ಈ ನಗೆಹನಿ ಸುಮಾರು 35-40 ವರ್ಷಗಳಷ್ಟು ಹಳೆಯದು. ಆದರೂ ಇಂದಿಗೂ ಪ್ರಸ್ತುತವಾಗಿದೆ. ಒಂದು ತರಕಾರಿ ಅಂಗಡಿಯಲ್ಲಿ ಆಧುನಿಕ ಪೋಷಾಕು ತೊಟ್ಟ ಒಬ್ಬ ಮಹಿಳೆ ತರಕಾರಿ ಖರೀದಿಸಿ ಬ್ಯಾಗಿನಲ್ಲಿ ಹಾಕಿಕೊಂಡರು. ಅಂಗಡಿಯವಳು, “ಮೇಡಂ, ನೀವು ತುಂಬಾ ಓದಿದವರಂತೆ ಕಾಣ್ತೀರಿ,” ಎಂದಳು.
ಆ ಮಹಿಳೆ ಹೆಮ್ಮೆಯಿಂದ, “ಹೌದು. ನಾನು ಎಂ.ಎ. ಓದಿದ್ದೀನಿ. ನಿನಗೆ ಹೇಗೆ ಗೊತ್ತಾಯ್ತು?” ಎಂದಳು.
ಅದಕ್ಕೆ ಅಂಗಡಿಯವಳು, “ನೀವು ಟೊಮೇಟೊ ಮೇಲೆ ಕುಂಬಳಕಾಯಿ ಇಟ್ಟಾಗ್ಲೇ ಗೊತ್ತಾಯ್ತು. ನೀವು ತುಂಬಾ ಓದಿದ್ದೀರೀಂತ,” ಎಂದಳು.
ಉಚ್ಚ ಶಿಕ್ಷಣ ಪಡೆದವರ ಬುದ್ಧಿಗೆ ಕನ್ನಡಿ ಹಿಡಿಯುವ ಇದು ಕಠೋರ ವ್ಯಂಗ್ಯ ಹೌದು. ಉಚ್ಚ ಶಿಕ್ಷಣ ಪಡೆದ ವ್ಯಕ್ತಿ ಬುದ್ಧಿವಂತನಾಗಿರಲೇ ಬೇಕೆಂದಿಲ್ಲ. ಓದುವವರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ. ಈ ಮಾತು ಕೊಂಚ ನೆಮ್ಮದಿ ಕೊಡುತ್ತದೆ. ಆದರೆ ನೆಮ್ಮದಿ ಹಾಳು ಮಾಡುವ ಸಂಗತಿಗಳು ದಿನನಿತ್ಯ ನಡೆಯುವ ಸಣ್ಣಪುಟ್ಟ ದುರ್ಘಟನೆಗಳಿಂದ ಉತ್ಪನ್ನವಾಗುತ್ತವೆ. ಶಿಕ್ಷಿತರಲ್ಲಿ ಯಾವುದಕ್ಕೂ ಸಹನೆ ಇಲ್ಲ.
ಇದಕ್ಕೆ ಏನೇ ಕಾರಣಗಳಿರಲಿ ಅವರಲ್ಲಿ ಅಕಾರಣ ವ್ಯಾಕುಲತೆ ಆಗಾಗ್ಗೆ ಪ್ರದರ್ಶಿತವಾಗುತ್ತಿರುತ್ತದೆ.
ವ್ಯಾಕುಲತೆಯ ಪರಿಣಾಮ
ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಜೆಪಿ ಪವರ್ ಪ್ಲ್ಯಾಂಟ್‌ನ ಕಾರ್ಯಕಾರಿ ಅಧ್ಯಕ್ಷ ರಾಜೀವ್ ಗೌಡ್‌ರವರು ರೈಲು ಅಪಘಾತದಲ್ಲಿ ನಿಧನರಾದರು. ಅಂದು ರಾಜೀವ್ ಬೀನಾದಿಂದ ಭೂಪಾಲ್‌ಗೆ ಹೋಗಬೇಕಿತ್ತು. ಅವರು ಹವಾ ನಿಯಂತ್ರಿತ ಭೋಗಿಯಲ್ಲಿ ನಿಜಾಮುದ್ದೀನ್‌ನಿಂದ ಹೈದರಾಬಾದ್‌ಗೆ ಹೋಗುವ ಸೌತ್ ಎಕ್ಸ್ ಪ್ರೆಸ್‌ನಲ್ಲಿ ರಿಸರ್ವ್ ಮಾಡಿಸಿದ್ದರು.
ರಾಜೀವ್ ಒಬ್ಬ ಮಹತ್ವಪೂರ್ಣ ಹಾಗೂ ವ್ಯಸ್ತ ವ್ಯಕ್ತಿಯಾಗಿದ್ದರೂ ಟ್ರೇನ್‌ನಲ್ಲಿ ತೂಗಾಡಿಕೊಂಡು ಪ್ರಯಾಣಿಸುವ ಅತ್ಯಂತ ಬಾಲಿಶ ನಿರ್ಧಾರ ತೆಗೆದುಕೊಂಡರು. ಅದು ಅವರ ದಿಢೀರ್ ಸಾವಿಗೆ ಕಾರಣವಾಯಿತು. ಅವರು ಬೀನಾ ಬದಲು ಅದರ ಮುಂದಿನ ಸ್ಟೇಷನ್ ಮಂಡಿ ಬಾಮೌರಾದಲ್ಲಿ ಈ ಟ್ರೇನ್ ಹತ್ತಿದ್ದರು. ಮಂಡಿ ಬಾಮೌರಾ ಒಂದು ಪುಟ್ಟ ಸ್ಟೇಷನ್ ಆಗಿದ್ದು, ಬೋಗಿಗಳ ಬಗ್ಗೆ ಡಿಸ್‌ಪ್ಲೇ ಇರಲಿಲ್ಲ. ಅಲ್ಲಿ ಟ್ರೇನ್ 2 ನಿಮಿಷ ನಿಲ್ಲುತ್ತಿತ್ತು. ಎಷ್ಟು ತಟ್ಟಿದರೂ ಕೋಚ್ ತೆರೆಯಲಿಲ್ಲ. ರಾಜೀವ್ ಅವಸರದಲ್ಲಿ ಒಳಗೆ ಕುಳಿತಿದ್ದ ಪ್ರಯಾಣಿಕರು ಬಾಗಿಲು ತೆರೆಯಬಹುದೆಂಬ ಭರವಸೆಯಿಂದ ಬಾಗಿಲಿಗೆ ನೇತಾಡಿದರು.
ಆದರೆ ಒಳಗೆ ಯಾರೂ ಇರಲಿಲ್ಲ. ಏಕೆಂದರೆ ಅದು ಸ್ಪೇರ್ ಎ.ಸಿ ಕೋಚ್ ಆಗಿದ್ದು ಹೈದರಾಬಾದ್‌ಗೆ ಕಳುಹಿಸಲಾಗುತ್ತಿತ್ತು. ಬೆಳಗ್ಗೆ ಸುಮಾರು ಒಂಬತ್ತೂ ಕಾಲು ಗಂಟೆಗೆ ವಿಪರೀತ ಚಳಿ ಇತ್ತು. ಟ್ರೇನ್‌ನ ಸ್ಪೀಡ್ ಹೆಚ್ಚಿದಾಗ ಅವರಿಗೆ ಗಾಬರಿಯಾಯಿತು. ಏಕೆಂದರೆ ಅವರು ಈಗ ಕೆಳಗೆ ದುಮುಕಲೂ ಸಾಧ್ಯವಿರಲಿಲ್ಲ.
ಕೊನೆಗೆ 11 ಕಿ.ಮೀ. ದೂರದವರೆಗೆ ನೇತಾಡಿದ ನಂತರ ಬಾಗಿಲಿನಿಂದ ಅವರ ಕೈ ಜಾರಿ ಅವರು ಟ್ರೇನ್ ಕೆಳಗೆ ಬಿದ್ದರು. ಅಲ್ಲೇ ದುರಂತ ಮರಣ ಹೊಂದಿದರು. ಅವರನ್ನು ಬಿಡಲು ಬಂದಿದ್ದ ಅವರ ಸೆಕ್ಯೂರಿಟಿ ಗಾರ್ಡ್ ರಾಮ್ ಚಂದ್ ಗುರ್ಜರ್ ಮಂಡಿ ಬಾಮೌರಾ ರೈಲ್ವೇ ಸ್ಟೇಷನ್‌ನ ಸಹಾಯಕ ಸ್ಟೇಷನ್ ಮಾಸ್ಟರ್ ಅರವಿಂದ ಕುಮಾರ್ ಸಾಹೂರಿಗೆ ತನ್ನ ಯಜಮಾನ ಟ್ರೇನಿಗೆ ನೇತುಬಿದ್ದಿರುವ ಬಗ್ಗೆ ತಿಳಿಸಿದ.
ಸಾಹೂರಿಗೆ ತಮ್ಮ ಸ್ಟೇಷನ್‌ನಿಂದ ಹೊರಟುಬಿಟ್ಟಿದ್ದ ಟ್ರೇನ್‌ನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ. ಅವರು ಮುಂದಿನ ಸ್ಟೇಷನ್‌ನ, ಸ್ಟೇಷನ್ ಮಾಸ್ಟರ್‌ಗೆ ಸೂಚನೆ ಕೊಟ್ಟರು. ಆದರೆ ಏನಾದರೂ ಉಪಾಯ ಮಾಡುವಷ್ಟರಲ್ಲಿ ರಾಜೀವ್ ಬಿದ್ದು ಮೃತಪಟ್ಟಿದ್ದರು. ಇದು ಒಂದು ದೊಡ್ಡ ಕಂಪನಿಯ ದೊಡ್ಡ ಆಫೀಸರ್‌ರ ವಿಷಯವಾದ್ದರಿಂದ ದೊಡ್ಡ ಕೋಲಾಹಲ ಉಂಟಾಯಿತು. ರೈಲ್ವೆಯವರು ಅರವಿಂದ್ ಕುಮಾರ್ ಸಾಹೂರನ್ನು ಸಸ್ಪೆಂಡ್ ಮಾಡಿದರು. ಅವರದೇನೂ ತಪ್ಪಿರಲಿಲ್ಲ. ನಂತರ ಬೇಗನೇ ನಿಜ ಸಂಗತಿ ಹೊರಗೆ ಬಂತು. ತಪ್ಪೆಲ್ಲಾ ಮೃತ ವ್ಯಕ್ತಿಯದೇ ಆಗಿತ್ತು. ನಂತರ ಈ ದುರ್ಘಟನೆಗೆ ಸ್ವತಃ ರಾಜೀವ್ ಜವಾಬ್ದಾರರೆಂದು ಹೇಳಿ ರೈಲ್ವೆ ಇಲಾಖೆ ಕೈ ತೊಳೆದುಕೊಂಡಿತು.
ಹಠ ಬೇಡ ಎಷ್ಟೇ ಅಸರವಿರಲಿ, ಮುಚ್ಚಿದ ಬೋಗಿಯ ಬಾಗಿಲಿಗೆ ನೇತಾಡುವುದು ಅವಿವೇಕದ ಪರಮಾವಧಿ. ರಾಜೀವ್ ತೆರೆದಿದ್ದ ಸಾಧಾರಣ ಬೋಗಿಯಲ್ಲಿ ಹತ್ತಬಹುದಿತ್ತು. ಆದರೆ ಅವಸರ ಹಾಗೂ ಗಡಿಬಿಡಿ ಅವರ ಬದುಕಿಗೆ ಕೊನೆ ಹಾಡಿತು. ಒಬ್ಬ ಸುಶಿಕ್ಷಿತ, ಬುದ್ಧಿವಂತ ಹಾಗೂ ದೊಡ್ಡ ಕಂಪನಿಯ ಅಧ್ಯಕ್ಷರ ಮೂರ್ಖತನವಿದು.
ಬೇಗನೇ ಭೂಪಾಲ್ ತಲುಪಬೇಕೆನ್ನುವ ಅವಸರದಿಂದ ಉಂಟಾದ ಈ ದುರ್ಘಟನೆಯ ಬಗ್ಗೆ ಭೂಪಾಲ್‌ನ ಗಾಂಧಿ ಮೆಡಿಕಲ್ ಕಾಲೇಜಿನ ಡಾ. ರಾಹುಲ್ ಶರ್ಮ ಹೀಗೆ ಹೇಳುತ್ತಾರೆ, “ಅನೇಕ ಬಾರಿ ಜನರ ಅವಸರ ಎಷ್ಟು ಹೆಚ್ಚಾಗುತ್ತದೆ ಎಂದರೆ, ಅವರ ಮನಸ್ಥಿತಿ ಅವರನ್ನು ಅಪಾಯಕಾರಿ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಅವರು ಹಠಕ್ಕೆ ಬಿದ್ದು ಮಾಡಬಾರದ ಕೆಲಸಗಳನ್ನು ಮಾಡಲು ಮುಂದಾಗುತ್ತಾರೆ.
ಇದೇ ಮನಸ್ಥಿತಿಯ ಬಗ್ಗೆ ತಿಳಿಸುತ್ತಾ ಭೂಪಾಲ್‌ನ ಪಾಶ್ ಏರಿಯಾದ ಮಾರ್ಕೆಟ್‌ನ ಒಬ್ಬ ಕೆಮಿಸ್ಟ್, “ಈಗೀಗ ಜನರಲ್ಲಿ ತಾಳ್ಮೆಯೇ ಇಲ್ಲ. ನಮ್ಮ ಅಂಗಡಿಗೆ ಔಷಧಿ ಕೊಳ್ಳಲು ಬರುವ 50% ಗ್ರಾಹಕರು ಮೊಬೈಲ್‌ನಲ್ಲಿ ಮಾತನಾಡುತ್ತಲೇ ಬರುತ್ತಾರೆ. ಕೌಂಟರ್‌ನಲ್ಲಿ ಕಾಗದದ ಚೀಟಿ ಎಸೆದು ಔಷಧಿ ಕೊಡಲು ಸಂಜ್ಞೆ ಮಾಡುತ್ತಾರೆ. ಔಷಧಿ ಪ್ಯಾಕ್ ಮಾಡಿದ ನಂತರ 15 ದಿನಗಳದ್ದಲ್ಲ, 10 ದಿನಗಳಿಗೆ ಸಾಕು. ಮೇಲಿನ ಔಷಧಿ ಬೇಕಾಗಿರಲಿಲ್ಲ ಎಂದು ವಾದ ಮಾಡುತ್ತಾರೆ. ಅದೇ ವಿಷಯವನ್ನು ಮೊಬೈಲ್ ಆಫ್ ಮಾಡಿ ಹೇಳಿದ್ದರೆ, ಅನವಶ್ಯಕ ವಾದಗಳಿಂದ ಪಾರಾಗಬಹುದಿತ್ತು,” ಎನ್ನುತ್ತಾರೆ.
ಅಸಹನೆಗೂ ಮಿತಿ
ಜನರಲ್ಲಿ ಹೆಚ್ಚುತ್ತಿರುವ ಅಸಹನೆ, ವ್ಯಾಕುಲತೆಯ ಪರಿಣಾಮದಿಂದಾಗಿ ಅವರು ಸರಿಯಾದ ರೀತಿಯಲ್ಲಿ ಪಾರ್ಕಿಂಗ್ ಸಹ ಮಾಡುವುದಿಲ್ಲ. ಒಬ್ಬ ಎ.ಟಿ.ಎಂ. ಗಾರ್ಡ್ ಹೇಳುವಂತೆ ಜನಕ್ಕೆ ಎಷ್ಟು ಅಸಹನೆಯೆಂದರೆ ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿಬಿಡುತ್ತಾರೆ. ಎಷ್ಟೋ ಬಾರಿ ಕೀಯನ್ನು ಅದರಲ್ಲೇ ಬಿಟ್ಟುಬಿಡುತ್ತಾರೆ. ನಂತರ ಎ.ಟಿ.ಎಂ.ನಲ್ಲಿ ಕೀ ಹುಡುಕುತ್ತಾರೆ. ಓದಿದ ಈ ಮಂದಿಯನ್ನು ಕಂಡು ನನಗೆ ನಗು ಬರುತ್ತದೆ, ಎನ್ನುತ್ತಾರೆ.
ನಗು ತರಿಸುವ ಇನ್ನೊಂದು ವಿಷಯ ಒಬ್ಬ ಹೋಟೆಲ್ ವೇಟರ್ ಹೇಳಿದ್ದು, ಜನ ಬಂದು ಆರ್ಡರ್ ಕೊಡುವ ಮೊದಲೇ ಬೇಗನೇ ತೆಗೆದುಕೊಂಡು ಬಾ ಅಂತಾರೆ. ಶಾಹಿ ಪನೀರ್‌ನಂತಹ ಡಿಶ್‌ತಯಾರಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಉತ್ತಮ ರೀತಿಯ ಸೇವೆಗಾಗಿ ಅರ್ಧ ಗಂಟೆ ಕಾಲಾವಕಾಶ ಕೊಡಿ ಎಂದು ಮೆನು ಕಾರ್ಡ್‌ನಲ್ಲಿ ಸ್ಪಷ್ಟವಾಗಿ ಬರೆದಿರುತ್ತದೆ.
ವಿವಿಧ ರೀತಿಯಲ್ಲಿ ಪ್ರದರ್ಶಿತವಾಗುವ ಇಂತಹ ಗಡಿಬಿಡಿಗೆ ಕಾರಣವಾದರೂ ಏನು? ಸಮಯದ ಕೊರತೆ, ಕೆಲಸದ ಒತ್ತಡ, ಮುಂದೆ ಹೋಗುವ ಹಠ ಇತ್ಯಾದಿ. ಕೆಲವರು ವ್ಯಸ್ತ ಜೀವನಶೈಲಿಯೇ ಕಾರಣ ಎನ್ನುತ್ತಾರೆ.
ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ. ಇಂದಿಗೂ ಸಹ ಜನ ಟೊಮೇಟೊ ಮೇಲೆ ಕುಂಬಳಕಾಯಿ ಇಡುತ್ತಿದ್ದಾರೆ. ಹೆಚ್ಚು ಓದಿದವರೇ ಶಿಸ್ತುಭಂಗ ಮಾಡುವಲ್ಲಿ ಮೊದಲಿಗರಾಗಿದ್ದಾರೆ. ಅದರಲ್ಲಿ ಅಸಫಲರಾದರೆ ಕೋಲಾಹಲ, ಅಭದ್ರತೆ ಉಂಟು ಮಾಡುತ್ತಾರೆ.
ವ್ಯಸ್ತತೆಯಿಂದ ಗಡಿಬಿಡಿ ಉಂಟಾದರೆ ಜನರಿಗೆ ವಿವಾದ ಉಂಟು ಮಾಡಲು ಸಮಯ ಇರುವುದಿಲ್ಲ. ವಾಸ್ತವದಲ್ಲಿ ಅಶಿಸ್ತು ವ್ಯಾಕುಲತೆಗೆ ಕಾರಣ. ಟಿಕೆಟ್ ಕೊಳ್ಳಲು ಜನ ಕ್ಯೂನಲ್ಲಿ ನಿಲ್ಲಲು ಬಯಸುವುದಿಲ್ಲ. ಎಟಿಎಂನಲ್ಲಿ ಕಾಯಲು ಸಹನೆ ಇಲ್ಲ. ಟ್ರ್ಯಾಫಿಕ್‌ನಲ್ಲಿ ಗ್ರೀನ್ ಸಿಗ್ನಲ್ ಬವರು ಮುಂಚೆಯೇ ರಸ್ತೆ ದಾಟಲು ಬಯಸುತ್ತಾರೆ. ಉಚ್ಚ ಶಿಕ್ಷಣ ಪಡೆದವರೇ ಹೀಗೆ ಮಾಡುವುದು ಜಾಸ್ತಿ.
ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚುತ್ತಿದೆ. ಜನರು ಮಹತ್ವಾಕಾಂಕ್ಷಿಗಳಾಗುತ್ತಿದ್ದಾರೆ. ಅವರು ಯಾವುದೇ ಅವಕಾಶವನ್ನೂ ಬಿಡುತ್ತಿಲ್ಲ. ಆ ವಿಷಯದಲ್ಲಿ ಅವರು ಪ್ರಾಣವನ್ನೂ ಲೆಕ್ಕಿಸುತ್ತಿಲ್ಲ. ಆದರೆ ತಮ್ಮನ್ನು ಅಪಾಯಕ್ಕೆ ಒಡ್ಡಿಕೊಳ್ಳುವುದು ಸಾಹಸದ ಪ್ರದರ್ಶನವಲ್ಲ. ಮೂರ್ಖತನದ ಪರಮಾವಧಿ. ಟಿ.ವಿ. ಮೊಬೈಲ್ ಮತ್ತು ಕಂಪ್ಯೂಟರ್ ಜನಸಾಮಾನ್ಯರ ಬದುಕಿನಲ್ಲಿ ಉಂಟು ಮಾಡಿರುವ ಕೋಲಾಹಲ, ಗಡಿಬಿಡಿಯ ಬಗ್ಗೆ ಹೇಳುವುದೇ ಬೇಡ. ಗ್ಯಾಜೆಟ್ಸ್ ಗಳ ದುರುಪಯೋಗ ಜನರ ತಾಳ್ಮೆ ಹಾಳುಮಾಡುತ್ತಿದೆ. ಶಿಕ್ಷೆ ಸಾಂಪ್ರದಾಯಿಕವಾಗುವ ಬದಲು ವ್ಯಾವಹಾರಿಕವಾಗುತ್ತಿರುವುದೂ ಅದರ ಕೊಡುಗೆಯೇ ಆಗಿದೆ. ಜನ ಗ್ಯಾಜೆಟ್ಸ್ ಗೆ ಅಂಟಿಕೊಂಡಿರುವುದು, ಅವುಗಳ ಜೊತೆಗೇ ಸಮಯ ಕಳೆಯುವುದರಿಂದ ಅವರು ಇತರ ಸುಖಗಳಿಂದ ವಂಚಿತರಾಗುತ್ತಿದ್ದಾರೆ.
ಎಲ್ಲಿಯೇ ನೋಡಿ. ಜನ ಓಡುತ್ತಿದ್ದಾರೆ. ಅವರಲ್ಲಿ ವೇಗ ಇದೆ. ಆದರೆ ಗುರಿಯಿಲ್ಲ. ತಲೆ ಇದೆ. ಆದರೆ ಬುದ್ಧಿ ಹಾಗೂ ವಿವೇಕ ಇಲ್ಲ. ನಿಯಮಗಳನ್ನು ಮುರಿಯುವ ಕ್ರೂರ ಆನಂದ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುತ್ತಿದೆ.
ಹೇಗೆ ಪಾರಾಗುವುದು?
ಬಹಳಷ್ಟು ಜನ ಈ ಮಾನಸಿಕತೆಗೆ ಬಲಿಯಾಗುತ್ತಿದ್ದಾರೆ. ಜೀವನಶೈಲಿ ಅಥವಾ ಹೆಚ್ಚು ಕೆಲಸದ ಬಗ್ಗೆ ಬೈದು ಕಂಬಳಿ ಕೊಡವಿಬಿಟ್ಟರೆ ಅದು ಪರಿಹಾರವಲ್ಲ. ಇನ್ನಷ್ಟು ವ್ಯಾಕುಲತೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಬದಲಾಗಿ ಸೂಕ್ಷ್ಮ ರೀತಿಯಿಂದ ಅದರಿಂದ ಪಾರಾಗಲು ಪ್ರಯತ್ನಿಸಿದರೆ ನಿಮಗೂ ಹಾಗೂ ಇತರರಿಗೂ ಒಳ್ಳೆಯದು.
ಸಮಯನ್ನು ಸದುಪಯೋಗಪಡಿಸಿಕೊಳ್ಳಿ. ಆಫೀಸು, ಸ್ಟೇಷನ್, ಥಿಯೇಟರ್ ಯಾವುದೇ ಆಗಲಿ ನಿಗದಿತ ಸಮಯಕ್ಕಿಂತ ಕೊಂಚ ಮೊದಲೇ ಹೋಗಿ.
ಸಾಧ್ಯವಾದಷ್ಟೂ ಶಾಂತವಾಗಿರಿ. ಇತರರು ನಿಯಮ ಹಾಗೂ ಶಿಸ್ತು ಭಂಗ ಮಾಡುತ್ತಿದ್ದರೆ ಅದನ್ನು ನೀವು ಮಾಡಲು ಹೋಗಬೇಡಿ. ಅಂತಹ ತಪ್ಪು ಮಾಡದಿರಲು ಸಂಕಲ್ಪ ಮಾಡಿ.
ಕಾರಣವಿಲ್ಲದೆ ಮೊಬೈಲ್‌ನಲ್ಲಿ ಮಾತನಾಡುತ್ತಿರಬೇಡಿ. ಬೇರೇನಾದರೂ ಕೆಲಸ ಮಾಡುತ್ತಿದ್ದರೂ ಖಂಡಿತ ಮೊಬೈಲ್ ಉಪಯೋಗಿಸಬೇಡಿ.
ದಿನಚರಿ ತಯಾರಿಸಿ ಅದರಂತೆ ಕೆಲಸ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಸತತವಾಗಿ ಕೆಲಸ ಮಾಡಬೇಡಿ. ಮಧ್ಯೆ ಮಧ್ಯೆ ವಿಶ್ರಾಂತಿ ಪಡೆಯಿರಿ, ಸುತ್ತಾಡಿ.
ಸೇವೆಯಲ್ಲಿ ಕೊರತೆ ಅಥವಾ ಏನಾದರೂ ಅಸೌಕರ್ಯ ಉಂಟಾದರೆ ಕೋಪಿಸಿಕೊಳ್ಳಬೇಡಿ. ಕಾರಣ ತಿಳಿಯಲು ಪ್ರಯತ್ನಿಸಿ.
ಟಿವಿ ವೀಕ್ಷಣೆ ಕಡಿಮೆ ಮಾಡಿ. ಅನವಶ್ಯಕವಾಗಿ ಟಿವಿ ನೋಡುವವರು ಹೆಚ್ಚು ಒತ್ತಡ ಹಾಗೂ ವ್ಯಾಕುಲತೆಗೆ ಬಲಿಯಾಗುತ್ತಾರೆ ಎಂದು ಬಹಳಷ್ಟು ಸಮೀಕ್ಷೆಗಳು ಹೇಳುತ್ತವೆ.
ಬರೆಯುವ ಮತ್ತು ಓದುವ ಅಭ್ಯಾಸ ಇಟ್ಟುಕೊಳ್ಳಿ. ಅದರಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಉಂಟಾಗುತ್ತದೆ.
ಶಿಸ್ತನ್ನು ಎಂದೂ ಉಲ್ಲಂಘಿಸಬೇಡಿ. ವ್ಯಾಪಕವಾದ ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ.
ಅಂತರ್ಮುಖಿಯಾಗಬೇಡಿ. ಹೊಸಬರು ಹಳಬರೊಂದಿಗೆ ಆಗಾಗ್ಗೆ ಸೇರಿ ಮಾತನಾಡಿ. ವಿನೋದ ಪ್ರಸಂಗಗಳನ್ನು ಹಂಚಿಕೊಳ್ಳಿ.
– ಪ್ರಭಾವತಿ