ಸ್ಪ್ರೌಟ್ಸ್ ವೆಜ್ಜಿ ರಾಂಪ್ಸ್

ಸಾಮಗ್ರಿ : 1-1 ಚಮಚ ತುಪ್ಪ, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ರೀಫೈಂಡ್‌ ಎಣ್ಣೆ, ಅರ್ಧರ್ಧ ಕಪ್‌ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಬ್ರೋಕ್ಲಿ, ಹೂಕೋಸು, ಎಲೆಕೋಸು, ತುರಿದ ಕ್ಯಾರೆಟ್‌, 1 ಕಪ್‌ ಬೆಂದ ಹೆಸರುಕಾಳಿನ ಸ್ಪ್ರೌಟ್ಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಕ್ಕರೆ, ಚಿಲೀ ಸಾಸ್‌, 4 ಚಮಚ ತುರಿದ ಚೀಸ್‌, 4-5 ಚಪಾತಿ.

ವಿಧಾನ : ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ. ನಂತರ  ಇದಕ್ಕೆ ಒಗ್ಗರಣೆ ಕೊಟ್ಟು ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಒಂದೊಂದಾಗಿ ಎಲ್ಲಾ ತರಕಾರಿ ಹಾಕಿ ಬಾಡಿಸಬೇಕು. ಆಮೇಲೆ ಉಪ್ಪು, ಮೆಣಸು, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಚಿಲೀ ಸಾಸ್‌ ಹಾಕಿ ಕೆದಕಬೇಕು. ಕೊನೆಯಲ್ಲಿ ಬೆಂದ ಹೆಸರುಕಾಳು ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇಳಿಸುವ ಮುನ್ನ ಚೀಸ್‌ ಹಾಕಿ ಕೈಯಾಡಿಸಿ.

ಈ ಮಿಶ್ರಣವನ್ನು ಎಲ್ಲಾ ಚಪಾತಿಗಳ ಮೇಲೆ ಸಮನವಾಗಿ ಹರಡಬೇಕು. ತಾವು ಮೇಲೆ ತುಸು ಎಣ್ಣೆ ಬಿಸಿ ಮಾಡಿ, ಈ ಚಪಾತಿ ರಾಪ್ಸ್ನ್ನು ರೋಲ್ ‌ಮಾಡುತ್ತಾ ಬಿಸಿ ಮಾಡಿ. ಪುದೀನಾ ಚಟ್ನಿ, ಟೊಮೇಟೊ ಸಾಸ್‌ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಬನಾನಾ ಸ್ಟ್ರಾಬೆರಿ ಸ್ಮೂದಿ

ಸಾಮಗ್ರಿ : 2-3 ಮಾಗಿದ ಚುಕ್ಕೆ ಬಾಳೆಹಣ್ಣು, ಅರ್ಧರ್ಧ ಕಪ್‌ಹೆಚ್ಚಿದ ಸ್ಟ್ರಾಬೆರಿ, ಗಟ್ಟಿ ಹಾಲು, ಕೆನೆ ಮೊಸರು, ರುಚಿಗೆ ತಕ್ಕಷ್ಟು ಸಕ್ಕರೆ, ಜೇನುತುಪ್ಪ, ತುಂಡರಿಸಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು.

ವಿಧಾನ : ಡ್ರೈಫ್ರೂಟ್ಸ್ ಬಿಟ್ಟು ಉಳಿದೆಲ್ಲವನ್ನೂ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಆಮೇಲೆ ಇದಕ್ಕೆ ಪಿಸ್ತಾ, ಬಾದಾಮಿ ಚೂರು ತೇಲಿಬಿಟ್ಟು, ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ ನಂತರ ಗ್ಲಾಸುಗಳಿಗೆ ಹಾಕಿ ಸವಿಯಲು ಕೊಡಿ.

ಹೆಸರುಕಾಳಿನ ಪರೋಟ

ಸಾಮಗ್ರಿ : 1 ಕಪ್‌ ಬೆಂದ ಮೊಳಕೆ ಕಟ್ಟಿದ ಹೆಸರುಕಾಳು, 2 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ, ತುಪ್ಪ, ಉಪ್ಪು, ಖಾರ, ಗರಂಮಸಾಲ, ಹುಣಿಸೇಪುಡಿ, ಸೋಯಾಹಿಟ್ಟು, ಗೋದಿಹಿಟ್ಟು.

ವಿಧಾನ : ಹೆಸರುಕಾಳು ಬೇಯಿಸಿದ ನೀರನ್ನು ಹಿಟ್ಟು ಕಲಸಲಿಕ್ಕೆ ಬಳಸಿಕೊಳ್ಳಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಸಣ್ಣಗೆ ಹೆಚ್ಚಿಕೊಂಡ ಬೆಳ್ಳುಳ್ಳಿ, ಶುಂಠಿ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಮಸಾಲೆ ಹಾಕಿ ಕೆದಕಬೇಕು. ನಂತರ ಬೆಂದ ಕಾಳು ಹಾಕಿ ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ. ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಪುದೀನಾ ಸೇರಿಸಿ, ಮಂತಿನಿಂದ ಲಘುವಾಗಿ ಮಸೆದುಕೊಳ್ಳಿ.

2 ಕಪ್‌ ನಷ್ಟು ಗೋದಿಹಿಟ್ಟಿಗೆ 1 ಸೌಟು ಸೋಯಾ ಹಿಟ್ಟು, ಉಪ್ಪು, ಚಿಟಕಿ ಓಮ ಸೇರಿಸಿ, ಅಗತ್ಯವಿದ್ದಷ್ಟು ನೀರು ಬೆರೆಸಿ ಮೃದುವಾದ ಚಪಾತಿ ಹಿಟ್ಟು ಕಲಸಿಡಿ. ಇದಕ್ಕೆ ತುಸು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ನಂತರ ಉಂಡೆಗಳಾಗಿಸಿ, ತುಪ್ಪ ಸವರಿ, ಒಂದೊಂದಾಗಿ ಲಟ್ಟಿಸಿ. ಅದರ ಮಧ್ಯೆ 2-3 ಚಮಚ ಹೆಸರುಕಾಳಿನ ಮಿಶ್ರಣವಿರಿಸಿ, ನೀಟಾಗಿ ಮಡಿಚಿ, ಮತ್ತೆ ಲಟ್ಟಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ತವಾ ಮೇಲೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಹೀಗೆ ಸಿದ್ಧಗೊಂಡ ಬಿಸಿ ಪರೋಟಾಗಳನ್ನು ಗಟ್ಟಿ ಮೊಸರು, ನಿಂಬೆ ಉಪ್ಪಿನಕಾಯಿ ಜೊತೆ ಸವಿಯಲು ಕೊಡಿ.

cookry-single-4

ಮಿಕ್ಸ್ಡ್ ಫ್ರೂಟ್ಸ್ ಶ್ರೀಖಂಡ

ಸಾಮಗ್ರಿ : ಸಣ್ಣಗೆ ಹೆಚ್ಚಿದ ಮಿಶ್ರ ಹಣ್ಣುಗಳ ಹೋಳು, 3 ಕಪ್‌ ಕೆನೆ ಮೊಸರು, ಅಗತ್ಯವಿದ್ದಷ್ಟು ಪುಡಿ ಸಕ್ಕರೆ, ಏಲಕ್ಕಿ ಪುಡಿ, ಪಚ್ಚ ಕರ್ಪೂರ.

ವಿಧಾನ : ಕೆನೆ ಮೊಸರನ್ನು ತೆಳು ಬಟ್ಟೆಯಲ್ಲಿ ಕಟ್ಟಿ ತೊಲೆಗೆ ನೇತುಹಾಕಿ, ಅದರ ತೇವಾಂಶವೆಲ್ಲ  100% ಹಿಂಗುವಂತೆ ಮಾಡಿ. ಮಿಕ್ಸಿಗೆ ಹಣ್ಣು, ಸಕ್ಕರೆ, ಏಲಕ್ಕಿ, ಪಚ್ಚಕರ್ಪೂರ ಸೇರಿಸಿ ತಿರುವಿಕೊಳ್ಳಿ. ಇದಕ್ಕೆ ಮೊಸರು ಬೆರೆಸಿ ಮತ್ತೆ ಬ್ಲೆಂಡ್‌ ಮಾಡಿ. ಈ ಶ್ರೀಖಂಡವನ್ನು ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಎನರ್ಜಿ ಬಾಲ್ಸ್

ಸಾಮಗ್ರಿ : ಬಾದಾಮಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಕ್ರಾನ್‌ ಬೆರಿ, ಅಖರೋಟಿನ ಚೂರು (ಒಟ್ಟಾಗಿ 1 ಕಪ್‌), 11 ಚಮಚ ಸಿಹಿಗುಂಬಳ, ಕರಬೂಜಾ, ಕಲ್ಲಂಗಡಿಹಣ್ಣಿನ ಬೀಜ, ಅರ್ಧ ಕಪ್‌ ಅವಲಕ್ಕಿ, 2 ಚಮಚ ಫ್ಲಾಕ್ಸ್ ಸೀಡ್ಸ್, 4 ಚಮಚ ಜೇನುತುಪ್ಪ, 2 ಚಿಟಕಿ ಉಪ್ಪು, 1 ಗಿಟುಕು ಕೊಬ್ಬರಿ ತುರಿ.

ವಿಧಾನ : ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಜೇನು ಬೆರೆಸಿ ಕರಗುವಂತೆ ಮಾಡಿ. ಒಂದು ಬಟ್ಟಲಿಗೆ ಡ್ರೈಫ್ರೂಟ್ಸ್, ಅವಲಕ್ಕಿ, ಉಳಿದ ಬೀಜಗಳನ್ನು ಬೆರೆಸಿಕೊಳ್ಳಿ. ಜೇನು ನೊರೆ ನೊರೆಯಾದಂತೆ ಅದಕ್ಕೆ ಈ ಮಿಶ್ರಣ ಸೇರಿಸಿ, ಮಂದ ಉರಿಯಲ್ಲಿ ಬೇಗ ಬೇಗ ಕೈಯಾಡಿಸಿ. ಇದನ್ನು ಕೆಳಗಿಳಿಸಿ, ತುಪ್ಪ ಸರಿದ ತಟ್ಟೆ ಮೇಲೆ ಹರಡಿ ತುಸು ಆರಿದ ನಂತರ ಬೇಗ ಬೇಗ ಉಂಡೆ ಕಟ್ಟಿ, ಕೊಬ್ಬರಿ ತುರಿಯಲ್ಲಿ ಹೊರಳಿಸಿ. ಗಾಳಿಯಾಡದ ಡಬ್ಬಕ್ಕೆ ತುಂಬಿಸಿ ಮಕ್ಕಳು ಬಯಸಿದಾಗ ಸವಿಯಲು ಕೊಡಿ.

cookry-single-5

ಕಾಮಕಸ್ತೂರಿ ಪೇಯ

ಸಾಮಗ್ರಿ : 2 ಕಪ್‌ ಕಾದಾರಿದ ನೀರು, 2 ಚಮಚ ಕಾಮಕಸ್ತೂರಿ ಬೀಜ, ಅರ್ಧರ್ಧ ಕಪ್‌ ಹೆಚ್ಚಿದ ಸ್ಟ್ರಾಬೆರಿ ರಾಸ್ಪ್ ಬೆರಿ, 1 ದೊಡ್ಡ ನಿಂಬೆಹಣ್ಣು, 2 ಚಮಚ ಜೇನುತುಪ್ಪ.

ವಿಧಾನ : ಒಂದು ಬಟ್ಟಲಲ್ಲಿ ಕಾದಾರಿದ ನೀರಿಗೆ ಕಾಮಕಸ್ತೂರಿ ಬೀಜ ಹಾಕಿ ಅರ್ಧ ಗಂಟೆ ಫ್ರೀಝರಿನಲ್ಲಿ ನೆನೆಹಾಕಿಡಿ. ಅಲ್ಲಿಂದ ಹೊರತೆಗೆದು, ಇದಕ್ಕೆ ಬೇರೆಲ್ಲ ಸಾಮಗ್ರಿ ಬೆರೆಸಿ, ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಿಕೊಂಡು, ಅಗತ್ಯವೆನಿಸಿದರೆ ಇನ್ನಷ್ಟು ಸಕ್ಕರೆ ಸೇರಿಸಿ ಕದಡಿಕೊಳ್ಳಿ. ಇದನ್ನು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಬ್ರೋಕನ್ವೀಟ್ಪಲಾವ್

ಸಾಮಗ್ರಿ : 1 ಕಪ್‌ ಬ್ರೋಕನ್‌ ವೀಟ್‌ (ಗೋದಿ ನುಚ್ಚು), ಅರ್ಧರ್ಧ ಕಪ್‌ ಹೆಚ್ಚಿದ ಆಲೂಗಡ್ಡೆ, ಬೀನ್ಸ್, ಕ್ಯಾರೆಟ್‌, ನವಿಲುಕೋಸು, ಹಸಿ ಬಟಾಣಿ, ತಾಜಾ ಕಾರ್ನ್‌, 2 ಈರುಳ್ಳಿ, 2-3 ಟೊಮೇಟೊ, ಏಲಕ್ಕಿ, ಲವಂಗ, ಚಕ್ಕೆ ಮೊಗ್ಗು (ಒಟ್ಟಾಗಿ 1 ದೊಡ್ಡ ಚಮಚ), ಒಗ್ಗರಣೆಗೆ ರೀಫೈಂಡ್‌ಎಣ್ಣೆ, ಸಾಸುವೆ, ಜೀರಿಗೆ, ಮೆಣಸು, ಲವಂಗದ ಎಲೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿಮೆಣಸು.

ವಿಧಾನ : ಮೊದಲು ಕುಕ್ಕರ್‌ನಲ್ಲಿ ತುಸು ತುಪ್ಪ ಬಿಸಿ ಮಾಡಿಕೊಂಡು, ಗೋದಿ ನುಚ್ಚು ಹಾಕಿ ಘಮ್ಮೆನ್ನುವಂತೆ ಹುರಿದು ಪಕ್ಕಕ್ಕಿಡಿ. ಅದೇ ಕುಕ್ಕರ್‌ಗೆ ಇನ್ನಷ್ಟು ತುಪ್ಪ, ರೀಫೈಂಡ್‌ ಎಣ್ಣೆ ಬೆರೆಸಿ ಬಿಸಿ ಮಾಡಿ ಒಗ್ಗರಣೆ ಕೊಡಿ. ಆಮೇಲೆ ಚಕ್ಕೆ, ಲವಂಗ, ಮೊಗ್ಗು, ಪಲಾವ್ ‌ಎಲೆ ಹಾಕಿ ಚಟಪಟಾಯಿಸಿದ ನಂತರ ಮೊದಲು ಈರುಳ್ಳಿ ಆಮೇಲೆ ಟೊಮೇಟೊ ಹಾಕಿ ಬಾಡಿಸಿರಿ. ನಂತರ ಹೆಚ್ಚಿದ ಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಛು, ಖಾರ, ಉಳಿದ ಮಸಾಲೆ ಹಾಕಿ ಕೆದಕಬೇಕು. ಅನಂತರ ಎಲ್ಲಾ ತರಕಾರಿ ಹಾಕಿ 5 ನಿಮಿಷ ಸತತ ಕೈಯಾಡಿಸಿ. ಆಮೇಲೆ ಗೋದಿ ನುಚ್ಚು ಸೇರಿಸಿ, ನೀರು ಬೆರೆಸಿ (ಉದುರುದುರಾಗಿ ಆಗುವಂತೆ) 2 ಸೀಟಿ ಬರಿಸಿ, ಕುಕ್ಕರ್‌ ಇಳಿಸಿ. ಮುಚ್ಚಳ ತೆರೆದ ನಂತರ ಇದಕ್ಕೆ ಕೊ.ಸೊಪ್ಪು, ಪುದೀನಾ ಉದುರಿಸಿ, ನಿಂಬೆ ಹಣ್ಣು ಹಿಂಡಿಕೊಂಡು ಚೆನ್ನಾಗಿ ಕೆದಕಬೇಕು. ಬಿಸಿ ಇರುವಾಗಲೇ ಈರುಳ್ಳಿ, ಟೊಮೇಟೊ ರಾಯ್ತಾ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ