ಅವಳು ತನ್ನ ಕೋಣೆಯಲ್ಲಿ ಕುಳಿತು ನೀರಾಗಿ ರೋದಿಸುತ್ತಿದ್ದಳು. ಅವಳ ಕಣ್ಣೀರನ್ನು ಒರೆಸುವವರು ಯಾರೂ ಇರಲಿಲ್ಲ. ತನ್ನ ನೋವನ್ನು ಹಂಚಿಕೊಳ್ಳಲು ಅನಳಿಗೆ ಯಾರ ಜೊತೆಯೂ ಇರಲಿಲ್ಲ. ಒಂಟಿತನ ಮಾತ್ರ ಅನಳಿಗೆ ಜೊತೆಯಾಗಿತ್ತು. ಅನಳು ತನ್ನ ನೋವನ್ನು ಹಂಚಿಕೊಳ್ಳುವುದಾದರೂ ಹೇಗೆ? ಅವಳು ಅನುಭವಿಸುತ್ತಿದ್ದ ನೋವಿಗೆ ಸ್ವತಃ ಅವಳೇ ಹೊಣೆಯಾಗಿದ್ದಳು. ಕಗ್ಗತ್ತಲು ಅವಳನ್ನು ನುಂಗಲೆಂದು ಬಾಯ್ತೆರೆದು ಮುನ್ನುಗ್ಗಿ ಬರುತ್ತಿತ್ತು. ಆ ಕಗ್ಗತ್ತಲನ್ನೂ ಸ್ವಯಂ ಅವಳೇ ಆಹ್ವಾನಿಸಿದ್ದಳು. ತಾನು ನಡೆಯುತ್ತಿರುವ ಹಾದಿಯ ಕೊನೆಯಲ್ಲಿ ಆಳವಾದ ನೋವಿನ ಕಂದರವಿದೆ. ತನ್ನನ್ನು ಆವರಿಸಿರುವ ಕಗ್ಗತ್ತಲೆಯಿಂದ ಪಾರಾಗಲು ಯಾವುದೇ ಉಪಾಯ ಇಲ್ಲ ಎಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು.
ಬಿರುಗಾಳಿ ಎದ್ದಾಗ ದಂಡೆಯಲ್ಲಿರುವುದನ್ನು ಬಿಟ್ಟು ನಾವೆಯೊಡನೆ ಸಾಗರಕ್ಕೆ ಇಳಿಯುವ ಮತಿಗೇಡಿಯನ್ನು ಮುಳುಗಿ ಸಾಯುವುದರಿಂದ ಕಾಪಾಡಲು ಯಾರಿಗೆ ಸಾಧ್ಯ? ಉರಿಯುವ ಕೆಂಡವನ್ನು ಅಂಗೈಯಲ್ಲಿ ಎತ್ತಿಕೊಂಡರೆ ಅಂಗೈ ಸುಟ್ಟೇ ಸುಡುವುದು. ಬೆಳಕು ಪಡೆಯುವ ಆಸೆಯಿಂದ ತನ್ನ ಮನೆಗೆ ಬೆಂಕಿ ಹಚ್ಚುವಂತ ಮೂರ್ಖನೇ ಸರಿ. ಉಪ್ಪು ತಿಂದವನು ನೀರನ್ನು ಕುಡಿಯಲೇ ಬೇಕು. ಮುಕುಂದ ಅವಳಿಗೆ ಎಂಥ ಕಠೋರ ಮಾತುಗಳನ್ನಾಡಿದ್ದ. ಅವನು ಅವಳ ಸ್ವಂತ ಮಗನೇ ಆಗಿದ್ದರೆ, ಈ ರೀತಿ ಕಠೋರವಾಗಿ ಮಾತನಾಡುತ್ತಿದ್ದನೇ? ಈ ಮನೆಯ ಪ್ರತಿಯೊಬ್ಬ ಸದಸ್ಯನೂ ಈಗ ಅವಳಿಗೆ ಏನು ಬೇಕಾದರೂ ಹೇಳಬಹುದಾಗಿತ್ತು. ಅವಳು ಅದನ್ನೆಲ್ಲ ಕೇಳಲೇ ಬೇಕಿತ್ತು. ಆ ಮನೆಯೊಡನೆ ಮತ್ತು ಆ ಮನೆಯ ಸದಸ್ಯರೊಡನೆ ಅವಳಿಗೆ ಯಾವ ಸಂಬಂಧವಿತ್ತು? ಅವಳಿಗೆ ಯಾರೊಡನೆ ಸಂಬಂಧವಿತ್ತೊ, ಆತ ಇದ್ದಕ್ಕಿದ್ದಂತೆ ಅವಳನ್ನು ತೊರೆದಿದ್ದ. ಸಾವಿನ ಕರಾಳ ಮುಷ್ಟಿಗೆ ಸಿಲುಕಿ, ಅವಳನ್ನು ಒಬ್ಬಂಟಿಯಾಗಿ ಅಳುವಂತೆ ಮಾಡಿ ಹೊರಟುಹೋಗಿದ್ದ. ಆರೇಳು ದಿನಗಳ ಮುಂಚೆಯಷ್ಟೇ ಈ ಘಟನೆ ನಡೆದಿತ್ತು.
ಈ ಆಘಾತದಿಂದ ಅವಳಿನ್ನೂ ಚೇತರಿಸಿಕೊಂಡಿರಲಿಲ್ಲ. ಅಷ್ಟರಲ್ಲೇ ಮುಕುಂದ ಅವಳ ಕೋಣೆಗೆ ನುಗ್ಗಿ ಬಂದು ಕಹಿಯಾಗಿ ಹೇಳಿದ್ದ.
“ಒಂದೆರಡು ದಿನಗಳಲ್ಲೇ ನೀವು ಈ ಮನೆ ಬಿಟ್ಟು ಹೊರಟುಹೋಗಿ. ನಾವು ಕೇವಲ ನಮ್ಮ ಅಪ್ಪಾಜಿಗಾಗಿ ನಿಮ್ಮನ್ನು ಇಲ್ಲಿ ಹೇಗೋ ಸಹಿಸಿಕೊಂಡಿದ್ದೆ,” ಮುಕುಂದನ ಸ್ವರದಲ್ಲಿ ಅಸಹ್ಯ ಮತ್ತು ರೋಷ ತುಂಬಿತ್ತು.
“ಮುಕುಂದ, ಮಗೂ ನನ್ನ ಮಾತು ಕೇಳಪ್ಪಾ…. ಮುಕುಂದ….. ಮುಕುಂದ….” ಅವಳು ಕೂಗುತ್ತಲೇ ಇದ್ದಳು. ಆದರೆ ಮುಕುಂದ ಅವಳ ಕಡೆ ತಿರುಗಿಯೂ ನೋಡದೆ ಹೊರಟುಹೋಗಿದ್ದ.
ಗೋಡೆಗೆ ತಲೆ ಚಚ್ಚಿಕೊಂಡು ಪ್ರಾಣ ಬಿಡಬೇಕೆನ್ನಿಸಿತವಳಿಗೆ. ಆದರೆ ಅವಳ ಪ್ರಾಣ ಇಷ್ಟು ಸುಲಭವಾಗಿ ಹೋಗುವುದೇ? ಜೀವನದಲ್ಲಿ ಇನ್ನೂ ಬಹಳಷ್ಟು ಲೆಕ್ಕ ಒಪ್ಪಿಸಬೇಕಾಗಿದೆಯಲ್ಲ…..
“ಸುಧಾ, ಏನು ಯೋಚಿಸ್ತಾ ಇದೀಯ? ನಿನಗೆ ಇದ್ದಕ್ಕಿದ್ದಂತೆ ಏನು ಆಗಿಬಿಡುತ್ತೆ…? ನಿನಗೆ ಇಲ್ಲಿ ಯಾವುದಕ್ಕೆ ಕೊರತೆ ಇದೆ ಹೇಳು ನೋಡೋಣ….” ರಾಜೀವನ ಸ್ವರ ಅವಳ ಕಿವಿಯಲ್ಲಿ ಮೊಳಗಿದಂತಾಯಿತು.
“ಇಲ್ಲವಲ್ಲ…. ನೀವಿರುವಾಗ ನನಗೆ ಯಾವುದರ ಕೊರತೆಯೂ ಇಲ್ಲ,” ಅವಳು ಹೇಳಿದಳು.
“ನಾನಿರುವಾಗ ಅಂದರೆ ಏನರ್ಥ? ನಾನು ಸತ್ತ ನಂತರ ನಿನಗೆ ಇಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಮುಕುಂದ, ಮಂಜುಳಾ ಇಬ್ಬರೂ ನಿನ್ನ ಮಕ್ಕಳೇ ತಾನೇ,” ರಾಜೀವ ಅವಳನ್ನು ಆಲಿಂಗಿಸಿಕೊಂಡಿದ್ದ. ಸುಧಾ ಏನನ್ನೂ ಹೇಳಿರಲಿಲ್ಲ. ಅವನ ಪ್ರೇಮದ ಎದುರು ಅವಳು ಮೊದಲಿನಿಂದಲೂ ತಲೆ ಬಾಗಿಸಿಬಿಡುತ್ತಿದ್ದಳು.
ರಾಜೀವನ ಪ್ರೇಮಪಾಶಕ್ಕೆ ಸಿಲುಕಿ ಅವಳು ಎಲ್ಲವನ್ನೂ ಮರೆತುಬಿಟ್ಟಿದ್ದಳು. ಮಾನ ಮರ್ಯಾದೆ, ನೀತಿ ನಿಯಮ, ಕಾಯಿದೆ ಕಾನೂನು ಎಲ್ಲವೂ ಅವಳ ಪಾಲಿಗೆ ಅರ್ಥಹೀನ ಎನಿಸಿದ್ದವು. ರಾಜೀವನೇ ಅವಳ ಪಾಲಿಗೆ ಸಮಸ್ತ ಆಗಿಬಿಟ್ಟಿದ್ದ. ವಿಶ್ವದ ಆಕರ್ಷಣೆಯೆಲ್ಲ ರಾಜೀವನಲ್ಲೇ ಕೇಂದ್ರೀಕೃತವಾಗಿದೆ ಎಂದು ಅವಳಿಗೆ ತೋರಿತ್ತು. ರಾಜೀವನೇ ಅವಳ ಸರ್ವಸ್ವವಾಗಿದ್ದ. ರಾಜೀವ ವಿವಾಹಿತ ಪುರುಷ ಎಂಬುದನ್ನು ಅವಳ ಕುರುಡು ಪ್ರೇಮ ಲೆಕ್ಕಿಸಲಿಲ್ಲ. ಅವನಿಗೆ ಇಬ್ಬರು ಮಕ್ಕಳೂ ಇದ್ದರು. ಅವನದೇ ಆದ ಚಿಕ್ಕ ಚೊಕ್ಕ ಸಂಸಾರವಿತ್ತು. ಇಷ್ಟೇ ಅಲ್ಲ, ರಾಜೀವ ಅವಳಿಗಿಂತ 15 ವರ್ಷ ದೊಡ್ಡವನಾಗಿದ್ದ. ವಯಸ್ಸಿನ ಈ ಅಗಾಧ ಅಂತರ ಅವಳಿಗೆ ದೊಡ್ಡ ವಿಷಯ ಎನಿಸಿರಲಿಲ್ಲ. ರಾಜೀವ ಅವಳಿಗೆ ತನ್ನ ಕಛೇರಿಯಲ್ಲಿ ಕ್ಲರ್ಕ್ ಕೆಲಸ ಕೊಡಿಸಿ ಮಹೋಪಕಾರ ಮಾಡಿದ್ದೇನೋ ನಿಜ. ಅನಾಥಳಾಗಿದ್ದ ಅವಳು ದೂರದ ಸಂಬಂಧಿಯಾದ ಅತ್ತೆಯ ಬಳಿ ಬೆಳೆದು ದೊಡ್ಡವಳಾಗಿದ್ದಳು. ಪದವೀಧರೆಯಾದ ನಂತರ ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಂಡು ಅಲೆದಾಡಿದಳು. ಮೂರು ವರ್ಷ ಅವಳು ನಿರುದ್ಯೋಗಿಯಾಗಿದ್ದಳು. ರಾಜೀವನ ಕಛೇರಿಯಲ್ಲಿ ಕೆಲಸ ಖಾಲಿ ಎಂದು ಎಂದು ತಿಳಿದು ಅವಳು ಒಂದು ಅರ್ಜಿ ಬರೆದು ತನ್ನ ಗೆಳತಿಯೊಬ್ಬಳ ಜೊತೆ ಸಂದರ್ಶನದ ಹಿಂದಿನ ದಿನದಂದು ರಾಜೀವನನ್ನು ಭೇಟಿಯಾದಳು.
“ಓಹೋ, ಹಾಗಾದರೇ ನೀವೇ ಏನು ಕುಮಾರಿ….” ರಾಜೀವ ಕೇಳಿದ್ದ.
“ಸುಧಾ,” ಅವಳು ಸಂಕೋಚದಿಂದ ಹೇಳಿದ್ದಳು.
“ನೋಡಿ ಸುಧಾ, ನಾನು ನಿಮಗೆ ಈ ಕೆಲಸ ದೊರಕಿಸಲು ಪ್ರಯತ್ನಿಸುತ್ತೇನೆ.”
“ಪ್ರಯತ್ನ ಅಂದರೆ ಆಗುವುದಿಲ್ಲ ಸರ್. ನೀವು ಈ ಕೆಲಸ ಮಾಡಿಕೊಡಲೇ ಬೇಕು,” ಸುಧಾಳ ಗೆಳತಿ ಒಂದೊಂದು ಪದವನ್ನೂ ಒತ್ತಿ ಹೇಳಿದಳು.
“ನಿಮ್ಮ ತಂದೆ ಎಲ್ಲಿ ಕೆಲಸ ಮಾಡುತ್ತಿದ್ದಾರೆ?”
“ಸರ್, ನನ್ನ ತಂದೆಯವರಿಲ್ಲ……”
“ಓಹ್….. ಹಾಗಾದರೆ ನೀವು ನಿಮ್ಮ ತಾಯಿಯವರ ಜೊತೆ ಇದ್ದೀರಾ? ನಿಮಗೆ ಸೋದರ ಸೋದರಿಯರು ಇದ್ದಾರಾ?”
“ಸರ್, ನನ್ನ ತಾಯಿಯವರೂ ಇಲ್ಲ. ಒಡಹುಟ್ಟಿದವರೂ ಇಲ್ಲ. ನಾನು ನನ್ನ ಸೋದರತ್ತೆಯವರ ಜೊತೆ ಇದ್ದೇನೆ,” ಹೇಳುತ್ತಿದ್ದಂತೆಯೇ ಸುಧಾಳ ಕಣ್ಣಾಲಿಗಳು ತುಂಬಿಬಂದವು.
“ದಯವಿಟ್ಟು ಕ್ಷಮಿಸಿ, ನಾನು ನಿಮ್ಮ ಮನಸ್ಸು ನೋಯಿಸಿಬಿಟ್ಟೆ,” ರಾಜೀವ ಗಂಭೀರವಾಗಿ ಹೇಳಿದ. ಕೊಂಚ ಕಾಲ ಮೌನ ನೆಲೆಸಿತು. ಆನಂತರ ರಾಜೀವ ಏನನ್ನೋ ಯೋಚಿಸಿ ಹೇಳಿದ, “ನಿಮ್ಮ ಕೆಲಸ ಖಂಡಿತಾ ಆಗುತ್ತದೆ ಸುಧಾ ಅವರೇ, ನೀವು ನಿಶ್ಚಿಂತರಾಗಿ ಹೋಗಿ ನಾಳೆಯ ಸಂದರ್ಶನಕ್ಕೆ ಬನ್ನಿ.”
ಮಾರನೆಯ ದಿನ ಸುಧಾ ಸಂದರ್ಶನಕ್ಕಾಗಿ ಕಛೇರಿ ತಲುಪಿದಳು. ಸಂದರ್ಶನಕ್ಕೆಂದು ಬಂದಿದ್ದ ಅಭ್ಯರ್ಥಿಗಳ ದೊಡ್ಡ ಸವಾಲನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಿಗಿಲಾದ ಅರ್ಹತೆ ಉಳ್ಳವರೇ ಆಗಿದ್ದರು. ರಾಜೀವ ತನ್ನ ಮಾತಿನಂತೆ ನಡೆದುಕೊಂಡಿದ್ದ. ಆ ಕೆಲಸ ಸುಧಾಳಿಗೇ ಸಿಕ್ಕಿತು. ಆ ದಿನವೇ ಸುಧಾ ರಾಜೀವನ ಔದಾರ್ಯದ ಹಂಗಿಗೆ ಒಳಗಾದಳು.
ಕ್ರಮೇಣ ಅವಳ ಮತ್ತು ರಾಜೀವನ ಪರಿಚಯ ಬೆಳೆಯಿತು. ರಾಜೀವ ಬಹಳ ಪರೋಪಕಾರಿ ಸ್ವಭಾವದವನೆಂದೂ ಅವಳಿಗೆ ತಿಳಿಯಿತು. ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡಲು ಅವನು ಸದಾ ಮುಂದಾಗುತ್ತಿದ್ದ. ಸುಧಾಳ ಪಾಲಿಗೆ ರಾಜೀವ ಆದರ್ಶ ವ್ಯಕ್ತಿ ಎನಿಸಿದ.
ಕೆಲವು ದಿನಗಳಿಂದ ಸುಧಾಳಿಗೆ ಮನದಲ್ಲಿ ಏನೋ ಒಂದು ತಳಮಳ. ಯಾವುದಾದರೂ ಕೆಲಸದ ಮೇಲೆ ಅವಳು ರಾಜೀವನ ಕೋಣೆಗೆ ಹೋದಾಗೆಲ್ಲ ರಾಜೀವನ ದೃಷ್ಟಿ ಅವಳ ಮೇಲೇ ಇರುತ್ತಿತ್ತು. ಅವಳನ್ನು ಕಂಡೊಡನೆ ರಾಜೀವನ ನೋಟದಲ್ಲಿ ಏನೋ ಹೊಸತನ ಮೂಡುತ್ತಿತ್ತು. ಒಂದು ದಿನ ಅವಕಾಶ ಸಾಧಿಸಿ ರಾಜೀವ ಅವಳ ಕೈ ಹಿಡಿದು ಬರಸೆಳೆದು ಅಪ್ಪಿಕೊಂಡ. ಅವಳು ತನ್ನನ್ನು ಅವನ ಬಾಹುಗಳಿಂದ ಬಿಡಿಸಿಕೊಳ್ಳುತ್ತ ಹೇಳಿದಳು, “ಇದೇನು ಮಾಡುತ್ತಿದ್ದೀರಿ? ಬಿಡಿ ನನ್ನನ್ನು.”
“ಸುಧಾ, ನಾನು ನಿನ್ನನ್ನು ಪ್ರೀತಿಸುತ್ತೇನೆ,” ರಾಜೀವ ತನ್ನ ಆಲಿಂಗನವನ್ನು ಮತ್ತಷ್ಟು ಬಿಗಿಗೊಳಿಸಿದ. ಆಗ ಸುಧಾ ಯಾವುದೇ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಆ ಕ್ಷಣದಲ್ಲೇ ಅವಳು ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಬೇಕಾಗಿತ್ತು. ಹಾಗೆ ಮಾಡಿದ್ದರೆ ಅವಳು ಈ ಸುಳಿಗೆ ಸಿಕ್ಕಿಬೀಳುತ್ತಿರಲಿಲ್ಲ. ಆಗ ಅವಳು ದುರ್ಬಲಳಾಗದಿದ್ದರೆ, ರಾಜೀವ ಮತ್ತೊಮ್ಮೆ ಅವಳ ತಂಟೆಗೆ ಬರುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಅದೇಕೋ ಏನೋ, ಸುಧಾ ದುರ್ಬಲಳಾಗಿಬಿಟ್ಟಿದ್ದಳು. ರಾಜೀವನೂ ಅವಳ ದುರ್ಬಲತೆಯ ದುರ್ಲಾಭ ಪಡೆದುಬಿಟ್ಟಿದ್ದ. ಆ ಘಟನೆಯ ನಂತರ ಸುಧಾ ಅಪರಾಧಿ ಮನೋಭಾವನೆಗೆ ಒಳಗಾದಳು.
ಒಂದು ದಿನ ರಾಜೀವ ಅವಳ ಹೆಗಲ ಮೇಲೆ ಕೈಯಿಡುತ್ತಾ, “ಸುಧಾ, ಏನು ಸಮಾಚಾರ? ಇತ್ತೀಚೆಗೆ ಮೌನ ಗೌರಿ ಆಗಿಬಿಟ್ಟಿದ್ದೀಯಲ್ಲ?” ಕೇಳಿದ.
“ನಿಮಗೆ ನಾನೇನೋ ತಿಳಿಸಬೇಕು…..”
“ಹೇಳು. ನನಗೆ ತುಂಬಾ ಸಂತೋಷವಾಗುತ್ತೆ. ನಿನಗೆ ಯಾವುದೇ ನೆರವು ನೀಡಲು ನಾನು ಸದಾ ಸಿದ್ಧ.”
“ನಿಮಗೆ ಈಗಾಗಲೇ ಮದುವೆಯಾಗಿದೆ. ನೀವು ಇಬ್ಬರು ಮಕ್ಕಳ ತಂದೆ ಕೂಡಾ. ನನಗಿಂತ ಹೆಚ್ಚು ವಯಸ್ಸಾದವರು. ನಿಮಗೇ ಗೊತ್ತು, ನಾವು ಎಲ್ಲೋ ಎಡವಿಬಿಟ್ಟಿದ್ದೇವೆ. ಆ ದಿನ ನಡೆದ್ದದನ್ನು ಮರೆತುಬಿಡಿ.”
“ಸುಧಾ, ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತೇನೆ. ನಾನು ವಿವಾಹಿತನೇ ಇರಬಹುದು, ಎರಡು ಮಕ್ಕಳ ತಂದೆಯೂ ಹೌದು. ವಯಸ್ಸಿನಲ್ಲಿ ನಿನಗಿಂತ ದೊಡ್ಡವನು. ಆದರೆ ಪ್ರೇಮ ಇದಾವುದನ್ನೂ ಲೆಕ್ಕಿಸುವುದಿಲ್ಲ.
“ವಯಸ್ಸಿನ ಮಹಾಪೂರ ಪ್ರೇಮದ ಅಣೆಕಟ್ಟನ್ನು ಮುರಿಯಲಾರದು. ಸುಧಾ, ಮದುವೆ ಆದವರಿಗೆ ಮನಸ್ಸು ಎಂಬುದು ಇರುದಿಲ್ಲವೇ? ಅವರು ಯಾರನ್ನೂ ಪ್ರೇಮಿಸಬಾರದೇ?” ರಾವಜೀ ಅವಳನ್ನೇ ನೆಟ್ಟ ನೋಟದಿಂದ ದೃಷ್ಟಿಸಿದ.
“ಆದರೆ ಹಾಗೆ ಮಾಡುವುದರಿಂದ ನೀವು ನಿಮ್ಮ ಹೆಂಡತಿ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುವುದು.”
“ಅನ್ಯಾಯ ಮಾಡುವವನು ನಾನು ತಾನೇ? ಅಪರಾಧಿ ಎನಿಸುವುದು ನಾನೇ ತಾನೇ? ಅದನ್ನೆಲ್ಲ ನಾನು ಸಹಿಸಿಕೊಳ್ಳುತ್ತೇನೆ. ನಿನ್ನನ್ನು ನಾನು ಬಿಡಲಾರೆ. ನೀನಿಲ್ಲದೆ ನಾನು ಬದುಕಿರಲಾರೆ,” ರಾಜೀವ ಭಾವಾವಿಷ್ಟನಾದ. ಅವನ ಕಣ್ಣಾಲಿಗಳು ತುಂಬಿ ಬಂದವು. ಅವನ ಕಣ್ಣೀರು ಕಂಡು ಸುಧಾ ವಿಚಲಿತಳಾಗಿಬಿಟ್ಟಳು. ಅವಳು ಮೆಲ್ಲನೆ, “ನಿಮಗೆ ಸರಿ ಕಂಡಂತೆ ಮಾಡಿ,” ಎಂದು ಹೇಳಿದಳು.
ಈಗ ಸುಧಾ ರಾಜೀವನ ಯಾವ ಮಾತನ್ನೂ ವಿರೋಧಿಸುತ್ತಿರಲಿಲ್ಲ. ತಾನು ಮಾಡುತ್ತಿರುವುದು ಸರಿಯಲ್ಲ ಎಂದು ಅವಳಿಗೆ ಚೆನ್ನಾಗಿ ತಿಳಿದಿತ್ತು. ಅವಳು ತಪ್ಪು ದಾರಿಯನ್ನು ಕ್ರಮಿಸುತ್ತಿದ್ದಾಳೆ. ಆದರೂ ರಾಜೀವನನ್ನು ತನ್ನ ಏಕಮಾತ್ರ ಪ್ರೇಮಿ ಎಂದು ಭಾವಿಸಿ ಬಂದದ್ದನ್ನೆಲ್ಲ ಎದುರಿಸುವ ನಿರ್ಧಾರ ಮಾಡಿದಳು. ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ವಿವೇಕ ಅವರನ್ನು ಬಡಿದೆಬ್ಬಿಸುತ್ತದೆ. ಅಂತೆಯೇ ಸುಧಾಳ ವಿವೇಕ ಅವಳನ್ನು ಬಡಿದೆಬ್ಬಿಸಿತ್ತು. ಆದರೆ ಅವಳು ವಿವೇಕದ ಧ್ವನಿಯನ್ನು ಕೇಳಿಯೂ ಕೇಳದಂತೆ ಇದ್ದುಬಿಟ್ಟಳು. ಅವಳ ಭಾವನೆಗಳು ದುರ್ಬಲಗೊಂಡವು. ತಪ್ಪು ಮಾಡುವ ವ್ಯಕ್ತಿ ಮೊದಮೊದಲು ಹೆದರಿಕೊಳ್ಳುತ್ತಾನೆ. ಆದರೆ ಆತ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುವಾಗ ತಪ್ಪು ಕೆಲಸ ಸಹಜವಾಗಿಬಿಡುತ್ತದೆ. ಸುಧಾಳಿಗೂ ಇದೇ ಅನುಭವವಾಯಿತು. ಈಗ ಅವಳಿಗೆ ರಾಜೀವನ ಪ್ರೇಮದಲ್ಲಿ ಮೈಮರೆಯುವುದು ಒಂದು ಅಪರಾಧ ಎನ್ನಿಸಿರಲಿಲ್ಲ. ಅದೊಂದು ಸಹಜ ಹಾಗೂ ಸ್ವಾಭಾವಿಕ ಕ್ರಿಯೆ ಎನಿಸಿಬಿಟ್ಟಿತ್ತು.
ರಾಜೀವ ಮತ್ತು ಸುಧಾ ನಡೆಯುತ್ತಿದ್ದ ಮಾರ್ಗಕ್ಕೆ ಯಾವುದೇ ನಿರ್ದಿಷ್ಟ ಗುರಿಯೂ ಇರಲಿಲ್ಲ. ಅವರಿಬ್ಬರ ಸಂಬಂಧ ಗಾಢವಾಗುತ್ತಿದ್ದಂತೆ, ಈ ಕಹಿಯಾದ ಸತ್ಯ ಎಲ್ಲರ ಕಣ್ಣಿಗೆ ರಾಚುವಂತಾಯಿತು. ವಿಷಯ ಸುಧಾಳ ಸೋದರತ್ತೆಯವರೆಗೂ ತಲುಪಿತು. ಅವರು ಸುಧಾಳಿಗೆ ಚೆನ್ನಾಗಿ ಬೈದು ತಿಳಿಹೇಳಿದರು. ಅವರು ಸುಧಾಳ ಮದುವೆಯನ್ನು ತಮ್ಮ ಗೆಳತಿಯ ಮಗ ವಿಶ್ವನಾಥನೊಡನೆ ಮಾಡಬೇಕೆಂದಿದ್ದರು. ಆದರೆ ಸುಧಾ ಅವರನ್ನು ಬಲವಾಗಿ ವಿರೋಧಿಸಿದಳು, “ಅತ್ತೆ, ನಾನು ಮದುವೆ ಆಗುದಿಲ್ಲವೆಂದು ನಿಮಗೆ ತಿಳಿಸಿ ಹೇಳಿದರೂ, ನಿಮಗೇಕೆ ಅರ್ಥವಾಗುತ್ತಿಲ್ಲ?”
“ಸುಧಾ, ರಾಜೀವನ ಗೃಹಸ್ಥ ಜೀವನಕ್ಕೆ ಕಿಚ್ಚು ಹಚ್ಚುವುದರಿಂದ ನಿನಗೇನು ಲಾಭ? ವಿಶ್ವನಾಥನನ್ನು ಮದುವೆಯಾಗಿ ನಿನ್ನದೇ ಸಂಸಾರ ಆರಂಭಿಸುವುದೇ ಲೇಸು.”
“ನನಗೆ ಯಾವ ಸಂಸಾರ ಬೇಡ. ಸಾಗರ ಬೇಡ. ನೀವು ನನ್ನ ಚಿಂತೆ ಬಿಟ್ಟುಬಿಡಿ.”
ಅತ್ತೆ ಅವಳಿಗೆ ಬುದ್ಧಿ ಹೇಳಿ ಹೇಳಿ ಸೋತುಹೋದರು. ತನ್ನ ಕಾಲಿನ ಮೇಲೆ ತಾನಾಗಿಯೇ ಕಲ್ಲು ಎತ್ತಿ ಹಾಕಿಕೊಳ್ಳುತ್ತೇನೆಂದರೆ ಯಾರಾದರೂ ಏನು ಮಾಡಿಯಾರು?
ಗಾಳಿ ಸುದ್ದಿ ರಾಜೀನ ಪತ್ನಿ ರೂಪಾಳ ಕಿವಿಗೂ ತಲುಪಿತು. ರೂಪಾ ಹಳ್ಳಿಗಾಡಿನಿಂದ ಬಂದಿದ್ದ ಅಶಿಕ್ಷಿತ, ಸರಳ ಸ್ತ್ರೀ. ಅವಳು ರಾಜೀವನ ಕಾಲಿಗೆ ಬಿದ್ದು ಅಂಗಲಾಚಿ ಬೇಡಿಕೊಂಡಳು. ಮಕ್ಕಳ ಬಗ್ಗೆ ಕಿಂಚಿತ್ತಾದರೂ ಚಿಂತಿಸಬೇಕೆಂದು ಪ್ರಾರ್ಥಿಸಿದಳು. ಆದರೆ ಯಾವುದೂ ಫಲಕಾರಿಯಾಗಲಿಲ್ಲ. ರಾಜೀವ ಸುಧಾಳೊಡನೆ ತನ್ನ ಅನೈತಿಕ ಸಂಬಂಧವನ್ನು ಒಪ್ಪಿಕೊಂಡಿದ್ದ. ತಾನು ಸುಧಾಳನ್ನು ತೊರೆಯಲಾರೆ ಎಂದು ರೂಪಾಳಿಗೆ ಸ್ಪಷ್ಟಪಡಿಸಿದ್ದ.
ಆರೇಳು ವರ್ಷ ಹೀಗೆ ಉರುಳಿಹೋದವು. ಒಂದು ದಿನ ಸುಧಾಳ ಸೋದರತ್ತೆ ನಿಧನರಾದರು. ಈಗ ಸುಧಾ ಏಕಾಂಗಿಯಾಗಿಬಿಟ್ಟಳು.
“ಸುಧಾ, ನಿನ್ನ ಸಾಮಾನೆಲ್ಲ ತಗೊಂಡು ನನ್ನ ಮನೆಯಲ್ಲೇ ಬಂದಿರು,” ರಾಜೀವನ ಮಾತು ಕೇಳಿ ಸುಧಾ ವಿಸ್ಮಿತಳಾದಳು.
“ಇದೇನು ಹೇಳುತ್ತಿದ್ದೀರಿ?”
“ಸರಿಯಾದುದನ್ನೇ ಹೇಳ್ತಾ ಇದೀನಿ. ಈಗ ನೀನು ನಮ್ಮೊಡನೆಯೇ ಇರ್ತೀ,” ರಾಜೀವನ ಈ ದುರಾಗ್ರಹಕ್ಕೆ ಸಮ್ಮತಿಸಿ ಸುಧಾ ಅತ್ಯಂತ ದೊಡ್ಡ ತಪ್ಪು ಮಾಡಿದಳು. ಅವಳು ತನ್ನ ಸಾಮಾನು, ಸರಂಜಾಮುಗಳೊಡನೆ ರಾಜೀವನ ಮನೆಗೆ ಬಂದಾಗ ದೊಡ್ಡ ಗಲಾಟೆಯೇ ಆಯಿತು.
“ನೋಡಿ, ಈ ಹಾಳು ಮೂಳು ಸಾಮಾನೆಲ್ಲ ಎತ್ತಿ ಹೊರಗೆ ಬಿಸಾಡಿ. ನೀವು ಆಫೀಸಿನಲ್ಲಿ ಮತ್ತು ಮನೆ ಹೊರಗೆ ಏನು ಮಾಡ್ತಿದ್ದೀರಿ ಎಂದು ಗೊತ್ತಿದ್ದೂ ನಾನು ಸಹಿಸಿಕೊಂಡೇ ಇದ್ದೆ. ಆದರೆ ನೀವು ನಿಮ್ಮ ಈ ಸೂಳೆಯನ್ನು ಮನೆಗೇ ಕರೆತಂದು ನನ್ನ ಕಣ್ಣೆದುರು…..” ರೂಪಾ ಮಾತು ಮುಗಿಸುವುದರೊಳಗೆ ರಾಜೀವ ಅವಳ ಕೆನ್ನೆಗೆ ಬಲವಾಗಿ ಬೀಸಿ ಹೊಡೆದ.
“ಇನ್ನು ಒಂದೇ ಒಂದು ಶಬ್ದ ಹೊರಬಂದೀತು ಹುಷಾರ್!,” ಎಂದು ಗರ್ಜಿಸಿದ್ದ.
“ಹೇಳ್ತೀನೀರಿ, ಹೇಳಿಯೇ ಹೇಳ್ತೀನಿ. ನನ್ನ ಬಾಯಿ ಮುಚ್ಚಿಸಲಿಕ್ಕೆ ನಿಮ್ಮಿಂದ ಸಾಧ್ಯವಿಲ್ಲ. ಇದು ಸಂಸಾರಸ್ಥರ ಮನೆ. ಸೂಳೆಗೇರಿ ಅಲ್ಲ! ನೀವು ಇಲ್ಲಿ ಚೆಲ್ಲಾಟ ಆಡಲು ನಾನು ಅವಕಾಶ ಕೊಡೋದಿಲ್ಲ.”
ಕೋಪ ಉಕ್ಕೇರಿ ರಾಜೀವ ಮತ್ತೆ ರೂಪಾಳ ಮೇಲೆ ಕೈಮಾಡಿದ. ಆದರೆ ಸುಧಾ ಅವನಿಗೆ ಅಡ್ಡ ಬಂದಳು. ಹೇಗೋ ರಾಜೀವನನ್ನು ಶಾಂತಗೊಳಿಸಿದಳು. ರೂಪಾ ತನ್ನ ಹಕ್ಕುಗಳಿಗಾಗಿ ರಾಜೀವನೊಡನೆ ಬಹುಕಾಲ ಹೋರಾಟ ನಡೆಸಿದಳು. ಸುಧಾಳನ್ನು ಬಾಯಿಗೆ ಬಂದಂತೆ ನಿಂದಿಸಿದಳು.
ಒಮ್ಮೆಯಂತೂ ಅವಳು ತನ್ನ ಈರ್ಷ್ಯೆ, ದ್ವೇಷ ಎಲ್ಲವನ್ನೂ ಮರೆತು ಸುಧಾಳ ಮುಂದೆ ಅತಿ ದೈನ್ಯತೆಯಿಂದ, “ನೀನೂ ಒಂದು ಹೆಣ್ಣಾಗಿ ಹೆಣ್ಣಿನ ನೋವನ್ನು ಅರ್ಥ ಮಾಡಿಕೊಳ್ಳಲಾರೆಯಾ? ನನ್ನ ಗಂಡನಂತೂ ಮೋಹದಿಂದ ಕುರುಡನಾಗಿದ್ದಾರೆ ಎಂದರೆ ನಿನಗೇನು ಬಂತು ಕೇಡು? ಇಲ್ಲಿರುವುದರಿಂದ ನಿನಗೇನು ಸಿಕ್ಕೀತು? ಹೋಗಿ ನಿನ್ನದೇ ಮನೆ ಮಠ ಮಾಡಿಕೋ…. ಬೇರೊಂದು ಮನೆಯನ್ನೇಕೆ ಹಾಳು ಮಾಡುತ್ತಿದೀಯ? ನಿನಗೆ ಕೈ ಮುಗೀತೀನಿ, ಇಲ್ಲಿಂದ ಹೊರಟುಹೋಗು!” ಎಂದು ಬೇಡಿಕೊಂಡಳು.
ರೂಪಾಳ ಆಕ್ರಂದನ ಸುಧಾಳ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ತಮ್ಮ ವಿವೇಕವನ್ನೇ ಹತ್ಯೆ ಮಾಡಿದವರಿಗೆ, ರೋಮ ರೋಮದಲ್ಲೂ ಭೋಗಾಲಸೆ ವಿಷದಂತೆ ಹಬ್ಬಿರುವವರಿಗೆ ಬೇರೊಬ್ಬರ ಕಣ್ಣೀರಿನಿಂದ ಮನಸ್ಸು ಪರಿವರ್ತನೆ ಆಗುವುದೇ? ರೂಪಾಳ ಕಣ್ಣೀರನ್ನು ಸುಧಾ ಲೆಕ್ಕಿಸಲಿಲ್ಲ. ಅದೇ ಮನೆಯಲ್ಲಿ ಇಚ್ಚಾನುಸಾರ ಇರತೊಡಗಿದಳು.
ಅನೇಕ ದಿನಗಳಿವರೆಗೆ ರೂಪಾ, ಮುಕುಂದ ಮತ್ತು ಮಂಜುಳಾ ಸುಧಾಳನ್ನು ತಮ್ಮ ಮನೆಯ ಸದಸ್ಯಳೆಂದು ಅಂಗೀಕರಿಸಲಿಲ್ಲ. ಆದರೆ ರಾಜೀವನ ಹಠದಿಂದಾಗಿ ಸಮಸ್ಯೆಯ ಪರಿಹಾರ ಸಾಧ್ಯವಾಗಲಿಲ್ಲ. ಆದ್ದರಿಂದ ಆ ಮೂವರೂ ಶಾಂತರಾಗಲೇ ಬೇಕಾಯಿತು. ಸುಧಾಳಿಂದಾಗಿ ಅವರ ಪರಿವಾರದ ವಿಷಯ ಊರವರ ಚರ್ಚೆಗೆ ಗ್ರಾಸವಾಯಿತು. ಜನರು ಸುಧಾಳನ್ನು ರಾಜೀವನ ಉಪಪತ್ನಿ ಎನ್ನತೊಡಗಿದರು. ಅವಳಿಗೆ ರಾಜೀವನೊಡನೆ ಯಾವ ಸಂಬಂಧವಿತ್ತು? ಯಾವ ಅಧಿಕಾರದಿಂದ ಅವಳು ರಾಜೀವನ ಮನೆಯಲ್ಲಿ ವಾಸಿಸಲು ಬಂದಿದ್ದಳೋ ಸ್ವಯಂ ಅವಳಿಗೇ ಗೊತ್ತಿರಲಿಲ್ಲ.
ದಿನಗಳು ಉರುಳಿದವು. ಇದೊಂದು ಸಾಧಾರಣ ವಿಷಯವಾಗಿ ಹೋಯಿತು. ರಾಜೀವನ ಹಠದಿಂದಾಗಿ ಸುಧಾ ಆ ಪರಿವಾರದ ಮತ್ತೊಬ್ಬ ಸದಸ್ಯಳಂತೆ ಇರತೊಡಗಿದಳು. ಈಗ ಅವಳು ಪರಕೀಯಳಂತೆ ಅಲ್ಲ, ಅಧಿಕಾರದಿಂದಲೇ ಮನೆಯಲ್ಲೆಲ್ಲ ಓಡಾಡತೊಡಗಿದಳು. ಯಾರೊಬ್ಬರೂ ಅವಳಿಗೆ ಏನನ್ನೂ ಹೇಳುತ್ತಿರಲಿಲ್ಲ.
ರಾಜೀವನ ಆಸರೆಯಿಂದಾಗಿ ಅವಳು ಅನೇಕ ವರ್ಷಗಳವರೆಗೆ ಈ ರೀತಿ ಅಧಿಕಾರಪೂರ್ವಕವಾಗಿ ಆ ಮನೆಯಲ್ಲಿದ್ದಳು. ಮಂಜುಳಾ ಮತ್ತು ಮುಕುಂದರ ಮದುವೆಯೂ ಆಯಿತು. ಇಬ್ಬರ ಮಾವನ ಮನೆಯವರೂ ಸುಧಾಳನ್ನು ತಿರಸ್ಕಾರದಿಂದ ಕಂಡಿದ್ದರು. ಮಂಜುಳಾಳ ಗಂಡನಂತೂ ಸುಧಾಳನ್ನು ಮಾತೇ ಆಡಿಸಲಿಲ್ಲ. ಮುಕಂದನ ಹೆಂಡತಿ ಮಧೂ ಕೂಡಾ ಹಾಗೇ ಮಾಡಿದ್ದಳು.
ಮುಕುಂದನ ಹೆಂಡತಿಗೆ ಗಂಡು ಮಗುವಾದಾಗ, ತಾತ ಅನಿಸಿಕೊಂಡ ರಾಜೀವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವನು ತನ್ನ ಮೊಮ್ಮಗನೊಡನೆ ದಿನವೆಲ್ಲಾ ಆಡುತ್ತಿದ್ದ. ಮಗುವನ್ನು ಸುಧಾಳ ಮಡಿಲಲ್ಲಿ ಕುಳ್ಳಿರಿಸಿ ಅದಕ್ಕೆ ಹಾಲು ಕುಡಿಸುತ್ತಿದ್ದ, ಊಟ ಮಾಡಿಸುತ್ತಿದ್ದ. ಮಧೂ ಏನಾದರೂ ನೆಪ ಮಾಡಿಕೊಂಡು ಅಲ್ಲಿಗೆ ಬಂದು ಮಗುವನ್ನು ಎತ್ತಿಕೊಂಡು ಓಡುತ್ತಿದ್ದಳು. ಆಗೆಲ್ಲ ಸುಧಾಳಿಗೆ ತಾನು ರಾಜೀವನೊಡನೆ ಈ ರೀತಿಯ ಸಂಬಂಧ ಬೆಳೆಸಿ ಮಹಾಪರಾಧ ಮಾಡಿದೆ ಎನ್ನಿಸುತ್ತಿತ್ತು.
ಆ ಮಹಾಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಅವಳಿಂದ ಸಾಧ್ಯವಿರಲಿಲ್ಲ. ಅವಳೀಗ ಮಧ್ಯವಯಸ್ಕಳಾಗಿದ್ದಳು. ಈಗ ರಾಜೀವನನ್ನು ಬಿಟ್ಟು ಬೇರೆಲ್ಲಾದರೂ ಹೋಗುವುದೂ ಸಾಧ್ಯವಿರಲಿಲ್ಲ. ಇಷ್ಟೊಂದು ವರ್ಷಗಳಿಂದ ನಡೆಸಿಕೊಂಡು ಬಂದ ಅಪರಾಧಕ್ಕಾಗಿ ನಾಚಿಕೆ, ಆತ್ಮಗ್ಲಾನಿಯ ಭಾವ ಲವಲೇಶವೂ ಅವಳಲ್ಲಿರಲಿಲ್ಲ.
ರಾಜೀವನೊಡನೆ ಸಂಬಂಧ ಬೆಳೆಸಿ ಅವಳು ತನ್ನದೇ ಆದ ಒಂದು ಸುಂದರ ಸಂಸಾರ ಹೂಡಬೇಕೆಂಬ ಆಸೆಯನ್ನೂ ತೊರೆದಿದ್ದಳು. ಆದರೆ ಆ ಸಂಬಂಧವೇ ಅವಳನ್ನು ಇಂಥ ನೋವಿನ ನೆರಳಿಗೆ ದಬ್ಬುವುದೆಂದು ಅವಳಿಗೆ ತಿಳಿದಿರಲಿಲ್ಲ. ಸಮಾಜದ ಮಾನ್ಯತೆ ಪಡೆಯದ, ಕೇವಲ ಕಾಮಾಲಾಸೆಯ ಪೂರೈಕೆಗಾಗಿ ಸ್ಥಾಪಿತವಾದ ಸಂಬಂಧದ ಅಂತಿಮ ಪರಿಣಾಮ ಇಂದು ಸುಧಾಳ ಬದುಕಿಗಾದಂತೆಯೇ ಆಗುತ್ತದೆ. ರಾಜೀವನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಯಿತು. ಎರಡು ತಿಂಗಳು ನರಳಾಡಿ ರಾಜೀವ ಸತ್ತುಹೋದ.
ಈಗ ಸುಧಾಳ ಪಾಲಿಗೆ ಏನೂ ಉಳಿದಿರಲಿಲ್ಲ. ಈಗಂತೂ ಅವಳು ಈ ಮನೆಯನ್ನು ತೊರೆಯಲೇಬೇಕಾಗಿತ್ತು. ರಾಜೀವನೊಡನೆ ಅವಳು ಇಷ್ಟೊಂದು ವರ್ಷ ಬಾಳ್ವೆ ನಡೆಸಿದ್ದರೂ, ಮುಕುಂದ ಅವಳನ್ನು ಮನೆಬಿಟ್ಟು ಹೋಗುವಂತೆ ಹೇಳಿದ್ದ. ಎಲ್ಲಿಗೆ ಹೋಗುವುದೆಂದು ಸುಧಾಳಿಗೆ ಸಮಸ್ಯೆಯಾಯಿತು. ತಾನು ನಡೆಯುತ್ತ ಬಂದ ದಾರಿಯ ಕೊನೆ ಏನೆಂಬುದನ್ನು ಅವಳು ಯೋಚಿಸಿರಲಿಲ್ಲ. ಅವಳದೆಂದು ಹೇಳಿಕೊಳ್ಳಲು ಮನೆಯೂ ಇರಲಿಲ್ಲ, ಪರಿವಾರ ಇರಲಿಲ್ಲ. ಅವಳು ಸತ್ತರೆ ಅವಳ ಬಾಯಿಗೆ ಎರಡು ಹನಿ ನೀರು ಹಾಕುವವರೂ ಯಾರೂ ಇರಲಿಲ್ಲ. ಈಗ ಅವಳಿಗೆ ತಾನು ಮಾಡಿದ ಒಂದೊಂದು ತಪ್ಪೂ ನೆನಪಾಗುತ್ತಿತ್ತು. ಸೊದರತ್ತೆಯ ಮಾತು ಕೇಳಿ ಅವಳು ವಿಶ್ವನಾಥನನ್ನೇ ಮದುವೆಯಾಗಿದ್ದರೆ, ಅವಳದೇ ಆದ ಮನೆ, ಮಕ್ಕಳೂ ಇರುತ್ತಿದ್ದರು.
ವರ್ಷಗಳಿಂದ ಅವಳು ಅದುಮಿಟ್ಟಿದ್ದ ಧ್ವನಿ ಈಗ ಪ್ರಬಲವಾಗಿ ಮೊಳಗುತ್ತಿತ್ತು. `ನೀನು ಮಾಡಿದ ಕರ್ಮದ ಫಲವನ್ನು ಈಗ ನೀನೇ ಅನುಭವಿಸು!’ ಈಗ ಪ್ರಪಂಚದಲ್ಲಿ ಸುಧಾ ಒಬ್ಬ ಅಸಹಾಯಕ ಹೆಣ್ಣು. ನೋವಿನ ಕರಾಳ ನೆರಳು ಅವಳತ್ತ ಓಡೋಡಿ ಬರುತ್ತಿತ್ತು. ಈ ಭಯಾನಕ ನೋವಿನಿಂದ ಅವಳನ್ನು ಕಾಪಾಡುವವರು ಇಡೀ ಪ್ರಪಂಚದಲ್ಲೇ ಯಾರೊಬ್ಬರೂ ಇರಲಿಲ್ಲ.