ವಿಪರೀತ ಧಗೆ ಇರುವಾಗ, ಬಿಸಿಲಿನಲ್ಲಿ ನಡೆದುಹೋಗುವುದು ಎಷ್ಟು ಕಷ್ಟಕರ ಎಂದು ಅನುಭವಿಸಿದವರಿಗೇ ಗೊತ್ತು. ಹಾಗೆಂದು ಸದಾ ಬೇಸಿಗೆಯನ್ನು ಟೀಕಿಸುವುದು ಬೇಡ, ಏಕೆಂದರೆ ಬೇಸಿಗೆಯಲ್ಲಿ ಸಿಗುವ ಮಾವಿನಹಣ್ಣಿನ ರುಚಿಯನ್ನು ಬಲ್ಲವರೇ ಬಲ್ಲರು! ಮಾವಿನಹಣ್ಣಿನ ರುಚಿಗೆ ಮನಸೋಲದವರಿಲ್ಲ. ಎಲ್ಲಾ ಹಣ್ಣುಗಳ ರುಚಿಗಿಂತ ಇದರ ರುಚಿ ಅತಿ ಶ್ರೇಷ್ಠ, ಹೀಗಾಗಿ ಮಾವು ಹಣ್ಣುಗಳ ರಾಜ ಎನಿಸಿದೆ.

ನಮ್ಮ ದೇಶದಲ್ಲಂತೂ ಮಾವಿನ ನೂರಾರು ವೆರೈಟಿಗಳು ಸಿಗುತ್ತವೆ. ರಸಪುರಿ, ಮಲಗೋಬಾ, ಅಲ್ಫೋನ್ಸೋ, ಬಾದಾಮಿ, ನೀಲಂ, ಮಲ್ಲಿಕಾ, ಬೈಗನ್‌ಪಲ್ಲಿ, ತೋತಾಪುರಿ ಇತ್ಯಾದಿ ನಮ್ಮ ರಾಜ್ಯ ಮಟ್ಟದ್ದಾದರೆ ಚೌಸಾ, ಫಜಲಿ, ಗೋಪಾಲ್ ಭೋಗ್‌, ಲಕ್ಷ್ಮಣ್‌ ಭೋಗ್‌, ಬಂಬೈಯಾ, ಅನಾರ್ಕಲಿ, ದಶಹರಿ ಇತ್ಯಾದಿ ರಾಷ್ಟ್ರೀಯ ಮಟ್ಟದ್ದೆನಿಸಿವೆ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ವರ್ಷದ ಮೊದಲ ಮಾವಿನ ಬೆಳೆ ದಕ್ಷಿಣ ಭಾರತದಲ್ಲೇ ದೊರಕುವುದು. ನಮ್ಮ ರಾಜ್ಯದ ರಸಪುರಿ, ಆಪೂಸು, ಬಾದಾಮಿಗಳಿಂದ ಆಂಧ್ರದ ಗುಲಾಬಿ ಸ್ಪೆಷಲ್, ತಮಿಳುನಾಡಿನ ತೋತಾಪುರಿವರೆಗೆ ಮೊದಲು ಸಿಗುತ್ತವೆ. ನಂತರ ಲಖ್ನೌನ ದಶಹರಿ ಇತ್ಯಾದಿಗಳು ಉಳಿದ ಉ.ಭಾರತದ ತಳಿಗಳೊಡನೆ ಸಿಗುತ್ತವೆ. ಸಾಮಾನ್ಯವಾಗಿ ಮಾವಿನ ಮಾರುಕಟ್ಟೆ ವರ್ಷಾಂತ್ಯ (ರಾಷ್ಟ್ರಿಯ ಮಾರುಕಟ್ಟೆ ಪ್ರಕಾರ)ದಿಂದಲೇ ಶುರುವಾಗುತ್ತದೆ. `ಮಹಾಜನ್‌’ ತಳಿ ಮೊದಲು ಪ್ರವೇಶಿಸಿದ ನಂತರ, ಏಪ್ರಿಲ್‌, ಜೂನ್‌ವರೆಗೂ ಮಾವಿನ ಸುಗ್ಗಿ ಇರುತ್ತದೆ.

ಮಾವಿನ ಮಾಗುವಿಕೆ

ಮಾವಿನಕಾಯಿ ಕೊಂಡು ತಂದು ಮನೆಯಲ್ಲೇ ಹಣ್ಣಾಗಿ ಮಾಗಿಸುವುದು ಹಳೆಯ ಕಾಲದಿಂದಲೂ ಬಂದ ಪದ್ಧತಿ. ವ್ಯಾಪಾರಿಗಳ ಸಲಹೆಯ ಪ್ರಕಾರ, ಇದಕ್ಕಾಗಿ ದೊಡ್ಡ ರಟ್ಟಿನ ಡಬ್ಬಗಳಲ್ಲಿ ಅಥವಾ ಮರದ ಬಾಕ್ಸ್ ಗಳಲ್ಲಿ, ಜಾಸ್ತಿ ಮಾವಿನ ಎಲೆ ಹರಡಿ, ಅದರಲ್ಲಿ ಮಾವಿನಕಾಯಿಗಳನ್ನು ಹುದುಗಿಸಬೇಕು. ಮೇಲಿನಿಂದ ಇನ್ನಷ್ಟು ಮಾವಿನ ಎಲೆ ಮುಚ್ಚಬೇಕು. 1 ವಾರದಲ್ಲಿ ಹಣ್ಣು ಚೆನ್ನಾಗಿ ಮಾಗಿರುತ್ತದೆ. ಇದೇ ತರಹ ಈ ಡಬ್ಬಕ್ಕೆ ಒಣ ಹುಲ್ಲನ್ನು ತುಂಬಿಸಿ ಅಥವಾ ನ್ಯೂಸ್‌ ಪೇಪರ್‌ನಲ್ಲಿ ಒಂದೊಂದೇ ಕಾಯಿ ಸುತ್ತಿರಿಸಿ, ಮೇಲೆ ಇನ್ನಷ್ಟು ಪೇಪರ್‌ ಹರಡಿಯೂ ಹಣ್ಣನ್ನು ಮಾಗಿಸಬಹುದು.

ಮಾವಿಗಾಗಿ ಸಲಹೆಗಳು

ಮಾವು ಖರೀದಿಸುವುದರಿಂದ ಅದನ್ನು ಸೇವಿಸುವರೆಗೂ ಒಂದಿಷ್ಟು ಸಲಹೆಗಳನ್ನು ಪಾಲಿಸಿದರೆ ಉತ್ತಮ. ಮಾವಿನಹಣ್ಣಿನ ಬಣ್ಣ ತೇಲಿ ಬಂದು, ಮಾಗಿದುದರ ಕಾರಣ ಘಮ್ಮೆಂದು ಸುವಾಸನೆ ಹೊಮ್ಮಿದಾಗ ಮಾತ್ರ ಅಂಥ ಹಣ್ಣನ್ನು ಕೊಳ್ಳಬೇಕು. ಅದರ ಸ್ವರೂಪ ನಿಮಗೆ ಆಕರ್ಷಕ ಎನಿಸದಿದ್ದರೆ ಕೊಳ್ಳಲೇಬೇಡಿ. ಅದರ ಸುವಾಸನೆಯ ಕಾರಣ 1-2 ನಿಮಿಷಗಳಲ್ಲೇ ಹಣ್ಣು ನಿಮಗೆ ಇಷ್ಟ ಅಗುತ್ತದೆ. ಆದ್ದರಿಂದ ಪರಿಚಿತರ ಅಂಗಡಿಯಿಂದ ಹಣ್ಣು ಕೊಳ್ಳುವುದೇ ಲೇಸು.

`ಹಸಿದು ಹಲಸು… ಉಂಡು ಮಾವು’ ಎಂಬ ಗಾದೆಯಂತೆ ಊಟದ ನಂತರ ಇದನ್ನು ಸೇವಿಸುವುದು ಒಳ್ಳೆಯದು. ಊಟಕ್ಕೆ 1-2 ತಾಸು ಮೊದಲೇ ಹಣ್ಣುಗಳನ್ನು ದೊಡ್ಡ ಟಬ್‌ ಭರ್ತಿ ತುಂಬಿದ ನೀರಿನಲ್ಲಿ ನೆನೆಹಾಕಬೇಕು. ಆಗ ಅದರ ಶಾಖ ತಾನಾಗಿ ಇಳಿದುಹೋಗಿ, ಹಣ್ಣು ಇನ್ನಷ್ಟು ತಾಜಾ ಎನಿಸುತ್ತದೆ. ಮಾವನ್ನು ಹೆಚ್ಚು ದಿನ ಫ್ರಿಜ್‌ನಲ್ಲಿರಿಸಿ ತಿನ್ನುವುದು ಸರಿಯಲ್ಲ.

ಬಾಟಲ್ ಮ್ಯಾಂಗೋ ಜೂಸ್

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಜೂಸ್‌ ಹೆಸರಲ್ಲಿ ಸೀಲ್ ‌ಮಾಡಿ ಒದಗಿಸುವ ಬಾಟಲಿಗಳಲ್ಲಿ, ಅಸಲಿ ಮಾವಿನ ಬದಲಾಗಿ ಸಿಹಿಗುಂಬಳದ ಜೂಸ್‌ ತುಂಬಿರುತ್ತದಂತೆ! ಮಾಗಿದ ಸಿಹಿಗುಂಬಳದಿಂದ ಕಲರ್‌ ಬರುತ್ತವೆ, ಸುವಾಸನೆಗಾಗಿ ಎಸೆನ್ಸ್ ಬೆರೆಸಿರುತ್ತಾರೆ. ಆದರೆ ಕೆಲವು ಸ್ಟ್ಯಾಂಡರ್ಡ್‌ ಕಂಪನಿಗಳು ಮಾತ್ರವೇ ಅಸಲಿ ಹಣ್ಣಿನ ಪೇಯ ಒದಗಿಸಿ, ಸಮರ್ಪಕವಾಗಿ ಸಂಸ್ಕರಣ ಗೊಳಿಸಿರುತ್ತವೆ. ಯಾರು ಯಾವ ಹಣ್ಣು ಬಳಸಿದ್ದೇವೆಂದು ಹೇಳಿಕೊಂಡರೂ ಸಾಮಾನ್ಯವಾಗಿ ರಸಪೂರಿ ಮಾವನ್ನು ಇದಕ್ಕೆ ಹೆಚ್ಚು ಬಳಸುತ್ತಾರೆ.

ಚರ್ಮವನ್ನು ಸದಾ ನಳನಳಿಸಲು

ಅತ್ಯುತ್ತಮ ರುಚಿ ನೀಡುವುದರ ಜೊತೆಗೆ ಮಾವು ನಮ್ಮ ಆರೋಗ್ಯ ಹಾಗೂ ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ ಎನಿಸಿದೆ. ಮಾವಿನಲ್ಲಿ ಹಲವು ಬಗೆಯ ವಿಟಮಿನ್ಸ್ ಅಡಗಿವೆ. ಹೀಗಾಗಿ ಇದು ಚರ್ಮವನ್ನು ಸದಾ ಯಂಗ್‌ ಆಗಿಡುತ್ತದೆ. ಹೀಗಾಗಿ ಸುಕ್ಕು, ರಿಂಕಲ್ಸ್ ಬಾಧೆ ಇರುವುದಿಲ್ಲ. ಇದರಲ್ಲಿ ಹೆಚ್ಚು ವಿಟಮಿನ್‌ `ಸಿ’ ಇರುವುದರಿಂದ, ಆ ಕಾರಣಕ್ಕೆ ಇದು ಚರ್ಮವನ್ನು ಸುಲಭವಾಗಿ ರಿಜ್ಯುವಿನೇಟ್‌ ಮಾಡಬಲ್ಲದು. ಜೊತೆಗೆ ಇದು ಮೊಡವೆ, ಹೆಚ್ಚುವರಿ ತೈಲಾಂಶವನ್ನೂ ತಗ್ಗಿಸಬಲ್ಲದು.

ಆರೋಗ್ಯಕ್ಕೆ ಲಾಭಕಾರಿ

ಮಾವಿನಲ್ಲಿ ನಾರಿನಂಶ ಹೇರಳವಾಗಿದೆ. ಇದು ನಮ್ಮ ದೇಹದಲ್ಲಿನ ಇಮ್ಯುನಿಟಿಯನ್ನು ಬಲಪಡಿಸುತ್ತದೆ. ಇದರಲ್ಲಿ ತಾಮ್ರದ ಅಂಶ ಇರುವುದರಿಂದ ರಕ್ತದ ಉತ್ಪಾದನೆಗೆ ಪೂರಕ. ಇದರಲ್ಲಿ `ಬಿ6′ ಅಂಶದ ಕಾರಣ ಹೃದಯಾಘಾತವನ್ನು ಎಷ್ಟೋ ಕಡಿಮೆ ಮಾಡಬಲ್ಲದು. ಜೊತೆಗೆ ಬ್ರೆಲ್ಟ್ ಕ್ಯಾನ್ಸರ್‌ ತಡೆಗಟ್ಟುವಲ್ಲಿಯೂ ಪೂರಕ.

ಸಿ. ಸಾವಿತ್ರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ