ಹೆಣ್ಣೆಂದರೆ ಮರೆಯಲ್ಲಿರುವವಳು, ಅವಳಿಗೇಕೆ ಅಲಂಕಾರ? ನಾಲ್ಕು ಗೋಡೆಗಳ ಮಧ್ಯೆ ಇದ್ದು ಬೇಯಿಸಿ ಹಾಕುವವಳಿಗೆ ಏಕೆ ಬೇಕು ಬೆಳಕು? ಅವಳಿಗೇಕೆ ವಿದ್ಯೆ ಎನ್ನುವ ಕಾಲವೊಂದಿತ್ತು. ಅಂತೆಯೇ ಅವಳು ಸದಾಕಾಲ ಬೇಯಿಸಿಕೊಂಡಿರುವ ಅಡುಗೆಮನೆಯೂ ಈ ಭಾವಕ್ಕೆ ತಕ್ಕಂತೆ ಮನೆಯ ಹಿಂಭಾಗದ ಒಂದು ಮೂಲೆಯಲ್ಲಿರುತ್ತಿತ್ತು.
ಕಾಲ ಬದಲಾದಂತೆ ಹೆಣ್ಣಿನ ಸ್ಥಾನದ ಜೊತೆ ಜೊತೆಗೆ ಅಡುಗೆಮನೆಯೂ ರೂಪಾಂತರಗೊಳ್ಳಲಾರಂಭಿಸಿತು. ಮಸಿಗಟ್ಟಿದ ಗೋಡೆ, ಹೊಗೆ ತುಂಬಿಕೊಂಡ ಸ್ಥಳವಾಗಿದ್ದ ಅಡುಗೆಮನೆ, ಮನೆಯ ಒಂದು ಮುಖ್ಯ ಭಾಗವಾಗಿ ಅನಾವರಣಗೊಳ್ಳಲು ಆರಂಭಿಸಿತು. ಅಡುಗೆಮನೆ ಎಂದಾಗ ಸಾಮಾನುಗಳನ್ನಿಡಲು ಒಂದಷ್ಟು ಕಪಾಟುಗಳು, ಆಧುನಿಕತೆಯ ಕೊಡುಗೆಯಾಗಿ ಅಡುಗೆಮನೆಗೆ ಸೇರ್ಪಟ್ಟ ಉಪಕರಣಗಳಿಗಾಗಿ ಒಂದು ನಿರ್ದಿಷ್ಟ ಸ್ಥಾನ, ಅವುಗಳಿಗಾಗಿ ವಿದ್ಯುತ್ ಪಾಯಿಂಟುಗಳು, ಮಣ್ಣಿನ ಒಲೆಗಳಿಂದ ಪಲ್ಲಟಗೊಂಡು ಹೊಳೆಯುವ ಬಣ್ಣಬಣ್ಣದ ಗ್ರಾನೈಟ್, ನಿಮಗೆ ಬೇಕಾದಂತಹ ಬಣ್ಣದ ನುಣುಪಾದ ಗ್ರಾನೈಟ್ ಕಲ್ಲುಹಾಸಿನ ಮೇಲೆ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡ ಎಲೆಕ್ಟ್ರಿಕ್ ಒಲೆ, ಕಾಲ ಕಳೆದಂತೆ ಅದಕ್ಕಿಂತಲೂ ವೇಗವಾಗಿ ಅಡುಗೆ ಮಾಡಲು ಅನುವಾಗುವ ಗ್ಯಾಸ್ ಒಲೆಗಳು.
ಮೊದಲಿಗೆ ಗ್ಯಾಸ್ ಒಲೆ ಕಲ್ಲು ಹಾಸಿನ ಮೇಲೆ ಅರ್ಥಾತ್ ಕುಕಿಂಗ್ ಟೇಬಲ್‌ನ ಮೇಲೆ ಇದ್ದದ್ದು ನಂತರ ಸಂಕನ್ ಅಂದರೆ ಆ ಗ್ರಾನೈಟ್ ಕಲ್ಲುಹಾಸಿನ ಸಮಕ್ಕೆ ರೂಪುಗೊಂಡ ಗ್ಯಾಸ್ ಒಲೆಗಳು ಕಾಣತೊಡಗಿದವು. ಇಷ್ಟೆಲ್ಲಾ ಬದಲಾವಣೆಗಳಿದ್ದರೂ ಅಡುಗೆಮನೆ ನಾಲ್ಕು ಗೋಡೆಗಳ ಮಧ್ಯೆಯೇ ಇತ್ತು. ಅಡುಗೆಮನೆಯನ್ನು ಮರೆಮಾಡಲು ಅದಕ್ಕೊಂದು ಬಾಗಿಲು ಸಹ ಇರುತ್ತಿತ್ತು. ಆದರೆ ಈಗ ವಿಶ್ವದ ಎಲ್ಲಾ ರಂಗಗಳಲ್ಲೂ ಮಹಿಳೆ ಮುಕ್ತವಾಗಿ ತನ್ನ ಛಾಪನ್ನು ಮೂಡಿಸಿದಂತೆ ಮನೆಯ ಕೇಂದ್ರ ಭಾಗವಾಗಿ ಅಡುಗೆಮನೆಯೂ ರೂಪುಗೊಳ್ಳುತ್ತಿದೆ.
ಆಧುನಿಕ ಚಿಂತನೆಗೆ ಅನುಗುಣವಾಗಿ ಈಗ ನಗರಗಳಲ್ಲಿನ ನಿವೇಶನಗಳು ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಗೋಡೆಗಳು ಕಡಿಮೆಯಾದಷ್ಟೂ ಸ್ಥಳ ವಿಶಾಲವಾಗಿ ಕಾಣುತ್ತದೆ. ಅಂತೆಯೇ ಅಡುಗೆಮನೆಯೂ ತೆರೆದ ಕೋಣೆಯಾಗಿ ಅರ್ಥಾತ್ `ಐಲ್ಯಾಂಡ್ ಕಿಚನ್' ಎಂದು ನಾಮಾಂತರಗೊಂಡಿದೆ.
ಏನಿದು ಐಲ್ಯಾಂಡ್ ಕಿಚನ್?
ಹಿಂದೆ ಅಡುಗೆಮನೆಯನ್ನು ರೂಪಿಸುವಾಗ ಅಲ್ಲಿನ ಉಪಕರಣಗಳು ಮತ್ತು ಸಾಮಾನುಗಳನ್ನಿಡುವ ಉಗ್ರಾಣ ಅಂದರೆ ಸ್ಟೋರೇಜ್‌ಗೆ ಹೆಚ್ಚಿನ ಗಮನ ನೀಡಲಾಗುತ್ತಿತ್ತು. ಪರಿಣಾಮ ಅಡುಗೆ ಮಾಡಲು ಸ್ಥಳ ಕಡಿಮೆಯಾಗಿ ಕಿಷ್ಕಿಂಧೆಯಾಗುತ್ತಿತ್ತು. ಅಡುಗೆ ಮಾಡುವ ಸ್ಥಳ ವಿಶಾಲವಾಗಿದ್ದಾಗ ಅಡುಗೆ ತಯಾರಿಸುವವರಿಗೆ ಕೈಯಾಡಿಸಲು ಅನುಕೂಲ ಮತ್ತು ಗಾಳಿ ಬೆಳಕಿನ ಅವಶ್ಯಕತೆಯೂ ಹೆಚ್ಚು. ಈ ಕೊರತೆಯನ್ನು ಮನಗಂಡ ವಿನ್ಯಾಸಕರು ಅಡುಗೆಮನೆಯ ಮಧ್ಯದಲ್ಲಿ ಐಲ್ಯಾಂಡ್ ಎಂದು ನಾಮಕರಣಗೊಂಡ ಸ್ಥಳವನ್ನು ರೂಪಿಸಿದರು. ಸುತ್ತಲೂ ಓಡಾಡಲು ಅನುಕೂಲಕರವಾಗಿದ್ದು, ಒಂದೇ ಬಾರಿಗೆ ಹೆಚ್ಚು ಜನರು ಕೆಲಸ ಮಾಡಲು ಆರಾಮವಾಗಿರುತ್ತದೆ. ಸುತ್ತಲೂ ಇರುವ ಕೌಂಟರ್‌ಗಳೇ ಅಲ್ಲದೆ ಅದರ ಮಧ್ಯ ಭಾಗಕ್ಕೆ ಐಲ್ಯಾಂಡ್‌ನ್ನು ರೂಪಿಸಲಾಗಿರುತ್ತದೆ. ಇಂದಿನ ಧಾವಂತದ ಯುಗದಲ್ಲಿ ನಿರಾಳವಾಗಿ ಕುಳಿತು ತಿನ್ನಲು ಸಮಯವೆಲ್ಲಿ? ಈ ಐಲ್ಯಾಂಡ್‌ಗೆ ಆನಿಸಿದಂತೆ ಒಂದು ಕೊನೆಗೆ ಪುಟ್ಟ ಬ್ರೇಕ್ ಫಾಫ್ಟ್ ಟೇಬಲ್‌ನ್ನೂ ಜೋಡಿಸಲಾಗಿರುತ್ತದೆ. ಹೀಗಾಗಿ ಈ ಬ್ರೇಕ್ ಫಾಸ್ಟ್ ಟೇಬಲ್ ಬಡಿಸುವವರಿಗೆ ಸುಲಭವಾಗಿರುವುದೇ ಅಲ್ಲದೆ ನಿಮ್ಮ ದೋಸೆಯ ಬಿಸಿ ಆರುವ ಮುನ್ನ ಕಾವಲಿಯಿಂದ ನಿಮ್ಮ ಬ್ರೇಕ್ ಫಾಸ್ಟ್ ಟೇಬಲ್ ಮೇಲಿನ ತಟ್ಟೆಗೆ ಬಂದು ಬೀಳುತ್ತದೆ. ಬಹಳ ಸರಳವಾದ ವಿನ್ಯಾಸದಲ್ಲಿ ಅಡುಗೆಮನೆಯ ಮಧ್ಯ ಭಾಗದಲ್ಲಿ ಈ ಕೌಂಟರ್‌ನ್ನು ರೂಪಿಸಲಾಗುತ್ತದೆ. ಸಾಮಾನ್ಯವಾಗಿ ಗ್ರಾನೈಟ್, ಸ್ಟೀಲ್ ಅಥವಾ ಮರವನ್ನೂ ಬಳಸಲಾಗುತ್ತದೆ, ಆದರೆ ಬಿಸಿಯನ್ನು ತಡೆಯುವ ಸಲುವಾಗಿ ಮತ್ತು ಬಹಳ ಕಾಲ ಬಾಳಿಕೆ ಬರುವ ದೃಷ್ಟಿಯಿಂದ ಗ್ರಾನೈಟ್, ಮಾರ್ಬಲ್ ಅಥವಾ ಮತ್ಯಾವುದಾದರೂ ಕಲ್ಲಿನ ಹಾಸು ಸೂಕ್ತವಾದುದು.