ಅಕ್ಕಪಕ್ಕದವರು ನಮಗೆ ಎಲ್ಲರಿಗಿಂತ ಆಪ್ತರಾದ ಸಂಬಂಧಿಕರು ಎಂಬುದನ್ನು ನೀವು ಕೇಳಿಯೇ ಇರುತ್ತೀರಿ. ಅದು ನಿಜ ಕೂಡ. ಇಂದು ವಿಭಜಿತ ಕುಟುಂಬದಲ್ಲಿ ಪತಿಪತ್ನಿಯರು ತಮ್ಮ ತಂದೆತಾಯಿಗಳಿಂದ, ಸಂಬಂಧಿಕರಿಂದ ದೂರವಾಗಿ ಒಂದು ಅಪರಿಚಿತ ಊರಿನಲ್ಲಿರುತ್ತಾರೆ. ಅಲ್ಲಿ ಅವರಿಗೆ ನಮ್ಮರೆಂದು ಹೇಳಿಕೊಳ್ಳಲು ಯಾರಾದರೂ ಇದ್ದರೆ ಅದು ನೆರೆಹೊರೆಯವರು ಮಾತ್ರ. ಏಕೆಂದರೆ ಅಗತ್ಯಬಿದ್ದಾಗ ಅವರ ಬಾಗಿಲನ್ನು ತಟ್ಟಬಹುದು.

ಇದು ಹಬ್ಬಗಳ ಸೀಸನ್‌. ಹಬ್ಬಗಳು ಅಕ್ಕಪಕ್ಕದವರಲ್ಲಿ ಸ್ನೇಹ ಬೆಳೆಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತವೆ. ಇದರ ಲಾಭ ಪಡೆದು ಈ ದೀಪಾವಳಿಯಲ್ಲಿ ನೆರೆಹೊರೆಯ 4-5 ಜನರೊಂದಿಗೆ ಸೇರಿ ದೀಪಾವಳಿ ಆಚರಿಸಿ ಆನಂದಿಸಿ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಿಸಿಕೊಳ್ಳಿ. ಹೇಗೆಂದು ತಿಳಿಯೋಣ ಬನ್ನಿ.

ಹಬ್ಬ ಆತ್ಮೀಯತೆ ಬೆಳೆಸಲಿ

ನಮಗೆ ಅತ್ಯಂತ ಹತ್ತಿರದಲ್ಲಿ ಇರುವವರು ನಮ್ಮ ನೆರೆಹೊರೆಯವರೇ. ನಮ್ಮ ನೆಂಟರಿಷ್ಟರು ಎಷ್ಟು ದೂರದಲ್ಲಿರುತ್ತಾರೆಂದರೆ ಅಗತ್ಯ ಬಿದ್ದಾಗ ಅವರಿಂದ ಸಹಾಯ ಕೇಳಿದಾಗ ಸಹಾಯ ತಲುಪುವಷ್ಟರಲ್ಲಿ ಬಹಳ ತಡವಾಗಿರುತ್ತದೆ. ಎಮರ್ಜೆನ್ಸಿಯಲ್ಲಿ ನೆರೆಯವರೇ ಸಹಾಯ ಮಾಡಲು ಬರುತ್ತಾರೆ. ಹೀಗಿರುವಾಗ ಅವರೊಂದಿಗೆ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ನೆರೆಯವರೊಂದಿಗೆ ಸ್ನೇಹ ಹೆಚ್ಚಿಸಿಕೊಳ್ಳಲು, ಅವರನ್ನು ನಿಮ್ಮ ಹತ್ತಿರ ಕರೆತರಲು ಹಬ್ಬಕ್ಕಿಂತ ಹೆಚ್ಚಾಗಿ ಬೇರೆ ಯಾವ ಸಾಧನ ಇಲ್ಲ. ಹೀಗಾಗಿ ಅವರನ್ನು ನಿಮ್ಮ ಆತ್ಮೀಯರನ್ನಾಗಿ ಮಾಡಿಕೊಳ್ಳಲು ನೀವೇ ಏಕೆ ಮೊದಲ ಹೆಜ್ಜೆ ಇಡಬಾರದು?

ಯಾವಾಗ ಕರೆಯುವುದು?

ಈ ದೀಪಾವಳಿಯಲ್ಲಿ ನಿಮ್ಮ ನೆರೆಹೊರೆಯವರನ್ನು ಕರೆಯಲು ಯೋಚಿಸಿದ್ದರೆ ಅವರನ್ನು ಹಬ್ಬಕ್ಕಿಂತ ಕೆಲವು ದಿನಗಳು ಮುಂಚಿತವಾಗಿಯೇ ಕರೆಯಬೇಕು. ಏಕೆಂದರೆ ಹಬ್ಬದ ದಿನ ಮನೆಯಲ್ಲಿ ಎಲ್ಲರೂ ವ್ಯಸ್ತರಾಗಿರುತ್ತಾರೆ. ಕೆಲವರು ಬರಲು ತಿರಸ್ಕರಿಸಬಹುದು. ಆದ್ದರಿಂದ ಯಾವಾಗ ಕರೆಯಬೇಕೆಂದು ಮೊದಲೇ ನೆರೆಹೊರೆಯವರೊಂದಿಗೆ ಮಾತಾಡಿ ನಿರ್ಧರಿಸಿ. ಅಂದಹಾಗೆ ದೀಪಾವಳಿಯ ಹಿಂದಿನ ವಾರದ ವೀಕೆಂಡ್‌ನಲ್ಲಿ ಕರೆಯುವುದು ಉಪಯುಕ್ತ.

ಹೇಗೆ ಕರೆಯವುದು?

ನೀವೊಂದು ಸಣ್ಣ ಗೆಟ್‌ ಟು ಗೆದರ್‌ ಇಟ್ಟುಕೊಂಡಿದ್ದು ಅದರಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಹೇಳಿ. ಒಂದು ವೇಳೆ ಅಕ್ಕಪಕ್ಕದಲ್ಲಿ ಹೊಸಬರು ಬಂದಿದ್ದರೆ ಅವರನ್ನೂ ಆಮಂತ್ರಿಸಿ ಸ್ನೇಹ ಬೆಳೆಸಿಕೊಳ್ಳಿ. ಅವರೊಂದಿಗೆ ಕೊಂಚ ಕಾಲ ಕಳೆಯಿರಿ. ಕಾಲೋನಿಯಲ್ಲಿ ಹೆಚ್ಚು ಜನರಿದ್ದು, ಅವರೆಲ್ಲ ಗೆಟ್‌ ಟು ಗೆದರ್‌ನಲ್ಲಿ ಪಾಲ್ಗೊಳ್ಳಬಹುದು. ಅವರೆಲ್ಲರೊಂದಿಗೆ ನಿಮ್ಮ ಪರಿಚಯವಾಗುತ್ತದೆ. ಹೊಸ ನೆರೆಹೊರೆಯವರನ್ನು ಅರ್ಧ ಗಂಟೆ ಮುಂಚಿತವಾಗಿ ಕರೆಯಿರಿ. ಅವರ ಹೆಸರು, ವಿದ್ಯೆ ಇತ್ಯಾದಿ ಮಾಹಿತಿಗಳನ್ನು ಪಡೆಯಿರಿ. ಎಲ್ಲ ನೆರೆಹೊರೆಯವರು ಒಟ್ಟುಗೂಡಿದಾಗ ಹೊಸಬರನ್ನು ಎಲ್ಲರಿಗೆ ಪರಿಚಯ ಮಾಡಿಸಿ. ಅದರಿಂದ ಹೊಸಬರು ಎಲ್ಲರೊಂದಿಗೆ ಸೇರುತ್ತಾರೆ ಹಾಗೂ ನಿಮಗೆ ಆಭಾರಿಗಳಾಗಿರುತ್ತಾರೆ.

ಹೃದಯಕ್ಕೆ ದಾರಿ ಹೊಟ್ಟೆಯಿಂದ ಹೃದಯಕ್ಕೆ ದಾರಿ ಹೊಟ್ಟೆಯಿಂದ ಎನ್ನುವುದನ್ನು ನೀವು ಕೇಳಿಯೇ ಇರುತ್ತೀರಿ. ಎಲ್ಲರನ್ನೂ ಮನೆಗೆ ಕರೆಯಲು ಯೋಚಿಸಿದ ನಂತರ ಪ್ಲ್ಯಾನಿಂಗ್‌ ಶುರು ಮಾಡಿ. ಅವರನ್ನು ಸಪರಿವಾರ ಸಮೇತ ಕರೆಯುತ್ತೀರೋ ಅಥವಾ ಮಹಿಳೆಯರನ್ನು ಮಾತ್ರವೇ ಎಂದು ನಿರ್ಧರಿಸಿಕೊಳ್ಳಿ. ಸಪರಿವಾರ ಸಮೇತ ಕರೆಯುವುದೇ ಒಳ್ಳೆಯದು. ಏಕೆಂದರೆ ಅದರಿಂದ ಮಕ್ಕಳು ಹಾಗೂ ಪುರುಷರಲ್ಲಿ ಸ್ನೇಹ ಬೆಳೆಯುತ್ತದೆ.

ಅದನ್ನು ನಿರ್ಧರಿಸಿದ ನಂತರ ನಿಮ್ಮ ನೆರಹೊರೆಯವರೊಂದಿಗೆ ನಿಮ್ಮ ಪ್ಲ್ಯಾನ್‌ ಬಗ್ಗೆ ಚರ್ಚಿಸಿ. ಒಂದುವೇಳೆ ಅವರು ನಿಮಗೆ ಪೂಲ್ ‌ಪಾರ್ಟಿ ಮಾಡಲು ಹೇಳಿದರೆ ಅಂದರೆ ಅವರವರ ಮನೆಯಿಂದ 1-1 ಡಿಶ್‌ ತಯಾರಿಸಿ ತರಲು ಸಲಹೆ ನೀಡಿದರೆ ಅದೂ ಚೆನ್ನಾಗಿರುತ್ತದೆ. ಆದರೆ ಇಡೀ ಪಾರ್ಟಿಯನ್ನು ನೀವೇ ಮ್ಯಾನೇಜ್‌ ಮಾಡಿದರೆ ಅದಕ್ಕೆ ನೀವು ಹಲವಾರು ವಿಷಯಗಳ ಬಗ್ಗೆ ಯೋಚಿಸಬೇಕಾಗುತ್ತದೆ.

ನೀವೇ ಸ್ವತಃ ಅಡುಗೆ ಮಾಡಿ ನಿಮ್ಮ ಕೈಯಾರೆ ಎಲ್ಲರಿಗೂ ಬಡಿಸುವ ಇಚ್ಛೆ ಇದ್ದರೆ ಸರಿ. ಇಲ್ಲದಿದ್ದರೆ ನಿಮ್ಮ ಆಳಿಗೆ ಹೇಳಿ. ಇಲ್ಲದಿದ್ದರೆ ಒಳ್ಳೆಯ ಅಡುಗೆಯವರಿಗೆ ಹೇಳಿ ಕೇಟರಿಂಗ್‌ ಮಾಡಿಸಬಹುದು. ಏನೇನು ಅಡುಗೆ ಹಾಗೂ ಸ್ವೀಟ್ಸ್ ಮಾಡಿಸಬೇಕೆಂದು ಲಿಸ್ಟ್ ಮಾಡಿಕೊಳ್ಳಿ. ನೆರೆಹೊರೆಯವರಿಗೆ ಒಳ್ಳೆಯ ರುಚಿರುಚಿಯಾದ ವ್ಯಂಜನಗಳನ್ನು ಬಡಿಸಿದರೆ ಅವರೆಲ್ಲರಿಗೂ ಬಹಳ ಖುಷಿಯಾಗಿ ಪರಸ್ಪರ ಸಂಬಂಧ ಬಹಳ ಗಾಢವಾಗಿರುತ್ತದೆ.

ಜಗಳಗಂಟಿ ನೆರೆಯವರನ್ನೂ ಆಮಂತ್ರಿಸಿ

ಮಾತುಮಾತಿಗೆ ಜಗಳವಾಡುವ ನಿಮ್ಮ ನೆರೆಯವರನ್ನೂ ಈ ಹಬ್ಬಕ್ಕೆ ಆಮಂತ್ರಿಸಿ. ಒಂದುವೇಳೆ ನೀವು ಹಾಗೆ ಮಾಡದಿದ್ದರೆ ಅಕ್ಕಪಕ್ಕದ ಇತರರನ್ನೆಲ್ಲಾ ಕರೆದು ನನ್ನನ್ನು ಮಾತ್ರ ಕರೆದಿಲ್ಲ ಎಂದು ಅವರಿಗೆ ಕೋಪ ಬಂದು ವೈರತ್ವ ಹೆಚ್ಚಾಗುತ್ತದೆ. ಒಂದುವೇಳೆ ನೀವು ಅವರನ್ನು ಕರೆದರೆ, ಅದರಿಂದ ಲಾಭವಿದೆ. ಪ್ರೀತಿಯಿಂದ ಆಹ್ವಾನಿಸಿದರೆ ಯಾರೂ ತಿರಸ್ಕರಿಸಲಾಗುವುದಿಲ್ಲ. ನೀವು ಅವರನ್ನು ಆಹ್ವಾನಿಸುವ ದೊಡ್ಡತನ ತೋರಿದರೆ ಮುಂದೆ ಅವರೂ ಹಾಗೆಯೇ ಮಾಡುತ್ತಾರೆ. ಹೀಗೆ ಮಾಡುವುದರಿಂದ ಎರಡೂ ಮನೆಯವರ ಕೋಪ ತಣ್ಣಗಾಗುತ್ತದೆ.

ಉಡುಗೊರೆಯನ್ನೂ ಕೊಡಿ

ನೆಂಟರಿರಲಿ, ನೆರೆಯವರಿರಲಿ ಎಲ್ಲರಿಗೂ ಏನಾದರೊಂದು ಉಡುಗೊರೆಯನ್ನು ಅಗತ್ಯವಾಗಿ ನೀಡಿ. ಅದಕ್ಕೆ ನಿಮ್ಮ ಬಜೆಟ್‌ನಿರ್ಧರಿಸಿಕೊಳ್ಳಿ. ಬಜೆಟ್‌ ಹೆಚ್ಚಾಗಿದ್ದಲ್ಲಿ ಕಡಿಮೆ ಬಜೆಟ್‌ನ ದೀಪಗಳ ಪ್ಯಾಕ್‌, ಗ್ರೀಟಿಂಗ್‌ ಕಾರ್ಡ್‌ ಅಥವಾ ಏನೂ ಇಲ್ಲದಿದ್ದರೆ ಮಕ್ಕಳಿಗೆ ಟಾಫಿ ಅಥವಾ ಚಾಕಲೇಟ್‌ ಪ್ಯಾಕೆಟ್‌ನ್ನೇ ಕೊಡಿ. ಈ ಉಡುಗೊರೆಗಳು ಪರಸ್ಪರರ ಮನದಲ್ಲಿ ಸ್ಥಳ ಕೊಡುತ್ತವೆ ಮತ್ತು ಪರಸ್ಪರರನ್ನು ಹತ್ತಿರ ತರುತ್ತವೆ.

ನಿಮ್ಮ ಕೌಶಲ್ಯವನ್ನು ಹೊರತನ್ನಿ

ಯಾರಲ್ಲಿ ಕೌಶಲ್ಯವಿದೆಯೋ ಅವರೇ ಹೊಗಳಿಕೆಗೆ ಹಕ್ಕುದಾರರು ಎಂದು ಜನ ಆಗಾಗ್ಗೆ ಹೇಳುವುದನ್ನು ನೀವು ಕೇಳಿಯೇ ಇರುತ್ತೀರಿ. ನೀವು ನೆರೆಯವರ ನಡುವೆ ನಿಮ್ಮದೇ ಆದ ಪ್ರತ್ಯೇಕ ಗುರುತು ಇಟ್ಟುಕೊಳ್ಳಲು ಬಯಸಿದರೆ ಇದಕ್ಕಿಂತಲೂ ಒಳ್ಳೆಯ ಸಂದರ್ಭ ನಿಮಗೆ ಸಿಗುವುದಿಲ್ಲ. ನಿಮ್ಮಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ನೀವು ಚೆನ್ನಾಗಿ ಅಡುಗೆ ಮಾಡಬಹುದು, ಪೇಂಟಿಂಗ್‌ ಮಾಡಬಹುದು, ನೃತ್ಯ ಪ್ರವೀಣರಿರಬಹುದು, ಚೆನ್ನಾಗಿ ಹಾಡಬಹುದು, ಯಾವುದಾದರೂ ವಿಶೇಷತೆಯನ್ನು ಗುಪ್ತವಾಗಿ ಇಟ್ಟುಕೊಂಡಿರಬಹುದು. ಈಗ ಅದನ್ನು ಪ್ರಕಟಪಡಿಸುವ ಅವಶ್ಯಕತೆ ಬಂದಿದೆ. ನೀವು ಯಾರಿಗೂ ಏನೂ ಕಡಿಮೆ ಇಲ್ಲ ಎಂಬುದನ್ನು ನಿಮ್ಮ ಎಲ್ಲ ನೆರೆಹೊರೆಯವರಿಗೆ ತಿಳಿಯುವಂತೆ ಮಾಡಿ.

ನಿಮ್ಮ ಗೆಟ್‌ ಟು ಗೆದರ್‌ನಲ್ಲಿ ನಿಮ್ಮ ಕೌಶಲ್ಯಕ್ಕೆ ಸಂಬಂಧಿಸಿದ ಕ್ರಿಯಾಶೀಲತೆ ಇರಲಿ. ಅದರಿಂದ ಜನರ ಮನಸ್ಸು ಎಂಗೇಜ್ ಆಗಿರುತ್ತದೆ. ನಿಮ್ಮ ನೆರೆಯವರಿಗೆ ನಿಮ್ಮ ವಿಶೇಷತೆ ಬಗ್ಗೆ ತಿಳಿದಾಗ ಅವರ ದೃಷ್ಟಿಯಲ್ಲಿ ನಿಮ್ಮ ಗೌರವ ಇನ್ನಷ್ಟು ಹೆಚ್ಚಾಗುತ್ತದೆ. ಆಗ ಅವರು ತಾವಾಗಿ ನಿಮ್ಮ ಗೆಳೆತನ ಬಯಸುತ್ತಾರೆ. ಅದರಿಂದ ಅಗತ್ಯ ಬಿದ್ದಾಗ ನೀವು ಅವರಿಗೆ ನಿಮ್ಮ ಕೌಶಲ್ಯ ಕಲಿಸಬಹುದು.

ಆದರೆ ನೀವೊಬ್ಬರೇ ಹಾಗೆ ಮಾಡಬೇಡಿ. ಎಲ್ಲರೂ ತಮಗೆ ಇಷ್ಟವಾದ ಏನಾದರೊಂದು ಮಾಡಲು ಹೇಳಿ. ಅದರಿಂದ ಎಲ್ಲರಿಗೂ ಖುಷಿಯಾಗುತ್ತದೆ. ನಿಮ್ಮ ಮನೆಗೆ ಬಂದು ಅವರ ಪ್ರತಿಭೆ ಬೆಳಗುತ್ತದೆ. ಎಲ್ಲರ ಹೊಗಳಿಕೆ ಸಿಕ್ಕುತ್ತದೆ.

ಒಟ್ಟಿಗೆ ಹಬ್ಬ ಆಚರಿಸಿ

ನಿಮ್ಮ ಮನೆಯಲ್ಲಿ ನೆರೆಯವರನ್ನು ಒಟ್ಟಿಗೆ ಸೇರಿಸಿದ್ದು ಎಂಜಾಯ್‌ ಮಾಡುವ ಒಂದು ಅವಕಾಶವನ್ನೂ ಕಳೆದುಕೊಳ್ಳಬೇಡಿ. ದೀಪಾವಳಿಯಂದು ಒಟ್ಟಿಗೆ ಪಟಾಕಿ ಹೊಡೆಯಿರಿ, ಹೂ ಕುಂಡಗಳನ್ನು ಹಚ್ಚಿರಿ, ಆಟಗಳನ್ನು ಆಡಿ, ಇಕೋ ಫ್ರೆಂಡ್ಲಿ ಪಟಾಕಿಗಳನ್ನು ಹಚ್ಚಿರಿ. ತಂಬೋಲ ಕೂಡ ಆಡಬಹುದು. ಒಟ್ಟಿನಲ್ಲಿ ಗೆಟ್‌ ಟು ಗೆದರ್‌ ಪಾರ್ಟಿಯಲ್ಲಿ ಡ್ಯಾನ್ಸ್ ಪಾರ್ಟಿ, ಮ್ಯೂಸಿಕ್‌ ಇತ್ಯಾದಿ ಮೋಜು ಮಾಡಬಹುದು. ಮುಂದಿನ ವರ್ಷದವರೆಗೂ ನಿಮ್ಮ ಮನೆಯಲ್ಲಿ ನಡೆದ ಹಬ್ಬದ ಮೋಜು ಯಾರೂ ಮರೆಯದೆ ನಿಮ್ಮ ನೆರೆಯವರಿಗೆ ಬಹಳ ಇಷ್ಟದವರಾಗುತ್ತೀರಿ.

ಜಾತ್ರೆಗಳಿಗೆ ಒಟ್ಟಿಗೆ ಹೋಗಿ

ದೀಪಾವಳಿಯ ಹಿಂದೆಮುಂದೆ ಅಲ್ಲಲ್ಲಿ ಜಾತ್ರೆಗಳು ನಡೆಯುತ್ತವೆ. 1-2 ಕುಟುಂಬಗಳು ಒಟ್ಟಿಗೆ ನೋಡಲು ಹೋದಾಗ ಆನಂದ ಇನ್ನಷ್ಟು ಹೆಚ್ಚಾಗುತ್ತದೆ. ಈ ಬಾರಿ ಒಟ್ಟಿಗೆ ಜಾತ್ರೆಗಳನ್ನು ನೋಡಲು ಹೋಗೋಣ ಎಂದು ನೆರೆಯವರಿಗೆ ಹೇಳಿ. ನಿಮ್ಮ ಈ ಆಹ್ವಾನವನ್ನು ಅವರಿಗೆ ನಿರಾಕರಿಸಲಾಗುವುದಿಲ್ಲ. ಜಾತ್ರೆಗಳಿಗೆ ಒಟ್ಟಿಗೆ ಹೋದಾಗಿನ ಆನಂದವೇ ಬೇರೆ ರೀತಿಯದು.

ಮಕ್ಕಳಿಗೂ ಸ್ನೇಹ ಬೆಳೆಸಿ

ನಿಮ್ಮ ಮನೆಗೆ ನೆರೆಯವರ ಮಕ್ಕಳು ಬರುತ್ತಿದ್ದರೆ ಅವರನ್ನು ನಿಮ್ಮ ಮಕ್ಕಳಿಗೆ ಪರಿಚಯ ಮಾಡಿಸಿ. ಕೆಲವು ಬಾರಿ ಮಕ್ಕಳಿಂದಾಗಿ ದೊಡ್ಡವರೂ ಬರುತ್ತಾರೆ. ಅವರು ಹಾಗೆ ಹತ್ತಿರ ಬಂದಾಗ ಇಬ್ಬರ ನಡುವೆ ಒಂದು ಗಾಢ ಸಂಬಂಧ ಮೂಡುತ್ತದೆ. ಮಕ್ಕಳಿಗೂ ಬೋರ್‌ ಆಗದಂತೆ ಏನಾದರೂ ಆಟಗಳನ್ನು ಆಡಿಸಿ.

ನೆರೆಯವರ ನೆರೆಯವರೂ ಮುಖ್ಯ

ನಿಮ್ಮ ನೆರೆಯವರ ಪಕ್ಕದವರಿಗೂ ವಿಶೇಷ ಗಮನ ಕೊಡಿ. ನೀವು ಅವರಿಗೆ ಹೆಚ್ಚು ಪರಿಚಿತರಲ್ಲದಿದ್ದರೆ ಅವರೊಂದಿಗೆ ಒಡನಾಟ ಬೆಳೆಸಿಕೊಳ್ಳಿ. ಅವರೊಂದಿಗೆ ಮಾತನಾಡಿ ಅವರ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಬಗ್ಗೆಯೂ ಅವರಿಗೆ ಹೇಳಿ. ಹೀಗೆ ಮಾತುಕಥೆ ಆಡಿದಾಗ ಪರಸ್ಪರ ಹತ್ತಿರವಾಗಬಹುದು.

ನೆರೆಯವರಲ್ಲಿ ಭೇದ ಭಾವ ಬೇಡ

ಕೆಲವರು ನೆರೆಹೊರೆಯವರಲ್ಲಿ ಭೇದಭಾವ ಎಣಿಸುತ್ತಾರೆ. ಅವರು ತಮ್ಮ ಜಾತಿಯವರಾಗಿದ್ದರಂತೂ ಅವರನ್ನು ಹೆಚ್ಚು ಗಮನಿಸಿಕೊಳ್ಳುತ್ತಾರೆ. ಹಾಗೆ ಮಾಡದೇ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿ. ಹಬ್ಬಗಳಲ್ಲಿ ದೊಡ್ಡವರು, ಚಿಕ್ಕವರು ಬಡವ, ಸಾಹುಕಾರ ಎಂಬ ಭೇದ ಇರುವುದಿಲ್ಲ. ಇಲ್ಲಿ ಧರ್ಮ ಯಾವುದು ಎಂಬುದಕ್ಕೆ ಮಹತ್ವವಿರುವುದಿಲ್ಲ. ಹಬ್ಬದ ದಿನ ಬರೀ ಸಂತಸವನ್ನು ಹಂಚಲಾಗುತ್ತದೆ ಈದ್‌ನ ಸಂದರ್ಭದಲ್ಲಿ ಒಬ್ಬ ಮುಸಲ್ಮಾನ್‌ ಹಿಂದೂಗೆ `ಇಫ್ತಾರ್‌’ ಪಾರ್ಟಿ ಕೊಟ್ಟರೆ ದೀಪಾವಳಿಯ ಸಂದರ್ಭದಲ್ಲಿ ಹಿಂದೂ ಮುಸಲ್ಮಾನನಿಗೆ ಪಾರ್ಟಿ ಕೊಡುತ್ತಾನೆ. ಕ್ರಿಸ್‌ಮಸ್‌ ಪಾರ್ಟಿಯಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ಈ ಹಬ್ಬದಲ್ಲಿ ಧರ್ಮ ಮತ್ತು ಸಂಪ್ರದಾಯಗಳ ಗೋಡೆ ಉರುಳಿಹೋಗುತ್ತದೆ. ಜನ ಮನುಷ್ಯತ್ವದ ರೂಪದಲ್ಲಿ ಕಂಡುಬರುತ್ತಾರೆ. ಹಬ್ಬಗಳಲ್ಲಿ ಬರೀ ಪ್ರೀತಿ ಹಾಗೂ ಸಹೋದರತ್ವ ಕಂಡುಬರುತ್ತದೆ.

ದೂರುಗಳು ಇಲ್ಲದಿರಲಿ

ಮುನಿಸಿಕೊಂಡವರನ್ನು ಹತ್ತಿರ ಕರೆತರಲು ಹಬ್ಬಗಳು ಒಳ್ಳೆಯ ಅವಕಾಶ ನೀಡುತ್ತವೆ. ಆದ್ದರಿಂದ ಹಬ್ಬಗಳಂದು ಮುನಿಸಿಕೊಂಡ ನೆಂಟರು ಹಾಗೂ ಸ್ನೇಹಿತರನ್ನು ಭೇಟಿಯಾಗಿ ಮತ್ತು ಮನೆಗೆ ಆಮಂತ್ರಿಸಿ. ಉಡುಗೊರೆಗಳನ್ನು ಪಡೆಯಿರಿ ಹಾಗೂ ಕೊಡಿ. ಹಬ್ಬಗಳಲ್ಲಿ ಅವಕಾಶಗಳು ಹಾಗೂ ಶಾಸ್ತ್ರಗಳು ಎರಡೂ ಇರುತ್ತವೆ.

ಯಾರಾದರೂ ನಿಮ್ಮ ಮೇಲೆ ಕೋಪಗೊಂಡಿದ್ದರೆ ಅವರಿಗೆ ಸಿಹಿ ಹಾಗೂ ಏನಾದರೂ ಉಡುಗೊರೆ ಕೊಡುವ ನೆಪದಲ್ಲಿ ಅವರ ಮನೆಗೆ ಹೋಗಿ. ಅವರು ನಿಮ್ಮನ್ನು ಇಷ್ಟಪಡದಿರಬಹುದು. ಆದರೆ ನೀವು ಅವರ ಮನೆಗೆ ಹೋಗಿದ್ದಕ್ಕೆ ಹೊಸ ಸಂಬಂಧ ಆರಂಭಿಸಲು ನಿರಾಕರಿಸುವುದಿಲ್ಲ.

ಯಾವಾಗ ಅಗತ್ಯ ಬೀಳುತ್ತದೆ?

ನೀವು ಅಡುಗೆ ಮಾಡಲು ಶುರು ಮಾಡಿದಾಗ ಗೋಧಿಹಿಟ್ಟು ಅಥವಾ ಯಾವುದಾದರೂ ಮಸಾಲೆ ಪದಾರ್ಥ ಮುಗಿದುಹೋಗಿದ್ದರೆ ನೆರೆಯವರು ಜ್ಞಾಪಕಕ್ಕೆ ಬರುತ್ತಾರೆ. ನೀವು ನಂತರ ಅದನ್ನು ವಾಪಸ್‌ ಮಾಡಬಹುದು.

ಗಂಡ ಆಫೀಸಿಗೆ ಹೋಗಿರುವಾಗ ಮಗುವಿಗೆ ಏಟು ಬಿದ್ದು ಅಥವಾ ನಿಮಗೆ ಅನಾರೋಗ್ಯವಾಗಿ ಏನಾದರೂ ಎಮರ್ಜೆನ್ಸಿ ಉಂಟಾದರೆ ಮೊದಲು ನೆನಪಿಗೆ ಬರೋದು ನೆರೆಯವರೇ.

ಒಂದು ವೇಳೆ ಪ್ರೆಗ್ನೆಂಟ್‌ ಆಗಿದ್ದರೆ ಯಾವಾಗ ಬೇಕಾದರೂ ಅಗತ್ಯ ಬೀಳಬಹುದು.

ಮಗು ಹುಟ್ಟಿದ ನಂತರ ಅದನ್ನು ಸಂಭಾಳಿಸುವುದು ಇತ್ಯಾದಿಗಳಿಗೆ ನೆರೆಯವರೇ ಸಹಾಯ ಮಾಡುತ್ತಾರೆ.

ಮನೆ ಸಾಮಾನು, ತರಕಾರಿ ಇತ್ಯಾದಿ ತರಲು ನೆರೆಯವರು ಜೊತೆಗಿದ್ದರೆ ಚೆನ್ನಾಗಿರುತ್ತದೆ.

ನೆರೆಯರ  ಪ್ರೀತಿ ಸಹೃದಯತೆ ಆಗಸ್ಟ್ 2014ರಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ನೆರೆಯವರನ್ನು ಪ್ರೀತಿಸಿದರೆ ನಿಮ್ಮ ಹೃದಯದ ಕಾಯಿಲೆಗಳು ದೂರಾಗುತ್ತವೆ. ಹೃದಯದ ಆರೋಗ್ಯ ಉತ್ತಮವಾಗಿರಲು ನೆರೆಯವರೊಂದಿಗೆ ಸೌಹಾರ್ದದಿಂದ ವ್ಯವಹರಿಸಬೇಕು.

ಸಂಶೋಧಕರ ಪ್ರಕಾರ ನೆರೆಯವರೊಂದಿಗೆ ಸ್ನೇಹ ಪೂರ್ವಕ ಸಂಬಂಧದಿಂದ ಸಾಮಾಜಿಕ ನೆಟ್‌ ವರ್ಕ್‌ ಹೆಚ್ಚುತ್ತದೆ. ಹೃದ್ರೋಗಗಳ ಅಪಾಯ ಕಡಿಮೆಯಾಗುತ್ತದೆ. ಅಮೆರಿಕಾದ ಮಿಚಿಗನ್‌ ಯೂನಿವರ್ಸಿಟಿಯ ಸಂಶೋಧಕರು ನೆರೆಯವರೊಂದಿಗೆ ಸಾಮೂಹಿಕ ಏಕತೆ ಒಂದು ರೀತಿಯಲ್ಲಿ ನೆಂಟರು ಹಾಗೂ ಮಿತ್ರರೊಂದಿಗಿನ ಸಂಬಂಧಕ್ಕಿಂತ ಹೆಚ್ಚಿನದು ಎನ್ನುತ್ತಾರೆ.

4 ವರ್ಷಗಳಿಂದ ಹೃದಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾಗದ ಅಮೆರಿಕಾದ 5000 ಹಿರಿಯ ನಾಗರಿಕರ ಬಗ್ಗೆ ಅಧ್ಯಯನ ನಡೆಸಲಾಯಿತು.

ಈ ಪ್ರಾಜೆಕ್ಟ್ ನ ಆರಂಭದಲ್ಲಿ ಅವರನ್ನು ನೆರೆಯವರ ಜೊತೆಗಿನ ಅನುಭವಗಳ ಬಗ್ಗೆ ಪ್ರಶ್ನೆ ಕೇಳಿ ಅಂಕಗಳನ್ನು ಕೊಡಲಾಯಿತು. ನೆರೆಯ ಪರಿಸ್ಥಿತಿ, ತೊಂದರೆ ಬಂದಾಗ ನೆರೆಯವರ ಸಹಾಯ, ವಿಶ್ವಾಸ ಮತ್ತು ಭರವಸೆ ಬಗ್ಗೆ ಕೇಳಲಾಯಿತು. ಪ್ರತಿ ಪ್ರಶ್ನೆಗೆ 1 ರಿಂದ 7 ಪಾಯಿಂಟ್‌ ಕೊಡುವ ಅವಕಾಶವಿತ್ತು. 7ಕ್ಕೆ 1 ಪಾಯಿಂಟ್‌ ಪಡೆದವರಿಗೆ ಹೋಲಿಸಿದರೆ 7ಕ್ಕೆ 7 ಪಾಯಿಂಟ್‌ ಪಡೆದವರಿಗೆ ಹಾರ್ಟ್‌ ಅಟ್ಯಾಕ್‌ನ ಅಪಾಯ ಶೇ.67ರಷ್ಟು ಕಡಿಮೆ ಇತ್ತು.

ಸ್ನೇಹಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ