ಅಂದು ಆಕಾಶನ ಮದುವೆ ಮುಗಿದು ಮೊದಲ ರಾತ್ರಿ ಘಳಿಗೆ ಸಮೀಪಿಸಿತ್ತು. ಅವನ ಚಿಕ್ಕ ಕೋಣೆಯನ್ನು ಆಕಾಶನ ಅತ್ತಿಗೆ ಮಾಲತಿ ಇದ್ದುದರಲ್ಲೇ ಹೇಗೋ ಒಂದಿಷ್ಟು ಸಿಂಗರಿಸಿ, ಮಂಚಕ್ಕೆ ಒಂದಿಷ್ಟು ಹೂಗಳ ಹಾರ ಇಳಿಬಿಟ್ಟು, ಹೊಸ ಹಾಸಿಗೆಯ ಮೇಲೆ ಮಲ್ಲಿಗೆಯ ಬಿಡಿ ಹೂಗಳನ್ನು ಉದುರಿಸಿ ಅಂತೂ ಆ ಕೋಣೆಗೆ ಮೊದಲ ರಾತ್ರಿಯ ಸ್ಪರ್ಶ ನೀಡುವಲ್ಲಿ ಯಶಸ್ವಿಯಾಗಿದ್ದಳು. ಅಲ್ಲಿ ಮೈ ತುಂಬಾ ಸೆರಗುಹೊದ್ದು, ತಲೆ ತಗ್ಗಿಸಿ ಗಂಡನ ನಿರೀಕ್ಷೆಯಲ್ಲಿರಬೇಕಾದ ನವ ವಧು ತನುಜಾ ನಾಚಿಕೊಳ್ಳುವುದಿರಲಿ, ಕಿಡಿಕಾರುತ್ತಾ ತಂದೆ ರಾಮರಾಯರಿಗೆ ಫೋನ್ ಮಾಡಿದ್ದಳು.
“ಡ್ಯಾಡಿ, ಇದ್ಯಾವ ಜನ್ಮದ ಸೇಡು ತೀರಿಸಿಕೊಳ್ಳಬೇಕೆಂದು ನನ್ನನ್ನು ಈ ನರಕದ ಕೂಪಕ್ಕೆ ತಳ್ಳಿದಿರಿ? ಈ ಹಾಳು ಕೊಂಪೆಯಲ್ಲಿ ಏನು ಸ್ವರ್ಗ ಸುಖ ಸುರಿದುಹೋಗುತ್ತಿದೆ ಎಂದು ನಾನು ಇಲ್ಲಿರಬೇಕು? ಬೇಸಿಗೆಯ ಧಗೆಯಿಂದ ಬೆಂದುಹೋಗುತ್ತಿದ್ದರೆ ಒಂದು ಎ.ಸಿ. ಇರಲಿ, ಧಾರಾಳ ಗಾಳಿ ನೀಡುವ ಫ್ಯಾನೂ ಗತಿಯಿಲ್ಲದೆ ಯಾವುದೋ ಡಕೋಟಾ ತರಹದ್ದು ಗಿರ್ರೆಂದು ಸೌಂಡ್ ಮಾಡುತ್ತಾ ತಲೆ ನೋವು ತರಿಸಿದೆ. ನನಗಂತೂ ಉಸಿರುಕಟ್ಟಿ ಸಾಯುವಂತಾಗಿದೆ….”
ಆ ಕಡೆಯಿಂದ ತಂದೆಯ ಮಾತು ಕೇಳಿಸಿಕೊಂಡ ನಂತರ ತಕ್ಷಣ ಸಿಡುಕಿದಳು, “ಅದೆಲ್ಲ ನನಗೆ ಗೊತ್ತಿಲ್ಲ ಡ್ಯಾಡ್…. ನಾನೀಗಲೇ ಮವೆಗೆ ವಾಪಸ್ಸು ಬರ್ತಿದ್ದೀನಿ….. ಅಷ್ಟೆ!”
ಆಕಾಶ್ ಹೊಸ ಹೆಂಡತಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅವಾಕ್ಕಾದ. ಯಾವತ್ತು ಶ್ರೀಮಂತರಾದ ರಾಮರಾಯರ ಮನೆಯಿಂದ ಅವರ ಒಬ್ಬಳೇ ಮಗಳು ತನುಜಾಳ ಸಂಬಂಧ ಆಕಾಶನಿಗೆ ಬಂದಿತ್ತೋ, ಆ ಮನೆಯವರೆಲ್ಲ ಮೂಕವಿಸ್ಮಿತರಾಗಿದ್ದರು. ಎಲ್ಲಿ ರಾಯರ ವೈಭವೋಪೇತ ಜೀವನಶೈಲಿ ಹಾಗೂ ಎಲ್ಲಿ ಆಕಾಶನ ಮನೆಯವರ ಮಧ್ಯಮ ವರ್ಗದ ಜೀವನ! ಎರಡು ಮನೆತನಗಳಲ್ಲೂ ಅಜಗಜಾಂತರ ವ್ಯತ್ಯಾಸವಿತ್ತು. ಯಾವುದೇ ಆಸ್ತಿಪಾಸ್ತಿಗಳ ಬೆಂಬಲವಿಲ್ಲದ ಆಕಾಶ್, ತನ್ನ ಸ್ವಪ್ರತಿಭೆಯಿಂದ ವಿಶ್ವವಿದ್ಯಾನಿಲಯದಲ್ಲಿ ಲೆಕ್ಚರರ್ ನೌಕರಿ ಗಿಟ್ಟಿಸಿಕೊಂಡಿದ್ದ.
ಹೀಗೆ ಒಂದು ಸೆಮಿನಾರ್‌ನಲ್ಲಿ ಆಕಾಶನ ವಿದ್ವತ್ತಿನಿಂದ ಪ್ರಭಾವಿತರಾದ ರಾಮರಾಯರು, ಅವನನ್ನೇ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದರು. ಆಕಾಶ್‌ನಂಥ ಬುದ್ಧಿವಂತ ವ್ಯಕ್ತಿ, ಖಂಡಿತಾ ತಮ್ಮ ಬಿಸ್‌ನೆಸ್‌ನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗಬಲ್ಲ ಎಂಬ ಆತ್ಮವಿಶ್ವಾಸ ಮೂಡಿತು. ತಮ್ಮ ಯೌವನದಲ್ಲಿ ಎಲ್ಲರಿಗೂ ಅತಿ ಆದರ್ಶದ ಹುಚ್ಚು ನೆತ್ತಿಗೇರಿರುತ್ತದೆ. ಆದರೆ ಐಶ್ವರ್ಯದ ಪಾಕದಲ್ಲಿ ನೆನೆಯುತ್ತಿದ್ದಂತೆ ಆದರ್ಶ ತಾನಾಗಿ ಆವಿಯಾಗಿ ಹೋಗುತ್ತದೆ. ತಮ್ಮ ಮಗಳು ತನುಜಾಳ ಹಠಮಾರಿ ಬುದ್ಧಿಯಿಂದ ಖಂಡಿತಾ ಅಳಿಯ ಮುಂದೆ ಈ ಮನೆಗೆ ಬಂದು, ಮನೆ ಅಳಿಯನಾಗಿ ತಮ್ಮ ಆಸ್ತಿ ಸಂರಕ್ಷಿಸುತ್ತಾನೆ ಎಂದು ನಂಬಿದರು. ಆದರೆ ಆಕಾಶನಿಗೆ ಒಳಗೊಳಗೇ ಆತಂಕವಿತ್ತು. ತಾಯಿ ಲಲಿತಮ್ಮನೆದುರು ಹೇಳಿಕೊಂಡ, “ಅಮ್ಮ, ಅತಿ ಶ್ರೀಮಂತರಾದ ರಾಯರ ಒಬ್ಬಳೇ ಮಗಳು ಈ ನಮ್ಮ ಮಧ್ಯಮ ವರ್ಗದ ಸಾಮಾನ್ಯ ಜೀವನಕ್ಕೆ ಅಡ್ಜಸ್ಟ್ ಆಗಬಲ್ಲಳೇ? ಅವಳು ಸಂಜೆ ಪೂರ್ತಿ ಕ್ಲಬ್ಬುಗಳಲ್ಲಿ ಕಳೆಯುತ್ತಾಳೆ ಅಂತಾರೆ. ಅವರಿಗೂ ನಮಗೂ ಏಣಿ ಇಟ್ಟರೂ ಸಂಬಂಧ ಎಟುಕಲಾರದು ಅಂತ್ಲೇ ಅನಿಸುತ್ತೆ.”
“ಅದು ಹಾಗಲ್ಲಪ್ಪ, ಒಮ್ಮೆ ಮದುವೆ ಅಂತ ಆಗಿಬಿಟ್ಟರೆ ಹೆಣ್ಣುಮಕ್ಕಳು ತಮ್ಮನ್ನು ತಾವು ಹೊಸ ಜೀವನಕ್ಕೆ ತಕ್ಕಂತೆ ರೂಪಿಸಿಕೊಳ್ಳುತ್ತಾರೆ. ಅವಳ ವೈಯಕ್ತಿಕ ಕೆಲಸಗಳಿಗಾಗಿ ಒಬ್ಬ ಆಳನ್ನು ನೇಮಿಸಿಕೊಡ್ತೀನಿ ಅಂತ ರಾಯರು ಹೇಳಿದ್ದಾರೆ. ನಮ್ಮ ಮನೆಯಲ್ಲಿ ಅವಳೇನು ಅಡುಗೆ ಮಾಡಿ, ಪಾತ್ರೆ ತೊಳೆಯಬೇಕೇ?” ಲಲಿತಮ್ಮ ಮಗನಿಗೆ ಸಲಹೆ ನೀಡಿದ್ದರು. ಸೊಸೆ ಜೊತೆ ಬರಲಿರುವ ದೊಡ್ಡ ಮೊತ್ತದ ವರದಕ್ಷಿಣೆಯಿಂದ ಹೇಗೋ ತಮ್ಮ ಇಬ್ಬರು ಅವಿವಾಹಿತ ಹೆಣ್ಣುಮಕ್ಕಳ ಮದುವೆಯ ಜವಾಬ್ದಾರಿ ಕಳೆದುಕೊಳ್ಳಬಹುದೆಂದು ಅವರು ದೂರದ ಲೆಕ್ಕಾಚಾರ ಹಾಕಿದ್ದರು. ಆಕಾಶ್ ಈ ಕುರಿತಾಗಿ ಇನ್ನೂ ಯೋಚಿಸುತ್ತಿರುವಾಗಲೇ ಆ ಕಡೆಯಿಂದ ರಾಯರು ಅವನಿಗೆ ಫೋನ್ ಮಾಡಿದ್ದರು.
“ನೋಡಪ್ಪ ಆಕಾಶ್, ಈಗ ಕಾರು ನಿಮ್ಮ ಮನೆ ಕಡೆ ಬರ್ತಿದೆ. ಒಂದು ವಾರದ ಮಟ್ಟಿಗೆ ನಿಮ್ಮಿಬ್ಬರಿಗೂ ಹೋಟೆಲ್ ಅಶೋಕಾದಲ್ಲಿ ರೂಂ ಬುಕ್ ಮಾಡಲಾಗಿದೆ. ಅಷ್ಟು ಹೊತ್ತಿಗೆ ಮದುವೆಗೆ ಬಂದಿದ್ದ ನಿಮ್ಮ ನೆಂಟರೆಲ್ಲರೂ ಹೊರಟುಬಿಟ್ಟಿರುತ್ತಾರೆ, ನಂತರ ಹಾಯಾಗಿ ನೀವಿಬ್ಬರೂ ಮನೆಗೆ ಮರಳಬಹುದು.”
“ಹಾಗಲ್ಲ ಮಾವ, ಒಂದು ದಿನದ ವಿಷಯವಾಗಿದ್ದರೆ ಒಪ್ಪಬಹುದಿತ್ತು. ಆದರೆ ನನ್ನ ಮದುವೆಗೆಂದೇ ಅಷ್ಟು ದೂರದ ಊರಿನಿಂದ ಬಂದಿರುವ ನೆಂಟರನ್ನೆಲ್ಲ ಬಿಟ್ಟು ನಾನು ಯಾವುದೋ ಹೋಟೆಲ್ನಲ್ಲಿ ತಂಗಿದ್ದು, 1 ವಾರದ ಬಳಿಕ ಮನೆಗೆ ಬಂದರೆ ಅದೇನು ಚೆನ್ನಾಗಿರುತ್ತದೆ? ದಯವಿಟ್ಟು ಕ್ಷಮಿಸಿ, ಇದಾಗುವುದಿಲ್ಲ.”
ತಕ್ಷಣ ಅವನ ಕೈಯಿಂದ ಫೋನ್ ಕಿತ್ತುಕೊಂಡ ತನುಜಾ ತಂದೆಗೆ ಹೇಳಿದಳು, “ಡ್ಯಾಡ್, ಕೇಳಿಸಿಕೊಂಡ್ರಿ ತಾನೇ….? ನಾನು ಈಗಲೇ ಹೋಟೆಲ್‌ಗೆ ಹೊರಟೆ. ನಿಮ್ಮ ಆಯ್ಕೆಯನ್ನು ನೀಲ್ ಮೆಚ್ಚಿಕೊಳ್ಳಬೇಕಷ್ಟೆ. ನಿಮ್ಮ ಈ ಮಹಾನ್ ಅಳಿಯನ ಬದಲು ಬೇರೆ ಯಾರನ್ನೇ ಆರಿಸಿದ್ದರೂ, ಅಲರು ನನ್ನನ್ನು ತಲೆಯ ಮೇಲಿರಿಸಿಕೊಂಡು ಆದರಿಸುತ್ತಿದ್ದರು. ಇವರ ಕಡೆಯವರು ಡಿಮ್ಯಾಂಡ್ ಮಾಡಿದರು ಅಂತ ಲಕ್ಷಾಂತರ ರೂ.ಗಳನ್ನು ಝಣಝಣ ಎಣಿಸಿ ಕೊಟ್ಟುಬಿಡಬೇಡಿ. ಈಗಾಗಲೇ ವಸೂಲು ಮಾಡಿರುವ ಹಣ, ವರೋಪಚಾರದ ವಸ್ತುಗಳನ್ನು ಭದ್ರವಾಗಿ ಅಡಗಿಸಿರುತ್ತಾರೆ. ನನಗೋಸ್ಕರ ಈ ಹಾಳು ರೂಮಿನಲ್ಲಿ ಒಂದು ಎ.ಸಿ. ಕೂಡ ಹಾಕಿಸಿಲ್ಲ…” ಎಂದಳು.
ರಾಯರು ಅವಳಿಗೇನೋ ಸಮಾಧಾನದ ಮಾತುಗಳನ್ನು ಹೇಳಿದರು.
ಆಗ ಆಕಾಶ್ ಕೂಡ ಅವಳಿಗೆ ಸಮಾಧಾನ ಹೇಳತೊಡಗಿದ, “ತನುಜಾ, ನಿನ್ನ ಲೆವೆಲ್‌ಗೆ ತಕ್ಕಂತೆ ಈ ಮನೆಯಲ್ಲಿ ಅನುಕೂಲಗಳಿಲ್ಲ ಅನ್ನುವುದು ಗೊತ್ತಿದೆ. ಅದೆಲ್ಲ ನಿನಗೆ ಮೊದಲಿನಿಂದಲೂ ಅಭ್ಯಾಸವಾದದ್ದು. ಒಂದೆರಡು ದಿನಗಳಲ್ಲಿ ನಾನು ಎ.ಸಿ. ಹಾಕಿಸುತ್ತೇನೆ ಬಿಡು, ಆಗ ನಿನಗೇನೂ ತೊಂದರೆ ಆಗುವುದಿಲ್ಲ.”
“ನಿನ್ನ ಯೋಗ್ಯತೆ ನೋಡಿಕೊಂಡು ನನ್ನನ್ನು ಮದುವೆ ಆಗಲಿಕ್ಕೆ ಯೋಚಿಸಬೇಕಿತ್ತು. ಇಷ್ಟು ವರ್ಷಗಳಿಲ್ಲದ್ದು ಮುಂದಿನ 1-2 ದಿನಗಳಲ್ಲಿ ಜಾದೂ ತರಹ ಆಗಿಹೋಗುತ್ತೇನು? ಈಗ ಡ್ಯಾಡ್ ನಿನ್ನ ತಾಯಿಯ ಜೊತೆ ಏನೋ ಮಾತನಾಡುತ್ತಿದ್ದಾರೆ. ನಿಮ್ಮಮ್ಮ ಒಪ್ಪಿಕೊಳ್ಳದಿದ್ದರೆ ನೀನು ಇಲ್ಲೇ ಇರು, ನನಗಂತೂ ಉಸಿರುಗಟ್ಟಿಸುವ ಈ ರೂಮಿನಲ್ಲಿ ಖಂಡಿತಾ ಇರಲಾಗದು. ನಾನೀಗಲೇ ಹೊರಟೆ.”
ಸ್ವಲ್ಪ ಹೊತ್ತಿಗೆ ಲಲಿತಮ್ಮನವರು ಆಕಾಶನ ಕೋಣೆಯ ಹೊರಗಿನಿಂದ ಬಾಗಿಲು ತಟ್ಟಿದರು. ಅವನು ಕದ ತೆರೆದು ನೋಡಿದಾಗ, ಇವನಿಗೇನೋ ಹೇಳಲೆಂಬಂತೆ ಅಲ್ಲೇ ಕಾದು ನಿಂತಿದ್ದರು.
“ಆಕಾಶೂ, ನೀನೀಗಲೇ ಸೊಸೆಯನ್ನು ಕರೆದುಕೊಂಡು ಹೋಟೆಲ್‌ಗೆ ಹೊರಟುಬಿಡು, ಇಲ್ಲಿ ಬಹಳ ಸೆಖೆ ಇದೆ. ನಾಳೆ ಬೆಳಗ್ಗೆ ಬೇಗ ಬಂದುಬಿಡಿ. ಇಲ್ಲಿ ಇನ್ನೂ ಕೆಲವು ಶಾಸ್ತ್ರಗಳು ಬಾಕಿ ಇವೆ. ಸಂಜೆ ಆರತಿ ಮುಗಿಸಿಕೊಂಡು ಮತ್ತೆ ಹೊರಟುಬಿಡಿ. ಇದನ್ನೆಲ್ಲ ನೋಡಲು ನಿಮ್ಮ ತಂದೆ ಬದುಕಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು…..” ಎನ್ನುವಷ್ಟರಲ್ಲಿ ಅವರ ಕಂಠ ತುಂಬಿ ಬಂದಿತ್ತು.
ಅವರ ಮಾತು ಮುಗಿಯುತ್ತಿದ್ದಂತೆ ತನುಜಾ ಹೊರಡಲು ಎದ್ದುನಿಂತಳು. ಯಾವುದೇ ಪ್ರತಿಕ್ರಿಯೆ ನೀಡುವ ಅವಕಾಶ ಸಿಗದೆ, ಆಕಾಶ್ ವಿಧಿಯಿಲ್ಲದೆ ಅವಳ ಹಿಂದೆ ಹೊರಡಲೇ ಬೇಕಾಯ್ತು. ಹೋಟೆಲ್ ಕೋಣೆ ಸೇರುತ್ತಿದ್ದಂತೆ, ತನುಜಾ ತನ್ನ ಭಾರಿ ರೇಷ್ಮೆ ಸೀರೆ, ಒಡವೆಗಳನ್ನೆಲ್ಲ ಕಳಚಿಟ್ಟು ಹಾಯಾಗಿ ನೈಟಿ ಧರಿಸಿ ನೆಮ್ಮದಿಯ ನಿಟ್ಟುಸಿರಿಟ್ಟಳು.
“ಥ್ಯಾಂಕ್ ಗಾಡ್! ಆ ನರಕದ ಕೊಂಪೆಯಿಂದ ಆಚೆ ಅಂತೂ ಬಂದೆನಲ್ಲ… ಈಗ ನೆಮ್ಮದಿಯಾಗಿ ನಿದ್ರಿಸಬಹುದು. ಗುಡ್ ನೈಟ್‌ಆಕಾಶ್….“ಅವನ ಜವಾಬಿಗೂ ಕಾಯದೇ ಅವಳು ಹಾಗೇ ಮಂಚದ ಮೇಲುರುಳಿದಳು. ಸೋಫಾದ ಮೇಲೆ ಕುಳಿತು ಮಿಕಮಿಕ ಇವಳನ್ನೇ ಗಮನಿಸುತ್ತಿದ್ದ ಆಕಾಶ್, ಹಾಯಾಗಿ ನಿದ್ದೆಗೆ ಜಾರಿದ ಹೆಂಡತಿಯನ್ನು ಕಂಡು ಬೆರಗಾದ. ಇದೇ ಏನು ತಾನು ಇಷ್ಟು ವರ್ಷಗಳಿಂದ ಎದುರು ನೋಡುತ್ತಿದ್ದ ಮೊದಲ ರಾತ್ರಿ? ಎಲ್ಲರೂ ಇಂಥ ಶೋಭನಕ್ಕಾಗಿ ಅಷ್ಟೊಂದು ಆಸೆಯಿಂದ ಕಾಯುತ್ತಾರೇನು? ಸಿನಿಮಾಗಳಲ್ಲಿ ತೋರಿಸುತ್ತಾರಲ್ಲ ನವಿವಾಹಿತರ ಮೊದಲ ರಾತ್ರಿಯ ದೃಶ್ಯ….. ಅವೆಲ್ಲ ಸುಳ್ಳೇನು?
ಛೇ! ಛೇ! ಈ ಲಕ್ಷಣಕ್ಕೆ ತಾನು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಸರಳ ಸ್ವಭಾವದ ಅರ್ಪಿತಾಳನ್ನೇ ಮದುವೆಯಾಗಬಹುದಿತ್ತು. ಅವಳ ಕಂಗಳಲ್ಲಿ ಆಕಾಶನಿಗಾಗಿ ಸದಾ ಪ್ರೀತಿ ಆದರಗಳು ತುಂಬಿರುತ್ತಿದ್ದವು. ತನಗೆ ಇಷ್ಟವಿದ್ದರೂ ಅಮ್ಮ ಬೇಡ ಎಂದಿದ್ದ ಒಂದೇ ಕಾರಣಕ್ಕೆ, ಅವರು ಒಪ್ಪಿದ ತನುಜಾಳನ್ನೇ ಮದುವೆಯಾಗಿದ್ದ. ಎಷ್ಟೋ ಹೊತ್ತಿನವರೆಗೂ ಅವನು ಹಳೆಯದನ್ನೆಲ್ಲ ನೆನಪಿಸಿಕೊಂಡು ಹಾಗೆಯೇ ಸೋಫಾ ಮೇಲೆ ನಿದ್ದೆ ಹೋಗಿದ್ದ.
ಬೆಳಗ್ಗೆ ಬೇಗ ಏಳುವ ಅಭ್ಯಾಸ ಹೊಂದಿದ್ದ ಆಕಾಶ್ 6 ಗಂಟೆ ಹೊತ್ತಿಗೇ ಎದ್ದು ಕುಳಿತುಬಿಟ್ಟ. ತನುಜಾ ಇನ್ನೇನು ಏಳಬಹುದು ಎಂದು ಅರ್ಧ ಗಂಟೆ ಕಾದುಕುಳಿತ. ನಂತರ ತಾನೇ ಅವಳ ಕಡೆ ಸರಿದು, ಅವಳನ್ನು ಎಬ್ಬಿಸಲು ಯತ್ನಿಸಿದ. ಅವಳನ್ನು ಮೆಲ್ಲಗೆ ಸ್ಪರ್ಶಿಸಿ ಪ್ರೀತಿಯಿಂದ ಹೇಳಿದ, “ತನು, ಬೆಳಗಾಯಿತು. ಇಲ್ಲಿಗೇ ಬೆಡ್ ಕಾಫಿ ತರಿಸಲೇ?”
“ಓ ರಾಜು, ಇನ್ನೂ ಸ್ವಲ್ಪ ಹೊತ್ತು ಮಲಗಲು ಬಿಡು. ಯಾಕೆ ನನಗೆ ಹಿಂಸೆ ಕೊಡ್ತೀಯಾ? ಇನ್ನೂ ರಾತ್ರಿಯ ನಶೆಯೇ ಇಳಿದಿಲ್ಲ,” ಎಂದು ನಿದ್ದೆಯಲ್ಲೇ ಬಡಬಡಿಸಿದಳು.ಅದನ್ನು ಕೇಳಿಸಿಕೊಂಡ ಆಕಾಶನಿಗೆ ಶಾಕ್ ತಗುಲಿದಂತಾಯ್ತು. ಅವನು ತನುಜಾಳ ಕುರಿತು ಏನೇನೋ ಗಾಳಿ ಮಾತುಗಳನ್ನು ಕೇಳಿದ್ದ. ಬಹು ಬಾಯ್‌ಫ್ರೆಂಡ್ಸ್ ಹೊಂದಿದ್ದಾಳೆಂದು ಹೇಳುತ್ತಿದ್ದರು. ಆದರೆ ಈ ಯಾವ ಮಾತುಗಳಿಗೂ ಅವನು ಸೊಪ್ಪುಹಾಕಲಿಲ್ಲ. ಇಂದಿನ ಕಾಲದ ಹುಡುಗಿಯರು ತಮ್ಮನ್ನು ತಾವು ಹುಡುಗರಿಗಿಂತ ಕಡಿಮೆಯೇನಲ್ಲ ಎಂದು ಭಾವಿಸುತ್ತಾರೆ. ಅದಿರಲಿ, ಈ ರಾಜು ಯಾರಿರಬಹುದು? ಅವನಿಗೆ ತನುಜಾ ಜೊತೆ ಗಾಢ ಸಂಬಂಧ ಇರಬಹುದೇ? ಅಷ್ಟರಲ್ಲಿ ತನುಜಾ ಮೈಮುರಿಯುತ್ತಾ, ಆಕಳಿಸುತ್ತಾ ತಾನೇ ಎದ್ದು ಕುಳಿತಳು.
“ಗುಡ್ ಮಾರ್ನಿಂಗ್ ಆಕಾಶ್…. ಇಂಥ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮೊದಲ ಸಲ ಮಲಗಿದ್ದಿ ಅನ್ಸುತ್ತೆ. ಚೆನ್ನಾಗಿ ನಿದ್ದೆ ಬಂತು ತಾನೇ?” ಮಾತಿನಲ್ಲಿ ವ್ಯಂಗ್ಯ ಸ್ಪಷ್ಟವಾಗಿತ್ತು.
“ಒಂದು ವಿಷಯ ತಿಳಿದುಕೋ ತನು, ನಮ್ಮ ಮನೆಗಿಂತ ನನಗೆ ಹಿತಕರ ವಾತಾವರಣ ಬೇರೆಲ್ಲೂ ಸಿಗುವುದಿಲ್ಲ. ಈಗ ನಾವು ಬೇಗ ಮನೆಗೆ ಹೊರಡಬೇಕು. ಅಲ್ಲಿ ಎಲ್ಲರೂ ನಮಗಾಗಿ ಕಾಯುತ್ತಿರುತ್ತಾರೆ. ಅದಿರಲಿ, ನೀನು ನಿದ್ದೆಯಲ್ಲಿ ಏನೋ ಬಡಬಡಿಸಿದೆಯಲ್ಲ…. ಆ ರಾಜು ಯಾರು?” ಎಂದು ಕೇಳಿದ.
“ಓ ರಾಜು ಹೆಸರು ಹೇಳಿದ್ನಾ….. ರಾಜು ಅಂದ್ರೆ ರಾಜೇಶ್ ನನ್ನ ಕ್ಲಾಸ್‌ಮೇಟ್, ಬೆಸ್ಟ್ ಫ್ರೆಂಡ್. ಅದಿರಲಿ, ಏನೋ ನಿಮ್ಮ ಮನೆ ಅಂದ್ಯಲ್ಲ, ಅಲ್ಲಿ ಮನುಷ್ಯರು ಇಷ್ಟಪಡುವಂಥ ವಸ್ತು ಅನ್ನೋದು ಏನಾದರೂ ಇದೆಯಾ? ನಿನ್ನಂಥ ಮಿಡಲ್ ಕ್ಲಾಸ್‌ನವರ ಮೆಂಟಾಲಿಟಿಯೇ ಇಷ್ಟು. ಸದಾ ಸಿಂಬಳದಲ್ಲಿ ನೊಣ ಸಿಕ್ಕಿಕೊಂಡಂತೆ ಒದ್ದಾಡುವುದು, ಅಲ್ಪಮಾತ್ರದ ಖುಷಿಯನ್ನು ಆಕಾಶದಷ್ಟು ಎತ್ತರಕ್ಕೆ ಏರಿಸುವುದು. ನೋಡ್ತಿರು, ನನ್ನಿಂದಾಗಿ ನಿನಗೆ ಪ್ರಪಂಚದ ಇನ್ನೊಂದು ಮುಖ ಕಾಣಿಸುತ್ತೆ, ಆಗ ಮನೆಗೆ ವಾಪಸ್ಸು ಹೋಗುವ ಮಾತನ್ನೇ ಮರೆತುಬಿಡ್ತೀಯಾ. ಇದು ನನ್ನ ಛಾಲೆಂಜ್ ಆಕಾಶ್!”
“ಬಹುಶಃ ನಿನ್ನ ಈ ಮಾತು ಆ ರಾಜೇಶ್‌ಗೆ ಅನ್ವಯಿಸಬಹುದೇನೋ ಹೊರತು ಖಂಡಿತಾ ನನಗಲ್ಲ. ಬೇಕಿದ್ದರೆ ಹಣಕ್ಕಾಗಿ ನಾನು ಏನೆಲ್ಲ ಮಾಡಬಹುದಿತ್ತು, ಆದರೆ ನಮ್ಮಂಥ ಯುವ ಪೀಳಿಗೆಗೆ ಒಂದು ಮಾದರಿ ಆಗಬೇಕೆಂಬುದೇ ನನ್ನ ಆಸೆ. ಅದಕ್ಕಾಗಿಯೇ….”
“ಕಾೀಜ್‌ನಲ್ಲಿ ಮಾಸ್ಟರ್ ಆಗಿದ್ದಿ! ಎಲ್ಲಿ ಹೋಗುತ್ತೆ ನಿನ್ನ ಮೇಷ್ಟ್ರು ಬುದ್ಧಿ? ಅದೇ ನಮ್ಮ ರಾಜು ನೋಡು, ಇಡೀ ಜೀವನದ ಎಲ್ಲಾ ಸುಖ ಸೌಲಭ್ಯಗಳನ್ನೂ ಅನುಭವಿಸಬೇಕು ಅಂತಾನೆ. ನಿಜ ಅಂದ್ರೆ, ನನ್ನನ್ನು ಮದುವೆಯಾದ್ದರಿಂದ ನೀನು ಇಷ್ಟು ದಿನ ಕಾಣದೇ ಇರುವಂಥ ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾರದಂಥ ಹೊಸ ಪ್ರಪಂಚವನ್ನೇ ಕಾಣಬಹುದು ಮೇಷ್ಟ್ರೇ,” ಎಂದು ಜೋರಾಗಿ ನಕ್ಕಳು.
“ನನ್ನ ಪರಿಶ್ರಮದಿಂದ ನನಗೇನು ಸಿಕ್ಕಿದೆಯೋ ನಾನು ಅದರಲ್ಲಿ ತೃಪ್ತನಾಗಿದ್ದೇನೆ ತನುಜಾ.”
“ಏನು ಮಹಾ ಸಿಕ್ಕಿದೆ ಅಂತ ತೃಪ್ತನಾಗಿದ್ದಿ? ನಿನಗೆ ಸಿಗುವಂಥ ಸಂಬಳ, ಸೌಲಭ್ಯ ನಮ್ಮ ಡ್ಯಾಡಿಯ ಆಫೀಸ್‌ನ 3ನೇ ದರ್ಜೆ ಸಿಬ್ಬಂದಿಗೆ ಸಿಗುತ್ತದೆ. ಅದರ ಜೊತೆಗೆ ಅವರು ತಮ್ಮ ಮನೆಗಳಲ್ಲಿ ಎಲ್ಲಾ ಉಪಯುಕ್ತ ಸಾಧನಗಳನ್ನೂ ಹೊಂದಿದ್ದಾರೆ. ನಿನ್ನದು ಮನೆ ಅಂತ ಇದೆ, ಅಲ್ಲಿ ಒಂದು ರಾತ್ರಿ ಕಳೆಯುವಷ್ಟರಲ್ಲಿ ನನಗೆ ಪ್ರಾಣ ಹೋಗುವಂತಾಗಿತ್ತು.”
“ಮನೆಯಿಂದ ಈಗಾಗಲೇ ಫೋನ್ ಬಂದಿತ್ತು. ಬೆಳಗ್ಗೆ ಎಣ್ಣೆ ಶಾಸ್ತ್ರ ಮಾಡಿ, ಸ್ನಾನ ಆದನಂತರ ತಿಂಡಿ ಕಾಫಿ ಅಲ್ಲೇ ತೆಗೆದುಕೊಳ್ಳಬೇಕು ಅಂತ ಎಲ್ಲರೂ ಕಾಯುತ್ತಿದ್ದಾರೆ ಎಂದು ತಿಳಿಸಿದರು. ಹೀಗಾಗಿ, ಬೇಗ ನಾವೀಗ ಮನೆಗೆ ಹೋಗಬೇಕು, ನಮಗಾಗಿ ಎಲ್ಲರೂ ಕಾಯುತ್ತಿದ್ದಾರೆ,” ಎಂದ.
“ಹೋಲ್ಡ್ ಆನ್…. ಇಷ್ಟು ಬೇಗ! 7 ಗಂಟೆಗೆ ಆ ಮನೆಗೆ ಹೋಗಿ ಏನು ಮಾಡುವುದು? ನಾನು ಸ್ನಾನ ಮಾಡಿ ತಿಂಡಿ ತಿನ್ನಬೇಕು. ಮೊದಲು ಆರ್ಡರ್ ಮಾಡು. ನಿಮ್ಮ ಮನೆಯಲ್ಲಿ ಮದುವೆ ಮನೆಯ ಲಾಡು, ಫೇಣಿಗಳನ್ನೇ ಇನ್ನೂ 1 ವಾರ ತಿಂಡಿ ಅಂತ ತಿನ್ನುತ್ತಾರೆ ಅನ್ನೋದು ಗೊತ್ತು. ಅಂಥ ಕರ್ಮ ನನಗೆ ಬೇಡ. ನನಗಾಗಿ ಆಮ್ಲೆಟ್ ಟೋಸ್ಟ್ ವಿತ್ ಆರೆಂಜ್ ಜೂಸ್ ಹೇಳಿಬಿಡು. ನಿನಗೆ ಏನು ಬೇಕೋ ತರಿಸಿಕೋ, ಬಿಲ್ ಚಿಂತೆ ಬೇಡ. ಎಲ್ಲವನ್ನೂ ಡ್ಯಾಡ್ ಒಟ್ಟಾಗಿ ಪೇ ಮಾಡುತ್ತಾರೆ. ಈಗ ಸ್ನಾನಕ್ಕೆ ಮೊದಲು ಬಿಸಿ ಬಿಸಿ ಕಾಫಿ ಬರಲಿ,” ಎಂದು ಆರಾಮವಾಗಿ ಹಾಸಿಗೆ ಮೇಲೆ ಕಾಲು ಚಾಚಿ, ರಿಮೋಟ್ ಬಟನ್ ಒತ್ತುತ್ತಾ ಟಿ.ವಿ. ನೋಡತೊಡಗಿದಳು.
ಆಕಾಶನಿಗೆ ಸಿಟ್ಟಿನಿಂದ ಮೈ ಪರಚಿಕೊಳ್ಳುವಂತಾಗಿತ್ತು. ಎಂಥ ಮೋಸದ ಬಿಗೆ ಸಿಕ್ಕಿಬಿದ್ದು ತಾನು ಅಗ್ಗದ ಬೇಟೆಯಾದೆನಲ್ಲ ಅನ್ನಿಸಿತು. ಅವನು ಮದುವೆಗೆ ಮೊದಲೇ ತನುಜಾ ಜೊತೆ ಅವಳ ಇಷ್ಟಾನಿಷ್ಟಗಳ ಕುರಿತು ವಿವರವಾಗಿ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತೇನೋ…. ಅವನು ಅವಳನ್ನು ಒಮ್ಮೆ ಭೇಟಿಯಾಗಿದ್ದಂತೂ ನಿಜ, ಆದರೆ ಅವಳ ತಂದೆ ಏಕಾಂತದಲ್ಲಿ ಇವರಿಬ್ಬರನ್ನು ಮಾತನಾಡಲು ಬಿಟ್ಟಿದ್ದರೆ ತಾನೇ? ಅವರ ಮುಂದೆ ಇವಳು ಬಹಳ ಮುಗ್ಧಳಂತೆ ಇದ್ದುಬಿಟ್ಟಿದ್ದಳು. ಅವಳ ನಿಜರೂಪ ಈಗ ಬಯಲಿಗೆ ಬಂದಿತ್ತು. ಇಷ್ಟವಿಲ್ಲದೆಯೇ ತನುಜಾಳಿಗೆ ಬೇಕಾದ ಬ್ರೇಕ್‌ಫಾಫ್ಟ್ ಗೆ ಆರ್ಡರ್ ಕೊಟ್ಟು. ತನಗೆ ಕಾಫಿ ಮಾತ್ರ ಹೇಳಿದ. ತಾವು ಮನೆಗೆ ಬರಲು ಇನ್ನೂ 1 ಗಂಟೆ ತಡವಾಗುತ್ತದೆ, ತಮಗಾಗಿ ಕಾಯದೆ ಉಪಾಹಾರ ಮುಗಿಸಿರೆಂದು ಮನೆಯವರಿಗೆ ಫೋನ್ ಮಾಡಿ ತಿಳಿಸಿದ. ಆದರೆ ಅವರು ಮನೆಗೆ ಹೋಗುವಷ್ಟರಲ್ಲಿ 2-3 ಗಂಟೆಯೇ ತಡವಾಗಿತ್ತು. ಇವನ ತಂಗಿಯರು, ನೆಂಟರಲ್ಲಿನ ಹೆಂಗಳೆಯರು ರೇಗಿಸಲು ಆರಂಭಿಸಿದರು.
“ಆಹಾ ಅಣ್ಣ…. ಮೊದಲ ದಿನವೇ ನಾವು ಅತ್ತಿಗೆ ಜೊತೆ ತಿಂಡಿ ಕಾಫಿ ತೆಗೆದುಕೊಳ್ಳುವುದನ್ನು ತಪ್ಪಿಸಿಬಿಟ್ಟೆ ಅನ್ನು. ನಾವು ಅವರಿಗಾಗಿ ಎಂಥ ಒಳ್ಳೆ ತಿಂಡಿ ತಯಾರಿಸಿದ್ದೆವು ಗೊತ್ತಾ?” ಅವನ ಹಿರಿಯ ತಂಗಿ ಕವಿತಾ ಛೇಡಿಸಿದಳು.
“ಏ ಕವಿತಾ, ಈಗ ನಿಮ್ಮಣ್ಣನಿಗೆ ತನುಜಾ ಇದ್ದರೆ ಮಾತ್ರ ಕಾಫಿ ಹೆಚ್ಚು ರುಚಿಸೋದು, ಗೊತ್ತಾಯ್ತಾ…. ಏನಪ್ಪ ಆಕಾಶ್, ನಾನು ಹೇಳಿದ್ದು ಸರಿ ತಾನೇ?” ಅತ್ತಿಗೆ ಮಾಲತಿ ಸಹ ಚುಡಾಯಿಸಿದರು.
ಅಷ್ಟರಲ್ಲಿ ಹೊರಗಿನಿಂದ ಇಬ್ಬರು ಹುಡುಗರು ಮನೆಯೊಳಗೆ 2 ಪೋರ್ಟೆಬಲ್ ಎ.ಸಿ. ಸಾಗಿಸುತ್ತಿರುವುದು ಆಕಾಶನ ಗಮನಕ್ಕೆ ಬಂದಿತು.
“ಅಮ್ಮಾ, ಇದೇನಮ್ಮ ಎ.ಸಿ. ಬಂದಂತಿದೆ….?”
“ತನುಜಾಳ ತಂದೆ 2 ಎ.ಸಿ.ಗೆ ಆರ್ಡರ್ ಮಾಡಿದ್ದಾರೆ. ಒಂದು ಈ ಹಾಲ್‌ನಲ್ಲಿ ಟಿ.ವಿ. ಜೊತೆ ಇರುತ್ತೆ. ಇನ್ನೊಂದು ನಿನ್ನ ಕೋಣೆಯಲ್ಲಿರುತ್ತೆ,” ಎಂದು ಲಲಿತಮ್ಮ ಉತ್ಸಾಹದಿಂದ ಹೇಳಿದರು.
“ನೋಡಿದ್ಯಾ ಆಕಾಶ್, ನನ್ನ ಡ್ಯಾಡಿಗೆ ನನ್ನ ಬಗ್ಗೆ ಎಷ್ಟು ಅಕ್ಕರೆ! ಈ ಸೆಕೆಯಲ್ಲಿ ಎ.ಸಿ. ಇಲ್ಲದಿದ್ದರೆ ನನಗೆ ಉಸಿರಾಡಲು ಆಗಲ್ಲ ಅಂತ ಅವರಿಗೆ ಗೊತ್ತು,” ತನುಜಾಳ ಮುಖದಲ್ಲಿ ಗರ್ವದ ನಗೆ ಇತ್ತು.
“ಈಗ ನೀವಿಬ್ಬರೂ ಹೋಟೆಲ್‌ನಲ್ಲಿ ಮಲಗಬೇಕಾದ ಅಗತ್ಯವೇನೂ ಇಲ್ಲ. ಅಣ್ಣ -ಅತ್ತಿಗೆ ಜೊತೆ ನಾವಿನ್ನೂ ಸರಿಯಾಗಿ ಮಾತನಾಡಿಯೇ ಇಲ್ಲ,” ಚಿಕ್ಕ ತಂಗಿ ವಿನುತಾ ಆಕಾಶನಿಗೆ ಹೇಳಿದಳು.
“ಸಾರಿ, ದಟ್ ಈಸ್ ನಾಟ್ ಪಾಸಿಬಲ್! ನಮ್ಮ ಡ್ಯಾಡ್ ಹೋಟೆಲ್‌ಗೆ 1 ನೈರದ ಅಡ್ವಾಮೇಸೇ ಬುಕ್ಕಿಂಗ್ ಮಾಡಿದ್ದಾರೆ. ಅಷ್ಟು ದೊಡ್ಡ ಮೊತ್ತನನ್ನು ವೇಸ್ಟ್ ಮಾಡಲಾಗದು. ಅದು ಅಂತಿಂಥದ್ದಲ್ಲ….. ಫೈವ್ ಸ್ಟಾರ್ ಹೋಟೆಲ್!” ತನುಜಾ ನಿಸ್ಸಂಕೋಚವಾಗಿ ನುಡಿದಳು.
ಅಲ್ಲಿದ್ದವರ ಮುಖದ ಬಣ್ಣ ಇಳಿದುಹೋಯಿತು. ತಕ್ಷಣ ಆಕಾಶನ ಬಾಯಿಬಡುಕಿ ಸೋದರತ್ತೆ ಕಮಾಕ್ಷಿ, “ಹೌದು, ಸೊಸೆ ಹೇಳ್ತಿರೋದು ಸರಿಯಾಗಿಯೇ ಇದೆ. ಅಷ್ಟು ದೊಡ್ಡ ಬಂಗಲೆಯಿಂದ ಇಳಿದುಬಂದ ಹುಡುಗಿಗೆ ಇಟ್ಟಿಗೆಗೂಡಿನಂಥ ಈ ಸಣ್ಣ ಮನೆ ಏನು ಮಹಾ ಸೆಟ್ ಆದೀತು? ಇದರ ಬದಲು ಆಕಾಶನ ಮಾವ ಸೊಸೆ ಜೊತೆ ಸದಾಶಿನಗರದಲ್ಲಿ ದೊಡ್ಡ ಬಂಗಲೆ ಉಡುಗೊರೆಯಾಗಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಆಗ ಅವರ ಮುದ್ದಿನ ಮಗಳಿಗೆ ಏನೇನೂ ತೊಂದರೆ ಇರುತ್ತಿರಲಿಲ್ಲ,” ಎಂದುಬಿಟ್ಟರು.
“ಅಷ್ಟೇ ತಾನೇ…… ನಮ್ಮ ಡ್ಯಾಡಿಗೆ ಅದ್ಯಾವ ದೊಡ್ಡ ವಿಷಯ? ಚಿಟಿಕೆ ಹೊಡೆಯುವುದರಲ್ಲಿ ಅದನ್ನು ಅರೇಂಜ್ ಮಾಡ್ತಾರೆ. ಇದುವರೆಗೂ ಅವರು ಕೊಟ್ಟಿರುವುದೇನು ಕಡಿಮೆಯೇ? ಕೇಳಿ ನೋಡಿ…. ಸದಾಶಿನಗರವೇನು ಜಯನಗರವೇನು ಬೇಕಾದೆಡೆ ಕೊಡಿಸುತ್ತಾರೆ,” ಎಂದು ಕಡ್ಡಿ ಮುರಿದಂತೆ ಸ್ಪಷ್ಟವಾಗಿ ಹೇಳಿದಳು.
“ತನು…. ಪ್ಲೀಸ್ ಸುಮ್ಮನಿರು. ಅತ್ತೆ ತಮಾಷೆಗೆ ಹಾಗಂದರಷ್ಟೆ,” ಆಕಾಶ್ ಸಂಕೋಚದಿಂದ ನುಡಿದ.
“ಈಗ ಈ ತಮಾಷೆ ಎಲ್ಲಾ ಸಾಕು, ನಮ್ಮಲ್ಲಿ ಅತ್ತೆಮನೆಗೆ ಬಂದ ಸೊಸೆಯನ್ನು ಕೂರಿಸಿ ಆರತಿ ಮಾಡುವ ಪದ್ಧತಿ. ಇವತ್ತು ಸಂಜೆ ಅದಕ್ಕಾಗಿ ಅಕ್ಕಪಕ್ಕದ ಹೆಂಗಸರೆಲ್ಲ ಬರುತ್ತಾರೆ. ಕವಿತಾ ವಿನುತಾ, ನಿಮ್ಮತ್ತಿಗೆಗೆ ಮೊಗ್ಗಿನ ಜಡೆ ಹಾಕಿ ಅಲಂಕಾರ ಮಾಡುವ ಜವಾಬ್ದಾರಿ ನಿಮ್ಮದು,” ಎಂದರು ಲಲಿತಮ್ಮ.
“ಅಮ್ಮಾ, ಜೊತೆಗೆ ಅಣ್ಣ ಅತ್ತಿಗೆ ಇಬ್ಬರೂ ನೀರಿನ ಟಬ್‌ನಿಂದ ಉಂಗುರ ಹುಡುಕುವ ಶಾಸ್ತ್ರ ಬಾಕಿ ಉಳಿದಿದೆ. ಅದನ್ನು ಊಟದ ನಂತರ ಇಟ್ಟುಕೊಳ್ಳೋಣವೇ?” ಯಾರೋ ಉತ್ಸಾಹದಿಂದ ಕೇಳಿದರು.
“ಛೀ…… ಛೀ! ಇಂಥ ಹುಚ್ಚಾಟಗಳು ನನಗೆ ಸ್ವಲ್ಪ ಹಿಡಿಸಲ್ಲ. ಇನ್ನೊಂದು ವಿಷಯ ಅಂದ್ರೆ, ನಿನ್ನೆಯ ಶಾಸ್ತ್ರ ಸಂಪ್ರದಾಯಗಳಿಂದಲೇ ನನಗೆ ಸಾಕಾಗಿದೆ, ತಲೆನೋವು ಇನ್ನೂ ಹೋಗಿಲ್ಲ. ಅದಕ್ಕಾಗಿ ಸಂಜೆ ಮತ್ತೊಂದು ಆರತಿ, ಹೆಂಗಸರು ನನ್ನನ್ನು ನೋಡಲು ಬರುವುದು ಅನ್ನೋದೇನೂ ಬೇಕಿಲ್ಲ. ನಿನ್ನೆಯ ಮದುವೆಯಲ್ಲಿ ಎಲ್ಲರೂ ನನ್ನ ಮುಖ ನೋಡಿದ್ದಾರೆ ತಾನೇ? 1 ದಿನದಲ್ಲಿ ಅಂಥಾ ಏನೂ ವ್ಯತ್ಯಾಸ ಆಗೋಲ್ಲ.
“ನಿಮ್ಮ ಅಕ್ಕಪಕ್ಕದವರಿಗೆ ನನ್ನನ್ನು ಪರಿಚಯಿಸಲೇಬೇಕು ಅಂತ ನಿಮಗೇನಾದರೂ ಅಷ್ಟು ಹಠವಿದ್ದರೆ, ಇದರ ಬದಲಿಗೆ ಒಂದು ರಿಸೆಪ್ಶನ್ ಅರೇಂಜ್ ಮಾಡಿ. ಬೇಕಾದವರನ್ನು ಕರೆಯಿರಿ. ಹ್ಞಾಂ ಅದಕ್ಕಾಗಿ ಹಣ ಖರ್ಚಾಗುತ್ತದೆ. ಅದನ್ನು ನೀವೇ ಏರ್ಪಾಡು ಮಾಡಿಕೊಳ್ಳಬೇಕಷ್ಟೆ,” ತನುಜಾ ಆರ್ಡರ್ ಮಾಡುವವಳಂತೆ ಹೇಳಿದಳು.
ಮತ್ತೊಮ್ಮೆ ಎಲ್ಲರ ಮುಖಕ್ಕೆ ತಣ್ಣೀರು ಎರಚಿದಂತಾಯಿತು. ಆಕಾಶನಿಗೆ ಈ ಮದುವೆ ತನ್ನ ಜೀವನದ ಅತಿ ದೊಡ್ಡ ತಪ್ಪು ನಿರ್ಧಾರ ಅನ್ನುವುದು ಸ್ಪಷ್ಟ ಗೊತ್ತಾಯಿತು. ಅತ್ತೆಮನೆಯವರ ಮುಂದೆ ಏನಾದರೂ ಹೇಳಿಕೊಳ್ಳಲಿ, ಆದರೆ ಇಷ್ಟು ಜನ ನೆಂಟರು ಸೇರಿರುವಾಗ ಎಲ್ಲರ ಮುಂದೆ ಅವಮಾನ ಮಾಡುವುದೇ? ಅಷ್ಟರಲ್ಲಿ ಅವನಿಗೆ ಬೆಳಗಿನ ರಾಜೇಶ್ ಹೆಸರು ನೆನಪಿಗೆ ಬಂದು ಹೃದಯದಲ್ಲಿ ಅವಲಕ್ಕಿ ಕುಟ್ಟಿದಂತಾಯಿತು.
ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ, ಅವನು ಅಲ್ಲಿನ ವಾತಾವರಣ ತಿಳಿಗೊಳಿಸಲು ತಂಗಿ ಕಡೆ ತಿರುಗಿ, “ಏನಮ್ಮ ಕವಿತಾ, ಅತ್ತಿಗೆಗಾಗಿ ಏನೋ ಸ್ಪೆಷಲ್ ತಿಂಡಿ ಮಾಡಿರುವೆ ಅಂದೆ. ನನಗೆ ಕೊಡುವುದಿಲ್ಲವೇ?” ಎಂದು ನಗತೊಡಗಿದ.
“ಈಗಲೇ ತರ್ತೀನಣ್ಣ,” ಎನ್ನುತ್ತಾ ಕವಿತಾ ಒಳಗೆ ಹೊರಟಳು.
“ಸರಿ, ನಿನಗೆ ಬೇಕಾದ ಹಾಳುಮೂಳು ತಿಂಡಿ ತಿನ್ನುತ್ತಿರು…. ನಿನ್ನಂಥವರಿಗೆ ಫೈವ್ ಸ್ಟಾರ್ ಹೋಟೆಲ್‌ನ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್ ಹೇಗೆ ಒಗ್ಗೀತು? ನನಗಂತೂ ಈ ಚಿಟ್ ಚಿಟ್ ಮಾತು ಕೇಳಿ ತಲೆ ನೋವು ಬಂತು, ನಾನು ಸ್ವಲ್ಪ ಹೊತ್ತು ಮಲಗಿರುತ್ತೇನೆ. ಪ್ಲೀಸ್, ಯಾರೂ ನನ್ನನ್ನು ಡಿಸ್ಟರ್ಬ್ ಮಾಡಬೇಡಿ,” ಎನ್ನುತ್ತಾ ಅಲ್ಲಿದ್ದವರು ಯಾರನ್ನೂ ಕ್ಯಾರೇ ಎನ್ನದೇ ಕೋಣೆಗೆ ಹೋಗಿ ಧಡಾರನೆ ಬಾಗಿಲು ಹಾಕಿಕೊಂಡಳು.
ಬಂದವರೆದುರು ಮನೆಯ ಪ್ರತಿಷ್ಠೆ ಬಿಟ್ಟುಕೊಡಬಾರದೆಂದು ಲಲಿತಮ್ಮ, “ಏನು ಮಾಡುವುದು, ತನುಜಾ ದೊಡ್ಡ ಶ್ರೀಮಂತ ಮನೆತನದ ಒಬ್ಬಳೇ ಹುಡುಗಿ. ಅನುಕೂಲವಾಗಿ ಬೆಳೆದುಬಿಟ್ಟಿದ್ದಾಳೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಅತಿ ಮುದ್ದಿನಲ್ಲಿ ಬೆಳೆದವಳು. ಲೋಕಾರೂಢಿ, ನಯವಿನಯ ಏನೂ ತಿಳಿಯದು. ನಮ್ಮ ಮನೆಯಲ್ಲಿ 2 ವಾರ ಕಳೆದರೆ ಎಲ್ಲವನ್ನೂ ತಿಳಿದುಕೊಳ್ಳುತ್ತಾಳೆ,” ಎಂದು ಹೇಳಿಕೊಂಡರು.
“ಅಯ್ಯೋ ನಮ್ಮಮ್ಮ…. ಇಂಥ ಸೊಸೆ ಸಿಕ್ಕಿರುವ ನೀನೇ ಧನ್ಯಳು! ಇಂಥ ಚಂದದ ಸೊಸೆಯನ್ನು ನೀನು ಮಾತ್ರ ವಹಿಸಿಕೊಂಡು ಮಾತನಾಡಬೇಕಷ್ಟೆ. ಬಹುಶಃ ಅವಳು ತಂದಿರುವ ವರದಕ್ಷಿಣೆ ನಿನ್ನನ್ನು ಹೀಗೆ ಪ್ರೇರೇಪಿಸಿರಬೇಕು,” ಎಂದು ಅವರ ನಾದಿನಿ ಕಮಾಕ್ಷಿ ನಿಷ್ಠೂರವಾಗಿ ನುಡಿದರು.
ಸ್ವಲ್ಪ ಹೊತ್ತಿನ ನಂತರ ಆಕಾಶ್ ತನ್ನ ಕೋಣೆಗೆ ಹೋದ. ಅವಳು ಅಲ್ಲಿ ಹಾಸಿಗೆಗೆ ಒರಗಿ ಯಾರೊಂದಿಗೋ ಫೋನಿನಲ್ಲಿ ಮಾತನಾಡುತ್ತಿದ್ದಳು.
“ಏನು ಹೇಳುವುದು, ಈ ಮನೆಯವರೆಲ್ಲ 16ನೇ ಶತಮಾನದ ಹಳ್ಳಿ ಗುಗ್ಗುಗಳು. ಈ ಮನೆಯೋ ಒಂದು ಮ್ಯೂಸಿಯಂ ತರಹ ಇದೆ. ಡ್ಯಾಡಿ ತುಂಬಾ ರಿಕ್ವೆಸ್ಟ್ ಮಾಡಿಕೊಂಡ್ರು ಅಂತ ಈ ಮದುವೆಗೆ ಒಪ್ಪಿದೆ. ಇಲ್ಲದಿದ್ದರೆ ಯಾವಾಗಲೋ ನಿನ್ನ ಬಳಿಗೆ ಹಾರಿ ಬಂದುಬಿಡುತ್ತಿದ್ದೆ. ಆಕಾಶ್ ಅಂತೂ ಈ ಗೊಡ್ಡು ಸಂಪ್ರದಾಯಗಳ ಸೂತ್ರದ ಗೊಂಬೆ. ತನಗಿರುವ ಸಣ್ಣ ನೌಕರಿಯನ್ನೇ ದೊಡ್ಡದೆಂದು ಭಾವಿಸುತ್ತಾನೆ. ನಿಜವಾದ ಜೀವನದ ಮೋಜು ಮಸ್ತಿ ಏನೂ ಗೊತ್ತಿಲ್ಲ. ಸರಿ ಬಿಡು, ನಾಳೆ ನಾನು ಕ್ಲಬ್ಬಿಗೆ ಬಂದು ನಿನ್ನನ್ನು ಮೀಟ್ ಮಾಡ್ತೀನಿ. ಓ.ಕೆ. ಬೈ.”
“ಬಹುಶಃ ನಿನ್ನ ತಲೆ ನೋವು, ಸುಸ್ತು ದೂರಾಗಿರಬೇಕು. ಯಾರೊಂದಿಗೆ ಮಾತನಾಡುತ್ತಿದ್ದೆ?” ಆಕಾಶ್ ನಿಧಾನವಾಗಿ ಪ್ರಶ್ನಿಸಿದ.
“ಅದನ್ನು ಹೇಳುವ ಅಗತ್ಯವೇನೂ ನನಗಿಲ್ಲ. ನನ್ನ ಪರ್ಸನಲ್ ವಿಷಯಕ್ಕೆ ಬೇರೆಯವರು ಮೂಗು ತೂರಿಸುವುದು ನನಗೆ ಖಂಡಿತಾ ಇಷ್ಟವಿಲ್ಲ,” ಎಂದಳು ತನುಜಾ ಸಿಟ್ಟಿನಿಂದ.
“ನಾನು ನಿನ್ನ ಗಂಡ ತನು… ಗಂಡ ಹೆಂಡತಿ ಮಧ್ಯೆ ಯಾವ ವಿಷಯ ಪರ್ಸನಲ್ ಅಂತಾಗುವುದಿಲ್ಲ.”
“ಐ ಡೋಂಟ್ ಕೇರ್! ನೀನು ಹಳೇಕಾಲದ ಗೊಡ್ಡು. ಅದರಿಂದ ನನಗೇನು? ಪ್ಲೀಸ್ ಈಗ ನನ್ನನ್ನು ಒಬ್ಬಳೇ ಇರಲು ಬಿಡು.”
“ಒಂದು ರಿಕ್ವೆಸ್ಟ್. ಬಂದಿರುವ ನೆಂಟರೆದುರು ಏನೇನೋ ಮಾತನಾಡಿ ಮನೆಯ ಮಾನ ಕಳೆಯಬೇಡ. ಪ್ಲೀಸ್ ಇದು ಅಮ್ಮನ ಮರ್ಯಾದೆಯ ಪ್ರಶ್ನೆ, ಆರತಿ ಇಟ್ಟುಕೊಂಡಿದ್ದೀವಿ ಅಂತ ಅವರು ಹತ್ತಾರು ಹೆಂಗಸರಿಗೆ ಹೇಳಿದ್ದಾರೆ. ಇಂದು ಸಂಜೆ ಅವರು ಬಂದಾಗ ಸುಮ್ಮನೆ ಆರತಿ ಮಾಡಿಸಿಕೊ. ಅಮ್ಮನಿಗೆ ತನ್ನ ಮನೆ ತುಂಬಿದ ಮಹಾಲಕ್ಷ್ಮಿಯನ್ನು ಎಲ್ಲರೆದುರು ತೋರಿಸಿಕೊಳ್ಳುವ ಆಸೆ. ಅವರುಗಳು ಬಂದಾಗ 10 ನಿಮಿಷ ಕುಳಿತಿರಲಾಗದೇ?” ಆಕಾಶ್ ಸಿಹಿಯಾದ ಸ್ವರದಲ್ಲಿ ಓಲೈಸಿದ.
“ಆಯ್ತು. ಆದರೆ ನನ್ನದೊಂದು ಕಂಡೀಷನ್. ನಾನು ಬಂದ ಬಂದವರಿಗೆಲ್ಲ ಎದ್ದು ಬಗ್ಗಿ ಕಾಲಿಗೆ ನಮಸ್ಕಾರ ಮಾಡಲಾರೆ, ಅಂಥ ಸೀರಿಯಲ್, ಸಿನಿಮಾ ಸ್ಟೈಲ್ ನನಗೆ ಬೇಕಿಲ್ಲ. ಇದಕ್ಕೆ ಬದಲಾಗಿ ನೀನು ನಾಳೆ ಸಂಜೆ ನನ್ನ ಜೊತೆ ಕ್ಲಬ್ಬಿಗೆ ಬರಬೇಕು.”
“ಆಯ್ತು, ಹಾಗೇ ಆಗಲಿ. ಅಮ್ಮನಿಗೆ ಇದರ ಬಗ್ಗೆ ಹೇಳಿ ನಾನು ಒಪ್ಪಿಸ್ತೀನಿ ಬಿಡು,” ಎಂದು ಆಶ್ವಾಸನೆ ನೀಡಿದ.
ಸಂಜೆ ಹೊತ್ತಿಗೆ ಮನೆಯವರೆಲ್ಲ, ಈ ಮಹಾತಾಯಿ ಇನ್ನೇನು ರಂಪ ರಾದ್ಧಾಂತ ಮಾಡಲಿದ್ದಾಳೋ ಎಂದು ಹೆದರಿಬಿಟ್ಟಿದ್ದರು. 2 ದಿನಗಳಲ್ಲೇ ಅವಳ ಸ್ವಭಾವವನ್ನು ಚೆನ್ನಾಗಿ ಅರಿತಿದ್ದರು. ನಾದಿನಿಯರು ಉತ್ಸಾಹದಿಂದ ಅವಳ ಬಳಿ ಬಂದು ನಕ್ಕುನಗಿಸಲು, ಮಾತನಾಡಿಸಲು ಯತ್ನಿಸಿದಾಗ ಅವರನ್ನು ಅಲ್ಲೇ ಮಟ್ಟಹಾಕಿದ್ದಳು.
ಅವರು ಅಣ್ಣನ ಕೋಣೆ ಪ್ರವೇಶಿಸಲು ಯತ್ನಿಸಿದಾಗ, ಅವಳು ಸಿಟ್ಟಿನಿಂದ ಕೆಂಡಾಮಂಡಲವಾಗಿದ್ದಳು. ಅವಳು ಕೋಪದಿಂದ ಭುಸುಗುಟ್ಟುತ್ತಾ, “ನಿಮಗೆ ಅಷ್ಟೂ ಮ್ಯಾನರ್ಸ್ ಗೊತ್ತಾಗುವುದಿಲ್ಲವೇ? ನನ್ನ ಅನುಮತಿ ಇಲ್ಲದೆ ನನ್ನ ಕೋಣೆಗೆ ಬರುವುದು ನಿಜಕ್ಕೂ ಬ್ಯಾಡ್ ಮ್ಯಾನರ್ಸ್. ಮೊದಲು ಇಲ್ಲಿಂದ ಹೊರಡಿ, ನಾನೀಗ ಸ್ವಲ್ಪ ಮಲಗಬೇಕು. ನಿಮ್ಮಂಥವರ ಜೊತೆ ಮಾತನಾಡಿ ನನಗೆ ಏನೂ ಆಗಬೇಕಿಲ್ಲ,” ಎಂದು ಗುಡುಗಿದಳು.
ಸಂಜೆ ಆರತಿ ಸಡಗರಕ್ಕೆ ಅವಳು ಮೊಗ್ಗಿನ ಜಡೆ ಹಾಕಿಸಿಕೊಳ್ಳುವುದಿರಲಿ, ಮಾಮೂಲಿ ಹೆರಳು ಸಹ ಹಾಕಿಕೊಳ್ಳದೆ, ಹೂವನ್ನೂ ಮುಡಿಯದೆ ಸ್ಟೈಲಾಗಿ ಕೂದಲನ್ನು ಇಳಿಬಿಟ್ಟು ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಕುಳಿತಿದ್ದಳು. ಅವಳು ಸೀರೆ ಉಟ್ಟಿದ್ದೇ ಲಲಿತಮ್ಮನ ಪುಣ್ಯ ಎನ್ನಬೇಕು. ಬಂದವರಿಗೆ ನಮಸ್ಕರಿಸುವುದಿರಲಿ, ಅವರು ಉಡುಗೊರೆ ಅಂತ ಕೊಟ್ಟಿದ್ದನ್ನು ನಿರ್ಲಕ್ಷ್ಯವಾಗಿ ಅಲ್ಲಿದ್ದ ನಾದಿನಿಯರ ಕೈಗೆ ಕೊಟ್ಟುಬಿಟ್ಟಳು. ಬಂದವರು ಸಿಹಿ, ತಾಂಬೂಲ ಪಡೆದು, ತಮ್ಮ ತಮ್ಮಲ್ಲೇ ಏನೇನೋ ಮಾತನಾಡಿಕೊಳ್ಳುತ್ತಾ ಹೊರಟಿದ್ದಾಯ್ತು.ಅಂದು ರಾತ್ರಿ ಊಟವಾದ ನಂತರ ಲಲಿತಮ್ಮ ಸೊಸೆಗೆ ಉಡುಗೊರೆ ಬಂದಿದ್ದನ್ನೆಲ್ಲ ತನ್ನ ಕೋಣೆಯಲ್ಲೇ ಇರಿಸಿಕೊಳ್ಳಲು ಹೇಳಿದರು. ಅದಕ್ಕೆ ಅವಳು ಅಟ್ಟಹಾಸದಿಂದ ನಕ್ಕು, “ನಿಮ್ಮ ವಠಾರದವರು ಕೊಟ್ಟ ಈ ಅಗ್ಗದ ಉಡುಗೊರೆಗಳನ್ನು ನೀವೇ ಇಟ್ಟುಕೊಳ್ಳಿ ಅಥವಾ ನಿಮ್ಮ ಹೆಣ್ಣುಮಕ್ಕಳ ಮದುವೆಗೆ ಬಳುವಳಿ ಅಂತ ಉಪಯೋಗಿಸಿ. ಇದಕ್ಕಿಂತ 100 ಪಟ್ಟು ಚೆನ್ನಾಗಿರುವ ವಸ್ತುಗಳನ್ನು ನಾವು ಹಬ್ಬದ ಸಂದರ್ಭದಲ್ಲಿ ಮನೆಯ ಕೆಲಸದವರಿಗೆ ಕೊಡ್ತಾ ಇರ್ತೇವೆ,” ಎಂದಳು.
ಆ ಅಪಮಾನದಿಂದ ಆಕೆ ತಲೆ ತಗ್ಗಿಸಿದರು.
ಮಾರನೇ ದಿನ ತನುಜಾ ಹೋಟೆಲ್‌ನಿಂದ ಅವನ ಜೊತೆಗೆ ಮನೆಗೆ ಬರಲು ಯಾವ ಉತ್ಸಾಹವನ್ನೂ ತೋರಿಸಲಿಲ್ಲ. ತನ್ನ ಗೆಳತಿಯರನ್ನೆಲ್ಲ ಊಟಕ್ಕೆ ಕರೆದು, ಅವರೊಂದಿಗೆ ಕಾರ್ಡ್ಸ್ ಆಡುತ್ತಾ ತನ್ನದೇ ಲೋಕದಲ್ಲಿ ಇದ್ದುಬಿಟ್ಟಳು. ಮನೆಗೆ ಅವಳನ್ನು ಕರೆದೊಯ್ಯಲೆಂದು ಕಾದೂ ಕಾದೂ ಸಾಕಾದ ಆಕಾಶ್, ಅವಳ ಗೆಳೆತಿಯರೆದುರು ತಕ್ಷಣ ಹೊರಡೋಣವೆಂದು ಅವಸರಪಡಿಸಿದ.
ಠೇಂಕಾರದಿಂದ ಕಾಲ ಮೇಲೆ ಕಾಲು ಹಾಕಿಕೊಂಡು, “ನೋ ನೋ…. ನನ್ನ ಫ್ರೆಂಡ್ಸ್ ನೆಲ್ಲ ಬಿಟ್ಟು ಆ ಕೊಂಪೆಗೆ ಬಂದು ನಾನೀಗ ಏನು ಮಾಡಲಿ? ಇಲ್ಲಿ ನಿನಗೆ ಸರಿಹೋಗುತ್ತಿಲ್ಲವಾದರೆ ಮನೆಗೆ ಹೊರಟುಬಿಡು. ನೆನಪಿರಲಿ, ಸಂಜೆ ನಾವು ನೈಟ್ ಕ್ಲಬ್ಬಿಗೆ ಹೋಗಬೇಕು. ನಿನಗಾಗಿ ಕಾರು ಕಳುಹಿಸುತ್ತೇನೆ,” ಎಂದಳು.
ಅವನು ಒಬ್ಬನೇ ಮನೆಗೆ ಬಂದಾಗ, “ಇದೇನೋ ಆಕಾಶೂ ಒಂಟಿಯಾಗಿ ಬಂದಿರುವೆ? ತನುಜಾ ನಿನ್ನ ಜೊತೆ ಬರಲಿಲ್ವೇ?” ಲಲಿತಮ್ಮ ವಿಚಾರಿಸಿದರು.
“ಅವಳಿಗೆ ಸ್ವಲ್ಪ ಹುಷಾರಿಲ್ಲಮ್ಮ…. ಮಲಗಿದ್ದಳು, ನಾನು ಬಂದುಬಿಟ್ಟೆ,” ಎಂದ.
“ಏನಾಯಿತಪ್ಪ ಅವಳಿಗೆ? ಹುಷಾರಿಲ್ಲ ಅಂತೀಯ, ನೀನು ಅಲ್ಲೇ ಅವಳ ಜೊತೆ ಇರಬಾರದಿತ್ತೇ?” ಅವರ ಆತಂಕ ಕಡಿಮೆ ಆಗಿರಲಿಲ್ಲ.
“ಅಯ್ಯೋ, ಅಂಥಾದ್ದೇನಿಲ್ಲಮ್ಮ. ಅವಳ ಜೊತೆ ಅವಳ ಫ್ರೆಂಡ್ಸ್ ಇದ್ದಾರೆ.”
ಸಂಜೆ ಆಕಾಶ್ ಎಂದಿನಂತೆ ಸಾಧಾರಣ ಉಡುಪಿನಲ್ಲೇ ಸಿದ್ಧನಾಗಿ, “ಅಮ್ಮ, ತನು ಫ್ರೆಂಡ್ಸ್ ಗೋಸ್ಕರ ಕ್ಲಬ್‌ನಲ್ಲಿ ಪಾರ್ಟಿ ಇಟ್ಟುಕೊಂಡಿದ್ದಾಳೆ. ರಾತ್ರಿ ಊಟಕ್ಕಾಗಿ ನನಗೆ ಕಾಯಬೇಡಿ,” ಎಂದು ಹೇಳಿ ಕಾರು ಏರಿ ಹೋಟೆಲ್‌ಗೆ ಹೊರಟುಬಿಟ್ಟ.
ಅವನನ್ನು ಕಂಡೊಡನೆ ತನುಜಾಳ ಕೋಪ ಕೆರಳಿತು. “ಇದೇನು ತೀರಾ ಆರ್ಡಿನರಿ ಡ್ರೆಸ್‌ನಲ್ಲಿ ಬಂದಿದ್ದಿ? ನಿನ್ನ ಬಳಿ ಬೇರೆ ಸೂಟ್ ಇಲ್ಲದಿದ್ದರೆ, ಡ್ಯಾಡಿ ಮದುವೆಗೆ ಕೊಡಿಸಿದ್ದರಲ್ಲಿ ಒಂದನ್ನು ಹಾಕಿಕೊಂಡು ಬರಬಾರದಿತ್ತೇ? ನೈಟ್ ಕ್ಲಬ್‌ಗೆ ಯಾರಾದರೂ ಇಂಥ ಕಳಪೆ ಗೆಟಪ್‌ನಲ್ಲಿ ಹೋಗ್ತಾರೇನು?” ಅವಳು ಒಂದೇ ಸಮ ರೇಗಾಡಿದಳು.
“ಇಷ್ಟು ಸೆಖೆಯಲ್ಲಿ ನನಗೆ ಸೂಟ್ ಧರಿಸಲಾಗದು. ನಿನ್ನಂತೆ ನನಗೆ ಕ್ಲಬ್ಬು ಸುತ್ತಬೇಕೆಂಬ ಯಾವ ಆಸೆಯೂ ಇಲ್ಲ. ಬೇಕಾದರೆ ನೀನು ಒಬ್ಬಳೇ ಹೋಗು, ನಾನು ಬರಲ್ಲ.”
“ಅಂಥ ದುಬಾರಿ ಕ್ಲಬ್‌ಗೆ ಎಂಟ್ರಿ ಪಡೆಯಲು ನಿನಗೆ ಯೋಗ್ಯತೆ ಇದ್ದರೆ ತಾನೇ? ಈ ಕ್ಲಬ್‌ಗೆ ಮೆಂಬರ್ ಶಿಪ್ ಪಡೆಯಲು ನಿನ್ನ 8 ತಿಂಗಳ ಸಂಬಳ ಸುರಿಯಬೇಕಾಗುತ್ತೆ, ಗೊತ್ತೇನು?” ಅವಳ ಕೋಪ ಇನ್ನೂ ಆರಿರಲಿಲ್ಲ.
“ನನ್ನ ಕೆಲಸ, ಗುಣ, ನಡತೆ, ಸಂಬಳ, ಮನೆತನ ಎಲ್ಲ ನೋಡಿಕೊಂಡೇ ನಿಮ್ಮ ತಂದೆ ನನ್ನ ಬಳಿ ಕನ್ಯಾಸೆರೆ ಬಿಡಿಸಿಕೊಡಲು ಕೇಳಿಕೊಂಡು ಬಂದದ್ದು. ಮತ್ತೆ ಮತ್ತೆ ನೀನು ಹೀಗೆ ನನ್ನನ್ನು ನನ್ನ ಮನೆಯವರನ್ನೂ ಅಮಾನಿಸುತ್ತಿದ್ದರೆ ನನಗೆ ಸಹಿಸಲಾಗದು.”
“ನೀನು 1-2 ವರ್ಷವಲ್ಲ…. ಹೀಗೆ ಜೀವನವಿಡೀ ಸಹಿಸಿಕೊಳ್ಳುತ್ತಲೇ ಇರಬೇಕಾಗುತ್ತೆ. ಡ್ಯಾಡಿ ನನಗೆ ನೀಡಿರುವ ಶಿಕ್ಷೆಗೆ ಮೂಲಕಾರಣ ನೀನೇ! ತಮ್ಮ ಹಠದ ಕಾರಣ ಅವರು ನನ್ನ ಜೀವನ ಹಾಳು ಮಾಡಿದರು.”
“ಅದೆಂಥ ಹಠ? ನಿನಗೆ ಶಿಕ್ಷೆ ಆಗಲು ನಾನು ಹೇಗೆ ಕಾರಣವಾಗ್ತೀನಿ?” ಆಕಾಶನಿಗೆ ಆಶ್ಚರ್ಯವಾಯಿತು.
“ಸರಿಯಾಗಿ ಕೇಳಿಸಿಕೋ, ಇದನ್ನು ಅರ್ಥ ಮಾಡಿಕೊಂಡು ನಿನ್ನ ಲಿಮಿಟ್‌ನಲ್ಲಿ ನೀನಿರು. ನಾನು ರಾಜುವನ್ನೇ ಮದುವೆ ಆಗಬೇಕೂಂತಿದ್ದೆ. ನಾವಿಬ್ಬರೂ ಕಾಲೇಜಿನ ಮೊದಲ ದಿನಗಳಿಂದಲೇ ಕ್ಲೋಸ್ ಆಗಿದ್ದೆವು. ಅವನದು ಬೇರೆ ಜಾತಿ ಅಂತ ಡ್ಯಾಡಿ ಈ ಮದುವೆಗೆ ಒಪ್ಪಲಿಲ್ಲ. ಅವನು ನಿನ್ನಂತೆ ಗೂಶ್ಲು ಅಲ್ಲ, ಬಿಂದಾಸ್ ಹುಡುಗ!
“ಲೈಫ್ ಇರೋದೇ ಮಜಾ ಉಡಾಯಿಸಲಿಕ್ಕೆ ಅನ್ನೋನು, ಅದಕ್ಕೆ ಡ್ಯಾಡ್‌ಗೆ ಸರಿಹೋಗ್ತಿರಲಿಲ್ಲ. ನನ್ನ ಆಸ್ತಿ ಹೊಡೆಯಲೆಂದೇ ಅವನು ನನ್ನನ್ನು ಮದುವೆ ಆಗಲು ಒಪ್ಪಿದ್ದಾನೆಂಬುದು ಡ್ಯಾಡ್ ಅಭಿಪ್ರಾಯ. ನಾನು ಅವನನ್ನೇ ಮದುವೆ ಆಗುವುದಾದರೆ ತಮ್ಮ ಆಸ್ತಿಯಲ್ಲಿ ನಯಾ ಪೈಸೆ ಕೊಡುವುದಿಲ್ಲ ಅಂದುಬಿಟ್ಟರು. ಅವರದು ಸ್ವಯಾರ್ಜಿತ ಆಸ್ತಿಯಾದ್ದರಿಂದ, ನಾನು ಅವರೊಪ್ಪಿದ ನಿನ್ನಂಥ ಗೂಶ್ಲೂನ ಮದುವೆ ಆಗಬೇಕಾಯ್ತು.”
“ಅವನೆಂದರೆ ನಿನಗೆ ಅಷ್ಟು ಆಸೆ ಇರೋವಾಗ ನೀನು ಅವನನ್ನೇ ಕಟ್ಟಿಕೊಳ್ಳಬೇಕಿತ್ತು…. ಅಪ್ಪನ ಆಸ್ತಿ ಒದ್ದು ಹೋಗುವಷ್ಟು ನಿನಗೆ ಯೋಗ್ಯತೆ ಇರಲಿಲ್ಲವೇ?”
“ಇದೆಲ್ಲ ಸಿನಿಮಾಗಳಲ್ಲಿ ಹೇಳೋದು ಸುಲಭ, ಜೀವನದಲ್ಲಿ ಪಾಲಿಸೋದು ಕಷ್ಟ. ಒಮ್ಮೆ ಆಸ್ತಿ ಅನುಕೂಲಗಳ ಸುಖ ಅನುಭವಿಸಿದವರು ಅದನ್ನು ಬಿಟ್ಟೋರುಂಟೇ… ಬಿಟ್ಟು ಕೆಟ್ಟೋರುಂಟೇ? ನಿನ್ನಂಥರಿಗೆ ಹೈಫೈ ಲೈಫ್ ಸ್ಟೈಲ್ ಬಗ್ಗೆ ಏನು ಗೊತ್ತಾಗುತ್ತೆ ಬಿಡು.”
“ನಾನು ಇರುವುದರಲ್ಲಿ ಅಲ್ಪತೃಪ್ತ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ನಡೆಯುವವನು. ಮನುಷ್ಯನಿಗೆ ಸುಖ ಅಂತ ಸಿಗುವುದು ತನ್ನ ಕುಟುಂಬದ ಪ್ರೀತಿ ವಾತ್ಸಲ್ಯ ಪಡೆದುಕೊಂಡಾಗ ಮಾತ್ರ…. ನಿನಗೆ ಅದೆಂದೂ ಸಿಕ್ಕಿಲ್ಲ ಅಂತ ಕಾಣ್ಸುತ್ತೆ.”
“ಓ ಶಟಪ್! ನಿನ್ನಿಂದ ಲೆಕ್ಚರ್ ಕೇಳಲು ನಾನು ಸಿದ್ಧಳಿಲ್ಲ….. ನನಗೆ ಟೈಮೂ ಇಲ್ಲ. ನಿನ್ನ ಈ ಅವತಾರದಲ್ಲಿ ಯಾರೂ ನಿನ್ನನ್ನು ಆ ಕ್ಲಬ್‌ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದ್ದರಿಂದ ನೀನು ನನ್ನ ಜೊತೆ ಬರದೆ ಇರುವುದೇ ಉತ್ತಮ. ಅದೂ ಅಲ್ಲದೆ ಅಲ್ಲಿಗೆ ನಗರದ ಕಡು ಶ್ರೀಮಂತರು, ಸೆಲೆಬ್ರಿಟಿ ಲೆವೆಲ್‌ನವರು ಬರ್ತಾರೆ, ನಿನ್ನಂಥ ಕುಚೇಲನನ್ನು ನಾನು ಅವರಿಗೆ ಏನೆಂದು ಪರಿಚಯಿಸಲಿ? ನೀನೂ ಅಲ್ಲಿ ಕಂಫರ್ಟ್‌ಬಲ್ ಆಗಿರಲು ಸಾಧ್ಯವಿಲ್ಲ. ರಾಜೇಶ್ ಮತ್ತು ನನ್ನ ಇತರ ಫ್ರೆಂಡ್ಸ್ ನ್ನ ನೋಡಿ ನಿನಗೆ ಮತ್ತಷ್ಟು ಇನ್ ಫೀರಿಯಾರಿಟಿ ಕಾಂಪ್ಲೆಕ್ಸ್ ಹೆಚ್ಚಬಹುದು.”
ತನ್ನ ಮಾತು ಮುಗಿಸಿದ ತನುಜಾ, ಆ ಕೋಣೆಯಿಂದ ಹೊರಗೆ ಹೊರಟಳು. ತನುಜಾಳ ಮಾತುಗಳು ಅವನನ್ನು ಈಟಿಯಂತೆ ಇರಿದವು. ತನ್ನ ಎಷ್ಟು ಜನ ವಿದ್ಯಾರ್ಥಿಗಳು ಈಗ ಐಎಎಸ್ ಪರೀಕ್ಷೆ ಎದುರಿಸಿ ಅಧಿಕಾರಿಗಳಾಗಿದ್ದಾರೆ ಎಂಬುದು ಅವಳಿಗೆ ಗೊತ್ತಿಲ್ಲ. ಸಮಾಜದಲ್ಲಿ ತನ್ನ ಪ್ರತಿಷ್ಠೆ ಏನೆಂಬುದು ಅವಳಿಗೆ ತಿಳಿಯದು. ಇವಳನ್ನು ಮದುವೆಯಾಗಿ ತಾನು ಅತಿ ದೊಡ್ಡ ತಪ್ಪು ಮಾಡಿದೆ ಎನಿಸಿತು. ದಿನೇ ದಿನೇ ಅವಳು ತನಗೆ ಮಾತ್ರವಲ್ಲದೆ ತಾಯಿ, ತಂಗಿಯರು, ನೆಂಟರಿಷ್ಟರು ಎಲ್ಲರಿಗೂ ಅವಮಾನ ಮಾಡುವುದನ್ನೇ ತನ್ನ ಕರ್ತವ್ಯವೆಂದು ಕೊಂಡಿದ್ದಾಳೆ. ಇಂಥ ತಿರಸ್ಕಾರವನ್ನು ಜೀವನವಿಡೀ ಹೀಗೆ ಸಹಿಸುತ್ತಿರಬೇಕೇ?
ಈಗ ಅವನಿಗೆ ರಾಮರಾಯರು ತನ್ನಂಥ ಮಧ್ಯಮ ವರ್ಗದ ಸೀದಾಸಾದಾ ವ್ಯಕ್ತಿಯನ್ನು ಮಹಾಸ್ವಾರ್ಥಿಯಾದ ದುರಭ್ಯಾಸಗಳ ದಾಸಿಯಾದ ಮಗಳಿಗೆ ಏಕೆ ಅಳಿಯನನ್ನಾಗಿ ತಂದುಕೊಂಡರೆಂಬುದು ಚೆನ್ನಾಗಿ ಅರ್ಥವಾಯಿತು. ಮಧ್ಯಮ ವರ್ಗದ, ಆರ್ಥಿಕ ಸಂಕಷ್ಟದಲ್ಲಿರುವ, ಇಬ್ಬರು ತಂಗಿಯರ ಮದುವೆ ಆಗಬೇಕಿರುವ ತನ್ನಂಥ ಬಕರಾನೇ ಇದಕ್ಕೆ ಸರಿ ಎಂದು ನಿರ್ಧರಿಸಿದ್ದಾರೆ. ವರದಕ್ಷಿಣೆ, ವರೋಪಚಾರದ ಆಸೆಗೆ ಮರುಳಾಗಿ ಅಮ್ಮ ಹಿಂದೆಮುಂದೆ ಯೋಚಿಸದೆ ಈ ಮದುವೆಗೆ ಒಪ್ಪಿದರು.
ತನುಜಾಳ ಅಪಮಾನ ಸಹಿಸಿಕೊಂಡಿರುವುದೆಂದರೆ ಜೀವನವಿಡೀ ದುಃಖದಲ್ಲಿ ನರಳಬೇಕು ಎಂದರ್ಥ. ಈ 2 ದಿನಗಳಲ್ಲಿ ಅವನ ಜೊತೆಗೆ, ಮನೆಯವರ ಜೊತೆಗೆ ಅವಳು ನಡೆದುಕೊಂಡ ರೀತಿಯಾದರೂ ಎಂಥದು? ಕೇವಲ ಗಂಡ ಮಾತ್ರವೇ ಹೆಂಡತಿಯನ್ನು ಶೋಷಿಸುತ್ತಾನೆ ಎಂದವರು ಯಾರು? ಹೆಂಡತಿಯ ಇಂಥ ಚುಚ್ಚು ಮಾತಿನಿಂದ, ಎಲ್ಲರ ಮುಂದೆ ಮಾನ ಕಳೆಯುವುದರಿಂದ ಆಗುವ ಮಾನಸಿಕ ಶೋಷಣೆ ಕಡಿಮೆಯೇ? ತಾನೀಗ ಅವಳಿಂದ ವಿಚ್ಛೇದನ ಪಡೆದರೆ ಅದು ಮನೆಯಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಬಹುದು, ನಾಳೆ ತಂಗಿಯರ ಮದುವೆಗೆ ಈ ಕಾರಣದಿಂದ ತೊಂದರೆ ಆಗಬಹುದು. ಆ ಕಾರಣಕ್ಕೆ ಅಮ್ಮ ವಿಚ್ಛೇದನಕ್ಕೆ ಎಂದೂ ಒಪ್ಪಿಕೊಳ್ಳದೇ ಇರಬಹುದು. ಇದೇ ರೀತಿ ಅಸಮಂಜಸಕ್ಕೆ ಸಿಲುಕಿ ಅವನು ಯಾವಾಗ ನಿದ್ದೆಗೆ ಜಾರಿದನೋ ತಿಳಿಯಲಿಲ್ಲ.
ಬೆಳಗ್ಗೆ ಫೋನ್ ಸದ್ದು ಮಾಡಿದಾಗಲೇ ಅವನಿಗೆ ಎಚ್ಚರವಾದದ್ದು. ಅದಾಗಲೇ 8 ಗಂಟೆ ಆಗಿತ್ತು. ತನುಜಾ ಹಾಸಿಗೆಯಲ್ಲಿ ಇರಲಿಲ್ಲ. ಅದರರ್ಥ ಅವಳು ರಾತ್ರಿಯಿಡೀ ಕ್ಲಬ್ ನಲ್ಲೇ ಕಾಲ ಕಳೆದಿದ್ದಳು ಅಂತಾಯ್ತು. ಅಷ್ಟು ಹೊತ್ತಾದರೂ ಅವಳಿಗೆ ವಾಪಸ್ಸು ಬರಬೇಕು ಅನಿಸಿರಲಿಲ್ಲ.
ಫೋನ್ ಮಾಡಿದ್ದು ಅವನ ತಂಗಿ ವಿನುತಾ. ಆಕಾಶನ ಮಾತು ಕೇಳಿಸುತ್ತಲೇ, “ಅಣ್ಣಾ, ಇವತ್ತು ಅತ್ತಿಗೆ ಕೈಲಿ ಹಾಲು ಉಕ್ಕಿಸುವ ಶಾಸ್ತ್ರ ಇದೆ. ಅವರು ಮಾಡಬೇಕಾದ್ದೇನಿಲ್ಲ, ಹಾಲು ಉಕ್ಕಿದ ನಂತರ ಪಾತ್ರೆ ಕೆಳಗೆ ಇಳಿಸಿದರಾಯ್ತು. ಮಿಕ್ಕಿದ್ದೆಲ್ಲ ನಾವು ನೋಡಿಕೊಳ್ತೇವೆ. ಹೊಸ ಸೊಸೆ ಅಡುಗೆಮನೆ ಜವಾಬ್ದಾರಿ ವಹಿಸಿಕೊಂಡಳು ಅಂತ ಶಾಸ್ತ್ರ ಮಾಡುವ ವಿಧಾನವಿದು. ಇಬ್ಬರೂ ಬೇಗ ಬನ್ನಿ, ನೆಂಟರೆಲ್ಲ ಹಾಲು ಕುಡಿದು, ಊರಿಗೆ ಹೊರಡಲು ಕಾದಿದ್ದಾರೆ.”
“ಆಗಲಿ ಆದಷ್ಟು ಬೇಗ ಬರ್ತೀವಿ. ನಿನ್ನೆ ರಾತ್ರಿ ಪೂರ್ತಿ ಅವಳಿಗೆ ವಿಪರೀತ ತಲೆನೋವು. ಸುಸ್ತಾಗಿ ಮಲಗಿದ್ದಾಳೆ. ಅಮ್ಮನಿಗೆ ಹೇಳಿಬಿಡು,” ಎನ್ನುತ್ತಾ ತಕ್ಷಣ ತನುಜಾಳಿಗೆ ಫೋನ್ ಮಾಡಿದ.
“ಏನದು ನಿನ್ನ ಪ್ರಾಬ್ಲಂ? ಯಾಕೆ ಸುಮ್ನೆ ತೊಂದರೆ ಕೊಡ್ತಿದ್ದೀಯಾ? ಇಡೀ ರಾತ್ರಿ ಒಂದಿಷ್ಟೂ ನಿದ್ದೆ ಇಲ್ಲ. ಫ್ರೆಂಡ್ಸ್ ಎಲ್ಲಾ ಸೇರಿ ಬಲವಂತವಾಗಿ ಕುಡಿಸಿಬಿಟ್ರು. ಈಗಲಾದ್ರೂ ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡು,” ಎಂದು ಸಿಡುಕಿದಳು ತನುಜಾ.
“ನೀನು ಎಲ್ಲಿದ್ದರೂ ಸರಿ, ತಕ್ಷಣ ಹೋಟೆಲ್‌ಗೆ ಹೊರಟು ಬಾ. ನಾನಿಲ್ಲಿ ನಿನಗಾಗಿ ಕಾಯ್ತಿದ್ದೀನಿ.”
“ಸಾರಿ…. ಖಂಡಿತಾ ನಾನೀಗ ಬರುವ ಸ್ಥಿತಿಯಲ್ಲಿಲ್ಲ. ಸಂಜೆ ಹೊತ್ತಿಗೆ ಬರ್ತೀನಿ ಬಿಡು,” ಎನ್ನುತ್ತಾ ಫೋನ್ ಕಟ್ ಮಾಡಿದಳು.
ಎನ್‌ಕ್ವಯರಿಯಿಂದ ಫೋನ್ ಮಾಡಿದ ಜಾಗದ ವಿಳಾಸ ಪಡೆದು ಅವನು ಅಲ್ಲಿಗೆ ಹುಡುಕಿಕೊಂಡು ಬಂದಾಗ, ಬಾಗಿಲು ತೆರೆದು ಎದುರಿಗೆ ನಿಂತನು ರಾಜೇಶ್!
“ತನು ಎಲ್ಲಿದ್ದಾಳೆ……?” ರಾಜೇಶನ ಉತ್ತರಕ್ಕೂ ಕಾಯದೇ ಆಕಾಶ್ ಅವನ ಬೆಡ್‌ರೂಂ ಒಳಹೊಕ್ಕ. ಅಸ್ತವ್ಯಸ್ತ ಬಟ್ಟೆಗಳಲ್ಲಿ ತನುಜಾ ಹಾಸಿಗೆ ಮೇಲೆ ಪ್ರಜ್ಞೆ ಇಲ್ಲದವಳಂತೆ ಬಿದ್ದಿದ್ದಳು.
ಹಿಂದಿನಿಂದ ಬಂದ ರಾಜೇಶ್ ಅವಳ ಪರವಾಗಿ ಕ್ಷಮೆ ಕೇಳುವವನಂತೆ, “ಸಾರಿ…. ನಿನ್ನೆ ರಾತ್ರಿ ತನು ಹೆಚ್ಚು ಪೆಗ್ಸ್ ತೆಗೆದುಕೊಂಡಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ಖಂಡಿತಾ ಹೋಟೆಲ್‌ಗೆ ಕರೆತರುವುದು ಸಾಧ್ಯವಿರಲಿಲ್ಲ. ಹೀಗಾಗಿ ನಮ್ಮ ಮನೆಗೆ….”
“ಅದಕ್ಕೆ ನಿನ್ನ ಬೆಡ್‌ರೂಮಿಗೇ ಕರೆದುಕೊಂಡು ಬಂದ್ಯಾ? ಈಗಲೇ ಇವರಪ್ಪನಿಗೆ ಫೋನ್ ಮಾಡ್ತೀನಿ, ಆಗ ಗೊತ್ತಾಗುತ್ತೆ ನಿಮ್ಮಿಬ್ಬರ ಬಂಡವಾಳ ಅವರಿಗೆ,” ಆಕಾಶ್ ರಾಜೇಶನನ್ನು ಗದರಿಸಿಕೊಂಡ.
“ಫಾರ್ ಗಾಸ್ ಸೇಕ್, ದಯವಿಟ್ಟು ಹಾಗೆ ಮಾಡಬೇಡಿ. ಅವರು ತನುವನ್ನು ಜೀವಂತವಾಗಿರಲು ಬಿಡೋಲ್ಲ. ನಾನು ನಿಜ ಹೇಳ್ತಿದ್ದೀನಿ, ನಾನೇನೂ ತಪ್ಪು ಮಾಡಿಲ್ಲ. ಮುಂದೆ ಎಂದೂ ಹೀಗೆ ಆಗದಂತೆ ನಾನು ನೋಡಿಕೊಳ್ತೀನಿ, ದಟ್ಸ್ ಮೈ ಪ್ರಾಮಿಸ್!” ಎಂದ ರಾಜೇಶ್.
ಇವರಿಬ್ಬರ ಜೋರು ಮಾತುಗಳಿಂದ ತನುಜಾ ಎಚ್ಚರಗೊಂಡಳು. ಆಕಾಶನನ್ನು ಅಲ್ಲಿ ನೋಡುತ್ತಲೇ ಅವಳು ಕಿಟಾರನೇ ಕಿರುಚಿದಳು, “ಯೂ ಡರ್ಟಿ ಫೆಲೋ! ನನ್ನ ಬೆನ್ನ ಹಿಂದೆ ಇಂಥ ಪತ್ತೇದಾರಿಕೆ ಮಾಡಲು ನಾಚಿಕೆ ಆಗುವುದಿಲ್ಲವೇ? ಇಲ್ಲಿಯವರೆಗೂ ಹುಡುಕಿಕೊಂಡು ಬಂದ್ಯಾ?”
“ಇಡೀ ರಾತ್ರಿ ಮಾಯವಾಗಿದ್ದ ಹೆಂಡತಿಯನ್ನು ಹುಡುಕಿಕೊಂಡು ಗಂಡ ಬಂದಿದ್ದಾನೆ ಅಂದ್ರೆ ಅದು ಪತ್ತೇದಾರಿಕೆಯಲ್ಲ, ಕಾಳಜಿ ಅಂತಾರೆ! ತುಂಬಾ ಜಾಸ್ತಿ ಆಯ್ತು, ಮೊದಲು ನಡಿ ಇಲ್ಲಿಂದ…. ಇಲ್ಲಾಂದ್ರೆ ನಿಮ್ಮ ತಂದೆಯವರನ್ನು ಕರೆಸಿ ಪಂಚಾಯಿತಿ ಮಾಡಬೇಕಾಗುತ್ತೆ.”
“ಡ್ಯಾಡಿಗೆ ಏನಾದ್ರೂ ಹೇಳಿದ್ರೆ…. ಹುಷಾರ್! ಡೊಮೆಸ್ಟಿಕ್ ವಾಯ್ಲೆನ್ಸ್, ವರದಕ್ಷಿಣೆ ಕಿರುಕುಳ ಅಂತ ನಿನ್ನ ಮನೆಯವರನ್ನೆಲ್ಲ ಒಳಗಡೆ ಹಾಕಿಸಿಬಿಡ್ತೀನಿ! ನನ್ನ ತಂಟೆಗೆ ಎಂದೂ ಬರಬೇಡ, ನಾನು ಮನಸ್ಸಿಗೆ ಬಂದ ಹಾಗೆ ಇರ್ತೀನಿ. ಈ ರೀತಿ ಗಂಡ ಅಂತ ಜೋರು ಮಾಡಿಕೊಂಡು ಬಂದ್ರೆ ಸುಮ್ಮನಿರುವವಳಲ್ಲ, ನಾನು ನಿನ್ನ ಗುಲಾಮಳಲ್ಲ ಅಂತ ಚೆನ್ನಾಗಿ ನೆನಪಿಟ್ಕೋ!”
“ತನು…. ಪ್ಲೀಸ್ ಸುಮ್ಮನಿರು. ಡೋಂಟ್ ಕ್ರಿಯೇಟ್ ಎ ಸೀನ್. ಆಕಾಶ್ ನಿನಗಾಗಿ ಬಹಳ ಕನ್‌ಸರ್ನ್ ಹೊಂದಿದ್ದಾರೆ. ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ನೀನೀಗ ಅವರ ಜೊತೆ ಹೋಗಲೇಬೇಕು,” ಎಂದು ರಾಜೇಶ್ ಆಗ್ರಹಪಡಿಸಿದ.
ಅಂತೂ ತೂರಾಡುತ್ತಾ ಬಾಯಿಗೆ ಬಂದಂತೆ ಅವನನ್ನು ಬೈಯುತ್ತಾ, ತನುಜಾ ಗಂಡನ ಜೊತೆ ಹೋಟೆಲ್ ತಲುಪಿದಳು.
ಕೋಣೆ ತಲುಪಿ 2 ಗ್ಲಾಸ್ ನಿಂಬೆ ಜೂಸ್ ಕುಡಿದ ಮೇಲೆ ಅವಳ ಸ್ಥಿತಿ ಸುಧಾರಿಸಿತು. ಅವಳನ್ನು ಅದೇ ಸ್ಥಿತಿಯಲ್ಲಿ ಮನೆಗೆ ಕರೆದೊಯ್ಯಲು ಆಕಾಶನಿಗೆ ಧೈರ್ಯ ಬರಲಿಲ್ಲ. ಮನೆಗೆ ಫೋನ್‌ಮಾಡಿ, ಅವಳ ಆರೋಗ್ಯ ಹದಗೆಟ್ಟಿರುವುದರಿಂದ ತಾವಿಬ್ಬರೂ ಸಂಜೆ ಮನೆಗೆ ಬರ್ತೀವಿ ಎಂದು ಸೂಚನೆ ನೀಡಿದ.
ಸಂಜೆ ತನುಜಾ ಎಂದಿನಂತೆ ಸರಿಹೋದಾಗ, ಆಕಾಶ್ ಅವಳಿಗೆ ಅನುನಯದಿಂದ, “ತನು, ಬೆಳಗ್ಗಿನಿಂದ ಎಲ್ಲರೂ ನಿನಗಾಗಿ ಮನೆಯಲ್ಲಿ ಕಾಯುತ್ತಿದ್ದಾರೆ. ಹೊಸ ಸೊಸೆ ಕೈಲಿ ಹಾಲುಕ್ಕಿಸಿ ಎಲ್ಲರಿಗೂ ಹಂಚುವ ಶಾಸ್ತ್ರವಿದೆ. ನೀನು 2 ನಿಮಿಷ ಗ್ಯಾಸ್ ಮುಂದೆ ನಿಂತು ಆ ಪಾತ್ರೆ ಇಳಿಸಿಬಿಡು ಸಾಕು.”
“ಏನಂದೆ? ನಾನೂಂದ್ರೇನು….. ಒಲೆ ಮುಂದೆ ನಿಂತು ಪಾತ್ರೆ ಇಳಿಸೋದು ಅಂದ್ರೇನು? ಇಂಥ ಬೇಸಿಗೆಯಲ್ಲಿ ಅಡುಗೆಮನೆಗೆ ಕಳುಹಿಸಿ, ಗ್ಯಾಸ್ ಸಿಲಿಂಡರ್ ಬರ್ಸ್ಟ್ ಮಾಡಿಸುವ ದುರುದ್ದೇಶ ತಾನೇ? ನಾನು ಸತ್ತರೆ ನಮ್ಮಪ್ಪನ ಆಸ್ತಿ ಪಡೆದು, ಇನ್ನೊಬ್ಬಳನ್ನು ಕಟ್ಟಿಕೊಳ್ಳೋಣ ಅಂತ ಪ್ಲಾನ್ ಮಾಡಿದ್ದೀಯಾ?”
“ಥೂ…ಥೂ…! ಏನು ನಿನ್ನ ಮಾತುಗಳು…. ಇಂಥ ನೀಚ ವಿಚಾರ ನಮ್ಮ ಮನೆಯಲ್ಲಿ ಯಾರಿಗೂ ಹೊಳೆಯುವುದೂ ಇಲ್ಲ. ಇದು ನಮ್ಮ ಮನೆಯ ಒಂದು ಶಾಸ್ತ್ರ. ಬಂದ ನೆಂಟರೆಲ್ಲರೂ ಹೊಸ ಸೊಸೆಯ ಕೈಲಿ ಹಾಲು ಕುಡಿದು ಅವಳನ್ನು ಆಶೀರ್ದಿಸುತ್ತಾರೆ, ಉಡುಗೊರೆ ನೀಡುತ್ತಾರೆ. ಬೇಗ ರೆಡಿಯಾಗು, ಹೊರಡೋಣ.”
“ಥೂ…. ಶಾಸ್ತ್ರ ಸಂಪ್ರದಾಯ ಬಿಟ್ಟರೆ ಆ ನಿಮ್ಮ ದರಿದ್ರ ಮನೆಯಲ್ಲಿ ಬೇರೇನೂ ಇಲ್ಲವೇ? ಅಡುಗೆಮನೆ ಇರಲಿ ನಿಮ್ಮ ಆ ದರಿದ್ರ ಕೊಂಪೆಗೆ ಕಾಲಿಡಲಿಕ್ಕೂ ನನಗೆ ಹೇಸಿಗೆ ಅನ್ಸುತ್ತೆ. ನನ್ನಂಥ ಕೋಟ್ಯಧೀಶರ ಮಗಳ ಕೈಲಿ ಹಾಲು ಬಿಸಿ ಮಾಡಿ ಕುಡಿಯದಿದ್ದರೆ ನಿನ್ನ ನೆಂಟರಿಗೆಲ್ಲ ಲಕ್ವಾ ಹೊಡೆಯುದಂತೋ? ನೆನಪಿರಲಿ! ನಾನು ನಗರದ ಕೋಟ್ಯಧಿಪತಿ ರಾಮರಾಯರ ಒಬ್ಬಳೇ ಮಗಳು. ಇದುವರೆಗೂ ಯಾರೂ ನನ್ನೆದುರು ಜೋರಾಗಿ ಮಾತನಾಡಿದ್ದಿಲ್ಲ, ಜುಜುಬಿ ನಿಮ್ಮಮ್ಮ ನನಗೆ ಆರ್ಡರ್ ಮಾಡ್ತಾಳೋ? ಕಂಬಿ….. ಕಂಬಿ…. ಎಣಿಸಬೇಕಾಗುತ್ತೆ ಹುಷಾರ್!”
“ಏ…. ನೀನೂ ಒಂದು ಮಾತು ನೆನಪಿಟ್ಟುಕೋ. ನನ್ನ ಬಳಿ ಮದುವೆ ಪ್ರಸ್ತಾಪ ಹಿಡಿದು ಬಂದವರು ಅದೇ ನಿಮ್ಮ ಕೋಟ್ಯಧಿಪತಿ ತಂದೆ… ನನ್ನ ಮನೆ ಬಾಗಿಲಿಗೆ ಬಂದು ಕಾಲು ತೊಳೆದು ಕನ್ಯಾದಾನ ಮಾಡ್ತೀನಿ ಅಂತ ಅವರಾಗಿ ಕೇಳಿಕೊಂಡರೆ ಹೊರತು ನಿನ್ನ ಲಫಂಗ ಬಾಯ್‌ಫ್ರೆಂಡ್ಸ್ ತರಹ ನಿನ್ನ ಹಿಂದೆ ನಾಯಿಯಂತೆ ಅವೆದವನಲ್ಲ ನಾನು! ನಮ್ಮ ನೆಂಟರೆಲ್ಲರೂ ದೂರದೂರುಗಳಿಂದ ಬಂದಿದ್ದಾರೆ. ಮರ್ಯಾದೆಯಾಗಿ ಹೋಗಿ ಅವರನ್ನು ಕಳುಹಿಸಿಕೊಡೋಣ.”
“ಜಸ್ಟ್ ಶಟಪ್! ಆ ದರಿದ್ರ ಜನ ನಿನ್ನ ನೆಂಟರೇ ಹೊರತು ನನ್ನ ಎಡಗಾಲಿನ ಉಂಗುಷ್ಟ ಕಾಣುವ ಯೋಗ್ಯತೆಯೂ ಉಳ್ಳವರಲ್ಲ… ಅವುಗಳನ್ನು ಕಟ್ಟಿಕೊಂಡು ನನಗೇನೂ ಆಗಬೇಕಿಲ್ಲ. ನಿನ್ನ ಈ ಹಾಳು ಭಾಷಣ ನಿಲ್ಲಿಸಿ ಅವರ ಬಳಿಗೆ ಹಾರಿಹೋಗು. ಸಂಜೆ ನಾನೊಂದು ಬರ್ತ್‌ಡೇ ಪಾರ್ಟಿಗೆ ಹೋಗಬೇಕಿದೆ. ಈಗಿನಿಂದ ತಯಾರಾದರೆ 8 ಗಂಟೆಗೆ ಹೋಗಿ ಸೇರಬಹುದು,” ಎನ್ನುತ್ತಾ ತನ್ನ ಮೇಕಪ್ ಶುರು ಮಾಡಿದಳು. ಇನ್ನಷ್ಟು ಹೀನಾಯವಾದ ಮಾತುಗಳನ್ನು ಕೇಳಿಸಿಕೊಳ್ಳಲಾರದೇ ಆಕಾಶ್ ಅಲ್ಲಿಂದ ಮನೆಗೆ ಹೊರಟ. ಅವನು ಒಬ್ಬನೇ ವಾಪಸ್ಸು ಬಂದುದನ್ನು ಕಂಡು ಲಲಿತಮ್ಮ ಆತಂಕಗೊಂಡರು. ಅವರು ಏನಾದರೂ ವಿಚಾರಿಸುವ ಮೊದಿ ಕಮಾಕ್ಷತ್ತೆ, “ಆಕಾಶೂ…. ಅದ್ಯಾಕೋಪ್ಪ, ನಿನ್ನ ಹೆಂಡತಿಗೆ ನಮ್ಮಗಳ ತಲೆ ಕಂಡರೇನೇ ಆಗೋಲ್ಲ ಅನಿಸುತ್ತೆ. ಅವಳ ಕೈಲಿ ಹಾಲು ಕುಡಿದಷ್ಟೇ ತೃಪ್ತಿ ಆಯ್ತು ಬಿಡು, ನಾವಿನ್ನು ಬರ್ತೀವಪ್ಪ…. ಅಲ್ಲಲ್ಲ ಹೋಗ್ತೀವಪ್ಪ, ಮತ್ತೆ ಈ ಮನೆಗೆ ಬಂದರೆ ಅವಳು ಮುಖದ ಮೇಲೆಯೇ ಬಾಗಿಲು ಹಾಕಬಹುದು,” ಎಂದು ಹೊರಡಲು ಎದ್ದರು. ಬೇರೆ ನೆಂಟರೂ ಅವರನ್ನು ಹಿಂಬಾಲಿಸಿದರು.
“ಅತ್ತೆ…. ಚಿಕ್ಕಪ್ಪ…. ಮಾವ….. ದೊಡ್ಡಮ್ಮ….” ಎಂದು ಅವನು ಕರೆಯುತ್ತಿದ್ದರೂ ಅವರೆಲ್ಲ ಬಸ್ಸಿಗೆ ತಡವಾಗುತ್ತದೆಂದು ಹೊರಟೇಹೋದರು.
“ಇದೇನೋ ಆಕಾಶೂ….. ಈ ಹುಡುಗಿಯಿಂದ ನಮಗಿನ್ನೂ ಅದೆಷ್ಟು ಅವಮಾನ ಆಗಬೇಕಿದೆಯೋ?” ಲಲಿತಮ್ಮ ಕಣ್ಣಿಗೆ ಸೆರಗು ಒತ್ತಿಕೊಂಡರು. ಕವಿತಾ, ವಿನುತಾ ಅವರನ್ನು ಸಮಾಧಾನಪಡಿಸುತ್ತಾ ಒಳಗೆ ಕರೆದುಕೊಂಡು ಹೊರಟರು.
ಅಷ್ಟರಲ್ಲಿ ಮನೆ ಮುಂದೆ ಕಾರು ಬಂದಿತು. ಅದರಿಂದ ಫುಲ್ ಸೂಟ್ ಧರಿಸಿದ್ದ ರಾಮರಾಯರು ಇಳಿದು ಬಂದು ಅಳಿಯನನ್ನು ವಿಚಾರಿಸಿಕೊಂಡರು. ಎಂದಿನ ಕುಶಲೋಪರಿ ನಂತರ ರಾಯರು ಅವನ ಕೈಗೆ ಬೀಗದ ಕೈ ಕೊಡುತ್ತಾ, “ಮಿ. ಆಕಾಶ್, ನಿಮಗೂ ನಮ್ಮ ತನುಗೂ ಹೊಂದುವಂಥ ಒಂದು ಹೊಸ ಬಂಗಲೆ ಖರೀದಿಸಿ, ಇವತ್ತೇ ಅವಳ ಹೆಸರಲ್ಲಿ ರೆಜಿಸ್ಟರ್ ಮಾಡಿಸಿದ್ದೇನೆ. ಇದೇ ಆ ಬೀಗದ ಕೈ. ತೆಗೆದುಕೊಳ್ಳಿ, ನಿಮ್ಮ ಬಟ್ಟೆ ಬರೆಗಳೇನಿದ್ದರೂ ಪ್ಯಾಕ್ ಮಾಡಿಕೊಳ್ಳಿ. ನಾವೀಗಲೇ ಅಲ್ಲಿಗೆ ಹೋಗೋಣ. ತನು ಪಾರ್ಟಿ ಮುಗಿಸಿಕೊಂಡು ಅಲ್ಲಿಗೇ ಬರ್ತಾಳಂತೆ,” ಎಂದು ಆರ್ಡರ್ ನೀಡಿದರು.
“ಸರ್, ನಿಮಗೆ ಗೊತ್ತಿರುವಂತೆ ನನಗೆ ತಂದೆ ಇಲ್ಲ. ಮೊದಲಿನಿಂದಲೂ ಅಮ್ಮ ನನ್ನನ್ನು ಹೊತ್ತು ಹೆತ್ತು ಸಾಕಿಬೆಳೆಸಿ ಇಂದು ಈ ಮಟ್ಟಕ್ಕೆ ಬರುವಂತೆ ಮಾಡಿದ್ದಾರೆ. ನನ್ನ ಹೆಗಲ ಮೇಲೆ ಒಡಹುಟ್ಟಿದ ಇಬ್ಬರು ತಂಗಿಯರ ಜವಾಬ್ದಾರಿ ಇದೆ. ಇವರನ್ನೆಲ್ಲ ನಡುನೀರಿನಲ್ಲಿ ಕೈಬಿಟ್ಟು ನಿಂತ ಕಾಲ ಮೇಲೆ ನಾನು ಈ ಮನೆ ತೊರೆದು ನೀವು ಹೇಳಿದ ಆ ಬಂಗಲೆಗೆ ಬಂದುಬಿಡಲೇ?”
“ಆಯ್ತಪ್ಪ…. ನೀವು ಹೇಳುತ್ತಿರುವುದು ನನಗೂ ಗೊತ್ತಾಯ್ತು. ಆದರೆ ಏನು ಮಾಡುವುದು? ಮೊದಲಿನಿಂದಲೂ ನನ್ನ ಒಬ್ಬಳೇ ಮಗಳು ಅತಿ ಮುದ್ದಿನಿಂದ ಬೆಳೆದವಳು. ನಾನು ಅವಳ ಎಲ್ಲಾ ಆಸೆಗಳನ್ನೂ ಈಡೇರಿಸುತ್ತಾ ಬೆಳೆಸಿದೆ. ಮಹಾ ಹಠಮಾರಿ ಹುಡುಗಿ. ಈ ತುಂಬಿದ ಮನೆಯಲ್ಲಿ ಅವಳಿಗೆ ಉಸಿರು ಕಟ್ಟಿದ ಹಾಗೆ ಆಗುತ್ತದಂತೆ. ಹೀಗಾಗಿ ತಾನು ಸಂಸಾರ ನಡೆಸಲು ಪ್ರೈವೆಸಿ ಬೇಕು ಅಂತಾಳೆ ನೀವೇನೂ ಯೋಚಿಸಬೇಡಿ. ಆ ಬಂಗಲೆ ಫುಲ್ ಫರ್ನಿಶ್ಡ್ ಆಗಿದೆ. ಅಡುಗೆಯವರು, ಆಳುಕಾಳು, ಹೊಸ ಕಾರು, ಡ್ರೈವರ್ ಎಲ್ಲ ರೆಡಿ ಇದೆ. ನೀವು ಬಂದು ಅಲ್ಲಿ ನೆಲೆಸುವುದಷ್ಟೇ ಬಾಕಿ.
“ನಿಮ್ಮ ಮನೆಯವರ ಯೋಚನೆ ಮಾಡಬೇಡಿ. ಇಲ್ಲಿ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಟ್ಟು, ಮನೆ ಖರ್ಚಿಗೆ ತಿಂಗಳಿಗೆ 50 ಸಾವಿರ ಕೊಟ್ಟು, ನಿಮ್ಮಿಬ್ಬರು ತಂಗಿಯರ ಮದುವೆಯನ್ನೂ ಒಂದೇ ಮುಹೂರ್ತದಲ್ಲಿ ಮುಂದಿನ ತಿಂಗಳೊಳಗೆ ಮುಗಿಸಿಬಿಡೋಣ. ಅಮ್ಮ, ನೀವೇನಂತೀರಿ?” ಎಂದು ಲಲಿತಮ್ಮನವರನ್ನು ಕೇಳಿದರು.
ತಾವು ಏನೂ ಕೇಳದೆಯೇ ಎಲ್ಲ ಕ್ಷಣ ಮಾತ್ರದಲ್ಲಿ ನಡೆದುಹೋಗುತ್ತಿರುವುದನ್ನು ನೋಡಿ ಅವರಿಗೆ ನಂಬಲೇ ಆಗಲಿಲ್ಲ. “ಆಗಲಿ, ಹಿರಿಯರು ನೀವು…. ಪ್ರಪಂಚ ಕಂಡವರು, ಕಷ್ಟಸುಖ ತಿಳಿದವರು…. ಮಗ, ಸೊಸೆ ಆಗಾಗ ಇಲ್ಲಿಗೂ ಬಂದುಹೋಗುತ್ತಿರಲಿ ಅಂತ ಅಷ್ಟೆ,” ಎಂದು ತಮ್ಮ ಒಪ್ಪಿಗೆ ಸೂಚಿಸಿದರು. ಅವನ ತಂಗಿಯರಿಗಂತೂ ಏನನ್ನೂ ನಂಬಲು ಆಗಲೇ ಇಲ್ಲ. ಆದರೆ ಆಕಾಶನ ನಿರ್ಣಯವೇ ಬೇರೆ ರೀತಿ ಇತ್ತು. ಅವನು ದೃಢವಾಗಿ ಒಂದೇ ಮಾತಿನಲ್ಲಿ ಹೇಳಿದ, “ದಯವಿಟ್ಟು ಕ್ಷಮಿಸಿ ಸರ್, ಹಾಗಿದ್ದರೆ ನೀವು ಮೊದಲೇ ಯಾರೂ ಇಲ್ಲದ ಒಬ್ಬ ಅನಾಥ ಹುಡುಗನನ್ನು ನೋಡಿ ಮನೆ ಅಳಿಯನನ್ನಾಗಿ ಮಾಡಿಕೊಳ್ಳಬೇಕಿತ್ತು. ನನ್ನಂಥ ತುಂಬಿದ ಮನೆ ಹುಡುಗನಿಗೆ ಕೊಡಬಾರದಿತ್ತು.”
“ಅದು ಹಾಗಲ್ಲಪ್ಪ…. ಆಕಾಶ್ ನೀವೆಂಥ ಮೇಧಾವಿ, ಮುಂದೆ ನನ್ನ ಬಿಸ್‌ನೆಸ್ ನೋಡಿಕೊಳ್ಳುವುದರಲ್ಲೂ ಎಂಥ ಬೆಸ್ಟ್ ಆಗಬಲ್ಲಿರಿ ಅಂತ ನನಗೆ ಗೊತ್ತು. ನೀವಲ್ಲದೆ ನನ್ನ ಸಮಸ್ತ ಆಸ್ತಿಗೂ ಬೇರಾರೂ ಉತ್ತರಾಧಿಕಾರಿ ಇಲ್ಲ. ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳಬೇಡಿ. ನನ್ನ ಮಗಳು ಸ್ವಲ್ಪ ಎಳಸು, ಮದುವೆ ಆಗಿಹೋಯ್ತಲ್ಲ…. ಸ್ವಲ್ಪ ದಿನಗಳಲ್ಲೇ ನಿಮಗೆ ಅಡ್ಜಸ್ಟ್ ಆಗಿಬಿಡ್ತಾಳೆ. ನಿಮ್ಮ ಬೇರೆ ಡಿಮ್ಯಾಂಡ್ಸ್ ಏನಿದ್ದರೂ ಹೇಳಿ, ಎಷ್ಟು ಲಕ್ಷ ಖರ್ಚಾದರೂ ಸರಿ, ಅದನ್ನೆಲ್ಲ ನಾನು ನಡೆಸಿಕೊಡ್ತೀನಿ!”
“ಇದರರ್ಥ….. ನಿಮಗೆ ನಿಮ್ಮ ಮಗಳ ಎಲ್ಲಾ ದುರ್ಗುಣಗಳೂ ತಿಳಿದಿತ್ತು ಅಂತ….. ಹೀಗಾಗಿಯೇ ನನ್ನಂಥ ಅಮಾಯಕನನ್ನು ಅಳಿಯನನ್ನಾಗಿ ಮಾಡಿಕೊಂಡು ನಿಮ್ಮ ಜವಾಬ್ದಾರಿಯನ್ನು ನನಗೆ ವರ್ಗಾಯಿಸಲು ಯತ್ನಿಸಿದಿರಿ. ಅದಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡುತ್ತಿದ್ದೀರಿ. ದುರ್ಗುಣಗಳ ಅಪರಾವತಾರವಾದ ನಿಮ್ಮ ಮಗಳು ತಾನೇನು ಅಂತ 2-3 ದಿನಗಳಲ್ಲೇ ನಿರೂಪಿಸಿದ್ದಾಳೆ.
“ಅವಳು ಬಯಸುವಂತೆ ಅವಳನ್ನು ಆ ರಾಜೇಶನಿಗೆ ಕೊಟ್ಟು ಮರುಮದುವೆ ಮಾಡಿಸಿ. ಸ್ವಾಭಿಮಾನಿಯಾದ ನಾನು…. ನನ್ನ ಮಾನ, ಮರ್ಯಾದೆ, ಕೆಲಸ, ಮನೆ, ನನ್ನವರು ಎಲ್ಲವನ್ನೂ ಬಿಟ್ಟು ನಿಮ್ಮ ಹಣಕ್ಕಾಗಿ ನಾಯಿಯಂತೆ ಹಿಂಬಾಲಿಸಲಾರೆ. ಆ ತರಹ ನಾನು ಬಂದದ್ದೇ ಆದರೆ, ನಿಮ್ಮಿಬ್ಬರ ದೃಷ್ಟಿಯಲ್ಲಿ ಎಷ್ಟು ಚೀಪ್ ಆಗ್ತೀನಿ ಅಂತ ನನಗೆ ಚೆನ್ನಾಗಿ ಗೊತ್ತು.”
“ರಾಜೇಶ್…. ಅಂಥದ್ದೇನೂ ಇಲ್ಲ…. ಅವನು ಅವಳ ಕ್ಲಾಸ್‌ಮೇಟ್ ಅಷ್ಟೇ…..”
“ಸಾರಿ ಸರ್….” ಎಂದು ಅಂದು ನಡೆದದ್ದು 3 ದಿನಗಳ ಅವಳ ವ್ಯವಹಾರ ಎಲ್ಲನ್ನೂ ವಿವರಿಸಿದ ಆಕಾಶ್, “ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ನಿಮ್ಮ ಕೋರಿಕೆ ನೆರವೇರಿಸಲಾರೆ. ನಿಮ್ಮ ಉತ್ತರಾಧಿಕಾರಿ ಆಗುವ ಯಾವ ದುರಾಸೆಯೂ ನನಗಿಲ್ಲ. ಹೋಟೆಲ್‌ನಲ್ಲಿ ತಂಗಿರುವ ನಿಮ್ಮ ಮಗಳು ದಿನಕ್ಕೊಬ್ಬರ ತೋಳಿನಲ್ಲಿ ಒರಗಿ ಕಂಡವರ ಬೆಡ್‌ರೂಮಿಗೆ ಹೋಗುವ ಬದಲು, ಆ ರಾಜೇಶನ ಜೊತೆ ನೀವು ಹೇಳಿದ ಆ ಹೊಸ ಬಂಗಲೆಯಲ್ಲೇ ಇರಲಿ. ನಾನು ಈ ಮದುವೆ ಸಿಂಧುವೇ ಅಲ್ಲ, `ನೋ ಮ್ಯಾರೇಜ್‌ಸರ್ಟಿಫಿಕೇಟ್’ಗೆ ಸಹಿ ಮಾಡಿಕೊಡ್ತೀನಿ. ಕಾನೂನುರೀತ್ಯಾ ಈ ಬಂಧನದಿಂದ ನಿಮ್ಮ ಮಗಳಿಗೆ ಮುಕ್ತಿ ಕೊಡಿಸಿ. ನನ್ನನ್ನೂ, ನಮ್ಮ ಮನೆಯವರನ್ನೂ ನೆಮ್ಮದಿಯಾಗಿ ಇರಲು ಬಿಟ್ಟುಬಿಡಿ. ನೀವು ಹೇಳು ಎಲ್ಲಾ ಪತ್ರಗಳಿಗೂ ಸಹಿ ಮಾಡಿಕೊಡ್ತೀನಿ. ಅವಳ ಭವಿಷ್ಯದ ಜೀವನಕ್ಕೆ ನಾನೆಂದೂ ತೊಡಕಾಗಲಾರೆ.”
“ಆಕಾಶೂ, ಏನು ಹೇಳ್ತಿದ್ದೀಯಾ…. ಮನೆ ಮುಂದಿನ ತೋರಣ ಸಹ ಬಾಡಿಲ್ಲ…. ಆಗಲೇ ಮದುವೆ ಮುರಿಯುವ ಮಾತು ಆಡಬೇಡ….” ಲಲಿತಮ್ಮ ಸಮಾಧಾನಿಸಿದರು.
“ತೋರಣ ಬಾಡಿಲ್ಲ…. ನನ್ನ ಹೃದಯ ಬೆಂದು ಸುಟ್ಟು ಕರಕಲಾಗಿದೆ ಕಣಮ್ಮ…. ಈ 3 ದಿನಗಳಲ್ಲಿ ನಾನು ಅನುಭವಿಸಿದ ಯಮಯಾತನೆ ನನ್ನ ಶತ್ರುಗಳಿಗೂ ಬೇಡ. ಮೊದಲು ಅವರು ಕೊಟ್ಟಿರುವ ವರದಕ್ಷಿಣೆ ಹಣ, ಒಡವೆ ವಸ್ತ್ರ, ವರೋಪಚಾರದ ವಸ್ತು, ಆ ಎ.ಸಿ.ಗಳು ಎಲ್ಲವನ್ನೂ ವಾಪಸ್ಸು ಕೊಟ್ಟುಬಿಡು.
“ದಯವಿಟ್ಟು ನನ್ನನ್ನು ಕ್ಷಮಿಸಿ ಸರ್, ನನ್ನ ಈ ಮಾತುಗಳು ನಿಮಗೆ ನೋವು, ನಿರಾಸೆ ತರಬಹುದು. ಆದರೆ ಜೀವನದುದ್ದಕ್ಕೂ ಅವಳ ಗುಲಾಮನಾಗಿ ನಿಮ್ಮ ಮನೆ ಆಸ್ತಿ ಕಾಯುವ ನಾಯಿ ಆಗಲಾರೆ. ಈಗಲೇ ಇವೆಲ್ಲ ವಸ್ತು ತೆಗೆದುಕೊಂಡು, ನಾಳೆ ನಿಮ್ಮ ಲಾಯರ್ ಜೊತೆ ಬಂದು ಅದೇನೇನು ಬೇಕೋ ಎಲ್ಲಾ ಪತ್ರಗಳಿಗೂ ನನ್ನ ಸಹಿ ಹಾಕಿಸಿಕೊಳ್ಳಿ. ಗುಡ್ ಬೈ!” ಎಂದು ಹೇಳಿ ಹೊರಗೆ ಹೊರಟ.
“ಅಮ್ಮ, ನಾನು ಹತ್ತಿರದ ದೇವಾಲಯಕ್ಕೆ ಹೋಗಿ ರಾತ್ರಿ 8 ಗಂಟೆ ಹೊತ್ತಿಗೆ ಬರ್ತೀನಿ. ಅವರಿಗೆ ಸೇರಬೇಕಾದ್ದನ್ನು ಕೊಟ್ಟು ಕಳುಹಿಸಿಬಿಡು,” ಎಂದು ಮತ್ತೊಮ್ಮೆ ತಾಯಿಗೆ ಹೇಳಿದ. ಲಲಿತಮ್ಮ ಕಕ್ಕಾಬಿಕ್ಕಿಯಾಗಿ ರಾಯರಿಗೆ ಏನೋ ಸಮಾಧಾನ ಹೇಳಲೆತ್ನಿಸಿದರು. ತಮ್ಮನ್ನು ಬಿಟ್ಟು ದೂರ ಹೊರಟ ಆಕಾಶನನ್ನು ಹೆಮ್ಮೆಯಿಂದ ದಿಟ್ಟಿಸುತ್ತಾ, `ನನಗೆ ಇಂಥ ಒಬ್ಬ ಮಗ ಇರಬೇಕಿತ್ತು!’ ಎಂದು ರಾಯರು ತಾವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರಟೇಬಿಟ್ಟರು.