ರಸಗುಲ್ಲ, ಸಂದೇಶ್‌, ಚಂಚಂ ಎಂದಾಕ್ಷಣ ಯಾರಿಗಾದರೂ ಇವು ಪ.ಬಂಗಾಳದ ಪ್ರಸಿದ್ಧ ಮಿಠಾಯಿಗಳು ಎಂದು ತಿಳಿಯುತ್ತೇವೆ ಅಲ್ಲವೇ ಇಂಥ ಸಂದೇಶ್‌ ಕೇವಲ ಒಂದು ಬಗೆಯಲ್ಲಿ ಮಾತ್ರವಲ್ಲದೆ ವಿವಿಧ ವೆರೈಟಿಗಳಲ್ಲಿ ಲಭ್ಯ. ಹಾಗೆಯೇ ರಸಗುಲ್ಲ, ಚಂಚಂ, ಕಾಕಂದ್‌, ಚಂಪಾಕಲಿ, ರಸಮಲಾಯಿ, ರಾಜ್‌ ಭೋಗ್‌ ಇತ್ಯಾದಿಗಳು ಬಗೆಬಗೆಯಲ್ಲಿ ತಯಾರಾಗುತ್ತವೆ.

ಇಂಥ ಮಿಠಾಯಿಗಳು ಕೇವಲ ಹಾಲು, ಪನೀರ್‌, ಕ್ರೀಂ, ಚೀಸ್‌ ಮೇಲೆ ಮಾತ್ರ ಅವಲಂಬಿತವಾಗದೆ ಬಗೆಬಗೆಯ ಹಣ್ಣು ಹಂಪಲು, ಖೋವಾ, ಡ್ರೈಫ್ರೂಟ್ಸ್ ಇತ್ಯಾದಿಗಳನ್ನೂ ಒಳಗೊಂಡಿರುತ್ತದೆ.

mango-sandesh-in-leaf

ಮ್ಯಾಂಗೋ ಸಂದೇಶ್

ಸಾಮಗ್ರಿ : 1 ಕಿಲೋ ಮಸೆದ ಪನೀರ್‌, 400 ಗ್ರಾಂ ಸಕ್ಕರೆ, ಅರ್ಧ ಸೌಟು ತುಪ್ಪ, 200 ಗ್ರಾಂ ಮಾಗಿದ ಮಾವಿನ ತಿರುಳು, ಅಷ್ಟೇ ಪ್ರಮಾಣದ ಮ್ಯಾಂಗೋ ಕ್ರಶ್‌, 50-50 ಗ್ರಾಂ ಮ್ಯಾಂಗೊ ಸ್ಕ್ವಾಶ್‌ ಪಿಸ್ತಾ ಚೂರು.

ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಮೊದಲು ಮಸೆದ ಪನೀರ್‌, ನಂತರ ಸಕ್ಕರೆ ಬೆರೆಸಿ ಬಾಡಿಸಿ, ಇದರ ತೇವಾಂಶ ಹಿಂಗುವಂತೆ ಮಾಡಿ. ಹೀಗೆ ಕೈಯಾಡಿಸುತ್ತಾ ಈ ಮಿಶ್ರಣವನ್ನು ಚೆನ್ನಾಗಿ ಮ್ಯಾಶ್‌ ಮಾಡಿ. ಇದನ್ನು ಜಿಡ್ಡು ಸವರಿದ ಒಂದು ತಟ್ಟೆಯಲ್ಲಿ ಹರಡಿಕೊಳ್ಳಿ.

ಇದು ತಣ್ಣಗಾದಾಗ ಮಾವಿನ ಪಲ್ಪ್, ಕ್ರಶ್‌ ಮತ್ತು ಸ್ಕ್ವಾಶ್‌ ಬೆರೆಸಿ ಚೆನ್ನಾಗಿ ಕಲಸಿ ನಾದಿಕೊಳ್ಳಿ. ಇನ್ನೊಂದು ಅಗಲದ ಟ್ರೇನಲ್ಲಿ ಜಿಡ್ಡು ಸವರಿಕೊಂಡು ಈ ಮಿಶ್ರಣ ಹರಡಿಕೊಳ್ಳಿ. ಇದರ ಮೇಲೆ ಪಿಸ್ತಾ ಚೂರು ಉದುರಿಸಿ, ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ಗುಂಡಗಿನ ಆಕಾರ ನೀಡಿ, ನಡುವೆ ತುಸು ಒತ್ತಿ, ಪಿಸ್ತಾ ತುಂಬಿಸಿ, ಸವಿಯಲು ಕೊಡಿ.

rosgulla

ಸ್ಪಾಂಜಿ ರಸಗುಲ್ಲ

ಸಾಮಗ್ರಿ : 1 ಕಿಲೋ ಮಸೆದ ಪನೀರ್‌, 2 ಕಪ್‌ ಸಕ್ಕರೆ, 50 ಗ್ರಾಂ ಮೈದಾ, ಅಗತ್ಯವಿದ್ದಷ್ಟು ಹಾಲು, ನೀರು, ರೋಸ್‌ ವಾಟರ್‌, ಏಲಕ್ಕಿಪುಡಿ.

ವಿಧಾನ : ಮೊದಲು ಮನೆಯಲ್ಲೇ ಪನೀರ್‌ ಸಿದ್ಧಪಡಿಸಿ ಚೆನ್ನಾಗಿ ಮಸೆದು 6-7 ತಾಸು ಫ್ಯಾನಿನ ಕೆಳಗೆ ಆರಲು ಬಿಡಿ. ನಂತರ ಸಕ್ಕರೆ ಪಾಕಕ್ಕಾಗಿ, 2 ಕಪ್‌ ಸಕ್ಕರೆಯನ್ನು 6 ಕಪ್‌ ನೀರಿಗೆ ಹಾಕಿ ಕುದಿಯಲು ಇಡಿ. ಮೊದಲ 1-2 ಕುದಿ ಬಂದಾಗ ತುಸು ಹಾಲು ಬೆರೆಸಿ, ಸಕ್ಕರೆಯಲ್ಲಿನ ಗಲೀಜು ಅಂಶಗಳನ್ನು ಬದಿಗೆಳೆದು ಸೋಸಿಬಿಡಿ. ಮಂದ ಉರಿ ಮಾಡಿ ಒಂದೆಳೆ ಪಾಕ ತಯಾರಿಸಿ.

ನಂತರ ಅಂಗೈ ಮೇಲೆ 2 ಚಮಚ ಪನೀರ್‌ ಹಾಕಿಕೊಂಡು, ಚೆನ್ನಾಗಿ ಮಸೆಯಿರಿ. ನೀವು ಮಸೆದಷ್ಟೂ ರಸಗುಲ್ಲ ಹೆಚ್ಚು ಸ್ಪಾಂಜಿ ಆಗುತ್ತದೆ. ಈ ತರಹ ಎಲ್ಲಾ ಪನೀರನ್ನು ಮ್ಯಾಶ್‌ಗೊಳಿಸಿ ಅದಕ್ಕೆ 2-2 ಚಮಚ ಮೈದಾ, ಸಕ್ಕರೆ ಹಾಕಿ, ಸಕ್ಕರೆ ವಿಲೀನವಾಗುವವರೆಗೂ ಮತ್ತೆ ಮಸೆಯಿರಿ.

ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳಾಗಿಸಿ ಒತ್ತಿ, ಆಕಾರ ಕೊಡಿ. ಪಾಕವನ್ನು ಮತ್ತೆ ಸಣ್ಣ ಉರಿಯಲ್ಲಿಟ್ಟು ಈ ಉಂಡೆಗಳನ್ನು ಒಂದೊಂದಾಗಿ ಅದರಲ್ಲಿ ತೇಲಿಬಿಡಿ. ಸ್ವಲ್ಪ ಹೊತ್ತಿಗೆ ಈ ಉಂಡೆಗಳು ತೇಲುತ್ತವೆ. ಆಗ ಇದನ್ನು ಸೌಟಿನಿಂದ ಒತ್ತುತ್ತಾ ಮುಳುಗಿಸಿ, ಹೆಚ್ಚು ಪಾಕ ಹೀರಿಕೊಳ್ಳುವಂತೆ ಮಾಡಿ. ಸ್ವಲ್ಪ ಹೊತ್ತಿನ ನಂತರ ಒಲೆ ಆರಿಸಿ, ಈ ಪಾತ್ರೆಗೆ ಮುಚ್ಚಳ ಮುಚ್ಚಿಡಿ. ಅರ್ಧ ಗಂಟೆ ನಂತರ ಒಂದು ಬಟ್ಟಲಲ್ಲಿ ನೀರು ತೆಗೆದುಕೊಂಡು, ಅದಕ್ಕೆ 1 ರಸಗುಲ್ಲ ಹಾಕಿ ಪರೀಕ್ಷಿಸಿ. ಅದು ನೀರಲ್ಲಿ ಮುಳುಗಿದರೆ, ರಸಗುಲ್ಲ ಸವಿಯಲು ಸಿದ್ಧ ಎಂದರ್ಥ. ಇದಾದ ಮೇಲೆ ಪಾಕಕ್ಕೆ ತುಸು ನೀರು ಚಿಮುಕಿಸಿ, ಅದನ್ನು ಹಾಗೇ ಸ್ವಲ್ಪ ಹೊತ್ತು ತೆರೆದಿಡಿ. ಚೆನ್ನಾಗಿ ತಣ್ಣಗಾದ ಮೇಲೆ ಇದಕ್ಕೆ ನುಣ್ಣನೆಯ ಏಲಕ್ಕಿ ಪುಡಿ, ರೋಸ್‌ ವಾಟರ್‌ ಬೆರೆಸಿ. 7-8 ತಾಸು ಹಾಗೇ ಮುಚ್ಚಿಡಿ. ನಂತರ ರಸಗುಲ್ಲ ಸವಿಯಲು ರೆಡಿ!

Chanar-Jilipi10

ಪನೀರ್

ಸಾಮಗ್ರಿ : 1 ಲೀ. ಹಾಲು, 4 ಸಣ್ಣ ಚಮಚ ವಿನಿಗರ್‌.

ವಿಧಾನ : ಮೊದಲು ಗಟ್ಟಿ ಹಾಲನ್ನು ಕಾಯಲಿಡಿ. ವಿನಿಗರ್‌ಗೆ ಅಷ್ಟೇ ಪ್ರಮಾಣದ ನೀರು ಬೆರೆಸಿ ತೆಳು ಮಾಡಿ. ಹಾಲು ಉಕ್ಕಿದಂತೆ, ಮಂದ ಉರಿ ಮಾಡಿ, ವಿನಿಗರ್‌ ಬೆರೆಸಿಡಿ. ತಕ್ಷಣ ಹಾಲನ್ನು ಕೆಳಗಿಳಿಸಿ. ಅರ್ಧ ಗಂಟೆಯಲ್ಲಿ ಹಾಲು ಒಡೆದು ನೀರು, ಗಟ್ಟಿ ಅಂಶ ಬೇರಾಗುತ್ತದೆ. ಒಂದು ತೆಳು ಬಟ್ಟೆಯಲ್ಲಿ ಈ ಮಿಶ್ರಣ ಹಾಕಿ ಸೋಸಿಕೊಳ್ಳಿ. ನಂತರ ಬಟ್ಟೆ ಸಮೇತ ಇದನ್ನು ಕೊಳಾಯಿ ಅಡಿಹಿಡಿದು, ಹರಿ ನೀರು ಬೀಳುವಂತೆ, ಎಡಬಲ ಆಡಿಸುತ್ತಾ ಶುಚಿಗೊಳಿಸಿ. ಇದರಿಂದ ವಿನಿಗರ್‌ನ ಹುಳಿ, ಒಗರು ರುಚಿ ದೂರಾಗುತ್ತದೆ, ಪನೀರ್‌ ಕೂಲ್ ಆಗುತ್ತದೆ. ನಂತರ ಇಡೀ ರಾತ್ರಿ ಇದರ ತೇವಾಂಶ ಸೋರುವಂತೆ ತೂಗುಬಿಡಿ. ಮಾರನೇ ಬೆಳಗ್ಗೆ ಇದನ್ನು ಫ್ಯಾನಿನ ಕೆಳಗೆ 6-7 ತಾಸು ಆರಲು ಬಿಡಿ. ಆಗ ಇದು ರಸಗುಲ್ಲ ಅಥವಾ ಇತರ ಮಿಠಾಯಿ ತಯಾರಿಸಲು ರೆಡಿ.

Cham-Cham

ಚಂಚಂ

ಸಾಮಗ್ರಿ : 2 ಕಪ್‌ ತಾಜಾ ಪನೀರ್‌, 2-2 ಚಮಚ ಸಣ್ಣ ರವೆ, ಮೈದಾ, ತುಪ್ಪ, 2-3 ಚಿಟಕಿ ಬೇಕಿಂಗ್‌ ಪೌಡರ್‌, 500 ಗ್ರಾಂ ಸಕ್ಕರೆ, 1  ಲೀ. ನೀರು, 2 ಚಮಚ ಹಾಲು, ಒಂದಿಷ್ಟು ಪಿಸ್ತಾ ಚೂರು.

ವಿಧಾನ : ಅಂಗೈ ಮೇಲೆ ಸ್ವಲ್ಪ ಸ್ವಲ್ಪವೇ ಪನೀರ್‌ ಹಾಕಿಕೊಳ್ಳುತ್ತಾ, ಚೆನ್ನಾಗಿ ಮಸೆಯಿರಿ. ಹೀಗೆ ಮಸೆದ 2 ಕಪ್‌ ಪನೀರ್‌ಗೆ ರವೆ, ಮೈದಾ, ತುಪ್ಪ, ಬೇಕಿಂಗ್‌ ಪೌಡರ್‌ ಬೆರೆಸಿ ಮತ್ತೊಮೆ ಇಡಿಯಾಗಿ ಮಸೆದು ಅರ್ಧ ಗಂಟೆ ನೆನೆಯಲು ಬಿಡಿ. ಅದೇ ಸಮಯದಲ್ಲಿ ಒಂದು ಪಾತ್ರೆಯಲ್ಲಿ ಸಕ್ಕರೆ, ನೀರು ಬೆರೆಸಿ ಕುದಿಯಲು ಇಡಿ. 1-2 ಕುದಿ ಬಂದ ತಕ್ಷಣ ಹಾಲು ಬೆರೆಸಿ ಮತ್ತಷ್ಟು ಕುದಿಸಿರಿ. ಆಗ ಸಕ್ಕರೆ ಪಾಕದ ಗಲೀಜು ಮೇಲೆ ತೇಲುತ್ತದೆ. ಅದನ್ನು ಸೋಸಿ ಬೇರ್ಪಡಿಸಿ, ಒಂದೆಳೆ ಪಾಕ ಸಿದ್ಧಪಡಿಸಿ. ನಂತರ ಪನೀರ್‌ಮಿಶ್ರಣದಿಂದ ಸಣ್ಣ ಉಂಡೆಗಳಾಗಿಸಿ ಚಿತ್ರದಲ್ಲಿರುವಂತೆ ಆಕಾರ ನೀಡಿ, ಅವನ್ನೆಲ್ಲ ಒಟ್ಟಾಗಿ ಪಾಕಕ್ಕೆ ಹಾಕಿ ಮಂದ ಉರಿಯಲ್ಲಿ ಅರ್ಧ ಗಂಟೆ ಕುದಿಸಬೇಕು. ಚಂಚಂ ಪಾಕ ಹೀರಿ ಚೆನ್ನಾಗಿ ದುಂಡಗಾದಾಗ, ಅವನ್ನು ಬೇರ್ಪಡಿಸಿ ತಟ್ಟೆಯಲ್ಲಿ ಜೋಡಿಸಿ, ಮೇಲೆ ಪಿಸ್ತಾ ಚೂರು ಉದುರಿಸಿ, ಸವಿಯಲು ಕೊಡಿ.

CHOCO-SANDESH-2

ಚಾಕಲೇಟ್ಸಂದೇಶ್

ಸಾಮಗ್ರಿ : 1 ಕಿಲೋ ತಾಜಾ ಪನೀರ್‌, 250 ಗ್ರಾಂ ಸಕ್ಕರೆ, 100 ಗ್ರಾಂ ಲಿಕ್ವಿಡ್‌ಚಾಕಲೇಟ್‌, 30-30 ಗ್ರಾಂ ಕೋಕೋ ಪೌಡರ್‌ಡ್ರಿಂಕಿಂಗ್‌ ಚಾಕಲೇಟ್‌ ಪೌಡರ್‌.

ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಮಸೆದ ಪನೀರ್‌ ಹಾಕಿ ಬಾಡಿಸಿ. ಮಂದ ಉರಿಯಲ್ಲಿ ಇದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಬಾಡಿಸಿ. ಇದರ ತೇವಾಂಶ ಪೂರ್ತಿ ಹಿಂಗಬೇಕು. ಇದನ್ನು ಒಂದು ಅಗಲವಾದ ತಟ್ಟೆಗೆ ಹರಡಿ, ಚೆನ್ನಾಗಿ ಆರಲು ಬಿಡಿ. ಆಮೇಲೆ ಇದಕ್ಕೆ ಲಿಕ್ವಿಡ್‌ ಚಾಕಲೇಟ್‌, ಕೋಕೋ ಪೌಡರ್‌ ಸೇರಿಸಿ ಮತ್ತೆ ಮಸೆಯಿರಿ.

ಒಂದು ಟ್ರೇಗೆ ತುಪ್ಪ ಸವರಿ ಅದರಲ್ಲಿ ಈ ಮಿಶ್ರಣ ಸಮನಾಗಿ ಹರಡಿ, ನಂತರ ಚೌಕಾಕಾರವಾಗಿ ಕತ್ತರಿಸಿ ಸವಿಯಲು ಕೊಡಿ.

KaNcha-Golla

ಗುಲಾಬಿ ಸಂದೇಶ್

ಸಾಮಗ್ರಿ : 1 ಕಿಲೋ ತಾಜಾ ಪನೀರ್‌, 250 ಗ್ರಾಂ ಸಕ್ಕರೆ, 4 ಚಮಚ ರೋಸ್‌ ವಾಟರ್‌, ಒಂದಿಷ್ಟು ತಾಜಾ ಗುಲಾಬಿ ದಳಗಳು.

ವಿಧಾನ : ಮೊದಲು ಪನೀರ್‌ನ್ನು ಚೆನ್ನಾಗಿ ಮಸೆದು, ಅದಕ್ಕೆ ಸಕ್ಕರೆ ಬೆರೆಸಿ ಅದು ಚೆನ್ನಾಗಿ ವಿಲೀನಗೊಳ್ಳುವಂತೆ ಮತ್ತೆ ಮತ್ತೆ ಮಸೆಯಿರಿ. ಕೊನೆಯಲ್ಲಿ ರೋಸ್‌ ವಾಟರ್‌ ಬೆರೆಸಿ ಮತ್ತೊಮ್ಮೆ ಮಸೆಯಿರಿ. ಇದರಿಂದ ಸಣ್ಣ ಉಂಡೆಗಳಾಗಿಸಿ ಒಂದು ಟ್ರೇನಲ್ಲಿ ಜೋಡಿಸಿ. ಈ ಉಂಡೆಗಳ ಕುತ್ತಿಗೆ ಭಾಗದಲ್ಲಿ ಅಲ್ಲಲ್ಲಿ ಬೆರಳ ತುದಿ ಒತ್ತಿ, ಗುಲಾಬಿ ದಳಗಳನ್ನು ಚಿತ್ರದಲ್ಲಿರುವಂತೆ ಹುದುಗಿಸಬೇಕು. ಹೀಗೆ ಎಲ್ಲಾ ಉಂಡೆಗಳಿಗೂ ಮಾಡಿಕೊಂಡರೆ, ಗುಲಾಬಿ ಸಂದೇಶ್‌ ರೆಡಿ! ಪ್ರಸಿದ್ಧ ಅಂಗಡಿಗಳೆಲ್ಲ ಕಲಬೆರಕೆಯ ಭಯದಿಂದ ರೆಡಿಮೇಡ್‌ಖೋವಾ, ಪನೀರ್‌ನ್ನು ಹೊರಗಿನಿಂದ ತರಿಸುವ ಬದಲು ತಾವೇ ತಯಾರಿಸಿಕೊಳ್ಳುತ್ತಾರೆ. ಫ್ಲೇವರ್‌, ಬಣ್ಣಗಳಿಗಾಗಿ ವಿವಿಧ ಫುಡ್‌ ಕಲರ್‌ ಅಥವಾ ಎಸೆನ್ಸ್ ನ್ನು ಸಹ ಹೊರಗಿನಿಂದ ತರಿಸುವುದಿಲ್ಲ. ಅದನ್ನೆಲ್ಲ ಆಯಾ ಅಂಗಡಿಗಳವರು `ಇನ್‌ ಹೋಂ’ ಉತ್ಪನ್ನಗಳಲ್ಲೇ ತಯಾರಿಸಿಕೊಳ್ಳುತ್ತಾರೆ.

ಸಂದೇಶ್‌ನ ಬಗೆಬಗೆಯ ವೆರೈಟಿಗಳಲ್ಲಿ ದೇಶ ವಿದೇಶಗಳ ಬ್ರ್ಯಾಂಡೆಡ್‌ ಕಂಪನಿಗಳ ಹಣ್ಣುಗಳ ಕ್ರಶ್‌, ಪಲ್ಪ್ ಹಾಗೂ ಸ್ಕ್ವಾಶ್‌ ಜೊತೆ ಚಾಕಲೇಟ್‌, ಚಾಕಲೇಟ್‌ ಡ್ರಿಂಕಿಂಗ್‌ ಪೌಡರ್‌ ಮತ್ತು ಚಾಕಲೇಟ್‌ ಸಾಸ್‌ಗಳು ಅತಿ ಅನಿವಾರ್ಯವಾಗಿರುವುದರಿಂದ, ಇಂಥ ಉತ್ಪನ್ನಗಳನ್ನು ಖ್ಯಾತ ಬ್ರ್ಯಾಂಡೆಡ್‌ ಕಂಪನಿಗಳಿಂದ 2-2 ಸಲ ಪರೀಕ್ಷಿಸಿಯೇ ಕೊಳ್ಳುತ್ತಾರೆ. ಡ್ರೈಫ್ರೂಟ್ಸ್ ಅಂತೂ ಅತಿ ಉತ್ಕೃಷ್ಟ ಮಟ್ಟದ್ದೇ ಆಗಿರಬೇಕು.

ಹೀಗಾಗಿ ಈ ಬಾರಿಯ ದಸರಾ. ದೀಪಾವಳಿ ಸಂದರ್ಭಕ್ಕಾಗಿ ಗೃಹಶೋಭಾ ಓದುಗರು ಬಂಗಾಳದ ಮಿಠಾಯಿಗಳನ್ನು ಸವಿಯಲೆಂದು ಇಲ್ಲಿ ಹಲವು ಬಗೆಯ ಬೆಂಗಾಲಿ ಸ್ವೀಟ್ಸ್ ತಯಾರಿಯ ವಿವರ ಒದಗಿಸಲಾಗಿದೆ, ಇದನ್ನು ಮಾಡಿ ಸವಿದು ರುಚಿ ಹೇಗಿತ್ತೆಂದು ತಿಳಿಸಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ