“ರೀ… ನೀವಂತೂ ಮೊದಲಿನ ತರಹ ಇಲ್ಲವೇ ಇಲ್ಲ ಬಿಡಿ!” ಬೆಳಗಿನ ಬಿಸಿ ಕಾಫಿ ಹೀರುವ ಸಮಯದಲ್ಲಿ ನನ್ನ ಶ್ರೀಮತಿ ಹೀಗೊಂದು ನೇರ ಪ್ರಸ್ತಾಪ ಇಡುವುದೇ? ನಾನೋ…. ಬೈ ಎಲೆಕ್ಷನ್‌ ಭರಾಟೆಯಲ್ಲಿ ಎಲ್ಲಿ ನಮ್ಮ ಸರ್ಕಾರ ಬಿದ್ದು ಹೋದೀತೋ ಎಂದು ಯೋಚಿಸುತ್ತಿದ್ದೆ.

“ಅಯ್ಯೋ ಹುಚ್ಚಿ…. 40 ವರ್ಷಗಳು ಕಳೆದ ಮೇಲೆ ನಿನಗೇಕೆ ಈ ಡೌಟು?”

“ನೋಡಿ…. ಈ ಸಂಸಾರದ ಪ್ರಗತಿಗಾಗಿ ನಾನು ಎಷ್ಟೆಲ್ಲ ದುಡಿದಿದ್ದೇನೆ…. ನೀವು ಇದ್ದೀರಿ, ನನ್ನ ಪರಿಶ್ರಮವನ್ನೆಲ್ಲ ಹೊಳೆಯಲ್ಲಿ ಕಿವುಚಿದ ಹುಣಿಸೆ ಮಾಡಿದ್ದೀರಿ!” ಎಂದು ಗುಡುಗಿದಳು.

“ಇದೇನೇ ಇದು ಹೀಗೆ ಹೇಳಿಬಿಟ್ಟೆ….. ಮಧ್ಯಮ ವರ್ಗದವರಾದ ನಾವು ಕೇವಲ ಸಂಸಾರದ ಚಿಂತೆ ಮಾತ್ರ ಮಾಡುವುದಲ್ಲ….. ರಾಜ್ಯ, ರಾಷ್ಟ್ರದ ಬಗ್ಗೆಯೂ ಚಿಂತಿಸುತ್ತಿರುತ್ತೇವೆ. ಯಾರೋ ಮಹಾನ್‌ ರಾಜಕಾರಣಿಗಳು ವೇದಿಕೆಯಲ್ಲಿ ಕುಳಿತಿದ್ದರೂ ಸದಾ ಕಣ್ಣು ಮುಚ್ಚಿಕೊಂಡು ದೇಶದ ಪ್ರಗತಿಯ ಬಗ್ಗೆ ಸದಾ ಚಿಂತಿಸುತ್ತೇನೆ ಎಂಬಂತೆ ಪೋಸ್‌ ಕೊಡ್ತಾರಲ್ಲ, ಹಾಗೆ ಅಂತ ಅಂದುಕೊಳ್ಳಬೇಡ ಮತ್ತೆ!” ನಾನೂ ಸರಿಯಾಗಿ ತಿರುಗೇಟು ಕೊಟ್ಟೆ.

“ಓಹೋ…. ಇದಕ್ಕೆಲ್ಲ ಏನೂ ಕಡಿಮೆ ಇಲ್ಲ ಬಿಡಿ.”

“ಅದು ಸರಿ, ನಮ್ಮ ಸರ್ಕಾರದಲ್ಲಿ ಅದೇನು ಕೊರತೆ ಕಂಡೆ ನೀನು?”

“ನಿಮ್ಮದಿರಲಿ….. ನಮ್ಮ ಸರ್ಕಾರದ ಪ್ರವರ ಹೇಳಲು ಶುರು ಮಾಡಿದರೆ ನಡೆಯುತ್ತಿರುವ ನಿಮ್ಮ ಸರ್ಕಾರದ ಗಾಡಿಯ ಚಕ್ರ ಹಳ್ಳದಲ್ಲಿ ಹೂತುಹೋದೀತು!”

ನನ್ನ ಇಂತಹ ಎಚ್ಚರಿಕೆ, ಸೂಚನೆಗಳ ಬಗ್ಗೆ ಅವಳೆಂದೂ ಗಮನ ಕೊಡುವವಳೇ ಅಲ್ಲ. ಈ ಸಲ ಅವಳು ನನ್ನ ಮಾತುಗಳನ್ನು ನಿರ್ಲಕ್ಷಿಸುತ್ತಿದ್ದಳೇನೋ, ಆದರೆ ನಾನು ಆವೇಶದಿಂದ ತುಸು ಗಟ್ಟಿಯಾಗಿಯೇ ಮಾತನಾಡಿದ್ದೆ. ಪರಿಣಾಮವಾಗಿ ಅವಳು ದಾಂಪತ್ಯ ಜೀವನದ ಶಾಂತಿ ಭಂಗ ಮಾಡಿ, ನೆಮ್ಮದಿಯ ಸೀಮೋಲ್ಲಂಘನ ಮಾಡಿದ್ದಳು. ಆವೇಶ ಇಳಿದ ಮೇಲೆ ತಾನೇ ತುಸು ಸರಿಹೋದಳು.

ಅವಳನ್ನು ನಾರ್ಮಲ್ ಮೋಡ್‌ಗೆ ತರಲು ಯತ್ನಿಸುತ್ತಾ ಹೇಳಿದೆ, “ಹಸುಗೂಸಿನ ಸ್ವಭಾವದ ನಿನ್ನ ಗಂಡ, ಆಫೀಸ್‌ ಬಿಟ್ಟ ತಕ್ಷಣ ಸೀದಾ ಮನೆಗೆ ಬಂದುಬಿಡ್ತಾನೆ. ಬರುವ ದಾರಿ ತುಂಬಾ ಸಾವಿರಾರು ಅಬಲೆ ಸಬಲೆಯರು ಡಿಕ್ಕಿ ಹೊಡೆಯುತ್ತಿದ್ದರೂ ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ, ಅಂಥ ಕಟ್ಟುನಿಟ್ಟು, ಏಕಪತ್ನೀ ವ್ರತಸ್ಥ ಆಗಿರಬೇಕೆಂಬ ನೇಮ, ನಿಷ್ಠೆ ಉಂಟು. ಹೀಗಿರವಾಗ ನಾನು ಮೊದಲಿನಂತೆ ಉಳಿದಿಲ್ಲ ಅಥವಾ ಪ್ರೀತಿಸುತ್ತಿಲ್ಲ ಅಂದ್ರೆ ಏನರ್ಥ?”

“ಇರಲಿ, ಮೊದಲು ಈಗಿನ ನಿಮ್ಮ ಪ್ರೀತಿಯಲ್ಲಿ ಏನೇನು ಉತ್ತಮ ಅಂಶಗಳಿವೆ ಅಂತ ಹೇಳಿಬಿಡಿ, ಆಮೇಲೆ ಅದರಲ್ಲಿ ಏನೇನು ಲೋಪದೋಷಗಳಿವೆ ಅಂತ ಪಟ್ಟಿ ಮಾಡೋಣ. ನಮ್ಮ ಮದುವೆ ಆಗಿ 40 ವರ್ಷಗಳಾದ ಮೇಲೆ ಪಾರ್ಲಿಮೆಂಟ್‌ನಲ್ಲಿ ಅಪರೂಪಕ್ಕೆ ವಿರೋಧ ಪಕ್ಷದವರು ಬಾಯಿ ಬಿಡುವಂತೆ ಬಿಟ್ಟಿದ್ದೀರಿ,” ಎಂದು ತಿಪ್ಪೆ ಸಾರಿಸಿದಳು.

“ಉದಾಹರಣೆಗೆ ಹೇಳು ನೋಡೋಣ….”

“ಉದಾ ಹೇಳುವುದಾದರೆ… ಹ್ಞಾಂ, ನಮ್ಮ ಹನಿಮೂನ್‌ ನೆನಪಿಸಿಕೊಳ್ಳಿ. ಆಗ ಎಲ್ಲದಕ್ಕೂ ನೀವು ಗುಡುಗುಡು ಅಂತ ಮುಂದೆ ಓಡಿ ಬಂದು ಎಲ್ಲಾ ಕೆಲಸಕ್ಕೂ ಕೈ ಹಾಕುತ್ತಿದ್ದಿರಿ. ರೈಲಿನಿಂದ ಮೊದಲು ಕೆಳಗಿಳಿದು, ನನ್ನ ಬಳಿಯಿದ್ದ ಲಗೇಜ್‌ ಪಡೆದು ನೀವೇ ಹೊತ್ತುಕೊಂಡು ಬರ್ತಿದ್ರಿ. ಪ್ರತಿ ಹೋಟೆಲ್‌ಗೆ ಊಟತಿಂಡಿ ಅಂತ ಹೋದಾಗಲೂ ಮೊದಲು ನನ್ನ ಕೈಗೆ ಮೆನುಕಾರ್ಡ್‌ ಕೊಟ್ಟು ನಾನು ಹೇಳುತ್ತಿದ್ದುದನ್ನೇ ತರಿಸುತ್ತಿದ್ದಿರಿ. ನಾನು ಕೇಳದೆಯೇ ಶಾಪಿಂಗ್‌ಗೆ ಕರೆದುಕೊಂಡು ಹೋಗಿ, ಹಲವು ಅಂಗಡಿಗಳ ಮೆಟ್ಟಿಲು ಏರಿ ಇಳಿದು, ಮಾಲ್‌ಗಳಲ್ಲಿ ಎಷ್ಟೇ ಸುತ್ತಾಡಿದರೂ ಹಿಂದೆ ಹಿಂದೆಯೇ ಬಂದು ಎಲ್ಲಾ ಕವರ್‌, ಬ್ಯಾಗ್‌ ಹೊತ್ತು ತರುತ್ತಿದ್ದಿರಿ. ಅಷ್ಟು ಮಾತ್ರವಲ್ಲದೆ, ನಾನು ಕೊಂಡದ್ದನ್ನೆಲ್ಲ ಹೊಗಳುತ್ತಿದ್ದೀರಿ.

“ಡಾರ್ಲಿಂಗ್‌… ನೀನು ತಗೊಳ್ಳೋ ಸಾಮಗ್ರಿ ನಿಜಕ್ಕೂ ಸೂಪರ್‌ ಅಂತಿದ್ರಿ. ನಾನಂತೂ ಪರವಶಳಾಗಿ ಉಬ್ಬಿಹೋಗುತ್ತಿದ್ದೆ. ನಿನ್ನ ಟೇಸ್ಟ್ ಯಾರಿಗೂ ಬರಲ್ಲ ಬಿಡು ಅಂತಿದ್ರಿ…”

“ಹಾಗಾಗಿಯೇ ಅಲ್ಲವೇ ಮದುವೆಯಾದ ಹೊಸತರಲ್ಲಿ ನೀನು ನನ್ನನ್ನು ಬಹಳ ಪ್ರೀತಿಸುತ್ತಿದ್ದುದು?”

“ಛೇ…ಛೇ… ಮದುವೆ ಆದ ಹೊಸತರಲ್ಲಿ ಎಲ್ಲಾ ಗಂಡಸರೂ ಹೀಗೇ ಆಡ್ತಾರೆ ಅನ್ಸುತ್ತೆ!”

“ಹ್ಞೂಂ…. ಇದೇ ರೀತಿ ನಾನು ಎಲ್ಲೋ ಓದಿದ ನೆನಪು. ಗಂಡ ಕಾರು ಕೊಂಡ ಹೊಸತರಲ್ಲಿ ಹೆಂಡತಿ ಅದರಲ್ಲಿ ಕೂರಲು ಬಂದಾಗ, ಸ್ವತಃ ಗಂಡನೇ ಬಾಗಿ ಬಾಗಿಲು ತೆರೆಯುತ್ತಿರುತ್ತಾನೆ. ಕ್ರಮೇಣ ಕಾರು ಹಳತಾದಂತೆ ಹೆಂಡತಿ ತಾನೇ ಬಾಗಿಲು ತೆರೆದು ಕೂರಬೇಕಾಗುತ್ತೆ…. ಅದು ಬೇರೆ ವಿಷಯ. ಈ ಇಡೀ ಪ್ರಕರಣ ಗಮನಿಸುವ ವೀಕ್ಷರಿಗೆ ಕಾರು ಹೊಸದು ಅಥವಾ ಹೆಂಡತಿ ಹೊಸಬಳು ಅನ್ನೋದು ಗೊತ್ತಾಗಿಬಿಡುತ್ತೆ.”

ನನ್ನ ಈ ಜೋಕ್‌ ಅರ್ಥವಾಯ್ತು ಅಂತ ಕೃತಕವಾಗಿ ಕೆಮ್ಮುತ್ತಾ ಕನಕಾ ಹೇಳಿದಳು, “ಮದುವೆ ಆರಂಭದಲ್ಲಿ ನಿಮ್ಮ ಸ್ಥಿತಿ ನಮ್ಮ ರಾಜ್ಯದ ಸಮ್ಮಿಶ್ರ ಸರ್ಕಾರದ ಹಾಗೇ ಬಹಳ ಜರ್ಝರಿತವಾಗಿತ್ತು. ಅತ್ತ ನೆಟ್ಟಗೆ ಡ್ರೆಸ್‌ ಮಾಡಿಕೊಳ್ಳಲು ಗೊತ್ತಿರಲಿಲ್ಲ. ಇತ್ತ ಯಾವುದರಲ್ಲೂ ಉತ್ತಮ ಟೇಸ್ಟ್ ಸಹ ಇರಲಿಲ್ಲ. ನಾನು ಕೇವಲ ಊಟತಿಂಡಿ ಬಗ್ಗೆ ಮಾತ್ರ ಹೇಳುತ್ತಿದ್ದೇನೆ.

“ಕುಡಿಯುವ ವಿಚಾರವನ್ನು ನೀವು ಫ್ರೆಂಡ್ಸ್ ಹತ್ತಿರ ಸಹಜವಾಗಿಯೇ ಕಲಿತಿದ್ದೀರಿ ಬಿಡಿ. ನಾನೇನಾದರೂ ನಿಮ್ಮನ್ನು ಡಯೆಟಿಂಗ್ ವಿಷಯದಲ್ಲಿ  ಕಂಟ್ರೋಲ್ ‌ಮಾಡದೇ ಇದ್ದಿದ್ದರೆ, ರಾಕ್ಷಸಾಕಾರ ಊದಿಕೊಳ್ತಿದ್ರಿ…..” ಇವಳಂತೂ ಅವಕಾಶ ಸಿಕ್ಕಾಗ ನನ್ನನ್ನು ಹೀಗೆ ಆಡಿಕೊಳ್ಳದೇ ಬಿಡುವುದೇ ಇಲ್ಲ.

ಸೆನ್ಸೆಕ್ಸ್ ಕಾರ್ಯಕ್ರಮದಂತೆ ದೊಡ್ಡದಾಗಿ ಆ ಪಟ್ಟಿಯನ್ನು ಬೆಳೆಸುತ್ತಲೇ ಇರುತ್ತಾಳೆ. ಆಗ ನನ್ನ ಟಿಆರ್‌ಪಿ ಸುಧಾರಿಸುವ ಸಲಹೆಗಳು ಒಂದೊಂದಾಗಿ ಸಿಗತೊಡಗುತ್ತವೆ. ಆಗೊಮ್ಮೆ ಈಗೊಮ್ಮೆ ನನ್ನ ಲೇಖನಗಳು ಆ ಈ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುತ್ತವೆ, ಆಗ ಇವಳ ಸಲಹಾ ಕಾರ್ಯಕ್ರಮ ಇನ್ನಷ್ಟು ಹೆಚ್ಚುತ್ತದೆ. ನಾನೂ ಸುಲಭಕ್ಕೆ ಸೋಲೊಪ್ಪದೆ, “ನೋಡಿದ್ಯಾ….. ನನ್ನ ಈ ಹೊಸ ಲೇಖನ ಪಬ್ಲಿಶ್‌ ಆಗಿದೆ!” ಎಂದು ಕಾಲರ್‌ ಏರಿಸುತ್ತೇನೆ.

“ಅಲ್ಲ…. ನಾನೂ ಆವತ್ತಿನಿಂದ ಗಮನಿಸುತ್ತಿದ್ದೀನಿ. ಏನೋ ಪ್ರಕಟವಾಯ್ತು ಅಂತ ಜಂಭದಿಂದ ಹೇಳಿಕೊಳ್ತೀರಲ್ಲ, ಇದಕ್ಕೆಷ್ಟು ದುಡ್ಡು ಕೊಡ್ತಾರಂತೆ?”

“ಇತ್ತೀಚೆಗೆ ಅಂಥ ಹೇಳಿಕೊಳ್ಳುವಂಥದ್ದೇನೂ ಕೊಡ್ತಾ ಇಲ್ಲ ಬಿಡು. ಶುಭಾಶಯ… ಇತ್ಯಾದಿ ಕಳುಹಿಸುತ್ತಾರೆ, ಅದೂ ಇಮೇಲ್‌ನಲ್ಲಿ! ನಾವು ಹಾಗೇ ಕಥೆ ಕಳುಹಿಸಿದ್ರೆ ಅದನ್ನು ಸರಿಯಾಗಿ ಪರಿಶೀಲಿಸೋದೇ ಇಲ್ಲ. ಹಾರ್ಡ್‌ ಕಾಪಿ ಕಳಿಸಿ ಅಂತ ಪಟ್ಟು ಹಿಡೀತಾರೆ. ಪಾಪ, ಬಡ ಲೇಖಕರು ಇಂಥ ಲೇಖನ ಸ್ಪೀಡ್‌ ಪೋಸ್ಟ್ ನಲ್ಲಿ ಕಳುಹಿಸಿ ಅಸ್ವೀಕೃತ ಅಂತ ಆಗಿಹೋದರೆ ಅವರ ಪಾಡೇನು?”

“ಸಾಕು ನಿಲ್ಲಿಸಿ! ನಾನು ನನ್ನ ಕೋಪದ ಬಗ್ಗೆ ವ್ಯಾವಹಾರಿಕವಾಗಿ ಹೇಳಿಕೊಳ್ಳೋಣ ಅಂದ್ರೆ ನೀವು ನಿಮ್ಮ ಹಾಳು ಸಾಹಿತ್ಯದ ಪುರಾಣ ಶುರು ಮಾಡ್ತೀರಿ, ಅಥವಾ ಮಧ್ಯದಲ್ಲಿ ಅಡ್ಡಗೋಡೆ ನಿಲ್ಲಿಸಿಬಿಡ್ತೀರಿ. ನನಗೂ ಸಂಗೀತ ಸಾಹಿತ್ಯದ ಅಭಿರುಚಿ ಇದೆ.  ಹಾಗೇಂತ ನೀವು ಬರೆದಿರುವ ಹಾಳು ಸಾಹಿತ್ಯ ಅಂತ ಓದಲಿಕ್ಕಾಗೋದಿಲ್ಲ. ಇದೆಲ್ಲ ಹಾಳಾಗಿ ಹೋಗಲಿ, ನಾನು ಏನು ಹೇಳ್ತಿದ್ದೆ…”

“ಅದೇ ನಾನು ಇತ್ತೀಚೆಗೆ ಬದಲಾಗಿ ಹೋಗಿದ್ದೇನೆ ಅಂತ!”

ನಾನು ಆ ಮಾತನ್ನು ಮತ್ತೆ ಬದಲಾಯಿಸಿದೆ, “ಹ್ಞೂಂ ಮತ್ತೆ….. 60 ವರ್ಷ ಆದ್ಮೇಲೆ ಮನುಷ್ಯ ಬದಲಾಗದೆ ಇರಲು ಸಾಧ್ಯವೇ? ರಿಟೈರ್‌ ಆಗಿ ಕೇವಲ ಆರೇ ತಿಂಗಳಲ್ಲಿ ನನ್ನನ್ನು ಮನೆಯಲ್ಲೇ ನೋಡಿ ನೋಡಿ ಈ ಗತಿಯಾದರೆ, ಮುಂದೆ ನನ್ನ ಸ್ಥಿತಿಗತಿ ಆ ದೇವರಿಗೇ ಗೊತ್ತು!”

“ನೋಡ್ರಿ, ನಿಮ್ಮ ತರಹ ಕೋಟ್‌ ಹಾಕಿಕೊಂಡು ಟೈ ಕಟ್ಟಿಕೊಂಡು ಇಡೀ ದಿನ ಮನೆಯಲ್ಲಿ ಯಾವ ಭೂಪತಿಯೂ ಕುಳಿತಿರುವುದಿಲ್ಲ ಬಿಡಿ. ದೇಶಿ ಸ್ಟೈಲ್‌ನಲ್ಲಿ ಅಂದ್ರೆ ಲುಂಗಿ ಬನಿಯನ್‌, ಪೈಜಾಮಾ ಕುರ್ತಾ, ಟೀಶರ್ಟ್‌ ಬರ್ಮುಡಾ ಹಾಕಿಕೊಂಡಿದ್ದರೆ ಅದು ಒಂದು ತರಹ…. ಇನ್ನೂ ಕೆಲವರು ಯಾವ ಸಂಕೋಚ ಇಲ್ಲದೆ ಪಟಾಪಟ್ಟಿ ನಿಕ್ಕರ್‌ ಮೇಲೊಂದು ಬನಿಯನ್‌ ಹಾಕಿಕೊಂಡು, ಹೆಗಲಿಗೆ ಟವೆಲ್ ‌ಏರಿಸಿ ಊರೆಲ್ಲ ಸುತ್ತಿಕೊಂಡು ಬಂದುಬಿಡುತ್ತಾರೆ. ಅಂಥದ್ದನ್ನು ಬದಲಾವಣೆ ಅಂದ್ರೆ ಒಪ್ಪಬಹುದೇ ಹೊರತು ನಿಮ್ಮ ಕಂತೆ ಪುರಾಣನ್ನವಲ್ಲ!”

ನನ್ನ ಶ್ರೀಮತಿಯ ಇಂಥ ಮಾತುಗಳನ್ನೆಲ್ಲ ಈ ಕಿವಿಯಲ್ಲಿ ಕೇಳಿಸಿಕೊಂಡು ಆ ಕಿವಿಯಿಂದ ಬಿಟ್ಟುಬಿಡುವುದು ಎಂದಿನಿಂದಲೋ ಬಂದ ರೂಢಿ. ನನ್ನ ಮೌನ ಕಂಡು ಅವಳು ಕಿಡಿಕಿಡಿಯಾಗಿ ತನ್ನ ಕೊನೆಯ ಬ್ರಹ್ಮಾಸ್ತ್ರ ಉಪಯೋಗಿಸಿದಳು, “ಇವತ್ತು ಡೇಟು ಎಷ್ಟು?” ಕಂಠ ಅತ್ಯಂತ ಕಠೋರವಾಗಿತ್ತು.

ನಾನು ಸಹಜವಾಗಿ ಹೇಳಿದೆ, “ಆಗಸ್ಟ್ 6, ಬುಧವಾರ. ನಿನ್ನೆ ನಾನು ಬ್ಯಾಂಕ್‌ನಿಂದ ತಿಂಗಳ ಮನೆ ಖರ್ಚಿಗಾಗಿ 25 ಸಾವಿರ ತಂದುಕೊಟ್ಟಿದ್ದೀನಿ ತಾನೇ?” ನನ್ನ ನೆನಪನ್ನು ಸಾಧ್ಯವಾದಷ್ಟೂ ಚುರುಕಾಗಿಸಿಕೊಳ್ಳುತ್ತಾ ಹೇಳಿದೆ.

ಆ ಕಡೆಯಿಂದ ಹಲ್ಲು ಕಟಕಟನೆ ಕಡಿಯುತ್ತಾ ಅವಳು, “ಓ ಆಗಸ್ಟ್ 6….. ಹಾಗಾದರೆ ನಿನ್ನೆ ಡೇಟು?”

ನಾನು ಅದೇ ಸಹಜತೆಯಿಂದ ಮತ್ತೆ ಹೇಳಿದೆ, “ಒಂದು ದಿನ ಹಿಂದೆ ಅಂದ್ರೆ, ಆಗಸ್ಟ್ 5…… ಓ….ಓ….ಓ… ಗೊತ್ತಾಯ್ತು ಬಿಡು….”

ಆ ಮಹತ್ತರ ತಾರೀಕನ್ನು ಮರೆತ ನನ್ನನ್ನೇ ಶಪಿಸಿಕೊಳ್ಳುತ್ತಾ ಹೇಳಿದೆ, “ಸಾರಿ ಕನಕಾ ಡಾರ್ಲಿಂಗ್‌, ನನಗೆ ನಿನ್ನ ಬರ್ತ್‌ಡೇ ಮೊನ್ನೆ ಸಂಜೆಯವರೆಗೂ ಅಕ್ಷರಶಃ ನೆನಪಿತ್ತು. ನೀನು ಹಿಂದೆ ಆಸೆಪಟ್ಟಿದ್ದೆಯ್ಲಾ….. ಅದೇ ಆ ಆರಾಧನಾ ಜ್ಯೂವೆಲರ್ಸ್‌ ನೆಕ್ಲೇಸ್‌….. ಅವರಿಗೆ 1ನೇ ತಾರೀಖಿಗೆ ಡೆಲಿವರಿ ರೆಡಿ ಇರಬೇಕೆಂದು ಆರ್ಡರ್‌ ಮಾಡಿದ್ದೇನೆ…. ನನ್ನ ರಿಟೈರ್‌ಮೆಂಟ್‌ಗೇ ಮೊದಲೇ ನೀನು ಅದನ್ನು ನೋಡಿ ಇಷ್ಟಪಟ್ಟಿದ್ದೆ. ಆಗಲೇ ನಾನು ಮನದಲ್ಲೇ ನಿರ್ಧರಿಸಿದ್ದೆ. ರಿಟೈರ್‌ ಆದ ಮೇಲೆ ನನ್ನ ಮೊದಲ ಬರ್ತ್‌ಡೇಗೆ ಅದನ್ನು ಗಿಫ್ಟ್ ನೀಡಬೇಕೂಂತ.”

ಕನಕಾಳ ಬಾಡಿಹೋಗಿದ್ದ ಮುಖದ ಮೇಲೆ ತುಸು ಮಂದಹಾಸ ಮರಳಿತು. ಅವಳು ಬಾಗಿ ನನ್ನ ಪಾದ ಮುಟ್ಟಿ ನಮಸ್ಕರಿಸಲು ಯತ್ನಿಸುವಷ್ಟರಲ್ಲಿ ಅವಳನ್ನು ನನ್ನ ಎದೆಗೆ ಅಪ್ಪಿಕೊಂಡು ಸಂತೈಸಿದೆ.

“ಪ್ರತಿ ಬರ್ತ್‌ಡೇಗೂ ನನ್ನ ಆಶೀರ್ವಾದ ಪಡೆಯುತ್ತೀಯ. ಮತ್ತೆ ನಿನ್ನೆ ಯಾಕೆ ಮರೆತೆ….?”

“ನೆನಪಿದ್ದರೆ ತಾನೇ ನಮಸ್ಕರಿಸುವುದಕ್ಕೆ…..?

“ಹೋಗಲಿ ಬಿಡಿ, ಇಷ್ಟಾದರೂ ನಿಮಗೆ ನೆನಪಾಯ್ತ! ನಾನು ನನ್ನ ಮರೆಗುಳಿ ಪತಿ ನಿಜವಾಗಲೂ ನೆನಪಿಟ್ಟುಕೊಂಡಿದ್ದೀರಾ ಅಂತ ಪರೀಕ್ಷೆ ಮಾಡುತ್ತಿದ್ದೆ. ನಾನು ಬೇಕೆಂದೇ ಮೌನವ್ರತ ವಹಿಸಿದ್ದೆ. ನಿಮಗೆ ನೆನಪಾಗಲಿ ಅಂತ ಏನೇನೋ ಕ್ಲೂ ಕೊಟ್ಟೆ…. ಆದ್ರೆ  ನಿಮಗೆ ನಿಮ್ಮದೇ ಲೋಕ….”

“ಆಯ್ತಲ್ಲ ಈಗ…. ನಡಿ, ಜ್ಯೂವೆಲರ್ಸ್‌ ಅಂಗಡಿಗೆ ಹೋಗಿ ತಂದೇ ಬಿಡೋಣ,” ನಾನು ಹೊರಡುವ ತಯಾರಿ ನಡೆಸುತ್ತಾ ಕೇಳಿದೆ, “ಅದು ಸರಿ, ಮಕ್ಕಳು ನಿನಗೆ ವಿಷ್‌ ಮಾಡಿದರೆ?” ಕನಕಾ ಮತ್ತೆ ಸಿಡಾರನೆ ಸಿಡುಕಿದಳು, “ನನಗೆ ಎಲ್ಲಿ ಬರಬೇಕು ಅಂಥ ಭಾಗ್ಯ? ಎಷ್ಟಾದರೂ ನಿಮ್ಮ ಮಕ್ಕಳಲ್ಲವೇ? ಮರೆಯುವುದರಲ್ಲಿ ನಿಮಗಿಂತ 2 ಪಟ್ಟು ಮುಂದು…. ನನ್ನ ಮೂತಿ ನೋಡಿ ಮಾತನಾಡಿಸೋದೇ ಕಷ್ಟ, ಅಷ್ಟು ಧಿಮಾಕು ಅವಕ್ಕೆ….. ಇನ್ನು ಬರ್ತ್‌ಡೇ ವಿಶ್‌….?”

“ಹೋಗಲಿ ಬಿಡು…. ಶಾಪಿಂಗ್‌ ಮುಗಿಸಿ ಹೊರಗೆ ಊಟ ಮಾಡಿ ಬರೋಣ. ಏನಂತೀಯಾ?” ಅಪರೂಪಕ್ಕೆ ಶ್ರೀಮತಿ ಮೌನವಾಗಿ ಒಪ್ಪಿದಳು. ಅವಳ ಅವಿಶ್ವಾಸ ಪ್ರಸ್ತಾನೆ ಠುಸ್‌ ಆಯಿತಲ್ಲ ಎನಿಸಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ