ಭಾರತದಲ್ಲಿ ಬ್ರಿಟಿಷರ ಆಡಳಿತದಲ್ಲಿ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಡಾಲ್‌ಹೌಸಿಗೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಒಂದು ಭಾಗ ಎಷ್ಟು ಇಷ್ಟವಾಯಿತೆಂದರೆ, ಅಂದಿನಿಂದ ಈ ಜಾಗ `ಡಾಲ್‌ಹೌಸಿ' ಹೆಸರಿನಿಂದ ಪ್ರಸಿದ್ಧವಾಯಿತು. ಒಂದು ಕಡೆ ಪೀರ್ ಪಂಜಾಬ್ ಪರ್ವತ ಶ್ರೇಣಿಗಳು, ಇನ್ನೊಂದು ಕಡೆ ಬಿಳಿಯ ಬೆಟ್ಟಗಳು. ಕೆಳಗೆ ಜುಳುಜುಳು ಹರಿಯುವ ರಾವಿ, ಬಿಯಾಸ್ ಮತ್ತು ಚಕ್ಕಿ ನದಿಗಳ ಸ್ವಚ್ಛ ನೀರು. ಇವೆಲ್ಲಾ ಇದನ್ನು ಇತರ ಹಿಲ್ ಸ್ಟೇಷನ್‌ಗಳಿಗಿಂತ ವಿಭಿನ್ನವಾಗಿ ಮಾಡಿವೆ. ಇಲ್ಲಿ ದೇವದಾರು, ಪೈನ್ ಟ್ರೀ, ಓಕ್ ಟ್ರೀ ಇತ್ಯಾದಿ ಮರಗಳ ಉದ್ದವಾದ ಟೊಂಗೆಗಳು, ಮತ್ತು ಬೆಟ್ಟಗಳಿಂದ ಸೋಸಿಕೊಂಡು ಬರುವ ಸ್ವಚ್ಛ ಗಾಳಿ ಬಳಲಿದ ವ್ಯಕ್ತಿಗೆ ಸ್ಛೂರ್ತಿ ಮತ್ತು ತಾಜಾತನ ತರುತ್ತದೆ. ಸಮುದ್ರ ಮಟ್ಟದಿಂದ 2,500 ಮೀಟರ್ ಎತ್ತರದಲ್ಲಿರುವ ಈ ನಗರ ಪ್ರಾಕೃತಿಕ ಸೌಂದರ್ಯ ಪ್ರೇಮಿಗಳಿಗೆ ಬಹಳ ಇಷ್ಟವಾಗುತ್ತದೆ. 4,000 ಜನಸಂಖ್ಯೆಯುಳ್ಳ ಈ ನಗರ ಒಂದು ಕಡೆ ಮಂಜು ತುಂಬಿದ ಬೆಟ್ಟಗಳು ಮತ್ತು ಸುಂದರ ವಾತಾವರಣದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜೊತೆಗೆ ಟೂರಿಸಂಗೆ ಪ್ರೋತ್ಸಾಹ ಕೊಡುವುದರಿಂದ ಅವರಿಗಿಷ್ಟವಾದ ಟ್ರ್ಯಾವೆಲ್ ಡೆಸ್ಟಿನೇಶನ್ ಆಗುತ್ತಿದೆ.
ಅದ್ಭುತ ಸೌಂದರ್ಯ ಲಾರ್ಡ್ ಡಾಲ್‌ಹೌಸಿಯನ್ನು ಪ್ರಭಾವಿತಗೊಳಿಸಿದ ಪ್ರಕೃತಿಯ ಅನುಪಮ ಸೌಂದರ್ಯವೇ ಇಂದಿಗೂ ಪ್ರವಾಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ಹಸಿರು ತುಂಬಿದ ಗಿಡಮರಗಳು ಸ್ವಚ್ಛವಾದ ದಾರಿಗಳು ಮತ್ತು ಮಾಲಿನ್ಯವಿರದ ಪರಿಸರ ಹೊರಗೆ ಸುತ್ತಾಡಲು ಪ್ರೇರೇಪಿಸುತ್ತದೆ. ಅಲ್ಲಿಗೆ ಹೋಗಿ ಹೋಟೆಲ್ ರೂಮಿನಲ್ಲಿ ಬಾಗಿಲು ಮುಚ್ಚಿ ಕೂರುವುದು ಅಸಂಭವ.
ಏಕೆಂದರೆ ಬಿಳಿಯ ಬಣ್ಣದ ಶಿಖರಗಳ ಸದೃಢ ಶ್ರೇಣಿಗಳು ಮನಮೋಹಕವಾಗಿರುತ್ತವೆ. ಹಿಮ ಶಿಖರಗಳ ಎದುರು ಹರಡಿರುವ ಹಸಿರು ತುಂಬಿದ ಬೆಟ್ಟಗಳು ಆ ಸೌಂದರ್ಯಕ್ಕೆ ಒಂದು ಹೊಸ ವ್ಯಾಖ್ಯಾನ ಬರೆಯುತ್ತವೆ. ಈ ಜಾಗದ ಅತ್ಯಂತ ದೊಡ್ಡ ವಿಶೇಷವೆದರೆ ಎತ್ತರದ ಬೆಟ್ಟದ ಸೌಂದರ್ಯವೊಂದು ಕಡೆ, ಮತ್ತೊಂದೆಡೆ ಬಯಲಿನಲ್ಲಿ ಹಸಿರು ಹುಲ್ಲಿನ ಮೇಲೆ ನಡೆದಾಡು ಮೋಜು ನಮ್ಮ ಕಣ್ಮನಗಳನ್ನು ತಣಿಸುತ್ತದೆ.
ಡಾಲ್‌ಹೌಸಿಯಲ್ಲಿ ಉಳಿದುಕೊಳ್ಳಲು ನಾವು ಅತ್ಯಂತ ಎತ್ತರದಲ್ಲಿರುವ ಆಮೋದ್ ರೆಸಾರ್ಟ್‌ನ್ನು ಆಯ್ಕೆ ಮಾಡಿದೆ. ಅಲ್ಲಿನ ಕೋಣೆಗಳ ಗೋಡೆಗಳು ಜೇಡಿಮಣ್ಣಿನಿಂದ ನಿರ್ಮಿಸಲಾಗಿದೆ. ಅಲ್ಲಿನ ಫ್ಲೋರಿಂಗ್‌ಗಳು ಬೇಸಿಗೆಯಲ್ಲಿ ತಣ್ಣಗೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುತ್ತವೆ. ಇದನ್ನು ನಿರ್ಮಿಸಲು ಒಂದು ಮರವನ್ನೂ ಕತ್ತರಿಸಲಿಲ್ಲವೆಂದು ರೆಸಾರ್ಟ್‌ನ ಮಾಲೀಕ ಗೌರವ್ ಜೈನ್ ಹೇಳಿದರು. ರೆಸಾರ್ಟ್‌ನ ಮ್ಯಾನೇಜರ್ ಪ್ರಣಯ್ ರುತುಡಿ ಅಲ್ಲಿನ ನರ್ಸರಿ ತೋರಿಸಿದರು. ಅದರಲ್ಲಿ ವಿಭಿನ್ನ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ರೆಸಾರ್ಟ್‌ನ ಎಲ್ಲ ರೂಮುಗಳಿಗೆ ಹಿಮಾಚಲದ ಬೆಟ್ಟಗಳ ಹೆಸರುಗಳನ್ನು ಇಟ್ಟಿದ್ದಾರೆ.
ಆಡಂಬರದಿಂದ ದೂರ
ಬ್ರಿಟಿಷರ ಆಳ್ವಿಕೆ ಹಾಗೂ ಪ್ರಕೃತಿ ಸೌಂದರ್ಯ ಒಟ್ಟಿಗೇ ವಿಭಿನ್ನ ಗೆಟಪ್‌ನಲ್ಲಿ, ನೈಸರ್ಗಿಕ ರೂಪದಲ್ಲಿ ಇಂದಿಗೂ ಜೀವಂತವಾಗಿದೆ. ಗಾಳಿಯಲ್ಲಿ ಮಾಲಿನ್ಯವಿಲ್ಲ. ಮಂದಾಗಿ ತಣ್ಣಗೆ ಬೀಸುತ್ತದೆ. ಹಾವಿನಂತಹ ರಸ್ತೆಯಲ್ಲಿ ಸಿಗುವ ಸುಭಾಷ್ ಚೌಕ ಮತ್ತು ಗಾಂಧಿ ಚೌಕ ವಿಭಿನ್ನ ದಿಕ್ಕುಗಳಿಂದ ಸಾಗುವ 8 ರಸ್ತೆಗಳ ಅದ್ಭುತ ಜಂಕ್ಷನ್ ಆಗಿದೆ. ಅದರ ನಾಲ್ಕೂ ಕಡೆ ಊರು ನೆಲೆಸಿದೆ.