ಗಾಯತ್ರಿ ತನ್ನ ಕೋಣೆಯಲ್ಲಿ ಒಬ್ಬಳೇ ಯಾರೊಂದಿಗೋ ಫೋನ್‌ನಲ್ಲಿ ನಗುನಗುತ್ತಾ ಮಾತಾಡುತ್ತಿರುವುದನ್ನು ಕಂಡು ಯಶೋದಾ ಬೆಚ್ಚಿದಳು. ಮದುವೆ ಮನೆಯಲ್ಲಿ ಬಂಧುಗಳು, ಸ್ನೇಹಿತರು ಸೇರಿರುವಾಗ ಇವಳೊಬ್ಬಳೇ ಯಾರೊಂದಿಗೆ ಮಾತಾಡುತ್ತಿದ್ದಾಳೆ? ಸ್ವಲ್ಪ ಹೊತ್ತು ಯಶೋದಾ ಅವಳ ಮಾತುಗಳನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಗಾಯತ್ರಿಯ ನಗು ಬಿಟ್ಟು ಬೇರೇನೂ ಕೇಳಿಸಲಿಲ್ಲ. ಯಶೋದಾಗೆ ಬೇಸರವಾಯಿತು. ಗಾಯತ್ರಿಯ ವರ್ತನೆ ಅವಳಿಗಿ ಸರಿ ಕಾಣಲಿಲ್ಲ.
“ಗಾಯತ್ರಿ,” ಯಶೋದಾ ಸೌಮ್ಯತೆಯಿಂದ ಕೂಗಿದಳು.
ಗಾಯತ್ರಿ ಗಾಬರಿಯಿಂದ ತಿರುಗುವಾಗ ಗಡಿಬಿಡಿಯಲ್ಲಿ ರಿಸೀವರ್ ಕೆಳಗೆ ಬಿತ್ತು.
“ಇಲ್ಲಿ ಒಬ್ಬಳೇ ಯಾರ ಜೊತೆ ಮಾತಾಡ್ತಿದ್ದೀಯಾ? ಮನೆಯವರೆಲ್ಲಾ ಚಪ್ಪರದಲ್ಲಿ ಕೂತಿದ್ದಾರೆ,” ಯಶೋದಾ ಕೇಳಿದಳು.
“ಅ…… ಅನಿರುದ್ಧನೊಂದಿಗೆ ಮಾತಾಡ್ತಿದ್ದೆ. ನನ್ನ ಚೂಡಿದಾರ್ ಮರೆತುಬಿಟ್ಟಿದ್ದೆ. ತಗೊಂಡು ಬಾ ಅಂತ ಹೇಳ್ತಿದ್ದೆ.”
“ಗಾಯತ್ರಿ, ನಿನಗೆ ಸರಿಯಾಗಿ ಸುಳ್ಳು ಹೇಳಲೂ ಬರೋದಿಲ್ಲ. ಅನಿರುದ್ಧ ಬಂದು ಬಹಳ ಹೊತ್ತಾಯ್ತು. ಮಂಟಪದಲ್ಲಿ ಕೂತಿದ್ದಾನೆ. 2-3 ಸಾರಿ ನಿನ್ನ ಬಗ್ಗೆ ಕೇಳಿದ,” ಯಶೋದಾ ಹೇಳಿದಳು.
“ಅಜಯ್ ಮಲಗಿಬಿಟ್ಟಿದ್ದ. ಅದಕ್ಕೇ ನಿನ್ನ ರೂಮಿಗೆ ಕರೆದುಕೊಂಡು ಬಂದೆ. ಇಲ್ಲಿ ಗಲಾಟೆ ಇರಲ್ಲ. ಚೆನ್ನಾಗಿ ನಿದ್ದೆ ಮಾಡ್ತಾನೆ.”
“ಅಜಯ್‌ನ ಇಲ್ಲಿ ಮಲಗಿಸೋದು ಸರಿ. ಆದರೆ ನೀನು ಅಲ್ಲಿಗೆ ಬಾ. ಎಲ್ಲರೂ ನಿನ್ನನ್ನು ಕೇಳ್ತಿದ್ದಾರೆ.”
“ಇವನನ್ನು ಒಂಟಿಯಾಗಿ ಬಿಟ್ಟು ಹೇಗೆ ಬರ್ಲಿ ಅತ್ತಿಗೆ?” ಗಾಯತ್ರಿ ನಗುತ್ತಾ ಸಂದೇಹದ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದಳು.
“ಆಯ್ತು. ನಾನು ಅನಿರುದ್ಧನನ್ನು ಇಲ್ಲಿಗೇ ಕಳಿಸ್ತೀನಿ. ಈಗ್ಲಾದ್ರೂ ಹೇಳು ಇಷ್ಟು ಹೊತ್ತೂ ಫೋನ್‌ನಲ್ಲಿ ಯಾರ ಜೊತೆ ಅಷ್ಟು ತನ್ಮಯತೆಯಿಂದ ಮಾತಾಡ್ತಿದ್ದೇಂತ?” ಯಶೋದಾ ತನ್ನ ಗಂಭೀರ ಪ್ರಶ್ನೆಯನ್ನು ಮುಗುಳ್ನಗೆಯಿಂದ ಸಹಜವಾಗಿಸುತ್ತಾ ಕೇಳಿದಳು.
“ಕೆಲವು ವಿಷಯಗಳನ್ನು ಹೇಳದಿರೋದೇ ಒಳ್ಳೇದು ಯಶೋದಾ ಅತ್ತಿಗೆ,” ಗಾಯತ್ರಿ ಹೇಳಿದಾಗ ಯಶೋದಾ ಸುಮ್ಮನಾದಳು. ಅವಳ ಮನದಲ್ಲಿದ್ದ ಅನುಮಾನ ಶಾಂತವಾಗಿರಲಿಲ್ಲ.
ಮನೆ ನೆಂಟರು ಹಾಗೂ ಗೆಳೆಯರಿಂದ ತುಂಬಿತ್ತು. ಗಾಯತ್ರಿಯ ತಂಗಿ ಜ್ಯೋತಿಯ ಮದುವೆ ಸಮಾರಂಭವಾಗಿತ್ತು. ಯಶೋದಾ ಮನೆ ಸೊಸೆಯಾಗಿದ್ದು ಅವಳಿಗೆ ಉಸಿರಾಡಲೂ ಪುರಸತ್ತಿರಲಿಲ್ಲ. ಗಾಯತ್ರಿ ಏನೋ ಭಾನಗಡಿ ನಡೆಸುತ್ತಿದ್ದಾಳೆಂದು ಅವಳಿಗೆ ತಿಳಿದಿತ್ತು.
ಗಾಯತ್ರಿ ಹಾಗೂ ಯಶೋದಾರಲ್ಲಿ ಬರೀ ಅತ್ತಿಗೆ ನಾದಿನಿಯರ ಸಂಬಂಧ ಮಾತ್ರವೇ ಇರಲಿಲ್ಲ. ಇಬ್ಬರೂ ಕಾಲೇಜಿನಲ್ಲಿ ಒಟ್ಟಿಗೇ ಓದುತ್ತಿದ್ದು ಒಳ್ಳೆಯ ಗೆಳತಿಯರೂ ಆಗಿದ್ದರು. ಗಾಯತ್ರಿ ತನ್ನ ಅಣ್ಣ ಪರಮೇಶ್‌ನೊಂದಿಗೆ ಯಶೋದಾಳ ಮದುವೆ ಮಾಡಿಸುವಲ್ಲಿ ಮಹತ್ವ ಪಾತ್ರ ವಹಿಸಿದ್ದಳು. ಅವಳ ತಂದೆ ತಾಯಿ ಈ ಮದುವೆಗೆ ವಿರುದ್ಧವಾಗಿದ್ದರು. ಆದರೆ ಗಾಯತ್ರಿ ಅವರಿಬ್ಬರನ್ನೂ ಒಪ್ಪಿಸಿದ್ದಳು.
ಯಶೋದಾ ತನ್ನ ಒಳ್ಳೆಯ ಸ್ವಭಾವದಿಂದ ಎಲ್ಲರ ಹೃದಯ ಗೆದ್ದಿದ್ದಳು. ಗಾಯತ್ರಿಯ ತಾಯಿ ಜಾನಕಮ್ಮ ಈ ಮದುವೆಗೆ ಎಲ್ಲರಿಗಿಂತ ಹೆಚ್ಚು ವಿರೋಧ ವ್ಯಕ್ತಪಡಿಸಿದ್ದರು. ಈಗಂತೂ ಅವರು ಯಶೋದಾಳನ್ನು ಬಾಯಿ ತುಂಬಾ ಹೊಗಳುತ್ತಿದ್ದರು. ಆದರೆ ಮದುವೆಯ ನಂತರ ಯಶೋದಾ ಮತ್ತು ಗಾಯತ್ರಿಯ ನಡುವೆ ಹಿಂದಿನಷ್ಟು ಆತ್ಮೀಯತೆ ಇರಲಿಲ್ಲ. ಗಾಯತ್ರಿ ಯಶೋದಾಳ ಪ್ರತಿ ಕೆಲಸದಲ್ಲೂ ಆಕ್ಷೇಪ ಎತ್ತುತ್ತಿದ್ದಳು. ಯಶೋದಾ ನಕ್ಕು ಸುಮ್ಮನಾಗುತ್ತಿದ್ದಳು. ಆದರೆ ಅವಳು ಗಾಯತ್ರಿಯ ಪ್ರತಿಯೊಂದು ಚಲನವಲನಗಳ ಮೇಲೆ ಕಣ್ಣಿಡುವಾಗ ಗಾಯತ್ರಿ ಸಿಟ್ಟಿಗೇಳುತ್ತಿದ್ದಳು.
ಯಶೋದಾಗೆ ಗಾಯತ್ರಿಯ ಸ್ವಚ್ಛಂದ ಸ್ವಭಾವದ ಬಗ್ಗೆ ಚೆನ್ನಾಗಿ ತಿಳಿದಿತ್ತು. ಇಬ್ಬರೂ ಎಂ.ಎ. ಅಂತಿಮ ವರ್ಷದಲ್ಲಿದ್ದಾಗ ಗಾಯತ್ರಿ ಮತ್ತು ರಾಜೀವರ ಪ್ರೇಮಪ್ರಕರಣ ಬಹಳ ಸುದ್ದಿಯಲ್ಲಿತ್ತು. ಗಾಯತ್ರಿ ಯಶೋದಾಳೊಂದಿಗೆ ಮನೆ ಬಿಡುತ್ತಿದ್ದಳು. ಆದರೆ ಕಾಲೇಜಿನಲ್ಲಿ ಅಳ ಗೈರು ಹಾಜರಿ ಹೆಚ್ಚುತ್ತಿತ್ತು. ಯಶೋದಾ ಕೆಲವು ದಿನ ತೆಪ್ಪಗಿದ್ದಳು. ನಂತರ ಅವಳು ಗಾಯತ್ರಿಗೆ ತಾನು ಗಂಡ ಪರಮೇಶ್‌ಗೆ ಎಲ್ಲವನ್ನೂ ಹೇಳಿಬಿಡುವುದಾಗಿ ಹೇಳಿದಳು. ಕುಟುಂಬದ ಮರ್ಯಾದೆ ಪ್ರಶ್ನೆ. ಅವಳು ಸುಮ್ಮನಿರಲು ಆಗುವುದಿಲ್ಲ. ಅವಳು ಆ ಮನೆಯ ಸೊಸೆ. ಮನೆಯ ಮರ್ಯಾದೆ ರಕ್ಷಿಸುವುದು ಅವಳ ಕರ್ತವ್ಯ.
“ಏನು ಹೇಳ್ತೀಯ ಅಣ್ಣಂಗೆ? ವಿಕ್ರಮ್ ನನ್ನ ಫ್ರೆಂಡ್ ಅಂತಾನಾ?” ಗಾಯತ್ರಿ ತೀಕ್ಷ್ಣ ಸ್ವರದಲ್ಲಿ ಕೇಳಿದಳು.
“ಇವನು ಯಾರೇ ವಿಕ್ರಮ್? ನಿನಗೆಲ್ಲಿ ಸಿಕ್ಕಿದ ಅವನು? ಅವನ ಜೊತೆ ಎಲ್ಲೆಲ್ಲಿ ಸುತ್ತುತ್ತೀಯಾ? ಗಾಯತ್ರಿ, ನೀನು ನನ್ನಿಂದ ಏನೂ ಮುಚ್ಚಿಡುತ್ತಿರಲಿಲ್ಲ. ಈಗ್ಯಾಕೆ ಹೀಗ್ಮಾಡ್ತಿ?” ಯಶೋದಾ ಕೇಳಿದಳು.
“ಸಮಯ ಬಂದಾಗ ಎಲ್ಲವನ್ನು ಹೇಳ್ತೀನಿ. ಅದುವರೆಗೆ ಯಾರಿಗೂ ಏನೂ ಹೇಳ್ಲಾಂತ ಮಾತು ಕೊಡು,” ಗಾಯತ್ರಿ ಯಶೋದಾಳನ್ನು ಶಾಂತಗೊಳಿಸುವ ರೀತಿಯಲ್ಲಿ ಹೇಳಿದಳು.
“ನಾನು ಮಾತು ಕೊಡಲ್ಲ. ನಿಜ ಹೇಳಬೇಕೂಂದ್ರೆ ದಿನ ದಿನಕ್ಕೂ ನಿನ್ನ ಹೊಸ ಪ್ರೇಮ ಪ್ರಕರಣಗಳಿಂದ ನನಗೆ ಭಯವಾಗ್ತಿದೆ,” ಯಶೋದಾ ಹೇಳಿದಳು.
“ನೀನು ಬಹಳ ಸ್ವಾರ್ಥಿ. ಇಷ್ಟು ಬೇಗ ಮರೆತುಬಿಟ್ಯಾ? ನಿನ್ನ ಹಾಗೂ ಅಣ್ಣನ ಮದುವೆಗೆ ಅಪ್ಪ ಅಮ್ಮನ್ನ ಒಪ್ಪಿಸೋಕೆ ನಾನೆಷ್ಟು ಕಷ್ಟಪಟ್ಟೆ. ಈಗ ನನ್ನ ಸರದಿ ಬಂದಾಗ ನಿನಗೆ ಕುಟುಂಬದ ಗೌರವ ಜ್ಞಾಪಕ ಬಂದುಬಿಡ್ತಾ?” ಗಾಯತ್ರಿ ರೇಗಿದಳು.
“ನೀನು 2 ವಿಭಿನ್ನ ಪರಿಸ್ಥಿತಿಗಳನ್ನು ಹೋಲಿಸ್ತಾ ಇದ್ದೀಯ. ನನ್ನ ಹಾಗೂ ಪರಮೇಶ್‌ನ 5 ವರ್ಷಗಳ ಪ್ರೇಮ ಪ್ರಕರಣದಲ್ಲಿ ಮರ್ಯಾದೆಗೆ ಭಂಗ ತರುವಂತಹ ಒಂದು ಸಣ್ಣ ಪ್ರಸಂಗ ನಡೆಯಲಿಲ್ಲ. ಎಲ್ಲವೂ ಬಹಳ ಸಹಜವಾಗಿ, ಸಭ್ಯತೆಯಿಂದ ಕೂಡಿತ್ತು. ಆದರೆ ನೀನು ಪ್ರತಿ 2 ತಿಂಗಳಿಗೊಮ್ಮೆ ನಿನ್ನ ಲವರ್‌ನ ಬದಲಿಸ್ತೀಯ. ಮನೆಯಿಂದ ಕಾಲೇಜಿಗೆ ನನ್ನ ಜೊತೆ ಹೊರಡ್ತೀಯ. ಆದರೆ ದಾರಿ ಮಧ್ಯದಲ್ಲೇ ಮಾಯವಾಗ್ತೀಯ.”
“ನೀನು ಸತ್ಯ ಹಾಗೂ ಮರ್ಯಾದೆಗೆ ದೊಡ್ಡ ಉದಾಹರಣೆ. ಇದು ನನ್ನ ಜೀವನ, ನನಗೆ ಹೇಗೆ ಬೇಕೋ ಹಾಗೆ ಜೀವಿಸೋದ್ರಲ್ಲಿ ನನಗೆ ನಂಬಿಕೆ ಇದೆ. ಇದರಲ್ಲಿ ಬೇರೆಯವರ ಹಸ್ತಕ್ಷೇಪಾನ ನಾನು ಸಹಿಸೋದಿಲ್ಲ. ಅಪ್ಪ ಅಮ್ಮಂದೂ ಸಹ. ಇನ್ನು ನೀನ್ಯಾವ ತೋಟದ ಮೂಲಂಗೀನೇ?” ಗಾಯತ್ರಿ ರೇಗಿದಾಗ ಯಶೋದಾ ತೆಪ್ಪಗಾದಳು.
ಇದರ ಬಗ್ಗೆ ಮನೆಯರ ಬಳಿ ಹೇಳುವುದೋ ಬೇಡವೋ ಎಂದು ಕೆಲವು ದಿನಗಳವರೆಗೆ ಯಶೋದಾ ಗೊಂದಲದಲ್ಲಿ ಬಿದ್ದಳು. ಹೊಸದಾಗಿ ಬಂದ ಸೊಸೆ ಮನೆಯ ಮಗಳ ಬಗ್ಗೆ ನಿಂದನೆ ಮಾಡಿದರೆ ಪರಮೇಶ್ ಮತ್ತು ಅವನ ಅಪ್ಪ ಅಮ್ಮ ಏನು ತಿಳಿದುಕೊಳ್ಳುವುದಿಲ್ಲ? ಒಂದು ದಿನ ಗಾಯತ್ರಿ ವಿಕ್ರಮ್ ನೊಂದಿಗೆ ಪಬ್‌ನಿಂದ ಹೊರಬರುತ್ತಿರುವುದನ್ನು ಕಂಡಾಗ ಅವಳಿಗೆ ಬೇಸರವಾಯಿತು. ಸ್ವಲ್ಪ ಹೊತ್ತಿಗೆ ಇಬ್ಬರೂ ಬೈಕಿನಲ್ಲಿ ಕುಳಿತು ಅವಳ ಕಣ್ಣಿನಿಂದ ದೂರವಾದರು.
ಅವರಿಬ್ಬರ ಆತ್ಮೀಯತೆ ಕಂಡು ಯಶೋದಾಗೆ ಗಾಬರಿಯಾಯಿತು. ಈ ವಿಷಯ ಬೇರೆ ಯಾರಿಂದಾದರೂ ಪರಮೇಶ್‌ಗೆ ತಿಳಿದರೆ ಅವರಿಗೆಷ್ಟು ಕೋಪ ಬರಬಹುದು? ಆದ್ದರಿಂದ ಅವಳು ಪರಮೇಶ್ ಬರುತ್ತಲೇ ಕಣ್ಣೀರು ತುಂಬಿಕೊಂಡು ಎಲ್ಲವನ್ನೂ ಹೇಳಿಬಿಟ್ಟಳು. ಗಾಯತ್ರಿ ಮನೆಗೆ ಬಂದಾಗ ಪರಮೇಶ್ ಮತ್ತು ಅಪ್ಪ ಅಮ್ಮ ಮುಖವನ್ನು ಗಡಿಗೆಯಂತೆ ಮಾಡಿಕೊಂಡು ಕೂತಿದ್ದರು. ಅವಳು ಬರುತ್ತಲೇ ಅವಳ ಮೇಲೆ ಪ್ರಶ್ನೆಗಳ ಮಳೆ ಸುರಿಸಿದರು.
ಗಾಯತ್ರಿಯೂ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಳು. ತಾನು ಮದುವೆಯಾಗುವುದಾದರೆ ವಿಕ್ರಮ್ ನನ್ನು ಮಾತ್ರ ಎಂದು ಘೋಷಿಸಿದಳು. ಅವಳ ತಂದೆ ತಾಯಿ ಇಷ್ಟು ದಿನ ಗಾಯತ್ರಿಯನ್ನು ಸರಿಯಾಗಿ ಗಮನಿಸಿಕೊಳ್ಳದ್ದಕ್ಕೆ ಮಗನನ್ನು ಬೈದರು.
ಯಶೋದಾಗೂ ಬಹಳ ಮುಜುಗುರವಾಗಿತ್ತು. ನಂತರ ಪರಮೇಶ್ ಬೇಗನೆ ವಿಕ್ರಮ್ ನ ನಿಜರೂಪದ ಬಗ್ಗೆ ತಿಳಿದುಕೊಂಡ. ವಿಕ್ರಮ್ ಕಾಲೇಜನ್ನು ಅರ್ಧಕ್ಕೇ ಬಿಟ್ಟಿದ್ದ. ಅವನು ಒಂದು ಮ್ಯೂಸಿಕ್ ಬ್ಯಾಂಡ್‌ನ ಸದಸ್ಯನಾಗಿದ್ದ. ಅವನ ವರ್ತನೆಯಿಂದ ಬೇಸತ್ತು, ಅವನ ಅಪ್ಪ, ಅಮ್ಮ ಅವನನ್ನು ಮನೆಯಿಂದ ಹೊರಹಾಕಿದ್ದರು.
ಇದೆಲ್ಲಾ ತಿಳಿದು ಜಾನಕಮ್ಮ ಮತ್ತು ಶ್ರೀಪತಿರಾಯರು ಯಾವುದೇ ಕಾರಣಕ್ಕೂ ಈ ಮದುವೆಗೆ ಒಪ್ಪುದಿಲ್ಲವೆಂದರು. ಒಂದುವೇಳೆ ಗಾಯತ್ರಿ ಈ ಮದುವೆ ಮಾಡಿಕೊಳ್ಳಲು ಇಚ್ಛಿಸಿದರೆ ಅವಳು ತಮ್ಮ ಪಾಲಿಗೆ ಸತ್ತಂತೆ ಭಾವಿಸುತ್ತೇವೆ. ನಾವು ಇದೇ ಸಮಾಜದಲ್ಲಿ ಇರಬೇಕು. ಚಿಕ್ಕ ಮಗಳ ಮದುವೆಯೂ ಆಗಬೇಕು ಎಂದರು.
ಗಾಯತ್ರಿ ಕೂಡಾ ತಾನು ಮದುವೆಯಾಗುವುದಾದರೆ ವಿಕ್ರಮ್ ನನ್ನೇ, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದಳು. ಅತ್ತ ಜಾನಕಮ್ಮ ಮತ್ತು ಶ್ರೀಪತಿರಾಯರು ಮಗಳು ಆತ್ಮಹತ್ಯೆ ಮಾಡಿಕೊಂಡರೂ ಪರವಾಗಿಲ್ಲ. ಆದರೆ ಅವಳ ಮದುವೆ ವಿಕ್ರಮ್ ಜೊತೆ ನಡೆಯುವುದು ಇಷ್ಟವಿಲ್ಲ ಎಂದರು.
ಎರಡೂ ಪಕ್ಷದವರನ್ನು ಸಮಾಧಾನಪಡಿಸಿ ಮನೆಯಲ್ಲಿ ಯುದ್ಧ ವಿರಾಮದ ಸ್ಥಿತಿ ಕಾಪಾಡಿಕೊಳ್ಳುವ ಭಾರ ಯಶೋದಾಳ ಹೆಗಲಿಗೆ ಬಿತ್ತು. ಹಾಗೆ ಮಾಡುವಾಗ ಅವಳು ಎರಡೂ ಪಕ್ಷಗಳ ಕೋಪ ಎದುರಿಸಬೇಕಾಗಿ ಬಂತು. ಆ ಕಠಿಣ ಸಮಯದಲ್ಲಿ ಅವಳ ಮನಸ್ಥಿತಿ ಅರ್ಥ ಮಾಡಿಕೊಳ್ಳುವವರಿಗೆ ಮಾತ್ರ ತಿಳಿಯುತ್ತಿತ್ತು.
ಇದರ ಮಧ್ಯೆ ಹಗಲೂ ರಾತ್ರಿ ಒತ್ತಡದ ವಾತಾವರಣ ಯಶೋದಾಳ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಈ ಸಮಸ್ಯೆಗಳಿಂದ ಕಂಗೆಟ್ಟು ಶ್ರೀಪತಿರಾಯರು ಒಂದು ವಾರ ಆಸ್ಪತ್ರೆ ಸೇರಬೇಕಾಯಿತು. ಕೊನೆಗೂ ಅವರು ಸೋತು ಗಾಯತ್ರಿ ವಿಕ್ರಮ್ ರ ಮದುವೆಗೆ ಒಪ್ಪಿಗೆ ಕೊಟ್ಟರು.
“ನಾನು ಇನ್ನಷ್ಟು ಒತ್ತಡ ಸಹಿಸಲು ಆಗುವುದಿಲ್ಲ. ಎಷ್ಟು ಬೇಡವೆಂದರೂ ಅನುಭವಿಸಿಯೇ ತೀರ್ತೀನಿ ಅಂತ ಹಟ ಮಾಡ್ತಿದ್ದೀಯ ಇನ್ನು ನಿನ್ನಿಷ್ಟ,” ಅವರು ತುಂಬಿದ ಕಂಠದಿಂದ ಹೇಳಿದರು.
ಗಾಯತ್ರಿ ಖುಷಿಯಿಂದ ಕುಣಿದಾಡಿದಳು. ಶ್ರೀಪತಿರಾಯರು ಒಲ್ಲದ ಮನಸ್ಸಿನಿಂದ ಗಾಯತ್ರಿಯ ವಿವಾಹದ ಸಿದ್ಧತೆಗಳನ್ನು ಮಾಡತೊಡಗಿದರು. ಆದರೆ ವಿವಾಹಕ್ಕೆ ಒಪ್ಪಿಗೆ ಸಿಕ್ಕ ಕೂಡಲೇ ವಿಕ್ರಮ್ ಯಾರಿಗೂ ತಿಳಿಸದೆ ಅಲ್ಲಿಂದ ಓಡಿಹೋಗಿಬಿಟ್ಟ. ಬಹುಶಃ ಅವನಿಗೆ ತನ್ನ ಯೋಗ್ಯತೆಯ ಮೇಲೆ ನಂಬಿಕೆ ಇರಲಿಲ್ಲ. ಆಗ ಶ್ರೀಪತಿರಾಯರು ಅವಳಿಗೆ ಕಟುವಾಗಿ ಹೇಳಿದರು, “ಇದುವರೆಗೆ ನೀನು ನಮ್ಮನ್ನು ನಿನ್ನ ಬೆರಳುಗಳಿಂದ ಕುಣಿಸುತ್ತಿದ್ದೆ. ಇನ್ನು ಮುಂದೆ ನಮ್ಮ ಮಾತನ್ನು ಕೇಳಬೇಕು.” ಅಷ್ಟೇ ಅಲ್ಲ, ಅವರು ಗಾಯತ್ರಿಗೆ ಗಂಡು ಹುಡುಕತೊಡಗಿದರು. ಅವರ ಪ್ರಯತ್ನ ಫಲಕೊಟ್ಟಿತು. ಅನಿರುದ್ಧನಂತಹ ಸುಂದರ, ಸುಸಂಸ್ಕೃತ ಹಾಗೂ ಹೆಚ್ಚು ಸಂಬಳ ಗಳಿಸುವ ಗಂಡ ಸಿಕ್ಕಿದ.
ಗಾಯತ್ರಿಯ ಮದುವೆ ವೈಭವದಿಂದ ನಡೆಯಿತು. ಎಲ್ಲರೂ ನೆಮ್ಮದಿಯಾಗಿ ಉಸಿರಾಡಿದರು. ವರ್ಷ ತುಂಬುವುದರಲ್ಲಿ ಗಾಯತ್ರಿ ಅಜಯ್‌ಗೆ ಜನ್ಮ ನೀಡಿದಳು. ಎರಡೂ ಕುಟುಂಬಗಳಲ್ಲಿ ಸಂತಸದ ಅಲೆ ಹರಿಯಿತು. ಎಲ್ಲರೂ ಗಾಯತ್ರಿಯ ಬಗ್ಗೆ ನಿಶ್ಚಿಂತೆಯಿಂದಿದ್ದರು.
ಶ್ರೀಪತಿರಾಯರು ತಮ್ಮ ಎರಡನೇ ಮಗಳ ಮದುವೆಯನ್ನೂ ಬೇಗನೇ ನಿಭಾಯಿಸಿದರು. ಮನೆಯವರೆಲ್ಲರೂ ಆ ಮದುವೆಯ ಸಡಗರದಲ್ಲಿ ಮುಳುಗಿದ್ದರೆ ಗಾಯತ್ರಿಯ ಚಲನವಲನಗಳ ಬಗ್ಗೆ ಯಶೋದಾಗೆ ಸಂದೇಹವಿತ್ತು. ಏನೂ ಯೋಚಿಸದೆ ದಿಢೀರನೆ ಯಾವುದಾದರೂ ತೀರ್ಮಾನ ತೆಗೆದುಕೊಂಡು ತನ್ನನ್ನು ಹಾಗೂ ಇತರರನ್ನು ಸಂಕಟಕ್ಕೆ ದೂಡುವುದು ಗಾಯತ್ರಿಗೆ ಮಾಮೂಲಾಗಿತ್ತು. ಇದು ಯಶೋದಾಗೆ ಚೆನ್ನಾಗಿ ಗೊತ್ತಿತ್ತು.
ಮದುವೆ ಮನೆಯಲ್ಲಿ ಯಾವುದೇ ಸಾಕ್ಷ್ಯವಿಲ್ಲದೆ ಗಲಾಟೆ ಎಬ್ಬಿಸಲು ಯಶೋದಾಗೆ ಇಷ್ಟವಿರಲಿಲ್ಲ. ಆದರೆ ಅವಳು ಗಾಯತ್ರಿಯನ್ನು ಗಮನಿಸುತ್ತಲೇ ಇದ್ದಳು. ಮದುವೆಯಲ್ಲಿ ಅನಿರುದ್ಧ ಹಾಗೂ ಅವರ ಕುಟುಂಬದ ಇತರ ಸದಸ್ಯರೂ ಇದ್ದರು. ಹೀಗಾಗಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗಿತ್ತು.
ಹಾಡು, ನೃತ್ಯಗಳ ಸಂದರ್ಭದಲ್ಲಿ ಗಾಯತ್ರಿ ಸ್ವಲ್ಪ ಹೊತ್ತು ಭಾಗವಹಿಸಿದಳು. ಆದರೆ ಅವಳ ಹೆಚ್ಚಿನ ಸಮಯ ಫೋನ್‌ನಲ್ಲಿ ಮಾತಾಡುವುದರಲ್ಲಿಯೇ ಕಳೆದುಹೋಗಿತ್ತು.
ಹಾಡಿ ಕುಣಿದು ಎಲ್ಲರಿಗೂ ಸುಸ್ತಾಗಿತ್ತು. ಎಲ್ಲರೂ ಮಲಗಿಕೊಂಡರು. ಅತ್ತ ಗಾಯತ್ರಿ ಫೋನ್‌ನಲ್ಲಿ ಎಷ್ಟು ವ್ಯಸ್ತಳಾಗಿದ್ದಳೆಂದರೆ ತನ್ನ ಸುತ್ತಮುತ್ತ ಯಾರಿದ್ದಾರೆಂದು ಗಮನಿಸಲಿಲ್ಲ.“ಇಷ್ಟೊಂದು ತನ್ಮಯತೆಯಿಂದ ಯಾರೊಂದಿಗೆ ಮಾತಾಡ್ತಿದ್ದೀಯ, ನಾ ಕೊಂಚ ಕೇಳೋಣ,” ತುಂಬಾ ಹೊತ್ತು ಮಾತಾಡಿದ ನಂತರ ಗಾಯತ್ರಿ ಫೋನ್ ಕಟ್ ಮಾಡಿದಾಗ ಹತ್ತಿರದಲ್ಲೇ ಕೂತಿದ್ದ ಯಶೋದಾಳನ್ನು ಕಂಡು ಬೆಚ್ಚಿದಳು.
“ಅಂದ್ರೆ? ನೀನು ನನ್ನ ಮೇಲೆ ಪತ್ತೇದಾರಿಕೆ ನಡೆಸುತ್ತಿದ್ದೀಯಾ?”
“ಏನ್ಮಾಡ್ಲಿ? ಹಳೇ ಅಭ್ಯಾಸ ಕಣೆ.”
“ಏನು ಮಾಡ್ತೀಯೋ ಮಾಡು. ಯಾರು ತಲೆ ಕೆಡಿಸ್ಕೋತಾರೆ? ನಾನು ನನ್ನ ಫ್ರೆಂಡ್ಸ್ ಜೊತೆ ಮಾತಾಡ್ತಿದ್ದೆ.”
“ನಿನ್ನ ಹೆಚ್ಚಿನ ಫ್ರೆಂಡ್ಸ್ ನನಗೂ ಗೊತ್ತು. ಅವರು ನನಗೂ ಫ್ರೆಂಡ್ಸ್. ಇನ್ನು ಹೊಸ ಫ್ರೆಂಡ್ಸ್ ಎಲ್ಲಿಂದ ಬಂದ್ರು?”
“ಆ ಫ್ರೆಂಡ್ಸ್ ಬಗ್ಗೆ ನಿನಗೇನೂ ಆಗಬೇಕಾಗಿಲ್ಲ ಪ್ರೀತಿಯ ಅತ್ತಿಗೆ. ಅಂದಹಾಗೆ ನನ್ನ ಹಿಂದೆ ಯಾಕೆ ಬಿದ್ದಿದ್ದೀಯ?”
“ಅಗತ್ಯ ಇದೆ ನನ್ನ ಪ್ರೀತಿಯ ನಾದಿನಿ. ನೀನು ಯಾವುದೋ ಅಪಾಯಕಾರಿ ಆಟ ಆಡೋಕೆ ಯೋಜನೆ ಮಾಡ್ತಾ ಇದ್ದೀಯ ಅನ್ನಿಸ್ತಿದೆ.”
“ಇರಬಹುದು. ಅದು ನಿಜವಾಗಿದ್ರೂ ನಿನಗೇಕೆ ಹೇಳ್ಲಿ? ನಿಜ ಹೇಳಬೇಕೂಂದ್ರೆ ನೀನು ನನ್ನ ನಂಬಿಕೆ ಕಳ್ಕೊಂಡಿದ್ದೀಯ,” ಗಾಯತ್ರಿ ತೀಕ್ಷ್ಣವಾಗಿ ಹೇಳಿದಳು.
ಯಶೋದಾ ನಕ್ಕು ಸುಮ್ಮನಾದಳು. ದೊಡ್ಡ ಹಾಲ್‌ನಲ್ಲಿ ಹಾಸಿದ್ದ ಹಾಸಿಗೆಗಳ ಮೇಲೆ ಸಂಬಂಧಿಕರು ಮಲಗಿದ್ದರು. ಇಬ್ಬರೂ ಗೆಳತಿಯರ ನಡುವಿನ ವಾದದಿಂದ ಅವರಿಗೆ ಮನರಂಜನೆ ಸಿಗುತ್ತಿತ್ತು.
ಗಾಯತ್ರಿ ನಿದ್ರಿಸಿದ ನಂತರ ಯಶೋದಾ ಬಹಳ ಹೊತ್ತು ಯೋಚನೆಯಲ್ಲಿ ಮುಳುಗಿದ್ದಳು. ತನ್ನ ಸಂದೇಹಕ್ಕೆ ಏನೂ ಆಧಾರವಿಲ್ಲ ಎಂದು ಅವಳಿಗೆ ಸ್ವಲ್ಪ ಹೊತ್ತು ಅನ್ನಿಸಿತ್ತು.
ಮರುದಿನ ಮದುವೆಯ ವ್ಯಸ್ತತೆಯ ನಡುವೆಯೂ ಅವಳು ಗಾಯತ್ರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಇಡೀ ದಿನ ಏನೂ ವಿಶೇಷ ನಡೆಯಲಿಲ್ಲ. ಆದರೆ ದಿಬ್ಬಣ ಬಂದಾಗ ಯಶೋದಾ ಕಣ್ಣುಗಳನ್ನು ಅರಳಿಸಿ ನೋಡಿದಳು. ಗುಲಾಬಿ ಪೇಟ ತೊಟ್ಟು ದಾಡಿ ಬಿಟ್ಟಿದ್ದ ವಿಕ್ರಮ್ ನನ್ನು ನೋಡಿದ ಕೂಡಲೇ ಯಶೋದಾ ಗುರುತಿಸಿದಳು.
“ವಿಕ್ರಮ್ ಇಲ್ಲೇನು ಮಾಡ್ತಿದ್ದಾನೆ?” ಅವಳು ಗಂಡನನ್ನು ಕೇಳಿದಳು.
“ಗೊತ್ತಿಲ್ಲ. ಬಹುಶಃ ಅವನು ಗಂಡಿನ ಗೆಳೆಯ ಅಥವಾ ಸಂಬಂಧಿ ಆಗಿರಬೇಕು. ನಾವು ಈಗ ಅವನನ್ನು ಕೇಳೋಕಾಗಲ್ಲ,” ಪರಮೇಶ್ ಹೇಳಿದ.
ಆದರೆ ಯಶೋದಾಗೆ ತೃಪ್ತಿಯಾಗಲಿಲ್ಲ. ವಿಕ್ರಮ್ ಅಲ್ಲಿದ್ದರಿಂದ ಏನೋ ಅಪಾಯ ಸಂಭವಿಸಲಿದೆ ಅನ್ನಿಸುತ್ತಿತ್ತು. ಅವಳು ಗಾಯತ್ರಿಯ ಮೇಲೆ ತನ್ನ ಹದ್ದಿನ ಕಣ್ಣು ಇಟ್ಟೇ ಇದ್ದಳು.
ರಾತ್ರಿ ಊಟದ ನಂತರ ನೆಂಟರು ಮಲಗಿ ವಿಶ್ರಮಿಸುತ್ತಿದ್ದಾಗ ಗಾಯತ್ರಿ ಮಹಡಿ ಹತ್ತುತ್ತಿದ್ದುದನ್ನು ಕಂಡು ಯಶೋದಾ ಎದ್ದು ನಿಂತಳು. ಅವಳು ಸದ್ದಿಲ್ಲದೆ, ಅವಳನ್ನು ಹಿಂಬಾಲಿಸಿದಳು. ರಾತ್ರಿಯ ಕತ್ತಲಲ್ಲಿ ಮರೆಯಲ್ಲಿ ನಿಂತಿದ್ದ ಯಶೋದಾ ಗಾಯತ್ರಿಗೆ ಕಾಣದಿದ್ದರೂ ಯಶೋದಾಗೆ ಗಾಯತ್ರಿ ಸ್ಪಷ್ಟವಾಗಿ ಕಾಣುತ್ತಿದ್ದಳು.ವಿಕ್ರಮ್ ಮೊದಲೇ ಮಹಡಿ ಹತ್ತಿದ್ದ. ಗಾಯತ್ರಿ ಅವನನ್ನು ಬಿಗಿದಪ್ಪಿಕೊಂಡು, “ಎಲ್ಲಿ ಹೊರಟುಹೋಗಿದ್ದೆ ನೀನು? ನಾನಿಲ್ಲಿ ದಿನಗಳನ್ನು ಹೇಗೆ ಕಳಿತೀದ್ದೀನಿ ಗೊತ್ತಾ?” ಎಂದಳು.
“ಆಗಿನ ವಿಷಯವೇ ಬೇರೆ. ಈಗ ನಾನು ನಿರುದ್ಯೋಗಿ ಅಲ್ಲ. 2 ದಿನಗಳ ನಂತರ ನಮ್ಮ ಬ್ಯಾಂಡ್ 6 ತಿಂಗಳು ಫಾರಿನ್ನಿಗೆ ಹೋಗ್ತಿದೆ. ಎಲ್ಲವನ್ನೂ ಬಿಟ್ಟು ನನ್ನ ಜೊತೆ ಬಂದ್ಬಿಡು. ಯಾರಿಗೂ ಗೊತ್ತಾಗೋದು ಬೇಡ. ನಾಳೆ ನಿನ್ನ ತಂಗಿಯ ಬೀಳ್ಕೊಡುಗೆ ಜೊತೆ ನಿನ್ನ ಬೀಳ್ಕೊಡುಗೆಯೂ ಆಗಿಬಿಡುತ್ತೆ,” ವಿಕ್ರಮ್ ತನ್ನ ಪ್ರೀತಿಯ ಬಲೆ ಹರಡುತ್ತಾ ಹೇಳಿದ.
“ನಾಳೆ ಬೇಡ. ನನ್ನ ಗಂಡ ಹಾಗೂ ಅವರ ಮನೆಯವರು ಇಲ್ಲಿಗೆ ಬಂದಿದ್ದಾರೆ. ನಾಳೆ ಎಲ್ಲರೂ ಊರಿಗೆ ಹೊರಟುಬಿಡ್ತಾರೆ. ನಾನು ಏನಾದರೂ ನೆಪ ಹೇಳಿ ಇಲ್ಲೇ ಉಳಿದುಕೊಳ್ತೀನಿ. ಅಜಯ್ ಅಜ್ಜಿಯ ಜೊತೆ ಹೊಂದಿಕೊಂಡಿದ್ದಾನೆ. ಅವನನ್ನೂ ಅವರ ಜೊತೆ ಕಳಿಸಿಬಿಡ್ತೀನಿ. ಇಷ್ಟು ದಿನ ಕಾದಿದ್ದೀಯ. ಇನ್ನು ಒಂದು ದಿನ ನನಗೆ ಕಾದುಬಿಡು ಪ್ಲೀಸ್,” ಎಂದಳು.
ಎಲ್ಲವನ್ನೂ ಕೇಳಿ ಆ ಚಳಿಯಲ್ಲೂ ಯಶೋದಾ ಬೆವರಿನಿಂದ ತೊಯ್ದುಹೋದಳು. ಅವಳು ಸದ್ದಿಲ್ಲದೆ ಮೆಟ್ಟಿಲುಗಳನ್ನು ಇಳಿದುಹೋದಳು. ಸ್ವಲ್ಪ ಹೊತ್ತಿನ ನಂತರ ಗಾಯತ್ರಿ ಹಾಗೂ ವಿಕ್ರಮ್ ಏನೂ ನಡೆಯದವರಂತೆ ಕೆಳಗಿಳಿದು ಬಂದರು.
ಮದುವೆಯ ಶಾಸ್ತ್ರಗಳು ಮುಗಿದವು. ಜ್ಯೋತಿಯನ್ನು ಬೀಳ್ಕೊಟ್ಟಿದ್ದೂ ಆಯಿತು. ಅನಿರುದ್ಧ ಹಾಗೂ ಅವನ ತಂದೆ ತಾಯಿ ಗಾಯತ್ರಿಯ ಇಚ್ಛೆಯಂತೆ ಅಜಯ್‌ನನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು.
ಗಾಯತ್ರಿ ರಾತ್ರಿಯ ಕತ್ತಲಲ್ಲಿ ಎಲ್ಲರೂ ಮಲಗಿದ ನಂತರ ತನ್ನ ಸೂಟ್‌ಕೇಸ್ ಎತ್ತಿಕೊಂಡು ಮುಂಬಾಗಿಲಿನತ್ತ ಹೋದಳು. ಅವಳು ಅಡಗಿಸಿಟ್ಟುಕೊಂಡಿದ್ದ ಕೀನಿಂದ ಬೀಗ ತೆರೆಯುವ ಮೊದಲೇ ಯಾರೋ ಲೈಟ್ ಸ್ವಿಚ್ ಹಾಕಿದರು.
“ಮಧ್ಯರಾತ್ರಿ ಎಲ್ಲಿಗೆ ಹೊರಟಿದ್ದೀಯ ಗಾಯತ್ರಿ?” ಶ್ರೀಪತಿರಾಯರ ಪ್ರಶ್ನೆ ಕೇಳಿ ಗಾಯತ್ರಿ ತಬ್ಬಿಬ್ಬಾದಳು.
“ಉತ್ತರ ಹೊಳೀತಿಲ್ವಾ? ಪರಮೇಶ್, ಇವಳನ್ನು ನನ್ನ ದೃಷ್ಟಿಗೆ ಬೀಳದಂತೆ ದೂರ ಕರ್ಕೊಂಡು ಹೋಗು. ನನ್ನ ಕೈಲಿ ಇನ್ನು ಸಹಿಸೋಕಾಗಲ್ಲ. ಇಲ್ಲದಿದ್ರೆ ಮೊದಲು ಇವಳನ್ನು ಕೊಂದು ನಂತರ ನಾನೂ ಸಾಯ್ತೀನಿ. ಇವಳನ್ನು ನನ್ನ ಮಗಳೂಂತ ಹೇಳಿಕೊಳ್ಳೋಕೆ ನನಗೆ ನಾಚಿಕೆ ಆಗ್ತಿದೆ,” ಶ್ರೀಪತಿರಾಯರು ದುಃಖಿಸಿದರು.
“ಅಪ್ಪಾ, ಧೈರ್ಯ ತಗೊಳ್ಳಿ. ಇವಳಿಗೆ ತನ್ನ ಒಳ್ಳೇದು ಕೆಟ್ಟದ್ದನ್ನು ಅರ್ಥ ಮಾಡಿಕೊಳ್ಳೋ ಶಕ್ತಿಯಿಲ್ಲ. ಹಾಳಾದೋನು ಅವನು ಇವಳನ್ನು ಮರುಳು ಮಾಡಿ ಕರ್ಕೊಂಡು ಹೋಗ್ತಾ ಇದ್ದಾನೆ. ಇವಳು ಅವನ ಮೋಸಕ್ಕೆ ಬಲಿಯಾಗಿದ್ದಾಳೆ,” ಪರಮೇಶ್ ಅವರನ್ನು ಸಮಾಧಾನಪಡಿಸುತ್ತಾ ಹೇಳಿದ. ಎಲ್ಲರ ಕೋಪದ ದೃಷ್ಟಿ ಎದುರಿಸಲಾರದೆ ಗಾಯತ್ರಿ ಒಳಗೆ ಹೋದಳು.
“ಪರಮೇಶ್, ಇವಳನ್ನ ಈಗಲೇ ಅವಳ ಮನೆಗೆ ಬಿಟ್ಟು ಬಾ. ನನಗೆ ಅವಳ ಮುಖ ನೋಡೋಕೂ ಇಷ್ಟವಿಲ್ಲ,” ಜಾನಕಮ್ಮ ಹೇಳಿದರು.
“ಅಮ್ಮಾ ಬೆಳಕಾಗ್ಲಿ. ನಾನು ಗಾಯತ್ರೀನ ಅವಳ ಮನೆಗೆ ಬಿಟ್ಟುಬರ್ತೀನಿ. ಅನಿರುದ್ಧನಿಗೆ ಎಲ್ಲವನ್ನೂ ಹೇಳ್ತೀನಿ.” ಪರಮೇಶ್‌ಹೇಳಿದ.
“ಬೇಡ. ಅವರಿಗೇನೂ ಹೇಳಬೇಡ,” ಎಂದ ಗಾಯತ್ರಿ ಜೋರಾಗಿ ಅಳುತ್ತಾ, “ನಾನು ಭ್ರಾಂತಿಗೊಳಗಾಗಿದ್ದೆ. ನಾನು ಅನಿರುದ್ಧನಿಗೆ ಮಾತ್ರವಲ್ಲ. ಎಲ್ಲರಿಗೂ ನಂಬಿಕೆದ್ರೋಹ ಮಾಡಿದ್ದೀನಿ. ನಾನು ಕ್ಷಮೆಗೆ ಯೋಗ್ಯಳಲ್ಲ,” ಅವಳು ಹೇಳುತ್ತಲೇ ಇದ್ದಳು. ಯಶೋದಾ ಅವಳನ್ನು ಸಮಾಧಾನಿಸಲು ಪ್ರಯತ್ನಿಸುತ್ತಿದ್ದಳು.