15 ವರ್ಷಗಳ ಬಳಿಕ ಮೂಢನಂಬಿಕೆ ವಿಧೇಯಕ ಡಿಸೆಂಬರ್‌ 18, 2013ರಂದು ಮಹಾರಾಷ್ಟ್ರದಲ್ಲಿ ಅಂಗೀಕಾರ ಪಡೆಯಿತು. ಆದರೆ ಈ ಕಾನೂನು ಅಂಗೀಕಾರ ಪಡೆದು ಇನ್ನು 24 ಗಂಟೆ ಕೂಡ ಆಗಿರಲಿಲ್ಲ, ಮಹಾರಾಷ್ಟ್ರದ ಲಾಕೋವಾದಲ್ಲಿನ ಆಟೋರಿಕ್ಷಾ ಚಾಲಕನೊಬ್ಬ ತನ್ನ ಹೆಂಡತಿಯ ಅನಾರೋಗ್ಯ ನಿವಾರಣೆಯಾಗಲೆಂದು, ಮಂತ್ರವಾದಿಗಳ ಹೇಳಿಕೆಯ ಮೇರೆಗೆ ಪಕ್ಕದ ಮನೆಯ ಮಹಿಳೆಯೊಬ್ಬಳನ್ನು ಬಲಿ ಕೊಟ್ಟ.

ಹೊಸ ಆಶಾಕಿರಣ

ಸಮಾಜದಲ್ಲಿ ಘಟಿಸುವ ಇಂತಹ ಘಟನೆಗಳನ್ನು ನೋಡಿ ಈ ಕಾನೂನು ಮೊದಲೇ ಜಾರಿಗೆ ಬರಬಾರದಿತ್ತೆ ಎನಿಸುತ್ತದೆ. ಆದರೆ ಅದಕ್ಕಾಗಿ ಸದಾ ಪ್ರಯತ್ನಶೀಲರಾಗಿದ್ದ ನರೇಂದ್ರ ದಾಬೋಲಕರ್‌ ಅವರು ತಮ್ಮ ಜೀವವನ್ನೇ ಪಣಕ್ಕಿಡಬೇಕಾಯಿತು. ಈ ಘಟನೆಯಿಂದಾಗಿ ಮಹಾರಾಷ್ಟ್ರದ ಪ್ರತಿಷ್ಠೆಗೆ ಧಕ್ಕೆ ಬಂತು.

ಸಮಾಜದಲ್ಲಿ ಕೇವಲ ಬಡವರಷ್ಟೇ ಅಲ್ಲ, ಸುಶಿಕ್ಷಿತರು ಇಂತಹ ಮಂತ್ರವಾದಿಗಳ ಕಪಿಮುಷ್ಟಿಗೆ ಸಿಲುಕುತ್ತಿದ್ದಾರೆ. ರಾಜಕೀಯ ಮುಖಂಡರು ಕೂಡ ಮಂತ್ರವಾದಿಗಳ ಸೂತ್ರದ ಗೊಂಬೆಯಂತೆ ಕುಣಿಯುತ್ತಿದ್ದಾರೆಂದರೆ ಜನಸಾಮಾನ್ಯರ ಗತಿ ಏನಾಗಬಹುದು.

ಆದರೆ ಮಹಾರಾಷ್ಟ್ರ ಮೂಢನಂಬಿಕೆ ನಿರ್ಮೂಲನಾ ಸಮಿತಿ ನಿರಂತರ ಸಂಘರ್ಷ ನಡೆಸುತ್ತ ತನ್ನ ಛಾಪು ಮೂಡಿಸಿದೆ. ತಡವಾದರೂ ಅಡ್ಡಿಯಿಲ್ಲ. ಕಾನೂನು ರೂಪುಗೊಂಡಿರುವುದರಿಂದ ಮಹಾರಾಷ್ಟ್ರ ಮೂಢನಂಬಿಕೆ ನಿರ್ಮೂಲನ ಸಮಿತಿಯಷ್ಟೇ ಅಲ್ಲ, ಇಡೀ ಮಹಾರಾಷ್ಟ್ರದ ಜನತೆಗೆ ನೆಮ್ಮದಿ ನಿರಾಳತೆ ದೊರಕಿದೆ. ಆ ಸುಧಾರಣೆಯ ಬಳಿಕ ಕ್ರಮೇಣ ಇಡೀ ಭಾರತದ ಮೂಲೆ ಮೂಲೆಗೂ ಪಸರಿಸಬಹುದೆಂಬ ಭರವಸೆ ಇದೆ.

ಅಮಾನವೀಯ ಪದ್ಧತಿ

ನರಬಲಿ ಹಾಗೂ ಇತರೆ ಅಮಾನವೀಯ, ಅನಿಷ್ಟ ಪದ್ಧತಿಗಳನ್ನು ಹಾಗೂ ಮಾಟ ಮಂತ್ರಗಳನ್ನು ಹೋಗಲಾಡಿಸುವ ದೃಷ್ಟಿಯಿಂದ ಈ ಕಾನೂನನ್ನು ರೂಪಿಸಲಾಯಿತು. ಅದಕ್ಕೆ `ವಿಧೇಯಕ-2013′ ಎಂದು ನಾಮಕರಣ ಮಾಡಲಾಯಿತು. ಇದರಲ್ಲಿ ಒಟ್ಟು 12 ನಿಬಂಧನೆಗಳ ಒಂದು ಅನುಸೂಚಿಯನ್ನು ಸೇರ್ಪಡೆ ಮಾಡಲಾಗಿದೆ. ಅದರಲ್ಲಿ ಅಮಾನವೀಯ ಪದ್ಧತಿಗಳನ್ನು ಸೇರ್ಪಡೆ ಮಾಡಲಾಗಿದೆ. ಇದರನ್ವಯ ಅಮಾನವೀಯ ಪದ್ಧತಿಗಳನ್ನು ಆಚರಣೆ ಮಾಡುವವರದು ದಂಡನೀಯ ಅಪರಾಧ ಎಂದು ಪರಿಗಣಿಸಿ ಕನಿಷ್ಠ 6 ತಿಂಗಳು ಹಾಗೂ ಗರಿಷ್ಠ 7 ವರ್ಷದ ಶಿಕ್ಷೆ ವಿಧಿಸಬಹುದಾಗಿದೆ. 5000 ರೂ. ದಿಂದ ಹಿಡಿದು 50,000 ರೂ. ತನಕ ದಂಡ ವಿಧಿಸಬಹುದಾಗಿದೆ. ಈ ಕಾನೂನಿನಲ್ಲಿ ಪೊಲೀಸ್‌ ಇನ್ಸ್ ಪೆಕ್ಟರ್‌ ದರ್ಜೆಯ ಅಧಿಕಾರಿಯ ಮುಖಾಂತರ ಸಾಧ್ಯವಾದಷ್ಟು ಬೇಗ ತನಿಖೆ ನಡೆಸುವ ವ್ಯವಸ್ಥೆ ಇದೆ. ಇಂತಹ ಅಧಿಕಾರಿಗೆ ಕೆಲಸದಲ್ಲಿ ಅಡ್ಡಿಯನ್ನುಂಟು ಮಾಡುವ ವ್ಯಕ್ತಿಗೆ 3 ತಿಂಗಳ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಬಹುದಾಗಿದೆ.

ಕಾನೂನು ಅರಿಯುವುದು ಅವಶ್ಯಕ

ಮೂಢನಂಬಿಕೆ ವಿರೋಧಿ ಕಾನೂನಿನ ಬಗ್ಗೆ ಮಾಹಿತಿ ಅರಿತುಕೊಳ್ಳದೇ ಹಲವು ರಾಜಕೀಯ ಪಕ್ಷಗಳು ಆಗ ಈ ಕಾನೂನು ಬೇಡ ಎಂದು ಪ್ರತಿಭಟನೆ ಕೂಡ ನಡೆಸಿದ್ದರು. ಹೀಗಾಗಿ ಆ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ಈ ಕಾನೂನಿಗೆ ಜೋಡಿಸಿರುವ ಅನುಸೂಚಿಗಳಲ್ಲಿ ಒಟ್ಟು 1-2 ಬಗೆಯ ಅಮಾನವೀಯ ಪದ್ಧತಿಗಳನ್ನು ಸೇರ್ಪಡೆ ಮಾಡಲಾಗಿದೆ. ಅವುಗಳಲ್ಲಿ ವಿಶೇಷವಾದವುಗಳೆಂದರೆ, ಭೂತ ಓಡಿಸುವ ನಾಟಕ ಮಾಡುವುದು ಅಲೌಕಿಕ ಶಕ್ತಿ ದೊರಕಿಸಿ ಕೊಡುವುದಾಗಿ ನಂಬಿಸುವುದು, ಗುಪ್ತನಿಧಿ ಹುಡುಕುವುದು, ಮಾಟ ಮಂತ್ರದ ಹೆಸರಿನಲ್ಲಿ ಒಬ್ಬ ವ್ಯಕ್ತಿಯನ್ನು ಹಗ್ಗದಿಂದ ಅಥವಾ ಸರಪಳಿಯಿಂದ ಕಟ್ಟಿ ಹಾಕುವುದು, ಮೆಣಸಿನ ಹೊಗೆ ಹಾಕುವುದು, ಸುಡುವುದು, ನೇತು ಹಾಕುವುದು, ಮುಕ್ತವಾಗಿ ಲೈಂಗಿಕ ಚಟುವಟಿಕೆ ನಡೆಸಲು ಒತ್ತಡ ಹೇರುವುದು, ಮಲಮೂತ್ರ ಸೇವಿಸಲು ಆಗ್ರಹ ಮಾಡುವುದು ಅಥವಾ ನರಬಲಿಯಂತಹ ಅಮಾನವೀಯ ಕೃತ್ಯ ಎಸಗುವುದು ಹೀಗೆ ಇಂಥವನ್ನು ಅಪರಾಧ ಕೃತ್ಯ ಎಂದು ಪರಿಗಣಿಸಲಾಗಿದೆ. ಇದರ ಹೊರತಾಗಿ ನಾಯಿ, ಹಾವು, ಚೇಳು ಕಚ್ಚಿದವರಿಗೆ ಚಿಕಿತ್ಸೆ ಮಾಡದಂತೆ ತಡೆಯುವುದು, ಅಲೌಕಿಕ ಶಕ್ತಿಯ ಮುಖಾಂತರ ಭಯ ಹುಟ್ಟುಹಾಕುವುದು, ಬೆದರಿಕೆ ಹಾಕುವುದು ಮುಂತಾದವನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

ಯಾವುದೇ ಕಾನೂನು ಅಥವಾ ಸುಗ್ರೀವಾಜ್ಞೆಯನ್ನು ಹೊರಡಿಸುವುದಕ್ಕಿಂತ ಮುಂಚೆ ಇದು ಭಾರತೀಯ ಸಂವಿಧಾನದ ಮೂಲಭೂತ ವ್ಯವಸ್ಥೆಗೆ ಸರಿಹೊಂದುತ್ತೊ ಇಲ್ಲವೋ ಎಂದು ಗಮನಿಸಲಾಗುತ್ತದೆ. ಜೊತೆಗೆ ಇದು ಭಾರತೀಯ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯನ್ನೇನಾದರೂ ಮಾಡಬಹುದಾ ಎಂದು ಕೂಡ ನೋಡಲಾಗುತ್ತದೆ. ಈ ಕಾನೂನು ಎರಡೂ ದೃಷ್ಟಿಕೋನದಿಂದ ನೋಡಿದರೆ ಅತ್ಯಂತ ಉಪಯುಕ್ತವಾಗಿದೆ. ಸಂವಿಧಾನದ ಕಲಂ 21ರಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಗೌರವಯುತವಾಗಿ ಜೀವನ ನಡೆಸುವ ಹಕ್ಕು ನೀಡಲಾಗಿದೆ. ಅವನ್ನು ರಕ್ಷಣೆ ಮಾಡುವ ಈ ನಿಬಂಧನೆ ಒಂದು ದಿಟ್ಟ ಹೆಜ್ಜೆಯೇ ಹೌದು. ಪ್ರತಿಯೊಬ್ಬ ನಾಗರಿಕರು ಸ್ವಾಗತಿಸಬೇಕಾದ ಕಾನೂನು ಇದು.

ಸಾಮಾನ್ಯ ಜನರ ರಕ್ಷಣೆ

ಸರ್ವೋಚ್ಚ ನ್ಯಾಯಾಲಯ ಘೋರ, ಅಮಾನವೀಯ, ಜನರ ಜೀವನಕ್ಕೆ ಧಕ್ಕೆಯನ್ನಂಟು ಮಾಡುವ ಇಂತಹ ಪದ್ಧತಿಗಳನ್ನು ಮತ್ತು ಕೃತ್ಯಗಳನ್ನು ಧರ್ಮದ ಮಂತ್ರದ ರೂಪದಲ್ಲಿ ಸ್ವೀಕರಿಸಲು ನಿರಾಕರಿಸಿದೆ. ಇಂತಹ ಪದ್ಧತಿಗಳಿಂದ ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ರಕ್ಷಣೆ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿರುವುದು ಕೂಡ ಇದರಿಂದ ಸ್ಪಷ್ಟವಾಗುತ್ತದೆ.

ಭಾರತೀಯ ದಂಡ ಸಂಹಿತೆಯ ಕಾನೂನು ಸಾಮಾನ್ಯ ಅಪರಾಧ ಕಾನೂನು ಆಗಿದೆ. ಇದು ಅಸ್ತಿತ್ವಕ್ಕೆ ಬಂದು 10 ವರ್ಷಕ್ಕೂ ಹೆಚ್ಚಾಗಿದೆ. ಈ ಮಧ್ಯೆ ಸಾಮಾಜಿಕ ಪರಿಸ್ಥಿತಿಯಲ್ಲಿ ಹಲವು ಬದಲಾವಣೆಗಳು ಆಗಿವೆ. ವೈಜ್ಞಾನಿಕ ಪ್ರಗತಿ, ಇಂಟರ್‌ ನೆಟ್‌ ನಂತಹ  ಮಾಧ್ಯಮಗಳು ಹೆಚ್ಚು ವ್ಯಾಪಕವಾಗಿರುವುದು, ಆರ್ಥಿಕ ಬದಲಾವಣೆ, ಮೂಲ ತತ್ವವಾದಿಗಳ ಹೆಚ್ಚಿದ ಪ್ರಭಾವ, ಅವರ ಸಂಘಟನೆ, ಹೀಗೆ ಅನೇಕ ಕಾರಣಗಳಿಂದ ಹೊಸ ಹೊಸ ಅಪರಾಧಗಳು ಮತ್ತು ಅತ್ಯಾಚಾರದ ಘಟನೆಗಳು ಹೆಚ್ಚುತ್ತಲೇ ಇವೆ. ನಾವೀಗ ಎಷ್ಟೇ ಸಮಾಜ ಸುಧಾರಣೆಯ ಬಗ್ಗೆ ಮಾತನಾಡಿದರೂ, ಸಮಾಜಕ್ಕೆ ಕಳಂಕ ತರುವ ಘಟನೆಗಳು ಘಟಿಸುತ್ತಲೇ ಇರುತ್ತವೆ. ಹೀಗಾಗಿ ಇಂತಹ ಕಾನೂನುಗಳು ಆಗುತ್ತವೆ.

ಈ ಕಾನೂನು ಯಾವುದೇ ಜಾತಿ ಅಥವಾ ಧರ್ಮದ ವಿರೋಧಿಯಲ್ಲ. ಇದು ಎಲ್ಲ ಜಾತಿ ಧರ್ಮಗಳ ಅನಿಷ್ಟ ಅಮಾನವೀಯ ಪದ್ಧತಿಗಳ ಮೇಲೆ ಪ್ರತಿಬಂಧ ಹೇರಿ ಸಾಮಾನ್ಯ  ಜನರ ರಕ್ಷಣೆ ಮಾಡುವುದಾಗಿದೆ.

ಕೆ. ಮನೋಹರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ