ಫಾತಿಮಾಳ ಒಬ್ಬಳೇ ಮಗಳು ರಜಿಯಾಳಿಗೆ ಎಂಜಿನಿಯರ್‌ರನ ಸಂಬಂಧ ಕುದುರಿ ಬಂದಾಗ, ಆ ಮನೆಯಲ್ಲಿ ಸಂತಸದ ಅಲೆ ಹರಿದಾಡಿತು. ಫಾತಿಮಾ ಕೂಡಲೇ ಮಗಳಿಗೆ ವರನ ಫೋಟೋ, ಬಯೋಡೇಟಾ ತೋರಿಸಿ ಅವಳ ಅಭಿಪ್ರಾಯ ಕೇಳಿದಳು. ಸದಾ ಚಿಮ್ಮುವ ಚಿಲುಮೆಯಾಗಿದ್ದ, ಚೈತನ್ಯದ ಸೆಲೆಯಾಗಿದ್ದ ರಜಿಯಾ ತನ್ನ ಮದುವೆಯ ಮಾತು ಕೇಳಿ ಬಿಲ್‌ಕುಲ್‌ಮೌನವಾಗಿಬಿಟ್ಟಳು. ಮೇಜಿನ ಮೇಲೆ ಎಲ್ಲಿಟ್ಟ ಫೋಟೋ ಹಾಗೆಯೇ 2 ದಿನಗಳಾದರೂ ಉಳಿದುಹೋಯಿತು. ಎಲ್ಲಾ ಸಾಮಾನ್ಯ ಹುಡುಗಿಯರಂತೆ ರಜಿಯಾ ಇದರಲ್ಲಿ ಯಾವ ಆಸಕ್ತಿಯನ್ನೂ ತೋರಿಸಲು ಹೋಗಲಿಲ್ಲ. ಇದರಿಂದ ಫಾತಿಮಾಳ ಚಿಂತೆ ಹೆಚ್ಚಿತು. ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಮಗಳನ್ನು ಫಾತಿಮಾ ತಾಯಿಗಿಂತ ಹೆಚ್ಚಾಗಿ ಗೆಳತಿಯಂತೆಯೇ ಕಾಣುತ್ತಿದ್ದಳು.
ಅವಳು ಸಹಜ ನಾಚಿಕೆಯಿಂದ ಈ ಕುರಿತು ತನ್ನ ಬಳಿ ಏನೂ ಹೇಳುತ್ತಿಲ್ಲವೋ ಎಂದು ಫಾತಿಮಾ ಅಂದುಕೊಂಡಳು. ಆದರೆ ಹಾಗಾಗುವ ಪ್ರಮೇಯವೇ ಇರಲಿಲ್ಲ. ತನ್ನ ಜೀವನದ ಪ್ರತಿ ಆಗುಹೋಗುಗಳನ್ನೂ ರಜಿಯಾ ತಾಯಿಯ ಬಳಿ ಚರ್ಚಿಸುತ್ತಿದ್ದಳು. ಅವಳು ಜೀವನದಲ್ಲಿ ಎಷ್ಟು ಪ್ರಾಕ್ಟಿಕಲ್ ಅಂದರೆ, ಪ್ರತಿಯೊಂದು ಹೆಜ್ಜೆಯನ್ನೂ ಅಳೆದೂ ತೂಗಿಯೇ ಮುಂದೆ ಇಡುತ್ತಿದ್ದಳು. ಮಧ್ಯಮ ವರ್ಗದ ಬವಣೆಗಳು ಕಟು ವಾಸ್ತವದ ಅರಿವು ಮೂಡಿಸಿ ಅವಳನ್ನು ಹತಾಶಳನ್ನಾಗಿ ಮಾಡಿತ್ತು, ಆದರೆ ಮನೋಬಲದಲ್ಲಿ ಅವಳು ಅಷ್ಟೇ ಗಟ್ಟಿಗಳೆನಿಸಿದ್ದಳು, ಯಾವುದಕ್ಕೂ ಸೋಲುತ್ತಿರಲಿಲ್ಲ.
“ರಜಿಯಾ, ಈ ಹುಡುಗನ ಸಂಬಂಧವಾಗಿ ನೀನು ಏನು ಯೋಚಿಸಿದೆಯಮ್ಮ?” ಡೈನಿಂಗ್ ಟೇಬಲ್ ಬಳಿ ರಾತ್ರಿಯ ಊಟ ಬಡಿಸುತ್ತಾ ಫಾತಿಮಾ ಕೇಳಿದಳು. ರಜಿಯಾ ಏನೂ ಉತ್ತರಿಸದೆ ಮೌನದ ಮೊರೆಹೊಕ್ಕಳು.
“ಹುಡುಗ ಒಳ್ಳೆ ಸ್ಮಾರ್ಟ್ ಆಗಿದ್ದಾನೆ, ಒಳ್ಳೆಯ ನೌಕರಿ, ಕೈತುಂಬಾ ಸಂಬಳ…. ಬೆಂಗಳೂರಿನಲ್ಲಿ ಅವರಿಗೆ ಸ್ವಂತ ಮನೆ ಇದೆ. ಮತ್ತೆ ಇನ್ನೂ ಯಾಕಮ್ಮ ಯೋಚನೆ…..”
ಫಾತಿಮಾಳ ಧ್ವನಿಯಲ್ಲಿದ್ದ ತೀಕ್ಷ್ಣತೆ ರಜಿಯಾಳನ್ನು ಎಚ್ಚರಿಸಿತು. ಕೊನೆಗೂ ಅವಳು ತಡವರಿಸುತ್ತಾ ಹೇಳಿದಳು, “ಅಮ್ಮಿ…. ಹುಡುಗನ ಪರ್ಸನಾಲಿಟಿ, ಅವನ ಸ್ಟೇಟಸ್, ಸಂಬಳ…. ಇಷ್ಟನ್ನೇ ನೋಡಿ ಅವನನ್ನು ಚಿನ್ನದಂಥ ವರ ಎಂದು ನಿರ್ಧರಿಸಿಬಿಡುವುದೇ? ಯಾರು ನಮಗೆ ಸಂಪೂರ್ಣ ಅಪರಿಚಿತರೋ, ಯಾರೊಡನೆ ನಾವು ಒಮ್ಮೆಯೂ ಮಾತುಕತೆ ಆಡಿಲ್ಲವೋ, ಯಾರ ಇಷ್ಟಾನಿಷ್ಟಗಳ ಪರಿಚಯ ಸ್ವಲ್ಪವೂ ಇಲ್ಲವೋ…. ಅವರನ್ನು ಒಮ್ಮೆಲೇ ಸಂಗಾತಿಯನ್ನಾಗಿ ಹೇಗೆ ಆರಿಸುವುದು? ಅಷ್ಟು ಬೇಗ ನಿರ್ಧರಿಸಲು ಸಾಧ್ಯವೇ?”
“ಆದರೆ…. ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳಲ್ಲಿಯೂ ಹೀಗೆ ನಡೆದುಕೊಂಡು ಬರುತ್ತಿದೆಯಲ್ಲಮ್ಮ…. ಅದರಲ್ಲಿ ತಪ್ಪೇನು?” ಫಾತಿಮಾ ಮಗಳಿಗೆ ತಿಳಿಹೇಳಲು ಯತ್ನಿಸಿದಳು.
“ಅಮ್ಮಿ, ಕಲಿತವಳಾದರೂ ನೀನು ತಾತಾ ಹೇಳಿದ ವರನನ್ನು ಆರಿಸಿಕೊಂಡು ಇಷ್ಟು ದಿನ ಚಾಚೂ ತಪ್ಪದೆ ಸಂಪ್ರದಾಯ ಪಾಲಿಸಿಕೊಂಡು ಬಂದಿರುವೆ. ಎಂದಾದರೂ ಒಂದು ದಿನ ಅಪ್ಪನ ಜೊತೆ ಸುಖವಾಗಿ ಇದ್ದದ್ದು ಉಂಟೆ?”
ಪರಿಸ್ಥಿತಿಯ ಕಟುಸತ್ಯ ಬಾಣದಂತೆ ಫಾತಿಮಾಳ ಎದೆಗೆ ಇರಿಯಿತು. ಹೆತ್ತ ಮಗಳೇ ತಾಯಿಯ ಬದುಕಿನ ಜೀವನದ ಕರಿ ಪುಟಗಳನ್ನು ಒಂದೊಂದಾಗಿ ತೆರೆದಿಡಲು ಪ್ರಯತ್ನಿಸುತ್ತಿದ್ದಳು. ಫಾತಿಮಾಳಿಗೆ ತಕ್ಷಣ ಉತ್ತರಿಸಲಾಗಲಿಲ್ಲ. ಅವಳು ಪಟಪಟ ಕಣ್ಣುಗಳನ್ನು ಬಡಿಯುತ್ತಾ ಕಳೆದು ಹೋದ ತನ್ನ ಜೀವನದ ಬಗ್ಗೆ ನೆನೆಯ ತೊಡಗಿದಳು. 25 ವರ್ಷಗಳ ಹಿಂದೆ, ತಂದೆ ತೋರಿದ ವರನನ್ನು ಕಣ್ಣೆತ್ತಿ ನೋಡುವ ಸಾಹಸ ಮಾಡದೆ ಮದುವೆಗೆ ಒಪ್ಪಿದಳು. ಅದರಿಂದ ಜೀವನವಿಡೀ ಕಷ್ಟ ಎದುರಿಸುತ್ತಾ, ತನ್ನ ಆಸೆ, ಬಯಕೆ, ಕನಸುಗಳನ್ನು ಕೊಂದುಕೊಳ್ಳುತ್ತಾ ದಿನ ಕಳೆಯುತ್ತಿದ್ದಳು.
“ಮದುವೆ ಅನ್ನೋದು ಒಂದು ಅಡ್ಜಸ್ಟ್ ಮೆಂಟ್ ಕಣಮ್ಮ…. ಅಪರಿಚತನಾದರೂ ಕೈಹಿಡಿದವನ ಮೇಲೆ ಪ್ರೀತಿ ಬೆಳೆಸಿಕೊಂಡು ಬದುಕು ಎದುರಿಸುವುದು ಭಾರತೀಯ ಹೆಣ್ಣಿಗೆ ಮೊದಲಿನಿಂದಲೂ ಒಲಿದು ಬಂದ ಕಲೆಯಮ್ಮ….” ಫಾತಿಮಾ ಹೊಳೆದದ್ದನ್ನು ತಕ್ಷಣ ಹೇಳಿದಳು.
“ನೀನು ನಿಜಕ್ಕೂ ಸುಖವಾಗಿದ್ದೀಯಾ ಅನ್ನುವುದನ್ನು ಪ್ರಾಮಾಣಿಕವಾಗಿ ಯೋಚಿಸಿ ಹೇಳು ಅಮ್ಮಿ…..,” ರಜಿಯಾ ತನ್ನ ಪಟ್ಟು ಬಿಡಲಿಲ್ಲ. ಫಾತಿಮಾ ಮತ್ತೆ ದೀರ್ಘಾಲೋಚನೆಗೆ ಇಳಿದಳು.
ಫಾತಿಮಾ ಮೊದಲಿನಿಂದಲೂ ತನ್ನ ಜೊತೆ ಓದುತ್ತಿದ್ದ ಅನ್ವರ್‌ನನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಮೈಸೂರಿನಲ್ಲಿ ಅವರ ಮನೆ ಸಹ ಇವರ ಮನೆಗೆ ಹತ್ತಿರವಾಗಿತ್ತು. ಆದರೆ ಮುಂದೆ ಬೆಳೆದು ದೊಡ್ಡವರಾದ ಮೇಲೆ, ಅನ್ವರ್ ತನ್ನ ತಂದೆಯ ಬಿಸ್‌ನೆಸ್ ಮುಂದುವರಿಸಿ ಖ್ಯಾತ ಉದ್ಯಮಿ ಎನಿಸಿದ. ಆಗ ಅವನ ಮದುವೆಗಾಗಿ ಹೆಣ್ಣು ಹೆತ್ತವರು ಧಾವಿಸಿ ಬರತೊಡಗಿದರು. 10 ಲಕ್ಷ ಕ್ಯಾಶ್, ಟೊಯೋಟಾ ಕಾರ್, ಬೆಂಗಳೂರಿನಲ್ಲಿ ಸೈಟ್ ಇಲ್ಲದೆ ಮಗನ ಮದುವೆ ಆಗದು ಎಂದು ತಂದೆ ಸಾರಿದರು. ಮೂವರು ಹೆಣ್ಣುಮಕ್ಕಳ ತಂದೆಯಾದ ಸುಲೇಮಾನ್, ಫಾತಿಮಾಳಿಗಾಗಿ ಇಂಥ ದುಬಾರಿ ವರನನ್ನು ಆರಿಸಲಾರದೆ ಹೋದರು. ಅಸಹಾಯಕರಾಗಿ ಕೈಚೆಲ್ಲಿದಾಗ, ಫಾತಿಮಾ ಜೀವ ಕಳೆದುಕೊಳ್ಳದೆ ಬದುಕಿದ್ದೇ ಹೆಚ್ಚು. ಮೊದಲ ಇಬ್ಬರು ಹೆಣ್ಣುಮಕ್ಕಳ ಮದುವೆಯ ಸಾಲದಿಂದ ಆಗತಾನೇ ಹೊರಬಂದಿದ್ದ. ಅವರು, 3ನೇ ಮಗಳಿಗಾಗಿ ಮತ್ತೆ ದೊಡ್ಡ ಮೊತ್ತದ ಸಾಲದ ಹೊರೆ ಹೊರುವ ಸ್ಥಿತಿಯಲ್ಲಿರಲಿಲ್ಲ.
ಕೊನೆಗೆ ಫಾತಿಮಾ ಅನ್ವರ್‌ನನ್ನು ಏಕಾಂತದಲ್ಲಿ ಭೇಟಿಯಾಗಿ, ತಮ್ಮಿಬ್ಬರ ಇಷ್ಟು ವರ್ಷಗಳ ಪ್ರೇಮವನ್ನು ನೆನಪಿಸಿ, ಹೇಗಾದರೂ ಈ ಮದುವೆಗೆ ಅವನ ತಂದೆಯನ್ನು ಒಪ್ಪಿಸುವಂತೆ ಬಹಳ ಕೇಳಿಕೊಂಡಳು. ಅವನು ಕಲ್ಲಿನ ಪ್ರತಿಮೆಯಂತೆ ಕೇಳಿಸಿಕೊಂಡನೇ ಹೊರತು ಜವಾಬು ಕೊಡಲಿಲ್ಲ. ಅತ್ತೂ ಅತ್ತೂ ಅವಳಿಗೆ ತಲೆನೋವು ಬಂದಿತು. ತಾನೇ ಕೆಲಸಕ್ಕೆ ಸೇರಿ, ಜೀವಮಾನವಿಡೀ ಪ್ರತಿ ತಿಂಗಳೂ ಸಂಬಳದ ಹಣವನ್ನು ವರದಕ್ಷಿಣೆಯಾಗಿ ಕೊಡುತ್ತೇನೆ ಎಂದು ಹೇಳಿದರೆ ಅದಕ್ಕೂ ಒಪ್ಪಲಿಲ್ಲ. ಅವಳ ಸೌಂದರ್ಯ, ಅವಳ ಗುಣಸ್ವಭಾವ, ಶೀಲಸೌಜನ್ಯ, ಓದುವಿದ್ಯೆ ಎಲ್ಲ ಕಾಲಕಸವಾಯ್ತು. ಅವಳ ಆಶಾಗೋಪುರ ಕಳಚಿಬಿದ್ದಿತು. ಕೊನೆಗೆ ತಮ್ಮ ಸ್ಥಿತಿಗೆ ಸರಿಹೊಂದುವ ಒಬ್ಬ ಅತಿ ಸಾಧಾರಣ ವರನನ್ನು ಸುಲೇಮಾನ್ ಗೊತ್ತು ಮಾಡಿದರು. ಆದರೆ ಅವಳ ಗಂಡನಾಗಿ ಬಂದ ತೌಸಿಫ್, ಅವಳಿಗೆ ಸುಖ, ನೆಮ್ಮದಿ, ಮನಶ್ಶಾಂತಿಗಳನ್ನು ಮರೀಚಿಕೆಯಾಗಿಸಿದ. ಮಹಾಕುಡುಕನಾಗಿದ್ದ ಅವನು ಅವಳ ಭಾವನೆಗಳಿಗೆಂದೂ ಬೆಲೆ ಕೊಡಲೇ ಇಲ್ಲ. ಒಂದೇ ಸೂರಿನಡಿ ಹಲವು ವರ್ಷ ಕಳೆದರೂ ಇಬ್ಬರ ಮನಸ್ಸೂ ಬೆರೆಯಲೇ ಇಲ್ಲ. ಮಹಾ ಸೋಮಾರಿಯಾಗಿದ್ದ ಅವನು 2-3 ತಿಂಗಳಿಗೊಮ್ಮೆ ಕೆಲಸ ಬದಲಿಸಿ, ಕೈಲಿ ನಾಲ್ಕು ಕಾಸಿಲ್ಲದವನಂತೆ ಕಾಲು ಚಾಚಿ ಕುಳಿತುಬಿಡುತ್ತಿದ್ದ. ಕೊನೆಗೆ ಸಂಸಾರದ ನೊಗ ಹೊರಲು ಫಾತಿಮಾ ತಾನೇ ಖಾಸಗಿ ಫ್ಯಾಕ್ಟರಿಯೊಂದಕ್ಕೆ ಕೆಲಸಕ್ಕೆ ಸೇರಿದಳು. ಅವಳನ್ನು ಹೊಡೆದೂಬಡಿದೂ, ಅವಳ ಸಂಪಾದನೆ ಲೂಟಿ ಮಾಡಿ, ಹೆಂಡ ಜೂಜಿಗೆ ಹಣ ಹಾಳು ಮಾಡಿ, ಅವನು ಪ್ರಜ್ಞೆಯಿಲ್ಲದೆ ಬೀದಿಯಲ್ಲಿ ಬಿದ್ದಿರುತ್ತಿದ್ದ. ಅವನನ್ನು ಸುಧಾರಿಸಿಕೊಂಡು ಮನೆ ನಡೆಸುವಷ್ಟರಲ್ಲಿ ಫಾತಿಮಾ ಹೈರಾಣಾಗುತ್ತಿದ್ದಳು. ಮಗಳು ಹುಟ್ಟಿ ದೊಡ್ಡವಳಾದುದು, ಯಾವುದೂ ಅವಳ ಪಾಲಿಗೆ ಮಧುರ ನೆನಪಾಗಿ ಉಳಿಯಲೇ ಇಲ್ಲ. ಮಗಳಿಗೊಂದು ಸುಂದರ ಭವಿಷ್ಯ ಕಲ್ಪಿಸಲೇಬೇಕೆಂದು ಗಂಡನನ್ನು ತೊರೆದು ಅವಳು ಬೆಂಗಳೂರಿಗೆ ಬಂದುಬಿಟ್ಟಳು.
“ಅಮ್ಮಿ….. ಏನು ಯೋಚನೆ?” ರಜಿಯಾ ಅವಳನ್ನು ಎಚ್ಚರಿಸಿದಾಗ ಫಾತಿಮಾ ವಾಸ್ತವಕ್ಕೆ ಬಂದಳು.
“ಹೂಂ…. ಏನು ಹೇಳಿದೆಯಮ್ಮ?”
“ಅಮ್ಮಿ….. ಆ ಎಂಜಿನಿಯರ್ ಹುಡುಗ ಬೇಡ. ನೀನು ತಪ್ಪು ತಿಳಿಯಲ್ಲಿಲ್ಲಾಂದ್ರೆ ಒಂದು ಮಾತು ಹೇಳ್ತೀನಿ, ನಮ್ಮ ಮನೆ ಓನರ್ ಮಗ…. ನಿನಗೆ ಒಪ್ಪಿಗೆಯೇ?”
“ಓ….. ನೀನು ಹೇಳುತ್ತಿರುವುದು ಅಲ್ತಾಫ್ ಕುರಿತೇನು?” ಫಾತಿಮಾಳ ದನಿ ಆಳವಾದ ನಿದ್ದೆಯಿಂದ ಎದ್ದಂತಿತ್ತು.
“ಹೂಂ,” ಬಾವಿ ಆಳದಿಂದ ರಜಿಯಾಳ ಮರುದನಿ ಕೇಳಿಸಿತು.
ಯಶಸ್ವಿ ಉದ್ಯಮಿ ರಫೀಕ್ ಸಾಹೇಬರ ದೊಡ್ಡ ಮಗ ಅ್ತಾಫ್ ಫಾತಿಮಾಳಿಗೆ ಅಪರಿಚತನೇನಲ್ಲ. ಅವರ ಸ್ವಂತ ಮನೆಯಲ್ಲಿಯೇ ಇವರು ಬಾಡಿಗೆಗಿದ್ದದ್ದು. ಆದರೆ ಇಲ್ಲಿ ಮತ್ತೆ ಅಂತಸ್ತು ವರದಕ್ಷಿಣೆ ಅಡ್ಡಗೋಡೆ ಆಗಬಾರದಷ್ಟೆ. ಫಾತಿಮಾ ಒಳಗೊಳಗೆ ಹೆದರಿದಳು.
“ಅಂದ್ರೆ ಅಲ್ತಾಫ್‌ಗೂ ಈ ಸಂಬಂಧ ಒಪ್ಪಿಗೆಯೇ?”
“ಹೂಂ….ಅಮ್ಮಿ!” ರಜಿಯಾಳ ದನಿಯಲ್ಲಿ ಸಂಭ್ರಮವಿತ್ತು. ಫಾತಿಮಾ ತಾನೇ ಖುದ್ದಾಗಿ ಹೋಗಿ ವಿಚಾರಿಸಿಕೊಂಡು ಮದುವೆಗೆ ಒಪ್ಪಿಗೆ ಪಡೆದಳು. ತನ್ನ ಕೈಲಾದ ಮಟ್ಟಿಗೆ ಖರ್ಚು ಮಾಡಿ, ಮಗಳ ಮದುವೆ ಮಾಡಿಕೊಡುವುದಾಗಿ ತಿಳಿಸಿದಾಗ ಅಲ್ತಾಫ್ ಮನೆಯವರು ಒಪ್ಪಿದರು. ಸುಸೂತ್ರವಾಗಿ ಲಗ್ನಪತ್ರಿಕೆ ನೆರವೇರಿತು.
ರಜಿಯಾ ನಿಂತಲ್ಲಿ ನಿಲ್ಲಲಾರದೆ ಹಾರಾಡುತ್ತಿದ್ದಳು. ಅಲ್ತಾಫ್‌ನಂಥ ವಿದ್ಯಾವಂತ, ಸ್ಮಾರ್ಟ್, ಅನುಕೂಲಸ್ಥ ಹುಡುಗ ಅಳಿಯನಾಗಿ ಸಿಕ್ಕಿದ್ದಕ್ಕೆ ಫಾತಿಮಾ ಸಂತೋಷಪಟ್ಟಳು. ಮಗಳ ಜೊತೆ ಅಲ್ತಾಫ್ ಮೊಬೈಲ್ ನಲ್ಲಿ ಗಂಟೆಗಟ್ಟಲೆ ಮಾತನಾಡುವುದನ್ನು ಕಂಡು ಮಗಳ ಭವಿಷ್ಯ ಸುಗಮವಾಯಿತು ಎಂದೇ ಭಾವಿಸಿದಳು. ಆದರೆ ನಾವು ನೆನೆಸಿದಂತೆ ಎಲ್ಲ ಸುಸೂತ್ರವಾಗಿ ನಡೆಯಲು ಸಾಧ್ಯವೇ?
ಇದ್ದಕ್ಕಿದ್ದಂತೆ ಅಲ್ತಾಫ್ ತಂದೆಗೆ ಅಪಘಾತವಾಗಿ ಅವರು ಆಸ್ಪತ್ರೆ ಸೇರುವಷ್ಟರಲ್ಲಿ ಅಸುನೀಗಿದರು. ಇದರಿಂದ ಅವರ ಉದ್ಯಮದ ಮೇಲೆ ಕರಿನೆರಳು ಮುಸುಕಿತು. ಆಗ ತಾನೇ ಬಿಸ್‌ನೆಸ್‌ಗೆ ಎಂಟ್ರಿ ಪಡೆದಿದ್ದ ಅಲ್ತಾಫ್, ಇನ್ನೂ ಅದರ ಆಳದ ಅರಿವು ಪಡೆದಿರಲಿಲ್ಲ. ತಮ್ಮ ಸಾಲ ಸೋಲಗಳ ವ್ಯವಹಾರದ ಕುರಿತು ರಫೀಕ್ ಸಾಹೇಬರು ಮನೆಯವರಿಗೆ ಯಾವ ಸುಳಿವನ್ನೂ ಕೊಟ್ಟಿರಲಿಲ್ಲ. 1 ತಿಂಗಳು ಕಳೆಯುವಷ್ಟರಲ್ಲಿ ಹಳೆ ಸಾಲದ ಬಾಕಿ ಪೂರ್ತಿ ತೀರಿಸುವಂತೆ ಬ್ಯಾಂಕಿನಿಂದ ನೋಟೀಸ್ ಬಂದಿತು. ಬಿಸ್‌ನೆಸ್‌ಗಾಗಿ ಅವರು ಬ್ಯಾಂಕಿನಿಂದ 10 ಲಕ್ಷ ಹಣ ಪಡೆದಿದ್ದರು. ಈಗ ಈ ಸಮಸ್ಯೆ ಎದುರಿಸುವುದು ಹೇಗೋ ತಿಳಿಯದೆ ಎಲ್ಲರೂ ಕಣ್ಕಣ್ಣು ಬಿಟ್ಟರು. ತಿಂಗಳೊಳಗೆ ಮದುವೆ ಎಂದು ಛತ್ರ ಮತ್ತಿತರ ಮುಖ್ಯ ವ್ಯವಸ್ಥೆಗಳಿಗೆ ಫಾತಿಮಾ ಅಡ್ವಾನ್ಸ್ ಕೊಟ್ಟಿದ್ದು ವ್ಯರ್ಥವಾಯಿತು. ಮದುವೆಯನ್ನು ಅನಿವಾರ್ಯವಾಗಿ 1 ವರ್ಷ ಮುಂದೂಡ ಬೇಕಾಯಿತು. ಅಷ್ಟು ಹೊತ್ತಿಗೆ ನಿಧಾನವಾಗಿ ಒಡವೆ, ವಸ್ತ್ರ, ಮತ್ತಿತರ ಖರ್ಚುಗಳಿಗೆ ಹಣ ಹೊಂದಿಸುವುದೆಂದು ನಿರ್ಧರಿಸಿದಳು. ಹೀಗೆ 6 ತಿಂಗಳು ಕಳೆಯಿತು. ಮದುವೆಯನ್ನು ಎಷ್ಟೇ ಸರಳವಾಗಿ ಮಾಡಿದರೂ 10 ಲಕ್ಷ ಖರ್ಚಿಲ್ಲದೆ ತೂಗಿಸಲಾಗದು ಎಂದು ತಿಳಿಯಿತು. ಹೀಗಾಗಿ ತಾನು ಕಷ್ಟಪಟ್ಟು ಕೊಂಡುಕೊಂಡಿದ್ದ ಸೈಟ್‌ನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆಯಲು ನಿರ್ಧರಿಸಿದಳು. ಅದಕ್ಕಾಗಿ ಬೇಕಾದ ಕಾಗದಪತ್ರಗಳನ್ನು ಸಿದ್ಧಪಡಿಸಿಕೊಂಡು, ತಮ್ಮ ಬ್ಯಾಂಕಿಗೆ ಹೊಸದಾಗಿ ವರ್ಗವಾಗಿ ಬಂದಿದ್ದ ಮ್ಯಾನೇಜರ್‌ನ್ನು ಭೇಟಿಯಾಗಲು ಹೋದಳು.
ಅಲ್ಲಿ ಹೋಗಿ ನೋಡಿದರೆ ಅವಳಿಗೆ ಮತ್ತೊಂದು ಶಾಕ್ ಕಾದಿತ್ತು. ಆ ಹೊಸ ಮ್ಯಾನೇಜರ್ ಬೇರಾರೂ ಅಲ್ಲ, ಹಿಂದೆ ಅವಳ ಜೀವನದಲ್ಲಿ ಹತಾಶನಾಗಿ ಕೈಚೆಲ್ಲಿ ಹೋಗಿದ್ದ ಅನ್ವರ್! ಇಂಥ ಸ್ವಾರ್ಥಿ ತನಗೆ ಈಗ ಅತ್ಯಗತ್ಯವಾಗಿ ಬೇಕಾದ ಹಣದ ಮಂಜೂರಾತಿ ಮಾಡುವನೇ? ಇಬ್ಬರೂ ಪರಸ್ಪರ ನೋಡುತ್ತಾ ನಿಂತುಬಿಟ್ಟರು. ಆದರೂ ಔಪಚಾರಿಕಾಗಿ, ಒಬ್ಬ ಗ್ರಾಹಕಳಾಗಿ ತಾನು ಪಡೆಯಬೇಕಾದ ಸಾಲದ ಮಾಹಿತಿ, ಅದರ ವಿವರಗಳು, ಸಲ್ಲಿಸಬೇಕಾದ ಕಾಗದಪತ್ರಗಳನ್ನು ನೀಡಿ ಎದ್ದಳು. ಸಾಲ ಸಿಗುತ್ತದೆ ಎಂದಷ್ಟೇ ಆತ ಹೇಳಿದ. ಬೇರೆ ವೈಯಕ್ತಿಕ ವಿಚಾರಗಳನ್ನು ಮಾತನಾಡದೆ ಫಾತಿಮಾ ಅಲ್ಲಿಂದ ಹೊರಟುಬಂದಳು.
ಮನೆಗೆ ಬರುವಷ್ಟರಲ್ಲಿ ಮತ್ತೊಂದು ಆಘಾತ ಕಾದಿತ್ತು. ರಜಿಯಾ ಅಮ್ಮನ ದಾರಿ ಕಾಯುತ್ತಿದ್ದಳು, “ಅಮ್ಮಿ, ಅಲ್ತಾಫ್‌ನ ಅಮ್ಮಿ ನಿನ್ನೊಂದಿಗೆ ಅರ್ಜೆಂಟಾಗಿ ಏನೋ ಮಾತನಾಡಬೇಕಂತೆ….”
ಬಹುಶಃ ಮದುವೆಯ ಸಿದ್ಧತೆ ಕುರಿತಾಗಿ ಏನೋ ಅರ್ಜೆಂಟಾಗಿ ಮಾತನಾಡುವುದಿತ್ತೇನೋ ಎನಿಸಿತು. ಹೊರಡುವುದಕ್ಕೆ ಮುಂಚೆ ಒಮ್ಮೆ ಫೋನ್ ಮಾಡೋಣ ಎಂದು ಫಾತಿಮಾ ಅಮೀನಾರ ಮೊಬೈಲ್ ಗೆ ರಿಂಗ್ ಮಾಡಿದಳು. “ನೀವು ನಿಮ್ಮ ಮಗಳ ಮದುವೆಗೆ ತಕ್ಷಣ ವರದಕ್ಷಿಣೆಯ ಹಣವಾಗಿ 15 ಲಕ್ಷ ರೂ. ಕೊಡಬೇಕು. ಆಗ ಮಾತ್ರ ಅವಳು ನನ್ನ ಮಗನ ಕೈ ಹಿಡಿಯಲು ಸಾಧ್ಯ…. ಆಗದಿದ್ದರೆ ಈ ಸಂಬಂಧ ಇಲ್ಲಿಗೇ ಮುಗಿಯಿತು ಅಂದುಕೊಳ್ಳಿ!” ಅವರ ಮಾತುಗಳನ್ನು ಕೇಳಿ ಅವಳ ಎದೆ ಧಸಕ್ ಎಂದಿತು. ಮದುವೆಯ ಖರ್ಚಿಗೆ ಬೇಕಾದ ಹಣಕ್ಕೇ ಪರದಾಟ ಆಗಿರುವಾಗ, ಇನ್ನು ಈ ಭಾರಿ ಮೊತ್ತದ ವರದಕ್ಷಿಣೆ ಎಲ್ಲಿಂದ ಒದಗಿಸುವುದು? ಫಾತಿಮಾಳಿಗೆ ಏನೂ ತೋಚದಾಯಿತು. ಹಗಲಿನಲ್ಲಿ ಕೆಲಸ ಆಗಲಿಲ್ಲ, ರಾತ್ರಿ ನಿದ್ದೆ ಬರಲೇ ಇಲ್ಲ. ಆದರೆ ಮಗಳು ರಜಿಯಾಳಿಗೆ ಆಕೆ ಇದರ ಸುಳಿ ಸಹ ನೀಡಲಿಲ್ಲ. ತಾನಂತೂ ಪ್ರೀತಿಸಿದವನ ಕೈಹಿಡಿಯಲಾಗಲಿಲ್ಲ, ಮಗಳಿಗಾದರೂ ಆ ಸುಖವಿರಲಿ, ಅವಳ ಭವಿಷ್ಯ ಬಂಗಾರವಾಗಿರಲಿ ಎಂದು ಮತ್ತೆ ಮತ್ತೆ ಮನದಲ್ಲೇ ತರ್ಕಿಸಿದಳು. ಮಗಳ ಪ್ರೇಮಕ್ಕೆ ಈಗ 15 ಲಕ್ಷ ರೂ.ಗಳ ಬೆಲೆ ತೆರಬೇಕಿದೆಯೇ? ಮಾನವ ಎಷ್ಟೇ ಆಧುನಿಕನಾಗಲಿ, ನಾಗರಿಕತೆ ವಿಕಾಸವಾಗಲಿ, ವರದಕ್ಷಿಣೆಯ ಪೆಡಂಭೂತದ ಕಾಟ ಎಂದೂ ತಪ್ಪದು. ಇದಕ್ಕೆ ಕೊನೆಯೇ ಇಲ್ಲವೇ?
ಒಂದೇ ಮಾತಿನಲ್ಲಿ ಈ ಸಂಬಂಧ ಬೇಡ ಎಂದು ತಿರಸ್ಕರಿಸಬಹುದು, ಆದರೆ ಮಗಳ ಆಸೆ, ಆಕಾಂಕ್ಷೆ, ಕನಸು ಎಲ್ಲ ಕಮರಿಹೋದರೆ ಅವಳ ಬಾಡಿದ ಮುಖ ನೋಡುವುದಾದರೂ ಹೇಗೆ? ಫಾತಿಮಾಳ ಚಿಂತೆಗಳಿಗೆ ಕೊನೆಯೇ ಇರಲಿಲ್ಲ. ಒಂದೆರಡು ವಾರಗಳ ಸುದೀರ್ಘ ಆಲೋಚನೆಯ ನಂತರ, ಸೈಟ್‌ನ್ನು ಒತ್ತೆ ಇಡುವ ಬದಲು ಪೂರ್ತಿ ಮಾರಿಯೇ ಬಿಡೋಣ ಎಂದು ದೃಢ ನಿರ್ಧಾರ ಕೈಗೊಂಡು ಫಾತಿಮಾ ಅದಕ್ಕೆ ಬೇಕಾದ ಸಿದ್ಧತೆ ನಡೆಸಿದಳು. ಜೊತೆಗೆ ತನ್ನ ಹಳೆಯ ಕಾಲದ ಒಡವೆಗಳು ಹಾಗೂ ಮನೆಯಲ್ಲಿದ್ದ ದುಬಾರಿ ವಸ್ತುಗಳನ್ನೂ ಮಾರುವುದೆಂದು ನಿರ್ಧರಿಸಿದಳು.
ಬ್ಯಾಂಕ್‌ನಲ್ಲಿ ಒತ್ತೆ ಇಡುವ ಬದಲು, ಸೈಟ್‌ನ್ನು ಮಾರಿಬಿಡೋಣ ಎಂದು ದಲ್ಲಾಳಿಗಳ ಮುಖಾಂತರ ವ್ಯವಹರಿಸಿದಾಗ, 25 ಲಕ್ಷಕ್ಕೆ ವ್ಯವಹಾರ ಕುದುರಿ ಹಣ ಕೈ ಸೇರುವಷ್ಟರಲ್ಲಿ 3 ತಿಂಗಳಾಗಿತ್ತು. 15 ಲಕ್ಷದ ಚೆಕ್ ಹಿಡಿದು ಫಾತಿಮಾ ಭಾವಿ ಬೀಗಿತ್ತಿಯನ್ನು ನೋಡಲು ಅವರ ಮನೆಗೆ ಹೊರಟಳು. ಅವರ ಮನೊಳಗೆ ಕಾಲಿರಿಸುವ ಮುನ್ನ, ತಾಯಿ ಮಗ ಬಿಸಿ ಬಿಸಿ ವಾಗ್ವಾದದಲ್ಲಿ ತೊಡಗಿರುವುದು ಕೇಳಿಸಿತು.
“ಅಮ್ಮೀ! ಇದೇನು ಮಾಡಿಬಿಟ್ಟೆ ನೀನು? ನನ್ನನ್ನು ಕೇಳದೆ ಬೇರೊಬ್ಬ ಹುಡುಗಿ ಜೊತೆ ನನ್ನ ನಿಖಾ ನಿಶ್ಚಯಿಸಿಬಿಡುವುದೇ?”
ಫಾತಿಮಾಳ ಕಾಲ ಕೆಳಗಿನ ನೆಲ ಕುಸಿದಂತಾಯ್ತು. ಅಯ್ಯೋ! ಇದ್ದ ಸೈಟ್‌ನ್ನೂ ಮಾರಿ ಹಣ ಹೊಂದಿಸಿ ತರುವಷ್ಟರಲ್ಲಿ ಬೀಗಿತ್ತಿ ಮಗನ ಮದುವೆಯನ್ನು ಬೇರೆ ಕಡೆ ನಿಶ್ಚಯಿಸಿ ಬಿಡುವುದೇ? ಕುಸಿಯಲಿದ್ದಳು. ಅಲ್ಲೇ ಬಾಗಿಲ ಹಿಡಿ ಹಿಡಿದು ಹೇಗೋ ಸಾವರಿಸಿಕೊಂಡು ನಿಂತಳು.
“ಹೌದು ಬೇಟೇ…. ನಿನ್ನ ಒಳ್ಳೆಯದಕ್ಕಾಗಿಯೇ ನಾನು ಇದನ್ನೆಲ್ಲ ಮಾಡುತ್ತಿರುವುದು. ಮನೆಯ ಈ ಒಳ ವ್ಯವಹಾರಗಳನ್ನು ನಿನ್ನನ್ನು ಕೇಳಿಯೇ ನಿಶ್ಚಯಿಸಬೇಕೇ?” ಅಲ್ತಾಫ್‌ನ ತಾಯಿ ಜೋರಾಗಿಯೇ ಮಗನನ್ನು ಗದರುತ್ತಿದ್ದರು.
“ಹೌದು….. ಖಂಡಿತಾ….! ಇದು ನನ್ನ ವೈಯಕ್ತಿಕ ಬದುಕಿನ ಪ್ರಶ್ನೆ….. ರಜಿಯಾಳ ಜೊತೆ ನನ್ನ ಮದುವೆ ಮುರಿದದ್ದೂ ಅಲ್ಲದೆ, ಬೇರೊಬ್ಬ ಹುಡುಗಿಯೊಂದಿಗೆ ನನ್ನ ಮದುವೆ ಫಿಕ್ಸ್ ಮಾಡಿಬಿಡುವುದೇ? ಆ ಹುಡುಗಿ ತಂದೆ 15 ಲಕ್ಷ ರೂ. ಹಣ ಕೊಟ್ಟರೆಂದು ನನ್ನನ್ನು ಆ ಮನೆಗೆ ಮಾರಿಬಿಡುವುದೇ?”
“ಮತ್ತೇನು ಮಾಡಲಿ? ನಮ್ಮ ಬಿಸ್‌ನೆಸ್ ಯಾವ ಸ್ಥಿತಿಗೆ ಬಂದಿದೆ ಎಂದು ನಿನಗೆ ಗೊತ್ತಿಲ್ಲವೇ? ಈ ತಿಂಗಳೊಳಗೆ 10 ಲಕ್ಷ ರೂ. ಬ್ಯಾಂಕಿಗೆ ಕಟ್ಟದಿದ್ದರೆ, ನಮ್ಮ ಮನೆ ಹರಾಜಿಗೆ ಬರುತ್ತದೆ. ಜೀವನ ಅಂದ್ರೆ ಕೇವಲ ಪ್ರೀತಿ ಪ್ರೇಮ ಮಾತ್ರವಲ್ಲ, ವಾಸ್ತವ ಬದುಕನ್ನು ಎದುರಿಸಲು ಕಲಿಯಲೇಬೇಕು. ನಿನಗೆ ಒಬ್ಬ ತಂಗಿ, ತಮ್ಮ ಇದ್ದಾರೆ ಎಂಬುದನ್ನು ಮರೆಯಬೇಡ. ಮನೆ ಹರಾಜಾಗಿ ನಾವು ಬೀದಿಗೆ ಬಂದು, ಇರುವ ಬಿಸ್‌ನೆಸ್ ಕೂಡ ಹಾಳಾದರೆ, ನಾಳೆ ಅವರ ಕೈಗೆ ಬರಿಯ ತೆಂಗಿನಚಿಪ್ಪು ಕೊಡ್ತೀಯಾ?”
“ಅಮ್ಮಿ….. ಎಲ್ಲಕ್ಕೂ ಮೀರಿದ್ದು ಮನಸ್ಸಿನ ದೃಢಶಕ್ತಿ. ಇವತ್ತು ನಮಗೆ ಏನೇ ಕಷ್ಟ ಬಂದಿರಲಿ, ಅದನ್ನು ನಾವು ಎದುರಿಸಿ ನಿಲ್ಲಬೇಕು. ಬಿಸ್‌ನೆಸ್‌ಗೆ ಹೊಸಬನಾಗಿದ್ದರೂ ನಾನೇನು ಸಣ್ಣ ಬಚ್ಚ ಅಲ್ಲ. ಎಲ್ಲವನ್ನೂ ಒಂದು ಹಂತಕ್ಕೆ ತೆಗೆದುಕೊಂಡು ಸರಿಪಡಿಸಲು 2 ತಿಂಗಳು ಸಾಕು. ಅಷ್ಟರಲ್ಲಿ ಬ್ಯಾಂಕಿನಿಂದ ಇನ್ನಷ್ಟು ಕಾಲಾವಕಾಶ ಪಡೆದುಕೊಳ್ಳುತ್ತೇನೆ, ಅದಕ್ಕಾಗಿ ನಮ್ಮ ಲಾಯರ್, ಬ್ಯಾಂಕ್ ಮ್ಯಾನೇಜರ್ ಬಳಿ ಎಲ್ಲಾ ಕಾಗದಪತ್ರ ನೀಡಿ, ನಮ್ಮ ಕಂಪನಿಯನ್ನೇ ಆಧಾರವಾಗಿ ಕೊಟ್ಟಿದ್ದಾರೆ. ಇನ್ನು ತಮ್ಮ, ತಂಗಿಯರ ವಿಚಾರ…. ಅವರನ್ನು ನಾನು ಖಂಡಿತಾ ಕೈ ಬಿಡಲಾರೆ. ಈಗಿನ್ನೂ ಹೈಸ್ಕೂಲ್ ಹಂತದಲ್ಲಿರುವ ಅವರ ಸಂಪೂರ್ಣ ಜವಾಬ್ದಾರಿ ನನ್ನದೇ! ಅದಕ್ಕಾಗಿ ನಾನು ನನ್ನನ್ನೇ ಇನ್ನೊಬ್ಬರಿಗೆ ಮಾರಿಕೊಳ್ಳಲಾರೆ. ರಜಿಯಾಳನ್ನೇ ಮದುವೆಯಾಗುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಅದನ್ನು ನಿಜ ಮಾಡಿ ತೋರಿಸುತ್ತೇನೆ!”
“ಆದರೆ ನಾನು ಭಾವಿ ಭೀಗರಿಗೆ ಮಾತು ಕೊಟ್ಟಿದ್ದಾಯ್ತು. ಮದುವೆಯ ಕಾರ್ಡ್ ಕೂಡ ಪ್ರಿಂಟ್ ಮಾಡಿಸಿ ಕೊಟ್ಟಿದ್ದಾರೆ…. ಇಷ್ಟೆಲ್ಲ ಆದಮೇಲೆ ನನ್ನ ಮುಖಕ್ಕೆ ಮಸಿ ಬಳಿಯುವೆಯಾ? ಅವರಿಗೆ ನಾನು ಏನೆಂದು ಉತ್ತರ ಕೊಡಲಿ?”
“ಅದರ ಜವಾಬ್ದಾರಿ ನನಗೆ ಬಿಡು….. ನಾನು ಈಗಲೇ ಅವರ ಬಳಿ ಹೋಗಿ, ನನ್ನ ಒಪ್ಪಿಗೆ ಇಲ್ಲದೆ ಇದನ್ನು ಹೇಗೆ ಪ್ರಿಂಟ್ ಮಾಡಿಸಿದರೆಂದು ಕೇಳುತ್ತೇನೆ. ಅವರ 15 ಲಕ್ಷ ರೂ.ಗಳ ಚೆಕ್‌ನ್ನು ವಾಪಸ್ಸು ನೀಡಿ, ದೊಡ್ಡ ಸಲಾಂ ಹಾಕಿ ಬರುತ್ತೇನೆ…..” ಎನ್ನುತ್ತಾ ತಾಯಿಯ ಕೈಲಿದ್ದ ಲಗ್ನಪತ್ರಿಕೆಯನ್ನು ತೆಗೆದುಕೊಂಡು ಹರಿದು ಚಿಂದಿ ಮಾಡಿದ.
ಅವನ ನಿರ್ಧಾರ ಕೇಳಿ ತುಂಬಿ ಬಂದ ಸಂತೋಷದಿಂದ ಆನಂದಾಶ್ರು ಸುರಿಸುತ್ತಾ ಒಳಗೆ ಅಡಿಯಿರಿಸಿದ ಫಾತಿಮಿ, “ಅಲ್ತಾಫ್‌ಬೇಟೇ… ದೇವರು ಸದಾಕಾಲ ನಿನ್ನನ್ನು ಚೆನ್ನಾಗಿಟ್ಟಿರಲಿ. ಅಷ್ಟೊಂದು ನಿರಾಶೆ ಬೇಡ. ನಿಮ್ಮ ತಾಯಿ ಹೇಳಿದಂತೆ ಅವರ ಹೆಸರಿಗೆ 15 ಲಕ್ಷ ರೂ. ತಂದಿದ್ದೇನೆ. ಬ್ಯಾಂಕಿಗೆ ಸೇರಬೇಕಾದ ಹಣ ಬೇಗ ಕಟ್ಟಿ ಬಿಸ್‌ನೆಸ್, ಕಂಪನಿ ಎರಡೂ ಉಳಿಸಿಕೊ,” ಎಂದು ಚೆಕ್‌ನ್ನು ಅವನ ತಾಯಿಗೆ ನೀಡಿದಳು. ಫಾತಿಮಾ ಬರಲಾರಳೆಂದೇ ನಿಶ್ಚಯಿಸಿ, ನಗರದ ಖ್ಯಾತ ವೈದ್ಯರ ಒಬ್ಬಳೇ ಮಗಳ ಸಂಬಂಧವನ್ನು ಮಗನಿಗೆ ಕುದುರಿಸಿದ್ದ ಅಮೀನಾ ಬೇಗಂ ಈಗ ನಾಚಿಕೆಯಿಂದ ತಲೆ ತಗ್ಗಿಸಬೇಕಾಯಿತು.
ಅಲ್ತಾಫ್ ತಾಯಿಯಿಂದ ಆ ಚೆಕ್‌ನ್ನು ವಾಪಸ್ಸು ಇವಳಿಗೇ ಕೊಡುತ್ತಾ, “ನೀವು ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ ಅಂತ ಕಾಣಿಸುತ್ತೆ…. ನನಗೆ ಡಾಕ್ಟರ್ ಸಾಹೇಬರ ಹಣ ಬೇಡ ಎಂದ ಮೇಲೆ, ಒಬ್ಬಂಟಿ ಹೆಂಗಸಾದ ನಿಮ್ಮ ಬಳಿ ಕೈ ಚಾಚಿ ನಾನು ಆ ಹಣ ಪಡೆದುಕೊಳ್ಳುವೆನೇ? ನಾನು ಖಂಡಿತಾ ಅಂಥ ಷಂಡನಾಗಲಾರೆ!
“ನನ್ನ ಸ್ವಂತ ಪ್ರಯತ್ನದಿಂದ ನಮ್ಮ ಕಂಪನಿ, ನಮ್ಮ ಮನೆತನದ ಬಿಸ್‌ನೆಸ್ ಉಳಿಸಿಕೊಂಡು, ಹೇಳಿದ ತಾರೀಕಿಗೆ ನಿಮ್ಮ ಮಗಳನ್ನು ಮದುವೆ ಆಗುತ್ತೇನೆ. ನೀವು ಆ ಚೆಕ್ ತೆಗೆದುಕೊಂಡು ನಿಶ್ಚಿಂತೆಯಿಂದ ಹೊರಡಿ,” ಎಂದು ಅಲ್ತಾಫ್ ಆಕೆಗೆ ಅಭಯ ನೀಡಿ ಹೊರಟುಬಿಟ್ಟ.
“ಫಾತಿಮಾ, ನನ್ನನ್ನು ಕ್ಷಮಿಸಿ. ಮಕ್ಕಳ ಭವಿಷ್ಯ ನೆನೆದು ನಾನು ದುಡುಕಿಬಿಟ್ಟೆ. ಮಗನ ಮುಂದೆ ನಾನು ಸಣ್ಣವಳಾಗಿಬಿಟ್ಟೆ….. ಖಂಡಿತಾ ಇದನ್ನು ನಿಮ್ಮ ಮನಸ್ಸಿಗೆ ಹಚ್ಚಿಕೊಳ್ಳಬೇಡಿ,” ಎಂದು ಅಮೀನಾ ಫಾತಿಮಾಳ ಕೈ ಹಿಡಿದು ವಿನಂತಿಸಿಕೊಂಡರು.
“ಇಲ್ಲ, ಅಲ್ತಾಫ್‌ನಂಥ ಒಳ್ಳೆಯ ಮಗನ ತಾಯಿಯಾದ ನಿಮ್ಮ ಮೇಲೆ ನನಗೆ ಖಂಡಿತಾ ಬೇಸರವಿಲ್ಲ. ಏನೋ ಕೆಟ್ಟ ಘಳಿಗೆ, ಎಲ್ಲಾ ಸರಿಹೋಯ್ತು…. ಖುದಾ ಹಾಫೀಜ್…..” ಎಂದು ಅವರಿಂದ ಬೀಳ್ಕೊಂಡ ಫಾತಿಮಾ ಹೆಮ್ಮೆಯಿಂದ ಮನೆಯತ್ತ ನಡೆದಳು.
ದಲ್ಲಾಳಿ ಮುಖಾಂತರ ಇವರ ಮನೆಯನ್ನು ಖರೀದಿಸಿದ್ದ ಅನ್ವರ್, ಫಾತಿಮಾ ಬಳಿ ಕ್ಷಮೆ ಕೇಳಲು ಬಂದಿದ್ದ. ಅದೇ ಬ್ಯಾಂಕಿನಲ್ಲೇ ಲಾಯರ್ ಮುಖಾಂತರ ವ್ಯವಹರಿಸಿದ ಅಲ್ತಾಫ್, ಸದುದ್ದೇಶಕ್ಕಾಗಿ ಕಂಪನಿ ಅಡ ಇಡುತ್ತಿರುವ, ತನ್ನ ಮದುವೆಯ ವಿಷಯ ತಿಳಿಸಿದ್ದ. ತಾನು ಅಂದು ಮಾಡಲಾಗದ್ದನ್ನು ಇಂದು ಈ ನವಯುವಕ ಸಾಧಿಸಿರುವುದು ಅವನಿಗೆ ಹೆಮ್ಮೆ ತರಿಸಿತ್ತು. ಹೀಗಾಗಿ ಸಾಲ ತೀರಿಸಲು ಕಾಲಾವಧಿ ಮಂಜೂರಾಗಿತ್ತು.
“ಅಂದು ನಮ್ಮ ತಂದೆಯವರನ್ನು ಎದುರಿಸಿ ನಿನ್ನನ್ನು ಮದುವೆಯಾಗಲು ನನಗೆ ಧೈರ್ಯ ಇರಲಿಲ್ಲ ಫಾತಿಮಾ….. ಇಂದು ನಿನ್ನ ಮಗಳಿಗೆ ಅದೇ ಪರಿಸ್ಥಿತಿ ಎದುರಾದಾಗ, ಈ ಹುಡುಗ ಆತ್ಮವಿಶ್ವಾಸದಿಂದ ಅದನ್ನು ಎದುರಿಸಿ, ತನ್ನ ತಾಯಿ ಬೇರೆಡೆ ಮಾಡಿದ್ದ ಸಂಬಂಧ ತಿರಸ್ಕರಿಸಿದ್ದಾನೆ. ಇಂದಿನ ಕಾಲದಲ್ಲಿ ಹಣವೆಂದರೆ ಹೆಣ ಬಾಯಿ ಬಿಡುವಾಗ, ತನ್ನ ಪ್ರೀತಿ ಪ್ರೇಮ, ತನ್ನ ಆದರ್ಶಗಳಿಗೆ ಬಲವಾಗಿ ಅಂಟಿ ನಿಂತಿರುವ ಆ ಹುಡುಗನ ಮುಂದೆ ನಾನು ತೀರಾ ಕುಬ್ಜನಾಗಿ ಹೋದೆ.
“ಹೀಗಾಗಿ, ಬ್ಯಾಂಕಿಗೆ ಕಟ್ಟಬೇಕಾದ ಹಣವನ್ನು ನಾನೇ ನನ್ನ ಸ್ವಂತ ಹಣದಿಂದ ಹೊಂದಿಸಿ ಕೊಡುತ್ತೇನೆ ಎಂದು ಹೇಳಿದ್ದೇನೆ. ನೀನು ಚಿಂತಿಸದಿರು, ಅಲ್ತಾಫ್‌ನಂಥ ಆದರ್ಶ ಯುವಕ ನಿನಗೆ ಅಳಿಯನಾಗುತ್ತಿದ್ದಾನೆ. ಅವನ ಸಾಲ ತೀರಿತು ಎಂದೇ ತಿಳಿ. ಈ ರೀತಿಯಾಗಿ ನಿನಗೆ ಸಹಕರಿಸಿ, ನನ್ನ ಅಂದಿನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನನಗೆ ಅವಕಾಶ ಕೊಡು,” ಎಂದು ಅವಳು ತನಗೆ ಮಾರಿದ್ದ ಸೈಟ್‌ನ ಕಾಗದಪತ್ರಗಳನ್ನು ಸಹ ವಾಪಸ್ಸು ನೀಡಿದ.
ಬದುಕು ಎಂದರೆ ಸದಾ ಕತ್ತಲೆಯ ಕಾರಾಗೃಹ ಎಂದು ಭಾವಿಸಿದ್ದ ಫಾತಿಮಾಳ ಬಾಳಲ್ಲಿ ಮತ್ತೆ ಸುಖದ ಹೊಂಗಿರಣ ಹರಡಿತು. ಅನ್ವರ್‌ನಿಂದ ಕಾಗದಪತ್ರ ಪಡೆದು, ಚೆಕ್ ಹಿಂದಿರುಗಿಸಿ, ಧನ್ಯವಾದ ಸಲ್ಲಿಸಿ, ಆನಂದಾಶ್ರು ಸುರಿಸಿದಳು.