ಒಬ್ಬ ಪತ್ರಕರ್ತ ಸಿನಿಮಾ ನಿರ್ದೇಶಿಸಿದಾಗಲೇ ಸಿನಿಮಾದ ಅಸಲಿ ಹಕೀಕತ್ ಏನೆಂಬುದು ಗೊತ್ತಾಗುತ್ತದೆ ಎಂದು ಸಿನಿಮಾರಂಗದಲ್ಲಿ ಕೆಲವರು ಆಗಾಗ್ಗೆ ಹೇಳುತ್ತಲೇ ಇದ್ದರು. ನಾವು ಕೂಡಾ ಸಿನಿಮಾ ಮಾಡಬಲ್ಲೆವು ಎಂದು ಪತ್ರಕರ್ತರಲ್ಲಿ ಕೆಲವರು ಸಾಧಿಸಿ ತೋರಿಸಿದರು. ಅವರಲ್ಲಿ ಇಂದ್ರಜಿತ್ ಲಂಕೇಶ್ ಕೂಡಾ ಇಬ್ಬರು. `ತುಂಟಾಟ’ ಚಿತ್ರದ ಮೂಲಕ ನಿರ್ದೇಶಕರಾದ ಇಂದ್ರಜಿತ್ ಕನ್ನಡ ಚಿತ್ರರಂಗದ ಕರಣ್ ಜೋಹರ್ ಎಂದೇ ಗುರುತಿಸಲ್ಪಟ್ಟರು. ಅದ್ಧೂರಿತನದ ಜೊತೆಗೆ ಮ್ಯೂಸಿಕ್ ಚಿತ್ರ ಕೊಡುವಲ್ಲಿ ಯಶಸ್ಸು ಪಡೆದ ಇಂದ್ರಜಿತ್`ಲಂಕೇಶ್ ಪತ್ರಿಕೆ,’ `ಐಶ್ವರ್ಯ,’ `ಮೊನಾಲಿಸಾ,’ `ದೇವ್ ಸನ್ ಆಫ್ ದೇವೇಗೌಡ’ ಚಿತ್ರಗಳನ್ನು ತೆರೆಗಿತ್ತರು.
ಇಂದು ಬಾಲಿವುಡ್‌ನಲ್ಲಿ ನಂ.1 ತಾರೆಯಾಗಿ ಮೆರೆಯುತ್ತಿರುವ ದೀಪಿಕಾ ಪಡುಕೋಣೆಯನ್ನು `ಐಶ್ವರ್ಯ’ ಕನ್ನಡ ಚಿತ್ರದಲ್ಲಿ ಬೆಳ್ಳಿತೆರೆಗೆ ಪರಿಚಯಿಸಿದ ಕ್ರೆಡಿಟ್ ಇಂದ್ರಜಿತ್ ಅವರಿಗೆ ಸೇರುತ್ತದೆ. ಇಂದ್ರಜಿತ್ ಯಾವುದೇ ಚಿತ್ರ ಶುರು ಮಾಡುವುದಕ್ಕೆ ಮೊದಲು ಕ್ಯೂರಿಯಾಸಿಟಿ ಸೃಷ್ಟಿಸುತ್ತಾರೆ. ಈ ಬಾರಿ ಅವರ ನಿರ್ದೇಶನದ `ಐ ಲವ್ ಯೂ ಆಲಿಯಾ’ ಚಿತ್ರ ಹಲವು ಸರ್ಪ್ರೈಸ್‌ಗಳನ್ನು ಹೊಂದಿದೆ.
ರವಿಚಂದ್ರನ್ ಅವರಿಗೆ ವಿಶೇಷವಾದ ಪಾತ್ರದ ಮೂಲಕ `ಲವ್ ಯೂ ಆಲಿಯಾ’ ಚಿತ್ರದಲ್ಲಿ ಹೊಸ ಗೆಟಪ್‌ನೊಂದಿಗೆ ಪರಿಚಯಿಸಿದ್ದಾರೆ. ಇಲ್ಲಿಯವರೆಗೂ ರವಿಚಂದ್ರನ್ ಡಾಕ್ಟರ್ ಪಾತ್ರ ಮಾಡಿರಲಿಲ್ಲ. ಈ ಚಿತ್ರದಲ್ಲಿ ರವಿ ಸ್ತ್ರೀ ತಜ್ಞರಾಗಿ ಕಾಣಿಸಿಕೊಳ್ಳುತ್ತಾರೆ. ರವಿಚಂದ್ರನ್ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದಿರುವ ಇಂದ್ರಜಿತ್ ತಮ್ಮ ನಿರ್ದೇಶನದ ಚಿತ್ರದಲ್ಲಿ ರವಿಯನ್ನು ನಿರ್ದೇಶಿಸುವಾಗ ಮೊದ ಮೊದಲಿಗೆ ಕೊಂಚ ನರ್ಸ್ ಆಗಿದ್ದುಂಟಂತೆ. ಸದಾ ನಗುಮುಖದ ಇಂದ್ರಜಿತ್ ಅವರ ಬಗ್ಗೆ ರವಿ ಕೂಡಾ ಕೆಲಸ ಮಾಡುವಾಗ ಎಂಜಾಯ್ ಮಾಡಿದ್ದಾರಂತೆ. ನನ್ನನ್ನು ಹಾಕಿಕೊಂಡು ನಿರ್ದೇಶನ ಮಾಡಿರುವವರಲ್ಲಿ ನಗುತ್ತಲೇ ಸಿನಿಮಾ ಮುಗಿಸಿದ್ದು ಇವರೊಬ್ಬರೇ ಎಂದು ರವಿ ಜೋಕ್ ಮಾಡುತ್ತಾರೆ.
`ಲವ್ ಯೂ ಆಲಿಯಾ’ ಹತ್ತು ಹಲವು ವಿಷಯಗಳಲ್ಲಿ ಅಚ್ಚರಿ ಮೂಡಿಸುತ್ತದೆ. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯಲ್ಲಿ ಸೊಗಸಾದ ಹಾಡುಗಳು ಮೂಡಿಬಂದಿವೆ. ಒಂದು ಜಾನಪದ ಹಾಡನ್ನು ಸಹ ಬಳಸಿಕೊಂಡಿದ್ದಾರೆ. ಈಗಾಗಲೇ ಹಾಡುಗಳು ಸೌಂಡ್ ಮಾಡುತ್ತಿವೆ.
ಆಲಿಯಾ ಚಿತ್ರದಲ್ಲಿ ಭಾರಿ ತಾರಾಗಣವೇ ತುಂಬಿಕೊಂಡಿದೆ. ದಕ್ಷಿಣದ ಖ್ಯಾತ ನಟಿ ಭೂಮಿಕಾ ಚಾವ್ಲಾ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂದ್ರಜಿತ್ ಅವರ ಚಿತ್ರದಲ್ಲಿ ಕೆಲಸ ಮಾಡುವುದೇ ಒಂದು ರೀತಿ ಸಂತೋಷ ಉಂಟು ಮಾಡುತ್ತದೆ. ರವಿಚಂದ್ರನ್ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಹೇಳುವ, ಭೂಮಿಕಾ ಈ ಚಿತ್ರದಲ್ಲಿ ಡ್ಯಾನ್ಸ್ ಟೀಚರ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರದೇ ಆದ ನೃತ್ಯ ತಂಡ ಹೊಂದಿರುತ್ತಾರೆ. ಚಿತ್ರದ ಬಗ್ಗೆ ಅವರಿಗೂ ಭಾರೀ ನಿರೀಕ್ಷೆ ಇದೆಯಂತೆ.
ಭೂಮಿಕಾ ಚಾವ್ಲಾ ತೆಲುಗು, ತಮಿಳು ಚಿತ್ರಗಳಲ್ಲಷ್ಟೇ ಅಲ್ಲ ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ `ರನ್.’ ಸಲ್ಮಾನ್ ಖಾನ್ ಜೊತೆಯಲ್ಲಿ `ತೇರೆ ನಾಮ್’ ಚಿತ್ರದಲ್ಲಿ ಭೂಮಿಕಾ ಎಲ್ಲರ ಗಮನಸೆಳೆದಿದ್ದರು.
`ಲವ್ ಯೂ ಆಲಿಯಾ’ ಚಿತ್ರದಲ್ಲಿನ ತನ್ನ ಪಾತ್ರ ತುಂಬಾ ಹಿಡಿಸಿದ್ದರಿಂದ ಒಪ್ಪಿಕೊಂಡೆ ಎನ್ನುತ್ತಾರೆ. ಆಲಿಯಾ ಯಾರೆಂಬುದರ ಬಗ್ಗೆ ಇಂದ್ರಜಿತ್ ಗುಟ್ಟುಬಿಟ್ಟು ಕೊಟ್ಟಿಲ್ಲ.
ಈ ಚಿತ್ರದಲ್ಲಿ ಚಂದನ್ ಜೋಡಿಯಾಗಿ ಹೊಸ ಬೆಡಗಿ ಇದ್ದಾಳೆ. ಈ ಯುವ ಜೋಡಿ ಎಲ್ಲರನ್ನು ಆಕರ್ಷಿಸುವಲ್ಲಿ ಸಫಲರಾಗುತ್ತಾರೆ. ಚಂದನ್ ಕಿರುತೆರೆಯಿಂದ ಬಂದಿರು ನಟ.
ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದರೂ ಆಲಿಯಾ ಚಿತ್ರದಲ್ಲಿ ಬಹಳ ಸ್ಟೈಲೀಶ್ ಆಗಿ ಕಾಣುತ್ತಾನೆ. ಆಲಿಯಾ ಚಿತ್ರಕ್ಕೆ ಜರ್ನಾರ್ಧನ ಮಹರ್ಷಿ ಕಥೆ ರಚಿಸಿದ್ದಾರೆ. ಸಂತೋಷ ರೈ ಪಾತಾಜೆಯವರ ಕ್ಯಾಮೆರಾ ವರ್ಕ್ ಇದೆ. ಅದ್ಧೂರಿತನದಿಂದ ಕೂಡಿರುವ ಆಲಿಯಾ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ. ನಿಖಿಶಾ ಪಟೇಲ್ ಹಾಸ್ಯ ಪಾತ್ರವೊಂದರಲ್ಲಿ ಎಲ್ಲರನ್ನೂ ರಂಜಿಸಲಿದ್ದಾಳೆ.
ಹಾಗೆಯೇ ಶಕೀಲಾ ಕೂಡಾ ನರ್ಸ್ ಪಾತ್ರವೊಂದರಲ್ಲಿ ರವಿಚಂದ್ರನ್ ಜೊತೆ ಕಾಣಿಸಿಕೊಳ್ಳುತ್ತಾರಂತೆ. “ರವಿ ಸಾರ್ ಜೊತೆ ಒಂದೇ ಒಂದು ಸೀನ್ ಇತ್ತು. ಅದೇ ನನ್ನ ಭಾಗ್ಯ ಎಂದು ಭಾವಿಸುತ್ತೇನೆ,” ಎಂದು ಶಕೀಲಾ ಹೇಳುತ್ತಾರೆ. ಈ ಮೊದಲು ಇಂದ್ರಜಿತ್ ಅವರ `ಮೊನಾಲಿಸಾ’ ಚಿತ್ರದಲ್ಲೂ ಆಕೆ ಕಾಣಿಸಿಕೊಂಡಿದ್ದರು.
ಇಂದ್ರಜಿತ್ ನಿರ್ದೇಶನದ `ಲವ್ ಯೂ ಆಲಿಯಾ’ ಚಿತ್ರದ ಪ್ರೋಮೋ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಅದ್ಧೂರಿತನದಿಂದ ಕೂಡಿರುವ ಆಲಿಯಾ ಎಲ್ಲರ ಪ್ರೀತಿ ಪಾತ್ರಳಾಗುತ್ತಾಳೆಯೇ ಎಂದು ಕಾದು ನೋಡಬೇಕು.
– ಸರಸ್ವತಿ