ಮದುವೆಯಾದ 5 ವರ್ಷಗಳ ನಂತರ ಗುಂಡ ಪತ್ನಿ ಪುಟ್ನಂಜಿಗಾಗಿ ಅಪ್ಪಟ ಬಿಳಿ ಗುಲಾಬಿ ಹಿಡಿದು ಬಂದ.

ಪತ್ನಿ : ಇದೇನ್ರಿ…. ಇವತ್ತು ಬಿಳಿ ಗುಲಾಬಿ ಹಿಡಿದು ಬಂದಿದ್ದೀರಿ….?

ಗುಂಡ : ಹೌದು ಡಾರ್ಲಿಂಗ್‌, ಈಗ ನಮ್ಮ ಜೀವನದಲ್ಲಿ ಪ್ರೇಮ ಪ್ರಣಯಕ್ಕಿಂತ ಶಾಂತಿ ಸೌಹಾರ್ದಗಳೇ ಮುಖ್ಯ.

 

ಸರ್ಕಾರಿ ಬ್ಯಾಂಕ್‌ ಸಿಬ್ಬಂದಿಯಂತೂ ತಮ್ಮ ಸೇವಾಧರ್ಮಕ್ಕೆ ಖ್ಯಾತರಾದವರು. ಮಹಾ ಪರಿಶ್ರಮಿಗಳಾದ ಅವರು ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿರುತ್ತಾರೆ. ಒಂದು ಸಲ ಇಂಥ ಬ್ಯಾಂಕ್‌ ನೌಕರ ಕಿಟ್ಟಿಯ ಪತ್ನಿ ರತ್ನಾ ಸೀರಿಯಸ್‌ ಆಗಿ ಒಂದು ದಿನ ಬ್ಯಾಂಕಿಗೆ ಬಂದು ಎಲ್ಲರ ಮುಂದೆ ಗಂಡನನ್ನು ಕೇಳಿಯೇಬಿಟ್ಟಳು, “ಡಾರ್ಲಿಂಗ್‌…. ಡು ಯು ಲವ್ ಮಿ ನೋ….?”

ಆಜನ್ಮ ಗುಮಾಸ್ತನಾದ ಕಿಟ್ಟಿ ತಲೆ ಎತ್ತದೆ ಬೇಗ ಉತ್ತರಿಸಿದ, “ದಯವಿಟ್ಟು ಆ 4ನೇ ಕೌಂಟರ್‌ಗೆ ಹೋಗಿ ವಿಚಾರಿಸಿ!”

 

ವ್ಯಾಲೆಂಟೈನ್‌ ಡೇ ದಿನ ಸ್ಮಿತಾ ಕಾರ್ಡ್‌ ಕೊಳ್ಳಲೆಂದು ಹೊಸ ಅಂಗಡಿಗೆ ಹೋದಳು.

ಸ್ಮಿತಾ : ಏನ್ರಿ, ನಿಮ್ಮ ಅಂಗಡಿಯಲ್ಲಿ `ಯೂ ಆರ್‌ ಮೈ ಫಸ್ಟ್ ಲಾಸ್ಟ್ ಲವ್!’ ಅಂತ ಬರೆದಿರುವ ಗ್ಲಾಮರಸ್‌ ಕಾರ್ಡ್‌ ಇದೆಯಾ? ಅಂಗಡಿಯವನು : ಹೌದು, ಇದು ನೋಡಿ ಹೊಸ ಡಿಸೈನಿನಲ್ಲಿ ಬಂದಿದೆ.

ಸ್ಮಿತಾ : ಹಾಗಿದ್ದರೆ ಒಂದು 10 ಕಾರ್ಡ್‌ ಕೊಡಿ.

 

ಗಂಡ ಹೆಂಡತಿಯಿಂದ 2 ಸಲ 250-250 ರೂ.ಗಳ ಸಾಲ ಪಡೆದಿದ್ದ. ಜಿಎಸ್‌ಟಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದ ಅವಳು ಬಡ್ಡಿ, ಚಕ್ರ ಬಡ್ಡಿ ಜೊತೆ ಅದನ್ನೂ ಸೇರಿಸಿ ಮುಲಾಜಿಲ್ಲದೆ ರೂ.4100/ ವಸೂಲು ಮಾಡಿದಳು. ಇದೇನು ಅನ್ಯಾಯ ಅಂತೀರಾ? ಲೆಕ್ಕದ ವಿವರ ಕೇಳಿ, 250+250=4100 ಹೇಗೆ ಅಂದ್ರೆ…. 50+50=100, 2+2=4, ಒಟ್ಟಾರೆ 4100/!

 

ಪತ್ನಿ ಪಾರ್ಟಿಗೆ ಹೊರಡಲು ತಯಾರಾಗುತ್ತಿದ್ದಳು.

ಪತ್ನಿ : ಡಿಯರ್‌, ಇವತ್ತು ಯಾವ ಸೀರೆ ಉಟ್ಟುಕೊಳ್ಳಲಿ?

ಪತಿ : ಪಿಂಕ್‌ ಕಲರ್‌ ಸೀರೆ ಉಟ್ಟುಕೊ, ಅದು ನಿನಗೆ ಚೆನ್ನಾಗಿ ಒಪ್ಪುತ್ತದೆ.

ಪತ್ನಿ : ಅಯ್ಯೋ ಬಿಡಿ….. ಅದನ್ನು ಮೊನ್ನೆ ತಾನೇ ಕಿಟಿ ಪಾರ್ಟಿಗೆ ಉಟ್ಕೊಂಡಿದ್ದೆ. ಕೆಂಪು ಸೀರೆ ಉಟ್ಟುಕೊಳ್ಳೀ?

ಪತಿ : ಸರಿ, ಹಾಗೆ ಮಾಡು.

ಪತ್ನಿ : ಇದರ ಜೊತೆ ಸ್ಯಾಂಡಲ್ಸ್ ಎಂಥದ್ದು ಧರಿಸಲಿ…. ಪ್ಲೇನ್‌ ಅಥವಾ ಡಿಸೈನರ್‌?

ಪತಿ : ಪ್ಲೇನ್‌ ಇರಲಿ ಬಿಡು.

ಪತ್ನಿ : ನೀವು ಸರಿ ಬಿಡಿ, ಪಾರ್ಟಿಗೆ ಯಾರಾದರೂ ಪ್ಲೇನ್‌ ಚಪ್ಪಲಿ ಹಾಕಿಕೊಳ್ತಾರಾ? ನಾನು ಡಿಸೈನರ್‌ ಸ್ಯಾಂಡಲ್ಸ್ ಧರಿಸಿದರೆ ನಿಮಗೇನು ಪ್ರಾಬ್ಲಮ್?

ಪತಿ : ಸರಿ ಬಿಡೆ…. ಅದನ್ನೇ ಧರಿಸು.

ಪತ್ನಿ : ಎಂಥ ಪೆದ್ದು ಕಣ್ರಿ ನೀವು, ಅದಿರಲಿ, ಎಂಥ ಬಿಂದಿ ಇಟ್ಟುಕೊಳ್ಳಲಿ, ಸಾದಾ ಓವಲ್…?

ಪತಿ : ಸಾದಾ ಸರಿ ಇರುತ್ತೆ.

ಪತ್ನಿ : ಛೀ….ಛೀ…. ನಿಮಗಂತೂ ಲೇಟೆಸ್ಟ್ ಫ್ಯಾಷನ್‌ ಬಗ್ಗೆ ಏನೇನೂ ಗೊತ್ತಾಗೋಲ್ಲ. ಇಂಥ ಗ್ರಾಂಡ್‌ ಸೀರೆ, ಸ್ಯಾಂಡಲ್ಸ್ ತೊಟ್ಟು ಯಾರಾದರೂ ಸಾದಾ ಬಿಂದಿ ಇಟ್ಟುಕೊಳ್ತಾರಾ? ಓವಲ್ ಇರಲಿ ಬಿಡಿ.

ಪತಿ : ಸರಿ ಹಾಗೇ ಮಾಡು….

ಪತ್ನಿ : ಕೋಪ ಬೇಡ ಜಾನೂ…. ಅದಿರಲಿ, ಪರ್ಸ್‌ ಯಾವುದು ತಗೊಳ್ಲಿ…. ಚಿಕ್ಕದಾ ದೊಡ್ಡದಾ….?

ಪತಿ : ಚಿಕ್ಕದೇ ಇರಲಿ ಬಿಡು.

ಪತ್ನಿ : ಛೇ….ಛೇ… ಎಲ್ಲಾದ್ರೂ ಉಂಟೇ? ಸರಿಯಾಗಿ ಮ್ಯಾಚ್‌ ಆಗುವಂಥ ದೊಡ್ಡ ಪರ್ಸ್‌ ತೆಗೆದುಕೊಳ್ಳುವೆ.

ಪತಿ : ಸರಿ….. ನಿನ್ನಿಷ್ಟ…..

ಅಂತೂ ಮಹಾತಾಯಿ ಪಾರ್ಟಿ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಬಂದವಳೇ ಕೂಗಾಡಿದಳು, “ಎಂಥ ಹಸ್ಬೆಂಡ್‌ ಕಣ್ರೀ ನೀವು…. ಹಳ್ಳಿ ಗಮಾರನ ತರಹ ಏನೇನೋ ಸಲಹೆ ಕೊಟ್ರಿ. ಎಲ್ಲರೂ ನಗಾಡಿದರು ಗೊತ್ತಾ?”

ಪತಿ : ಯಾಕೇ….. ಏನಾಯ್ತು….?

ಪತ್ನಿ : ಸೀರೆ ಏನೋ ಚೆನ್ನಾಗಿದೆ…. ಆದರೆ ಆ್ಯಕ್ಸೆಸರೀಸ್‌ ಒಂದೂ ಮ್ಯಾಚಿಂಗ್‌ ಆಗ್ತಿಲ್ಲ ಅಂತ ಆಡಿಕೊಂಡ್ರು ಕಣ್ರೀ……

 

ಪತಿಗೆ ಆರೋಗ್ಯ ಸರಿ ಇರಲಿಲ್ಲ. ಪತ್ನಿ ಅವನನ್ನು ಡಾಕ್ಟರ್‌ ಬಳಿ ಕರೆದೊಯ್ದಳು.

ಡಾಕ್ಟರ್‌ : ನೋಡೀಮ್ಮ…. ನಿಮ್ಮ ಯಜಮಾನ್ರನ್ನ ಸದಾ ಚೆನ್ನಾಗಿ ನೋಡಿಕೊಳ್ಳಿ. ಅವರಿಗೆ ಇಷ್ಟವಾಗುವ ಉತ್ತಮ ಆಹಾರ ಕೊಡಿ. ಟೆನ್ಶನ್‌ ಮಾಡುವ ಮಾತುಕಥೆ ಬೇಡವೇ ಬೇಡ. ಅನಗತ್ಯ ಶಾಪಿಂಗ್‌ ಅದೂ ಇದೂ ಅಂತ ಅವರನ್ನು ಪೀಡಿಸಬಾರದು…. ಗೊತ್ತಾಯ್ತಾ? 2-3 ತಿಂಗಳಲ್ಲಿ ಸರಿಹೋಗ್ತಾರೆ. ಇಲ್ಲದೆ ಹೋದ್ರೆ ಅಷ್ಟೇ, ಈ ಸೀರಿಯಸ್‌ ಕೇಸ್‌ ಉಳಿಯೊಲ್ಲ!

ಮಫ್ಲರ್‌ ಬಿಗಿಯಾಗಿದ್ದರಿಂದ ಗಂಡನಿಗೆ ಏನೂ ಸ್ಪಷ್ಟವಾಗಿ ಕೇಳಿಸಲಿಲ್ಲ. ಮನೆಗೆ ಬಂದ ಮೇಲೆ ಡಾಕ್ಟರ್‌ ಏನಂದ್ರು ಅಂತ ವಿಚಾರಿಸಿದ. ಕೇಸ್‌ ಬಹಳ ಸೀರಿಯಸ್‌ ಆಗಿದೆ, ಇನ್ನೊಂದು 2-3 ತಿಂಗಳಲ್ಲಿ ಗೊಟಕ್‌ ಅಂತ ಹೇಳಿಬಿಟ್ರು. ಇರಿ…. ಈಗಲೇ ಎಲ್ಲರಿಗೂ ವಾಟ್ಸ್ಆ್ಯಪ್‌ ಮೆಸೇಜ್‌ ಕಳಿಸಿಬಿಡ್ತೀನಿ!

 

ಪತಿ-ಪತ್ನಿ ಜೋರಾಗಿ ಜಗಳ ಆಡುತ್ತಿದ್ದರು.

ಪತ್ನಿ : ನಮ್ಮಮ್ಮ ಅವತ್ತೇ ಬಡ್ಕೊಂಡ್ಳು….. ಈ ದರಬೇಶಿ ಸಂಬಂಧ ಬೇಡ ಬೇಡ ಅಂತ! ನನ್ನ ಬುದ್ಝಿಗೆ ಅದೇನು ಕೇಡು ಬಡಿದಿತ್ತೋ ಹಠ ಹಿಡಿದು ನಿಮ್ಮನ್ನೇ ಕಟ್ಟಿಕೊಂಡೆ.

ಪತಿ : ಏನಂದೆ…. ಇನ್ನೊಂದ್ಸಲ ಹೇಳು. ನಿಮ್ಮಮ್ಮ ನನ್ನನ್ನು ಮದುವೆ ಆಗಬೇಡ ಅಂತ ಅವತ್ತೇ ಮತ್ತೆ ಮತ್ತೆ ಹೇಳಿದ್ರಾ?

ಪತ್ನಿ : ಹ್ಞೂಂ ಮತ್ತೆ…. ಅದೇನೋ ಅಂತಾರಲ್ಲ, ಕೆಟ್ಟ ಕಾಲ ಬಂದಾಗ, ತಪ್ಪಿಸಿಕೊಳ್ಳಲು ಒಂಟೆ ಮೇಲೆ ಕುಳಿತು ಹಾರಿ ಹೋಗ್ತಿದ್ರೂ ನಾಯಿ ಅಟ್ಟಿಸಿಕೊಂಡು ಬಂದು ಮೇಲಕ್ಕೆ ಎಗರಿ ಕಚ್ಚಿಬಿಡ್ತಂತೆ…. ಹಾಗೆ, ನಾನು ಹಠ ಹಿಡಿದು ನಿಮ್ಮನ್ನು ಕಟ್ಟಿಕೊಂಡು ಇವತ್ತು ಪಡಬಾರದ ಪಾಡು ಪಡ್ತಾ ಇದ್ದೀನಿ…..

ಪತಿ : ಅಯ್ಯೋ ಅತ್ತೆಮ್ಮ…. ನನ್ನನ್ನು ಕ್ಷಮಿಸಿ ಬಿಡಿ, ನೀವೇ ನಿಜವಾದ ವಿಲನ್‌ ಅಂತ ಎಷ್ಟೋ ಸಲ ನಿಮ್ಮನ್ನು ಏನೇನೋ ಬಾಯಿಗೆ ಬಂದಂತೆ ಬೈದುಕೊಂಡಿದ್ದೆ….!

 

ಗಿರೀಶ್‌ : ತರಲೆ ಮಾತು ಹಂಚಿಕೊಳ್ಳುವುದರಲ್ಲೂ ಲಾಭವಿದೆಯಂತೆ ಗೊತ್ತಾ?

ಸುರೇಶ್‌ : ಅದೇನಪ್ಪ ಅಂಥ ಲಾಭ ಇರೋದು?

ಗಿರೀಶ್‌ : ತರಲೆ ಮಾತನಾಡುವವರ ಮನಸ್ಸು ಎಷ್ಟೋ ಹಗುರ ಆಗುತ್ತಂತೆ….. ಅದೇ ಕೇಳೋರಿಗೆ ಮನಸ್ಸು ಭಾರಿ ಆಗುತ್ತೆ. ಇದನ್ನೇ ವಿಜ್ಞಾನದಲ್ಲಿ ವಸ್ತು ಸ್ಥಿತಿ ಸ್ಥಾನಾಂತರ ಅಂತಾರೆ!

 

ಕಮಲಾ : ನಿನಗೆ ಒಂದು ವಿಷಯ ಗೊತ್ತೆ?

ವಿಮಲಾ : ಯಾವುದರ ಬಗ್ಗೆ ಕೇಳ್ತಿದ್ದೀಯಾ?

ಕಮಲಾ : ಕೊರೋನಾ ಬಂದ ಮೇಲೆ ಗಾದೆ ಬದಲಾಗಿ ಹೋಗಿದೆಯಂತೆ….

ವಿಮಲಾ : ಅದು ಹೇಗೆ?

ಕಮಲಾ : ಹಿಂದೆಲ್ಲ ಗುಂಪಲ್ಲಿ ಗೋವಿಂದ ಅಂತಿದ್ರು….. ಈಗ ಹಾಗಲ್ಲ….

ವಿಮಲಾ : ಮತ್ತೆ ಹೇಗೆ ಅಂತೀಯಾ?

ಕಮಲಾ : ಗುಂಪಾಗಿ ಹೋದರೆ ಗೋವಿಂದ….!

 

ಟೀಚರ್‌ : ಏನೋ ಗುಂಡ, ಯಾವ ಪ್ರಶ್ನೆ ಕೇಳಿದರೂ ತಪ್ಪಾಗಿ ಉತ್ತರ ಕೊಡ್ತೀಯಾ?

ಗುಂಡ : ಏನು ಹಾಗೆ ಹೇಳ್ತೀರಿ ಟೀಚರ್‌, ನಾನು 6ನೇ ಕ್ಲಾಸ್‌ ಪಾಸಾಗಿ 7ನೇ ಕ್ಲಾಸ್‌ಗೆ ಬಂದಿದ್ದೀನಿ, ಗೊತ್ತಾ?

ಟೀಚರ್‌ : ಅದು ಸರಿ, ನೀನು ಕಷ್ಟಪಟ್ಟು ಪರೀಕ್ಷೇಲಿ ಬರೆದು ಪಾಸ್‌ ಆದೆಯಾ ಅಥವಾ ಕೊರೋನಾ ನಿನ್ನ ಪಾಸ್‌ ಮಾಡಿತಾ?

 

ನಿಂಗಿ : ಅಮ್ಮಾವ್ರೇ ಕಳೆದ ಸಲ ಯುಗಾದಿಗೆ ನೀವು ನಿಮ್ಮದೊಂದು ಹಳೆ ಸೀರೆ ನನಗೆ ಕೊಟ್ಟಿದ್ರಿ ಜ್ಞಾಪಕ ಬಂತಾ?

ರಾಗಿಣಿ : ಅದಕ್ಕೆ ಏನೇ ಈಗ?

ನಿಂಗಿ : ಅದನ್ನು ಉಟ್ಟುಕೊಂಡು ನಾನು ಫ್ರಿಜ್‌ ಹತ್ತಿರ ಗುಡಿಸುತ್ತಿದ್ದೆನಾ ನಿಮ್ಮ ಯಜಮಾನರು ಬಂದು…. ನನ್ನ ಹತ್ತಿರ…..

ರಾಗಿಣಿ : ಏನೇ…. ಏನೇ ಆಯ್ತು?

ನಿಂಗಿ : ಅಯ್ಯೋ…. ಏನೂ ಆಗಲಿಲ್ಲ. ನನ್ನನ್ನು ನೀವು ಅಂತ ಅಂದುಕೊಂಡು ಮಾತನಾಡಿಸದೆ ಹಾಗೇ ಹೋಗಿಬಿಟ್ಟರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ