ಹೆಣ್ಣೆಂದರೆ ಮರೆಯಲ್ಲಿರುವವಳು, ಅವಳಿಗೇಕೆ ಅಲಂಕಾರ? ನಾಲ್ಕು ಗೋಡೆಗಳ ಮಧ್ಯೆ ಇದ್ದು ಬೇಯಿಸಿ ಹಾಕುವವಳಿಗೆ ಏಕೆ ಬೇಕು ಬೆಳಕು? ಅವಳಿಗೇಕೆ ವಿದ್ಯೆ ಎನ್ನುವ ಕಾಲವೊಂದಿತ್ತು. ಅಂತೆಯೇ ಅವಳು ಸದಾಕಾಲ ಬೇಯಿಸಿಕೊಂಡಿರುವ ಅಡುಗೆಮನೆಯೂ ಈ ಭಾವಕ್ಕೆ ತಕ್ಕಂತೆ ಮನೆಯ ಹಿಂಭಾಗದ ಒಂದು ಮೂಲೆಯಲ್ಲಿರುತ್ತಿತ್ತು.

ಕಾಲ ಬದಲಾದಂತೆ ಹೆಣ್ಣಿನ ಸ್ಥಾನದ ಜೊತೆ ಜೊತೆಗೆ ಅಡುಗೆಮನೆಯೂ ರೂಪಾಂತರಗೊಳ್ಳಲಾರಂಭಿಸಿತು. ಮಸಿಗಟ್ಟಿದ ಗೋಡೆ, ಹೊಗೆ ತುಂಬಿಕೊಂಡ ಸ್ಥಳವಾಗಿದ್ದ ಅಡುಗೆಮನೆ, ಮನೆಯ ಒಂದು ಮುಖ್ಯ ಭಾಗವಾಗಿ ಅನಾವರಣಗೊಳ್ಳಲು ಆರಂಭಿಸಿತು.  ಅಡುಗೆಮನೆ ಎಂದಾಗ ಸಾಮಾನುಗಳನ್ನಿಡಲು ಒಂದಷ್ಟು ಕಪಾಟುಗಳು, ಆಧುನಿಕತೆಯ ಕೊಡುಗೆಯಾಗಿ ಅಡುಗೆಮನೆಗೆ ಸೇರ್ಪಟ್ಟ ಉಪಕರಣಗಳಿಗಾಗಿ ಒಂದು ನಿರ್ದಿಷ್ಟ ಸ್ಥಾನ, ಅವುಗಳಿಗಾಗಿ ವಿದ್ಯುತ್‌ ಪಾಯಿಂಟುಗಳು, ಮಣ್ಣಿನ ಒಲೆಗಳಿಂದ ಪಲ್ಲಟಗೊಂಡು ಹೊಳೆಯುವ ಬಣ್ಣಬಣ್ಣದ ಗ್ರಾನೈಟ್‌, ನಿಮಗೆ ಬೇಕಾದಂತಹ ಬಣ್ಣದ ನುಣುಪಾದ ಗ್ರಾನೈಟ್‌ ಕಲ್ಲುಹಾಸಿನ ಮೇಲೆ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡ ಎಲೆಕ್ಟ್ರಿಕ್‌ ಒಲೆ, ಕಾಲ ಕಳೆದಂತೆ ಅದಕ್ಕಿಂತಲೂ ವೇಗವಾಗಿ ಅಡುಗೆ ಮಾಡಲು ಅನುವಾಗುವ ಗ್ಯಾಸ್‌ ಒಲೆಗಳು.

ಮೊದಲಿಗೆ ಗ್ಯಾಸ್‌ ಒಲೆ ಕಲ್ಲು ಹಾಸಿನ ಮೇಲೆ ಅರ್ಥಾತ್‌ ಕುಕಿಂಗ್‌ ಟೇಬಲ್‌ನ ಮೇಲೆ ಇದ್ದದ್ದು ನಂತರ ಸಂಕನ್‌ ಅಂದರೆ ಆ ಗ್ರಾನೈಟ್‌ ಕಲ್ಲುಹಾಸಿನ ಸಮಕ್ಕೆ ರೂಪುಗೊಂಡ ಗ್ಯಾಸ್‌ ಒಲೆಗಳು ಕಾಣತೊಡಗಿದವು. ಇಷ್ಟೆಲ್ಲಾ ಬದಲಾವಣೆಗಳಿದ್ದರೂ ಅಡುಗೆಮನೆ ನಾಲ್ಕು ಗೋಡೆಗಳ ಮಧ್ಯೆಯೇ ಇತ್ತು. ಅಡುಗೆಮನೆಯನ್ನು ಮರೆಮಾಡಲು ಅದಕ್ಕೊಂದು ಬಾಗಿಲು ಸಹ ಇರುತ್ತಿತ್ತು. ಆದರೆ ಈಗ ವಿಶ್ವದ ಎಲ್ಲಾ ರಂಗಗಳಲ್ಲೂ ಮಹಿಳೆ ಮುಕ್ತವಾಗಿ ತನ್ನ ಛಾಪನ್ನು ಮೂಡಿಸಿದಂತೆ ಮನೆಯ ಕೇಂದ್ರ ಭಾಗವಾಗಿ ಅಡುಗೆಮನೆಯೂ ರೂಪುಗೊಳ್ಳುತ್ತಿದೆ.

ಆಧುನಿಕ ಚಿಂತನೆಗೆ ಅನುಗುಣವಾಗಿ ಈಗ ನಗರಗಳಲ್ಲಿನ ನಿವೇಶನಗಳು ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಗೋಡೆಗಳು ಕಡಿಮೆಯಾದಷ್ಟೂ ಸ್ಥಳ ವಿಶಾಲವಾಗಿ ಕಾಣುತ್ತದೆ. ಅಂತೆಯೇ ಅಡುಗೆಮನೆಯೂ ತೆರೆದ ಕೋಣೆಯಾಗಿ ಅರ್ಥಾತ್ `ಐಲ್ಯಾಂಡ್‌ ಕಿಚನ್‌’ ಎಂದು ನಾಮಾಂತರಗೊಂಡಿದೆ.

kitchn2

ಏನಿದು ಐಲ್ಯಾಂಡ್ಕಿಚನ್‌?

ಹಿಂದೆ ಅಡುಗೆಮನೆಯನ್ನು ರೂಪಿಸುವಾಗ ಅಲ್ಲಿನ ಉಪಕರಣಗಳು ಮತ್ತು ಸಾಮಾನುಗಳನ್ನಿಡುವ ಉಗ್ರಾಣ ಅಂದರೆ ಸ್ಟೋರೇಜ್‌ಗೆ ಹೆಚ್ಚಿನ ಗಮನ ನೀಡಲಾಗುತ್ತಿತ್ತು. ಪರಿಣಾಮ ಅಡುಗೆ ಮಾಡಲು ಸ್ಥಳ ಕಡಿಮೆಯಾಗಿ ಕಿಷ್ಕಿಂಧೆಯಾಗುತ್ತಿತ್ತು. ಅಡುಗೆ ಮಾಡುವ ಸ್ಥಳ ವಿಶಾಲವಾಗಿದ್ದಾಗ ಅಡುಗೆ ತಯಾರಿಸುವವರಿಗೆ ಕೈಯಾಡಿಸಲು ಅನುಕೂಲ ಮತ್ತು ಗಾಳಿ ಬೆಳಕಿನ ಅವಶ್ಯಕತೆಯೂ ಹೆಚ್ಚು. ಈ ಕೊರತೆಯನ್ನು ಮನಗಂಡ ವಿನ್ಯಾಸಕರು ಅಡುಗೆಮನೆಯ ಮಧ್ಯದಲ್ಲಿ ಐಲ್ಯಾಂಡ್‌ ಎಂದು ನಾಮಕರಣಗೊಂಡ ಸ್ಥಳವನ್ನು ರೂಪಿಸಿದರು. ಸುತ್ತಲೂ ಓಡಾಡಲು ಅನುಕೂಲಕರವಾಗಿದ್ದು, ಒಂದೇ ಬಾರಿಗೆ ಹೆಚ್ಚು ಜನರು ಕೆಲಸ ಮಾಡಲು ಆರಾಮವಾಗಿರುತ್ತದೆ. ಸುತ್ತಲೂ ಇರುವ ಕೌಂಟರ್‌ಗಳೇ ಅಲ್ಲದೆ ಅದರ ಮಧ್ಯ ಭಾಗಕ್ಕೆ ಐಲ್ಯಾಂಡ್‌ನ್ನು ರೂಪಿಸಲಾಗಿರುತ್ತದೆ. ಇಂದಿನ ಧಾವಂತದ ಯುಗದಲ್ಲಿ ನಿರಾಳವಾಗಿ ಕುಳಿತು ತಿನ್ನಲು ಸಮಯವೆಲ್ಲಿ? ಈ ಐಲ್ಯಾಂಡ್‌ಗೆ ಆನಿಸಿದಂತೆ ಒಂದು ಕೊನೆಗೆ ಪುಟ್ಟ ಬ್ರೇಕ್‌ ಫಾಫ್ಟ್ ಟೇಬಲ್‌ನ್ನೂ ಜೋಡಿಸಲಾಗಿರುತ್ತದೆ. ಹೀಗಾಗಿ ಈ ಬ್ರೇಕ್‌ ಫಾಸ್ಟ್ ಟೇಬಲ್ ಬಡಿಸುವವರಿಗೆ ಸುಲಭವಾಗಿರುವುದೇ ಅಲ್ಲದೆ ನಿಮ್ಮ ದೋಸೆಯ ಬಿಸಿ ಆರುವ ಮುನ್ನ ಕಾವಲಿಯಿಂದ ನಿಮ್ಮ ಬ್ರೇಕ್‌ ಫಾಸ್ಟ್ ಟೇಬಲ್ ಮೇಲಿನ ತಟ್ಟೆಗೆ ಬಂದು ಬೀಳುತ್ತದೆ. ಬಹಳ ಸರಳವಾದ ವಿನ್ಯಾಸದಲ್ಲಿ ಅಡುಗೆಮನೆಯ ಮಧ್ಯ ಭಾಗದಲ್ಲಿ ಈ ಕೌಂಟರ್‌ನ್ನು ರೂಪಿಸಲಾಗುತ್ತದೆ. ಸಾಮಾನ್ಯವಾಗಿ ಗ್ರಾನೈಟ್‌, ಸ್ಟೀಲ್ ಅಥವಾ ಮರವನ್ನೂ ಬಳಸಲಾಗುತ್ತದೆ, ಆದರೆ ಬಿಸಿಯನ್ನು ತಡೆಯುವ ಸಲುವಾಗಿ ಮತ್ತು ಬಹಳ ಕಾಲ ಬಾಳಿಕೆ ಬರುವ ದೃಷ್ಟಿಯಿಂದ ಗ್ರಾನೈಟ್‌, ಮಾರ್ಬಲ್ ಅಥವಾ ಮತ್ಯಾವುದಾದರೂ ಕಲ್ಲಿನ ಹಾಸು ಸೂಕ್ತವಾದುದು.

ಸಾಮಾನ್ಯವಾಗಿ ಇದು ಸೊಂಟದ ಎತ್ತರಕ್ಕೆ ಇರುತ್ತದೆ ಮತ್ತು ಇದರ ಕೆಳಗಿನ ಭಾಗವನ್ನು ಸ್ಟೋರೇಜ್‌ಗಾಗಿ ಬಳಸಬಹುದು.  ತರಕಾರಿಯನ್ನು ಹೆಚ್ಚಲು ಅವಕಾಶವಿದ್ದು, ಅವುಗಳನ್ನು ತೊಳೆಯಲು ಪುಟ್ಟ ಸಿಂಕವೊಂದಿದ್ದರೆ ಅನುಕೂಲ, ಸ್ಥಳಾವಕಾಶಕ್ಕೆ ಅನುಗುಣವಾಗಿ ರೂಪಿಸಬಹುದು. ಕತ್ತರಿ, ಚಾಕು ಮತ್ತು ಬೆಂಕಿಯೊಡನೆ ಸರಸವಾಡಿಕೊಂಡು ಅಡುಗೆ ಮಾಡುವಾಗ ಬೆಳಕಿನ ಅಗತ್ಯ ಹೆಚ್ಚು. ಆದ್ದರಿಂದ ಕೆಲಸ ಮಾಡುವಾಗ ಚೆನ್ನಾಗಿ ಬೆಳಕು ಬರುವಂತೆ ವಿದ್ಯುತ್‌ ದೀಪಗಳನ್ನು ಇರಿಸಬೇಕಾಗುತ್ತದೆ. ಎಲ್ಲ ಸರಿ, ಅಡುಗೆ ಮಾಡುವಾಗ ಬರುವ ಹೊಗೆಯ ಬಗ್ಗೆ ಯೋಚಿಸುವುದು ಬೇಡವೇ? ಖಂಡಿತ ಬೇಕು. ಹೊಗೆಯನ್ನು ಹೊರ ಕಳುಹಿಸಲು ವಿದ್ಯುತ್‌ ಚಿಮಣಿಯನ್ನು ಹಾಕಿಸಬಹುದು. ಧಾರಾಳವಾಗಿ ಖರ್ಚು ಮಾಡಲು ಸಾಧ್ಯವಿದ್ದರೆ ಇನ್ನೂ ಹೈಯರ್‌ ಎಂಡ್‌ನ ಹಬ್‌ ಅಥವಾ ಹುಡ್‌ನ್ನು ಹಾಕಿಸಬಹುದು. ಅದು ಸೂಕ್ತವಾಗಿ ಕೆಲಸ ಮಾಡುವುದಲ್ಲದೆ ಅಡುಗೆಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ, ನಿಮ್ಮ ಅಡುಗೆಮನೆ ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತದೆ.

kitchn

ಅನುಕೂಲಗಳು

ಅಡುಗೆಮನೆ ಎಂದಾಗ ಸಾಮಾನುಗಳನ್ನಿಡುವ ಜಾಗ, ಅವುಗಳನ್ನು  ಕೈಗೆಟುಕುವಂತೆ ಮತ್ತು ಸುಂದರವಾಗಿ ಕಾಣುವಂತೆ ಇಡಲು ಸ್ಥಳಾವಕಾಶ ಮತ್ತು ಸರಾಗವಾಗಿ ಕೆಲಸ ಮಾಡಲು ನಿರಾಳತೆ ಈ ಮೂರೂ ತತ್ವಗಳು ಅಗತ್ಯ. ಆದರೆ ಎಲ್ಲ ಅಡುಗೆಮನೆಗಳಲ್ಲೂ ಇವು ಲಭ್ಯವಿರುವುದಿಲ್ಲ. ಆದರೆ ಐಲ್ಯಾಂಡ್‌ ಕಿಚನ್‌ನಲ್ಲಿ ಈ ಮೂರಕ್ಕೂ ಅವಕಾಶವಿದೆ ಮತ್ತು  ನಿಮ್ಮ ಮನೆಗೆ ಕಳಸವಿಟ್ಟಂತೆ ಸುಂದರವಾಗಿಯೂ ಕಾಣುತ್ತದೆ. ಚಲಿಸುವಂತಹ ಐಲ್ಯಾಂಡ್‌ ಅಥವಾ ಕುಳಿತುಕೊಳ್ಳುವ ಆಸನಗಳನ್ನು ಐಲ್ಯಾಂಡ್‌ನಂತೆ ರೂಪಿಸುವ ಅವಕಾಶವಿದ್ದರೆ ನಿಜಕ್ಕೂ ಚಂದ. ಆದರೆ ಶಾಶ್ವತ ಐಲ್ಯಾಂಡ್‌ ಕಿಚನ್‌ ಇದ್ದಾಗ ನಿಮ್ಮ ಅದೃಷ್ಟಕ್ಕೆ ಎಣೆಯೇ ಇಲ್ಲ. ಇದರ ವಿವಿಧ ಅನುಕೂಲಗಳೆಂದರೆ :

  1. ಐಲ್ಯಾಂಡ್‌ನ ತಳಭಾಗದಲ್ಲಿ ವಿಪುಲವಾದ ಸ್ಥಳಾವಕಾಶ ಇರುತ್ತದೆ. ಮಿಕ್ಕ ಅಡುಗೆಮನೆಗಳಲ್ಲಿರುವ ಸ್ಥಳಕ್ಕಿಂತ ಇದೊಂದು ಹೆಚ್ಚಿನ ಅರ್ಥಾತ್‌ ಎಕ್ಸ್ ಟ್ರಾ ಸ್ಥಳವಾಗುತ್ತದೆ. ನಿಮಗೆ ಬೇಕಾದಂತೆ ಡ್ರಾಯರ್‌ಗಳು, ವಿಭಾಗಗಳನ್ನು ಮಾಡಿ ಸಾಮಾನುಗಳನ್ನು ಇರಿಸಬಹುದು. ಅಡುಗೆ ಮಾಡುವಾಗ ಕೈಗೆಟುಕುವಂತೆ ಅಣಿಯಾಗಿಟ್ಟುಕೊಳ್ಳಬಹುದು.
  2. ಗೃಹಿಣಿಗೆ ಅಡುಗೆ ಕೆಲಸದ ಜೊತೆಗೆ ಮಕ್ಕಳ ಹೋಮ್ ವರ್ಕ್‌ ಮತ್ತು ಅವರು ಆಟವಾಡುವಾಗಲೂ ಅವರ ಮೇಲೊಂದು ಕಣ್ಣಿಟ್ಟಿದ್ದಾಗಲೇ ಸಮಾಧಾನ. ಇಲ್ಲಿ ಎಲ್ಲ ಮುಕ್ತವಾಗಿರುವುದರಿಂದ ಅವರ ಚಟುವಟಿಕೆಗಳನ್ನು ನೇರವಾಗಿ ಈ ಓಪನ್‌ ಕಿಚನ್‌ನಿಂದಲೇ ಗಮನಿಸಬಹುದು. ಅನೇಕ ಬಾರಿ ಬ್ರೇಕ್‌ ಫಾಸ್ಟ್ ಟೇಬಲ್‌ನ್ನು ಮಕ್ಕಳ ಬರೆಯುವ ಮೇಜನ್ನಾಗಿಯೂ ಬಳಸಬಹುದು.
  3. ಅಡುಗೆಮನೆ ಚಿಕ್ಕದಿದ್ದಾಗ ಜರುಗಿಸಬಲ್ಲಂತಹ (ಮೂವೆಬಲ್) ಐಲ್ಯಾಂಡ್‌ನ್ನೂ ಮಾಡಿಸುತ್ತಾರೆ. ಅಗತ್ಯವಿದ್ದಾಗ ಅದನ್ನು ಜರುಗಿಸಿ ಪಕ್ಕಕ್ಕಿರಿಸಿದಾಗ ಕೆಲಸ ಮಾಡಲು, ಹೆಚ್ಚಿನ ಅಡುಗೆಯನ್ನು ಮಾಡುವಾಗ ಸ್ಥಳ ವಿಶಾಲವಾಗುತ್ತದೆ.
  4. ಹೆಚ್ಚಿನ ಸ್ಥಳಾವಕಾಶವಿದ್ದು ಐಲ್ಯಾಂಡ್‌ನಲ್ಲೇ ಎಲ್ಲ ಕೆಲಸ ಅಂದರೆ ತರಕಾರಿ ಹೆಚ್ಚುವುದು, ಅಡುಗೆ ಮಾಡಲು ಅವಕಾಶವಿದ್ದರೆ ಅದರ ಸೊಗಸೇ ಬೇರೆ. ಸ್ಟವ್ ಮೇಲೆ ಹುಡ್‌ ಇರಿಸಿದರೆ ಅಡುಗೆ ಮಾಡುವಾಗ ಹೊಗೆಯ ತಾಪತ್ರಯವಿರುವುದಿಲ್ಲ.

`ಸಾಮಾನ್ಯಾಗಿ ಮಹಿಳೆಯರು ಕೆಲಸ ಮಾಡುವಾಗ ಗೋಡೆಗೆ ಮುಖ ಮಾಡಿ ಕೆಲಸ ಮಾಡುತ್ತಾರೆ. ಆದರೆ ಐಲ್ಯಾಂಡ್‌ ಇದ್ದಾಗ ಅಡುಗೆಯ ಕೆಲಸ ಮತ್ತು ಅದನ್ನು ಮಾಡುವವರೂ ಮನೆಯ ಉಳಿದ ವಿದ್ಯಮಾನಗಳನ್ನು ಗಮನಿಸುತ್ತಲೇ ಕೆಲಸ ಮಾಡಬಹುದು. ಆಗ ಅವರಿಗೆ ಕೆಲಸ ಮಾಡುವಾಗ ಮನೆಯ ಮಿಕ್ಕ ಸದಸ್ಯರಿಂದ ಪ್ರತ್ಯೇಕವಾದ ಭಾವ ಬಾರದು. ಆದ್ದರಿಂದ ಆಧುನಿಕ ಮಹಿಳೆಯರು ಈ ರೀತಿಯ ಅಡುಗೆಮನೆಯನ್ನು ಬಯಸುತ್ತಾರೆ. ಅಡುಗೆ ಮಾಡುವುದನ್ನು ನೋಡಲು ಅವಕಾಶವಿದ್ದಾಗ ನೋಡುಗರಲ್ಲಿ ತಿನ್ನುವ ಆಸಕ್ತಿ ಮತ್ತೂ ಹೆಚ್ಚಾಗುತ್ತದೆ. ಮೇಲ್ಮಟ್ಟದ ಅನೇಕ ರೆಸ್ಟೋರೆಂಟ್‌ಗಳಲ್ಲಿ ಅಡುಗೆ ತಯಾರಿಸುವುದನ್ನು ನೋಡಲು ಅವಕಾಶವಿರುತ್ತದೆ,’ ಎನ್ನುತ್ತಾರೆ ಬೆಂಗಳೂರಿನ ಆರ್ಕಿಟೆಕ್ಟ್ ರುದ್ರೇಶ್‌.

ಒಟ್ಟಿನಲ್ಲಿ ನೋಡಲು ಚಂದವಾಗಿದ್ದು, ಸಾಮಾನು ಮತ್ತು ಉಪಕರಣಗಳನ್ನಿಡಲು ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಐಲ್ಯಾಡ್ ಕಿಚನ್‌ ನಿಜಕ್ಕೂ ಉಪಯುಕ್ತವಾದುದು. ಅಡುಗೆಮನೆಯನ್ನು ಶುಭ್ರವಾಗಿರಿಸುವ ಮತ್ತು ಅಲ್ಲಿಯೂ ಕಲಾತ್ಮಕತೆಯನ್ನು ಮೂಡಿಸುವಲ್ಲಿ ಇದು ನಿಮಗೊಂದು ಸವಾಲೂ ಆಗಬಹುದು.

ಐಲ್ಯಾಂಡ್‌ ಕಿಚನ್‌ಗೆ ಸ್ಥಳಾವಕಾಶವಿದ್ದಲ್ಲಿ ಪೆನಿನ್ಸುಲಾ (ಪರ್ಯಾಯ ದ್ವೀಪ) ಕಿಚನ್‌ಗೆ ಮೊರೆ ಹೋಗಬಹುದು. ಐಲ್ಯಾಂಡ್‌ನಲ್ಲಿ ಸುತ್ತಲೂ ಓಡಾಡಲು ಅವಕಾಶವಿರುತ್ತದೆ. ಆದರೆ ಪರ್ಯಾಯ ದ್ವೀಪದಲ್ಲಿ ಮೂರು ಭಾಗ ಮಾತ್ರ ನೀರಿರುವಂತೆ ಇಲ್ಲೂ ಮೂರು ಭಾಗದಲ್ಲಿ ಮಾತ್ರ ಓಡಾಡಲು ಅವಕಾಶವಿರುತ್ತದೆ. ಅದಕ್ಕೂ ಅವಕಾಶವಿಲ್ಲದಿದ್ದಲ್ಲಿ, `ಎಲ್’ ಆಕಾರದ ಕೌಂಟರ್‌ ಸಾಧ್ಯ. ಒಟ್ಟಾರೆ ಅವಕಾಶಗಳು ವಿಪುಲವಾಗಿದ್ದು ನಿಮ್ಮ ಆಸೆಗೆ ಮತ್ತು ಜೇಬಿಗೆ ಹೊಂದುವಂತಹುದನ್ನು ಆರಿಸಿಕೊಳ್ಳಬಹುದು. ಒಟ್ಟಿನಲ್ಲಿ ಮನೆಯೊಡತಿಗೆ ಸಮಾಧಾನವಾದಾಗ, ಮನೆಯ ಎಲ್ಲರಿಗೂ ರುಚಿಕರವಾದ ಮತ್ತು ಆರೋಗ್ಯಕರವಾದ ಊಟವಂತೂ ಗಟ್ಟಿ ಎನ್ನುವುದರಲ್ಲಿ ಎರಡು ಮಾತಿಲ್ಲ, ಅಲ್ಲವೇ?

ಮಂಜುಳಾ ರಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ