ಮಹಾತ್ಮ ಗಾಂಧಿಯವರು ಒಂದು ಮಾತು ಹೇಳಿದ್ದರು, “ನಾನು ಒಂದು ದಿನದ ಮಟ್ಟಿಗಾದರೂ ಆಡಳಿತದ ಚುಕ್ಕಾಣಿ ಹಿಡಿದರೆ, ಯಾವುದೇ ಗೌರವ ಧನ ಪಡೆಯದೆ ಮದ್ಯದಂಗಡಿ ಮತ್ತು ಅದರ ಕಾರ್ಖಾನೆಗಳನ್ನು ಮುಚ್ಚಿಸಿಬಿಡುತ್ತೇನೆ!”

ಗಾಂಧೀಜಿಯವರು ಅತ್ಯಂತ ತಿಳಿವಳಿಕೆಯಿಂದ ಈ ಮಾತನ್ನು ಹೇಳಿದ್ದರು. ಏಕೆಂದರೆ ಕುಟುಂಬಗಳು ಹಾಳಾಗಲು ಮದ್ಯವೇ ಮುಖ್ಯ ಕಾರಣ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಕೆಲವು ತಿಂಗಳುಗಳ ಹಿಂದಷ್ಟೇ ಕೇರಳ ಸರ್ಕಾರ ಮದ್ಯ ನಿಷೇಧಿಸಿ ಈ ಚರ್ಚೆಗೆ ಮತ್ತೊಮ್ಮೆ ಇಂಬುಕೊಟ್ಟಿತು.

ಭಾರತದಲ್ಲಿ ಸ್ವಾತಂತ್ರ್ಯಾನಂತರ ಈವರೆಗೆ ಅನೇಕ ರಾಜ್ಯ ಸರ್ಕಾಗಳು ಮದ್ಯ ನಿಷೇಧದ ಪ್ರಯತ್ನ ಮಾಡಿ ಸೋತುಹೋದವು. ಇದರರ್ಥ ಇಷ್ಟೇ, ಯಾವುದೇ ರಾಜ್ಯ ಸರ್ಕಾರಗಳು ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ. ಯಾವ ಯಾವ ರಾಜ್ಯ ಸರ್ಕಾರಗಳು ಮದ್ಯದ ಮೇಲೆ ನಿಷೇಧ ಹೇರಿದ್ದಿ, ಅಲ್ಲಿ ಮದ್ಯ ಮಾರಾಟ ಕಳ್ಳ ಮಾರ್ಗದಲ್ಲಿ ನಡೆದಿತ್ತು ಹಾಗೂ ಅನೇಕ ಅನಾಹುತಗಳು ನಡೆದಿರುವುದು ಜಗಜ್ಜಾಹೀರು.

ದೇಶದಲ್ಲಿ ಎಲ್ಲಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಕೂಡ ಸಲ್ಲಿಸಲಾಗಿತ್ತು. 1950ರಲ್ಲಿ ಅಂದಿನ ಮುಂಬೈ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯವರು ರಾಜ್ಯದಲ್ಲಿ ಮದ್ಯದ ಮೇಲೆ ನಿಷೇಧ ಹೇರಿದ್ದರು. ಆಗ ಒಬ್ಬರು ವೈಯಕ್ತಿಕ ಸ್ವಾತಂತ್ರ್ಯದ ಆಧಾರದ ಮೇಲೆ ಈ ಅಧಿನಿಯಮದ ವಿರುದ್ಧ ಸುಪ್ರಿಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.

ಸರ್ವೋಚ್ಚ ನ್ಯಾಯಾಲಯ, ದಿ ಸ್ಟೇಟ್‌ ಆಫ್‌ ಬಾಂಬೆ V/S ಎಫ್‌.ಎನ್‌. ಬಾಲ್ಸರಾ ಪ್ರಕರಣ ಕುರಿತಂತೆ 1951ರಲ್ಲಿ ತೀರ್ಪು ನೀಡುತ್ತ ಪರಿಚ್ಛೇದ 47ರ ಬಗ್ಗೆ ವಿಸ್ತಾರವಾಗಿ ಉಲ್ಲೇಖ ಮಾಡಿತ್ತು. ಇದರ ಸಾರಾಂಶ ಇಷ್ಟೆ, ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಜೀವನ ಮತ್ತು ಸ್ವಾತಂತ್ರ್ಯದ ಮೌಲಿಕ ಹಕ್ಕು ಹಾಗೂ ರಾಜ್ಯದ ಮುಖಾಂತರ ಮದ್ಯ ನಿಷೇಧ ಮಾಡುವಲ್ಲಿ ಯಾವುದೇ ವಿರೋಧ ಇಲ್ಲ. ಜೊತೆಗೆ ಆ ನ್ಯಾಯಾಲಯ ಆಲ್ಕೋಹಾಲ್‌ನ್ನು ಔಷಧೀಯ ರೂಪದಲ್ಲಿ ಬಳಕೆ ಮತ್ತು ಸ್ವಚ್ಚತೆಯ ರಾಸಾಯನಿಕವಾಗಿ ಬಳಸಲು ಅನುಮತಿ ನೀಡಿತು.

ಎಲ್ಲಿ ನಿರ್ಬಂಧವೋ, ಅಲ್ಲಿ ಅನಾಹುತ

ದೇಶದಲ್ಲಿ ಗುಜರಾತ್‌, ಮಿಜೋರಾಂ ಹಾಗೂ ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಮದ್ಯದ ಮೇಲೆ ಸಂಪೂರ್ಣ ನಿಷೇಧವಿದೆ. ಗುಜರಾತ್‌ನಲ್ಲಂತೂ ಸ್ವಾತಂತ್ರ್ಯಾನಂತರದಿಂದಲೇ ಮದ್ಯದ ಮೇಲೆ ನಿಷೇಧವಿದೆ. ಖೇದದ ಸಂಗತಿಯೆಂದರೆ, ಅಲ್ಲಿ ಸಹಜವಾಗಿಯೇ ಮದ್ಯ ಲಭಿಸುತ್ತದೆ. ಪೊಲೀಸರು ಅಲ್ಲಿ ಪ್ರತಿ ವರ್ಷ 125 ಕೋಟಿ ರೂ. ಮೊತ್ತದ ಅನಧಿಕೃತ ಮದ್ಯ ವಶಪಡಿಸಿಕೊಳ್ಳುತ್ತಾರೆಂದರೆ, ಮದ್ಯದ ಹಾವಳಿ ಎಷ್ಟಿರಬಹುದು ಎಂಬುದನ್ನು ಅಂದಾಜು ಮಾಡಬಹುದು.

ಪ್ರತಿ ವರ್ಷ ಕಳ್ಳಭಟ್ಟಿ ಮದ್ಯ ಸೇವನೆಯಿಂದ ನೂರಾರು ಜನ ಸಾವಿಗೀಡಾಗುತ್ತಾರೆ. 2009ರಲ್ಲಿ ಗುಜರಾತ್‌ನಲ್ಲಿ ವಿಷಪೂರಿತ ಮದ್ಯ ಸೇವಿಸಿ 148 ಜನ ಸಾವಿಗೀಡಾಗಿದ್ದರು.

ಮಿಜೋರಾಂ ರಾಜ್ಯದಲ್ಲಿ 1996ರಲ್ಲಿ ಮದ್ಯದ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಆಗಸ್ಟ್ 2014ರಲ್ಲಿ ಮದ್ಯ ನಿಷೇಧ ಹಿಂದೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಮದ್ಯ ನಿಷೇಧದಿಂದ ಲಾಭಕ್ಕಿಂತ ಹಾನಿಯೇ ಜಾಸ್ತಿ ಎನ್ನುವುದು ಆ ರಾಜ್ಯ ಸರ್ಕಾದ ಹೇಳಿಕೆ. ನಾಗಾಲ್ಯಾಂಡ್‌ನಲ್ಲೂ ಸಹ ಹೆಚ್ಚು ಕಡಿಮೆ ಇದೇ ಸಮಯದಿಂದಲೇ ಮದ್ಯ ನಿಷೇಧ ಜಾರಿಯಲ್ಲಿದೆ. ಆ ರಾಜ್ಯದ ಮುಖ್ಯಮಂತ್ರಿ ಇತ್ತೀಚಿಗೆ ಹೇಳಿಕೆ ನೀಡುತ್ತ ಮದ್ಯ ನಿಷೇಧದ ಬಗ್ಗೆ ಪುನಃ ಯೋಚಿಸಲಾಗುತ್ತಿದೆ ಎಂದರು.

ಕೇರಳ ಸರ್ಕಾರ ಕೂಡ 2014ರಲ್ಲಿ ಹಂತ ಹಂತವಾಗಿ ಮದ್ಯ ನಿಷೇಧ ಮಾಡುವ ನಿರ್ಧಾರ ಕೈಗೊಂಡಿದೆ. ದೇಶದಲ್ಲಿಯೇ ಅತಿ ಹೆಚ್ಚು ಮದ್ಯ ಮಾರಾಟ ಆಗುವುದು ಕೇರಳದಲ್ಲಿ. ಅಲ್ಲಿನ ಬೊಕ್ಕಸಕ್ಕೆ ಶೇ.22ರಷ್ಟು ಆದಾಯ ಬರುವುದು ಮದ್ಯದಿಂದಲೇ. ಮದ್ಯ ನಿಷೇಧದಿಂದ ಇಲ್ಲಿನ ಪ್ರವಾಸೋದ್ಯಮ ಚಟುವಟಿಕೆಯ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಕಠೋರ ನಿರ್ಧಾರದ ಅವಶ್ಯಕತೆ

ಎಲ್ಲಿಯವರೆಗೆ ಸರ್ಕಾರದ ನಿರ್ಧಾರಗಳು ಅಚಲವಾಗಿರುತ್ತವೆ, ಅಲ್ಲಿಯವರೆಗೆ ಮದ್ಯ ವ್ಯಸನಕ್ಕೆ ಸಿಲುಕಿದವರನ್ನು ರಕ್ಷಿಸಲು ಸಾಧ್ಯವೇ ಇಲ್ಲ. ಅದೇ ರೀತಿ ಬೀದಿ ಬೀದಿಗಳಲ್ಲಿ ಮದ್ಯದಂಗಡಿ ತೆರೆಯುತ್ತಾ ಹೋದರೆ ಜನ ಹೆಚ್ಚೆಚ್ಚು ಕುಡಿಯಬಹುದು. ಎಲ್ಲಿ ಮದ್ಯ ನಿಷೇಧದ ನಾಟಕ ಮಾಡಲಾಗುತ್ತೋ ಅಲ್ಲಿ ಅಕ್ರಮ ಮಾರಾಟ ದಂಧೆ ಚಿಗುರೊಡೆಯುತ್ತದೆ, ಕಳಪೆ ಗುಣಮಟ್ಟದ ಮದ್ಯ ಮಾರಾಟವಾಗತೊಡಗುತ್ತದೆ. ಅದೇ ಮಾರಣಾಂತಿಕವಾಗಿ ಪರಿಣಮಿಸಬಹುದು. ಕುಡಿತಕ್ಕೆ ತುತ್ತಾದ ಜನರು ಹೆಚ್ಚು ಹಣ ಕೊಟ್ಟು ಕಳಪೆ ಗುಣಮಟ್ಟದ ಮದ್ಯಸೇವನೆ  ಮಾಡುತ್ತಾರೆ. ಅವರು ಕ್ರಮೇಣ ಸಾವಿಗೆ ಹತ್ತಿರವಾಗುತ್ತಾರೆ.

ಹೀಗಾಗಿ ವ್ಯಕ್ತಿಗಿಂತ ಹೆಚ್ಚಾಗಿ ಸರ್ಕಾರ ಕಠೋರ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತ ಸಿಂಗಪೂರ್‌ನಿಂದ ಕಲಿಯಬೇಕಾಗಿದೆ. ಅಲ್ಲಿ ಸಿಗರೇಟು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಲ್ಲಿ ಸಿಗರೇಟು ದರವನ್ನು ಬೇರೆ ದೇಶಗಳಿಗಿಂತ 7 ಪಟ್ಟು ಹೆಚ್ಚಿಸಿದೆ. ಈ ಕಾರಣದಿಂದಾಗಿ ಜನ ಸಿಗರೇಟು ಸೇದುವುದನ್ನು ಕಡಿಮೆ ಮಾಡಿದ್ದಾರೆ. ಸಿಗರೇಟ್‌ ಪ್ಯಾಕೆಟ್‌ಗಳ ಮೇಲೆ ಭಯಾನಕ ಎಚ್ಚರಿಕೆ

ಪ್ರಕಟಿಸುವುದರ ಮೂಲಕ ಸಾರ್ವಜನಿಕರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರನ್ನು ಎಲ್ಲೆಂದರಲ್ಲಿ ಪ್ಯಾಕೆಟ್‌ ಎಸೆಯುವವರನ್ನು ಜೈಲಿಗೆ ಕಳಿಸಲಾಗುತ್ತದೆ. ಇದರಿಂದ ಜನರಲ್ಲಿ ಹೆದರಿಕೆ ಮನೆ ಮಾಡಿದೆ.

ನಮ್ಮಲ್ಲಿ ಮಾತ್ರ ಇದು ತದ್ವಿರುದ್ಧ. ಸಿಗರೇಟ್‌ ಸೇದುವುದನ್ನು ತಡೆಯುವುದಿರಲಿ, ಅದನ್ನು ಸುಲಭವಾಗಿ ಎಲ್ಲೆಂದರಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರಿಂದ ಸಾಮಾಜಿಕ ಆರೋಗ್ಯ ಕೆಡುವುದು ಸಹಜವಾಗಿದೆ. ಸಿಗರೇಟ್‌, ಬೀಡಿಗಳ ಲಭ್ಯತೆ ಕಡಿಮೆ ಮಾಡಿದರೆ ಜನರನ್ನು ಅದರ ಸೇವನೆಯಿಂದ ಆದಷ್ಟೂ ತಡೆಯಬಹುದಾಗಿದೆ.

ಬೊಕ್ಕಸ ತುಂಬಬೇಕು….

ಅಂದಹಾಗೆ, ಮದ್ಯದ ನಿಜವಾದ ನಶೆ ಅದರ ವ್ಯಾಪಾರದಲ್ಲಿ ಮುಳುಗಿರುವವರಿಗೆ ಹೆಚ್ಚು ಏರಿರುತ್ತದೆ. ಅದು ಸರ್ಕಾರೀ ಆಗಿರಬಹುದು ಅಥವಾ ವರ್ತಕರೇ ಇರಬಹುದು, ಅವರಿಗೆ ತಮ್ಮ ಖಜಾನೆ ಭರ್ತಿಯಾಗಬೇಕು ಎಂದಿರುತ್ತದೇ ಹೊರತು ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ರಾಜಸ್ಥಾನ ಸರ್ಕಾರ ತನ್ನ ಮದ್ಯ ನೀತಿಯಿಂದ ಸಾಕಷ್ಟು ಹೆಸರು ಕೆಡಿಸಿಕೊಂಡಿದೆ. ಹಿಂದಿನ ಗೆಹೋಟ್‌ ಸರ್ಕಾರ ಕೂಡ ಮದ್ಯದ ಗಳಿಕೆಯಲ್ಲಿ ಅತ್ಯಂತ ಜಾಣತನದಿಂದ ಆಟ ಆಡಿತು.

ಆ ಸರ್ಕಾರದ ವತಿಯಿಂದ ಮದ್ಯದಂಗಡಿಗಳು ತೆರೆಯುವ ಸಮಯವನ್ನು ಮುಂಜಾನೆ 10 ರಿಂದ ರಾತ್ರಿ 8ರವರೆಗೆ ಸೀಮಿತಗೊಳಿಸಿತು. ನಾವು ವಿದೇಶೀ ಮದ್ಯದ ಮೇಲೆ ನಿಯಂತ್ರಣ ಹೇರಿದ್ದೇವೆಂದು ಒಂದು ಕಡೆ ಹೇಳಿಕೊಳ್ಳುತ್ತ, ಬೀದಿ ಬೀದಿಗಳಲ್ಲಿ 24 ಗಂಟೆ ತೆರೆದಿರುವ ರೆಸ್ಟೋರೆಂಟ್‌ ಬಾರ್‌ಗಳನ್ನು ಆರಂಭಿಸಲು ಅನುಮತಿ ಕೊಟ್ಟಿತು.

ರಾಜಸ್ಥಾನ ಸರ್ಕಾರದ ಖಜಾನೆ ಭರ್ತಿ ಮಾಡುವುದರಲ್ಲಿ ಮದ್ಯಕ್ಕೆ ಮೊದಲ ಸ್ಥಾನ ಲಭಿಸುತ್ತದೆ. ಬಾಡ್‌ಮೇರ್‌ನ ತೈಲ ಬಾವಿಗಳಿಂದ ಲಭಿಸುವ 6,000 ಕೋಟಿ ರೂ.ಗಳ ರಾಯಲ್ಟಿ ಕೂಡ ಮದ್ಯದಿಂದ ದೊರಕುವ ಆದಾಯದ ಮುಂದೆ ಚಿಲ್ಲರೆ ಮೊತ್ತ ಎನಿಸುತ್ತದೆ.

ಮದ್ಯದ ಬಗ್ಗೆ ಸರ್ಕಾರಿ ಅರ್ಥಶಾಸ್ತ್ರ

ಸರ್ಕಾರಿ ಉಸ್ತುವಾರಿಯಲ್ಲಿ ಮದ್ಯ ಕಾನೂನಬದ್ಧ ಹಾಗೂ ಕಾನೂನಿಗೆ ವಿರುದ್ಧವಾಗಿ ಹೀಗೆ ಎರಡು ರೀತಿಯಲ್ಲಿ ಹುಲುಸಾಗಿ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತದೆ. ಸರ್ಕಾರದ ಬಳಿ ಮದ್ಯ ವಿತರಣೆ ಮಾಡಲು ಸಾಕ್ಷರರು, ಅನಕ್ಷರಸ್ಥರು, ಶ್ರೀಮಂತರು, ಬಡವರು ಹೀಗೆ ಎಲ್ಲ ವರ್ಗದವರು ಎಲ್ಲ ಬಗೆಯ ಮದ್ಯ ವಿತರಣೆ ಮಾಡಲು ಸನ್ನದ್ಧರಾಗಿದ್ದಾರೆ. ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಮನೆಮನೆಗೆ ಮದ್ಯ ಪೂರೈಸಲು ಗುತ್ತಿಗೆ ನೀಡುವ ಪ್ರಕ್ರಿಯೆ ಅತ್ಯಂತ ಜಾಣತನದಿಂದ ನಡೆಯುತ್ತಿರುತ್ತದೆ.

ಅಂದಹಾಗೆ, ಹಣ ಗಳಿಸುವ ಈ ವ್ಯವಸ್ಥೆಗೆ ಕಾನೂನುಬದ್ಧ ಹಾಗೂ ಕಾನೂನಿಗೆ ವಿರುದ್ಧ ಎಂಬ ಪೋಷಾಕು ತೊಡಿಸಲಾಗಿದೆ. ಯಾವುದನ್ನು ಸರ್ಕಾರ ಮಾರುತ್ತದೋ ಅದು ಕಾಯ್ದೆಬದ್ಧ. ಯಾವುದನ್ನು ಮಾರಲು ಸಾಧ್ಯವಾಗುವುದಿಲ್ಲವೋ ಅದು ಕಾಯ್ದೆಗೆ ವಿರುದ್ಧ ಎಂದು ಹೇಳಲಾಗುತ್ತದೆ. ಮದ್ಯ ಮದ್ಯವೇ! ಅದು ಮನುಷ್ಯನನ್ನು ನರಳಿಸಿ ನರಳಿಸಿ ಸಾಯುವಂತೆ ಮಾಡುತ್ತದೆ. ದೇಶಿ ಮದ್ಯವೇ ಆಗಿರಬಹುದು ಅಥವಾ ವಿದೇಶೀ ಎರಡೂ ಮನುಷ್ಯನನ್ನು ಹಾಳುಗೆಡವಿ ಸರ್ಕಾರದ ಬೊಕ್ಕಸವನ್ನು ಭರ್ತಿ ಮಾಡುತ್ತದೆ.

ಲೈಸೆನ್ಸ್ಡ್ ಮದ್ಯದಿಂದ ಸರ್ಕಾರಕ್ಕೆ ಪ್ರತಿವರ್ಷ ಕೋಟ್ಯಂತರ ರೂ. ಲಾಭ ಬರುತ್ತಿರುತ್ತದೆ. ಅದೇ ಅನಧಿಕೃತವಾಗಿ ಮಾರಾಟವಾಗುವ ಮದ್ಯದಿಂದ ಅಧಿಕಾರಿಗಳ ಜೇಬು ತುಂಬುತ್ತದೆ.

ಮದ್ಯದ ನಶೆ ಏರಿಸುವುದು ಮನುಷ್ಯನ ನೈಸರ್ಗಿಕ ಹಸಿವು ಅಲ್ಲ. ಹೀಗಾಗಿ ಅದರ ಉಪಸ್ಥಿತಿ ಅಥವಾ ಅನುಪಸ್ಥಿತಿ ಪ್ರಶ್ನೆಯೇ ಅಲ್ಲ. ಹಾಗೊಂದು ವೇಳೆ ಮನುಷ್ಯನಿಗೆ ಮದ್ಯದ ಹಸಿವು ಇದ್ದಿದ್ದರೆ, ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಅಮಲಿನ ಚಟ ಅಂಟಿಕೊಂಡಿರುತ್ತಿತ್ತು.

ಭಾರತದ ಹಲವು ದೇಗುಲಗಳಲ್ಲಿ ದೇವರಿಗೆ ಮದ್ಯವೇ ನೈವೇದ್ಯವಾಗಿದೆ. ಹಲವು ರಾಜ ಮಹಾರಾಜರು ಕೂಡ ಮದ್ಯದ ದಾಸರಾಗಿದ್ದರು. ಎಷ್ಟೋ ರಾಜರು ಈ ಕಾರಣದಿಂದಾಗಿಯೇ, ರಾಜ ಪದವಿ ಕಳೆದುಕೊಂಡರು. ಆಂಗ್ಲರು ನವಾಬರಿಗೆ ಹೀಗೆಯೇ ಮಾಡುತ್ತಿದ್ದರು. ರಾಜಮಹಾರಾಜರಿಗೆ ವಿದೇಶೀ ಮದ್ಯ ತಂದು ಪೂರೈಸಿ ಅವರನ್ನು ದುರ್ಬಲರನ್ನಾಗಿಸಿ, ಅವರ ಬಳಿ ಇದ್ದ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದರು. ಸರ್ಕಾರ ಕೂಡ ಒಂದು ರೀತಿಯಲ್ಲಿ ಇದೇ ಕೆಲಸ ಮಾಡುತ್ತಿದೆ.

ಭ್ರಮೆಯ ಸ್ಥಿತಿ

ಕಳ್ಳತನ, ದರೋಡೆ, ಕೊಲೆ, ಬಲಾತ್ಕಾರ ಮುಂತಾದವುಗಳನ್ನು ತಡೆಯುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಜನರಿಗೆ ಮದ್ಯಪಾನ ಮಾಡುವ ಆಹ್ವಾನ ನೀಡುತ್ತದೆ. ಭ್ರೂಣಹತ್ಯೆ ಕೂಡ ಒಂದು ಅಪರಾಧ. ಎಷ್ಟೋ ಸಲ  ಹೆಣ್ಣು ಹುಟ್ಟುವ ಮೊದಲೇ ಅದನ್ನು ಗರ್ಭದಲ್ಲಿಯೇ ಸಾಯಿಸಲಾಗುತ್ತದೆ. ಸರ್ಕಾರ ಇದನ್ನು ತಡೆಯುವಲ್ಲಿ ವಿಫಲವಾಗಿದೆ. ಇದರರ್ಥ ಲೈಸೆನ್ಸ್ಡ್ ಕೇಂದ್ರ ತೆರೆದು ಅವನ್ನು ಕಾನೂನು ರೀತ್ಯಾ ಸರಿ ಎಂದು ಹೇಳಲಾಗದು.

ಯಾವುದೇ ಪತಿ ತನ್ನ ಹೆಂಡತಿಯನ್ನು ಹೊಡೆಯಲು ಹಿಂದೇಟು ಹಾಕುವುದಿಲ್ಲವೋ, ಅವನಿಗೆ ಹೆಂಡತಿಯನ್ನು ಹೊಡೆಯುವ ಹಕ್ಕನ್ನು ಕಾನೂನು ರೀತ್ಯಾ ಕೊಟ್ಟುಬಿಡಬೇಕಾ? ಮದ್ಯದ ಕುರಿತಂತೆ ಸರ್ಕಾರ ಇದೇ ರೀತಿ ನಿರ್ಣಯ ಕೈಕೊಂಡಿದೆ. ಮದ್ಯದ ಮೇಲೆ ನಿಯಂತ್ರಣ ಹೇರುವ ಬದಲು ಅದನ್ನು ಹಳ್ಳಿಹಳ್ಳಿಗೂ, ಬೀದಿ ಬೀದಿಗೂ ತಲುಪಿಸುತ್ತಿರುವುದು ನಿಜಕ್ಕೂ ಖೇದದ ಸಂಗತಿ.

ಸರ್ಕಾರಗಳು ಮದ್ಯವನ್ನು ದೊಡ್ಡ ಆದಾಯದ ಮೂಲವನ್ನಾಗಿ ನೋಡುತ್ತಿವೆ. ಆದರೆ ವಾಸ್ತವ ಸಂಗತಿಯೆಂದರೆ, ಸರ್ಕಾರ ಈ ನಿಟ್ಟಿನಲ್ಲಿ ಭ್ರಮೆಯಲ್ಲಿದೆ ಎಂದು ಹೇಳಬೇಕು. ಅವು ಇದರ ಅರ್ಥಶಾಸ್ತ್ರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಿವೆ. ಕಳೆದ ವರ್ಷ ರಾಜಸ್ಥಾನ ಸರ್ಕಾರ 7000 ಕೋಟಿ ರೂ.ಗಳ ಅಬಕಾರಿ ಆದಾಯ ನಿರೀಕ್ಷೆ ಮಾಡಿತ್ತು. ಅದರಲ್ಲಿ 500 ಕೋಟಿ ರೂ.ಗಳನ್ನು ಮದ್ಯ ಲಾಭಿ ಭರ್ತಿ ಮಾಡಲೇ ಇಲ್ಲ. ಇನ್ನು 2000 ಕೋಟಿ ರೂ.ಗಳನ್ನು ಸರ್ಕಾರ ಪೊಲೀಸ್‌ ಇಲಾಖೆ, ಅಬಕಾರಿ ವಿಭಾಗ, ಅಬಕಾರಿ ಪೊಲೀಸ್‌ ಠಾಣೆ ಮುಂತಾದವುಗಳಿಗೆ ಖರ್ಚು ಮಾಡಿತು. 50% ಆದಾಯಕ್ಕಾಗಿ ಶೇ.80ರಷ್ಟು ಅಪರಾಧಗಳು, ಕೊಲೆ, ಲೂಟಿ, ಬಲಾತ್ಕಾರಗಳು ಮದ್ಯದಿಂದಾಗಿಯೇ ಘಟಿಸುತ್ತವೆ. ಇದರಿಂದಾಗಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತವೆ ಎಂಬುದು ಬೇರೆ ಮಾತು.

ಮದ್ಯದ ಮೇಲೆ ನಿಯಂತ್ರಣ ಅಥವಾ ನಿಷೇಧ ಹೇರುವುದರಿಂದ ಜನರ ಬಳಿ ಹಣ ಉಳಿಯುತ್ತದೆ. ಆ ಹಣ ಮಾರುಕಟ್ಟೆಯಲ್ಲಿ ಹರಿದು ಬಂದಾಗ ತೆರಿಗೆ ರೂಪದಲ್ಲಿ ಸಾಕಷ್ಟು ಮೊತ್ತ ಸರ್ಕಾರಕ್ಕೆ ವಸೂಲಿಯಾಗುತ್ತದೆ. ಆದರೆ ಇದರ ಬಗ್ಗೆ ಸರ್ಕಾರಗಳು ಕಿಂಚಿತ್ತೂ ಯೋಚನೆ ಮಾಡುವುದಿಲ್ಲ.

ಮದ್ಯದ ಹೊಳೆ

ಜನರು ಈಗಲೂ ಮದ್ಯದ ಹೆಸರು ಹೇಳಿದರೆ ಸಾಕು, ಮೂಗು ಮುರಿಯುತ್ತಾರೆ. ಆದರೆ ಮಾರುಕಟ್ಟೆ ಈ ನಿಟ್ಟಿನಲ್ಲಿ ಸುಳ್ಳು ಹೇಳುವುದಿಲ್ಲ. ಬದಲಾಗುತ್ತಿರುವ ವಾತಾವರಣ ಹಾಗೂ ಇಂದಿನ ಯುವ ಪೀಳಿಗೆಯ ಹೆಚ್ಚುತ್ತಿರುವ ವರಮಾನ ಮದ್ಯದ ಹೊಳೆ ಹರಿಯುವಂತೆ ಮಾಡಿದೆ.

ಪ್ರತಿ ವರ್ಷ ಭಾರತೀಯ ಆಲ್ಕೋಹಾಲ್ ‌ಮಾರುಕಟ್ಟೆ ಯಾವ ವೇಗದಲ್ಲಿ ಬೆಳೆಯುತ್ತಿದೆಯೋ, ಅದನ್ನು ನೋಡಿದರೆ ಸ್ಥಿತಿ ಚಿಂತಾಜನಕಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಜನಸಂಖ್ಯೆಯಲ್ಲಿ ಬಹುದೊಡ್ಡ ಪ್ರಮಾಣ ಮದ್ಯಕ್ಕೆ ಅಧೀನವಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ.

ದೇಶದಲ್ಲಿ ಬಿಯರ್‌ ಕುಡಿಯುವವರ ಸಂಖ್ಯೆ ಕಡಿಮೆ ಏನಿಲ್ಲ. ವಿಸ್ಕಿ ಕುಡಿಯುವವರಂತೂ ಅಮೆರಿಕದವರನ್ನೂ ಹಿಂದೆ ನೂಕಿಬಿಟ್ಟಿದ್ದಾರೆ.

ಒಂದು ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಮದ್ಯ ಸೇವನೆ 16 ರಿಂದ 18ನೇ ವರ್ಷಕ್ಕೆ ಶುರುವಾಗಿ, 25 ರಿಂದ 30 ವರ್ಷದ ಹೊತ್ತಿಗೆ ಅದು ಮೇರೆ ಮೀರುತ್ತದೆ. ಪ್ರಸ್ತುತ ಭಾರತದ 35 ಕೋಟಿಯಷ್ಟು ಜನಸಂಖ್ಯೆ 25 ರಿಂದ 35ರ ನಡುವೆ ಇದೆ. ಮುಂದಿನ 5 ವರ್ಷಗಳಲ್ಲಿ ಇದರ ಪ್ರಮಾಣ ಇನ್ನೂ 5 ರಿಂದ 7 ಕೋಟಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದ ಜಗತ್ತಿನ ಮದ್ಯ ಕಂಪನಿಗಳು ಭಾರತದತ್ತ ಕಣ್ಣು ನೆಟ್ಟು ಕೂತಿವೆ.

ಮದ್ಯ ನಶೆಯಲ್ಲ, ಮಹಾಮಾರಿ

ಭಾರತ ಸಹಿತ ಅನೇಕ ದೇಶಗಳಲ್ಲಿ ಮದ್ಯ ಸೇವನೆಯಿಂದ ಉಂಟಾಗುವ ರೋಗಗಳ ಕಾರಣದಿಂದಾಗಿ ಪ್ರತಿ ವರ್ಷ 33 ಲಕ್ಷ ಜನರು ಸಾಯುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ 1,38,000 ಜನರು ಸಾಯುತ್ತಾರೆ. `ಆಲ್ಕೋಹಾಲ್ ‌ಏಡ್ ಡ್ರಗ್‌ ಇನ್‌ಫರ್ಮೇಶನ್‌’ ಸೆಂಟರಿನ ಒಂದು ವರದಿಯ ಪ್ರಕಾರ, ಇವುಗಳಲ್ಲಿ ಶೇ.40ರಷ್ಟು ದುರಂತಗಳು ಸಂಭವಿಸುವುದು ಮದ್ಯ ಸೇವನೆ ಮಾಡಿ ವಾಹನ ಚಾಯಿಸುವುದರಿಂದ.ಮದ್ಯದ ಚಟ ಎಂತಹ ಭಯಾನಕ ರೋಗ ಆಗುತ್ತಿದೆಯೆಂದರೆ, ಜಗತ್ತಿನಲ್ಲಿ ರೋಗಗಳು, ಅಂಗವೈಕಲ್ಯತೆ ಮತ್ತು ಸಾವಿಗೆ ಏನನ್ನು ಕಾರಣವೆಂದು ಹೇಳಲಾಗುತ್ತಿತ್ತೊ, ಅದರಲ್ಲಿ 2010ರ ತನಕ ಮದ್ಯಕ್ಕೆ  6ನೇ ಸ್ಥಾನವಿತ್ತು. ಈಗ ಅದು 3ನೇ ಸ್ಥಾನಕ್ಕೆ ತಲುಪಿದೆ. ಮನುಷ್ಯನಲ್ಲಿ 200ಕ್ಕಿಂತ ಹೆಚ್ಚು ರೋಗಗಳ ಅಪಾಯ ಮದ್ಯ ಸೇವನೆಯಿಂದ ಹೆಚ್ಚಾಗುತ್ತದೆ.

ಪಬ್ಲಿಕ್‌ ಹೆಲ್ತ್ ಫೌಂಡೇಶನ್‌ ಎಂಬ ಸಂಸ್ಥೆ 6 ರಾಜ್ಯಗಳ ಬಗ್ಗೆ ಒಂದು ವರದಿ ತಯಾರಿಸಿದೆ. ಅದರ ಪ್ರಕಾರ, ಮದ್ಯದ ಮೇಲೆ ತೆರಿಗೆ ಹಾಗೂ ಅದರ ಬೆಲೆ ಹೆಚ್ಚಳದ ಹೊರತಾಗಿಯೂ ಮದ್ಯ ಸೇವನೆಯ. ಪ್ರಮಾಣ ಹೆಚ್ಚುತ್ತಲೇ ಹೊರಟಿದೆ. ಈ ವರದಿಯಲ್ಲಿರುವ ರಾಜ್ಯಗಳೆಂದರೆ ರಾಜಸ್ಥಾನ, ತಮಿಳುನಾಡು, ಒರಿಸ್ಸಾ, ಸಿಕ್ಕಿಂ, ಮೇಘಾಲಯ ಹಾಗೂ ಬಿಹಾರ. ಆತ್ಮಹತ್ಯೆ ಮಾಡಿಕೊಳ್ಳುವ ಶೇ.50ರಷ್ಟು ಜನರಲ್ಲಿ ಮದ್ಯ ಒಂದಿಲ್ಲೋದು ರೀತಿಯಲ್ಲಿ ಕಾರಣವಾಗಿರುತ್ತದೆ.

ಮದ್ಯದ ಚಟ ಸುಲಭವಾಗಿ ಬಿಟ್ಟುಹೋಗುವುದಿಲ್ಲ. ಆದರೆ ಬಿಡುವುದು ಅಷ್ಟೊಂದು ಅಸಾಧ್ಯವೇನೂ ಅಲ್ಲ. ಉತ್ತಮ ಆರೋಗ್ಯ ಮತ್ತು ಭವಿಷ್ಯಕ್ಕಾಗಿ ಅದರ ಸಂಗ ತೊರೆಯುವುದು ಅತ್ಯಂತ ಅವಶ್ಯಕ.

ಕೆ. ಮದನ್ಕುಮಾರ್

ಮಹಿಳೆಯರ ಯಕೃತ್ತಿಗೆ ಹಾನಿ ಮದ್ಯ ಸೇವಿಸುವ ಚಟ ಹೊಂದಿರುವ ಮಹಿಳೆಯರು ಯಕೃತ್‌ನ ತೊಂದರೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ವಿಜ್ಞಾನಿಗಳ ತಂಡವೊಂದು ಎಚ್ಚರಿಕೆ ನೀಡಿದೆ.

ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಎತ್ತರವಿರುತ್ತಾರೆ ಹಾಗೂ ಅವರ ದೇಹದಲ್ಲಿ ಕಡಿಮೆ ನೀರಿನ ಅಂಶ ಇರುತ್ತದೆ. ಆದ್ದರಿಂದ ಮದ್ಯ ಸೇವಿಸುವ ಮಹಿಳೆಯರು ಯಕೃತ್ತಿನ ಸಮಸ್ಯೆಗೆ ತುತ್ತಾಗುತ್ತಾರೆ. ನೀವು ಈಗಾಗಲೇ ಮದ್ಯ ಸೇವಿಸುತ್ತಿದ್ದರೆ, ಅದನ್ನು ಕಡಿಮೆ ಮಾಡಿ ಇಲ್ಲಿ ಬಿಟ್ಟೇ ಬಿಡಿ ಎನ್ನುವುದು ವೈದ್ಯರ ಸಲಹೆಯಾಗಿದೆ.

Dr.Anurag

ಅಮಲಿನ ಮಾರಕ ಪರಿಣಾಮ

ಆರಂಭದಲ್ಲಿ ಕೇವಲ ಮೋಜಿಗಾಗಿ ಕುಡಿಯುವ ಮದ್ಯ ಆಮೇಲೆ ತೀವ್ರ ಚಟವಾಗಿ ಪರಿಣಮಿಸುತ್ತದೆ. ಅದರಿಂದ ಮುಕ್ತಿ ಕಂಡುಕೊಳ್ಳುವುದು ಸಾಕಷ್ಟು ಕಷ್ಟದಾಯಕವಾಗಿ ಪರಿಣಮಿಸುತ್ತದೆ. ಮದ್ಯದ ಅಮಲು ರೋಗನಿರೋಧಕ ಶಕ್ತಿಯವನ್ನು ಹಾಳುಗೆಡಹುತ್ತದೆ. ಇದರಿಂದ ಕರುಳು ಕ್ರಮೇಣ ಶಕ್ತಿಹೀನಗೊಳ್ಳುತ್ತದೆ.

ಮಹಿಳೆಯರಿಗೆ ಮದ್ಯದ ಚಟ ಅಂಟಿಕೊಂಡರೆ ಅದು ಇನ್ನಷ್ಟು ಮಾರಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಲಿವರ್‌ ಕ್ಯಾನ್ಸರ್‌, ಫಿಟ್ಸ್, ಅಲ್ಸರ್‌, ಹೃದ್ರೋಗದಂತಹ ಅನೇಕ ರೋಗಗಳು ಮದ್ಯದಿಂದಾಗಿಯೇ ನಮ್ಮ ಮೇಲೆ ದಾಳಿ ಮಾಡುತ್ತವೆ.

ನಿರಂತರವಾಗಿ ಮದ್ಯ ಸೇವನೆ ಮಾಡುವುದರಿಂದ ಅನ್ನನಾಳ ಇಲ್ಲವೇ ಗಂಟಲಿನ ಕ್ಯಾನ್ಸರ್‌ ಉಂಟಾಗಬಹುದು. ಅತಿಯಾದ ಮದ್ಯ ಸೇವನೆಯಿಂದ ಪುರುಷರಲ್ಲಿ ನಪುಂಸಕತೆ ಉಂಟಾಗಬಹುದು. ಅದೇ ಮಹಿಳೆರಲ್ಲಿ ಬ್ರೆಸ್ಟ್ ಕ್ಯಾನ್ಸರ್‌ಗೆ ಕಾರಣವಾಗಬಹುದು. ಗರ್ಭಿಣಿಯರಲ್ಲಿ ಈ ಚಟ ಇದ್ದರೆ ಗರ್ಭಪಾತ ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಮದ್ಯ ಸೇವನೆಯಿಂದ ಕೇವಲ ಆರೋಗ್ಯದ ಮೇಲಷ್ಟೇ ದುಷ್ಪರಿಣಾಮ ಉಂಟಾಗುವುದಿಲ್ಲ, ಕೌಟುಂಬಿಕ / ಸಾಮಾಜಿಕ ಪ್ರತಿಷ್ಠೆಗಳೂ ಹಾಳಾಗುತ್ತವೆ.

ಡಾ. ಅನುರಾಗ್ಸಕ್ಸೇನಾ ಸೀನಿಯರ್ಕನ್ಸಲ್ಚೆಂಟ್ಪ್ರೈಮಸ್ಹಾಸ್ಪಿಟಲ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ