ನೀವು ಯಾವುದೇ ಆಫೀಸ್‌ಗೆ ಹೋಗಿ ಗಮನಿಸಿದರೂ, ಯಾವ ಹೆಂಗಸರು ಉತ್ತಮ ರೀತಿಯಲ್ಲಿ ಡ್ರೆಸ್ ಅಪ್ ಮಾಡಿಕೊಂಡು ಬಂದಿರುತ್ತಾರೋ, ಕೆಲಸ ಮಾಡುವಲ್ಲಿ ಅವರ ಉತ್ಸಾಹ ಹಾಗೂ ಚಾರ್ಮ್ ಉತ್ತಮ ಮಟ್ಟದ್ದಾಗಿರುತ್ತದೆ. ಅವರು ಸಾಕಷ್ಟು ಕಾನ್ಛಿಡೆನ್ಸ್ ಹೊಂದಿರುತ್ತಾರೆ. ಇವರು ಥಟ್ ಅಂತ ಎಲ್ಲಕ್ಕೂ ಉತ್ತರ ನೀಡುವವರಾಗಿರುತ್ತಾರೆ, ಹಿಂಜರಿತ ಸಂಕೋಚ ಇರುವುದಿಲ್ಲ.
ಅದೇ ಸಾಧಾರಣ ವೇಷಭೂಷಣ ಧರಿಸಿ ಬಂದವರನ್ನು ಗಮನಿಸಿ, ಅವರುಗಳು ಆಫೀಸಿನ ಮೂಲೆ ಜಾಗ ಹಿಡಿದು, ತಲೆ ತಗ್ಗಿಸಿಕೊಂಡು ತಂತಮ್ಮ ಕೆಲಸಗಳನ್ನು ಬೇಗ ಬೇಗ ಮುಗಿಸುವ ಧಾವಂತದಲ್ಲಿರುತ್ತಾರೆ. ಇವರುಗಳು ಬೇರೆಯವರ ಜೊತೆ ಹೆಚ್ಚು ಬೆರೆಯುವುದೂ ಇಲ್ಲ, ಅಥವಾ ಹೆಚ್ಚಿಗೆ ಮಾತನಾಡುವುದೂ ಇಲ್ಲ. ಅಷ್ಟು ಮಾತ್ರವಲ್ಲ, ಲಂಚ್ ಟೈಮಿನಲ್ಲಿ ಒಂದು ಮೂಲೆ ಜಾಗ ಹಿಡಿದು ತಮ್ಮ ಪಾಡಿಗೆ ಟಿಫನ್ ಬಾಕ್ಸ್ ತೆರೆದು ಊಟ ಮಾಡುತ್ತಾರೆ. ಇಂಥ ಹೆಂಗಸರು ತಮ್ಮ ಕೆಲಸದಲ್ಲಿ ಚುರುಕಾಗಿದ್ದರೂ, ಎಲ್ಲರ ಜೊತೆ ಅಂಟಿಯೂ ಅಂಟದಂತಿರುತ್ತಾರೆ. ತಮ್ಮ ಸುತ್ತಲೂ ಒಂದು ಅದೃಶ್ಯ ಪರದೆ ನಿರ್ಮಿಸಿಕೊಂಡಿರುತ್ತಾರೆ.
ಅಸಲಿಗೆ ನಮ್ಮ ದೇಶದಲ್ಲಿ 30-35 ವರ್ಷ ತಲುಪಿದ ಹೆಂಗಸರು ತಮ್ಮ ಉಡುಗೆ ತೊಡುಗೆ ಕುರಿತು ಬಹಳ ನಿರ್ಲಕ್ಷ್ಯ ವಹಿಸುತ್ತಾರೆ, ಆದರೆ ಇದು ತಪ್ಪು. ಸಾಮಾನ್ಯವಾಗಿ 60ರವರೆಗಿನ ಮಹಿಳೆ ಸಹ ಫ್ಯಾಷನ್, ಆಧುನಿಕತೆ ಅನುಸರಿಸುತ್ತಾ ಜೀವನೋತ್ಸಾಹದಿಂದ ತುಂಬಿರಬೇಕು, ಇಂಥವರಿಗೇನೂ ಕೊರತೆ ಇಲ್ಲ. ಇವರುಗಳೂ ಸಹ ತುಟಿಗೆ ಲಿಪ್‌ಸ್ಟಿಕ್, ಹೈ ಹೀಲ್ಸ್, ಸುಂದರ ಪರ್ಸ್, ಕೂದಲಿಗೆ ಹೇರ್ ಡೈ, ಮುಖಕ್ಕೆ ಮೇಕಪ್ ಮಾಡಿಕೊಂಡು ಹೊಸ ಹುರುಪು ಗಳಿಸಬಹುದು.
ನೀವು ಉದ್ಯೋಗಸ್ಥ ವನಿತೆ ಆಗಿದ್ದರೆ, ಕೆಲಸದ ಜೊತೆ ಜೊತೆಗೆ, ನೀವು ನಿಮ್ಮ ವ್ಯಕ್ತಿತ್ವದ ಕಡೆಯೂ ಜಾಗೃತರಾಗಿರಬೇಕು. ಆಫೀಸ್‌ಎಂದರೆ ಕೇವಲ ಒಂದಿಷ್ಟು ಕೆಲಸ ಮುಗಿಸಿ ಬರುವ ಜಾಗ ಮಾತ್ರವಲ್ಲ, ನೀವು ಇಲ್ಲಿ ಬೇರೆ ಬೇರೆ ಜನರೊಂದಿಗೆ 8-10 ಗಂಟೆಗಳ ಕಾಲ ಕಳೆಯುತ್ತೀರಿ. ನೀವು ನೀಟಾಗಿ, ಡೀಸೆಂಟಾಗಿ ಡ್ರೆಸ್ ಮಾಡಿಕೊಂಡು ಆಫೀಸಿಗೆ ಬಂದರೆ, ನಿಮಗೆ ಗೌರವಾದರಗಳು ಸಿಗುವುದು ಮಾತ್ರವಲ್ಲ, ಕೆಲಸ ಮಾಡಲು ನಿಮಗೆ ಹೆಚ್ಚಿನ ಹುರುಪು, ಉತ್ಸಾಹ ಹೊಮ್ಮುತ್ತದೆ.
ಆಫೀಸ್ ಕೇವಲ ವರ್ಕಿಂಗ್ ಪ್ಲೇಸ್ ಅಲ್ಲ ಕೆಲವರಿಗೆ ಆಫೀಸ್ ಎಂದರೆ ಕೇವಲ ಕೆಲಸ ಮುಗಿಸಿ ಬರುವ ಒಂದು ಜಾಗವಾಗಿರುತ್ತದಷ್ಟೆ. ಅವರಿಗೆ ತಾವು ಬಂದಿರುವುದು ಕೇವಲ ಕೆಲಸ ಮುಗಿಸಲು ತಾನೇ ಎನಿಸುತ್ತದೆ. ಹೀಗಾಗಿ ಏನೋ ಒಂದನ್ನು ಧರಿಸಿದರಾಯಿತು, ವ್ಯತ್ಯಾಸವೇನಿದೆ ಎನಿಸುತ್ತದೆ. ನೀವೂ ಹೀಗೆ ಯೋಚಿಸುತ್ತೀರಾ? ಅದು ತಪ್ಪು! ಆಫೀಸಿನಲ್ಲಿ ದಿನ ನೀವು 8-10 ಗಂಟೆ ಕಾಲ ಕಳೆಯಬೇಕಿರುವುದರಿಂದ, ಅದನ್ನು ಕೇವಲ ಕೆಲಸ ಮುಗಿಸಿ ಹೊರಡುವ ಜಾಗ ಎಂದು ಭಾವಿಸುವುದು ಕಾಟಾಚಾರವಾಗುತ್ತದೆ, ಸರಿಯಲ್ಲ. ಇಲ್ಲಿ ನೀವು ಕುಳಿತೇಳುವ ಶೈಲಿ, ಡ್ರೆಸ್, ಸ್ಟೈಲ್, ಮಾತನಾಡುವ ರೀತಿ…. ಎಲ್ಲವೂ ಮುಖ್ಯವಾಗುತ್ತದೆ. ತುಸು ಸುಂದರವಾಗಿ ಕಾಣಿಸಿಕೊಂಡು, ಶಿಸ್ತು, ಸಂಯಮ ಪಾಲಿಸುತ್ತಾ ಅಚ್ಚುಕಟ್ಟಾಗಿ ಕೆಲಸ ಮಾಡುವುದರಿಂದ ಆಫೀಸಿನ ವಾತಾವರಣ ಶೋಭಾಯಮಾನ ಎನಿಸುತ್ತದೆ.
ನಿಮಗೂ ತುಸು ಸಮಯ ಕೊಡಿ
ಉದ್ಯೋಗಸ್ಥ ವನಿತೆ ಮನೆ ಮತ್ತು ಕಛೇರಿ ಎರಡೂ ಕಡೆಯ ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿಭಾಯಿಸಬೇಕಾಗುತ್ತದೆ, ನಿಜ. ಬೆಳಗ್ಗೆ ಎದ್ದು ಮನೆಯವರೆಲ್ಲರಿಗೂ ಕಾಫಿ, ತಿಂಡಿ, ಊಟ, ಲಂಚ್ ಬಾಕ್ಸ್ ವ್ಯವಸ್ಥೆ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಗಂಡನಿಗೆ ನೆರವಾಗಿ, ಮನೆಗೆಲಸದವಳಿಗೆ ಗೈಡ್ ಮಾಡಿ, ನೀವು ತಯಾರಾಗಿ ಬರುವುದು ಸುಲಭದ ವಿಚಾರವೇನಲ್ಲ. ಇಲ್ಲಿ ಸಮಯದ ಕೊರತೆ ಬಾಧಿಸುತ್ತಲೇ ಇರುತ್ತದೆ. ಬೆಳಗಿನ ಸಮಯ ಉಳಿಸಿಕೊಳ್ಳುವುದಕ್ಕಾಗಿ, ಮಲಗುವ ಮುನ್ನ ರಾತ್ರಿಯೇ ನಾಳಿನ ಡ್ರೆಸ್‌ಆರಿಸಿ ಇಡಿ. ಇಸ್ತ್ರೀ ಇಲ್ಲದಿದ್ದರೆ ಆಗಲೇ ಮಾಡಿ. ಅದಕ್ಕೆ ಬೇಕಾದ ಜ್ಯೂವೆಲರಿ, ಆ್ಯಕ್ಸೆಸರೀಸ್ ಎಲ್ಲಾ ತೆಗೆದಿಟ್ಟುಕೊಳ್ಳಿ. ಸ್ನಾನದ ನಂತರ ದೇಹಕ್ಕೆ ತುಸು ಮಾಯಿಶ್ಚರೈಸರ್ ಯಾ ಬಾಡಿ ಲೋಶನ್ ಹಚ್ಚಿಕೊಳ್ಳಿ. ಇದರಿಂದ ಚರ್ಮ ಸ್ಮೂತ್ ಆಗಿರುವುದರ ಜೊತೆ, ದಿನವಿಡೀ ನಿಮ್ಮ ಚರ್ಮ ಲಕ ಲಕ ಹೊಳೆಯುತ್ತಿರುತ್ತದೆ.
ಕೆಲವು ಮಹಿಳೆಯರು ವಾರಕ್ಕೆ 1-2 ಸಲ ಮಾತ್ರ ತಲೆಗೆ ಶ್ಯಾಂಪೂ ಹಚ್ಚುತ್ತಾರೆ, ಇದು ತಪ್ಪು. ನೀವು ದಿನ ಬಿಟ್ಟು ದಿನಾ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ. ಕಂಡೀಶನರ್ ಸಹ ಬಳಸಿರಿ. ಜೆಲ್‌ನಿಂದ ಕೂದಲನ್ನು ನೀಟಾಗಿ ಸೆಟ್ ಮಾಡಿ. ಡ್ರೈ ಮತ್ತು ಚಿಂಪ್ರಿಯಾಗಿ ಹಾರಾಡುವ ಬಾಚದ ಕೂದಲು ಆಫೀಸಿಗೆ ಶೋಭೆಯಲ್ಲ. ಇದರಿಂದ ಮೇಕಪ್ ಮಾಡಿದ ಮುಖ ಅಂದವಾಗಿ ಕಾಣುವುದಿಲ್ಲ.
ಇದಾದ ಮೇಲೆ ನೀವು ನಿಮ್ಮ ಡ್ರೆಸ್, ಮೇಕಪ್ ಮತ್ತು ಫುಟ್ ವೇರ್ ಕಡೆ ಗಮನ ಕೊಡಿ. ಲೈಟ್ ಮೇಕಪ್, ಲೈಟ್ ಜ್ಯೂವೆಲರಿ, ಜೊತೆಗೆ ಮ್ಯಾಚಿಂಗ್ ಹ್ಯಾಂಡ್ ಬ್ಯಾಗ್, ಫುಟ್ ವೇರ್ ನಿಮ್ಮ ಪರ್ಸನಾಲಿಟಿಗೆ ಉತ್ತಮ ಟಚ್‌ನೀಡುತ್ತವೆ.
ಪರ್ಸನಾಲಿಟಿ ಸುಧಾರಿಸಿ
ಹೀಗೆ ಆಫೀಸಿಗೆ ತಯಾರಾದ ನಂತರ ಒಂದು ಸಲ ನೀವು ನಿಮ್ಮನ್ನು ಆಪಾದಮಸ್ತಕ ಕನ್ನಡಿಯಲ್ಲಿ ನೋಡಿಕೊಳ್ಳಿ. ರೆಡಿ ಆಗುವಾಗ, ನಿಮ್ಮ ಡ್ರೆಸ್ ನಿಮ್ಮ ಪರ್ಸನಾಲಿಟಿಯ ಒಂದು ಭಾಗ ಎಂಬುದನ್ನು ಎಂದೂ ಮರೆಯಬೇಡಿ. ನೀವು ಹೇಗೆ ಡ್ರೆಸ್ ಮಾಡಿಕೊಂಡು ಬರುತ್ತೀರೋ ನಿಮ್ಮ ಇಮೇಜ್ ಹಾಗೇ ಡೆವಲಪ್ ಆಗಿರುತ್ತದೆ.
ಡ್ರೆಸ್ಕೋಡ್ ಫಾಲೋ ಮಾಡಿ
ಆಫೀಸಿನಲ್ಲಿ ಡ್ರೆಸ್ ಕೋಡ್ ಅನುಸರಿಸತ್ತಿದ್ದರೆ 100% ಅದನ್ನು ಫಾಲೋ ಮಾಡಿ. ಡ್ರೆಸ್ ಕೋಡ್ ಇದ್ದಾಗಲೂ ಯಾವುದೋ ಒಂದನ್ನು ಧರಿಸಿ ಹೋಗುವುದು, ನಿಮ್ಮ ಪ್ರತಿಷ್ಠೆಗೆ ತಕ್ಕುದಲ್ಲ. ಇದಕ್ಕೆ ತಕ್ಕಂತೆ 5-6 ಸೆಟ್ ಡ್ರೆಸ್ ಇರಿಸಿಕೊಳ್ಳಿ. ಆಗ ಗರಿಗರಿಯಾದ ಡ್ರೆಸ್ ಧರಿಸಿ ಹೊರಡುವ ಸದವಕಾಶ ನಿಮ್ಮದಾಗುತ್ತದೆ.
ಮನಸ್ಸಿಗೆ ಬಂದಂತೆ ಮಾಡದಿರಿ
ಆಫೀಸ್ ಎಂಬುದು ನಿಮ್ಮ ಡ್ರೆಸ್, ಆಭರಣ ಪ್ರದರ್ಶಿಸುವ ಜಾಗವಲ್ಲ. ಆಫೀಸಿಗಾಗಿ ಏನೇ ಧರಿಸಿದರೂ, ಅದು ಸೋಬರ್ ಆಗಿರಲಿ. ಬಾಕಿ ಉಳಿದ ಡ್ರೆಸ್‌ಗಳನ್ನು ನಿಮ್ಮ ಆಯ್ಕೆಯಂತೆ ನಿಮ್ಮ ವೈಯಕ್ತಿಕ ಜಾಗಗಳಿಗೆ ಹೋಗಲು ಧರಿಸಬಹುದು. ಡೀಸೆಂಟ್ ಡ್ರೆಸ್‌ಅಂದ್ರೆ ಅದು ಸದಾ ನಿಮ್ಮ ವಯಸ್ಸಿಗೆ ತಕ್ಕಂತಿರಬೇಕು. 2023ರ ಹುಡುಗಿ ಸದಾ ಸೀರೆ ಉಡುವುದು, 40+ ಆದ ಮೇಲೆ ಮಿನಿ ಸ್ಕರ್ಟ್ ಧರಿಸಿ ಬರುವುದು ಸರಿಯಲ್ಲ. ಡ್ರೆಸ್ ನಿಮ್ಮ ವಯಸ್ಸಿಗೆ ತಕ್ಕಂತಿದ್ದರೆ ಮಾತ್ರ ಜನ ನಿಮ್ಮ ಪರ್ಸನಾಲಿಟಿಯತ್ತ ಆಕರ್ಷಿತರಾಗುತ್ತಾರೆ. ನಿಮಗೊಂದು ಗೌರವದ ಸ್ಥಾನ ಸಹಜವಾಗಿ ಸಿಗುತ್ತದೆ. ಆಗ ಮಾತ್ರ ನೀವು ಆಫೀಸಿನಲ್ಲಿ ಕಂಫರ್ಟೆಬಲ್ ಆಗಿರಬಲ್ಲಿರಿ.
– ನಳಿನಾ ಗೌಡ