ನನ್ನ ಮಗನ ವಯಸ್ಸು 15. ಅವನಿಗೆ ಕಣ್ಣಿನ ರೆಟಿನೈಟಿಸ್ ಪಿಗ್ಮೆಂಟೋಸಾ ಆಗಿದೆ. ನಾವು ಅವನನ್ನು ಹಲವು ನೇತ್ರರೋಗ ತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೇವೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ಅವರು ಹೇಳುತ್ತಿದ್ದಾರೆ. ಇದು ನಿಜವೇ? ನಾವು ಏನು ಮಾಡಬೇಕು ತಿಳಿಸಿ.
ರೆಟಿನೈಟಿಸ್ ಪಿಗ್ಮೆಂಟೋಸ್ ಕಣ್ಣಿನ ಪಟಲದ ಅತ್ಯಂತ ಕ್ಲಿಷ್ಟಕರ ಸಮಸ್ಯೆ. ಈ ರೋಗ ಉಂಟಾದ ಸ್ಥಿತಿಯಲ್ಲಿ ಕಣ್ಣಿನ ಎರಡೂ ಪಟಲದ ಮೇಲೆ ಗಾಢ ವರ್ಣದ ರಂಜಕ ಪದಾರ್ಥ ಜಮೆಗೊಳ್ಳುತ್ತದೆ. ಮೊದ ಮೊದಲು ರಾತ್ರಿ ಹೊತ್ತು ಮಂಜು ಮಂಜಾಗಿ ಗೋಚರಿಸುತ್ತದೆ. ವಯಸ್ಸು ಹೆಚ್ಚುತ್ತ ಹೋದಂತೆ ಕಣ್ಣಿನ ದೃಷ್ಟಿ ಹೆಚ್ಚೆಚ್ಚು ಸಮಸ್ಯೆಯಾಗುತ್ತದೆ.
ವೈದ್ಯ ವಿಜ್ಞಾನದಲ್ಲಿ ರೆಟಿನೈಟಿಸ್ ಪಿಗ್ಮೆಂಟೋಸಾಗೆ ಈವರೆಗೂ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಕೆಲವು ಅಧ್ಯಯನಗಳಿಂದ ಒಮೇಗಾ 3 ಫ್ಯಾಟಿ ಆ್ಯಸಿಡ್ಸ್, ಡಿಎಚ್‌ಎ ಮತ್ತು ವಿಟಮಿನ್ `ಎ’ ಸೇವನೆಯಿಂದ ರೋಗದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣ ಹೇರಬಹುದು ಎಂದು ತಿಳಿದುಬಂದಿದೆ. ನೀವು ವೈದ್ಯರ ಪರಾಮರ್ಶೆಯ ಮೇರೆಗೆ ಪೋಷಕಾಂಶಗಳನ್ನು ಸಪ್ಲಿಮೆಂಟ್ಸ್ ರೂಪದಲ್ಲಿ ನೀಡಬಹುದು.
ರೆಟಿನೈಟಿಸ್ ಪಿಗ್ಮೆಂಟೋಸಾದ ರೋಗಿಗಳಲ್ಲಿ ಅವಧಿಗೂ ಮುನ್ನವೇ ಕ್ಯಾಟರಾಕ್ಟ್ ಸಮಸ್ಯೆ ಉಂಟಾಗುವ ಇಲ್ಲವೇ ನೇತ್ರ ಪಟಲದಲ್ಲಿ ಊತ ಉಂಟಾಗುವ ಸಮಸ್ಯೆ ಯಾವಾಗ ಬೇಕಾದರೂ ಉಂಟಾಗಬಹುದು. ಯಾವುದಾದರೂ ದೊಡ್ಡ ನೇತ್ರ ಚಿಕಿತ್ಸಾಲಯದ ಲೋ ವಿಷನ್ ಏಡ್ ಕ್ಲಿನಿಕ್‌ಗೆ ಹೋಗಿ ಮಗುವಿಗೆ ಉಪಯುಕ್ತ ಕನ್ನಡಕ ಹಾಗೂ ಇತರೆ ಉಪಕರಣಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಮಗುವಿನ ದೃಷ್ಟಿ ಸಾಕಷ್ಟು ಮಟ್ಟಿಗೆ ಸುಧಾರಣೆಯಾಗುತ್ತದೆ.
ನನ್ನ ವಯಸ್ಸು 25. ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವೆ. ನನ್ನ ಬ್ರೆಸ್ಟ್ ಸೈಜ್ 34. ನಾನು ಸುಂದರವಾಗಿ ಕಾಣುತ್ತೇನೆ. ಆದರೆ ಸ್ತನಗಳಲ್ಲಿ ಟೈಟ್ನೆಸ್ ಇಲ್ಲ. ಇದು ನನಗೆ ಬೇಜಾರು ಉಂಟು ಮಾಡಿದೆ. ಪತ್ರಿಕೆಗಳಲ್ಲಿ ಹಲವು ಬಗೆಯ ಕ್ರೀಮ್ ಗಳ ಜಾಹೀರಾತು ಕೊಟ್ಟಿರುತ್ತಾರೆ. ಅದರಿಂದ ಸ್ತನಗಳಲ್ಲಿ ಬಿಗಿತನ ಬರುತ್ತದೆಯೇ? ನನಗೆ ಯಾವುದೇ ಅಡ್ಡ ಪರಿಣಾಮ ಉಂಟಾಗದ ಕ್ರೀಮ್ ಗಳ ಬಗ್ಗೆ ತಿಳಿಸಿ.
ನೀವು ಅಂತಹ ಯಾವುದೇ ಕ್ರೀಮ್ ಗಳ ಸುಳಿಗೆ ಸಿಲುಕಬೇಡಿ. ಪತ್ರಿಕೆಗಳ ಮುಖಾಂತರ ಈ ಎಲ್ಲ ಕ್ರೀಮ್ ಗಳನ್ನು ಮಾರಾಟ ಮಾಡುವುದರ ಮೂಲಕ ನಿಮ್ಮಂತಹ ಮುಗ್ಧರನ್ನು ಮೂರ್ಖರನ್ನಾಗಿಸುತ್ತಾರೆ.
ವಾಸ್ತವ ಸಂಗತಿಯೇನೆಂದರೆ, ಪ್ರತಿಯೊಬ್ಬರ ಎತ್ತರ, ದೇಹ ಗಾತ್ರ, ಬಣ್ಣ ಇನ್ನೊಬ್ಬರಿಗಿಂತ ಭಿನ್ನ. ಅದೇ ರೀತಿ ಪ್ರತಿಯೊಬ್ಬ ಯುವತಿ ಸ್ತನದ ಗಾತ್ರ ಅವಳ ದೇಹದ ಆಕಾರ ಮತ್ತು ಆನುವಂಶಿಕತೆಯನ್ನು ಅವಲಂಬಿಸಿರುತ್ತದೆ. ಅದರ ಮೇಲೆ ಯಾವುದೇ ಕ್ರೀಮ್ ಅಥವಾ ಔಷಧಿಯ ಪ್ರಭಾವ ಉಂಟಾಗದು. ಅದರಿಂದ ಸ್ತನದ ಗಾತ್ರದಲ್ಲಿ ಬಿಗುವು ಉಂಟಾಗದು ಅಥವಾ ಅದರ ಗಾತ್ರ ಹೆಚ್ಚಾಗದು.
ನೀವು ಇದರ ಬಗ್ಗೆ ಗಮನಹರಿಸದೆ, ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ. ನಮ್ಮ ದೇಹದ ಫಿಜಿಯಾಲಜಿಯ ಕುರಿತಂತೆ ಮೂಲ ಮಾಹಿತಿ ಪಡೆದುಕೊಂಡರೆ ಅದು ನಿಮಗೆ ಜೀವನವಿಡೀ ಉಪಯೋಗಕ್ಕೆ ಬರುತ್ತದೆ.