ಗಂಡನನ್ನು ಕಳೆದುಕೊಂಡು 3 ಮಕ್ಕಳ ಜವಾಬ್ದಾರಿ ಹೊರಬೇಕಾದ ಓದುಬರಹ ಕಲಿತಿರದ ಸುನಂದಮ್ಮನಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಮುಂದೆ ತಮ್ಮ ಸಂಸಾರ ನಡೆಯುವುದು ಹೇಗೆ? ಮಕ್ಕಳ ಭವಿಷ್ಯದ ಗತಿ ಏನು?

ಬಿ.ಕಾಂ. ಪದವಿ ಇದ್ದರೂ ಖಾಯಂ ಕೆಲಸ ಸಿಗದೆ ಹಿರಿಮಗ ಮಹೇಶ ಅತಂತ್ರನಾಗಿದ್ದ. ಆಗ ತಾನೇ ಪಿಯುಸಿ ಮುಗಿಸಿದ ಗೀತಾ ಡಿಗ್ರಿ ಕಾಲೇಜ್‌ ಸೇರಬೇಕಿತ್ತು. ರಾಯರ ಅಂತಿಮ ಸಂಸ್ಕಾರಕ್ಕೆ ಸೇರಿದ ನೆಂಟವರೆಲ್ಲರೂ ಆಕೆಗೆ ಎಷ್ಟೋ ಧೈರ್ಯ ತುಂಬಿದರು. ಯಾರೆಷ್ಟು ಹೇಳಿದರೂ ಆಕೆಯ ಗೋಳಾಟಕ್ಕೆ ಕೊನೆ ಮೊದಲು ಇರಲಿಲ್ಲ. ಆಗ ಅವರ ಸಹಾಯಕ್ಕೆ ದೃಢವಾಗಿ ನಿಂತರು ಆಕೆಯ ತಮ್ಮ ಶ್ರೀಕಂಠ.

“ಅಕ್ಕಾ, ನೀನು ಇಷ್ಟೊಂದು ಗಾಬರಿ ಆಗಬೇಡ. ಮನಸ್ಸು ಕಲ್ಲು ಮಾಡಿಕೊಂಡು ಮಕ್ಕಳ ಯೋಗಕ್ಷೇಮ ಗಮನಿಸು. ನಾನು ಈ ಸಂಸಾರ ಮುನ್ನಡೆಸಲು ಹೆಗಲು ಕೊಡುತ್ತೇನೆ. ಮುಂದೆ 2 ವರ್ಷಗಳಲ್ಲಿ ನಿನ್ನ ಮನೆ ಖಂಡಿತಾ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ,” ಎಂದು ಸುನಂದಮ್ಮನನ್ನು ಸಮಾಧಾನಪಡಿಸಿದರು.

ಶ್ರೀಕಂಠ ಮಾಮ ಹೇಳಿದಂತೆಯೇ ನಡೆದುಕೊಂಡರು. ಒಂದು ಖಾಸಗಿ ಬ್ಯಾಂಕಿನಲ್ಲಿ  ಹಿರಿಯ ಗುಮಾಸ್ತರಾಗಿದ್ದ ಅವರು ಬ್ಯಾಂಕಿನ ಕೆಲಸ ಮುಗಿಸಿಕೊಂಡು, ದಿನ ಬಿಟ್ಟು ದಿನ ಅಕ್ಕನ ಮನೆಗೆ ತಪ್ಪದೆ ಹಾಜರಾಗುತ್ತಿದ್ದರು. ಮಾಮ ಮನೆಗೆ ಬಂದರೆಂದರೆ ಮಕ್ಕಳಿಗೆ ಹೊಸ ಹುರುಪು ಮೂಡುತ್ತಿತ್ತು. ಅವರ ಸತತ ಪ್ರಯತ್ನಗಳಿಂದ ಹಿರಿಮಗ ಮಹೇಶನಿಗೆ ತಂದೆ ಕೆಲಸ ಮಾಡುತ್ತಿದ್ದ ಪೋಸ್ಟ್ ಆಫೀಸಿನಲ್ಲಿ ಕೆಲಸ ದೊರಕಿತು. ಅದೇ ತರಹ ಭಾವನ ಆಫೀಸಿಗೆ ಹತ್ತಾರು ಸಲ ಅಲೆದಾಡಿ, ಅವರಿಗೆ ಬರಬೇಕಿದ್ದ ಬಾಕಿ ಹಣ, ಪಿ.ಎಫ್‌, ಗ್ರಾಚ್ಯುಯಿಟಿ ಇತ್ಯಾದಿ ಎಲ್ಲ ಸಕಾಲಕ್ಕೆ ಸಿಗುವಂತೆ ಮುತುವರ್ಜಿಯಿಂದ ಓಡಾಡಿದರು. ಆ ಹಣದಿಂದ ಮೊದಲು ಗೀತಾಳ ಮದುವೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು. ರಾಯರು ಬದುಕಿರುವಾಗಲೇ 40 60 ಸೈಟಿನಲ್ಲಿ 2 ರೂಮುಗಳ ಒಂದು ಮನೆ ಕಟ್ಟಿಸಿದ್ದರಿಂದ ವಾಸಕ್ಕೆ ಏನೂ ತೊಂದರೆ ಇರಲಿಲ್ಲ. ಇಲ್ಲದಿದ್ದರೆ ಇಂದಿನ ದುಬಾರಿ ದಿನಗಳಲ್ಲಿ ಮೈಸೂರಿನಲ್ಲಿ ಬಾಡಿಗೆ ಕಟ್ಟಿಕೊಂಡು ಮಧ್ಯಮ ದ ಸಂಸಾರ ನಡೆಸುವುದು ಸುಲಭವಾಗಿರಲಿಲ್ಲ. ಹೀಗೆ ದಿನಗಳು ಕಳೆಯಲು, ಗೀತಾ ಮಗುವಿನ ತಾಯಿಯಾದಳು. ಬಹಳ ದಿನಗಳ ನಂತರ ಆ ಮನೆಯಲ್ಲಿ ಆನಂದದ ವಾತಾವರಣ ಮೂಡಿತು. ಮಹೇಶನಿಗೆ ಕೆಲಸಾವಾಗಿ ಈಗ ಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ ಅವನಿಗೂ ಮದುವೆ ಮಾಡಬೇಕೆಂದು ಸುನಂದಮ್ಮ ಬಯಸಿದರು. 4-6 ಕಡೆ ಸಂಬಂಧಗಳನ್ನು ವಿಚಾರಿಸಲಾಗಿ ಬಡವರ ಮನೆ ಹುಡುಗಿಯನ್ನು ತಂದುಕೊಳ್ಳುವುದೇ ಸೂಕ್ತ ಎಂದು ಅಕ್ಕ ತಮ್ಮ ನಿರ್ಧರಿಸಿದರು.

ಮುಂದೆ ಆ ಮನೆಗೆ ದಿಕ್ಕಾಗಿ, ಚಿಕ್ಕವನಾದ ಮೈದುನ ವರುಣ್‌, ಬಂದು ಹೋಗುವ ನಾದಿನಿ ಗೀತಾರನ್ನು ಸಂಭಾಳಿಸಲು ಮಮತಾಮಯಿ ಸೊಸೆ ಬೇಕೆಂದು ಬಡವರ ಮನೆಯ ಹುಡುಗಿ ನಾಗರತ್ನಾಳನ್ನು ಮಹೇಶನಿಗೆ ತಂದುಕೊಂಡರು. ಮೂವರು ಹೆಣ್ಣುಮಕ್ಕಳ ತುಂಬು ಮನೆಯಲ್ಲಿ ನಾಗರತ್ನಾ ಹಿರಿಮಗಳು. ಪಿಯುಸಿವರೆಗೆ ಮಾತ್ರ ಕಲಿತಿದ್ದ ಅವಳು, ಹಾಸಿಗೆ ಹಿಡಿದಿದ್ದ ರೋಗಿಷ್ಟ ತಾಯಿಯ ಸೇವೆ ಮಾಡುತ್ತಾ ಮನೆಯ ಜವಾಬ್ದಾರಿ ವಹಿಸಿದ್ದಳು. ಸರಳವಾಗಿ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು, ಸುನಂದಮ್ಮ ಕೊಡಿಸಿದ್ದ ರೇಷ್ಮೆ ಸೀರೆ, ಮಂಗಳಸೂತ್ರ ಧರಿಸಿ, ನೇರವಾಗಿ ಇವರ ಮನೆಗೆ ಪಡಿಯೆಡವಿ ಒಳಬಂದಳು. ಸರಳವಾಗಿ ಸುನಂದಮ್ಮ ಏರ್ಪಡಿಸಿದ್ದ ಹಬ್ಬದಡುಗೆ ಉಂಡು, ಅವಳ ತವರಿನವರು ಸಂಜೆ 4 ಗಂಟೆಗೆ ಹೊರಟುಬಿಟ್ಟರು. ಅಕ್ಕನ ಮನೆಯ ಸಂಸಾರ ಒಂದು ಹದಕ್ಕೆ ಬಂತೆಂದು ಶ್ರೀಕಂಠ ಸಮಾಧಾನಗೊಂಡರು. ಕೊನೆಯವನಾಗಿ ಉಳಿದ ವರುಣ್‌ ಮುಂದೆ ಚೆನ್ನಾಗಿ ಕಲಿತು ಸೆಟಲ್ ಆಗುತ್ತಾನೆ ಎಂಬ ವಿಶ್ವಾಸವಿತ್ತು. ಆ ಮನೆಯ ಸಂತಸ ಹೆಚ್ಚು ದಿನ ಹಾಗೇ ಉಳಿಯಲಿಲ್ಲ. ವಿಷಮಶೀತ ಜ್ವರ ಬಂದದ್ದೇ ನೆನಪಾಗಿ ಸುನಂದಮ್ಮ ಹಾಸಿಗೆ ಹಿಡಿದರು. ದಿನೇದಿನೇ ಅವರ ಅನಾರೋಗ್ಯ ಉಲ್ಬಣಗೊಂಡಿತು. ಆಸ್ಪತ್ರೆ ಸೇರಿ 20 ದಿನಗಳಾದರೂ ವಾಸಿಯಾಗುವ ಲಕ್ಷಣಗಳೇನೂ ಕಾಣಲಿಲ್ಲ. ತಾವು ಮನೆಯಲ್ಲೇ ಸಾಯುವುದಾಗಿ ಪಟ್ಟುಹಿಡಿದ ಸುನಂದಮ್ಮ, ಆಸ್ಪತ್ರೆಯಿಂದ ಬಂದು 15 ದಿನಗಳಾಗುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದರು. ಮತ್ತೊಮ್ಮೆ ಸಾವು ಆ ಮನೆಯ ಬಾಗಿಲು ಬಡಿದಿತ್ತು. ಮಹೇಶ, ನಾಗರತ್ನಾರಿಗೆ ಆಸ್ಪತ್ರೆ ಕಾಟ ತಪ್ಪಿತೆಂದು ನಿರಾಳವಾಯಿತು. ಆದರೆ ವರುಣ್‌ ಎದೆಯೊಡೆದು ಅತ್ತುಬಿಟ್ಟ. ಗೀತಾ ಸಹ ಬೆಂಗಳೂರಿನಿಂದ ಧಾವಿಸಿ ಬಂದಿದ್ದಳು.

ತನಗೆ ಏಕಮೇವ ಆಸರೆಯಾಗಿದ್ದ ಆಪ್ತ ಜೀವ ಬಿಟ್ಟುಹೋಯಿತಲ್ಲ ಎಂದು ವರುಣ್‌ ಕಳವಳಗೊಂಡಿದ್ದ. ಅವನ ಎಲ್ಲಾ ಕಷ್ಟಸುಖ ವಿಚಾರಿಸಿ, ಅವನಿಗೆ ಸಲಹೆ ಕೊಡುತ್ತಿದ್ದರು. ಈಗ ಅವನಿಗೆ ದಿಕ್ಕು ತಪ್ಪಿದಂತಾಗಿತ್ತು. 14 ದಿನಗಳ ಕರ್ಮಾಂತರ ಮುಗಿಸಿಕೊಂಡು ಗೀತಾ ಅತ್ತೆಮನೆಗೆ ಹೊರಟಳು. ಅವಳು ಇರುವವರೆಗೂ ವರುಣನಿಗೆ?

ತಾಯಿಯೇ ಬಳಿ ಇದ್ದಷ್ಟು ನೆಮ್ಮದಿ ಇತ್ತು. ಗೀತಾ ಸಹ ಹೊರಟ ಮೇಲೆ ಅವನು ನಿಜಕ್ಕೂ ಕಂಗಾಲಾದ. ಅಣ್ಣ ಅತ್ತಿಗೆ ಮೊದಲಿನಿಂದಲೂ ಅವನಿಗೆ ಅಕ್ಕರೆ ತೋರಿದವರಲ್ಲ. ಮಹೇಶ ಮಾತನಾಡಿಸುವುದೇ ಕಡಿಮೆ, ಅತ್ತಿಗೆಗಂತೂ ಅವನ ನೆರಳು ಕಂಡರೂ ಇಷ್ಟವಾಗುತ್ತಿರಲಿಲ್ಲ. ಆ ಮನೆಗೆ ಅವನೊಂದು ದೊಡ್ಡ ಹೊರೆ ಎಂದೇ ಸಿಡುಕುತ್ತಿದ್ದಳು. ತಾವು ವಾಸವಾಗಿದ್ದ ಆ ಮನೆ, ಯಾವಾಗ ಪೂರ್ತಿ ತಮ್ಮ ವಶಕ್ಕೆ ಬರುವುದೋ, ಯಾವಾಗ ಈ ಹುಡುಗ ಮನೆ ಬಿಟ್ಟು ಹೋಗುವನೋ ಎಂದು ಕಾಯುತ್ತಿದ್ದಳು.

10ನೇ ತರಗತಿ ದಾಟಿದ್ದ ವರುಣ್‌ ಈಗ ಅಣ್ಣ ಅತ್ತಿಗೆಯರ ಕುತಂತ್ರಗಳನ್ನು ಸುಲಭವಾಗಿ ಗುರುತಿಸಬಲ್ಲನಾಗಿದ್ದ. ಅವನಿಗೀಗ ಕಾಲೇಜಿನಲ್ಲಿ ಅಡ್ಮಿಷನ್‌ ಆಗಬೇಕಿತ್ತು. ಆದರೆ ಮನೆಯಲ್ಲಿ ಹೀಗಾದ್ದರಿಂದ ಯಾರಿಗೂ ಆ ಕಡೆ ಗಮನವೇ ಇರಲಿಲ್ಲ.

chhidranveshi-story-page-2

ಎಷ್ಟು ದಿನಗಳೆಂದು ದುಃಖಿಸುತ್ತಾ ಹಾಗೇ ಕುಳಿತುಬಿಡುದು? ತನ್ನ ಕಾಲೇಜ್‌ ಅಡ್ಮಿಷನ್‌ಗಾಗಿ ಹೋಗಿ ಅಪ್ಲಿಕೇಶನ್‌ ತರೋಣ ಎಂದು ವರುಣ್‌ ತಾನೇ ಸರ್ಕಾರಿ ಪಿ.ಯು.ಸಿ ಕಾಲೇಜಿನಿಂದ ಅರ್ಜಿ ತಂದ. ಅದನ್ನು ತರಲು ಹಣ ಕೊಡಲಿಕ್ಕೆ ಮಹೇಶ ಬಹಳ ಸತಾಯಿಸುತ್ತಿದ್ದ. ಈಗಲೇ ಹೀಗಾದರೆ ಮುಂದೆ ಕಾಲೇಜಿನ ಖರ್ಚಿಗೆ ಏನು ಮಾಡುವುದೆಂದು ವರುಣ್‌ ಚಿಂತಿಸಿದ. ಅಮ್ಮನ ಪಾಸ್ ಬುಕ್‌ ಒಂದು ಸಲ ನೋಡೋಣ, ತನ್ನ ವಿದ್ಯಾಭ್ಯಾಸಕ್ಕಾಗಿ ಪ್ರತ್ಯೇಕವಾಗಿ 1 ಲಕ್ಷ ರೂ. ಇಟ್ಟಿರುವುದಾಗಿ ಸುನಂದಮ್ಮ ಹೇಳುತ್ತಿದ್ದರು.

ಅದರ ವಿವರ ನೋಡೋಣವೆಂದು ಅವನು ಅಮ್ಮನ ಹಳೆಯ ಪೆಟ್ಟಿಗೆಯಿಂದ ಬ್ಯಾಂಕಿನ ಪಾಸ್‌ ಬುಕ್‌ ಹೊರತೆಗೆದ. ಅದನ್ನು ನೋಡುತ್ತಲೇ ಅವನ ಜಂಘಾಬಲವೇ ಉಡುಗಿಹೋಯಿತು. ಎಲ್ಲ ಹಣ ಮಾಯವಾಗಿ ಮಿನಿಮಮ್ ಬ್ಯಾಲೆನ್ಸ್ 1000/ ರೂ. ಮಾತ್ರ ಉಳಿದಿತ್ತು.

ತಕ್ಷಣ ವರುಣ್‌ ಅಣ್ಣನ ಬಳಿ ಓಡಿ ಬಂದು ವಿಚಾರಿಸಿದ. ಅವನು ನಿರಾಳವಾಗಿ ಪೇಪರ್‌ ಓದುತ್ತಾ, “ನನಗೇನು ಗೊತ್ತು?” ಎಂದ.

“ಇದರಲ್ಲಿ  1 ಲಕ್ಷ ರೂ. ಹಣ ಇಟ್ಟಿದ್ದರು. ಅಮ್ಮ ನನ್ನ ವಿದ್ಯಾಭ್ಯಾಸಕ್ಕೆಂದೇ ಪ್ರತ್ಯೇಕವಾಗಿ ಇರಿಸಿದ್ದರು….” ವರುಣ್‌ ಬಿಕ್ಕುತ್ತಾ ಹೇಳಿದ.

“ನಿನಗೆ ಅದರಲ್ಲಿ 1 ಲಕ್ಷ ರೂ. ಹಣ ಇದೆ ಅಂತ ಗೊತ್ತಿತ್ತು ಅಂದಮೇಲೆ, ಆ ಹಣ ಎಲ್ಲಿ ಹೋಯಿತು ಅಂತಲೂ ಗೊತ್ತಿರಲೇಬೇಕಲ್ಲವೇ?” ಏನೂ ತಿಳಿಯದವನಂತೆ ಮಹೇಶ ತಮ್ಮನನ್ನೇ ಆಪಾದಿಸಿದ್ದ.

“ಅಣ್ಣ, ಸ್ವಲ್ಪ ಜ್ಞಾಪಿಸಿಕೊಂಡು ನೋಡು. ನನ್ನ ಕಾಲೇಜ್‌ ಫೀಸ್‌ ಸಲುವಾಗಿ ಅಮ್ಮ ನಿನಗೇನಾದರೂ ಕೊಟ್ಟಿದ್ದರೇನೋ….?”

“ಏಯ್‌…. ನಿನ್ನ ಬುದ್ಧಿ ನೆಟ್ಟಗಿದೆ ತಾನೇ? ಬಂದುಬಿಟ್ಟ ದೊಡ್ಡ ಮನುಷ್ಯ ಪಂಚಾಯ್ತಿ ಮಾಡೋಕ್ಕೆ! ಮೂರು ಹೊತ್ತು ಅಮ್ಮನ ಸೆರಗು ಹಿಡಿದುಕೊಂಡು ಓಡಾಡುತ್ತಿದ್ದವನು ನೀನು! ಅಮ್ಮ ಎಲ್ಲಾ ಹಣ ನಿಂಗೇ ಕೊಟ್ಟಿರಬೇಕು. ಅದರ ಬಗ್ಗೆ ನಾನು ಏನೂ ಕೇಳಬಾರದು ಅಂತ ಹೀಗೆ ನಾಟಕ ಆಡ್ತಿದ್ದೀಯಾ? ನಾನು ಯಾವತ್ತಾದ್ರೂ ಅಮ್ಮನ್ನ ಹಣದ ವಿಷಯವಾಗಿ ವಿಚಾರಿಸಿದ್ದನ್ನು ನೋಡಿದ್ದೆಯಾ? ನನಗೀಗ ಹಣದ ಅಗತ್ಯವಾದರೂ ಏನಿದೆ…. ನೀನು ಹೇಳಿದಂತೆ ಅಮ್ಮನ ಹಣ ಖರ್ಚು ಮಾಡಿಕೊಳ್ಳಲು….?”

“ಅಣ್ಣ….. ಇದೇನು ಹೇಳ್ತಿದ್ದೀಯಾ? ನಿನಗೆ ಗೊತ್ತಾಗದಂತೆ ಅಮ್ಮನಿಂದ ನಾನು ಹಣ ಪಡೆಯಲು ಸಾಧ್ಯವೇ? ಇವತ್ತಿನವರೆಗೂ ಅಮ್ಮ ನಿನಗೆ ಗೊತ್ತಾಗದಂತೆ ಏನಾದರೂ ಮುಚ್ಚಿಟ್ಟಿದ್ದರೇನು? ಎಂದೂ ಇಲ್ಲವಲ್ಲ…..? ಅಪ್ಪನ ಆಫೀಸಿನಿಂದ ಮಾಮ ಹಣ ತಂದು ಕೊಟ್ಟ ತಕ್ಷಣ ಅಮ್ಮ ಮೊದಲು ಗೀತಕ್ಕನ ಮದುವೆ ಬಗ್ಗೆ ತಾನೇ ಯೋಚಿಸಿದ್ದು? ಅದರಲ್ಲಿ ಬಾಕಿ ಉಳಿದದ್ದು ಅಮ್ಮನ ಹೆಸರಲ್ಲಿ ಹಾಗೇ ಬ್ಯಾಂಕಲ್ಲಿ ಇತ್ತಲ್ಲವೇ? ಅದರಿಂದಲೇ ನನ್ನ ಮುಂದಿನ ಓದು ನಡೆಯಬೇಕೆಂದು ಅಮ್ಮ ಎಲ್ಲರ ಮುಂದೆ ಹೇಳುತ್ತಲೇ ಇದ್ದರಲ್ಲ…. ನೀನಂತೂ ನನ್ನ ಮುಂದಿನ ಓದಿಗೆ ಖರ್ಚು ಮಾಡುವನಲ್ಲ ಅಂತೀ ಅಮ್ಮ ಹೀಗೆ ಮಾಡಿರಬೇಕು….”

“ಮುಚ್ಚು ಬಾಯಿ! ಇಷ್ಟೊಂದು ಸೊಕ್ಕಿನ ಮಾತುಗಳನ್ನು ಆಡಬೇಡ….”

“ನ್ಯಾಯ ಕೇಳಿದ್ರೆ ಸೊಕ್ಕಿನ ಮಾತು ಹೇಗಾಗುತ್ತೆ? ನಾನು ನಿನಗೆ ಆರ್ಥಿಕ ಹೊರೆ ಆಗಬಾರದು ಅನ್ನುವ ಮುಂದಾಲೋಚನೆಯಿಂದಲೇ ಅಮ್ಮ ಹೀಗೆ ಹಣ ಜೋಪಾನ ಮಾಡಿದ್ದಲ್ಲವೇ? ಇದಕ್ಕೂ ಮೇಲೆ ನಾನೇನು ತಾನೇ ಕೇಳಬಲ್ಲೇ? ನಿನಗೆ ಸರಿ ಅನಿಸಿದಂತೆ ನೀನು ಮಾಡು,” ಎಂದು ಹೇಳಿ ಆ ಮಾತನ್ನು ಅಲ್ಲಿಗೆ ಮೊಟಕು ಮಾಡಿದ ವರುಣ್‌.

ಅದಕ್ಕಿಂತ ಹೆಚ್ಚಿಗೆ ಅವನೇನು ವಾದ ಮಾಡಬಲ್ಲ? ಅಸಲಿಗೆ ಅಣ್ಣ ಅತ್ತಿಗೆ ಮಸಲತ್ತು ನಡೆಸಿ ಆ ಹಣವನ್ನು ಹೊಡೆದುಬಿಟ್ಟಿದ್ದಾರೆ ಎಂಬುದು ಅವನಿಗೆ ಸ್ಪಷ್ಟವಾಗಿ ಅರ್ಥವಾಗಿತ್ತು.

ಹಿಂದಿನಿಂದಲೂ ಸುನಂದಮ್ಮನಿಗೊಂದು ಅಭ್ಯಾಸವಿತ್ತು, ಮೊದಲೇ ಚೆಕ್‌ ಲೀಫ್‌ಗಳಿಗೆ ಆಕೆ ಸಹಿ ಮಾಡಿ ಇಟ್ಟುಬಿಡುತ್ತಿದ್ದರು. ತಿಂಗಳ ಮೊದಲಲ್ಲಿ ಬ್ಯಾಂಕಿನಿಂದ ಪೆನ್‌ಶನ್‌ ಹಣ ಡ್ರಾ ಮಾಡಬೇಕಿದ್ದರೆ, ವರುಣ್‌ ತಮ್ಮ ಸಹಿಗಾಗಿ ಕಾಯುವುದು ಬೇಡ, ಅದರಲ್ಲಿ ಹಣದ ಮೊತ್ತ ನಮೂದಿಸಿ ತಂದುಬಿಡಲಿ ಎಂಬುದು ಅವರ ವಿಚಾರವಾಗಿತ್ತು. ಒಮ್ಮೊಮ್ಮೆ ಗೀತಾಳ ಮನೆಗೆ ಅಥವಾ ನೆಂಟರಿಷ್ಟರ ಕಡೆಗೆ ಹೋಗಿ ತಡವಾದಾಗೆಲ್ಲ, ಈ ರೀತಿ ತಪ್ಪದೆ ಹಣ ಮನೆ ಸೇರುತ್ತಿತ್ತು. ಸುನಂದಮ್ಮನ ಈ ಅಭ್ಯಾಸ ಅರಿತಿದ್ದ ಮಹೇಶ, ಅವರ ಸಹಿ ಇದ್ದ ಚೆಕ್‌ಗಳನ್ನು ಎನ್‌ಕ್ಯಾಶ್‌ ಮಾಡಿಕೊಂಡಿದ್ದ.

ವರುಣ್‌ ಮತ್ತೊಮ್ಮೆ ಅಮ್ಮನ ಪೆಟ್ಟಿಗೆ ತಡಕಾಡಿದಾಗ, ಅಲ್ಲಿದ್ದ ಅವರ ಹಳೆಯ ಒಡವೆಗಳಾವುದೂ ಕಾಣಲೇ ಇಲ್ಲ. ಅಲ್ಲಿಗೆ ಚೆಕ್‌ಬುಕ್‌, ಒಡವೆಗಳನ್ನು ಕದ್ದವರು ಯಾರು ಎಂಬುದು ಅವನಿಗೆ ಸ್ಪಷ್ಟವಾಗಿತ್ತು. ಇದೆಲ್ಲವನ್ನೂ ನೆನೆದು ವರುಣನ ಕಣ್ಣು ಮತ್ತೆ ಹನಿಗೂಡಿತು. ಆ ದಿನವೆಲ್ಲ ಅಮ್ಮ ಅಪ್ಪನನ್ನು ನೆನೆದು ಅವನ ಮನಸ್ಸು ಭಾರವಾಗಿತ್ತು. ಅವರು ಬದುಕಿದ್ದಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲ ಎನಿಸಿತು. ಇಷ್ಟೆಲ್ಲ ಆದಮೇಲೆ ಇನ್ನು ಅವನು ಕಾಲೇಜು ಸೇರಲು ಸಾಧ್ಯವೇ?

ಅವನು ಬಾಯಿಬಿಟ್ಟು ಮಹೇಶನನ್ನು, “ಅಣ್ಣಾ, ಕಾಲೇಜಿಗೆ ಅಡ್ಮಿಶನ್‌ ಫೀಸ್‌ ಕಟ್ಟಲು ನಾಳೆಯೇ ಕೊನೆಯ ದಿನ. ಫೀಸ್‌, ಬುಕ್ಸ್ ಎಲ್ಲಾ ಸೇರಿ 15 ಸಾವಿರ ಆಗುತ್ತೆ. ಹೇಗಾದರೂ ಇವತ್ತು ಸಂಜೆ ಅಡ್ಜಸ್ಟ್ ಮಾಡಿ ಕೊಟ್ಟಿರ್ತೀಯಾ…..?” ಎಂದು ದೀನನಾಗಿ ಕೇಳಿದ.

“ನಾನು ಎಲ್ಲಿಂದ ತಂದುಕೊಡಲಿ? ನನಗೆ ಬರುವ ಸಂಬಳದಲ್ಲಿ ಮನೆ ನಡೆಸಿ, ಮಗುವನ್ನು ನೋಡಿಕೊಳ್ಳುವುದೇ ಆಗುತ್ತಿಲ್ಲ. ಇನ್ನು ನಿನಗೇಂತ ಎಲ್ಲಿಂದ ಫೀಸ್‌ ಹಣ ಹೊಂಚಲಿ? ಇಷ್ಟಕ್ಕೂ ನೀನು ಕಾಲೇಜು ಮೆಟ್ಟಿಲು ಹತ್ತಿ ಕಡಿದು ಕಟ್ಟೆಹಾಕಬೇಕಿದೆಯೇ? ಯಾವುದಾದರೂ ಗ್ಯಾರೇಜು, ಫ್ಯಾಕ್ಟರಿ ಸೇರಿಕೊ. ಅಷ್ಟಕ್ಕೂ ನಿನಗೆ ಓದಲೇಬೇಕೆಂಬ ಆಸೆಯಿದ್ದರೆ ನಿನ್ನ ಸಂಪಾದನೆಯಲ್ಲೇ ಈವ್ನಿಂಗ್‌ ಕಾಲೇಜ್‌ ಅಥವಾ ಕರೆಸ್ಪಾಂಡೆನ್ಸ್ ಗೆ ಸೇರಿಕೊ. ಇಷ್ಟು ದಿನ ಮನೆಯಲ್ಲಿ ಕುಳಿತು ಬಿಟ್ಟಿ ಕವಳ ಕತ್ತರಿಸಿದಂತಲ್ಲ, ಸ್ವಲ್ಪ ಕೆಲಸ ಕಲಿತು ಮನೆಗೆ 4 ಕಾಸು ಸಂಪಾದಿಸಿ ಕೊಡು. ಆಗ ನಾನು ಎಷ್ಟು ಕಷ್ಟಪಡ್ತಿದ್ದೀನಿ ಅನ್ನೋದು ನಿನಗೂ ತಿಳಿಯುತ್ತೆ,” ಎಂದು ಕೈ ಒದರಿಬಿಟ್ಟ.

ಅಲ್ಲಿಗೆ ತನ್ನ ವಿದ್ಯಾಭ್ಯಾಸಕ್ಕೆ ಅಣ್ಣ ಎನಿಸಿಕೊಂಡವನು ಒಂದು ನಯಾಪೈಸೆ ಸಹ ಖರ್ಚು ಮಾಡುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ವರುಣ್‌ ಹೆಚ್ಚಿಗೇನೂ ವಾದ ಮಾಡದೆ, ಅವರಿವರ ಮರ್ಜಿ ಹಿಡಿದು ಒಂದು ಖಾಸಗಿ ಸಂಸ್ಥೆಯಲ್ಲಿ 7 ಸಾವಿರ ರೂ.ಗಳ ಆಫೀಸ್‌ ಬಾಯ್‌ ಕೆಲಸಕ್ಕೆ ಸೇರಿದ. ಅವನಿಗೆ ಆ ಕೆಲಸ ಸಿಗುವಷ್ಟರಲ್ಲಿ 2 ತಿಂಗಳಾಯಿತು. ಆ 2 ತಿಂಗಳಲ್ಲಿ ಅವನ ಅತ್ತಿಗೆ ನಾಗರತ್ನಾ ಪ್ರತಿ ಸಲ ಒಂದು ಹಿಡಿ ಅನ್ನ ಹಾಕುವಾಗಲೂ, “ಅದೇನು ದಂಡಕ್ಕೆ ಹೀಗೆ ಬಿದ್ದಿದ್ದೀಯೋ? ಎಲ್ಲಾದರೂ ಹೋಗಿ ಕೂಲಿ ನಾಲಿ ಮಾಡಬಾರದೇ? ಮನೆಗೆ 4 ಕಾಸು ಸಂಪಾದಿಸಿ ಕೊಟ್ಟರೆ ನಿನ್ನ ಕೈಕಾಲು ಸವೆದು ಹೋಗುತ್ತೇನು? ಬೆಳೆಯುತ್ತಿರು ಮಗು, ಇಷ್ಟು ಜನರ ಊಟತಿಂಡಿ, ಮನೆ ಖರ್ಚು ಎಲ್ಲ ನಡೆಯಬೇಡವೇ?” ಎನ್ನುತ್ತಿದ್ದಳು.

ಅವಳ ಒಂದೊಂದು ವ್ಯಂಗ್ಯದ ವಾಗ್ಬಾಣಗಳು ಕೂರಲಗಿನಂತೆ ಇವನ ಎದೆ ಇರಿಯುತ್ತಿತ್ತು. ಕಾಫಿ ತಿಂಡಿ ಕಂಡು ಎಷ್ಟು ದಿನಗಳಾಗಿತ್ತೋ ಏನೋ? ಮಧ್ಯಾಹ್ನ ಮತ್ತು ರಾತ್ರಿ 2 ಹೊತ್ತು ಊಟಕ್ಕೆ ಸಾವಿರ ಚಾಕರಿ ಮಾಡಿಸುತ್ತಿದ್ದಳು. ದೂರದ ಬೋರ್‌ ವೆಲ್‌ನಿಂದ ನೀರು ಹೊರುವುದರಿಂದ ಹಿಡಿದು, ಮನೆಯ ಸಮಸ್ತ ಕೆಲಸಗಳನ್ನೂ ಮಾಡಿಸಿ, ನುಡಿಗೆ ನೂರು ಸಲ ಹಂಗಿಸುತ್ತಿದ್ದಳು. ಅಣ್ಣನೇ ನಮ್ಮವನಾಗದ ಮೇಲೆ ಅತ್ತಿಗೆ ನಮ್ಮವಳಾಗಿ ಅಕ್ಕರೆ ತೋರಿಸಿಯಾಳೇ ಎಂದು ನಿಡುಸುಯ್ದು ವರುಣ್‌ ಸುಮ್ಮನಾಗುತ್ತಿದ್ದ. ಇದೆಲ್ಲವನ್ನೂ ಗೀತಕ್ಕನಿಗೆ ಹೇಳಿ ಅವಳ ಮನಸ್ಸಿಗೆ ನೋವು ಉಂಟುಮಾಡಲು ಬಯಸಲಿಲ್ಲ. ಅತ್ತೆಮನೆಯಲ್ಲಿ ಅವಳದು ತುಂಬಿದ ಸಂಸಾರ. ಇವನು ತುಂಬಾ ಕೇಳಿಕೊಂಡಿದ್ದರೆ ಅಲ್ಲೇ ಇರಿಸಿಕೊಂಡು ಕಾಲೇಜಿಗೆ ಸೇರಿಸುತ್ತಿದ್ದಳು, ಆದರೆ ಅವಳ ಅತ್ತೆ ಮನೆಯವರಿಗೆ ಕಿರಿಕಿರಿ ಎನಿಸುವುದು ಬೇಡ ಎಂದು ವರುಣ್‌ ಕಷ್ಟಪಟ್ಟು ತಾನೇ ಕೆಲಸ ಹುಡುಕಿಕೊಂಡ.

ಹೀಗೆಲ್ಲ ಮಾಡಿದರೆ ಅವನು ಮನನೊಂದು, ಮನೆಬಿಟ್ಟು ಹೋಗಿಬಿಡಲಿ, ಆಗ ಅಷ್ಟು ದೊಡ್ಡ ಮನೆ ಪೂರ್ತಿ ತನ್ನ ವಶಕ್ಕೆ ಬಂದುಬಿಟ್ಟರೆ ಅವನ ಪಾಲು ತಮಗೇ ದಕ್ಕುತ್ತದೆ ಎಂಬ ಸ್ವಾರ್ಥದಲ್ಲಿ ನಾಗರತ್ನಾ ಅವನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದಳು. ತಮ್ಮನ ಮುಖ ಕಂಡರೆ ಸಿಟ್ಟಿನಿಂದ ಉರಿದುಬೀಳುತ್ತಿದ್ದ ಅಣ್ಣ ಎನಿಸಿಕೊಂಡವನು ಹೆಂಡತಿಯ ವಿರುದ್ಧ ದೂರು ಕೊಟ್ಟರೆ ಅದನ್ನು ಕಿವಿಯಲ್ಲಿ ಕೇಳಿಸಿಕೊಂಡಾನೆಯೇ? ಬಡವನ ಕೋಪ ದವಡೆಗೆ ಮೂಲ ಎಂದು ವರುಣ್‌ ಅಣ್ಣನ ಮುಂದೆ ಏನೂ ಹೇಳಿಕೊಳ್ಳುತ್ತಿರಲಿಲ್ಲ. ಅಣ್ಣನ ಮಗು ಬೃಂದಾಳನ್ನು ಆಡಿಸಿಕೊಳ್ಳುವುದರಲ್ಲಿ ತನ್ನೆಲ್ಲ ದುಃಖ ಮರೆಯುತ್ತಿದ್ದ.

ಕೆಲಸ ಸಿಕ್ಕಿದ ಸುದ್ದಿಯನ್ನು ಮನೆಯಲ್ಲಿ ಹೇಳಿದ ತಕ್ಷಣ, 5 ಸಾವಿರ ಹಣ ಕೊಟ್ಟುಬಿಡಬೇಕೆಂದು ತಾಕೀತು ಮಾಡಿದರು. ಬೆಳಗ್ಗೆ ಅಷ್ಟು ಬೇಗ ಅವನಿಗೆ ತಿಂಡಿ, ಡಬ್ಬಿಗೆ ಊಟ ಎಂದೇನೂ ಮಾಡುತ್ತಿರಲಿಲ್ಲ. ಕೆಲಸಕ್ಕೆ ಹೊರಡುವಾಗ ಒಂದು ನೀರು ಕಾಫಿ, ರಾತ್ರಿ 2 ಹಿಡಿ ಅನ್ನ ಹಾಕಿದರೆ ಆಗಿಹೋಯ್ತು. ಸಂಜೆ 7-8 ಗಂಟೆಗೆ ಮನೆಗೆ ಹಿಂದಿರುಗಿದ ಮೇಲೂ ಅವನಿಗಾಗಿ ರಾಶಿ ಮನೆಗೆಲಸಗಳು ಕಾದಿರುತ್ತಿದ್ದವು.

ಹೀಗೆ 2 ತಿಂಗಳು ಕಳೆಯಿತು. ತನ್ನ ಬದುಕಿಗೆ ಯಾವ ಏಳಿಗೆಯೂ ಆಗದು ಎಂದರಿತ ವರುಣ್‌, ಕರೆಸ್ಪಾಂಡೆನ್ಸ್ ಕೋರ್ಸಿಗೆ ಸೇರಿ, ಆರ್ಟ್ಸ್ ವಿಭಾಗದಲ್ಲಿ ತಾನೇ ಪಿ.ಯು.ಸಿ. ಕಲಿಯತೊಡಗಿದ. ಬೆಳಗ್ಗೆ 5 ಗಂಟೆಗೇ ಎದ್ದು, ನೀರು ಹಿಡಿಯುವುದರಿಂದ ಆರಂಭಿಸಿ, 7 ಗಂಟೆ ಹೊತ್ತಿಗೆ ಕೆಲಸಕ್ಕೆ ಸಿದ್ಧನಾಗುತ್ತಿದ್ದ. 8-6ರವರೆಗೆ ಆಫೀಸಿನಲ್ಲಿ ಕತ್ತೆ ಚಾಕರಿ ದುಡಿದು, ಸಂಜೆ 7 ಗಂಟೆಗೆ ಮರಳಿದರೆ, ಮತ್ತೊಂದು ಕರಿ ನೀರಿನ ಕಾಫಿ ಕುಡಿದು ಇನ್ನಷ್ಟು ಕೆಲಸಗಳನ್ನು ಮಾಡಬೇಕಿತ್ತು. ಅಂತೂ ಅವನು ತನ್ನ ಪುಸ್ತಕ ಹಿಡಿದು ಕೂರುವಷ್ಟರಲ್ಲಿ ರಾತ್ರಿ 10 ಗಂಟೆ ದಾಟುತ್ತಿತ್ತು. 10 ಗಂಟೆ ನಂತರ ಲೈಟ್‌ ಉರಿಸಲು ಅನುಮತಿ ಇರಲಿಲ್ಲ. ಕೆಲಸದ ಬಿಡುವಿನ ಸಮಯದಲ್ಲೇ ಅವನು ತನ್ನ ಪಾಠಪ್ರವಚನ ಗಮನಿಸಿಕೊಳ್ಳುತ್ತಿದ್ದ.

ಇಷ್ಟಾದರೂ ನಾಗರತ್ನಾಳಿಗೆ ಸಹಿಸದಾಯಿತು. ಕೈಗೆ ಸಂಬಳ ತಂದುಹಾಕಬಹುದು, ಆದರೆ ಶಾಶ್ವತವಾಗಿ ಮನೆ ಎಂಬುದು ತಮ್ಮ ಹೆಸರಿಗಾಗಲಿಲ್ಲವಲ್ಲ ಎಂದು ಅವಳಿಗೆ ಮತ್ಸರ ಕುದಿಯುತ್ತಿತ್ತು.

ಒಂದು ಭಾನುವಾರ ಎಂದಿನಂತೆ ಅವನು ತನ್ನ, ಬೃಂದಾಳ, ಅಣ್ಣನ ಬಟ್ಟೆಗಳನ್ನು ಒಗೆಯುತ್ತಿದ್ದ. ಅದಾದ ಮೇಲೆ ಬೃಂದಾಳ ಸಮವಸ್ತ್ರ, ಅಣ್ಣನ ಬಟ್ಟೆಗಳನ್ನು ಇಸ್ತ್ರಿ ಮಾಡಬೇಕಿತ್ತು. ಅಷ್ಟರಲ್ಲಿ ಟಿ.ವಿ. ಮುಂದಿದ್ದ ಅಣ್ಣ ಅತ್ತಿಗೆಯರ ಮಾತು ಕೇಳಿಸಿತ್ತು.

“ಈಗಿನಿಂದಲೇ ಅವನಿಗೆ ಗಟ್ಟಿಯಾಗಿ 2 ಮಾತು ಹೇಳಿಬಿಡಿ, ಹಗಲೂ ರಾತ್ರಿ ಅವನಿಗೆ ಮಾಡಿ ಹಾಕುವುದೇ ಆಯ್ತು, ನನಗೇನು ಕರ್ಮ ಅಂತೀನಿ?”

ಅಣ್ಣ ಅದೇನು ಪಿಸಪಿಸನೆ ಅವಳಿಗೆ ಹೇಳಿದನೋ ವರುಣನಿಗೆ ತಿಳಿಯಲಿಲ್ಲ. ಅಂತೂ ತಾನು ಈ ಮನೆ ಬಿಟ್ಟು ಹೋಗಬೇಕಾದ ದಿನ ದೂರವಿಲ್ಲ ಎನಿಸಿತು. ತಾಯಿ ತಂದೆ ಬಾಳಿ ಬದುಕಿದ ಮನೆ, ತಾನು ಹುಟ್ಟಿ ಬೆಳೆದ ಈ ಮನೆಯನ್ನು ಬಿಟ್ಟು ಹೋಗಬೇಕಲ್ಲ ಎಂದು ಬಹಳ ಸಂಕಟವಾಯಿತು. ಆದರೆ ಹಾಗೆ ಮಾಡಿದರೆ ಮಾತ್ರ ತನಗೂ ಹೊಟ್ಟೆ ತುಂಬಾ ಊಟ ದೊರೆತು, ಈ ಕತ್ತೆ ಚಾಕರಿಯಿಂದ ಬಿಡುವಾಗಿ ಪಾಠಗಳ ಕಡೆ ಗಮನಹರಿಸಬಹುದು ಎನಿಸಿತು. ಹ್ಞೂಂ ಇನ್ನು ಎಷ್ಟು ದಿನ ಋಣವಿದೆಯೋ ಅಲ್ಲಿಯವರೆಗೆ ಈ ಮನೆಯಲ್ಲಿರುವುದು ಎಂದುಕೊಂಡ.

ಒಮ್ಮೊಮ್ಮೆ ಕೆಲಸ ಮುಗಿಸಿ ಬರುವುದರಲ್ಲಿ ಅವನಿಗೆ ತಡವಾಗುತ್ತಿತ್ತು. ಹೀಗೆ ಒಂದು ಸಲ ಅವನು ಮನೆಗೆ ಬರುಷ್ಟರಲ್ಲಿ ರಾತ್ರಿ 9 ಗಂಟೆ ಆಗಿತ್ತು. ಮನೆಗೆ ಬೀಗ ಹಾಕಲಾಗಿತ್ತು. ಅವನ ಬಳಿಯಿದ್ದ ಮತ್ತೊಂದು ನಕಲಿ ಕೀಲಿಕೈಯಿಂದ ಬಾಗಿಲು ತೆರೆದು ಒಳಬಂದ. ಬಹಳ ಸುಸ್ತಾಗಿತ್ತು, ನೀರು ಕುಡಿಯಲೆಂದು ಅಡುಗೆಮನೆ ಕಡೆ ಹೋದರೆ ಅಲ್ಲಿನ ಬಾಗಿಲಿಗೂ ಬೀಗ! ಅವರುಗಳು ಎಂದಾದರೂ ಊರು, ಪ್ರವಾಸಕ್ಕೆ ಹೊರಟಾಗೆಲ್ಲ ಹೀಗೆ ಮಾಡುತ್ತಿದ್ದರು. ಅವನಿಗೆ ಒಂದು ಸಣ್ಣ ಸುಳಿವನ್ನೂ ನೀಡದೆ ಹೊರಟುಬಿಡುತ್ತಿದ್ದರು.

ಈಗ ವರುಣ್‌ ತಕ್ಷಣ ಅಣ್ಣನಿಗೆ ಫೋನ್‌ ಮಾಡಿದ. ತಾವು ನಾಗರತ್ನಾಳ ತವರಿಗೆ ಹೋಗಿರುವುದಾಗಿ, ಅಲ್ಲಿಂದ ಪ್ರವಾಸ ಮುಗಿಸಿಕೊಂಡು 4 ದಿನ ಬಿಟ್ಟು ಬರುತ್ತೇವೆ, ಮನೆ ಕಡೆ ಜೋಪಾನ ಎಂದು ಮಹೇಶ ಫೋನ್‌ ಕಟ್‌ ಮಾಡಿದ. ಅಷ್ಟು ಹೊತ್ತಿನಲ್ಲಿ ತಿನ್ನಲಿಕ್ಕೆ ಏನೂ ಇಲ್ಲ, ಕುಡಿಯಲು ನೀರು ಸಹ ಇಲ್ಲವಲ್ಲ ಎಂದು ಅವನಿಗೆ ಬಹಳ ದುಃಖ ಉಕ್ಕಿಬಂದಿತು. ಆದರೆ ಅವನು ತನ್ನ ಕೋಪ ಯಾರ ಮೇಲೆ ತೋರಿಸಲು ಸಾಧ್ಯ? ಬಹಳ ಯೋಚಿಸಿ ಅವನು ಹತ್ತಿರದಲ್ಲಿದ್ದ ಗೆಳೆಯರಾದ ರವಿ ಶಶಿಯರ ರೂಮಿಗೆ ಹೋಗುವುದೆಂದು ನಿರ್ಧರಿಸಿದ. ತಿಂಗಳ ಕೊನೆಯಾದ್ದರಿಂದ ಅವನ ಬಳಿ ಹೊರಗೆ ತಿನ್ನಲಿಕ್ಕೂ ಹಣ ಇರಲಿಲ್ಲ.

ಗೆಳೆಯರ ಕೋಣೆಗೆ ಬಂದವನೇ, ಮನೆಯವರು ಊರಿಗೆ ಹೋಗಿದ್ದಾರೆ, ಬಹಳ ಬೇಸರ ಆಗಿರುವುದರಿಂದ ಈ ರಾತ್ರಿ ಇಲ್ಲಿಯೇ ತಂಗುತ್ತೇನೆ ಎಂದ. ಅವರು ಅಲ್ಲೇ ಊಟ ಮಾಡಬೇಕೆಂದು ಆಗ್ರಹಿಸಿದಾಗ ಅವನಿಗೆ ಅಳು ಉಕ್ಕಿಬಂತು. ಅವರೇ ತಯಾರಿಸಿದ ಚಿತ್ರಾನ್ನ ತಿಂದು, ತನ್ನ ದುಃಖ ಮರೆತು ಅವರ ಜೊತೆ ಹರಟೆಯಲ್ಲಿ ಮಗ್ನನಾದ. ಮಾರನೇ ಬೆಳಗ್ಗೆ ಅವನು ಮನೆಗೆ ಬಂದಾಗ ಒಂದು ದೃಢ ನಿರ್ಧಾರ ಮಾಡಿಕೊಂಡಿದ್ದ.

ಊರಿನಿಂದ ಅವರು ಮರಳಿ ಬಂದಾಗ, ಮಾರನೇ ದಿನ ಭಾನುವಾರ ಬಿಡುವಾಗಿದ್ದ ಅಣ್ಣನಿಗೆ ವರುಣ್‌ ನೇರವಾಗಿ, “ನಾನು ಈ ಮನೆಯಲ್ಲಿ ಊಟ ಮಾಡುವುದು ಇಷ್ಟವಿಲ್ಲ ಎಂದರೆ ಹೇಳಿಬಿಡಿ. ನನ್ನ ಊಟ ತಿಂಡಿಯ ವ್ಯವಸ್ಥೆ ಬೇರೆ ಕಡೆ ಮಾಡಿಕೊಳ್ತೀನಿ. ಈ ಹಿಂಸೆ ನನಗೆ ಸಾಕಾಗಿದೆ,” ಎಂದ.

ಅದನ್ನು ಕೇಳಿಸಿಕೊಂಡ ಅವನತ್ತಿಗೆ ನಾಗರತ್ನಾ, “ಓ…. ನಿನ್ನ ಧಿಮಾಕು ಆ ಮಟ್ಟಕ್ಕೆ ಮುಟ್ಟಿತಾ? 6 ತಿಂಗಳಿನಿಂದ ಹೊತ್ತು ಹೊತ್ತಿಗೆ ನಾನೇ ನಿನಗೆ ಕೈಯಾರೆ ಮಾಡಿ ಹಾಕುತ್ತಿದ್ದೇನೆ, ಏನು ಅಂಥ ಗುನುಗು ಈಗ? ಓ…. ನೀನೇ ಸಂಪಾದಿಸುತ್ತಿದ್ದೀಯಾ ಅನ್ನೋ ದುರಹಂಕಾರ ಅಲ್ಲವೇ?”

“ನಾನು ಬೇರೆ ಹೋಗಿಬಿಡಲಿ ಅಂತಲೇ ಅಲ್ವೇ ನೀವೆಲ್ಲ ಹೀಗೆ ಮಾಡುತ್ತಿರುವುದು? 6 ತಿಂಗಳಿನಿಂದ ಊಟ ಹಾಕುತ್ತಿದ್ದೀನಿ ಅಂದ್ರೆ, ಅದೇನೂ ಬಿಟ್ಟಿ ಕವಳ ಅಲ್ಲ. ಕಳೆದ 4 ತಿಂಗಳಿನಿಂದ ನಾನು ಸಂಬಳ ಎಣಿಸುತ್ತಿಲ್ಲವೇ? ಅಮ್ಮನ ಬಳಿಯಿದ್ದ 1 ಲಕ್ಷ ರೂ. ಸ್ವಾಹಾ ಮಾಡಿಬಿಟ್ರಲ್ಲ… ಅದೇನು ಕಡಿಮೆ ಮೊತ್ತವೇ?” ಸಹಿಸಿ ಸಾಕಾಗಿದ್ದ ವರುಣ್‌ ಸಿಡಿದುಬಿದ್ದಿದ್ದ.

ಇಷ್ಟೆಲ್ಲ ಕರ್ಮಕಾಂಡಗಳು ನಡೆದ ಮೇಲೆ ಮನೆ ಬಿಟ್ಟು ಬೇರೆ ಹೋಗಬೇಕಾದುದು ಅನಿವಾರ್ಯ, ಹಾಗಿರುವಾಗ ಮನದಲ್ಲಿರುವ ಕಹಿ ಕಕ್ಕಿಹೋದರೆ ತಪ್ಪೇನು?

“ಯಾಕೋ ಬೇಕೂಫ…. ತಿಂದು ಕೊಬ್ಬಾ? ನಮ್ಮ ಮೇಲೆ ಇಷ್ಟು ದೊಡ್ಡ ಆಪಾದನೆ ಹೊರಿಸಲು ನಾಚಿಕೆ ಆಗುವುದಿಲ್ಲವೇ?” ಮಹೇಶ ಕೋಪದಿಂದ ಕೂಗಾಡಿದ.

“ಕಂಡಿದ್ದನ್ನು ಕಂಡಂತೆ ಹೇಳಿದರೆ ಕೆಂಡದಂಥ ಕೋಪವೇಕೆ? ನಾನೇನು ಕಲ್ಪಿಸಿಕೊಂಡು ಹೇಳುತ್ತಿಲ್ಲವಲ್ಲ. ಅದಕ್ಕೆ ತಾನೇ ಏನೂ ಗತಿ ಇಲ್ಲದವನಂತೆ ಹೋಗಿ ಆಫೀಸ್‌ ಬಾಯ್‌ ಕೆಲಸಕ್ಕೆ ಸೇರಿರುವುದು?”

“ಓಹೋ…. ಕಾಲೇಜಿಗೆ ಸೇರಿಸಿದ್ದರೆ ಏನು ದೊಡ್ಡ ಐ.ಎ.ಎಸ್‌ ಆಫೀಸರ್‌ ಆಗಿಬಿಡ್ತಿದ್ಯೋ?”

“ಐ.ಎ.ಎಸ್‌ ಮಾಡದಿದ್ದರೆ ಬೇಡ, ನಿನ್ನಂತೆಯೇ ನಾನೂ ಗೌರವವಾಗಿ ಡಿಗ್ರಿ ಪಡೆಯುತ್ತಿದ್ದೆ ತಾನೇ? ತಂದೆಯಂತೆ ನನ್ನನ್ನು ನೋಡಿಕೊಳ್ಳುವುದಿರಲಿ, ನನ್ನ ಪಾಲಿನ ಎಲ್ಲವನ್ನೂ ಕಿತ್ತುಕೊಳ್ಳುವುದೇ ಆಗಿದೆ…”

ವರುಣನ ಮಾತು ಮುಗಿಯುವ ಮೊದಲೇ ಮಹೇಶ ತಮ್ಮನ ಕೆನ್ನೆಗೆ ರಪ್‌ ರಪ್‌ ಎಂದು ಬಾರಿಸಿದ್ದ. ಅಸಹಾಯಕನಾಗಿ ಕಂಬನಿ ಮಿಡಿದ ವರುಣ್‌, ಬೇರೇನೂ ಮಾಡಲಾಗದೆ ತಲೆ ತಗ್ಗಿಸಿ ನಿಂತುಬಿಟ್ಟ.

“ಇಂದಿನಿಂದ ನಿನಗೂ ನಮಗೂ ಋಣ ಹರಿದುಹೋಯ್ತು ಅಂದ್ಕೋ! ಎಲ್ಲಾದರೂ ಹಾಳಾಗಿ ಹೋಗು…. ನಿನ್ನ ದರಿದ್ರದ ಮುಖ ತೋರಿಸಲೇಬೇಡ,” ಎನ್ನುತ್ತಾ ಮಹೇಶ ರೂಮಿನ ಕಡೆ ನಡೆದ.

ನಾಗರತ್ನಾ ಭುಸುಗುಟ್ಟುತ್ತಾ ಗಂಡನನನ್ನು ಹಿಂಬಾಲಿಸಿದಳು, “ಥೂ….ಥೂ….ಥೂ…. ಇಂಥ ತಮ್ಮನನ್ನು ಎಲ್ಲೂ ಕಂಡಿಲ್ಲ ಕೇಳಿಲ್ಲ ಬಿಡಿ. ಮಲ ಸಹೋದರನ ಮೇಲೂ ಯಾರೂ ಹೀಗೆ ಹಗೆ ಸಾಧಿಸುವುದಿಲ್ಲ, ಇವನಿಗೇನು ಬಂತು ಕೇಡುಗಾಲ?” ಎಂದು ತಮ್ಮ ರೂಮಿಗೆ ಹೋಗಿ ಧಡಾರನೆ ಬಾಗಿಲು ಹಾಕಿಕೊಂಡಳು.

ಅಷ್ಟರಲ್ಲಿ ಯಾರೋ ಗೇಟು ತೆರೆದು ಒಳಗೆ ಬರುತ್ತಿರುವ ಸದ್ದಾಯಿತು. ಗೀತಾ ತನ್ನಿಬ್ಬರು ಮಕ್ಕಳೊಂದಿಗೆ ದಿಢೀರ್‌ ಎಂದು ಬಂದಿಳಿದಳು.

ವರುಣ್‌ ಕಕ್ಕಾಬಿಕ್ಕಿಯಾಗಿ ನಿಂತುಬಿಟ್ಟಿದ್ದಾನೆ, ಒಳಗಿನ ರೂಂ ಬಾಗಿಲು ಹಾಕಿದೆ, ಮಹೇಶಣ್ಣನ ಮಗಳು ಬೃಂದಾ ಸಹ ಕಾಣುತ್ತಿಲ್ಲ… ಎಲ್ಲ ಅಯೋಮಯವೆನಿಸಿತು. ಗೀತಾ ವರುಣನತ್ತ ದಿಟ್ಟಿಸಿದಾಗ ಅವನು ಕಣ್ಣೀರು ಕಾಣಿಸಬಾರದೆಂಬಂತೆ ಒರೆಸಿಕೊಳ್ಳುತ್ತಾ ಕೃತಕ ನಗುವಿನಿಂದ ಅವಳನ್ನು ಸ್ವಾಗತಿಸಲು ಯತ್ನಿಸಿದ.

ಗೀತಾ ತನ್ನ ಹಿರಿಯ ನಾದಿನಿಯ ಮಗನ ಮದುವೆಗೆಂದು ಮೈಸೂರಿಗೆ ಬಂದಿದ್ದಳು. ಆ ದಿನ ಸಂಜೆ ವರಪೂಜೆಯಿತ್ತು. ಅವಳ ಗಂಡ ಶಶಾಂಕ್‌ ನೇರವಾಗಿ ಸಂಜೆ ಭಾವನ ಮನೆಗೆ ಬಂದು, ಗೀತಾ ಹಾಗೂ ಮಕ್ಕಳನ್ನು ನೇರವಾಗಿ ಅಲ್ಲಿಂದ ಕಲ್ಯಾಣ ಮಂಟಪಕ್ಕೆ ಕರೆದೊಯ್ಯುವುದೆಂದು ಮಾತಾಗಿತ್ತು.

ತವರಿಗೆ ಬಂದು ಎಲ್ಲರನ್ನೂ ವಿಚಾರಿಸಿಕೊಂಡು ಹೊರಡೋಣ ಎಂದು ಗೀತಾ, ಭಾನುವಾರವಾದ್ದರಿಂದ ಬೆಳಗ್ಗೆ 11 ಗಂಟೆ ಹೊತ್ತಿಗೆ ಮೈಸೂರಿನ ತವರಿಗೆ ಬಂದಿದ್ದಳು. ಆದರೆ ಇಲ್ಲಿನ ಪರಿಸ್ಥಿತಿ…. ಯಾಕಾದರೂ ಬಂದೆನೋ ಎನಿಸುವಂತಿತ್ತು. ಅವಳು ಮನೆಗೆ ಬಂದು 1 ಗಂಟೆ ಕಾಲ ಕಳೆದರೂ ಅಣ್ಣನ ರೂಮಿನ ಬಾಗಿಲು ತೆರೆಯಲೇ ಇಲ್ಲ. ನೀನು ಬಂದೆಯಾ…. ಹೇಗಿದ್ದೀಯಾ ಎಂದು ವಿಚಾರಿಸುವವರಿಲ್ಲ.

ಏನೋ ಅವಾಂತರ ನಡೆದಿದೆ ಎಂದು ಗೀತಾ ಸ್ಪಷ್ಟವಾಗಿಯೇ ಊಹಿಸಿದಳು. ವರುಣ್‌ ಅದರ ಬಗ್ಗೆ ಏನೂ ಹೇಳದೆ ಮಕ್ಕಳ ಯೋಗಕ್ಷೇಮ, ಭಾವನ ಬಗ್ಗೆ ವಿಚಾರಿಸಿಕೊಂಡು, ಮಕ್ಕಳಿಗೇನಾದರೂ ಕೊಡಿಸೋಣವೆಂದು ಅವರನ್ನು ಹೊರಗೆ ಕರೆದುಕೊಂಡ ಹೋದ.

ಎಷ್ಟೋ ಹೊತ್ತಾದ ಮೇಲೆ ಹೊರಗೆ ಬಂದ ನಾಗರತ್ನಾ, “ಓ…. ಗೀತಾ ಯಾವಾಗ ಬಂದದ್ದು? ಒಬ್ಬಳೇ ಬಂದಿಯಾ? ಮಕ್ಕಳೆಲ್ಲಿ? ಮನೆಯವರು ಬರ್ತಾರಾ?” ಎಂದು ವಿಚಾರಿಸಿದಳು.

ನಂತರ ಗೀತಾ ತಾನು ಮದುವೆಗೆ ಬಂದಿದ್ದಾಗಿ ತಿಳಿಸಿದಳು. ಬಂದವಳಿಗೆ ಕಾಫಿ ಇರಲಿ, ನೀರನ್ನು ಸಹ ಕೊಡದೆ, ನಾಗರತ್ನಾ ಟಿ.ವಿ. ಆನ್‌ ಮಾಡಿ ಕುಳಿತಳು. ಅದಾದ ನಂತರ ರೂಮಿನಿಂದ ಹೊರಬಂದ ಮಹೇಶ ಗೀತಾಳನ್ನು ನೋಡಿ, “ಯಾವಾಗ ಬಂದಿದ್ದು?” ಎಂದಷ್ಟೇ ವಿಚಾರಿಸಿ, ಉತ್ತರಕ್ಕೂ ಕಾಯದೇ, “ರತ್ನಾ, ಇಲ್ಲೇ ಸ್ವಲ್ಪ ಫ್ರೆಂಡ್‌ ಸೈಟ್‌ವರೆಗೂ ಹೋಗಿಬರ್ತೀನಿ,” ಎಂದು ಹೊರಟೇಬಿಟ್ಟ. ಔಪಚಾರಿಕತೆಗೂ ಅತ್ತಿಗೆಯಾದವಳು ನಾದಿನಿಯನ್ನು ತಿಂಡಿ ಆಯ್ತೆ, ಊಟ ಮಾಡುವೆಯಾ ಎಂದೂ ಕೇಳದೆ ಟಿ.ವಿ.ಯಲ್ಲಿ ಮಗ್ನಳಾದಳು. ತಾನಿಲ್ಲಿ ಬೇಕಿಲ್ಲದ ಅತಿಥಿ ಎಂಬುದನ್ನು ಸ್ಪಷ್ಟವಾಗಿ ಅರಿತ ಗೀತಾ, ವರುಣ್‌ ಮಕ್ಕಳನ್ನು ವಾಪಸ್ಸು ಕರೆತರಲಿ ಎಂದು ಕಾದಳು.

ವರುಣ್‌ ಬಂದ ತಕ್ಷಣ, “ಅತ್ತಿಗೆ, ನನ್ನ ಚಿಕ್ಕ ನಾದಿನಿ ಈಗಾಗಲೇ ಝೂ ಹತ್ತಿರ ಬಂದಾಯ್ತಂತೆ. ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಬನ್ನಿ, ಒಟ್ಟಿಗೆ ಕಲ್ಯಾಣ ಮಂಟಪಕ್ಕೆ ಹೊರಡೋಣ ಎಂದಳು. ನಾನಿನ್ನು ಬರ್ತೀನಿ,” ಎಂದು ಎದ್ದೇಬಿಟ್ಟಳು.

“ಆಯ್ತಮ್ಮ, ಆಗಾಗ ಬರ್ತಿರು,” ಎಂದವಳೇ ನಾಗರತ್ನಾ ಕುಂಕುಮ ಕೊಟ್ಟು ಹೊರಡುವಂತೆ ಸೂಚನೆ ನೀಡಿದಳು.

ವರುಣ್‌ ತಾನು ಅಕ್ಕನನ್ನು ಝೂವರೆಗೆ ಬಿಟ್ಟು ಬರ್ತೀನಿ ಎಂದ ಅತ್ತಿಗೆಗೆ ಹೇಳಿ, ಒಂದು ಆಟೋ ಕರೆತಂದ. ಗೀತಾ ಜೊತೆ ಮಕ್ಕಳೊಂದಿಗೆ ಝೂ ಕಡೆಗೆ ಹೊರಟಿದ್ದಾಯ್ತು.

“ಏನಾಯ್ತು?” ಎಂದು ಗೀತಾ ಕೇಳಿದಾಗ ವರುಣ್‌ ಅಂದು ನಡೆದ ಪ್ರಕರಣದೊಂದಿಗೆ ಎಲ್ಲವನ್ನೂ ವಿವರಿಸಿದ.

“ಅವರು ನಿನ್ನನ್ನು ಆ ಮನೆಯಿಂದ ಓಡಿಸಿ, ಇಡೀ ಮನೆ ತಾವೇ ದಕ್ಕಿಸಿಕೊಳ್ಳಬೇಕೆಂದು ಹೀಗೆಲ್ಲ ಆಡುತ್ತಿದ್ದಾರೆ. ಏನೇ ಆಗಲಿ, ಆ ಮನೆಯ ಒಂದು ಭಾಗ ನಿನಗೆ ಸೇರಲೇಬೇಕು. ಮನೆ ಮಾರುತ್ತೀನಿ ಅಂದ್ರೆ, ಅರ್ಧ ಪಾಲು ತಗೋ, ಬಿಟ್ಟು ಕೊಡಬೇಡ….” ಎಂದು ತಮ್ಮನ ಪರವಾಗಿ ಕಳಕಳಿ ವ್ಯಕ್ತಪಡಿಸಿದಳು.

ಅವರಿಗೆ ಊಟ ಕೊಡಿಸಿ, 4 ಗಂಟೆಗೆ ಭಾವ ಬರುವವರೆಗೂ ಕಾದಿದ್ದು, ಅಲ್ಲಿಂದ ವರುಣ್‌ ನೇರವಾಗಿ ಗೆಳೆಯರ ರೂಮಿಗೆ ಹೋದ. ಅವರ ಜೊತೆ ಮಾತನಾಡಿ, ತಾನು ಇಷ್ಟರಲ್ಲೇ ಆ ಮನೆಯಿಂದ ಶಿಫ್ಟ್ ಆಗಿ ಇಲ್ಲಿಗೆ ಬರಬಹುದೇ ಎಂದು ವಿಚಾರಿಸಿದ. ಮೂರು ಇದ್ದ ಆ ಕೋಣೆಯಲ್ಲಿ 4ನೆಯವರಿಗೆ ಅಡ್ಜಸ್ಟ್ ಮಾಡಿಕೊಳ್ಳಲು ಕಷ್ಟವಾಗುವುದಿಲ್ಲ, ಯಾವಾಗಲಾದರೂ ಬಾ ಎಂದು ಹೇಳಿದರು. ಎರಡೇ ಕೋಣೆಗಳ ಆ ಶೀಟಿನ ಮನೆಗೆ ಅವರು 4 ಸಾವಿರ ಬಾಡಿಗೆ ತೆರುತ್ತಿದ್ದರು. ತನ್ನ ಪಾಲಿನ 1 ಸಾವಿರ ಮತ್ತು ಊಟದ ಖರ್ಚನ್ನು ಲೆಕ್ಕಹಾಕಿ, ಇಲ್ಲಿ ಬಂದು ವಾಸಿಸುವುದೇ ಶ್ರೇಯಸ್ಕರ ಎಂದು ವರುಣ್‌ ಲೆಕ್ಕ ಹಾಕಿದ. ನಿರಾಂತಕವಾಗಿ ಅವನು ತನ್ನ ಓದು ಮುಂದುವರಿಸಬಹುದಿತ್ತು.

ಅವನು ಗೆಳೆಯರ ಕೋಣೆಯಲ್ಲೇ ಊಟ ಮುಗಿಸಿ ರಾತ್ರಿ 9 ಗಂಟೆಗೆ ಮನೆಗೆ ಬಂದಾಗ, ನೀನು ಬದುಕಿದ್ದೀಯಾ ಎಂದು ವಿಚಾರಿಸುವವರೂ ಇರಲಿಲ್ಲ. ಅಡುಗೆಮನೆಯ ಮುಸುರೆ ಪಾತ್ರೆಗಳೆಲ್ಲ ಬಚ್ಚಲಿಗೆ ಹೋಗಿ ಬಿದ್ದಿದ್ದವು. ನೀರು ಕುಡಿಯಲೆಂದು ಅಲ್ಲಿಗೆ ಬಂದವನಿಗೆ ಇನ್ನು ಮುಂದೆ ತನಗೆ ನೀರು ಬಿಟ್ಟರೆ ಆ ಮನೆಯಲ್ಲಿ ಬೇರೇನೂ ಸಿಗುವುದಿಲ್ಲ ಎಂಬುದು ತಿಳಿಯಿತು.

ಮಾರನೇ ದಿನ ಅಣ್ಣ ಮಹೇಶ ತಮ್ಮನನ್ನು ಕರೆದು, “ದಿನ ದಿನ ಈ ರೀತಿ ಮನಸ್ತಾಪ, ಜಗಳ ನಮಗೆ ಬೇಕಿಲ್ಲ. ನಾನು ಈ ಮನೆ ಮಾರಬೇಕು ಅಂತಿದ್ದೇನೆ. ನಾಳೆ ಲಾಯರ್‌ ಆಫೀಸಿಗೆ ಹೋಗಿ, ಇದನ್ನು ಮಾರಾಟ ಮಾಡಲು ಏನೇನು ಕ್ರಮ ಅಂತ ವಿಚಾರಿಸೋಣ. ಹಾಗೆಯೇ ನನ್ನ ಫ್ರೆಂಡ್‌ ಒಬ್ಬರು ಬಹಳ ದಿನಗಳಿಂದ ವಿಚಾರಿಸುತ್ತಿದ್ದಾರೆ. ಒಂದೇ ಸಲ ಎಲ್ಲವನ್ನೂ ಮುಗಿಸಿಬಿಡೋಣ,” ಎಂದು ಹೇಳಿದ. ವರುಣ್‌ ಏನೂ ಉತ್ತರಿಸಲಾಗದೆ ಉಗುಳು ನುಂಗಿದ. ಈ ದಿನ ಎಂದೋ ಬರುತ್ತದೆ ಎಂದು ಗೊತ್ತಿತ್ತು. ಆದರೆ ಇಷ್ಟು ಬೇಗ…. ತಂದೆ ಕಟ್ಟಿಸಿದ ಆ ಮನೆ ಶಾಶ್ವತವಾಗಿ ತಮ್ಮ ಕೈಬಿಟ್ಟು ಹೋಗುತ್ತದಲ್ಲ ಎಂದು ಬೇಸರ, ದುಃಖ ಉಕ್ಕಿ ಬಂದಿತು. ಆಗಲಿ ಎಂಬಂತೆ ತಲೆಯಾಡಿಸಿ ಅವನು ಹೊರಟು ಬಂದ.

6 ಲಕ್ಷಕ್ಕೆ ಮನೆ ಮಾರಾಟವಾಯ್ತು. ತಾನು ಕೆಲಸಕ್ಕೆ ಸೇರಿ ಮನೆಯ ಸಾಲದ ಹೊರೆ ಎಷ್ಟೋ ಪಾಲು ಕಂತು ಕಟ್ಟಿದೆ ಎಂದು ಲೆಕ್ಕಹಾಕಿ, 3 ಲಕ್ಷ ಕೊಡುವ ಬದಲು ಮಹೇಶ ಎರಡೇ ಲಕ್ಷ ಹಣ ಕೊಟ್ಟು, “ಬೇಗ ಮನೆ ಖಾಲಿ ಮಾಡು, ನಾಳೆ ನಾವು ಹೊಸ ಭೋಗ್ಯದ ಮನೆಗೆ ಹೊರಡುತ್ತಿದ್ದೇವೆ,” ಎಂದು ಆರ್ಡರ್‌ ಮಾಡಿದ.

ಅಪ್ಪಿತಪ್ಪಿಯೂ ಗೀತಾಳಿಗೂ ಅರಿಶಿನ ಕುಂಕುಮದ ನೆಪದಲ್ಲಿ ಒಂದಿಷ್ಟು ಹಣ ಕೊಡೋಣ ಎಂದು ಅವನ ಮನಸ್ಸಿಗೆ ಬರಲಿಲ್ಲ. ತಂಗಿ, ತಮ್ಮನ ಮೇಲೆ ಎಂದೋ ಅವನು ವಾತ್ಸಲ್ಯ ಕಳೆದುಕೊಂಡಿದ್ದ. ಅವರಿದ್ದರೂ, ಸತ್ತರೂ ಅವನಿಗೇನೂ ಲೆಕ್ಕ ಇರಲಿಲ್ಲ.

ತನಗೆ ದೊರಕಿದ ಹಣದಲ್ಲಿ ಅಕ್ಕನಿಗೆ 1 ಲಕ್ಷ ಕೊಡೋಣ ಎಂದು ವರುಣ್‌ ಬೆಂಗಳೂರಿನ ಅಕ್ಕನ ಮನೆಗೆ ಬಂದಿದ್ದ. ಗೀತಾ ಬಿಲ್ ಕುಲ್ ‌ಆ ಹಣ ಸ್ವೀಕರಿಸಲು ಒಪ್ಪಲಿಲ್ಲ.

ಭಾವ ಸಹ, “ಆ ಮನೆ ಮಾರಿದ ಹಣ ನಿಮ್ಮಿಬ್ಬರ ಪಾಲಿನದು. ಅದರಲ್ಲಿ ಅವಳಿಗೇನೂ ಬೇಡ,” ಎಂದರು. ತಂದೆ ಇದ್ದು ಕೊಟ್ಟಿದ್ದರೆ ಅರಿಶಿನ ಕುಂಕುಮಕ್ಕೆ ಉಡುಗೊರೆಯಾಗಿ ಪಡೆಯುತ್ತಿರಲಿಲ್ಲವೇ ಎಂದು, ಅಕ್ಕನ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿಸಿ, ಬಲವಂತವಾಗಿ ರಶೀದಿ ಕೊಟ್ಟು ಹೊರಟುಬಿಟ್ಟ. ಅವಳ ಅತ್ತೆಮನೆಯವರು ಅದನ್ನೇ ಒಂದು ನೆಪವಾಗಿರಿಸಿಕೊಂಡು ನಂತರ ಟೀಕೆ ಮಾಡುವುದು ಅವನಿಗೆ ಬೇಕಿರಲಿಲ್ಲ. ಮುಂದೆ ಗೆಳೆಯರ ಕೋಣೆಯಲ್ಲಿ ವರುಣನ ಹೊಸ ಜೀವನ ಪ್ರಾರಂಭವಾಯಿತು. ತನಗಿದ್ದ ಇತಿಮಿತಿಗಳನ್ನು ಅರಿತು, ಬಂದಿರುವ ಹಣವನ್ನು ಬ್ಯಾಂಕಿನಲ್ಲಿರಿಸಿ, ಕೋಣೆಯ ಬಾಡಿಗೆ ಊಟಕ್ಕೆ ಬರುವ ಹಣ ಹೊಂದಿಸಿಕೊಂಡು, ಅತಿ ಮಿತವ್ಯಯದಿಂದ ಹಣ ಕೂಡಿಡುತ್ತಾ ಮುಂದುವರಿದ. ಹೀಗೆ ಏರುಪೇರಿಲ್ಲದೆ 5 ವರ್ಷ ಕಳೆದು ಅವನು ಡಿಗ್ರಿ ಪಡೆದಿದ್ದ.

ತನಗೆ ಪರಿಚಯವಿದ್ದ ಆಫೀಸುಗಳ ಮೂಲಕ ಒಂದು ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್‌ ಕೆಲಸ ಪಡೆದುಕೊಂಡ. ಮುಂದೆ ಕ್ರಮೇಣ ಒಂದು ಬಾಡಿಗೆ ಮನೆ ಹಿಡಿದು, ಯಾರೂ ದಿಕ್ಕಿಲ್ಲದ ಅನಾಥಾಶ್ರಮದ ಬಡ ಹುಡುಗಿಯನ್ನು ಮದುವೆಯಾದ. ಅಣ್ಣನ ಮನೆಯಿಂದ ಯಾರೂ ಇನ ಮದುವೆಗೆ ಬರಲಿಲ್ಲ. ಸೋದರಮಾವ ಶ್ರೀಕಂಠ ಹಿರಿಯರಾಗಿ ನಿಂತರು. ಅಕ್ಕಭಾವ ಮುಂದೆ ನಿಂತು ಒಂದು ದಿನದ ಸರಳ ಮದುವೆ ನಡೆಸಿಕೊಟ್ಟರು.

ಹೆಂಡತಿ ಸರಳಾ ಅವನ ಜೀವನದಲ್ಲಿ ಕಷ್ಟಸುಖ ಅರಿತು ಕೈಹಿಡಿದು ಮುನ್ನಡೆದಳು. ಒಬ್ಬನೇ ಮಗ, ಕಿರಣ್‌. ಕಾನ್ವೆಂಟ್‌ಗೆ ಹೋಗುವಂತಾದಾಗ, ಸರಳಾ ಸಹ ಕೆಲಸಕ್ಕೆ ಸೇರಿದಳು. ಹೀಗೆ ನೋಡು ನೋಡುತ್ತಲೇ 10 ವರ್ಷ ಕಳೆದುಹೋಯಿತು. ವರುಣ್‌ಈಗ ಪುಟ್ಟ ಮನೆ ಕೊಂಡಿದ್ದ. ಅರಿತು ನಡೆಯುವ ಹೆಂಡತಿ, ಮುದ್ದಾದ ಮಗ, ಚಿಕ್ಕ ಚೊಕ್ಕ ಸಂಸಾರದಲ್ಲಿ ಸುಖಿಯಾಗಿದ್ದ. ಇಷ್ಟರಲ್ಲಿ ಮಗ ಎಂಜಿನಿಯರಿಂಗ್‌ ಸೇರಲಿದ್ದ. ಆಗಾಗ ಗೀತಾ ಬಂದು ಹೋಗುತ್ತಿದ್ದಳು. ಅಕ್ಕ ತಮ್ಮನ ಮನೆಗಳವರು ಅನ್ಯೋನ್ಯವಾಗಿದ್ದರು.

ಒಂದೇ ಊರಿನಲ್ಲಿದ್ದರೂ ಎಂದೂ ಅಣ್ಣನ ದರ್ಶನ ಸಿಗುತ್ತಿರಲಿಲ್ಲ. ಎಂದೂ ತಾನಾಗಿ ಅವನು ಅವರನ್ನು ಹುಡುಕಿಕೊಂಡು ಹೋಗದಿದ್ದರೂ, ಅವರಿವರಿಂದ ವರುಣನಿಗೆ ವಿಷಯ ಗೊತ್ತಾಗುತ್ತಿತ್ತು. ಮೊದಲೇ ಒಬ್ಬ ಮಗಳು ಬೃಂದಾ ಇದ್ದಳು, ನಂತರ ಆಶಾ ಉಷಾ ಎಂಬ ಅವಳಿ ಹೆಣ್ಣು ಮಕ್ಕಳಾಗಿದ್ದರು. ಮೂರು ಹೆಣ್ಣುಮಕ್ಕಳ ತಂದೆಯಾಗಿ ಮಹೇಶ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಮನೆಯಲ್ಲಿ ಸದಾ ದಂದರಾಳಿತನ ನಡೆಸುವ ಹೆಂಡತಿ, ಕೈ ಹಿಡಿತವಿಲ್ಲದೆ ಎಲ್ಲದಕ್ಕೂ ದುಬಾರಿ ಖರ್ಚು ಮಾಡಿಸಿ, ದರ್ಬಾರು ನಡೆಸುತ್ತಿದ್ದಳು. ಹೊಸ ಮನೆಗೆ ಹೋದ ಮೇಲೆ ಮೈದುನ ನಾದಿನಿಯರ ಕಾಟವಿಲ್ಲದೆ ಇಷ್ಟಬಂದಂತೆ ಖರ್ಚು ಮಾಡುತ್ತಾ ಆಕೆ ಮೆರೆದಿದ್ದೇ ಬಂತು.

ಪಾರ್ಟಿಗಳಿಗೆ ಅತಿಯಾಗಿ ಹೋಗುವ ಅಭ್ಯಾಸವಾಗಿ, ಮಹೇಶ ಹೆಂಡದ ಚಟ ಕಲಿತುಬಿಟ್ಟ. ಕ್ರಮೇಣ ದಿನಕ್ಕೊಂದು ಬಾಟಲ್ ಇಲ್ಲದಿದ್ದರೆ ಆಗುವುದೇ ಇಲ್ಲ ಎಂಬ ಸ್ಥಿತಿ ಬಂತು. ಮುಂದೆ  ದುಶ್ಚಟ ಬಲಿತು, ಮನಸ್ಸಿಗೆ ಬಂದರೆ ಕಿಲಸಕ್ಕೆ ಹೋಗುತ್ತಿದ್ದ. ಇಲ್ಲದಿದ್ದರೆ ಕುಡಿದು ಮತ್ತೇರಿ ಮನೆ ಸೇರುವಷ್ಟರಲ್ಲಿ ರಸ್ತೆಯಲ್ಲೇ ಬಿದ್ದುಬಿಡುತ್ತಿದ್ದ.

ಮಕ್ಕಳೆಲ್ಲರೂ ಡಿಗ್ರಿ ಕಾಲೇಜಿಗೆ ಸೇರಿದ್ದರು. ಅವರ ಮದುವೆಯ ಯೋಚನೆ ಬಿಟ್ಟು ಮಹೇಶ ಮದ್ಯದ ದಾಸನಾಗಿದ್ದ. ಒಂದು ದಿನ ಗೀತಾ ವರುಣನಿಗೆ ಫೋನ್‌ ಮಾಡಿ, “ವರುಣ್‌, ಮಹೇಶಣ್ಣನಿಗೆ ತುಂಬಾ ಸೀರಿಯಸ್‌ ಆಗಿ ಆಸ್ಪತ್ರೆ ಸೇರಿದ್ದಾರಂತೆ!” ಎಂದು ತಿಳಿಸಿದಳು.

ವರುಣ್‌ ಹೆಂಡತಿ ಹಾಗೂ ಅಕ್ಕನ ಜೊತೆ ಅಣ್ಣನನ್ನು ನೋಡಲು ಹೋದ. ಇವರು ಬಂದದ್ದು ನಾಗರತ್ನಾಳಿಗೆ ಆಗಲೂ ಸಹಿಸಲಿಲ್ಲ. “ಬರೀ ನೋಡಲು ಬಂದರಾಯ್ತೆ? ಆಸ್ಪತ್ರೆ ಬಿಲ್ ಕಟ್ಟಲು ಯಾರೂ ಸಹಾಯ ಮಾಡುತ್ತಿಲ್ಲ,” ಎಂದು ನೇರವಾಗಿಯೇ ಹೇಳಿದಳು. ತಾವೇ ಬಿಲ್ ‌ಕಟ್ಟಿಬಿಡೋಣ ಎಂದು ಗೀತಾ ಧಾವಂತ ತೋರಿಸಿದಾಗ, ಅದರ ಅಗತ್ಯವಿಲ್ಲ, ಕೇಂದ್ರ ಸರ್ಕಾರಿ ನೌಕರಿಯಾದ್ದರಿಂದ ಆಫೀಸ್‌ನಿಂದಲೇ ಹಣ ಸಂದಾಯವಾಗುತ್ತದೆ ಎಂದು ವರುಣ್‌ ಸಮಾಧಾನಪಡಿಸಿದ. ಅಂತೂ ಭಾರವಾದ ಮನಸ್ಸಿನೊಡನೆ ಅವರು ಹೊರಟರು.

ಈ ಬಾರಿ ಮಹೇಶ ಹೇಗೋ ಅಪಾಯದಿಂದ ಪಾರಾಗಿದ್ದ. ವಿಪರೀತ ಹೆಂಡದ ಸೇವನೆಯಿಂದ ಕರುಳು ಆಪರೇಷನ್ ಮಾಡಬೇಕಾದ ಸ್ಥಿತಿ ಬಂದಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋದರೆ ಮುಂದೆ ಕಿಡ್ನಿಗೂ ತೊಂದರೆ ತಪ್ಪಿದ್ದಲ್ಲ ಎಂದು ತಜ್ಞರು ಎಚ್ಚರಿಸಿದರು. ಆಪರೇಷನ್‌ ಸಮಯದಲ್ಲಿ ತುರ್ತಾಗಿ ರಕ್ತ ಕೊಡಬೇಕಿತ್ತು. ಆಗ ವರುಣ್‌ ತಾನೇ ರಕ್ತ ನೀಡಿದ್ದ. ಆ ವಿಷಯ ಚೆನ್ನಾಗಿ ತಿಳಿದಿದ್ದರೂ, ಅಣ್ಣ ಅತ್ತಿಗೆ ಎನಿಸಿಕೊಂಡವರು, ಕೃತಜ್ಞತೆಯ ಒಂದು ಮಾತಿರಲಿ, ವರುಣನನ್ನು ಬಾಯಿತುಂಬಾ ಮಾತನಾಡಿಸಲೂ ಇಲ್ಲ. ನಾಗರತ್ನಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಗೀತಾಳಿಗೆ ನೇರವಾಗಿ ಹೇಳಿದಳು, “ಕೊಡಲಿ ಬಿಡು, ಒಡಹುಟ್ಟಿದ ಅಣ್ಣನಿಗೆ ಅಷ್ಟೂ ಮಾಡದಿದ್ದರೆ ಹೇಗೆ?”

ಅಂತೂ ಹೇಗೋ ಮಹೇಶ ಆಫೀಸಿಗೆ ಹೋಗುವಂತಾದ. ಅರ್ಧ ತಿಂಗಳು ಸುಸ್ತು ಸಂಕಟ ಎಂದು ರಜೆಯಲ್ಲೇ ಕಳೆದು ಹೋಗುತ್ತಿತ್ತು. ಸರ್ಕಾರಿ ಕೆಲಸವಾದ್ದರಿಂದ ಅದು ಉಳಿದಿತ್ತು. ಅದೇ ಖಾಸಗಿಯಾಗಿದ್ದಿದ್ದರೆ, ಅವನು ಎಂದೋ ಕೆಲಸ ಕಳೆದುಕೊಳ್ಳಬೇಕಿತ್ತು. ಮೂರು ಹೆಣ್ಣುಮಕ್ಕಳ ಜವಾಬ್ದಾರಿ, ಅವರ ವಿದ್ಯಾಭ್ಯಾಸದ ಖರ್ಚು, ಮಹೇಶನ ಅರೆ ಸಂಬಳದಿಂದಾಗಿ ನಾಗರತ್ನಾ ಹೈರಾಣಾಗಿದ್ದಳು. ಹಿಂದಿನಂತೆ ಧಾರಾಳ ಖರ್ಚು ಮಾಡಲಾಗದೆ ಹೆಣಗಾಡುತ್ತಿದ್ದಳು.

6 ತಿಂಗಳು ಕಳೆಯುವಷ್ಟರಲ್ಲಿ ಮಹೇಶನಿಗೆ ಮತ್ತೆ ಅದೇ ತರಹ ಮೇಜರ್‌ ಆಪರೇಷನ್‌ ಮಾಡಬೇಕಾಯ್ತು. ಅತ್ತಿಗೆಯ ಬುದ್ಧಿ ಗೊತ್ತಿದ್ದ ಗೀತಾ ವರುಣ್‌ ಈ ಬಾರಿ ತಾವಾಗಿ ಆಸ್ಪತ್ರೆಗೆ ಹೋಗಲಿಲ್ಲ. ಡಿಸ್‌ಚಾರ್ಜ್‌ ಆಗಿ 1 ತಿಂಗಳು ಕಳೆದರೂ ಅವನಿಗೆ ಕೆಲಸಕ್ಕೆ ಹೋಗಲು ಶಕ್ತಿ ಬರಲಿಲ್ಲ. ಆಫೀಸಿನಿಂದ ಸಾಹೇಬರು ಕರೆಸಿ, “ನೋಡ್ರಿ, ನಿಮ್ಮ ಯಜಮಾನರಿಗೆ ಕೆಲಸಕ್ಕೆ ಬರಲಾಗದಿದ್ದರೆ, ವಾಲಂಟರಿ ರಿಟೈರ್‌ಮೆಂಟ್‌ ತೆಗೆದುಕೊಳ್ಳಲು ಹೇಳಿ!” ಎಂದು ರೇಗಾಡಿದರು.

ಕೊನೆಗೆ ನಾಗರತ್ನಾ ಮಕ್ಕಳ ನೆಪವೊಡ್ಡಿ, ಅವರ ಕಾಲಿಗೆ ಬೀಳುವಂತಾಗಲು, ಅವಳ ಓದಿಗೆ ತಕ್ಕಂತೆ ಅದೇ ಆಫೀಸಿನಲ್ಲಿ ಅಟೆಂಡರ್‌ ಕೆಲಸ ನೀಡಿದರು. ಅಂತೂ ಸಂಸಾರ ರಥ ಮುಂದುವರಿಯಿತು.

ತಂದೆಯ ಆರೋಗ್ಯ ಸಂಪೂರ್ಣ ಹದಗೆಟ್ಟು ಅವರು ಹಾಸಿಗೆ ಹಿಡಿದಿದ್ದರಿಂದ, ದೊಡ್ಡ ಮಗಳು ಬೃಂದಾ, ಓದು ಬಿಟ್ಟು ಮನೆಯಲ್ಲೇ ಇದ್ದು ಅವರ ಸೇವೆ ಮಾಡತೊಡಗಿದಳು. ತಾಯಿ ಕೆಲಸಕ್ಕೆ, ತಂಗಿಯರು ಕಾಲೇಜಿಗೆ ಹೋಗಲು ಅವಳಿಗೆ ಬಿಡುವಿಲ್ಲದಷ್ಟು ಮನೆಗೆಲಸ, ಆಸ್ಪತ್ರೆ ಅಲೆದಾಟವೇ ಆಗಿಹೋಯಿತು. ಹೀಗೆ 6 ತಿಂಗಳು ಕಳೆಯಿತು. ಒಂದು ದಿನ ತೀವ್ರ ಹೃದಯಾಘಾತಕ್ಕೆ ಸಿಲುಕಿ ಮಹೇಶ್‌ ಪ್ರಾಣಬಿಟ್ಟ. ಎಲ್ಲರೂ ಬಂದು ಸೇರಿದಾಗ, ನಾಗರತ್ನಾಳ ಗೋಳು ಮುಗಿಲು ಮುಟ್ಟಿತ್ತು. ಅಂತೂ ವರುಣನೇ ಮುಂದೆ ನಿಂತು ಅಣ್ಣನ ಸಂಸ್ಕಾರ, ಕರ್ಮಾಂತರಗಳನ್ನು ಮಾಡಿದ. ಎಲ್ಲ ಮುಗಿದು ಗೀತಾ ವರುಣ್‌ ಹೊರಟು ನಿಂತಾಗ ನಾಗರತ್ನಾ ಜೋರಾಗಿ ಅಳತೊಡಗಿದಳು.

“ನಾನೊಬ್ಬಳು ಹೆಣ್ಣು ಹೆಂಗಸು….. ಈ ಮೂವರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಏನು ಮಾಡಲಿ? ಇವರಿಗೆ ಹೇಗೆ ಭವಿಷ್ಯ ಕಲ್ಪಿಸಲಿ? ಇವರ ಮದುವೆ ಹೇಗೆ ಮಾಡಲಿ?”

“ಅತ್ತಿಗೆ, ಏನೂ ಯೋಚನೆ ಮಾಡಬೇಡಿ. ಇಷ್ಟು ದಿನ ನಡೆದಂತೆ ಮುಂದೆಯೂ ನಡೆಯುತ್ತದೆ. ಅವರ ಮದುವೆ ಸಂದರ್ಭ ಬಂದಾಗ, ಖಂಡಿತಾ ನನ್ನ ಕೈಲಾದ ಸಹಾಯ ಮಾಡ್ತೀನಿ. ಹೆಣ್ಣುಮಕ್ಕಳ ಮದುವೆ ಮುಖ್ಯ,” ಎಂದು ವರುಣ್‌ ಸಮಾಧಾನ ಹೇಳಿದ.

“ಎಲ್ಲರೂ ಈಗ ಒಂದೇ ಮನೆಯಲ್ಲಿದ್ದರೆ ಚೆನ್ನಾಗಿತ್ತು. ಈ ಮನೆಗೊಂದು ದಿಕ್ಕು, ಸಂಸಾರ ನಿರ್ವಹಣೆಗೆ ದಾರಿ ಆಗುತ್ತಿತ್ತು,” ಎಂದು ನಾಗರತ್ನಾ ಹೇಳಿದಾಗ, ಗೀತಾ ವರುಣ್‌ ಮುಖ ಮುಖ ನೋಡಿಕೊಂಡರು.

ಹಿಂದೆ ಇದೇ ಹೆಂಗಸು ಮನೆಗೆ ಯಾರೂ ಬರಬಾರದು ಎಂದು ಎಲ್ಲರನ್ನೂ ಮನೆಯಿಂದ ಓಡಿಸಿದ್ದಳು. ಆದರೆ ಈಗ….? ವಾಸ್ತವತೆ ಗಹಗಹಿಸಿ ನಕ್ಕಿತ್ತು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ