ಬೆಳಗ್ಗೆ ಟಿವಿ ಆನ್ ಮಾಡಿ ನ್ಯೂಸ್ ಚಾನೆಲ್ ನೋಡುತ್ತಿದ್ದಾಗ, ರಿಪೋರ್ಟರ್‌ಈ ರೀತಿ ಹೇಳುತ್ತಿದ್ದಳು. `ತಮ್ಮ ಮೇಲೆ ಶೋಷಣೆ ನಡೆಯಲು ಹೆಂಗಸರು ಮೂಲತಃ ತಾವೇ ಕಾರಣರು.’
ಇದನ್ನು ಕೇಳಿ ಮನಸ್ಸಿಗೆ ಬಹಳ ಕೋಪ ಬಂತು. ನಂತರ ಖಿನ್ನ ಮನದಿಂದ ಟಿ.ವಿ ಆಫ್ ಮಾಡಿ ಬಂದು ಎಂದಿನ ನನ್ನ ಅಡುಗೆಮನೆ ಕೆಲಸದಲ್ಲಿ ನಿರತಳಾದೆ. ಪ್ರತಿ ಸಲ ಹೆಣ್ಣನ್ನೇ ದೋಷಿ ಎನ್ನುವುದು ಎಷ್ಟು ಸರಿ? ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಇವೆಲ್ಲ ನಮ್ಮ ದೇಶಕ್ಕೆ ಏನು ಹೊಸತೇ? ಅತ್ತ ಬಾಬಾಗಳೂ ಹೊಸಬರಲ್ಲ, ಇತ್ತ ಆಶ್ರಮಗಳೂ ರಾತ್ರೋರಾತ್ರಿ ತಯಾರಾಗಿ ಬಿಡಲಿಲ್ಲ. ನನ್ನ ಈ ಯೋಚನೆಗಳಿಗೆ ಕೊನೆ ಮೊದಲಿರಲಿಲ್ಲ.
ಇವರು ಆಫೀಸಿಗೆ ಹಾಗೂ ಮಕ್ಕಳು ಶಾಲೆಗೆ ಹೊರಟಾಗಿತ್ತು. ಯಾಕೋ ಖಿನ್ನತೆ ಹೆಚ್ಚುತ್ತಾ ತಲೆನೋವು ಬಂತು. ಒಂದಿಷ್ಟು ಬಿಸಿ ಬಿಸಿ ಟೀ ಕುಡಿಯೋಣ ಎಂದು ಟೀ ಮಾಡತೊಡಗಿದೆ. ಟೀ ಹಿಡಿದು ಬಂದು ಬಾಲ್ಕನಿಯಲ್ಲಿ ಕುಳಿತರೂ ತಲೆನೋವು ಕಡಿಮೆ ಆಗಲಿಲ್ಲ. ಹಳೆಯ ನೆನಪುಗಳೆಲ್ಲ ಓತಪ್ರೋತವಾಗಿ ಹರಿದು ಬರತೊಡಗಿತು. ನಂತರ ಇಡೀ ದಿನ ಮನಸ್ಸು ಅದೇ ಯೋಚನೆಯ ತಾಕಾಟದಲ್ಲಿ ಮುಳುಗಿಹೋಯಿತು. ಈ ಯೋಚನೆಗಳಿಂದ ಹೊರಬರೋಣ ಎಂದು ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ. ಏನೇ ಮಾಡಿದರೂ ಮನಸ್ಸು ಮತ್ತೆ ಮತ್ತೆ ಅದನ್ನೇ ಯೋಚಿಸುತ್ತಿತ್ತು.
ಒಮ್ಮೊಮ್ಮೆ ಅನಿಸುವುದು, ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದೆ ಅಂತ. ಆದರೆ ಮತ್ತೊಂದು ಕ್ಷಣದಲ್ಲಿಯೇ ಅದು ನಮ್ಮಿಂದ ದೂರ ಚಿಮ್ಮಿ ಹೋಗಿಬಿಡುತ್ತಿತ್ತು. ಜೀವನದ ಏರಿಳಿತಗಳಲ್ಲಿ ಅದೆಷ್ಟು ಸಲ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿಲ್ಲ? ಆದರೆ ಪ್ರತಿ ಸಲ ಗೆಲುವು ಮಾತ್ರ ಮನಸ್ಸಿನದೇ!
ಇಂದು ಆಂಟಿ ಮತ್ತೆ ಮತ್ತೆ ನೆನಪಾಗುತ್ತಿದ್ದರು. ಬಾಲ್ಯದಲ್ಲಿ ನಮಗೆ ಯಾವುದೂ ಸ್ಪಷ್ಟ ಅರ್ಥ ಆಗುತ್ತಿರಲಿಲ್ಲ. ಕಮಲಾ ಆಂಟಿ ಬಂದರೆಂದರೆ ನಾವೆಲ್ಲ ಬಹಳ ಖುಷಿಯಾಗಿ ಕುಣಿಯುತ್ತಿದ್ದೆ. ಅವರು ನಮ್ಮ ತಾಯಿಯ ತಂಗಿ. ಈ ಚಿಕ್ಕಮ್ಮ ಬಂದಾಗೆಲ್ಲ ನಮ್ಮನ್ನು ಲಾಲ್‌ಬಾಗ್, ಕಬ್ಬನ್ ಪಾರ್ಕ್ ಅಥವಾ ಬನ್ನೇರುಘಟ್ಟ ಎಂದು ಎಲ್ಲಾದರೂ ಕರೆದೊಯ್ಯದೆ ಇರುತ್ತಿರಲಿಲ್ಲ.
ಅಲ್ಲಿ ನಾವು ಕೇಳಿದ್ದನ್ನೆಲ್ಲ ಕೊಡಿಸಿ ಇನ್ನಷ್ಟು ಖುಷಿಪಡಿಸುತ್ತಿದ್ದರು. ಅಮ್ಮನ ಹಾಗೆ ಅದು ಬೇಡ, ಇದು ಬೇಡ ಎಂದು ಗದರುತ್ತಿರಲಿಲ್ಲ. ಹಾಗಾಗಿಯೇ ಮಕ್ಕಳಿಗೆಲ್ಲ ಕಮಲಾ ಆಂಟಿ ಬಂದರೆಂದರೆ ಬಲು ಖುಷಿ!
ಆದರೆ ಮನೆಯಲ್ಲಿ ಅವರಿಬ್ಬರೂ ಹರಟಲು ಕುಳಿತಾಗ ನಮ್ಮನ್ನೆಲ್ಲ ಬಲವಂತವಾಗಿ ಆಟಕ್ಕೆ ಕಳುಹಿಸಿಬಿಡುತ್ತಿದ್ದರು. ನಮಗೆ ಅಲ್ಲಿಯೇ ಕುಳಿತು ಆಂಟಿ ಬಳಿ ಇನ್ನಷ್ಟು ಮುದ್ದು ಪಡೆಯುವ ಆಸೆ.
ನಾವು ಅಲ್ಲೇ ಅಂಗಳದಲ್ಲಿ ಕುಂಟೆಬಿಲ್ಲೆ ಆಡುತ್ತಿದ್ದರೆ ಅವರ ಮಾತು ಅರ್ಧಂಬರ್ಧ ಕೇಳಿ ಬರುತ್ತಿದ್ದವು, ನೆಟ್ಟಗೆ ಯಾವುದೂ ಅರ್ಥವಾಗುತ್ತಿರಲಿಲ್ಲ. ಅವರ ಮಾತುಗಳಿಂದ ಅಸ್ಪಷ್ಟವಾಗಿ ಅರ್ಥವಾಗಿದ್ದೆಂದರೆ ಚಿಕ್ಕಮ್ಮ ಬಾಲವಿಧವೆ ಎಂಬುದು. ವಿಧವೆ ಎಂದರೆ ಏನೆಂದು ನಮಗೆ ಗೊತ್ತಾಗುತ್ತಲೂ ಇರಲಿಲ್ಲ. ನಾವು ಹೈಸ್ಕೂಲಿಗೆ ಬಂದ ಮೇಲೆ ಅಮ್ಮನನ್ನು ಕೇಳಿದ್ದುಂಟು, ಆಂಟಿ ಹೇಗೆ ಬಾಲವಿಧವೆ ಆದಳೆಂದು.
ಆಗ ಅಮ್ಮ ಹೇಳಿದ್ದೆಂದರೆ, ಆಂಟಿಗೆ 10 ವರ್ಷ ಇದ್ದಾಗಲೇ ಮದುವೆ ಆಗಿತ್ತಂತೆ. ಅವಳು 12 ವರ್ಷಕ್ಕೆ ಬಂದು ಮೈ ನೆರೆಯುವಷ್ಟರಲ್ಲಿ ಅವಳ ಗಂಡ ಆ್ಯಕ್ಸಿಡೆಂಟ್‌ನಲ್ಲಿ ತೀರಿಹೋಗಿದ್ದ. ಆಂಟಿ ಅತ್ತೆಮನೆಗೆ ಹೋಗದೆ ಬಾಲವಿಧವೆ ಪಟ್ಟ ಹೊತ್ತು ಶಾಶ್ವತವಾಗಿ ತವರಿನಲ್ಲೇ ಉಳಿದಳು. ಹತ್ತಿರದ ಸಂಬಂಧಿಗಳ ಮನೆಯಲ್ಲಿ ಏನೇ ವಿಶೇಷ ನಡೆಯಲಿ, ಹಿಂದಿನ ದಿನವೇ ಹೋಗಿ ಬಿಟ್ಟಿ ಆಳಾಗಿ ದುಡಿಯುವುದು, ಯಾರಿಗಾದರೂ ಆರೋಗ್ಯ ಕೆಟ್ಟರೆ ವಾರಗಟ್ಟಲೇ ಅಲ್ಲೇ ಉಳಿದು ಅವರ ಸೇವೆ ಮಾಡುವುದು, ಬಾಣಂತನಕ್ಕೆ ಹೋಗಿ 3-4 ತಿಂಗಳು ಬಿಟ್ಟು ಬರುವುದು ಇದೇ ಅವಳ ಬದುಕಾಯಿತು. ಓದುಬರಹ ಇರದ ಅವಳಿಗೆ ಅವರು ಕೊಡುವ ಬಟ್ಟೆಬರೆ, ಊಟ ತಿಂಡಿಯೇ ದೊಡ್ಡ ಉಡುಗೊರೆ! ಮುಂದೆ ಅವಳ ಬಗ್ಗೆ ಹೆಚ್ಚಾಗಿ ಕೇಳಲಿಕ್ಕೆ ಏನೂ ಇರಲಿಲ್ಲ. ಹೀಗೇ ದೊಡ್ಡವರಾಗಿ ನಾವು ಕಾಲೇಜು ಸೇರಿದ್ದಾಯಿತು.
ಆಂಟಿಯನ್ನು ಒಂದು ಶ್ರೀಮಂತ ಮನೆತನಕ್ಕೆ ಕೊಟ್ಟು ಮದುವೆ ಮಾಡಲಾಗಿತ್ತು. ಅವರ ಆಸ್ತಿಪಾಸ್ತಿಗೆ ಏನೂ ಕಡಿಮೆ ಇರಲಿಲ್ಲ. ಮೊದಲಿನಿಂದಲೂ ಆಂಟಿಯನ್ನು ಮದುವೆಯಾದ ಹುಡುಗನ ಆರೋಗ್ಯ ಅಷ್ಟಕ್ಕಷ್ಟೆ. ಆತ ತಾಯಿ ತಂದೆಯರ ಏಕಮಾತ್ರ ಮಗನಾಗಿದ್ದ. ಇವರಿಬ್ಬರ ನಡುವೆ 10-12 ವರ್ಷಗಳ ಅಂತರವಿತ್ತಂತೆ. ಆತ ಬೇಗ ಗುಣ ಹೊಂದಲಿ ಎಂದು ಆಗಾಗ ಪೂಜೆ ಪುನಸ್ಕಾರ ನಡೆಸುತ್ತಿದ್ದರಂತೆ. ಮೊದಲಿನಿಂದಲೂ ಅವರಿಗೆ ಉ.ಭಾರತದ ಮಥುರಾ, ದ್ವಾರಕ ಅಂದರೆ ಹೆಚ್ಚಿನ ನಂಟು. ಅಲ್ಲಿನ ಒಬ್ಬ ಗುರೂಜಿ ಆಗಾಗ ಪೂಜೆ ಮಾಡಿಸಲೆಂದು ಇಲ್ಲಿಗೆ ಬರುತ್ತಿದ್ದರಂತೆ. ಬಂದರೆ 2-3 ವಾರ ಬೆಂಗಳೂರಿನಲ್ಲೇ ಪ್ರವಚನ ನಡೆಸುತ್ತಿದ್ದರು. ಗುರೂಜಿ ಆ ಮನೆಗೆ ದೇವರ ಸಮಾನರಾಗಿದ್ದರು. ಅವರ ಸಲಹೆಗಳನ್ನು ಆಜ್ಞೆಗಳಾಗಿ ಭಾವಿಸಿ ಶಿರಸಾವಹಿಸಿ ಪಾಲಿಸುತ್ತಿದ್ದರು. ಗಂಡನ ಆರೋಗ್ಯ ಸುಧಾರಣೆಗಾಗಿ ಏನೇನು ಪೂಜೆ, ಸೇವೆ, ವ್ರತಗಳನ್ನು ಮಾಡಬೇಕಿತ್ತೋ ಆಂಟಿ ಸಾಂಗೋಪಾಂಗವಾಗಿ ನಿಷ್ಠೆಯಿಂದ ನಡೆಸುತ್ತಿದ್ದರು. ನನಗೆ ಚೆನ್ನಾಗಿ ನೆನಪಿದೆ, ಒಮ್ಮೆ 18 ದಿನಗಳ ಕಾಲ ಬೆಳಗಿನ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ, ಒದ್ದೆ ಬಟ್ಟೆಯುಟ್ಟು ಆಂಟಿ ವ್ರತ ನಡೆಸಿದ್ದುಂಟು. ಆದರೆ ಏನಾಗಬಾರದೋ ಅದೇ ನಡೆಯಿತು. ಸ್ವಲ್ಪ ಸುಧಾರಿಸಿದ ಆತ ಬೈಕ್ ತೆಗೆದುಕೊಂಡು ಹೊರಗೆ ಹೊರಟಾಗ ಅಪಘಾತವಾಗಿ ರಸ್ತೆಯಲ್ಲೇ ಸತ್ತಿದ್ದ.
ಆಂಟಿ ವಯಸ್ಸಿನಲ್ಲಿ ಚಿಕ್ಕವರು, ಇನ್ನೊಂದು ಮದುವೆ ಮಾಡುವುದೇ ಒಳ್ಳೆಯದೆಂದು ಯಾರೋ ಹಿರಿಯರು ಸಲಹೆ ಕೊಟ್ಟರು. ಇನ್ನೂ ಕೆಲವರು, ಅದಂತೂ ಖಂಡಿತಾ ಕೂಡದು ಎಂದು ಬಾಯಿ ಬಡಿದರು.
ಆಗ ಗುರುಗಳು ಹೇಳಿದ ಮಾತು, ಇವಳು ತರಿನಲ್ಲಿರಲಿ. ಅಗತ್ಯ ಬಿದ್ದಾಗ ದೇವರ ಸೇವೆಗೆಂದು ಆಗಾಗ ಮಥುರಾದ ಬೃಂದಾವನಕ್ಕೆ ಬರುತ್ತಿರಲಿ. ಎಲ್ಲರಿಗೂ ಅದೇ ಸರಿ ಎನಿಸಿತು.
ಆಗ ಉದ್ಭವಿಸಿದ ಯಕ್ಷ ಪ್ರಶ್ನೆ, ಆ ಮನೆತನದ ಅಷ್ಟೂ ಆಸ್ತಿಪಾಸ್ತಿ ಅನುಭವಿಸಲು ಒಂದು ಸಂತಾನ ಬೇಡವೇ? ಅದೇ ಇರಲಿಲ್ಲ. ಮುಂದೆ ಇದನ್ನು ಸಂಭಾಳಿಸುವವರಾರು? ನೂರು ಜನರಿಂದ ಸಾವಿರ ಸಲಹೆಗಳು….. ಸ್ವಂತದಲ್ಲೇ ಯಾರನ್ನಾದರೂ ದತ್ತು ತೆಗೆದುಕೊಳ್ಳಿ. ಬೇಡ ಅನಾಥಾಶ್ರಮದ ಹುಡುಗನಾದರೆ ಕೊನೆಯವರೆಗೆ ನಿಷ್ಠೆ ಇರುತ್ತದೆ. ಆದರೆ ಸ್ವಂತದಲ್ಲೇ ಹುಡುಗನನ್ನು ದತ್ತು ತೆಗೆದುಕೊಂಡದ್ದಾಯಿತು. ಅಲ್ಲಿಗೆ ಚಿಕ್ಕಮ್ಮ ಆ ಮನೆಗೆ ಬೇಡದ ಅತಿಥಿ. ಅಲ್ಲಿನವರು ಹೇಳಿದ ಚಾಕರಿ ಮಾಡುತ್ತಾ, ಅವರು ಅದಕ್ಕೂ ಕಲ್ಲು ಹಾಕಿ ತವರಿನಲ್ಲಿರುವ, ಬೇಕಾದಾಗ ಬೃಂದಾವನದ ಸೇವೆಗೆ ಕರೆಸಿಕೊಳ್ಳುತ್ತೇವೆ ಎಂದು ಕೈ ತೊಳೆದುಕೊಂಡರು. ಹೀಗೆ ಆಂಟಿಯ ಜೀವನ ಡೋಲಾಯಮಾನವಾಗಿ ಮುಂದುರಿಯಿತು.
ಹೀಗೆ ದಿನ ಕಳೆಯಲು 6 ತಿಂಗಳ ನಂತರ ಗುರೂಜಿ ಮಥುರಾಗೆ ಬರಬೇಕೆಂದು ಹೇಳಿ ಕಳುಹಿಸಿದರು. ಅಲ್ಲಿ ಕೆಲವು ದಿನಗಳಿದ್ದು ಸೇವೆ ಮಾಡಬೇಕಿತ್ತು. ಇನ್ನೇನು? ಬೇರೆ ಮಾತಿಲ್ಲದೆ ಆಕೆಯನ್ನು ಬೃಂದಾವನಕ್ಕೆ ಕಳುಹಿಸಿಕೊಡಲು ಎಲ್ಲರೂ ತಯಾರಾದರು. ಎಂದಿನಂತೆ ಹಿರಿಯರ ಆಜ್ಞೆ ಮೀರಲಾರದೆ ಆಂಟಿ ಹೊರಟೇಬಿಟ್ಟರು.
ಅಂದಹಾಗೆ ಈಗಲೂ ಸಹ ಉ. ಭಾರತದ ಕಡೆಯಿಂದ ಬಹುತೇಕ ವಿಧವೆಯರನ್ನು ಬೃಂದಾವನಕ್ಕೆ ಈ ರೀತಿ ದೇವರ ಸೇವೆಗೆಂದು ಅಲ್ಲಿಗೆ ಕಳುಹಿಸಿ ಬಿಡುತ್ತಾರೆ. ಅವರ ಭೀಕರ ದೈನೇಸಿ ಜೀವನ ನೋಡಲು ಸಾಧ್ಯವಿಲ್ಲ. ಆದರೆ ಆಂಟಿಗೆ ಅಲ್ಲಿನ ಒಂದು ಸುಸಜ್ಜಿತ ಆಶ್ರಮದಲ್ಲಿ ನೆಲೆ ಸಿಕ್ಕಿತು. ಈ ರೀತಿ ಚಿಕ್ಕಮ್ಮ 2-3 ತಿಂಗಳು ಆ ಆಶ್ರಮದಲ್ಲೂ, ನಂತರ ತವರಿಗೆ ಬಂದು ಇಲ್ಲಿ ಬಂಧು ಬಾಂಧವರ ಚಾಕರಿಯಲ್ಲೂ ದಿನ ಕಳೆಯುತ್ತಿದ್ದರು.
ಚಿಕ್ಕಮ್ಮನ ಅತ್ತೆಮನೆಯವರೇ ಬೃಂದಾವನದ ಗುರೂಜಿ ಆಶ್ರಮಕ್ಕೆ ಧಾರಾಳ ದೇಣಿಗೆ ಕಳುಹಿಸುತ್ತಿದ್ದರು. ಅದೇ ರೀತಿ ಪಾಪ ಭೀತಿಯ ಅನೇಕ ಶ್ರೀಮಂತರು ಧಾರಾಳವಾಗಿ ಆಗಾಗ ದುಡ್ಡುಕಾಸು, ಬಟ್ಟೆಬರೆ, ಕಾಳುಕಡ್ಡಿ ಇತ್ಯಾದಿ ಎಲ್ಲವನ್ನೂ ಧಾರಾಳ ಕೊಡುತ್ತಿದ್ದರಿಂದ ಆಶ್ರಮ ನಡೆಯುವುದೇನೂ ಕಷ್ಟವಾಗಿರಲಿಲ್ಲ. ಕ್ರಮೇಣ ಆಂಟಿ ಆ ಆಶ್ರಮದಿಂದ ಈ ಕಡೆ ತವರಿಗೆ ಬರುವುದು ಅಪರೂಪವಾಗುತ್ತಾ ಹೋಯಿತು. ಇವರಿಗಾಗಿ ಅಲ್ಲಿ ಪ್ರತ್ಯೇಕ ಕೋಣೆಯೊಂದನ್ನು ತೆರವು ಮಾಡಿಕೊಟ್ಟಿದ್ದರಂತೆ. ಬದಲಾಗುತ್ತಿದ್ದ ಜನರ ಅಭಿಪ್ರಾಯ, ಧೋರಣೆಗಳಿಗೆ ಇದೂ ಒಂದು ಕಾರಣವಾಯಿತು. ಒಟ್ಟಾರೆ ಚಿಕ್ಕಮ್ಮ ಕಾಣಿಸುವುದು ವಿರಳವಾಗಿತ್ತು.
ಅಮ್ಮ ಚಿಕ್ಕಮ್ಮ ಇಬ್ಬರೂ ಬರೀ ಫೋನಿನಲ್ಲಿ ಮಾತನಾಡಿಕೊಳ್ಳುವುದಷ್ಟೇ ಆಯ್ತು. ಆದರೆ ಪ್ರತಿ ಸಲ ಅವರ ಮಾತು ಮುಗಿದಾಗಲೂ ಅಮ್ಮ ಬಹಳ ದುಃಖಕ್ಕೆ ಒಳಗಾಗುತ್ತಿದ್ದಳು. ಹೀಗೆ ದಿನಗಳು ಕಳೆದು ನಾವೆಲ್ಲ ಒಂದು ದಡ ಸೇರಿದೆವು. ಅಕ್ಕನ ನಂತರ ನನ್ನ ಮದುವೆ ನಡೆಯಿತು. ಆಮೇಲೆ ಅಣ್ಣನದು. ಆದರೆ ಅಮ್ಮನಿಗೂ ಸೊಸೆಗೂ ಹೊಂದಾಣಿಕೆ ಸರಿಹೋಗಲಿಲ್ಲ. ಹೀಗೆ ಸಂಸಾರದಲ್ಲಿ ದಿನೇದಿನೇ ಅಶಾಂತಿ ಹೆಚ್ಚಲು ಅಮ್ಮ ತಾನು ವಿರಾಗಿಯಾಗಿ ತಂಗಿಯ ಬಳಿಗೇ ಶಾಶ್ವತವಾಗಿ ಹೋಗಿಬಿಡುತ್ತೇನೆಂದು ಹಠ ಹಿಡಿದಳು. ಅಣ್ಣನ ಸಮಾಧಾನ, ಸಂಧಾನ ಏನೂ ನಡೆಯಲಿಲ್ಲ. ಕೊನೆಗೆ ಅಣ್ಣ ತಾನೇ ಅಮ್ಮನನ್ನು ಮಥುರಾಗೆ ಕರೆದೊಯ್ಯುವುದಾಗಿ ರೈಲಿಗೆ ಟಿಕೆಟ್ ಬುಕ್ ಮಾಡಿದ. ಹೀಗೆ ಅವರು ಬೃಂದಾವನ ತಲುಪಿದರು. ಚಿಕ್ಕಮ್ಮನ ಬಳಿ ಕೆಲವು ದಿನ ಇದ್ದ ಅಣ್ಣ ಅದೇಕೋ ಬೇಗನೇ ಮರಳಿ ಬಂದುಬಿಟ್ಟ. ಅಮ್ಮನಿಗಂತೂ ಆಂಟಿಯನ್ನು ಭೇಟಿ ಆಗಿದ್ದು ಬಹಳ ಖುಷಿ ಆಗಿತ್ತು. ಆದರೆ ಅವರು ಅಲ್ಲಿ ಹೆಚ್ಚು ದಿನ ಇರುವುದು ಬೇಡ ಎಂದು ಚಿಕ್ಕಮ್ಮ ಬೇಗ ಕಳುಹಿಸಿಬಿಟ್ಟರು.
ಆಂಟಿ ಹೇಳಿದರಂತೆ, “ಈ ರೀತಿ ಕುಟುಂಬದಲ್ಲಿ ಮನಸ್ತಾಪ ಮಾಡಿಕೊಂಡು ಮಗ ಸೊಸೆಯರನ್ನು ತೊರೆದು ಬರ್ತೀನಿ ಅನ್ನುವುದು ಸರಿಯಲ್ಲ ಅಕ್ಕಾ…. ನನ್ನ ಮಾತು ಈಗ ನಿನಗೆ ಕಹಿ ಅನ್ನಿಸಬಹುದು. ಆದರೆ ಹೆಣ್ಣಿಗೆ ಎಲ್ಲಾ ವಯಸ್ಸಿನಲ್ಲೂ ಒಂದು ರಕ್ಷಣೆ ಇರಬೇಕು ಅನ್ನೋದು ಒಪ್ಪತಕ್ಕ ಮಾತು. ಮದುವೆಗೆ ಮೊದಲು ತವರಿನಲ್ಲಿ ತಂದೆಯ ಆಸರೆ, ಅದು ತಪ್ಪಿದರೆ ಅಣ್ಣ ತಮ್ಮಂದಿರ ರಕ್ಷಣೆ, ಮದುವೆ ಆದ ಮೇಲೆ ಪತಿಯ ಆಸರೆ, ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ತಪ್ಪೇನಲ್ಲ. ಸಮಾಜದ ಈ ಕಟ್ಟಳೆ ಮೀರಿ ಹೆಣ್ಣು ಬೇರೇನೋ ಮಾಡಲು ಹೊರಟರೆ ಅವಳಿಗೆಂದೂ ನೆಮ್ಮದಿ ಲಭಿಸದು. ಮುಂದೆ ಈ ತಪ್ಪನ್ನು ಮತ್ತೆ ಮಾಡಬೇಡ. ಒಬ್ಬಂಟಿ ಹೆಣ್ಣಾಗಿ ಈ ಸಮಾಜ ಎದುರಿಸಿ ನಿಂತ ನನಗಿಂತ ಆ ನೋವನ್ನು ಬಲ್ಲವರಾರು?” ಅಮ್ಮ ಆ ಮಾತಿಗೆ ಎದುರಾಡಲಾರದೇ ಹೋದಳು.
ಮಗನನ್ನು ಕರೆದು, “ಚಿಕ್ಕಮ್ಮನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ಳಪ್ಪ. ನಾವು ಇವತ್ತೇ ಊರಿಗೆ ಹೊರಟುಬಿಡೋಣ.”
ಆದರೆ ಅಲ್ಲಿನ ವಾತಾವರಣ ಕಂಡು ಅಣ್ಣನಿಗೆ ಆಂಟಿಯ ಬಗ್ಗೆ, ಅಮ್ಮನನ್ನು ವಾಪಸ್ಸು ಕಳುಹಿಸುತ್ತಿರುವ ಅವಳ ಕಟು ವರ್ತನೆಗೆ ರೋಸಿಹೋಗಿ, ತನಗೆ ಆಕೆಯ ಆಶೀರ್ವಾದ ಬೇಕಿಲ್ಲ ಎಂದು ಸಿಡಿದು ನಿಂತ. ಅಮ್ಮನಿಗೆ ಬಹಳ ಸಂಕಟವಾಯಿತು. ಪಾಪ, ವಯಸ್ಸು ಚಿಕ್ಕದು ಮನಸ್ಸು ಮಾಗಿಲ್ಲ ಎಂದು ಆಂಟಿ ಅಣ್ಣನ ತಲೆ ಮೇಲೆ ಇರಿಸಿ ಅವರನ್ನು ಕಳುಹಿಸಿಕೊಟ್ಟರು. ಅಣ್ಣನಿಗೆ ಅದೂ ಸಹಿಸದೆ ಅವರ ಕೈ ಕೊಡವಿ ಬೇಗ ಹೊರಡೋಣ ಎಂದು ಸಿಡುಕಿದನಂತೆ. ಅಣ್ಣನ ಕಂಗಳಲ್ಲಿದ್ದ ದ್ವೇಷ ಆಂಟಿಗೂ ಅರ್ಥವಾಗಿರಬೇಕು. ಹೀಗಾಗಿ ಅಮ್ಮನಿಗೆ ರೇಗಾಡಬೇಡ ಎಂದು ಎಚ್ಚರಿಸಿ ಮನೆಗೆ ಕಳುಹಿಸಿದರು.
ಮನೆಗೆ ಮರಳಿದ ಮೇಲೆ ತಾಯಿ ಮಗನ ನಡುವೆ ಬೇಕಾದಷ್ಟು ವಾಗ್ವಾದ ನಡೆಯಿತು. ಚಿಕ್ಕಮ್ಮನ ವಿರುದ್ಧ ಕಟು ಮಾತು, ಟೀಕೆ ಕೇಳಲು ಅಮ್ಮ ಸಿದ್ಧಳಿರಲಿಲ್ಲ. ಎಷ್ಟಾದರೂ ಮಗನಿಗೆ ಮುಂಚೆ ಹುಟ್ಟಿದ್ದು ತಂಗಿ ಅಲ್ಲವೇ? ಆದರೆ ಕೋಪ ತಾರಕಕ್ಕೇರಿದಾಗ ಅಣ್ಣ ಕಿರುಚಾಡಿದ್ದ, “ಆಕೆ ಚಿಕ್ಕಮ್ಮ ಅಲ್ಲ…. ವೇಶ್ಯೆ….. ವೇಶ್ಯೆ…. ಆ ಊರಿನವರೆಲ್ಲ ಬಾಯಿ ತುಂಬಾ ಆಡಿಕೊಳ್ತಾರೆ, ಅಸಹ್ಯ!”
ಇದನ್ನು ಕೇಳಿದ ತಕ್ಷಣ ಅಮ್ಮ ಮಗನ ಕೆನ್ನೆಗೆ ಫಟಾರನೆ ಬಾರಿಸಿದಳು. ಇದಕ್ಕೆ ಅಣ್ಣ ಇನ್ನಷ್ಟು ರೋಷದಿಂದ, “ಇರಲಿ ಬಿಡಮ್ಮ…. ನಿನ್ನ ತಂಗಿ ನಿನಗೆ ಹೆಚ್ಚುಗಾರಿಕೆಯಾದರೆ ಅದನ್ನು ಕಟ್ಟಿಕೊಂಡು ನನಗೇನು? ಊರಿನವರ ಬಾಯಿಗೆ ಬೀಗ ಹಾಕಲಾದೀತೇ? ಅಲ್ಲಿ ವೇಶ್ಯೆಯರ ಅಡ್ಡಾ ಇದೆಯಂತೆ…. ಅಲ್ಲಿ ಎಲ್ಲಾ ತರಹದ ದಂಧೆ ನಡೆಯುತ್ತದಂತೆ!”
“ಸಾಕು ಸಾಕು….. ಅವಳು ನನ್ನ ಮಲತಂಗಿ ಅಲ್ಲ, ಸ್ವಂತ ತಂಗಿ! ಹಿರಿ ಮಗಳ ಸಮಾನ ನನಗೆ…. ಇನ್ನೊಂದು ಅವಾಚ್ಯದ ಮಾತನ್ನೂ ಆಡಬೇಡ…. ಅನ್ಯಾಯವಾಗಿ ಬಾಯಿ ಹೊಲಸು ಮಾಡಿಕೊಂಡು ಪಾಪ ಕಟ್ಟಿಕೊಳ್ಳಬೇಡ…..”
“ಹೌದು ಹೌದು, ನಾನು ಹೇಳಿದ್ದೆಲ್ಲ ಸುಳ್ಳು! ಅಲ್ಲಿದ್ದ 2-3 ದಿನಗಳಲ್ಲಿ ಅಕ್ಕಪಕ್ಕದವರೆಲ್ಲ ಪ್ರತ್ಯಕ್ಷವಾಗಿ ಕಂಡದ್ದನ್ನು ಹೇಳಿದ್ದೆಲ್ಲ ಸುಳ್ಳೇ?”
“ಅದೆಲ್ಲ ನನಗೆ ಬೇಕಾಗಿಲ್ಲ! ಊರಿನವರ ಹೊಲಸು ಮಾತು ಕಟ್ಟಿಕೊಂಡು ಏನಾಗಬೇಕಿದೆ? ಇನ್ನೊಂದು ಸಲ ಅವಳ ವಿರುದ್ಧ ಕೆಟ್ಟ ಮಾತನಾಡಿದೆಯೋ ನಾನು ಮಹಾ ಕೆಟ್ಟವಳಾಗಬೇಕಾಗುತ್ತೆ!”
ಅವರಿಬ್ಬರ ನಿಲ್ಲದ ಜಗಳ ಕಂಡು ನಮಗೆಲ್ಲ ಹೆದರಿಕೆ ಆಗಿತ್ತು. ಆದರೆ ಅಣ್ಣ ತನ್ನ ಹಠ ಬಿಟ್ಟರೆ ತಾನೇ?
“ನಿನಗೆ ನಿನ್ನ ತಂಗಿ ದೊಡ್ಡ ದೇವತೆ ಇರಬಹುದಮ್ಮ…. ಆದರೆ ನನಗಲ್ಲ…..”
ಮಾತು ಬೆಳೆಸುವ ಬದಲು ಅಣ್ಣ ಕಾಲು ಅಪ್ಪಳಿಸುತ್ತಾ ಅಲ್ಲಿಂದ ಹೊರಗೆ ಹೊರಟುಹೋದ. ಅಂದು ಒಂದೇ ದಿನಕ್ಕೆ ಆ ಜಗಳ ಮುಗಿಯುವ ಹಾಗಿರಲಿಲ್ಲ. ಅಮ್ಮ ಅವನಿಗೆ ಮತ್ತೆ ಮತ್ತೆ ತಿಳಿಹೇಳಲು ಯತ್ನಿಸಿದರು. ಆದರೆ ಲಾಭ ಆಗಲಿಲ್ಲ. ಪ್ರತಿ ಸಲ ಅವನದು ಒಂದೇ ರಾಗ.
“ಸಾಕು ಬಿಡಮ್ಮ. ಈ ನಿನ್ನ ಒಣ ಸಲಹೆಗಳು. ಈಗಲೇ ನನ್ನ ಜೊತೆ ಮಥುರಾಗೆ ನಡಿ. ಆ ಬೃಂದಾವನದಲ್ಲಿ ಯಾರು ಯಾರು ಏನೇನು ಹೇಳುತ್ತಾರೋ ನೀನೇ ಪ್ರತ್ಯಕ್ಷ ಕೇಳುವೆಯಂತೆ….. ಆಗ ನಿನಗೇ ಗೊತ್ತಾಗುತ್ತೆ.”
ಆಕಸ್ಮಿಕವಾಗಿ ಆಗ ಅಲ್ಲಿಂದ ಆಂಟಿಯ ಫೋನ್ ಬಂತು. ಅಮ್ಮ ಹೀಗೆ ಹೀಗೆ ಅಂತ ಹೇಳಿದಾಗ, ಚಿಕ್ಕಮ್ಮ ಜೋರಾಗಿ ಅಳುತ್ತಾ, “ನನ್ನನ್ನು ಹಸು ಅಟ್ಟುವ ಹಾಗೆ ಇಲ್ಲಿಗೆ ಕಳುಹಿಸುವಾಗ ಯಾರಿಗೂ ಮುಂದೆ ನನ್ನ ಗತಿ ಏನಾಗಬಹುದೆಂಬ ಚಿಂತೆ ಇರಲಿಲ್ಲ. ಆಗ ಈ ಜನ, ಸಮಾಜ ಎಲ್ಲಾ ಎಲ್ಲಿತ್ತು? ನನ್ನ ಕುರಿತು ಈ ನಿರ್ಧಾರ ಸಮಾಜದ್ದೇ ಆಗಿತ್ತು. ಆಗ ಎಷ್ಟು ಜನರಿದ್ದರೋ ತಲೆಗೊಂದು ಮಾತು ಹೇಳಿ ತಮ್ಮ ಕೈ ತೊಳೆದುಕೊಂಡರು. ಒಬ್ಬಂಟಿ ಹೆಂಗಸು….. ಈ ಅಪರಿಚಿತ ನರಕಕ್ಕೆ ಬಂದು ಏನು ತಾನೇ ಸಹಿಸಲಿಲ್ಲ ನಾನು? ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಿದ್ದಕ್ಕೆ ಇನ್ನೂ ಜೀವಂತವಾಗಿ ಬದುಕಿದ್ದೀನಿ!”
“ಛೇ….ಛೇ…..! ಈ ಬಾಳು ಬಾಳುವುದಕ್ಕಿಂತ ಸಾವೇ ಮೇಲು ಕಣೆ!”
“ಸತ್ತು ಹೋಗುವುದು ಅನ್ನುವುದು ಅಷ್ಟು ಸುಲಭವೇನಕ್ಕಾ?”
ಸ್ವಲ್ಪ ಹೊತ್ತು ಇಬ್ಬರೂ ಮಾತನಾಡಲಿಲ್ಲ. ನಂತರ ಚಿಕ್ಕಮ್ಮ ತಾವೇ, “ಅಕ್ಕಾ, ನನ್ನದು ಕಳೆದುಹೋದ ಕಥೆ. ನನ್ನ ಸಲುವಾಗಿ ಮನೆಯಲ್ಲಿ ಯಾರೂ ಮನಸ್ತಾಪ, ಜಗಳ ಮಾಡಿಕೊಳ್ಳುವುದು ಬೇಡ. ನನ್ನನ್ನು ನೋಡಲು ಯಾರೂ ಬರುವುದೂ ಬೇಡ. ನೀವೆಲ್ಲ ಚೆನ್ನಾಗಿದ್ದರೆ ನನಗಷ್ಟೇ ಸಾಕು…..”
“ಆದರೆ….. ನಿನ್ನ ನೋಡದೆ ಹೇಗಿರುವುದು?”
“ನನ್ನ ಮೇಲೆ ಆಣೆ ಅಕ್ಕಾ…. ಋಣ ಹರಿಯಿತು, ಅಂದುಕೋ!”
ತಂಗಿಯ ಹೃದಯ ಎಷ್ಟು ಛಿದ್ರ ಆಗಿರಬಹುದು ಎಂದು ಅಮ್ಮ ಮತ್ತೆ ಮಾತು ಮುಂದುವರಿಸಲಿಲ್ಲ. ಸಂಬಂಧ ತಪ್ಪಿಹೋಗಿ ಸಂಕಟ ಮಾತ್ರ ಉಳಿಯಿತು. ವಾರ, ತಿಂಗಳು, ವರ್ಷಗಳೇ ಕಳೆದರೂ ಅಕ್ಕಾ ತಂಗಿ ಮತ್ತೆ ಫೋನ್ ಮಾಡಿಕೊಳ್ಳಲೇ ಇಲ್ಲ.
ಹೀಗೆ ಇರುವಾಗ ಬೇರಾರದೋ ಫೋನ್ ಕರೆಯಿಂದ ಚಿಕ್ಕಮ್ಮನಿಗೆ ಬಹಳ ಸೀರಿಯಸ್ ಆಗಿದೆ, ಅಲ್ಲಿಂದ ದೆಹಲಿಯ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಯಿತು. ಆಗ ಅಮ್ಮನಿಗಂತೂ ತಡೆಯಲಾಗಲಿಲ್ಲ. ಹೇಗಾದರೂ ಒಮ್ಮೆ ತಂಗಿಯನ್ನು ಭೇಟಿ ಮಾಡಿಸು ಎಂದು ಅಣ್ಣನನ್ನು ಕೇಳಿಕೊಂಡಳು. ಅಷ್ಟು ಹೊತ್ತಿಗೆ ಮನಸ್ಸು ಸರಿಪಡಿಸಿಕೊಂಡಿದ್ದ ಅಣ್ಣ, ವಯಸ್ಸಾದ ತಾಯಿಯ ಮಾತಿಗೆ ಬೇಡ ಎನ್ನದೆ ದೆಹಲಿಗೆ ಕರೆದೊಯ್ಯಲು ಸಿದ್ಧನಾದ. ಅಕ್ಕಾ ತಂಗಿ ಇಬ್ಬರೂ ಭೇಟಿಯಾಗಿ ಬಹಳ ಅತ್ತುಕೊಂಡರು, ಚಿಕ್ಕಮ್ಮನಿಗೆ ಬ್ಲಡ್ ಕ್ಯಾನ್ಸರ್.
ಅಮ್ಮನಿಗಂತೂ ವಿಷಯ ಅರ್ಥವಾಗಿ ಜೀವ ಹಿಂಡಿಹೋಯಿತು. ಆಗ ಕಮಲಾ ಆಂಟಿ ಕೋಣೆಯಲ್ಲಿದ್ದ ನರ್ಸ್‌ಗೆ 5 ನಿಮಿಷ ಹೊರಗಿರುವಂತೆ ಕಳುಹಿಸಿದರು.
“ಅಕ್ಕಾ….. ಏನು ಕೇಳಬೇಕು ಅಂತಿದ್ದೀಯಾ?”
ಮಾತನಾಡಲು ಅಮ್ಮನ ಅಳು ನಿಂತರೆ ತಾನೇ? ಚಿಕ್ಕಮ್ಮ ಹೇಗೋ ಮಾಡಿ ಎದ್ದು ಕೂರಲು ನೋಡಿದರು. ಆದರೆ ಆ ಜರ್ಜರಿತ ದೇಹ ಅದಕ್ಕೆ ಒಪ್ಪಲಿಲ್ಲ. ಅಣ್ಣ ಕೋಣೆಯಲ್ಲಿ ದೂರ ನಿಂತು ಎಲ್ಲಾ ನೋಡುತ್ತಿದ್ದ. ಆಗ ಅವನು ಮುಂದೆ ಬಂದು, 2 ದಿಂಬುಗಳ ಆಸರೆ ನೀಡಿ ಚಿಕ್ಕಮ್ಮ ಒರಗಿ ಮಾತನಾಡಲು ಸಹಕರಿಸಿದ.
ನಿಧಾನವಾಗಿ ಚಿಕ್ಕಮ್ಮ ಮೆಲುದನಿಯಲ್ಲಿ ಹೇಳತೊಡಗಿದರು, “ವರುಣ್, ಇಲ್ಲೇ ಕೂರು. ಈ ಚಿಕ್ಕಮ್ಮನ ಮೇಲೆ ಇನ್ನೂ ಕೋಪ ಹೋಗಿಲ್ಲವೇ? ಅಕ್ಕನ ಎಲ್ಲಾ ಮಾತುಗಳಿಗೆ ನಾನಿಂದು ಉತ್ತರ ಹೇಳಲೇಬೇಕು. ನಾಳೆಗೆ ಇರುತ್ತೇನೋ ಇಲ್ಲವೇ….. ವರುಣ್ ಅಂದು ಆಡಿದ ಮಾತುಗಳಲ್ಲಿ ಸತ್ಯಾಂಶ ಎಷ್ಟಿದೆ ಎಂದು ನೀನು ತಿಳಿಯಬೇಕಲ್ಲವೇ ಅಕ್ಕಾ….” ಅವರ ಉಸಿರು ಸಿಕ್ಕಿಕೊಳ್ಳುತ್ತಿತ್ತು.
“ಈಗ ಅದೆಲ್ಲ ಏನೂ ಬೇಡ ಬಿಡು….. ನೀನು ಹುಷಾರಾದರೆ ಅಷ್ಟೇ ಸಾಕು,” ಅಮ್ಮ ಗದ್ಗದಿಸಿದಳು.
ಚಿಕ್ಕಮ್ಮ ಮುಂದುವರಿಸಿದರು, “ಒಂಟಿ ಹೆಣ್ಣಿನ ಕಷ್ಟ ಅಷ್ಟಿಷ್ಟಲ್ಲ. ಹೌದು, ನೀನಂದುಕೊಂಡಂತೆ ನಾನು ಉಳಿದೆಲ್ಲ ಬಿಡು….. ಇಲ್ಲಿನ ಕಹಿಸತ್ಯ ಎಂದರೆ ಮಾನ ಮರ್ಯಾದೆ, ಶೀಲ ಇತ್ಯಾದಿ ಶಬ್ದಗಳು ಕೇವಲ ಹೆಣ್ಣನ್ನಷ್ಟೇ ಕಟ್ಟಿಹಾಕಲು ಪೋಣಿಸಿದಂತಿವೆ. ಹೆಣ್ಣಿನ ಶೋಷಣೆಯ ತೀವ್ರತರ ಪದಗಳಿವೆ, ಎಂದೂ ಈಟಿಯಂತೆ ಚುಚ್ಚುವಂಥವು!
“ಇವತ್ತಿಗೂ ಸಹ ನಾನು ಈ ಕಪೋಲಕಲ್ಪಿತ ಶೀಲದ ಬಂಧನದಿಂದ ಬಿಡಿಸಿಕೊಳ್ಳಲು ಆಗಿಲ್ಲ. ನಾನು ಅಲ್ಲಿ ಊರು ಬಿಟ್ಟು ಹೊರಡುವಾಗ ಯಾರೂ ನನ್ನನ್ನು ತಮ್ಮವಳು ಎಂದು ಹಕ್ಕಿನಿಂದ ಉಳಿಸಿಕೊಳ್ಳಲಿಲ್ಲ. ನಾವು ನಿನ್ನ ಪಾಲಿಗೆ ಸತ್ತಿಲ್ಲ, ನೀನು ಏಕೆ ಕಂಡು ಕೇಳರಿಯದ ಆ ದೂರದೂರಿಗೆ ಹೋಗಬೇಕು? ಎನ್ನಲಿಲ್ಲ. ಯಾರೂ ತಮ್ಮ ಮನೆಯ ಬಾಗಿಲು ತೆರೆದು ನನಗೆ ಆಸರೆ ನೀಡಲಿಲ್ಲ. ನಾನು ಅವರೆಲ್ಲರಿಗೂ ಬಿಲ್‌ಕುಲ್ ಪರಕೀಯಳಾಗಿದ್ದೆ. ನಾನು ಹೆಣ್ಣಾಗಿ ಹುಟ್ಟಿದ್ದೇ ಇದಕ್ಕೆ ಕಾರಣವಾಗಿತ್ತು.”
ಸ್ವಲ್ಪ ಹೊತ್ತು ಬಿಕ್ಕಳಿಸಿ ಮತ್ತೆ ಮುಂದುವರಿಸಿದರು, “ಇವತ್ತು ಎಲ್ಲರೂ ನನ್ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಯಾವ ಸಮಾಜ, ಯಾವ ಜನ ನನ್ನನ್ನು ಈ ಕೂಪಕ್ಕೆ ನೂಕಿದರೋ ಅವರೇ ನನ್ನ ಬೆನ್ನ ಹಿಂದೆ ಆಡಿಕೊಂಡು ನಗುತ್ತಿದ್ದಾರೆ. ಒಬ್ಬ ಹೆಣ್ಣಿನ ಕಡೆ ನೀನು ನಡತೆಗೆಟ್ಟವಳು ಎಂದು ಒಮ್ಮೆ ಲೇಬಲ್ ತೋರಿಸಿಬಿಟ್ಟರಾಯಿತು, ಅವಳು ಅದರಿಂದ ಎಂದೂ ಹೊರಬರಲಾರಳು. ದೈಹಿಕವಾಗಿ, ಮಾನಸಿಕವಾಗಿ ಅವಳು ಈ ಶೋಷಣೆಯ ಕೂರಲುಗಿನಿಂದ ಜರ್ಜರಿತಳಾಗುತ್ತಾಳೆ.
“ಹೌದು, ಈ ಆಶ್ರಮದಲ್ಲಿ ಎಲ್ಲ ನಡೆಯುತ್ತದೆ. ಆದರೆ ನನ್ನ ಪಾಲಿಗದು ವೇಶ್ಯಾಲಯ ಅಲ್ಲ. ಈ ಆಶ್ರಮ ನನ್ನಂಥ ಎಷ್ಟೋ ಅಬಲೆಯರಿಗೆ ಆಶ್ರಯ ನೀಡಿದೆ. ನಾನು ಆ ಹಿರಿಯರನ್ನು ಗುರುಗಳೆಂದೇ ಸ್ವೀಕರಿಸಿದ್ದೇನೆ. ಅವರೇ ನನಗೆ ಎಲ್ಲಾ! ಎಷ್ಟೋ ಸಲ ಅತಿ ನಿಕಟತೆ ಇಬ್ಬರು ವ್ಯಕ್ತಿಗಳ ನಡುವೆ ಭಾವನಾತ್ಮಕತೆ ಅಧಿಕಪಡಿಸಿ, ದೈಹಿಕ ಸಂಬಂಧ ಏರ್ಪಡುವಂತೆ ಮಾಡುತ್ತದೆ. ಅಂದಹಾಗೆ ನನ್ನವರು ಅನಿಸಿಕೊಂಡವರೇ ಬೆನ್ನು ತಿರುಗಿಸಿದ್ದರು. ಹಾಗಿರುವಾಗ ಬಾಳಿ ಬದುಕಲು ಮತ್ತೆಲ್ಲಿಗೆ ಹೋಗಲಿ? ಅತ್ತೆಮನೆಯವರು ಸಂಬಂಧ ಬೇಡ ಎಂದು ಕೊಡವಿಕೊಂಡರೆ, ತವರಿನವರು ಮನೆ ಬಿಟ್ಟು ತೊಲಗಲಿ ಎಂದೇ ಕಾಯುತ್ತಿದ್ದರು. ನನ್ನಂಥ ಹೊರೆಯನ್ನು ಯಾರು ಇರಿಸಿಕೊಳ್ಳಲು ಬಯಸುತ್ತಾರೆ? ಅಂಥ ಸಂದರ್ಭದಲ್ಲಿ ಆ ಗುರೂಜಿ ನನಗೆ ಆಶ್ರಯ ನೀಡಿದರು, ಆಸರೆಯಾದರು.
“ಸಹಾಯ ನೀಡಿದವರೇ ನನಗೆ ಸರ್ವಸ್ವ ಆದರು. ಈ ಆಶ್ರಮದಲ್ಲಿ ನನ್ನಂಥ ಎಷ್ಟೋ ಅಸಹಾಯಕಿಯರಿಗೆ ರಕ್ಷಣೆ ದೊರಕಿದೆ. ಗಂಡನನ್ನು ಕಳೆದುಕೊಂಡ ಹೆಂಗಸರಿಗೆ ಇವರು ಇರುವ ಬದಲು ಸತ್ತರೆ ವಾಸಿ ಎಂದು ಶಾಪ ಹಾಕಿದರೇ ಜಾಸ್ತಿ, ಇಂಥವಳು ಬದುಕಿ ಏನು ಮಾಡಬೇಕಿದೆ….. ಎನ್ನುತ್ತಾರೆ. ಆದರೆ…. ನನ್ನಲ್ಲಿ ನನ್ನ ಪ್ರಾಣ ತ್ಯಾಗ ಮಾಡಿಕೊಂಡು ಬಿಡುವಷ್ಟು ಶಕ್ತಿ ಇರಲಿಲ್ಲ. ಹಾಳಾಗಿ ಹೋಗಲಿ, ಸಾಯಲಿ ಎಂದು ಶಾಪ ಹಾಕುವುದು ಸುಲಭ. ಅದನ್ನು ಕಾರ್ಯತಃ ಮಾಡಿ ತೋರಿಸುವುದು ಬಲು ಕಷ್ಟ. ಪ್ರತಿಯೊಬ್ಬರೂ ಇದನ್ನು ತಮ್ಮ ಅಂತರಂಗ ಕೆದಕಿ ತಿಳಿದುಕೊಳ್ಳಲಿ,” ಎಂದು ಹೇಳುತ್ತಲೇ ಬಿಕ್ಕಳಿಸಿದರು.
ಸ್ವಲ್ಪ ಹೊತ್ತು ಬಿಟ್ಟು ಮುಂದುವರಿಸಿದರು, “ಎಲ್ಲರಿಗೂ ಸತ್ಯ ತಿಳಿಯಬೇಕು ಎಂಬ ಕುತೂಹಲ ಇದ್ದೇ ಇರುತ್ತದೆ. ಅವರ ಈ ಹಸಿ ತಣಿಯುವವರೆಗೂ ಅದರ ಮೂಲ ಕೆದಕದೆ ಬಿಡುವುದಿಲ್ಲ. ಆದರೆ ಆ ವಾಸ್ತವ ಎದುರಾದಾಗ ಅದನ್ನು ಜೀರ್ಣಿಸಿಕೊಳ್ಳುವುದು ಮಹಾ ಕಷ್ಟ. ಒಬ್ಬಂಟಿ ಹೆಂಗಸಿಗೆ ಸಾವಿರಾರು ಹಂತಗಳ ಕಷ್ಟಕೋಟಲೆಗಳನ್ನು ಎದುರಿಸಿ ಬದುಕಿ ಉಳಿಯಬೇಕಾಗುತ್ತದೆ. ಆ ಕಾರಣದಿಂದಲೇ ಅವಳು ಹಲವು ಅತ್ಯಾಚಾರ, ಶೋಷಣೆ, ದೌರ್ಜನ್ಯಗಳನ್ನು ಮೂಕಳಾಗಿ ಸಹಿಸಬೇಕಾಗುತ್ತದೆ.
“ಪತಿಯ ಆಸರೆಯಿಲ್ಲದ ಹೆಣ್ಣು ಸಮಾಜದಲ್ಲಿ ಹೇಗೆ ಮುಂದುವರಿದರೂ ಅವಳಿಗೆ ನಡತೆಗೆಟ್ಟವಳು ಎಂಬ ಪಟ್ಟ ತಪ್ಪಿದ್ದಲ್ಲ. ಈ ಹಾಳಾದ ಪುರುಷ ಪ್ರಧಾನ ಸಮಾಜದಲ್ಲಿ ಒಬ್ಬ ಹೆಣ್ಣನ್ನು ಕೇವಲ ಅವಳ ದೇಹದಿಂದ ಮಾತ್ರವಲ್ಲದೆ, ಅವಳೂ ಒಬ್ಬ ಮನುಷ್ಯಳು ಎಂದು ಯಾರು ತಾನೇ ಗುರುತಿಸುತ್ತಾರೆ? ಈ ಸಮಾಜದಲ್ಲಿ ಉಡುಗೆ ಧರಿಸಿರುವ ಹೆಣ್ಣನ್ನು ಎಲ್ಲರೆದುರೇ ಕಣ್ಣಿನ ದೃಷ್ಟಿಯಲ್ಲೇ ನಗ್ನಳಾಗಿಸಿ ವಿಕೃತ ಆನಂದ ಪಡೆಯುವ ಕ್ರೂರಿಗಳಿದ್ದಾರೆ. ನಗ್ನತೆ, ಶೀಲ, ಶಾಲೀನತೆಗಳ ಮಧ್ಯೆ ಅತಿ ಸಣ್ಣ ರೇಖೆ ಗೀಚಿ, ಈ ಸಮಾಜವೇ ಅದನ್ನು ಬೇರೆ ಮಾಡುತ್ತದೆ, ಹಾಳು ಮಾಡುತ್ತದೆ. ಪ್ರತಿಯೊಬ್ಬ ಶೋಷಿತೆ ಈ ಕೆಲವರಲ್ಲಿ ಸಿಲುಕಿ ಒದ್ದಾಡುತ್ತಾಳೆ. ಹೆಣ್ಣಿಗೆ ಮುಕ್ತಿ ಎಂದರೆ ಕೇವಲ ಅವಳ ದೇಹಕ್ಕೆ ನೀಡುವ ಮುಕ್ತಿಯೇ? ನನ್ನ ಜೀವನಕ್ಕೆ ಅರ್ಥವಾದರೂ ಏನು? ನನ್ನ ಹಿಂದೆ ಮುಂದೆ ಯಾರೂ ಇಲ್ಲ. ಇಂಥ ನಾನು ಎಲ್ಲಿ ಹೇಗೆ ಸತ್ತು ಮುಕ್ತಿ ಹೊಂದಿದರೇನು?”
ಆ ದಿನ ಅಕ್ಕತಂಗಿಯರ ಕರುಣಾಜನಕ ಸ್ಥಿತಿ ಕಂಡು ಅಣ್ಣನಿಗೂ ಚಿಕ್ಕಮ್ಮನನ್ನು ನಿಂದಿಸಬಾರದಿತ್ತು ಎಂದು ಬಹಳ ಪಶ್ಚಾತ್ತಾಪವಾಯಿತು. ಅಮ್ಮನ ಬಳಿ, ಚಿಕ್ಕಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಅಮ್ಮನ ಬಳಿ ಎಲ್ಲಾ ಹೇಳಿಕೊಂಡು ಹಗುರಳಾದ ಚಿಕ್ಕಮ್ಮ ಅಂದೇ ಈ ಇಹಲೋಕದಿಂದ ಮುಕ್ತಿ ಹೊಂದ್ದಿಳು.