ಸುಜಾತಾ ನಗುವನ್ನು ನಿಲ್ಲಿಸುತ್ತಲೇ ಇಲ್ಲ. ಮೀರಾ ಅವಳನ್ನು ಎಚ್ಚರಿಸಿದಳು. ಬೆಳಗಿನ ವಾಕಿಂಗ್‌ ಮಾಡುತ್ತಿದ್ದವರೆಲ್ಲರ ದೃಷ್ಟಿ ಅವಳ ಮೇಲೆ ಬಿತ್ತು. ಅವಳೇ ಒಂದು ನಮೂನೆ…. 50 ವರ್ಷ ದಾಟಿದ್ದರೂ ಸುಜಾತಾ ಇಂದೂ ಬದುಕನ್ನು ಹಾಯಾಗಿ, ಸಂತೋಷವಾಗಿ ಕಳೆಯುತ್ತಾಳೆ. ಆದರೆ ಕೆಲವೊಮ್ಮೆ ಅವಳ ಈ ಹುಡುಗಾಟಿಕೆ ಸಾರ್ವಜನಿಕ ಸ್ಥಳದಲ್ಲಿ ಅವಳನ್ನು ಆಕರ್ಷಣೆಯ ಕೇಂದ್ರಬಿಂದುವಾಗಿಸುತ್ತದೆ. ಆ ದಿನ ಆದದ್ದೂ ಹಾಗೆಯೇ. ದಿನ ನಿತ್ಯದಂತೆ ಬೆಳಗಿನ ವಾಕಿಂಗ್‌ ಮಾಡುತ್ತಿದ್ದ ಗೆಳತಿಯರಿಬ್ಬರೂ ತಮ್ಮ ಯಾವುದೋ ಮಾತಿಗೆ ನಗತೊಡಗಿದರು. ವೀರಾಳೇನೋ ಬೇಗನೆ ತನ್ನ  ನಗುವನ್ನು ಹತೋಟಿಗೆ ತಂದಳು. ಆದರೆ ಅಭ್ಯಾಸ ಬಲದಿಂದ ಸುಜಾತಾ ನಗುವನ್ನು ತಡೆಯಲಾರದೆ ಹೋದಳು.

ನಗರಪಾಲಿಕೆಯವರು ನಿರ್ಮಿಸಿರುವ ಸುಂದರವಾದ ಪಾರ್ಕ್‌ಗಳಲ್ಲಿ ಬೆಳಗಿನ ವಾಕಿಂಗ್‌ ಮಾಡುವವರ ಸಂಖ್ಯೆ ದೊಡ್ಡದಾಗಿರುತ್ತದೆ. ಈಗ ರಸ್ತೆಗಳೂ ದೊಡ್ಡದಾಗಿದ್ದು ಬೆಳಗಿನ ಜಾವದಲ್ಲಿ ವಾಹನ ಸಂಚಾರ ಹೆಚ್ಚಾಗಿ ಇರುವುದಿಲ್ಲವಾದ್ದರಿಂದ ಜನರು ವಾಕಿಂಗ್‌ಗೆ ರಸ್ತೆಗಳನ್ನೂ ಆರಿಸಿಕೊಳ್ಳುತ್ತಾರೆ.

ಆದರೆ ಸುಜಾತಾ ಮತ್ತು ಮೀರಾ ಪ್ರತಿದಿನ ಪಾರ್ಕ್‌ನಲ್ಲೇ ವಾಕಿಂಗ್‌ ಮಾಡುತ್ತಾರೆ. ಸುಜಾತಾಳ ಮನೆ ಪಾರ್ಕ್‌ನ ಹತ್ತಿರದಲ್ಲಿಯೇ ಇದೆ. ಅವಳ ಪತಿ 2 ವರ್ಷಗಳ ಹಿಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪತಿಯೊಂದಿಗೆ ಸಂತೋಷವಾಗಿ ಜೀವನ ಕಳೆದಿದ್ದ ಸುಜಾತಾ, ವಿಧಿ ಬರಹನ್ನು ಸಹಜವಾಗಿಯೇ ಸ್ವೀಕರಿಸಿ ಮುಂದೆ ನಡೆದಿದ್ದಳು.

ಪತಿಯ ಮರಣಾನಂತರ, ಈಗ 6 ತಿಂಗಳ ಹಿಂದೆ ಸುಜಾತಾ ತನ್ನ ಏಕಮಾತ್ರ ಪುತ್ರಿ ಪಲ್ಲವಿಯನ್ನು ಸಾಫ್ಟ್ ವೇರ್‌ ಎಂಜಿನಿಯರ್ ಆಗಿದ್ದ ವರನೊಂದಿಗೆ ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟಿದ್ದಳು. ಚೆನ್ನೈನಲ್ಲಿದ್ದ ಮಗಳು ಅಳಿಯನ ಮನೆಗೆ ಹೋಗಿ ಅವರು ಸಂತೋಷ, ಸಂತೃಪ್ತಿಯಿಂದ ಬಾಳುತ್ತಿರುವುದನ್ನು ನೋಡಿ ಸಮಾಧಾನದಿಂದ ಹಿಂದಿರುಗಿದ್ದಳು. ಪ್ರಾರಂಭದಿಂದಲೂ ಶಿಸ್ತಿನ ಜೀವನ ನಡೆಸುತ್ತಿದ್ದ ಸುಜಾತಾ, ತನ್ನ ಉತ್ತಮ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮ ಮಾಡುವ ಕ್ರಮದಿಂದಾಗಿ ವಾಸ್ತವ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನವಳಂತೆ ಕಾಣುತ್ತಿದ್ದಳು.

ಆ ದಿನ ಮೀರಾಳ ಆರೋಗ್ಯ ಸರಿಯಿಲ್ಲದುದ್ದರಿಂದ ಸುಜಾತಾ ಒಬ್ಬಳೇ ವಾಕಿಂಗ್‌ ಮಾಡುತ್ತಿದ್ದಳು. ಅವಳು ತನ್ನ ವಾಕಿಂಗ್‌ ಮುಗಿಸಿ ಮನೆಯ ಕಡೆಗೆ ಹೊರಟಳು. ಆಗ ಇದ್ದಕ್ಕಿದ್ದಂತೆ ಒಂದು ನಾಯಿ ಎದುರಿಗೆ ಓಡಿಬರುತ್ತಿದ್ದುದನ್ನು ನೋಡಿದಳು. ಅವಳು ಪಕ್ಕಕ್ಕೆ ಸರಿಯುವಷ್ಟರಲ್ಲಿ ನಾಯಿ ಅವಳ ಮೇಲೆ ನೆಗೆದು ಓಡಿಹೋಯಿತು.

ಸುಜಾತಾ ಬೀಳದಿರಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೆಳಗೆ ಬಿದ್ದಳು. ಹತ್ತಿರದಲ್ಲಿ ಹೋಗುತ್ತಿದ್ದ ಜನರು ಅವಳತ್ತ ಓಡಿಬಂದರು. ಒಬ್ಬ ಮಹಿಳೆ ಅವಳು ಮೇಲೇಳಲು ಸಹಾಯ ಮಾಡಿದಳು. ಆಗ ಅದೇ ನಾಯಿಯನ್ನು ಸರಪಳಿ ಹಾಕಿ ಹಿಡಿದುಕೊಂಡ ಒಬ್ಬರು 60 ವರ್ಷ ವಯಸ್ಸಿನ ವ್ಯಕ್ತಿ ಅವಳ ಬಳಿಗೆ ಬಂದರು.

ಆ ವ್ಯಕ್ತಿ ಸುಜಾತಾಳನ್ನು ಕ್ಷಮೆ ಕೇಳುತ್ತಾ, “ನನ್ನ ಬಂಟಿ ಮಾಡಿದ ಕೆಲಸದಿಂದ ನನಗೆ ನಾಚಿಕೆಯಾಗುತ್ತಿದೆ. ಸಾಧಾರಣವಾಗಿ ಇದು ಶಾಂತವಾಗಿರುತ್ತದೆ. ಆದರೆ ಈ ದಿನ ಇದಕ್ಕೇನಾಯಿತೋ ಗೊತ್ತಿಲ್ಲ….. ನಿಮಗೆ ಹೆಚ್ಚು ಪೆಟ್ಟಾಗಿಲ್ಲ ತಾನೇ?”

“ಇಲ್ಲ, ಏನಾಗಿಲ್ಲ,” ಎನ್ನುತ್ತಾ ಸುಜಾತಾ ತನ್ನ ಮೊಳಕೈಗೆ ಅಂಟಿದ್ದ ಮಣ್ಣನ್ನು ಕೊಡವುತ್ತಾ ಹೇಳಿದಳು.

“ತೆಗೆದುಕೊಳ್ಳಿ. ಇದರಿಂದ ಒರೆಸಿಕೊಳ್ಳಿ,” ಬಿಳಿ ಕುರ್ತಾ ಪೈಜಾಮಾ ಧರಿಸಿದ್ದ ಆ ವ್ಯಕ್ತಿ ಒಂದು ಕರವಸ್ತ್ರವನ್ನು ಅವಳ ಮುಂದೆ ಹಿಡಿದರು.

ಇವರಿಬ್ಬರೂ ರಾಜಿಯಾಗಿದ್ದನ್ನು ಕಂಡ ಜನರು ತಮ್ಮ ದಾರಿ ಹಿಡಿದುಹೋದರು. ಕರವಸ್ತ್ರದಿಂದ ಧೂಳನ್ನೆಲ್ಲ ಒರೆಸಿಕೊಂಡ ಸುಜಾತಾ ಹೊರಡಲು ಅನುವಾದಳು. ಆ ವ್ಯಕ್ತಿಯೂ ಅವಳೊಂದಿಗೆ ಹೆಜ್ಜೆ ಹಾಕಿದರು.

“ನನ್ನ ಹೆಸರು ಸೋಮನಾಥ್‌. ನೀವು…..?”

“ನಾನು ಸುಜಾತಾ,” ಸೋಮನಾಥರ ಪ್ರಶ್ನೆಗೆ ಸುಜಾತಾ ಉತ್ತರಿಸಿದಳು. ನಾಲ್ಕಾರು ಹೆಜ್ಜೆ ಇಡುವಷ್ಟರಲ್ಲಿ ಸುಜಾತಾಳ ಮನೆ ಸಿಕ್ಕಿತು.

“ಬೈ….. ಸೀಯು….” ಎಂದು ಅವಳು ಹೇಳುತ್ತಿರುವಾಗ ಸೋಮನಾಥ್‌, “ಕುಡಿಯಲು 1 ಲೋಟ ನೀರು ಕೊಡುತ್ತೀರಾ?” ಎಂದು ಕೇಳಿದರು.

“ಖಂಡಿತ ಬನ್ನಿ ಒಳಗೆ,” ಎನ್ನುತ್ತಾ ಸುಜಾತಾ ಬೀಗ ತೆರೆದಳು.

ಬಂಟಿಯನ್ನು ಗೇಟ್‌ಗೆ ಕಟ್ಟಿ ಸೋಮನಾಥ್‌ ಒಳಗೆ ಬಂದರು. ಸುಜಾತಾ ನೀರು ತರಲು ಒಳಗೆ ಹೋದಾಗ ಸೋಮನಾಥ್ ಡ್ರಾಯಿಂಗ್‌ ರೂಮಿನಲ್ಲಿ ಕಣ್ಣಾಡಿಸಿದರು. ಸುಂದರವಾದ ರೂಮಿನಲ್ಲಿ ಮುತುವರ್ಜಿಯಿಂದ ಅಲಂಕರಿಸಲ್ಪಟ್ಟಿದ್ದ ಪ್ರತಿಯೊಂದು ವಸ್ತು ಮನೆಯ ಯಜಮಾನರ ಆಸಕ್ತಿ ಮತ್ತು ಸದಭಿರುಚಿಯ ಪ್ರತೀಕವಾಗಿದ್ದವು.

“ಕುಳಿತುಕೊಳ್ಳಿ,” ಸೋಮನಾಥರಿಗೆ ಹೇಳಿ ನೀರಿನ ಟ್ರೇಯನ್ನು ಅವರ ಮುಂದೆ ಹಿಡಿದಳು.

“ಥ್ಯಾಂಕ್ಸ್ ಬಹಳ ಬಾಯಾರಿಕೆಯಾಗಿತ್ತು,” ಸೋಮನಾಥ್‌ ಒಂದೇ ಉಸಿರಿನಲ್ಲಿ ನೀರು ಖಾಲಿ ಮಾಡಿದರು.

“ನಿಮ್ಮ ಪತಿ ಮತ್ತು ಮಕ್ಕಳು ಕಾಣಿಸುತ್ತಿಲ್ಲವಲ್ಲ?” ಸೋಮನಾಥ್‌ ಕೇಳಿದರು.

“ನನ್ನ ಪತಿ ತೀರಿ ಹೋಗಿದ್ದಾರೆ. ಒಬ್ಬಳು ಮಗಳಿದ್ದಾಳೆ. ಅವಳು ಮದುವೆಯಾಗಿದ್ದಾಳೆ.”

“ಸಾರಿ, ನನಗೆ ಗೊತ್ತಾಗಲಿಲ್ಲ,” ಸೋಮನಾಥ್‌ ಮೆಲ್ಲನೆ ಹೇಳಿದರು.

“ಇರಲಿ ಬಿಡಿ. ವಿಧಿಬರಹ ತಪ್ಪಿಸುವುದಕ್ಕೆ ಯಾರಿಂದಲೂ ಆಗುವುದಿಲ್ಲ,” ಎಂದು ಹೇಳಿ ಸುಜಾತಾ ಅವರ ಬಗ್ಗೆ ಕೇಳಿದಳು.

ಸೋಮನಾಥ್‌ ವಿಚ್ಛೇದಿತರು. ವಿಚ್ಛೇದನ ಪಡೆದ ಮೇಲೆ ತಮ್ಮ ಮನೆಯನ್ನು ಬಿಟ್ಟು ಸುಜಾತಾಳ ಮನೆಯ ಮುಂದಿನ ಬೀದಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಒಬ್ಬ ಮಗನಿದ್ದು ಅವನಿಗೆ ವಿವಾಹವಾಗಿದೆ. ಅವನು ತನ್ನ ಹೆಂಡತಿ, ಮಕ್ಕಳ ಜೊತೆ ತಾಯಿಯೊಡನೆ ವಾಸಿಸುತ್ತಿದ್ದ. ಈ ವಿಷಯವನ್ನೆಲ್ಲ ಅವರು ಸುಜಾತಾಳಿಗೆ ತಿಳಿಸಿದರು.

ಸೋಮನಾಥ್‌ ಹೋದ ಮೇಲೆ ಸುಜಾತಾ ಕೊಂಚ ಹೊತ್ತು ಅವರ ಬಗ್ಗೆಯೇ ಯೋಚಿಸುತ್ತಿದ್ದಳು. ಎಷ್ಟು ಶಾಂತ ಸ್ವಭಾವದ ವ್ಯಕ್ತಿತ್ವ ಅವರದು. ಆದರೆ ಕಣ್ಣುಗಳಲ್ಲಿ ನೀರಸ ಮತ್ತು ಶೂನ್ಯ ಭಾವವಿತ್ತು. ಮಾತನಾಡುತ್ತಿದ್ದರೂ ಧ್ವನಿಯಲ್ಲಿ ನಿರುತ್ಸಾಹ….. ಎಲ್ಲರಿಗೂ ಅವರದೇ ಆದ ಒಂದೊಂದು ಕಥೆ ಎಂದುಕೊಂಡು ಸುಜಾತಾ ತನ್ನ ನಿತ್ಯ ಕೆಲಸದಲ್ಲಿ ತೊಡಗಿದಳು. ಸಪ್ಪೆಯಾಗಿ ಕುಳಿತುಕೊಳ್ಳುವುದು ಅವಳ ಜಾಯಮಾನವೇ ಅಲ್ಲ.

ಮಾರನೇ ದಿನ ವಾಕಿಂಗ್‌ಗೆ ಹೋದಾಗ ಸುಜಾತಾಳ ದೃಷ್ಟಿ ಯಾರನ್ನೋ ಹುಡುಕುತ್ತಿತ್ತು. ಆಗ ಎದುರಿಗೆ ಸೋಮನಾಥ್ ಬರುತ್ತಿರುವುದನ್ನು ಕಂಡ ಅವಳ ಕಣ್ಣುಗಳು ಅರಳಿದವು.

“ಗುಡ್‌ ಮಾರ್ನಿಂಗ್‌ ಮಿ. ಸೋಮನಾಥ್‌!”

“ವೆರಿ ಗುಡ್‌ ಮಾರ್ನಿಂಗ್‌.”

“ನಿಮ್ಮ ಬಂಟಿಯನ್ನು ಕರೆದುಕೊಂಡು ಬರಲಿಲ್ಲವೇ?”

“ಇವತ್ತು ಅದನ್ನು ಮೊದಲೇ ತಿರುಗಾಡಿಸಿ ಬಿಟ್ಟುಬಂದಿದ್ದೇನೆ. ನಿನ್ನೆ ಅದು ನಿಮಗೆ ಬಹಳ ತೊಂದರೆ ಕೊಟ್ಟಿತ್ತು,” ಸೋಮನಾಥ್‌ಶಾಂತವಾಗಿ ಹೇಳಿದರು.

“ಅಯ್ಯೋ ಹಾಗೇಕೆ ಮಾಡಿದಿರಿ? ಅದರಿಂದ ನನಗೇನೂ ತೊಂದರೆ ಇಲ್ಲ,” ಸುಜಾತಾ ನಗುತ್ತಾ ಹೇಳಿದಳು.

“ನಿಮ್ಮ ಗೆಳತಿ ಇಂದು ಬರಲಿಲ್ಲವೇ….?”

“ಅವಳು ನಾಳೆ ಬರಬಹುದು. ಆದರೆ ನನ್ನ ಜೊತೆ ನನ್ನ ಗೆಳತಿಯೂ ಬರುತ್ತಾಳೆ ಅನ್ನುವುದು ನಿಮಗೆ ಹೇಗೆ ಗೊತ್ತು?” ಸುಜಾತಾ ಆಶ್ಚರ್ಯದಿಂದ ಕೇಳಿದಳು.

“ನೀವಿಬ್ಬರೂ ಪ್ರತಿದಿನ ಒಟ್ಟಿಗೆ ವಾಕಿಂಗ್‌ ಮಾಡುವುದನ್ನು ನೋಡುತ್ತೇನಲ್ಲ…. ಆದ್ದರಿಂದ ಕೇಳಿದೆ.”

“ಆದರೆ ನಾನು ನಿನ್ನೆಯೇ ನಿಮ್ಮನ್ನು ಮೊದಲ ಸಲ ನೋಡಿದ್ದು…..”

“ನೀವು ನಿಮ್ಮ ಮಾತಿನಲ್ಲಿ ಮುಳುಗಿ ಹೋಗಿರುತ್ತೀರಿ. ಅಕ್ಕಪಕ್ಕ ಯಾರಿದ್ದಾರೆ ಅನ್ನುವುದೂ ನಿಮಗೆ ತಿಳಿಯುದಿಲ್ಲ.”

“ಸಾರಿ, ನನ್ನ ಸ್ವಭಾವವೇ ಹಾಗೆ. ತಮಾಷೆ ಹುಡುಗಾಟಿಕೆ….. ಬಹುಶಃ  ಇದು ನನ್ನ ದೌರ್ಬಲ್ಯ. ಆದರೆ ಏನು ಮಾಡಲಿ, ಹೆಚ್ಚು ಹೊತ್ತು ಸೀರಿಯಸ್‌ ಆಗಿರಲು ನನ್ನ ಕೈಲಿ ಆಗುವುದಿಲ್ಲ,” ಸುಜಾತಾ ಸ್ವಲ್ಪ ಗಂಭೀರ ಸ್ವರದಲ್ಲಿ ಹೇಳಿದಳು.

“ಓಹೋ! ನೀವು ತಪ್ಪು ತಿಳಿದುಕೊಂಡಿರಿ. ನಾನು ಆ ಅರ್ಥದಲ್ಲಿ ಹೇಳಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ,” ಸೋಮನಾಥ್ ತಪ್ಪಿತಸ್ಥ ಭಾವದಲ್ಲಿ ಹೇಳಿದರು.

“ನಾವಿಬ್ಬರೂ ಪರಸ್ಪರ ಕ್ಷಮೆ ಕೇಳುತ್ತಲೇ ಇರುತ್ತೇವೆ ಅನ್ನಿಸುತ್ತೆ,” ಸುಜಾತಾ ಜೋರಾಗಿ ನಗುತ್ತಾ ಹೇಳಿದಳು.

ಕೆಲವು ಕೌಟುಂಬಿಕ ತೊಂದರೆಗಳಿಂದಾಗಿ ಮೀರಾ ವಾರ ಪೂರ್ತಿ ವಾಕಿಂಗ್‌ಗೆ ಬರಲಾಗಲಿಲ್ಲ. ಆ ವೇಳೆಗೆ ಸುಜಾತಾ ಮತ್ತು ಸೋಮನಾಥ್‌ ಒಳ್ಳೆಯ ಗೆಳೆಯರಾಗಿದ್ದರು. ಇಬ್ಬರ ವ್ಯಕ್ತಿತ್ವ ಚೆನ್ನಾಗಿ ಹೊಂದಿಕೊಳ್ಳುತ್ತಿತ್ತು. ಸುಜಾತಾ ಮಾತು, ನಗು, ತಮಾಷೆ ಎಲ್ಲದರಲ್ಲೂ ಮುಂದಿದ್ದರೆ, ಸೋಮನಾಥ್‌ ಅಂತರ್ಮುಖಿ ಮತ್ತು ಗಂಭೀರ ಸ್ವಭಾವದ ವ್ಯಕ್ತಿಯಾಗಿದ್ದರು. ಆದಾಗ್ಯೂ ಇಬ್ಬರಿಗೂ ಪರಸ್ಪರ ಸಂಗ ಇಷ್ಟವಾಗಿತ್ತು.

ಸುಮಾರು 1 ವಾರದ ನಂತರ ಬಂದ ಮೀರಾಳಿಗೆ ಸುಜಾತಾ, ಹೊಸ ಗೆಳೆಯ ಸೋಮನಾಥನನ್ನು ಪರಿಚಯಿಸಿದಳು. ಮೀರಾಳ ಜೊತೆಯಲ್ಲಿ ನಡೆಯುವಾಗ ಇಬ್ಬರಿಗೂ ಏನೋ ಒಂದು ಬಗೆಯ ಅಸಹಜ ಭಾವನೆ ಉಂಟಾಯಿತು.

ವಾಕಿಂಗ್‌ ಮುಗಿದ ಮೇಲೆ ಸುಜಾತಾ ಕಾಫಿ ಕುಡಿದು ಹೋಗುವಂತೆ ಮೀರಾಳನ್ನು ಮನೆಗೆ ಕರೆದಳು. ಸುಜಾತಾ ಕಾಫಿ ಮಾಡುತ್ತಿರುವಾಗ ಮೀರಾ ಅಲ್ಲೇ ಸ್ಟೂಲ್ ‌ಮೇಲೆ ಕುಳಿತಳು, “ಇದೇನು ನಡೆಯುತ್ತಿದೆ ಸುಜಾತಾ?” ಎಂದು ಕೇಳಿದಳು.

“ಅಂದರೆ…..? ಏನು ಹೇಳುತ್ತಿದ್ದೀಯಾ?”

“ನಾನು ಯಾವ ವಿಷಯದ ಬಗ್ಗೆ ಕೇಳುತ್ತಿದ್ದೇನೆ ಅನ್ನುವುದು ನಿನಗೆ ಗೊತ್ತು…..” ಮೀರಾ ಕೊಂಚ ಜೋರಾಗಿ ಹೇಳಿದಳು.

“ಸರಿ, ನೀನು ನನ್ನ ಮತ್ತು ಸೋಮನಾಥರ ಬಗ್ಗೆ ಕೇಳುತ್ತಿದ್ದೀಯ ತಾನೇ? ಹಾಗಾದರೆ ಕೇಳು,” ಸುಜಾತಾ ಸ್ವಲ್ಪ ನಿಲ್ಲಿಸಿ ಮುಂದುವರಿಸಿದಳು, “ಸೋಮನಾಥ್‌ ನನಗೆ ಒಳ್ಳೆಯ ಸ್ನೇಹಿತರು. ಅವರನ್ನು  ಭೇಟಿ ಮಾಡುವುದು, ಅವರ ಜೊತೆ ಮಾತನಾಡುವುದು ಎಲ್ಲ ನನಗೆ ಇಷ್ಟವಾಗುತ್ತದೆ. ನಿನ್ನ ಸಂದೇಹ ಪರಿಹಾರವಾಯಿತೇ?” ಸುಜಾತಾ ನಗುತ್ತಾ ಕೇಳಿದಳು.

“ಇಲ್ಲ. ನನ್ನ ಪ್ರಶ್ನೆ ಇಲ್ಲಿಂದ ಪ್ರಾರಂಭವಾಗುತ್ತದೆ. ಮುಂದೆ ಏನು?”

“ಗೊತ್ತಿಲ್ಲ ಮೀರಾ. ಆದರೆ ಈ ವ್ಯಕ್ತಿ ಬೇರೆಯವರಿಗಿಂತ ಏನೋ ಪ್ರತ್ಯೇಕವಾಗಿ ತೋರುತ್ತಾರೆ. ಮುಂದಿನದು ಮುಂದೆ ನೋಡೋಣ. ನೀನು ಚಿಂತೆ ಮಾಡಬೇಡ. ಜೀವನದ ಪ್ರವಾಹ ಕರೆದುಕೊಂಡು ಹೋಗುವ ಕಡೆ ನಾವು ಹೋಗಬೇಕಷ್ಟೇ.”

“ನೀನು ಹೇಳುವುದು ಸರಿ. ಆದರೆ ಏನಾದರೂ ಮಾಡುವಾಗ ಪಲ್ಲವಿಯನ್ನು ಗಮನದಲ್ಲಿಟ್ಟುಕೊಂಡು ಮಾಡು,” ಮೀರಾ ಅವಳನ್ನು ಎಚ್ಚರಿಸಿದಳು.

“ಖಂಡಿತಾ,” ಸುಜಾತಾ ಗೆಳತಿಗೆ ಆಶ್ವಾಸನೆ ನೀಡಿದಳು.

ಮೀರಾ ಹೋದ ನಂತರ ಸುಜಾತಾ ಅವಳು ಹೇಳಿದ ಬಗ್ಗೆ ಯೋಚಿಸತೊಡಗಿದಳು. ಮೀರಾ ಸರಿಯಾಗಿ ಹೇಳಿದ್ದಾಳೆ. ಅವಳು ಒಳ್ಳೆಯ ಗೆಳತಿ, ತನ್ನನ್ನು, ಮಗಳನ್ನೂ ಪ್ರೀತಿಸುತ್ತಾಳೆ. ಪ್ರಾಮಾಣಿಕವಾಗಿ ಸಹಾನುಭೂತಿ ತೋರುತ್ತಾಳೆ. ಸುಜಾತಾಳ ಪತಿಯ ಸಾವಿನ ನಂತರ ಅವರ ನೆಂಟರಿಷ್ಟರೆಲ್ಲರ ನಿಜರೂಪ ಹೊರಗೆ ಬಂದಿತು. ಪತಿಯ ಮುಂದೆ ಗೋಣು ಆಡಿಸುತ್ತಿದ್ದವರೆಲ್ಲ ನಂತರ ಸಂಪತ್ತಿನಲ್ಲಿ ಪಾಲು ಪಡೆಯಲು ವ್ಯೂಹ ರಚಿಸಿ ತಾಯಿ ಮಗಳ ಜೀವಕ್ಕೆ ಶತ್ರುಗಳಾಗಿ ಬಿಟ್ಟಿದ್ದಾರೆ.

ಒಂದು ಅದೃಷ್ಟವೆಂದರೆ ಬುದ್ಧಿವಂತ ಮತ್ತು ಯೋಗ್ಯನಾದ ಸಮರ್ಥ್‌ ಅಳಿಯನಾಗಿ ದೊರಕಿದ್ದಾನೆ. ಅವನು ಸುಜಾತಾಳನ್ನು ತನ್ನ ತಾಯಿಯಂತೆ ಪ್ರೀತಿ ಗೌರವಗಳಿಂದ ಕಾಣುತ್ತಾನೆ. ಪಲ್ಲವಿಯನ್ನು ಪತ್ನಿಯಾಗಿ ಅವನಿಗೆ ಒಪ್ಪಿಸಿ ಸುಜಾತಾ ನಿಶ್ಚಿಂತಳಾಗಿದ್ದಾಳೆ. ಆದರೂ ಪಲ್ಲವಿ ವಿವಾಹವಾಗಿ ಹೋದ ನಂತರ ಸುಜಾತಾಳಿಗೆ  ಒಂಟಿತನ ಉಂಟಾಗಿತ್ತು. ಮೀರಾ ಒಬ್ಬಳೇ ಅವಳಿಗೆ ಜೊತೆಯಾಗಿ ನಿಂತಿದ್ದಳು. ಹಾಗೆ ನೋಡಿದರೆ ಸುಜಾತಾ ತನ್ನ ಸೋಶಿಯಲ್ ಲೈಫ್‌ನಲ್ಲಿ ಅನೇಕರೊಡನೆ ಒಡನಾಟದಲ್ಲಿದ್ದಾಳೆ. ಆದರೆ ಎಲ್ಲರ ಮುಖದ ಮೇಲಿರುವ ಮುಖವಾಡವನ್ನು ಅವಳು ಅರ್ಥ ಮಾಡಿಕೊಂಡಿದ್ದಾಳೆ.

ಸೋಮನಾಥರ ಕಣ್ಣುಗಳಲ್ಲಿ ಸುಜಾತಾ ಪ್ರಾಮಾಣಿಕತೆಯನ್ನು ಗುರುತಿಸಿದ್ದಾಳೆ. ಆದರೆ ಅವರನ್ನು ಭೇಟಿ ಮಾಡಿ ಇನ್ನೂ 1 ವಾರವಾಗಿದೆ ಅಷ್ಟೇ. ಆದರೂ ಅವರ ಮಾತುಗಳಲ್ಲಿ ವಿಶ್ವಾಸ ಮೂಡುತ್ತದೆ. ಅವರ ಮಾತು, ಅವರ ಸಂಗ ಮನಸ್ಸಿಗೆ ಒಂದು ಬಗೆಯ ಸಮಾಧಾನ ನೀಡುತ್ತದೆ. ಅವರೊಂದಿಗೆ ಮನಸ್ಸಿನಲ್ಲಿರುವ ವಿಷಯವನ್ನು ಹೇಳಿಕೊಂಡಾಗ ಮನಸ್ಸು ಹಗುರವಾಗುತ್ತದೆ.

ಒಂದು ದಿನ ಮೀರಾ ವಾಕಿಂಗ್‌ಗೆ ಬಂದಾಗ ಸುಜಾತಾಳನ್ನು ಕುರಿತು, “ಮುಂದಿನ ವಾರ ನಾವೆಲ್ಲ ಗೋವಾಗೆ ಹೋಗಲು ಪ್ಲಾನ್ ಮಾಡಿದ್ದೇವೆ. ನೀನೂ ಬರುತ್ತೀಯಾ?” ಕೇಳಿದಳು.

“ನಾನು ಒಬ್ಬಳೇ ಬಂದು ಏನು ಮಾಡಲಿ? ನೀವೆಲ್ಲ ನಿಮ್ಮ ಪತಿಯಂದಿರ ಜೊತೆ ರೊಮ್ಯಾಂಟಿಕ್‌ ಡೇಟ್‌ನಲ್ಲಿ ತೊಡಗಿರುತ್ತೀರಿ,” ಸುಜಾತಾ ತಮಾಷೆಯಾಗಿ ಹೇಳಿದಳು.

“ನೀನು ನಿನ್ನ ಫ್ರೆಂಡ್‌ ಸೋಮನಾಥ್‌ ಜೊತೆ ಡೇಟ್‌ ಮಾಡು. ಅವರನ್ನೂ ಜೊತೆಗೆ ಕರೆದುಕೊ,” ಮೀರಾ ರೇಗಿಸಿದಳು.

“ವಾವ್‌! ನಾನು ಇದನ್ನು ಯೋಚಿಸಿರಲೇ ಇಲ್ಲ,” ಸುತ್ತಾಡಲು ಆಸಕ್ತಿಯಿದ್ದ ಸುಜಾತಾ ಕೂಡಲೇ ಹೇಳಿದಳು.

ಪತಿ ಇದ್ದಾಗ ಸುಜಾತಾ ವರ್ಷಕ್ಕೆರಡು ಬಾರಿ ಪ್ರವಾಸ ಹೋಗುತ್ತಿದ್ದಳು. ಪತಿಯ ಮರಣಾನಂತರ ಆ ಪದ್ಧತಿ ನಿಂತುಹೋಗಿತ್ತು. ನಾಲ್ಕು ದಿನ ಪ್ರವಾಸಕ್ಕೆ ಹೋದರೆ ಒಂಟಿತನದ ಬೇಸರ ಕಳೆಯುತ್ತದೆ. ಹೌದು, ಸೋಮನಾಥ್‌ರನ್ನು ಕರೆದುಕೊಂಡು ಹೋಗಬೇಕು ಎಂದು ಯೋಚಿಸಿ ಸುಜಾತಾ ಬೇಗನೆ ಮನೆಯ ಕೆಲಸ ಮುಗಿಸಿ ಸೋಮನಾಥರಿಗೆ ಕಾಲ್ ಮಾಡಿದಳು.

ಸುಜಾತಾ ಟ್ರಿಪ್‌ ಬಗ್ಗೆ ಹೇಳಿದ್ದನ್ನು ಕೇಳಿದ ಸೋಮನಾಥ್‌, “ಬೇಡ, ನಾನು ಅಲ್ಲಿ ಬಂದು ಏನು ಮಾಡಲಿ? ನಿಮ್ಮ ಸ್ನೇಹಿತರಾರೂ ನನಗೆ ಪರಿಚಯವಿಲ್ಲ. ಅಲ್ಲದೆ ಬಂಟಿಯದೂ ಒಂದು ಸಮಸ್ಯೆ ಆಗುತ್ತದೆ. ಅದನ್ನು ಏನು ಮಾಡುವುದು?” ಎಂದು ಒಮ್ಮೆಗೇ ಅವಳ ಆಹ್ವಾನವನ್ನು ನಿರಾಕರಿಸಿದರು.

“ಓಹೋ! ಎಷ್ಟು ನೆಪಗಳನ್ನು ಒಡ್ಡುತ್ತೀರಿ. ನನ್ನ ಸ್ನೇಹಿತರ ಜೊತೆ ಸೇರಿದಾಗ ನಿಮಗೆ ಖಂಡಿತ ಬೇಸರವಾಗುದಿಲ್ಲ. ಮತ್ತೆ, ಬಂಟಿಯನ್ನು ನಾವು ಡಾಗ್‌ ಹೌಸ್‌ನಲ್ಲಿ ಬಿಟ್ಟು ಹೋಗಬಹುದು.”

ಅಂದೇ ಸಾಯಂಕಾಲ ಸೋಮನಾಥ್‌ ಹೇಳಿದ ಗುರುತಿನ ಮೇಲೆ ಅವರಿವರನ್ನು ವಿಚಾರಿಸಿ ಸುಜಾತಾ ಅವರ ಮನೆಗೆ ಹೋದಳು.

ಬಾಗಿಲು ತೆರೆದ ಸೋಮನಾಥ್‌ ಅನಿರೀಕ್ಷಿತವಾಗಿ ಬಂದ ಸುಜಾತಾಳನ್ನು ಕಂಡು ಆಶ್ಚರ್ಯಗೊಂಡು, “ಅರೆ…. ನೀವು…? ಇಲ್ಲಿ…..?”

“ಒಳಗೆ ಕರೆಯುವುದಿಲ್ಲವೇ?”

ಸುಜಾತಾ ಮಾತನಾಡಿದ ರೀತಿ ಸೋಮನಾಥರಿಗೆ ನಗೆ ತರಿಸಿತು. ಅವರು ಪಕ್ಕಕ್ಕೆ ಸರಿಯುತ್ತಾ, “ಬನ್ನಿ…. ಬನ್ನಿ…. ನಿಮಗೆ ಸ್ವಾಗತ,” ಎಂದರು.

ಲಿವಿಂಗ್‌ ರೂಮ್ ಸುತ್ತ ಕಣ್ಣಾಡಿಸುತ್ತಾ ಸುಜಾತಾ, “ಓಹ್‌! ನಿಮ್ಮ ಮನೆ ಬಹಳ ಚೆನ್ನಾಗಿದೆ,” ಎಂದು ಹೇಳಿ ಅಲ್ಲೇ ಇದ್ದ ಸೋಫಾ ಮೇಲೆ ಕುಳಿತಳು.

“ಸ್ತ್ರೀಯರ ಕೈ ಚಳಕದಿಂದ ಮಾತ್ರ ಮನೆ ಪರಿಪೂರ್ಣವಾಗುತ್ತದೆ,” ಸೋಮನಾಥರ ನಿಟ್ಟುಸಿರು ಸುಜಾತಾಳ ಮನಸ್ಸನ್ನು ಮುಟ್ಟಿತು.

“ನಿಜವಾಗಲೂ ನಿಮ್ಮ ಮನೆ ಅಚ್ಚುಕಟ್ಟಾಗಿದೆ. ನೀವಿಲ್ಲಿ ಒಬ್ಬರೇ ಇರುವಿರೆಂದು ಅನ್ನಿಸುವುದೇ ಇಲ್ಲ.”

“ಇದರ ಕ್ರೆಡಿಟ್‌ ಎಲ್ಲ ನಮ್ಮ ಮನೆಗೆಲಸದವಳಿಗೇ ಸಲ್ಲಬೇಕು. ಅವಳೇ ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಅಡುಗೆಯನ್ನೂ ಮಾಡುತ್ತಾಳೆ. ಬಂಟಿಯನ್ನು ನೋಡಿಕೊಳ್ಳುವುದು ನನ್ನ ಕೆಲಸ,” ಸೋಮನಾಥ್‌ ತಮ್ಮ ಬೇಸರವನ್ನು ಮರೆಮಾಚುತ್ತಾ ಹೇಳಿದರು.

“ಹೌದಲ್ಲ! ನಾನು ಬಂಟಿ ಬಗ್ಗೆ ಕೇಳುವುದನ್ನೇ ಮರೆತೆ. ಎಲ್ಲಿ ಬಂಟಿ…..?” ಸುಜಾತಾ ಕೇಳುತ್ತಿದ್ದಂತೆ ಬಂಟಿ ಬರುತ್ತಿರುವುದು ಕಾಣಿಸಿತು. ಸುಜಾತಾ ಅಲ್ಲಿರುವುದನ್ನು ನೋಡಿದ ಬಂಟಿ ಓಡಿ ಬಂದು ಅವಳ ಕಾಲ ಬಳಿ ಸುತ್ತತೊಡಗಿತು. ಅದರ ಹಿಂದೆ ಸುಮಾರು 30 ವರ್ಷದ ಯುವಕನೊಬ್ಬ ಒಳಗೆ ಬಂದ.

“ಇವರು ನನ್ನ ವಾಕಿಂಗ್‌ ಫ್ರೆಂಡ್‌ ಸುಜಾತಾ. ಸುಜಾತಾ ಅವರೇ, ಇವನು ನನ್ನ ಮಗ ಅಖಿಲ್,” ಎಂದು ಸೋಮನಾಥ್‌ಇಬ್ಬರನ್ನೂ ಪರಿಚಯಿಸಿದರು.

“ಹಲೋ ಆಂಟಿ,” ಎಂದು ಹೇಳಿ ಅಖಿಲ್ ‌ಸುಜಾತಾಳಿಗೆ ಕೈ ಮುಗಿದ. ನಂತರ ತಂದೆಯ ಕಡೆ ತಿರುಗಿ, “ಅಪ್ಪಾ, ಬಂಟಿ ಬೇಗನೆ ಆಯಾಸಗೊಳ್ಳುತ್ತದೆ,” ಎಂದ.

“ಹೌದು. ಅದಕ್ಕೂ ವಯಸ್ಸಾಯಿತು. ಎಲ್ಲಿಯವರೆಗೆ ನನಗೆ ಜೊತೆ ನೀಡುವುದೋ ಗೊತ್ತಿಲ್ಲ. ಈಗ ನಾವಿಬ್ಬರೂ ಜೀವನದ ಸಂಜೆಯಲ್ಲಿ ಇದ್ದೇವೆ,” ಎಂದು ಹೇಳುತ್ತಿದ್ದಂತೆ ಸೋಮನಾಥರ ಕಣ್ಣುಗಳು ಒದ್ದೆಯಾದವು.

“ಓಹೋ, ನಾನು ನೀವು ಮಾಡಿದ ಕಾಫಿ ಕುಡಿಯೋಣ ಅಂತ ಬಂದರೆ ನೀವು ತತ್ವ ಹೇಳುತ್ತಿದ್ದೀರಿ,” ಸುಜಾತಾ ಮಾತು ಮರೆಸಲು ಹೇಳಿದಳು.

“ಸಾರಿ, ಒಂದು ನಿಮಿಷದಲ್ಲಿ ತರುತ್ತೇನೆ,” ಎನ್ನುತ್ತಾ ಸೋಮನಾಥ್‌ ಕಿಚನ್‌ನತ್ತ ನಡೆದರು.

ಸೋಮನಾಥ್‌ ಕಾಫಿ ಮಾಡುತ್ತಿದ್ದ ಸಮಯದಲ್ಲಿ ಸುಜಾತಾ ಅವರ ಮಗನ ಜೊತೆ ಮಾತನಾಡುತ್ತಾ ಕುಳಿತಳು.

ಅಖಿಲ್ ‌ತನ್ನ ತಾಯಿ ತಂದೆಯರ ಸಂಬಂಧ ಕಡಿದು ಹೋದುದರ ಬಗ್ಗೆ ತಿಳಿಸಿ, “ಶ್ರೀಮಂತರ ಮನೆಯ ಹುಡುಗಿಯನ್ನು ವಿವಾಹವಾಗಿ ನನ್ನ ತಂದೆ ಬಹಳ ಕಷ್ಟಪಟ್ಟಿದ್ದಾರೆ. ನನ್ನ ತಾಯಿಯ ಈಗೋ ತಂದೆಯನ್ನು ಸದಾ ಚುಚ್ಚುತ್ತಿತ್ತು. ಆದರೆ ನನಗೋಸ್ಕರ ಅವರು ಅದನ್ನೆಲ್ಲ ಸಹಿಸಿಕೊಂಡಿದ್ದರು. ನನ್ನ ವಿವಾಹವಾದ ನಂತರ ಅವರು ಬೇರೆ ಬಂದುಬಿಟ್ಟರು. ತಾಯಿಯ ಸ್ವಭಾವ ಈಗಲೂ ಹಾಗೇ ಇದೆ. ಆದರೆ ಈ ವಯಸ್ಸಿನಲ್ಲಿ ತಾಯಿಯನ್ನು ಒಂಟಿ ಮಾಡಬೇಡವೆಂದು ತಂದೆ ನನಗೆ ತಿಳಿಸಿ ಹೇಳಿದ್ದರಿಂದ ನಾನು ತಾಯಿಯ ಜೊತೆ ಇದ್ದೇನೆ.

“ನನಗೆ ಯಾವಾಗಲೂ ತಂದೆಯ ಬಗ್ಗೆಯೇ ಆತಂಕ. ಅವರು ತಮ್ಮ ಮನಸ್ಸಿನ ಭಾವನೆಗಳನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಈ ದಿನ ಅವರು ನನಗೆ ನಿಮ್ಮ ಬಗ್ಗೆ ಹೇಳಿದರು. ನೀವು ಅವರನ್ನು ಗೋವಾಗೆ ಕರೆದೊಯ್ಯಬೇಕೆಂದಿರುವ ವಿಷಯ ತಿಳಿಸಿದರು. ಆಂಟಿ, ಅಪ್ಪಾಜಿ ಸಂತೋಷವಾಗಿರಲಿ ಎಂದು ನಾನು ಆಶಿಸುತ್ತೇನೆ. ನೀವು ಖಂಡಿತ ಅವರನ್ನು ಗೋವಾಗೆ ಕರೆದುಕೊಂಡು ಹೋಗಿ. ಅವರು ಜೀವನದಲ್ಲಿ ಮತ್ತೊಮ್ಮೆ ಸುಖ ಕಾಣಲಿ ಎನ್ನುವುದು ನಮ್ಮ ಆಸೆ,” ಹೀಗೆ ಹೇಳುತ್ತಾ ಅಖಿಲ್ ಭಾವುಕನಾದ.

“ನೀನು ಯೋಚನೆ ಮಾಡಬೇಡ. ಎಲ್ಲ ಒಳ್ಳೆಯದಾಗುತ್ತದೆ.”

ಈಗ ಸುಜಾತಾಳಿಗೆ ಸೋಮನಾಥರ ಕಣ್ಣಿನಲ್ಲಿ ಕಾಣುತ್ತಿದ್ದ ನೀರಸ ಭಾವ ಅರ್ಥವಾಯಿತು. ಜೀವನದುದ್ದಕ್ಕೂ ಪ್ರೀತಿಯನ್ನು ಕೊಡುತ್ತಾ, ತಿರಸ್ಕಾರವನ್ನು ಪಡೆದ ವ್ಯಕ್ತಿ. ಇಷ್ಟು ಒಳ್ಳೆಯ ಮನುಷ್ಯನಿಗೆ ಪ್ರೀತಿ, ಗೌರವ ತೋರದ ಆ ಪತ್ನಿ ಎಂಥವಳಿರಬಹುದು?

ಸೋಮನಾಥರ ನೋವು ಅರಿವಾದ ಕೂಡಲೇ ಸುಜಾತಾ ಒಂದು ನಿರ್ಧಾರಕ್ಕೆ ಬಂದಳು.

“ನಾಳೆ ಬೆಳಗ್ಗೆ 11 ಗಂಟೆಗೆ ಶಾಪಿಂಗ್‌ಗೆ ಹೋಗೋಣ. ನಿಮಗೆ ಬಟ್ಟೆ ಕೊಳ್ಳಲು,” ಸೋಮನಾಥರು ಕೊಟ್ಟ ಕಾಫಿ ಕುಡಿಯುತ್ತಾ ಅವಳು ಹೇಳಿದಳು.

“ನನ್ನ ಹತ್ತಿರ ಬೇಕಾದಷ್ಟು ಬಟ್ಟೆಗಳಿವೆ,” ಸೋಮನಾಥ್‌ ಹೇಳಹೊರಟರು.

“ನಿಮ್ಮ ಪೈಜಾಮ, ಜುಬ್ಬಾ ನೋಡಿದ್ದೇನೆ. ಅವು ಸಾಲುವುದಿಲ್ಲ. ಗೋವಾಗೆ ಹೊರಡುವ ಮೊದಲು ನಿಮ್ಮ ಮೇಕ್‌ ಓವರ್ ಆಗಬೇಕಿದೆ,” ಎನ್ನುತ್ತಾ ಸುಜಾತಾ ಅಖಿಲನ ಕಡೆ ನೋಡಿದಳು.

“ಹೌದು ಆಂಟಿ. ನೀವು ಹೇಳುವುದು ಸರಿಯಾಗಿದೆ. ಅಪ್ಪಾ, ನೀವು ಬಂಟಿಯ ಚಿಂತೆ ಮಾಡಬೇಡಿ. ಅದನ್ನು ನಾನು ನೋಡಿಕೊಳ್ಳುತ್ತೇನೆ,” ಎಂದು ಹೇಳಿ ಅಖಿಲ್ ‌ಒಂದು ವಿಜಯದ ನಗೆ ಬೀರಿ ಸುಜಾತಾಳತ್ತ ಕಣ್ಣು ಮಿಟುಕಿಸಿದ.

ಮರುದಿನ ಗೊತ್ತುಪಡಿಸಿದ ಸಮಯದಲ್ಲಿ ಇಬ್ಬರೂ ಹೊರಟು ಶಾಪಿಂಗ್‌ ಕಾಂಪ್ಲೆಕ್ಸ್ ಗೆ ಹೋಗುವ ಬಸ್‌ ಹಿಡಿದರು. ಅಂಗಡಿಗಳನ್ನೆಲ್ಲ ಸುತ್ತಿ ಸುಜಾತಾ ಸೋಮನಾಥರಿಗಾಗಿ ಸಾಕಷ್ಟು ಡ್ರೆಸ್‌ ಖರೀದಿಸಿದಳು. ಸುಜಾತಾ ಜೀನ್ಸ್ ಆರಿಸುತ್ತಿದ್ದಾಗ ಸೋಮನಾಥ್‌ ಕೊಂಚ ವಿರೋಧಿಸಿದರು. ಆದರೆ ಸುಜಾತಾಳ ಮಾತಿನ ಮುಂದೆ ಅವರದೇನೂ ನಡೆಯಲಿಲ್ಲ. ಎಲ್ಲ ಮುಗಿದ ಮೇಲೆ ಸೋಮನಾಥ್‌ ಅವಳಿಗಾಗಿ ಒಂದು ಸುಂದರವಾದ ಪರ್ಸ್‌ ಕೊಡಿಸಿದರು.

ಶಾಪಿಂಗ್‌ನ ಸುತ್ತಾಟದಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಬಳಿಯಲ್ಲಿದ್ದ ಒಂದು ಹೋಟೆಲ್‌ಗೆ ಹೋಗಿ ಊಟ ಮಾಡಿದರು. ಹಿಂದಿರುಗುವ ವೇಳೆಗೆ ಜನಸಂದಣಿ ಹೆಚ್ಚಾಗಿತ್ತು. ಟ್ಯಾಕ್ಸಿಯಲ್ಲಿ ಹೋಗೋಣವೆಂದು ಸೋಮನಾಥ್‌ ಹೇಳಿದರೆ ಸುಜಾತಾ ಒಪ್ಪದೆ ಬಸ್‌ ಹತ್ತಿದಳು.

ಬಸ್‌ ತುಂಬಾ ಜನರಿದ್ದರು. ಸೀಟುಗಳೆಲ್ಲ ಭರ್ತಿಯಾಗಿದ್ದವು. ಆದ್ದರಿಂದ ಇಬ್ಬರೂ ಮಧ್ಯಭಾಗದಲ್ಲಿ ಜಾಗ ಮಾಡಿಕೊಂಡು ನಿಂತರು. ಅಕ್ಕಪಕ್ಕದಲ್ಲಿದ್ದ ಪುರುಷರ ಉಪಸ್ಥಿತಿಯಿಂದ ಸುಜಾತಾಳಿಗೆ ಮುಜುಗರವಾಗುತ್ತಿತ್ತು. ಆದರೆ ಸೋಮನಾಥ್‌ ಅವಳ ಬಳಿಯಲ್ಲೇ ಒಂದು ಸುರಕ್ಷಾ ಕವಚದಂತೆ ನಿಂತಿದ್ದರು. ಅದರಿಂದ ಸುಜಾತಾ ನಿಶ್ಚಿಂತಳಾದಳು.

ಸುಜಾತಾಳನ್ನು ಮನೆ ತಲುಪಿಸಿ ಸೋಮನಾಥ್‌ ತಮ್ಮ ಮನೆಯ ಕಡೆ ಹೆಜ್ಜೆ ಹಾಕಿದರು. ವರ್ಷಗಳ ನಂತರ ಅವರ ಮನಸ್ಸು  ಉಲ್ಲಾಸದಿಂದ ಕೂಡಿತ್ತು, ಮುಖದಲ್ಲಿ ಕಾಂತಿ ತುಂಬಿತ್ತು.

ಸುಜಾತಾ ತನ್ನ ಸಾಮಾನುಗಳನ್ನು ಪ್ಯಾಕ್‌ ಮಾಡುತ್ತಿರುವಾಗ ಪಲ್ಲವಿಯಿಂದ ಫೋನ್‌ ಬಂದಿತು. “ಹಾಯ್‌ ಮಮ್ಮ…. ಏನು ಮಾಡುತ್ತಿದ್ದೀರಿ?”

“ಗೋವಾಗೆ ಹೋಗುವುದಕ್ಕೆ ಪ್ಯಾಕ್‌ ಮಾಡುತಿದ್ದೇನೆ. ನೀನು ಮತ್ತು ಸಮರ್ಥ್‌ ಹೇಗಿದ್ದೀರಿ?”

“ನಾವು ಚೆನ್ನಾಗಿದ್ದೇವೆ ಮಮ್ಮ. ಯಾರ ಜೊತೆ ನಿಮ್ಮ ಟೂರ್‌ ಪ್ರೋಗ್ರಾಂ….?”

“ಮೀರಾ ಆಂಟಿ ಮತ್ತು ನಮ್ಮ ಗ್ರೂಪ್‌ ಪೂರ್ತಿ ಹೊರಟಿದ್ದೇವೆ,” ಸುಜಾತಾ ಬೇಕೆಂದೇ ಸೋಮನಾಥರ ಹೆಸರು ಹೇಳಲಿಲ್ಲ. ಮಗಳ ಮುಂದೆ ಕುಳಿತು ಅವಳಿಗೆ ನಿಧಾನವಾಗಿ ಈ ವಿಷಯ ತಿಳಿಸಲು ಸುಜಾತಾ ಇಷ್ಟಪಟ್ಟಳು.

ಗೋವಾ ಪ್ರವಾಸಕ್ಕಾಗಿ 12 ಸೀಟುಗಳುಳ್ಳ ಒಂದು ಮಿನಿ ಬಸ್‌ನ ವ್ಯವಸ್ಥೆ ಮಾಡಲಾಯಿತು. ಸುಜಾತಾಳ ಮನೆಯ ಬಳಿಗೆ ಬಸ್‌ಬರುವುದೆಂದೂ ಸೋಮನಾಥರೂ ಅಲ್ಲಿಂದಲೇ ಬಸ್‌ ಹತ್ತುವುದೆಂದು ನಿಶ್ಚಯಿಸಲಾಯಿತು.

ಬೆಳಗ್ಗೆ 7 ಗಂಟೆಯ ಹೊತ್ತಿಗೆ ಸೋಮನಾಥ್‌ ಒಂದು ಟ್ರಾಲಿ ಬ್ಯಾಗ್‌ನೊಂದಿಗೆ ಸುಜಾತಾಳ ಮನೆಗೆ ಬಂದರು.

“ವಾವ್, ಈ ಡ್ರೆಸ್‌ ಬಹಳ ಚೆನ್ನಾಗಿ ಒಪ್ಪುತ್ತಿದೆ ನಿಮಗೆ….. ಒಳ್ಳೆಯ ಡ್ಯಾಶಿಂಗ್‌ ಪರ್ಸನಾಲಿಟಿ ನಿಮ್ಮದು,” ಅವರನ್ನು ಮೆಚ್ಚುಗೆಯಿಂದ ನೋಡುತ್ತಾ ಸುಜಾತಾ ಹೇಳಿದಳು.

ಬ್ಲೂ ಜೀನ್ಸ್ ಮತ್ತು ಆಫ್‌ ವೈಟ್‌ ಟೀ ಶರ್ಟ್‌ ತೊಟ್ಟಿದ್ದ ಸೋಮನಾಥ್‌ ನಿಜಕ್ಕೂ ಆಕರ್ಷಕವಾಗಿ ಕಾಣುತ್ತಿದ್ದರು. ಅಲ್ಲಲ್ಲಿ ಇಣುಕಿ ನೋಡುತ್ತಿದ್ದ ನೆರೆ ಕೂದಲಿನೊಂದಿಗೆ ಅವರು ಧರಿಸಿದ್ದ ಸ್ಟೈಲಿಶ್‌ ಗಾಗಲ್ಸ್ ಸ್ಪೆಷಲ್ ಲುಕ್‌ ನೀಡಿತ್ತು.

“ಇದೆಲ್ಲ ನಿಮ್ಮ ಸಹವಾಸದ ಪ್ರಭಾವ,” ಸೋಮನಾಥ್‌ ಮುಗುಳ್ನಗುತ್ತಾ ಹೇಳಿದರು.

ಬಸ್‌ನಲ್ಲಿ ಸುಜಾತಾ ಎಲ್ಲರಿಗೂ ಸೋಮನಾಥ್‌ರ ಪರಿಚಯ ಮಾಡಿಸಿದಳು. ಸ್ವಲ್ಪ ಸಮಯದಲ್ಲೇ ಸೋಮನಾಥ್‌ ಎಲ್ಲರೊಂದಿಗೆ ಬಹಳ ಕಾಲದ ಪರಿಚಯ ಎಂಬಂತೆ ಹೊಂದಿಕೊಂಡರು. ಯಾವಾಗಲೂ ಮೌನವಾಗಿ, ಮಿತಭಾಷಿಯಾಗಿರುತ್ತಿದ್ದ ಅವರು ನಗುನಗುತ್ತಾ, ತಮಾಷೆಯ ಮಾತುಗಳನ್ನಾಡುತ್ತಾ ಎಲ್ಲರಿಗೂ ಪ್ರಿಯರಾದರು.

ಪ್ರವಾಸ ಕಾಲದಲ್ಲಿ ಸೋಮನಾಥ್‌ರ ಹೊಸ ವ್ಯಕ್ತಿತ್ವವನ್ನು ಕಂಡ ಸುಜಾತಾ ಹರ್ಷಗೊಂಡಳು. ಅವರು ಸಂಕೋಚಪಟ್ಟುಕೊಳ್ಳದಂತೆ ಅವರ ಅಗತ್ಯಗಳನ್ನು ಗಮನಿಸಿ ನೆರವಾದಳು. ಆ ಪ್ರವಾಸ ಅವರಿಬ್ಬರ ಸ್ನೇಹವನ್ನು ವೃದ್ಧಿಗೊಳಿಸಿತು.

ಔಟಿಂಗ್‌ನ 1 ವಾರ ಕಾಲ ಸುಜಾತಾಳಿಗೆ ಫ್ರೆಶ್‌ನೆಸ್‌ನ ಅನುಭವ ಒದಗಿಸಿತು. ಮನೆಗೆ ಹಿಂದಿರುಗಿದ ನಂತರ ಮನೆಗೆಲಸದವಳೊಂದಿಗೆ ಸೇರಿ ಮನೆಯನ್ನೆಲ್ಲ ಚೊಕ್ಕಟಗೊಳಿಸಿದಳು. ನಂತರ ಇಡೀ ದಿನ ವಿಶ್ರಾಂತಿ ಪಡೆದಳು.

ಸುಜಾತಾ ಮತ್ತು ಸೋಮನಾಥ್‌ ಹೆಚ್ಚು ಕಾಲ ಜೊತೆ ಜೊತೆಯಾಗಿ ಕಾಲ ಕಳೆಯತೊಡಗಿದರು. ಯಾವುದೋ ಅದೃಶ್ಯವಾದ ಭಾವನಾತ್ಮಕ ಬಳ್ಳಿಯಿಂದ ಅವರು ಬಂಧಿತರಾಗಿದ್ದರು. ಮಗ ಆಗಾಗ ಬಂದು ಇಬ್ಬರನ್ನೂ ಭೇಟಿ ಮಾಡುತ್ತಿದ್ದ. ತಂದೆಯ ಮುಖದಲ್ಲಿ ಆನಂದ, ನೆಮ್ಮದಿಯನ್ನು ಕಂಡು ಅವನಿಗೆ ಸಂತೋಷವಾಯಿತು. ಸೋಮನಾಥ್‌ರ ಸಖ್ಯದಿಂದ ಸುಜಾತಾ ಪ್ರಫ್ಪುಲ್ಲಳಾಗಿದ್ದಳು. ಬಾಳು ಬೇಸರ ಎಂಬ ಭಾವನೆ ಅವಳಿಗೆಂದೂ ಇರಲಿಲ್ಲ. ಆದರೂ ಪತಿಯ ಕಾಲಾನಂತರ ಮನದ ಒಂದು ಮೂಲೆಯಲ್ಲಿ ಮನೆ ಮಾಡಿದ್ದ ಶೂನ್ಯಭಾವವನ್ನು ಸೋಮನಾಥ್‌ರ ಸ್ನೇಹ ದೂರಗೊಳಿಸಿದ್ದಿತು.

ಒಂದು ಬೆಳಗ್ಗೆ ಸೋಮನಾಥ್‌ ವಾಕಿಂಗ್‌ಗೆ ಬಾರದಿರಲು ಸುಜಾತಾ ಚಿಂತೆಗೀಡಾದಳು.

“ಏನೋ ಕೆಲಸ ಇರಬಹುದು ಬಿಡು,” ಮೀರಾ ಅವಳಿಗೆ ಸಮಾಧಾನ ಹೇಳಿದಳು.

“ಕೆಲಸ ಇದ್ದರೆ ಫೋನ್‌ ಮಾಡುತ್ತಿದ್ದರಲ್ಲ.” ಎಂಬುದು ಸುಜಾತಾಳ ಎಣಿಕೆ.

ಮನೆಗೆ ಹೋಗಿ ಸುಜಾತಾ ತನ್ನ ಬೆಳಗಿನ ಕೆಲಸಗಳನ್ನೆಲ್ಲ ಬೇಗ ಬೇಗನೆ ಮುಗಿಸಿ ಸೋಮನಾಥ್‌ರ ಮನೆ ತಲುಪಿದಳು.

ಗೇಟ್‌ನ ಬಳಿಯೇ ಅವರ ಕೆಲಸದಾಕೆ ಎದುರಾಗಲು ಸುಜಾತಾ ಆತಂಕದಿಂದ, “ಸೋಮನಾಥ್‌ ಆರೋಗ್ಯವಾಗಿದ್ದಾರೆ ತಾನೇ?” ಎಂದು ಪ್ರಶ್ನಿಸಿದಳು.

“ಯಜಮಾನರು ಚೆನ್ನಾಗಿದ್ದಾರಮ್ಮ. ಆದರೆ ಬಂಟಿ ಹೋಗಿಬಿಟ್ಟಿತು.”

“ಏನು ಹೇಳುತ್ತಿದ್ದೀಯಾ?” ಸುಜಾತಾಳಿಗೆ ನಂಬಿಕೆಯಾಗಲಿಲ್ಲ, “ನಿನ್ನೆ ತಾನೇ ನಾನು ಅದಕ್ಕೆ ತಿಂಡಿ ತಿನ್ನಿಸಿ ಹೋಗಿದ್ದೇನೆ.”

“ಹೌದಮ್ಮ. ನಿನ್ನೆ ಮಧ್ಯಾಹ್ನ ಅದನ್ನು ಹಾವು ಕಚ್ಚಿಬಿಟ್ಟಿತು. ಯಜಮಾನರು ಆಸ್ಪತ್ರೆಗೂ ಎತ್ತಿಕೊಂಡು ಹೋಗಿದ್ದರು. ಆದರೆ ಅದು ಉಳಿಯಲಿಲ್ಲ.”

“ಛೇ…!” ಎನ್ನುತ್ತಾ ಸುಜಾತಾ ಮನೆ ಒಳಹೊಕ್ಕಳು.

ಹಾಲ್‌ನಲ್ಲಿ ಸೋಮನಾಥ್‌ ಸೋಫಾದ ಮೇಲೆ ಕುಳಿತು ತಮ್ಮ ಮುದ್ದಿನ ನಾಯಿ ಇರುತ್ತಿದ್ದ ಜಾಗವನ್ನೇ ದಿಟ್ಟಿಸಿ ನೋಡುತ್ತಿದ್ದರು. ಸುಜಾತಾಳನ್ನು ಕಂಡ ಕೂಡಲೇ ಅವರ ಕಣ್ಣು ತುಂಬಿ ಬಂದಿತು. ಮಕ್ಕಳಂತೆ ಅವರು ಬಿಕ್ಕಳಿಸಿ ಅತ್ತರು.

“ನನ್ನ ಬಂಟಿ ಹೋಗಿಬಿಟ್ಟಿತು ಸುಜಾತಾ, 12-14 ವರ್ಷಗಳಿಂದ ನನಗೆ ಜೊತೆ ಕೊಟ್ಟಿತ್ತು. ಇನ್ನು ಮುಂದೆ ನಾನು ಹೇಗಿರಲಿ?”

ಅವರ ದುಃಖವನ್ನು ಕಂಡು ಸುಜಾತಾ ಅವರ ಹೆಗಲನ್ನು ಮೃದುವಾಗಿ ಅದುಮಿದಳು. ಬಂಟಿ ಮೇಲಿನ ಅವರ ಅಪರಿಮಿತ ಪ್ರೀತಿ ಅವಳಿಗೆ ತಿಳಿಯದ ವಿಷಯವಲ್ಲ. ಯಾವುದೇ ಶಬ್ದಗಳಿಂದ ಅವರ ದುಃಖವನ್ನು ಸಮಾಧಾನಗೊಳಿಸಲಾಗುವುದೆಂದು ಅವಳು ಅರಿತಿದ್ದಳು.

ಕಿಚನ್‌ನಿಂದ ಕಾಫಿ ಟ್ರೇಯನ್ನು ತರುತ್ತಾ, ಅಖಿಲ್ ‌ಹೇಳಿದ, “ಆಂಟಿ, ನೀವೇ ಅವರಿಗೆ ಸ್ವಲ್ಪ ಸಮಾಧಾನ ಹೇಳಿ. ನಿನ್ನೆಯಿಂದ ಮಕ್ಕಳ ಹಾಗೆ ದುಃಖಿಸುತ್ತಾ ಕುಳಿತಿದ್ದಾರೆ. ಊಟ, ತಿಂಡಿ ಯಾವುದೂ ಮಾಡಿಲ್ಲ. ಹೀಗಿದ್ದರೆ ಅವರ ಆರೋಗ್ಯ ಏನಾಗುತ್ತದೆ? ನಾನು ಹೋದ ಮೇಲೆ ಅವರು ಒಂಟಿಯಾಗಿಬಿಡುತ್ತಾರೆ.”

“ನೀನು ಯೋಚನೆ ಮಾಡಬೇಡ. ನಾನು ಇದೀನಲ್ಲಾ…. ಜೊತೆಯಲ್ಲಿದ್ದು ಅವರಿಗೆ ಸಮಾಧಾನ ಹೇಳುತ್ತೇನೆ.”

ಇಬ್ಬರೂ ಸೇರಿ ಬಲವಂತದಿಂದ ಸೋಮಾನಾಥರಿಗೆ ತಿಂಡಿ ತಿನ್ನಿಸಿ ವಿಶ್ರಾಂತಿ ಪಡೆಯುವಂತೆ ಮಾಡಿದರು.

ಸೋಮನಾಥರು ತಮ್ಮ ನಾಯಿಯನ್ನು ಕಳೆದುಕೊಂಡು ಅನಾಥಭಾವದಿಂದ ತತ್ತರಿಸಿದರು. ಬಂಟಿ ಅವರಿಗೆ ಸಂಗಾತಿಯಾಗಿದ್ದುದಲ್ಲದೆ, ಬದುಕಲು ಒಂದು ಕಾರಣವಾಗಿತ್ತು. ಸುಜಾತಾ ಜೊತೆಯಲ್ಲಿ ಇರುವವರೆಗೆ ಅವರು ಸಮಾಧಾನದಿಂದ ಇರುತ್ತಿದ್ದರು. ಆದರೆ ಅವಳು ಹೋದಳೆಂದರೆ ಬೇಸರದಿಂದ ಮುದುಡಿ ಕುಳಿತು ಬಿಡುತ್ತಿದ್ದರು.

ಹೀಗಾಗಿ ಅವರನ್ನು ಒಂಟಿಯಾಗಿ ಬಿಡಲು ಸುಜಾತಾಳಿಗೆ ಮನಸ್ಸಾಗಲಿಲ್ಲ. ಅವರನ್ನು ತನ್ನ ಮನೆಗೇ ಕರೆದೊಯ್ಯುವ ಯೋಚನೆ ಮಾಡಿದಳು.

ಈ ಬಗ್ಗೆ ಮೀರಾ ಅವಳಿಗೆ ಎಚ್ಚರಿಕೆಯ ಮಾತು ಹೇಳಿದಳು, “ನೀನು ಸರಿಯಾಗಿ ಯೋಚಿಸಿದ್ದೀಯಾ…..? ಜನರು ಏನೇನು ಮಾತನಾಡಬಹುದು ಅಂತ……? ಇದು ನೀನಂದುಕೊಂಡಿರುವಷ್ಟು ಸುಲಭವಲ್ಲ……”

“ನಾನು ತೀರ್ಮಾನ ಮಾಡಿದ್ದೇನೆ. ಮುಂದೆ ಏನಾಗುತ್ತದೋ ನೋಡೇಬಿಡೋಣ,” ಎಂದು ಹೇಳಿ ಸುಜಾತಾ ಅಖಿಲನಿಗೆ ಫೋನ್‌ಮಾಡಿ, ತನ್ನ ನಿಶ್ಚಯದ ಬಗ್ಗೆ ತಿಳಿಸಿದಳು.

ಇದನ್ನು ಕೇಳಿ ಅಖಿಲ್ ‌ಸಂತೋಷ ವ್ಯಕ್ತಪಡಿಸಿದ.

ಸೋಮನಾಥ್‌ ಬಹಳ ಹಿಂಜರಿದರೂ ಬಿಡದೆ ಸುಜಾತಾ ಒತ್ತಾಯ ಮಾಡಿ ಅವರನ್ನು ತನ್ನ ಮನೆಗೆ ಕರೆತಂದಳು. ಅವಳ ಸ್ನೇಹ, ಪ್ರೀತಿಗಳ ಭಾವನಾತ್ಮಕ ಬೆಂಬಲದಿಂದ ಸೋಮನಾಥರಲ್ಲಿ ಬಹು ಬೇಗನೆ ಸಕಾರಾತ್ಮಕ ಬದಲಾವಣೆ ಕಂಡುಬಂದಿತು.

ಇದೇ ಸಮಯದಲ್ಲಿ ಒಂದು ದಿನ ಪಲ್ಲವಿಯಿಂದ ಫೋನ್‌ ಕರೆ ಮಾಡಿ, “ಮಮ್ಮಿ…. ಸಮರ್ಥ್‌ ಆಫೀಸ್‌ ಕೆಲಸದ ಮೇಲೆ ಒಂದು ವಾರ ಅಲ್ಲಿಗೆ ಬರುತ್ತಿದ್ದಾರೆ. ಅವರ ಜೊತೆ ನಾನೂ ಬರುತ್ತೇನೆ. ನಿಮ್ಮನ್ನು ನಾನು ಬಹಳ ಮಿಸ್‌ ಮಾಡುತ್ತಿದ್ದೇನೆ,” ಉತ್ಸಾಹದಿಂದ ಹೇಳಿದಳು.

ಮಗಳು ಮನೆಗೆ ಬರುವುದು ಸಂತೋಷದ ವಿಷಯವಾದರೂ ಸುಜಾತಾ ಒಂದು ಬಗೆಯ ಇಕ್ಕಟ್ಟಿಗೆ ಸಿಕ್ಕಿಕೊಂಡಳು. ಅವಳು ಈ ವಿಷಯವನ್ನು ಸೋಮನಾಥರಿಗೆ ಹೇಳಲಿಲ್ಲ. ಆದರೆ ಚಟುವಟಿಕೆಯಿಂದ ಸರಿದಾಡುತ್ತಿದ್ದವಳ ಮುಖದಲ್ಲಿ ಚಿಂತೆಯ ಗೆರೆಗಳನ್ನು ಸೋಮನಾಥ್‌ ಗುರುತಿಸಿದರು. ನಿಜ ವಿಷಯ ತಿಳಿಸುವಂತೆ ಅವರು ಬಲವಂತ ಮಾಡಿದಾಗ, ಸುಜಾತಾ ಮಗಳು ಮತ್ತು ಅಳಿಯ ಬರುತ್ತಿರುವುದನ್ನು ಹೇಳಲೇಬೇಕಾಯಿತು.

ಅದನ್ನು ಕೇಳಿ ಸೋಮನಾಥ್‌ ತಾವೇ ಅವಳಿಗೆ ಸಮಾಧಾನ ಹೇಳಿದರು. “ನೋಡು, ನನಗೆ ಅಗತ್ಯವಿದ್ದಾಗ ನೀನು ನನಗೆ ಆಸರೆ ನೀಡಿದೆ. ಈಗ ನಾನು ಸಂಪೂರ್ಣವಾಗಿ ಸರಿಯಾಗಿದ್ದೇನೆ. ಇನ್ನು ನನ್ನನ್ನು ನಾನು ನೋಡಿಕೊಳ್ಳಬಲ್ಲೇ. ನೀನು ಸಂತೋಷದಿಂದ ಮಕ್ಕಳ ಆಗಮನಕ್ಕೆ ಸಿದ್ಧತೆ ಮಾಡಿಕೊ.”

“ನಮ್ಮ ಸಂಬಂಧದ ಬಗ್ಗೆ ನಾವು ಒಂದಲ್ಲ ಒಂದು ದಿನ ಹೇಳಬೇಕಾಗುತ್ತದೆಯಲ್ಲವೇ?”

“ಕಾಲ ಕೂಡಿ ಬಂದಾಗ ಎಲ್ಲ ತಂತಾನೇ ಆಗುತ್ತದೆ. ಆ ಬಗ್ಗೆ ಚಿಂತಿಸಬೇಡ,” ಎಂದು ಸೋಮನಾಥ್‌ ಸಮಾಧಾನವಾಗಿ ಹೇಳಿದರು.

ಮಗಳು ಅಳಿಯನ ಬರುವಿಕೆಗಾಗಿ ಸುಜಾತಾ ಬಾಗಿಲ್ಲೇ ಕಾದು ನಿಂತಳು. ಕಳೆದ 6 ತಿಂಗಳಿನಿಂದ ಮಗಳನ್ನು ನೋಡದೆ ತಾಯಿ ಹೃದಯ ಮಿಡಿಯುತ್ತಿತ್ತು. ಕಾರು ಗೇಟಿನ ಮುಂದೆ ಬಂದು ನಿಲ್ಲುತ್ತಲೇ ಅವಳು ಧಾವಿಸಿ ಹೊರಗೆ ಬಂದಳು. ಮಗಳ ಕೈಲಿದ್ದ ಬ್ಯಾಗನ್ನು ತೆಗೆದು ಪಕ್ಕಕ್ಕಿಟ್ಟು ಅವಳನ್ನು ಅಪ್ಪಿಕೊಂಡಳು.

“ಮಮ್ಮಿ, ಹೇಗಿದ್ದೀರಿ? ಮೀರಾ ಆಂಟಿ ಸಿಗುತ್ತಿರುತ್ತೀರಾ? ನೀವು ಟೂರ್‌ಗೆ ಹೋಗಿದ್ದು ಒಳ್ಳೆಯದಾಯಿತು. ನನಗೆ ಗೊತ್ತು ನೀವೆಲ್ಲ ಚೆನ್ನಾಗಿ ಎಂಜಾಯ್‌ ಮಾಡಿರುತ್ತೀರಿ. ನೀವು ಅಲ್ಲಿಂದ ಫೋನ್‌ ಮಾಡುತ್ತಿದ್ದಿರಿ. ಆದರೆ ನಿಮ್ಮ ಅಲ್ಲಿನ ಫೋಟೊಗಳನ್ನು ನಾನು ನೋಡಲೇ ಇಲ್ಲ….” ಪಲ್ಲವಿ ಒಂದೇ ಸಮನೆ ಹೇಳುತ್ತಿದ್ದಳು.

“ಮೊದಲು ಮನೆಯೊಳಗೆ ಬಾ. ಕುಳಿತು ಮಾತನಾಡೋಣವಂತೆ,”

ಸುಜಾತಾ ಮಗಳ ಆತುರಕ್ಕೆ ನಕ್ಕಳು.

“ಅಮ್ಮಾ ಹೇಗಿದ್ದೀರಿ?” ಸಮರ್ಥ್‌ ವಿನಯದಿಂದ ವಿಚಾರಿಸಿದ.

“ಚೆನ್ನಾಗಿದ್ದೇನೆ. ಮೊದಲು ಫ್ರೆಶ್‌ ಆಗಿ ಬನ್ನಿ. ತಿಂಡಿ ರೆಡಿ ಮಾಡುತ್ತೇನೆ.”

ತಿಂಡಿ, ಕಾಫಿ ಮುಗಿಸುತ್ತಿದ್ದಂತೆ ಪಲ್ಲವಿ ಮತ್ತೆ ಕೇಳಿದಳು, “ಮಮ್ಮಿ, ನಿಮ್ಮ ಗೋವಾದ ಫೋಟೋ ತೋರಿಸಿ.”

“ಯಾವುದೂ ಪ್ರಿಂಟ್‌ ಮಾಡಿಸಿಲ್ಲ. ಮೊಬೈಲ್ ನಲ್ಲಿ ಇದೆ ನೋಡು,” ಎನ್ನುತ್ತಾ ಸುಜಾತಾ ತನ್ನ ಮೊಬೈಲ್ ಪೋನ್‌ನ್ನು ಮಗಳ ಕೈಗಿತ್ತು ಅಡುಗೆಯ ಸಿದ್ಧತೆಗೆ ಒಳ ನಡೆದಳು.

“ಮಮ್ಮಿ…. ಈ ಅಂಕಲ್ ಯಾರು? ಈ ಮೊದಲೆಂದೂ ನೋಡಿಲ್ಲವಲ್ಲ…..?” ಹೆಚ್ಚಿನ ಫೋಟೋಗಳಲ್ಲಿ ತಾಯಿಯ ಜೊತೆಯಲ್ಲಿದ್ದ ಸೋಮನಾಥ್‌ರನ್ನು ತೋರಿಸುತ್ತಾ ಪಲ್ಲವಿ ಪ್ರಶ್ನಿಸಿದಳು.

“ಅವರು ಸೋಮನಾಥ್‌. ನಮ್ಮ ಮನೆಯ ಹತ್ತಿರ ಆ ಕಡೆ ಬೀದಿಯಲ್ಲಿ ವಾಸವಾಗಿದ್ದಾರೆ. ಅವರೂ ನಮ್ಮ ಜೊತೆ ಗೋವಾಗೆ ಬಂದಿದ್ದರು.”

ಪಲ್ಲವಿ ಮತ್ತೇನೋ ಕೇಳುವವಳಿದ್ದಳು. ಅಷ್ಟರಲ್ಲಿ ಸಮರ್ಥ್‌ ಕರೆದುದನ್ನು ಕೇಳಿ, “ಬಂದೆ….” ಎನ್ನುತ್ತಾ ಎದ್ದುಹೋದಳು. ಆದರೆ ಅವಳ ಮುಖದಲ್ಲಿ ಮೂಡಿದ್ದ ಪ್ರಶ್ನಾವಳಿಗಳನ್ನು ಸುಜಾತಾಳ ಅನುಭವೀ ದೃಷ್ಟಿ ಗುರುತಿಸಿತು.

ರಾತ್ರಿ ಹಾಸಿಗೆಯ ಮೇಲೆ ಮಲಗಿ ಸುಜಾತಾ ಯೋಚಿಸುತ್ತಿದ್ದಳು. `ತನ್ನ ಮತ್ತು ಸೋಮನಾಥ್‌ರ ಸಂಬಂಧದ ವಿಷಯವನ್ನು ಪಲ್ಲವಿಗೆ ಹೇಳಬೇಕು. ಅವಳು ನನ್ನ ಮಗಳು. ಅವಳಿಗೆ ಮೊದಲು ವಿಷಯ ತಿಳಿಯಬೇಕು. ಅದು ಬೇರೆಯವರಿಂದ ಅವಳಿಗೆ ತಿಳಿದು ಬಂದರೆ ಬೇಸರವಾಗುತ್ತದೆ. ಆದರೆ ಯಾವ ರೀತಿ ತಿಳಿಸುವುದು ಎಂದೇ ಅರ್ಥವಾಗುತ್ತಿಲ್ಲ.’

ಬೆಳಗ್ಗೆ ಪಲ್ಲವಿ ಏಳುವಷ್ಟರಲ್ಲಿ ಸುಜಾತಾ ವಾಕಿಂಗ್‌ಗೆ ಹೋಗಿದ್ದಳು. ಸಮರ್ಥ್‌ ತಿಂಡಿ ತಿಂದು ತನ್ನ ಆಫೀಸ್‌ ಕೆಲಸಕ್ಕೆ ಹೋದ. ಪಲ್ಲವಿ ತಾನೂ ಕಾಫಿ ಕುಡಿದು ಪತ್ರಿಕೆ ಓದುತ್ತಾ ಕುಳಿತಿದ್ದಳು. ಆಗ ತನ್ನ ತಾಯಿ ಅದೇ ಅಂಕಲ್ ಜೊತೆ ಬಂದುದನ್ನು ಕಂಡು ಅವಳಿಗೆ ಆಶ್ಚರ್ಯವಾಯಿತು.

“ಓಹೋ….. ನನ್ನ ಮಗಳು ಎದ್ದಿದ್ದಾಳೆ…. ಪಲ್ಲವಿ, ಇಲ್ಲಿ ನೋಡು. ಇವರೇ ಸೋಮನಾಥ್‌ ಅಂಕಲ್. ನಾನು ನಿನ್ನೆ ನಿನಗೆ ಇವರ ವಿಷಯ ಹೇಳಿದ್ದೆನಲ್ಲ….”

“ನಮಸ್ತೆ ಅಂಕಲ್,” ಪಲ್ಲವಿಯ ಧ್ವನಿಯಲ್ಲಿ ಉದಾಸೀನತೆ ಇತ್ತು. ತನ್ನ ತಾಯಿ ಅಷ್ಟೊಂದು ಸಲಿಗೆಯಿಂದ ಅವರೊಂದಿಗೆ ವ್ಯಹರಿಸುವುದು ಬಹುಶಃ ಅವಳಿಗೆ ಇಷ್ಟವಾಗಿರಲಾರದು.

ಸೋಮನಾಥ್‌ ಸ್ವಲ್ಪ ಹೊತ್ತು ಕುಳಿತಿದ್ದು ಹೊರಟುಹೋದರು. ಪಲ್ಲವಿಯ ನಿರುತ್ಸಾಹ ಭಾವ ವಾತಾವರಣವನ್ನು ಕಳೆಗುಂದಿಸಿತು.

ಮಧ್ಯಾಹ್ನ ಊಟವಾದ ನಂತರ ಸುಜಾತಾ ಮಗಳನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳುತ್ತಾ, “ಪಲ್ಲವಿ, ಬಾ ನಿನ್ನ ಜೊತೆ ಮಾತನಾಡಬೇಕು,” ಎಂದಳು.

“ಹೇಳಿ ಮಮ್ಮಿ,” ಪಲ್ಲವಿ ತಣ್ಣನೆಯ ಸ್ವರದಲ್ಲಿ ಹೇಳಿದಳು.

“ನೋಡು ಪಲ್ಲವಿ, ನಿನ್ನ ಪಪ್ಪ ತೀರಿ ಹೋದ ಮೇಲೆ ನೀನಿರುವವರೆಗೂ ನನಗೆ ಒಂಟಿ ಭಾವನೆ ಬರಲೇ ಇಲ್ಲ. ಆದರೆ ನೀನು ಮದುವೆಯಾಗಿ ಹೋದ ನಂತರ ಬದುಕು ಖಾಲಿ ಎನಿಸಿಬಿಟ್ಟಿತು.”

“ಗೊತ್ತು ಮಮ್ಮಿ. ಅದಕ್ಕೇ ನಾನು ನಿಮಗೆ ಹೊರಗಡೆ ಸುತ್ತಾಡಿ, ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ, ಸೋಶಿಯಲ್ ಆ್ಯಕ್ಟಿವಿಟೀಸ್‌ನಲ್ಲಿ ಭಾಗಿಯಾಗಿ ಅಂತ ಹೇಳುತ್ತಾ ಇರುವುದು….” ತಾಯಿಯ ಕಷ್ಟನ್ನು ಅರ್ಥ ಮಾಡಿಕೊಂಡಿದ್ದ ಪಲ್ಲವಿ ಸಲಹೆ ನೀಡಿದಳು.

“ಕಳೆದ ಕೆಲವು ದಿನಗಳಿಂದ ಸೋಮನಾಥ್‌ ಅಂಕಲ್ ನನಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ. ಗೋವಾ ಟ್ರಿಪ್‌ಗೆ ಹೋದಾಗ ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ನಾನು ಅವರ ಜೊತೆ ಸಂತೋಷವಾಗಿರುತ್ತೇನೆ ಅಂತ ಅಂದುಕೊಂಡಿದ್ದೇನೆ.  ನಿನಗೇನು ಅನ್ನಿಸುತ್ತದೆ?” ಸುಜಾತಾ ತನ್ನ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಿ ಮಗಳ ಅಭಿಪ್ರಾಯ ತಿಳಿಯ ಬಯಸಿದಳು.

“ಮಮ್ಮಿ, ನೀವು ಇದೇನು ಹೇಳುತ್ತಿದ್ದೀರಿ? ನಾವು ಈಗ ಬಹಳ ಅಡ್ವಾನ್ಸ್ ಲೈಫ್‌ ಬದುಕುತ್ತಿದ್ದೇವೆ ಅನ್ನುವುದು ನಿಜ. ನೀವು ಬೇರೆಯವರ ಸ್ನೇಹ ಮಾಡಿರುವುದರ ಬಗ್ಗೆ ನನಗೇನೂ ಅಭ್ಯಂತರವಿಲ್ಲ. ಆದರೆ, ಸೋಮನಾಥ್‌ ಅಂಕಲ್ ನಿಮಗೆ ಸ್ವಲ್ಪ ಮ್ಯಾಚ್ ಆಗುವುದಿಲ್ಲ. ಮೊದಲನೆಯದಾಗಿ ಅವರು ಬಂಗಾಳಿಗಳು. ಮೀನು, ಮಾಂಸ ತಿನ್ನುವವರು, ನಾವು ಬ್ರಾಹ್ಮಣರು. ಎರಡನೆಯದಾಗಿ ಅವರು ವಯಸ್ಸಿನಲ್ಲಿ ನಿಮಗಿಂತ ಬಹಳ ದೊಡ್ಡರು. ಅಲ್ಲದೆ…. ನೀವೇ ಯೋಚಿಸಿ ಮಮ್ಮಿ, ನನ್ನ ಅತ್ತೆ ಮನೆಯವರಿಗೆ ಮತ್ತು ಸಮರ್ಥ್‌ಗೆ ಈ ವಿಷಯ ತಿಳಿದರೆ ಅವರು ಏನಂದುಕೊಳ್ಳುವರು?” ಪಲ್ಲವಿ ಕೊಂಚ ಆಕ್ರೋಶದಿಂದ ಹೇಳಿದಳು.

“ಪಲ್ಲವಿ, ನಾನಿರುವ ಸ್ಥಿತಿಯಲ್ಲಿ ವಯಸ್ಸಿನ ಅಂತರ ಲೆಕ್ಕಕ್ಕೆ ಬರುವುದಿಲ್ಲ. ಮುಖ್ಯವಾಗಿ ಬೇಕಾಗುವುದು ಪರಸ್ಪರರ ಅಂಡರ್ ಸ್ಟಾಂಡಿಂಗ್‌. ನಾನು ತಿಳಿದ ಮಟ್ಟಿಗೆ ಅವರೊಬ್ಬ ಒಳ್ಳೆಯ ವ್ಯಕ್ತಿ. ನಾನು ಅವರ ಜೊತೆ ಸಂತೋಷವಾಗಿರಬಲ್ಲೆ.”

“ಮಮ್ಮಿ, ನನಗಂತೂ ಈ ನಿಮ್ಮ ಸ್ನೇಹದಲ್ಲಿ ಒಳ್ಳೆಯ ಭವಿಷ್ಯ ಕಂಡುಬರುತ್ತಿಲ್ಲ,” ಪಲ್ಲವಿ ತಾನೇ ತಾಯಿಯೆಂಬಂತೆ ಮಾತನಾಡಿ, ಈ ಸಂಬಂಧ ತನಗೆ ಇಷ್ಟವಿಲ್ಲ ಎಂಬುದನ್ನು ಸೂಚಿಸಿದಳು. ಮುಂದೆ ಮಾತು ಬೆಳೆಸಲು ಇಚ್ಛಿಸದೆ ಅಲ್ಲಿಂದ ಎದ್ದು ಹೋದಳು.

ಸಾಯಂಕಾಲ ತಾಯಿಗೆ ತಿಳಿಸದೆ ಪಲ್ಲವಿ ಮನೆಯಿಂದ ಹೊರಬಿದ್ದಳು. ಮೀರಾ ಆಂಟಿಗೆ ತಾಯಿಯ ಈ ರಿಲೇಶನ್‌ಶಿಪ್‌ ಬಗ್ಗೆ ತಿಳಿದಿದೆಯೇ? ಆ ಬಗ್ಗೆ ಅವರ ಅಭಿಪ್ರಾಯವೇನು ಎಂದು ತಿಳಿಯಲು ಅವಳು ಮೀರಾಳ ಮನೆಗೆ ಹೋದಳು. ಚಿಕ್ಕಂದಿನಿಂದಲೂ ಪಲ್ಲವಿ ತನಗೆ ಗೊಂದಲ ಉಂಟಾದಾಗೆಲ್ಲ ಮೀರಾ ಆಂಟಿಯ ಸಲಹೆ ಪಡೆಯುತ್ತಿದ್ದುದರಿಂದ ಈಗಲೂ ಅವರ ಸಲಹೆ ಕೇಳಲು ಮುಂದಾದಳು.

ಪಲ್ಲವಿಯನ್ನು ಕಂಡು ಮೀರಾ ಸಂತೋಷದಿಂದ ಅವಳ ಕೈಹಿಡಿದು ಒಳಗೆ ಕರೆತಂದಳು. ಆದರೆ ಅವಳ ಕಣ್ಣಿನಲ್ಲಿ ನೀರನ್ನು ಕಂಡು ಮೀರಾ ಗಾಬರಿಗೊಂಡಳು. ವಿಷಯ ತಿಳಿದ ನಂತರ ಸಮಾಧಾನ ಹೇಳಿ ಅವಳಿಗೆ ತಿಂಡಿ ಕಾಫಿಯ ವ್ಯವಸ್ಥೆ ಮಾಡಿದಳು. ಸುಜಾತಾಳಿಗೆ ಫೋನ್‌ ಮಾಡಿ, “ಪಲ್ಲವಿ ನಮ್ಮ ಮನೆಯಲ್ಲಿದ್ದಾಳೆ. ನೀನು ಯೋಚಿಸಬೇಡ. ಸಮರ್ಥ್‌ಗೆ ಫೋನ್‌ ಮಾಡಿ ನಮ್ಮ ಮನೆಗೇ ಬರಲು ಹೇಳು,” ಎಂದಳು.

ಸಮರ್ಥ್‌ ಆಫೀಸ್‌ನಿಂದ ನೇರವಾಗಿ ಮೀರಾಳ ಮನೆಗೇ ಬಂದ, ಪಲ್ಲವಿಯ ಬಾಡಿದ ಸಪ್ಪೆ ಮುಖ ನೋಡಿ ಆಶ್ಚರ್ಯದಿಂದ, “ಏನಾಯಿತು, ಇಷ್ಟೊಂದು ದುಃಖದಲ್ಲಿದ್ದೀಯಲ್ಲ……?” ಎಂದು ವಿಚಾರಿಸಿದ.

“ಸಮರ್ಥ್‌, ಮೊದಲು ತಿಂಡಿ ಕಾಫಿ ತೆಗೆದುಕೊಳ್ಳಿ. ನಾನು ವಿಷಯವನ್ನು ಹೇಳುತ್ತೇನೆ,” ಎಂದು ಹೇಳಿ ಮೀರಾ ಸೋಮನಾಥ್‌ರ ಬಗ್ಗೆ ತಿಳಿಸಿದಳು.

“ನಾನು ಅವರನ್ನು ಬಹಳ ದಿನಗಳಿಂದ ನೋಡಿದ್ದೇನೆ, ಅವರು ಎಂಥವರು ಎಂದು ಅರ್ಥ ಮಾಡಿಕೊಂಡಿದ್ದೇನೆ. ಸುಜಾತಾಳಿಗೆ ಅವರು ಸರಿಹೊಂದುತ್ತಾರೆ.”

ಎಲ್ಲವನ್ನೂ  ಕೇಳಿಸಿಕೊಂಡ ಸಮರ್ಥ್‌ ಪತ್ನಿಯ ಕಡೆ ತಿರುಗಿ, “ಪಲ್ಲವಿ, ಇದು ಒಳ್ಳೆಯ ಸುದ್ದಿ. ಇದರಲ್ಲಿ ದುಃಖಿಸುವಂತಹದು ಏನು?” ಎಂದನು.

“ಮಮ್ಮಿ ಇನ್ನೊಂದು ಮದುವೆ ಮಾಡಿಕೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ. ನಾನು ಹೋದ ನಂತರ ಅವರು ಒಂಟಿಯಾಗಿಬಿಟ್ಟಿದ್ದಾರೆ ಅನ್ನುವುದು ನನಗೆ ಗೊತ್ತು. ಆದರೆ ಅವರಿಬ್ಬರ ವಯಸ್ಸಿನ ವ್ಯತ್ಯಾಸವನ್ನೂ ಗಮನಿಸಿಬೇಕು. ಆ ಅಂಕಲ್ ಮಮ್ಮಿಯನ್ನು ಮರುಳು ಮಾಡಿದ್ದಾರೆ ಅಂತ ನನಗನ್ನಿಸುತ್ತದೆ,” ಪಲ್ಲವಿ ಬೇಸರದಿಂದ ಹೇಳಿದಳು.

ಪತ್ನಿಯ ಮಾತನ್ನು ಕೇಳಿ ಸಮರ್ಥ್‌ ಜೋರಾಗಿ ನಕ್ಕುಬಿಟ್ಟ, “ಪಲ್ಲವಿ, ಅವರು ನಿನ್ನ ತಾಯಿ….. ಬೇರೆಯವರ ಪ್ರಭಾವಕ್ಕೆ ಒಳಗಾಗಲು ಅವರೇನೂ ಚಿಕ್ಕ ಮಗುವಲ್ಲ. ಅವರು ನಮಗಿಂತ ಚೆನ್ನಾಗಿ ಪ್ರಪಂಚವನ್ನು ನೋಡಿದ್ದಾರೆ. ಮನುಷ್ಯರ ಸ್ವಭಾವವನ್ನು ಪತ್ತೆ ಮಾಡುವುದರಲ್ಲಿ ನಮಗಿಂತ ಹೆಚ್ಚು ಬುದ್ಧಿವಂತಿಕೆ ಅವರಿಗಿದೆ. ನೀನೇಕೆ ಯೋಚನೆ ಮಾಡುತ್ತೀಯಾ…..? ನೋಡು, ನಾವು ಅವರ ಜೊತೆ ಇರುವುದಕ್ಕೆ ಆಗುವುದಿಲ್ಲ…. ಅವರು ಒಂಟಿಯಾಗಿ ಜೀವಿಸುವುದು ಸುಲಭವಲ್ಲ. ನೋಡಿದರೆ ಇದೊಂದು ಒಳ್ಳೆಯ ಅವಕಾಶ ಅಂತ ಅನ್ನಿಸುತ್ತದೆ. ನೀನು ಯಾವಾಗಲೂ ನಿನ್ನ ತಾಯಿಯ ಬಗ್ಗೆ ಚಿಂತೆ ಮಾಡುವುದು ತಪ್ಪುತ್ತದೆ. ನಾವು ಆ ಅಂಕಲ್ ನ್ನು ಭೇಟಿ ಮಾಡಿ ಮಾತನಾಡೋಣ. ಆಮೇಲೆ ಈ ವಿಷಯ ಚರ್ಚೆ ಮಾಡಬಹುದು,” ಸಮರ್ಥ್‌ ಅವಳನ್ನು ಸಮಾಧಾನಿಸಿದ.

ಪಲ್ಲವಿ ಆ ಸಮಯದಲ್ಲಿ ಮಾತನಾಡದೆ ಸುಮ್ಮನಾದರೂ ಅವಳ ಒಳ ಮನಸ್ಸು ಸಮಾಧಾನಗೊಂಡಿರಲಿಲ್ಲ.

ಕರೆಗಂಟೆ ಸದ್ದಾಯಿತು.“ನಾನು ಮಮ್ಮಿಗೆ ಹೇಳದೆಯೇ ಬಂದುಬಿಟ್ಟೆ. ಅವರು ಗಾಬರಿಗೊಂಡಿರಬಹುದು,” ಎನ್ನುತ್ತಾ ಪಲ್ಲವಿ ಮೇಲೆದ್ದಳು.

“ನಾನು ನೋಡುತ್ತೇನೆ ಕುಳಿತುಕೋ,” ಎಂದು ಹೇಳಿ ಮೀರಾ ಹೋಗಿ ಬಾಗಿಲು ತೆರೆದಳು.

“ಬಾ…. ಬಾ…. ನಿನಗಾಗಿಯೇ ಕಾಯುತ್ತಿದ್ದೆ.” ಎನ್ನುತ್ತಾ ಮೀರಾ ಬಾಗಿಲಿನಲ್ಲಿದ್ದ ಅಖಿಲನನ್ನು ಸ್ವಾಗತಿಸಿ ಪಲ್ಲವಿ ಮತ್ತು ಸಮರ್ಥ್‌ಗೆ ಪರಿಚಯ ಮಾಡಿಸಿದಳು. ಅದೇ ಸಮಯಕ್ಕೆ ಮೀರಾಳ ಪತಿ ಸಹ ಮನೆಗೆ ಬಂದರು.

“ಸ್ನೇಹಿತರೇ,” ಎಂದು ಮೀರಾ ಎಲ್ಲರನ್ನೂ ಸಂಬೋಧಿಸಿ, “ಸುಜಾತಾ ನನ್ನ ಪ್ರೀತಿಯ ಗೆಳತಿ. ತನ್ನ ಪತಿಯನ್ನು ಕಳೆದುಕೊಂಡ ದುಃಖವನ್ನು ಅವಳು ಯಾರಲ್ಲಿಯೂ ಹೆಚ್ಚಾಗಿ ವ್ಯಕ್ತಪಡಿಸಲಿಲ್ಲ. ಅಷ್ಟೇಕೆ, ಪಲ್ಲವಿಗೂ ಸಹ ಅವಳ ದುಃಖ ಅಷ್ಟಾಗಿ ಗೊತ್ತಾಗಿಲ್ಲ. ಆದರೆ ನಾನು ಅವಳ ದುಃಖ ಮತ್ತು ಏಕಾಂಗಿತನಕ್ಕೆ ಸಾಕ್ಷಿಯಾಗಿದ್ದೇನೆ. ಪಲ್ಲವಿ, ನಿನ್ನ ತಂದೆ ಹೋದ ನಂತರ ಸುಜಾತಾಳ ಮನಸ್ಸನ್ನು ಮೊದಲ ಬಾರಿಗೆ ಮುಟ್ಟಿದರು, ನೇವರಿಸಿ ತಟ್ಟಿದರು ಎಂದರೆ ಸೋಮನಾಥ್‌. ಅವರು ಯಾವುದೇ ಸ್ವಾರ್ಥವಿಲ್ಲದೆ ಅವಳ ಸ್ನೇಹ ಮಾಡಿ ಅದನ್ನು ಬೆಳೆಸಿಕೊಂಡು ಬಂದಿದ್ದಾರೆ. ಸುಜಾತಾ ಸಹ ಅವರ ಏಕಾಂಗಿತನವನ್ನು ದೂರ ಮಾಡಿ, ಜೀವನವನ್ನು ಮತ್ತೊಮ್ಮೆ ರೂಪಿಸಿಕೊಳ್ಳಲು ಅವರಿಗೆ ನೆರವಾಗಿದ್ದಾಳೆ,” ಮಾತನಾಡುತ್ತಾ ಮೀರಾ ಭಾವುಕಳಾದಳು.

ಸ್ವಲ್ಪ ತಡೆದು ಅವಳು ಮಾತು ಮುಂದುವರಿಸಿದಳು, “ಯಾವುದೇ ಸಂಬಂಧ ನೆಲೆಗೊಳ್ಳಲು ಪ್ರೀತಿ, ಸಮರ್ಪಣೆ ಮತ್ತು ವಿಶ್ವಾಸಗಳು ಅವಶ್ಯವೆಂದು ನನ್ನ ಭಾವನೆ. ಇವ ಸುಜಾತಾ ಮತ್ತು ಸೋಮನಾಥ್‌ರಲ್ಲಿ ಬಹಳಷ್ಟು ತುಂಬಿವೆ. ಈಗ ಇಲ್ಲಿ ಅಖಿಲ್ ‌ಸಹ ಇದ್ದಾನೆ. ಈ ಇಬ್ಬರು ಮಕ್ಕಳು ತಮ್ಮ ತಾಯಿ ತಂದೆಯರ ಬಗ್ಗೆ ಒಂದು ತೀರ್ಮಾನಕ್ಕೆ ಬರಲಿ. ಇಂತಹ ಅವಕಾಶ ಮತ್ತೆ ಸಿಗಲಾರದು. ಈ ವಯಸ್ಸಿನಲ್ಲಿ ವಿವಾಹವಾಗಲು ಬಹುಶಃ ಅವರಿಬ್ಬರೂ ಒಪ್ಪಲಾರರು. ಆದ್ದರಿಂದ ಈ ವಿಷಯವನ್ನು ನಿಮ್ಮೆಲ್ಲರ ಮುಂದೆ ಇಡುತ್ತಿದ್ದೇವೆ,” ಎಂದು ಹೇಳಿ ಮೀರಾ ಸುಮ್ಮನಾದಳು.

“ಮೀರಾ ಆಂಟಿ ಹೇಳಿದುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ….. ಅಮ್ಮನನ್ನು ಈ ವಿವಾಹಕ್ಕೆ ಒಪ್ಪಿಸುತ್ತೇನೆ,” ಸಮರ್ಥ್‌ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಹೇಳಿದ.

“ಈ ಬಗ್ಗೆ ನನಗೂ ಸಂತೋಷವಿದೆ. ನನ್ನ ತಂದೆಯನ್ನು ಒಪ್ಪಿಸುತ್ತೇನೆ ಎಂಬ ಭರವಸೆ ನನಗಿದೆ,” ಅಖಿಲ್ ‌ಎದ್ದು ನಿಂತು ಸಮರ್ಥ್‌ನ ಕೈ ಕುಲುಕುತ್ತಾ ಹೇಳಿದ.

ಇದನ್ನು ವಿರೋಧಿಸಲು ಪಲ್ಲವಿಗೆ ಸಾಧ್ಯವಾಗಲಿಲ್ಲ. ಅವಳು ತನ್ನ ಮೌನ ಸಮ್ಮತಿ ನೀಡಿದಳು, `ಇಬ್ಬರೂ ಒಪ್ಪಿದರೆ ರಿಜಿಸ್ಟರ್‌ಮ್ಯಾರೇಜ್‌ ಮಾಡಿಸಿ, ನಂತರ ಕೆಲವು ಸ್ನೇಹಿತರನ್ನು ಕರೆದು ಒಂದು ಚಿಕ್ಕ ಪಾರ್ಟಿ ಏರ್ಪಾಟು ಮಾಡಬಹುದು,’ ಎಂದು ಯೋಚಿಸಿದಳು.

ಅತ್ತ ಸುಜಾತಾಳ ಮನಸ್ಸು ನೊಂದುಕೊಂಡಿತು, `ನಾನು ಇದೇನು ಮಾಡಿದೆ? ಎಷ್ಟೊಂದು ದಿನಗಳ ನಂತರ ಮನೆಗೆ ಬಂದ ಮಗಳ ಮನಸ್ಸಿಗೆ ದುಃಖವನ್ನಂಟು ಮಾಡಿದೆನಲ್ಲ….. ಅವಳ ಜೊತೆ ಈ ವಿಷಯ ಮಾತನಾಡಲೇ ಬಾರದಿತ್ತು. ಅವಳನ್ನು ನೋಯಿಸಿ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳಲಾರೆ.

‘ಸಮಯ 11 ಗಂಟೆಯಾಗಿತ್ತು. ಪಲ್ಲವಿ ಮತ್ತು ಸಮರ್ಥ್‌ ಇನ್ನೂ ಮನೆಗೆ ಬಂದಿರಲಿಲ್ಲ. ಇಷ್ಟೊಂದು ಹೊತ್ತು ಮೀರಾಳ ಮನೆಯಲ್ಲಿ ಏನು ಮಾಡುತ್ತಿರಬಹುದು ಎಂದು ಸುಜಾತಾ ಚಿಂತಿಸಿದಳು.

ಕರೆಗಂಟೆಯ ಸದ್ದಾದಾಗ ಸುಜಾತಾ ಧಾವಿಸಿ ಹೋಗಿ ಬಾಗಿಲು ತೆರೆದಳು. ಪಲ್ಲವಿ, ಸಮರ್ಥ್‌ ಮತ್ತು ಅಖಿಲ್ ‌ಒಟ್ಟಿಗೆ ಬಂದುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಅವರ ಹಿಂದೆ ನಿಂತಿದ್ದ ಸೋಮನಾಥ್‌ರನ್ನು ನೋಡಿದ ಮೇಲಂತೂ ಅವಳು ಸ್ತಬ್ಧಳಾದಳು. ಆಗ ಸಮರ್ಥ್‌ ಅವಳನ್ನು ಸೋಫಾದ ಮೇಲೆ ಕುಳ್ಳಿರಿಸುತ್ತಾ, “ಅಮ್ಮಾ, ನೀವು ಮತ್ತು ಸೋಮನಾಥ್‌ ಅಂಕಲ್ ಪರಸ್ಪರ ಇಷ್ಟಪಟ್ಟಿರುವ ವಿಷಯ ನಮಗೆ ಈಗ ತಿಳಿಯಿತು. ಇನ್ನು ಹೆಚ್ಚು ಸಮಯ ವ್ಯರ್ಥ ಮಾಡದೆ ಇಬ್ಬರೂ ವಿವಾಹಕ್ಕೆ ಒಪ್ಪಿಕೊಳ್ಳುವುದು ಒಳ್ಳೆಯದಲ್ಲವೇ…..?”

ಸಮರ್ಥ್‌ ಹೇಳಿದ ಮನೋರಂಜಕ ಧಾಟಿ ವಾತಾವರಣವನ್ನು ತಿಳಿಗೊಳಿಸಿ ಎಲ್ಲರ ಮುಖಗಳಲ್ಲಿ ನಗು ಅರಳುವಂತೆ ಮಾಡಿತು.

“ಹೌದು ಆಂಟಿ. ನಾನು ನಮ್ಮ ತಂದೆಯನ್ನು ಒಪ್ಪಿಸಿದ್ದೇನೆ. ಇನ್ನು ನೀವಿಬ್ಬರೂ ಒಂದಾಗಿ ನವ ಜೀವನಕ್ಕೆ ನಾಂದಿ ಹಾಡಬೇಕು,” ಎನ್ನುತ್ತಾ ಅಖಿಲ್ ‌ತನ್ನೆರಡೂ ಕೈಗಳನ್ನೂ ಜೋಡಿಸಿದ.

ಸುಜಾತಾ ಎಲ್ಲರತ್ತ ತಿರುಗಿ ಕಡೆಗೆ ಪಲ್ಲವಿಯ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದಳು.“ನಿಜ ಹೇಳಬೇಕೆಂದರೆ ಅಮ್ಮಾ, ನಿಮ್ಮ ಪ್ರೀತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ನನಗಿಷ್ಟವಿಲ್ಲ. ಆದರೆ ನಿಮ್ಮ ಸಂತೋಷಕ್ಕಾಗಿ ಈ ವಿವಾಹಕ್ಕೆ ನನ್ನ ಒಪ್ಪಿಗೆ ಇದೆ. ನಿಮ್ಮಿಬ್ಬರ ಪ್ರೀತಿ ಮತ್ತು ಸಾಂಗತ್ಯ ಸದಾಕಾಲ ಚೆನ್ನಾಗಿರಲಿ. ಇದೇ ನನ್ನ ಹಾರೈಕೆ,” ಎನ್ನುತ್ತಾ ಪಲ್ಲವಿ ಅವರಿಬ್ಬರ ಕೈ ಹಿಡಿದು ಅಕ್ಕಪಕ್ಕದಲ್ಲಿ ನಿಲ್ಲಿಸಿದಳು.

ಆಗ ಸುಜಾತಾಳ ಕಡೆ ತಿರುಗಿ ಸೋಮನಾಥ್‌ ಅವಳ ಕಣ್ಣಲ್ಲಿ ಕಣ್ಣಿಟ್ಟು, ಕೊಂಚ ಬಾಗಿ ಬಲು ಪ್ರೀತಿಯಿಂದ, “ನನ್ನನ್ನು ವಿವಾಹವಾಗುವೆಯಾ?” ಎಂದು ಕೇಳಿದರು.

ಎಲ್ಲರೂ ಒಟ್ಟಿಗೆ `ಹೋ…. ಹೋ….’ ಎಂದು ಎಬ್ಬಿಸಿದ ನಗೆಯ ಅಲೆಯು ಹಾಲ್‌ನಲ್ಲಿ ಪ್ರತಿಧ್ವನಿಸಿತು. ಸುಜಾತಾ ಲಜ್ಜೆಯಿಂದ ಸೋಮನಾಥ್‌ರ ಭುಜಕ್ಕೊರಗಿದಳು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ