ರಾಗಿಣಿ ಸಿ.ಎಂ.
ಸಿನಿಮಾ ತಾರೆಯರು ರಾಜಕೀಯಕ್ಕೆ ಜಂಪ್ ಮಾಡೋದು ಅಪರೂಪವೇನಲ್ಲ. ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ರಾಜಕೀಯ ರಂಗದಿಂದಲೇ ಇವರುಗಳಿಗೆ ಬುಲಾವ್ ಶುರುವಾಗುತ್ತೆ. ರಮ್ಯಾ, ರಕ್ಷಿತಾ, ಭಾವನಾ, ಪೂಜಾಗಾಂಧಿ…. ಇದೀಗ ರಾಗಿಣಿ ದ್ವಿವೇದಿ ರಾಜಕೀಯಕ್ಕೆ ಬರಲು ರಿಹರ್ಸಲ್ ನಡೆಸುತ್ತಿದ್ದಾಳೆ. `ನಾನೇ ಸಿ.ಎಂ.’ ಎನ್ನುತ್ತಾ ತೆರೆ ಮೇಲೆ ಮಿಂಚಲು ಹೊರಟಿರುವ ರಾಗಿಣಿಗೆ ಇತ್ತೀಚೆಗೆ ನೀವು ರಾಜಕೀಯಕ್ಕೆ ಬರ್ತಿದ್ದೀರಂತೆ ಹೌದಾ? ಎಂದು ಕೇಳಿದಾಗ…. ಹಾಗಂತ ನಾನು ಎಲ್ಲಿಯೂ ಹೇಳಿಲ್ಲ. ಇನ್ನು ಏಳೆಂಟು ವರ್ಷ ನಾನು ಸಿನಿಮಾರಂಗದಲ್ಲಿ ಬಿಝಿ. ಸದ್ಯಕ್ಕಂತೂ ಬಿಡುವು ಸಿಗದಷ್ಟು ಬಿಝಿಯಾಗಿದ್ದೇನೆ ಎಂದಾಗ ಕೇಳಿದವರೇ ಬೆಚ್ಚಿಬಿದ್ದರು. ರಾಗಿಣಿ ಚಿತ್ರಗಳೆಲ್ಲ ಸಾಲು ಸಾಲಾಗಿ ಗಿರ್ಕಿ ಹೊಡೆಯುತ್ತಿರುವಾಗ ಇನ್ನೆಂಥ ಬಿಝಿಯಪ್ಪ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದರಂತೆ. ಅದೇನೇ ಇರಲಿ, ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲೇ ಸಿ.ಎಂ. ಪಟ್ಟ ಗಿಟ್ಟಿಸಿದ್ದಾಳೆ. ಸಿನಿಮಾದಲ್ಲಾದರೇನಂತೆ…. ಅಲ್ಲವೇ?
ಕನ್ನಡದ ಮಗಳು
ಒಳ್ಳೆ ಕಥೆ, ಒಳ್ಳೆ ಪಾತ್ರ, ಒಳ್ಳೆ ತಂಡವಿದ್ದರೆ ಸಾಕು ತಮ್ಮನ್ನು ತಾವೇ ಮರೆತು ಕೆಲಸ ಮಾಡುವುದರಲ್ಲಿ ಸೈ ಎನಿಸಿಕೊಳ್ಳುವ ನಟಿ ಸುಹಾಸಿನಿ.. `ಪ್ರೀತಿಯಲ್ಲಿ ಸಹಜ’ ಚಿತ್ರದಲ್ಲಿ ಪ್ರಮುಖ ಪಾತ್ರ ನಹಿಸುತ್ತಿರುವ ಸುಹಾಸಿನಿ, ಕಾಡಿನ ಮಧ್ಯೆ ಸೆಟ್ ಹಾಕಿದ್ದರಿಂದ ಪ್ರತಿನಿತ್ಯ ಕಾಲುದಾರಿಯಲ್ಲಿ ಎರಡು ಕಿ.ಮೀ. ನಡೆದು, ಶೂಟಿಂಗ್ ಸ್ಥಳಕ್ಕೆ ತಲುಪುತ್ತಿದ್ದರಂತೆ. ಸಂಜೆಯಾದ ಕೂಡಲೇ ಮಳೆ. ಅದು ನಿಲ್ಲುವವರೆಗೂ ಕಾಯ್ದುಕೊಂಡಿದ್ದು ಹೋಗುತ್ತಿದ್ದರಂತೆ. ಹೊಸಬರ ಜೊತೆ ನಟಿಸುತ್ತಾ ಸಹಕಾರ ನೀಡಿದ ಸುಹಾಸಿನಿಯನ್ನು ಇಡೀ ತಂಡ ನೆನಪಿಸಿಕೊಳ್ಳುತ್ತದೆ. ಹದಿನೈದು ದಿನ ಸತತವಾಗಿ ಕಾಡಿನಲ್ಲಿ ಚಿತ್ರೀಕರಣ. ಹನ್ನೊಂದು ದಿನ ಸುಹಾಸಿನಿ ಚಿತ್ರೀಕರಣದಲ್ಲಿ ಭಾಗವಹಿಸಿ, ಈಕೆ ನಿಜಕ್ಕೂ ಕನ್ನಡದ ಮಗಳು ಅಂತ ಹೊಗಳಿಕೆಗೆ ಪಾತ್ರರಾಗಿದ್ದಾರೆ.
ಬಿಝಿ ದೇವರಾಜ್
ಪ್ರತಿಭೆ ಇದ್ದವರನ್ನು ಚಿತ್ರರಂಗ ಸುಮ್ಮನೆ ಇರುವುದಕ್ಕೆ ಬಿಡುವುದಿಲ್ಲ ಎನ್ನುವುದಕ್ಕೆ ದೇವರಾಜ್ ಉತ್ತಮ ನಿದರ್ಶನ. ಇತ್ತೀಚೆಗೆ ದೇವರಾಜ್ ಕನ್ನಡ ಚಿತ್ರಗಳಲ್ಲಿ ಬಹಳ ಬಿಝಿ. `ಪ್ರೀತಿಯಲ್ಲಿ ಸಹಜ’ ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ. ಸುಹಾಸಿನಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ನೆನಪುಗಳನ್ನು ಜೊತೆಯಲ್ಲೇ ಇಟ್ಕೊಂಡು ಹೋಗುವಂಥ ಛಲಗಾರ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ದೇವರಾಜ್ ಅವರಿಗೆ ಬಹಳ ಕುತೂಹಲವಿದೆ. ಎಂಥದ್ದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುವ ದೇವರಾಜ್‌ಈ ಚಿತ್ರದಲ್ಲಿ ಸುಹಾಸಿನಿಯರ ಪತಿಯಾಗಿ ಅಭಿನಯಿಸುತ್ತಿದ್ದಾರೆ. ಹೊಸ ರೀತಿಯಲ್ಲಿ ಕಥೆ ಹೇಳುತ್ತಾ ಹೋಗುವ `ಪ್ರೀತಿಯಲ್ಲಿ ಸಹಜ’ ಚಿತ್ರದಲ್ಲಿ ದೇವರಾಜ್-ಸುಹಾಸಿನಿ ಜೋಡಿ ಬಗ್ಗೆ ಅಷ್ಟೇ ಕುತೂಹಲವಿದೆ.
ಸೂರಿ ಗಿರಿ
`ಆರ್.ಎಕ್ಸ್. ಸೂರಿ….’ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ತಮ್ಮ ಪ್ರೀತಿಯ ಅಭಿಮಾನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ, ಆತ ತನ್ನ ಕಡೆಯ ಆಸೆ ವಿಜಿಯವರ `ಆರ್.ಎಕ್ಸ್. ಸೂರಿ….’ ಚಿತ್ರ ನೋಡಲೇಬೇಕೆಂದು ಬಯಸಿದಾಗ ವಿಜಿ ಮತ್ತು ನಿರ್ಮಾಪಕ ಸುರೇಶ್ ಅವರು ಆತನಿಗಾಗಿ ಪ್ರತ್ಯೇಕ ಶೋ ಏರ್ಪಡಿಸಿ ಆ್ಯಂಬುಲೆನ್ಸ್ ನಲ್ಲಿ ಕರೆತಂದು ವೈದ್ಯರ ಸಮ್ಮುಖದಲ್ಲಿ `ಆರ್.ಎಕ್ಸ್. ಸೂರಿ….’ ಚಿತ್ರ ತೋರಿಸಿದರಂತೆ. ಆಂಧ್ರದ ಪ್ರಖ್ಯಾತ ರೌಡಿಯೊಬ್ಬನ ಕಥೆ ಎಂದು ಹೇಳಲಾಗುತ್ತಿದ್ದು, ಆ ಪಾತ್ರದಲ್ಲಿ ವಿಜಯ್ ಜಬರ್ದಸ್ತಾಗಿ ನಟಿಸಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟು 250 ಚಿತ್ರ ಮಂದಿರಗಳಲ್ಲಿ ಸೂರಿ ಬಿಡುಗಡೆಯಾಗುತ್ತಿದೆ. ವಿಜಯ್ ಅಭಿನಯದ ಈ ಚಿತ್ರ ಅವರ ವೃತ್ತಿಯಲ್ಲೇ ಮೊದಲ ಬಾರಿಗೆ ಇಷ್ಟೊಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದು. ಯಾವುದೇ ಪರಭಾಷೆಯ ಚಿತ್ರದ ಪೈಪೋಟಿ ಇಲ್ಲದೆ `ಆರ್.ಎಕ್ಸ್. ಸೂರಿ….’ ಖಡಕ್ಕಾಗಿದೆಯಂತೆ.
ಶಿವಣ್ಣನ ಮಗಳ ಮದುವೆ
ಊಟ, ನಿದ್ದೆ ಬಿಟ್ಟು ಟಿ.ವಿ ಮುಂದೆ ಕುಳಿತು ಅದ್ಧೂರಿ ಮದುವೆಯನ್ನು ನೋಡುತ್ತಾ ಮೈಮರೆತವರು ಅದೆಷ್ಟೋ! ಹೌದು, ಶಿವಣ್ಣನ ಮಗಳ ಮದುವೆ ಅಂಥ ಅದ್ಧೂರಿತನವನ್ನು ಒಳಗೊಂಡಿತ್ತು. ಶಿವಣ್ಣ ಮತ್ತು ಗೀತಾರ ಜ್ಯೇಷ್ಠ ಪುತ್ರಿ ಡಾ. ನಿರುಪಮಾ ತಾನು ಪ್ರೀತಿಸಿದ ಹುಡುಗ ಡಾ. ದಿಲೀಪ್‌ರನ್ನೇ ಕೈ ಹಿಡಿದಾಗ ಅವರಿಬ್ಬರ ವಿವಾಹ ಮಹೋತ್ಸವ ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತೆ ವೈಭವದಿಂದ ನಡೆಯಿತು. ಆಗಸ್ಟ್ 31 ರಂದು ಅರಮನೆ ಮೈದಾನದಲ್ಲಿ ವಿಶಾಲವಾಗಿ ಹಾಕಲಾಗಿದ್ದ ಮೂರು ಕೋಟಿ ವೆಚ್ಚದ ಮದುವೆ ಮನೆಯಲ್ಲಿ ಗ್ರ್ಯಾಂಡಾಗಿ ತಾರೆಯರ ಸಮೂಹದಲ್ಲಿ ಲಗ್ನವಾಯಿತು. ಅಭಿಮಾನಿಗಳೇ ದೇವರು ಎಂದಿದ್ದ ಅಪ್ಪಾಜಿಯವರ ಮಾತನ್ನು ಶಿವಣ್ಣ ನಿಜ ಮಾಡಿ ತೋರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದುಬಂದರು. ಅವರನ್ನು ಸಹ ವಿಶೇಷ ಅತಿಥಿಗಳಂತೆ ಉಪಚರಿಸಿ ನೋಡಿಕೊಂಡಿದ್ದು `ದೊಡ್ಡ ಮನೆ`ಯ `ದೊಡ್ಡ ಗುಣ.’
ಗಣೇಶನ ಪುತ್ರ ಗೋಲ್ಡನ್ ಸ್ಟಾರ್
ಗಣೇಶ್ ತನ್ನ ಇಪ್ಪತ್ತೈದನೇ ಚಿತ್ರವನ್ನು ಪೂರ್ಣಗೊಳಿಸಿ ಮುಂದಿನ ಹೆಜ್ಜೆ ಇಡುತ್ತಿರುವಾಗ `ಬುಗುರಿ’ ಚಿತ್ರ ಅಷ್ಟೇನೂ ಯಶಸ್ಸು ಕಾಣದೇ ಹೋದಾಗ ರಾಂಗ್ ರಿಲೀಸ್, ಅಂತ ಗಾಂಧಿನಗರ ಮಾತನಾಡಿಕೊಂಡಿತು. `ಉಪ್ಪಿ-2′ ಎದುರು `ಬುಗುರಿ’ ತಿರುಗಲಿಲ್ಲ. ವೃತ್ತಿ ಜೀವನದಲ್ಲಿ ಇದೆಲ್ಲ ಸರ್ವೇ ಸಾಮಾನ್ಯ. ಆದರೆ ಅಸಲಿ ಬದುಕಿನಲ್ಲಿ ಗಣೇಶ ಮಹಾ ಖುಷ್ ಆಗಿದ್ದಾರೆ. ಕಾರಣ ಗಣೇಶ್ ಶಿಲ್ಪಾ ದಂಪತಿ ಎರಡನೆಯ ಮಗುವಿನ ಆಗಮನದಲ್ಲಿದ್ದಾಗ ಗಂಡು ಮಗುವಿನ ಜನನದಿಂದ ಖುಷಿಯಾದರು. ಗಣೇಶ್ ಮನೆಯಲ್ಲೀಗ ಆರತಿಗೊಂದು, ಕೀರ್ತಿಗೊಂದು ಎನ್ನುವಂತೆ ಮಗಳು ಮಗ, ಒಟ್ಟಾರೆ ಕಂಪ್ಲೀಟ್ ಫ್ಯಾಮಿಲಿಯಾಗಿದೆ. `ಮುಂಗಾರು ಮಳೆ-2′ ಚಿತ್ರದಲ್ಲಿ ಬಿಝಿಯಾಗಿರುವ ಗಣೇಶ್ ಈ ಬಾರಿ ರವಿಚಂದ್ರನ್ ಜೊತೆ ನಟಿಸುತ್ತಿದ್ದಾರೆ. ಎಲ್ಲ ಹೀರೋಗಳಿಗೂ ತಂದೆಯಾಗುತ್ತಿರುವ ರವಿಚಂದ್ರನ್ ಈ ಚಿತ್ರದಲ್ಲಿ ಯಾವ ಪಾತ್ರ ವಹಿಸ್ತಾರೋ ಕಾದು ನೋಡಬೇಕು.
ಗೌಡ್ರು ಮಗ
ಸಾಮಾನ್ಯವಾಗಿ ಬಾಲನಟರು ಹೀರೋಗಳಾಗುವುದು ಅಪರೂಪ. ಅದರಲ್ಲಿ ಪ್ರತಿಭಾವಂತ ತೇಜಸ್ ಈಗ ಚಿರಂಜೀವಿಯಾಗಿ ಹೀರೋ ಆಗುತ್ತಿದ್ದಾನೆ. ಬಹಳ ಪುಟ್ಟ ಹುಡುಗನಾಗಿದ್ದಾಗಲೇ ನೃತ್ಯ ತಂಡದಲ್ಲಿ ಡ್ಯಾನ್ಸ್ ಮಾಡುತ್ತಾ ಗಮನಸೆಳೆದ ಈ ಹುಡುಗ ಯಾವುದೇ ಗುರುವಿಲ್ಲದೇ ತನ್ನ ಸ್ವಂತ ಪ್ರತಿಭೆಯಿಂದ ಬೆಳೆದಂಥವನು. ದೇಶ, ವಿದೇಶ, ಜಾನಪದ ಎಲ್ಲದರಲ್ಲೂ ಪಳಗಿರುವ ಈ ಪ್ರತಿಭೆ ಕಂಸಾಳೆಯಲ್ಲಿ ಎಕ್ಸ್ ಪರ್ಟ್. ಮೂರು ಸಾವಿರಕ್ಕೂ ಹೆಚ್ಚು ನೃತ್ಯ ಶೋಗಳನ್ನು ಕೊಟ್ಟಿರುವ ಚಿರಂಜೀವಿ ಸುಮಾರು 95 ಚಿತ್ರಗಳಲ್ಲಿ ನಟಿಸಿದ್ದಾನೆ. `ಏಕಮೇವ’ ಚಿತ್ರದಲ್ಲಿ ಸಿಂಗಲ್ ಬಾಯ್ ಆಗಿ ಇಡೀ ಚಿತ್ರದಲ್ಲಿ ಆವರಿಸಿಕೊಂಡಿದ್ದಾನೆ. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಪುರಸ್ಕಾರ ಕೂಡ ಸಿಕ್ಕಿತ್ತು. ಬಾಲ ನಟನಾಗಿದ್ದ ಮಾಸ್ಟರ್ ಚಿರಂಜೀವಿ ಈಗ ಎತ್ತರದ ಹುಡುಗನಾಗಿ ನಾಯಕನಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾನೆ. ತೆಲುಗು ಚಿತ್ರರಂಗದಿಂದಲೂ ಕರೆ ಬಂದಿದೆ. ಕನ್ನಡದಲ್ಲಿ ನಾಯಕನಾಗಿ ಮಿಂಚು ಆಸೆ ಹೊಂದಿರು ಚಿರಂಜೀವಿ `ಗೌಡ್ರು ಮಗ’ ಹೊಸ ಚಿತ್ರವೊಂದರಲ್ಲಿ ನಾಯಕನಾಗಿದ್ದಾನೆ.
ಸುದೀಪ್ 42
ಕಿಚ್ಚ ಸುದೀಪ್ ಕನ್ನಡದ ಜನಪ್ರಿಯ ನಾಯಕನಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ತನ್ನ ಛಾಪನ್ನು ಮೂಡಿಸಿರುವಂಥ ನಟ. ಇತ್ತೀಚೆಗಷ್ಟೆ ಅಂದರೆ ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ 42ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಹಾರೈಸಿದರು. ಅನ್ನದಾತ ಎನ್ನುವ ಬಿರುದನ್ನು ಸಹ ನೀಡಿದರು. ಸುದೀಪ್ ಸ್ನೇಹಕ್ಕಾಗಿ ಸ್ನೇಹ. ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ತನ್ನ ಬಾಲ್ಯ ಗೆಳೆಯ ಇಂದ್ರಜಿತ್‌ಲಂಕೇಶ್ ಅವರ `ಲವ್ ಯೂ ಆಲಿಯಾ’ ಚಿತ್ರದಲ್ಲಿ ಗೆಸ್ಟ್ ಆಗಿ ಬಂದು ನಟಿಸಿ ಹೋಗಿದ್ದಾರೆ. ಇಂದ್ರಜಿತ್ ಸುದೀಪ್‌ರನ್ನು ಈ ಚಿತ್ರದಲ್ಲಿ ನಟ ಸುದೀಪ್‌ಅವರನ್ನಾಗಿಯೇ ಬಳಸಿಕೊಂಡಿರುವುದು ವಿಶೇಷ! ತಮ್ಮ ಮನದಾಳದ ಮಾತುಗಳನ್ನು ಸುದೀಪ್ ಈ ಚಿತ್ರದಲ್ಲಿ ನಿರ್ದೇಶಕರ ಜೊತೆ ತೆರೆ ಮೇಲೆ ಹಂಚಿಕೊಂಡಿದ್ದಾರೆ. ತಮ್ಮ ಮತ್ತು ತಮ್ಮ ಮಗಳ ನಡುವಿನ ಪ್ರೀತಿ, ಸ್ನೇಹದ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಆಲಿಯಾದ ವಿಶೇಷತೆಗಳಲ್ಲಿ ಇದೂ ಕೂಡಾ ಒಂದು. ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ವರ್ಷಕ್ಕೆ 3 ಸಿನಿಮಾಗಳನ್ನು ಮಾಡುವುದಾಗಿ ಹೇಳಿ. ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.