ಮೂಲತಃ ಕೊಡಗಿನ ಬೆಡಗಿಯಾದ ಹರ್ಷಿಕಾ ಪೂಣಚ್ಚ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು, `ಪಿಯುಸಿ’ ಚಿತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತಳಾದಳು. `ತಮಸ್ಸು, ಜಾಕಿ’ ಮೂಲಕ ಬೆಳೆದು ಬಂದ ಈ ನಟಿ, ಹಲವು ರಿಯಾಲಿಟಿ ಶೋಗಳ ಮೂಲಕ ಜನಪ್ರಿಯಳಾದಳು. ಬಿಗ್‌ಬಾಗ್‌ನಲ್ಲೂ ಸೈ ಎನಿಸಿಕೊಂಡ ಈ ನಟಿಯ ಕೆರಿಯರ್‌ ಬಗ್ಗೆ ಅವಳಿಂದ ವಿವರವಾಗಿ ತಿಳಿಯೋಣವೇ…?

ಅಂದುಕೊಂಡದ್ದನ್ನು ಛಲ ಬಿಡದೇ ಸಾಧಿಸಿ ತೋರಿಸೋದ್ರಲ್ಲಿ ಕೊಡಗಿನ ಬೆಡಗಿಯರು ಸದಾ ಮುಂದು. ಕೊಡಗಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು, ಕ್ರೈಸ್ಟ್ ಕಾಲೇಜಿನಲ್ಲಿ ಓದಿ, ತನ್ನದೇ ಆದ ಛಾಪು ಮೂಡಿಸಿದಳು ಈ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ.

`ಪಿ.ಯು.ಸಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಹರ್ಷಿಕಾ ಅದಕ್ಕೂ ಮೊದಲು ಟಿವಿ ನಿರೂಪಕಿಯಾಗಿ ಕೆಲಸ ಮಾಡಿದ್ದುಂಟು. ಮಾಡೆಲ್ ಆಗಿ ಫ್ಯಾಷನ್‌ ಲೋಕದಲ್ಲಿ ಮಿಂಚಿದಳು. ನಟನಾ ವೃತ್ತಿಯಲ್ಲಿದ್ದರೂ ವಿದ್ಯಾಭ್ಯಾಸ ಮುಗಿಸಿದ ಹರ್ಷಿಕಾ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾಳೆ. ನಟಿಯಾಗಿ ಬಂದಿದ್ದು ಆಕಸ್ಮಿಕವಾದರೂ ಆರಂಭದಲ್ಲಿ ಒಳ್ಳೆಯ ಚಿತ್ರಗಳು ಸಿಕ್ಕವು.

`ತಮಸ್ಸು, ಜಾಕಿ’ ಚಿತ್ರಗಳ ಮೂಲಕ ರಾಜ್‌ ಕುಟುಂಬಕ್ಕೆ ಹತ್ತಿರವಾಗಿ ಅವರ ಮನೆ ಮಗಳಂತಾದಳು.`ತಮಸ್ಸು’ ಚಿತ್ರದಲ್ಲಿ ಶಿವಣ್ಣ ಜೊತೆ ಅಣ್ಣ ತಂಗಿ ಬಾಂಡೇಜ್‌ ಇರುವಂತಹ ಪಾತ್ರವಾಗಿತ್ತು. ಸಾಕಷ್ಟು ಪ್ರಶಂಸೆ ಪಡೆದಿದ್ದಳು. ಹರ್ಷಿಕಾಳಿಗೆ ಪ್ರಶಸ್ತಿಯೂ ಸಿಕ್ಕಿತು.

ಕಲಾತ್ಮಕ, ಕಮರ್ಷಿಯಲ್ ಚಿತ್ರಗಳಲ್ಲಿ ಯಾವುದೇ ಸಿಕ್ಕರೂ ನಿಭಾಯಿಸಬಲ್ಲ ನಟಿ ಎಂದು ಹೆಸರು ಪಡೆದಳು.

ದೊಡ್ಡ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿತು. ರವಿಚಂದ್ರನ್‌ ಜೊತೆ `ಕ್ರೇಜಿಲೋಕ,’ ಪುನೀತ್‌ ರಾಜ್‌ಕುಮಾರ್‌ ಜೊತೆ `ಜಾಕಿ’ ಚಿತ್ರದಲ್ಲಿ ನಟಿಸಿದಳು. ಪ್ರಜ್ವಲ್ ದೇವರಾಜ್‌ ಜೊತೆಗೂ ನಟಿಸಿದ್ದಳು.

ಹರ್ಷಿಕಾ ಪೂಣಚ್ಚ ಇನ್ನಷ್ಟು ಬೆಳೆಯಬೇಕಿತ್ತು ಎಂಬುದು ಅನೇಕರ ಅನಿಸಿಕೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಿಂಚುತ್ತಿರುವ ಈ ನಟಿ ಸಾಕಷ್ಟು ಜನಪ್ರಿಯತೆ ಹಾಗೂ ಫಾಲೋವರ್ಸ್‌ ಪಡೆದುಕೊಂಡಿದ್ದಾಳೆ. ಟಿಕ್‌ ಟಾಕ್‌, ಇನ್‌ಸ್ಟ್ರಾಗ್ರಾಮ್, ಯೂಟ್ಯೂಬ್‌ ಮೂಲಕ ಗಮನ ಸೆಳೆಯುತ್ತಿದ್ದಾಳೆ.

ವಿದೇಶಕ್ಕೆ ಹೋದಾಗ ಅಲ್ಲಿ ಹೆಬ್ಬಾವನ್ನು ಕೈಯಲ್ಲಿ ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ಅದರ ವೀಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು.

ಕ್ಯಾಮೆರಾ ಕಣ್ಣಿಗೆ ಡಿಲೈಟ್‌ ಆಗಿರುವ ಹರ್ಷಿಕಾ ಫೋಟೋ ಶೂಟ್‌ ಆಗುತ್ತಲೇ ಇರುತ್ತದೆ. ಸಾಕಷ್ಟು ಈವೆಂಟ್ಸ್ ಗಳಲ್ಲಿ ಗೆಸ್ಟ್ ಆಗಿ ಪಾಲ್ಗೊಳ್ಳುವ ಹರ್ಷಿಕಾ ಸುಮ್ಮನೆ ಒಂದು ಕಡೆ ಕುಳಿತುಕೊಳ್ಳುವ ಹುಡುಗಿಯಲ್ಲ. ಸಮಾಜ ಸೇವೆ ಮಾಡೋದು, ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ವಹಿಸೋದು, ಒಳ್ಳೆಯ ಡ್ಯಾನ್ಸರ್‌ ಕೂಡ ಆಗಿರೋದ್ರಿಂದ ಶೋಗಳಲ್ಲಿ ಭಾಗವಹಿಸುವ ಉತ್ಸಾಹ ಹೆಚ್ಚು. ಬಿಗ್‌ಬಾಸ್‌ ಶೋಗೂ ಹೋಗಿ ಬಂದಿರುವ ಹರ್ಷಿಕಾ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿ ಬಂದಿದ್ದಾಳೆ.

Harshika

ಹರ್ಷಿಕಾ ಪೂಣಚ್ಚ ಇತ್ತೀಚೆಗೆ ತನ್ನ ಪ್ರೀತಿಯ ಅಪ್ಪನನ್ನು ಕಳೆದುಕೊಂಡ ನಂತರ ತುಂಬಾನೇ ನಲುಗಿ ಹೋಗಿದ್ದಳು. ಅಮ್ಮ ಅಪ್ಪನ ಒಬ್ಬಳೇ ಮಗಳು. ಹರ್ಷಿಕಾಳಿಗೆ ಅಪ್ಪನೇ ಗಾಡ್‌ ಫಾದರ್‌. ಚಿಕ್ಕ ಮಗುವಾಗಿದ್ದಾಗ ಪ್ರತಿಯೊಂದು ಆ್ಯಕ್ಟಿವಿಟೀಸ್‌ ಬಗ್ಗೆ ಆಸಕ್ತಿ ಹುಟ್ಟಿಸುತ್ತಿದ್ದರಂತೆ. ಸ್ಕೂಲ್ ‌ಡ್ರಾಮಾ, ಡ್ಯಾನ್ಸ್ ಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಾ ಬೆಳೆಸಿದರಂತೆ.

ಹರ್ಷಿಕಾ ಹೇಳುವ ಹಾಗೆ, `ನಾನು `ಪಿಯುಸಿ’ ಸಿನಿಮಾ ಮಾಡಿದಾಗ ನನಗೆ ಹದಿನೈದು ವರ್ಷ. ಉದಯ ಟಿವಿ ಚಾನೆಲ್‌‌ನಲ್ಲಿ ನಿರೂಪಕಿಯಾಗಿದ್ದಾಗ ಅಲ್ಲಿ ನನ್ನನ್ನು ನೋಡಿ ಸಿನಿಮಾಗೆ ಆಫರ್‌ ಮಾಡಿದ್ರು. ಆಗ ಎಸ್‌.ಎಸ್‌.ಎಲ್.ಸಿ. ಎಗ್ಸಾಮ್ ಬರೆದಿದ್ದೆ. 96% ಬಂದಾಗ ನನಗೆ ರಿಟರ್ನ್‌ ಗಿಫ್ಟ್ ಆಗಿ ಸಿನಿಮಾದಲ್ಲಿ ನಟಿಸಲು ಪರ್ಮಿಷನ್‌ ಕೊಡಿ ಅಂತ ಅಪ್ಪನನ್ನು ಕೇಳಿದ್ದೆ. ನನ್ನ ಮೇಲೆ ನಂಬಿಕೆ ಇಟ್ಟು ಕಳಿಸಿದರು.`ನಮ್ಮ ತಾಯಿ ನನಗಾಗಿ ಒಳ್ಳೆಯ ಜಾಬ್‌ ಬಿಟ್ಟು ಬಂದರು. ಸಿನಿಮಾ ತಾರೆಯಾಗಿ ನಂತರ ನಾನು ವಿದ್ಯಾಭ್ಯಾಸ ಮುಗಿಸಿದೆ. ಎಂಜಿನಿಯರಿಂಗ್‌ನಲ್ಲಿ ಡಿಸ್ಟಿಂಕ್ಷನ್‌ ಮಾರ್ಕ್ಸ್ ಪಡೆದಿದ್ದೇನೆ. ಸಿನಿಮಾ ನಟಿಯಾಗದೇ ಹೋಗದ್ದಿದ್ದರೆ ಒಳ್ಳೆಯ ಜಾಬ್‌ನಲ್ಲಿ ಇರುತ್ತಿದ್ದೆ,’ ಎನ್ನುವ ಹರ್ಷಿಕಾ ಪೂಣಚ್ಚ ತನ್ನ ತಂದೆಯ ಕಡೆಯ ಆಸೆಯನ್ನು ಪೂರೈಸಿದಂತಹ ಮಗಳು ಅನಿಸಿಕೊಂಡಿದ್ದಾಳೆ.

ಕೊಡಗಿನಲ್ಲಿ ಮನೆ ಮತ್ತು ಮಗಳ ಮದುವೆ ನೋಡುವ ಆಸೆ ಪಟ್ಟಿದ್ದರಂತೆ. ಹರ್ಷಿಕಾ ಬಹಳ ಶ್ರಮಪಟ್ಟು ಅಪ್ಪನ ಸಲುವಾಗಿ ಮನೆಯನ್ನು ಬೇಗ ಕಂಪ್ಲೀಟ್‌ ಮಾಡಿಸಿ ಗೃಹಪ್ರವೇಶಕ್ಕೆ ಅಪ್ಪನನ್ನು ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಮನೆ ತೋರಿಸಿದ್ದಳಂತೆ. ಇಂದಿಗೂ ಹರ್ಷಿಕಾ ಅಪ್ಪನ ನೆನಪಾದಾಗಲೆಲ್ಲ ಭಾವುಕಳಾಗುತ್ತಾಳೆ.

ತಾರಾ ವೃತ್ತಿಯಲ್ಲಿ ಇನ್ನೂ ಎತ್ತರಕ್ಕೆ ಹೋಗಬಹುದಿತ್ತು ಎಂದು ಅನಿಸುತ್ತಾ? ಎಂದು ಕೇಳಿದಾಗ……ಖಂಡಿತಾ ಅನಿಸುತ್ತೆ. ದೊಡ್ಡ ಬ್ರೇಕ್‌ ಸಿಗಬೇಕಿತ್ತು. ಆದರೆ ಜನಕ್ಕೆ ಹರ್ಷಿಕಾ ಪೂಣಚ್ಚ ಯಾರು ಅಂತ ಗೊತ್ತಿದೆ, ಇಷ್ಟಪಡುತ್ತಾರೆ. ಆದರೆ ಸಿನಿಮಾ ರಂಗದಲ್ಲಿ ಏಕಾಗಲಿಲ್ಲ ಎನ್ನುವ ಪ್ರಶ್ನೆ ಕಾಡುತ್ತದೆ. ಆದರೆ ಒಂದು ಮಾತು ನಿಜ, ಸಿನಿಮಾ ರಂಗಕ್ಕೆ ಎಂಟ್ರಿಯಾಗಿ ಸುಮಾರು ವರ್ಷಗಳ ನಂತರ ಹರ್ಷಿಕಾ ಪೂಣಚ್ಚ ಹೆಸರನ್ನು ಮರೆತಿಲ್ಲ. ನನ್ನ ಜೊತೆ ಬಂದಂತಹ ಎಷ್ಟೋ ನಟಿಯರು ನೆನಪಲ್ಲೇ ಇಲ್ಲ ಎನ್ನಬಹುದು. ದುಡ್ಡಿಗಿಂತ ಹೆಚ್ಚಾಗಿ ನಾನು ಸಂಬಂಧ, ಸ್ನೇಹಕ್ಕೆ ತುಂಬಾ ಪ್ರಾಮುಖ್ಯತೆ ಕೊಡ್ತೀನಿ. ಬಹುಶಃ ನನ್ನ ಈ ಸ್ವಭಾವವೇ ಕೆಲವು ಚಿತ್ರಗಳನ್ನು ಒಪ್ಪಿಕೊಳ್ಳುವಂತೆ ಮಾಡಿರಬಹುದು ಎಂದು ನಗುತ್ತಾಳೆ ಹರ್ಷಿಕಾ.

ಬೆಸ್ಟ್ ಸಿನಿಮಾ ಎನ್ನುವುದಾದರೆ? `ತಮಸ್ಸು’ ನನ್ನ ಬೆಸ್ಟ್ ಸಿನಿಮಾ. `ಜಾಕಿ’ ಜನಕ್ಕೆ ಇಷ್ಟ ಆಯ್ತು.

ಫೇವರಿಟ್‌ ಹಾಬಿ ಸಿನಿಮಾದಲ್ಲಿ ನಟಿಸೋದು, ಟ್ರಾವೆಲಿಂಗ್‌ ಮಾಡೋದು ಎರಡೂ ನನಗಿಷ್ಟ.

ಆಲ್ ದಿ ಬೆಸ್ಟ್ ಹರ್ಷಿಕಾ!

ಜಾಗೀರ್ದಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ