ನಾಲ್ವರು ಯುವಕರು ಕುಳಿತು ಹರಟೆ ಹೊಡೆಯುತ್ತಿದ್ದರು. ನವೀನ್‌ ತನ್ನ ಮದುವೆಗಾಗಿ ಪ್ರಪೋಸ್ಸ್‌ ಬರುತ್ತಿವೆ, ಆದರೆ ತಾನೇ ಹುಡುಗಿಯನ್ನು ನೋಡಲು ಹೋಗುತ್ತಿಲ್ಲ ಎಂದ.

ರಾಜೇಶ್‌ : ನೀನೇಕೆ ಹುಡುಗಿ ನೋಡಲು ಹೋಗುತ್ತಿಲ್ಲ?

ನವೀನ್‌ : ನನಗೆ ಈ ಹುಡುಗಿ ನೋಡುವುದು, ವಧು ಪರೀಕ್ಷೆ ಇತ್ಯಾದಿಗಳಲ್ಲಿ ನಂಬಿಕೆ ಇಲ್ಲ. ನೋಡಿದ ಹುಡುಗಿ ಇಷ್ಟ ಆಗಲಿಲ್ಲ ಅಂದುಕೊ, ಆಗ ಮತ್ತೊಂದು, ಆಮೇಲೆ ಇನ್ನೊಂದು. ಹುಡುಗೀರೇನು ದಸರಾ ಗೊಂಬೆಗಳೇ, ನೋಡಿ ಇಷ್ಟ ಇಲ್ಲ ಅನ್ನೋಕ್ಕೆ?

ಉಮೇಶ್‌ : ಅದೆಲ್ಲ ಇರಲಿ, ಈ ಭಾಷಣ ಕೇಳೋದಿಕ್ಕೆ ಮಾತ್ರ ಚೆನ್ನ. ನೀನು ಹುಡುಗಿ ನೋಡಲು ಹೋಗದಿರಲು ಕಾರಣವೇನು?

ನವೀನ್‌ : ಹೇಳಿದೆನಲ್ಲ…. ಇನ್ನೆಂಥ ಅಸಲಿ ಕಾರಣ?

ಗಿರೀಶ್‌ : ಅದೇ ಮತ್ತೆ… ನೀನು ಹುಡುಗಿಯನ್ನು ನೋಡಿದಂತೆ ಅವಳೂ ನಿನ್ನನ್ನು ರಿಜೆಕ್ಟ್ ಮಾಡಿದರೆ…. ಆಗ ನಿನ್ನ ಗತಿ?

ಅದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಾಗ ನವೀನ್‌ ಪೆಚ್ಚು ಪೆಚ್ಚಾಗಿ ಸಿಕ್ಕಿಬಿದ್ದಿದ್ದ.

 

ಪ್ರೇಮಾ ರಾಜುವನ್ನು ತುಂಬಾ ಪ್ರೀತಿಸುತ್ತಿದ್ದಳು. ಸದಾ ಅವನ ಸುತ್ತಲೇ ಸುತ್ತುತ್ತಿದ್ದಳು. ಒಂದು ಸಲ ಗೆಳೆಯರೆಲ್ಲ ಪಾರ್ಕಿನಲ್ಲಿ ಕುಳಿತು ಹರಟೆ ಕೊಚ್ಚುತ್ತಿದ್ದರು. ಆಗ ರಾಜು ಏಕೋ ತನ್ನ ಕಣ್ಣನ್ನು ಪದೇಪದೇ ಉಜ್ಜಿಕೊಳ್ಳುತ್ತಾ, “ಪ್ರೇಮಿ…. ನನ್ನ ಕಣ್ಣಲ್ಲಿ ಏನಿದೆ ಅಂತ ನೋಡು,” ಎಂದ.

ಬಲು ಭಾವುಕತೆಯಿಂದ ಅವನ ಕಂಗಳಲ್ಲಿ ಇಣುಕುತ್ತಾ ಪ್ರೇಮಾ ಹೇಳಿದಳು, “ನಿನ್ನ ಕಂಗಳಲ್ಲಿ ನನ್ನ ಬಗ್ಗೆ ಒಲವು ಬಿಟ್ಟರೆ ಬೇರೇನೂ ಕಾಣುತ್ತಿಲ್ಲ ರಾಜು…..”

“ಏ ನಿನ್ನ…..! ಏನಾದ್ರೂ ಧೂಳು ಬಿದ್ದಿದೆಯೇ ನೋಡು ಅಂದ್ರೆ…” ರಾಜು ನೋವಿನಲ್ಲಿ ಸಿಡುಕಿದಾಗ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರು, ಪ್ರೇಮ ಪೆಚ್ಚಾಗಿದ್ದಳು.

 

ಅಂದಿನ ಫ್ರೀ ಪೀರಿಯಡ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳೆಲ್ಲ ಟೈಂಪಾಸ್‌ಗೆಂದು ಒಬ್ಬೊಬ್ಬರಾಗಿ ಹಾಡತೊಡಗಿದರು. ವೇಣು ಸರದಿ ಬಂದಾಗ, ಅವನು ಎದ್ದು ನಿಂತು, ಕಣ್ಣುಮುಚ್ಚಿ ಹಾಡತೊಡಗಿದ. ವೇಣು ಹಾಗೆ ಹಾಡುವುದನ್ನು ಗಮನಿಸಿ ಸತೀಶ್‌ ಕೇಳಿದ, “ಇದ್ಯಾಕೋ ಹೀಗೆ ಕಣ್ಣು ಮುಚ್ಚಿಕೊಂಡು ಹಾಡ್ತೀಯಾ?”

ವೇಣು ಅದಕ್ಕೆ ಉತ್ತರಿಸುವ ಮೊದಲೇ ಸುಷ್ಮಾ ಥಟಕ್ಕನೆ ಹೇಳಿದಳು, “ಏಕೆಂದರೆ, ಇಲ್ಲಿ ನಾವೆಲ್ಲ ಅವನ ಹಾಡು ಕೇಳಲಾಗದೆ ಕಣ್ಣುಮುಚ್ಚಿ ತೂಕಡಿಸುತ್ತಿರುವುದು ಅವನಿಗೆ ಗೊತ್ತಾಗಿಬಿಡುತ್ತಲ್ಲ… ಅದಕ್ಕೇ!” ಇದನ್ನು ಕೇಳಿ ವೇಣು ಎಲ್ಲರ ಮುಂದೆ ಮಂಗಣ್ಣನಾಗಿದ್ದ.

 

ಮದುವೆ ಮಂಟಪಕ್ಕೆ ಬಂದಿದ್ದ ಗುಂಡ ಅಲ್ಲಿಗೆ ಬಂದಿದ್ದ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಾ ರೇಗಿಸುತ್ತಿದ್ದ. ಯಾವುದೋ ಜೋಕಿಗೆ ಹುಡುಗಿಯರೆಲ್ಲ ನಗುತ್ತಿದ್ದಾಗ, “ಬರೀ ನಗ್ತಾ ಇದ್ದೀರಲ್ಲ…. ಅದರಲ್ಲಿ ಹೊಟ್ಟೆ ತುಂಬಿಸಿಕೊಳ್ಳದೆ ಒಂದಿಷ್ಟು ಊಟ ಸಹ ಮಾಡಿ,” ಎಂದು ರೇಗಿಸಿದ.

ಮುಂದೆ ವಧೂವರರ ಜೊತೆ ಹುಡುಗಿಯರು ಫೋಟೋ ತೆಗೆಸಿಕೊಂಡಾಗ, “ಸ್ವಲ್ಪ ನಮ್ಮ ಜೊತೆಯೂ ಫೋಟೋ ತಗೋಬೇಕಪ್ಪ…” ಎಂದು ಹಲ್ಲು ಗಿಂಜಿದ.

ಮುಂದೆ ಹುಡುಗಿಯರು ಡೈನಿಂಗ್‌ ಹಾಲ್ ಕಡೆ ಹೊರಟು ಇನ್ನೇನು ಪ್ಲೇಟ್‌ ತೆಗೆದುಕೊಳ್ಳಬೇಕು ಎಂದಾಗ, “ಅದೇನ್ರಿ ತಿಂತಾ ಇದ್ದೀರಾ?” ಎಂದು ವೀಣಾಳತ್ತ ಕೊಂಕು ತೆಗೆದ.

“ಇದು ಐ.ಕ್ಯೂ ಹೆಚ್ಚಿಸುವ ಮಾತ್ರೆ. ನಿಮಗೂ ಬೇಕಾ?”

“ಬೇಗ ಕೊಡಿ,” ಎಂದು ಗುಂಡ ಕೇಳಿದಾಗ, 500/ ರೂ. ಕೊಡಿ, ಎಂದು ವೀಣಾ ಹೇಳಿದಳು.

ಫ್ರೆಂಡ್ಸ್ ಮುಂದೆ ಪ್ರೆಸ್ಟೀಜ್‌ ಹೆಚ್ಚಿಸಿಕೊಳ್ಳಲು ಗುಂಡ ಸ್ಟೈಲಾಗಿ ಪರ್ಸ್‌ ತೆರೆದು 500/ ರ ಒಂದು ನೋಟು ಕೊಟ್ಟ.

ತಕ್ಷಣ ಅದನ್ನು ಅವನಿಂದ ಪಡೆದು ತನ್ನ ಪರ್ಸಿಗೆ ಸೇರಿಸಿದ ವೀಣಾ, 2 ಹಾಜ್ಮೋಲಾ ಚೂರ್ಣದ ಗುಳಿಗೆ ಕೊಟ್ಟಳು.

ಅವಳಿಂದ ಅದನ್ನು ಪಡೆದ ಗುಂಡ, “ಅಯ್ಯೋ…. ಇದು ಹಾಜ್ಮೋಲಾ ಗುಳಿಗೆ!” ಎಂದಾಗ ವೀಣಾ, “ನೋಡಿದ್ರಾ ಗುಳಿಗೆ ನೋಡುತ್ತಲೇ ಅದ್ಯಾವುದು ಅಂತ ನಿಮಗೆ ತಿಳಿದುಹೋಯಿತು. ಇನ್ನು ಅದನ್ನು ತಿಂದರೆ ಇನ್ನೆಷ್ಟು ಐ.ಕ್ಯೂ. ಹೆಚ್ಚುತ್ತದೋ….?” ಎಂದಾಗ ಅಲ್ಲಿದ್ದವರೆಲ್ಲ ಜೋರಾಗಿ ಬಿದ್ದೂ ಬಿದ್ದೂ ನಗತೊಡಗಿದರು.

 

ರಂಜಿತ್‌ ವನಿತಾ ಪರಸ್ಪರ ಪ್ರೀತಿಸುತ್ತಿದ್ದರು. ಯಾವುದೋ ಕಾರಣಕ್ಕೆ ಅವರಲ್ಲಿ ಜಗಳವಾಗಿ ವನಿತಾ ರಂಜಿತ್‌ ಬಳಿ ಮಾತುಬಿಟ್ಟಳು. ಅದರಿಂದ ರಂಜಿತ್‌ ಬಹಳ ಬೇಸರಗೊಂಡು, ದೇವದಾಸ್‌ನಂತೆ ಗಡ್ಡ ಬಿಟ್ಟು ಓಡಾಡತೊಡಗಿದ.

ಅವನ ಗೆಳೆಯ ರಾಹುಲ್ ಹೇಳಿದ, “ಅದಕ್ಕೆ ಹೇಳೋದು ಫ್ರೆಂಡ್‌, ಪ್ರೇಮದ ಹಾದಿಯಲ್ಲಿ ಬರೀ ಕಲ್ಲುಮುಳ್ಳುಗಳಿರುತ್ತವೆ. ಅಂತ….”

“ಹಾಗಿದ್ದರೆ ಆ ಹಾದಿಯಲ್ಲೇಕೆ ಒಂದು ಮೆಡಿಕಲ್ ಸ್ಟೋರ್‌ ತೆರೆಯಬಾರದು? ಬಹಳ ಜನಕ್ಕೆ ಉಪಯುಕ್ತ ಅಲ್ಲವೇ….?”

ತಕ್ಷಣ ಕವಿತಾ ಕೇಳಿದಾಗ ಇಡೀ ಕ್ಲಾಸ್‌ ಘೊಳ್‌ ಎಂದು ನಕ್ಕಿತು.

 

ವ್ಯಾಕರಣ ಪಾಠ ಮಾಡುತ್ತಾ ಕನ್ನಡ ಮೇಡಂ ಮಕ್ಕಳಿಗೆ ಸ್ಪಷ್ಟವಾಗಿ ತಿಳಿಯಲೆಂದು ಕರ್ತೃ, ಕರ್ಮ, ಕ್ರಿಯಾಪದಗಳ ಬಗ್ಗೆ ಹೇಳಿಕೊಡುತ್ತಾ ಕೇಳಿದರು, “ಶಾಲಿನಿ ಜಾಮೂನ್‌ ತಿನ್ನಲು ನಿರಾಕರಿಸಿದಳು. ವೆಂಕಿ, ನೀನು ಹೇಳು. ಈ ವಾಕ್ಯದಲ್ಲಿ ಶಾಲಿನಿ ಏನಾಗುತ್ತಾಳೆ?”

“ಶಾಲಿನಿ ಮಹಾ ದಡ್ಡಿ ಮೇಡಂ!” ವೆಂಕಿ ತಾನು ಜಾಣನೆಂಬಂತೆ ಉತ್ತರಿಸಿದ್ದ.

 

ಕಾಲೇಜಿನಿಂದ ಎಲ್ಲರೂ ಪಿಕ್ನಿಕ್‌ ಹೊರಟಿದ್ದರು. ನಂದಿಬೆಟ್ಟ ತಲುಪಿದ ನಂತರ ಎಲ್ಲರೂ ಜೋಡಿ ಜೋಡಿಯಾಗಿ ಹರಟೆ ಹೊಡೆಯುತ್ತಾ ಚೆದುರಿದರು. ಕಾಂತಾ ತನ್ನ ಬಾಯ್‌ ಫ್ರೆಂಡ್‌ ರಾಮು ಜೊತೆ ಜಗಳ ಆಡಿದ್ದರಿಂದ ಮುಖ ಗಡಿಗೆ ಮಾಡಿಕೊಂಡು ಒಬ್ಬಳೇ ಒಂದೆಡೆ ಕುಳಿತಿದ್ದಳು. ರಾಮು ಅವಳ ಕೋಪವನ್ನು ಹೇಗಾದರೂ ಕರಗಿಸಲೆಂದು, ಅವಳಿಗೆ ಪ್ರಿಯವಾದ ಮಾವು ಕೊಂಡು ತಂದ. ಅವಳನ್ನು ರಮಿಸಿ ಅದನ್ನು ತಿನ್ನಲು ಕೇಳಿಕೊಂಡ. ಅವಳು ಅದಕ್ಕೆ ಒಪ್ಪದೆ ತನ್ನ ಸ್ವಪ್ರತಿಷ್ಠೆಯನ್ನೇ ದೊಡ್ಡದಾಗಿಸಿಕೊಂಡು ಏನೂ ಬೇಡವೆಂದಳು.

ರಾಮು ಹಣ್ಣಿನ ಸಿಪ್ಪೆ ಹೆರೆದು ಒಂದೆಡೆ ಹಾಕಿದ. ಆ ಸಿಪ್ಪೆ ಬಳಿ 2 ಕತ್ತೆಗಳು ಬಂದವು. ಮಾವು ಸಿಹಿಯಾಗಿದೆ ಎಂದರೂ ಅವಳು ಒಪ್ಪಲೇ ಇಲ್ಲ. ಅವಳಿಗೆ ಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು, ಆದರೂ ಪ್ರೆಸ್ಟೀಜ್‌ ಬಿಡಬಾರದೆಂದು, ಅವನ ಬೇಡಿಕೆಗಳನ್ನು ತಿರಸ್ಕರಿಸುತ್ತಾ, “ಮಾವು ಏನು ಮಹಾ? ಕತ್ತೆ ಕೂಡ ಅದನ್ನು ತಿನ್ನಲ್ಲ ಗೊತ್ತಾ?” ಎಂದು ವ್ಯಂಗ್ಯವಾಡಿದಳು. ಸಿಪ್ಪೆ ಕಡೆ ಆಸಕ್ತಿ ತೋರಿಸದೆ ಸುಮ್ಮನಿದ್ದ ಕತ್ತೆಗಳ ಕಡೆ ಕೈ ತೋರಿದಳು. ತಕ್ಷಣ ರಾಮು ಉತ್ತರಿಸಿದ, “ಅದು ನಿಜ, ಕತ್ತೆಗಳೆಂದೂ ಇಂಥ ಸಿಹಿ ಹಣ್ಣು ತಿನ್ನುವುದಿಲ್ಲ,” ಎನ್ನುತ್ತಾ ಲೊಟ್ಟೆ ಹೊಡೆದು ಹಣ್ಣನ್ನು ಸವಿಯತೊಡಗಿದ.

ಅಲ್ಲಿದ್ದರೆಲ್ಲ ಕಾಂತಾಳನ್ನು ಕತ್ತೆಗೆ ಹೋಲಿಸಿ ಜೋರಾಗಿ ನಕ್ಕುಬಿಟ್ಟರು, ಕಾಂತಾ ಇಂಗು ತಿಂದ ಮಗನಂತೆ ಆಗಿದ್ದಳು.

 

ಕಾಂಚನಾಳಿಗೆ ಮೊದಲಿನಿಂದಲೂ ಒಂದು ಸ್ವಭಾವ. ತನ್ನ ಡಬ್ಬಿಯಲ್ಲಿ ಏನೇ ಇರಲಿ, ಪಕ್ಕದ ಸಹೋದ್ಯೋಗಿಗಳ ಡಬ್ಬಿಯಲ್ಲಿದ್ದುದನ್ನು ತೆಗೆದು ಗಬಕ್ಕನೆ ತಿಂದುಬಿಡುವಳು! ಅವಳ ಪಕ್ಕ ಕಿರಣ್‌ ಕೂರುತ್ತಿದ್ದ, “ಏನು ತಂದಿದ್ದಿ ಕಿರಣ್‌?” ಅವನ ಉತ್ತರಕ್ಕೂ ಕಾಯದೆ, ಅವನ ಪಲ್ಯ, ಗೊಜ್ಜು ಇತ್ಯಾದಿ ಮುಗಿಸಿಬಿಡುತ್ತಿದ್ದಳು.

ಅವಳಿಗೆ ಸೋರೆ, ಪಡವಲ ಹಿಡಿಸುವುದಿಲ್ಲ ಎಂದು ಗೊತ್ತಿದ್ದ ಕಿರಣ್‌ ಅಂದು ಬೇಕೆಂದೇ ಅವೆರಡರ ಪಲ್ಯ, ಗೊಜ್ಜು ತಂದಿದ್ದ. ಅವನ ಬಾಕ್ಸಿಗೆ ಕೈಹಾಕಿದ್ದೇ ಕಾಂಚನಾ ಕಿರುಚಿದಳು, “ಥೂ… ಸೋರೆ, ಪಡವಲಕಾಯಿ… ಬೇರೇನೂ ಚಾಯ್ಸ್ ಇಲ್ಲವೇ?”

“ಇದೆಯಲ್ಲ…. ಬೇಕಾದ್ರೆ ತಿನ್ನೋದು, ಬೇಡಾಂದ್ರೆ ಬಿಟ್ಟುಬಿಡುವುದು!” ಕಿರಣ್‌ ಹೇಳಿದಾಗ ಎಲ್ಲರೂ ಘೊಳ್ಳೆಂದು ನಕ್ಕರು.

 

ತಾಯಿ : ಅಲ್ವೇ ರೇಖಾ, ಮಧ್ಯಾಹ್ನ ಹೋದವಳು ಈಗ ಬರ್ತಿದ್ದಿ. ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದಿ?

ರೇಖಾ : ಅಮ್ಮ, ನಾನು ಫ್ರೆಂಡ್ಸ್ ಜೊತೆ ಮಾಲ್ ಗೆ ಹೋಗಿದ್ದೆ.

ತಾಯಿ : ಅಲ್ಲಿಂದ ಏನೇನು ತಂದೆ?

ರೇಖಾ : 1 ಸೆಟ್‌ ಹೇರ್‌ ಬ್ಯಾಂಡ್‌, 100 ಸೆಲ್ಛಿ!

 

ಹೊಸದಾಗಿ ಕೆಲಸಕ್ಕೆ ಸೇರಿದ್ದ ರಾಜು, 2ನೇ ತಿಂಗಳ ಸಂಬಳ ಪಡೆದು ಬಾಸ್‌ಗೆ ಹೇಳಿದ, “ನನ್ನ ಸಂಬಳದಲ್ಲಿ 200/ ರೂ. ಕಡಿಮೆ ಆಗಿದೆ.”

ತಕ್ಷಣ ಬಾಸ್‌ ಹೇಳಿದರು, “ಆದರೆ ಕಳೆದ ತಿಂಗಳ ಸಂಬಳದಲ್ಲಿ ನಿನಗೆ 200/ ರೂ. ಹೆಚ್ಚಿಗೆ ಸಿಕ್ಕಿತ್ತಲ್ಲ…?”

ರಾಜು ಬಲು ಅಮಾಯಕತೆಯಿಂದ ಮುಗ್ಧನಾಗಿ ಹೇಳಿದ, “ಸಾರ್‌, ಅದು ನಿಮ್ಮ ಮೊದಲ ತಪ್ಪು ಅಂತ ಸುಮ್ಮನಿದ್ದೆ. ಹೀಗೆ ನೀವು ಪ್ರತಿ ಸಲ ತಪ್ಪು ಮಾಡುತ್ತಿದ್ದರೆ ನಾನು ಅದನ್ನು ನಿಮ್ಮ ಗಮನಕ್ಕೆ ತರಲೇಬೇಕಲ್ಲವೇ?”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ