ಕೊರೋನಾದಿಂದ ದೇಶವೆಲ್ಲಾ ಲಾಕ್ ಡೌನ್ ಆಗಿ ತತ್ತರಿಸಿತ್ತು. ಎಲ್ಲರೂ ಮನೆಯಲ್ಲೇ ಇರಿ ಎಂದು ಸಾರಿ ಸಾರಿ ಹೇಳುತ್ತಿದ್ದರು. ಮನೆ ಮಂದಿಯೆಲ್ಲಾ ಮನೆಯಲ್ಲೇ ಇರುತ್ತಿದ್ದರಿಂದ ಗೃಹಿಣಿಯರಿಗೆ ಕೆಲಸ ಜಾಸ್ತಿ. ಅಂದರೆ ಅಡುಗೆಮನೆಯಲ್ಲಿ ಬಹಳ ಬಿಝಿ. ಲಾಕ್ ಡೌನ್‌ನಿಂದ ಕೆಲವರು ಹಪ್ಪಳ, ಸಂಡಿಗೆ ಮಾಡಿದರೆ ಕೆಲವರು ಮನೆಗಳಲ್ಲಿ ವಿಧ ವಿಧದ ಅಡುಗೆಗಳು. ಹೊರಗಡೆ ಜಂಕ್ ತಿನ್ನಲು ಆಗದ ಕಾರಣ ಮನೆಯಲ್ಲೇ ತಯಾರಿ. ಹೀಗಾಗಿ ಮೂರು ಹೊತ್ತು ತಿನ್ನುವುದಕ್ಕೆ ಬದಲಾಗಿ ಕೆಲವು ಬಾರಿ ನಾಲ್ಕು ಹೊತ್ತು ತಿನ್ನುತ್ತಿದ್ದುದೂ ಉಂಟು. ಸಂಜೆಯಾದರೆ ಬಜ್ಜಿ, ಬೋಂಡಾ, ಮಸಾಲಾವಡೆ, ಪಾನಿಪೂರಿ, ಮಸಾಲಾ ಪೂರಿ…. ಹೀಗೆ ಹೇಳುತ್ತಾ ಹೋದರೆ ಲಿಮಿಟ್ ಇಲ್ಲ. ಮಹಿಳೆಯರು ತಮ್ಮ ಹೊಸ ರುಚಿಯ ಪ್ರಯೋಗ ಮಾಡಲು ಇದು ಒಳ್ಳೆಯ ಅವಕಾಶ. ಪರಿಣಾಮ ಮನೆ ಮಂದಿಯ ತೂಕ ಹೆಚ್ಚಾಗುತ್ತಿತ್ತು. ಅಂದ ಮೇಲೆ ಈಗ ನಿಜವಾಗಲೂ ನಿಮ್ಮ ಡಯೆಟ್ ಬದಲಾಯಿಸು ಕಾಲ ಬಂದಿದೆ ಎಂದು ಅರ್ಥ. ಆದರೆ ಡಯೆಟ್ ಅಂದ ತಕ್ಷಣ ಮೂಗು ಮುರಿಯಬೇಕಾಗಿಲ್ಲ. ರುಚಿ ರುಚಿಯಾದ ಜಂಕ್ ಫುಡ್ ತಿನ್ನುವುದು ಯಾರಿಗೆ ಇಷ್ಟವಿಲ್ಲ? ಆದರೆ ಸೊಂಟದ ಸುತ್ತಳತೆ ಹೆಚ್ಚಾದಾಗ, ಹಾಕಿಕೊಳ್ಳುವ ಟಿಶರ್ಟ್‌ಬಿಗಿ ಎನಿಸಿದಾಗ ಗಾಬರಿಯಾಗಿಬಿಡುತ್ತದೆ. ಇದರ ಜೊತೆಗೆ ಬಿ.ಪಿ., ಶುಗರ್ ಎಲ್ಲದರ ಬಗ್ಗೆ ಯೋಚಿಸಿದಾಗ ಮೈ ನಡುಕವೇ ಬಂದುಬಿಡುತ್ತದೆ. ಇವೆಲ್ಲವನ್ನೂ ಒಂದು ಪಕ್ಕಕ್ಕಿಟ್ಟರೂ ಆರೋಗ್ಯ ಎಲ್ಲರಿಗೂ ಬಹಳ ಮುಖ್ಯ. ಸರಿಯಾದ ಆಹಾರ ಸೇವನೆ ನಮ್ಮ ದೇಹವನ್ನು ನೋಡುವುದಕ್ಕಷ್ಟೇ ಚಂದವಾಗಿಡುವುದಲ್ಲದೆ, ದೇಹ ಹಗುರವಾಗಿ ಹಾಯಾಗಿರುತ್ತದೆ. ಅದಕ್ಕೆ ನಾವು ಅಷ್ಟೇನೂ ಕಷ್ಟಪಡಬೇಕಾಗಿಲ್ಲ. ಒಳ್ಳೆಯ ಆರೋಗ್ಯಕ್ಕೆ ವ್ಯಾಯಾಮವಷ್ಟೇ ಅಲ್ಲದೆ, ನಮ್ಮ ಆಹಾರ ಸೇವನೆ ಅರ್ಥಾತ್ ಡಯೆಟ್‌ನ ಮಾಡಿಫಿಕೇಶನ್, ಬದಲಾವಣೆಯೂ ಅಷ್ಟೇ ಮುಖ್ಯ. ನಾವೆಲ್ಲ ಅಂದುಕೊಳ್ಳುವಂತೆ ಆರೋಗ್ಯಕರ ಆಹಾರ ಸೇವನೆ ಎಂದಾಕ್ಷಣ ಎಲ್ಲದಕ್ಕೂ ಅದು ಬೇಡ, ಇದು ಬೇಡ ಎನ್ನುತ್ತಾರೆ ಎನ್ನುವ ಭಯ ಬೇಡ. ಆರೋಗ್ಯಕರ ಆಹಾರ ಸೇವನೆ ಅರ್ಥಾತ್ ಹೆಲ್ದಿ ಡಯೆಟ್ ಅಂದರೆ ಬಹಳಷ್ಟು ವಿಧಾನದ ಆಹಾರ ಸೇವನೆಗೆ ಅನುವು ಮಾಡಿಕೊಡುವುದೇ ಇದರ ಮೂಲ ತತ್ವ. ಏಕೆಂದರೆ ಬೇರೆ ಬೇರೆ ಆಹಾರದಿಂದ ವಿಧ ವಿಧವಾದ ಜೀವಸತ್ವ ದೊರೆಯುತ್ತದೆ.
ನೀವು ತೆಗೆದುಕೊಳ್ಳುವ ಆಹಾರದಿಂದ ಬರುವ ಕ್ಯಾಲೋರಿಗಳನ್ನು ಖರ್ಚು ಮಾಡುವಂತಿರಬೇಕು. ಆಗಲೇ ಸರಿಯಾದ ಸಮತೋಲನ ಅಂದರೆ ಬ್ಯಾಲೆನ್ಸ್ ಆಗಲು ಸಾಧ್ಯ. ಇಲ್ಲವಾದರೆ ದುಡಿದ ಹೆಚ್ಚಿನ ಹಣ ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಜಮೆಯಾಗುವಂತೆ ನಿಮ್ಮ ಶರೀರದಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಅದಕ್ಕೆ ಕೆಲವು ವಿಧಾನಗಳನ್ನು ಅನುಸರಿಸಬೇಕಷ್ಟೆ.
ಹೆಚ್ಚಿನ ನಾರಿನಂಶ ಇರುವ ಅಂದರೆ ಹೈಫೈಬರ್ ಫುಡ್ಸ್, ಹಣ್ಣುಗಳು, ತರಕಾರಿ ಮತ್ತು ಬೇಳೆಕಾಳುಗಳಿರುವ ಆಹಾರ ತೆಗೆದುಕೊಳ್ಳಿ. ಇವುಗಳಲ್ಲಿ ಹೆಚ್ಚು ಜೀವಸತ್ವವಿದ್ದು ಕಡಿಮೆ ಕ್ಯಾಲೋರಿಗಳಿರುತ್ತವೆ. ವಿಟಮಿನ್ಸ್, ಮಿನರಲ್ಸ್ ಮತ್ತು ಸಸ್ಯಜನ್ಯ ಕೆಮಿಕಲ್ಸ್ ಆರೋಗ್ಯಕ್ಕೆ ಅಗತ್ಯ.
ಹಸಿರು, ಕೆಂಪು ಮತ್ತು ಹಳದಿ ಬಣ್ಣದ ತರಕಾರಿ ಹಣ್ಣುಗಳು ನಿಮ್ಮ ಊಟದಲ್ಲಿರಲಿ. ಉದಾ. ಕ್ಯಾರೆಟ್, ಸೊಪ್ಪು, ಸಿಟ್ರಸ್ ಫ್ರೂಟ್ಸ್ ಅಂದರೆ ಕಿತ್ತಳೆ, ನಿಂಬೆ, ಮೂಸಂಬಿ…. ಇವುಗಳು ನಿಮ್ಮನ್ನು ರೋಗಗಳಿಂದ ದೂರವಿರಿಸುತ್ತವೆ.
ಸಿಹಿ ಪದಾರ್ಥಗಳು (ಸಕ್ಕರೆ ಅಂಶದ ಆಹಾರದ ಪದಾರ್ಥ), ಲೈಟ್ ಬ್ರೆಡ್, ಉಪ್ಪಿರುವ ರಚಿಯಾದ ಕರಿದ ಪದಾರ್ಥಗಳಲ್ಲಿ ಹೆಚ್ಚು ಕ್ಯಾಲೋರಿಗಳಿರುತ್ತವೆ. ಇವುಗಳ ಸೇವನೆ ಮಿತವಾಗಿರಲಿ. ಸಕ್ಕರೆ ಬದಲು ಬೆಲ್ಲನ್ನು ಬಳಸಿ.
ಕೊಲೆಸ್ಟ್ರಾಲ್ ಹೆಚ್ಚಿಸುವ ಅನಿಮಲ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಫ್ಯಾಟ್‌ನ್ನು ಆದಷ್ಟೂ ಕಡಿಮೆ ತಿನ್ನಿ. ಟ್ರಾನ್ಸ್ ಫ್ಯಾಟ್ ಅಂತೂ ಬೇಡವೇ ಬೇಡ. ಅದರ ಬದಲು ಕೊಬ್ಬು ರಹಿತ ಆಹಾರ ಒಳ್ಳೆಯದು.
ನಿಮ್ಮ ಆಹಾರದಲ್ಲಿ ಕ್ಯಾಲ್ಶಿಯಂ ಅಂಶವಿರಲಿ. ರಾಗಿ, ಹಾಲು ಮತ್ತು ಹಸಿರು ತರಕಾರಿಗಳನ್ನು ತಿನ್ನಿ.
ನೀವು ಸೇವಿಸುವ ಆಹಾರದಲ್ಲಿ ವಿವಿಧತೆ ಇರಲಿ. ಸತ್ವಯುತವಾದುದೆಂದು ಒಂದೇ ರೀತಿಯ ಆಹಾರ ಸೇವಿಸಿದರೆ ಏಕತಾನತೆ ಎನಿಸುತ್ತದೆ. ಆದ್ದರಿಂದ ಬಗೆಬಗೆಯ ಆಹಾರ ಊಟದಲ್ಲಿ ಆಸಕ್ತಿ ಮೂಡಿಸುತ್ತದೆ.
ಸತ್ವಯುತ ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನಿಮ್ಮದಾಗಬೇಕು.
ಬೆಳ್ಳುಳ್ಳಿ, ಗ್ರೀನ್ ಟೀ, ಕಪ್ಪು ಜೀರಿಗೆ, ಮೊಸರು ನಿಯಮಿತವಾಗಿ ನಿಮ್ಮ ಆಹಾರದಲ್ಲಿರಲಿ.
ಮಶ್ರೂಮ್ ತಿನ್ನುವವರಾದರೆ ಖಂಡಿತ ತಿನ್ನಿ. ಅದರಲ್ಲಿ ಕಬ್ಬಿಣದ ಅಂಶ ಮತ್ತು ವಿಟಮಿನ್ `ಬಿ’ ಇರುತ್ತದೆ.
ಈಗಂತೂ ಬೇಸಿಗೆ ಕಾಲ. ಕಲ್ಲಂಗಡಿ ಹಣ್ಣು ನಿಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ಸಿ ಇರುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹೆಚ್ಚು ಕ್ಯಾಲೋರಿಗಳಿರುವುದಿಲ್ಲ.
ಸಿಹಿ ಗೆಣಸು, ಬ್ರೋಕಲಿ, ಶುಂಠಿ, ಮೊಸರು, ನೈಸರ್ಗಿಕ ತರಕಾರಿ, ಹಣ್ಣುಗಳನ್ನು ಸೇವಿಸಿ.
ಪರಂಗಿ ಹಣ್ಣು ತಿನ್ನಿ. ಅದರಲ್ಲಿ ವಿಟಮಿನ್ ಎ ಇರುತ್ತದೆ. ಅದು ನಿಮ್ಮ ಮಲಬದ್ಧತೆಯನ್ನು ದೂರ ಮಾಡುತ್ತದೆ. ದಾಳಿಂಬೆ, ದ್ರಾಕ್ಷಿ, ಕರಬೂಜ ಎಲ್ಲ ಹಣ್ಣುಗಳನ್ನೂ ತಿನ್ನಿ. ಆದರೆ ಎಲ್ಲ ಮಿತವಾಗಿರಲಿ.
ಬೆಳಗ್ಗೆ ಎದ್ದು ಕಾಫಿ ಕುಡಿಯುವುದಕ್ಕಿಂತ ರಾಗಿ ಗಂಜಿ ಕುಡಿಯಿರಿ. ಹೊಟ್ಟೆ ತುಂಬುತ್ತದೆ ಮತ್ತು ತಂಪಾಗುತ್ತದೆ. ಪ್ರತಿ ಊಟ, ತಿಂಡಿ ತಿನ್ನುವ ಮೊದಲು ಒಂದು ಸಲಾಡ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಡೈನಿಂಗ್ ಟೇಬಲ್ ಮೇಲೆ ಒಂದು ಪಾತ್ರೆಯಲ್ಲಿ ಶುಂಠಿ, ಇಂಗು, ಉಪ್ಪು ಹಾಕಿ ತಯಾರಿಸಿದ ನೀರು ಮಜ್ಜಿಗೆ ಮತ್ತು ಸಣ್ಣದಾಗಿ ಹೆಚ್ಚಿದ ಸೌತೆಕಾಯಿ, ಕ್ಯಾರೆಟ್, ಟೊಮೇಟೊ, ಈರುಳ್ಳಿ ಅದರ ಮೇಲೆ ಸ್ವಲ್ಪ ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಅದರಲ್ಲಿ ಹಾಕಿಡಿ. ಹಸಿವಾದಾಗ, ಬಾಯಾರಿಕೆಯಾದಾಗ ಸಲಾಡ್ ಮತ್ತು ಮಜ್ಜಿಗೆಯನ್ನು ಉಪಯೋಗಿಸಿ.
ಆಗಾಗ ನಿಮ್ಮ ಅಮ್ಮ ಮಾಡುತ್ತಿದ್ದ ಕೋಸಂಬರಿಗಳನ್ನು ತಯಾರಿಸಿ. ಹೆಸರುಬೇಳೆ, ಕಡಲೆಬೇಳೆ, ಮೊಳಕೆ ಬರಿಸಿದ ಹೆಸರುಕಾಳು ಹೀಗೆ ನಿಮ್ಮ ಕೋಸಂಬರಿಗಳಲ್ಲಿ ವಿವಿಧತೆ ಇರಲಿ. ರಾಗಿ ಹುರಿಟ್ಟಿಗೆ ಸ್ವಲ್ಪ ಮೊಸರು ಹಾಕಿ ಕಲಸಿ ತಿಂದರೆ ಹೊಟ್ಟೆ ತಂಪಾಗುತ್ತದೆ. ಪ್ರಕೃತಿ ನೀಡುವ ಎಲ್ಲ ಹಣ್ಣು, ತರಕಾರಿಗಳು ಒಳ್ಳೆಯವೇ. ಆದರೆ ಅದನ್ನು ನಿಮ್ಮ ಡಯೆಟ್ ಸಮತೋಲನವಾಗುವಂತೆ ಬಳಸುವುದರಲ್ಲಿ ಜಾಣತನವಿದೆ.
ಜೀವನದಲ್ಲಿ ಬದಲಾವಣೆ ಅನಿವಾರ್ಯ. ಸದಾ ಹೊರಗೆ ಇದ್ದವರು ಈಗ ಮನೆಯಲ್ಲೇ ಇರಲಿಲ್ಲವೇ…? ಅದೇ ರೀತಿ ಈಗ ಬದಲಾವಣೆ ನಿಮ್ಮ ಆಹಾರದಲ್ಲಿ ಆಗಬೇಕಿದೆ. ಜೊತೆಗೆ ಯೋಗ, ಧ್ಯಾನ, ಮನೆಯಲ್ಲಿನ ಕೆಲಸಗಳನ್ನು ಮಾಡುವುದು, ಇಲ್ಲವಾದಲ್ಲಿ ಮಕ್ಕಳೊಂದಿಗೆ ಡ್ಯಾನ್ಸ್, ವ್ಯಾಯಾಮ ಮಾಡಿ. ನಿಮ್ಮ ಡೈನಿಂಗ್ ಡೇಬಲ್ ಮೇಲೆ ಟೆನಿಸ್ ಆಡಿ. ಲಾಕ್ ಡೌನ್‌ನಿಂದ ಕೊರೋನಾ ವೈರಸ್‌ನ್ನು ಓಡಿಸುವುದಲ್ಲದೆ, ನಿಮ್ಮ ಮನದ ಜಡತ್ವ, ಒತ್ತಡಗಳನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿ.
– ಮಂಜುಳಾ ರಾಜ್