ಗೀತಾಳ ನಡವಳಿಕೆ ಮತ್ತು ವ್ಯವಹಾರಗಳನ್ನು ಕಂಡು ಶೋಭಾ ಸ್ತಂಭಿತಳಾದಳು. 1-2 ಭೇಟಿಯಲ್ಲೇ ಎದುರಿನಲ್ಲಿರುವ ವ್ಯಕ್ತಿಯ ಸ್ವಭಾವವನ್ನು ಅರಿಯಬಲ್ಲವಳಾಗಿದ್ದ ಶೋಭಾಳ ಎಣಿಕೆ ಸಂಪೂರ್ಣವಾಗಿ ತಪ್ಪಾಗಿಬಿಟ್ಟಿತ್ತು.
ಮಂಗಳೂರಿನಿಂದ ಶೋಭಾಳ ಚಿಕ್ಕಪ್ಪ ಫೋನ್ ಮಾಡಿದ್ದರು. ಅವರ ಸ್ನೇಹಿತನ ಮಗಳಿಗೆ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದೆ. ನಾಲ್ಕಾರು ದಿನ ನೀನು ಅವಳನ್ನು ಮನೆಯಲ್ಲಿರಿಸಿಕೊಂಡರೆ, ಆಮೇಲೆ ಅವಳು ಬೇರೆ ಜಾಗ ನೋಡಿಕೊಂಡು ಹೋಗುತ್ತಾಳೆ. ಹೀಗೆಂದು ಹೇಳಿ ಚಿಕ್ಕಪ್ಪ ಆ ಹುಡುಗಿಯನ್ನು ಶೋಭಾಳ ಮನೆಗೆ ಕಳುಹಿಸಿಕೊಟ್ಟಿದ್ದರು. ಇಲ್ಲಿ ವಾಸಿಸಲು ತೊಡಗಿ 3 ತಿಂಗಳಾಗಿದೆ. ಆ ಹುಡುಗಿ ಮನೆಯ ಮೇಲೆ ಅಧಿಕಾರ ಸ್ಥಾಪಿಸುವಂತಿದೆ. ಹಿಂದಿನ ದಿನವಂತೂ ಶೋಭಾ ಏನೂ ಅರ್ಥವಾಗದೆ ಕಣ್ಣರಳಿಸಿ ನಿಂತಿದ್ದೇ ಆಯಿತು. ಮನೆ ನೋಡಲು ತಾಯಿ ಮತ್ತು ಮಗ ಬಂದಿದ್ದರು. ಅವರ ಮುಂದೆ ಗೀತಾ ಅದು ತನ್ನದೇ ಮನೆ ಎಂಬಂತೆ ವ್ಯವಹರಿಸಿದಳು.
“ಮನೆ ಬಹಳ ಚೆನ್ನಾಗಿದೆ….. ಸೋಫಾ, ಕರ್ಟನ್ಸ್ ಎಲ್ಲ ಬಹಳ ಹೊಂದಿಕೊಂಡಿವೆ….. ಈ ಪೇಂಟಿಂಗ್ ನೀನು ಮಾಡಿದೆಯಾ? ಇದಕ್ಕೆಲ್ಲ ಸಮಯ ಹೇಗೆ ಸಿಗುತ್ತದೆ?”
“ಆಸಕ್ತಿ ಇದ್ದರೆ ಸಮಯ ಸಿಕ್ಕೇ ಸಿಗುತ್ತದೆ ಆಂಟಿ.”
ಇದನ್ನು ಕೇಳಿ ಶೋಭಾ ಬೆರಗಾದಳು, `ನಾನು ಪೇಂಟ್ ಮಾಡಿದ ಕಲಾಕೃತಿಯನ್ನು ಒಂದಿಷ್ಟೂ ಹಿಂಜರಿಕೆಯಿಲ್ಲದೆ ಈ ಹುಡುಗಿ ತನ್ನದೆಂದು ಹೇಳಿಕೊಂಡಳಲ್ಲ,’ ಆದರೂ ಬಂದರ ಎದುರಿಗೆ ಮುಜುಗರವಾಗಬಾರದೆಂದು ಶೋಭಾ ಮಾತನಾಡಲಿಲ್ಲ.
“ನೀವು ಗೀತಾಳ ಆಂಟಿ ಅಲ್ಲವೇ? ಇನ್ನೂ ಸ್ವಲ್ಪ ದಿವಸ ಇಲ್ಲೇ ಇರುತ್ತೀರಿ ತಾನೇ….. ಈ ಭಾನುವಾರ ನಮ್ಮ ಮನೆಗೆ ಬನ್ನಿ,” ಹೊರಡುವಾಗ ಆ ಮಹಿಳೆ ತನ್ನ ಕಾರ್ಡ್ ಕೊಟ್ಟು ಆಹ್ವಾನಿಸಿದರು.
ಶೋಭಾಳ ಮಗ ಸುಮಂತ್ ಹೈದರಾಬಾದ್‌ನಲ್ಲಿ ಕೆಲಸದಲ್ಲಿದ್ದ. ಅವಳ ಪತಿ ಕಾಲವಾಗಿ 3 ವರ್ಷಗಳಾಗಿತ್ತು. ಶೋಭಾ ಒಬ್ಬಳೇ ಇದ್ದಾಳೆ. ಅವಳು ತನ್ನ ಫ್ಲಾಟ್‌ನ್ನು ಬಹಳ ಮುತುರ್ಜಿಯಿಂದ ಅಲಂಕರಿಸಿದ್ದಾಳೆ.
ಈ ಹುಡುಗಿ ಯಾವ ಆಟ ಆಡುತ್ತಿದ್ದಾಳೆ? ಕಡೆಗೆ ನನ್ನನ್ನು ಅಪಾಯದ ಅಂಚಿಗೆ ತಳ್ಳಿಬಿಡಬಹುದು ಎನ್ನಿಸಿ ಶೋಭಾ ಚಿಕ್ಕಪ್ಪನಿಗೆ ಪೋನ್ ಮಾಡಿದಳು.“ಏನು….. ಅವಳಿನ್ನೂ ನಿನ್ನ ಮನೆಯಲ್ಲೇ ಇದ್ದಾಳಾ…..? ಕಳೆದ ಸಲ ಬಂದಾಗ ಬೇರೆ ಜಾಗ ನೋಡಿಕೊಂಡಿದ್ದೇನೆ. ಶಿಫ್ಟ್ ಮಾಡುತ್ತೇನೆ ಅಂತ ಹೇಳಿದ್ದಳಲ್ಲ……”
ಅದು 2 ತಿಂಗಳ ಹಿಂದಿನ ಮಾತು. ಈಗ ವಿಷಯ ತಿಳಿದು ಚಿಕ್ಕಪ್ಪ ಆಶ್ಚರ್ಯಗೊಂಡರು. ಆದರೆ ಉಳಿದ ವಿಷಯವನ್ನೆಲ್ಲ ಶೋಭಾ ಹೇಳಲು ಹೋಗಲಿಲ್ಲ.
“ನಿನಗೆ ಹಣ ಕೊಟ್ಟಳಾ….? ಊಟ ತಿಂಡಿಗೆ ಮತ್ತು ವಾಸಕ್ಕೆ ಎಲ್ಲದಕ್ಕೂ ಹಣ ಕೊಡುತ್ತೇನೆ ಅಂತ ಹೇಳಿದ್ದಳು……”
“ಇಲ್ಲ ಚಿಕ್ಕಪ್ಪ…. ಮಕ್ಕಳು ಊಟ ತಿಂಡಿ ಮಾಡಿದ್ದಕ್ಕೆ ನಾನು ಹಣ ತೆಗೆದುಕೊಳ್ಳಬೇಕೇ?”
ಚಿಕ್ಕಪ್ಪ ಮತ್ತೂ ಬೆರಗಾದರು, “ಈ ಹುಡುಗಿ ಇಷ್ಟೊಂದು ಕಿಲಾಡಿ ಅಂತ ನನಗೆ ಗೊತ್ತಿರಲಿಲ್ಲ. 8-10 ದಿವಸಕ್ಕೆ ಅಂತ ನಾನು ಹೇಳಿದ್ದೆ. ಈಗಾಗಲೇ 3 ತಿಂಗಳಾಗಿದೆ. ಇದು ಬಹಳ ಹೆಚ್ಚಾಯಿತು. ನಿನಗೆ ಹೇಗೆ ಸರಿ ಅನ್ನಿಸುತ್ತದೋ ಹಾಗೆ ಮಾಡು. ನನ್ನದೇನೂ ಅಭ್ಯಂತರವಿಲ್ಲ.”
“ಸರಿ ಚಿಕ್ಕಪ್ಪ…..”
ಹೇಗೆ ಸರಿ ಮಾಡುವುದು ಎಂದು ಶೋಭಾ ಯೋಚಿಸತೊಡಗಿದಳು. ಪಕ್ಕದ ಫ್ಲಾಟ್‌ನ ನಳಿನಿಯೊಂದಿಗೆ ಶೋಭಾಗೆ ಸ್ನೇಹವಿತ್ತು. ಗೀತಾ ಸಹ ಅವಳೊಂದಿಗೆ ಮಾತುಕತೆ ಆಡುತ್ತಿದ್ದುದುಂಟು.
ಶೋಭಾ ಮೊದಲ ಬಾರಿಗೆ ನಳಿನಿ ಜೊತೆ ಈ ವಿಷಯ ಮಾತನಾಡಿದಳು.“ನಿಮಗೆ ತಿಂಗಳಿಗೆ 10 ಸಾವಿರ ಕೊಡುತ್ತಿದ್ದೇನೆ ಅಂತ ಗೀತಾ ಹೇಳುತ್ತಿದ್ದಳು,” ಎಂದಳು.
ಶೋಭಾ ಬೆಚ್ಚಿದಳು. ಭಯ ಆಯಿತು. ಉಳಿದ ವಿಷಯವನ್ನೆಲ್ಲ ವಿಸ್ತಾರವಾಗಿ ತಿಳಿಸಿದಳು. ಎಲ್ಲವನ್ನೂ ಕೇಳಿ ನಳಿನಿ ಆಶ್ಚರ್ಯಗೊಂಡಳು, “ಶೋಭಾ, ಇದು ಮಿತಿ ಮೀರಿದೆ…… ತಾಯಿ, ಮಗ ಬಂದಿದ್ದರು ಅಂದಿರಲ್ಲ ಅವರ ವಿಳಾಸ ಗೊತ್ತಿದೆಯಾ?”
“ಆ ಹೆಂಗಸು ಕಾರ್ಡ್ ಕೊಟ್ಟಿದ್ದರು….. ಮನೆಗೆ ಬನ್ನಿ ಎಂದರು.”
“ಈ ಹುಡುಗಿಗೆ ಭಯವೇ ಇಲ್ಲವೇನು? ಆ ತಾಯಿ ಮಗ ಇಲ್ಲಿಗೆ ಏನು ನೋಡೋದಕ್ಕೆ ಬಂದಿದ್ದರು ಅಂತ ತಿಳಿದುಕೊಳ್ಳಬೇಕು,” ನಳಿನಿ ಸಲಹೆ ನೀಡಿದಳು.
ಶೋಭಾ ಮನೆಗೆ ಬಂದು ಕಾರ್ಡ್ ಹುಡುಕಿಕೊಂಡು ಫೋನ್ ಮಾಡಿ, “ನಾನು ಗೀತಾಳ ಆಂಟಿ ಮಾತಾಡುತ್ತಿದ್ದೇನೆ,” ಎಂದಳು.
“ಓಹೋ, ನೀವು ನಮ್ಮ ಮನೆಗೆ ಬರಲೇ ಇಲ್ಲ…… ನೀವು ಬೇಗನೆ ಊರಿಗೆ ಹೋದಿರಿ, ಬರುವುದಕ್ಕಾಗಲಿಲ್ಲ ಅಂತ ಗೀತಾ ಹೇಳಿದಳು. ಪ್ರಯಾಣದಲ್ಲಿ ತೊಂದರೆ ಆಗಲಿಲ್ಲ ತಾನೇ?” ಎಂದರು.
“ಕ್ಷಮಿಸಿ, ನೀವು ಹೇಳುವುದು ನನಗೆ ಅರ್ಥವಾಗಲಿಲ್ಲ… ಯಾವ ಊರಿಗೆ ಪ್ರಯಾಣ ಮಾಡುವ ವಿಷಯ ಹೇಳುತ್ತಿದ್ದೀರಿ? ನಾನು ಇಲ್ಲೇ ಬೆಂಗಳೂರಿನಲ್ಲೇ ವಾಸ ಮಾಡುತ್ತಿರುವವಳು. ನೀವು ಬಂದಿದ್ದರಲ್ಲ, ಅದು ನನ್ನದೇ ಮನೆ. ಗೀತಾ ನನ್ನ ಚಿಕ್ಕಪ್ಪನ ಸ್ನೇಹಿತರ ಮಗಳು. 3 ತಿಂಗಳಿನಿಂದ ನಮ್ಮ ಮನೆಯಲ್ಲಿದ್ದಾಳೆ ಅಷ್ಟೇ. ಅದಕ್ಕಿಂತ ಹೆಚ್ಚಾಗಿ ನನಗೆ ಅವಳ ವಿಷಯ ಏನೂ ಗೊತ್ತಿಲ್ಲ.”
ಈಗ ಬೆರಗಾಗುವ ಸರದಿ ಆ ಮಹಿಳೆಯದಾಯಿತು. “ಮತ್ತೆ, ಆ ಫ್ಲಾಟ್ ಅವಳ ತಂದೆಯದು ಅಂತ ಅವಳು ಹೇಳಿದಳಲ್ಲ….. ಅವಳ ತಂದೆ ಮಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ ಅಂದಳು. ನನ್ನ ಮಗನಿಗೆ ಅವಳು ಬಹಳ ಇಷ್ಟವಾದಳು. ಅದಕ್ಕೇ ಮನೆ ನೋಡೋಣ ಅಂತ ಬಂದೆ. ಫ್ಲಾಟ್ ವಿಷಯ ಬೇಡ, ನನಗೆ ಒಳ್ಳೆಯ ಸೊಸೆ ಬೇಕು. ಆದರೆ, ಈ ಹುಡುಗಿ ಇಷ್ಟೊಂದು ಸುಳ್ಳು ಏಕೆ ಹೇಳಿದಳು?”
ಇಬ್ಬರು ಮಹಿಳೆಯರೂ ಬಹಳ ಹೊತ್ತು ಮಾತನಾಡಿದರು.
ಸಾಯಂಕಾಲ 6 ಗಂಟೆಗೆ ಗೀತಾ ಮನೆಗೆ ಬಂದಳು. ಅಷ್ಟರಲ್ಲಿ ಶೋಭಾ ಅವಳ ಸಾಮಾನುಗಳನ್ನೆಲ್ಲ ಬಾಗಿಲ ಬಳಿ ತಂದಿರಿಸಿದ್ದಳು. ಅದನ್ನು ಕಂಡು ಗೀತಾ ಚಕಿತಳಾದಳು.
“ಗೀತಾ, ನಿನ್ನ ಆಟ ಸಾಕು. ಇಲ್ಲಿಂದ ಹೊರಡು!”
ಗೀತಾಳ ಮುಖ ಬಿಳಿಚಿಕೊಂಡಿತು.
“ಎಲ್ಲರ ಜೊತೆಯಲ್ಲಿ ಏಕೆ ಸುಳ್ಳು ಹೇಳಿದೆ? ಚಿಕ್ಕಪ್ಪನ ಬಳಿ ಹಣ ಕೊಡುತ್ತಿದ್ದೇನೆ ಅಂತ ಹೇಳಿ, ನಳಿನಿ ಬಳಿ ತಿಂಗಳಿಗೆ 10 ಸಾವಿರ ಕೊಡುತ್ತೇನೆ ಎಂದು ಹೇಳಿದ್ದಿ. ಒಳ್ಳೆ ಹುಡುಗ ಸಿಕ್ಕಿದ ಅಂತ ನನ್ನ ಮನೆಯನ್ನೇ ನಿನ್ನ ಮನೆ ಅಂದಿದ್ದೀಯ. ನಿನಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಹಾಗಿರುವಾಗ ಸುಳ್ಳಿನ ಸರಮಾಲೆ ಪೋಣಿಸಿ ನೀನೇ ನಿನ್ನ ಬಾಳು ಹಾಳು ಮಾಡಿಕೊಂಡೆಯಲ್ಲ…”
“ಆಂಟಿ…. ನೀವು ಏನು ಹೇಳುತ್ತಿದ್ದೀರಿ…. ನನಗೆ ಅರ್ಥವಾಗುತ್ತಿಲ್ಲ…..”
“ಸಾಕು ನಿನ್ನ ನಾಟಕ….. ನೀನು ಇಂಥವಳು ಅಂತ ಅರ್ಥ ಮಾಡಿಕೊಳ್ಳದೆ 3 ತಿಂಗಳು ನಿನಗೆ ಆಶ್ರಯ ಕೊಟ್ಟಿದ್ದೇನಲ್ಲ, ನನಗೆ ಬುದ್ಧಿ ಇಲ್ಲ. ಇದನ್ನು ತಿಳಿದುಕೊಳ್ಳುವುದಕ್ಕೆ ಇಷ್ಟು ಸಮಯ ತೆಗೆದುಕೊಂಡಿದ್ದೇನೆ. ಮಣ್ಣಿನ ಮಡಕೆ ಬೆಂಕಿಯಲ್ಲಿ ಬೆಂದು ಬೆಂದು ಗಟ್ಟಿಯಾಗುತ್ತದೆ. ಆದರೆ ನೀನು ಹಸಿ ಮಡಕೆ.”
“ಗೀತಾ ಅಕ್ಕಾ, ರಿಕ್ಷಾ ಬಂದಿದೆ,” ನಳಿನಿಯ ಮಗ ಕೂಗಿ ಹೇಳಿದ.
6 ಗಂಟೆಯಾಗಿದೆ. ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗುವುದೆಂದು ಗೀತಾ ಗಲಿಬಿಲಿಗೊಂಡಳು.
“ಆಚೆ ರಸ್ತೆಯಲ್ಲಿ ಒಂದು ಗರ್ಲ್ಸ್ ಹಾಸ್ಟೆಲ್ ಇದೆಯಲ್ಲ. ಅಲ್ಲಿ ರೂಮ್ ಸಿಗುತ್ತದೆ. ಯೋಚನೆ ಮಾಡಬೇಡ ಹೋಗು.”
ಗೀತಾ ಅತ್ತಳು. ಅದು ದುಃಖ ಮತ್ತು ಅವಮಾನದಿಂದ ಬಂದ ಅಳುವೋ ಅಥವಾ ಒಂದು ಒಳ್ಳೆಯ ಉಚಿತವಾದ ಸ್ಥಳ ಕೈ ತಪ್ಪಿ ಹೋಗುವುದೆಂಬ ನಿರಾಶೆಯೋ ಗೊತ್ತಿಲ್ಲ…….
“ಆಂಟಿ, ನಿಮಗೆ ಕೊಡಬೇಕಾದ ಹಣ ಕೊಡುತ್ತೇನೆ,” ಗೀತಾ ಕಡೆಯ ಬಾಣ ಎಸೆದಳು.
“ಬೇಡಮ್ಮ ತಾಯಿ, ನಿನ್ನಿಂದ ನಾನೊಂದು ಒಳ್ಳೆಯ ಪಾಠ ಕಲಿತುಕೊಂಡ ಹಾಗಾಯಿತು. ಹೋಗು,” ಬ್ಯಾಗ್‌ನ್ನು ಅವಳ ಕೈಗೆ ಎತ್ತಿಕೊಡುತ್ತಾ ಶೋಭಾ ಹೇಳಿದಳು.
ಶೋಭಾ ಭಾರವಾದ ಮನಸ್ಸಿನಿಂದ ಗೀತಾಳನ್ನು ಬೀಳ್ಕೊಟ್ಟಳು. ಬೀಳ್ಕೊಡಿಗೆ ಈ ರೀತಿಯಲ್ಲಿ ಆಗಬಹುದೆಂದು ಅವಳೆಂದೂ ಯೋಚಿಸಿರಲಿಲ್ಲ.