ಮೇ9 ರಂದು ಟಿ.ವಿ. ಧಾರಾವಾಹಿಯೊಂದರಲ್ಲಿ ನಟಿಸುವ ನಟಿಯೊಬ್ಬಳು ಚಾರಕೋಪ್‌ ಪೊಲೀಸ್‌ ಸ್ಟೇಷನ್ನಿಗೆ ಬಂದು ದೂರು ಕೊಡುತ್ತಾಳೆ. ಆಕೆ ಕೊಟ್ಟ ದೂರನ್ನು ನೋಡಿ ಸಬ್‌ ಇನ್ಸ್ಪೆಕ್ಟರ್‌ ಭೋಸಿ ದಂಗಾಗಿ ಹೋದರು. ಇಂದಿನ 21ನೇ ಶತಮಾನದಲ್ಲೂ ಓದುಬರಹ ಬಲ್ಲ ಹುಡುಗಿಯರು ಭೂತ ಪ್ರೇತ, ಮಾಟ ಮಂತ್ರ ನಂಬುತ್ತಾರೆಯೇ? ಎಂದು ಅವರಿಗೆ ಅಚ್ಚರಿಯೂ ಆಯಿತು. ಆ ಕಾರಣದಿಂದ ಮೋಸಕ್ಕೂ ತುತ್ತಾಗುತ್ತಾರೆಯೇ ಎಂದು ಆತಂಕ ಆಯಿತು. ಆಕೆ 7 ವರ್ಷಗಳ ಹಿಂದೆ ಚಲನಚಿತ್ರಗಳಲ್ಲಿ, ಟಿ.ವಿ. ಧಾರಾವಾಹಿಗಳಲ್ಲಿ ನಟಿಸಲೆಂದು ಮುಂಬೈಗೆ ಬಂದಿದ್ದಳು. ಬಹಳಷ್ಟು ಸಂಘರ್ಷದ ಬಳಿಕ ಆಕೆಗೆ ಮಾಡೆಲಿಂಗ್‌ ಹಾಗೂ ಟಿ.ವಿ ಧಾರಾವಾಹಿಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಹೀಗಾಗಿ ಆಕೆ ಮುಂಬೈನಲ್ಲಿಯೇ ವಾಸಿಸತೊಡಗಿದಳು. ಇದೇ ಸಂದರ್ಭದಲ್ಲಿ ಆಕೆಗೆ ಒಬ್ಬ ಉದಯೋನ್ಮುಖ ಹಾಗೂ ಇವಳ ಹಾಗೆಯೇ ಸಂಘರ್ಷ ಮಾಡಿ ಮುಂದೆ ಬಂದ ಒಬ್ಬ ನಟ ಭೇಟಿಯಾಗುತ್ತಾನೆ. ಸುಮಾರು 3 ವರ್ಷಗಳ ಸ್ನೇಹ ಸುತ್ತಾಟದ ಬಳಿಕ ಅವರು ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆಕೆ ಅವನಿಗೆ ಸಾಕಷ್ಟು ಸಹಾಯ ಮಾಡಿದಳು. ಕೆಲವೇ ತಿಂಗಳ ಬಳಿಕ ಅವನಿಗೆ ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.

ಈ ಕಾರಣದಿಂದ ಅವನು ಅವಳೊಂದಿಗೆ ಸಂಪರ್ಕ ಮಿತಗೊಳಿಸಿದ. ಅವನು ಅವಳ ದೂರವಾಣಿ ಕರೆಗಳನ್ನು ತಿರಸ್ಕರಿಸತೊಡಗಿದ.

ತನ್ನ ಪ್ರೇಮಿ ತನ್ನನ್ನು ದೂರ ಇಡುತ್ತಿದ್ದುದರಿಂದ ಒತ್ತಡಕ್ಕೆ ಸಿಲುಕಿದ ಆ ನಟಿ, ಸಹೋದರನೆಂದು ಹೇಳಿಕೊಂಡ ಒಬ್ಬ ವ್ಯಕ್ತಿಯ ಮುಂದೆ ತನ್ನೆಲ್ಲ ನೋವನ್ನು ಹೇಳಿಕೊಂಡಳು. ಆಗ ಆತ 60-70 ವರ್ಷದ ಭಗವಾನ್‌ ದಾಸ್‌ ಎಂಬ ಮಂತ್ರವಾದಿಯ ಬಳಿ ಹೋಗಲು ಸಲಹೆ ನೀಡಿದ. ಅವಳಿಗೂ ಅದು ಸರಿ ಎನಿಸಿತು.

ಇಬ್ಬರೂ ಸೇರಿಕೊಂಡು ಮಾಹಿಮ್ ನಲ್ಲಿರುವ ಭಗವಾನ್‌ ದಾಸ್‌ ಬಳಿ ಹೋದರು. ಆಕೆ ಸ್ವಾಮಿಯನ್ನು ಭೇಟಿಯಾಗಿ ವಿಷಯ ತಿಳಿಸಿದಾಗ, ನಿನ್ನ ಮೇಲೆ ಭೂತಪ್ರೇತದ ಪ್ರಭಾವ ಉಂಟಾಗಿದೆ. ಅದರಿಂದ ಹೊರಬರಬೇಕೆಂದರೆ ನೀನು ವಿಶೇಷ ಪೂಜೆ ಮಾಡಬೇಕು. ಅದಕ್ಕಾಗಿ ನಿನಗೆ ಒಂದಿಷ್ಟು ಹಣ ಖರ್ಚಾಗುತ್ತದೆ ಎಂದ.

ಸ್ವಾಮೀಜಿಯ ಆ ಮಾತಿಗೆ ಯುವತಿ ಹೂಂ ಎಂದರು. ಪೂಜೆ ಪುನಸ್ಕಾರದಿಂದ ತನ್ನ ಪ್ರೇಮಿ ತನಗೆ ವಾಪಸ್‌ ಸಿಗಬಹುದೆಂದು ಆಕೆ ನಂಬಿದಳು. ಸ್ವಾಮೀಜಿ ಹೇಳಿದ ಪ್ರಕಾರ 70,000 ರೂ. ತೆಗೆದುಕೊಂಡು ಆಕೆ ಮರುದಿನ ಬಾಬಾ ಬಳಿ ಹೋದಳು. ಪೂಜೆ ಪುನಸ್ಕಾರದ ಬಳಿಕ ಆ ಬಾಬಾ ತಾನು ಯೋನಿ ದ್ವಾರದ ಮುಖಾಂತರ ಭೂತವನ್ನು ಹೊರತೆಗೆಯುವುದಾಗಿ ಹೇಳಿದ. ಆ ಯುವತಿ ಒಮ್ಮೆಲೆ ಹೌಹಾರಿದಳು. ತಕ್ಷಣವೇ ಅಲ್ಲಿಂದ ಹೊರಟುಹೋದಳು. 2-3 ದಿನಗಳ ಬಳಿಕ ಸ್ವಾಮೀಜಿಯ ಚೇಲಾ ಇಸ್ಮಾಯಿಲ್ ‌ಶೇಖ್‌ ಆಕೆಯನ್ನು ಭೇಟಿಯಾದ. ಅವನು ತನ್ನನ್ನು ತಾನು ಸಾಯಿಬಾಬಾ ಭಕ್ತ ಎಂದು ಹೇಳಿಕೊಂಡ ಭಗವಾನ್‌ ದಾಸ್‌ ಅವರ ಮಾತನ್ನು ನೀನು ಮನ್ನಿಸದೇ ಹೋದರೆ ನಿನಗೆ ಇನ್ನಷ್ಟು ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ಕೊಡುವ ರೀತಿಯಲ್ಲಿ ಹೇಳಿದ. ಸಾಯಿಬಾಬಾ ಒಂದು ಸಲ ಒಬ್ಬರ ಮನಸ್ಸಿನಲ್ಲಿ ಪ್ರವೇಶಿಸಿದರೆ ಖಂಡಿತ ಅವರಿಗೆ ಒಳ್ಳೆಯದಾಗುತ್ತೆ ಎಂದೂ ಆ ಚೇಲಾ ಹೇಳಿದ. ಆ ಮಾತಿಗೆ ಆಕೆ ಮನಸ್ಸಿಲ್ಲದ್ದಿದರೂ ಒಪ್ಪಿಕೊಂಡಳು. ಪೂಜೆ ಪುನಸ್ಕಾರವನ್ನು ತಾನು ಈ ಸಲ ನಿನ್ನ ಮನೆಯಲ್ಲಿಯೇ ನಡೆಸುವುದಾಗಿ ಹೇಳಿದ. ಆ ಪೂಜೆ ಸುಮಾರು 3 ತಿಂಗಳ ಕಾಲ ನಡೆಯುವುದಾಗಿಯೂ ಹೇಳಿದ. 3 ತಿಂಗಳ ಕಾಲ ಪೂಜೆ ನಡೆಯುತ್ತಲೇ ಇತ್ತು. ಆ ಯುವತಿ ಕೊನೆ ಕೊನೆಗೆ ಪೂಜೆ ಪುನಸ್ಕಾರದಿಂದ ಬೇಸತ್ತು ಹೋದಳು. ಆಗ ಆ ಇಸ್ಮಾಯಿಲ್ ‌ಶೇಖ್‌ ಈ ಸಲದ ಪೂಜೆ ಅತ್ಯಂತ ಪ್ರಭಾವಕಾರಿಯಾಗಿದೆ. ನಿನ್ನ ಪ್ರೇಮಿ ನಿನಗೆ ಖಂಡಿತ ವಾಪಸ್‌ ಸಿಕ್ಕೇ ಸಿಗುತ್ತಾನೆ. ನೀನು ಭರವಸೆ ಕಳೆದುಕೊಳ್ಳಬಾರದೆಂದು ಅವಳಿಗೆ ಧೈರ್ಯ ತುಂಬಿದ. ಬಳಿಕ ಅವಳನ್ನು ಪುಸಲಾಯಿಸುತ್ತ ನೀನು 25 ಲಕ್ಷ ರೂ. ತಂದುಕೊಡು. ಅದನ್ನು ನನಗೆ ಕೊಡಬೇಡ. ಪೂಜೆಯಲ್ಲಿ ಇಡಲು ಮಾತ್ರ ಎಂದು ಹೇಳಿದ.

ಮೂಢನಂಬಿಕೆಗೆ ತುತ್ತಾಗಿದ್ದ ಆ ಯುವತಿ ತನ್ನ ಪ್ರೇಮಿಗಾಗಿ ಆ ದೊಡ್ಡ ಮೊತ್ತವನ್ನು ಸ್ವಾಮೀಜಿಯ ಚೇಲಾನ ಕೈಗೆ ತಂದುಕೊಟ್ಟಳು. ಅವನು ಆ ಹಣವನ್ನು ಒಂದು ಬಾಕ್ಸಿನಲ್ಲಿ ಹಾಕಿ ಮೀರಾ ರೋಡ್‌ನಲ್ಲಿರುವ ಒಂದು ಗೋಡೌನ್‌ಗೆ ಅವಳನ್ನು ಕರೆದುಕೊಂಡು ಹೋದ.

ಪೂಜೆಯ ಸಮಯದಲ್ಲಿ ಅವನು ಮೇಲಿಂದ ಮೇಲೆ ವೇಷ ಬದಲಿಸುತ್ತಲಿದ್ದ. ಬಗೆಬಗೆಯ ಧ್ವನಿ ಹೊರಡಿಸುತ್ತಲಿದ್ದ. ಭೂತ ಪ್ರೇತದ ನೆರಳಿನಿಂದ ಮುಕ್ತಿ ದೊರಕಿಸುವ ನೆಪದಲ್ಲಿ ಅವಳ ಲೈಂಗಿಕ ಶೋಷಣೆ ಕೂಡ ಮಾಡಿದ. ಹಣ ತುಂಬಿದ ಬಾಕ್ಸ್ ನ್ನು ಅವಳಿಗೆ ಒಪ್ಪಿಸುತ್ತ ಈ ಪೂಜೆ ಪುನಸ್ಕಾರದ ಪ್ರಭಾವ ಕೆಲವು ದಿನಗಳ ಬಳಿಕ ನಿನಗೆ ನೋಡಲು ಸಿಗುತ್ತದೆ. ಅಲ್ಲಿಯವರೆಗೂ ಈ ಬಾಕ್ಸ್ ನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಹೇಳಿದ. ಬಾಕ್ಸ್ ತೆಗೆದುಕೊಂಡು ಹೋದ 3-4 ದಿನಗಳ ತನಕ ಇಸ್ಮಾಯಿಲ್ ಶೇಖ್‌ ಅವಳ ಸಂಪರ್ಕದಲ್ಲಿಯೇ ಇದ್ದ. ಆದರೆ ಇದ್ದಕ್ಕಿದ್ದಂತೆ ಅವನು ತನ್ನ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡ. ಹಲವು ಸಲ ಫೋನ್‌ ಮಾಡಿ ಮಾಡಿ ಆಕೆ ಸುಸ್ತಾಗಿಹೋದಳು. ಅದ್ಹೇಗೊ ಒಂದು ಸಲ ಅವನು ಫೋನ್‌ನಲ್ಲಿ ಸಿಕ್ಕಾಗ ತಾನು ಕೇರಳದಲ್ಲಿರುವುದಾಗಿ ಹೇಳಿದ್ದ.

ಪ್ರಕರಣ ದಾಖಲಾಯಿತು

ತೀವ್ರ ಮಾನಸಿಕ ವೇದನೆ ಅನುಭವಿಸಿದ ಆಕೆ ಕುತೂಹಲದಿಂದ ಬಾಕ್ಲ್ ತೆರೆದು ನೋಡುತ್ತಾಳೆ. ಅಲ್ಲಿ ಒಂದೇ ಒಂದು ನೋಟಿನ ಕಟ್ಟು ಇರಲಿಲ್ಲ. ಅದರಲ್ಲಿ ಇನ್ನೇನೊ ಹಾಕಿಡಲಾಗಿತ್ತು. ಇಸ್ಮಾಯಿಲ್‌ಗೆ ಈ ಕುರಿತಂತೆ ಕೇಳಿದಾಗ ಅವನು ಸುತ್ತು ಬಳಸಿ ಮಾತನಾಡತೊಡಗಿದ. ಅವನ ವಿರುದ್ಧ ರೋಸಿಹೋದ ಆ ಯುವತಿ ಅವನು ಮುಂಬೈಗೆ ವಾಪಸ್‌ ಬರುವುದನ್ನೇ ಕಾಯತೊಡಗಿದಳು. ಅವನು ಮುಂಬೈಗೆ ಬಂದಿರುವುದನ್ನು ಖಚಿತಪಡಿಸಿಕೊಂಡ ಆಕೆ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ದೂರು ಸಲ್ಲಿಸಿದಳು. ಬಳಿಕ ಭಗವಾನ್‌ ದಾಸ್‌ ಮತ್ತು ಇಸ್ಮಾಯಿಲ್ ‌ಇಬ್ಬರ ಬಂಧನವಾಯಿತು.

ಆ ಮಾಡೆಲ್ ‌ಹೇಳಿದ್ದೇನೆಂದರೆ, “ನಾನು ಮುಂಬೈನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ನನ್ನ ಕುಟುಂಬ ಬೇರೊಂದು ರಾಜ್ಯದಲ್ಲಿ ವಾಸಿಸುತ್ತಿದೆ. ಇಲ್ಲಿ ನಡೆದ ಯಾವೊಂದು ಘಟನೆಯನ್ನೂ ನಾನು ನನ್ನ ಕುಟುಂಬದವರ ಗಮನಕ್ಕೆ ತಂದಿಲ್ಲ. ನಾನು ಮೂಢನಂಬಿಕೆಯ ಪ್ರವೃತ್ತಿಯವಳಲ್ಲ. ಆದರೆ ನಿರಂತರ ಮಾನಸಿಕ ಮತ್ತು ದೈಹಿಕ ಒತ್ತಡದಿಂದ ನಾನು ದಾರಿ ತಪ್ಪಿದೆ.”

ಪೊಲೀಸ್‌ ಇನ್‌ಸ್ಪೆಕ್ಟರ್‌ ಭೋಸಿ ಹೇಳುವುದೇನೆಂದರೆ, ಮಹಿಳೆಯರು ಸಾಮಾನ್ಯವಾಗಿ ಇಂತಹ ನಕಲಿ ಬಾಬಾಗಳು ಮಂತ್ರವಾದಿಗಳ ಕಪಿಮುಷ್ಠಿಗೆ ಸಿಲುಕುತ್ತಾರೆ. ಈ ನಟಿ ಮೊದಲೇ ಪೊಲೀಸ್‌ ಠಾಣೆ, ಮನೋತಜ್ಞರ ಬಳಿ ಇಲ್ಲಿ ಕೌನ್ಸೆಲರ್‌ಗಳ ಬಳಿ ಬಂದು ತನ್ನ ಸಮಸ್ಯೆ ಹೇಳಬಹುದಿತ್ತು. ಪೊಲೀಸ್‌ ಠಾಣೆಗಳಲ್ಲಿ ಮಹಿಳೆಯರ ಸಮಸ್ಯೆ ಆಲಿಸುವ ಒಂದು ವಿಶೇಷ ತಂಡ ಇರುತ್ತದೆ.

ಮಹಿಳೆಯರು ಈ ತೆರನಾದ ಬಾಬಾಗಳ ಕಪಿಮುಷ್ಠಿಗೆ ಸಿಲುಕುವುದರ ಹಿಂದೆ ಅವರ ದುರ್ಬಲ ಮನಸ್ಸು ಕಾರಣವಾಗುತ್ತದೆ. ಅವರ ಈ ದೌರ್ಬಲ್ಯವನ್ನು ಈ ನಯವಂಚಕರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ.

ಮೂಢನಂಬಿಕೆ ನಿರ್ಮೂಲನ ಸಮಿತಿಯೊಂದರ ಸಂಸ್ಥಾಪಕ ಹಾಗೂ ಸಂಘಟಕ ಪ್ರೊ. ಶ್ಯಾಮ್ ಹೀಗೆ ಹೇಳುತ್ತಾರೆ, “ಸುಶಿಕ್ಷಿತ ಜನರೇ ಈ ತೆರನಾದ ಭೂತ ಪ್ರೇತ, ಮಾಟ ಮಂತ್ರಗಳ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಏಕೆಂದರೆ ಬಾಲ್ಯದಿಂದಲೇ ಅವರಿಗೆ ತರ್ಕ ಮಾಡುವ, ವೈಚಾರಿಕತೆಯೇ ಇರುವುದಿಲ್ಲ. ಇಂದಿನ ಬಹುತೇಕ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಪ್ರಸಾರವಾಗುವ ಧರ್ಮ ಆಧಾರಿತ ಕಾರ್ಯಕ್ರಮಗಳನ್ನು ನೋಡಿ ಮಹಿಳೆಯರು ಪ್ರಭಾವಿತರಾಗುತ್ತಾರೆ. ಅದನ್ನೇ ಸತ್ಯ ಎಂದು ನಂಬುತ್ತಾರೆ. ಧಾರಾವಾಹಿಗಳಲ್ಲಿ ಮೂಢನಂಬಿಕೆ ಹೆಚ್ಚುತ್ತಿರುವುದು ಖೇದದ ಸಂಗತಿ.

ಒಂದು ಬಗೆಯ ಚಕ್ರವ್ಯೂಹ

ಸುಶಿಕ್ಷಿತರಾಗಿದ್ದೂ ಜನರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ದೇವರು, ದೇವಸ್ಥಾನ, ತಂತ್ರಮಂತ್ರವಾದಿಗಳಿಗೆ ಮೊರೆ ಹೋಗುತ್ತಾರೆ. ಮಹಿಳೆಯರು ಮಾನಸಿಕವಾಗಿ ಸಾಕಷ್ಟು ದುರ್ಬಲರಾಗಿರುತ್ತಾರೆ. ಈ ಕಾರಣದಿಂದಲೇ ಬಾಬಾಗಳು, ಮಂತ್ರವಾದಿಗಳು ಇಂತಹ ಮಹಿಳೆಯರನ್ನು ಆರ್ಥಿಕವಾಗಿ, ದೈಹಿಕವಾಗಿ ಶೋಷಣೆ ಮಾಡುತ್ತಾರೆ.

ಸರ್ಕಾರ ಬಿಗಿ ಧೋರಣೆ ಅನುಸರಿಸಬೇಕು. ಮಾಧ್ಯಮಗಳು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಆ ಮಾಡೆಲ್ ‌ಕೂಡ ಮೂಢನಂಬಿಕೆ ಉಳ್ಳವಳಾಗಿದ್ದಳು. ಹಾಗಾಗಿ ಆಕೆ ಹಣವನ್ನು ಕಳೆದುಕೊಂಡಳು. ದೈಹಿಕವಾಗಿ ಶೋಷಣೆಗೊಳಗಾದಳು. ಎಲ್ಲಿಯವರೆಗೆ ಅರಿವಿನ ಕೊರತೆ ಇರುತ್ತದೋ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೊಂದು ಪ್ರಕಾರದ ಚಕ್ರವ್ಯೂಹವೇ ಆಗಿದೆ. ಇದರಲ್ಲಿ ಒಂದು ಸಲ ಸಿಕ್ಕಿಬಿದ್ದರು ಅದರಿಂದ ಹೊರಬರುವುದು ಕಷ್ಟಕರವೇ ಹೌದು. ಅದಕ್ಕಾಗಿ ನಮ್ಮ ಮಾನಸಿಕತೆಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ.

ವಿಷಯ ಏನೇ ಇರಲಿ, ಅಂತಹ ಕಷ್ಟದ ಸ್ಥಿತಿಯಲ್ಲೂ ಧೃತಿಗೆಡದ ಆ ಮಾಡೆಲ್ ಪೊಲೀಸ್‌ ಠಾಣೆಗೆ ಬಂದು ದೂರು ಸಲ್ಲಿಸಿದಳು. ಆ ದುರುಳರನ್ನು ಬಂಧಿಸುವಲ್ಲಿ ಪೊಲೀಸರಿಗೆ ನೆರವಾದಳು. ಇಲ್ಲದಿದ್ದರೆ ಇನ್ನೂ ಅದೆಷ್ಟು ಜನರು ಆ ನಕಲಿ ಬಾಬಾಗಳಿಗೆ ಮೋಸ ಹೋಗುತ್ತಿದ್ದರೊ ಏನೋ?

– ಪಿ.ಎನ್‌. ವಿಶ್ವನಾಥ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ