ಮೊದಲ ಡೇಟ್‌ನಲ್ಲಿ ದೊರೆತ ಮೊದಲ ಗಿಫ್ಟ್. ಅದಕ್ಕೆ ಸುತ್ತಿದ್ದ ಬಣ್ಣದ ಕಾಗದವನ್ನು ಬಿಚ್ಚುವಾಗ ಕಾಂಚನಾಳ ಕೈ ನಡುಗುತ್ತಿತ್ತು. ನರೇಂದ್ರನೊಡನೆ ಗೆಳೆತನವನ್ನು ಮುಂದುವರಿಸಲು ಅವಳ ಮನಸ್ಸು ಹಿಂದೆಗೆಯುತ್ತಿತ್ತು. ಅವನ ನಿರ್ಮಲ ಮನಸ್ಸಿಗೆ ಪೆಟ್ಟು ಬೀಳಬಾರದೆಂಬುದು ಅವಳ ಇಚ್ಛೆ.
ಆದರೆ ಕಾಂಚನಾಳ ಒಳ್ಳೆಯ ಸ್ವಭಾವ ಅವನನ್ನು ಸೆಳೆದಿತ್ತು. ಕೆಲವೊಮ್ಮೆ ಒಳ್ಳೆಯತನವೇ ಮುಳುವಾಗಬಲ್ಲದೆಂದು ಹೇಳುತ್ತಾರೆ. ಕಾಂಚನಾಳ ಬದುಕಿನಲ್ಲಿಯೂ ಹಾಗೇ ಆಗಿದೆ. ಅವಳು ತನ್ನ ಪುಟ್ಟ ಪ್ರಪಂಚದಲ್ಲಿ ಅದೆಷ್ಟು ನೋವನ್ನು ನುಂಗಿದ್ದಾಳೆಂದರೆ, ತನ್ನಿಂದ ಬೇರೆ ಯಾರಿಗೂ ನೋವಾಗಬಾರದೆಂದು ಸದಾ ಎಚ್ಚರಿಕೆಯಲ್ಲಿರುತ್ತಾಳೆ. ಹಾಗಾಗಿಯೇ ಅವಳಿಗೆ ಇಂದು ನರೇಂದ್ರನ ಡೇಟ್ ಪ್ರಸ್ತಾಪವನ್ನು ನಿರಾಕರಿಸಲಾಗಲಿಲ್ಲ. ನರೇಂದ್ರ ಅವಳ ಸಹೋದ್ಯೋಗಿ, ಅವಳ ಸ್ನೇಹಿತ, ಅವಳ ಮೆಂಟರ್, ಅವಳ ಲೋಕಲ್ ಗಾರ್ಡಿಯನ್ ಎಲ್ಲವೂ ಆಗಿದ್ದ. ಕಾಂಚನಾಳ ಬಗ್ಗೆ ಅವನ ಮನಸ್ಸಿನಲ್ಲಿ ಮೃದು ಭಾವನೆಗಳು ತುಂಬಿದ್ದವು. ಅದು ಅವಳಿಗೂ ತಿಳಿದಿತ್ತು. ಆದರೂ ತಿಳಿಯದವಳಂತೆ ನಟಿಸುತ್ತಿದ್ದಳು. ಹಿಂದಿನ ಸಾಯಂಕಾಲ ಅವನು ಪ್ರಥಮ ಡೇಟ್‌ಗಾಗಿ ಇನ್‌ವೈಟ್‌ಮಾಡಿದಾಗ ಅವಳು ಅದೆಷ್ಟೋ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. `ಈ ನರೇಂದ್ರ ಒಳ್ಳೆ ಪತ್ತೇದಾರಿ ಜಾತಿಯವನು…… ಇಂದು ನನ್ನ ಜನ್ಮದಿನ ಅನ್ನುವುದು ಅವನಿಗೆ ಹೇಗೆ ಗೊತ್ತಾಯಿತೋ, ಏನು ಹೇಳಿದರೂ ಬಿಡಲಿಲ್ಲ,’ ಕಾಂಚನಾ ಯೋಚಿಸುತ್ತಾ ಗಿಫ್ಟ್ ರಾಪರ್‌ನ್ನು ತೆರೆದಳು.
ಸುಂದರವಾಗಿ ಪ್ಯಾಕ್ ಮಾಡಲಾಗಿದ್ದ ಲೇಟೆಸ್ಟ್ ಮಾಡೆಲ್ ಮೊಬೈಲ್ ಫೋನ್‌ನ್ನು ಕಂಡಾಗ ಕಾಂಚನಾಳ ಮುಖ ಕೊಂಚ ಬಿರುಸಾಯಿತು. ಇಂತಹದೇ ಏನೋ ಇರುವುದೆಂದು ಅವಳು ಮೊದಲೇ ನಿರೀಕ್ಷಿಸಿದ್ದಳು. ಏಕೆಂದರೆ ಅವಳ ಓಲ್ಡ್ ಮಾಡೆಲ್ ಮೊಬೈಲ್ ಹ್ಯಾಂಡ್‌ಸೆಟ್ ಬಗ್ಗೆ ನರೇಂದ್ರ ಆಗಾಗ ಆಫೀಸ್‌ನಲ್ಲಿ `ಓಲ್ಡ್ ಲೇಡಿ ಆಫ್ ನ್ಯೂ ಜನರೇಶನ್’ ಎಂದು ಹಾಸ್ಯ ಮಾಡುತ್ತಿದ್ದುದುಂಟು.
ಈ ಚಿಕ್ಕ ಮೊಬೈಲ್‌ನಿಂದಲೇ ಅವಳ ಬಾಳಿನಲ್ಲಿ ಬಿರುಗಾಳಿ ಬೀಸಿ ಸಂಸಾರ ಮೂರಾ ಬಟ್ಟೆಯಾಗಿಬಿಟ್ಟಿತೆಂಬ ವಿಷಯವನ್ನು ಅವಳು ನರೇಂದ್ರನಿಗೆ ಹೇಗೆ ತಾನೇ ಹೇಳಿಯಾಳು? ಸುಮಾರು 10 ವರ್ಷಗಳ ಹಿಂದೆ ನಡೆದ ಘಟನೆ ಅವಳಿಗೆ ಇಂದೂ ಚೆನ್ನಾಗಿ ನೆನಪಿದೆ. ಆ ದಿನ ಅವಳ ತಂದೆಯೊಡನೆ ಜಗಳಾಡಿದ ನಂತರ ಅವಳ ತಾಯಿ ಕೋಪದಲ್ಲಿ ತಮ್ಮನ್ನು ತಾವೇ ಬೆಂಕಿಯಲ್ಲಿ ಸುಟ್ಟುಕೊಂಡುಬಿಟ್ಟಿದ್ದರು. ತಾಯಿಯ ಆರ್ತನಾದ ಇಂದೂ ರಾತ್ರಿಯಲ್ಲಿ ಅವಳನ್ನು ನಿದ್ರೆಯಿಂದ ಬೆಚ್ಚಿ ಬೀಳುವಂತೆ ಮಾಡುತ್ತದೆ.
ಬಹುಶಃ ತಾಯಿಗೆ ಸಾಯುವ ಉದ್ದೇಶ ಇರಲಿಲ್ಲ. ತಂದೆಯ ಮೇಲೆ ಮಾನಸಿಕ ಒತ್ತಡ ಹೇರಲು ಹಾಗೆ ಮಾಡಿದ್ದಿರಬಹುದು. ತಂದೆ ಬಂದು ತಡೆಯುವರು ಎಂಬುದು ಅವರ ನಂಬಿಕೆ. ಆದರೆ ತಂದೆ ಕೋಪದಿಂದ ಮೊದಲೇ ಮನೆಯಿಂದಾಚೆ ಹೋಗಿಬಿಟ್ಟಿದ್ದರು. ತಾಯಿ ಎಂತಹ ಅಪಾಯಕಾರಿ ಹೆಜ್ಜೆಯಿಡುತ್ತಿದ್ದಾರೆಂದು ಅವರು ನೋಡಿರಲೇ ಇಲ್ಲ.
ಬೆಂಕಿಯ ಜ್ವಾಲೆಯಲ್ಲಿ ತಾಯಿ ಕಿರಿಚುತ್ತಿರುವುದನ್ನು ಕಂಡು ಕಾಂಚನಾ ಭಯ, ಗಾಬರಿಯಿಂದ ತಂದೆಯನ್ನು ಕರೆಯಲು ಓಡಿದಳು. ಆದರೆ ತಂದೆ ಎಲ್ಲಿಯೂ ಕಾಣದಿದ್ದಾಗ ನೆರೆಹೊರೆಯವರು ಬಂದು ತಾಯಿಯನ್ನು ಆಸ್ಪತ್ರೆಗೆ ಕೊಂಡೊಯ್ದರು. ಪಕ್ಕದ ಮನೆಯ ಅನಿಲ್ ಅಂಕಲ್ ಮೊಬೈಲ್‌ನಿಂದ ತಂದೆಗೆ ವಿಷಯ ತಿಳಿಸಿದರು. ಆದರೆ ಎಲ್ಲವೂ ತಡವಾಗಿತ್ತು. ಮೊಬೈಲ್ ಫೋನ್ ಅವಳ ತಾಯಿಯನ್ನು ಅವಳಿಂದ ಕಸಿದುಕೊಂಡಿತ್ತು.
ಕಾಂಚನಾಳ ತಂದೆ ಬಸವರಾಜು ಅವರಿಗೆ ಪ್ರಾರಂಭದಿಂದಲೂ ನವೀನ ಟೆಕ್ನಿಕ್‌ಗಳ ಬಳಕೆಯ ಬಗ್ಗೆ ಬಲು ಆಸಕ್ತಿ. ಆ ದಿನಗಳಲ್ಲಿ ಮೊಬೈಲ್ ಫೋನ್ ಲಾಂಚ್ ಆಗಿತ್ತು. ಬಸವರಾಜು ಗಂಟೆಗಟ್ಟಳೆ ಬಿಎಸ್‌ಎನ್‌ಎಲ್ ಸಾಲಿನಲ್ಲಿ ನಿಂತು, ಉತ್ಸಾಹದಿಂದ ಹೊಸ ಹ್ಯಾಂಡ್‌ಸೆಟ್ ಮತ್ತು ಸಿಮ್ ತಂದಿದ್ದರು. ಆಗೆಲ್ಲಾ ಮೊಬೈಲ್‌ನಲ್ಲಿ ಹೆಚ್ಚು ಫೀಚರ್ಸ್ ಇರಲಿಲ್ಲ. ಕೇವಲ ಕಾಲ್ಸ್ ಮತ್ತು ಮೆಸೇಜ್‌ಮಾಡಬಹುದಿತ್ತು. ಕೆಲವು ಗೇಮ್ಸ್ ಆಡಬಹುದಿತ್ತು.
ತಮ್ಮ ಮೊಬೈಲ್‌ನಲ್ಲಿ ಬರುವ ಫನ್ನಿ ಅಥವಾ ರೊಮ್ಯಾಂಟಿಕ್ ಮೆಸೇಜ್‌ಗಳನ್ನು ಬಸವರಾಜು ತಮ್ಮ ಪತ್ನಿಯ ಮುಂದೆ ಓದುತ್ತಿದ್ದರು. ಜೋಕ್‌ಗಳನ್ನು ಕೇಳಿ ಅವರ ಪತ್ನಿಯೂ ನಗುತ್ತಿದ್ದರು. ಆದರೆ ರೊಮ್ಯಾಂಟಿಕ್ ಮೆಸೇಜ್ ಅಥವಾ ಕವನಗಳನ್ನು ಕೇಳಿದಾಗ ಯೋಚನೆ ಗೀಡಾಗುತ್ತಿದ್ದರು. ಅದನ್ನು ಯಾರು ಕಳುಹಿಸಿದ್ದಾರೆ ಎಂದು ಪತಿಯನ್ನು ಸಂಶಯದಿಂದ ಪ್ರಶ್ನಿಸುತ್ತಿದ್ದರು….. ಅವರ ಉತ್ತರದಲ್ಲಿ ವಿಶ್ವಾಸವಿರಿಸುತ್ತಿರಲಿಲ್ಲ.
ಕ್ರಮೇಣ ಬಸವರಾಜು ಬೇರೆ ಮಹಿಳೆಯರೊಂದಿಗೆ ಸಂಬಂಧ ಇರಿಸಿಕೊಂಡಿರುವರೆಂದು ಅವರ ಪತ್ನಿಗೆ ಸಂದೇಹವಾಗತೊಡಗಿತು. ಆ ಮಹಿಳೆಯರೇ ಇಂತಹ ಮೆಸೇಜ್ ಕಳುಹಿಸುತ್ತಿರುವರೆಂಬ ಅನುಮಾನದಿಂದ ಪತಿಗೆ ತಿಳಿಯದಂತೆ ಅವರ ಮೊಬೈಲ್ ಫೋನ್‌ನ್ನು ಚೆಕ್ ಮಾಡುತ್ತಿದ್ದರು. ಬಸವರಾಜುಗೆ ಪತ್ನಿಯ ಈ ನಡವಳಿಕೆ ಇಷ್ಟವಾಗಲಿಲ್ಲ ಅಥವಾ ಅವರ ಮನಸ್ಸಿನಲ್ಲಿ ಅಪರಾಧೀ ಭಾವನೆ ಇತ್ತೋ ಏನೋ? ಅಂತೂ ಅವರು ತಮ್ಮ ಫೋನ್‌ಗೆ ಸೆಕ್ಯುರಿಟಿ ಲಾಕ್ ಮಾಡಿದರು.
ಮೊಬೈಲ್ ಫೋನ್ ದೆಸೆಯಿಂದ ಕಾಂಚನಾಳ ತಾಯಿ ಮಾನಸಿಕವಾಗಿ ಜರ್ಜರಿತರಾಗತೊಡಗಿದರು. ಪತಿಯ ಫೋನ್‌ಗೆ ಮೆಸೇಜ್ ಅಲರ್ಟ್ ಬಂದೊಡನೆ ನೋಡಲು ಧಾವಿಸುತ್ತಿದ್ದರು….. ಆದರೆ ಸೆಕ್ಯೂರಿಟಿ ಲಾಕ್‌ನಿಂದಾಗಿ ನೋಡಲಾಗುತ್ತಿರಲಿಲ್ಲ. ಮೆಸೇಜ್ ತೋರಿಸಿ ಎಂದು ಪತಿಯನ್ನು ಪೀಡಿಸುತ್ತಿದ್ದರು. ಇದರಿಂದ ಬಸವರಾಜುವಿನ ಅಹಂಗೆ ಪೆಟ್ಟಾಗಿ ಅವರು ಪತ್ನಿಯ ಮೇಲೆ ಕೂಗಾಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಜಗಳವಾಗುತ್ತಿತ್ತು. ಒಮ್ಮೊಮ್ಮೆ ಇಂತಹ ಜಗಳ ವಿಕೋಪಕ್ಕೆ ಹೋಗಿ ಬಸವರಾಜು ಪತ್ನಿಯ ಮೇಲೆ ಕೈ ಮಾಡುತ್ತಿದ್ದರು.
ಎಂದಾದರೂ ಮೊಬೈಲ್ ಫೋನ್‌ನ ಲಾಕ್ ಓಪನ್ ಇದ್ದಾಗ ತಾಯಿ ಮೆಸೇಜ್ ಬಾಕ್ಸ್ ನಲ್ಲಿ ಯಾವ ಮೆಸೇಜ್‌ನ್ನೂ ಕಾಣದೆ ಪತಿ ಎಲ್ಲ ಮೆಸೇಜ್‌ಗಳನ್ನೂ ಡಿಲೀಟ್ ಮಾಡಿದ್ದಾರೆಂದು ಕೋಪಗೊಳ್ಳುತ್ತಿದ್ದರು. ಪತಿಯ ಗಮನವನ್ನು ಫೋನ್‌ನಿಂದ ದೂರ ಮಾಡಲು ಮಾನಸಿಕ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದರು. ಒಮ್ಮೆ ತಲೆ ನೋವೆಂದು ಹೇಳಿದರೆ ಮತ್ತೊಮ್ಮೆ ಹೊಟ್ಟೆ ನೋವು….. ಕೆಲವೊಮ್ಮೆ ಮಗಳು ಕಾಂಚನಾ ಮತ್ತು ಮಗ ಕಿಶೋರ್‌ನನ್ನು ಕಾರಣವಿಲ್ಲದೆ ಹೊಡೆಯುತ್ತಿದ್ದರು….. ಕೆಲವು ಸಲ ಕಾಂಚನಾಳ ಅಜ್ಜಿಗೆ ಊಟವನ್ನೇ ಕೊಡುತ್ತಿರಲಿಲ್ಲ…… ಮತ್ತೆ ಕೆಲವು ಸಲ ಆತ್ಮಹತ್ಯೆ ಮಾಡಿಕೊಂಡು ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆಂದು ಪತಿಯನ್ನು ಹೆದರಿಸುತ್ತಿದ್ದರು….. ಕಡೆಗೊಂದು ದಿನ ಹಾಗೆ ಮಾಡಿ ಹೆದರಿಸಲೆಂದು ಮೈ ಮೇಲೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. ತಾಯಿಯ ಬುದ್ಧಿಗೇಡಿತನದ ಕೃತ್ಯದಿಂದ ಕಾಂಚನಾ ಮತ್ತು ಕಿಶೋರ್ ಜೀವನದುದ್ದಕ್ಕೂ ಪರಿತಪಿಸುವಂತಾಯಿತು.
ತಾಯಿಯ ಮರಣಾನಂತರ ಮನೆಯ ಜವಾಬ್ದಾರಿಯೆಲ್ಲ ಕಾಂಚನಾಳ ಅಜ್ಜಿಯ ಹೆಗಲ ಮೇಲೆ ಬಿದ್ದಿತು. ಆಗ ಕಾಂಚನಾಳಿಗೆ 10 ವರ್ಷ ವಯಸ್ಸು ಮತ್ತು ಕಿಶೋರನಿಗೆ 13. ವರ್ಷ ಕಳೆಯುವಷ್ಟರಲ್ಲಿ ಬಸವರಾಜು ಮತ್ತೊಂದು ಮದುವೆಯಾದರು. ಅವರ ಆಫೀಸ್ ನಲ್ಲೇ ಸಣ್ಣದೊಂದು ನೌಕರಿ ಮಾಡುತ್ತಿದ್ದ ಆ ಮಹಿಳೆ ಮದುವೆಯಾಗಿ ಮನೆಗೆ ಬಂದಳು, ವೃದ್ಧೆ ಅತ್ತೆ ಮತ್ತು ಸವತಿಯ ಮಕ್ಕಳ ಜವಾಬ್ದಾರಿ ಹೊರಲು ನಿರಾಕರಿಸಿದಳು. ಆಗ ಬಸವರಾಜು ಬೇರೊಂದು ಮನೆ ಮಾಡಿ ಪತ್ನಿಯೊಡನೆ ವಾಸಿಸತೊಡಗಿದರು. ಮನೆಯ ಜವಾಬ್ದಾರಿಯನ್ನು ಮತ್ತೆ ಅಜ್ಜಿಯೇ ನಿಭಾಯಿಸಬೇಕಾಯಿತು. ಮೊದಲು ಕೆಲವು ವರ್ಷಗಳು ಬಸವರಾಜು ಮನೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಹಣ ಕೊಡುತ್ತಿದ್ದರು. ಆದರೆ ಕ್ರಮೇಣ ಅದು ಕಡಿಮೆಯಾಗುತ್ತಾ ಬಂದು ಕಡೆಗೆ ನಿಂತೇ ಹೋಯಿತು.
ಕಿಶೋರ್ 18 ವರ್ಷದವನಾದಾಗ ಡ್ರೈವಿಂಗ್ ಕಲಿತು ಟ್ಯಾಕ್ಸಿ ಓಡಿಸತೊಡಗಿದ. ಇದರಿಂದ ಮನೆಯ ಖರ್ಚಿಗೆ ಕೊಂಚ ಹಣ ಬರುವಂತಾಯಿತು. ಅಜ್ಜಿಯ ಕೈಲಿ ಈಗ ಮನೆಯ ಕೆಲಸ ಮಾಡಲು ಆಗುತ್ತಿರಲಿಲ್ಲ. ಮನೆಗೆ ಸೊಸೆ ಬಂದರೆ ಜವಾಬ್ದಾರಿ ವಹಿಸಿಕೊಳ್ಳುತ್ತಾಳೆ ಎನ್ನಲು ಕಿಶೋರನದು ಇನ್ನೂ ಚಿಕ್ಕ ವಯಸ್ಸು. ಜೊತೆಗೆ ಅವನು 2-4 ವರ್ಷ ಟ್ಯಾಕ್ಸಿ ಓಡಿಸಿ ಒಂದಿಷ್ಟು ಹಣ ಉಳಿಸಿ ಸ್ವಂತ ಟ್ಯಾಕ್ಸಿ ತೆಗೆದುಕೊಳ್ಳಬೇಕೆಂದು ಯೋಚಿಸುತ್ತಿದ್ದ. ಅದಕ್ಕಾಗಿ ಅವನು ತಡ ರಾತ್ರಿಯವರೆಗೂ ಟ್ಯಾಕ್ಸಿ ಓಡಿಸುತ್ತಿದ್ದ.
ಈ ವೇಳೆಗೆ ಮೊಬೈಲ್ ಫೋನ್ ಜನಸಾಮಾನ್ಯರ ಅಗತ್ಯ ವಸ್ತುವಾಗಿಬಿಟ್ಟಿತು. ಜೊತೆಗೆ ಅದರಲ್ಲಿ ಆಕರ್ಷಕ ಫೀಚರ್ಸ್ ಜನರ ಮನಸೆಳೆಯುತ್ತಿತ್ತು. ಬಹುಶಃ ಕಿಶೋರನಿಗೂ ಮೊಬೈಲ್ ಹುಚ್ಚು ತಂದೆಯ ಬಳುವಳಿಯಾಗಿದ್ದಿರಬಹುದು. ರಾತ್ರಿ ಮನೆಗೆ ಬಂದಾಗಲೂ ಅವನು ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ, ಜೊತೆಗೆ ತಾನೂ ಗುನುಗುತ್ತಾ ಇರುತ್ತಿದ್ದ. ಕಿಶೋರ್ ಟ್ಯಾಕ್ಸಿ ಓಡಿಸುವಾಗಲೂ ಫೋನ್‌ನಲ್ಲಿ ಹಾಡು ಕೇಳುತ್ತಿರುತ್ತಿದ್ದ. ರಾತ್ರಿಯ ವೇಳೆ ಟ್ರಾಫಿಕ್ ಕಡಿಮೆ ಇರುತ್ತಿದ್ದುದರಿಂದ ಗಾಡಿಯ ವೇಗ ಹೆಚ್ಚಾಗಿರುತ್ತಿತ್ತು. ಅದೊಂದು ರಾತ್ರಿ ಮೊಬೈಲ್ ಫೋನ್‌ನಲ್ಲಿ ಹಾಡಿನ ಟ್ರಾಕ್ ಚೇಂಜ್ ಮಾಡುವ ಸಮಯದಲ್ಲಿ ತಿರುವಿನಿಂದ ಬಂದ ಟ್ರಕ್ ಅವನ ಗಮನಕ್ಕೆ ಬಾರದೆ ಅಪಘಾತ ನಡೆದುಹೋಯಿತು. ಟ್ರಕ್ ಡ್ರೈವರ್ ಗಾಬರಿಯಿಂದ ಟ್ರಕ್‌ನ್ನು ಅಲ್ಲಿಯೇ ಬಿಟ್ಟು ಓಡಿಹೋದನು. ಕಿಶೋರ್ ತೀವ್ರ ಗಾಯಗೊಂಡು ಅಲ್ಲಿಯೇ ಬಿದ್ದಿದ್ದನು. ಸುಮಾರು 1 ಗಂಟೆಯ ನಂತರ ಆ ಕಡೆಗೆ ಬಂದ ಬೀಟ್ ಪೊಲೀಸ್‌ನವರು ಅವನ ಸ್ಥಿತಿಯನ್ನು ಕಂಡು ಪೊಲೀಸ್ ವ್ಯಾನ್‌ನ್ನು ಕರೆಸಿ ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿ ಅವನ ಪ್ರಾಣವನ್ನೇನೋ ಉಳಿಸಿದರು. ಆದರೆ ತಲೆಗೆ ತಗುಲಿದ್ದ ಪೆಟ್ಟಿನಿಂದ ಮೆದುಳಿನ ಒಂದು ಭಾಗ ಜಖಂಗೊಂಡು ಕೈಕಾಲು ಸ್ವಾಧೀನ ತಪ್ಪಿಹೋಯಿತು ಮತ್ತು ಅವನು ಸದಾಕಾಲ ಹಾಸಿಗೆ ಹಿಡಿಯುವಂತಾಯಿತು.
ಕಾಂಚನಾಳಿಗೆ ಮತ್ತೊಮ್ಮೆ ಕಷ್ಟಗಳ ಸರಮಾಲೆ ಪ್ರಾರಂಭವಾಯಿತು. ಕಿಶೋರ್ ಆಸ್ಪತ್ರೆಯಲ್ಲಿರುವವರೆಗೆ ಬಸವರಾಜು ಅವನ ಚಿಕಿತ್ಸೆಯ ವೆಚ್ಚವನ್ನು ಭರಿಸಿದರು. ಆದರೆ ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ ಮೇಲೆ ಅವರೇನೂ ಮಾಡಲಿಲ್ಲ. ಕಿಶೋರನ ಆರೋಗ್ಯ ಸುಧಾರಣೆಗಾಗಿ ವೈದ್ಯರು ಔಷಧಿಯ ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದರು. ಈಗ ಕಾಂಚನಾ ಮನೆಯ ಖರ್ಚಿನ ಜೊತೆಗೆ ಔಷಧಿ ಖರ್ಚನ್ನು ತೂಗಿಸಬೇಕಾಯಿತು.
ಕಷ್ಟಗಳು ಒಂದರ ಹಿಂದೆ ಮತ್ತೊಂದು ಬರುತ್ತವೆ ಎನ್ನುವಂತೆ, ಒಂದು ದಿನ ಅಜ್ಜಿ ಬಾತ್ ರೂಮಿನಲ್ಲಿ ಕಾಲು ಜಾರಿ ಬಿದ್ದು, ಮೂಳೆಗೆ ಪೆಟ್ಟು ಮಾಡಿಕೊಂಡರು. ಹೀಗಾಗಿ ಅವರೂ ಹಾಸಿಗೆ ಹಿಡಿಯುವಂತಾಯಿತು.
ಮನೆಯ ಒಳ ಹೊರಗಿನ ಎಲ್ಲ ಜವಾಬ್ದಾರಿಯೂ ಕಾಂಚನಾಳ ಮೇಲೆ ಬಿದ್ದಿತು. ಅವಳ ಗ್ರಾಜುಯೇಷನ್ ಮುಗಿದಿದ್ದುದರಿಂದ ಅವಳು ಕಾಲ್ ಸೆಂಟರ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಬೆಳಗ್ಗೆ 11 ರಿಂದ ಸಾಯಂಕಾಲ 5 ಗಂಟೆಯರೆಗೆ ಅವಳು ಕಾಸ್ ಸೆಂಟರ್‌ನಲ್ಲಿರುತ್ತಿದ್ದಳು. ಮನೆಗೆ ಬಂದು ಮನೆಗೆಲಸ ಮುಗಿಸಿ ಮತ್ತೆ ತಡರಾತ್ರಿಯವರೆಗೆ ಆನ್‌ಲೈನ್ ಜಾಬ್ ಮಾಡುತ್ತಿದ್ದಳು. ತಾನು ಮಧ್ಯಾಹ್ನ ಮನೆಯಲ್ಲಿಲ್ಲದ ವೇಳೆಯಲ್ಲಿ ಕಿಶೋರ್ ಮತ್ತು ಅಜ್ಜಿಯನ್ನು ನೋಡಿಕೊಳ್ಳಲು ಹೆಂಗಸೊಬ್ಬಳನ್ನು ಗೊತ್ತು ಮಾಡಿಕೊಂಡಳು.
ಕಾಂಚನಾ ನಿತ್ಯ ಮನೆಯಲ್ಲಿ ತಿಂಡಿ ಅಡುಗೆಯ ಕೆಲಸ ನೋಡಿಕೊಳ್ಳುತ್ತಿದ್ದಳು. ಇತರೆ ಮನೆಗೆಲಸವನ್ನೂ ಮಾಡುತ್ತಿದ್ದಳು. ಅಜ್ಜಿ ಮತ್ತು ಅಣ್ಣನಿಗೆ ಕಾಲಕಾಲಕ್ಕೆ ಆಹಾರ ಔಷಧಿಗಳನ್ನು ಕೊಡುತ್ತಿದ್ದಳು. ಹೊರಗಿನಿಂದ ಮನೆಗೆ ಅಗತ್ಯವಾದ ದಿನಸಿ, ಸಾಮಾನುಗಳನ್ನು ಕೊಂಡು ತರುತ್ತಿದ್ದು. ಇದೆಲ್ಲನ್ನೂ ಮಾಡುತ್ತಾ ಏಕಾಂತದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಮನಸ್ಸಿನಲ್ಲಿ ಇಷ್ಟೆಲ್ಲ ನೋವು ತುಂಬಿದ್ದರೂ ಹೊರಗೆ ಮಾತ್ರ ಅವಳೊಬ್ಬ ಐರನ್ ಲೇಡಿಯಂತಿದ್ದಳು. ಶಕ್ತಿಶಾಲಿನಿ, ಸ್ವಾಭಿಮಾನಿ.
ಅಳಿಗೆ ನರೇಂದ್ರನ ಪರಿಚಯವಾದದ್ದು ಕಾಲ್ ಸೆಂಟರ್‌ನಲ್ಲಿಯೇ. ಸದಾ ಅಂತರ್ಮುಖಿಯಾಗಿರುತ್ತಿದ್ದ ಕಾಂಚನಾ ಅವನಿಗೊಂದು ಒಗಟಾಗಿದ್ದಳು. ಅವಳು ಆಮೆಯ ಚಿಪ್ಪಿನಂತಹ ಬಲವಾದ ಆವರಣವನ್ನು ಸೃಷ್ಟಿಸಿಕೊಂಡಿದ್ದರೆ, ನರೇಂದ್ರ ಅದನ್ನು ಭೇದಿಸಲು ಯತ್ನಿಸುತ್ತಿದ್ದ. ಅದು ಹೇಗೋ ಅವಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಹೊಸ ಮೊಬೈಲೊಂದನ್ನು ಕೈಲಿ ಹಿಡಿದು, ಹಿಂದೆ ತನ್ನ ಜೀವನದಲ್ಲಿ ಮೊಬೈಲ್ ಫೋನ್ ತಂದೊಡ್ಡಿದ ಆಪತ್ತುಗಳ ಬಗ್ಗೆ ಕಾಂಚನಾ ಯೋಚಿಸುತ್ತಾ ಕುಳಿತಿರುವಾಗ, ಅವಳ ಹಳೆಯ ಫೋನ್ ರಿಂಗಣಿಸಿತು. ನೋಡಿದಾಗ ಅದು ನರೇಂದ್ರನ ಕರೆಯಾಗಿತ್ತು. ಕಾಂಚನಾ ತನ್ನ ಕಣ್ಣೊರೆಸಿಕೊಂಡು ರಿಸೀವ್ ಮಾಡಿದಳು.
“ಬರ್ತ್‌ಡೇ ಗಿಫ್ಟ್ ಹೇಗಿದೆ?”
“ಗಿಫ್ಟ್ ಚೆನ್ನಾಗಿ ಇದೆ. ಆದರೆ ಅದರಿಂದ ನನಗೇನೂ ಉಪಯೋಗವಿಲ್ಲ….. ನೀವು ಅದನ್ನು ಬೇರೆ ಯಾವುದಾದರೂ ಹುಡುಗಿಗೆ ಕೊಟ್ಟಿದ್ದರೆ ನಿಮ್ಮ ಹಣ ಸಾರ್ಥಕವಾಗುತ್ತಿತ್ತು,” ಕಾಂಚನಾ ತಮಾಷೆಯಾಗಿ ಹೇಳಿದಳು.
“ಇರಲಿ ಬಿಡು….. ಬಹುಶಃ ಈಗ ನಿನ್ನ ಮೂಡು ಸರಿಯಿಲ್ಲ. ಆಮೇಲೆ ಮಾತನಾಡೋಣ…..” ಎಂದು ನರೇಂದ್ರ ಮಾತು ಮುಗಿಸಿದ.
ಕಾಂಚನಾ ತನ್ನ ಬೇಸಿಕ್ ಮೊಬೈಲ್ ಸೆಟ್‌ನಲ್ಲಿ ನೆಟ್ ಬಳಸುತ್ತಿರಲಿಲ್ಲ. ಹೀಗಾಗಿ ಅವಳು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿರಲಿಲ್ಲ ಮತ್ತು ಯಾವುದೇ ಸೋಶಿಯಲ್ ಸೈಟ್‌ನಲ್ಲಿಯೂ ಅವಳ ಅಕೌಂಟ್ ಇರಲಿಲ್ಲ. ಅವಳಿಗೆ ಪರ್ಸನಲ್ ಇಮೇಲ್ ಐಡಿ ಸಹ ಇರಲಿಲ್ಲ. ಅವಳಿಗಿದ್ದ ಒಂದು ಅಫಿಶಿಯಲ್ ಮೇಲ್ ಐಡಿ ಬಗ್ಗೆ ಅವಳ ಸ್ಟಾಫ್ ಮೆಂಬರ್ಸ್‌ಗೆ ಮಾತ್ರ ತಿಳಿದಿತ್ತು. ಅದನ್ನವಳು ತನ್ನ ಲ್ಯಾಪ್‌ಟಾಪ್‌ನಲ್ಲಷ್ಟೇ ಬಳಸುತ್ತಿದ್ದಳು. ಅವಳ ವಿರೋಧವನ್ನು ಲೆಕ್ಕಿಸದೆ ನರೇಂದ್ರ ಒಮ್ಮೊಮ್ಮೆ ಅವಳ ಐಡಿಗೆ ಪರ್ಸನಲ್ ಮೆಸೇಜ್‌ಕಳುಹಿಸುತ್ತಿದ್ದ. ಅವಳು ಅದನ್ನು ನೋಡಿ ಸುಮ್ಮನಿದ್ದುಬಿಡುತ್ತಿದ್ದಳು. ಎಂದೂ ಉತ್ತರಿಸಲು ಹೋಗಲಿಲ್ಲ.
ಮಾರನೆಯ ದಿನ ಕಾಂಚನಾ ಕಾಲ್ ಸೆಂಟರ್‌ಗೆ ಹೋದಾಗ ನರೇಂದ್ರ ಅವಳ ಬಳಿಗೆ ಬಂದು, “ಕಾಂಚನಾ, ನಿನ್ನೊಂದಿಗೆ ಮಾತನಾಡಬೇಕಿದೆ,” ಎಂದ.
“ಫ್ರೀ ಆದಾಗ ಹೇಳ್ತೀನಿ,” ಎಂದು ಕಾಂಚನಾ ಅವನಿಂದ ತಪ್ಪಿಸಿಕೊಂಡಳು. ಸಂಜೆಯವರೆಗೂ ನರೇಂದ್ರ ಅವಳು ಫ್ರೀ ಆಗುವಳೆಂದು ಕಾದರೂ ಅವಳು ಸಾಯಂಕಾಲ ಅವನಿಗೆ ಏನೊಂದೂ ತಿಳಿಸದೆ ಮನೆಗೆ ಹೊರಟುಹೋದಳು.
ಕಾಂಚನಾ ಮನೆ ತಲುಪಿ 1 ಗಂಟೆಯಾಗಿತ್ತಷ್ಟೆ ನರೇಂದ್ರ ಅವಳ ಮನೆಗೇ ಬಂದುಬಿಟ್ಟ. ಅವಳು ಏನು ತಾನೇ ಮಾಡಿಯಾಳು? ಮನೆಗೆ ಬಂದ ಅತಿಥಿಯನ್ನು ಸ್ವಾಗತಿಸಬೇಕಷ್ಟೆ. ಆದರೆ ಅವಳಿದ್ದ ಒಂದೇ ಕೋಣೆಯ ಮನೆಯಲ್ಲಿ ಅವನನ್ನು ಕುಳ್ಳಿರಿಸಲು ಜಾಗವಿರಲಿಲ್ಲ.
`ಒಳ್ಳೆಯದೇ ಆಯಿತು…. ಇಂದು ನನ್ನ ವಾಸ್ತವ ಸ್ಥಿತಿಯನ್ನು ಕಣ್ಣಾರೆ ಕಂಡರೆ ಅವನ ಪ್ರೀತಿಯ ಅಮಲು ಇಳಿದುಹೋಗುವುದು,’ ಎಂದುಕೊಂಡು ಅವನನ್ನು ಒಳಗೆ ಕರೆದಳು.
ಕೋಣೆಯಲ್ಲಿ 3 ಮಂಚಗಳಿದ್ದವು. ಒಂದರ ಮೇಲೆ ಕಿಶೋರ್, ಮತ್ತೊಂದರ ಮೇಲೆ ಅಜ್ಜಿ ಮಲಗಿದ್ದರು. ಮೂರನೆಯದು ಕಾಂಚನಾಳದು. ನರೇಂದ್ರ ಖಾಲಿ ಇದ್ದ ಮಂಚದ ಮೇಲೆ ಮೌನವಾಗಿ ಕುಳಿತ. ಕಾಂಚನಾ ಕಾಫಿ ಮಾಡಿ ತಂದಳು. ಅಜ್ಜಿಗೆ ಆಸರೆ ನೀಡಿ ಅವರನ್ನು ದಿಂಬಿಗೆ ಒರಗಿಸಿ ಕುಳ್ಳಿರಿಸಿ ಅವರಿಗೆ ಕಾಫಿ ಕೊಟ್ಟು ನರೇಂದ್ರನಿಗೂ ಕಾಫಿ ಮತ್ತು ಬಿಸ್ಕೆಟ್ ಕೊಟ್ಟಳು. ನರೇಂದ್ರ ಬಹಳ ಮಾತನಾಡಬೇಕೆಂದುಕೊಂಡು ಅಲ್ಲಿಗೆ ಬಂದಿದ್ದ. ಆದರೆ ಅವನ ನಾಲಿಗೆ ಮೇಲೇಳಲಿಲ್ಲ. ಅವನು ಮಾತಿಲ್ಲದೆ ಕಾಫಿ ಕುಡಿದು, “ಕಾಂಚನಾ ಬೈ,” ಎಂದು ಹೇಳಿ ಹೊರಟುಹೋದ.
ಒಂದು ವಾರ ಕಳೆಯಿತು. ನರೇಂದ್ರ ಮತ್ತೆ ಕಾಣಿಸಿಕೊಳ್ಳಲಿಲ್ಲ. ಕಾಂಚನಾ ಮನಸ್ಸಿನಲ್ಲಿ, `ನರೇಂದ್ರನಿಗೆ ಪ್ರೀತಿಯ ಭೂತ ಬಿಟ್ಟಿದೆ….’ ಎಂದುಕೊಂಡಳು, `ಪಾಪ, ನರೇಂದ್ರನ ತಪ್ಪು ಏನು? ಭಗವಂತ ನನ್ನ ಬಾಳಿನಲ್ಲಿ ಪ್ರೀತಿ ಎನ್ನುವ ಕಾಲಮ್ ನ್ನು ಖಾಲಿ ಬಿಟ್ಟಿದ್ದಾನೆ…. ನರೇಂದ್ರ ಮಾಡುತ್ತಿರುವುದು ಸರಿ….. ಹಗಲು ಕಂಡ ಬಾವಿಗೆ ಇರುಳಿನಲ್ಲಿ ಬೀಳುವುದೇಕೆ….. ಕನಸು ಕಾಣುವ ವಯಸ್ಸಿನಲ್ಲಿ ಜವಾಬ್ದಾರಿ ಹೊರಲು ಯಾರು ಬಯಸುತ್ತಾರೆ?’ ಎಂದು ಭಾವಿಸಿದಳು.
ಸಾಯಂಕಾಲ ಇದ್ದಕ್ಕಿದ್ದಂತೆ ತಂದೆ ಮನೆಗೆ ಬಂದುದನ್ನು ಕಂಡು ಕಾಂಚನಾ ಚಿಕಿತಳಾದಳು. `ಕಳೆದ 2 ವರ್ಷಗಳಿಂದ ಕಿಶೋರ್ ಹಾಸಿಗೆಯಲ್ಲಿ ಮಲಗಿದ್ದಾನೆ. ಆದರೆ ಅಪ್ಪ ಎಂದೂ ಬಂದು ಅವನಾವ ಸ್ಥಿತಿಯಲ್ಲಿದ್ದಾನೆಂದು ನೋಡಲಿಲ್ಲ….. ಅವರ ತಾಯಿಯೇ ಗಾಯಗೊಂಡು ಮಲಗಿರುವ ಸುದ್ದಿ ಕೇಳಿಯೂ ಬಂದು ವಿಚಾರಿಸಲಿಲ್ಲ….. ಅವರು ಈಗ ಬಂದಿದ್ದಾರೆಂದರೆ ಯಾವುದೋ ಗಂಭೀರ ವಿಷಯವೇ ಇರಬೇಕು…. ಏನಿರಬಹುದು,’ ಎಂದು ಯೋಚಿಸಿ ಕಾಂಚನಾಳ ಎದೆ ಡವಗುಟ್ಟಿತು.
ಬಸವರಾಜು ಬಂದವರೇ ಮಗಳ ಕೈಗಳನ್ನು ಹಿಡಿದು ಗದ್ಗದ ಸ್ವರದಲ್ಲಿ ಹೇಳತೊಡಗಿದರು. “ಕಾಂಚನಾ, ನನ್ನನ್ನು ಕ್ಷಮಿಸು ಮಗು, ನಾನು ನನ್ನ ಸುಖವನ್ನಷ್ಟೇ ನೋಡಿಕೊಂಡೆ. ನಿಮ್ಮ ಕಷ್ಟ ಸುಖದ ಬಗ್ಗೆ ಯೋಚಿಸಲೇ ಇಲ್ಲ…. ನಾನು ತಂದೆಯೆನಿಸಿಕೊಳ್ಳಲು ಯೋಗ್ಯನಲ್ಲ….. ನನಗೆ ನನ್ನ ಬಗ್ಗೆ ಬಹಳ ನಾಚಿಕೆಯಾಗುತ್ತಿದೆ. ನರೇಂದ್ರ ಬಂದು ನನ್ನ ಕಣ್ಣು ತೆರೆಸಿದ. ಇಲ್ಲವಾದರೆ ನಾನು ಕಡೆಯವರೆಗೂ ತಪ್ಪಿತಸ್ಥನಾಗಿ ಉಳಿದಿರುತ್ತಿದ್ದೆ…..”
“ಓಹೋ….. ಇದೆಲ್ಲ ನರೇಂದ್ರನ ಕೆಲಸವೇನು…… ನಮ್ಮ ಕುಟುಂಬದ ವಿಷಯದಲ್ಲಿ ತಲೆ ತೂರಿಸಲು ಅವನಿಗೇನು ಅಧಿಕಾರವಿದೆ….?” ತಂದೆಯ ಬಾಯಲ್ಲಿ ನರೇಂದ್ರನ ಹೆಸರು ಕೇಳಿದೊಡನೆ ಕಾಂಚನಾ ಕ್ಷುದ್ರಳಾದಳು. ತನ್ನ ಕೈ ಬಿಡಿಸಿಕೊಳ್ಳುತ್ತಾ ಅವಳು ಹೇಳಿದಳು, “ಅಪ್ಪಾ, ನೀವು ನಮ್ಮ ಚಿಂತೆ ಮಾಡಬೇಡಿ…. ನಮಗೇನೂ ತೊಂದರೆಯಿಲ್ಲ….. ಅಜ್ಜಿ ಮತ್ತು ಕಿಶೋರನನ್ನು ನಾನು ನೋಡಿಕೊಳ್ಳುತ್ತೇನೆ…. ಅವರೇನೂ ನನಗೆ ಭಾರವಿಲ್ಲ….” ವರ್ಷಗಳಿಂದ ಮನಸ್ಸಿನಲ್ಲಿ ಅದುಮಿಟ್ಟಿದ್ದ ಕಹಿ ಕರಗಿ ಹೊರಬಂದಿತು.
“ನಾನು ಇದುವರೆಗೆ ನಿಮಗೆ ಮಾಡಿರುವ ಅನ್ಯಾಯಕ್ಕೆ ಪಶ್ಚಾತ್ತಾಪಪಡುತ್ತಾ ಇದ್ದೇನೆ. ನಾನು ಮತ್ತಷ್ಟು ತಲೆ ತಗ್ಗಿಸುವಂತೆ ಮಾಡಬೇಡಮ್ಮ. ಅಮ್ಮ ಮತ್ತು ಕಿಶೋರನ ಜವಾಬ್ದಾರಿ ನಿನ್ನದಲ್ಲ, ಅದು ನನ್ನದು,” ಬಸವರಾಜು ದುಃಖದಿಂದ ಹೇಳಿದರು.
ಆಗ ನರೇಂದ್ರ ಬರುತ್ತಿರುವುದನ್ನು ನೋಡಿ ಕಾಂಚನಾ ಕೋಪದಿಂದ ಅವನತ್ತ ಕಣ್ಣುಬಿಟ್ಟಳು. ಬಸವರಾಜು ಅದನ್ನು ಗಮನಿಸಿ, “ಇಷ್ಟು ದಿನ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುತ್ತೇನೆ. ಕಿಶೋರ್ ಮತ್ತು ಅಮ್ಮನನ್ನು ನನ್ನ ಜೊತೆ ಕರೆದೊಯ್ಯುತ್ತೇನೆ. ತಂದೆಯಾಗಿ ನನ್ನ ಮತ್ತೊಂದು ದೊಡ್ಡ ಜವಾಬ್ದಾರಿ ಇದೆ. ಅದನ್ನು ನೆರವೇರಿಸಿದ ನಂತರವೇ ನನಗೆ ನೆಮ್ಮದಿ ಸಿಗಲು ಸಾಧ್ಯ……” ಎಂದು ಹೇಳಿದರು.
ಕಾಂಚನಾ ಪ್ರಶ್ನಾರ್ಥಕ ದೃಷ್ಟಿಯಿಂದ ಅವರತ್ತ ನೋಡಿಳು.“ಕಾಂಚನಾ, ನರೇಂದ್ರ ಬಹಳ ಒಳ್ಳೆಯ ಹುಡುಗ….. ನಿನ್ನನ್ನು ಸುಖವಾಗಿರಿಸಿಕೊಳ್ಳುತ್ತಾನೆ….. ನಿನ್ನ ಬಗ್ಗೆ ಅವನಿಗೆ ಬಹಳ ಕಾಳಜಿ ಇದೆ. ಅವನ ಪ್ರೀತಿಗೆ ಬೆಲೆ ಕೊಟ್ಟು ನೀನು ಅವನೊಡನೆ ಮದುವೆಗೆ ಒಪ್ಪಿಕೊ,” ನರೇಂದ್ರನ ಪರವಾಗಿ ಬಸವರಾಜು ಮಗಳಿಗೆ ಹೇಳಿದರು.
“ಅಪ್ಪಾ, ನೀವು ಕಿಶೋರ್ ಮತ್ತು ಅಜ್ಜಿಯನ್ನು ಕರೆದುಕೊಂಡು ಹೋದರೆ ನಿಮ್ಮ ಹೆಂಡತಿ ಸುಮ್ಮನಿರುತ್ತಾಳಾ?” ಕಾಂಚನಾ ಬೇಸರ ಮತ್ತು ಅನುಮಾನದಿಂದ ಕೇಳಿದಳು.
“ಯಾವ ಹೆಂಡತಿ……? ಆ ಹೆಂಗಸು 2 ವರ್ಷದ ಹಿಂದೆ ತಾಯಿ ಮತ್ತು ಮಗನನ್ನು ನೋಡಿಕೊಳ್ಳದಿರುವ ನೀವು ನನ್ನನ್ನು ನಿಜವಾಗಿ ನೋಡಿಕೊಳ್ಳುವಿರಾ ಎಂದು ಛೇಡಿಸಿ ನನ್ನಿಂದ ದೂರವಾಗಿಬಿಟ್ಟಳು…. ಅವಳು ಹೇಳಿದ್ದು ಸರಿಯಾಗಿತ್ತು…. ನನ್ನ ತಪ್ಪನ್ನು ಕನ್ನಡಿ ಹಿಡಿದು ತೋರಿಸಿದ್ದಳು….. ಆದರೆ ನನಗೆ ನಿನ್ನ ಮುಂದೆ ಬರಲು ಧೈರ್ಯವಿರಲಿಲ್ಲ…. ಹೇಗೆ ನಿನಗೆ ಮುಖ ತೋರಿಸಲಿ ಅಂತ ಸುಮ್ಮನಿದ್ದು ಬಿಟ್ಟೆ….. ಈಗ ನರೇಂದ್ರ ನನಗೆ ಧೈರ್ಯ ತುಂಬಿ ಇಲ್ಲಿಗೆ ಬರುವಂತೆ ಮಾಡಿದ್ದಕ್ಕೆ ಅದೆಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು,” ಬಸವರಾಜರ ಕಣ್ಣಿನಿಂದ ನೀರು ಹರಿಯಿತು.
ಕಾಂಚನಾ ಪ್ರೀತಿಯಿಂದ ನರೇಂದ್ರನತ್ತ ನೋಡಲು ಅವನು ತುಂಟ ನಗೆ ಬೀರಿದ, “ಕಾಂಚನಾ, ನಾನು ಸಣ್ಣದೊಂದು ನೌಕರಿಯಲ್ಲಿದ್ದೇನೆ ನಿಜ. ನನ್ನಲ್ಲಿ ಹೆಚ್ಚು ಹಣವಿಲ್ಲ, ಆದರೆ ನಿನಗಾವ ಕೊರತೆಯೂ ಆಗದಂತೆ ನೋಡಿಕೊಳ್ಳುವೆಂನೆಂದು ಪ್ರಾಮಿಸ್ ಮಾಡುತ್ತೇನೆ. ನಿನ್ನ ಮುಂದಿನ ಜೀವನ ಸುಖವಾಗಿರುವಂತೆ ವ್ಯವಸ್ಥೆ ಮಾಡುತ್ತೇನೆ.”
“ಕಾಂಚನಾ, ಆದಷ್ಟು ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡು. ನಾಳೆ ನಾನೂ ಬಂದು ಉಳಿದ ಸಾಮಾನುಗಳನ್ನು ಕಟ್ಟಿಡುತ್ತೇನೆ. ಆಮೇಲೆ ಟ್ಯಾಕ್ಸಿ ತಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ,” ಎಂದು ಹೇಳಿ ಬಸವರಾಜು ನರೇಂದ್ರನತ್ತ ತಿರುಗಿ ಹೇಳಿದರು, “ಬರುವ ಭಾನುವಾರ ನೀನು ನಿಮ್ಮ ಮನೆಯರನ್ನು ಕರೆದುಕೊಂಡು ಬಾ. ಮದುವೆಯ ಮಾತುಕಥೆಯನ್ನು ಹಿರಿಯರೊಂದಿಗೆ ನಡೆಸುವುದೇ ಸರಿಯಾಗಿರುತ್ತದೆ.”
ಕಾಂಚನಾ ಕಣ್ಣೀರನ್ನು ಒರೆಸಿಕೊಳ್ಳುತ್ತಾ, “ನನ್ನದೊಂದು ಷರತ್ತಿನ ಮೇಲೆ ನಿಮ್ಮೆಲ್ಲರ ಮಾತನ್ನು ಒಪ್ಪಿಕೊಳ್ಳುತ್ತೇನೆ…… ನೀವೆಲ್ಲರೂ ಅನವಶ್ಯಕವಾಗಿ ಮೊಬೈಲ್ ಫೋನ್‌ನ್ನು ಬಳಸುವುದಿಲ್ಲವೆಂದು ನನಗೆ ಮಾತು ಕೊಡಬೇಕು….. ಅವಶ್ಯಕತೆ ಇದ್ದಾಗ ಮಾತ್ರ ಅದನ್ನು ಉಪಯೋಗಿಸಬೇಕು, ಶೋಕಿಗಾಗಿ ಅಲ್ಲ…..”
“ಪ್ರಾಮಿಸ್!” ಎಲ್ಲರೂ ಒಟ್ಟಿಗೆ ಕೂಗಿ ಹೇಳಿದರು. ನಗೆ ಅಲೆಅಲೆಯಾಗಿ ಮನೆ ತುಂಬ ಹರಡಿತು.