣವಾಗಿತ್ತು. ಈ ಕೋಟೆಯ ಹೊರತಾಗಿ ಖರಮಾಜಾ ಮಹಲ್, ಶೀಶ್‌ ಮಹಲ್ ಕೂಡ ನೋಡಬಹುದಾದ ತಾಣವಾಗಿವೆ. ಗ್ವಾಲಿಯರ್‌ ಈ ನಗರ ವಿಶಾಲ ಕೋಟೆಗಾಗಿ ಪ್ರಸಿದ್ಧವಾಗಿದೆ. ಈ ಕೋಟೆ ಭಾರತದ ಅತ್ಯಂತ ಹಳೆಯ ಕೋಟೆಗಳಲ್ಲಿ ಒಂದಾಗಿದೆ. ಈ ನಗರ ಅನೇಕ ರಾಜವಂಶಸ್ಥರಿಗೆ ಆಶ್ರಯ ನೀಡಿತ್ತು. ರಾಜಾ ಮಾನ್‌ಸಿಂಗ್‌ ಮತ್ತು ಗುರ್ಜರಿ ರಾಣಿ ಮೃಗನಯನಿ ಪ್ರೇಮಕಥೆ ಈಗಲೂ ಇಲ್ಲಿನ ಒಂದೊಂದು ಹಾಡಿನಲ್ಲೂ ನಲಿದಾಡುತ್ತಿರುತ್ತದೆ.

ಇಲ್ಲಿ ನೋಡಲೇಬೇಕಾದ ಸ್ಥಳಗಳೆಂದರೆ, ಗ್ವಾಲಿಯರ್‌ ದುರ್ಗ, ತಾನ್‌ಸೇನ್‌ ಸಮಾಧಿ, ಗೌಸ್‌ ಮೊಹಮ್ಮದ್‌ನ ಸಮಾಧಿ, ಗುರ್ಜರಿ ಮಹಲ್ ಮತ್ತು ಕಲಾವೀಧಿಕಾ ಹಾಗೂ ಜಯನಿವಾಸ ಪ್ಯಾಲೇಸ್‌ ಮುಖ್ಯವಾಗಿವೆ.

ಗ್ವಾಲಿಯರ್‌ ಕೋಟೆ : ಬಲುವಾ ಕಲ್ಲುಗಳಿಂದ ನೇರವಾಗಿ ಬಂಡೆಗಲ್ಲುಗಳ ಮೇಲೆ ನಿಂತ ಈ ಕೋಟೆ ಹಲವು ಐತಿಹಾಸಿಕ ಘಟನೆಗಳು ಮತ್ತು ಯುದ್ಧಕ್ಕೆ ಮೂಕ ಸಾಕ್ಷಿಯಾಗಿದೆ. ಇದರ ಭವ್ಯತೆ ಕಂಡು ಮೊಘಲ್ ದೊರೆ ಬಾಬರ್‌ ಇದನ್ನು `ಕೋಟೆಗಳ ಮುತ್ತು’ ಎಂದು ಕರೆದಿದ್ದ.

MP-2

 

ಗುರ್ಜರಿ ಮಹಲ್ : ರಾಜಾ ಮಾನ್‌ಸಿಂಗ್‌ ತೋಮರ್‌ನಿಂದ ನಿರ್ಮಾಣವಾದ ಈ ಗುರ್ಜರಿ ಮಹಲ್‌ನ ಮುಖ್ಯ ವಿಶೇಷತೆಯೆಂದರೆ, ಇದರ ಹೊರಭಾಗದ ಗೋಡೆಗಳು, ಈಗಲೂ ಸುರಕ್ಷಿತವಾಗಿವೆ. ಗುರ್ಜರಿ ರಾಣಿಯ ಸಾಹಸಗಾಥೆಗೆ ಸಾಕ್ಷಿಯಾದ ಈ ಮಹಲಿನಲ್ಲಿ ಪುರಾತತ್ವ ಸಂಗ್ರಹಾಲಯ ಕೂಡ ಇದೆ.

ಜಯವಿಲಾಸ ಪ್ಯಾಲೇಸ್‌ ಮತ್ತು ಸಂಗ್ರಹಾಲಯ : ಇದು ಸಿಂಧ್ಯಾ ಮನೆತನದ ವಾಸಸ್ಥಳ. ಅದರ 35 ಕೋಣೆಗಳಲ್ಲಿ ಜೀಲಾಜಿ ರಾವ್ ‌ಸಂಗ್ರಹಾಲಯ ಕೂಡ ಇದೆ. ಇಟಾಲಿಯನ್‌ ಶೈಲಿಯಲ್ಲಿ ನಿರ್ಮಾಣವಾದ ಈ ಮಹಲಿನ ಅಂದ ಕಣ್ಮನ ಸೆಳೆಯುತ್ತದೆ.

ಈ ಮಹಲಿನ ಮಧ್ಯಭಾಗದಲ್ಲಿ ದರ್ಬಾರ್‌ ಹಾಲಿನ ನಡುವೆ ಹಲವು ಟನ್‌ ತೂಕದ 2 ಕಂಬಗಳು ನೇತು ಹಾಕಲ್ಪಟ್ಟಿವೆ. ಇದರ ಹೊರತಾಗಿ ಇಲ್ಲಿ ದುಬಾರಿ ರತ್ನಗಂಬಳಿಗಳು, ಕಟ್‌ ವರ್ಕ್‌ನ ಗಾಜಿನ ಕಿಟಕಿಗಳು, ಇಟಲಿ ಹಾಗೂ ಫ್ರಾನ್ಸ್ ನಿಂದ ತರಿಸಿದ ಫರ್ನೀಚರ್‌ಗಳು ತಮ್ಮ ಆಕರ್ಷಣೆಯಿಂದ ನಮ್ಮ ಗಮನ ಸೆಳೆಯುತ್ತವೆ. ಈ ಮ್ಯೂಸಿಯಂನ ಮತ್ತೊಂದು ಆಕರ್ಷಣೆ ಎಂದರೆ ಬೆಳ್ಳಿಯ ಟ್ರೇನ್‌. ಅದು ಟೇಬಲ್ ಮೇಲೆ ಅಳವಡಿಸಲಾದ ಹಳಿಯ ಮೇಲೆ ಸುತ್ತುತ್ತಾ ಇರುತ್ತದೆ. ಗ್ವಾಲಿಯರ್‌ ರೈಲು ಮಾರ್ಗ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ದತಿಯಾ : ಬುಂದೇಲಿ ವಾಸ್ತುಕಲೆಯ ಅದ್ಭುತ ನಮೂನೆ ವೀರಸಿಂಹ ಮಹಲ್. ಅದನ್ನು `ಗೋವಿಂದ್‌ ಮಹಲ್’ ಎಂದೂ ಕರೆಯಲಾಗುತ್ತದೆ. `ಓರಛಾ’ದ ರಾಜ ವೀರಸಿಂಗ್‌ ಇದನ್ನು ನಿರ್ಮಾಣ ಮಾಡಿದ್ದ.

ಈ ಮಹಲಿನಲ್ಲಿ ಕಮಾನುಗಳು, ಛತ್ರಿಗಳು, ಜಾಲರಿಯಂತಹ ಪರದೆಗಳು, ಸಜ್ಜಾಗಳು, ಹೊರಗಿನ ದೃಶ್ಯ ಕಂಡುಬರುವ ಕಿಟಿಕಿಗಳು 7 ಅಂತಸ್ತಿನ ಈ ಮಹಲು ದತಿಯಾದಲ್ಲಿ ದೂರದಿಂದಲೇ ಗೋಚರಿಸುತ್ತದೆ. ಈ ಮಹಲಿನ ಮುಖ್ಯ ದ್ವಾರ ಪೂರ್ವ ದಿಕ್ಕಿನಲ್ಲಿದ್ದರೆ, ದಕ್ಷಿಣದ ಕಡೆಗೆ ಸುಂದರ ಕೆರೆಯೊಂದಿದೆ. ಹಲವು ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋಟೆಯನ್ನು ನಿರ್ಮಿಸಲಾಗಿತ್ತು.

ಓರಛಾ ಬೇತಾ ನದಿಯ ದಡದಲ್ಲಿ 16 ಹಾಗೂ 17ನೇ ಶತಮಾನದಲ್ಲಿ ಬುಂದೇಲ ರಾಜರಿಂದ ಸ್ಥಾಪಿಸಲ್ಪಟ್ಟ ಈ ನಗರದಲ್ಲಿ ಈಗಲೂ ಇಲ್ಲಿನ ಅರಮನೆ ಮತ್ತು ಕೋಟೆಗಳು ಇತಿಹಾಸದ ಕಥೆಗಳನ್ನು ಹೇಳುತ್ತವೆ.

ನೈಸರ್ಗಿಕ ಸೌಂದರ್ಯ ಮತ್ತು ಉತ್ಕೃಷ್ಟ ವಾಸ್ತುಶಿಲ್ಪದ ಕಾರಣದಿಂದ ಕೇವಲ ಪ್ರವಾಸಿಗರಷ್ಟೇ ಅಲ್ಲ, ಬಾಲಿವುಡ್‌ ಚಿತ್ರರಂಗ ಕೂಡ ಇತ್ತ ಕಡೆ ಕಣ್ಣು ಹರಿಸಿದೆ. ಹಲವು ಸಿನಿಮಾಗಳು ಮತ್ತು ಜಾಹೀರಾತುಗಳಿಗಾಗಿ ಇಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಮಳೆಗಾಲದಲ್ಲಿ ಎಲ್ಲೆಡೆ ಹಸಿರು ಆವರಿಸಿಕೊಂಡಾಗ ಈ ನಗರದ ಅಂದ ಕಣ್ತುಂಬಿಸಿಕೊಳ್ಳಲು ಬಹಳ ಹಿತಕರ ಎನಿಸುತ್ತದೆ.

ಜಹಾಂಗೀರ್‌ ಮಹಲ್ : 17ನೇ ಶತಮಾನದಲ್ಲಿ ಜಹಾಂಗೀರನ ಓರಛಾ ಪ್ರವಾಸದ ಸ್ಮೃತಿಗಾಗಿ ವೀರಸಿಂಗ್‌ನಿಂದ ಈ ಮಹಲು ನಿರ್ಮಾಣಗೊಂಡಿತು. ಅತ್ಯಂತ ಸದೃಢ ಸುಂದರ ಗೋಡೆಗಳು ಹಾಗೂ ಕಲ್ಲುಗಳಲ್ಲಿ ಸೂಕ್ಷ್ಮ ಕೆತ್ತನೆ ಕೆಲಸ ಇಲ್ಲಿ ನೋಡಲು ಸಿಗುತ್ತದೆ.

ರಾಜ್‌ ಮಹಲ್ : ಈ ಮಹಲಿನಲ್ಲಿ ಅನೇಕ ಪಡಸಾಲೆಗಳಿದ್ದು, ಅವು ಎಂಥವರನ್ನೂ ದಾರಿ ತಪ್ಪಿಸುವ ರೀತಿಯಲ್ಲಿ ನಿರ್ಮಾಣಗೊಂಡಿವೆ. ಮಹಲಿನಲ್ಲಿ ಚಿತ್ರಿಸಿದ ಚಿತ್ರಗಳು ನೋಡುಗರನ್ನು ವಿಸ್ಮಯಗೊಳಿಸುತ್ತವೆ.

ರಾಯ್‌ ಪ್ರವೀಣ್‌ ಮಹಲ್ : ಇಂದ್ರಮಣಿ ರಾಜ ತನ್ನ ಪ್ರಿಯತಮೆ ಕವಯತ್ರಿ ರಾಯ್‌ ಪ್ರವೀಣಗಾಗಿ ಈ ಮಹಲನ್ನು ನಿರ್ಮಿಸಿದ್ದ. 2 ಅಂತಸ್ತಿನ ಈ ಸುಂದರ ಕಟ್ಟಡದ ಹೊರಭಾಗದಲ್ಲಿ 8 ಕೋನಗಳ ಪುಷ್ಪಕುಂಜ ಕೂಡ ಇದೆ. ಇದರ ಹೊರತಾಗಿ ಓರಛಾದಲ್ಲಿ ಹುತಾತ್ಮರ ಸ್ಮಾರಕ, ಹರದೌಲ್‌ ಮಹಲ್ ಮತ್ತು ಶೀಶ್‌ ಮಹಲ್ ಕೂಡ ನೋಡತಕ್ಕ ಸ್ಥಳಗಳಾಗಿವೆ.

ಓರಛಾ ಇದು ರನ್ಸಿ ಖಜರಾಹೋ ಮಾರ್ಗದಲ್ಲಿದ್ದು, ರೈಲಿನೊಂದಿಗೂ ನೇರ ಸಂಪರ್ಕ ಹೊಂದಿದೆ.

ಸಮೀಪದ ವಿಮಾನ ನಿಲ್ದಾಣಗಳೆಂದರೆ, ಗ್ವಾಲಿಯರ್‌ (119 ಕಿ.ಮೀ.) ಮತ್ತು ಖಜುರಾಹೋ (170 ಕಿ.ಮೀ.) ಇಲ್ಲಿ ಉಳಿದುಕೊಳ್ಳಲು ಮಧ್ಯಪ್ರದೇಶ ಪ್ರವಾಸೋದ್ಯಮ ವಿಭಾಗದ ಶೀಶ್‌ ಮಹಲ್ ಹೋಟೆಲ್ ‌ಮತ್ತು ಬೇತಾ ಕಾಟೇಜಸ್‌ ಕೂಡ ಲಭ್ಯವಿವೆ. ಓರಛಾ ಮತ್ತು ಆಸುಪಾಸಿನ ಸ್ಥಳಗಳಲ್ಲಿ ಹೋಮ್ ಸ್ಟೇ ಯೋಜನೆಯನ್ವಯ ಉಳಿದುಕೊಳ್ಳಲು ಅನುಕೂಲಕರ ವಾಸಸ್ಥಳಗಳು ಲಭ್ಯವಿವೆ. ಇಲ್ಲಿ ವಾಸ್ತವ್ಯ ಮಾಡಿ ಗ್ರಾಮೀಣ ಜನ ಜೀವನ ಹಾಗೂ ಸಂಸ್ಕೃತಿಯನ್ನು ಹತ್ತಿರದಿಂದ ನೋಡುವ ಅವಕಾಶ ದೊರೆಯುತ್ತದೆ.

– ಸರಳಾ ದೇಶಪಾಂಡೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ