ಇದೊಂದು ನೈಜ ಘಟನೆ. ಇದನ್ನು ಓದಿ ವ್ಯರ್ಥ ಧಾರ್ಮಿಕ ಸಂಪ್ರದಾಯಗಳು ಮತ್ತು ಪದ್ಧತಿಗಳ ಬಗ್ಗೆ ನಿಮ್ಮ ನಿಲುವು ಬದಲಾಗಬಹುದು. ಸುಂದರಿಯಾಗಿದ್ದ ಹಾಗೂ ಒಳ್ಳೆಯ ಗುಣಗಳುಳ್ಳ ಉಷಾಳ ತಾಯಿ ನಿಧನರಾದರು. ತಂದೆ ಮಗಳನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆಗ ಅವಳ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಅವಳನ್ನು ತಮ್ಮ ಸ್ವಂತ ಮಗಳಂತೆ ಪಾಲನೆ ಪೋಷಣೆ ಮಾಡಿದರು. ವಯಸ್ಕಳಾದ ಮೇಲೆ ಅವಳಿಗೆ ಒಬ್ಬ ಎಂಜಿನಿಯರ್‌ ಹುಡುಗನೊಂದಿಗೆ ಮದುವೆ ನಿಶ್ಚಿತಾರ್ಥವಾಯಿತು.

ನಿಶ್ಚಿತಾರ್ಥ ಚೆನ್ನಾಗಿ ನಡೆಯಿತು. ಮದುವೆಯ ಶಾಸ್ತ್ರಗಳು ಹಾಗೂ ವರದಕ್ಷಿಣೆ ಬಗ್ಗೆ ಮಾತುಕಥೆ ನಡೆಯುವಾಗ ಹುಡುಗನ ತಾಯಿ, “ನಮಗೆ ವರದಕ್ಷಿಣೆ ಬೇಡ. ನಮಗೆ ಕೋರ್ಟ್‌ ಮ್ಯಾರೇಜ್‌ ಸಾಕು. ನಾವು ಯಾವುದೇ ರೀತಿಯ ಧಾರ್ಮಿಕ ಪದ್ಧತಿಗಳನ್ನು ನಡೆಸುವುದಿಲ್ಲ,” ಎಂದರು.

ಇದನ್ನು ಕೇಳಿ ಉಷಾಳ ಮನೆಯವರ ಮಧ್ಯೆ ನಿಶ್ಶಬ್ದ ಆವರಿಸಿತು. ಯಾವುದೇ ಶಾಸ್ತ್ರಗಳಿಲ್ಲದೆ, ಧಾರ್ಮಿಕ ಪೂಜೆಗಳಿಲ್ಲದೆ ಮದುವೆ ಹೇಗಾಗುತ್ತದೆ? ಎಂದುಕೊಂಡರು.

ಅವರು ಪೂಜೆ ಹಾಗೂ ದೇವರನ್ನು ಏಕೆ ನಂಬುವುದಿಲ್ಲ ಎಂದು ಎಲ್ಲರಿಗೂ ಆಶ್ಚರ್ಯವಾಗಿತ್ತು. ವರನ ಕುಟುಂಬ ಒಳ್ಳೆಯದಾಗಿದ್ದರಿಂದ ಸಂಬಂಧವನ್ನೂ ಬಿಡುವಂತಿರಲಿಲ್ಲ. ಹೀಗಾಗಿ ಚಿಕ್ಕಮ್ಮ ಹುಡುಗನ ತಾಯಿಯ ಜೊತೆ ಮಾತಾಡುವುದು ಉಚಿತವೆಂದುಕೊಂಡರು.

“ನೀವೇಕೆ ದೇವರು, ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ನಂಬುವುದಿಲ್ಲ?” ಎಂದು ಹುಡುಗನ ತಾಯಿಯನ್ನು ಕೇಳಿದರು.

ಅವರ ಉತ್ತರ ಹೀಗಿತ್ತು, “ಅಂದಹಾಗೆ, ನನ್ನ ಮಗನಿಗೆ ದೇವರಲ್ಲಿ ಯಾವುದೇ ನಂಬಿಕೆ ಇಲ್ಲ. ನನ್ನ ಗಂಡ ಅಂದರೆ ಇವನ ತಂದೆ ತೀವ್ರ ಕಾಯಿಲೆಯಿಂದ ನರಳುತ್ತಿದ್ದರು. ಇವನು ಎಲ್ಲ ದೇವರುಗಳ ಪೂಜೆ ಮಾಡಿದ. ಹೋಮಗಳನ್ನು ಮಾಡಿಸಿದ. ಆದರೂ ತಂದೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಆಗಿನಿಂದ ನಾವು ಪೂಜೆ, ಹೋಮ, ಹವನಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ.”

ಹುಡುಗನ ತಾಯಿಯಿಂದ ಈ ಮಾತುಗಳನ್ನು ಕೇಳಿ ಉಷಾಳ ಚಿಕ್ಕಮ್ಮನಿಗೆ ಆಶ್ಚರ್ಯವಾಯಿತು. ಅವರ ಆಲೋಚನೆ ಬದಲಾಯಿತು. ಅವರು ಹುಡುಗನ ತಾಯಿ ಹೇಳಿದ ಪ್ರಕಾರ ಕೋರ್ಟ್‌ ಮ್ಯಾರೇಜ್‌ ಮತ್ತು ರಿಸೆಪ್ಶನ್‌ಗೆ ಸಿದ್ಧತೆ ನಡೆಸಿದರು.

ಉಷಾ ಯಾವುದೇ ಮದುವೆ ಶಾಸ್ತ್ರಗಳು, ಧಾರ್ಮಿಕ ಕ್ರಿಯಗಳಿಲ್ಲದೆ ವಿವಾಹವಾಗಿದ್ದರೂ ಇಂದು ಎಲ್ಲ ರೀತಿಯಲ್ಲಿ ಸುಖವಾಗಿದ್ದಾಳೆ. ಶಾಸ್ತ್ರಗಳಿಲ್ಲದೆ ಯಾವುದೇ ವಿವಾಹವನ್ನು ಭಾರತೀಯ ಸಮಾಜದಲ್ಲಿ ಅಪೂರ್ಣ ಅಥವಾ ಅಸಫಲ ಎಂದು ಭಾವಿಸಲಾಗುತ್ತದೆ. ಭಾರತೀಯ ಸಮಾಜದಲ್ಲಿ ಧಾರ್ಮಿಕ ಪದ್ಧತಿಗಳು, ಪೂಜೆಗಳು ದಿನನಿತ್ಯ ಬದುಕಿನ ಎಲ್ಲಾ ಚಿಕ್ಕಪುಟ್ಟ ಸಂದರ್ಭಗಳಲ್ಲಿ ಮಾಡಲಾಗುತ್ತದೆ. ಈ ಪದ್ಧತಿಗಳು ಶತಮಾನಗಳಿಂದ ನಡೆಯುತ್ತ ಬಂದಿವೆ. ಅವು ನಮ್ಮ ದಿನಚರಿಯಲ್ಲಿ ಹಾಸುಹೊಕ್ಕಾಗಿದ್ದು ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ.

ಈ ಧಾರ್ಮಿಕ ಪದ್ಧತಿಗಳ ಹೊರತಾಗಿ ಉಷಾಳನ್ನು ಮದುವೆಯಾಗುವ ಗಂಡಿನಂತೆ ಯೋಚಿಸುವುದೂ ಸಾಧ್ಯವಿಲ್ಲ. ಏಕೆಂದರೆ ಈ ಧಾರ್ಮಿಕ ಪದ್ಧತಿಗಳು ಕೆಟ್ಟ ಚಟದಂತೆ ಜನರ ನರನಾಡಿಗಳಲ್ಲಿ ಸೇರಿಕೊಂಡಿವೆ. ಆದರೆ ಈ ಧಾರ್ಮಿಕ ಕ್ರಿಯೆಗಳು, ಪೂಜೆಗಳು, ಹೋಮ ಹವನಗಳ ಬಗ್ಗೆ ಸಾಮಾನ್ಯ ವ್ಯಕ್ತಿಯ ಆಲೋಚನೆ, ಅವನ ದಿನಚರಿ ಮತ್ತು ಬದುಕಿನ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ?

Reethi-Rivaju-2

ಭ್ರಮೆ ಮತ್ತು ಭಯದ ನೆರಳು

ಹೋಮ, ಹವನ, ವ್ರತ, ಕಥೆ, ಪೂಜೆ ಎಲ್ಲ ಧಾರ್ಮಿಕ ಕ್ರಿಯಾಕಲಾಪಗಳಾಗಿದ್ದು, ಜನರನ್ನು ಭ್ರಮೆ ಮತ್ತು ಭಯದಲ್ಲಿ ಬಂಧಿಸುತ್ತವೆ. ಅದರಿಂದ ಜನ ಸಂತೋಷಕ್ಕೆ ಬದಲಾಗಿ ದುಃಖ ಮತ್ತು ಭಯದ ನೆರಳಲ್ಲಿ ಬದುಕುತ್ತಾರೆ. ಪೂಜೆ, ಶಾಸ್ತ್ರಗಳು, ಧರ್ಮ ಕರ್ಮಗಳ ಬೀಜವನ್ನು ನಮ್ಮ ಸಮಾಜದಲ್ಲಿ ಮಕ್ಕಳ ಬಾಲ್ಯಾವಸ್ಥೆಯಿಂದಲೇ ನೆಡಲಾಗುತ್ತದೆ. ಅವರನ್ನು ತಮ್ಮ ಎಲ್ಲಾ ಇಚ್ಛೆಗಳ ಪೂರ್ತಿಗೆ ಧಾರ್ಮಿಕ ಕ್ರಿಯೆಗಳ ಮೇಲೆ ಅವಲಂಬಿಸಲಾಗುತ್ತದೆ. ನೀವು ಮೇಲೆ ಹೇಳಿದ ದೇವತೆಯರ ಪೂಜೆ ಮಾಡಿ, ಮಂತ್ರ ಜಪಿಸಿದರೆ ಪರೀಕ್ಷೆಯಲ್ಲಿ ಪಾಸಾಗುತ್ತೀರಿ, ಇಂಟರ್‌ವ್ಯೂನಲ್ಲಿ ಯಶಸ್ಸು ಸಿಗುತ್ತದೆ, ರೋಗಗಳು ವಾಸಿಯಾಗುತ್ತವೆ. 16 ಸೋಮವಾರದ ವ್ರತ ಮಾಡಿದರೆ ಗಂಡ ದೀರ್ಘಾಯುವಾಗುತ್ತಾನೆ. ಅಂದರೆ ಬದುಕಿನ ಎಲ್ಲ ಸಣ್ಣ ಹಾಗೂ ದೊಡ್ಡ ಉದ್ದೇಶಗಳು ಧಾರ್ಮಿಕ ಕ್ರಿಯೆಗಳ ಆಧಾರದ ಮೇಲೆ ವ್ಯವಸ್ಥಿತಗೊಂಡಿವೆ.

ಒಟ್ಟಿನಲ್ಲಿ ಹುಟ್ಟಿನಿಂದ ಸಾವಿನವರೆಗೆ ಧಾರ್ಮಿಕ ಪದ್ಧತಿಗಳು, ಹೋಮ ಹವನಗಳಲ್ಲಿ ಸಿಲುಕಿದ ಮನುಷ್ಯ ಅವುಗಳ ಬಗ್ಗೆ ಎಷ್ಟು ಭಯಭೀತನಾಗಿರುತ್ತಾನೆಂದರೆ ಅವುಗಳಿಲ್ಲದೆ ಒಂದು ಹೆಜ್ಜೆಯನ್ನು ಮುಂದಿಡಲೂ ಸಹ ಹೆದರುತ್ತಾನೆ. ವ್ರತದ ಅನುಷ್ಠಾನ ಮಾಡದಿದ್ದಲ್ಲಿ ಎಲ್ಲ ಹಾಳಾಗುತ್ತದೆ. ಬದುಕಿನಲ್ಲಿ ಅಸಫಲರಾಗುತ್ತೇವೆ ಎಂದು ಭಾವಿಸುತ್ತಾರೆ. ನಿರ್ಯೋಚನೆಯಿಂದ ಈ ಧಾರ್ಮಿಕ ಕ್ರಿಯೆಗಳನ್ನು ತಮ್ಮ ಜೀವನದ ಅಭಿನ್ನ ಭಾಗವನ್ನಾಗಿ ಮಾಡಿಕೊಳ್ಳುತ್ತಾರೆ. ಯಾರು ಈ ಧಾರ್ಮಿಕ ಪದ್ಧತಿಗಳನ್ನು ಒಪ್ಪುವುದಿಲ್ಲವೇ ಅವರನ್ನು ನಾಸ್ತಿಕರು ಹಾಗೂ ಅಧರ್ಮಿಗಳೆಂದು ಭಾವಿಸಲಾಗುತ್ತದೆ. ಪ್ರೈವೇಟ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ 32 ವರ್ಷದ ಆರತಿ ಈ ಬಗ್ಗೆ ಹೀಗೆ ಹೇಳುತ್ತಾರೆ, “ನಾನು ಇಂತಹ ವ್ರತಗಳು, ಪೂಜೆಗಳನ್ನು ಮಾಡುವುದಿಲ್ಲ. ಏಕೆಂದರೆ, ಇವು ವ್ಯರ್ಥ ಆಡಂಬರದ ಪ್ರಕ್ರಿಯೆಯಾಗಿದ್ದು ನಮ್ಮನ್ನು ಹೆದರಿಸುವುದಲ್ಲದೆ ನಮ್ಮ ಮನಸ್ಸಿನಿಂದ ವಾಸ್ತವಿಕ ಸಮಸ್ಯೆ ದೂರ ಮಾಡುತ್ತದೆ. ವ್ಯರ್ಥ ಭ್ರಮೆಯನ್ನೂ ಉಂಟು ಮಾಡುತ್ತದೆ. ಒಬ್ಬ ವಿದ್ಯಾರ್ಥಿ ಓದುವುದನ್ನು ಬಿಟ್ಟು ಪೂಜೆ, ವ್ರತ, ಉಪವಾಸಗಳಲ್ಲಿ ಮಗ್ನನಾಗುತ್ತಾನೆ. ಪತಿ ಪತ್ನಿಯರು ಪರಸ್ಪರರ ಸಂಬಂಧಗಳಲ್ಲಿ ಸಾಮಂಜಸ್ಯ ಮತ್ತು ಆತ್ಮೀಯತೆ ಇಟ್ಟುಕೊಳ್ಳುವ ಬದಲು ಜಾತಕಗಳನ್ನು ಒಟ್ಟುಗೂಡಿಸುವುದು, ಮಂತ್ರ, ತಂತ್ರ, ದಾನ ಧರ್ಮಗಳನ್ನು ಆಶ್ರಯಿಸುತ್ತಾರೆ.

ಅವರು ಒಂದು ಬಾರಿ ಇವರ ಜಾಲದಲ್ಲಿ ಸಿಕ್ಕುಬಿಟ್ಟರೆ ಮುಂದೆ ಅವನ್ನು ಬಿಡಲು ಹೆದರುತ್ತಾರೆ. ಆಗ ಆ ಜಾಲಗಳಲ್ಲಿ ಸಿಲುಕಿರುವುದು ಬಿಟ್ಟರೆ ಬೇರೆ ಉಪಾಯ ಇರುವುದಿಲ್ಲ. ಅದರಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಹೀಗಿರುವಾಗ ಈ ವ್ಯರ್ಥ ಪದ್ಧತಿಗಳಲ್ಲಿ ಸಿಕ್ಕಿಕೊಂಡು ಬದುಕನ್ನು ಭಯದ ನೆರಳಲ್ಲಿ ಸಾಗಿಸುವುದರಿಂದ ಏನು ಲಾಭ?

Reethi-Rivaju-1

ಆತ್ಮವಿಶ್ವಾಸ ಹಾಳಾಗುತ್ತದೆ

ಪೂಜೆಗಳು, ಧಾರ್ಮಿಕ ಪದ್ಧತಿಗಳ ಹಿಡಿತಕ್ಕೆ ಸಿಲುಕಿದ ಮನುಷ್ಯ ಯಾವ ಹಂತದವರೆಗೆ ಅವುಗಳ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾನೆಂದರೆ ತನ್ನ ಜೀವನದ ಉದ್ದೇಶಗಳ ಪ್ರಾಪ್ತಿಗಾಗಿ ಮಾಡುವ ಪ್ರಯತ್ನಗಳನ್ನು ಕೈಬಿಡುತ್ತಾನೆ. ಸಂಪೂರ್ಣವಾಗಿ ಪೂಜೆಗಳನ್ನು ಅವಲಂಬಿಸುತ್ತಾನೆ. ಆ ಉದ್ದೇಶಗಳೆಂದರೆ ಉಚ್ಚ ಶಿಕ್ಷಣ ಪಡೆಯುವುದು ಇರಬಹುದು, ಉತ್ತಮ ಆರೋಗ್ಯ ಇರಬಹುದು, ಮದುವೆ, ಸಂತಾನಪ್ರಾಪ್ತಿ ಅಥವಾ ಮನೆ ನಿರ್ಮಾಣ ಇರಬಹುದು. ಇವೆಲ್ಲವುಗಳಿಗಾಗಿ ಪುರೋಹಿತರು, ಧರ್ಮಗುರುಗಳ ಆಸರೆ ಪಡೆಯುತ್ತಾನೆ ಮತ್ತು ಪೂಜೆ, ಮಂತ್ರ, ತಂತ್ರಗಳಂತಹ ಉಪಾಯಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ರೋಗಪೀಡಿತ ವ್ಯಕ್ತಿಯ ಆರೋಗ್ಯ ಸುಧಾರಣೆಗೆ ಡಾಕ್ಟರ್‌ರಿಂದ ಚಿಕಿತ್ಸೆ ಪಡೆಯುವ ಬದಲು ಮಂತ್ರ ತಂತ್ರಗಳು ಮತ್ತು ದಾನ ಧರ್ಮಗಳಲ್ಲಿ ತನ್ನ ಅಮೂಲ್ಯ ಸಂಪತ್ತನ್ನು ಕಳೆದುಕೊಳ್ಳುತ್ತಾನೆ.

ಇವೆಲ್ಲವುಗಳ ನಂತರ ಏನೂ ಒಳ್ಳೆಯದಾಗದಿದ್ದರೆ ಸಂಪೂರ್ಣವಾಗಿ ಕುಸಿದುಹೋಗುತ್ತಾರೆ. ಕೊನೆಗೆ ಪಶ್ಚಾತ್ತಾಪ ಪಡುವುದು ಬಿಟ್ಟರೆ. ಏನೂ ಉಳಿದಿರುವುದಿಲ್ಲ. ಕಪಟಿ ಪುರೋಹಿತರು ಹಾಗೂ ಸ್ವಾರ್ಥಿ ಸಾಧುಗಳ ಹೊಟ್ಟೆ ಪೂಜೆಯ ಖರ್ಚುಗಳಲ್ಲಿ ಧರ್ಮಬೀರುಗಳ ಪರಿಶ್ರಮದ ಸಂಪಾದನೆ ಹಾಳಾಗುತ್ತದೆ. ಅವರು ಜೀವಮಾನವಿಡೀ ಸಾಲಗಾರರಾಗಿರುತ್ತಾರೆ. ಇನ್ನೊಂದು ಕಡೆ ಸೌಲಭ್ಯಗಳನ್ನು ಅನುಭವಿಸುತ್ತಾ ಕಪಟ ಪುರೋಹಿತರು ಮುಗ್ಧ ಜನರನ್ನು ಧಾರ್ಮಿಕ ಪದ್ಧತಿಗಳ ಜಾಲದಲ್ಲಿ ಸಿಲುಕಿಸಿ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುತ್ತಾರೆ.

ಆಧುನಿಕ ಸಮಾಜದಲ್ಲಿ ವ್ಯರ್ಥ ಧಾರ್ಮಿಕ ಕ್ರಿಯೆಗಳು ಹಾಗೂ ಪದ್ಧತಿಗಳಿಂದ ಮುಕ್ತಿ ಪಡೆಯುವ ಅಗತ್ಯವಿದೆ. ಏಕೆಂದರೆ ಉಷಾ ಹಾಗೂ ಆಕೆಯ ಗಂಡನ ತರಹ ಯಾವುದೇ ಭಯ ಮತ್ತು ಭ್ರಮೆ ಇಲ್ಲದೆ ಆತ್ಮವಿಶ್ವಾಸದಿಂದ ಬದುಕುವಂತಾಗಬೇಕು. ಅದಕ್ಕಾಗಿ ಎಲ್ಲರೂ ಜಾಗೃತರಾಗಿರಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ