ನನ್ನಾಕೆ ಶ್ರೀಮಂತ ಮನೆತನದಿಂದ ಬಂದವಳು. ಆದರೆ ಒಂದು ದಿನ ನನಗಿಷ್ಟವಾಗದ ಮಾತುಗಳನ್ನು ಅವಳಿಂದ ಕೇಳಲೇಬೇಕಾಗಿತ್ತು. ಬಹಳ ಪ್ರಯಾಸದಿಂದ ಬ್ಯಾಂಕಿನಲ್ಲಿ ಸಾಲ ಪಡೆದು 2 ಕೋಣೆಯ ಒಂದು ಮನೆಯನ್ನು ನಗರದ ಹೊರಭಾಗದಲ್ಲಿ ನಾನು ಖರೀದಿಸಿದ್ದೆ. ಅದು ಕೊಂಚ ಅಗ್ಗವಾಗಿದ್ದರಿಂದ ಖರೀದಿಸಿದ್ದೆ. ಇಲ್ಲದಿದ್ದರೆ ಜೀವಮಾನವಿಡೀ ಬಾಡಿಗೆ ಮನೆಯಲ್ಲೇ ಕಳೆಯಬೇಕಾಗಿತ್ತು. ಗೃಹಪ್ರವೇಶಕ್ಕೆ ನನ್ನ ಒಬ್ಬರೇ ಅತ್ತೆ ವಕ್ಕರಿಸಿದ್ದರು. ಅವರ ಸಲಹೆಯಂತೆ ಸುತ್ತಮುತ್ತಲಿನ ಮನೆಯವರನ್ನು ಪರಿಚಯಕ್ಕಾಗಿ ಕರೆಯಲಾಯಿತು. ಈಗಂತೂ ಸುಮ್ಮನೆ ಕರೆದುಬಿಟ್ಟರೆ ಪರಿಚಯ ಆಗೋದಿಲ್ಲ. ಅವರಿಗೆಲ್ಲಾ ಭೂರಿ ಭೋಜನದ ವ್ಯವಸ್ಥೆ ಮಾಡಲಾಯಿತು. ಸಲಹೆ ಕೊಟ್ಟ ಅತ್ತೆಗೆ 1 ಪೈಸೆ ಕೂಡಾ ಖರ್ಚಾಗಲಿಲ್ಲ , ಅದರೆ ನನ್ನ ಸಾವಿರಾರು ರೂಪಾಯಿ ಕೈಬಿಟ್ಟುಹೋಯಿತು.

ನೆರೆಹೊರೆಯವರ ಬಳಿ ನನ್ನಾಕೆ ನನ್ನ ಬಗ್ಗೆ ಹೇಳೋದು ಬಿಟ್ಟು ತನ್ನ ತವರು ಮನೆಯ ಬಗ್ಗೆ ಸುಮಧುರವಾಗಿ ವರ್ಣಿಸುತ್ತಿದ್ದಳು. ಬೇರೇನೂ ಮಾರ್ಗವಿಲ್ಲದೆ ನಾನು ತೆಪ್ಪಗೆ ಕೇಳುತ್ತಿದ್ದೆ.

ನನ್ನಾಕೆ ಯಾರಿಗೋ ಹೇಳುತ್ತಿದ್ದಳು, “ಮದುವೇಲಿ ನನ್ನಮ್ಮ 10 ಸವರನ್‌ ಸರ ಕೊಟ್ರು.  4 ಸವರನ್‌ ಬಳೆಗಳು, 5 ಸವರನ್ ತಾಳಿ… ಇನ್ನೂ ಏನೇನೋ ಕೊಟ್ರು…” ಅವಳು ಒಡವೆಗಳನ್ನು ಮೈಮೇಲೆ ಹೇರಿಕೊಂಡು ನಡೆದಾಡುವ ಅಂಗಡಿಯಂತೆ ಕಾಣುತ್ತಿದ್ದಳು. ನನಗಂತೂ 1 ಸಣ್ಣ ಉಂಗುರವನ್ನೂ ಕೊಟ್ಟಿರಲಿಲ್ಲ. ನಾನು ಯಾರ ಬಳಿ ಹೇಳಿಕೊಳ್ಳಲಿ? ಮಗಳ ಮೇಲೆ ಅತ್ತೆಯ ಬಳಿ ದೂರು ಕೊಡಲು ಯಾವ ಅಳಿಯನಿಗಾದರೂ ತಾಕತ್ತಿದೆಯೇ? ನಾನಂತೂ ಈ 2 ಕೋಣೆಯ ಮನೆಯಲ್ಲಿ ಖುಷಿಯಾಗಿದ್ದೆ. ಅಂದು ರಾತ್ರಿ ಪಾರ್ಟಿ ಮುಗಿದ ಮೇಲೆ ನಾನು ಸುಸ್ತಾಗಿ ಮಲಗಲು ಹೋದಾಗ ನನ್ನಾಕೆ ಹೇಳಿದಳು, “ಈವತ್ತಂತೂ ನನಗೆ ಬಹಳ ನಾಚಿಕೆ ಆಗೋಯ್ತು,”

“ಯಾಕೆ? ಏನು ವಿಷಯ…?”

“ಈ ಡಿಸೈನಿನ ಒಡವೆಗಳು ಇಲ್ಲಿ ಸಿಗೋದಿಲ್ಲ, ಎಲ್ಲಿಂದ ತಂದ್ರಿ ಎಂದು ಎಲ್ಲರೂ ಕೇಳಿದರು. ಕೊನೆಗೆ ನಾನು ಇದೆಲ್ಲಾ ನಮ್ಮಮ್ಮ ಕೊಟ್ಟಿದ್ದು ಅಂತ ಹೇಳಲೇಬೇಕಾಯಿತು.”

“ಸರಿ, ಅದಕ್ಕೇನೀಗ?”

“ ನೀವು ಬೇಜಾರು ಮಾಡಿಕೊಳ್ಳಲ್ಲ ಅಂದ್ರೆ ಒಂದು ಮಾತು ಹೇಳ್ಲಾ?”

“ ಹೇಳು”

“ ನೀವು ಹೇಳೂಂದ್ರೆ ಹೇಳ್ತೀನಿ,”

“ ಹೇಳೂಂತ ಹೇಳಿದ್ನಲ್ಲಾ…?”

“ನೀವು ಸ್ವಲ್ಪ ಒಡವೆಗಳನ್ನು ನನಗೆ ಕೊಡಿಸಿ. ಆಗ ನಾನು ನೀವು ತಂದುಕೊಟ್ಟ ಒಡವೆಗಳು ಅಂತ ಎಲ್ಲರ ಬಳಿ ಹೇಳ್ಕೋಬಹುದು.”

ನಾನು ವ್ಯಂಗ್ಯವಾಗಿ, “ಖಂಡಿತ ಕೊಡಿಸ್ತೀನಿ… ಖಂಡಿತ ಕೊಡಿಸ್ತೀನಿ. ಆದರೆ ಮನೆಯ ಸಾಲದ ಕಂತುಗಳನ್ನು ಯಾರು ತೀರಿಸ್ತಾರೆ? ನಿಮ್ಮ… ”

“ಅರೆ, ನಾನು ಒಡವೆಗಳ ಬಗ್ಗೆ ಮಾತಾಡಿದ್ರೆ ನೀವು ಮನೆ ಸಾಲದ ಪುರಾಣ ಬಿಚ್ಚಿದ್ರಿ,” ಕೋಪದಿಂದ ಅವಳು ಮಗ್ಗುಲು ಬದಲಿಸಿದಳು.

`ಹುಂ ನನ್ನ ಹಣೆಯಲ್ಲಿ ಶಾಂತಿ ಅನ್ನೊ ಪದ ಬರೆದಿಲ್ಲ. ನನ್ನ ಕಷ್ಟ ಯಾರ ಬಳಿ ಹೇಳಿಕೊಳ್ಳಲಿ,’ ಎಂದು ಯೋಚಿಸುತ್ತಾ ಮಲಗಿದಾಗ ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ.

ರಾತ್ರಿ ಎದೆಯ ಮೇಲೆ ಭಾರದ ವಸ್ತು ಬಿದ್ದಂತಾದಾಗ ನನ್ನ ನಿದ್ದೆ ಹಾಳಾಯಿತು. ನನ್ನ ಎದೆಯ ಮೇಲೆ ಕುಳಿತು ನನ್ನಾಕೆ ಯಾವುದೋ ಟ.ವಿ ಸೀರಿಯಲ್ ನೋಡುತ್ತಿದ್ದಳು, “ರೀ, ಏನು ಯೋಚನೆ ಮಾಡಿದ್ರಿ?” ಎಂದಳು.

“ಯಾವ ವಿಷಯ?”

“ಅದೇ… ಒಡವೆ ಬಗ್ಗೆ.”

“ಆಗ್ಲೇ ಹೇಳಲಿಲ್ವಾ, ಸುಮ್ಮನೆ ತಲೆ ತಿನ್ನಬೇಡ.”

“ನಾನು ಕಡೇ ಬಾರಿ ಕೇಳ್ತಿದ್ದೀನಿ, ಎಷ್ಟು ದಿನಾಂತ ತೌರು ಮನೆಯವರ ಒಡವೆಗಳನ್ನು ಹಾಕಿಕೊಳ್ಳೋದು? ನಿಮಗೂ ಜವಾಬ್ದಾರಿ ಅನ್ನೋದು ಬೇಡ್ವಾ?”

“ಈಗ ಮಲಕ್ಕೊ, ಬೆಳಗ್ಗೆ ಮಾತಾಡೋಣ.”

“ಇಲ್ಲ, ಈಗ್ಲೆ ತೀರ್ಮಾನ ಆಗ್ಬೇಕು, ಇಲ್ಲಾಂದ್ರೆ…”

“ಇಲ್ಲಾಂದ್ರೆ?”

“ಇಲ್ಲಾಂದ್ರೆ ನಾನು ಹೋಗ್ತೀನಿ,” ಅವಳು ಎದ್ದು ಅಮ್ಮನ ಬಳಿ ಮಲಗಲು ಹೋದಳು.

ಬೆಳಗ್ಗೆ ಟಿಫನ್‌ಗೆ ಸೀದುಹೋಗಿದ್ದ ಬ್ರೆಡ್‌ ಮತ್ತು ಸೀದು ಹೋಗಿದ್ದ ಹಾಲು ಬೆರೆಸಿದ ಕಾಫಿ ಸಿಕ್ಕಿತು.

ಮುಂದಿನ 7 ದಿನಗಳು ನನಗೆ ಅದೇ ಟಿಫನ್‌ ಗತಿಯಾಯಿತು. ನನ್ನಾಕೆ ಮತ್ತು ಅವಳ ತಾಯಿ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು. ನಾನು ಗೋಡೆಗೆ ತಲೆ ಚಚ್ಚಿಕೊಳ್ಳುತ್ತಿದ್ದೆ. ಕೊನೆಗೆ ಬೇಸತ್ತು ಅವಳೊಡನೆ ಜಗಳ ಆಡಿಬಿಡೋಣ ಎಂದುಕೊಂಡೆ.  ಆದರೆ ಮರುಕ್ಷಣವೇ ಹೊಳೆಯಿತು. ಇದುವರೆಗೆ ಒಬ್ಬ ಗಂಡನಾದರೂ ಹೆಂಡತಿಯ ಜೊತೆ ಜಗಳ ಆಡಿ ಗೆದ್ದಿದ್ದಾನೆಯೇ? ಆದ್ದರಿಂದ ನಾನು ಸೋಲೊಪ್ಪಿಕೊಂಡು ಅವಳ ಕಿವಿಯಲ್ಲಿ ಉಸುರಿದೆ, “ಇವತ್ತು ಸಂಜೆ ನಿನ್ನಾಸೆ ಪೂರೈಸುತ್ತದೆ.”

“ನಿಜವಾಗ್ಲೂ?” ಎಂದು ಹೇಳಿ ಅವಳು ಭರತನಾಟ್ಯ ಮಾಡತೊಡಗಿದಳು. ನೆಲ ಏನಾದರೂ ಬಿರುಕುಬಿಟ್ಟರೆ ಎಂದು ನನಗೆ ಭಯವಾಯಿತು.

ನನ್ನ ವಾಗ್ದಾನವನ್ನು ಸಂಜೆ ಪೂರೈಸಿದೆ. ನನ್ನ ಹೆಂಡತಿಯನ್ನು ಕೋಣೆಗೆ ಕರೆದು ಸುಮಾರು ಅರ್ಧ ಕೆ.ಜಿ.ಯಷ್ಟು ಒಡವೆಗಳನ್ನು ಅವಳ ಎದುರಿಗೆ ಇಟ್ಟೆ. ಅವುಗಳಲ್ಲಿ ನೆಕ್ಲೇಸ್‌, ಬಳೆಗಳು, ಬೈತಲೆ ಬೊಟ್ಟು, ಸರ, ಡಾಬು ಇತ್ಯಾದಿ ಇದ್ದವು. ಅವನ್ನೆಲ್ಲಾ ನೋಡಿ ನನ್ನಾಕೆ ನನ್ನನ್ನು ಬಿಗಿದಪ್ಪಿಕೊಂಡಳು.

ಅವಳ ಅಪ್ಪುಗೆಯಲ್ಲಿ ನನ್ನ ಉಸಿರೇನಾದರೂ ನಿಂತುಹೋದರೆ ಎಂದು ನನಗನ್ನಿಸಿತು. ನನ್ನಾಕೆ ಎಲ್ಲ ಒಡವೆಗಳನ್ನು ಧರಿಸಿಕೊಂಡು ತನ್ನ ತಾಯಿಗೆ ತೋರಿಸಲು ಓಡಿಹೋದಳು. ನಾನು ಮಾತಾಡದೆ ಪುಸ್ತಕ ಓದುವುದರಲ್ಲಿ ತಲ್ಲೀನನಾದೆ ಎಲ್ಲರ ಪತ್ನಿಯರೂ ಹೀಗೇ ಇದ್ದರೆ ಎಲ್ಲ ಪತಿಯಂದಿರೂ ಹಾರ್ಟ್‌ ಅಟ್ಯಾಕ್‌ಆಗಿ ಸಾಯುತ್ತಾರೆಂದು ನನಗೆ ಅನ್ನಿಸಿತು.

ಇರಲಿ, ಅಂತೂ ನನ್ನಾಕೆ ನಾನು ತಂದುಕೊಟ್ಟ ಒಡವೆಗಳಿಂದ ಬಹಳ ಖುಷಿಯಾಗಿದ್ದಳು. ಅವಳು ತನ್ನ ಹಳೆಯ ಒಡವೆಗಳನ್ನು ಬಿಚ್ಚಿ ತೆಗೆದಿಟ್ಟು ನಾನು ತಂದುಕೊಟ್ಟ  ಒಡವೆಗಳನ್ನು ಮೈಮೇಲೆ ಹೇರಿಕೊಂಡಿದ್ದಳು.

ಒಂದು ರಾತ್ರಿ ಯಾರೋ ಬಾಗಿಲು ತಟ್ಟಿದರು. ನಮ್ಮತ್ತೆ ಬಾಗಿಲು ತೆರೆದರು. ತೆರೆದ ಕೂಡಲೇ ಧಡಾರೆಂದು 3-4 ಡಕಾಯಿತರು ಮನೊಳಗೆ ನುಗ್ಗಿದರು. ನನ್ನಾಕೆ ಸೀರೆಯಿಂದ ಒಡವೆಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದಳು. ಅತ್ತೆ ಕೈ ಮುಗಿದು ಬಿಟ್ಟುಬಿಡಿರೆಂದು ಕೇಳಿಕೊಳ್ಳುತ್ತಿದ್ದರು.

ಒಬ್ಬ ಡಕಾಯಿತ ಹೇಳಿದ, “ಎಲ್ಲಾ ಒಡವೆಗಳನ್ನು ಬಿಚ್ಚಿ ಕೊಡಿ. ಇಲ್ಲಾಂದ್ರೆ ಎಲ್ರೂ ಸಾಯ್ತೀರಿ.”

ನಾನು ಕೈಮುಗಿದು ಹೆಂಡತಿಗೆ ಹೇಳಿದೆ, “ಬೇಗ ಕೊಟ್ಬಿಡು, ಮಾರಾಯ್ತಿ ಇಲ್ಲಾಂದ್ರೆ ಸಾಯಬೇಕಾಗುತ್ತೆ.”

“ನಾನು ಕೊಡಲ್ಲಾರಿ,” ಅವಳು ಹಟ ಮಾಡಿದಳು.

ಒಬ್ಬ ಡಕಾಯಿತ ಒಳ್ಳೆಯವನಿರಬೇಕು. ಅವನು ಹೇಳಿದ, “ನಾನು ಬ್ರಹ್ಮಚಾರಿ. ಹೆಂಗಸರ ಮೇಲೆ ಕೈ ಮಾಡಲ್ಲ. ಬೇಗನೆ ಎಲ್ಲಾ ಒಡವೆಗಳನ್ನು ಕೊಟ್ಟು ಬಿಡಿ. ಇಲ್ಲದಿದ್ರೆ, ಇಲ್ಲೇ ಈಗಲೇ ನನ್ನ ಬ್ರಹ್ಮಚರ್ಯ ವ್ರತ ಮುರಿದು ಬೀಳತ್ತೆ, ಹುಷಾರ್‌!”

ಅವನ ಬೆದರಿಕೆ ಕೇಳಿ ನನ್ನ ಹಣೆಯಲ್ಲಿ ಬೆವರೊಡೆಯಿತು. ಇನ್ನೊಬ್ಬ ಡಕಾಯಿತ ನಮ್ಮತ್ತೆಯ ಕುತ್ತಿಗೆಗೆ ಚಾಕು ಹಿಡಿದಿದ್ದ. ಈಗ ನನ್ನಾಕೆ ಜೋರಾಗಿ ಅಳತೊಡಗಿದಳು. ನಾನು ಒಳಗೊಳಗೇ ಖುಷಿಪಡುತ್ತಿದ್ದೆ. ಅತ್ತೆ ಥರಥರ ನಡುಗುತ್ತಿದ್ದರು.

3ನೇ ಡಕಾಯಿತ ನನ್ನಾಕೆಗೆ “ಶ್‌! ಸದ್ದು… ಸದ್ದು… ಇಲ್ಲಾಂದ್ರೆ ನಿನ್ನ ಕತ್ತು ಕುಯ್ದುಬಿಡ್ತೀನಿ,” ಎಂದ.

ನನ್ನ ಹೆಂಡತಿ ಭಯದಿಂದ ಅಳು ನಿಲ್ಲಿಸಿದಳು. ನಾನು ಡಕಾಯಿತರಿಗೆ ಕೈಮುಗಿದು ನನ್ನ ಹೆಂಡತಿಯ ಮೈಮೇಲಿಂದ ಒಂದೊಂದೇ ಒಡವೆಗಳನ್ನು ಬಿಚ್ಚಿಕೊಟ್ಟೆ.

ಡಕಾಯಿತರು ಒಡವೆಗಳನ್ನು ತೆಗೆದುಕೊಂಡು ಓಡಿಹೋದರು. ಅವರು ಹೋದ ಕೂಡಲೇ ತಾಯಿ ಮಗಳು ಇಬ್ಬರೂ ಜೋರಾಗಿ ಅಳತೊಡಗಿದರು.

ಮರುದಿನ ಬೆಳಗ್ಗೆ ಅತ್ತೆ ಹೇಳಿದರು, “ಅಳಿಯಂದ್ರೇ, ಪೋಲಿಸರಿಗೆ ದೂರು ಕೊಡಿ.”

ನನ್ನ ಹೆಂಡತಿಯೂ ಅದನ್ನೇ ಹೇಳಿದಳು. ಆಗ ನಾನು, “ಒಂದು ವೇಳೆ ನಾನು ಪೋಲಿಸರಿಗೆ ದೂರು ಕೊಟ್ಟರೆ ಅವರು ಮೊದಲು ಕೇಳೋದು ಅರ್ಧ ಕೆ.ಜಿ. ಚಿನ್ನ ಖರೀದಿಸೋ ಅಷ್ಟು ದುಡ್ಡು ನಿನ್ನ ಬಳಿ ಹೇಗೆ ಬಂತೂಂತ?” ಎಂದೆ.

ಇಬ್ಬರೂ ಅದನ್ನು ಒಪ್ಪಿಕೊಂಡರು, ಆದರೆ ಲಕ್ಷಾಂತರ ರೂ. ಬೆಲೆ ಬಾಳುವ ಒಡವೆಗಳು ಹೋಗಿದ್ದಕ್ಕೆ ಅವರಿಗೆ ಬಹಳ ದುಃಖವಾಗಿತ್ತು. ಮನೆ ತುಂಬಾ ಗೋಳಾಟವಿತ್ತು. ನಾನು ಯಾರಿಗೂ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ನನ್ನ ಹೆಂಡತಿ ನಾನು ಯಾಕಾದರೂ ಒಡವೆಗಳಿಗಾಗಿ ಇವರನ್ನು ಪೀಡಿಸಿ ಇವರು ಸಾಲ ತಗೊಂಡಾದ್ರೂ ತಂದುಕೊಡೋ ಹಾಗೇ ಮಾಡಿದ್ನೋ? ಈಗ ಇರುವ ಮನೆ ಸಾಲದ ಕಂತು ಕಟ್ತಾರೋ  ಒಡವೆ ಸಾಲದ ಕಂತು ಕಟ್ತಾರೋ ಎಂದು ತನ್ನನ್ನು ಬೈದುಕೊಳ್ತಿದ್ಲು.

ನನ್ನ ಮುಖ ಕಳೆಗುಂದಿತ್ತು. ಆದರೆ ಯಾರಿಗೆ ತಾನೇ ಹೇಳುವುದು? ಇಡೀ ಮನೆ ದುಃಖದಲ್ಲಿ  ಮುಳುಗಿತ್ತು. ಈ ದುಬಾರಿ ದಿನಗಳಲ್ಲಿ ಇಷ್ಟು ಒಡವೆಗಳನ್ನು ಕಳೆದುಕೊಂಡ ಸಂಕಟ ಇಬ್ಬರಲ್ಲೂ ಇತ್ತು. 1 ವಾರವಾದರೂ ದುಃಖ ಕಡಿಮೆಯಾಗಿರಲಿಲ್ಲ. ನಾನು ಒಂದು ದಿನ ಅತ್ತೆ ಹಾಗೂ ಹೆಂಡತಿಗೆ ಹೇಳಿದೆ, “ ನಾನು ನಿಮ್ಮಿಬ್ಬರಿಗೂ ಒಂದು ಮಾತು ಹೇಳಬೇಕು.”

“ನಮಗೆ ನಿಮ್ಮ ಭಾಷಣ ಬೇಡ…. ನಾವು ಏನೂ ಕೇಳೋಕೆ ತಯಾರಿಲ್ಲ,” ಅಮ್ಮ ಮಗಳು ಒಂದೇ ಸ್ವರದಲ್ಲಿ ಹೇಳಿದರು.

ನಾನು ತೆಪ್ಪಗೆ ಮೇಲೆ ಸುತ್ತುತ್ತಿದ್ದ ಫ್ಯಾನ್‌ ನೋಡುತ್ತಾ ಮಲಗಿದ್ದೆ. ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ. ನನ್ನಾಕೆ ಜೋರಾಗಿ ಕಿರುಚಿದಾಗ ನನಗೆ ಎಚ್ಚರವಾಯಿತು. ಬೆಳಕಾಗಿತ್ತು. ನಾನು ಗಾಬರಿಯಿಂದ ಥಟ್ಟನೆ ಮೇವೆದ್ದಾಗ ನನ್ನ ಲುಂಗಿ ಕಾಲಿಗೆ ಸಿಕ್ಕಿಕೊಂಡಿತು. ನಾನು ಮುಗ್ಗರಿಸಿ ಬಿದ್ದು ಮೂಳೆ ಮುರಿದುಕೊಳ್ಳಬೇಕಾಗಿತ್ತು. ಹಾಗೂ ಹೀಗೂ ಸಾವರಿಸಿಕೊಂಡು ಆಚೆ ಓಡಿ ನೋಡಿದರೆ, ಗೋಡೆಯ ಬಳಿ ಅತ್ತೆ ಹಾಗೂ ನನ್ನಾಕೆ ಅಡಗಿಸಿಟ್ಟ ಯಾವುದೋ ಬಾಂಬ್‌ ನೋಡುತ್ತಿರುವಂತೆ ನಿಂತಿದ್ದರು. ನಾನು ಹತ್ತಿರ ಹೋಗಿ ನೋಡಿದಾಗ ಒಂದು ಬ್ಯಾಗ್‌ನಲ್ಲಿ ಒಡವೆಗಳಿದ್ದವು. ಅತ್ತೆ ಮತ್ತೆ ಮತ್ತೆ ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದರು.

“ನಾನು ದೇವರಿಗೆ ಹರಕೆ ಹೊತ್ತುಕೊಂಡಿದ್ದೆ, ಅದಕ್ಕೇ ಒಡವೆಗಳು ಸಿಕ್ಕಿದ್ದು,” ನನ್ನ ಹೆಂಡತಿ ಹೇಳಿದಳು. ನಾನು ಮಾತಾಡಲಿಲ್ಲ. ಇಬ್ಬರೂ ಒಡವೆಗಳನ್ನು ಎಣಿಸಿದರು. ಒಂದು ಒಡವೆಯೂ ಕಡಿಮೆ ಇರಲಿಲ್ಲ. ಎಲ್ಲ ಸರಿಯಾಗಿಯೇ ಇತ್ತು.

“ಪಾಪ ಕಳ್ಳರಿಗೆ ಪ್ರಾಯಶ್ಚಿತ ಆಗಿರಬೇಕು ಅದಕ್ಕೇ ಅವರು ಎಲ್ಲಾ ಒಡವೆಗಳನ್ನು ವಾಪಸ್‌ ಮಾಡಿದ್ದಾರೆ,” ನನ್ನಾಕೆ ಹೇಳಿದಳು.

ನನಗೆ ಖುಷಿಯಾಗಿತ್ತು, ಮನೆಗೆ ಸಂತಸ  ವಾಪಸ್ಸಾಗಿತ್ತು. ಇದ್ದಕ್ಕಿದ್ದಂತೆ ನನ್ನಾಕೆ ಬೆಚ್ಚಿಬಿದ್ದಳು. ಆ ಬ್ಯಾಗಿನಲ್ಲಿ ಒಂದು ಪತ್ರ ಇತ್ತು.  ಪತ್ರ ಬಿಡಿಸಿ ಓದತೊಡಗಿದಳು. ಅದರಲ್ಲಿ ಹೀಗೆ ಬರೆದಿತ್ತು, “ಥೂ, ನಾಚ್ಕೆ ಆಗಲ್ವಾ ನಿಮ್ಮ ಜನ್ಮಕ್ಕೆ, ಡಕಾಯಿತರಿಗೇ ಮೋಸ ಮಾಡ್ತೀರಾ? ತುಂಬೆ ಗಿಡಕ್ಕೆ ನೇಣು ಹಾಕ್ಕೊಳ್ಳಿ. ಎಲ್ಲಾ ಒಡವೆಗಳು ನಕಲಿ. ಬರೀ ಗೋಲ್ಡ್ ಪಾಲಿಶ್‌ ಒಡವೆಗಳನ್ನು ಹಾಕ್ಕೊತೀರಾ… ಥೂ ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕ. ಹಾಳು ಬಾವೀಲಿ ಬಿದ್ದು ಸಾಯ್ರೀ.”

ಆ ಪತ್ರ ಓದಿ ನನ್ನ ಹೆಂಡತಿ ನನ್ನತ್ತ ನೋಡಿದಳು, ಅತ್ತೆ ನಿಧಾನವಾಗಿ ತಮ್ಮ ಕುತ್ತಿಗೆ ನನ್ನತ್ತ ತಿರುಗಿಸಿದರು. ನಾನು ಬಹಳ ಸಂಯಮದಿಂದ ಹೇಳಿದೆ, “ನಾನು ಆವತ್ತು ರಾತ್ರಿನೇ ನಿಮಗೆ ಹೇಳಬೇಕೂಂತಿದ್ದೆ, ಇವೆಲ್ಲಾ ನಕಲಿ ಒಡವೆಗಳು, ದುಃಖಿಸಬೇಡೀಂತ, ನೀವು ಕೇಳಿದ್ರೆ ತಾನೇ……”

ನನ್ನ ಹೆಂಡತಿ ನನ್ನ ಪೆಚ್ಚು ಮೋರೆ ಕಂಡು ಅಮ್ಮನಿಗೆ ಹೇಳಿದಳು, “ಒಂದು ವೇಳೆ ಈ ನಕಲಿ ಒಡವೆಗಳು ನನ್ನ ಮೈಮೇಲೆ ಇರದಿದ್ರೆ ಆ ಢಕಾಯಿತರು ಅಸಲಿ ಒಡವೆಗಳನ್ನು ತಗೊಂಡು ಹೋಗ್ತಿದ್ರು. ಇವರು ಹೀಗೆ ಮಾಡಿದ್ರಿಂದ ಅಸಲಿ ಒಡವೆಗಳು ಉಳ್ಕೊಂಡ್ವು, ಅಲ್ವಾಮ್ಮ?”

“ಹೌದು… ಹೌದು,” ಅತ್ತೆ ಹೇಳಿದರು.

“ನೀನು ಸಂತೋಷವಾಗಿರಬೇಕೂಂತ ನನ್ನಾಸೆ, ನನ್ನ ಪ್ರಾಮಾಣಿಕತೆಯನ್ನು ಬಿಡಲೂ ಮನಸ್ಸಿಲ್ಲ. ಅದಕ್ಕೇ 5,000 ರೂ. ಕೊಟ್ಟು ಗೋಲ್ಡ್ ಪಾಲಿಷ್‌ ಒಡವೆಗಳನ್ನು ತಂದೆ.”

“5 ಸಾವಿರ ರೂ ಹೋದರೂ ಪರವಾಗಿಲ್ಲ 3-4 ಲಕ್ಷ ರೂ ಒಡವೆಗಳು ಉಳಿದವು… ನೀವು ಬಹಳ ಬುದ್ಧಿವಂತರೂ ಕಣ್ರಿ!” ನನ್ನಾಕೆ ನಗುತ್ತಾ ಹೇಳಿದಳು.

“ಹೌದು ಅಳಿಯಂದಿರು ತುಂಬಾ ಬುದ್ಧಿವಂತರು, ಅದಕ್ಕೇ ಅವರಿಗೆ ನಿನ್ನನ್ನು ಮದುವೆ ಮಾಡಿಕೊಟ್ಟಿದ್ದು,” ಅತ್ತೆ ನಗುತ್ತಾ ಹೇಳಿದರು.

“ಪ್ಲೀಸ್‌, ಈಗ ನಾನು ಹೇಳೋದು ಕೇಳು. ನಿನ್ನ ಒಡವೆಗಳನ್ನು ಎಲ್ಲರಿಗೂ ಜಾಹಿರಾತು ಮಾಡ್ಬೇಡ. ಈಗೇನೋ ತಪ್ಪಿಸ್ಕೊಂಡೆ, ಮುಂದಿನ ಬಾರಿ ಹೇಗೋ ಏನೋ” ನನ್ನ ಮಾತನ್ನು ಅರ್ಧಕ್ಕೆ ನಿಲ್ಲಿಸಿದೆ.

“ಅಳಿಯಂದಿರೇ, ಇವತ್ತೇ ಬ್ಯಾಂಕಿನ ಲಾಕರ್‌ನಲ್ಲಿ ಒಡವೆಗಳನ್ನು ಇಟ್ಟು ಬನ್ನಿ, ಇನ್ನು ಮೇಲೆ ನಕಲಿ ಒಡವೆಗಳನ್ನೇ ಧರಿಸಿ ಆಚೆ ಹೊರಡಲಿ ಅವಳು,” ಅತ್ತೆ ನಗುತ್ತಾ ಹೇಳಿದರು.

ಅಂದಿನಿಂದ ಹಿಡಿದು ಇವತ್ತಿನವರೆಗೂ ನಮ್ಮ ಮನೆಗೆ ಯಾವ ಕಳ್ಳನೂ ಬರಲಿಲ್ಲ. ನಾನು ಈ ವಿಷಯವನ್ನು ಅಕ್ಕಪಕ್ಕದವರೊಂದಿಗೆ ಯಾರಿಗೂ ಹೇಳಲಿಲ್ಲ. ಯಾರಿಗಾದರೂ ಹೇಳಿ ನನ್ನ ಮಾನ ನಾನೇ ಯಾಕೆ ಹರಾಜು ಹಾಕಿಕೊಳ್ಳಲಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ