ತ್ರೀ ಮೆಲನ್ ಸಲಾಡ್
ಸಾಮಗ್ರಿ : ಅಗತ್ಯವಿದ್ದಷ್ಟು ಕಲ್ಲಂಗಡಿ, ಕರ್ಬೂಜಾ ಮತ್ತು ಹನಿಡ್ಯೂ ಮೆಲನ್ (ಸ್ಕೂಪ್ ಮಾಡಿದ್ದು) ಹೋಳುಗಳು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಚಾಟ್ ಮಸಾಲ.
ವಿಧಾನ : ಚಿತ್ರದಲ್ಲಿರುವಂತೆ ಹಣ್ಣಿನ ಹೋಳುಗಳನ್ನು ಸ್ಕೂಪ್ ಮಾಡಿ ತೆಗೆದು ಟ್ರೇನಲ್ಲಿ ಜೋಡಿಸಿ. ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಪುದೀನಾ ಉದುರಿಸಿ, ಉಳಿದ ಪದಾರ್ಥ ಬೆರೆಸಿ, ಕೂಲ್ ಮಾಡಿ, ನಂತರ ಸವಿಯಲು ಕೊಡಿ.
ಹುಣಿಸೆಯ ರಸರಂಜಿನಿ
ಸಾಮಗ್ರಿ : ಒಂದು ದೊಡ್ಡ ನಿಂಬೆ ಗಾತ್ರ ಹುಣಿಸೇಹಣ್ಣು, ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು, ಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಪುಡಿ ಐಸ್.
ವಿಧಾನ : ಮೊದಲು ಹುಣಿಸೇಹಣ್ಣು ನೆನೆಹಾಕಿ, ಕಿವುಚಿ, ಬೇರ್ಪಡಿಸಿ. ಇದನ್ನು ಉಪ್ಪು, ಬೆಲ್ಲ, ಮೆಣಸಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಅದನ್ನು ಗ್ಲಾಸಿಗೆ ಹಾಕಿ, ಮೇಲೆ ಕೊ.ಸೊಪ್ಪು, ಪುದೀನಾ ಉದುರಿಸಿ, ಪುಡಿ ಐಸ್ ಬೆರೆಸಿ ಸವಿಯಲು ಕೊಡಿ
ಪರಂಗಿ ಹಣ್ಣಿನ ಸ್ಮೂದಿ
ಸಾಮಗ್ರಿ : ಅಗತ್ಯವಿದ್ದಷ್ಟು ಮಾಗಿದ ಪರಂಗಿಹಣ್ಣಿನ ಹೋಳು, ಒಂದಿಷ್ಟು ಹೆಚ್ಚಿದ ಪುದೀನಾ, ರುಚಿಗೆ ತಕ್ಕಷ್ಟು ಸಕ್ಕರೆ, ಜೇನುತುಪ್ಪ, ನಿಂಬೆರಸ, 1 ಕಪ್ ಕೆನೆ ಮೊಸರು, ಅಲಂಕರಿಸಲು ನಿಂಬೆಹೋಳು.
ತಯಾರಿಸುವ ವಿಧಾನ : ಮಿಕ್ಸಿ ಜಾರಿಗೆ ಪರಂಗಿಹಣ್ಣಿನ ಹೋಳಿನ ಜೊತೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ನುಣ್ಣಗೆ ತಿರುವಿಕೊಳ್ಳಿ. ಇದನ್ನು 2-3 ಗ್ಲಾಸಿಗೆ ಬಗ್ಗಿಸಿ, ಹೆಚ್ಚಿದ ಪುದೀನಾ ಉದುರಿಸಿ, ಚಿತ್ರದಲ್ಲಿರುವಂತೆ ನಿಂಬೆಹೋಳಿನಿಂದ ಅಲಂಕರಿಸಿ ಸವಿಯಲು ಕೊಡಿ.
ಮೆಲನ್ ಸ್ಪೆಷಲ್
ಸಾಮಗ್ರಿ : 1 ಸಣ್ಣ ಮಾಗಿದ ಕಲ್ಲಂಗಡಿಹಣ್ಣು, ರುಚಿಗೆ ತಕ್ಕಷ್ಟು ಸಕ್ಕರೆ, 2-2 ಚಿಟಕಿ ಉಪ್ಪುಮೆಣಸು, 1 ಬಾಟಲ್ ಸೋಡ, ಒಂದಿಷ್ಟು ಪುಡಿ ಐಸ್.
ವಿಧಾನ : ಮಿಕ್ಸಿಗೆ ಹಣ್ಣಿನ ಹೋಳು, ಸಕ್ಕರೆ, ಉಪ್ಪು, ಮೆಣಸು, ಸೋಡ ಬೆರೆಸಿ ಚೆನ್ನಾಗಿ ಬ್ಲೆಂಡ್ ಮಾಡಿ. ಇನ್ನು ಉದ್ದದ ಗ್ಲಾಸಿಗೆ ತುಂಬಿಸಿ, ಮೇಲೆ ಪುಡಿ ಐಸ್ ತೇಲಿಬಿಟ್ಟು ತಕ್ಷಣ ಸವಿಯಲು ಕೊಡಿ.
ಬೀನ್ಸ್ ವಿತ್ ಸ್ಪ್ರೌಟೆಡ್ ಸಲಾಡ್
ಸಾಮಗ್ರಿ : ಮೊಳಕೆ ಕಟ್ಟಿದ ಹೆಸರುಕಾಳು ಹುರುಳಿಕಾಳು, ಉದ್ದಕ್ಕೆ ಹೆಚ್ಚಿದ ಫ್ರೆಂಚ್ ಬೀನ್ಸ್ (ತಲಾ 100 ಗ್ರಾಂ) ಒಂದಿಷ್ಟು ಹೆಚ್ಚಿದ ಚೆರ್ರಿ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಜೇನುತುಪ್ಪ, ನಿಂಬೆರಸ.
ವಿಧಾನ : ಮೊಳಕೆ ಕಾಳುಗಳನ್ನು ಐಸ್ ನೀರಿನಲ್ಲಿ ತೊಳೆಯಿರಿ. ಚಿತ್ರದಲ್ಲಿರುವಂತೆ ಫ್ರೆಂಚ್ ಬೀನ್ಸ್ ನ್ನು ತುಸು ಉದ್ದಕ್ಕೆ ಡೈಮಂಡ್ ಶೇಪ್‌ನಲ್ಲಿ ಕತ್ತರಿಸಿ, ಕುದಿ ನೀರಿಗೆ 2 ನಿಮಿಷ ಹಾಕಿ ಬ್ಲ್ಯಾಂಚ್ ಮಾಡಿ, ಸೋಸಿಕೊಳ್ಳಿ. ಇದಕ್ಕೆ ಮೊಳಕೆಕಾಳು, ಉಳಿದ ಪದಾರ್ಥ ಬೆರೆಸಿಕೊಂಡು ಸಲಾಡ್ ಸಿದ್ಧಪಡಿಸಿ. ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ, ಸವಿಯಲು ಕೊಡಿ.
ಅವಕ್ಯಾಡೋ ಟೊಮೇಟೊ ಸ್ಯಾಂಡ್ವಿಚ್
ಸಾಮಗ್ರಿ : 5-6 ಮಲ್ಟಿಗ್ರೇನ್ ಬ್ರೆಡ್ ಸ್ಲೈಸ್, 100 ಗ್ರಾಂ ಅವಕ್ಯಾಡೋ (ಬೆಣ್ಣೆ ಹಣ್ಣು), ರುಚಿಗೆ ತಕ್ಕಷ್ಟು ಹೆಚ್ಚಿದ ಟೊವೋಟೊ ಬಿಲ್ಲೆ, ಉಪ್ಪು, ಬಿಳಿಮೆಣಸು, ಒಂದಿಷ್ಟು ರಾಕೆಟ್ ಲೆಟ್ಯೂಸ್ ಎಲೆಗಳು, ಬೆಣ್ಣೆ.
ವಿಧಾನ : ಅವಕ್ಯಾಡೋವನ್ನು ಸಹ ತೆಳು ಬಿಲ್ಲೆಗಳಾಗಿಸಿ. ಎಲ್ಲಾ ಬ್ರೆಡ್ ಸ್ಲೈಸ್‌ಗೂ ಮೊದಲು ಬೆಣ್ಣೆ ಸವರಿಡಿ. ಒಂದರ ಮೇಲೆ ಅವಕ್ಯಾಡೋ ಬಿಲ್ಲೆ, ಟೊಮೇಟೊ ಬಿಲ್ಲೆ, ಲೆಟ್ಯೂಸ್ ಬರುವಂತೆ ಜೋಡಿಸಿ. ಇದರ ಮೇಲೆ ಉಪ್ಪು, ಮೆಣಸು ಉದುರಿಸಿ, ಮೇಲೆ ಇನ್ನೊಂದು ಸ್ಲೈಸ್‌ನ್ನು ಮುಚ್ಚಿರಿಸಿ. ಹೀಗೆ ಎಲ್ಲಾ ಸ್ಯಾಂಡ್‌ವಿಚ್ ಸಿದ್ಧಪಡಿಸಿ ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.
ಕಾರ್ನ್ ಚೆರ್ರಿ ಟೊಮೇಟೊ ಸಲಾಡ್
ಸಾಮಗ್ರಿ : ಅಮೇರಿಕನ್ ಸ್ವೀಟ್ ಕಾರ್ನ್, ಆ್ಯಸ್ಪೆರಾಗಸ್ (ಶತಾಲರಿ), ಚೆರ್ರಿ ಟೊಮೇಟೊ (ತಲಾ 100 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಾಟ್ ಮಸಾಲ, ನಿಂಬೆರಸ, ವಿನಿಗರ್, ತುಸು ಆಲಿವ್ ಆಯಿಲ್.
ವಿಧಾನ : ಟೊಮೇಟೊ ಶುಚಿಗೊಳಿಸಿ ಸಣ್ಣದಾಗಿ ತುಂಡರಿಸಿ. ಆಮೇಲೆ ಹೆಚ್ಚಿಕೊಂಡ ಆ್ಯಸ್ಪೆರಾಗಸ್ ಮತ್ತು ಕಾರ್ನ್‌ನ್ನು ಬ್ಲ್ಯಾಂಚ್‌ಗೊಳಿಸಿ. ಆಮೇಲೆ ಐಸ್ ನೀರಿನಿಂದ ತೊಳೆಯಿರಿ. ನಂತರ ಒಂದು ಟ್ರೇನಲ್ಲಿ ಈ ಎಲ್ಲಾ ಸಾಮಗ್ರಿಗಳನ್ನೂ ಒಂದರ ಮೇಲೊಂದು ಹರಡಿ ತುಸು ಕೂಲ್ ಆಗಿಸಿ ತಕ್ಷಣ. ಸವಿಯಲು ಕೊಡಿ.
ಕುಕುಂಬರ್ ಮೋಜಿಟೊ
ಸಾಮಗ್ರಿ : 1 ಸಣ್ಣ ತಾಜಾ ಸೌತೇಕಾಯಿ, ಒಂದಿಷ್ಟು ಪುದೀನಾ ಎಲೆ, 1 ಬಾಟ್ ಸ್ಪ್ರೈಟ್, 1 ನಿಂಬೆಹಣ್ಣು ಒಂದಿಷ್ಟು ಪುಡಿ ಐಸ್.
ವಿಧಾನ : ಸೌತೇಕಾಯಿ ಸಿಪ್ಪೆ ಹೆರೆದು ಹೋಳಾಗಿಸಿ ಮಿಕ್ಸಿಯಲ್ಲಿ ಇದನ್ನು ಪುದೀನಾ, ಚಿಟಕಿ ಉಪ್ಪು ಮೆಣಸು ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಇದನ್ನು ಉದ್ದನೆಯ ಗ್ಲಾಸುಗಳಿಗೆ ಸುರಿದು, ನಿಂಬೆಯ ಬಿಲ್ಲೆಗಳನ್ನು ಮತ್ತೆ ಹೋಳು ಮಾಡಿ ಇದಕ್ಕೆ ಸೇರಿಸಿ. ಮೇಲೆ ಸ್ಪೈಟ್ ಸುರಿದು, ಪುಡಿ ಐಸ್, ಪುದೀನಾ ಹಾಕಿ ಸವಿಯಲು ಕೊಡಿ.