ಗಂಟೆಯ ಶಬ್ದ ಕೇಳಿಸಿದಾಗ ಕಾಲಿಂಗ್ ಬೆಲ್ ಇರಬಹುದೆಂದು ಭಾವಿಸಿದೆ. ಆದರೆ ಅದು ಫೋನ್ ಕರೆಯೆಂದು ಅನಂತರ ಅರಿವಾಯಿತು. ಒಡನೆಯೇ ಓಡಿಹೋಗಿ ರಿಸೀವರ್ ತೆಗೆದುಕೊಂಡು “ಹಲೋ…” ಎಂದೆ. ಪ್ರಾಣೇಶ್ ಮಾತನಾಡತೊಡಗಿದರು.
“ಹಲೋ ಮಧು, ಈ ದಿನ ನಾನು ಸ್ವಲ್ಪ ಬೇಗನೆ ಬರುತ್ತೇನೆ. ಬಿಸಿಬಿಸಿಯಾಗಿ ಏನಾದರೂ ತಿಂಡಿ ಮಾಡಿಡು. ಕುಂದಾಪುರದ ನಮ್ಮ ದೊಡ್ಡಪ್ಪನ ಮಗ ಬಂದಿದ್ದಾನೆ. ದೊಡ್ಡಪ್ಪ, ದೊಡ್ಡಮ್ಮ ಅಕಸ್ಮಾತ್ ನಮ್ಮ ಮದುವೆಗೆ ಬರಲಾಗಲಿಲ್ಲ. ಅವನನ್ನೂ ಸಾಯಂಕಾಲ ಮನೆಗೆ ಕರೆದುಕೊಂಡು ಬರುತ್ತೇನೆ. ತಿಳಿಯಿತೇ…?”
ನನ್ನ ಮದುವೆಯಾಗಿ ಸುಮಾರು ಒಂದೂವರೆ ವರ್ಷವಾಗುತ್ತ ಬಂದರೂ, ಇನ್ನೂ ನನಗೆ ಇವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗಲಿಲ್ಲ. ಒಂದೊಂದು ಸಲ ಬಹಳ ಸಂತೋಷದಿಂದಿರುವಾಗ, ನನ್ನನ್ನು ಎತ್ತಿಕೊಂಡು ಸುತ್ತಾಡಿಸಿಬಿಡುತ್ತಿದ್ದರು. ಒಂದೊಂದು ಸಲ ನಾನು ಮನೆಯಲ್ಲಿ ಉಸಿರಾಡುತ್ತಿದ್ದೇನೆ ಎಂಬುದನ್ನೂ ಮರೆಯುತ್ತಿದ್ದರು. ಒಮ್ಮೊಮ್ಮೆ ನನ್ನ ಸೌಂದರ್ಯವನ್ನು ವರ್ಣಿಸುತ್ತ ಕವಿಯಾಗಿಬಿಡುತ್ತಿದ್ದರು. ಮಗದೊಮ್ಮೆ ವಾರಗಳೇ ಕಳೆದರೂ ಹ್ಞೂಂ…. ಇಲ್ಲ, ಹ್ಞಾಂ…. ಇಲ್ಲ.ಮದುವೆಯಾದ ಹೊಸದರಲ್ಲಿ ಒಂದು ವಾರ ಮಾತ್ರವೇ ನಾನು ಅತ್ತೆಮನೆಯಲ್ಲಿ ಉಳಿದದ್ದು. ಮತ್ತೆ ಮತ್ತೆ ರಜೆ ಸಿಗುವುದಿಲ್ಲ ಎಂದು ಇವರು ನನ್ನನ್ನು ಕನ್ಯಾಕುಮಾರಿಗೆ ಕರೆತಂದುಬಿಟ್ಟರು. ನಾವು ಮಧುಚಂದ್ರಕ್ಕೂ ಹೋಗಲಿಲ್ಲ. ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೊಸ ಜಾಗ, ಹೊಸ ಪರಿಸರಕ್ಕೆ ಬಂದುದೇ ದೊಡ್ಡ ಹನಿಮೂನಾಗಿತ್ತು.
ಪ್ರಾಣೇಶ್ ಬರುವುದಕ್ಕೆ ಮುನ್ನವೇ ನಾನು ತಿಂಡಿ ತಯಾರಿಸಿ, ಮುಗಿಸಿದ್ದೆ. ಬಿಸಿಬಿಸಿ ಸಜ್ಜಿಗೆ, ಬೊಂಬಾಯಿ ಬೋಂಡ ರೆಡಿಯಾಗಿತ್ತು. ಪ್ರಾಣೇಶ್ ತಮ್ಮ ದೊಡ್ಡಪ್ಪನ ಮಗ ಕುಮಾರ್‌ನೊಂದಿಗೆ ಬಂದಿಳಿದರು. ಕುಮಾರ್‌ನನ್ನು ನೋಡಿ ನಾನು ಮೂರ್ಛೆ ಹೋಗದಿದ್ದುದೊಂದು ಬಾಕಿ! ಇಷ್ಟೊಂದು ಸಾಮ್ಯತೆ ಇರಲು ಸಾಧ್ಯವೇ, ಹೀಗೂ ಉಂಟೆ? ಒಬ್ಬರ ರೂಪ ಇನ್ನೊಬ್ಬ ವ್ಯಕ್ತಿಯೊಂದಿಗೆ ಇಷ್ಟೊಂದು ಹೋಲುತ್ತದೇನು? ಅದೂ ಮೂಗು, ಕಣ್ಣು, ಕಿವಿ ತಿದ್ದಿ ತೀಡಿದ ಹಾಗೆ, ಥೇಟ್ ಶಂಕರನ ಹಾಗೇ ಇದೆ! ಕುಮಾರನಂತೂ ತನ್ನ ರೂಪಲಾವಣ್ಯ, ಹಾವಭಾವಗಳಿಂದ ಶಂಕರನ ಯಥಾವತ್ ರೂಪದಿಂದ ಕಂಗೊಳಿಸುತ್ತಿದ್ದ. ನನಗಂತೂ ಶಂಕರ್ ಬದುಕಿ ಬಂದನೇನೋ ಎನ್ನುವಷ್ಟು ಆಶ್ಚರ್ಯ!
“ಯಾವ ಲೋಕದಲ್ಲಿದ್ದೀಯಾ ಅತ್ತಿಗೆ? ಅಣ್ಣನನ್ನು ನೋಡುತ್ತಿದ್ದಂತೆಯೇ ಯಾವ ಲೋಕವನ್ನು ಸೇರಿದೆ?” ಕುಮಾರನ ಮಾತುಗಳನ್ನು ಕೇಳುತ್ತ ಧ್ವನಿಯಲ್ಲೂ ಸಾಮ್ಯವಿರುವುದನ್ನು ಕೇಳಿ ಮೂಕವಿಸ್ಮಿತಳಾದೆ.
ತಡಬಡಿಸುತ್ತ, “ಬಾ ಕುಮಾರ್, ನಿನ್ನನ್ನು ಮೊದಲನೇ ಸಲ ನೋಡುತ್ತಿದ್ದೇನಲ್ಲವೇ? ನೀವು ಇವನನ್ನು ಮೊದಲು ಎಂದೂ ಕರೆತರಲಿಲ್ಲವಲ್ಲ?” ಎಂದು ಇವರನ್ನು ದೂರುತ್ತ ಹೇಳಿದೆ.
“ಈಗಲೂ ಅಣ್ಣನೇನೂ ನನ್ನನ್ನು ಕರೆಯಲಿಲ್ಲ. ನನ್ನನ್ನು ಅಲ್ಲಿಂದಲೇ ಹಾಗೇ ಸಾಗಹಾಕಲು ನೋಡುತ್ತಿದ್ದ,” ಪ್ರಾಣೇಶನೆಡೆ ಕಣ್ಣು ಮಿಟುಕಿಸುತ್ತ ಕುಮಾರ್, “ನಾನೇ ಹೇಳಿದೆ, ಅಷ್ಟು ದೂರದಿಂದ ಬಂದಿದ್ದೇನೆ, ಅತ್ತಿಗೆಯ ಕೈ ರುಚಿ ನೋಡಿಕೊಂಡೇ ಹೋಗುತ್ತೇನೆ ಅಂತ….” ಎಂದು ಹೇಳಿದ.
ಪ್ರಶಂಸಿಸುತ್ತಿದ್ದ ಕುಮಾರನನ್ನೇ ನಾನು ದೃಷ್ಟಿಸುತ್ತಿದ್ದರೆ, ಅವನ ಮಾತಿಗೆ ಪ್ರಾಣೇಶ್ ನಸುನಗುತ್ತಿದ್ದರು.
ನಾನು ಅಡುಗೆಮನೆಗೆ ಬಂದೆ. ನನಗೆ ಕುಮಾರನೆದುರು ನಿಂತು ತಡಬಡಿಸದೆ ಮಾತನಾಡಲು ಆಗುವುದಿಲ್ಲವೇನೋ ಎಂದು ಶಂಕೆಯಾಯಿತು. ನಾನಿನ್ನೂ ಆ ಶಾಕ್‌ನಿಂದ ಚೇತರಿಸಿಕೊಂಡಿರಲಿಲ್ಲ. ಕಾಫಿ ಹಿಡಿದು ನಾನು ಹಾಲ್‌ಗ ಬರುವಷ್ಟರಲ್ಲಿ, ಕುಮಾರ್‌ಕೈಕಾಲು ಮುಖ ತೊಳೆದು ಕುಳಿತಿದ್ದ. ಪ್ರಾಣೇಶ್ ಇನ್ನೂ ಉಡುಪು ಬದಲಿಸಿರಲಿಲ್ಲ. ಕುಮಾರ್ ಶುಭ್ರವಾದ ಪೈಜಾಮದ ಮೇಲೆ ಬಿಳಿ ಜುಬ್ಬ ಧರಿಸಿ ಆರಾಮವಾಗಿ ಕುಳಿತ್ತಿದ್ದ. ಇದೇ ಶಂಕರನ ಇಷ್ಟವಾದ ಡ್ರೆಸ್ ಆಗಿತ್ತು. ಪ್ರಾಣೇಶರಿಗಿಂತ ಒಂದೇ ವರ್ಷ ಚಿಕ್ಕವನಾದ ಕುಮಾರನನ್ನೇ ದೃಷ್ಟಿಸುತ್ತ ನಾನು ಕಾಫಿ ಕೊಟ್ಟೆ.
ಈ ಹಾಳಾದ ಮನಸ್ಸು, ಒಬ್ಬರನ್ನು ಪ್ರೇಮಿಸಿದ ನಂತರ ಅವರ ಪ್ರತಿರೂಪವನ್ನು ಇನ್ನೊಬ್ಬರಲ್ಲಿ ಬಯಸುವುದಾದರೂ ಏಕೆ?
ಶಂಕರ್ ಸತ್ತು ಹೋದ ಎಂದು ನಂಬಲು ನನ್ನ ಒಳಮನಸ್ಸು ಈಗಲೂ ಸಿದ್ಧವಿಲ್ಲ. ಶಂಕರ್‌ನ ಪ್ರತಿಬಿಂಬವನ್ನು ಸಮಾನ ವಯಸ್ಕರಾದ ಪ್ರಾಣೇಶರಲ್ಲಿ ಹುಡುಕಿ ನಾನು ಹತಾಶಳಾಗಿದ್ದೆ. ಕೇವಲ ಬಾಹ್ಯ ರೂಪದಲ್ಲಿ ವ್ಯಕ್ತಿ ವ್ಯಕ್ತಿಗಳಲ್ಲಿ ಸಮಾನತೆ ಇರಬೇಕೆಂದೇನೂ ಇಲ್ಲ. ಸ್ವಭಾವದಲ್ಲೂ ಇರುಬಹುದಲ್ಲ? ಪ್ರೇಮಿಯ ವ್ಯಕ್ತಿತ್ವವನ್ನು ನನ್ನ ಗಂಡನಲ್ಲಿ ಕಾಣಲಾಗದೆ ನಾನು ಬಹಳ ನೊಂದಿದ್ದೆ. ಪ್ರಾಣೇಶ್ ಸ್ವಭಾದಲ್ಲಾದರೂ ಶಂಕರನನ್ನು ಕಿಂಚಿತ್ತಾದರೂ ಹೋಲುತ್ತಿದ್ದರೂ ನನಗೆ ಸಮಾಧಾನವಾಗುತ್ತಿತ್ತು. ಆದರೆ ಶಂಕರ್ ಪ್ರಾಣೇಶ್‌ರಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು.
ಮಾರನೇ ದಿನ ಕಛೇರಿಗೆ ಹೋಗುವ ಮುನ್ನ ಪ್ರಾಣೇಶ್, ಕುಮಾರ್‌ಗೆ ಏನೋ ಹೇಳುತ್ತಿದ್ದರು. ಕುಮಾರನಿಗೆ, ಪ್ರಾಣೇಶ್‌ಫ್ಯಾಕ್ಟರಿಯಲ್ಲಿ 11 ಗಂಟೆವರೆಗೆ ಇಂಟರ್‌ವ್ಯೂ ಇತ್ತು. 10 ಗಂಟೆವರೆಗೂ ಅಲ್ಲಲ್ಲೇ ಅಡ್ಡಾಡಿದ ಕುಮಾರ್, “ನಡಿ ಅತ್ತಿಗೆ, ಹೊರಗೆ ಸುತ್ತಾಡಿಕೊಂಡು ಬರೋಣ,” ಎಂದ.
“ಯಾಕೆ ಇಂಟರ್‌ವ್ಯೂಗೆ ಹೋಗುವುದಿಲ್ಲವೇನು?”
“ಅದರ ಶಿಫಾರಸ್ಸಿಗಾಗಿಯೇ ತಯಾರಿ ನಡೆಸುತ್ತಿದ್ದೇನೆ. ನೀನೇನಾದರೂ ನನ್ನ ಜೊತೆಯಲ್ಲಿ ಬಂದರೆ, ನನ್ನ ರೆಕಮಂಡೇಶನ್‌ಸಲೀಸಾಗಿ ಆದಂತೆಯೇ, ತಂಟೆ ತಕರಾರಿಲ್ಲದೆ ನನ್ನನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಾರೆ.”
ನಿಜವಿಲ್ಲದೆ ಇದ್ದರೂ, ಯಾರಾದರೂ ಹೊಗಳುತ್ತಿದ್ದರೆ ಎಂಥಾ ಹೆಂಗಸೇ ಆದರೂ ಅದರಿಂದ ಕರಗಿಹೋಗುತ್ತಾಳೆ. ಎಷ್ಟೋ ಗಂಡಸರು ಇದನ್ನೇ ಒಂದು ಅಸ್ತ್ರವನ್ನಾಗಿಸಿಕೊಂಡು ಹೆಂಗಸರನ್ನು ಮರುಳು ಮಾಡಿಬಿಡುತ್ತಾರೆ. ಇದು ನಗ್ನ ಸತ್ಯ.
ಸಾಯಂಕಾಲ ನಾನು ವಿಶೇಷವಾಗಿ ಗಮನವಿಟ್ಟು ಅಲಂಕರಿಸಿಕೊಂಡೆ.
ಪ್ರಾಣೇಶ್ ಸಿನಿಮಾಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ಪ್ರಾಣೇಶ್ ಮತ್ತು ಕುಮಾರ್ ಜೊತೆಯಾಗಿ ಮನೆಗೆ ಬಂದರು. ನನ್ನನ್ನು ನೋಡಿಯೂ ನೋಡದಂತೆ ಪ್ರಾಣೇಶ್ ಸುಮ್ಮನೆ ರೂಮಿಗೆ ಹೊರಟುಹೋದರು. ಆದರೆ ಕುಮಾರ್‌ಬಾಗಿಲಲ್ಲಿಯೇ ನಿಂತು ಮೇಲಿನಿಂದ ಕೆಳಗೆ ನನ್ನನ್ನು ನೋಡುತ್ತ, ರೆಪ್ಪೆ ಪಟಪಟನೆ ಆಡಿಸುತ್ತ, “ನಿಜವಾಗಿಯೂ ನೀನು ನನ್ನ ಜೊತೆ ಬಂದಿದ್ದರೆ ನಾನು ಪ್ರಮಾಣ ಪತ್ರಗಳಿಲ್ಲದೆಯೇ ಇಂಟರ್‌ವ್ಯೂ ಪಾಸ್ ಮಾಡುತ್ತಿದ್ದೆ. ಎಷ್ಟೊಂದು ಚೆನ್ನಾಗಿ ಕಾಣುತ್ತಿದ್ದೀಯ ಅತ್ತಿಗೆ!” ಎಂದ.
ಕುಮಾರ್ ಮೊದಲೇ ಚಿತ್ರವನ್ನು ನೋಡಿದ್ದ. ಚಿತ್ರದ ಪ್ರಣಯ ದೃಶ್ಯಗಳಲ್ಲಿ ಪ್ರಾಣೇಶರ ಕೈಗಳನ್ನು ನನ್ನ ಕೈಗಳಲ್ಲಿ ಭದ್ರವಾಗಿ ಹಿಡಿದುಕೊಳ್ಳಬೇಕೆಂದು ನನಗೆ ಅನಿಸುತ್ತಿತ್ತು. ಆದರೆ ಪ್ರತಿ ಬಾರಿಯೂ ಅವರ ಕೈ ತಣ್ಣಗೆ ಕೊರೆಯುತ್ತಿರುವಂತೆ ಅನಿಸುತ್ತಿತ್ತು. ಹಾಸ್ಯದ ದೃಶ್ಯಗಳು ಬಂದಾಗ ಕುಮಾರ್ ನನ್ನ ಕೈ ಹಿಡಿದು ಜೋರಾಗಿ ನಗುತ್ತ ಹೇಳಿದ, “ಇವನನ್ನು ನೋಡಿ ಅತ್ತಿಗೆ, ಈಗ ಕೋತಿಯ ಹಾಗೆ ಕಾಣಿಸುತ್ತಾನೆ. ಆ ಡುಮ್ಮಿ ಇನ್ನೇನು ಬಿದ್ದೇಬಿಡುತ್ತಾಳೆ….” ಚೇತೋಹಾರಿಯಾದ ನಗೆ ಅವನದು.
ಅವನ ಕೈಗಳಲ್ಲಿದ್ದ ಬಿಸುಪು ನನ್ನ ಇಡೀ ಶರೀರದಲ್ಲಿ ಪಸರಿಸಿದಂತಾಯಿತು, ಗಾಬರಿಯಿಂದ ನಾನು ನನ್ನ ಕೈ ಬಿಡಿಸಿಕೊಂಡೆ.
ರಾತ್ರಿ ಹಾಸಿಗೆಯ ಮೇಲೆ ಮಲಗಿದಾಗ, ಕಣ್ಣಿನ ಮುಂದೆ ಒಮ್ಮೆ ಶಂಕರ್‌ನ ಪ್ರತಿಬಿಂಬ ಕಾಣಿಸಿದರೆ ಮತ್ತೊಮ್ಮೆ ಕುಮಾರ್‌ನ ಚಿತ್ರ ಕಣ್ಮುಂದೆ ನಿಲ್ಲುತ್ತಿತ್ತು. ಪ್ರಾಣೇಶರ ಚಿತ್ರ ಇವರಿಬ್ಬರ ನಡುವೆ ಕಂಡೂ ಕಾಣದಂತೆ ಭಾಸವಾಗುತ್ತಿತ್ತು. ವಿವೇಕ ನನ್ನನ್ನು ಪ್ರಾಣೇಶರು ಪ್ರತಿಯೊಂದು ವಿಷಯದಲ್ಲಿಯೂ ತಕ್ಕ ಪುರುಷರೆಂದು ಎಚ್ಚರಿಸುತ್ತಿದ್ದರೂ, ಮರ್ಕಟ ಮನಸ್ಸು, ಶಂಕರನ ಪ್ರತಿರೂಪವಾದ ಕುಮಾರ್‌ನ ವ್ಯಕ್ತಿತ್ವದ ಮುಂದೆ ಯಾರೂ ಸರಿಗಟ್ಟಲಾರರು ಎಂದು ಹೇಳುತ್ತಿತ್ತು.
ಕುಮಾರನೊಡನೆ ಇದೇನು ನನ್ನ ಭಾವನಾತ್ಮಕ ಸಂಬಂಧ? ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ನನ್ನ ಕಣ್ಣುಗಳು ತೆರೆದಿದ್ದವು. ನಾನೇಕೆ ಸತ್ತುಹೋದ ಶಂಕರನನ್ನು ಕುಮಾರನಲ್ಲಿ ಪ್ರತಿಸಲ ಹುಡುಕುತ್ತಿದ್ದೇನೆ? ಶಂಕರ್ ಈ ಪ್ರಪಂಚದಲ್ಲಿ ಇಲ್ಲ. ಇದ್ದಿದ್ದರೆ ನಾನು ಅವನ ಹೆಂಡತಿಯೇ ಆಗಿರುತ್ತಿದ್ದೆ. ಜೀವನದಲ್ಲಿ ಎಲ್ಲರಿಗಿಂತಲೂ ಹೆಚ್ಚಾಗಿ ನಾನು, ಅವನನ್ನು ಪ್ರೇಮಿಸುತ್ತಿದ್ದೆ. ಮನೆಯವರೆಲ್ಲರ ವಿರೋಧವನ್ನೆದುರಿಸಿಯೂ ಬೇರೆ ಜಾತಿಯವನಾದ ಅವನೊಂದಿಗೆ ರಿಜಿಸ್ಟರ್ಡ್ ಮದುವೆಯಾಗಿ ಓಡಿಹೋಗಲು ತಾರೀಖನ್ನೂ ನಿಶ್ಚಯಿಸಿಕೊಂಡಿದ್ದೆ. ಆದರೆ ಕ್ರೂರ ವಿಧಿ! ನಮ್ಮ ಮನೆಯವರಿಂದ ಶಾಪ ಹಾಕಿಸಿಕೊಂಡು, ಮದುವೆಯ ತಯಾರಿಗೆಂದು ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿದ್ದ ಶಂಕರ್ ಎದುರಿನ ಲಾರಿಗೆ ಗುದ್ದಿ, ಅಲ್ಲೇ ಮೃತಪಟ್ಟಿದ್ದ. ಇನ್ನೆಲ್ಲಿಯ ಶಂಕರ್? ಅನ್ನ, ನೀರು ಬಿಟ್ಟು ಎಷ್ಟೋ ದಿನ ಗೋಳಾಡುತ್ತಿದ್ದವಳನ್ನು ಮನೆಯವರು ಸಮಾಧಾನಪಡಿಸಲು ಬಂದಾಗ, ಅವರ ವಿರುದ್ಧ ಇನ್ನಷ್ಟು ಆಕ್ರೋಶವನ್ನು ಬೆಳೆಸಿಕೊಂಡಿದ್ದೆ. ಮುಂದೆ ಅದೇ ನಿರಾಶೆ, ಹತಾಶೆಗಳು ವಧು ಪರೀಕ್ಷೆಯಲ್ಲಿ ಅಸಫಲತೆಯನ್ನು ತಂದೊಡ್ಡತೊಡಗಿದವು. ಶಂಕರನಿಗಾಗಿ ಮನಸ್ಸು ಹುಚ್ಚಾಗುತ್ತಿತ್ತು. ಅವನ ಒಂದು ಮುಗುಳ್ನಗೆಯಿಂದಲೇ ನಾನು ಪ್ರಭಾವಿತಳಾಗುತ್ತಿದ್ದೆ. ನನಗೆ ಇದೇನಾಗುತ್ತಿದೆ? ಶಂಕರ್‌ನನ್ನು ಪ್ರಯಾಸದಿಂದ ಸ್ವಲ್ಪ ಮರೆತು ವೈವಾಹಿಕ ಜೀವನದಲ್ಲಿ ತೊಡಗಿಸಿಕೊಂಡಾಗ ಧುತ್ತೆಂದು ಈ ಕುಮಾರನ ಆಗಮನವಾಗಬೇಕೆ? ಶಂಕರನ ನೆನಪೇ ಇನ್ನೂ ಕಾಡುತ್ತಿದ್ದರೆ, ಈಗ ಕುಮಾರ್ ಬೇರೆ ಕಾಡತೊಡಗಿದ್ದಾನೆ.
ಕುಮಾರನಿಗೆ ಪ್ರಾಣೇಶ್‌ರ ಫ್ಯಾಕ್ಟರಿಯಲ್ಲಿ ಕೆಲಸ ದೊರೆಯಿತು. ಮಧ್ಯದಲ್ಲಿ ಅವನು ಊರಿನಿಂದ ತನ್ನ ಸಾಮಾನುಗಳನ್ನು ತರಲು ಹೋಗಿದ್ದಾಗ ಅವನು ಯಾವಾಗ ಬರುತ್ತಾನೋ ಎಂದು ನಾನು ಒಂದೊಂದು ದಿನವನ್ನೂ ಎಣಿಸತೊಡಗಿದೆ. ಕುಮಾರ್ ನಮ್ಮ ಮನೆಯಲ್ಲೇ ಇಳಿದುಕೊಂಡ. ನನಗೆ ಮನೆಗೆಲಸದಲ್ಲೂ ಬಹಳ ಸಹಕಾರ ಕೊಡತೊಡಗಿದ. ನಾನು ಬೆಳಗ್ಗೆ ಏಳುವುದರೊಳಗೆ ಮನೆ ಅಚ್ಚುಕಟ್ಟಾಗಿರುತ್ತಿತ್ತು. ನಾನು ಮುಖ ತೊಳೆದು ಬರುವಷ್ಟರಲ್ಲಿ ಅವನೇ ಕಾಫಿ ಮಾಡುತ್ತಿದ್ದ. ನನಗೆ ಕಾಫಿ ನೀಡುತ್ತ, “ನನ್ನ ಸೇವೆ ಎಲ್ಲ ಆಯಿತು ಅತ್ತಿಗೆ. ಈಗ ನನ್ನ ಹೊಟ್ಟೆ ತಾಳ ಹಾಕುತ್ತಿದೆ, ಅದರ ಜವಾಬ್ದಾರಿ ನಿನ್ನದೇ,” ಎನ್ನುತ್ತಿದ್ದ. ಅದನ್ನು ಕೇಳಿ ನಗುನಗುತ್ತ ನಾನು ತಿಂಡಿ ತಯಾರಿಸಲು ಓಡುತ್ತಿದ್ದೆ.
ಈಗ ನನ್ನ ಬಳಿ ಪ್ರಾಣೇಶ್‌ಗಾಗಿಯೂ ಹೆಚ್ಚು ಸಮಯವಿಲ್ಲ. ಕುಮಾರನೊಂದಿಗೆ ಮಾತನಾಡುತ್ತ ಸಮಯ ಹೇಗೆ ಕಳೆದು ಹೋಗುತ್ತಿತ್ತೋ ತಿಳಿಯುತ್ತಲೇ ಇರಲಿಲ್ಲ. ಮಾತು ಎಲ್ಲಿಂದೋ ಶುರುವಾಗಿ ಎಲ್ಲೋ ತೊಡಗುತ್ತಿದ್ದ. ಬಾಲ್ಯದಿಂದ ಕಾಲೇಜಿನವರೆಗೆ, ಒಮ್ಮೊಮ್ಮೆ ಕುಮಾರ್ ಗರ್ಲ್ ಫ್ರೆಂಡ್ಸ್ ಬಗ್ಗೆ, ಹೀಗೆ ಹತ್ತು ಹಲವಾರು. ಒಬ್ಬರನ್ನೊಬ್ಬರು ರೇಗಿಸುವುದು, ತಮಾಷೆಗೊಳಿಸುವಷ್ಟರ ಮಟ್ಟಿಗೆ ಸಲುಗೆ ಬೆಳೆದು ಬಂತು.
ನಡುವೆ ಒಂದು ವಾರ ಪ್ರಾಣೇಶ್‌ರ ದೊಡ್ಡಪ್ಪ ದೊಡ್ಡಮ್ಮ ಬಂದು ತಮ್ಮ ಮಗ ಹಾಯಾಗಿರುವುದನ್ನು ನೋಡಿ ನಿಶ್ಚಿಂತೆಯಿಂದ ವಾಪಸ್ಸು ಹೋದರು.
ಒಂದು ದಿನ ಸಣ್ಣಗೆ ಮಳೆ ಹನಿಯುತ್ತಿತ್ತು. ಪ್ರಾಣೇಶ್ ಫ್ಯಾಕ್ಟರಿಗೆ ಹೋಗಿದ್ದರು. ಕುಮಾರನಿಗೆ ಹಿಂದಿನ ರಾತ್ರಿಯೇ ಸುಮಾರಾಗಿ ಜ್ವರ ಬಂದಿತ್ತು. ನಾನು ಗಾಬರಿಯಿಂದ ಅವನನ್ನು ಉಪಚರಿಸುತ್ತಿದ್ದೆ. ಈ ಜ್ವರ ನನಗೇ ಬಂದಿದೆಯೇನೋ ಎಂಬಂತೆ ಚಡಪಡಿಸುತ್ತಿದ್ದೆ. ನಾನು ಈಗ ಕುಮಾರನ ವಿಷಯವನ್ನು ಎಷ್ಟೊಂದು ಹಚ್ಚಿಕೊಂಡಿದ್ದೇನೆಂದರೆ, ಶಂಕರನ ನೆನಪು ಈಗ ನನ್ನಿಂದ ದೂರವಾಗಿತ್ತು.
ನಾನು ಕುಮಾರನಿಗಾಗಿ ಮೂಸಂಬಿಯ ರಸ ತಯಾರಿಸಿದೆ. ಅವನ ಕೋಣೆ ಪ್ರವೇಶಿಸಿದಾಗ, ಬಹಳ ತಲೆನೋವಿನಿಂದ, ಕುಮಾರ್ ತನ್ನ ತಲೆಯನ್ನು ಒತ್ತಿಕೊಳ್ಳುತ್ತಿದ್ದ. ನಾನು ಗ್ಲಾಸನ್ನು ಟೇಬಲ್ ಮೇಲಿಡುತ್ತ, ಅವನ ಹಣೆಯನ್ನು ಸವರುತ್ತ ಹೇಳಿದೆ,
“ತುಂಬಾ ತಲೆ ನೋಯುತ್ತಿದೆಯಾ ಕುಮಾರ್….? ಅಮೃತಾಂಜನ ಹಚ್ಚಲೇ….?”
ಉತ್ತರಿಸುವುದರ ಬದಲು, ಅವನು ನನ್ನ ಕೈ ಹಿಡಿದುಕೊಂಡು ತನ್ನ ಬಳಿ ಕುಳ್ಳಿರಿಸಿಕೊಂಡ. ತನ್ನ ತಲೆಯನ್ನು ನನ್ನ ಮಡಿಲಲ್ಲಿಟ್ಟು, ನನ್ನ ಕೈಗಳನ್ನು ಬಿಗಿಯಾಗಿ ಹಣೆಗೆ ಒತ್ತಿ ಹಿಡಿದುಕೊಂಡ. ನಾನು ವಿಚಲಿತಳಾದೆ, ಆದರೆ ಅವನು ನಿಶ್ಚಿಂತೆಯಿಂದ ಮಲಗಿದ್ದ. ಅವನ ಹಣೆಯ ಬಿಸಿಯ ಅಡಿಯಲ್ಲಿ ನನ್ನ ಕೈಗಳು ಬಂಧಿತವಾಗಿದ್ದವು ಮತ್ತು ಮಡಿಲಿನಲ್ಲಿ ತಾಪದಿಂದ ಸುಡುತ್ತಿದ್ದ ಅವನ ಮುಖವಿತ್ತು. ಉಫ್….. ಇಷ್ಟೊಂದು ಬಿಸುಪೇ…. ನಾನು ಇನ್ನೇನು ನನ್ನ ಸಂಯಮದ ಎಲ್ಲೆಯನ್ನು ಮೀರುದರಲ್ಲಿದ್ದೆ.
“ಅತ್ತಿಗೆ….. ಇಲ್ಲೇ ಕುಳಿತಿರು. ನನ್ನೊಬ್ಬನನ್ನೇ ಬಿಟ್ಟು ಹೋಗಬೇಡ,” ಅಸ್ಪಷ್ಟ ದನಿಯಲ್ಲಿ ಕುಮಾರ್ ಹೇಳುತ್ತಿದ್ದ.
ನನಗೆ ರೋಮಾಂಚನವಾಯಿತು. ಹೊರಗೆ ಥಂಡಿ ವಾತಾವರಣ. ಒಳಗೆ ನನ್ನ ಪ್ರೇಮಿಯ ಪ್ರತಿರೂಪ ಮತ್ತು ಕೈಗಳಲ್ಲಿ ಅವನ ಅಂಗಾಂಗಗಳ ತಾಪ. ನಾನು ಸಂಯಮ ಕಳೆದುಕೊಳ್ಳದೆ ಇರಬಲ್ಲೆನೆ? ಎಂದು ಚಿಂತಿಸಿದೆ. ಮೈ ಪೂರ್ತಿ ಕಂಪಿಸುತ್ತಿರುವ ಅನುಭವವಾಯಿತು. ನಾನು ಬಹು ಮೆಲ್ಲನೆ ಬಗ್ಗಿ ಅವನ ಕಿವಿಯಲ್ಲಿ, “ಕುಮಾರ್ ನಿನಗೆ ಕುಡಿಯಲು, ಕಾಫಿ ಅಥವಾ ಹಾಲು ತರಲೇ?” ಎಂದೆ.
“ಅತ್ತಿಗೆ ಇಷ್ಟೊಂದು ಆತ್ಮೀಯತೆಯನ್ನು ನಾನು ಎಲ್ಲೂ ಕಂಡಿರಲಿಲ್ಲ. ಅಮ್ಮಅಪ್ಪ ಇಬ್ಬರೂ ನೌಕರಿ ಮಾಡುತ್ತಾರೆ. ನಾನೊಬ್ಬನೇ ಮಗ. ಎಷ್ಟೋ ಸಲ ನನ್ನ ಅಂತರಾಳದ ನೋವು ತುಡಿತಗಳನ್ನು ನಾಲ್ಕು ಗೋಡೆಗಳ ನಡುವೆಯೇ ಅಡಗಿಸಿಕೊಳ್ಳಬೇಕಾಗುತ್ತಿತ್ತು. ನನ್ನ ಮನಸ್ಸಿನಲ್ಲಿದ್ದ ಭಾವನೆಯನ್ನು ನೀನಲ್ಲದೆ ಯಾರೂ ಅರ್ಥೈಸಿಕೊಳ್ಳಲಿಲ್ಲ. ನನ್ನ ವೇದನೆಯನ್ನು ಬೇರಾರೂ ಅರ್ಥ ಮಾಡಿಕೊಳ್ಳಲಿಲ್ಲ. ನಿನ್ನನ್ನು ಬಿಟ್ಟರೆ ನನಗೆ ಇಷ್ಟೊಂದು ಆಪ್ತರಾದವರು ಬೇರೆ ಯಾರೂ ಇಲ್ಲ. ನೀನು ಯಾವ ಜನ್ಮದಲ್ಲಿ ನನಗೆ ಅಕ್ಕ ಆಗಿದ್ದೆಯೋ ಗೊತ್ತಿಲ್ಲ. ಯಾವಾಗಲೂ ನನಗೆ ಉತ್ತಮ ಮಾರ್ಗದರ್ಶನ ನೀಡುತ್ತಿರು. ಉಪಯುಕ್ತ ಸಲಹೆ ಕೊಡು. ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿಲ್ಲ ಅತ್ತಿಗೆ. ಆದರೂ ನಿನ್ನಲ್ಲಿ ನನಗೆ ತಾಯಿಗಿಂತ ಕಡಿಮೆಯಾದ ಪ್ರೀತಿಯೇನಿಲ್ಲ…..”
ನನ್ನನ್ನು ಯಾರೋ ದೊಡ್ಡ ಬೆಟ್ಟದ ಮೇಲಿನಿಂದ ಆಳವಾದ ಕಂದಕಕ್ಕೆ ದೂಡಿಬಿಟ್ಟಂತೆ ಆಯಿತು! ನಾನು ಬಹಳ ಹೊತ್ತು ಅಲ್ಲಿಯೇ ಕುಳಿತಿರಲಾರದೆ ಹೋದೆ. ಬಚ್ಚಲು ಮನೆಗೆ ಬಂದು ಕದ ಹಾಕಿ, ಬಹಳ ಹೊತ್ತು ಸಶಬ್ದವಾಗಿ ಬಿಕ್ಕಳಿಸತೊಡಗಿದೆ. ನಾನೇಕೆ ಕುಮಾರನಲ್ಲಿ ಇಷ್ಟೊಂದು ಅನುರಕ್ತಳಾಗತೊಡಗಿದೆ? ಅವನ ನಗು ಮತ್ತು ಮಾತುಗಳನ್ನು ಕಾಮುಕ ದೃಷ್ಟಿಯಿಂದ ಕಳಂಕಿತಗೊಳಿಸಿಬಿಟ್ಟೆನಲ್ಲ? ತಮ್ಮನ ಸಮಾನನಾದ ಮೈದುನನಲ್ಲಿ ಕಾಮವಾಂಛೆಯನ್ನು ಬಯಸಿದೆನಲ್ಲ? ನಾನು ಇಷ್ಟೊಂದು ನಡತೆಗೆಟ್ಟ ಹೆಣ್ಣೆ? ಯಾರಾದರೂ ಶಂಕರನ ಹಾಗೆ ಕಂಡುಬಂದರೆ ಅವರನ್ನು ಪ್ರೇಮಿಸುವುದೆ? ನಾನು ಇಷ್ಟೊಂದು ಸ್ವಾರ್ಥಿ, ಅಭಿಸಾರಿಕೆಯಾಗಿ ಬದಲಾಗಿಹೋದೆನೇ….? ಎಂದು ಪಶ್ಚಾತ್ತಾಪಪಡತೊಡಗಿದೆ.
ಸಾಯಂಕಾಲ ಯಾವಾಗ ಆಗುವುದೋ, ಪ್ರಾಣೇಶ್ ನಮ್ಮಿಬ್ಬರ ನಡುವೆ ಯಾವಾಗ ಬರುವರೋ ಎಂದು ಚಾತಕದಂತೆ ಕಾದು ಕುಳಿತೆ. ಕುಮಾರನಿಂದ ಆದಷ್ಟೂ ದೂರವಿರಲು ಪ್ರಯತ್ನಿಸಿದೆ. ಅವರು ಬರುಷ್ಟರಲ್ಲಿ ನಾನು ಎಷ್ಟೋ ಸುಧಾರಿಸಿಕೊಂಡೆ. ಪ್ರಾಣೇಶ್ ಬಂದಾಗ ಅವರ ದೃಷ್ಟಿಯನ್ನೆದುರಿಸಲು ನನ್ನಿಂದಾಗಲಿಲ್ಲ.
“ಕುಮಾರ್ ಹೇಗಿದ್ದಾನೆ?” ಪ್ರಾಣೇಶ್ ಕೇಳಿದರು.
“ಜ್ವರ ಕಡಿಮೆಯಾಗಿದ್ದರೂ, ಬಹಳ ತಲೆ ನೋವಿದೆ.”
“ಡಾಕ್ಟರ್ ಬಳಿ ಕರೆದೊಯ್ಯುತ್ತೇನೆ.”
ಸ್ವಲ್ಪ ತಿಂಡಿ ತಿಂದು, ಪ್ರಾಣೇಶ್ ಕುಮಾರನನ್ನು ಕರೆದುಕೊಂಡು ಕ್ಲಿನಿಕ್ಕಿಗೆ ಹೋದರು. ಅಲ್ಲಿಂದ ಮರಳಿದ ಮೇಲೆ, ಔಷಧಿ ಕೊಡುವ ವಿಧಾನವನ್ನು ನನಗೆ ಹೇಳಿ, ಬಟ್ಟೆಯನ್ನೂ ಬದಲಿಸದೆ ಹಾಗೇ ಮಂಚದ ಮೇಲೆ ಒರಗಿದರು. ನನಗೆ ಮೊದಲಿನಿಂದಲೂ ಪ್ರಾಣೇಶ್‌ಬೆವರು ತುಂಬಿದ ಬಟ್ಟೆಯಲ್ಲೇ ಮಂಚದಲ್ಲಿ ಮಲಗುವುದು ಹಿಡಿಸುತ್ತಿರಲಿಲ್ಲ. ಆದರೆ ಈ ವಿಚಾರವನ್ನು ನಾನು ಎಂದೂ ಅವರಿಗೆ ಹೇಳಲಿಲ್ಲ. ಬದಲಿಸಲೆಂದು ಬೇರೆ ಬಟ್ಟೆಯನ್ನೂ ಎತ್ತಿಡುತ್ತಿರಲಿಲ್ಲ. ಪ್ರಾಣೇಶ್ ನನಗೆ ಹಿಡಿಸದ ಕೆಲಸಗಳನ್ನು ಮಾಡಿದಾಗ, ಅವರನ್ನು ಎಚ್ಚರಿಸುವ ಬದಲು ಅದನ್ನು ಮೌನವಾಗಿ ಬೆಳೆಸಲು ಬಿಡುತ್ತಿದ್ದೆ ಎಂಬುದು ಈ ದಿನ ನನಗೆ ಅರಿವಾಯಿತು. ಇದರಲ್ಲಿ ನನ್ನದೂ ಬಹಳ ತಪ್ಪಿತ್ತು. ನಾನು ನನ್ನ ಹಾವಭಾವಗಳಿಂದ ಅವರ ಚರ್ಯೆ ನನಗೆ ಪ್ರಿಯಲ್ಲ ಎಂದು ಸೂಚಿಸುತ್ತಿದ್ದೆನೇ ಹೊರತು, ಪ್ರೀತಿಯಿಂದ ಅದನ್ನು ತಿದ್ದುವ ಕೆಲಸ ಮಾಡುತ್ತಿರಲಿಲ್ಲ.
ಪ್ರಾಣೇಶ್ ಎಸ್ಸೆಸ್ಸೆಲ್ಸಿ ಮುಗಿಸುವ ಮುನ್ನವೇ ಅವರ ತಂದೆ ತೀರಿಹೋಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರು ಮೂವರು ತಮ್ಮ ತಂಗಿಯರ ಜವಾಬ್ದಾರಿ ಹೊರಬೇಕಾಯ್ತು. ತಮ್ಮ ಸ್ವಾರ್ಥಕ್ಕಿಂತ ಅವರು ಕಲಿಕೆ ಮತ್ತು ಮನೆಯ ಕೆಲಸಗಳ ಕಡೆ ಹೆಚ್ಚು ಗಮನ ಕೊಡಬೇಕಾಗುತ್ತಿತ್ತು. ಅವರನ್ನು ಸಂಸಾರದ ಜವಾಬ್ದಾರಿಗಳು ಬಹುಬೇಗನೇ ಪ್ರೌಢರನ್ನಾಗಿಸಿದ್ದವು. ಮದುವೆಯಾದ ಮೇಲೂ ನಾನು ಅವರನ್ನು ನನ್ನ ಅನುಕೂಲಕ್ಕೆ ತಕ್ಕ ಹಾಗಿಲ್ಲ ಎಂದು ತಿಳಿಯುತ್ತಿದ್ದೆನೇ ಹೊರತು, ಅವರ ಅನುಕೂಲಾನುಸಾರ ನಾನು ಬದಲಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ಕೇವಲ ಪದವೀಧರರಾಗಿದ್ದರು ಮತ್ತು ಆಧುನಿಕ ಫ್ಯಾಷನ್ ಪ್ರಿಯರಲ್ಲ. ಜೀನ್ಸ್, ಗಾಗಲ್ಸ್, ಸಿಗರೇಟ್, ವೈನ್ ಅವರು ಮೂಸುತ್ತಲೂ ಇರಲಿಲ್ಲ. ಸ್ನಾತಕೋತ್ತರ ಪದವೀಧರೆಯಾದ ನಾನು ಎಲ್ಲ ಆಧುನಿಕ ಫ್ಯಾಷನ್‌ಗಳನ್ನೂ ಇಷ್ಟಪಡುತ್ತಿದ್ದೆ.
ಸತ್ಯ ಹೇಳಬೇಕೆಂದರೆ ಶಂಕರನ ಮರಣಾನಂತರ, ಮದುವೆಯಾಗುವ ಆಸೆ ನನಗಿರಲಿಲ್ಲ. ಆದರೆ ನನ್ನ ಅತ್ತಿಗೆ ಹಾಗೂ ಅಣ್ಣನ ಬಲವಂತದಿಂದ, ನನಗಿಂತ ಕಡಿಮೆ ಓದಿದ್ದರೂ, ಒಳ್ಳೆ ನೌಕರಿಯಲ್ಲಿದ್ದ, ಕಳೆಯಾಗಿದ್ದ (ಅದನ್ನು ನಾನು ಆಗ ಗುರುತಿಸಿರಲಿಲ್ಲ) ಪ್ರಾಣೇಶರನ್ನು ಮದುವೆಯಾಗಲು ದೊಡ್ಡ ಮನಸ್ಸಿನಿಂದ ಒಪ್ಪಿಗೆ ನೀಡಿದ್ದೆ. ನನ್ನಿಂದಾಗಿ ನನ್ನ ತಂಗಿಯ ಮದುವೆ ತಡವಾಗಬಾರದೆಂಬುದೇ ನನ್ನ ಉದ್ದೇಶವಾಗಿತ್ತು.
ಕಳೆದ ತಿಂಗಳು ನಡೆದ ಒಂದು ಘಟನೆ ನನಗೆ ನೆನಪಾಯಿತು. ಆ ದಿನ ಪ್ರಾಣೇಶ್ ಅವರ ಹುಟ್ಟುಹಬ್ಬವಾದ್ದರಿಂದ ನಾನು ಅವರಿಗೆ ಪ್ಯಾಂಟ್ ಪೀಸ್ ಕಾಣಿಕೆಯಾಗಿ ಕೊಟ್ಟೆ. ನನ್ನ ತವರಿನವರು ಅನುಕೂಲವಂತರಾಗಿದ್ದರಿಂದ, ನನ್ನಲ್ಲಿ ಹಣ ಬಹಳ ಓಡಾಡುತ್ತಿತ್ತು. ಇದರಿಂದಲೇ ನನ್ನ ಸಂಸಾರ ನೆಟ್ಟಗಿರಲಿಲ್ಲ ಎಂಬುದು ಈಗ ನನಗೆ ಅರಿವಾಗುತ್ತಿದೆ! ಅದನ್ನು ನೋಡಿ ಅವರು ಸಂತೋಷದಿಂದ “ಚೆನ್ನಾಗಿದೆ….. ಧನ್ಯವಾದ…” ಎನ್ನುತ್ತ ನಸುನಕ್ಕಿದ್ದರು.
ನನ್ನ ಬಳಿ ಅನೇಕ ಸೀರೆಗಳಿದ್ದರೂ, ಪ್ರಾಣೇಶ್ ತಮ್ಮ ಕೈಯಾರೆ ಸೀರೆ ಕೊಡಿಸಿದರೆ ಅದರ ಸೊಗಸೇ ಬೇರೆ ಎಂದು, ನನ್ನ ಜನ್ಮದಿನದಂದು ಅವರು ಕೊಡಿಸಬಹುದಾದ ಸೀರೆಯ ಕಲ್ಪನೆ ಮಾಡತೊಡಗಿದೆ.
ಆದರೆ ನನ್ನ ಜನ್ಮದಿನದಂದು ಪ್ರಾಣೇಶ್‌ಗೆ ಆ ದಿನ ನನ್ನ ಹುಟ್ಟುಹಬ್ಬ ಎಂಬ ನೆನಪೂ ಇರಲಿಲ್ಲ. ಸಾಯಂಕಾಲ ಕುಮಾರನೇ, “ನಡಿ ಅತ್ತಿಗೆ, ಎಲ್ಲಾದರೂ ವಾಕಿಂಗ್ ಹೋಗೋಣ,” ಎಂದ.
ಕುಮಾರ್ ನೀರಿನಲ್ಲಿ ಈಜುತ್ತಿದ್ದ ಮೀನುಗಳುಳ್ಳ ಒಂದು ಲ್ಯಾಂಪ್‌ನ್ನು ಗಿಫ್ಟ್ ಆಗಿ ಕೊಟ್ಟ. ನಗರದ ಸಿಲ್ಕ್ ಸೆಂಟರ್ ಬಳಿ ಬಂದಾಗ, ಬೊಂಬೆಗೆ ಉಡಿಸಿದ್ದ ನೀಲಿ ಸೀರೆಯ ಮೇಲೆ ನನ್ನ ಗಮನ ಕೇಂದ್ರೀಕರಿಸಿತು. ನನ್ನ ಮುಖದ ಮೇಲೆ ಮೂಡಿ ಬಂದ ಒಂದು ಉದಾಸ ಭಾವವನ್ನು ಕುಮಾರ್ ಗಮನಿಸದಿರಲಿಲ್ಲ.
ನಾವು ತಿರುಗಾಡಿ ಮನೆಗೆ ಬರುವಷ್ಟರಲ್ಲಿ ಪ್ರಾಣೇಶ್ ಮನೆಗೆ ಬಂದಿದ್ದರು. ಅವರ ಮುಖದಲ್ಲಿನ ಆಯಾಸವನ್ನು ಗಮನಿಸಿ ನಾನು ಸ್ವಲ್ಪ ಆತಂಕಗೊಂಡೆ. ಬಹುಶಃ ಪ್ರಥಮ ಬಾರಿಗೆ, ನಾನು ಪ್ರಾಣೇಶ್ ಆಯಾಸಗೊಂಡಿದ್ದಾರೆಂಬುದನ್ನು ಗಮನಿಸುತ್ತಿದ್ದೇನೆಂದು ಅನ್ನಿಸಿತು. ಮಲಗುವ ಕೋಣೆಯಲ್ಲಿ ಒಂದು ಪ್ಯಾಕೆಟ್ ಹೊಸದಾಗಿ ಕಾಣಿಸಿತು. ಕುಮಾರ್ ಕೊಡಿಸಿದ ಲ್ಯಾಂಪ್‌ನ್ನು ಮೇಜಿನ ಮೇಲಿಡುತ್ತಲೇ ನನ್ನ ದೃಷ್ಟಿ ಪ್ಯಾಕೆಟ್ ಕಡೆ ಹರಿಯಿತು.
“ನಿನಗಾಗಿ ಹೊಸ ಸೀರೆ ತಂದಿರುವೆ,” ಪ್ರಾಣೇಶ್ ಮೃದುವಾಗಿ ನುಡಿದರು.
ತಡವಾಗಿ ಬಂದುದಕ್ಕೆ ಅವರನ್ನು ಗದರಿಸಿಕೊಳ್ಳುತ್ತಾ, “ಯಾಕೆ? ಇವತ್ತೇನಾದರೂ ವಿಶೇಷವೇ?” ಎಂದು ಕೇಳಿದೆ.
ಅಯ್ಯೋ, ಆ ಗಳಿಗೆಯಲ್ಲಿ ಪ್ರಾಣೇಶ್ ಮುಖದಲ್ಲಿ ಉಂಟಾದ ಖಿನ್ನ ಭಾವನೆಯನ್ನು ನಾನು ಗಮನಿಸದೇ ಹೋದೆನಲ್ಲಾ! ತಡರಿಸುತ್ತ ಅವರು ಹೇಳಿದರು, “ಇಲ್ಲ…. ಸುಮ್ಮನೆ…. ಸಾಯಂಕಾಲ ಬೇಗ ಬಂದು ನಿನ್ನ ಬರ್ತ್‌ಡೇ ಸೆಲೆಬ್ರೇಟ್‌ಮಾಡೋಣವೆಂದುಕೊಂಡಿದ್ದೆ, ಆದರೆ ಮನೆಗೆ ಬಂದಾಗ ಬೀಗ ಹಾಕಿತ್ತು…”
“ಹೌದು…. ಕುಮಾರ್‌ಗೆ ಏನನ್ನೋ ಖರೀದಿಸಬೇಕಾಗಿತ್ತು.”
ರಾತ್ರಿ ಮಲಗಿದಾಗ ನಾನು, ನೇರವಾಗಿ ಕಿಟಕಿಯ ಹೊರಗೆ ಕಾಣಿಸುತ್ತಿದ್ದ ನಕ್ಷತ್ರಗಳನ್ನು ಎಣಿಸುತ್ತ, ಇದೇನು ಗಂಡಸು ಇಷ್ಟೊಂದು ಸಹನಶೀಲನಾಗಿಯೂ ಇರಬಲ್ಲನೇ ಎಂಬುದನ್ನು ಯೋಚಿಸುತ್ತಿದ್ದೆ. ಆದರೆ ಪ್ರಾಣೇಶರ ಮನಮಂಥದನಲ್ಲಿ ಏಳುತ್ತಿದ್ದ ಜ್ವಾಲಾಮುಖಿಯನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ.
ದೂಷಣೆಯನ್ನು ಕುಮಾರನ ಮೇಲೂ ಹಾಕುವ ಹಾಗಿರಲಿಲ್ಲ. ಅವನು ಸದಾ ನನ್ನಲ್ಲಿ ಗೌರವಭರಿತ ಪ್ರೀತಿಯನ್ನು ಮಾತ್ರ ತೋರುತ್ತಿದ್ದ. ನನ್ನನ್ನು ಉತ್ತಮ ಗೆಳತಿ…. ಸಲಹೆಗಾರ್ತಿ ಎಂದು ತಿಳಿದುಕೊಂಡಿದ್ದ. ನಾನೇ ಅವನನ್ನು ಅಪಾರ್ಥ ಮಾಡಿಕೊಂಡರೆ ಇದರಲ್ಲಿ ಅವನ ದೋಷವೇನು?
ಬೆಳಗ್ಗೆ ಎದ್ದಾಗ ನನ್ನ ಮುಖ ಬಾಡಿ ಹೋಗಿತ್ತಾದರೂ ಮನಸ್ಸು ಬಹಳ ಪ್ರಫುಲ್ಲಾಗಿತ್ತು. ಪ್ರಾಣೇಶ್ ನನ್ನ ಹಣೆ ಮುಟ್ಟುತ್ತ, “ನಿನ್ನ ಆರೋಗ್ಯ ಹೇಗಿದೆ ಮಧು….? ರಾತ್ರಿ ನೀನು ಅದೇನೇನೋ ಬಡಬಡಿಸುತ್ತಿದ್ದೆ. ಯಾವುದಾದರೂ ಕೆಟ್ಟ ಕನಸು ಕಂಡೆಯಾ?” ಎಂದು ಕೇಳಿದರು.
ನನ್ನ ಮನಸ್ಸು ಕರಗಿಹೋಯಿತು. ಅವರ ಕೈಗಳನ್ನು ನನ್ನ ಕೈಗಳಲ್ಲಿ ಹಿಡಿದುಕೊಳ್ಳುತ್ತ, “ಹೌದು ಬಹಳ ಕೆಟ್ಟ ಕನಸು. ನೀವು ನನ್ನನ್ನು ಎಚ್ಚರಗೊಳಿಸಿದ್ದು ಒಳ್ಳೆಯದಾಯ್ತು,” ಎಂದು ಮೃದುವಾಗಿ ಹೇಳಿದೆ.
ಆ ಕ್ಷಣದಿಂದಲೇ ನಾನು ಕುಮಾರನಿಂದ ದೂರಾಗಿ, ನನ್ನನ್ನು ಸಂಪೂರ್ಣವಾಗಿ ಪ್ರಾಣೇಶರಿಗೆ ಅರ್ಪಿಸಿಕೊಳ್ಳಬೇಕೆಂದು ಅನ್ನಿಸಿತು. ಕುಮಾರನನ್ನು ಕೇವಲ ಮೈದುನ, ತಮ್ಮನ ರೂಪದಲ್ಲಿ ಮಾತ್ರವೇ ಸ್ವೀಕರಿಸಬೇಕು. ಆದರೆ ಅದು ನಾನಂದುಕೊಂಡಷ್ಟು ಸುಲಭ ಸಾಧ್ಯವೇ? ಅದಕ್ಕಾಗಿ ನಾನು ದೃಢ ನಿರ್ಧಾರ ಮಾಡತೊಡಗಿದೆ. ಕುಮಾರ್ ಬೇರೆ ಕಡೆ ವರ್ಗ ಮಾಡಿಸಿಕೊಂಡರೂ ಸರಿ ಅಥವಾ ಇರು ಬೇರೆ ಕಡೆ ವರ್ಗ ಮಾಡಿಸಿಕೊಂಡರೂ ಸರಿ.
ಹೀಗೆ ನಾನು ಯೋಚಿಸುತ್ತ ಕುಳಿತಿದ್ದಾಗ, ಪ್ರಾಣೇಶ್ ಯಾವುದೋ ಮಾಯೆಯಲ್ಲಿ ಹೋಗಿ ಕಾಫಿ, ಮಾಡಿಕೊಂಡು ಬಂದಿದ್ದರು. ನನಗೆ ಬಹಳ ಆಶ್ಚರ್ಯವಾಯಿತು. ನನ್ನ ಮೇಲಿನ ಅನುರಾಗದಿಂದ ಪ್ರಾಣೇಶ್ ತಮ್ಮಲ್ಲಿ ತಾವೇ ಪರಿವರ್ತನೆ ತಂದುಕೊಳ್ಳುತ್ತಿದ್ದರು.
ಎಷ್ಟೊಂದು ಚಿಕ್ಕ ಚಿಕ್ಕ ಘಟನೆಗಳು ಬದುಕಿನ ಚಿತ್ರವನ್ನೇ ಬದಲಿಸಿಬಿಡುತ್ತವೆ? ಮನುಷ್ಯ ಆಸೆಪಡುವುದೇ ಒಂದು. ಅವನಿಗೆ ದೊರೆಯುವುದೇ ಮತ್ತೊಂದು. ಇಲ್ಲದ ವಸ್ತುವಿಗಾಗಿ ಜೀವಮಾನವೆಲ್ಲ ಕೊರಗುತ್ತ, ಇರುವ ವಸ್ತುವಿನ ಬೆಲೆಯನ್ನು ತಿಳಿದುಕೊಳ್ಳಲಾರದೇ, ಒದ್ದಾಡುತ್ತ ಇರುವುದೇ ಆಗುತ್ತದೆ. ಹೆಣ್ಣು ತಾನು ಪ್ರೀತಿಸಿದವನನ್ನು ಮದುವೆಯಾದರೆ ಮಾತ್ರವೇ ಸುಖಿಯಾಗಿರಬಲ್ಲೆನೆಂದು ತರ್ಕಿಸುತ್ತಾಳೆ. ಆದರೆ ತನ್ನನ್ನು ಪ್ರೀತಿಸುವನನ್ನೇ ಮದುವೆಯಾಗುವುದರಿಂದ ದೊರೆಯುವ ಸೌಭಾಗ್ಯ ಅವಳಿಗೆ ಮೊದಲಿಗೆ ಗೋಚರವಾಗುವುದಿಲ್ಲ. ಬದುಕಿನ ಪ್ರಾರಂಭದ ಮೇರುಘಟ್ಟದಲ್ಲಿ ಪ್ರಪಾತದಲ್ಲಿ ಬೀಳಲಿದ್ದ ನಾನು ಆ ಕರುಣಾಳುವಿನ ದಯೆಯಿಂದ, ಸೌಭಾಗ್ಯ ಸಂಪದವನ್ನು ಪಡೆದೆ.
ನಾವಿಬ್ಬರೂ ಒಂದೇ ಸೂರಿನಡಿ ಇದ್ದುಕೊಂಡು ಇಷ್ಟು ದಿನ ಹೇಗೆ ಅಪರಿಚರಾಗಿದ್ದೆವೋ ಎಂದು ಅಚ್ಚರಿಯಾಗುತ್ತದೆ. ಇದನ್ನು ದೂರ ಮಾಡಿದ ಕುಮಾರ್‌ಗೆ ಮನಸ್ಸಿನಲ್ಲಿಯೇ ಕೃತಜ್ಞತೆಗಳನ್ನು ಸಲ್ಲಿಸಿದೆ. ಕುಮಾರ್‌ನಿಂದಾಗಿ ಪ್ರಾಣೇಶರಿಗೆ ಹೆಂಡತಿಯ ಬಗ್ಗೆ ತಮ್ಮ ಕರ್ತವ್ಯ ಇದೆ ಎಂಬ ಅರಿವಾಗಿತ್ತು. ಪರಸ್ಪರ ದೂರವಾಗುತ್ತಿದ್ದ ನಾವ ಈಗೀಗ ಸನಿಹಕ್ಕೆ ಬರುತ್ತಿದ್ದೇವೆ. ಅದಕ್ಕಾಗಿ ನಾನು ಕುಮಾರ್‌ಗೆ ಕೃತಜ್ಞಳಾಗಿರಬೇಕು. ನಮ್ಮ ಬದುಕು ಹೀಗೊಂದು ತಿರುವು ಪಡೆದುಕೊಳ್ಳುತ್ತಿರುವ ಸಂಗತಿ ನಮ್ಮ ಜೊತೆಯಲ್ಲಿದ್ದರೂ, ಕುಮಾರನ ಅರಿವಿಗೆ ಬಂದೇ ಇಲ್ಲ. ಇದಕ್ಕಾಗಿ ನಾನು ಪ್ರಾಣೇಶರಿಗೂ ಆಭಾರಿಯಾಗಿದ್ದೇನೆ.
ಅವರಿಂದ ಕಾಫಿ ಕಪ್‌ತೆಗೆದುಕೊಳ್ಳುತ್ತಾ, “ಒಂದೇ ತಂದಿರಲ್ಲಾ, ನಿಮಗೆ?” ಎಂದಾಗ, “ನನ್ನದು ಆಯಿತು,” ಎಂದವರ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ನನ್ನ ಕಪ್ಪನ್ನು ಮೊದಲು ಅರಿಗೆ ನೀಡಿ, ಬಲವಂತದಿಂದ ಕುಡಿಸಿ, ಅನಂತರ ಆಸೆಯಿಂದ ಮಿಕ್ಕಿದ್ದನ್ನು ಕುಡಿದೆ.
ನನ್ನ ಕಣ್ಣುಗಳಲ್ಲಿ ಉಂಟಾದ ಪರಿವರ್ತನೆಯ ಕಾಂತಿಯ ಪ್ರಭಾವಕ್ಕೊಳಗಾಗಿ, ನನ್ನನ್ನು ಬರಸೆಳೆದುಕೊಂಡ ಪ್ರಾಣೇಶರ ಬಾಹುಗಳಲ್ಲಿ ಬಂಧಿಯಾಗುತ್ತ, ಆನಂದಾಶ್ರುಗಳಿಂದ ಅವರ ವಿಶಾಲ ಎದೆಗೆ ತಲೆಯಾನಿಸಿ ಪ್ರಫುಲ್ಲತೆಯಿಂದ ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳುತ್ತ, ಆ ಅಮೃತಘಳಿಗೆ ಜೀವನವೆಲ್ಲ ಇರುವಂತಾಗಲಿ ಎಂದು ಆಶಿಸಿದೆ.