ಮೊಬೈಲ್ ಸದ್ದು ಮಾಡಿದಾಗ ಮಮತಾಳ ನಿದ್ದೆ ಹಾರಿ ಹೋಯಿತು. ಅವಳು ನಿದ್ದೆಗಣ್ಣಿನಲ್ಲಿ ಫೋನ್ ದಿಟ್ಟಸಿದಾಗ ಅದು ಅಮ್ಮನ ಕರೆ ಎಂದು ಗೊತ್ತಾಯ್ತು.
“ಹಲೋ ಅಮ್ಮ…..” ಮಮತಾ ಫೋನ್ ಎತ್ತಿಕೊಂಡು ತೂಕಡಿಸುತ್ತಾ ಕೇಳಿದಳು.
“ಏನಾಯ್ತು ಮಮ್ತಾ…… ನಿನ್ನ ಧ್ವನಿ ಯಾಕೆ ಬಾವಿಯಾಳದಿಂದ ಬಂದಂತಿದೆ? ನಿನ್ನ ಆರೋಗ್ಯ ಸರಿಯಿಲ್ಲವೇ?” ರೇತಿಯವರು ಚಿಂತೆಯಿಂದ ವಿಚಾರಿಸುತ್ತಿದ್ದರು.
“ಇಲ್ಲಮ್ಮ…… ನಾನು ಗಡದ್ದಾಗಿ ಗೊರಕೆ ಹೊಡೆಯುತ್ತಿದ್ದೆ. ಇದೇನಮ್ಮ ನೀನು ಬೆಳ್ಳಂಬೆಳಗ್ಗೆ ಫೋನ್ ಮಾಡಿದ್ದಿ?” ಮಮತಾ ಏರಿಳಿತವಿಲ್ಲದೆ ಹೇಳಿದಳು.
“ಬೆಳ್ಳಂಬೆಳಗ್ಗೆ ಅಂತಿದ್ದೀಯಾ….. ಏ, ಆಗಲೇ 9 ಗಂಟೆ ಆಗ್ತಾ ಬಂತು ಕಣೆ.”
“ಓ….. ಅಷ್ಟೇ ತಾನೇ ಕಣಮ್ಮ, ಇವತ್ತು ಹೇಗೂ ರಜಾ ದಿನ. ಇರೋ ಒಂದು ಭಾನುವಾರವಾದ್ರೂ ನೆಮ್ಮದಿಯಾಗಿ ನಿದ್ದೆ ಮಾಡಬೇಡವೇ? ಉಳಿದ 6 ದಿನಗಳೂ ಬೆಳಗ್ಗೆಯಿಂದ ರಾತ್ರಿಯವರೆಗೂ ಓಡಿ ಓಡಿ ಸುಸ್ತಾಗುವುದರಲ್ಲೇ ಆಗಿಹೋಗುತ್ತೆ. ಅದೆಲ್ಲ ಇರಲಿ, ಏನಮ್ಮ ವಿಷಯ…. ಫೋನ್ ಮಾಡಿದ್ದಿ?”
“ಏ…. ಎಲ್ಲಾ ಶುಭ ಸಮಾಚಾರ ಕಣೆ! ನಿನಗಾಗಿ ನಿನ್ನಕ್ಕಾ ವಿನುತಾಳ ಹಿರಿಯ ಓರಗಿತ್ತಿಯ ತಮ್ಮನ ಸಂಬಂಧ ಒದಗಿ ಬರುವ ಹಾಗಿದೆ ಕಣೆ. ಅವರಿಗೆಲ್ಲ ನಿನ್ನನ್ನು ಫೋಟೋದಲ್ಲಿ ನೋಡಿ ಬಹಳ ಇಷ್ಟವಾಗಿದೆ. ಹುಡುಗ ಎಂ.ಟೆಕ್ ಮುಗಿಸಿ ದೊಡ್ಡ ಖಾಸಗಿ ಕಂಪನಿಯಲ್ಲಿ ಚೀಫ್ ಎಂಜಿನಿಯರ್. ಅನುಕೂಲಕರ ಸಂಬಂಧ, ಆ ಮನೆಯವರೂ ಒಳ್ಳೆಯವರು, ತಿಳಿದ ಜನ.
“ಈ ಬಾರಿ ಏನೂ ಮೀನಾ ಮೇಷ ಎಣಿಸುತ್ತಾ ಕೂರಬೇಡ. ಅನಗತ್ಯವಾಗಿ ಇಲ್ಲಸಲ್ಲದ ನೆಪಗಳನ್ನು ಹೇಳಬೇಡ. ಆಫೀಸ್‌ನವರಿಗೆ ರಜಾ ಚೀಟಿ ಕೊಟ್ಟು ಆದಷ್ಟು ಬೇಗ ಮೈಸೂರಿಗೆ ಹೊರಟು ಬಾ. ನೀವಿಬ್ಬರೂ ಪರಸ್ಪರ ಭೇಟಿಯಾದರೆ ಖಂಡಿತಾ ಒಪ್ಪಿಕೊಳ್ತೀರಿ ಅಂತಾನೇ ನಾವೆಲ್ಲ ಮಾತನಾಡಿಕೊಳ್ಳುತ್ತಿದ್ದೆ. ಹಿರಿಯರು ನಾವು ನಾವು ಭೇಟಿಯಾಗಿ ಒಪ್ಪಿದ್ದಾಯ್ತು. ಹುಡುಗ ಚೆನ್ನೈನಲ್ಲಿ ಸೆಟಲ್ ಆಗಿದ್ದಾನೆ, ನಿನಗೂ ಅಲ್ಲಿ ಸುಲಭವಾಗಿ ಕೆಲಸ ಸಿಗುತ್ತದೆ….” ರೇವತಿ ಖುಷಿಯಿಂದ ಒಂದೇ ಉಸಿರಿನಲ್ಲಿ ಎಲ್ಲಾ ಹೇಳಿಬಿಟ್ಟರು.
“ಅಯ್ಯೋ…. ಅಮ್ಮ….. ಮತ್ತೆ ಮದುವೆ ಪುರಾಣ ಶುರು ಮಾಡಿಕೊಂಡ್ಯಾ? ಇಷ್ಟು ಬೇಗ ನನಗೆ ಮದುವೆ ಬೇಡ ಅಂತ ಎಷ್ಟು ಸಲ ಹೇಳುವುದು?” ಮಮತಾ ಬೇಸರದಿಂದ ಹೇಳಿದಳು.
“ಸಾಕು ಸುಮ್ನಿರೆ…. 2 ತಿಂಗಳು ಕಳೆದರೆ ನಿನಗೆ 27 ತುಂಬುತ್ತೆ…. ಮತ್ತೆ ಇನ್ಯಾವಾಗ ಮದುವೆ ಆಗೋದು? ಎಷ್ಟು ದಿನ ಅಂತ ಹೀಗೆ ಮದುವೆ ಮುಂದೂಡೋದು? ಮೊದಲು ಓದು, ನಂತರ ಕೆರಿಯರ್, ಆಮೇಲೆ ಪ್ರಮೋಶನ್….. ಈಗ ಯಾವ ನೆಪ ಹುಡುಕುತ್ತಿದ್ದಿ? ಮುಂದಿನ 1-2 ವರ್ಷದಲ್ಲಿ ನಿನ್ನ ಮದುವೆ ಆಗಲ್ಲಾಂದ್ರೆ ಆಮೇಲೆ ನಿನಗೆ ಮೊದಲನೇ ಸಂಬಂಧದ ವರಗಳು ಬರೋದೇ ಇಲ್ಲ ಅಂದ್ಕೋ…. ಆಮೇಲೆ ನೀನು ಯಾರಾದರೂ ವಿಧುರ, ವಿಚ್ಛೇದಿತ, ಮಕ್ಕಳ ಮನೆಗೆ ಮಲತಾಯಿ ಆಗಿಹೋಗಬೇಕಷ್ಟೆ!” ರೇವತಿ ಕೋಪದಿಂದ ವಾಸ್ತವವನ್ನು ಕಟುವಾಗಿ ಹೇಳಿದರು.
“ಆಗಲಮ್ಮ….. 4 ದಿನ ಟೈಂ ಕೊಡು, ನಾನೇ ನಿನಗೆ ಫೋನ್ ಮಾಡಿ ಹೇಳ್ತೀನಿ,” ಮಮತಾ ತಾಯಿ ಎದುರು ಸೋಲಲೇ ಬೇಕಾಯಿತು. ಲೈನ್ ಕಟ್ ಮಾಡಿ ಮಗ್ಗುಲಾದಳು. 9.30 ದಾಟಿತು. ಇನ್ನೆಲ್ಲಿಯ ನಿದ್ದೆ? ಅಮ್ಮ ಅವಳ ನಿದ್ದೆ ಹಾರಿಹೋಗುವಂತೆ ಯೋಚನೆಯ ಬೀಜ ಬಿತ್ತಿದ್ದರು. ಮಮತಾ ಪಕ್ಕದಲ್ಲಿ ಮಲಗಿದ್ದ ಪ್ರಮೋದ್‌ನತ್ತ ನೋಡಿದಳು. ಪ್ರಮೋದ್ ಸುಖಕರ ಕನಸು ಕಾಣುತ್ತಾ ಸಂತೃಪ್ತನಾಗಿದ್ದ. ಅವನ ಗುಂಗುರು ತಲೆಗೂದಲಲ್ಲಿ ಕೈಯಾಡಿಸುತ್ತಾ ಅವನನ್ನೇ ದಿಟ್ಟಿಸಿ, ನಿಧಾನವಾಗಿ ಎದ್ದು ಬಾತ್ ರೂಮಿನತ್ತ ನಡೆದಳು.
ಮುಖ ತೊಳೆದು ಬಂದ ಮಮತಾ ತನಗಾಗಿ ಹಾಲು ಬಿಸಿ ಮಾಡಿಕೊಂಡು ಅದರಲ್ಲಿ ನೆಸ್‌ಕೆಫೆ ಕದಡಿಕೊಂಡು ಬಿಸಿ ಕಾಫಿ ಕಪ್‌ಜೊತೆ ಪೇಪರ್ ಹಿಡಿದು ಬಾಲ್ಕನಿಯಲ್ಲಿ ಕುಳಿತಳು. ಪ್ರಮೋದ್‌ಗೆ ಸದಾ ಟೀ ಇಷ್ಟ. ಹೀಗಾಗಿ ಅವನು ಎದ್ದಾಗ ತಾನೇ ಫ್ರೆಶ್ಶಾಗಿ ಟೀ ಮಾಡಿಕೊಳ್ಳುತ್ತಿದ್ದ. ಕೆಳಗಡೆ ಅಪಾರ್ಟ್‌ಮೆಂಟ್‌ನ ಮಕ್ಕಳೆಲ್ಲ ಹೋ ಎಂದು ಹುಯಿಲೆಬ್ಬಿಸುತ್ತಾ ಆಟವಾಡುತ್ತಿದ್ದರು. ಜನ ಭಾನುವಾರದ ಬಿಡುವಿನ ದಿನದಂದು ತಮ್ಮ ಮನೆಗೆಲಸಗಳಲ್ಲಿ ಬಿಝಿ ಆಗಿದ್ದರು. ಈ ಅಪಾರ್ಟ್‌ಮೆಂಟ್‌ಗೆ ಇವರಿಬ್ಬರೂ ಶಿಫ್ಟ್ ಆಗಿ ಅದಾಗಲೇ 6 ತಿಂಗಳಾಗಿತ್ತು. ಇದುವರೆಗೂ ಅಪಾರ್ಟ್‌ಮೆಂಟ್‌ನ ನೆರೆಹೊರೆಯವರೊಂದಿಗೆ ಅಂಥ ಪರಿಚಯವೇನೂ ಆಗಿರಲಿಲ್ಲ. ಎದುರಿನ ಮನೆಯವರೊಂದಿಗೆ ಹಾಯ್, ಹಲೋ ಹೇಳುವಷ್ಟು ಗುರುತಾಗಿತ್ತಷ್ಟೆ. ಅದಕ್ಕಿಂತ ಹೆಚ್ಚಿಗೆ ಅವರನ್ನು ಹಚ್ಚಿಕೊಳ್ಳುವುದು ಇವರಿಗೂ ಬೇಕಿರಲಿಲ್ಲ. ಇವರ ಪಕ್ಕದ ಮನೆ ಇನ್ನೂ ಖಾಲಿಯೇ ಇತ್ತು. ಮಮತಾ ಪ್ರಮೋದರ ಪರಿಚಯವಾಗಿ ಅದಾಗಲೇ 4 ವರ್ಷ ದಾಟಿತ್ತು. ಮಮತಾಳ ಗೆಳತಿಯ ಬರ್ತ್‌ಡೇ ಪಾರ್ಟಿಗೆಂದು ಎಲ್ಲರೂ ಒಂದೆಡೆ ಸೇರಿದ್ದರು. ಇವಳ ಗೆಳತಿ ಆಶಾಳ ಅಣ್ಣನ ಸಹೋದ್ಯೋಗಿ ಪ್ರಮೋದ್. ಹೀಗೆ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೇಮ ದಟ್ಟವಾಗಿತ್ತು. ಮುಂಬೈನ ಪ್ರಮೋದ್ ಬೆಂಗಳೂರಿಗೆ ಕೆಲಸಕ್ಕೆಂದು ಬಂದು 6 ತಿಂಗಳಾಗಿತ್ತು. ಮೈಸೂರಿನ ತನ್ನ ಕಾಲೇಜ್ ಕ್ಯಾಂಪಸ್‌ನ ಸಂದರ್ಶನದಲ್ಲಿ ಆಯ್ಕೆಯಾಗಿದ್ದ ಮಮತಾ, ಖ್ಯಾತ ಎಂ.ಎನ್.ಸಿ. ಕಂಪನಿಯೊಂದಕ್ಕೆ ಉನ್ನತ ಹುದ್ದೆಗಾಗಿ ಆರಿಸಿ ಬಂದಿದ್ದಳು.
ಮೊದಲು ಮನೆಯ ಹಿರಿಯರಿಗೆ ಅಷ್ಟು ದೂರ ಒಬ್ಬಳನ್ನೇ ಕಳುಹಿಸಬೇಕಲ್ಲ ಎನಿಸಿತು. ಅವಳ ಗೆಳತಿಯರೆಲ್ಲ ಚೆನ್ನೈ, ಹೈದರಾಬಾದ್, ಮುಂಬೈ ಎಂದು ಇನ್ನೂ ದೂರ ಹೊರಟಾಗ ಇದುವೇ ಮೇಲೆನಿಸಿತು. 2 ವಾರಕ್ಕೊಮ್ಮೆ ಹೊರಟುಬಂದು 2 ದಿನ ಮೈಸೂರಿನಲ್ಲಿ ಉಳಿಯಬಹುದೆಂದು ಅವರು ಲೆಕ್ಕ ಹಾಕಿದರು, ಅವಳೂ ಖುಷಿಯಿಂದ ಹಾಗೇ ಮಾಡುತ್ತಿದ್ದಳು.
ಲೇಡೀಸ್ ಹಾಸ್ಟೆಲ್‌ನಲ್ಲಿ ತಂಗಿದ್ದು, ಕೆಲಸಕ್ಕೆ ಹೋಗುತ್ತಾ, ಉತ್ಸಾಹದಿಂದ ಆಗಾಗ ಊರಿಗೂ ಹೋಗಿ ಬರುತ್ತಿದ್ದಳು. ಆದರೆ ಯಾವಾಗ ಪ್ರಮೋದ್ ಜೊತೆ ಪ್ರೇಮಾಂಕುರವಾಯಿತೋ, ಕ್ರಮೇಣವಾಗಿ ಊರಿಗೆ ಹೋಗಿಬರುವುದು ಕಡಿಮೆ ಆಗತೊಡಗಿತು. ಪಾರ್ಟಿಯಿಂದ ಶುರುವಾದ ಪರಿಚಯ, ಗಾಢ ಪ್ರೇಮವಾಗಿ ಬೆಳೆದಿತ್ತು. ಇಬ್ಬರೂ ವಾರಾಂತ್ಯಗಳಲ್ಲಿ ಊಟಿ, ಕೊಡೈಕೆನಾಲ್, ಚೆನ್ನೈ, ಹೈದರಾಬಾದ್ ಎಂದು ಎಲ್ಲಾ ಕಡೆ ಪ್ರವಾಸ ಸುತ್ತಾಡುತ್ತಾ ಹಾಯಾಗಿ ಹನಿಮೂನ್ ಮುಗಿಸಿಕೊಂಡಿದ್ದರು. ಹೀಗಾಗಿ ಅವಳು ಮೈಸೂರಿನ ಮನೆಗೆ ಹೋಗುವುದು 2 ತಿಂಗಳಿಗೊಮ್ಮೆ ಎನ್ನುವಂತಾಯಿತು.
ಇಬ್ಬರಿಗೂ ಮದುವೆಯಂಥ ಹಿರಿಯ ಜವಾಬ್ದಾರಿ ಬೇಕಿರಲಿಲ್ಲ. ಮದುವೆಯ ಬಂಧನ, ಮಕ್ಕಳ ಕಿರಿಕಿರಿ ಯಾವ ರಗಳೆಯಲ್ಲೂ ಆಸಕ್ತಿ ಇರಲಿಲ್ಲ. ಹಾಯಾಗಿ ತಿಂದುಂಡು, ಜಾಬ್ ಮಾಡುತ್ತಾ, ಸುತ್ತಾಡಿಕೊಂಡು ಕಾಲ ಕಳೆಯುತ್ತಾ ಜುಮ್ಮೆಂದು ಜೀವನ ಸಾಗಿಸುವುದೇ ಸುಖ, ಸಂತೋಷ, ನೆಮ್ಮದಿ ಎಂದು ಭಾವಿಸಿದ್ದರು.
ಇಬ್ಬರಿಗೂ ಹಾಸ್ಟೆಲ್‌ನ ಕಿರಿಕಿರಿ ಸಾಕೆನಿಸಿದಾಗ ಒಂದು ಮನೆ ಬಾಡಿಗೆಗೆ ಹಿಡಿದು ಇಬ್ಬರೂ ಸದಾಕಾಲ ಒಟ್ಟಿಗಿರೋಣ ಎಂದು ನಿಶ್ಚಯಿಸಿದರು. ಇದುವೇ ಲಿವ್ ಇನ್ ರಿಲೇಶನ್‌ಶಿಪ್. ಪರಸ್ಪರರಿಗೆ ಬೋರ್ ಆಗುವವರೆಗೂ ಒಟ್ಟಿಗಿರುವುದು, ಯಾವಾಗ ಸಾಕಾಯಿತೋ ಬಿಟ್ಟು, ಬೇರೊಬ್ಬ ಸಂಗಾತಿಯನ್ನು ಹುಡುಕಿಕೊಂಡು ಹಾಯಾಗಿ ಇದ್ದುಬಿಡುವುದು. ಇಬ್ಬರಿಗೂ ಯಾವುದೇ ಸಾಂಸಾರಿಕ ಬಂಧನವಿಲ್ಲ. ಮನೆ, ಮಠ, ಕರ್ತವ್ಯ, ಅಡುಗೆ, ಮನೆಗೆಲಸ ಇತ್ಯಾದಿಗಳ ಯಾವ ರಗಳೆಯೂ ಇಲ್ಲ. ಯಾರೂ ಯಾರ ಮೇಲೂ ಅಧಿಕಾರ, ಹಕ್ಕು ಚಲಾಯಿಸುವಂತಿಲ್ಲ. ಇಬ್ಬರೂ ಮನಃಪೂರ್ವಕವಾಗಿ ಬಯಸಿದ್ದನ್ನು ಹಂಚಿಕೊಳ್ಳುತ್ತಾ, ಎಲ್ಲದಕ್ಕೂ 50-50 ಖರ್ಚು ಮಾಡುತ್ತಾ, ವೈಯಕ್ತಿಕ ಜವಾಬ್ದಾರಿಯನ್ನು ತಾವೇ ನಿಭಾಯಿಸುತ್ತಾ ಸದಾ ಯೌವನದ ಮಜಾ ಉಡಾಯಿಸುವುದೇ ಪಾಶ್ಚಿಮಾತ್ಯ ಸಂಬಂಧದ ತಿರುಳು.
ಮಮತಾಳ ತಾಯಿತಂದೆಯರಿಗೆ ಮಗಳಿಗೆ ಕೆಲಸ ಸಿಕ್ಕಿದ ಕೂಡಲೇ ಮದುವೆ ಮಾಡಿಬಿಡಬೇಕು ಎಂಬ ಆಲೋಚನೆ ಇತ್ತು. ಅವರ ಹಿರಿಯ ಮಗಳು ವಿನುತಾ ಸಹ ಎಂ.ಎ. ಮುಗಿಸಿಕೊಂಡ ನಂತರ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿ, ವರ ಗೊತ್ತಾದಾಗ, ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡು, ಅದೇ ಶಾಲೆಯ ಬೆಂಗಳೂರಿನ ಶಾಖೆಯಲ್ಲಿ ಕೆಲಸ ಮುಂದುವರಿಸಿದಳು. ಈಗವಳಿಗೆ ತಾನು ಬಯಸಿದ್ದ ಟೀಚರ್ ಕೆಲಸ, ಗಂಡ, ಮಗು, ಅತ್ತೆಮನೆಯಲ್ಲಿ ಆದರ್ಶ ಗೃಹಿಣಿಯ ಸುಖೀ ಜೀವನ ಅವಳದಾಗಿತ್ತು. ಕೆಲಸಕ್ಕೂ ಹೋಗುತ್ತಾ, ಅತ್ತೆ ಮನೆಯಲ್ಲೂ ಅವಳು ಮೆಚ್ಚಿನ ಹಿರಿಯ ಸೊಸೆ ಎಂಬ ಹೆಸರು ಪಡೆದು, ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಕೀರ್ತಿ ತಂದಿದ್ದಳು.
ಅದೇ ತರಹ ಮಮತಾ ಸಹ ಮದುವೆಯಾಗಿ ಗಂಡನ ಮನೆ ಸೇರಲಿ, ಅಲ್ಲೇ ಎಲ್ಲಾದರೂ ಹೊಸ ಕೆಲಸ ಹುಡುಕಿಕೊಳ್ಳಲಿ, ಅಲ್ಲಿಗೆ ತಮ್ಮ ಕರ್ತವ್ಯ ಪೂರೈಸಿದಂತಾಯ್ತು, ಇಬ್ಬರು ಹೆಣ್ಣುಮಕ್ಕಳೂ ಮದುವೆಯಾಗಿ ಸೆಟಲ್ ಆದಹಂಗಾಯ್ತು ಎಂದು ಅವರು ಆಸೆಪಡುತ್ತಿದ್ದರು. ಕಿರಿಯ ಮಗಳು ಮಮತಾ ಸಹ ಹಿರಿಯ ಮಗಳು ವಿನುತಾ ತರಹ ಒಳ್ಳೆಯ ಹೆಸರು ಪಡೆಯಲಿ ಎಂಬುದು ಅವರಾಸೆ.
ಆದರೆ ಒಂದು ಕೈನ ಎಲ್ಲಾ ಬೆರಳುಗಳೂ ಒಂದೇ ಸಮ ಇಲ್ಲದಿರುವಾಗ, ಹೆತ್ತವರ ಮಕ್ಕಳೆಲ್ಲ ಒಂದೇ ತರಹ ಇರಲು ಸಾಧ್ಯವೇ? ಮಮತಾ ಅತಿಯಾದ ಆಧುನಿಕ ವಿಚಾರಧಾರೆಯವಳು. ಅವಳಿಗೆ ತನ್ನ ವೈಯಕ್ತಿಕ ಸ್ವಾತಂತ್ರ್ಯ ಎಲ್ಲಕ್ಕಿಂತ ಹಿರಿದು ಎನಿಸುತ್ತಿತ್ತು. ಅವಳಿಗೆ ಗಂಡ, ಮನೆ, ಮಕ್ಕಳು, ಹಿರಿಯರ ಜವಾಬ್ದಾರಿ ಇತ್ಯಾದಿಗಳ ಹೊರೆ ಬೇಕಿರಲಿಲ್ಲ. ಅಕ್ಕನ ತರಹ ಅವಳು ಶಾಸ್ತ್ರ, ಸಂಪ್ರದಾಯ, ಕಟ್ಟುಪಾಡುಗಳು, ಕರ್ತವ್ಯ ಇತ್ಯಾದಿಗಳನ್ನು ಆದರ್ಶ ಎಂದು ಎಂದೂ ಭಾವಿಸುತ್ತಿರಲಿಲ್ಲ. ಹೀಗಾಗಿ ತಾನು ಸದಾ ಸರ್ವದಾ ಹಾಯಾಗಿರಬೇಕು, ಯಾರ ಹಂಗು, ಬಂಧನ ಇತ್ಯಾದಿಗಳಿರಬಾರದು ಎಂದೇ ಭಾವಿಸಿದ್ದಳು. ಕೈ ತುಂಬಾ ಸಂಬಳ ಸಿಗುವ ನೌಕರಿ, ಮನೆಯವರು ಇವಳ ಸಂಬಳಕ್ಕಾಗಿ ಎದುರು ನೋಡುತ್ತಿರಲಿಲ್ಲ. ಹೀಗಾಗಿ ಬಂದ ದುಡ್ಡನ್ನು ಬ್ಯಾಂಕಿಗೆ ಹಾಕಿಕೊಂಡು ತನ್ನಿಷ್ಟದಂತೆ ಖರ್ಚು ಮಾಡುತ್ತಿದ್ದಳು.
ಪ್ರೇಮಕ್ಕೆ ವರ್ಷ ತುಂಬಿದಾಗ, ತಮ್ಮಿಬ್ಬರ ವಿಚಾರಧಾರೆ ಎಲ್ಲಾ ವಿಷಯಗಳಲ್ಲೂ ಒಂದೇ ತರಹ ಇದೆ ಎಂದು ಗೊತ್ತಾದಾಗ ಇಬ್ಬರೂ ಈ ಲಿವ್ ಇನ್‌ಗೆ ಒಳಗಾಗಲು ಬಯಸಿದರು. ಮುಂಬೈನಿಂದ ಬೆಂಗಳೂರಿಗೆ ಕೆಲಸದ ಸಲುವಾಗಿ ಬಂದಿದ್ದ ಪ್ರಮೋದ್, ತಾಯಿತಂದೆಯರ ಒಬ್ಬನೇ ಮಗ. ಮಗನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಎಂದೂ ಚಕಾರವೆತ್ತದಿದ್ದ ಅವರು, ಅವನು ಉನ್ನತ ಐ.ಟಿ. ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿ ಕೆಲಸಕ್ಕೆ ಸೇರಿ ಸೆಟಲ್ ಆದ ಎಂದು ನೆಮ್ಮದಿಯಾಗಿದ್ದರು. 3 ತಿಂಗಳಿಗೋ 6 ತಿಂಗಳಿಗೋ ಮನಸ್ಸು ಬಂದಾಗ, 1 ವಾರದ ಮಟ್ಟಿಗೆ ಊರಿಗೆ ಹೋಗಿ ಬರುತ್ತಿದ್ದ.
ತಾವಿಬ್ಬರೂ ಒಂದು ಬಾಡಿಗೆ ಮನೆ ಹಿಡಿದು, ಅಲ್ಲಿನ ಅಕ್ಕಪಕ್ಕದವರು, ಮನೆ ಮಾಲೀಕರಿಗೆ ಪತಿ ಪತ್ನಿ, ಮದುವೆಯಾದರು ಎಂದೇ ಹೇಳಿಕೊಂಡರು. ಮಮತಾ ತನ್ನ ತಾಯಿ ತಂದೆ ಬಳಿ ಹಠ ಹಿಡಿದು ತನಗಿನ್ನೂ 2 ವರ್ಷ ಮದುವೆ ಬೇಡ, ತಾನು ಇನ್ನೂ ಒಳ್ಳೆಯ ಕೆರಿಯರ್ ರೂಪಿಸಿಕೊಳ್ಳಬೇಕಿದೆ, ಆರ್ಥಿಕವಾಗಿ ಸದೃಢಳಾದ ನಂತರ, ಪ್ರಮೋಶನ್ ಸಿಕ್ಕಿ ಇನ್ನೂ ಹಿರಿಯ ಅಧಿಕಾರಿ ಎನಿಸಿದ ನಂತರವೇ ಮದುವೆ ಎಂದು ಅವರನ್ನು ಹೇಗೋ ಒಪ್ಪಿಸಿಬಿಟ್ಟಳು. ಇವಳು ಬಹಳ ಮೊಂಡಾಟ ಮಾಡಿದ ನಂತರ ಅಂತೂ ಅವರು ಒಪ್ಪಿಕೊಂಡರು.
ಅವರು ಬೆಂಗಳೂರಿನಲ್ಲಿ ಮಗಳು ಹೇಗೆ ವಾಸವಾಗಿದ್ದಾಳೋ ಎಂದು ನೋಡಲು ಬಂದಾಗ, ತಾನು ಗೆಳತಿಯ ಜೊತೆ ಒಂದು ಅಪಾರ್ಟ್‌ಮೆಂಟ್‌ನಲ್ಲಿ ತಂಗಿರುವುದಾಗಿ, ಒಬ್ಬಳೇ ವಾಸಿಸುತ್ತಿದ್ದ ಸಹೋದ್ಯೋಗಿ ತಾರಾ ಜೊತೆ, ಅವಳ ಮನೆಗೆ ಕರೆದೊಯ್ಯುತ್ತಿದ್ದರು. ಸಂಜೆಯವರೆಗೂ ಅವಳ ಜೊತೆ ಇದ್ದು, ಮಗಳು ಗೆಳತಿ ಜೊತೆ ಅಪಾರ್ಟ್‌ಮೆಂಟ್‌ನ 7ನೇ ಅಂತಸ್ತಿನ ಬಾಡಿಗೆ ಫ್ಲ್ಯಾಟ್‌ನಲ್ಲಿ ಸುಖವಾಗಿದ್ದಾಳೆ ಎಂದು ಸಾರ್ಥಕತೆಯಿಂದ ಅವರು ಹೊರಡುತ್ತಿದ್ದರು. ಅವಳ ಗೆಳತಿಗೆ ಮುಜುಗರವಾಗುತ್ತದೆ ಎಂದು ಅವರು ತಂಗುತ್ತಿರಲಿಲ್ಲ. ಅವರು ಊರು ಸೇರಿದರೆಂದು ಖಾತ್ರಿಪಡಿಸಿಕೊಂಡೇ ಬೇರೆ ದೂರದ ಏರಿಯಾದಲ್ಲಿದ್ದ ತನ್ನ ಮನೆಗೆ ಶಿಫ್ಟ್ ಆಗುತ್ತಿದ್ದಳು ಮಮತಾ. ಅದೇ ತರಹ ಪ್ರಮೋದ್ ಸಹ ತಾಯಿ ತಂದೆ ತನ್ನನ್ನು ನೋಡಲು ಬಂದಾಗ, ಗೆಳೆಯನ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಅಲ್ಲಿಂದಲೇ ಅವರನ್ನು ಊರಿಗೆ ಸಾಗಹಾಕುತ್ತಿದ್ದ. ಇಬ್ಬರ ತಾಯಿ ತಂದೆಯರೂ ತಮ್ಮ ಮಕ್ಕಳು ಆದರ್ಶವಾಗಿ ಬಾಳುತ್ತಿದ್ದಾರೆಂದೇ ನಂಬಿಕೊಂಡಿದ್ದರು.
ಈ ತರಹ ಇವರಿಬ್ಬರೂ ಆ ಹಿರಿಯರನ್ನು ತಾವಿದ್ದ ತಮ್ಮ ಬಾಡಿಗೆ ಮನೆಗೆ ಎಂದೂ ಕರೆದೊಯ್ಯಲೇ ಇಲ್ಲ. ಈಗಿನ ಕಾಲದಲ್ಲಿ ವಿಳಾಸ ಹಿಡಿದು ಪತ್ರ ಬರೆಯುವ ಅಗತ್ಯವಿಲ್ಲದ ಕಾರಣ, ಹಿರಿಯರು ಮೊಬೈಲ್‌ನಲ್ಲೇ ಎಲ್ಲಾ ವಿಷಯ ಮಾತಾನಾಡಿಕೊಳ್ಳುವರು. ಹೀಗಾಗಿ ವಿಳಾಸದ ರಗಳೆ ಇರಲಿಲ್ಲ. ಅಪ್ಪಿತಪ್ಪಿ ಇಬ್ಬರಲ್ಲಿ ಯಾರೊಬ್ಬರ ಕಡೆಯವರಾದರೂ ಇವರಿದ್ದ ಮನೆಗೆ ಬಂದದ್ದೇ ಆದರೆ, ಎಷ್ಟೇ ಸೂಕ್ಷ್ಮವಾಗಿ ಇವರು ಅಲ್ಲಿದ್ದ ಸಾಮಾನು ಸರಂಜಾಮು ಅಡಗಿಸಿಟ್ಟರೂ, ಹಿರಿಯರ ಅನುಭವೀ ಕಂಗಳಿಗೆ ಇಲ್ಲೊಂದು ಜೋಡಿ ವಾಸಿಸುತ್ತಿದೆ ಎಂದು ಗೊತ್ತಾಗದೆ ಇರುತ್ತದೆಯೇ? ಅಕಸ್ಮಾತ್ ಅಕ್ಕಪಕ್ಕದವರು ಯಾರಾದರೂ ಮಾತನಾಡಿಸಿದರೆ ವಿಷಯ ಇನ್ನೂ ಸ್ಪಷ್ಟವಾಗುತ್ತಿತ್ತು. ಹೀಗಾಗಿ ಇಬ್ಬರೂ ಎಂದೂ ಆ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ, ಮಮತಾಳ ಮನೆಯವರಿಗೆ ವಿಷಯ ಗೊತ್ತಾಗಿ ಅವಳ ಕೆಲಸ ಬಿಡಿಸುತ್ತಿದ್ದರು.
ಹೀಗೆ ಅವರಿಬ್ಬರೂ 3 ವರ್ಷಗಳ ಕಾಲ ಆನಂದವಾಗಿ ಕಾಲ ಕಳೆದರು. ಮನೆ ಖರ್ಚಿಗೆ ಇಬ್ಬರೂ ಅರ್ಧರ್ಧ ಪಾಲು ಹಣ ಹೂಡುತ್ತಿದ್ದರು. ಅಡ್ವಾನ್ಸ್, ಬಾಡಿಗೆ, ಮನೆಯ ಸಾಮಗ್ರಿ, ಇತರ ಖರ್ಚು ಎಲ್ಲವನ್ನೂ ಸಮನವಾಗಿ ಹಂಚಿಕೊಳ್ಳುತ್ತಿದ್ದರು. ಹೊರಗೆ ಹೋದಾಗಲೂ ಒಮ್ಮೆ ಅವನು ಖರ್ಚು ಮಾಡಿದರೆ, ಇನ್ನೊಮ್ಮೆ ಇವಳು ಮಾಡುತ್ತಿದ್ದಳು. ಹೋಟೆಲ್, ಸಿನಿಮಾ, ಪ್ರವಾಸ ಹೀಗೆ ಎಲ್ಲದಕ್ಕೂ ಇದೇ ಕ್ರಮ ಅನುಸರಿಸುತ್ತಿದ್ದರು.
ಮನೆಗೆಲಸದವಳು ಬೆಳಗ್ಗೆ ಬಂದು ಮನೆ ಶುಚಿಗೊಳಿಸಿ, ಪಾತ್ರೆ ಬೆಳಗಿ, ವಾಷಿಂಗ್ ಮೆಷಿನ್ ಆನ್ ಮಾಡಿ, ತಿಂಡಿ, ರಾತ್ರಿಗೆ ಚಪಾತಿ ಪಲ್ಯ ಅಥವಾ ಅನ್ನದ ಜೊತೆ ಏನೋ ಒಂದು ವ್ಯಂಜನ ಮಾಡುವಳು. ಅವಳಿಗೆ ಬೇಕಾದಾಗ ಕಾಫಿ, ಇವನಿಗೆ ಬೇಕಾದಾಗ ಟೀ ತಾವೇ ಮಾಡಿಕೊಳ್ಳುವರು. ಯಾರೂ ಯಾರ ಮೇಲೂ ಆಕ್ಷೇಪಣೆ, ಜೋರು ಮಾಡುವ ಹಾಗಿಲ್ಲ. ತನಗಾಗಿ ಅದು ಇದೂ ಮಾಡಲಿ ಎಂಬ ಅಪೇಕ್ಷೆ ಇಟ್ಟುಕೊಳ್ಳುವಂತೆಯೂ ಇಲ್ಲ. ಪರಸ್ಪರ ಅರ್ಥ ಮಾಡಿಕೊಂಡು ಅನುಕೂಲವಾದ ಕೆಲಸ ಮಾಡಿಕೊಡುವರು. ಸಂಜೆ ಮನೆಗೆ ಹಿಂದಿರುಗುವಷ್ಟರಲ್ಲಿ 7-8 ಆಗಿರುತ್ತಿತ್ತು. ಮೊದಲು ಬಂದವರು ರಾತ್ರಿ ಅಡುಗೆಗೆ ಮೈಕ್ರೋವೇವೇ ನಲ್ಲಿ ಏನಾದರೂ ಬಿಸಿ ಮಾಡಿಡುತ್ತಿದ್ದರು. ಒಮ್ಮೆ ಪ್ರಮೋದ್, ಒಮ್ಮೆ ಮಮತಾ ತಡವಾಗಿ ಬರುತ್ತಿದ್ದರು. ಮನಸ್ಸು ಬಂದರೆ ಹಾಗೆಯೇ ಹೋಟೆಲ್‌ಗೆ ಹೋಗಿಬಿಡುತ್ತಿದ್ದರು. ಅಂತೂ ಮನೆಯಲ್ಲಿ ಅಡುಗೆ ಮಾಡುವುದೇ ಕಡಿಮೆ ಆಗಿತ್ತು.
ಆದರೆ ಎಲ್ಲ ಒಂದೇ ರೀತಿ ಇರಲು ಸಾಧ್ಯವೇ? ಇವರ ಅಸಲಿ ವಿಷಯ ಇಬ್ಬರ ಸಹೋದ್ಯೋಗಿಗಳಿಗೆ ಮಾತ್ರ ಗೊತ್ತಿತ್ತು. ಈಗಿನ ಕಾಲದಲ್ಲಿ ಅವರವರ ಚಿಂತೆಗಳೇ ಹಾಸಿಹೊದೆಯಲಿರುವಾಗ, ಬೇರೆಯವರ ವಿಚಾರಕ್ಕೆ ಅದರಲ್ಲೂ ಬೆಂಗಳೂರಿನಂಥ ಮಹಾಸಾಗರದಲ್ಲಿ ಯಾರು ತಾನೇ ಮೂಗು ತೂರಿಸುತ್ತಾರೆ? ಆದರೂ ಇವರ ಮನೆ ಮಾಲೀಕರು, ಅಕ್ಕಪಕ್ಕದವರಿಗೆ ಹೇಗೋ ಯಾರಿಂದಲೋ ವಿಷಯ ಗೊತ್ತಾಗಿಬಿಡುತ್ತಿತ್ತು. ಆಗ ಅಲ್ಲಿ ಯಾರಾದರೂ ಬೇರೆಯವರಿಗೆ ಗುಸುಗುಸು ಎಂದು ವಿಷಯ ತಿಳಿಸಿಬಿಡುತ್ತಿದ್ದರು.
ಅಂತೂ 2 ವರ್ಷ ಕಳೆಯುವಷ್ಟರಲ್ಲಿ ಮೊದಲನೇ ಮನೆ ಮಾಲೀಕರು ಇವರನ್ನು ನೇರವಾಗಿ ಹೊರಡಿಸಿದ್ದರು, “ನಾವು ಹೆಣ್ಣುಮಕ್ಕಳಿರುವ ಪೋಷಕರು. ಇಲ್ಲಿನ ಬಾಡಿಗೆದಾರರೆಲ್ಲರೂ ಮರ್ಯಾದಸ್ಥರು, ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟರು. ಇಲ್ಲಿ ನಿಮ್ಮ ಹುಚ್ಚಾಟಗಳು ನಡೆಯುವುದಿಲ್ಲ. ನಿಮ್ಮ ಹಿರಿಯರನ್ನು ಕರೆಸಿ ಮದುವೆ ಮಾಡಿಕೊಂಡು ಇಲ್ಲಿರುವ ಹಾಗಿದ್ದರೆ ಇರಿ, ಇಲ್ಲದಿದ್ದರೆ ತಕ್ಷಣ ಖಾಲಿ ಮಾಡಿ,” ಎಂದು ಓಡಿಸಿದ್ದರು.
ಅಷ್ಟು ಅಮಾನ ಆದ ಮೇಲೆ ಅಲ್ಲಿ ವಾಸಿಸಲು ಸಾಧ್ಯವೇ? ಅಂತೂ ಪ್ರಮೋದ್ ಮಮತಾ ಮಲ್ಲೇಶ್ವರಂ ಫ್ಲಾಟ್ ಬಿಟ್ಟು ದೂರದ ಏರಿಯಾ ನಾಗರಬಾವಿಗೆ ಶಿಫ್ಟ್ ಆಗಿಹೋದರು. ಅಲ್ಲಿ ಎಲ್ಲರೂ ಅಪರಿಚಿತರೇ! ಹೀಗಾಗಿ ಇವರ ಎಂದಿನ ನಾಟಕ ಮುಂದುವರಿಯಿತು.
ಅಲ್ಲಿ 1 ವರ್ಷ ಹೇಗೋ ಕಾಲ ಕಳೆಯಿತು. ಏನೇ ಆಗಲಿ, ಒಂದು ಅಪಾರ್ಟ್‌ಮೆಂಟ್ ಎಂದ ಮೇಲೆ ಅಲ್ಲಿನ ಹೆಂಗಸರು ಮಾತನಾಡಿಸದೆ ಇರಲು ಸಾಧ್ಯವೇ? ಬೇರೆ ಫ್ಲಾಟ್‌ಗಳ ಹೆಂಗಸರೆಲ್ಲ ತನ್ನನ್ನು ವಿಚಿತ್ರವಾಗಿ ದೃಷ್ಟಿಸುವುದು ಅವಳ ಗಮನಕ್ಕೆ ಬಂತು. ಅವಳ ಕೊರಳಲ್ಲಿ ತಾಳಿ ಇಲ್ಲ, ಬಳೆ ಕಾಲುಂಗರವಿಲ್ಲ, ಒಂದೊಂದು ದಿನ ಬಿಂದಿ ಸಹ ಇಟ್ಟುಕೊಳ್ಳುತ್ತಿರಲಿಲ್ಲ. ಆಧುನಿಕ ಹೇರ್‌ಸ್ಟೈಲ್‌ನಿಂದಾಗಿ ತಲೆಗೂದಲನ್ನು ಹಾಗೇ ಇಳಿಬಿಡುತ್ತಿದ್ದಳು. ಒಟ್ಟಾರೆ ಅವಳು ಅವರೆಲ್ಲರಿಗೂ ಒಗಟಾಗಿದ್ದಳು.
ಒಂದು ದಿನ ಪಕ್ಕದ ಫ್ಲಾಟ್‌ನ ಆಶಾ ಇವಳನ್ನು ಕೇಳಿದಳು, “ನೀನು ತುಂಬಾ ಹೈಫೈ ಎಜುಕೇಟೆಡ್ ಇರಬಹುದು, ಆದರೆ ಒಟ್ಟಾರೆ ನಮ್ಮ ಸಂಪ್ರದಾಯಗಳನ್ನು ಪೂರ್ತಿ ಕಡೆಗಾಣಿಸಲಾಗದಲ್ಲವೇ? ನಿನ್ನ ಕೆಲಸದ ಸಲುವಾಗಿ ಮಾಡ್ ಡ್ರೆಸ್, ಬರಿ ಹಣೆ, ಕಾಲುಂಗುರ, ಬಳೆ ಇಲ್ಲದಿರಬಹುದು. ಕನಿಷ್ಠ ಕೊರಳಲ್ಲಿ ತಾಳಿಯಾದರೂ ಬೇಡವೇ?”
“ಅದೆಲ್ಲ ಪ್ರಮೋದ್‌ಗೂ ಇಷ್ಟವಿಲ್ಲ. ಎಲ್ಲ ಮೂಢನಂಬಿಕೆ. ಮನುಷ್ಯರ ನಡುವೆ ವಿಶ್ವಾಸ ಮುಖ್ಯ ಅಂತಾನೆ,” ಎಂದು ಏನೋ ನೆಪ ಹೇಳಿ ಅಲ್ಲಿಂದ ತಪ್ಪಿಸಿಕೊಂಡಳು. ಆದರೆ ಅಲ್ಲಿನ ಮಹಿಳೆಯರೆಲ್ಲ ಒಟ್ಟುಗೂಡಿದಾಗ ತನ್ನ ಬಗ್ಗೆ ಇಲ್ಲಸಲ್ಲದ ಮಾತುಗಳಾಡಿಕೊಳ್ಳುತ್ತಾರೆ ಎಂದು ಚೆನ್ನಾಗಿ ಗೊತ್ತಿತ್ತು.
ಮದುವೆ ಆಗಿ ಎಷ್ಟು ವರ್ಷಗಳಾಯ್ತು? ಮತ್ತಾರೋ ಒಮ್ಮೆ ಕೇಳಿದರು. ಮತ್ತೆ ತುಸು ಪ್ರೌಢ ವಯಸ್ಸಿನ ಹೆಂಗಸರು, “ಆದಷ್ಟು ಬೇಗ ಕೈಗೆ ಮಗು ಎತ್ತಿಕೊಳ್ಳಮ್ಮ. ಎಲ್ಲರಿಗೂ ಲಾಡು ಊಟ ಹಾಕಿಸುವಿರಂತೆ,” ಎಂದು ನಸುನಗುತ್ತಾ ಮಾತಿನಲ್ಲೇ ಕಟ್ಟಿಹಾಕುತ್ತಿದ್ದರು.
ಮಮತಾ ಇದಕ್ಕೆಲ್ಲ ಏನೆಂದು ಉತ್ತರಿಸಿಯಾಳು? ಯಾವ ವಿಷಯಕ್ಕಾಗಿ ಲಾಡು ಹಂಚುವುದು? ಮತ್ತೊಮ್ಮೆ ಆ ಹೆಂಗಸರು ನಿನ್ನ ತವರಿನವರು ಅಥವಾ ಅತ್ತೆಮನೆಯವರು ಏಕೆ ಬರುವುದೇ ಇಲ್ಲ ಎಂದು ಪ್ರಶ್ನಿಸುತ್ತಾರೆ. ಅವರ ಮಾತುಗಳಿಗೆ ಹಾರಿಕೆಯ ಉತ್ತರ ನೀಡಿ, ಹೇಗೋ ಅಲ್ಲಿಂದ ತಪ್ಪಿಸಿಕೊಳ್ಳುವಳು.
ಕೊನೆಗೆ ಆ ಜಾಗದಿಂದಲೂ ಬಹಿಷ್ಕಾರಕ್ಕೆ ಒಳಗಾಗಿ ಪ್ರಮೋದ್‌ನ ಆಫೀಸ್‌ಗೆ ತುಸು ಹತ್ತಿರವಾಗುವಂತೆ ಕೋರಮಂಗಲಕ್ಕೆ ಶಿಫ್ಟ್ ಆದರು. ಇಲ್ಲಿಗೆ ಬಂದು 6 ತಿಂಗಳಾಗಿತ್ತು.ಇದನ್ನೆಲ್ಲ ಯೋಚಿಸುತ್ತಲೇ ಅವಳು ಕಾಫಿ, ಪೇಪರ್ ಮುಗಿಸಿ ಎದ್ದು ಬಂದಳು. ಅವಳು ಸ್ನಾನ ಮುಗಿಸಿ ಬಂದಾಗ, ಆಗ ತಾನೇ ಪ್ರಮೋದ್ ಎದ್ದಿದ್ದ. ಅವನು ಆಕಳಿಸುತ್ತಾ ಮೈ ಮುರಿದು, “ಮಮ್ತಾ ಪ್ಲೀಸ್, ಸ್ವಲ್ಪ ಟೀ ಮಾಡ್ತೀಯಾ? ಯಾಕೋ ತಲೆ ನೋಯ್ತಿದೆ, ನಾನು ಮುಖ ತೊಳೆದುಬರ್ತೀನಿ,” ಎಂದ.ಪ್ರಸನ್ನಳಾಗಿದ್ದ ಮಮತಾ ಸರಿ ಎಂದು, ಇಬ್ಬರಿಗೂ ಆಗುವಂತೆ ಟೀ ತಯಾರಿಸಿದಳು. ಅದಾಗಿ ಅವನು ಸ್ನಾನ ಮುಗಿಸಿ ಬಂದಾಗ, ಇಬ್ಬರೂ ಬೆಳಗಿನ ಬ್ರೇಕ್ ಫಾಸ್ಟ್ ಹಾಗೂ ಶಾಪಿಂಗ್‌ಗಾಗಿ ಹೊರಗೆ ಹೊರಟರು. ಮತ್ತೊಂದು ರಜಾ ದಿನ ಮಮತಾ ಬಾಲ್ಕನಿಯಲ್ಲಿ ಕುಳಿತು ಕಾಫಿ ಹೀರುತ್ತಿದ್ದಳು. ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ಮಮತಾ ಬಾಗಿಲು ತೆರೆದಾಗ ಎದುರಿಗೆ ಒಬ್ಬ ಪ್ರೌಢ ಮಹಿಳೆ ನಿಂತಿದ್ದರು.
“ನಾವು ನಿಮ್ಮ ಪಕ್ಕದ ಫ್ಲಾಟ್‌ಗೆ ಹೊಸದಾಗಿ ಬಂದಿದ್ದೇವೆ. ನೀವು ಸಾಮಾನ್ಯವಾಗಿ ಹೊರಗೆ ಕಾಣಿಸುವುದೇ ಇಲ್ಲ. ಇವತ್ತು ಬಿಡುವಾಗಿ ಬಾಲ್ಕನಿಯಲ್ಲಿ ಕುಳಿತಿದ್ದರಲ್ಲ…. ನಾನೇ ಪರಿಚಯ ಮಾಡಿಕೊಳ್ಳೋಣ ಅಂತ ಬಂದೆ,” ಎಂದು ಆಕೆ ಸಹಜವಾಗಿ ಮುಗುಳ್ನಗುತ್ತಾ ಹೇಳಿದರು.
“ಬನ್ನಿ…. ಒಳಗೆ ಬನ್ನಿ…. ನಾನು ಜಾಬ್‌ನಲ್ಲಿದ್ದೀನಿ. ಬೆಳಗ್ಗೆ 9ಕ್ಕೆ ಮನೆ ಬಿಟ್ಟರೆ ಸಂಜೆ ಬರುವಷ್ಟರಲ್ಲಿ 8 ದಾಟಿರುತ್ತೆ. ಹೀಗಾಗಿ ಜಾಸ್ತಿ ಹೊರಗೆ ಕಾಣಿಸುವುದಿಲ್ಲ,” ಮಮತಾ ಆಕೆಯನ್ನು ಆದರದಿಂದ ಕರೆದು ಒಳಗೆ ಕೂರಿಸಿದಳು. ಆಕೆಯ ಮಮತಾಮಯಿ ವ್ಯವಹಾರ ಇವಳಿಗೆ ಬಹಳ ಆಪ್ತವೆನಿಸಿತು.
“ನಿಮ್ಮ ಹೆಸರು… ಮನೆಯವರು ಏನು ಮಾಡ್ತಿದ್ದಾರೆ?” ಆಕೆ ಮನೆಯನ್ನು ಆಮೂಲಾಗ್ರವಾಗಿ ಪರಿಶೀಲಿಸುತ್ತಾ ಕೇಳಿದರು.
ಮಮತಾಳಿಗೆ ಮನದಲ್ಲಿ ಏನೋ ಚುಚ್ಚಿದಂತಾಯಿತು. ಇಂಥ ಒಳ್ಳೆಯವರ ಬಳಿಯೂ ಸುಳ್ಳು ಹೇಳಬೇಕಲ್ಲ ಅನಿಸಿತು. ಏನು ಮಾಡುವುದು? ಇಂಥದ್ದೆಲ್ಲ ಈಗ ಪಳಗಿಹೋಗಿದೆ ಅನಿಸಿತು.
“ನಾನು ಮಮತಾ, ಬಿ.ಇ. ಮುಗಿಸಿ ಒಂದು ಎಂ.ಎನ್.ಸಿ.ಯಲ್ಲಿ ಎಂಜಿನಿಯರ್ ಆಗಿದ್ದೇನೆ. ಇವರು ಪ್ರಮೋದ್ ಅಂತ, ಬೇರೊಂದು ದೊಡ್ಡ ಖಾಸಗಿ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್. ಇಡೀ ವಾರ ಬೇಗ ಹೋಗಿ ಲೇಟಾಗಿ ಬರೋದು ಇದ್ದೇ ಇರುತ್ತಲ್ಲ…. ಇವತ್ತು ಭಾನುವಾರ ಅಂತ ಇನ್ನೂ ಮಲಗಿದ್ದಾರೆ,” ಮಮತಾ ಸಹಜವಾಗಿ ಉತ್ತರಿಸಲು ಯತ್ನಿಸಿದಳು.
ಪುಣ್ಯಕ್ಕೆ ಆಕೆ ಮಮತಾಳನ್ನು ಕೆದಕಿ ಕೆದಕಿ ವೈಯಕ್ತಿಕ ಪ್ರಶ್ನೆಗಳನ್ನೇನೂ ಕೇಳಲಿಲ್ಲ. ಸಧ್ಯ ಎಂದು ಅವಳು ನಿರಾಳವಾಗಿ ಉಸಿರುಬಿಟ್ಟಳು. ಇತರ ಹದಿನಾರಾಣೆ ಹೆಂಗಸರಂತೆ ಆಕೆಗೆ ಅತಿಯಾದ ಕುತೂಹಲವಿಲ್ಲ ಎಂದು ನೆಮ್ಮದಿಗೊಂಡಳು.
ಅದೂ ಇದೂ ಮಾತನಾಡುತ್ತಾ ಮಮತಾ ಸವಿತಾ ಆಂಟಿಗಾಗಿ ಕಾಫಿ ತಯಾರಿಸಿದಳು. ಅವರು ಮೊದಲು ಕೆ.ಆರ್.ಪುರಂನಲ್ಲಿ ಬಾಡಿಗೆಯ ಫ್ಲಾಟ್‌ನಲ್ಲಿದ್ದರಂತೆ. ಇದೀಗ ಕೋರಮಂಗಲದ ಈ ಫ್ಲಾಟ್‌ನ್ನು ಸ್ವಂತಕ್ಕೆ ಖರೀದಿಸಿ ಶಿಫ್ಟ್ ಆಗಿದ್ದೇವೆ ಎಂದು ತಿಳಿಸಿದರು. ಅವರ ಪತಿ ಸರ್ಕಾರಿ ನೌಕರಿ ಮಾಡುತ್ತಿದ್ದರು ಹಾಗೂ ಒಬ್ಬಳೇ ಮಗಳು ಋತು 2ನೇ ಪಿ.ಯು.ಸಿ. ಕಲಿಯುತ್ತಿದ್ದಳು.
ಆಕೆ ಹೊರಡುವಾಗ ಮಮತಾಳ ಶಾರ್ಟ್ ಹೇರ್ ಕಟ್ ತಮಗೆ ಬಹಳ ಇಷ್ಟವಾಯ್ತು ಎಂದು ಹೊಗಳಿದರು. ಮಮತಾ ಬಿಡುವಾಗಿದ್ದಾಗ ಅವಳು ಹೋಗುವ ಪಾರ್ಲರ್‌ಗೆ ತಮ್ಮ ಮಗಳು ಋತುವನ್ನು ಕರೆದೊಯ್ದು ಅದೇ ಸ್ಟೈಲ್‌ನಲ್ಲಿ ಹೇರ್ ಕಟ್ ಮಾಡಿಸುವಂತೆ ವಿನಂತಿಸಿದರು. ಮಮತಾ ಹಾಗೇ ಆಗಲೆಂದು ಖುಷಿಯಿಂದ ಒಪ್ಪಿದಳು.
ಅದರ ಮಾರನೇ ಶನಿವಾರ ಮಮತಾಳಿಗೆ ರಜೆ ಇತ್ತು. ಆದರೆ ಪ್ರಮೋದ್ ಪ್ರಾಜೆಕ್ಟ್ ಮುಗಿಸಬೇಕೆಂದು ಬೇಗನೆ ಆಫೀಸಿಗೆ ಹೊರಟಿದ್ದ. ಅವನು ತನಗಾಗಿ ಬ್ರೆಡ್ ಟೋಸ್ಟ್, ಆಮ್ಲೆಟ್ ತಯಾರಿಸಿ ತಿಂಡಿ ಮುಗಿಸಿದ್ದ. ಮಮತಾಳಿಗಾಗಿ ಉಳಿದದ್ದು ಎತ್ತಿಟ್ಟು ಹೊರಟುಬಿಟ್ಟ. ಇಬ್ಬರೂ ಆಫೀಸ್ ನಲ್ಲೇ ಲಂಚ್ ಮುಗಿಸುತ್ತಿದ್ದರು.
ನಿಧಾನವಾಗಿ ಎದ್ದ ಮಮತಾ, ಕಾಫಿ ಪೇಪರ್ ಮುಗಿಸಿದಳು. ಆಮ್ಲೆಟ್‌ಸ್ಯಾಂಡ್‌ವಿಚ್ ತಯಾರಿಸಿ ಬೆಳಗಿನ ಟಿ.ವಿ. ಕಾರ್ಯಕ್ರಮ ನೋಡುತ್ತಿದ್ದಳು. ಸ್ವಲ್ಪ ಹೊತ್ತಿಗೆ ಕಾಲಿಂಗ್ ಬೆಲ್ ಸದ್ದಾಗಲು ಹೋಗಿ ಬಾಗಿಲು ತೆರೆದಳು. ಕೆಲಸದವಳು ಬೇಗ ಬಂದಿರಬೇಕೆಂದು ಬಾಗಿಲು ತೆರೆದವಳ ಎದುರಿಗೆ 16-17ರ ಮುದ್ದಾದ ಹುಡುಗಿ ನಿಂತಿದ್ದಳು.
“ಹಾಯ್ ಅಕ್ಕಾ…. ನಾನು ಋತು. ಅಮ್ಮ ನಿಮಗೆ ಹೇಳಿರಬೇಕಲ್ವಾ?” ಎಂದು ಋತು ಬಹಳ ಆತ್ಮೀಯತೆಯಿಂದ ಅವಳ ಕೈ ಕುಲುಕಿದಳು.
ಮಮತಾ ನಸುನಗುತ್ತಾ ಅವಳನ್ನು ಬರಮಾಡಿಕೊಂಡಳು. ಅವಳೊಂದಿಗೆ ಆರಾಮವಾಗಿ ಕುಳಿತು ಮಾತಿಗೆ ತೊಡಗಿದಳು. ಋತು ಬಹಳ ಮುದ್ದಾದ, ಸ್ನೇಹಮಯಿ ಹುಡುಗಿ. ಅವಳ ಕಂಗಳಲ್ಲಿದ್ದ ಹುಡುಗುತನ ಮಮತಾಳಿಗೆ ಬಹಳ ಇಷ್ಟವಾಯ್ತು. ಸ್ವಲ್ಪ ಹೊತ್ತಿನ ಮಾತುಕಥೆಯಲ್ಲೇ ಅವರಿಬ್ಬರೂ ಎಷ್ಟೋ ಕಾಲದ ಪರಿಚಿತರು ಎಂಬಂತೆ ಪರಸ್ಪರ ಬೆರೆತು ಹೋದರು. ಮಮತಾಳಿಗೆ ಋತುವಿನ ತುಂಟತನದ ಮಾತುಗಳು ಬಹಳ ಇಷ್ಟವಾದವು. ಎಷ್ಟೋ ವರ್ಷಗಳ ನಂತರ, ತನ್ನ ಮನಸ್ಸು ಹಗುರ ಮಾಡಿಕೊಳ್ಳುವಂತೆ ಆತ್ಮೀಯರ ಬಳಿ ಹರಟುತ್ತಿರುವಂಥ ಸಮಾಧಾನ ಅವಳಿಗಿತ್ತು.
ಪ್ರಮೋದ್ ಜೊತೆ ಅವಳು ವಾಸಿಸಲು ಆರಂಭಿಸಿದಾಗಿನಿಂದ ಒಂದು ರೀತಿಯಲ್ಲಿ ಅವಳು ಸಮಾಜದಿಂದ ವಿಮುಖಳಾಗಿದ್ದಳು. ಆಫೀಸ್‌ನಲ್ಲೂ ಸಹ ಕೆಲವರಿಗೆ ಮಾತ್ರವೇ ಪ್ರಮೋದ್ ಜೊತೆ ಅವಳ ಲಿವ್ ಇನ್ ಸಂಬಂಧದ ಕುರಿತು ಗೊತ್ತಿತ್ತು. ಅವರೊಂದಿಗೆ ಮಾತ್ರ ಇವಳು ಹೆಚ್ಚಾಗಿ ಒಡನಾಟ, ಸುತ್ತಾಟ ಇಟ್ಟುಕೊಂಡಿದ್ದಳು. ಅವಳಿಗೆ ಹೇಳಿಕೊಳ್ಳುವಂಥ ಬೇರಾವ ಗೆಳತಿಯರ ಬಳಗ ಇರಲಿಲ್ಲ.
ಹೀಗೆ ಇವರಿಬ್ಬರ ಹರಟೆ, ಟಿ.ವಿ. ವೀಕ್ಷಣೆ, ಮನೆ ಲಾನ್ ಪರಿಚಯ ಸುಮಾರು ಹೊತ್ತು ನಡೆಯಿತು. ಆಗ ಮಮತಾ ತನಗಾಗಿ ಇನ್ನೂ ಏನೂ ಅಡುಗೆ ಮಾಡಿಕೊಂಡಿಲ್ಲ, ಪ್ರಮೋದ್ ಮಧ್ಯಾಹ್ನ ಅಲ್ಲೇ ಊಟ ಮಾಡುತ್ತಾನೆ ಎಂದು ತಿಳಿದ ಋತು, ಮಮತಾ ಅಂದು ತಮ್ಮ ಮನೆಯಲ್ಲೇ ಊಟ ಮಾಡಬೇಕೆಂದು ಹಠ ಹಿಡಿದಳು. ಸಂಕೋಚದ ಕಾರಣ ಮಮತಾ ಖಂಡಿತಾ ಬೇಡವೆಂದು ನಿರಾಕರಿಸಿದಳು. ಆದರೆ ಋತು ಕೇಳಬೇಕಲ್ಲ? ತಮ್ಮ ಫ್ರೆಂಡ್‌ಶಿಪ್ ಸಲುವಾಗಿ ಬರಲೇಬೇಕೆಂದು ಆಗ್ರಹಪಡಿಸಿದಳು. ಕೊನೆಗೆ ಮಮತಾ ಊಟಕ್ಕೆಂದು ಅವರ ಮನೆಗೆ ಹೋಗಲೇಬೇಕಾಯಿತು.
ಮನೆಗೆ ಬಂದ ತಕ್ಷಣ ಅಮ್ಮನಿಗೆ ಋತು ಸುದ್ದಿ ಮುಟ್ಟಿಸಿದಳು. ಸವಿತಾ ಆಂಟಿ ಬಹಳ ಹಸನ್ಮುಖರಾಗಿ, “ಅಯ್ಯೋ, ಇದಕ್ಕೆಲ್ಲ ಸಂಕೋಚಪಡುತ್ತಾರೆಯೇ? ನಿನ್ನ ತಾಯಿಯ ಬಳಿ ಊಟ ಮಾಡುತ್ತಿದ್ದೀನಿ ಅಂತ ತಿಳಿದುಕೊಳ್ಳಮ್ಮ. ನೀನೂ ಸಹ ನನಗೆ ಋತುವಿನಂತೆ ಇನ್ನೊಬ್ಬ ಮಗಳಿದ್ದ ಹಾಗೆ,” ಎಂದು ತುಂಬು ಮನಸ್ಸಿನಿಂದ ಸಾಕ್ಷಾತ್ ಅನ್ನಪೂರ್ಣೆಯಾಗಿ ಧಾರಾಳವಾಗಿ ಬಡಿಸಿದರು. ಮಮತಾಳಿಗಂತೂ ಅಮ್ಮನ ಕೈ ತುತ್ತು ತಿಂದಷ್ಟೇ ಸಮಾಧಾನವಾಗಿ ಕಂಗಳು ತುಂಬಿಬಂದವು. ಎಷ್ಟೋ ದಿನಗಳ ನಂತರ ತೃಪ್ತಿಕರಾಗಿ ಅವಳು ಎರಡು ತುತ್ತು ಹೆಚ್ಚಾಗಿಯೇ ಊಟ ಮಾಡಿದ್ದಳು.
ಊಟ ಆದ ಮೇಲೆ ಇವರು ಮೂವರೂ ಹಾಯಾಗಿ ಹರಟೆಗೆ ಕುಳಿತರು. ಋತು ಎಲ್ಲರಿಗೂ ಕಿತ್ತಳೆಹಣ್ಣು ಬಿಡಿಸಿಕೊಟ್ಟಳು. ಎಲ್ಲರೂ ಟಿ.ವಿ. ಸೀರಿಯಲ್ ನೋಡುತ್ತಾ ಹಾಯಾಗಿ ಹರಟುತ್ತಾ ಇದ್ದುಬಿಟ್ಟರು. ಋತು ಕೇರಂ ಆಡೋಣ ಅಂದಾಗ, ಮೂವರೂ 2 ಆಟ ಮುಗಿಸುವಷ್ಟರಲ್ಲಿ 4 ಗಂಟೆ ಆಗಿತ್ತು. ಋತು ತಾನೇ ಎಲ್ಲರಿಗೂ ಕಾಫಿ ಮಾಡಿ ತಂದಳು.
ಅದಾದ ಮೇಲೆ ಋತು ಮಮತಾ ಸಿದ್ಧರಾಗಿ ಪಾರ್ಲರ್‌ಗೆ ಹೊರಟರು. ಅಲ್ಲಿ ಋತುವಿಗೆ ಹೇರ್ ಸ್ಟೈಲ್ ಶಾರ್ಟ್ ಮಾಡಿಸಲಾಯಿತು. ಋತುವಿಗಂತೂ ಬಹಳ ಖುಷಿ! ಅಲ್ಲಿಂದ ಬರುವಾಗ ಮಾರ್ಕೆಟ್ ಬಳಿ ಮಮತಾ ಅವಳಿಗೆ ಐಸ್‌ಕ್ರೀಂ ಕೊಡಿಸಿದಳು. ಮಮತಾಳಿಗೆ ತಾನು ಕಳೆದುಕೊಂಡಿದ್ದ ಬಾಲ್ಯ ಮತ್ತೆ ದೊರಕಿದಂತೆನಿಸಿತು. ಆ ಸಂಜೆ ಮಮತಾ ಮನೆಗೆ ಮರಳಿದಾಗ ಬಹಳ ಸಂತೋಷಗೊಂಡಿದ್ದಳು. ಅದಾದ ಮೇಲೆ ಮಮತಾ ಋತು ಜೊತೆ ರಜಾ ದಿನಗಳಲ್ಲಿ, ಬಿಡುವಿದ್ದಾಗೆಲ್ಲ ಸುತ್ತಾಡುವುದು ಜಾಸ್ತಿ ಆಯಿತು. ಸವಿತಾ ಆಂಟಿಗೆ ಬೇಕಾದುದನ್ನು ಆಫೀಸ್‌ನಿಂದ ಬರುವಾಗ ತಾನೇ ತಂದುಬಿಡುವುಳು. ಅವರ ಮನೆ ಬಿಲ್ ಇತ್ಯಾದಿಗಳು, ಹೊರಗಿನ ಓಡಾಟದ ಕೆಲಸಗಳನ್ನೆಲ್ಲ ಹಗುರ ಮಾಡಿಕೊಟ್ಟಿದ್ದರಿಂದ, ಸವಿತಾ ಆಂಟಿಗೆ ಯಾವ ತೊಂದರೆಯೂ ಇಲ್ಲದೆ ಎಲ್ಲಾ ಹೊರಗಿನ ಕೆಲಸಗಳೂ ಸಲೀಸಾಗಿ ಆಗತೊಡಗಿದವು.
ಸವಿತಾ ಆಂಟಿ, ಅವರ ಪತಿ ಸತೀಶ್ ರಾವ್, ಅವರ ಮಗಳು ಋತು ಕ್ರಮೇಣವಾಗಿ ಮಮತಾ ಜೊತೆ ಚೆನ್ನಾಗಿ ಹೊಂದಿಕೊಂಡು ಬಿಟ್ಟರು. ಬಲು ಆತ್ಮೀಯವಾಗಿ ಮಾತನಾಡಿಸುತ್ತಾ ಅವರೆಲ್ಲ ಬಹುಕಾಲದ ನೆಂಟರೇನೋ ಎಂಬಂತೆ ಆಗಿಹೋದರು. ಹೀಗೆ ಒಮ್ಮೆ ಪ್ರಮೋದ್, ಮಮತಾ ಹೊರಗೆ ಹೊರಟಿದ್ದಾಗ ಋತು ಸಹ ಏನೋ ಶಾಪಿಂಗ್ ಮಾಡಬೇಕೆಂದು ಅವರ ಜೊತೆ ಹೊರಟೇಬಿಟ್ಟಳು. ಅದಾದ ಮೇಲೆ ಅವರೊಂದಿಗೆ ಸಿನಿಮಾ ನೋಡಾಟ ಆಯ್ತು. ಇದರಿಂದ ತಮ್ಮ ಪ್ರೈವೆಸಿಗೆ ಧಕ್ಕೆ ಎಂದು ಪ್ರಮೋದ್ ಬಹಳ ಕಸಿವಿಸಿಗೊಂಡ.
ಮನೆಗೆ ಹೋದ ಮೇಲೆ ಪ್ರಮೋದ್ ಮೊದಲ ಬಾರಿ ಮಮತಾಳ ಮೇಲೆ ರೇಗಿದ್ದ, “ನೀನೇಕೆ ಆ ಹುಡುಗಿಯನ್ನು ಗಂಟು ಹಾಕಿಕೊಂಡು ನಮ್ಮ ಜೊತೆ ಕರೆತರಬೇಕು? ನಾನು ಎಂಜಾಯ್ ಮಾಡಲೆಂದೇ ನಿನ್ನ ಜೊತೆ ಸಂಬಂಧ ಬೆಳೆಸಿದ್ದು…. ಈ ಬೇಡದ ತಕರಾರುಗಳನ್ನು ತಲೆಗೆ ಕಟ್ಟಿಕೊಳ್ಳಲಿಕ್ಕಲ್ಲ. ಮುಂದೆ ಎಂದೂ ಈ ಹುಡುಗಿಯನ್ನು ನಮ್ಮ ಜೊತೆ ಕರೆತರಬೇಡ….. ಆದಷ್ಟೂ ನೀನು ಅವಳೊಂದಿಗೆ ಟಚ್ ಇಟ್ಟುಕೊಳ್ಳದೇ ಇರುವುದೇ ಒಳ್ಳೆಯದು!”
ಅವಳೇನೂ ಹೆಚ್ಚಿಗೆ ವಾದಿಸಲು ಹೋಗಲಿಲ್ಲ. ಅವಳ ಮನಸ್ಥಿತಿ ಅರಿಯುವ ಗೋಜಿಗೆ ಹೋಗದೆ ಆ ರಾತ್ರಿ ಎಂದಿನಂತೆ ಪ್ರಮೋದ್ ಅಳನ್ನು ತನ್ನ ಮಗ್ಗುಲಿಗೆ ಎಳೆದುಕೊಂಡು ಆಕ್ರಮಿಸಿದ. ಅವಳಿಗೆ ಅಂದೇನೂ ಬೇಡವಾಗಿತ್ತು. ತನ್ನ ಬಯಕೆ ತೀರಿಸಿಕೊಂಡು ಅವನು ಗೊರಕೆಗೆ ಶರಣಾದಾಗ, ತನ್ನ ಸ್ಥಿತಿ ನೆನೆದು ಮೊದಲ ಬಾರಿಗೆ ಮಮತಾಳಿಗೆ ತನ್ನ ಮೇಲೆಯೇ ಜಿಗುಪ್ಸೆ ಮೂಡಿತು.
ಅವಳಿಗೆ ನಿದ್ದೆ ಸಂಪೂರ್ಣ ಹಾರಿಹೋಗಿತ್ತು. `ಈ ಸೌಭಾಗ್ಯಕ್ಕಾಗಿಯೇ ತಾನು ಹೀಗಿರುವ ಹಾಗಾಯ್ತೆ? ಅವನ ಧೋರಣೆಯಾದರೂ ಏನು? ಅವನು ಬಯಸಿದಾಗ ಅವನ ಮಗ್ಗುಲಾಗಬೇಕು, ಹೇಳಿದಂತೆ ನಡೆಯಬೇಕು. ಬೇಡ ಅಂದರ ಜೊತೆ ಮಾತನಾಡಬಾರದು…. ಇದೆಂಥ ಹಿಪೋಕ್ರಸಿ?’ ಮಮತಾಳ ಯೋಚನೆ ಮುಗಿಯುವಂತೆಯೇ ಇರಲಿಲ್ಲ.
ಈ ಊರಿನಲ್ಲಿ ತನ್ನ ಪರಿಚಿತರು ಅಂತ ಇರುವವರಾದರೂ ಎಷ್ಟು ಮಹಾ? ಅವಳಿಗೆ ಆಪ್ತರಾಗಿದ್ದ ಗೆಳತಿಯರು ವರ್ಗಾವಣೆ, ಮದುವೆ ಎಂದು ಬೆಂಗಳೂರಿನಿಂದ ದೂರ ಹೊರಟುಹೋಗಿದ್ದರು. ಈ ಊರಿನಲ್ಲೇ ಕೆಲವರು ಮದುವೆಯಾಗಿ ತಂತಮ್ಮ ಸಂಸಾರಗಳಲ್ಲಿ ಮುಳುಗಿಹೋಗಿದ್ದರು. ಅಂಥವರಿಗೆ ಇವಳ ಗೆಳೆತನ ಬೇಕಿರಲಿಲ್ಲ. ಇವಳ ಕಥೆ ಗೊತ್ತಿದ್ದ ಅವರು ಬೇಕೆಂದೇ ತಮ್ಮ ಕೌಟುಂಬಿಕ ಸನ್ನಿವೇಶದಿಂದ ಇವಳನ್ನು ದೂರ ಇಟ್ಟಿದ್ದರು.
“ಸಾರಿ ಕಣೆ ಮಮ್ತಾ, ನಾನೀಗ ನಿನ್ನನ್ನು ನಮ್ಮ ಮನೆಗೆ ಕರೆಯಲು ಆಗೋಲ್ಲ. ನಮ್ಮದು ಜಾಯಿಂಟ್ ಫ್ಯಾಮಿಲಿ ಅಂತ ನಿನಗೇ ಗೊತ್ತಿದೆಯಲ್ಲ…. ಮನೆಯಲ್ಲಿ ಅತ್ತೆ, ಮಾವ, ನಾದಿನಿ, ಮೈದುನ ಎಲ್ಲರೂ ಇರುತ್ತಾರೆ. ನೀನು ಒಬ್ಬಳೇ ಬಂದೆ ಅಂತಿಟ್ಕೊ, ನಮ್ಮತ್ತೆ ಮಾತಿನ ಮಧ್ಯೆ ನಿನ್ನ ಮದುವೆಯ ವಿಷಯ ಖಂಡಿತಾ ತೆಗೆಯುತ್ತಾರೆ. ಅಪ್ಪಿತಪ್ಪಿ ಪ್ರಮೋದ್ ಜೊತೆ ಬಂದೆ ಅಂತಂದ್ರೆ ನೂರು ವಿಧದ ಮಾತುಗಳು ಬರುತ್ತವೆ,” ಎಂದು ಒಮ್ಮೆ ಮಾರ್ಕೆಟ್‌ನಲ್ಲಿ ಸಿಕ್ಕಾಗ ಗೆಳತಿ ಕಾಂತಿ ಹೇಳಿದ್ದಳು.
“ನಾನು ನನ್ನ ಗಂಡನಿಗೂ ಸಹ ನಿನ್ನ ಹಾಗೂ ಪ್ರಮೋದ್ ನಡುವಿನ ಲಿವ್ ಇನ್ ಬಗ್ಗೆ ಹೇಳಿಲ್ಲ. ನಿನ್ನ ಬಗ್ಗೆ ಅವರು ಎಲ್ಲಾ ತಿಳಿದುಕೊಂಡ ಮೇಲೆ, ನಾನು ನಿನ್ನ ಫ್ರೆಂಡ್ ಆದ್ದರಿಂದ ನನ್ನ ಹಿಂದಿನ ಚರಿತ್ರೆ ಹೇಗೋ ಏನೋ ಎಂಬ ಸಂದೇಹ ಬಂದರೆ ನನಗೇ ಕಷ್ಟ. ಸಾರಿ ಕಣೆ….. ನನ್ನದು ಮದುವೆಯಾಗಿ ಇನ್ನೂ 3 ತಿಂಗಳು ಸಹ ಆಗಿಲ್ಲ. ನನ್ನ ವೈವಾಹಿಕ ಜೀವನಕ್ಕೆ ಯಾವುದೇ ಧಕ್ಕೆ ತಂದುಕೊಳ್ಳಲಿಕ್ಕೂ ಇಷ್ಟವಿಲ್ಲ, ಆ ರಿಸ್ಕೇ ಬೇಡ,” ಮತ್ತೊಮ್ಮೆ ಅಂಜು ಹೇಳಿದ್ದಳು.
ಇರುವವರಲ್ಲಿ ತನ್ನ ಆಪ್ತರೆನಿಸಿದ್ದ ಅಂಜು, ಕಾಂತಿಯಂಥವರೇ ತನ್ನ ಬಗ್ಗೆ ಹೀಗೆಲ್ಲ ಅಂದುಕೊಳ್ಳುವಾಗ, ತನ್ನನ್ನು ಅವಾಯ್ಡ್ ಮಾಡುವಾಗ ಇನ್ನು ಬೇರೆಯವರು ಏನೆಂದುಕೊಳ್ಳಬಹುದು…..? ಅವರ ಮಾತುಗಳು ಅವಳನ್ನು ಬಹಳ ಘಾಸಿಗೊಳಿಸಿದ್ದವು. ಅಂದಿನಿಂದಲೇ ಅವಳು ಅವರಿಬ್ಬರ ಜೊತೆ ಗೆಳೆತನ ತೊರೆದಳು. ತನ್ನ ಮೊಬೈಲ್‌ನಲ್ಲಿದ್ದ ಅವರಿಬ್ಬರ ಹೆಸರನ್ನೂ ತೆಗೆದುಹಾಕಿದಳು. ಅದಾದ ಮೇಲೆ ಅವರನ್ನೆಂದೂ ಭೇಟಿಯಾಗಲು ಪ್ರಯತ್ನಿಸಲಿಲ್ಲ. ಅವರೂ ಸಹ ಅಪ್ಪಿತಪ್ಪಿಯೂ ಇವಳಿಗೆ ಫೋನ್ ಮಾಡುವ ಗೋಜಿಗೇ ಹೋಗಲಿಲ್ಲ.
ತನ್ನ ಹಾಗೂ ಪ್ರಮೋದ್‌ನ ಸಂಬಂಧದಿಂದ ಸಮಾಜದಲ್ಲಿ ತಾನು ಯಾವ ಸ್ಥಾನದಲ್ಲಿದ್ದೇನೆ ಎಂದು ಅವಳು ಗುರುತಿಸಿದಳು. ಆ ಕಾರಣದಿಂದ ಇವರ ಗೆಳೆತನ ಕಳೆದುಕೊಂಡದ್ದು ಅವಳಿಗೊಂದು ಆಘಾತವಾಯಿತು. ಆಗಿನಿಂದ ಮಮತಾ ಒಂಟಿತನದ ಬೇಗೆಯಲ್ಲಿ ಬೆಂದುಹೋಗುತ್ತಿದ್ದಳು. ಹಾಗಿರುವಾಗ ಸವಿತಾ ಆಂಟಿ ಮತ್ತು ಋತುವಿನ ಒಡನಾಟ ಅವಳಿಗೆ ಮರುಳುಗಾಡಿನ ಓಯಸಿಸ್ ಆಗಿತ್ತು. ಅವರ ಸಂಪರ್ಕದಿಂದಾಗಿ ಅವಳಿಗೆ ಎಷ್ಟೋ ವರ್ಷಗಳ ಬಳಿಕ ಉತ್ತಮ ಕೌಟುಂಬಿಕ ಸಾಂಗತ್ಯ ಸಿಕ್ಕಿತ್ತು. ಅಂಥ ಸೌಹಾರ್ದತೆಯನ್ನೂ ತಾನು ಕಳೆದುಕೊಳ್ಳಬೇಕೇ?
ಅದು ಹೇಗೆ ಹರಡಿತೋ ಏನೋ, ಕೇವಲ ಆಪ್ತೇಷ್ಟರಿಗೆ ಮಾತ್ರ ಗೊತ್ತಿದ್ದ ಇವಳ ಲಿವ್ ಇನ್ ಸಂಬಂಧ ಆಫೀಸಿನಲ್ಲಿ ಎಲ್ಲರಿಗೂ ಗೊತ್ತಾಗಿಹೋಗಿತ್ತು. ಹುಡುಗಿಯರು ಆಗಾಗ ಅವಳತ್ತ ವ್ಯಂಗ್ಯವಾಗಿ ನೋಡಿ ತಮ್ಮಲ್ಲೇ ಏನೋ ಗುಸುಗುಸು ಮಾತನಾಡಿಕೊಳ್ಳುತ್ತಾ, ಕಿಸಕ್ಕನೇ ನಗುವರು. ಅವಳಿಗಿಂತ ಹಿರಿಯ ಮಹಿಳಾ ಸಹೋದ್ಯೋಗಿಗಳು ಅವಳೊಂದಿಗೆ ಶಿಷ್ಟಾಚಾರವಾಗಿ ಮಾತನಾಡುವುದನ್ನೇ ಬಿಟ್ಟರು. ಪುರುಷ ಸಹೋದ್ಯೋಗಿಗಳಂತೂ ತಾವು ಒಂದು ಚಾನ್ಸ್ ಟ್ರೈ ಮಾಡಬಾರದೇಕೆ ಎಂಬಂತೆ ಲೋಲುಪ ದೃಷ್ಟಿಯಿಂದ ಅವಳೆಡೆ ವಿಚಿತ್ರವಾಗಿ ದಿಟ್ಟಿಸುತ್ತಿದ್ದರು.
ಮಮತಾಳಿಗೆ ಫೈಲ್ ಇತ್ಯಾದಿ ಕೊಡಬೇಕಾದಾಗ ಆ ಪುರುಷ ಸಹೋದ್ಯೋಗಿಗಳು ಬೇಕೆಂದೇ ಅವಳ ಮೈಕೈ ಸೋಕಿಸುವುದು, ಅಗತ್ಯವಿರಲಿ ಬಿಡಲಿ, ಅವಳ ಟೇಬಲ್ ಬಳಿ ನಿಂತು ಮಾತನಾಡುವುದು ಇತ್ಯಾದಿ ಮಾಡುತ್ತಿದ್ದರು. ಅವರ ತುಟಿಗಳಲ್ಲಿ ಸದಾ ಒಂದು ಕುಟಿಲ ನಗು ತುಳುಕುತ್ತಿತ್ತು. ಅವರ ಕುಚೋದ್ಯ ಗಮನಿಸಿ ಮಮತಾಳಿಗೆ ಮೈ ಉರಿದುಹೋಗುತ್ತಿತ್ತು.
ಮೊದಲೆಲ್ಲ ಇಬ್ಬರೂ ಕೂಡಿಯೇ ಮನೆಯ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು. ಇತ್ತೀಚಿಗೆ ಹಲವು ದಿನಗಳಿಂದ ಪ್ರಮೋದ್‌ನ ವ್ಯವಹಾರ ತುಸು ಬದಲಾಗಿತ್ತು. ಈಗ ಪ್ರತಿಯೊಂದು ಕೆಲಸಕ್ಕೂ ಮಮತಾಳ ಮೇಲೆ ಅವಲಂಬಿತನಾಗಿದ್ದ. ಅವಳಿಗೆ ರಜೆ ಇದ್ದು ತಾನು ಆಫೀಸಿಗೆ ಹೋಗಬೇಕಾದ ಸಂದರ್ಭವಿದ್ದರೆ ಮಮತಾಳೇ ಅಡುಗೆ ಮಾಡಿ ಪ್ಯಾಕ್ ಮಾಡಿ ಕೊಡಲಿ ಎಂದು ಅಪೇಕ್ಷಿಸುತ್ತಿದ್ದ. ಜೊತೆಗೆ ಬಟ್ಟೆಗಳನ್ನೂ ಅವಳೇ ಒಗೆಯಬೇಕಿತ್ತು.
ಹಿಂದೆಲ್ಲ ಪ್ರಮೋದ್ ಪ್ರೀತಿಯಿಂದ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದ, “ಮಮ್ತಾ, ಪ್ಲೀಸ್ ನನ್ನ ಈ 2 ಪ್ಯಾಂಟ್ ಶರ್ಟ್ ವ
ವಾಶಿಂಗ್ ಮೆಶೀನ್‌ಗೆ ಹಾಕಿಬಿಡು. ನಾಳೆ ಲಂಚ್ ಪ್ಯಾಕ್ ಮಾಡಿ ನಾನು ಆಫೀಸಿಗೆ ಹೋಗುವಾಗ ಕೊಟ್ಟುಬಿಡು. ಸಂಜೆ ಇಬ್ಬರೂ ಹೊಸ ಸಿನಿಮಾಗೆ ಹೋಗೋಣ,” ಎಂದು ಪುಸಲಾಯಿಸುತ್ತಿದ್ದ. ಈಗ ಅವಳ ಕೈಲಿ ಈ ಕೆಲಸ ಮಾಡಿಸುವುದು ತನ್ನ ಹಕ್ಕೆಂದೇ ಭಾವಿಸಿದ್ದ. ಅವನ ಮಾತುಗಳಲ್ಲಿ ಸದಾ ಪತಿಯ ಜೋರು ಅಡಗಿರುತ್ತಿತ್ತು. ಸಮರ್ಪಣೆಯ ಭಾವದ ಜಾಗದಲ್ಲಿ ಬೇಡಿಕೆಗಳು ಹೆಚ್ಚಾಗುತ್ತಿದ್ದವು.
ಕಷ್ಟಗಳು ಬಂದರೆ ಒಟ್ಟೊಟ್ಟಿಗೆ ಬರುತ್ತವಂತೆ. ಇವನ್ನೆಲ್ಲ ಅವಳು ಹೇಗೋ ಸರಿದೂಗಿಸಿಕೊಳ್ಳುವಷ್ಟರಲ್ಲಿ ಇದ್ದಕ್ಕಿದ್ದಂತೆ ಸವಿತಾ ಆಂಟಿ ಮತ್ತು ಅವರ ಮಗಳು ಋತು ಇವಳ ಜೊತೆ ಮುಖ ಕೊಟ್ಟು ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಅಪರೂಪಕ್ಕೆ ಎದುರಾದಾಗ ಹಾಯ್, ಹಲೋ ಅಷ್ಟಕ್ಕೇ ಸೀಮಿತವಾಯಿತೇ ಹೊರತು, ಹಿಂದಿನಂತೆ ಮನೆಗೆ ಬಂದುಹೋಗುವ ಬಾಬತ್ತೇ ಇರಲಿಲ್ಲ. ಋತು ಸಹ ಆದಷ್ಟೂ ದೂರದೂರವೇ ಇದ್ದುಬಿಟ್ಟಳು. ಹಿಂದಿನ ತರಹ ರಜೆ ಇದ್ದಾಗ ಹರಟೆ, ಊಟ ಅದೆಲ್ಲ ಕನಸಾಯಿತು.
ಹೀಗೆ ಮಮತಾ ಮತ್ತೆ ಒಂಟಿ ಆಗಿಹೋದಳು. ಒಂದು ಶನಿವಾರ ಪ್ರಮೋದ್ ಆಫೀಸಿಗೆ ಹೋಗಿದ್ದಾಗ, ಮಮತಾಳಿಗೆ ಒಬ್ಬಳೇ ಕುಳಿತು ಟಿ.ವಿ. ನೋಡಿ ನೋಡಿ ಸಾಕಾಯ್ತು. ಇದೇ ಸದವಕಾಶ ಎಂದು ಅವಳು ನೇರವಾಗಿ ಸವಿತಾ ಆಂಟಿಯನ್ನು ಮಾತನಾಡಿಸಲು ಅವರ ಮನೆಗೆ ಹೋದಳು.
“ಏನಾಯ್ತು ಆಂಟಿ, ಇತ್ತೀಚೆಗೆ ಋತು ಬಹಳ ಬಿಝಿ ಆಗ್ಬಿಟ್ಟಿದ್ದಾಳೆ, ಸಿಗೋದೇ ಇಲ್ವಲ್ಲ….? ಅವಳು ನನಗೆ ಹೊರಗೆ ಸಿಕ್ಕಿ ಎಷ್ಟು ದಿನಗಳಾಯಿತೋ?”
“ಋತುವಿನ ಪರೀಕ್ಷೆಗಳು ಹತ್ತಿರ ಬರ್ತಿದೆಯಮ್ಮ… ಪ್ರಿಪ್ರೇಟರಿ ಪರೀಕ್ಷೆಗೆ ಬಹಳ ಸೀರಿಯಸ್ ಆಗಿ ರೆಡಿ ಆಗ್ತಿದ್ದಾಳೆ. ಹೀಗಾಗಿ ಹೊರಗೆಲ್ಲೂ ಹೋಗೋದೇ ಇಲ್ಲ….” ಸವಿತಾ ಹೇಳಿದರು.
“ಆಂಟಿ, ಇನ್ನೊಂದು ಮಾತು ಕೇಳಬೇಕಿತ್ತು. ಬಹಳ ದಿನಗಳಿಂದ ನೀವು ನನ್ನನ್ನು ಅವಾಯ್ಡ್ ಮಾಡ್ತಿದ್ದೀರಿ. ಏನಾಯ್ತು ಆಂಟಿ? ನನ್ನಿಂದ ಏನಾದರೂ ತಪ್ಪಾಯಿತೇ?” ಮಮತಾ ಹೆಚ್ಚು ಹರಟೆ ಹೊಡೆಯದೆ ನೇರವಾಗಿ ವಿಷಯಕ್ಕೆ ಬಂದಳು.
“ನೋಡಮ್ಮ ಮಮತಾ, ಇದು ನಿನ್ನ ಪರ್ಸನಲ್ ವಿಷಯನೇ ಇರಬಹುದು, ನಿನ್ನ ಜೀವನ ಹೇಗಿರಬೇಕು. ಅಂತ ನಿರ್ಧರಿಸುವವಳು ನೀನೇ. ಆದರೆ ಸಾರಿ, ಹೀಗೆ ಏನೋ ವಿಷಯ ಕೇಳಿಬಂತು. ನನಗೆ ಗುರುತಿರುವವರು ಹೇಳಿದರು, ನಿಮ್ಮಿಬ್ಬರದು ಮದುವೆ ಆಗಿಲ್ಲ…. ಕೇವಲ ಲಿವ್ ಇನ್ ಅಂತ. ಋತು ಅಂತೂ ಇನ್ನೂ ಹದಿಹರೆಯದವಳು. ಅವಳಿಗೆ ಯಾವುದು ಸರಿ, ಯಾವುದು ತಪ್ಪು ನಿರ್ಧರಿಸುವುದು ಈಗ ಸುಲಭ ಅಲ್ಲ. ಆದ್ದರಿಂದ ಈ ಹಸಿ ಮನಸ್ಸಿನ ಮೇಲೆ ಇಂತಹ ವಿಷಯಗಳ ದುಷ್ಪ್ರಭಾವ ಆಗುವುದು ನಮ್ಮಿಬ್ಬರಿಗೂ ಖಂಡಿತಾ ಇಷ್ಟವಿಲ್ಲ,” ಸವಿತಾ ಆದಷ್ಟೂ ಸಹಜ ಧ್ವನಿಯಲ್ಲೇ ಹೇಳಿದರು.
ಇದನ್ನು ಕೇಳಿ ಮಮತಾಳ ಮುಖಕ್ಕೆ ಒಮ್ಮೆಲೇ ಅರ್ಧ ಬಕೆಟ್ ಐಸ್ ನೀರು ಸುರಿದಂತಾಗಿ, ಅವಳ ಮುಖವೆಲ್ಲ ಬಿಳಚಿಕೊಂಡಿತು. ತಾಯಿಯಂತೆ ಆದರಿಸುತ್ತಿದ್ದ ಆ ಹಿರಿಯರೆದುರು ಹಸಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಳು. ಈ ಸತ್ಯ ಇವರನ್ನೂ ತಲುಪಿತೇ? ಹಾಗಿದ್ದರೆ ಇಷ್ಟು ಹೊತ್ತಿಗೆ ಇಡೀ ಅಪಾರ್ಟ್‌ಮೆಂಟ್‌ಗೆ ಗೊತ್ತಾಗಿರಬಹುದು ಎನಿಸಿತು.
“ನೋಡಮ್ಮ, ನೀನು ಒಳ್ಳೆ ಮನೆತನದ ಹೆಣ್ಣುಮಗಳು ಅಂತ ನೋಡಿದ ದಿನವೇ ಗುರುತಿಸಿದೆ. ಆದ್ದರಿಂದಲೇ ನಿನ್ನ ಸ್ನೇಹ ಸೌಶೀಲ್ಯ ನನ್ನ ಮಗಳಿಗೂ ಬರಲಿ ಎಂದು ಆಶಿಸಿದೆ. ಆದರೆ ಈಗ ಇದ್ದದ್ದೂ ಕೆಟ್ಟುಹೋಗುವಂಥ ಪರಿಸ್ಥಿತಿ ಬರುವ ಹಾಗಿದೆ, ಅದಕ್ಕೇ ಅವಳಿಗೆ ದೂರವಿರಲು ಹೇಳಿದ್ದೇನೆ. ಋತು ಮುಂದೆ ಇದೇ ತರಹ ಯಾವುದೋ ಊರಲ್ಲಿ ಯಾರದೋ ಜೊತೆ ಹೇಗೋ ಇರುವುದು ನಮ್ಮ ಊಹೆಗೂ ನಿಲುಕದ ವಿಚಾರ, ಅದೆಂದಿಗೂ ಆಗಬಾರದು. ಇದುವರೆಗೂ ಅವಳಿಗೆ ನೇರವಾಗಿ ಈ ವಿಷಯ ಹೇಳಿಲ್ಲ, ನಿನ್ನ ಬಗ್ಗೆ ಅವಳು ಕೆಟ್ಟದಾಗಿ ಭಾವಿಸಬಾರದೆಂಬುದು ನನ್ನ ಕಾಳಜಿ,” ಸವಿತಾ ಈಗಲೂ ತುಸು ಅಭಿಮಾನದಿಂದಲೇ ಅವಳ ಪರವಾಗಿ ಮಾತನಾಡಿದ್ದರು.
ಮಮತಾ ಏನೂ ಮಾತನಾಡದೆ ತಲೆ ತಗ್ಗಿಸಿ ಅವರು ಹೇಳುವುದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದಳು.
“ಓ…. ಈಗ ನನಗೆ ಗೊತ್ತಾಯ್ತು ಬಿಡು, ನಿನ್ನ ತವರಿನವರು ಅಥವಾ ಅತ್ತೆಮನೆಯವರು ಯಾಕೆ ಈ ಕಡೆ ಸುಳಿಯುತ್ತಲೇ ಇಲ್ಲ ಅಂತ…. ಆದರೆ ಎಷ್ಟು ದಿನ ಅಂತ ಹೀಗೆ ಸಮಾಜ, ತಾಯಿ ತಂದೆಯವರಿಂದ ವಿಮುಖರಾಗಿ ಇರ್ತೀರಿ? ಇದರಿಂದ ನಿಮ್ಮಿಬ್ಬರಿಗೂ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುತ್ತದೆಯೇ ಅಥವಾ ಬೇರೇನಾದರೂ ಲಾಭವಿದೆಯೇ? ಏನೂ ಇಲ್ಲವಲ್ಲ….
“ಏನೋ ಒಂದು ಕಾರಣಕ್ಕೆ ಮನಸ್ತಾಪ ಹೆಚ್ಚಾದಾಗ ಪ್ರಮೋದ್ ನಿನ್ನನ್ನು ಬಿಟ್ಟು ಹೊರಟುಹೋದರೆ ಆಗ ಮುಂದೆ ಏನು ಮಾಡ್ತಿ? ಈ ಪ್ರಮೋದ್ ಅಲ್ಲದಿದ್ದರೆ ಇನ್ನೊಬ್ಬ ವಿನೋದ್ ಬರ್ತಾನೆ ಅಂತಿಟ್ಕೊ, 2 ವರ್ಷದ ಮೇಲೆ ಅವನೂ ಮುನಿಸಿಕೊಂಡರೆ? ಹೀಗೆ ಎಷ್ಟು ಜನರನ್ನು ಬದಲಾಯಿಸಿ ಬದುಕಾಗುತ್ತದೆ? ಅಂಥ ಬಾಳಿಗೆ ಏನಾದರೂ ಅರ್ಥವಿದೆಯೇ? ಅದಿರಲಿ, ತಾಯ್ತನ ಇಲ್ಲದೆ ಹೆಣ್ತನ ಪೂರ್ಣವಾಗದು. ಮುಂದೆ ಒಂದು ದಿನ ನಿನಗೆ ಅವನಿಂದ ಮಗು ಬೇಕೆನಿಸಿದರೆ ಏನು ಮಾಡ್ತಿ? ಅವನು ಅದಕ್ಕೆ ತಂದೆ ಸ್ಥಾನ ಕೊಡದಿದ್ದರೆ ಅದಕ್ಕೆ ಎಂಥ ಕಳಂಕ ಬರುತ್ತದೆ ಗೊತ್ತಾ?
“ಅದೆಲ್ಲ ಏನೂ ಬೇಡ ಅಂತ ಮಾತ್ರೆ ನುಂಗುತ್ತಲೇ ಅವನೊಂದಿಗೆ ಜೀವನ ಕಳೆದರೆ ನಿನ್ನ ಆರೋಗ್ಯದ ಗತಿ ಏನಾಗಬಹುದು ಅಂತ ಯೋಚಿಸಿದ್ದೀಯಾ? ಗಂಡಸು ಆವೇಶದಲ್ಲಿ ಆ ಸ್ಥಿತಿಯಲ್ಲಿರುವಾಗ ತಾನಾಗಿ ಮುನ್ನೆಚ್ಚರಿಕೆ ವಹಿಸುವುದಿಲ್ಲ ಅಂತ ಇಷ್ಟು ದಿನಗಳ ದಾಂಪತ್ಯ ಕಂಡಿರುವ ನಿನಗೆ ಗೊತ್ತಾಗಿರಲೇಬೇಕಲ್ಲವೇ? ಹಾರ್ಮೋನ್ ಇಂಬ್ಯಾಲೆನ್ಸ್ ನಿಂದ ನಿನ್ನ ಹೆಣ್ತನ ಹಾಳಾದರೆ ಅವನು ನಾಳೆ ನಿನ್ನನ್ನು ಕಾಪಾಡುವನೇ? ನಿನ್ನಿಂದ ಸುಖ ಸಿಗುವುದಿಲ್ಲ ಅಂತಾದ ಮೇಲೆ ಅನೇಕೆ ನಿನ್ನ ಜೊತೆ ಇರಲು ಬಯಸುತ್ತಾನೆ? ಮುಂದೆ ನಿನ್ನ ಯಾವ ಲಿವ್ ಇನ್ ಪಾರ್ಟ್‌ನರ್ ನಿನ್ನನ್ನು ಕೊನೆಯವರೆಗೂ ನೋಡಿಕೊಳ್ಳಲು ಸಾಧ್ಯ?
“ಇದರ ಬದಲು ಪ್ರಮೋದ್ ನಿನ್ನನ್ನು ಮದುವೆಯಾಗುವಂತೆ ಓಲೈಸಿ, ಒಮ್ಮೆ ಅನುರಾಗದ ಅನುಬಂಧದಲ್ಲಿ ನೀವಿಬ್ಬರೂ ಶಾಶ್ವತವಾಗಿ ಒಂದಾದರೆ, ಮುಂದೆ ಎಂದೂ ಹೆದರಬೇಕಾದ ಅಗತ್ಯವೇ ಇಲ್ಲ. ಒಬ್ಬರಿಗೊಬ್ಬರು ಪರಸ್ಪರ ಜೀವನ ಪರ್ಯಂತ ಆಸರೆಯಾಗಿರ್ತೀರಿ. ಈ ವಿಷಯವನ್ನು ಆಳವಾಗಿ ಯೋಚಿಸು.
“ನಾವು ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಯಾವ ಕಡೆ ಕೊಚ್ಚಿಹೋಗುತ್ತಿದ್ದೇವೋ ತಿಳಿಯದೆ ಎಲ್ಲೋ ಹೋಗಿಬಿಟ್ಟರೆ, ಮನುಷ್ಯರಾಗಿ ಹುಟ್ಟಿದ್ದಕ್ಕೆ ಒಂದು ಅರ್ಥ ಬೇಡವೇ? ನಾಯಿ ನರಿಯಂಥ ಪ್ರಾಣಿಗೂ ನಮಗೂ ವ್ಯತ್ಯಾಸವೇ ಇರುವುದಿಲ್ಲ. ಈ ಸಮಾಜವನ್ನು ಎದುರಿಸಿ, ಏನೋ ಕ್ರಾಂತಿಕಾರಿ ಹೆಜ್ಜೆ ಹಾಕ್ತೀವಿ ಅಂತೆಲ್ಲ ಅಂದುಕೊಳ್ತೀವಿ. ಆದರೆ ಸಮಾಜದ ತಿರುಗೇಟು ನಮ್ಮನ್ನು ಎಂಥ ಅಧಃಪತನಕ್ಕೆ ತಳ್ಳಿರುತ್ತದೆ ಎಂದು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಮುಳುಗಿ ಹೋಗಿರ್ತೀವಿ. ಸಮಾಜ ನಮ್ಮನ್ನು ಕಂಡು ಗಹಗಹಿಸುತ್ತದಷ್ಟೆ.”
ಸವಿತಾ ಅವಳ ಕೈಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ವಾತ್ಸಲ್ಯದಿಂದ ಹೇಳಿದರು, “ನೀನು ನನ್ನ ಮಗಳ ಸಮಾನ ಅಂತ ಇಷ್ಟೆಲ್ಲ ಹೇಳಿದ್ದೀನಮ್ಮ, ಖಂಡಿತಾ ನಿನಗೆ ಕಟಕಿಯಾಡಬೇಕು, ಹಂಗಿಸಬೇಕು ಅಂತಲ್ಲ. ಈಗಲೂ ಕಾಲ ಮಿಂಚಿಲ್ಲ, ನಿನಗಿನ್ನೂ ಮದುವೆ ವಯಸ್ಸು. ಪ್ರಮೋದ್ ಮದುವೆಗೆ ಒಪ್ಪಲಿಲ್ಲಾಂದ್ರೆ ನಿನ್ನ ಮನೆಯವರು ತೋರಿಸುವ ಹುಡುಗನನ್ನು ಮದುವೆಯಾಗಿ ಶಾಶ್ವತವಾಗಿ ಇವನಿಂದ ದೂರಾಗು. ಜೀವನದಲ್ಲಿ ಮುಂದೆ ಸುಖವಾಗಿರು,” ಕಣ್ಣೀರು ತುಳುಕಲಿದ್ದ ಅಳವನ್ನು ತಮ್ಮ ಎದೆಗಾನಿಸಿಕೊಂಡು ಸಮಾಧಾನಪಡಿಸಿ ಕಳುಹಿಸಿಕೊಟ್ಟರು.
ಸವಿತಾರ ಮನೆಯಿಂದ ಬಂದ ಮಮತಾ ಸೋಫಾದಲ್ಲಿ ಕುಸಿದು ಕುಳಿತು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು. ತನ್ನವರು ಎನ್ನುವವರಿಲ್ಲದೆ ಕಾಡಲ್ಲಿ ಕಣ್ಣು ಕಟ್ಟಿ ಬಿಟ್ಟಂತಾಗಿತ್ತು ಅವಳ ಸ್ಥಿತಿ. ಸವಿತಾ ಅವಳಿಗೆ ಸೂಕ್ತ ಎಚ್ಚರಿಕೆ ನೀಡಿದ್ದರು. ಯಾವ ಕೆಟ್ಟ ಘಳಿಗೆಯಲ್ಲಿ ತಾನು ಈ ತರಹದ ಬಾಳಿಗೆ ಒಪ್ಪಿಕೊಂಡು ಒಬ್ಬ ವ್ಯಕ್ತಿ ಜೊತೆ ಹೀಗೆಲ್ಲ ಇದ್ದೀನೋ ಎಂದು ನೆನೆದು ದುಃಖಿಸಿದಳು. ಅವಳಿಗೀಗ ಭವಿಷ್ಯ ನೆನೆದು ಭಯ, ನಡುಕ ಬಂದುಬಿಟ್ಟಿತು. ಸಿಡಿದು ಹೋಗುತ್ತಿದ್ದ ತಲೆನೋವು ತಡೆಯಲಾರದೆ ಒಂದು ಲೋಟ ಬಿಸಿ ಬಿಸಿಯಾಗಿ ಸ್ಟ್ರಾಂಗ್ ಕಾಫಿ ಮಾಡಿ ಕುಡಿದಳು. ಅದಾದ ನಂತರ ಮನಸ್ಸು ಶಾಂತವಾಗಿ ಅವಳು ಗಂಭೀರವಾಗಿ ಮುಂದೇನು ಮಾಡಬೇಕೆಂದು ಯೋಚಿಸಿದಳು.
ಇಂದು ಸವಿತಾ ಆಂಟಿಗೆ ಗೊತ್ತಾದದ್ದು ನಾಳೆ ಇಡೀ ಪ್ರಪಂಚಕ್ಕೆ ತಿಳಿಯುತ್ತದೆ. ಆಗ ಮತ್ತೆ ತಾವು ಈ ಅಪಾರ್ಟ್‌ಮೆಂಟ್ ಬಿಟ್ಟು ಇನ್ನೊಂದು ಕಡೆ ಹೊಸದಾಗಿ ಹುಡುಕಿಕೊಂಡು ಹೋಗಬೇಕು. ಈ ರೀತಿಯ ಅಲೆಮಾರಿ ಜೀವನಕ್ಕೆ ಎಂದಾದರೂ ಕೊನೆಯುಂಟೇ? ಇದೇನೋ ಬಾಡಿಗೆಮನೆ ಬದಲಾಯಿಸಬಹುದು, ಸ್ವಂತ ಮನೆಯಾಗಿದ್ದರೆ ಮಾಡುವುದೇನು? ಈ ರೀತಿ ಆದರೆ ತಾನೆಂದೂ ತನ್ನದೇ ಆದ ಮನೆ, ಮಠ, ಸಂಸಾರ ಎಂದು ಸ್ಥಾಪಿಸಿಕೊಳ್ಳಲಾಗದು. ಇಂದು ಸಮಾಜದಿಂದ ವಿಮುಖಳಾಗಿದ್ದಾಳೆ, ನಾಳೆ ಮನೆಯವರಿಗೆ ತಿಳಿದರೆ ಅವರಿದಂಲೂ ಛೀ ಥೂ ಅನ್ನಿಸಿಕೊಂಡು ಅವರನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇಂದು ಮನೆಯವರ ಬಳಿ ಉಳಿಸಿಕೊಂಡಿರುವ ಪ್ರೀತಿ ವಿಶ್ವಾಸವನ್ನು ಮುಂದೆ ಶಾಶ್ವತವಾಗಿ ಇಟ್ಟುಕೊಳ್ಳಲು ಸಾಧ್ಯವೇ?
ಮತ್ತೆ ಪ್ರಮೋದ್….? ಅವನು ಮದುವೆಯ ಪ್ರಸ್ತಾಪಕ್ಕೆ ಒಪ್ಪುವನೇ? ಅದಿಲ್ಲದೆ ಜೀವನವಿಡೀ ತನ್ನನ್ನು ಕಾಪಾಡಬಲ್ಲನೇ? ಇತ್ತೀಚಿನ ಅವನ ವ್ಯವಹಾರಗಳಿಂದ ಅವನ ಬಳಿ ಅಂಥ ಭರವಸೆ ಅಪೇಕ್ಷಿಸುವ ಹಾಗೇ ಇರಲಿಲ್ಲ. ತನಗೆ ಅವನೆಂದೂ ಪತ್ನಿಯ ಸ್ಥಾನ ಅಥವಾ ಹಕ್ಕು ಕೊಡುವವನಲ್ಲ, ಕೇವಲ ಅಧಿಕಾರ ಚಲಾಯಿಸಲು, ಮನೆಯ ಕೆಲಸ ಕಾರ್ಯ ಮಾಡಿಸಲು ಬಳಸಿಕೊಳ್ಳುತ್ತಾನಷ್ಟೆ.
ಈಗ ಮಾತ್ರ ಏನು ಕಡಿಮೆ ಆಗಿರುವುದು? ಅವನ ದಾಸಿಯಾಗಿ ಎಲ್ಲಾ ಬಗೆಯ ಸೇವೆ ಮಾಡುತ್ತಾ ಇರಬೇಕೇ ಹೊರತು `ಶ್ರೀಮತಿ’ ಎನಿಸುವ ಮಾತೇ ಇಲ್ಲ. ಮದುವೆ ಮಾಡಿಕೊಂಡ ನಂತರ ಈ ಎಲ್ಲಾ ಸೇವೆ ಮಾಡಬಹುದಾದರೆ, ರಾಜಾರೋಷವಾಗಿ ಸಮಾಜದಲ್ಲಿ ತಲೆಯೆತ್ತಿ ತಿರುಗಾಡಬಹುದಾದರೆ, ಅಂಥ ವ್ಯವಸ್ಥೆ ಏಕೆ ಬೇಡ? ಸುಖ ಬೇಕು ಜವಾಬ್ದಾರಿ ಬೇಡ, ಆಸೆ ತೀರಬೇಕು ಕರ್ತವ್ಯ ಬೇಡ ಎಂದಾದರೆ ಇಂಥ ಮತಿಗೆಟ್ಟ ವ್ಯವಸ್ಥೆಗೆ ವಿದ್ಯಾವಂತರಾಗಿ ವಿವೇಕವುಳ್ಳವರಾಗಿ ಏಕೆ ಧಿಕ್ಕಾರ ಸಾರಬಾರದು?
ಅವಳು ಅಂದುಕೊಂಡಂತೆಯೇ ಪ್ರಮೋದ್ ಬಂದ ನಂತರ, ನಿಧಾನವಾಗಿ ನಡೆದ ಎಲ್ಲಾ ವಿಷಯ ತಿಳಿಸಿ, ತಾವು ಮದುವೆಯಾಗೋಣ ಎಂದು ತಿಳಿಸಿದಳು. ಅವನು ಅದಕ್ಕೆ ಬಿಲ್‌ಕುಲ್ ಒಪ್ಪಿಕೊಳ್ಳಲಿಲ್ಲ. ಹಾಲಿನ ರುಚಿ ಕಂಡ ಬೆಕ್ಕಿನಂತಾಗಿದ್ದ ಅವನು, ಈಗ ಇವಳು ಬೇಡ ಎಂದರೆ ಮತ್ತೊಬ್ಬಳ ಜೊತೆ….. ಹೀಗೆ ಹಾಯಾಗಿರಲು ನಿರ್ಧರಿಸಿದ್ದ.
ಮಾರನೇ ಬೆಳಗ್ಗೆ ಅವನ ನಿರ್ಧಾರ ಬದಲಾಗದಿದ್ದರೆ ತಾನು ಅವನನ್ನು ಬಿಟ್ಟು ಹೋಗುತ್ತೇನೆ, ಇಲ್ಲಿರುವುದನ್ನೆಲ್ಲ ಮಾರಿಬಿಡೋಣ ಎಂದಳು. ಅವನೇನು ಮಾತನಾಡದೆ ಸುಮ್ಮನಾದ. ಮಾರನೇ ದಿನ ಎಂದಿನಂತೆ ಬೆಳಗಾಯಿತು. ಅವಳು ತಿಂಡಿ ಸಿದ್ಧಪಡಿಸಿ ಆಫೀಸಿಗೆ ರೆಡಿಯಾದಳು. ಪ್ರಮೋದ್ ತಿಂಡಿ ತಿನ್ನುತ್ತಿದ್ದಾಗ ಮತ್ತೆ ಅವನ ನಿರ್ಧಾರದ ಬಗ್ಗೆ ಕೇಳಿದಳು. ಅವನು ಮದುವೆಗೆ ಒಪ್ಪಲೇ ಇಲ್ಲ. ತಾವಿಬ್ಬರೂ ಕೊಂಡಿದ್ದ ವಸ್ತುಗಳನ್ನು ತನಗೇ ಮಾರಿ ಮನೆ ಖಾಲಿ ಮಾಡುವಂತೆ ಅವಳಿಗೆ ಹೇಳಿದ. ಹಾಗೇ ಆಗಲೆಂದು, ಸಂಜೆ ತನ್ನ ಅಕೌಂಟ್‌ಗೆ ಹಣ ವರ್ಗಾಯಿಸಲು ಹೇಳಿ ಅವಳು ಹೊರಟುಹೋದಳು.
ಮತ್ತೆ ಮತ್ತೆ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದ ಅವಳು, ಆಫೀಸಿಗೆ ಹೋಗಿ 2 ವಾರದ ರಜೆಗೆ ಅರ್ಜಿ ನೀಡಿದಳು. ಮಧ್ಯಾಹ್ನವೇ ಮನೆಗೆ ಬಂದು ತನ್ನದಾದ ಬಟ್ಟೆಬರೆ ಜೋಡಿಸಿಕೊಂಡು ಅಮ್ಮನಿಗೆ ಫೋನ್ ಮಾಡಿದಳು.
“ಅಮ್ಮಾ, ನಾನು ಮೈಸೂರಿಗೆ ಬರ್ತಿದ್ದೀನಿ. ನಾಳೆ ಭಾನುವಾರವೇ ಆ ಹುಡುಗನ ಕಡೆಯವರಿಗೆ ಬರಲು ಹೇಳು. ನೀನು ಹೇಳಿದಂತೆಯೇ ಮದುವೆ ಆಗ್ತೀನಿ,” ಎಂದು ಗಂಭೀರವಾಗಿ ಹೇಳಿದಳು.
ರೇವತಿಯವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಬೇಗ ಹೊರಡುವಂತೆ ಆಗ್ರಹಪಡಿಸಿದರು. `ಮದುವೆಯ ಈ ಬಂಧ…. ಅನುರಾಗದ ಅನುಬಂಧ…..’ ಮೊಬೈಲ್ ರೇಡಿಯೋದಲ್ಲಿ ಹಾಡು ತೇಲಿಬರುತ್ತಿದ್ದಂತೆ ತನ್ಮಯಳಾಗಿ ಅದನ್ನು ಕೇಳಿಸಿಕೊಳ್ಳುತ್ತಾ ಬಸ್ಸಿನ ಸೀಟಿಗೊರಗಿದಳು.