ಸೋರೆ ಸೋಯಾ ಪಕೋಡ

ಸಾಮಗ್ರಿ : 1-1 ಕಪ್‌ ಸೋರೆಕಾಯಿ ತುರಿ ಸೋಯಾ ಚೂರು, 1 ಕಪ್‌ ನೆನೆಸಿ ರುಬ್ಬಿಕೊಂಡ ಉದ್ದಿನ ಹಿಟ್ಟು, ಅರ್ಧರ್ಧ ಕಪ್ ಅಕ್ಕಿಹಿಟ್ಟು ಕಡಲೆಹಿಟ್ಟು ಹುರಿದ ರವೆ, ಒಂದಿಷ್ಟು ಹೆಚ್ಚಿದ ಹಸಿಮೆಣಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಖಾರ ಗರಂ ಮಸಾಲೆ ಅಮ್ಚೂರ್‌ ಪುಡಿ, ಅರ್ಧರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ 2 ಈರುಳ್ಳಿ, ಕರಿಯಲು ಎಣ್ಣೆ.

ವಿಧಾನ : 1-2 ತಾಸು ಸೋಯಾ ಚೂರನ್ನು ನೆನೆಹಾಕಿ, ನಂತರ ಲಘುವಾಗಿ ಬೇಯಿಸಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಪಕೋಡ ಮಿಶ್ರಣ ಕಲಸಬೇಕು. ಬಾಣಲೆಯಲ್ಲಿ ರೀಫೈಂಡ್‌ ಎಣ್ಣೆ ಬಿಸಿ ಮಾಡಿಕೊಂಡು, ಇದರಿಂದ ಚೂರು ಚೂರೇ ಮಿಶ್ರಣ ಹಾಕುತ್ತಾ, ಪಕೋಡ ಕರಿಯಿರಿ. ಬಿಸಿ ಇರುವಾಗಲೇ ಚಿತ್ರದಲ್ಲಿರುವಂತೆ ಅಲಂಕರಿಸಿ, ಪುದೀನಾ ಚಟ್ನಿ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಮಾವಿನ ಸ್ಪೆಷಲ್ ರಸಂ

ಸಾಮಗ್ರಿ : 4 ಮಾಗಿದ ಹುಳಿಮಾವು, 8-10 ಸಕ್ಕರೆ ಬಾದಾಮಿ (ಏಪ್ರಿಕಾಟ್‌), 10-15 ಬಾದಾಮಿ, 5-6 ಹಸಿ ಮೆಣಸಿನಕಾಯಿ, 3-4 ಲವಂಗದೆಲೆ, 3-4 ಏಲಕ್ಕಿ, 1-2 ಲವಂಗ, 1-2 ಚಕ್ಕೆ, 1-1 ಸಣ್ಣ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ ಪುಡಿ.

ವಿಧಾನ : ಮೊದಲು ಮಾವಿನ ಸಿಪ್ಪೆ ಹೆರೆದು ಸಣ್ಣ ಹೋಳುಗಳಾಗಿಸಿ. ಏಪ್ರಿಕಾಟ್‌ ಸುಲಿದಿಟ್ಟು ಮೊಸರಲ್ಲಿ ನೆನೆಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಲವಂಗದೆಲೆ, ಏಲಕ್ಕಿ, ಚಕ್ಕೆ, ಲವಂಗ ಹಾಕಿ ಚಟಪಟಾಯಿಸಿ. ಬಾದಾಮಿ ಸೇರಿಸಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮಾವಿನ ಹೋಳು, ಏಪ್ರಿಕಾಟ್‌, ಉದ್ದಕ್ಕೆ ಸೀಳಿದ ಹಸಿ ಮೆಣಸು ಸೇರಿಸಿ ಬಾಡಿಸಬೇಕು. ಆಮೇಲೆ ಉಪ್ಪು, ಖಾರ, ಅರಿಶಿನ ಸೇರಿಸಿ, 2 ಕಪ್‌ ನೀರು ಬೆರೆಸಿ  ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಿದರೆ ಮಾವಿನ ಸ್ಪೆಷಲ್ ರಸಂ ರೆಡಿ!

ಸೌತೆಯ ಸ್ಪೆಷಲ್ ಬಾಲ್ಸ್

ಸಾಮಗ್ರಿ : 1 ಸಣ್ಣ ಸೌತೇಕಾಯಿ, 2 ಕಪ್‌ ನೆನೆಸಿ ರುಬ್ಬಿಕೊಂಡ ಹೆಸರುಬೇಳೆ, ಬೇಯಿಸಿ ಮಸೆದ 2 ಆಲೂ, ಸಣ್ಣಗೆ ಹೆಚ್ಚಿದ 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಾಟ್‌ ಮಸಾಲ ಕರಿಯಲು ಎಣ್ಣೆ.

ವಿಧಾನ : ಸೌತೇಕಾಯಿಯನ್ನು ನೀಟಾಗಿ ತುರಿದಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಂಡು, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿಯಾಗಿ ಸವಿಯಲು ಕೊಡಿ.

ಚಪಾತಿ ಸಮೋಸಾ

ಸಾಮಗ್ರಿ : 1-1 ಕಪ್‌ ಬೇಯಿಸಿದ ಕಡಲೆಕಾಳು, ಹಸಿ ಬಟಾಣಿ, ಹೆಸರುಕಾಳು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ 1 ಕಪ್‌), ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಚಾಟ್ ಮಸಾಲ, ಇಂಗು, ಗರಂಮಸಾಲ, ಒಂದಿಷ್ಟು ಹೆಚ್ಚಿದ ಕೊ.ಸೊಪ್ರು, ಶುಂಠಿ, ಹಸಿ ಮೆಣಸು, 1 ಗಿಟುಕು ತೆಂಗಿನ ತುರಿ, ಚಿಟಿಕಿ ಅರಿಶಿನ, ಮೃದುವಾದ 8-10 ಚಪಾತಿಗಳು, ಕರಿಯಲು ಎಣ್ಣೆ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ಬೇರೆಯಾಗಿಡಿ. ಅದೇ ಬಾಣಲೆಗೆ 5-6 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಟ್ಟು ಹೆಚ್ಚಿದ ಹಸಿಮೆಣಸು, ಶಂಠಿ ಹಾಕಿ ಬಾಡಿಸಿ. ನಂತರ ಬೆಂದ ಕಾಳು ಹಾಕಿ ಬೇಗ ಬೇಗ ಕೈಯಾಡಿಸಿ. ಆಮೇಲೆ ಉಪ್ಪು, ಅರಿಶಿನ, ಉಳಿದ ಮಸಾಲೆ, ತೆಂಗಿನ ತುರಿ ಹಾಕಿ ಕೆದಕಬೇಕು. ಕೆಳಗಿಳಿಸುವ ಮುನ್ನ ಗೋಡಂಬಿ, ದ್ರಾಕ್ಷಿ ಸೇರಿಸಿ. ಚಪಾತಿಗಳನ್ನು ಅರ್ಧಚಂದ್ರಾಕಾರ ಮಾಡಿ, ಅದನ್ನು ಶಂಖುವಿನಂತೆ ಮಡಿಸಬೇಕು. ಅದಕ್ಕೆ 2-3 ಚಮಚ ಕಾಳಿನ ಮಿಶ್ರಿಣ ತುಂಬಿಸಿ, ಅಂಚು ಬಿಡದಂತೆ ಮೈದಾ ಪೇಸ್ಟ್ ಮೆತ್ತಿ ಸವೋಸಾ ಆಕಾರ ನೀಡಿ, ಕಾದ ಎಣ್ಣೆಯಲ್ಲಿ ಕರಿದು, ಆದಷ್ಟು ಬೇಗ ಹೊರಗೆ ತೆಗೆದುಬಿಡಿ.

cookry-single-4

ಹಾಗಲ ಬಜ್ಜಿ

ಸಾಮಗ್ರಿ : 250 ಗ್ರಾಂ ತೆಳು ಹಾಗಲಕಾಯಿ, ಮಸೆದ ಪನೀರ್‌, 10-12 ಹಸಿಮೆಣಸು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಶುಂಠಿ, ಅರ್ಧ ಕಪ್‌ ಹುರಿದು ತರಿ ಮಾಡಿದ ಕಡಲೆಬೀಜ. 2 ಕಪ್‌ ನೆನೆಸಿ ರುಬ್ಬಿದ ಹೆಸರುಬೇಳೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ ಮಸಾಲ, ಕರಿಯಲು ಎಣ್ಣೆ.

ವಿಧಾನ : ಹಿಂದಿನ ರಾತ್ರಿ ಹಾಗಲಕಾಯಿ ಉದ್ದಕ್ಕೆ ಸೀಳಿಕೊಂಡು ಬೀಜ ತೆಗೆದು, ಉಪ್ಪು ನೀರಲ್ಲಿ ನೆನೆಹಾಕಿಡಿ. ಮಾರನೇ ದಿನ ಇದರ ನೀರು ಬಸಿದು ಕಾಯಿ ಬೇರೆ ಮಾಡಿ. ಬಾಣಲೆಯಲ್ಲಿ ತುಸು ಎಣ್ಣೆ  ಬಿಸಿ ಮಾಡಿ ಈರುಳ್ಳಿ ಬೆಳ್ಳುಳ್ಳಿ, ಶುಂಠಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಹಸಿಮೆಣಸು, ಮಸೆದ ಪನೀರ್‌ ಹಾಕಿ ಬಾಡಿಸಬೇಕು. ನಂತರ ಕಡಲೆಬೀಜ, ಉಪ್ಪು, ಖಾರ, ಮಸಾಲೆ ಎಲ್ಲಾ ಸೇರಿಸಿ ಕೆದಕಿ ಕೆಳಗಿಳಿಸಿ. ರುಬ್ಬಿದ ಹೆಸರುಬೇಳೆ ಹಿಟ್ಟಿಗೆ ಚಿಟಕಿ ಉಪ್ಪು, ಇಂಗು, ಖಾರ, ಸೋಡ ಹಾಕಿ ಗೊಟಾಯಿಸಿ. ಒಂದೊಂದೇ ಹಾಗಲ ಹೋಳಿಗೆ ಪನೀರ್‌ ಮಿಶ್ರಣ ತುಂಬಿಸಿ, ಹಾಗಲ ಸಮೇತ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು. ಚಟ್ನಿ, ಸಾಸ್‌ ಜೊತೆ ಬಿಸಿಯಾಗಿ ಸವಿಯಿರಿ.

ಕ್ಯಾಪ್ಸಿಕಂ ಬಜ್ಜಿ

ಸಾಮಗ್ರಿ : ಚಿಕ್ಕ ಗಾತ್ರದ 8-10 ಕ್ಯಾಪ್ಸಿಕಂ, 1-1 ಕಪ್‌ ಅಕ್ಕಿಹಿಟ್ಟು ಕಡಲೆಹಿಟ್ಟು, ಅರ್ಧ ಸಣ್ಣ ಚಮಚ ಬೇಕಿಂಗ್‌ ಪೌಡರ್‌, ರುಚಿಗೆ ತಕ್ಕಷ್ಟು ಉಪ್ಪು ಖಾರ, ಪುಡಿಮೆಣಸು, ಇಂಗು, ಓಮ, ಕರಿಯಲು ಎಣ್ಣೆ.

ವಿಧಾನ : ಪ್ರತಿ ಕ್ಯಾಪ್ಸಿಕಂನ್ನು 4 ಭಾಗವಾಗಿ ಕತ್ತರಿಸಿ. ಅದರ ಬೀಜದ ಭಾಗವನ್ನು ಬೇರೆ ಪಲ್ಯಕ್ಕೆ ಬಳಸಿಕೊಳ್ಳಿ. ಉಳಿದ ಎಲ್ಲಾ ಸಾಮಗ್ರಿ ಸೇರಿಸಿ, ತುಸು ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಒಂದೊಂದಾಗಿ ಇನ್ನು ಅದರಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು. ಸಂಜೆ ಹೊತ್ತು ಬಿಸಿ ಬಿಸಿಯಾಗಿ ಕಾಫಿ ಚಹಾ ಜೊತೆ ಸವಿಯಲು ಕೊಡಿ.

ಮಾನ್ಸೂನ್ಪಿಜ್ಜಾ

ಸಾಮಗ್ರಿ : 1 ದೊಡ್ಡ ಮಲ್ಟಿಗ್ರೇನ್‌ ಪಿಜ್ಜಾ, ಅರ್ಧ ಕಪ್‌ ಹುಳಿಮಾವಿನ ತುರಿ, 1-1 ದೊಡ್ಡ ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ (ಬಿಲ್ಲೆಗಳಾಗಿ ಹೆಚ್ಚಿಡಿ), ತುರಿದ 2-3 ಚೀಸ್‌ ಕ್ಯೂಬ್ಸ್, 1 ಮಾಗಿದ ಮಾವಿನಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಓರಿಗ್ಯಾನೋ, 4 ಚಮಚ ಟೊಮೇಟೊ ಪಿಜ್ಜಾ ಸ್ಪ್ರೆಡ್‌, 3-4 ಆಲಿವ್ಸ್, 8-10 ದ್ರಾಕ್ಷಿ.

ವಿಧಾನ : ಪಿಜ್ಜಾ ಬೇಸ್‌ ಮೇಲೆ ಟೊಮೇಟೊ ಸ್ಪ್ರೆಡ್‌ ಹರಡಿರಿ. ನಂತರ ಇದರ ಮೇಲೆ ಹೆಚ್ಚಿದ ತರಕಾರಿ ಬರಲಿ. ಇದರ ಮೇಲೆ ತುರಿದ ಚೀಸ್‌ ಉದುರಿಸಿ, ಮಾವಿನ ಹೋಳು, ಮಾವಿನ ತುರಿ ಹರಡಿರಿ. ಇದರ ಮೇಲೆ ಉಪ್ಪು, ಖಾರ, ಓರಿಗ್ಯಾನೋ ಉದುರಿಸಿ. ಇದನ್ನು ಓವನ್‌ನಲ್ಲಿರಿಸಿ ಆಲಿವ್ ‌ಗರಿಗರಿ ಆಗುವವರೆಗೂ ಬೇಕ್‌ ಮಾಡಿ ಸವಿಯಿರಿ.

ನಿಂಬೆ ಸ್ಪೆಷಲ್ ಪಾನಕ

ಸಾಮಗ್ರಿ : 3 ಕಪ್‌ ನೀರು, 2 ನಿಂಬೆಹಣ್ಣು, 2 ಚಮಚ ಕ್ರೀಂ, ಸಣ್ಣಗೆ ಹೆಚ್ಚಿದ 6-7 ಬಾದಾಮಿ, ಅರ್ಧರ್ಧ ಚಮಚ ಶುಂಠಿರಸ, 2-3 ಬಾದಾಮಿಯ ಪೇಸ್ಟ್, ರುಚಿಗೆ ತಕ್ಕಷ್ಟು ಸಕ್ಕರೆ ಉಪ್ಪು.

ವಿಧಾನ : ನೀರು ಬಿಸಿ ಮಾಡಿ ಹೆಚ್ಚಿದ ಬಾದಾಮಿ, ಬಾದಾಮಿ ಪೇಸ್ಟ್, ಶುಂಠಿ ರಸ ಬೆರೆಸಿ 1-2 ಕುದಿ ಬರಿಸಿ ಕೆಳಗಿಳಿಸಿ. ಆರಿದ ನಂತರ ಇದಕ್ಕೆ ಉಪ್ಪು, ಸಕ್ಕರೆ, ಕ್ರೀಂ ಬೆರೆಸಿ, ನಿಂಬೆಹಣ್ಣು ಹಿಂಡಿ ಚೆನ್ನಾಗಿ ಕದಡಿಕೊಂಡು ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ