`ಜಿಂಕೆ ಮರೀನಾ… ನೀ ಜಿಂಕೆ ಮರಿನಾ’ ಎನ್ನುತ್ತಾ `ನಂದ ಲವ್ಸ್ ನಂದಿತಾ’ ಚಿತ್ರದಿಂದ ಲೂಸ್ ಮಾದ ಯೋಗೀಶ್ ಜೊತೆ ನಾಯಕಿಯಾಗಿ ಸ್ಯಾಂಡಲ್ ವುಡ್‌ಗೆ ಎಂಟ್ರಿ ಪಡೆದ ನಂದಿತಾ, ಅದೇ ಪಾತ್ರದಿಂದ ಹೆಸರು ಗಳಿಸಿ ಇಲ್ಲಿ ಯಶಸ್ವಿ ಎನಿಸಿ, ನೆರೆಯ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಮಿಂಚತೊಡಗಿದಳು. ಆಕೆಯ ಮೊದಲ ತಮಿಳು ಚಿತ್ರ `ಅಟ್ಟೈ ಕತ್ತಿ’. ಮುಂದೆ ಸೆಂದಿಲ್‌ಕುಮಾರ್ ನಿರ್ದೇಶನದ `ಎದಿರ್ ನೀಚ್ಚಲ್’ ಚಿತ್ರದಲ್ಲಿ ಅಥ್ಲಿಟ್ ಪಾತ್ರವಹಿಸಿ ಸ್ಟಾರ್ ಆದ ನಂದಿತಾ, `ಬಾಲಕುಮಾರ’ ಚಿತ್ರದಲ್ಲಿ ರೊಮ್ಯಾಂಟಿಕ್ ಪಾತ್ರ ವಹಿಸಿದಳು. ಅಂಜಲಾ, ಉಪ್ಪು ಕರ್ವಾಡ್ ಮಾತ್ರವಲ್ಲದೆ ತಮಿಳು ಸೂಪರ್ ಸ್ಟಾರ್ ವಿಜಯ್‌ರ `ಪುಲಿ’ ಚಿತ್ರದಲ್ಲಿ ನಾಯಕಿಯಾಗಿದ್ದಾಳೆ. ಆಲ್ ದಿ ಬೆಸ್ಟ್ ನಂದಿತಾ!
ದೇವಯಾನಿ ಸಂಜನಾ
ಇದೇನಿದು ಸಂಜನಾ ಹೆಸರು ಬದಲಿಸಿಕೊಂಡಳೇ ಅಂತ ಆಶ್ಚರ್ಯಪಡಬೇಡಿ. ಸಂಜನಾ ಅಂದಕೂಡಲೇ ಎಲ್ಲರಿಗೂ ನೆನಪಾಗೋದು `ಗಂಡ ಹೆಂಡ್ತಿ’ ಸಂಜನಾ… ಅದರಲ್ಲಿ ಮುತ್ತಿನ ಮಳೆಯನ್ನೇ ಸುರಿಸಿ ಮಲ್ಲಿಕಾ ಶೆರಾವತ್‌ಗಿಂತ ತಾನೇನು ಕಡಿಮೆ ಇಲ್ಲ ಎನ್ನುವಷ್ಟು ಬೋಲ್ಡಾಗಿ ನಟಿಸಿದ್ದ ಸಂಜನಾ, ಆ ಇಮೇಜ್‌ನಿಂದ ಹೊರಬಂದು ಬೇರೆ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಂಡಳು. ತೆಲುಗು ಚಿತ್ರರಂಗದಲ್ಲೂ ಮಿಂಚಿದಳು. `ಮೈಲಾರಿ’ ಚಿತ್ರದಲ್ಲಿ ಶಿವಣ್ಣನ ಜೊತೆ ಹಾಡಿ ಕುಣಿದು ಎಲ್ಲರ ಗಮನ ಸೆಳೆದಿದ್ದಳು. ಈಗ `ಸಿನಿಮಾ ಮೈ ಡಾರ್ಲಿಂಗ್’ ಚಿತ್ರದಲ್ಲಿ ದೇವಯಾನಿ ಎನ್ನುವ ಐಟಂ ಡ್ಯಾನ್ಸರ್ ಪಾತ್ರ ನೀಡುತ್ತಿರುವ ಸಂಜನಾ, ತನ್ನ ಪಾತ್ರದ ಬಗ್ಗೆ ಬಹಳ ಹೋಪ್ಸ್ ಇಟ್ಟುಕೊಂಡಿದ್ದಾಳೆ. ಸಿನಿಮಾದೊಳಗಿನ ಸತ್ಯ ಘಟನೆಗಳನ್ನು ತೆರೆ ಮೇಲೆ ತರುತ್ತಿರುವುದರಿಂದ ಸಂಜನಾ ಯಾವ ಡ್ಯಾನ್ಸರ್ ಪಾತ್ರ ಮಾಡುತ್ತಿರಬಹುದೆಂಬ ಕುತೂಹಲ ಎಲ್ಲರಿಗೂ ಇದೆ. `ಬಿಗ್ ಬಾಸ್’ ಮನೆಯೊಳಗೆ ಹೋಗಿ ಬಂದ ನಂತರ, ಮನೆಯಲ್ಲಿರುವ ಪ್ರೇಕ್ಷಕರಿಗೂ ಮೋಡಿ ಮಾಡಿರುವ ಸಂಜನಾಳ ದೇವಯಾನಿ ಪಾತ್ರ ಹೇಗಿರುತ್ತದೋ ಎಂದು ನೋಡೋಣ.
ಫೇಸ್ ಬುಕ್ ಮತ್ತು ಬಾಬು
ನಾಲ್ಕೈದು ತಿಂಗಳ ಹಿಂದೆ ಪತ್ರಿಕೆಯಲ್ಲಿ ಬಂದಂಥ ಸುದ್ದಿಯೊಂದು ಸಿನಿಮಾ ಮಾಡಲು ಪ್ರೇರೇಪಿಸಿದ್ದು ದಿನೇಶ್ ಬಾಬು ಅವರಿಗೆ. ನೈಜ ಕಥೆಯಾಧರಿಸಿ ಸಿನಿಮಾ ಮಾಡುವುದರ ಮಜವೇ ಬೇರೆ ಎನ್ನುವ ದಿನೇಶ್ ಬಾಬು `ಅಮೃತವರ್ಷಿಣಿ’ ನಂತರ ಮಾಡಿದಂಥ ಚಿತ್ರಗಳು ಅಂಥಾದ್ದೇನೂ ಸುದ್ದಿ ಮಾಡಲಿಲ್ಲ. ಇಂದಿಗೂ `ಅಮೃತವರ್ಷಿಣಿ’ ಚಿತ್ರವನ್ನು ಜನ ನೆನಪಿಸಿಕೊಳ್ಳುತ್ತಾರೆ. ಇನ್ನು ಮುಂದೆ `ಪ್ರಿಯಾಂಕಾ’ ಬಗ್ಗೆ ಮಾತನಾಡುತ್ತಾರೆ ಎನ್ನುತ್ತಾರೆ ಬಾಬು. ಇವರ ಈ ಕನಸನ್ನು ನನಸಾಗಿಸಿದ್ದು ನಿರ್ಮಾಪಕ ಮೋಹನ್. ಯಾವುದೇ ರೀತಿ ಕಾಂಪ್ರಮೈಸ್ ಮಾಡಿಕೊಳ್ಳದೇ ಚಿತ್ರಕ್ಕೆ ಏನು ಬೇಕೋ ಎಲ್ಲವನ್ನೂ ನೀಡಿದ ಮೋಹನ್ ಬಗ್ಗೆ ಬಾಬು ಕೂಡಾ ಸಿಕ್ಕಿದರೆ ಇಂಥ ನಿರ್ಮಾಪಕ ಸಿಗಬೇಕು ಎನ್ನುವಂತಾಗಿದೆ. ಸಿನಿಮಾದಲ್ಲಿನ ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು, ಕೃಪಾಕರ್ ಸಂಗೀತ ಸಂಯೋಜಿಸಿದ್ದಾರೆ. ಕೇಶವಚಂದ್ರ ಎನ್ನುವವರಿಂದ ಬಾಬು ಹಾಡನ್ನು ಬರೆಸಿದ್ದಾರೆ. ಸಿನಿಮಾದ ಎಲ್ಲ ವಿಭಾಗಳಲ್ಲೂ ಇನ್ವಾಲ್ವ್ ಆಗುವ ಬಾಬು ಅವರ ಕಂಪ್ಲೀಟ್ ಪ್ಯಾಕೇಜ್ `ಪ್ರಿಯಾಂಕಾ’ ಎನ್ನಬಹುದಾಗಿದೆ. ಈ ಚಿತ್ರದ ನಂತರ ಬಾಬು ತುಸು ರಿಲ್ಯಾಕ್ಸ್ ಆಗಬಹುದೇ? ಕಾದುನೋಡೋಣ.
ಸಖೀ ಸಖೀ…. ಭಾಮಾ
ದೇವರಾಜ್ ಮತ್ತು ಅವರ ಪುತ್ರ ಪ್ರಜ್ವಲ್ ದೇವರಾಜ್ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಿರೋದು ಅಪರೂಪ. ಈಗ ಸುದ್ದಿ ಮಾಡುತ್ತಿರುವ ಪಿ.ಸಿ. ಶೇಖರ್ ಅವರ ನಿರ್ದೇಶನದ `ಅರ್ಜುನ್’ ಚಿತ್ರ ಇವರಿಬ್ಬರಿಗೂ ವಿಭಿನ್ನವಾದ ಪಾತ್ರ ನೀಡಿದಿ. ಅಪ್ಪ ಮಗ ಅಂದಾಕ್ಷಣ ಸಿನಿಮಾದಲ್ಲೂ ಅದೇ ಪಾತ್ರ ನೀಡುವುದು ವಾಡಿಕೆ. ಆದರೆ `ಅರ್ಜುನ್’ ಚಿತ್ರದಲ್ಲಿ ಶೇಖರ್ ಆ ರೀತಿ ಮಾಡದೇ ಇಬ್ಬರಿಗೂ ವಿಭಿನ್ನವಾದ ಪಾತ್ರ ನೀಡಿದ್ದಾರೆ. ಈ ಚಿತ್ರದ ನಾಯಕಿ ಭಾನು. `ಅರ್ಜುನ್’ ಚಿತ್ರದಲ್ಲಿ ಇರೋದು ಒಂದೇ ಹಾಡಂತೆ. ಅದು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. `ಸಖೀ ಸಖೀ…. ‘ ಹಾಡಿನಲ್ಲಿ ಪ್ರಜ್ವಲ್ ಮತ್ತು ಭಾಮಾ ಬಹಳ ನೈಜವಾಗಿ ಕಾಣಿಸಿಕೊಳ್ಳುತ್ತಾರೆ. ಸ್ಟೆಪ್ಪು ಗಿಪ್ಪು ಏನು ಹಾಕದೇ ಬಹಳ ಸಹಜವಾಗಿ ಕಾಣಿಸಿಕೊಳ್ಳುವ ಪ್ರೇಮಿಗಳಾಗಿ ಮಿಂಚುತ್ತಾರೆ.
`ಶೈಲೂ’ ನಂತರ ಭಾಮಾಳಿಗೆ ಈ ಚಿತ್ರ ಕೂಡಾ ಒಳ್ಳೆ ಹೆಸರು ತಂದುಕೊಡಬಹುದು. ಹಾಗೇಯೇ ಪ್ರಜ್ವಲ್ ಗೂ ಈ ಚಿತ್ರ ಲೈಫ್‌ಕೊಡಬಹುದು ಎಂಬುದು ಗಾಂಧಿನಗರದ ಮಾತು.
ತೆರೆ ಹಿಂದಿನ ಕಥೆ
ಒಬ್ಬ ಪತ್ರಕರ್ತ ಸಿನಿಮಾ ಮಾಡಲು ಹೊರಟಾಗ ನಿರೀಕ್ಷೆ ಸಹಜವಾಗಿ ಹೆಚ್ಚಿರುತ್ತವೆ. ಅಂಥವೊಂದು ನಿರೀಕ್ಷೆ ಹುಟ್ಟಿಸಿದ್ದಾರೆ ಪತ್ರಕರ್ತ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದ ಗೌರೀಶ್ ಅಕ್ಕಿ. `ಸಿನಿಮಾ ಮೈ ಡಾರ್ಲಿಂಗ್’ ಎನ್ನುವ ಸಿನಿಮಾವೊಂದನ್ನು ಪ್ರೇಕ್ಷಕರಿಗೆ ಕೊಡಲಿದ್ದಾರೆ. ಇದು ತೆರೆ ಹಿಂದಿನ ಕಥೆ. ಅದನ್ನು ಬೆಳ್ಳಿ ಪರದೆ ಮೇಲೆ ನೋಡಿ ಎನ್ನುತ್ತಾರೆ ಅಕ್ಕಿ. ಗಾಂಧಿ ಜಯಂತಿಯಂದು ಈ ಚಿತ್ರವನ್ನು ಬಿಡುಗಡೆ ಮಾಡಲು ಹೊರಟಿರುವ ಗೌರೀಶ್ ಅವರಿಗೆ ನೈಜ ಘಟನೆಗಳು ಹಾಗೂ ಪತ್ರಕರ್ತರಾಗಿ ಅವರು ಕಂಡಂಥ ತೆರೆ ಹಿಂದಿನ ಕಥೆಗಳೇ ಈ ಸಿನಿಮಾಗೆ ಕಥೆಯಾಗಿ ರೂಪುಗೊಂಡಿದೆ. `ಆಫ್ ದಿ ರೆಕಾರ್ಡ್‌ಗಳ ಸುದ್ದಿಗಳೇ ನನಗೆ ಸ್ಛೂರ್ತಿಯಾಯ್ತು,’ ಎಂದು ಹೇಳುವ ಗೌರೀಶ್‌ತಮ್ಮ ಸಿನಿಮಾ ಮೂಲಕ ಉತ್ತರ ಕೊಡಲಿದ್ದಾರೆ. ಹಾಗಂತ ಇವರೇನೂ ಆರ್ಟ್ ಸಿನಿಮಾ ಮಾಡ್ತಿಲ್ಲ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಹಾಡಿದೆ, ಫೈಟಿದೆ ಎಲ್ಲ ಇದೆ ಎನ್ನುತ್ತಾರೆ.
ಸೀಕ್ರೆಟ್ ರೋಲ್ `ಜೆಸ್ಸಿ‘ ಸಿನಿಮಾದ ಟೀಸರ್
ಈಗಾಗಲೇ ಅಂತರ್ಜಾಲದಲ್ಲಿ ಸಾಕಷ್ಟು ಓಡಾಡುತ್ತಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದಲ್ಲಿ ಧನಂಜಯ್ ಮತ್ತು ಪಾರೋಲ್ ನಟಿಸುತ್ತಿದ್ದಾರೆ. `ಜೆಸ್ಸಿ’ ಜೆಸ್ಸಿ ಗಿಫ್ಟ್ ರ ಪ್ರೇಮಕಥೆ ಎಂದು ಹೇಳಲಾಗುತ್ತಿದೆ. ಪಾರೋಲ್ ಮಾಡುತ್ತಿರುವ ಪಾತ್ರ ಯಾವುದು? ಎನ್ನುವುದರ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಈಗ ಗುಟ್ಟು ರಟ್ಟಾಗಿದೆ. ಪಾರೋಲ್ `ನಂದಿನಿ’ ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರ ಖಂಡಿತಾ ಜೆಸ್ಸಿ ಗಿಫ್ಟ್ ಅವರ ಪತ್ನಿ ಪಾತ್ರ ಅಲ್ಲ ಎನ್ನುತ್ತಾರೆ ನಿರ್ದೇಶಕರು. ಟೀಸರ್‌ನಲ್ಲಿ ನನ್ನನ್ನು ಜೆಸ್ಸಿ ಗಿಫ್ಟ್ ಅಂತ ಬೇಕಾದರೆ ಕರೀರಿ ಅಂತಾನೆ ಸಿನಿಮಾದ ನಾಯಕ. ಹಾಗಂತ ಜೆಸ್ಸಿ ಗಿಫ್ಟ್ ಜೀವನದ ಕಥೆಯೂ ಇದಲ್ಲ ಎಂದು ನಿರ್ದೇಶಕರು ಅಂತಾರೆ. ಪಾರೋಲ್ ಮಾತ್ರ ಪಕ್ಕದ ಮನೆ ಹುಡುಗಿಯಂಥ ಪಾತ್ರದಲ್ಲಿ ಬಹಳ ಸಿಂಪಲ್ಲಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಗ್ಲಾಮರ್ ಆಗಿ ಮಿಂಚುತ್ತಿದ್ದ ಪಾರೋಲ್ ಗೆ ಈಗ ಸಿಂಪಲ್ ಹುಡುಗಿ ಪಾತ್ರ ಸಿಕ್ಕಿದ್ದು ಅದಕ್ಕೆ ತಕ್ಕ ಹಾಗೆ ಕಾಸ್ಟ್ಯೂಮ್ ಮತ್ತು ಕಡಿಮೆ ಮೇಕಪ್‌ನೊಂದಿಗೆ ಸುದ್ದಿ ಮಾಡುತ್ತಿದ್ದಾಳೆ.
ಎಲ್ಲರಿಗೂ ಪ್ರಿಯಾ…
ಬಂದ್ಯಾ ಪುಟ್ಟ…. ಹೋದ್ಯಾ ಪುಟ್ಟ….. ಎನ್ನುವವರ ಸಾಲಿಗಿ ಸೇರದೆ ಸಿನಿಮಾ ರಂಗದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಹಂತ ಹಂತವಾಗಿ ಬೆಳೆದಂಥ ನಟಿ ಹರಿಪ್ರಿಯಾ. ತನ್ನ ಆರಂಭದ ದಿನಗಳಲ್ಲಿ ಅಂಥಾದ್ದೇನು ಸುದ್ದಿ ಮಾಡದಿದ್ದರೂ, ತೆಲುಗು ಚಿತ್ರರಂಗಕ್ಕೆ ಹೋದ ನಂತರ ಇವಳು ನಮ್ಮ ಕನ್ನಡದ ಹುಡುಗಿ ಎಂದು ಎಲ್ಲರೂ ಬೆರಗಾಗಿ ನೋಡಿದರು. `ಉಗ್ರಂ’ ಚಿತ್ರದ ನಂತರ ದಿಢೀರನೇ ತಾರಾ ಪಟ್ಟ ಗಿಟ್ಟಿಸಿದ ಹರಿಪ್ರಿಯಾ ಇಂದು ಕನ್ನಡದ ಬಹು ಬೇಡಿಕೆಯ ತಾರೆ. ಇತ್ತೀಚೆಗೆ ಬಿಡುಗಡೆಯಾದ `ಬುಲೆಟ್‌ಬಸ್ಯಾ’ ಚಿತ್ರದಲ್ಲಿ ತನ್ನ ಪ್ರತಿಭೆ ತೋರಿಸಿದಳು. `ರನ್ನ’ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿ ಮಿಂಚಿದಳು. ಇದೀಗ ರಕ್ಷಿತ್ ಶೆಟ್ಟಿ ಜೊತೆಯಲ್ಲಿ `ರಿಕ್ಕಿ’ ಚಿತ್ರದಲ್ಲಿ ನಟಿಸುತ್ತಿರುವ ಹರಿಪ್ರಿಯಾಳ ಮುಂದಿನ ಚಿತ್ರಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಲೇ ಇದೆ. ಕನ್ನಡದ ಹುಡುಗಿಯರು ಯಾರಿಗೇನೂ ಕಡಿಮೆ ಇಲ್ಲ ಎಂದು ಜಬರ್ದಸ್ತಾಗಿ ಹರಿಪ್ರಿಯಾ ಎಲ್ಲರಿಗೂ ಪ್ರಿಯಾಗುತ್ತಿದ್ದಾಳೆ.
ಆಟಗಾರನ…. ಆಟ ಶುರು
ದ್ವಾರಕೀಶ್ ಬ್ಯಾನರ್‌ನಲ್ಲಿ ತೆರೆಗೆ ಬರುತ್ತಿರುವ ಕೆ.ಎಂ. ಚೈತನ್ಯ (ಆ ದಿನಗಳು) ನಿರ್ದೇಶನದ `ಆಟಗಾರ’ ಚಿತ್ರ ಭಾರೀ ಸುದ್ದಿ ಮಾಡುತ್ತಿದೆ. ಈ ಚಿತ್ರದ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಈ ಆಟಗಾರ ಏನೇನು ಆಟಾಡುತ್ತಾರೆನೋ ಎಂದು ಪ್ರೇಕ್ಷಕ ಕಾದು ಕುಳಿತಿದ್ದಾನೆ. ಚಿರಂಜೀವಿ ಸರ್ಜಾ, ಮೇಘನಾ ರಾಜ್, ಅನು ಪ್ರಭಾಕರ್ ಅವರೊಂದಿಗೆ ಭಾರಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಜೋಡಿ ಸಾಕಷ್ಟು ಸುದ್ದಿ ಮಾಡಿದ್ದು ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. `ಆ ದಿನಗಳು,’ `ಸೂರ್ಯಕಾಂತಿ,’ `ಪರಾರಿ` ಮುಂತಾದ ಚಿತ್ರಗಳನ್ನು ನೀಡಿರುವ ಚೈತನ್ಯ ಈ ಬಾರಿ ಈ ತಾರಾಬಳಗದಿಂದ ಯಾವ ಆಟವನ್ನು ಆಡಿಸುತ್ತಾರೋ ಎಂದು ಕಾದು ನೋಡಬೇಕು. ಹೊಸ ಹೊಸ ಪ್ರಯತ್ನಗಳನ್ನು ಪ್ರೇಕ್ಷಕ ಸ್ವೀಕರಿಸುತ್ತಲೇ ಬಂದಿರೋದ್ರಿಂದ ಇನ್ನು ಆಟ ಶುರುವಾಗುವುದೊಂದೇ ಬಾಕಿ.