“ರೂಪಾ, ನೀನು ಬಂದಿದ್ದು ಒಳ್ಳೇದಾಯ್ತು. ಸರಿಯಾದ ಸಮಯಕ್ಕೇ ಬಂದೆ,” ರೂಪಾಳನ್ನು ನೋಡಿದ ಕೂಡಲೇ ಸುರೇಶನ ಮುಖ ಅರಳಿತು.
“ನಾನಂತೂ ಯಾವಾಗಲೂ ಸರಿಯಾದ ಸಮಯಕ್ಕೇ ಬರೋದು ಭಾವಾ. ಅಂದಹಾಗೆ ಏನು ವಿಷಯ?”
“ನಾಳೆ ಶ್ರೇಯಾಳ ಸ್ಕೂಲ್‌ನಲ್ಲಿ ಪೇರೆಂಟ್ಸ್ ನ್ನು ಕರೆದಿದ್ದಾರೆ. ನಾನು ಹೋಗೋಕಾಗಲ್ಲ. ನಾಳೆ ನಮ್ಮ ಹೆಡ್ ಆಫೀಸಿನಿಂದ ಇನ್‌ಸ್ಪೆಕ್ಷನ್‌ಗೆ ಬರ್ತಿದ್ದಾರೆ. ಇನ್ನು ಸುಮನಾಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು. 4-5 ಜನರನ್ನು ನೋಡಿಬಿಟ್ರೆ ಸಾಕು, ಬಾಯಿಂದ ಮಾತೇ ಹೊರಡಲ್ಲ. ನಾಳೆ ನೀನು ಶ್ರೇಯಾಳ ಸ್ಕೂಲಿಗೆ ಹೋಗಿಬಂದ್ರೆ ಬಹಳ ಉಪಕಾರ ಆಗುತ್ತೆ,” ಸುರೇಶ್ ಹೇಳಿದ.
“ನೀವು ಹೇಳಿದ್ರೆ ನನಗೆ ಆರ್ಡರ್ ಮಾಡಿದ ಹಾಗೆ. ಖಂಡಿತಾ ಮಾಡ್ತೀನಿ. ಆದರೆ ನೀವು ನನಗೊಂದು ಫೇವರ್‌ಮಾಡಲೇಬೇಕು.”
“ಅದೇನು ಹೇಳು.”
“ನಾಳೆ ಲಿಬರ್ಟಿಲಿ ಹೊಸ ಇಂಗ್ಲಿಷ್ ಫಿಲ್ಮ್ ಬರಲಿದೆ. ನನ್ನನ್ನು ಅದಕ್ಕೆ ಕರೆದುಕೊಂಡು ಹೋಗಬೇಕು,” ರೂಪಾ ಹೇಳಿದಳು.
“ಅದೇನು ದೊಡ್ಡ ವಿಷಯ? ನಾನೂ ಆ ಫಿಲ್ಮ್ ನೋಡಬೇಕೂಂತಿದ್ದೆ. ಇಷ್ಟು ಒಳ್ಳೆ ಕಂಪನಿ ಸಿಕ್ಕಿದ್ರೆ ಇನ್ನೇನು?” ಸುರೇಶ್‌ಮುಗುಳ್ನಕ್ಕ.
“ಹ್ಞೂಂ ಅಂತೂ ಶ್ರೇಯಾಳ ಪ್ರಾಬ್ಲಂ ಬಗೆಹರೀತು. ಇನ್ನೇನು ಶ್ರೇಯಾ, ಖುಷಿ ತಾನೆ?” ಸುರೇಶ್ ಕೇಳಿದ.
“ಇಲ್ಲ. ನನಗೆ ಖುಷಿ ಇಲ್ಲ. ಬಹಳ ದುಃಖವಾಗಿದೆ. ನಮ್ಮ ಸ್ಕೂಲಿನಲ್ಲಿ ನನ್ನ ಫ್ರೆಂಡ್ಸ್ ಎಲ್ಲ ಅಪ್ಪ, ಅಮ್ಮನ ಜೊತೆ ಬರುವಾಗ ನಾನು ಮಾತ್ರ ರೂಪಾ ಆಂಟಿಯ ಜೊತೆ ಹೋಗೋದಾ?” ಶ್ರೇಯಾಗೆ ಅಳುವೇ ಬಂತು.
“ಚಿಂತಿಸಬೇಡ. ನಾನು ನಿಮ್ಮ ಸ್ಕೂಲಿಗೆ ಬಂದು ನಿನ್ನ ಮಿಸ್ ಜೊತೆ ಮಾತಾಡ್ತೀನಿ,” ರೂಪಾ ಶ್ರೇಯಾಳನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಳು.
“ನೀವು ನಮ್ಮ ಸ್ಕೂಲಿಗೆ ಬರೋದು ಬೇಡ. ನನ್ನ ಅಪ್ಪ, ಅಮ್ಮ ನನ್ನ ಜೊತೆಗೆ ಬರೋದಿಲ್ಲಾಂದ್ರೆ ನಾಳೆ ನಾನು ಸ್ಕೂಲಿಗೇ ಹೋಗಲ್ಲ.” ಶ್ರೇಯಾ ಕಾಲಿನಿಂದ ನೆಲ ಒದ್ದು ಅಲ್ಲಿಂದ ಹೊರಟುಹೋದಳು.
“ನೀನು ಅವಳನ್ನು ತಲೆ ಮೇಲೆ ಕೂಡಿಸಿಕೊಂಡಿದ್ದೀಯ. ಮನೆಗೆ ಬಂದ ಅತಿಥಿಗಳ ಜೊತೆ ಹೇಗೆ ವ್ಯವಹರಿಸಬೇಕೂಂತ ಅವಳಿಗೆ ಹೇಳಿಕೊಟ್ಟಿಲ್ಲ,” ಸುರೇಶ್ ಸುಮನಾಳನ್ನು ಬೈದ.
“ಅವಳನ್ನು ಯಾಕೋ ಬೈತೀಯ? ನೀನೂ ಶ್ರೇಯಾಗೆ ತಂದೆ ತಾನೆ. ನೀನ್ಯಾಕೆ ಅವಳಿಗೆ ಹೇಳಿಕೊಟ್ಟಿಲ್ಲ?” ಸುರೇಶನ ತಾಯಿ ಮಂಗಳಾ ಅದುವರೆಗೆ ಅವರ ಮಾತುಗಳನ್ನು ಕೇಳುತ್ತಿದ್ದವರು ಹೇಳಿದರು.
“ನಾನು ಅವಳಿಗೆ ಸರಿಯಾದ ಪಾಠ ಕಲಿಸ್ತೀನಿ. ಜೀವನಪೂರ್ತಿ ನೆನಸ್ಕೋಬೇಕು,” ಸುರೇಶ್ ವೇಗವಾಗಿ ಒಳಗೆ ನುಗ್ಗಿದಾಗ ಸುಮನಾ ಬೆಚ್ಚಿದಳು. ಅವಳು ಒಳಗೆ ಓಡಿ ಶ್ರೇಯಾಳನ್ನು ಎತ್ತಿಕೊಂಡಳು.
“ಇವತ್ತಿಂದ ಇವಳಿಗೆ ಊಟ ತಿಂಡಿ ಕೊಡಬೇಡ. 2 ದಿನ ಹಸಿದುಕೊಂಡು ಇದ್ರೆ ಬುದ್ಧಿ ಬರುತ್ತೆ,” ಸುರೇಶ್ ಸೋಫಾದಲ್ಲಿ ಕೂಡುತ್ತಾ ಹೇಳಿದ.
“ಯಾಕೆ ಇಷ್ಟು ಕೋಪಿಸ್ಕೊತೀರಾ ಭಾವಾ? ಶ್ರೇಯಾ ಇನ್ನೂ 5 ವರ್ಷದ ಮಗು. ಅವಳಿಗೆ ಏನು ಗೊತ್ತಾಗುತ್ತೆ? ಏನೋ ಮನಸ್ಸಿಗೆ ಬಂದಿದ್ದು ಮಾತಾಡಿಬಿಟ್ಳು. ಆಯ್ತು ಇನ್ನು ನಗಿ ಭಾವ. ಕೋಪಿಸ್ಕೊಂಡ್ರೆ ನೀವು ಸ್ವಲ್ಪನೂ ಚೆನ್ನಾಗಿ ಕಾಣಿಸಲ್ಲ,” ರೂಪಾ ಬಹಳ ಪ್ರೀತಿಯಿಂದ ಹೇಳಿದಾಗ ಸುಮನಾಗೆ ಸಿಟ್ಟು ಬಂತು.
“ರೂಪಾ, ನಿನಗೆ ಕೈ ಮುಗೀತೀನಿ. ಈಗ ನೀನು ಹೋಗು. ನಮ್ಮ ವೈಯಕ್ತಿಕ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ತೀವಿ,” ಎಂದಳು.
“ಏನಕ್ಕಾ ನೀನೂನೂ? ನಾನು ನಿನಗೋಸ್ಕರಾನೇ ಇಲ್ಲಿಗೆ ಬರೋದು. ಇವತ್ತೂ ಆಫೀಸಿನಿಂದ ನೇರವಾಗಿ ಇಲ್ಲಿಗೇ ಬಂದೆ. ನೀನು ಸಿಕ್ಕಿದಾಗೆಲ್ಲಾ ಸುರೇಶ್ ನಿನ್ನೊಂದಿಗೆ ಕೆಟ್ಟದಾಗಿ ವರ್ತಿಸ್ತಾರೆ. ನಿನ್ನ ಕಂಡ್ರೆ ಪ್ರೀತೀನೇ ಇಲ್ಲಾಂತ ಗೋಳಾಡ್ತಾ ಇರ್ತೀಯ. ನಾನು ಬಂದರೆ ನಿನಗೆ ಕೊಂಚ ನೆಮ್ಮದಿ ಸಿಗುತ್ತೇಂತ ಅನ್ನಿಸಿತು. ಇಲ್ಲದಿದ್ರೆ ಇಲ್ಲಿಗೆ ಬಂದು ಅವಮಾನ ಮಾಡಿಸಿಕೊಳ್ಳೋಕೆ ನನಗೇನು ಗ್ರಹಚಾರ?” ರೂಪಾ ಹೇಳಿದಳು.
“ಸುಮನಾ, ರೂಪಾಳನ್ನು ಕ್ಷಮೆ ಕೇಳು. ಮನೆಗೆ ಬಂದ ಅತಿಥಿಗಳ ಜೊತೆ ಹೀಗೇನಾ ನಡಕೊಳ್ಳೋದು?” ಸುಮನಾ ಏನಾದರೂ ಹೇಳುವ ಮುಂಚೆಯೇ ಸುರೇಶ್ ಆದೇಶವಿತ್ತ.
ಸುಮನಾ ಸುರೇಶನ ಮಾತುಗಳನ್ನು ಕೇಳಿ ಕಲ್ಲಿನ ಮೂರ್ತಿಯಂತೆ ನಿಂತಿದ್ದಳು. ಅವಳು ಸುರೇಶನಿಗೆ ಉತ್ತರಿಸಲಿಲ್ಲ. ಕ್ಷಮೆಯನ್ನೂ ಕೇಳಲಿಲ್ಲ.
“ಕೇಳಿಸ್ಲಿಲ್ವಾ ನಿನಗೆ? ರೂಪಾ ಬಳಿ ಕ್ಷಮೆ ಕೇಳೂಂತ ನಾನು ಹೇಳಿದ್ದೆ,” ಸುರೇಶ್ ಕಿರುಚಿದ.
“ನಾನು ಕೇಳ್ಲಾರೀ,” ಎಂದು ಹೇಳಿ ಸುಮನಾ ಶ್ರೇಯಾಳನ್ನು ಎತ್ತಿಕೊಂಡು ಒಳಹೋದಳು.
“ಬಿಡಿ ಭಾವಾ. ಯಾಕೆ ವಿಷಯ ದೊಡ್ಡದು ಮಾಡ್ತೀರಿ? ನಾನು ಈಗ ಹೊರಡ್ತೀನಿ,” ರೂಪಾ ಎದ್ದು ನಿಂತಳು.
“ಏನೂ ತಗೊಳ್ದೆ ಹೊರಡ್ತೀಯಾ? ಇರು ನಾನು ಕೂಲ್ ಡ್ರಿಂಕ್ಸ್ ತರ್ತೀನಿ.”
“ಇಲ್ಲ. ನನಗೇನೂ ಬೇಡ,” ರೂಪಾ ತನ್ನ ಬ್ಯಾಗ್ ಕೈಗೆತ್ತಿಕೊಂಡಳು.
“ಸರಿ, ನಡಿ ನಿಮ್ಮ ಮನೆಯವರೆಗೂ ಬಿಡ್ತೀನಿ.”
“ನಾನು ನನ್ನ ಕಾರಿನಲ್ಲಿ ಬಂದಿದ್ದೀನಿ ಭಾವಾ.”
“ನೀನೊಬ್ಬಳೇ ಕಾರಿನಲ್ಲಿ ಹೋಗೋದು ಸೇಫ್ಟಿ ಅಲ್ಲ,” ಸುರೇಶ್ ಜೊತೆಯಲ್ಲಿ ಹೋಗಲು ರೆಡಿಯಾದ. ಸ್ವಲ್ಪ ಹೊತ್ತಿಗೆ ಇಬ್ಬರೂ ಕೈ ಕೈ ಹಿಡಿದು ಹೊರಹೋದರು.
ಬಾಗಿಲು ಮುಚ್ಚಿ ಸುಮನಾ ಇತ್ತ ತಿರುಗಿದಾಗ ಶ್ರೇಯಾ ಹಾಗೂ ಮಂಗಳಾ ಕೋಪದಿಂದ ಅವಳನ್ನೇ ನೋಡುತ್ತಿದ್ದರು. ಅವಳೇನೋ ಅಕ್ಷಮ್ಯ ಅಪರಾಧ ಮಾಡಿದಂತೆ.
“ಅಮ್ಮಾ, ನೀನು ಸರಿಯಿಲ್ಲ,” ಶ್ರೇಯಾ ಅಳುವ ಧ್ವನಿಯಲ್ಲಿ ಹೇಳಿದಳು. ಅಪ್ಪ ಹಾಗೆ ರೂಪಾಳೊಂದಿಗೆ ಹೊರಟಿದ್ದು ಅವಳಿಗೆ ಹಿಡಿಸಲಿಲ್ಲ.
“ನೀವು ಏನು ಹೇಳಬೇಕೋ ಹೇಳಿಬಿಡಿ. ಹೀಗೆ ಮುಖಾನ ಊದಿಸಿಕೊಂಡು ಯಾಕೆ ಕೂತಿದ್ದೀರಿ?” ಮಂಗಳಾ ಮಾತಾಡದೆ ಕೂತಿರುವುದನ್ನು ಕಂಡು ಸುಮನಾ ಹೇಳಿದಳು.
“ನಾನು ಹೇಳೋದು ಏನೂಂದ್ರೆ ನಿನಗಿಂತ ನಿನ್ನ 5 ವರ್ಷದ ಮಗಳು ಎಷ್ಟೋ ಬುದ್ಧಿವಂತಳು ಅಂತ. ಇವತ್ತು ಅವಳು ರೂಪಾಗೆ ಸರಿಯಾಗಿ ಹೇಳಿದಳು. ನೀನು ಇದುವರೆಗೂ ಹಾಗೆ ಹೇಳಕ್ಕಾಗ್ಲಿಲ್ಲ.”
“ನೀವು ಹೇಳೋದು ನನಗೆ ಅರ್ಥವಾಗುತ್ತೆ ಅಮ್ಮಾ. ಆದರೆ ಏನು ಮಾಡ್ಲಿ? ರೂಪಾ ನಮ್ಮ ಚಿಕ್ಕಮ್ಮನ ಮಗಳು.”
“ಚಿಕ್ಕಮ್ಮನ ಮಗಳು? ನಿನ್ನ ಸಂಸಾರ ಉಳಿಸ್ಕೋಬೇಕಾದರೆ ನಿನ್ನ ಸ್ವಂತ ತಂಗಿ ಬಗ್ಗೇನೂ ಹುಷಾರಾಗಿರಬೇಕು,” ಮಂಗಳಾ ಹೇಳಿದರು.
“ರೂಪಾನ ಅಂದು ಏನಮ್ಮಾ ಪ್ರಯೋಜನ? ಮೊದಲು ನಮ್ಮ ಮನೆಯವರು ಸರಿಯಾಗಿರಬೇಕು. ಸುರೇಶ್‌ಗಂತೂ ತನ್ನ ಹೆಂಡತಿ ಬಿಟ್ಟು ಬೇರೆ ಹೆಂಗಸರಲ್ಲಿ ಒಳ್ಳೆಯ ಗುಣಗಳು ಕಾಣುತ್ವೆ. ಇವತ್ತು ರೂಪಾ. ಅವಳಿಗೆ ಮುಂಚೆ ಕಲ್ಯಾಣಿ ಇದ್ದಳು. ಮದುವೆಗೆ ಮುಂಚಿನ ಅವರ ರಾಸಲೀಲೆಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ.”
“ನನಗೆಲ್ಲಾ ಗೊತ್ತು. ಆದರೆ ನಾನು ಸುರೇಶ್‌ಗೆ ಹೆಂಡತಿಯಾಗಿ ಆರಿಸಿದ ಹುಡುಗೀನ ಎಲ್ಲರೂ ಹೊಗಳ್ತಿದ್ರು. ಆದರೆ ಮುಂದೇನಾಯ್ತು? ನೀನು ಎಲ್ಲರಿಂದಲೂ ದೂರವಾಗಿ ನಿನ್ನದೇ ಗೂಡಿನೊಳಗೆ ಮುದುರಿಕೊಂಡು ಕೂತಿರ್ತೀಯ.”
“ಅವರು ಹಗಲೂ ರಾತ್ರಿ ನನ್ನ ಕೊರತೆಯ ಬಗ್ಗೆ ಟೀಕೆ ಮಾಡುತ್ತಾ, ನಾನು ಯಾವುದಕ್ಕೂ ಯೋಗ್ಯಳಲ್ಲವೆಂದು ಹೇಳುತ್ತಾರೆ. ಇರು ರೂಪಾಗೆ ಹೇಳ್ತಿದ್ರಲ್ಲಾ. ಹೊಸಬರ ಎದುರು ನನಗೆ ಮಾತೇ ಹೊರಡಲ್ಲ ಅಂತ. ನಾನು ಕಾಲೇಜಿನಲ್ಲಿದ್ದಾಗ ಸಾಹಿತ್ಯ ಕೂಟದಲ್ಲಿ 4 ವರ್ಷ ಕಾರ್ಯದರ್ಶಿ ಆಗಿದ್ದೆ. ಎಷ್ಟೋ ಕಾರ್ಯಕ್ರಮಗಳಿಗೆ ಸಾಹಿತಿಗಳು, ಕಲಾವಿದರನ್ನು ಕರೆಸಿದ್ದೀನಿ.”
“ಗೊತ್ತು. ಕಾಲೇಜಿನಲ್ಲಿ ನೀನು ಏನಾಗಿದ್ದೇಂತ ಯಾರೂ ಕೇಳಲ್ಲ. ಈಗ ನೀನು ಏನಾಗಿದ್ದೀಯ? ನಿನಗಾಗಿ ಅಲ್ಲದಿದ್ದರೂ ನಿನ್ನ ಮಗಳು ಶ್ರೇಯಾಳಿಗಾಗಿ ನಿನ್ನ ಜೀವನದಲ್ಲಿ ಹಿಡಿತ ಸಡಲಿಸಬೇಡ. ಸುಮನಾ,” ಮಂಗಳಾ ಗದ್ಗದಿತರಾಗಿ ಹೇಳಿದರು.
ಸುಮನಾ ಮಂಗಳಾ ಹಾಗೂ ಶ್ರೇಯಾರಿಗೆ ಊಟ ಬಡಿಸಿ ಗಂಡನಿಗಾಗಿ ಕಾಯತೊಡಗಿದಳು. ಅನೇಕ ವಿಷಯಗಳು ಪ್ರಶ್ನಾರ್ಥಕ ಚಿಹ್ನೆಯನ್ನು ಹೊತ್ತು ನಿಂತಿದ್ದವು. ಹಾಗೆ ಯೋಚಿಸುತ್ತಾ ಅವಳಿಗೆ ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ. ಸುರೇಶ್ ಬೆಲ್ ಮಾಡಿದಾಗ ಅವಳು ದಡಬಡಾಯಿಸಿ ಎದ್ದು ಕುಳಿತಳು.
“ಸತ್ತೋಗಿದ್ಯೇನೇ, ಎಷ್ಟು ಹೊತ್ತಿನಿಂದ ಬೆಲ್ ಮಾಡ್ತಿದ್ದೀನಿ,” ಬಾಗಿಲು ತೆರೆದ ಕೂಡಲೇ ನಶೆಯಿಂದ ತೂರಾಡುತ್ತಿದ್ದ ಸುರೇಶ್ ಕಿರುಚಿದ.
“ಮರ್ಯಾದಸ್ತರು ಮನೆಗೆ ಬರೋ ಹೊತ್ತೇನ್ರಿ ಇದು? ಕಿರುಚಬೇಡಿ. ಅಕ್ಕಪಕ್ಕದ ಮನೆಯವರು ಎದ್ದುಬಿಡುತ್ತಾರೆ”
“ಅಕ್ಕಪಕ್ಕದ ಮನೆಯವರ ಭಯಾನ ಯಾರಿಗೆ ತೋರಿಸ್ತಿದ್ದೀಯಾ? ಪಾಪ, ರೂಪಾಗೆ ನೀನು 1 ಲೋಟ ನೀರು ಸಹ ಕೊಡಲಿಲ್ಲ. ಅವಳು ಇಲ್ಲಿಂದ ಹೊರಡುವಾಗ ಆಘಾತಕ್ಕೆ ಒಳಗಾಗಿದ್ಲು. ಅವಳಂತೂ ನಿನಗೆ ಹಾಗೂ ಶ್ರೇಯಾಗೆ ಪ್ರಾಣ ಕೊಡೋಕೂ ಸಿದ್ಧ. ಅಂಥವಳ ಜೊತೆ ಈ ರೀತಿ ವರ್ತನೆ? ಅವಳನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸಿದೆ. ಅದು ನನ್ನ ಕರ್ತವ್ಯ ಆಗಿತ್ತು,” ಸುರೇಶ್ ಹೇಳಿದ.
“ಅರ್ಥ ಆಯ್ತು. ನಿಮ್ಮದು ತಿಂದಿದ್ದಾಯ್ತು. ಕುಡಿದಿದ್ದು ಆಯ್ತು. ನಿಮಗೀಗ ಊಟದ ಅಗತ್ಯ ಇಲ್ಲ,” ಸುಮನಾ ಹೇಳಿದಳು.
“ಅದನ್ನು ಬೇರೆ ಹೇಳಬೇಕಾ? ಸಿಂಪಲ್ಲಾಗಿ ಹೇಳಿದ್ರೆ ಅರ್ಥವಾಗಲ್ಲ. ಗೂಬೇನ ತಂದು,” ಎಂದು ಹೇಳಿ ಸುರೇಶ್ ಹಾಸಿಗೆಯ ಮೇಲೆ ಉರುಳಿಕೊಂಡ.
ಬೇರೆ ದಿನವಾಗಿದ್ದರೆ ಸುಮನಾ ಸಾಕಷ್ಟು ಅತ್ತು ಏನೂ ತಿನ್ನದೆ ಮಲಗಿಬಿಡುತ್ತಿದ್ದಳು. ಆದರೆ ಇಂದು ಹಾಗೆ ಮಾಡಲಿಲ್ಲ. ಎಲ್ಲೋ ಒಂದು ಕಡೆ ಮುಳ್ಳು ಆಳವಾಗಿ ಚುಚ್ಚಿತ್ತು. ಅದರ ನೋವು ಬಾಧಿಸುತ್ತಿತ್ತು.
ತನ್ನನ್ನು ಆರೋಗ್ಯವಾಗಿಟ್ಟುಕೊಳ್ಳುವ ಹೊಣೆಯೂ ಅವಳ ಮೇಲಿತ್ತು. ಸುರೇಶ್ ಅಂತೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಸುಮನಾ ಟೇಬಲ್ ಮೇಲೆ ಊಟವನ್ನು ಅಚ್ಚುಕಟ್ಟಾಗಿ ಜೋಡಿಸಿದಳು. ಲೈಟ್ ಆರಿಸಿ ಮೇಣದ ಬತ್ತಿ ಅಂಟಿಸಿದಳು. ಅದರ ಮಂದ ಬೆಳಕಿನಲ್ಲಿ ರಾತ್ರಿಯೂಟದ ಆನಂದ ಅನುಭವಿಸಿದಳು. ಬಹಳ ದಿನಗಳ ನಂತರ ಅವಳಿಗೆ ಸಂತೋಷವಾಗಿರಬೇಕಾದರೆ ಯಾವುದೇ ಆಡಂಬರದ ಅವಶ್ಯಕತೆ ಇಲ್ಲ. ಸರಿಯಾದ ಮನಸ್ಥಿತಿ ಇದ್ದರೆ ಸಾಕು ಅನ್ನಿಸಿತು.
ಅಳು ತನ್ನ ಹಳೆಯ ಫೈಲುಗಳನ್ನು ತೆಗೆದು ಏನೋ ಯೋಚಿಸುತ್ತಾ ನೋಡತೊಡಗಿದಳು. ಅವಳು ಓದಿನಲ್ಲಿ ಮುಂದಿದ್ದಳು. ಪಠ್ಯೇತರ ಚಟುವಟಿಕೆಗಳಲ್ಲೂ ಅವಳನ್ನು ಸರಿಗಟ್ಟುವವರು ಯಾರೂ ಇರಲಿಲ್ಲ. ನೃತ್ಯ, ಸಂಗೀತ, ಆಟಗಳು, ಡಿಬೇಟ್, ನಾಟಕಗಳಲ್ಲಿ ಅವಳ ಉಪಸ್ಥಿತಿ ಅನಿವಾರ್ಯವಾಗಿತ್ತು. ಆದರೆ ಮದುವೆಯಾದ ಕೂಡಲೇ ಎಲ್ಲ ಬದಲಾಯಿತು. ಸುಮನಾ ಉದಾಸೀನತೆಯ ಎಂತಹ ಕಂಬಳಿ ಹೊದ್ದುಕೊಂಡಳೆಂದರೆ ಇತರರಿಗಿರಲಿ ಅವಳಿಗೇ ಅದನ್ನು ದೂರ ಮಾಡಲು ಅಸಾಧ್ಯವಾಗಿತ್ತು. ರಾತ್ರಿಯ ನೀರವತೆಯಲ್ಲಿ ಸುಮನಾ ತನ್ನ ಪರಿಚಯವನ್ನು ಸ್ವಯಂ ಮಾಡಿಕೊಂಡು ರೋಮಾಂಚಿತಳಾದಳು. ಖುಷಿಯ ರೋಮಾಂಚನ ಅವಳ ವ್ಯಕ್ತಿತ್ವವನ್ನು ಜಾಗೃತಗೊಳಿಸಿತ್ತು.
ಮರುದಿನ ಬೆಳಗ್ಗೆ ಹೊಸ ರೂಪ, ರಂಗು ಬಂದಂತಿತ್ತು. ಸುಮನಾ ಮೆಲುದನಿಯಲ್ಲಿ ಹಾಡು ಗುನುಗುಟ್ಟುತ್ತಿದ್ದಳು. ಸುರೇಶ್‌ಆಫೀಸಿಗೆ ಹೊರಡುವ ತರಾತುರಿಯಲ್ಲಿದ್ದ. ಇನ್‌ಸ್ಪೆಕ್ಷ್ರನ್‌ಗೆ ತಯಾರಿ ಮಾಡಬೇಕಿತ್ತು.
“ರೂಪಾಗೆ ಫೋನ್ ಮಾಡು. ನಿನ್ನೆ ಹಾಗೆ ಮಾತಾಡಿದ್ದಕ್ಕೆ ಸಾರಿ ಕೇಳು. ಇಲ್ಲಾಂದ್ರೆ ಅವಳು ಶ್ರೇಯಾಳ ಸ್ಕೂಲಿಗೆ ಬರೋದಿಲ್ಲ,” ಹೊರಡುವಾಗ ಸುರೇಶ್ ಹೇಳಿ ಹೋದ. ಅದನ್ನು ಕೇಳಿ ಶ್ರೇಯಾ ಮೂತಿ ಕೊಂಕಿಸಿದಳು. ಅದನ್ನು ಕಂಡು ಮಂಗಳಾ ನಕ್ಕರು.
“ನಾನು ರೂಪಾ ಚಿಕ್ಕಮ್ಮನ ಜೊತೆ ಹೋಗಲ್ಲ,” ಸುರೇಶ್ ಹೊರಟ ನಂತರ ಶ್ರೇಯಾ ಮೆಲುದನಿಯಲ್ಲಿ ಗೊಣಗಿದಳು.
“ಶ್ರೇಯಾ, ನಡಿ ರೆಡಿಯಾಗು. ಸ್ಕೂಲಿಗೆ ಹೋಗಬೇಕು.”
“ನಾನು ರೂಪಾ ಚಿಕ್ಕಮ್ಮನ ಜೊತೆ ಸ್ಕೂಲಿಗೆ ಹೋಗೋದಿಲ್ಲ.”
“ನಾನು ಯಾರಿಗೂ ಫೋನ್ ಮಾಡೋದಿಲ್ಲ. ಯಾರ ಹತ್ರಾನೂ ಸಾರಿ ಕೇಳೋದಿಲ್ಲ,” ಸುಮನಾ ಹೇಳಿದಳು.
“ಹಾಗಾದ್ರೆ ನಾನು ಹೇಗೆ ಹೋಗೋದಮ್ಮಾ?” ಶ್ರೇಯಾ ಕೇಳಿದಳು.
“ನಾನು ನಿನ್ನನ್ನು ಕರೆದುಕೊಂಡು ಹೋಗ್ತೀನಿ. ನಿಮ್ಮಪ್ಪ ಬಹಳ ಬಿಜಿಯಾಗಿದ್ದಾರೆ. ನಾನಲ್ಲ, ನಿನ್ನ ಶಿಕ್ಷಣದ ಭಾರ ನನ್ನ ಹೆಗಲ ಮೇಲಿದೆ. ರೂಪಾಳ ಮೇಲಿಲ್ಲ.”
“ಹೌದಾಮ್ಮ! ನನ್ನ ಬರ್ಥ್‌ಡೇದು ಹೊಸ ಡ್ರೆಸ್ ಕೊಡು. ಇತ್ತು ಯೂನಿಫಾರಂ ಬೇಕಾಗಿಲ್ಲ. ಅಜ್ಜಿ, ಗೊತ್ತಾಯ್ತಾ? ನಾನು ಅಮ್ಮ ಸ್ಕೂಲಿಗೆ ಹೋಗ್ತಿದ್ದೀವಿ,” ಶ್ರೇಯಾ ಚಪ್ಪಾಳೆ ತಟ್ಟಿ ಕುಣಿದಾಡಿದಳು.
“ನನ್ನನ್ನು ಕರ್ಕೊಂಡು ಹೋಗಲ್ವಾ ಶ್ರೇಯಾ? ಮನೇಲಿ ಕೂತು ಕೂತು ಬೇಸರ ಆಗಿದೆ ನನಗೆ.”
“ಬನ್ನಿ ಅಮ್ಮ. ನಾವು ಮೂವರೂ ಹೋಗೋಣ. ಸ್ಕೂಲಿಗೆ ಹೋಗಿ ನಂತರ ಸ್ವಲ್ಪ ಹೊತ್ತು ಸುತ್ತಾಡೋಣ. ಆಮೇಲೆ ಹೋಟೆಲ್ ನಲ್ಲಿ ತಿಂಡಿ ತಿಂದು ಬರೋಣ,” ಸುಮನಾ ಹೇಳಿದಳು.
“ಆಯ್ತು. ನಾನು ಶ್ರೇಯಾಗಿಂತ ಬೇಗ ರೆಡಿಯಾಗ್ತೀನಿ,” ಎಂದು ಮಂಗಳಾ ಹೇಳಿದರು.
ತನ್ನ ಕುಟುಂಬದ 3 ಪೀಳಿಗೆಯ ಮಹಿಳೆಯರು ತನ್ನ ಸಹಾಯವಿಲ್ಲದೆ ಮನೆಯಿಂದ ಹೊರಗೆ ಹೋಗುವ ಸಾಹಸ ಮಾಡುತ್ತಾರೆಂದು ಸುರೇಶ್ ಕನಸಿನಲ್ಲಿಯೂ ಎಣಿಸಿರಲಿಲ್ಲ. ಮಂಗಳಮ್ಮನವರಂತೂ ಕುಟುಂಬದ ಕಠೋರ ಶಿಸ್ತಿಗೆ ಒಳಪಟ್ಟಿದ್ದರು ಹಾಗೂ ಕಬ್ಬಿಣದ ಪರದೆಯ ಹಿಂದೆ ದಿನ ಕಳೆಯುತ್ತಿದ್ದರು. ಅವರ ಅತ್ತೆ, ಮಾವರಷ್ಟೇ ಅಲ್ಲದೆ, ಅವರ ಗಂಡನೂ ಸಹ ಹೆಂಗಸರ ಸ್ಥಾನ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇರಬೇಕೆನ್ನುತ್ತಿದ್ದರು.
ತಮ್ಮ ಜೀವನವಂತೂ ಹೇಗೋ ಕಳೆಯಿತು. ಆದರೆ ಮುಂದಿನ ಪೀಳಿಗೆಗೆ ತಮ್ಮಂತೆ ಗುಟುಕು ಗುಟುಕಾಗಿ ಜೀವನ ಕಳೆಯಲು ಬಿಡುವುದಿಲ್ಲವೆಂದು ನಿರ್ಧರಿಸಿದರು.
ಆದರೆ, ಬರೀ ಯೋಚಿಸುವುದರಿಂದ ಏನಾಗುತ್ತದೆ? ಅವರು ಸುಮನಾಳ ಹಸನ್ಮುಖ ಹಾಗೂ ಜೀವನಪ್ರೀತಿ ಸ್ವಭಾವದಿಂದ ಪ್ರಭಾವಿತರಾಗಿದ್ದರು. ಆದರೆ ಮದುವೆಯ ನಂತರ ಸುಮನಾ ಸ್ವಲ್ಪ ಸ್ವಲ್ಪವೇ ಆಸಕ್ತಿ ಕಳೆದುಕೊಳ್ಳತೊಡಗಿದಳು. ಹಾಗೆ ನೋಡಿದರೆ ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಸುರೇಶ್‌ಗೆ ಒಳ್ಳೆಯ ಕೆಲಸವಿತ್ತು. ಅವನ ತಂದೆಗೂ ಒಳ್ಳೆಯ ಬಿಸ್‌ನೆಸ್‌ಇತ್ತು. ಸುರೇಶ್ ತನ್ನ ತಂದೆಯ ಆಚಾರ ವಿಚಾರ ಹಾಗೂ ಸ್ವಭಾವವನ್ನು ಆಸ್ತಿಯಾಗಿ ಪಡೆದಿದ್ದ.
ಅವನು ತಾನು ಮೋಜು ಮಾಡಲು ಸ್ವತಂತ್ರನಿದ್ದ. ಆದರೆ ಸುಮನಾ ಮೇಲೆ, ಅವಳ ಓಡಾಟದ ಮೇಲೆ ಕಣ್ಣಿಟ್ಟಿದ್ದ. ಅವಳು ಕಿಟಕಿಯಿಂದ ಆಚೆ ನೋಡುವುದೂ ಸುರೇಶ್‌ಗೆ ಇಷ್ಟವಿರಲಿಲ್ಲ. ಪ್ರತಿಯೊಂದಕ್ಕೂ ಅವಳನ್ನು ಕೀಳಾಗಿ ಕಾಣುವುದು, ವ್ಯಂಗ್ಯ ಬಾಣಗಳನ್ನು ಬಿಡುವುದು, ಕೋಪದಲ್ಲಿ ಪಾತ್ರೆ, ಪ್ಲೇಟ್, ಗ್ಲಾಸ್‌ಗಳನ್ನು ಎಸೆಯುವುದು ಅವನಿಗೆ ಮಾಮೂಲಿಯಾಗಿತ್ತು. ಸುಮನಾ ತನ್ನದೇ ಆದ ಲೋಕದಲ್ಲಿ ಮುಳುಗಿರುತ್ತಿದ್ದಳು.
“ಅಜ್ಜಿ, ನಿದ್ದೆ ಮಾಡಿಬಿಟ್ರಾ?” ಮಂಗಳವಾರ ಯೋಚನೆಯ ಶ್ರೇಣಿ ಹೀಗೇ ಸಾಗುತ್ತಿತ್ತೇನೋ. ಆದರೆ ಶ್ರೇಯಾ ಕೂಗಿದಾಗ ಅವರು ವಾಸ್ತವಕ್ಕೆ ಮರಳಿದರು.
“ನನ್ನ ಸ್ಕೂಲು ಬಂತು ಅಜ್ಜಿ,” ಶ್ರೇಯಾ ಖುಷಿಯಿಂದ ಹೇಳಿದಳು.
“ನಿನ್ನ ಸ್ಕೂಲು ಬರಲಿಲ್ಲ. ನಾವು ನಿನ್ನ ಸ್ಕೂಲಿಗೆ ಬಂದಿದ್ದು, ಗೊತ್ತಾ ಪೆದ್ದಿ,” ಮಂಗಳಾ ತಮಾಷೆ ಮಾಡಿದರು.
“ನೋಡಮ್ಮಾ, ಅಜ್ಜಿ ನನ್ನನ್ನು ಪೆದ್ದಿ ಅಂತಿದ್ದಾರೆ,” ಶ್ರೇಯಾ ನಗುತ್ತಲೇ ಹೇಳಿದಳು.
ಶ್ರೇಯಾ ಉತ್ಸಾಹದಿಂದ ಅಮ್ಮ ಹಾಗೂ ಅಜ್ಜಿಯ ಕೈಹಿಡಿದು ತನ್ನ ತರಗತಿಯ ಕಡೆ ಎಳೆದುಕೊಂಡು ಹೋದಳು.
“ಗೀತಾ ಮ್ಯಾಮ್, ಇವರು ನನ್ನ ತಾಯಿ, ಇವರು ನನ್ನ ಅಜ್ಜಿ,” ಶ್ರೇಯಾ ಖುಷಿಯಿಂದ ಟೀಚರ್‌ಗೆ ಇಬ್ಬರನ್ನೂ ಪರಿಚಯಿಸಿದಳು.
“ನಿಮ್ಮನ್ನು ನೋಡ್ತಿರೋದು ಇದೇ ಫಸ್ಟ್. ನೀವು ಸ್ಕೂಲಿಗೆ ಬಂದೇ ಇಲ್ಲ. ನಮ್ಮನ್ನು ಮೀಟ್ ಮಾಡೋಕೆ ಇಷ್ಟ ಇಲ್ವಾ?” ಎಂದರು ಗೀತಾ ಮೇಡಂ.
“ಇನ್ನು ಮುಂದೆ ಖಂಡಿತಾ ಬರ್ತೀನಿ,” ಸುಮನಾ ಹೇಳಿದಳು.
“ನಾವು ಪೋಷಕರು ಹಾಗೂ ಮಕ್ಕಳ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸುತ್ತೇವೆ. ಬಹಳಷ್ಟು ಮಕ್ಕಳ ತಾಯಂದಿರು ಶನಿವಾರಗಳಂದು ಮಕ್ಕಳಿಗೆ ಕಥೆಗಳನ್ನು ಹೇಳುತ್ತಾರೆ. ಆಟಗಳನ್ನು ಆಡಿಸುತ್ತಾರೆ. ಕ್ರಾಫ್ಟ್ ಕಲಿಸುತ್ತಾರೆ. ನೀವು ಬಯಸಿದರೆ ನಿಮಗೆ ಗೊತ್ತಿರೋ ಯಾವುದಾದರೂ ಕಲೆಯ ಬಗ್ಗೆ ಹೇಳಿಕೊಡಬಹುದು.”
“ನಮ್ಮಜ್ಜಿಗೆ ಬಹಳ ಕಥೆಗಳು ಗೊತ್ತು. ನಮ್ಮ ಅಮ್ಮನೂ ತುಂಬಾ ಜಾಣೆ,” ಶ್ರೇಯಾ ಕುಣಿಯುತ್ತಾ ಹೇಳಿದಳು.
“ಹೌದಾ?” ಮೇಡಂ ಮುಗುಳ್ನಕ್ಕರು.
ಆಗಲೇ ಶ್ರೇಯಾ ಮೇಡಂ ಕಿವಿಯಲ್ಲಿ ಏನೋ ಪಿಸುಗುಟ್ಟಿದಳು.
“ಹೌದು. ನೋಡಿದೆ. ನಿಮ್ಮಮ್ಮ ಬಹಳ ಸುಂದರವಾಗಿದ್ದಾರೆ,” ಗೀತಾ ಮೇಡಂ ಹೇಳಿದರು.
“ಬಹಳ ಚೇಷ್ಟೆ ಇವಳದು. ಏನಾದ್ರೂ ವಟಗುಟ್ತಾ ಇರ್ತಾಳೆ,” ಸುಮನಾ ನಾಚುತ್ತಾ ಹೇಳಿದಳು.
“ಸುಂದರವಾಗಿರೋರನ್ನು ಸುಂದರವಾಗಿದ್ದಾರೆ ಅಂದ್ರೇನು ತಪ್ಪು? ನಿಮ್ಮ ಮಗಳು ಬಹಳ ಮುದ್ದಾಗಿದ್ದಾಳೆ. ತುಂಬಾ ಜಾಣೆ ಕೂಡ. ನೀವು ಯಾವುದಾದ್ರೂ ಶನಿವಾರ ಖಂಡಿತಾ ಬನ್ನಿ. ಮಕ್ಕಳಿಗೆ ಏನಾದರೂ ಕಲಿಸಿ, ಇಲ್ಲದಿದ್ರೆ ಹಾಡು ಹೇಳಿ. ಅವರ ಜೊತೆ ಮಾತನಾಡಿ. ಅದರಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಆಗುತ್ತೆ, ಆತ್ಮವಿಶ್ವಾಸ ಹೆಚ್ಚುತ್ತದೆ. ಯಾವಾಗಲೂ ಖುಷಿಯಾಗಿರೋ ಶ್ರೇಯಾ ಶನಿವಾರಗಳಂದು ತುಂಬಾ ಡಲ್ ಆಗಿರ್ತಾಳೆ,” ಗೀತಾ ಮೇಡಂ ಹೇಳಿದರು.
“ನಾನು ಮುಂದೆ ಜ್ಞಾಪಕ ಇಟ್ಕೋತೀನಿ. ಶ್ರೇಯಾ ಖುಷೀನೇ ನನ್ನ ಖುಷಿ,” ಸುಮನಾ ಆಶ್ವಾಸನೆ ಕೊಟ್ಟಳು. ಸ್ಕೂಲಿನಿಂದ ಹೊರಟು ಸುಮನಾ ಅತ್ತೆ ಹಾಗೂ ಶ್ರೇಯಾರನ್ನು ಕರೆದುಕೊಂಡು `ಫನ್ ವರ್ಲ್ಡ್’ಗೆ ಹೋದಳು. ಅಲ್ಲಿ ಮಕ್ಕಳಿಗೆ ಅನೇಕ ರೀತಿಯ ಆಟಗಳಿದ್ದವು. ಬಹಳಷ್ಟು ಮಕ್ಕಳು, ಅವರ ತಾಯಿ ತಂದೆಯರು ಬಂದಿದ್ದರು. ಶ್ರೇಯಾಳೊಂದಿಗೆ ಮಂಗಳಾ ಹಾಗೂ ಸುಮನಾ ಸಹ ಅಲ್ಲಿ ಹಲವಾರು ಆಟಗಳನ್ನು ಆಡಿ, ಮೋಜು ಪಡೆದರು. ನಂತರ ಒಳ್ಳೆಯ ಹೋಟೆಲ್ ಗೆ ಹೋಗಿ ತಿಂಡಿ ತಿಂದು ಕಾಫಿ ಕುಡಿದು ಮನೆಯತ್ತ ಹೊರಟರು. ಅವರಿಗೆಲ್ಲಾ ಸುತ್ತಾಡಿ ಆಯಾಸವಾಗಿತ್ತು. ಎಲ್ಲರೂ ಬೇಗನೆ ಮಲಗಿದರು. ಬೆಲ್‌ಶಬ್ದಕ್ಕೆ ಸುಮನಾ ಧಡಬಡಿಸಿ ಎದ್ದಳು. ಗಡಿಯಾರದಲ್ಲಿ 6 ಗಂಟೆ ಹೊಡೆಯುತ್ತಿತ್ತು. ಬಾಗಿಲು ತೆರೆದಾಗ ಎದುರಿಗೆ ಸುರೇಶ್ ನಿಂತಿದ್ದ.
“ನಿದ್ದೆ ಮಾಡ್ತಿದ್ಯೇನೇ?”
“ಹೌದು,” ಸುಮನಾ ಹೇಳಿದಳು.
“ಶ್ರೇಯಾ, ಅಮ್ಮ ಮಲಗಿಬಿಟ್ರಾ?” ಎಂದು ಕೇಳಿದ ಸುರೇಶ್,
“ಇದೇನು ಇಷ್ಟು ಬೇಗ ನಿದ್ರೆನಾ? ನಾನು ಏನು ಹೇಳಿಹೋಗಿದ್ದೆ? ರೂಪಾಗೆ ಫೋನ್ ಮಾಡಿ ನಿನ್ನೆ ಹಾಗೆ ವರ್ತಿಸಿದ್ದಕ್ಕೆ ಸಾರಿ ಕೇಳು. ಅವಳು ಶ್ರೇಯಾಳನ್ನು ಸ್ಕೂಲಿಗೆ ಕರ್ಕೊಂಡು ಹೋಗ್ಲೀಂತ. ಆದರೆ ನೀನು ನಿನ್ನ ಹಠದಲ್ಲೇ ಮುಳುಗಿದ್ದೀಯ. ಮಗಳ ಭವಿಷ್ಯ ಹೇಗಾದ್ರೂ ಹಾಳಾಗ್ಲಿ,” ಕೋಪದಿಂದ ಹೇಳಿದ.
“ನಾನು ಫೋನ್ ಮಾಡಿಲ್ಲಾಂದ್ರೆ ಏನಾಯ್ತು? ನೀವು ರೂಪಾಗೆ ಫೋನ್ ಮಾಡಿರಬಹುದಲ್ವಾ?” ಸುಮನಾ ಸಹಜವಾಗಿ ಕೇಳಿದಳು.
“ಪ್ರಶ್ನೆ ಕೇಳ್ತಿದ್ಯೋ? ವ್ಯಂಗ್ಯವಾಗಿ ಮಾತನಾಡ್ತಿದ್ದೀಯೋ?” ಸುರೇಶ್ ಕೋಪದಿಂದ ಕೇಳಿದ.
“ನಾನು ಆ ರೀತಿ ಏನೂ ಮಾಡಲಿಲ್ಲ. ಬರೀ ತಿಳಿದುಕೊಳ್ಳಬೇಕಾಗಿತ್ತು.”
“ಹಾಗಾದ್ರೆ ತಿಳಿದುಕೋ. ನಾನು ರೂಪಾಗೆ ಫೋನ್ ಮಾಡಿದ್ದು ಏಕೆಂದರೆ ಅವಳು ಶ್ರೇಯಾನ ಸ್ಕೂಲಿಗೆ ಕರೆದುಕೊಂಡು ಹೋದಳೋ ಇಲ್ವೋಂತ ತಿಳಿದುಕೊಳ್ಳೋಕೆ. ಅವಳು ಹೇಳಿದ್ಲು ನೀನು ಫೋನ್ ಮಾಡಲೇ ಇಲ್ಲಾಂತ. ಇನ್ನು ಕ್ಷಮೆ ಕೇಳೋದೆಲ್ಲಿ? ಒಂದು ವಿಷಯ ಕ್ಲಿಯರ್ ಆಯ್ತು. ನಿನಗೆ ಶ್ರೇಯಾ ಬಗ್ಗೆ ಏನೂ ಚಿಂತೆ ಇಲ್ಲ.”
“ಶ್ರೇಯಾ ಬಗ್ಗೆ ಚಿಂತೆ ಇದೆ. ಅದಕ್ಕೆ ರೂಪಾಗೆ ಫೋನ್ ಮಾಡಲಿಲ್ಲ. ಅಪರಿಚಿರ ಎದುರಿಗೆ ನನ್ನ ಕಂಠ ಉಡುಗಿಹೋಗಲ್ಲ. ನಾನೂ, ಅಮ್ಮ, ಶ್ರೇಯಾ ಸ್ಕೂಲಿಗೆ ಹೋಗಿದ್ವಿ. ಶ್ರೇಯಾ ಅಷ್ಟು ಖುಷಿಯಾಗಿ ಇದ್ದಿದ್ದನ್ನು ನಾನೆಂದೂ ನೋಡಲಿಲ್ಲ,” ಸುಮನಾ ಒಂದೊಂದು ಪದವನ್ನೂ ಒತ್ತಿ ಒತ್ತಿ ಹೇಳಿದಳು.
“ಓಹೋ. ಈಗ ನಿನ್ನ ಧ್ವನಿಯೂ ಜೋರಾಯ್ತು. ರೂಪಾ ನಿನ್ನ ತಂಗಿ ಅನ್ನೋದೂ ಮರೆತುಬಿಟ್ಯಾ?”
“ತಂಗಿ ಆಗ್ಲಿ, ಗಂಡನಾಗ್ಲಿ. ಅನ್ಯಾಯಾನ ವಿರೋಧಿಸಲೇಬೇಕು. ನಾನು ಇದುವರೆಗೂ ಸುಮ್ಮನಿದ್ದೆ. ಈಗ ನಾನು ಹೋರಾಟ ಮಾಡ್ತೀನಿ. ನನಗಾಗಿ ಅಲ್ಲ, ನನ್ನ ಮುದ್ದಿನ ಶ್ರೇಯಾಗಾಗಿ.”
“ನಾನೂ ನಿನ್ನ ಜೊತೆಗಿದ್ದೀನಿ ಸುಮನಾ,” ಮಂಗಳಾ ಅದುವರೆಗೆ ಸುಮ್ಮನಿದ್ದವರು ಮೆಲ್ಲಗೆ ಹೇಳಿದರು.
“ಅಮ್ಮಾ, ನೀನೂ ಕೂಡ,” ಸುರೇಶ್ ಬೆಚ್ಚಿ ಹೇಳಿದ.
“ಇನ್ನೇನು ಮಾಡ್ಲಿ ಸುರೇಶ್, ಇಡೀ ಜೀವನ ಅನ್ಯಾಯ ಸಹಿಸಿದೆ. ಈಗ ಕಾಲ ಬದಲಾಗಿದೆ. ಸುಮನಾ ಜೊತೆ ನಾನೂ ಹೋರಾಟ ಮಾಡ್ತೀನಿ. ನಮ್ಮ ಮುದ್ದಿನ ಶ್ರೇಯಾಗಾಗಿ,” ಮಂಗಳಾ ದೃಢವಾದ ಸ್ವರದಲ್ಲಿ ಹೇಳಿದರು. ಸುಮನಾ ಮುಂದೆ ಬಂದು ಅತ್ತೆಯನ್ನು ಅಪ್ಪಿಕೊಂಡಳು. ಅವಳ ಕಣ್ಣುಗಳಲ್ಲಿ ಕೃತಜ್ಞತೆ ತುಂಬಿದ ಕಣ್ಣೀರಿತ್ತು.