ಚಳಿಗಾಲದಲ್ಲಿ ಪ್ರಕೃತಿಯ ಬಣ್ಣಬಣ್ಣದ ಫುಡ್‌ ಬ್ಯಾಸ್ಕೆಟ್‌ ಅತ್ಯಾಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲದೆ, ನಿಮಗೆ ಪೋಷಕ ಪದಾರ್ಥಗಳನ್ನು ಧಾರಾಳವಾಗಿ ಒದಗಿಸುತ್ತವೆ. ಈ ಕಾಲದಲ್ಲಿ ನಿಮ್ಮ ದೇಹ ಹಾಗೂ ಮೂಳೆಗಳಿಗೆ ಬೆಚ್ಚಗಿನ ಶಾಖ ಒದಗಿಸಲು, ನಿಮ್ಮನ್ನು ಶೀತ ನೆಗಡಿಗಳಿಂದ ರಕ್ಷಿಸಲು ಹಾಗೂ ನಿಮ್ಮ ಕುಟುಂಬದವರ ಇಮ್ಯುನಿಟಿ ಹೆಚ್ಚಿಸಲು ಬಹಳಷ್ಟು ತರಕಾರಿ ಮತ್ತು ಹಣ್ಣು ಹಂಪಲು ಲಭ್ಯವಿವೆ. ಇವನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ನೀವು ಆರೋಗ್ಯವಾಗಿ ಫಿಟ್‌ ಎನಿಸುವಿರಿ. ಚಳಿಗಾಲದಲ್ಲಿ ಎಂದೂ ಹಸಿವನ್ನು ಅದುಮಿಡಬೇಡಿ. ಅದರ ಬದಲಿಗೆ ಈ ಚಳಿಗಾಲದಲ್ಲಿ ನೀವು ಆರೋಗ್ಯಕರವಾಗಿ ಹೇಗೆ ನೈಸರ್ಗಿಕ ಆಹಾರದ ಲಾಭ ಪಡೆಯುವುದು ಎಂಬುದರ ಬಗ್ಗೆ ಯೋಚಿಸಬೇಕು.

ಹಸಿರು ತರಕಾರಿ ಹಾಗೂ ಸೊಪ್ಪಿನ ಸೇವನೆ ಬಲು ಉತ್ತಮ. ಇದರಲ್ಲಿ ಫೈಬರ್‌, ಫಾಲಿಕ್‌ ಆ್ಯಸಿಡ್‌, ವಿಟಮಿನ್‌ `ಸಿ’, ಪೊಟ್ಯಾಶಿಯಂ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳು ಹೆಚ್ಚಾಗಿವೆ. ಹೀಗಾಗಿ ಇವನ್ನು ಸೇವಿಸಿ ಫಿಟ್‌ಫೈನ್‌ ಆಗಿರಿ.

ಕಡಿಮೆ ಸಕ್ಕರೆ ಬಳಸಿ ತಯಾರಿಸಿದ ಕ್ಯಾರೆಟ್‌ ಹಲ್ವ, ಖೀರು ಸೇವಿಸಿ. ಚಳಿಗಾಲದಲ್ಲಿ ಕ್ಯಾರೆಟ್‌ನ್ನು ಹೆಚ್ಚಾಗಿ ಸಲಾಡ್‌, ಕೋಸಂಬರಿ ಅಥವಾ ಇನ್ನಿತರ ಯಾವುದೇ ರೂಪದಲ್ಲಾದರೂ ಸರಿ, ಬಳಸುತ್ತಿರಬೇಕು.

ಸಿಟ್ರಸ್‌ ಹಣ್ಣುಗಳು ವಿಟಮಿನ್‌ `ಸಿ’ಯ ಆಗರ. ಇವುಗಳ ಸೇವನೆ ದೇಹಕ್ಕೆ ಸಹಜವಾಗಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಒದಗಿಸುತ್ತವೆ. ಹೀಗಾಗಿ ಕಿತ್ತಳೆ, ಮೂಸಂಬಿ, ಟೊಮೇಟೊ ಇತ್ಯಾದಿಗಳನ್ನು ಆ ಕಾಲದಲ್ಲಿ ಧಾರಾಳ ಬಳಸಿ.

ಚಳಿಗಾಲದಲ್ಲಿ ವಿಪರೀತ ಬಿಸಿಯ ಪದಾರ್ಥ ಸೇವಿಸದಿರಿ, ಶಾಖ ಸಾಮಾನ್ಯವಾಗಿಯೇ ಇರಲಿ. ಹೃದ್ರೋಗಿಗಳು ಮುಖ್ಯವಾಗಿ ಹುರಿದ ಕರಿದ ಪದಾರ್ಥಗಳನ್ನು ದೂರವಿಡಬೇಕು. ಸಾಧ್ಯವಾದಷ್ಟೂ ಕಡಿಮೆ ಉಪ್ಪು ಬಳಸಿ.

ಇಂಥವರು ಸಂತೃಪ್ತ (ಸ್ಯಾಚ್ಯುರೇಟೆಡ್‌ ಫ್ಯಾಟ್‌) ಕೊಬ್ಬಿಗೆ ಬದಲಾಗಿ ಅಸಂತೃಪ್ತ (ಅನ್‌ಸ್ಯಾಚ್ಯುರೇಟೆಡ್‌ ಫ್ಯಾಟ್‌) ಕೊಬ್ಬಿನಾಂಶವುಳ್ಳ ಜಿಡ್ಡು ಪದಾರ್ಥ ಬಳಸಬೇಕು. ಅಂದರೆ ರೀಫೈಂಡ್‌, ಸಾಸುವೆ, ಕೊಬ್ಬರಿ, ಹಿಪ್ಪೆ ಎಣ್ಣೆ ಬಳಸಿ ಅಡುಗೆ ಮಾಡಬೇಕು.

thand-ke-mausam-main-2

ಮಧುಮೇಹದ ರೋಗಿಗಳು ಸಾಧ್ಯವಾದಷ್ಟೂ ಸಕ್ಕರೆ ಸೇವನೆ ತ್ಯಜಿಸಬೇಕು. ಇಂಥವರು ರೀಫೈಂಡ್‌ ಕಾರ್ಬೋಹೈಡ್ರೇಟ್‌ಗಳ ಸೇವನೆಯಿಂದ ದೂರವಿರಬೇಕು ಹಾಗೂ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಸೇವಿಸಬೇಕು. ಅಂದರೆ ಜವೆಗೋಧಿ, ಬ್ರೋಕನ್‌ ವೀಟ್, ಮಲ್ಟಿಗ್ರೇನ್‌ ಆಟಾ ಇತ್ಯಾದಿ ಬಳಸಬೇಕು.

ಚಳಿಗಾಲದಲ್ಲಿ ಸೊಪ್ಪು, ಹಸಿರು ತರಕಾರಿ, ಹಣ್ಣುಹಂಪಲುಗಳ ಅಧಿಕ ಸೇವನೆಯಿಂದ ರಕ್ತದಲ್ಲಿ ಹಿವೋಗ್ಲೋಬಿನ್‌ ಅಂಶ ಸರಿಯಾದ ಪ್ರಮಾಣದಲ್ಲಿ ಬ್ಯಾಲೆನ್ಸ್ ಆಗುತ್ತದೆ.

ನೀರು ಹಾಗೂ ದ್ರವ ಪದಾರ್ಥಗಳನ್ನು ಧಾರಾಳವಾಗಿ ಸೇವಿಸಬೇಕು. ಚಿಕ್ಕ ಮಕ್ಕಳು, ವಯೋವೃದ್ಧರಿಗೆ ಐಸ್‌ ಕ್ರೀಂ ಮುಂತಾದುವನ್ನು ಕೊಡಬಾರದು.

ಚಳಿಗಾಲದಲ್ಲಿ ತಮ್ಮ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಕಷ್ಟಪಡುವವರು ಮುಖ್ಯವಾಗಿ ಜಿಡ್ಡಿನ ಪದಾರ್ಥಗಳಿಂದ ದೂರವಿರಬೇಕು. ಹುರಿದ, ಕರಿದ, ಆಯ್ಲಿ ಪರೋಟ ಇತ್ಯಾದಿ ಬೇಡವೇ ಬೇಡ. ಅವರ ಆಹಾರದಲ್ಲಿ ಫೈಬರ್‌, ಹಣ್ಣುಗಳು, ಸಲಾಡ್‌, ದ್ರವ ಪದಾರ್ಥಗಳು ಇತ್ಯಾದಿ ಹೆಚ್ಚಿರಬೇಕು. ಧಾನ್ಯಗಳು, ಮಲ್ಟಿಗ್ರೇನ್‌ ಆಟಾ, ಬ್ರೌನ್‌ ಬ್ರೆಡ್‌, ಅಧಿಕ ಫೈಬರ್‌ಯುಕ್ತ ಡೈಜಿಸ್ಟಿವ್‌ಬಿಸ್ಕೆಟ್ಸ್ ಮುಂತಾದವು ಪೂರಕ.

ಸೀಬೆಹಣ್ಣು, ಕ್ಯಾರೆಟ್‌, ಸೇಬು, ಸೊಪ್ಪು ಹೆಚ್ಚು ಮಾಗಿರದ ದೋರು ಹಣ್ಣುಗಳು, ಕಿತ್ತಳೆ, ಸೌತೆಕಾಯಿ ಮುಂತಾದವು ಹೆಚ್ಚು ಲಾಭಕಾರಿ. ಮನೆಯಲ್ಲೇ ತಯಾರಿಸಿದ ಮಿಕ್ಸ್ಡ್ ವೆಜ್‌, ಸೊಪ್ಪು, ಟೊಮೇಟೊ ಸೂಪ್‌ಗಳು ಮಾರುಕಟ್ಟೆಯ ಪ್ಯಾಕ್ಡ್ ಸೂಪ್‌ಗಳಿಗಿಂತ ಹೆಚ್ಚು ಉತ್ತಮ.

ಚಳಿಗಾಲದಲ್ಲಿ ಹಬ್ಬಹರಿದಿನಗಳು, ಮುಂಜಿ ಮದುವೆಗಳು ಹೆಚ್ಚು. ಹೀಗಾಗಿ ಎಷ್ಟೋ ಸಮಾರಂಭಗಳಲ್ಲಿ ಜನ ಒಂದಿಷ್ಟು ಚಿಂತಿಸದೆ ಧಾರಾಳವಾಗಿ ಸಿಕ್ಕಿದ್ದನ್ನು ಹೊಟ್ಟೆಗಿಳಿಸುತ್ತಾರೆ. ಎಷ್ಟೋ ಜನಕ್ಕೆ ತಾವೇನು ತಿನ್ನಬೇಕು, ಬಾರದು ಎಂಬುದು ಸಹ ಗೊತ್ತಿರುವುದಿಲ್ಲ. ಹೀಗಾಗಿ ಕೆಳಗಿನ ಸಲಹೆಗಳನ್ನು ಅನುಸರಿಸಿ ನಿಮ್ಮ ಫೆಸ್ಟಿವಲ್ ‌ಡಯೆಟ್‌ ಪ್ಲ್ಯಾನ್‌ ಮಾಡಿ.

Asian-Guava-3-copy

ಓವರ್ಈಟಿಂಗ್ಬೇಡ

ಇದರರ್ಥ ಕೇವಲ ಆಹಾರ ಸೇವನೆಗೆ ಮಾತ್ರ ಸೀಮಿತವಾಗದೆ ಕ್ಯಾಲೋರಿಗೂ ಅನ್ವಯಿಸುತ್ತದೆ. ಉದಾ :  ಒಂದು ರಸಗುಲ್ಲಾ 250 ಕ್ಯಾಲೋರಿ ಆದರೆ, ಕಾರ್ನ್‌ಫ್ಲೇಕ್ಸ್ ನ ಒಂದು ಬೌಲ್ ‌ಕೇವಲ 100 ಕ್ಯಾಲೋರಿ. ಹಬ್ಬದ ಸೀಸನ್‌ನಲ್ಲಿ ನಾವು ಹೆಚ್ಚು ಕ್ಯಾಲೋರಿ ಕಾನ್ಶಿಯಸ್‌ ಆಗಿರಬೇಕು. ಆಗ ಮಾತ್ರ ತೂಕ ಹೆಚ್ಚದಿರಲು ಸಾಧ್ಯ.

ಏನನ್ನು ಸೇವಿಸಬಾರದು?

ನಾವು ಸದಾ ಉಪ್ಪು, ಸಕ್ಕರೆ, ಖಾರ, ಮಸಾಲೆ, ಜಿಡ್ಡಿನಂಶದ ಆಹಾರವನ್ನು ದೂರವಿಡಬೇಕು. ನೀವು ಊಟ ತಿಂಡಿಯ ಪ್ಲ್ಯಾನಿಂಗ್ ಚೆನ್ನಾಗಿ ಮಾಡಬೇಕು. ಹೆವಿ ಅಥವಾ ಸ್ಪೆಷಲ್ ಊಟವಿದ್ದಾಗ, ಅದನ್ನು ಮಧ್ಯಾಹ್ನದ ಹೊತ್ತು ತಿನ್ನುವುದೇ ಲೇಸು. ಆಗ ದಿನವಿಡಿಯ ಓಡಾಟದಲ್ಲಿ ಹೆಚ್ಚುವರಿ ಕ್ಯಾಲೋರಿ ಬೇಗ ಬರ್ನ್‌ ಆಗುತ್ತದೆ. ಆ ದಿನ ಉಪಾಹಾರಕ್ಕೆ ಅಲ್ಪ ಕ್ಯಾಲೋರಿಯ, ರಾತ್ರಿಗೆ 1-2 ತೆಳು ಚಪಾತಿ, ಮಜ್ಜಿಗೆಯಷ್ಟೇ ಇರುವಂತೆ ನೋಡಿಕೊಳ್ಳಿ.

ತಾಜಾ ಆಹಾರವನ್ನೇ ಸೇವಿಸಿ

ಸದಾ ತಾಜಾ ಹಣ್ಣು ತರಕಾರಿಗಳನ್ನೇ ಸೇವಿಸಿ. ಜೊತೆಗೆ ಯಾವುದೇ ಪ್ಯಾಕ್ಡ್ ಆಹಾರ ಸೇವಿಸುವ ಮೊದಲು ಅದರ ಎಕ್ಸ್ ಪೈರಿ ಡೇಟ್‌ ಗಮನಿಸಿ. ಅಧಿಕ ಉಷ್ಣತೆಯಲ್ಲಿ ತಯಾರಿಸಲಾದ ಆಹಾರ ಬೇಗ ಕೆಡುವ ಸಂಭವ ಹೆಚ್ಚು. ಕೆಲವು ಸೂಕ್ಷ್ಮಾಣುಗಳಾದ ಈಕೋಲಿ, ಕೀ ಬಸೇಲಾ, ಶೆಗೆವಾ ಮುಂತಾದ ಅಧಿಕ ಉಷ್ಣತೆಯಲ್ಲಿ ಬೇಗ ಅಭಿವೃದ್ಧಿಯಾಗುತ್ತವೆ. ಇಂಥ ಸೂಕ್ಷ್ಮಾಣುಗಳಿಂದ ಡಯೇರಿಯಾ, ಡೀಹೈಡ್ರೇಶನ್‌, ತಲೆಸುತ್ತು, ವಾಂತಿ ಇತ್ಯಾದಿಗಳಾಗುತ್ತವೆ. ಆದ್ದರಿಂದ ಸಾಧ್ಯವಾದಷ್ಟೂ ಆಹಾರ ಸಾಮಗ್ರಿ, ಮಿಠಾಯಿಗಳನ್ನು ಫ್ರಿಜ್‌ನಲ್ಲೇ ಇರಿಸಬೇಕು. ಹಬ್ಬಗಳು ಬಂದಾಗ ನೆಂಟರಿಷ್ಟರ ಮನೆಗೆ ಹೋಗುವುದು ಇದ್ದೇ ಇರುತ್ತದೆ. ಇದರಿಂದ ಸಂಬಂಧ ಸುಧಾರಿಸುವುದಲ್ಲದೆ, ಹಬ್ಬಗಳ ಸೊಗಸೂ ಹೆಚ್ಚುತ್ತದೆ. ಇಂಥ ಸಂದರ್ಭದಲ್ಲಿ ಯಾರಾದರೂ ರೋಗಕ್ಕೆ ತುತ್ತಾದರೆ ಬೇಗ ವೈದ್ಯರ ಸಲಹೆ ಪಡೆಯಿರಿ. ಯಾವುದೋ ಒಂದು ಪ್ರತ್ಯೇಕ ಆಹಾರ ಸೇವಿಸಿದ್ದರಿಂದ ಹೀಗಾಯಿತು ಎನಿಸಿದರೆ, ನಿಮ್ಮ ಮನೆಯವರು ಅಂಥ ಆಹಾರ ಸೇವಿಸದಂತೆ ಎಚ್ಚರವಹಿಸಿ.

ಚಳಿಗಾಲ ಎಂದರೆ ಕುಟುಂಬದವರ ಜೊತೆ, ಗೆಳೆಯರು, ಬಂಧುಬಾಂಧವರ ಕೂಡ ಉತ್ತಮ ಸಮಯ ಕಳೆಯುತ್ತಾ ಆರೋಗ್ಯಕರ ಆಹಾರ ಸೇವಿಸಲು ಸಕಾಲವಾಗಿದೆ. ಚಳಿಗಾಲದಲ್ಲಿ ಎಲ್ಲರೂ ಜೊತೆಗೂಡಿ ಊಟ ತಿಂಡಿ ಎಂಜಾಯ್‌ ಮಾಡುವುದು ಒಳ್ಳೆಯ ಹವ್ಯಾಸ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ, ದೈನಂದಿನ ಚಿಂತೆ, ಟೆನ್ಶನ್‌ ಎಲ್ಲಾ ಕಳೆಯುತ್ತವೆ. ಹೀಗಾಗಿ ನಿಮ್ಮ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಸಮರ್ಪಕ ಆಹಾರವನ್ನು ಆರಿಸಿ, ಅದನ್ನು ತಾಜಾ ಸೇವಿಸುತ್ತಾ ವರ್ಷದ ಈ ವಿಶಿಷ್ಟ ಋತುವನ್ನು ಹಾಯಾಗಿ ಆನಂದಿಸಿ.

ಸುನೀತಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ