“ಶಮ್ಮೀ, ದೀಪ್ತಿ ಬಂದಿದ್ದಾಳೆ ನೋಡು.” ಅಮ್ಮನ ದನಿ ಕೇಳಿ ಛಂಗನೆ ಹಾರಿ ಬಂದೆ. ನನ್ನ ಆಪ್ತ ಗೆಳತಿ ದೀಪ್ತಿಯನ್ನು ನೋಡಲು.

“ಬಾರೇ, ಯಾವಾಗ್ಬಂದೆ ಮೈಸೂರಿಂದ? ನಾನು ಹೋದ ವಾರಾನೇ ಬಂದೆ. ನೀನು ಊರಲ್ಲಿರದೇ ಹೋದದ್ದು ಎಷ್ಟು ಬೇಸರವಾಯ್ತು ಗೊತ್ತಾ?” ಒಂದು ವಾರದ ತೊಳಲಾಟವನ್ನೆಲ್ಲ ಒಟ್ಟಿಗೆ ಕಕ್ಕಿದೆ.

“ದಿಢೀರ್‌ ಅಂತ ನನ್ನ ಕಸಿನ್‌ ಮದುವೆ ಫಿಕ್ಸ್ ಆಯ್ತು. ಹಾಗೇ ಹೋಗ್ಬಂದ್ವಿ.”

“ಎಲ್ಲರೂ ಹೋಗಿದ್ರಾ?”

ನನ್ನ ಇಂಗಿತ ಅವಳಿಗೆ ಗೊತ್ತು.“ಹೌದು ಪಮ್ಮಿನೂ ಬಂದಿದ್ದ. ಅವನಿಗೇನೋ ಆಫೀಸ್‌ ಕೆಲ್ಸವಂತೆ. ಇನ್ನೂ ಅಲ್ಲೇ ಇದ್ದಾನೆ. ನಾಳೆ ಬರ್ತಾನೆ”

ಅಪ್ರಮೇಯನ ವಿಷಯ ಕೇಳಿ ಜೀವ ತುಸು ಹಗುರವಾಯಿತು. ನನ್ನ ಅಣ್ಣನ ಮಗನ ತೊಟ್ಟಿಲಿಗೆಂದು ದೆಹಲಿಗೆ ಹೋದವಳು ಒಂದು ತಿಂಗಳು ಅಲ್ಲಿಯೇ ಉಳಿದಿದ್ದೆ. ಆದರೆ ನಿರಾಶೆಯಾಗಿತು. ಅವರಾರೂ ಇಲ್ಲದ್ದು ತಿಳಿದು ಅಪ್ರಮೇಯನೂ!

ಆಮ್ಮ ತಂದಿಟ್ಟ ಉಪ್ಪಿಟ್ಟು, ಕಾಫಿ ಮುಗಿಸಿ ಹೊರಗಡೆ ಹೊರಟೆ. ಮನೆಯಲ್ಲಿ, ಮನಬಿಚ್ಚಿ ಮಾತನಾಡಲೇ ಆಗುವುದಿಲ್ಲ. “ಈ ತಿಂಗಳ ಇಪ್ಪತ್ತಕ್ಕೆ ಲಗ್ನಪತ್ರಿಕೆ. ಮುಂದಿನ ತಿಂಗಳು ಮದುವೆ” ದಾರಿಯಲ್ಲಿ ಅವಳೇ ಮೌನ ಮುರಿದಳು.

“ಓಹ್‌! ” ಉದ್ಗರಿಸಿದೆ.

“ರಮೇಶ ಬಂದಿದ್ನಾ?”

“ಇಲ್ಲ. ಫೋನ್‌ ಮಾಡಿದ್ದ.”

ರಮೇಶ್‌, ಅವಳ ಸೋದರತ್ತೆಯ ಮಗ, ಭಾವೀ ಪತಿ. ನನ್ನ ದೆಹಲಿಯ ಅನುಭವ ಹೇಳಿ ಮುಗಿಸುವ ಹೊತ್ತಿಗೆ ತಿರುಗಾಟ ಮುಗಿದಿತ್ತು.

ದೀಪ್ತಿ ನನ್ನ ಅಚ್ಚುಮೆಚ್ಚಿನ ಗೆಳತಿ. ಕಾಲೇಜಿನಲ್ಲಿ ಒಟ್ಟಿಗೇ ಓದಿದರು. ಅಪ್ರಮೇಯ ಅವಳಣ್ಣ. ನನ್ನ ಪರಮಾಪ್ತ ಜೀವ. ಮದ್ರಾಸಿನಿಂದ ಎಂಜಿನಿಯರಿಂಗ್‌ ಮುಗಿಸಿ ಬಂದಾಗಲೇ ಅವನನ್ನು ಪ್ರತ್ಯಕ್ಷವಾಗಿ ನೋಡಿದ್ದು, ಸ್ಛುರದ್ರೂಪಿ ತರುಣ ವಿದ್ಯಾವಂತ, ಬುದ್ಧಿವಂತ, ಮೊದಮೊದಲು ಅವನನ್ನು ನೋಡಿದಾಗ ನಾಚುತ್ತಿದ್ದೆ, ಕ್ರಮೇಣ ಸ್ನೇಹದ ಹಾದಿ ಹಿಡಿದಾಗ `ಧನ್ಯೆ’ ಎನಿಸಿತ್ತು. ನನ್ನನ್ನು ಮೆಚ್ಚಿಕೊಂಡಾಗ ಸ್ವರ್ಗಕ್ಕೆ ಮೂರೇ ಗೇಣು. ನಾನು ಅವನ ಕೈ ಹಿಡಿಯುವುದಾದರೇ ಅದಕ್ಕಿಂತ ಭಾಗ್ಯವೇ ಎಂಬೆಲ್ಲ, ಲೆಕ್ಕಾಚಾರಗಳು. ನಮ್ಮೀರ್ವರ ಒಲವಿನ ಬಗ್ಗೆ ದೀಪ್ತಿಗೂ ತಿಳಿಯದಿರಲಿಲ್ಲ.

“ ನಿನ್ನನ್ನು ಅತ್ತಿಗೆಯಾಗಿ ಪಡೆಯೋಕ್ಕೆ ಪುಣ್ಯ ಮಾಡಿರಬೇಕು,” ಎಂದು ಅವಳು ಹರ್ಷಿಸಿದಾಗ ನಾಚಿ ನೀರಾಗಿದ್ದೆ. ಅವಳ ಬಗ್ಗೆ ನನಗಿದ್ದ ವಿಶ್ವಾಸ ಇಮ್ಮಡಿಯಾಗಿತ್ತು. ಅಂದಿನಿಂದ ದಿನ, ಅವಳ ಮನೆಯಲ್ಲೋ ಅಥವಾ ಹೊರಗಡೆ ವಾಕಿಂಗ್‌ ಹೊರಟಾಗಲೋ ಅಪ್ರಮೇಯನ ಭೇಟಿಯಾಗುತ್ತಿತ್ತು. ಒಂದು ದಿನ ನೋಡದಿದ್ದರೂ, ನನಗೆ ಹೇಳಲಾಗದ ಸಂಕಟವಾಗುತ್ತಿತ್ತು. ಡಿಗ್ರಿ ಮುಗಿದ ಮೇಲೆ ಕೆಲಸಕ್ಕೆ ಸೇರುವ ಇಚ್ಛೆ ಇದ್ದರೂ ನಮ್ಮ ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಮೇಲಾಗಿ ಅಪ್ರಮೇಯನಂತೂ ಖಂಡಿತವಾಗಿ ಹೇಳಿಬಿಟ್ಟಿದ್ದ, “ನನಗೆ ನನ್ನ ಹೆಂಡತಿ ಹೊರಗೆ ದುಡಿಯುವುದು ಇಷ್ಟವಿಲ್ಲ. ಉತ್ತಮ ಗೃಹಿಣಿಯಾಗಿದ್ದರೆ ಸಾಕು.” ನಾನು ಕೆಲಸ ಮಾಡುವ ಅಸೆಯನ್ನೇ ಕಿತ್ತಿಸೆದು ಅಪ್ರಮೇಯನ ಮುದ್ದಿನ ಮಡದಿಯಾಗಿ ಅವನ ಮಕ್ಕಳ ತಾಯಾಗುವ ಬಯಕೆಗಳನ್ನು ಕುರಿತು ಯೋಚಿಸುವುದು, ಪೋಷಿಸುವುದು, ಎಷ್ಟೊಂದು ಮಧುರ!

ನಿರೀಕ್ಷಿಸಿದ್ದ ಆ ನಾಳೆ ಬಂದಿತು. ಮತ್ತೊಂದು `ನಾಳೆ’ಯೂ ಕಳೆಯಿತು. ಆದರೆ ಅಪ್ರಮೇಯನ ಭೇಟಿಯಾಗಲೇ ಇಲ್ಲ. ದೀಪ್ತಿಯೂ ಮನೆಕಡೆ ಸುಳಿದಿರಲಿಲ್ಲ. ಕೊನೆಗೆ ನಾನೇ ಹೋದೆ. ಅವರ ಮನೆಗೆ ರಮೇಶ ಬಂದಿದ್ದರಿಂದ ದೀಪ್ತಿ ಹೊರಗೆ ಹೋಗಿದ್ದರೆ, ಅಪ್ರಮೇಯ ನನ್ನನ್ನು ನೋಡಿ, ಮಾತನಾಡಲೂ ಹಿಂಜರಿದ.

“ ಯಾಕೆ? ಒಂಥರಾ ಇದ್ದೀರಿ…”

“ ಛೆ! ಏನಿಲ್ಲ” ಎಂದನಷ್ಟೇ ಹೊರತು, ಬೇರೇನೂ ಹೇಳಲಿಲ್ಲ.

“ ಸಾರಿ ನೀವು ಮೂಡ್‌ನಲ್ಲಿಲ್ಲ ಅನ್ಸುತ್ತೆ,” ಎಂದು ಹೊರಟಿದ್ದೆ. ಮನೆಗೆ ಬಂದು ರಾತ್ರಿಯವರೆಗೂ ತಡೆದಿಟ್ಟುಕೊಂಡಿದ್ದ ದುಃಖವನ್ನು ದಿಂಬಿಗೆ ಮುಖಮಾಡಿ, ಶಬ್ದಿಸದೆ ಅತ್ತು ಹೊರ ಕಕ್ಕಿದೆ. ಅದೇ ಮೊದಲು ಅಪ್ರಮೇಯ ನನ್ನೊಂದಿಗೆ ಹಾಗೆ ನಡೆದುಕೊಂಡದ್ದು. ಮತ್ತೆರಡು ದಿನಗಳು ಕಳೆದರೂ ದೀಪ್ತಿ ಅವಳ ನಿಶ್ಚಿತಾರ್ಥದ `ಬಿಝಿ’ಯಲ್ಲಿದ್ದುದರಿಂದ ಹೆಚ್ಚು ಮಾತನಾಡಲು ಅವಕಾಶವಾಗಲಿಲ್ಲ. ನಿಶ್ಚಿತಾರ್ಥದ ದಿನ ಅಪ್ರಮೇಯ ನನಗೆ ಮುಖಕೊಟ್ಟು ಮಾತನಾಡದಿದ್ದಾಗ ನನಗಂತೂ ತಡೆಯಾಗಲೇ ಇಲ್ಲ. ಅವಕಾಶ ಮಾಡಿಕೊಂಡು ಕೇಳಯೇಬಿಟ್ಟೆ.

“ಯಾಕೆ ನನ್ನ ಅವಾಯ್ಡ್ ಮಾಡ್ತಿದ್ದೀರಿ… ನಾನೇನು ತಪ್ಪು ಮಾಡಿದೇಂತ ಈ ಶಿಕ್ಷೆ?”

ಅವನು ಉತ್ತರಿಸಿದ, “ನನ್ನನ್ನು ಕ್ಷಮಿಸಿಬಿಡು.”

ಒಂದು ಕ್ಷಣ ಅಲ್ಲಿರುವುದು ಅಸಾಧ್ಯವೆನಿಸಿದಾಗ, ಆಟೋ ಹಿಡಿದು ಮನೆಗೆ ಹಿಂದಿರುಗಿದ್ದೆ. ದೀಪ್ತಿಗೂ ಹೇಳದೆ.

ಅಪ್ಪ ಅಮ್ಮ ಮದುವೆಯೊಂದಕ್ಕೆ ಹೋಗಿದ್ದರಿಂದ ನನಗೆ ಬೇಕಾಗಿದ್ದ ಏಕಾಂತ ಸಿಕ್ಕಿತು. ಮನಃಪೂರ್ತಿ ಅತ್ತು ಹೃದಯಕ್ಕೆ ಕ್ಷಣಿಕ ಸಾಂತ್ವನ ನೀಡಿದ್ದೆ. ಹೌದು, ನನ್ನದು ಬಲು ಸೂಕ್ಷ?

ನಿಮ್ಮ  ಪ್ರವೃತ್ತಿ. ಹೀಗಾಗಿ ನನ್ನ ಹೃದಯಕ್ಕೆ ಬಿದ್ದ ಚಿಕ್ಕ ಪೆಟ್ಟನ್ನೂ ನಿಭಾಯಿಸುವ ಶಕ್ತಿಯನ್ನು ಕೈಗೂಡಿಸಿಕೊಳ್ಳಲಾಗಲಿಲ್ಲ, ಕೇವಲ ಒಂದು ತಿಂಗಳ ಗೈರುಹಾಜರಿಯಲ್ಲಿ ಅಪ್ರಮೇಯ ನನ್ನನ್ನು ಆಲಕ್ಷಿಸುವಂತಾಯಿತೆ? ಎದುರಿಗಿಲ್ಲದ ಮಾತ್ರಕ್ಕೆ ಮನಸ್ಸಿಗೂ ದೂರವೇ?

ನಾನು ದೆಹಲಿಯಲ್ಲಿದ್ದರೂ ಮನಸ್ಸೆಲ್ಲ ಊರಿನಲ್ಲೇ. ಎಂದು ಹಿಂತಿರುಗಿ, ಯಾವಾಗ ಅಪ್ರಮೇಯನನ್ನು ನೋಡುವೆನೋ ಎಂದು ಚಾತಕ ಪಕ್ಷಿಯಂತೆ ಕಾತರಿಸಿರಲಿಲ್ಲವೇ? ಅವನಿಗೆ ಅತಿ ಪ್ರಿಯವಾದ ನೀಲಿ ಉಲ್ಲನ್‌ ಸ್ವೆಟರ್‌ ಹೆಣೆದು, ಅವನಿಗೆ ಕೊಡಲು ಕಾದಿದ್ದೆ. ಮನಸ್ಸಿನಲ್ಲೇ ಎಲ್ಲಿಂದ ಎಲ್ಲಿಯವರೆಗೂ ವಿಹರಿಸಿದ್ದೆ? ಆದರೆ ಫಲಿತಾಂಶ?

“ಛೆ! ಈ ಪ್ರೀತಿ, ಪ್ರೇಮ ಎಂದರೆ ಇಷ್ಟೇಯೇ? ” ಮನವೆಂಬ ಮರ್ಕಟ ಲಂಗು ಲಗಾಮಿಲ್ಲದೆ ಓಡುತಿತ್ತು.

“ ಶಮ್ಮೀ…” ದೀಪ್ತಿಯ ದನಿ ಕೇಳಿ ಓದುತ್ತಿದ್ದ ಪುಸ್ತಕವನ್ನು ಮುಚ್ಚಿಟ್ಟು ಹೊರಬಂದೆ, “ಬಾ ” ಅವಳನ್ನು ನೋಡುತ್ತಿದ್ದಂತೆ ನನ್ನ ಕಂಗಳು ಕೊಳಗಳಾದವು. ಮುಖ ತೊಳೆದು ಕಾಫಿ ಮಾತ್ರ ಕುಡಿದು ಅವಳ ಜೊತೆ ಹೊರಟೆ. ಸೀರೆಗಳಿಗೆ ಫಾಲ್ಸ್ ಹಚ್ಚಲು ಕೊಡಬೇಕಿತ್ತು. ಅದಕ್ಕಾಗಿ ಟೈಲರಿಂಗ್‌ ಶಾಪಿಗೆ ಹೊರಟಿದ್ದಳು. ನಾನವಳಿಗೆ ಜೊತೆ.

“ಮೂರು ದಿನದಿಂದ ನಮ್ಮ ಮನೆ ರಣರಂಗವಾಗಿಬಿಟ್ಟಿದೆ ಕಣೆ, ಪಮ್ಮಿ ವಿಷಯದಿಂದಾಗಿ.” ನಾನು ಮೌನವಾಗಿ ಕೇಳಿಸಿಕೊಳ್ಳ ತೊಡಗಿದೆ. ಮನಸ್ಸು ಮೂಕವಾಗಿ ರೋಧಿಸುತ್ತಿತ್ತು.

“ಅವನ ಆಫೀಸಿನಲ್ಲಿ ಯಾರೋ ಶೀಲಾ ಅಂತೆ. ಅವಳನ್ನೇ ಮಾಡ್ಕೊಳ್ಳೋದೂಂತ ಕುಣೀತಿದ್ದಾನೆ. ಅವರು ನಮ್ಮವರೂ ಅಲ್ವಂತೆ. ಮನೇಲಿ ಅಪ್ಪ ಅಮ್ಮ ಖಡಾಖಂಡಿತವಾಗಿ ಹೇಳ್ಬಿಟ್ಟಿದ್ದಾರೆ. ಈ ಮದುವೆ ಅವರಿಗಿಷ್ಟವಿಲ್ಲಾಂತ. ಆದರೆ ಇವನದ್ಯಾಕೋ ಹಿಡಿದದ್ದೇ ಹಠ.”

“….”

“ಯಾಕೇ? ಏನೂ ಮಾತಾಡ್ತಾನೇ ಇಲ್ಲ?`ನನ್ನ ಹೆಂಡ್ತಿಯಾಗೋಳು ಹೊರಗಡೆ ದುಡಿಯೋದು ಇಷ್ಟವಿಲ್ಲ’ ಮುಂತಾದ ಮಾತುಗಳು ಪ್ರತಿಧ್ವನಿಸತೊಡಗಿದವು.

ಅಪ್ರಮೇಯನ ವರ್ತನೆಗೆ ಕಾರಣ ತಿಳಿಯದಾದ ಮೇಲೆ, ಅತೀ ದುಃಖವಾಗಿದ್ದರೂ ಸಹ, ಮನಸ್ಸು ನಿರಾಳವಾಯಿತು. ಪ್ರೀತಿಯಾಗಲಿ, ಸ್ನೇಹವಾಗಲಿ ಕಸಿದುಕೊಳ್ಳುವಂತಹುದಲ್ಲ. ಸ್ವಾಭಾವಿಕವಾಗಿಯೇ ಬೆಳೆಯಬೇಕು. ಈ ವಿಷಯದಲ್ಲಿ ಯಾವುದೇ ಬಲವಂತದ ಮಾಘಸ್ನಾನ ಸಲ್ಲ. ಅಪ್ರಮೇಯ ನನ್ನವನಲ್ಲ ಎಂಬ ಬೀಜವನ್ನು ಬಿತ್ತಿ ನೀರೆರೆಯತೊಡಗಿದೆ. ನಿಧಾನವಾಗಿ ಮನಸ್ಸು ಒಂದು ಹದಕ್ಕೆ ಬರತೊಡಗಿತು. ಅಮೇರಿಕಾದಲ್ಲಿದ್ದ ನನ್ನ ಅತ್ತಿಗೆಯ ಕಸಿನ್‌ ಶ್ರೀಧರನೊಂದಿಗೆ ನನ್ನ ವಿವಾಹ ನಿಶ್ಚಯವಾಗಿತ್ತು. ನನ್ನಣ್ಣನ ಮಗುವಿನ ನಾಮಕರಣದ ಸಂದರ್ಭದಲ್ಲಿ ತೆಗೆದ ಫೋಟೋ ಮತ್ತು ವಿಡಿಯೋದಲ್ಲಿ ನನ್ನನ್ನು ನೋಡಿ, ಶ್ರೀಧರ ನನ್ನನ್ನು ಮೆಚ್ಚಿದ್ದ. ಎರಡು ತಿಂಗಳ ರಜೆ ಮೇಲೆ ಭಾರತಕ್ಕೆ ಬಂದಾಗ ತನ್ನ ಅಪೇಕ್ಷೆಯನ್ನು ತಿಳಿಸಿದ್ದ. ನಮ್ಮ ಮನೆಯಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ.

ಔಪಚಾರಿಕಾಗಿ ನನ್ನ ಭೇಟಿಯಾದಾಗ, ನನ್ನ ಅಪ್ರಮೇಯನ ನಡುವೆ ಸುಳಿದಿದ್ದ ಪ್ರೀತಿಯ ಬಗ್ಗೆ ಹೇಳಿಕೊಂಡು ಹೃದಯ ಹಗುರ ಮಾಡಿಕೊಂಡಿದ್ದೆ. ನಮ್ಮಿಬ್ಬರ ಮಧ್ಯೆ ಯಾವುದೇ ಗುಟ್ಟು ಇರಬಾರದೆಂಬುದೇ ನನ್ನ ಉದ್ದೇಶವಾಗಿತ್ತು.

ದೀಪ್ತಿಯ ಮದುವೆಯಾದ ತಿಂಗಳೊಳಗಾಗಿ ನನ್ನ ಮದುವೆಯೂ ನಡೆದಿತ್ತು. ಶ್ರೀಧರನ ಪ್ರೇಮಾನುರಾಗದಲ್ಲಿ ನಾನೊಬ್ಬ ಹೊಸ ಮನುಷ್ಯಳಾಗಿದ್ದೆ. ಅವನಿಗೆ ಅತ್ಯಂತ ವಿಧೇಯಳಾಗಿ, ವಿಶ್ವಾಸಿಯಾಗಿ ಅವನ ಮನ ಗೆದ್ದಿದ್ದೆ. ಸುಖದಲ್ಲಿ ದಿನಗಳು ಬಹು ಬೇಗ ಓಡುತ್ತಿದ್ದವು, ನಮ್ಮಿಬ್ಬರ ಸುಖೀ ದಾಂಪತ್ಯದ ಕುರುಹಾಗಿ `ಧನ್ಯಾ’ ಮಡಿಲು ತುಂಬಿದ್ದಳು.

ಮದುವೆಯಾಗಿ ಎರಡು ವರ್ಷದ ಮೇಲೆ ನನ್ನ ತಾಯ್ನಾಡಿಗೆ ಕಾಲಿಟ್ಟಾಗ ನನಗಂತೂ ಎಲ್ಲಿಲ್ಲದ ಸಂಭ್ರಮ! ನಾನೇ ಪುಟ್ಟ ಮಗುವಿನಂತೆ ಅಮ್ಮನ ಮನೆಯಲ್ಲಿ ಓಡಾಡಿದೆ. ನಾನು ಬಂದ ವಿಷಯ ತಿಳಿದ ದೀಪ್ತಿ ನನ್ನನ್ನು ನೋಡಲು ಬಂದಳು. ಅಮೇರಿಕಕ್ಕೆ ಹೋದ ಮೇಲೆ ಅವಳ ಸಂಪರ್ಕವೇ ಇರಲಿಲ್ಲ ಆದರೆ ನಮ್ಮ ಸ್ನೇಹ ಸಂಬಂಧ ಸುಭದ್ರವಾಗಿತ್ತು. ಮಗುವನ್ನು ಅಮ್ಮನ ವಶಕ್ಕೊಪ್ಪಿಸಿ ಅವಳೊಡನೆ ವಾಕ್‌ ಹೊರಟೆ.

ಅವಳೂ ರಮೇಶನೊಂದಿಗೆ ಸುಖವಾಗಿದ್ದಳು.

“ಈ ವಾರ ಪೂರ್ತಿ ಅಮ್ಮನ ಮನೇಲೇ ಇರ್ತೀನಿ. ಪಮ್ಮಿ ಟೂರ್‌ನಲ್ಲಿದ್ದಾನೆ.”

“ …”

“ಶಮ್ಮೀ, ಈ ಜೀವನ ಅನ್ನೋದು ಎಷ್ಟು ವಿಚಿತ್ರ ಅಲ್ವ? ಮನುಷ್ಯ ಒಂದನ್ನು ಪಡೆಯೋ ಭ್ರಮೆಯಲ್ಲಿ ಮತ್ತೊಂದನ್ನು ಕಳೆದುಕೊಳ್ಳಲೂ ಹೇಸುವುದಿಲ್ಲ. ಕಡೆಗೆ ಆ ಆಸೆಪಟ್ಟದ್ದೂ ದಕ್ಕದಿದ್ರೆ ಎಷ್ಟು ಘೋರ ಅಲ್ವಾ?”

ನನಗೆ ದೀಪ್ತಿಯ ಮಾತು ಅರ್ಥವಾಗಲಿಲ್ಲ. ಅವಳೇ ಮುಂದುವರೆಸಿದಳು.

“ಶೀಲಾನ ಮದುವೆಯಾಗ್ತೀನಿ ಅನ್ನೋ ಆಸೇಲಿ ಪಮ್ಮಿ ನಿನ್ನ ಕೈಬಿಟ್ಟ, ಆದ್ರೆ ಮನೇಲಿ ಅಪ್ಪ ಅಮ್ಮ ಯಾರೂ ಈ ಮದುವೆಯ ಪರವಾಗಿರಲಿಲ್ಲ. ಹಾಗಿದ್ರೂ ಅವರನ್ನು ಎದುರಿಸೋಕ್ಕೆ ಸಿದ್ದವಾಗಿದ್ದ. ಆದರೆ…? `ನಿಮ್ಮ ಮನೆಯವರ ವಿರುದ್ಧವಾಗಿ ಕೈ ಹಿಡಿಯೋಕೆ ನೀವು ಸಿದ್ದರಿದ್ರೂ ನನಗೆ ಆ ರೀತಿಯ ಮದುವೆ ಇಷ್ಟವಿಲ್ಲ. ನಾವು ಮದುವೆಯಾದ್ರೂ ನಿಮ್ಮ ಹಿರಿಯರ ಜೊತೆ ಇರೋದಾದ್ರೆ ಮಾತ್ರ ‘ ಅಂತ ಶೀಲಾಳ ವಾದವಂತೆ. ಈ ಜಂಜಾಟದಲ್ಲಿ ಫಲಿತಾಂಶ ಸೊನ್ನೆ, ಶೀಲಾಳಿಗೂ ಬೇರೆ ಕಡೆ ಮದುವೆಯಾಯ್ತಂತೆ. ಈಗ ಪಮ್ಮಿಯನ್ನಂತೂ ನೋಡೋಕ್ಕಾಗೋಲ್ಲ. ಡಲ್ ಆಗ್ಬಿಟ್ಟಿದ್ದಾನೆ… ”

ದೀಪ್ತಿ ಹೇಳುತ್ತಲೇ ಇದ್ದಳು. ನಾನು ಯಾವ ಪ್ರತಿಕ್ರಿಯೆಯನ್ನೂ ತೋರದೆ ನಿರ್ಲಿಪ್ತಳಾಗಿದ್ದೆ. ಮನೆಯಲ್ಲಿ ಮಗುವನ್ನು ಬಿಟ್ಟು ಬಂದಿದ್ದರಿಂದ ಅವಳಿಗೆ ಹೇಳಿ ಆತುರಾತುರವಾಗಿ ಮನೆ ಕಡೆ ಹೆಜ್ಜೆ ಹಾಕತೊಡಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ