ರಸ್ತೆಯ ಬದಿಯಲ್ಲಿ ಟೆಂಟ್‌ ಹಾಕಿಕೊಂಡು ವಾಸಿಸುವವರ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲರೇ? ಸಾಧ್ಯವಿಲ್ಲ, ಇದೇ ನಿಮ್ಮ ಉತ್ತರವಿರಬೇಕು. ಆದರೆ ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡಿದ್ದಾರೆ `ಮೇಕ್‌ ಎ ಡಿಫರೆನ್ಸ್’ ಹೆಸರಿನ ಸಂಸ್ಥೆ ನಡೆಸುತ್ತಿರುವ ಗ್ಲೋರಿಯಾ ಬೇನಿ.

ಯಾವುದೇ ಕೆಲಸವನ್ನು ಮಾಡಲಾಗುವುದಿಲ್ಲ ಎಂದು ನಾವು ಯೋಚಿಸಬಾರದು. ಅದರ ಬದಲು ನಾವು ಮಾಡಲಾಗದಂತಹ ಯಾವುದೇ ಕೆಲಸವಿಲ್ಲ ಎಂದು ಯೋಚಿಸಬೇಕು. ಹಾಗೆ ಯೋಚಿಸಿದಾಗ ಅಸಾಧ್ಯವಾದ ಕೆಲಸಗಳೂ ಸಾಧ್ಯವಾಗುತ್ತವೆ. ಗ್ಲೋರಿಯಾರ ಈ ಆಲೋಚನೆ ಅವರು ಇಷ್ಟು ಮುಂದುವರಿಯಲು ಕಾರಣವಾಯಿತು. ಇಂದು ಅವರು ಹಿಂತಿರುಗಿ ನೋಡಿದಾಗ, “ನಾನೆಂದೂ ಇದರ ಬಗ್ಗೆ ಯೋಚಿಸಿರಲಿಲ್ಲ. ಇದು ಹೇಗೆ ಸಾಧ್ಯವಾಯಿತು?” ಎಂದು ಅವರು ಆಶ್ಚರ್ಯಪಡುತ್ತಾರೆ.

ಕಳೆದುಹೋದ ದಿನಗಳ ಬಗ್ಗೆ ಮಾತನಾಡುತ್ತಾ ಗ್ಲೋರಿಯಾ ಹೀಗೆ ಹೇಳುತ್ತಾರೆ, “ನಾನು ಕೇರಳದ ಕೊಚ್ಚಿನ್‌ ನಗರದವಳು. ನನ್ನ ಬಾಲ್ಯ ಮತ್ತು ಆರಂಭದ ಶಿಕ್ಷಣ ಅಲ್ಲೇ ನಡೆಯಿತು. ಆದರೆ ನಮ್ಮ ತಂದೆಯ ಟ್ರ್ಯಾನ್ಸ್ ಫರೆಬಲ್ ಜಾಬ್‌ನಿಂದ 5-10ನೇ ತರಗತಿಯವರೆಗೆ ನನ್ನ ಶಿಕ್ಷಣ ಸೌದಿ ಅರೇಬಿಯಾದಲ್ಲಾಯಿತು. ಆದರೂ ಭಾರತದ ಬಗ್ಗೆ ನನ್ನ ಆಕರ್ಷಣೆ ಎಂದೂ ಕಡಿಮೆಯಾಗಲಿಲ್ಲ. ನನಗೆ ನಮ್ಮ ಕೊಚ್ಚಿನ್‌ ನಗರ ಬಹಳ ಇಷ್ಟ. ಸೌದಿ ಅರೇಬಿಯಾಗೆ ಹೋದರೂ ಆ 5 ವರ್ಷಗಳಲ್ಲಿ ನಾನು ಪ್ರತಿದಿನ ನಮ್ಮ ಊರಿಗೆ ಹಿಂದಿರುಗಲು ಬಯಸುತ್ತಿದ್ದೆ.”

ಗ್ಲೋರಿಯಾಗೆ ಈ ಅವಕಾಶ 11ನೇ ತರಗತಿಗೆ ಬಂದ ನಂತರ ಸಿಕ್ಕಿತು. ಅವರು ಶಾಶ್ವತವಾಗಿ ತಮ್ಮ ಮಾತೃಭೂಮಿಗೆ ಹಿಂದಿರುಗಿದರು. ಗ್ಲೋರಿಯಾರ ಶಾಲೆಯ ಶಿಕ್ಷಣ ಇನ್ನೆರಡು ವರ್ಷ ಕಳೆಯಿತು. ಅವರು ಕಾಮರ್ಸ್‌ ಪದವಿಗೆ ಕೇರಳದ ಒಂದು ಕಾಲೇಜಿಗೆ ಸೇರಿದರು. ಅಲ್ಲಿಂದಲೇ ಗ್ಲೋರಿಯಾರ ಹೊಸ ಬದುಕು ಶುರುವಾಯಿತು.

“ಕಾಲೇಜ್‌ ಲೈಫ್‌ ಎಲ್ಲರಿಗೂ ವಿಶೇಷವಾಗಿರುತ್ತದೆ. ನನಗೂ ಅಷ್ಟೇ. ನಮ್ಮದು 6 ಗೆಳತಿಯರ ಒಂದು ಗ್ರೂಪ್‌ ಇತ್ತು. ನಾವು ಯಾವಾಗಲೂ ಒಟ್ಟಿಗಿದ್ದೆವು. ಓದುವುದು, ಮೋಜು ಮಾಡುವುದು ಇತ್ಯಾದಿ ನಾವು ಎಲ್ಲವನ್ನೂ ಗ್ರೂಪ್‌ನಲ್ಲಿಯೇ ಮಾಡುತ್ತಿದ್ದೆವು.

“ಒಂದು ಸಲ ನಮ್ಮ ಗ್ರೂಪ್‌ನಲ್ಲಿ ಒಬ್ಬರ ಬರ್ಥ್‌ ಡೇ ಬಂದಾಗ ನಾವೆಲ್ಲರೂ ಬರ್ಥ್‌ ಡೇಯನ್ನು ಕೊಂಚ ವಿಭಿನ್ನವಾಗಿ ಆಚರಿಸಲು ತೀರ್ಮಾನಿಸಿ ನಗರದ ಒಂದು ಅನಾಥಾಶ್ರಮದ ಮಕ್ಕಳೊಂದಿಗೆ ಆಚರಿಸಲು ನಿರ್ಧರಿಸಿದೆವು,” ಎಂದರು.

ಬದುಕಿನ ವಿಶೇಷ ದಿನ

ಅಂದು ಗ್ಲೋರಿಯಾರ ಬದುಕಿನ ವಿಶೇಷ ದಿನವೆಂದು ಸಾಬೀತಾಯಿತು. ಮುದ್ದು ಮಕ್ಕಳೊಂದಿಗೆ ಕಳೆದ 1 ದಿನ ಅವರ ಬದುಕಿನಲ್ಲಿ ದೊಡ್ಡ ಬದಲಾವಣೆ ತರುವುದೆಂದು ಅವರು ಯೋಚಿಸಿರಲಿಲ್ಲ.

ಗ್ಲೋರಿಯಾ ಹೇಳುತ್ತಾರೆ, “ನಾವು ಆ ಅನಾಥಾಶ್ರಮಕ್ಕೆ ಹೋಗಿ ನೋಡಿದಾಗ ಅಲ್ಲಿನ ಮಕ್ಕಳು ಬಹಳ ಟ್ಯಾಲೆಂಟೆಡ್‌ ಆಗಿದ್ದರು. ಆದರೆ ಸೌಲಭ್ಯಗಳ ಕೊರತೆಯಿಂದ ಅವರ ಟ್ಯಾಲೆಂಟ್‌ಗೆ ಬೆಲೆ ಇರಲಿಲ್ಲ. ಅವರಿಗೆ ಓದಲು ಇಷ್ಟವಿತ್ತು. ಆದರೆ ಪುಸ್ತಕಗಳಿರಲಿಲ್ಲ. ಅವರಿಗೆ ಸರಿಯಾದ ಗೈಡೆನ್ಸ್ ಬೇಕಿತ್ತು. ನಾವು ಪರಸ್ಪರ ಇಂಗ್ಲಿಷ್‌ನಲ್ಲಿ ಮಾತನಾಡುವುದು ಅವರಿಗೆ ಇಷ್ಟವಾಗಿತ್ತು. ಅವರಿಗೆ ಸರ್ಕಾರಿ ಶಾಲೆಯಲ್ಲಿ ಕಲಿಸಿದ್ದಷ್ಟು ಮಾತ್ರ ಇಂಗ್ಲಿಷ್‌ ತಿಳಿದಿದ್ದರಿಂದ ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡುವುದು ಕಷ್ಟವಾಗಿತ್ತು. ನಾವು ಹೊರಡುವಾಗ ಮುಂದಿನ ಬಾರಿ ಅಲ್ಲಿಗೆ ಬಂದಾಗ ಅವರಿಗೇನು ತರುವುದೆಂದು ಕೇಳಿದೆವು. ಆಗ ಆ ಮಕ್ಕಳು ನಮ್ಮನ್ನು ಚಾಕಲೇಟ್‌, ಟಾಫಿ ಅಥವಾ ಆಟದ ಸಾಮಾನುಗಳನ್ನು ಕೇಳದೆ ಪುಸ್ತಕಗಳನ್ನು ತರಲು ಹೇಳಿದರು.”

ಮಕ್ಕಳು ಈ ರೀತಿ ಕೇಳಿದ್ದು ಗ್ಲೋರಿಯಾರನ್ನು ಆಶ್ಚರ್ಯಗೊಳಿಸಿತ್ತು. ಈ ಮಕ್ಕಳಿಗೆ ಯಾವ ರೀತಿ ಸಹಾಯ ಮಾಡಬಹುದೆಂದು ಅವರು ಯೋಚಿಸತೊಡಗಿದರು. ಮುಂದೆ ಅಂತಹ ಮಕ್ಕಳಿಗೆ ಸಹಾಯ ಮಾಡುವುದು ಅವರ ಉದ್ದೇಶವಾಗಿತ್ತು. 6 ಗೆಳತಿಯರ ಗ್ರೂಪ್‌ ಈಗ `ಮ್ಯಾಡ್‌ ಗ್ರೂಪ್‌’ ಎಂದು ಬದಲಾಗಿತ್ತು. ಇಂಗ್ಲಿಷ್‌ನಲ್ಲಿ ಈ ಪದದ ಅರ್ಥ `ಹುಚ್ಚು’ ಎಂದಾಗಿದ್ದರೂ ಈ ಗ್ರೂಪ್‌ ತಮ್ಮ ಉದ್ದೇಶ ಸಾಧಿಸಲು ಹುಚ್ಚರಾಗಿದ್ದರು. ಗ್ಲೋರಿಯಾ ಹೀಗೆ ಹೇಳುತ್ತಾರೆ, “ನಾವು ಅನಾಥಾಶ್ರಮದ ಮಕ್ಕಳ ಓದಿಗೆ ಸಹಾಯ ಮಾಡಲು ಒಂದು ಗ್ರೂಪ್‌ ಮಾಡಿ ಅದಕ್ಕೆ `ಮೇಕ್‌ ಎ ಡಿಫರೆನ್ಸ್’ ಎಂದು ಹೆಸರಿಟ್ಟೆವು. ನಾವು ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಶುರು ಮಾಡಿದೆವು. ನಾವು ವಾರದಲ್ಲಿ 1 ಬಾರಿ ಇಂಗ್ಲಿಷ್‌ ಕ್ಲಾಸ್‌ ನಡೆಸುತ್ತಿದ್ದೆವು.”

ಗ್ಲೋರಿಯಾ ಸತತವಾಗಿ ಪ್ರಯತ್ನಿಸುತ್ತಿದ್ದರೂ ಯಶಸ್ಸಿನ ರುಚಿಯನ್ನು ಸವಿಯುವುದು ಅಷ್ಟು ಸುಲಭವಾಗಿರಲಿಲ್ಲ.“ನಾವು ಮಕ್ಕಳಿಗೆ ಇಂಗ್ಲಿಷ್‌ ಹೇಳಿಕೊಡುತ್ತಿದ್ದುದ್ದು ಅವರಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಮಾತ್ರ ಸಾಕಾಗಿತ್ತು. ಆದರೆ ಆ ಮಕ್ಕಳು ಇಂಗ್ಲಿಷ್‌ನಲ್ಲಿ ಸರಾಗವಾಗಿ ಮಾತನಾಡಲು ಇನ್ನೂ ತೊಂದರೆಯಾಗುತ್ತಿತ್ತು. ಹೀಗಾಗಿ ನಾವು ಮಕ್ಕಳಿಗೆ ಕೇಂಬ್ರಿಡ್ಜ್ ಯೂನಿವರ್ಸಿಟಿಯಿಂದ ಕಮ್ಯುನಿಕೇಟಿವ್ ‌ಇಂಗ್ಲಿಷ್‌ ಸಿಲಬಸ್‌ ತರಿಸಿದೆವು. ಈ ಸಿಲಬಸ್‌ ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿಕೊಟ್ಟಿದ್ದಲ್ಲದೆ, ಅವರ ಕಮ್ಯುನಿಕೇಷನ್‌ ಸ್ಕಿಲ್ಸ್ ನ್ನೂ ಸುಧಾರಿಸಿತು.”

ಸಮಯ ಕಳೆಯುತ್ತಾ ಹೋಗಿ ಕಾಲೇಜ್‌ ಯಾವಾಗ ಮುಗಿಯಿತೋ ತಿಳಿಯಲೇ ಇಲ್ಲ. ಗ್ಲೋರಿಯಾಗೆ ಗೂಗಲ್ ಹೈದರಾಬಾದ್‌ನಲ್ಲಿ ಕೆಲಸ ಸಿಕ್ಕಿತು. ಆದರೆ ಗೂಗಲ್‌ನಂತಹ ಸಂಸ್ಥೆಯಲ್ಲಿ 5 ವರ್ಷ ಕೆಲಸ ಮಾಡಿದ ನಂತರ ಗ್ಲೋರಿಯಾರಿಗೆ ಆತ್ಮತೃಪ್ತಿ ಸಿಗುತ್ತಿರಲಿಲ್ಲ. ಅವರು ತಮ್ಮ ಗ್ರೂಪ್‌ ಹಾಗೂ ಕೆಲಸಗಳನ್ನು ಜ್ಞಾಪಿಸಿಕೊಳ್ಳುತ್ತಿದ್ದರು.

ಒಂದು ದಿನ ಇದ್ದಕ್ಕಿದ್ದಂತೆ ಗ್ಲೋರಿಯಾ ತಮ್ಮ ಬದುಕಿನ ಅತ್ಯಂತ ದೊಡ್ಡ ನಿರ್ಣಯ ಕೈಗೊಂಡರು. ಅದರ ಬಗ್ಗೆ ಅವರು ಹೀಗೆ ಹೇಳುತ್ತಾರೆ, “ನಿಮ್ಮ ಕೆಲಸದಲ್ಲಿ ಸಂತೃಪ್ತಿ ಸಿಗದಿದ್ದರೆ ಆ ಕೆಲಸನ್ನು ನೀವೆಂದೂ ಪ್ರಾಮಾಣಿಕತೆಯಿಂದ ಮಾಡಲಾಗುವುದಿಲ್ಲ. ಪ್ರಾಮಾಣಿಕತೆಯಿಂದ ಮಾಡದ ಕೆಲಸ ವಿನಾಶದತ್ತ ಕೊಂಡೊಯ್ಯುತ್ತದೆ. ನನಗೂ ಕೊಂಚ ಹಾಗೇ ಆಗುತ್ತಿತ್ತು. ನಾನು

ಗೂಗಲ್‌ನಲ್ಲಿದ್ದೆ. ಆದರೆ ನನ್ನ ಮನಸ್ಸು ಮ್ಯಾಡ್‌ ಗ್ರೂಪ್‌ನತ್ತ ಹೋಗುತ್ತಿತ್ತು. ನಾನು ಆ ಗ್ರೂಪ್‌ನ್ನು ಮತ್ತೊಮ್ಮೆ ಎತ್ತಿ ನಿಲ್ಲಿಸಲು ಆಲೋಚಿಸುತ್ತಿದ್ದೆ. ಕೊನೆಗೂ ನಾನು ಗೂಗಲ್ ಬಿಟ್ಟು ನನ್ನ ಗ್ರೂಪ್‌ನ್ನು ಮತ್ತೆ ಆರಂಭಿಸಲು ಸಂಕಲ್ಪ ಮಾಡಿದೆ.”

ಆದರೆ ಇಲ್ಲಿಯೂ ತೊಂದರೆಗಳು ಕಡಿಮೆ ಇರಲಿಲ್ಲ. ಅತ್ಯಂತ ದೊಡ್ಡ ತೊಂದರೆ ಹಣದ್ದಾಗಿತ್ತು. ಇನ್ನೊಂದು ತೊಂದರೆ ಗ್ರೂಪ್‌ನಲ್ಲಿ ಮತ್ತೆ ಮೆಂಬರ್ಸ್‌ ಸೇರಿಸುವುದಾಗಿತ್ತು. ಆದರೆ ಗ್ಲೋರಿಯಾ ತಿಳಿವಳಿಕೆಯಿಂದ ಎಲ್ಲ ಕೆಲಸಗಳಿಗೂ ಒಳ್ಳೆಯ ಫಲಿತಾಂಶ ಕೊಟ್ಟರು. ಅದರ ಬಗ್ಗೆ ಅವರು ಹೀಗೆ ಹೇಳುತ್ತಾರೆ, “ನಮಗೆ ಯಂಗ್‌ ವಾಲಂಟಿಯರ್ಸ್‌ ಅಗತ್ಯವಿತ್ತು. ಅವರು ತಮ್ಮ ಬಿಡುವಿನ ಸಮಯದಲ್ಲಿ ಸ್ವಲ್ಪ ಹೊತ್ತು ಆ ಬಡ ಮಕ್ಕಳಿಗೆ ಪಾಠ ಹೇಳಿಕೊಡಬೇಕು. ಅದಕ್ಕಾಗಿ ನಾವು ಕಾಲೇಜ್‌ ವಿದ್ಯಾರ್ಥಿಗಳನ್ನು ಮೋಟಿವೇಟ್‌ ಮಾಡಿದೆವು.”

ಗ್ಲೋರಿಯಾರ ಮೋಟಿವೇಶನ್‌ ಕೆಲಸ ಮಾಡಿತು. ಒಮ್ಮೆ ಬರೀ 6 ಜನರಿದ್ದ ಗ್ರೂಪ್‌ನಲ್ಲಿ ಈಗ 4,500 ವಾಲಂಟಿಯರ್ಸ್‌ ಇದ್ದಾರೆ. ಅವರೊಂದಿಗೆ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಗ್ಲೋರಿಯಾ ಹೀಗೆ ಹೇಳುತ್ತಾರೆ, “ನಾವು 80 ಮಕ್ಕಳೊಂದಿಗೆ ಶುರು ಮಾಡಿದ್ದು, ಈಗ 5000 ಮಕ್ಕಳಿಗೆ ಕಲಿಸುತ್ತಿದ್ದೇವೆ.”

ಗ್ಲೋರಿಯಾರ ಕೆಲಸ ಎಷ್ಟು ಹೆಚ್ಚಾಗಿದೆಯೆಂದರೆ, ಈಗ ಅವರು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ವಿದೇಶಕ್ಕೂ ಹೋಗಬೇಕಾಗುತ್ತದೆ. ಅಂದಹಾಗೆ ಗ್ಲೋರಿಯಾಗೆ ಟ್ರ್ಯಾವೆಲಿಂಗ್‌ ಬಗ್ಗೆ ಮೋದಲಿನಿಂದಲೂ ಮೋಹ ಇದೆ.

“ನನ್ನ ಗೆಳತಿಯರೊಂದಿಗೆ ವೀಕೆಂಡ್ಸ್ ನಲ್ಲಿ ಸುತ್ತಾಡಲು ಹೋಗುವುದು ಹಾಗೂ ಮೋಜು ಮಾಡುವುದು ಬಹಳ ಇಷ್ಟ. ಅದಕ್ಕೆ  ಸಮಯ ಸಿಗುವುದಿಲ್ಲ. ಸಿಕ್ಕಾಗ ಅಗತ್ಯವಾಗಿ ಹೋಗುತ್ತೇನೆ,” ಎನ್ನುತ್ತಾರೆ.

ಸಮಯ ಸಿಕ್ಕಾಗ ಗ್ಲೋರಿಯಾ ಬಹಳಷ್ಟನ್ನು ಮಾಡುತ್ತಾರೆ. ಅವರು ತಮ್ಮ ಆಲ್ ಟೈವ್‌ ಫೇವರಿಟ್‌ ಹಾಬಿಯ ಬಗ್ಗೆ ಹೇಳುತ್ತಾ, “ನನಗೆ ಫಿಟ್‌ ಆಗಿರಲು ಬಹಳ ಇಷ್ಟ. ಅವಕಾಶ ಸಿಕ್ಕಾಗೆಲ್ಲಾ ವ್ಯಾಯಾಮ ಮಾಡಲು ಮರೆಯುವುದಿಲ್ಲ. ನಮ್ಮ ಶರೀರ ಫಿಟ್ ಆಗಿರದಿದ್ದರೆ ಕೆಲಸಗಳನ್ನು ಸರಿಯಾಗಿ ಮಾಡಲು ಹೇಗೆ ಸಾಧ್ಯ?” ಗ್ಲೋರಿಯಾ ಮಹಿಳೆಯರಿಗೆ ಕೊಡು ಸಂದೇಶವೆಂದರೆ ಮನೆಯ ಕೆಲಸಗಳೊಂದಿಗೆ ಅವರು ಎಂದೂ ತಮ್ಮ ಫಿಟ್ನೆಸ್‌ ಬಗ್ಗೆ ರಾಜಿ ಮಾಡಿಕೊಳ್ಳಬಾರದು. ಏಕೆಂದರೆ ಒಬ್ಬ ಆರೋಗ್ಯವಂತ ಮಹಿಳೆ ಮಾತ್ರ ಒಂದು ಆರೋಗ್ಯಕರ ಕುಟುಂಬವನ್ನು ನಿರ್ಮಿಸಬಹುದು.

ಫ್ಯಾಮಿಲಿ ಸಪೋರ್ಟ್

ತಮ್ಮ ಕುಟುಂಬದ ಬಗ್ಗೆ ಗ್ಲೋರಿಯಾ ಹೀಗೆ ಹೇಳುತ್ತಾರೆ, “ನನ್ನ ಫ್ಯಾಮಿಲಿ ನನಗೆ ಯಾವಾಗಲೂ ಸಪೋರ್ಟ್‌ ಮಾಡುತ್ತದೆ. ನನ್ನ ತಾಯಿ ತಂದೆ ನನಗೆ ಒಳ್ಳೆಯ ಕೆಲಸಗಳನ್ನು ಮಾತ್ರ ಮಾಡಲು ಮತ್ತು ಕೆಲಸವನ್ನು ಚೆನ್ನಾಗಿ ಮಾಡಲು ಹೇಳುತ್ತಾರೆ. ನನ್ನ ಕೆಲಸಗಳಿಗೆ ಒಳ್ಳೆಯ ಫಲಿತಾಂಶಗಳನ್ನು ಕೊಟ್ಟು ಅವರಿಗೆ ಸಂತೋಷ ಕೊಡುತ್ತೇನೆ.

“ನಾನು ನನ್ನ ಕಟ್ಟುಪಾಡುಗಳಿಗೆ ತಕ್ಕಂತೆ ಬದುಕುತ್ತೇನೆ. ಎಲ್ಲ ಮಹಿಳೆಯರಿಗೂ ನಾನು ಕೊಡುವ ಸಂದೇಶವೆಂದರೆ ಅವರು ತಮ್ಮ ಕಟ್ಟುಪಾಡುಗಳಿಗೆ ತಕ್ಕಂತೆ ಬದುಕಬೇಕು ಹಾಗೂ ತಮ್ಮ ಮೇಲೆ ವಿಶ್ವಾಸ ಇಟ್ಟುಕೊಳ್ಳಬೇಕು,” ಎಂದು ಗ್ಲೋರಿಯಾ ಹೇಳುತ್ತಾರೆ.

ಅನುರಾಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ