`ಕೊರೊನಾ’ ಹೆಸರಿನ ಮಹಾಘಾತುಕ ರೋಗ ಚೀನಾದಲ್ಲಿ ಜನ್ಮತಳೆದು, ವಿಶ್ವದ ಬಹುತೇಕ ಎಲ್ಲ ದೇಶಗಳನ್ನು ಕಂಗೆಡಿಸಿಬಿಟ್ಟಿತು.

ಚೀನಾ, ಇಟಲಿ, ಸ್ಪೇನ್‌, ಅಮೆರಿಕ, ಜರ್ಮನಿ ಮುಂತಾದ ದೇಶದಲ್ಲಿ ಕೊರೊನಾ ರುದ್ರ ನರ್ತನವನ್ನೇ ಮಾಡಿತು. ಭಾರತದಲ್ಲೂ ಅದು ತನ್ನ ಕಬಂಧ ಬಾಹುಗಳನ್ನು ಚಾಚಲು ಆರಂಭಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಲಾಕ್‌ ಡೌನ್‌ ಮಾಡುವ ಮೂಲಕ ಅದರ ಪ್ರಸರಣ ತಡೆಯಲು ಪ್ರಯತ್ನ ಮಾಡಿತು.

ಲಾಕ್‌ ಡೌನ್‌ ನಂತರ ಅಂದರೆ ದೈನಂದಿನ ಚಟುವಟಿಕೆಗಳು ಶುರುವಾದವು ಬಳಿಕ ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮ್ಮ ಆಸುಪಾಸಿನ ಪರಿಸರ, ಮನೆಗಳನ್ನು ನೈರ್ಮಲ್ಯದಿಂದ ಇಟ್ಟುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಮನೆಯವರನ್ನೆಲ್ಲ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಬಾಹ್ಯ ಪರಿಸರದ ಸ್ವಚ್ಛತೆ ಹೇಗೆ?

ಕೊರೊನಾ ಹಾಳಿ ಶುರವಾದ ಬಳಿಕ ಜನರಲ್ಲಿ ಹಿಂದೆಂದೂ ಇಲ್ಲದಷ್ಟು ಸ್ವಚ್ಛತೆ ಹಾಗೂ ಆರೋಗ್ಯದ ಬಗೆಗಿನ ಕಾಳಜಿ ಬಂದುಬಿಟ್ಟಿದೆ. ಇದು ಒಳ್ಳೆಯ ಬೆಳವಣಿಗೆ ಕೂಡ. ಕಾಲರಾ, ಮಲೇರಿಯಾ ಮುಂತಾದ ರೋಗಗಳ ಉಪಟಳವನ್ನು ತಡೆಯಲು ಇದು ನೆರವಾಗುತ್ತದೆ. ನಾವು ಬಾಹ್ಯ ಸ್ವಚ್ಛತೆ ಹೇಗೆ ಕೈಗೊಳ್ಳಬೇಕು ಎನ್ನುವುದನ್ನು ಗಮನಿಸಿ :

ಮನೆ ಮುಂದೆ ಚರಂಡಿ ಇದ್ದರೆ, ಅಲ್ಲಿ ಸರಾಗವಾಗಿ ನೀರು ಹರಿದುಹೋಗುವಂತೆ ನೋಡಿಕೊಳ್ಳಬೇಕು. ನೀರು ಒಂದೇ ಕಡೆ ನಿಂತರೆ ಪಾಚಿ ಕಟ್ಟಿ ಸೊಳ್ಳೆಗಳ ತಾಣವಾಗಬಹುದು.

ನಿಮ್ಮ ಮನೆ ಮಂದೆ ಅಥವಾ ಮಹಡಿ ಮೇಲೆ ತ್ಯಾಜ್ಯ ವಸ್ತುಗಳು ಹಾಗೆಯೇ ಇದ್ದರೆ ಅದರಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳು ನಿಮಗೆ ತೊಂದರೆ ಕೊಡಬಹುದು. ಹಾಗಾಗಿ ಬೇಡದ ವಸ್ತುಗಳನ್ನು ಶೀಘ್ರ ವಿಲೇವಾರಿ ಮಾಡಿಬಿಡಿ.

ನಿಮ್ಮ ಮನೆ ಮುಂದೆ ಮರವಿದ್ದರೆ ಅದರ ಎಲೆಗಳು ಬಿದ್ದು ಕಸ ಆಗುತ್ತಿದ್ದರೆ, ಅದನ್ನು ಸಂಗ್ರಹಿಸಿ ಆಗಾಗ ವಿಲೇವಾರಿ ಮಾಡುತ್ತಾ ಇರಿ. ಆದರೆ ಯಾವುದೇ ಕಾರಣಕ್ಕೂ ಕಸದ ಗುಡ್ಡೆಗೆ ಬೆಂಕಿ ಹಚ್ಚಬೇಡಿ. ಇದರಿಂದ ನಿಮ್ಮ ಮನೆಯ ಮಕ್ಕಳಿಗೆ ಹಾಗೂ ವೃದ್ಧರ ಉಸಿರಾಟಕ್ಕೆ ಸಮಸ್ಯೆ ಉಂಟಾಗಬಹುದು. ಅದು ಅಕ್ಕಪಕ್ಕದವರಿಗೂ ತೊಂದರೆ ಕೊಡಬಹುದು

ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಬಹುದು.

ಹಾಲು, ತರಕಾರಿ, ಹಣ್ಣು, ದಿನಸಿ ಮುಂತಾದವುಗಳ ಖರೀದಿಗೆ ಹೊರಗಡೆ ಹೋದಾಗ ಮುಖಕ್ಕೆ ಮಾಸ್ಕ್ ಧರಿಸಿ ಹೋಗಿ. ಅಲ್ಲಿ ವ್ಯರ್ಥ ಮಾತುಕತೆಗೆ ಅವಕಾಶ ಕೊಡದೇ ಬೇಗ ಖರೀದಿ ಮುಗಿಸಿಕೊಂಡು ಬನ್ನಿ. ರೋಗಾಣುಗಳು ಯಾವಾಗ, ಯಾರಿಂದ, ಹೇಗೆ ಪಸರಿಸಬಹುದೊ ಹೇಳಲು ಆಗದು. ಆದಷ್ಟೂ ಜಾಗೃತಿ ವಹಿಸಿ.

ಹಣ್ಣು ತರಕಾರಿಗಳನ್ನು ಮನೆಗೆ ತಂದ ಬಳಿಕ ಕಲ್ಲುಪ್ಪು ಹಾಕಿದ ನೀರಲ್ಲಿ ಸ್ವಚ್ಛಗೊಳಿಸಿಯೇ ಒಳಗೆ ತೆಗೆದುಕೊಂಡು ಹೋಗಿ. ಅದೇ ರೀತಿ ಹಾಲಿನ ಪ್ಯಾಕೆಟ್‌ಗಳನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು.

ಮನೆಯಿಂದ ಹೊರಗೆ ಯಾವುದಾದರೂ ಕಾರ್ಯಕ್ರಮ ಅಂದರೆ ನಿಶ್ಚಿತಾರ್ಥ, ಮದುವೆ, ನಾಮಕರಣ, ಬರ್ಥ್‌ ಡೇ ಮುಂತಾದವುಗಳಲ್ಲಿ ಭಾಗವಹಿಸುವಿಕೆ ಅನಿವಾರ್ಯವಿದ್ದರಷ್ಟೇ ಹೋಗಿ. ಅದರಲ್ಲೂ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಬಹಳ ಎಚ್ಚರ ವಹಿಸಿ.

ಹೊರಗಿನಿಂದ ಮನೆಗೆ ಬಂದಾಗ

ನಾವು ದಿನ ಕೆಲಸ ಕಾರ್ಯಗಳ ನಿಮಿತ್ತ ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಕಾರ್ಯಸ್ಥಳದಲ್ಲಿ ಸ್ವಚ್ಛತೆ ಕೈಗೊಳ್ಳುವುದು ಅತ್ಯವಶ್ಯಕ. ಅಲ್ಲಿಂದ ಮನೆಗೆ ಬಂದ ನಂತರ ಕೂಡ ಸ್ವಚ್ಛತೆಗೆ ಅಷ್ಟೇ ಆದ್ಯತೆ ಕೊಡಬೇಕು.

ಆಫೀಸ್‌ನಿಂದ ಮನೆಗೆ ಬರುವಾಗ ಬಸ್‌, ಮೆಟ್ರೋ ರೈಲು ಮುಂತಾದ ಸಾರ್ಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಬೇರೆಯವರು ಕೆಮ್ಮುವಾಗ, ಸೀನುವಾಗ ಅವರಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ನೀವು ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರವನ್ನು ಅಡ್ಡವಾಗಿಟ್ಟುಕೊಳ್ಳಬೇಕು.

ಎಟಿಎಂ ಕೇಂದ್ರಗಳಿಗೆ ಹೋಗುವಾಗ ಒಂದು ಟಿಶ್ಯೂ ಪೇಪರ್‌ ಇಟ್ಟುಕೊಂಡಿರಿ. ಅದರಿಂದ ಅಲ್ಲಿರುವ ಗುಂಡಿಗಳನ್ನು ಒರೆಸಿದ ಬಳಿಕವೇ ನಿಮ್ಮ ಬೆರಳುಗಳಿಗೆ ಕೆಲಸ ಕೊಡಿ. ಸ್ವಲ್ಪ ನಿರ್ಲಕ್ಷ್ಯ ಕೂಡ ನಿಮಗೆ ಅಪಾಯ ತರಬಹುದು.

ಕೆಲಸದಿಂದ ಮನೆಗೆ ಬಂದ ಬಳಿಕ ಧರಿಸಿದ ಬಟ್ಟೆಗಳನ್ನು ತೆಗೆದು ಗಾಳಿಗೆ ಹರಡಿ, ಇಲ್ಲವೇ ತಕ್ಷಣ ನೀರಲ್ಲಿ ಹಾಕಿ ನೆನೆಸಬೇಕು. ಮುಖ, ಕೈಕಾಲು ಸ್ವಚ್ಛಗೊಳಿಸಿಯೇ ಒಳಗೆ ಪ್ರವೇಶಿಸಬೇಕು.

ಮನೆಯಲ್ಲಿ ಚಿಕ್ಕ ಮಗುವಿದ್ದರೆ ಹೊರಗಿನಿಂದ ಬಂದು ನೇರವಾಗಿ ಅದರ ಕೆನ್ನೆ ಮುಟ್ಟುವುದಾಗಲಿ, ಕೈಗೆತ್ತಿಕೊಳ್ಳುವುದಾಗಲಿ ಮಾಡಬಾರದು. ನಿಮ್ಮ ಕೈಯಲ್ಲಿ ರೋಗಾಣುಗಳು ಇದ್ದರೆ ಅವು ಮಗುವನ್ನು ಸೋಂಕಿಗೀಡು ಮಾಡಬಹುದು. ಹಾಗಾಗಿ ಬಹಳ ಎಚ್ಚರದಿಂದಿರಿ.

ಮಕ್ಕಳು ಹೊರಗೆ ಆಟವಾಡಿ ಬಂದ ನಂತರ ಅವರಿಗೂ ಕೈಕಾಲು, ಮುಖ ತೊಳೆಯಲು ಹೇಳಿ. ನಂತರವೇ ಊಟತಿಂಡಿ ಕೊಡಬೇಕು. ಇದು ಅವರಲ್ಲಿ ಸ್ವಚ್ಛತೆಯ ಅಭ್ಯಾಸ ಮೂಡಿಸಲು ನೆರವಾಗುತ್ತದೆ.

ನೀವು ಮನೆಯ ಹೊರಗೆ ಬಟ್ಟೆ ಒಣ ಹಾಕುತ್ತಿದ್ದರೆ ಅವುಗಳ ಮೇಲೆ ಧೂಳು ಸೇರಿಕೊಳ್ಳುತ್ತದೆ. ಹಾಗಾಗಿ ಬಟ್ಟೆಯನ್ನು ಚೆನ್ನಾಗಿ ಝಾಡಿಸಿ ಒಳಗೆ ತನ್ನಿ.

ನಿಮ್ಮ ಮನೆಯ ಕಿಟಕಿಗಳಿಂದ ಒಳ್ಳೆಯ ಗಾಳಿ, ಬೆಳಕು ಬರಬೇಕು ನಿಜ. ಆದರೆ ಅದರ ಜೊತೆಗೆ ಧೂಳು ಹಾಗೂ ಸೊಳ್ಳೆ ಒಳಗೆ ಬರದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಅತ್ಯವಶ್ಯಕ. ಅದಕ್ಕಾಗಿ ಕಿಟಕಿಗೆ ಪಾರದರ್ಶಕ ಗಾಜು ಅಳವಡಿಸಿ, ಇಲ್ಲಿ ಸಣ್ಣ ರಂಧ್ರಗಳಿರುವ ಜಾಲರಿ ಅಳವಡಿಸಿ.

ಲಾಕ್‌ ಡೌನ್‌ ಅವಧಿ ಮುಗಿದುಹೋಯಿತು, ಇನ್ನೇನು ಅಪಾಯವಿಲ್ಲ ಎಂದು ಮೈಮರೆಯದಿರಿ. ಹಾಗಂತ ರೈಲು, ಬಸ್‌ಗಳಲ್ಲಿ ದೂರ ಪ್ರಯಾಣದ ಪ್ರವಾಸದ ಯೋಜನೆ ಹಾಕಿಕೊಳ್ಳದಿರಿ. ಮುಂದೆ ಹೋಗಲು ಬೇಕಾದಷ್ಟು ಅವಕಾಶಗಳಿವೆ. ಮೊದಲು ಆರೋಗ್ಯ ಕಾಳಜಿ. ಆ ಬಳಿಕವೇ ಪ್ರವಾಸ, ಮನರಂಜನೆ.

ಮನೆಯೊಳಗೆ ನೈರ್ಮಲ್ಯ ಕಾಪಾಡುವುದು ಹೇಗೆ?

ಮನೆಯಲ್ಲಿ ಕೂಡ ನಾವು ಬಹಳಷ್ಟು ಎಚ್ಚರಿಕೆ ವಹಿಸಬೇಕು.

ಅಡುಗೆಮನೆ ಹೊಗೆ ಮುಕ್ತವಾಗಿದ್ದರೆ ಅದೊಂದು ಆದರ್ಶ ಅಡುಗೆಮನೆ ಎನ್ನಬಹುದು. ಹೊಗೆ ಮಕ್ಕಳಿಗೆ ಮತ್ತು ವೃದ್ಧರಿಗೆ ಸಾಕಷ್ಟು ತೊಂದರೆ ತರುತ್ತದೆ.

ಕೊರೊನಾ ಸೇರಿದಂತೆ ಬಹಳಷ್ಟು ರೋಗಗಳ ರೋಗಾಣುಗಳು ನೇರವಾಗಿ ನಮ್ಮ ಗಂಟಲು ಮತ್ತು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತವೆ. ಹೀಗಾಗಿ ಕುಟುಂಬದ ಸದಸ್ಯರಿಗೆ ಬಿಸಿಬಿಸಿಯಾದ ಶ್ವಾಸಕೋಶ ಸ್ನೇಹಿ ಆಹಾರ ಪದಾರ್ಥಗಳನ್ನೇ ಸೇವಿಸಲು ಪ್ರೋತ್ಸಾಹಿಸಿ.

ಮಕ್ಕಳಿಗೆ ಉಗುರು ಕಚ್ಚುವ, ಬೆರಳು ಚೀಪುವ ಅಥವಾ ಮೂಗಿನಲ್ಲಿ ಬೆರಳು ಹಾಕುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಲು ತಿಳಿಹೇಳಿ.

ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಟೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವರನ್ನು ಪ್ರೋತ್ಸಾಹಿಸಿ.

ಮನೆಯಲ್ಲಿ ವಯಸ್ಸಾದವರಿದ್ದರೆ ಅವರ ಪಚನಕ್ಕೆ ಸೂಕ್ತವಾಗುವಂತಹ ಆಹಾರ ಪದಾರ್ಥಗಳನ್ನೇ ಮಾಡಿಕೊಡಿ.

ಮನೆಯಲ್ಲಿ ಗರ್ಭಿಣಿ, ಬಾಣಂತಿ ಇದ್ದರೆ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಬಾಹ್ಯ ಸಂಪರ್ಕದಿಂದ ಆದಷ್ಟು ದೂರ ಇರುವಂತೆ ನೋಡಿಕೊಳ್ಳಬೇಕು.

ಮನೆಯಲ್ಲಿ ಅನಾರೋಗ್ಯ ಪೀಡಿತರಿದ್ದರೆ ಅವರ ಜೊತೆ ಸೌಜನ್ಯದಿಂದ ವರ್ತಿಸಿ. ಅವರು ಬೇಗ ಗುಣಮುಖರಾಗಲು ಇದು ಬಹಳ ಸಹಾಯಕವಾಗುತ್ತದೆ.

ನೀವು ಬಳಸುವ ಮೊಬೈಲ್ ಫೋನ್‌ ಮೇಲಿನ ಧೂಳನ್ನು ಸ್ವಚ್ಛಗೊಳಿಸುವುದು ಕೂಡ ಇಂದಿನ ಅಗತ್ಯವಾಗಿದೆ. ಅದಕ್ಕಾಗಿ ನಯವಾದ ಬಟ್ಟೆ ಅಥವಾ ಟಿಶ್ಯೂ ಪೇಪರ್‌ ಸಹಾಯದಿಂದ ಸ್ಯಾನಿಟೈಸ್‌ ಮಾಡಿ.

ಜ್ವರ ಕೆಮ್ಮು ಮುಂತಾದ ಸಮಸ್ಯೆಗಳಿಗೆ ನೀವೇ ಸ್ವಯಂ ಔಷಧೋಪಚಾರ ಮಾಡಿಕೊಳ್ಳಬೇಡಿ. ವೈದ್ಯರ ಸಲಹೆ ಪಡೆದ ಬಳಿಕವೇ ಔಷಧಿ ಸೇವನೆ ಮಾಡಿ.

ನೀವು ಒಂದೇ ಕಡೆ ಕುಳಿತು ಕೆಲಸ ಮಾಡುವವರಾಗಿದ್ದರೆ ದೇಹಕ್ಕೆ ಒಂದಿಷ್ಟು ಬದಲಾವಣೆ ಅಗತ್ಯ. ಅಷ್ಟಿಷ್ಟು ವ್ಯಾಯಾಮ ಕೂಡ ಮಾಡಿ.

ಕೆಲಸ ಮಾಡಿ ಮಾಡಿ ಸುಸ್ತಾದಾಗ ದೇಹಕ್ಕೆ ವಿಶ್ರಾಂತಿ ಬೇಕು. ಅದಕ್ಕಾಗಿ ಸ್ವಲ್ಪ ನಿದ್ರೆ ಮಾಡಬೇಕೆನಿಸಿದರೆ ಮಾಡಿ. ಆದರೆ ಅದರಿಂದ ರಾತ್ರಿಯ ನಿಯಮಿತ ನಿದ್ರೆಗೆ ಅಡಚಣೆ ಉಂಟಾಗಬಾರದು.

ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ