`ನೆನಪಿರಲಿ’ ಸಿನಿಮಾ ನೆನಪಿದೆಯಾ…? ಕನ್ನಡ ಸಿನಿಮಾರಂಗದಲ್ಲಿ ಹೊಸತನವನ್ನು ಹುಟ್ಟುಹಾಕಿ ಯಶಸ್ವಿಯಾದಂಥ ಚಿತ್ರ. ರಾಜೇಂದ್ರ ಸಿಂಗ್‌ ಬಾಬು ಅವರ ಗರಡಿಯಲ್ಲಿ ಪಳಗಿದ್ದರೂ ತಮ್ಮದೇ ಆದ ಕಲ್ಪನೆಯಲ್ಲಿ ನಿರ್ದೇಶಕರಾಗಿ ಮಿಂಚಿದ್ದ ರತ್ನಜ ಎಲ್ಲರಿಂದ ಪ್ರಶಂಸೆ ಪಡೆದುಕೊಂಡಿದ್ದಂಥ ಉತ್ಸಾಹಿ ತರುಣ. `ಪ್ರೇಮಿಸಂ’ ಚಿತ್ರದ ನಂತರ ಯಾರ ಗಮನಕ್ಕೂ ಬೀಳದೇ ಅದೃಶ್ಯರಾಗಿದ್ದ ರತ್ನಜ, ಇದ್ದಕ್ಕಿದ್ದಂತೆ `ಪ್ರೀತಿಯಲ್ಲಿ ಸಹಜ’ ಎನ್ನುತ್ತ ಹೊಸ ಚಿತ್ರವನ್ನು ತೆರೆಗೆ ತರಲು ಫೀನಿಕ್ಸ್ ನಂತೆ ಎದ್ದು ಉತ್ಸುಕರಾಗಿಬಿಟ್ಟರು. ಇಷ್ಟು ದಿನ ಎಲ್ಲಿದ್ರು… ಏನು ಮಾಡ್ತಿದ್ರು… ಪ್ರೀತಿಯಲ್ಲಿ ಸಹಜ… ಎಲ್ಲದರ ಬಗ್ಗೆ ರತ್ನಜ ಸುದೀರ್ಘವಾಗಿ ನಮ್ಮೊಂದಿಗೆ ಮಾತನಾಡಿದ್ದಾರೆ.

ನಾನು ಮತ್ತು ನನ್ನ ತಾಯಿ

ಅಮ್ಮನನ್ನು ನಾನು ತುಂಬಾನೆ ಪ್ರೀತಿಸ್ತೀನಿ. ಆಕೆ ಬಗ್ಗೆ ಅಪಾರ ಗೌರವ. ನನ್ನನ್ನು ಸಾಕಿ ಸಲಹಿದ ಆಕೆ ಮಾರಣಾಂತಿಕ ಕಾಯಿಲೆಗೊಳಗಾದಾಗ ನಾನು ಆಕೆಯೊಂದಿಗೇ ಇರಬೇಕಿತ್ತು. ಜನುಮ ನೀಡಿದ ತಾಯಿಯನ್ನು ಮೂರ್ನಾಲ್ಕು ವರ್ಷ ಪಕ್ಕದಲ್ಲೇ ಇದ್ದು ನೋಡಿಕೊಂಡೆ, ಸೇವೆ ಮಾಡಿದೆ. ನನ್ನ ಅದೃಷ್ಟ…. ಆಕೆ ಈಗ ಸಾವಿನಿಂದ ಪಾರಾಗಿ ಗೆದ್ದು ಬಂದಿದ್ದಾಳೆ.

ಆ್ಯಕ್ಷನ್ಕಟ್ನಿಂದ ದೂರಾದೆ

ಸಿನಿಮಾರಂಗದಲ್ಲಾದ ಬದಲಾವಣೆ ಹಾಗೂ ಹಲವಾರು ಕಾರಣಗಳಿಂದ ನಾನು ಖುಷಿಗಾಗಿ ಕೃಷಿಯನ್ನು ಆರಿಸಿಕೊಂಡೆ. ಮಂಡ್ಯ ಸಮೀಪ ಹತ್ತು ಎಕರೆ ಜಮೀನು ಇತ್ತು. ಅಲ್ಲಿಯೇ ವ್ಯವಸಾಯ ಮಾಡಿಕೊಂಡು ಐವತ್ತು ಹಸುಗಳನ್ನು ಸಾಕಿ ಡೈರಿ ಫಾರಂ ಮಾಡಿದೆ. `ನೆನಪಿರಲಿ’ ಚಿತ್ರ ಮಾಡುವಾಗ ನನ್ನೊಂದಿಗೆ ಕೆಲಸ ಮಾಡಿದ್ದ ಆರ್‌. ಜ್ಞಾನೇಶ್‌ ನನ್ನ ಜೊತೆಯಾಗಿ ನಡೆದು ಬಂದರು. ವ್ಯವಸಾಯ ಮಾಡುತ್ತಿರುವಾಗ ಸಿನಿಮಾ ಬಗ್ಗೆ ಚರ್ಚೆ ಮಾಡ್ತಿದ್ವಿ. ನಾನು ಸಿನಿಮಾ ನಿರ್ಮಾಣ ಮಾಡ್ತೀನಿ ನೀವು ಡೈರೆಕ್ಟ್ ಮಾಡಿ ಅಂತ ಹೇಳ್ತಿದ್ದರು, ಕಡೆಗದು ನಿಜವಾಗಿಬಿಡ್ತು.

ಪ್ರೀತಿಯಲ್ಲಿ ಸಹಜ…..!

ಕೆಲವು ಪ್ರಕ್ರಿಯೆಗಳು ಸಹಜವಾಗಿದ್ದು, ಪ್ರೀತಿಗೆ ಸಂಬಂಧಪಟ್ಟವರು ಯಾವ ರೀತಿ ಅದನ್ನು ಕ್ರಿಯೇಟ್‌ ಮಾಡ್ತಾರೆ…. ಉಳಿಯುತ್ತಾ? ಅಳಿಯುತ್ತಾ? ಕದ್ದು ಓಡಿ ಹೋಗೋದು ಸಹಜ, ಒಪ್ಪಿಕೊಂಡು, ಒಪ್ಪಿಸಿ ಬಾಳೋದು ಸಹಜ. ಇವು ತುಂಬಾನೆ ಕಾಮನ್‌, ಆಶ್ಚರ್ಯ ಹುಟ್ಟಿಸೋದು ಸಹಜ.

preetiyalli-sahaja-FINAL-2

ಸ್ವಂತ ಅನುಭವವೇ…?

ಸಿನಿಮಾ ಅನ್ನೋದು ನೈಜತೆ, ಕಲ್ಪನೆಗಳ ಮಿಶ್ರಣ ನಿಜ. ಆದರೆ ಪ್ರೇಕ್ಷಕರ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅರ್ಥವಾಗುವ ಹಾಗೆ ಸ್ಕ್ರೀನ್‌ ಪ್ಲೇ ಮಾಡುತ್ತೇವೆ. ಎಲ್ಲರ ಬದುಕಿನಲ್ಲೂ ಅಂಥ ಘಟನೆಗಳು ನಡೆದಿರುತ್ತೆ…. ಇದು ನನ್ನ ಕಥೆ ಅಂತ ಪ್ರತಿಯೊಬ್ಬರೂ ಅಂದುಕೊಳ್ಳುವುದು ಸಹಜ. ಪ್ರಕೃತಿ ಮಡಿಲಲ್ಲಿ… ಆರ್‌. ಜ್ಞಾನೇಶ್‌ ಮತ್ತು ಡಾ. ಎಂ.ಎಲ್. ವೆಂಕಟೇಶ್‌ ಭಾರಿ ಬಜೆಟ್‌ ಹಾಕಿ ನಿರ್ಮಾಣ ಮಾಡಿದ್ದಾರೆ. ಅರತ್ತೈದು ದಿನಗಳು ಹೊರಾಂಗಣದಲ್ಲಿ ಚಿತ್ರೀಕರಣ. ಕೇರಳ, ತಮಿಳುನಾಡು, ಕರ್ನಾಟಕದ ಪಶ್ಚಿಮಘಟ್ಟಗಳು, ಅಲೆಪ್ಪಿ, ಇಡುಕ್ಕಿ, ತೇಕಡಿ, ಪೇಣಿ, ಪೆರಿಯಾಕೊಳಂ, ಕೊಡೈಕೆನಾಲ್ ‌ಮುಂತಾದ ಪ್ರಕೃತಿ ಮಡಿಲಲ್ಲಿ ಚಿತ್ರೀಕರಣ ಮಾಡಲಾಗಿದೆ. ನಮ್ಮ ನಿರ್ಮಾಪಕರು ಅಷ್ಟೇ ಉತ್ಸಾಹದಿಂದ ಪ್ರತಿಯೊಂದರಲ್ಲೂ ಭಾಗವಹಿಸಿ ಕೆಲಸ ಮಾಡಿದ್ದಾರೆ.

ಕನ್ನಡ ಚಿತ್ರರಂಗ ಬದಲಾಗಿದೆ ಅನ್ಸುತ್ತಾ? ಸ್ಟಾರ್ಗಳ ಜೊತೆ ಸಿನಿಮಾ ಯಾವಾಗ?

ಅದರ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡಬೇಕೆಂದರೆ ಸಬ್ಜೆಕ್ಟ್, ಬಜೆಟ್ ಎರಡೂ ದೊಡ್ಡದಾಗಿರಬೇಕು. `ರಾಯಭಾರಿ’ ಅಂತ ಕಥೆ ರೆಡಿ ಇದೆ. ದೊಡ್ಡ ಸ್ಟಾರೇ ಮಾಡಬೇಕು ಹಾಗಿದೆ ಸಬ್ಜೆಕ್ಟ್. ಕಾಲ ಕೂಡಿ ಬಂದಾಗ ಖಂಡಿತಾ ಮಾಡ್ತೀನಿ.

preetiyalli-sahaja-FINAL-3

ಸಂಗೀತವೇ ಪ್ರಧಾನ…..ಲೊಕೇಶನ್

ಹೀರೋ ಆದರೆ ಸಂಗೀತ ಪ್ರಧಾನ ನಾಯಕಿ ಅಂತಾನೆ ಹೇಳಬಹುದು. ಹಂಸಲೇಖಾರ ಬಳಿ ಕೆಲಸ ಮಾಡಿರುವ ರವಿರಾಜ್ ಸಂಗೀತ ಸಂಯೋಜಿಸಿದ್ದಾರೆ. ನನ್ನ ಕೋಪ, ತಾಪ ಎಲ್ಲವನ್ನು ಸಹಿಸಿಕೊಂಡು ಅದ್ಭುತವಾದ ಸಂಗೀತ ನೀಡಿದ್ದಾರೆ. ನಾನು ಸಹ ಹಾಡುಗಳನ್ನು ಬರೆದಿದ್ದೇನೆ. ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್‌ ಆಗಿ ರೋಷಿನಿ, ವೈಷ್ಣವಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ.

ಪ್ರೀತಿಯಲ್ಲಿ ಸಹಜದ ನಾಯಕಿ

ಅಕ್ಸಾ ಭಟ್‌. ಕಾಶ್ಮೀರಿ ಪಂಡಿತ್‌, ಬೆಂಗಳೂರಲ್ಲಿ ಆಡಿಯಾಲಜಿ ಓದ್ತಾ ಇದ್ದರು.  ನಾನಾಕೆಯನ್ನು ಫೇಸ್‌ಬುಕ್‌ನಲ್ಲಿ ನೋಡಿದ್ದು, ಕೇಳಿದಾಗ ಆಸಕ್ತಿ ಇರಲಿಲ್ಲ. ಆದರೂ ನಾನು ಬಿಡಲಿಲ್ಲ. ಕಥೆ, ಪಾತ್ರದ ಬಗ್ಗೆ ಹೇಳಿ ಅಕ್ಸಾಳ ತಂದೆತಾಯಿಯನ್ನು ಒಪ್ಪಿಸಿದೆ.

ಅಕ್ಸಾಳದು ನ್ಯಾಚುರಲ್ ಬ್ಯೂಟಿ. ಅದನ್ನೇ ನಾನು ಯೂಸ್‌ ಮಾಡಿಕೊಂಡೆ. ಮೇಕಪ್‌ ಇಲ್ಲದೆ ನಟಿಸಿದ್ದಾಳೆ. ಅಷ್ಟೇ ಶ್ರದ್ಧೆಯಿಂದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ.

`ಪ್ರೇಮಿಸಂ’ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದ ಸೂರ್ಯ ಈ ಚಿತ್ರದ ಹೀರೋ. ರಘು ಮುಖರ್ಜಿ ದೇವರಾಜ್‌ ಅವರ ಹಿರಿಯ ಮಗನ ಪಾತ್ರ ಮಾಡಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ. ಕೇರಳದ ಅನ್ವಿತಾ ಜೋಡಿಯಾಗಿ ನಟಿಸಿದ್ದಾಳೆ.

ಹೀಗೆಲ್ಲ ವಿವರಿಸಿ ಹೇಳುವ ರತ್ನಜ ಇತ್ತೀಚೆಗಷ್ಟೆ `ಪ್ರೀತಿಯಲ್ಲಿ ಸಹಜ’ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆರು ಹಾಡುಗಳಿದ್ದು ಐದೂ ಹಾಡುಗಳಿಗೆ ಅವರೇ ಸಾಹಿತ್ಯ ರಚಿಸಿದ್ದಾರೆ. ಆನಂದ್‌ ಆಡಿಯೋ ಹಕ್ಕನ್ನು ಖರೀದಿಸಿದ್ದಾರೆ. ಚಿತ್ರದ ಎಲ್ಲ ಹಾಡುಗಳು ಈಗಾಗಲೇ ಸಂಗೀತ ಪ್ರೇಮಿಗಳ ಗಮನ ಸೆಳೆದಿದೆ. ಮೆಲೋಡಿಯನ್ನು ಉಳಿಸಿಕೊಳ್ಳುತ್ತ ಜನಪ್ರಿಯವಾಗುತ್ತಿದೆ. ಪ್ರೀತಿಯಲ್ಲಿ ಸಹಜ ಚಿತ್ರದ ಮೂಲಕ ರತ್ನಜ ಸ್ಯಾಂಡಲ್ ವುಡ್‌ನಲ್ಲಿ ಮತ್ತೊಮ್ಮೆ ಯಶಸ್ಸಿನ ಗೀತೆ ಹಾಡಲಿ ಎಂದು ಹಾರೈಸೋಣ.

ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ