ಇಂಚಿಯೋನ್‌ ಏಷ್ಯಾ ಕ್ರೀಡಾಕೂಟದಲ್ಲಿ ಸೀಮಾ ಪೂನಿಯಾ ಡಿಸ್ಕಸ್‌ ಎಸೆತದಲ್ಲಿ ಚಿನ್ನದ ಪದಕ ಪಡೆದ ಬಳಿಕ ಒಂದು ಮಾತು ಎಲ್ಲೆಡೆ ಕೇಳಿಬಂತು. ಅದೇನೆಂದರೆ,  ಅಥ್ಲೆಟಿಕ್ಸ್ ನಲ್ಲಿ ಭಾರತೀಯ ಮಹಿಳೆಯರ ಯಶಸ್ಸಿನ ಹಿಂದೆ ಅವರ ಪತಿಯಂದಿರ ಸಹಕಾರ ಏನಾದರೂ ಇರಬಹುದಾ? ಅದಕ್ಕೂ ಮಹತ್ವದ ಸಂಗತಿಯೆಂದರೆ, ಭಾರತೀಯ ಮಹಿಳಾ ಕ್ರೀಡಾಪಟು ಕೋಚ್‌ ಆಗಿ ತನ್ನ ಪತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಈಗ ಹೊಸ ಸಂಗತಿಯೇನೂ ಅಲ್ಲ.

ಸೀಮಾ ಪೂನಿಯಾ ಅವರ ಯಶಸ್ಸಿನ ಹಿಂದೆ ಅವರ ಪತಿ ಅಂಕುಶ್‌ ಪೂನಿಯಾ ಅವರ ಪರಿಶ್ರಮ ಅಡಗಿದೆ. ಇದಕ್ಕೂ ಮುಂಚೆ ಕೃಷ್ಣಾ ಪೂನಿಯಾ ಹಾಗೂ ಅಂಜು ಬಾಬ್ಬಿ ಜಾರ್ಜ್‌ ಅವರು ಯಶಸ್ಸಿನ ಉತ್ತುಂಗ ತಲುಪಲು ಇಬ್ಬರಿಗೂ ಕೋಚ್‌ ಆಗಿದ್ದ ಅವರವರ ಪತಿಯಂದಿರ ಕಠಿಣ ಶ್ರಮ ಹಾಗೂ ನಿರಂತರ ಮೇಲ್ವಿಚಾರಣೆ ಕಾರಣ. ಇದಕ್ಕೂ ಮುಂಚೆ 70ರ ದಶಕದಲ್ಲಿ ಜಾಜಾ ಹಾಗೂ ನರೇಶ್‌ ಜೋಡಿ ಪ್ರಸಿದ್ಧವಾಗಿದೆ.

ಮೇರಿ ಕೋಮ್ ಅವರ ಯಶಸ್ಸಿನಲ್ಲೂ ಪತಿಯ ಅದ್ಭುತ ಸಹಕಾರ ಇತ್ತು. ಬಾಕ್ಸರ್‌ ಸರಿತಾ ಅವರ ಪತಿ ಥೋಯ್ಬಾ ಸಿಂಗ್‌ಇಂಚಿಯೋನ್‌ನಲ್ಲಿ ತಪ್ಪು ನಿರ್ಧಾರದಿಂದ ಅದೆಷ್ಟು ವ್ಯಥಿತರಾಗಿದ್ದರೆಂದರೆ, ಅಂಪೈರ್‌ಗಳಿಗೆ ಕೆಟ್ಟ ಶಬ್ದಗಳನ್ನು ಕೂಡ ಬಳಸಿಬಿಟ್ಟರು.

krishna-pooniya-1

ಈ ಎಲ್ಲ ಪತಿಯರು ತಮ್ಮ ಪತ್ನಿಯರನ್ನು ಎಷ್ಟು ಸಾಧ್ಯವೋ, ಅಷ್ಟು ಎತ್ತರಕ್ಕೆ ತಲುಪಿಸಲು ನಿರಂತರ ಪ್ರಯತ್ನಶೀಲರಾಗಿದ್ದಾರೆ. ಆದರೆ ಪತ್ನಿ 24 ಗಂಟೆ ತನ್ನ ಸೇವೆ ಮಾಡುತ್ತಿರಬೇಕೆಂದು ಅವರೆಂದೂ ಬಯಸುವುದಿಲ್ಲ. ಭಾರತೀಯ ಧ್ವಜದೊಂದಿಗೆ ತನ್ನ ಪತ್ನಿಯನ್ನು ಕಾಣಬೇಕೆಂಬುದೇ ಅವರ ಅಂತರಾಳದ ಬಯಕೆಯಾಗಿರುತ್ತದೆ. ಇದೆಷ್ಟು ರೋಮಾಂಚನ ಉಂಟು ಮಾಡುವ ವಿಷಯಲ್ಲವೇ?

ಆಶ್ಚರ್ಯದ ಸಂಗತಿಯೆಂದರೆ, ಯಾವ ಒಂದು ದೇಶದಲ್ಲಿ ಕ್ರೀಡೆಯ ಬಗ್ಗೆ ನಕಾರಾತ್ಮಕ ಧೋರಣೆ ಇರುತ್ತದೋ, ಅಂತಹ ಕಡೆ ಇಂತಹ ಅದ್ಭುತ ಸಾಮರ್ಥ್ಯದ ಪ್ರತಿಭೆಗಳು ಹೊರಹೊಮ್ಮುತ್ತವೆ. ಮನೆಯಿಂದ ಹಿಡಿದು ಸ್ಕೂಲಿನ ತನಕ ಎಲ್ಲೆಲ್ಲೂ ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಕ್ರೀಡಾಂಗಣಗಳ ಬಗೆಗಿನ ಮೋಹ ಕಡಿಮೆಯಾಗುತ್ತಿದ್ದು, ಮಕ್ಕಳಿಗೆ ಗಾಡಿ, ಮೊಬೈಲ್‌‌‌ಗಳ ವ್ಯಾಮೋಹ ಹೆಚ್ಚುತ್ತಿದೆ. ಅಂತಹ ಸ್ಥಿತಿಯಲ್ಲೂ ಕೆಲವು ಕ್ರೀಡಾ ಪ್ರತಿಭೆಗಳು ಹೊರಹೊಮ್ಮುತ್ತಾರೆಂದರೆ, ಇದಕ್ಕೆ ಕ್ರೀಡಾಪಟು ಹಾಗೂ ಕುಟುಂಬದವರ ಕ್ರೀಡಾ ಪ್ರೀತಿ ಕಾರಣ ಎನ್ನಬಹುದು.

ಯಶಸ್ಸಿನ ಪಾಲುದಾರರು

ಇತ್ತೀಚೆಗೆ `ಮೇರಿ ಕೋಮ್’ ಎಂಬ ಸಿನಿಮಾ ಬಂದಿತ್ತು. ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್ ಅವರ ಜೀವನ ಚರಿತ್ರೆಯನ್ನಾಧರಿಸಿ ಈ ಚಲನಚಿತ್ರ ತೆಗೆಯಲಾಗಿತ್ತು. ನಿಜಕ್ಕೂ ದಂಪತಿಗಳಿಗೆ ಅದೊಂದು ಪ್ರೇರಣಾದಾಯಕ ಚಲನಚಿತ್ರ.

ಒಂದು ವಾಸ್ತವ ಸಂಗತಿಯಂದರೆ ಮೇರಿ ಕೋಮ್ ಅವರಿಗೆ ಬಾಕ್ಸಿಂಗ್‌ ರಿಂಗ್‌ನ ಒಳಗಿನಂತೆ ಹೊರಗಿನ ಜಗತ್ತೇ ಹೆಚ್ಚು ಸವಾಲಿನಿಂದ ಕೂಡಿತ್ತು. ಕೆರಿಯರ್‌ಗಾಗಿ ತಮ್ಮವರನ್ನು ರಾಜೀ ಮಾಡಿಸುವುದು, ಮದುವೆ, ಗರ್ಭಾವಸ್ಥೆ ಮತ್ತು ತಾಯ್ತನದಂತಹ ಸಂಗತಿಗಳು ಅವರಿಗೆ ಹೆಚ್ಚು ಚಾಲೆಂಜ್‌ ಆಗಿದ್ದವು. ಸಾಮಾನ್ಯ ಜೀವನದ ಈ ಸವಾಲುಗಳು ಯಾವುದೇ ಒಬ್ಬ ಮಹಿಳೆಗೆ ತನ್ನ ಕನಸುಗಳನ್ನು ನನಸು ಮಾಡಲು ಅವಕಾಶ ಕೊಡುವುದಿಲ್ಲ. ಮೇರಿ ಕೋಮ್ ಎಲ್ಲ ಸವಾಲುಗಳನ್ನು ಲೀಲಾಜಾಲವಾಗಿ ಎದುರಿಸಿ ಅದರಲ್ಲಿ ಗೆದ್ದರು. ಈ ಎಲ್ಲ ಸಂಗತಿಗಳು ಅವರನ್ನು `ಐಕಾನ್‌’ ಆಗಿ ಮಾಡಿದವು.

ಅವರ ನಿಜ ಜೀವನದ ಹೀರೋ ಅಂದರೆ ಕೆ. ಓನ್ಲರ್‌ ಕೋಮ್. ಅವರು ಸದಾ ಪತ್ನಿಯ ಸಮರ್ಥಕರಾಗಿರಲು ಇಷ್ಟಪಡುತ್ತಾರೆ. ಬಾಕ್ಸಿಂಗ್‌ ರಿಂಗ್‌ನಲ್ಲಿ ಮೇರಿ ಕೋಮ್ ಅವರ ಉತ್ಸಾಹ ಹೆಚ್ಚಿಸುವುದರಿಂದ ಹಿಡಿದು ಮಕ್ಕಳ ನ್ಯಾಪಿ ಬದಲಿಸುವತನಕ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಅವರು ತಮ್ಮ ಪತ್ನಿಯ ಕನಸುಗಳನ್ನು ಎಂದೂ ಸಾಯಲು ಅವಕಾಶ ಕೊಡುವುದಿಲ್ಲ. ತಮ್ಮ ಕೆರಿಯರ್‌ನ್ನು ಪಣಕ್ಕೊಡ್ಡಿ ಪತ್ನಿಯ ಕೆರಿಯರ್‌ಗೆ ಒಂದು ದಿಸೆ ಕೊಟ್ಟಿದ್ದಾರೆ. ಹೆಂಡತಿಯನ್ನು ಪ್ರ್ಯಾಕ್ಟೀಸ್‌ಗೆ ಕಳಿಸಿ ಮಕ್ಕಳನ್ನು ನೋಡಿಕೊಂಡ ಉದಾತ್ತ ಮನಸ್ಸಿನ ತಂದೆ ಅವರು. ಈ ಗೆಲುವು ಮೇರಿ ಕೋಮ್ ಅವರೊಬ್ಬರದೇ ಅಲ್ಲ, ಅವರ ಪತಿಯ ಗೆಲುವು ಕೂಡ ಇದರಲ್ಲಿ ಸೇರಿದೆ ಎಂದರೆ ತಪ್ಪಲ್ಲ.

mary-kom-with-sons-and-husband-k-onler-kom1

ಜಾಜಾ ಮತ್ತು ನರೇಶ್‌ರ ದಶಕದಲ್ಲಿ ಮದುವೆಗೂ ಮುಂಚೆಯೇ ಓಟಗಾರ್ತಿ ಜಾಜಾ ನ್ಯಾಷನಲ್ ಚಾಂಪಿಯನ್‌ ಆಗಿದ್ದರು. ಮದುವೆಯ ಬಳಿಕ ಪತಿ ನರೇಶ್‌ ಅವರಿಗೆ ತರಬೇತಿ ನೀಡಿದರು. ಇದರಿಂದಾಗಿ ಅವರ ಪ್ರಾವೀಣ್ಯತೆ ಮತ್ತಷ್ಟು ಹೆಚ್ಚುತ್ತಾ ಹೋಯಿತು. ಪತಿಯ ಸಹಕಾರದಿಂದ ಅವರು ರಾಷ್ಟ್ರೀಯ ದಾಖಲೆ ಕೂಡ ನಿರ್ಮಿಸಿದರು.

ಅಂದಹಾಗೆ ನರೇಶ್‌ ಸ್ವತಃ ಟ್ರಿಪಲ್ ಜಂಪರ್‌ ಆಗಿದ್ದರು. ಮದುವೆಯ ಬಳಿಕ ಅವರು ತಮ್ಮ ಕೆರಿಯರ್‌ನ್ನು ಪಣಕ್ಕೊಡ್ಡಿ ತಮ್ಮೆಲ್ಲ ಗಮನವನ್ನು ಜಾಜಾ ಮೇಲೆ ಹರಿಸಿದರು.

ನರೇಶ್‌ ಅವರಂತೆ ರಾಬರ್ಟ್‌ ಜಾರ್ಜ್‌ ಕೂಡ ತಮ್ಮ ಕೆರಿಯರ್‌ ಬದಿಗೊತ್ತಿ ಅಂಜು ಅವರ ಕೋಚಿಂಗ್‌ನ ಜವಾಬ್ದಾರಿ ವಹಿಸಿಕೊಂಡರು. ಅತ್ಯಂತ ಕಠಿಣ ಪರಿಶ್ರಮ ಹಾಗೂ ಅತ್ಯುತ್ತಮ ಕೋಚಿಂಗ್‌ನಿಂದಾಗಿ ಅಂಜು ಬಾಬ್ಬಿ ಜಾರ್ಜ್‌ ವಿಶ್ವಮಟ್ಟದ ಅಥ್ಲೀಟ್‌ ಆಗಿ ಹೊರಹೊಮ್ಮಿದರು.

ಕೃಷ್ಣಾ ಮತ್ತು ವೀರೇಂದ್ರ ಪೂನಿಯಾ 2011ರ ಫ್ರೆಂಚ್‌ ಓಪನ್‌ ವಿಜೇತ ಲೀನಾ ತಮ್ಮ ಪತಿ ಜಿಯಾಂಗ್‌ ಶೆನ್‌ ಅವರನ್ನು ಕೋಚ್ ಸ್ಥಾನದಿಂದ ಕಿತ್ತು ಹಾಕಿದ್ದರು. ಆದರೆ ಅವರ ನಿರ್ಣಯನ್ನು ಕೃಷ್ಣಾ ಪೂನಿಯಾ ಸರಿ ಎಂದು ಒಪ್ಪುದಿಲ್ಲ. ಆಗ ರೈಟರ್‌ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತ, ಲೀನಾ ಅವರ ಈ ನಿರ್ಣಯದ ಹಿಂದೆ ಬೇರೇನೋ ಕಾರಣವಿರಬೇಕು. ಆದರೆ ನನ್ನ ಬಾಬತ್ತಿನಲ್ಲಿ ಖಂಡಿತ ಹಾಗಿಲ್ಲ. ನನ್ನ ಕೆರಿಯರ್‌ನ ಯಶಸ್ಸಿನ ಬಹುಪಾಲು ನನ್ನ ಪತಿ ವೀರೇಂದ್ರ ಅವರಿಗೆ ಸಲ್ಲುತ್ತದೆ. ನನ್ನ ಮಗ ಹುಟ್ಟಿದ ಬಳಿಕ ನಾನು ಅಥ್ಲೆಟಿಕ್ಸ್ ನಲ್ಲಿ ಏನೇನು ಸಾಧನೆ ಮಾಡಿದೆನೊ, ಅದರಲ್ಲಿ ಪತಿಯ ಅಪಾರ ಪರಿಶ್ರಮವಿದೆ. ವೀರೇಂದ್ರ ಸದಾ ನನ್ನ ಉತ್ಸಾಹ ಹೆಚ್ಚಿಸಿದ್ದಾರೆ. 2010 ಮತ್ತು 2014ರಲ್ಲಿ ಕಾಮನ್‌ ವೆಲ್ತ್ ‌ಗೇಮ್ಸ್ ನಲ್ಲಿ ಪದಕ ಗೆದ್ದ ಕೃಷ್ಣಾ ಪೂನಿಯಾರ ಪತಿ ವೀರೇಂದ್ರ ಪೂನಿಯಾಗೂ ಕೂಡ `ಅತ್ಯುತ್ತಮ ಇಂಡಿಯನ್‌ ಕೋಚ್‌’ ಪ್ರಶಸ್ತಿ ಬಂದಿತ್ತು.

ಕೃಷ್ಣಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ಪತಿ ಆಗಿರುವ ಕಾರಣದಿಂದ ಅವರು ನನಗೆ ಸಂಬಂಧಪಟ್ಟ ಪ್ರತಿಯೊಂದು ಸಂಗತಿಗಳನ್ನು ಸೂಕ್ಷ್ಮವಾಗಿ ಅರಿತುಕೊಳ್ಳುತ್ತಾರೆ. ಅವರಿಗೆ ನನ್ನ ಪ್ರತಿಯೊಂದು ಹ್ಯಾಬಿಟ್ಸ್ ಗೊತ್ತು. ಹೀಗಾಗಿ ನಾನು ಯಾವುದೇ ತಪ್ಪು ಮಾಡಿದಾಗ ತಕ್ಷಣವೇ ನನ್ನನ್ನು ಎಚ್ಚರಿಸುತ್ತಾರೆ. ಪತಿ ಆಗಿರುವ ಕಾರಣದಿಂದ ಅವರು ಹೆಚ್ಚಿನ ಸಮಯವನ್ನು ನನ್ನೊಂದಿಗೆ ಕಳೆಯುತ್ತಾರೆ. ಈ ಕಾರಣದಿಂದ ಅವರನ್ನು ನಾನು ಮಿಸ್‌ ಮಾಡಿಕೊಳ್ಳುವುದಿಲ್ಲ.

ಪತಿಯೇ ಕೋಚ್‌ ಆಗೋದು ಯಾವುದೇ ಒಬ್ಬ ಅಥ್ಲೀಟ್‌ಗೆ ಅಡ್ವಾಂಟೇಜ್‌ ಆಗಿದೆ. ಏಕೆಂದರೆ ನೀವು ಅವರೊಂದಿಗೆ ಅತ್ಯಂತ ಫ್ರೀ ಮತ್ತು ಫ್ರ್ಯಾಂಕ್‌ ಆಗಿರುತ್ತೀರಿ. ಬೇರೆ ಕೋಚ್‌ಗಳಿಗೆ ಹೋಲಿಸಿದಲ್ಲಿ ಅವರು ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅದಕ್ಕೂ ಮುಖ್ಯವಾದುದೆಂದರೆ, ಪ್ರತಿಯೊಬ್ಬ ಅಥ್ಲೀಟ್‌ ವೈಯಕ್ತಿಕ ಕೋಚ್‌ ಇಟ್ಟುಕೊಳ್ಳುವಷ್ಟು ಶ್ರೀಮಂತರಾಗಿರುವುದಿಲ್ಲ.

ಸೀಮಾ ಮತ್ತು ಅಂಕುಶ್ಪೂನಿಯಾ

ಸೀಮಾ ಚಿನ್ನದ ಪದಕ ಗೆದ್ದ ಶ್ರೇಯಸ್ಸನ್ನು ಪತಿಗೆ ನೀಡುತ್ತಾರೆ. 2011ನೇ ಸಾಲಿನಲ್ಲಿ ಅವರ ವಿವಾಹವಾಗಿತ್ತು.

ಪತಿಯೇ ಕೋಚ್‌ ಆಗಿದ್ದರೆ ಅದರಿಂದ ಬಹಳ ಲಾಭವಿದೆ. ಒಬ್ಬ ಒಳ್ಳೆಯ ಕ್ರೀಡಾಪಟು ಆಗಲು ಕೇವಲ ಕೋಚಿಂಗ್‌ ಅಷ್ಟೇ ಕೆಲಸಕ್ಕೆ ಬಾರದು. ಕೋಚಿಂಗ್‌ನ ಜೊತೆ ಜೊತೆಗೆ ಅಥ್ಲೀಟ್‌ ಏನನ್ನು ತಿನ್ನುತ್ತಿದ್ದಾಳೆ, ಏನನ್ನು ಕುಡಿಯುತ್ತಾಳೆ ಹಾಗೂ ಅವಳ ಮಾನಸಿಕ ಸ್ಥಿತಿ ಹೇಗಿದೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಈ ಎಲ್ಲ ಸಂಗತಿಗಳನ್ನು ಪತಿಯ ಹೊರತಾಗಿ ಬೇರಾರು ಗಮನಿಸಲು ಸಾಧ್ಯ, ಎಂದು ಸೀಮಾ ಹೇಳುತ್ತಾರೆ.

ಇನ್ನೊಂದು ಮುಖ ಮಿಸ್ಟರ್‌ ಮೇರಿ ಕೋಮ್ ರಂತೂ ಮಹಾನ್‌ ಆಗಿದ್ದಾರೆ. ಆದರೆ ಲಕ್ಷಾಂತರ ಭಾರತೀಯ ಮಹಿಳೆಯರು ಇದೆಲ್ಲವನ್ನು ತಮ್ಮ ಪತಿಯಂದಿರಿಗಾಗಿ ಮಾಡುವುದಿಲ್ಲವೇ? ಇದೇ ಸಿನಿಮಾ ಒಬ್ಬ ಪುರುಷ ಬಾಕ್ಸರ್‌ನ ಕುರಿತಂತೆ ಆಗಿದ್ದರೆ, ಅವನ ಪತ್ನಿ ಅನಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಲ್ಲಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಲ್ಲಿ ಆಕೆಯ ಬಗ್ಗೆ ಇಷ್ಟೊಂದು ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದ್ದವು?

ಅಡುಗೆ ಮನೆ ಮತ್ತು ಮಕ್ಕಳನ್ನೇ ಅಚ್ಚುಕಟ್ಟಾಗಿ ನೋಡಿಕೊಳ್ಳುವ ಪುರುಷನ ಬಗೆಗಂತೂ ಅದ್ಭುತವಾದಂತಹ ವಿಶೇಷಣಗಳು ಕೇಳಿಬರುತ್ತವೆ. ಮಹಿಳೆ ಇದೇ ಕೆಲಸವನ್ನು ಮಾಡಿದರೆ ಆಕೆ ತನ್ನ ಕರ್ತವ್ಯ ನಿಭಾಯಿಸುತ್ತಿದ್ದಾಳೆ ಎಂಬಂತಹ ಮಾತುಗಳು ಕೇಳಿಬರುತ್ತವೆ. ಆಕೆ ಪ್ರಶಂಸೆಗೆ ಅರ್ಹಳಲ್ಲವೇ? ಅದೊಂದು ಕಾಲವಿತ್ತು. ಆಗ ನೌಕರಿಗಳಲ್ಲಿ ದೈಹಿಕ ಶ್ರಮ ಬಹಳ ಇರುತ್ತಿತ್ತು. ಹೀಗಾಗಿ ಕಾರ್ಯಸ್ಥಳದಲ್ಲಿ ಪುರುಷರು ಹೆಚ್ಚು ಸಮರ್ಥವಾಗಿ ಕೆಲಸ ಮಾಡುತ್ತಿದ್ದರು. ಆದರೆ ಇಂದಿನ ದಿನಗಳ ಮಾತೇ ಬೇರೆ. ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಯಾವ ರಂಗದಲ್ಲಿ ಕೆಲಸ ಮಾಡುವುದಿಲ್ಲ ಹೇಳಿ? ಇದರ ಹೊರತಾಗಿ ಮಹಿಳೆ ಪುರುಷನಿಗಾಗಿ ತನ್ನ ಕನಸು ಮತ್ತು ಕೆರಿಯರ್‌ನ್ನು ಕೂಡ ಬಲಿ ಕೊಡುತ್ತಾಳೆ. ಇದನ್ನು ಅಪೇಕ್ಷಿತ ಹಾಗೂ ಸಹಜ ಎಂದೇ ಭಾವಿಸಲಾಗುತ್ತದೆ.

ಇಂದು ಕಾಲಕ್ಕೆ ತಕ್ಕಂತೆ ಎಲ್ಲ ಬದಲಾಗುತ್ತಿದೆ. ಒಂದು ವೇಳೆ ಭಾರತಕ್ಕೆ ಸಾಮೂಹಿಕವಾಗಿ ಮುಂದೆ ಸಾಗಬೇಕೆಂದಿದ್ದರೆ, ನಾವು ನಮ್ಮ ಸಂಪನ್ಮೂಲಗಳನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಈ ಮಾನವ ಸಂಪನ್ಮೂಲದಲ್ಲಿ ಮಹಿಳೆಯರು ಅರ್ಧ ಭಾಗ ಎನ್ನುವುದನ್ನು ಮರೆಯಬಾರದು. ಅವರು ತಮ್ಮ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ನಾವು ಅವರಿಗೆ ನೆರವು ನೀಡಬೇಕು.

ಕೆ. ಮಧುಮಿತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ