ಆಕಾಂಕ್ಷಾ ನವ ವಧುವಾಗಿದ್ದಳು. ಬಹಳ ನಾಚಿಕೊಳ್ಳುತ್ತಾ ಮೊದಲ ರಾತ್ರಿಯ ಕುರಿತು ಏನೇನೋ ಕಲ್ಪನೆಯಲ್ಲಿ ಕ್ಷಣಗಳನ್ನು ಎಣಿಸುತ್ತಾ ಪತಿ ಅನಿಕೇತನಿಗಾಗಿ ಕಾಯುತ್ತಿದ್ದಳು. ಸ್ವಲ್ಪ ಹೊತ್ತಿಗೆ ಬಾಗಿಲು ತೆರೆಯಿತು. ಅವಳ ಹೃದಯದ ಬಡಿತ ಹೆಚ್ಚಿತು.
ಆದರೆ…… ಅವಳು ನೆನೆಸಿದಂತೆ ರೋಮಾಂಚಕ ಘಟನೆಗಳೇನೂ ಅಲ್ಲಿ ನಡೆಯಲಿಲ್ಲ. ಭಾರಿ ಎನಿಸುವ ರಿಸೆಪ್ಶನ್ ಸೂಟ್ ಕಳಚಿ, ನೈಟ್ ಡ್ರೆಸ್ ಧರಿಸಿ ಮಂಚದ ಒಂದು ತುದಿಯಲ್ಲಿ ನಿಂತವನೆ, ಭಾರಿ ರೇಷ್ಮೆಯಲ್ಲಿ ಹೆಚ್ಚಿನ ಒಡವೆಗಳಿಂದ ಹಾಗೇ ಕಾಯುತ್ತಿದ್ದ ಅವಳಿಗೆ ಹೇಳಿದ, “ನೀನೂ ಈ ಸೀರೆ ಬದಲಿಸಿ ಬೇರೆ ಡ್ರೆಸ್ ಧರಿಸಿ ಹಾಯಾಗಿ ಮಲಗಿಬಿಡು. ನಾಳೆ ಬೆಳಗ್ಗೆಯೇ ನಾವು ಬೆಂಗಳೂರಿಗೆ ಹೊರಡಬೇಕು. ನಾಡಿದ್ದು ನಾನು ಆಫೀಸಿಗೆ ಹಾಜರಾಗಲೇಬೇಕು,” ಎಂದು ಹೇಳಿ ಹಾಯಾಗಿ ಮಲಗಿಬಿಟ್ಟ.
ಒಂದು ಕ್ಷಣ ಅವಾಕ್ಕಾದ ಅವಳು ಗಂಡನ ಕಡೆ ಒಮ್ಮೆ ನೋಡಿ, ದೀಪ ಆರಿಸಿ, ಆ ಕೋಣೆಯ ಮೂಲೆಗೆ ಹೋಗಿ ಹೊಸ ನೈಟಿ ಧರಿಸಿ ಬಂದು ಮಲಗಿದಳು.
ಹೀಗೆ ಅವರ ಮೊದಲ ರಾತ್ರಿ ಅತಿ ನೀರಸವಾಗಿ ಕಳೆಯಿತು. ಇಡೀ ಕೋಣೆಯ ಅಲಂಕಾರ ಅರ್ಥಹೀನವಾಗಿ ಕಂಡಿತು. ಮಂಚದ ಮೇಲಿನ ಹೊಸ ಹಾಸಿಗೆ, ಅದರ ಮೇಲೆ ಚೆಲ್ಲಿದ್ದ ಹೂಗಳು ಇವರಿಬ್ಬರನ್ನೂ ಕಂಡು ವ್ಯಂಗ್ಯವಾಗಿ ನಕ್ಕವು.
ಮಾರನೇ ದಿನ ಎಚ್ಚರಗೊಂಡು ನೋಡುತ್ತಾಳೆ, ಅವನಾಗಲೇ ಸ್ನಾನ ಮುಗಿಸಿ ಬಂದು ಬೆಂಗಳೂರಿಗೆ ಹೊರಡಲು ಸೂಟ್‌ಕೇಸ್‌ಗೆ ಬಟ್ಟೆ ಪ್ಯಾಕ್ ಮಾಡುತ್ತಿದ್ದ. ಅವಳು ಬೇಗ ಎದ್ದು, ಸ್ನಾನ ಮುಗಿಸಿ ಬಂದು ತಾನೂ ತಯಾರಾಗತೊಡಗಿದಳು.
ಛತ್ರದಿಂದ ನೇರವಾಗಿ ಅತ್ತೆ ಮನೆಗೆ ಬಂದು ಗೃಹಪ್ರವೇಶದ ಶಾಸ್ತ್ರ ಮುಗಿಸಿ, ಹೊಸ ಸೊಸೆ ಎಲ್ಲರಿಗೂ ಹಾಲು ಹಂಚಿದಳು. ಅಲ್ಲಿಂದ ಅವಳ ತವರುಮನೆಗೆ ಬಂದು, ಬೇಕಾದ ಸಾಮಗ್ರಿ ತೆಗೆದುಕೊಂಡು ತವರಿನಿಂದ ವಿಧಿವತ್ತಾಗಿ ಬೀಳ್ಕೊಂಡು ಗಂಡನೊಡನೆ ತನ್ನ ಹೊಸ ಮನೆಗೆ ಹೊರಟಳು.
ದಾರಿಯಲ್ಲೇ ಊಟ ಮುಗಿಸಿ ಬಂದಿದ್ದರು. ಈ ಹೊಸ ಮನೆಯಲ್ಲಿ ಇವರನ್ನು ವಿಶೇಷವಾಗಿ ಆರತಿ ಬೆಳಗಿ ಕರೆದುಕೊಳ್ಳುವವರು ಯಾರೂ ಇರಲಿಲ್ಲ. ತಾವಾಗಿಯೇ ಒಳಗೆ ಬಂದು, ವಿಶ್ರಾಂತಿಗಾಗಿ ಮಲಗಿಬಿಟ್ಟರು. ಅಂದು ಸಂಜೆ ಒಂದು ಮುಖ್ಯ ಕ್ಲೈಂಟ್ ಮೀಟಿಂಗ್ ಇದೆ ಎಂದು, ಹಿಂದಿನ ದಿನ ತಾನೇ ಮದುವೆ ಧಾರೆ ಮುಗಿಸಿ ಸಂಜೆ ಆರತಕ್ಷತೆಗೆ ಕುಳಿತಿದ್ದ ಪತಿರಾಯ, ಅವಳನ್ನು ಒಬ್ಬಳನ್ನೇ ಬಿಟ್ಟು ಹೊರಟೇ ಹೋದ.
ಆಕಾಂಕ್ಷಾ ಇಡೀ ಮನೆಯನ್ನು ಸುತ್ತಿ ಬಂದಳು. 2 ಕೋಣೆಗಳ ಫ್ಲಾಟ್, ಬಾಲ್ಕನಿಯಿಂದ ಚಂದವಾಗಿತ್ತು. ಅನಿಕೇತನಿಗೆ ಆಫೀಸ್‌ವತಿಯಿಂದ ಅಲಾಟ್ ಆಗಿತ್ತು. ಅವನು ಒಂದು ಖಾಸಗಿ ಏರ್‌ಲೈನ್ಸ್ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದ. ಅವಳೂ ಸಹ ಒಂದು ಚಿಕ್ಕ ಖಾಸಗಿ ಏರ್‌ಲೈನ್ಸ್ ಕಂಪನಿಯಲ್ಲೇ ಗಗನಸಖಿ ಆಗಿದ್ದಳು.
ಇವರಿಬ್ಬರ ತಾಯಿ ತಂದೆ ಮೊದಲಿನಿಂದ ಮೈಸೂರಿನವರೇ ಆಗಿ ವ್ಯಾಪಾರ ನಡೆಸುತ್ತಾ, ಮನೆಮಠ ಹೊಂದಿದ್ದರು. ಡಿಗ್ರಿ ಓದುವಾಗಲೇ ಅವನು ಬೆಂಗಳೂರಿಗೆ ಶಿಫ್ಟ್ ಆಗಿ, ಮುಂದೆ ಅಲ್ಲೇ ಒಳ್ಳೆಯ ಕೆಲಸಕ್ಕೆ ಸೇರಿದ್ದ. ಅವಳಿಗೆ ಮೈಸೂರಿನಲ್ಲಿ ಅಂಥ ಉತ್ತಮ ಕೆಲಸ ಸಿಗದ ಕಾರಣ, ಬೆಂಗಳೂರಿಗೆ ಬಂದಿದ್ದಳು. ತನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ಒಬ್ಬನೇ ಮಗನನ್ನು ಹೊಂದಿದ್ದ ಅವರಿಗೆ ಇವಳೇ ಅಚ್ಚುಮೆಚ್ಚಿನ ಮಗಳು.
ಹಿರಿಯರು ತಮ್ಮ ಬಹು ವರ್ಷಗಳ ಗೆಳೆತನ ಸಂಬಂಧದಲ್ಲಿ ಮುಂದುವರಿಯಲಿ ಎಂದು ಬೀಗರಾಗಲು ಬಯಸಿದರು. 27ರ ಅನಿಕೇತನಿಗೆ ಖಂಡಿತಾ ಅಷ್ಟು ಬೇಗ ಮದುವೆ ಬೇಕಿರಲಿಲ್ಲ. ಹಾಗೆಂದು ಎಷ್ಟು ದಿನ ಪ್ರಾಯಕ್ಕೆ ಬಂದ ಮಗನನ್ನು ಯಾವುದೋ ರೂಮಿನಲ್ಲಿ ಒಬ್ಬಂಟಿಯಾಗಿ ಬಿಟ್ಟಿರುವುದು? ಒಂದು ಚೂರೂ ಮದುವೆಗೆ ಮನಸ್ಸಿಲ್ಲದೆ, ಅದಕ್ಕಾಗಿ ಮಾನಸಿಕವಾಗಿ ಸಿದ್ಧನಾಗದೆ, ಒಬ್ಬನೇ ಮಗನಾಗಿ ತಾಯಿತಂದೆಯರ ಮನಸ್ಸು ಮುರಿಯಬಾರದೆಂದು ಆ ಮದುವೆಗೆ ಒಪ್ಪಿದ್ದ. ಹಾಗೆಂದು ಅವನಿಗೆ ಬೇರೆ ಪ್ರೇಮ ಪ್ರಕರಣಗಳೂ ಇರಲಿಲ್ಲ, ಅವನಿಗೆ ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಒಟ್ಟಾರೆ ಈ ಮದುವೆ ಅವನಿಗೆ ಒಲ್ಲದ ಔತಣವಾಗಿತ್ತು.
ಆದರೆ ಆಕಾಂಕ್ಷಾಳಿಗೆ ಈ ಮದುವೆ ಕುತೂಹಲಕರವಾಗಿತ್ತು. ಹಿರಿಯರ ಮಾತಿಗೆ ಸುಲಭವಾಗಿ ಒಪ್ಪಿದಳು. ಡಿಗ್ರಿ ಮುಗಿಸಿ ಬೆಂಗಳೂರಿಗೆ ಬಂದು 2 ವರ್ಷದಿಂದ ಗಗನಸಖಿಯಾಗಿ ಆನಂದವಾಗಿದ್ದಳು. ಎಷ್ಟು ದಿನ ಅವಳನ್ನು ಪರರ ಮನೆಯಲ್ಲಿ ಬಿಟ್ಟಿರುವುದು, ಆ ಮನೆಗೂ ಒಬ್ಬ ಸೊಸೆ ಬರಬೇಕು ತಾನೇ ಎಂದು ಅವಳ ತಾಯಿ ಒತ್ತಾಯಪಡಿಸಿದರು.
ಚಿಕ್ಕಂದಿನಿಂದ ಕೆಲವೊಂದು ಸಲ ಅವರ ಮನೆಗೆ ಹೋಗಿ ಬಂದು, ಅನಿಕೇತನನ್ನೂ ಕಂಡಿದ್ದ ಆಕಾಂಕ್ಷಾ ಸಂತೋಷವಾಗಿಯೇ ಮದುವೆಗೆ ಒಪ್ಪಿದ್ದಳು. ಮದುವೆ ನಂತರ ಕೆಲಸ ಮುಂದುವರಿಸುತ್ತೇನೆಂದು ಅವಳ ಹಠ, ಅವನಿಗೆ ಅದರಲ್ಲಿ ಆಕ್ಷೇಪಣೆ ಇರಲಿಲ್ಲ. ಬೆಂಗಳೂರಿನಲ್ಲಿ ಅವರಿಬ್ಬರೇ ವಾಸ್ತವ್ಯ ಹೂಡಬೇಕಾದ್ದರಿಂದ ಮಿಕ್ಕೆಲ್ಲ ಜವಾಬ್ದಾರಿಯೂ ಅವರದೇ ಆಗಿತ್ತು.
ಇದೆಲ್ಲವನ್ನೂ ನೆನೆಯುತ್ತಲೇ ಆಕಾಂಕ್ಷಾ ಸಂಜೆ ಎದ್ದು ಟೀ ಮಾಡಿ ಕುಡಿದಳು. ತನ್ನ ಬಟ್ಟೆಬರೆ ಜೋಡಿಸಿಕೊಂಡಿದ್ದಾಯಿತು. ರಾತ್ರಿಗೆ ಒಂದು ಹೊತ್ತಿಗೆ ಆಗುವಂತೆ ಏನು ಮಾಡುವುದೆಂದು ಯೋಚಿಸಿ, ಅನ್ನ ಮಾಡಿ ಈರುಳ್ಳಿ, ಟೊಮೇಟೊ ಹೆಚ್ಚಿಕೊಂಡು ಗೊಜ್ಜು ಮಾಡಿಟ್ಟು ಹತ್ತಿರದ ಅಂಗಡಿಗೆ ಹೋಗಿ ಮೊಸರು, ಚಿಪ್ಸ್ ಪ್ಯಾಕೆಟ್ ತಂದು ಟಿ.ವಿ ನೋಡುತ್ತಾ 10 ನಿಮಿಷ ಕಳೆಯುವಷ್ಟರಲ್ಲಿ ಅನಿಕೇತ್ ಬಂದಿದ್ದ.
ಮಾತುಕಥೆ ಇಲ್ಲದೆ ಬೇಕು ಬೇಡ ಎನ್ನುತ್ತಾ ಊಟ ಆಯಿತು. ಸ್ವಲ್ಪ ಹೊತ್ತು ಟಿ.ವಿ. ನೋಡುತ್ತಲೇ ಅವನು ಮಲಗಲು ಹೊರಟ. ಅವಳು ಅಡುಗೆಮನೆ ಕೆಲಸ ಪೂರೈಸಿ ಬಂದು ಮಲಗುವಷ್ಟರಲ್ಲಿ ಅವನು ನಿದ್ದೆಗೆ ಜಾರಿದ್ದ.
ಮಾರನೇ ಬೆಳಗ್ಗೆ ಯಥಾರೀತಿ ಕೆಲಸ ಶುರುವಾಯಿತು. ಅವನು ತಿಂಡಿ ಮುಗಿಸಿ, ಕ್ಲೈಂಟ್ ಜೊತೆ ಹೊರಗೆ ಊಟ ಮಾಡುವುದಾಗಿ ತಿಳಿಸಿ ಹೊರಟುಬಿಟ್ಟ. ಮದುವೆ ಸಂಭ್ರಮಕ್ಕಾಗಿ ಅವಳು 1 ವಾರ ರಜಾ ಹಾಕಿದ್ದರಿಂದ ತಿಂಡಿ ನಂತರ ಏನು ಮಾಡುವುದೆಂದು ತಿಳಿಯದೆ, ಹೊರಗೆ ಹೋಗಿ ಬಂದಳು.
ಎದುರು ಫ್ಲಾಟ್‌ನವರ ಪರಿಚಯ ಮಾಡಿಕೊಂಡು, ಅವರ ಮನೆಯ ಕೆಲಸ ಮುಗಿದಿದ್ದರಿಂದ ಅದೇ ಮನೆಗೆಲಸದವಳನ್ನು ತನ್ನ ಮನೆಗೂ ಬಂದು ಮಾಡಿಕೊಡುವಂತೆ ಗೊತ್ತುಪಡಿಸಿಕೊಂಡಳು.
ವನಜಾ ಬಂದು ಬೇಗ ಬೇಗ ಮನೆ ಕೆಲಸ ಮುಗಿಸಿ, ಬಟ್ಟೆ ವಾಷಿಂಗ್ ಮೆಶಿನ್‌ಗೆ ಹಾಕಿ ಒಣಗಿಸಿದ್ದೂ ಆಯ್ತು. ಅಷ್ಟರಲ್ಲಿ ಆಕಾಂಕ್ಷಾ ಸ್ನಾನ ಮುಗಿಸಿ ಬಂದಳು. ವನಜಾಳ ಸಹಾಯ ಪಡೆದು ಮನೆಗೆ ಎಲ್ಲಾ ಕಡೆ ಕರ್ಟನ್ ಹಾಕಿಸಿ, ಟೀಪಾಯಿಗೆ ಹೊಸ ಹೂದಾನಿ, ಅದರಲ್ಲಿ ಹೂವಿರಿಸಿದಳು. ಇಬ್ಬರ ಬಟ್ಟೆಬರೆ ನೀಟಾಗಿ ವಾರ್ಡ್ ರೋಬ್ ಸೇರಿತು. ಆ ಮನೆಗೆ ಗೃಹಿಣಿ ಬಂದಿದ್ದರಿಂದ, ಬ್ಯಾಚುಲರ್ ಫ್ಲಾಟ್ ಆಗಿರದೆ ಈಗ ಲಕ್ಷಣವಾಗಿ ಮನೆ ಎನಿಸಿತು.
ಅನಿಕೇತ್ ಮನೆಗೆ ಬರುವಷ್ಟರಲ್ಲಿ ಗಂಟೆ 9 ಆಗುತ್ತಿತ್ತು. ತನ್ನ ಮನೆ ನವೀನವಾಗಿ ಬದಲಾಗಿರುವುದು ಕಂಡು ಅವನು ಬೆರಗಾದ. ಸಾಕು, ಬೇಕು ಅಂತ ಊಟ, ತುಸು ಟಿವಿ ನೋಡಾಟ…. ನಿದ್ದೆ…. ಹೀಗೆ ದಿನಚರಿ ಮುಂದುವರಿಯಿತು. ನವ ದಾಂಪತ್ಯದ ಯಾವ ಸೊಗಸೂ ಇಲ್ಲ, ಸರಸಸಲ್ಲಾಪ ಮೊದಲೇ ಇರಲಿಲ್ಲ. ಇದೆಂಥ ನೀರಸ ಬದುಕು? ಮಾನವೀಯತೆಗಾಗಿಯಾದರೂ ಗಂಡ ತನ್ನೊಂದಿಗೆ ಹಾರ್ದಿಕವಾಗಿ 2 ಮಾತನಾಡಬಾರದೇ ಎಂದು ಅವಳ ಮನ ಹಂಬಲಿಸಿತು.
ಇಡೀ ವಾರ ಹೀಗೆ ಕಳೆಯಿತು. ಅದರ ಮಾರನೇ ದಿನ ಊಟ ಮುಗಿಸಿ ಮಲಗಲು ಎದ್ದ ಗಂಡನನ್ನು ಆಕಾಂಕ್ಷಾ ತಡೆದಳು, “5 ನಿಮಿಷ ಕೂತಿರ್ತೀರಾ? ಅಡುಗೆಮನೆ ಕೆಲಸ ಮುಗಿಸಿ ಬೇಗ ಬರ್ತೀನಿ, ನಿಮ್ಮ ಹತ್ತಿರ ಅಗತ್ಯವಾಗಿ ಮಾತನಾಡಬೇಕಿದೆ.”
“ಓಹ್…… 10.30 ಆಗೋಯ್ತು….. ಬೆಳಗ್ಗೆ ಬೇಗ ಆಫೀಸಿಗೆ ಹೊರಡಬೇಕು…. ಈಗ ಮಲಗುತ್ತೀನಿ.”
“ನಾನೂ ನಾಳೆಯಿಂದ ಆಫೀಸಿಗೆ ಹೊರಡಬೇಕು, ಇವತ್ತಿಗೆ ನನ್ನ ರಜೆ ಮುಗಿಯಿತು. 2 ನಿಮಿಷ ಕೂತ್ಕೊಳ್ಳಿ ಬಂದೆ,” ಎಂದು ಟಿವಿ ಮತ್ತೆ ಆನ್ ಮಾಡಿ, ಅವಳು ಒಳಗೆ ಹೋಗಿ ಬೇಗ ತನ್ನ ಕೆಲಸಗಳನ್ನು ಮುಗಿಸಿಕೊಂಡು ಬಂದಳು.
“ಹೇಳು…. ಏನೋ ಮಾತನಾಡಬೇಕು ಅಂದೆ.”
“ನಿಮಗೆ ನನ್ನ ಮೇಲೆ ಕೋಪವೇ…..?”
“ಇಲ್ಲವಲ್ಲ….ಯಾಕೆ ಕೇಳ್ತಿದ್ದೀಯಾ?”
“ನಾನೇನು ಕೇಳ್ತಿದ್ದೀನಿ ಅಂತ ನಿಮಗೆ ಚೆನ್ನಾಗೇ ಗೊತ್ತಿದೆ ಬಿಡಿ…..”
“ಪ್ಲೀಸ್…… ಈ ಬಗ್ಗೆ ನನ್ನ ಹತ್ತಿರ ಅಲ್ಲ, ಡ್ಯಾಡಿ ಹತ್ತಿರ ನೀನು ಮಾತನಾಡು. ಈ ಮದುವೆ ನಿರ್ಧರಿಸಿದ್ದು ಅವರೇ!”
“ಆದರೆ….. ಮದುವೆ ಮಾಡಿಕೊಂಡವರು ನೀವೇ ತಾನೇ? ಯಾರೂ ಹಸೆಮಣೆಗೆ ಎಳೆ ತರಲಿಲ್ಲವಲ್ಲ….”
“ಅದು ಗೊತ್ತಿದೆ ಬಿಡು…. ಮತ್ತೇನಾದರೂ…..”
ಮಾತು ಸರಿಹೋಗುವ ಬದಲು ಮತ್ತಷ್ಟು ಬಿಗಡಾಯಿಸುತ್ತಿದೆ ಅನ್ನೋದು ಅವಳಿಗೆ ಅರಿವಾಯಿತು.
“ಈ ಮದುವೆಗೆ ನಿಮಗೆ ಎಳ್ಳಷ್ಟೂ ಒಪ್ಪಿಗೆ ಇರಲಿಲ್ಲವೇ?”
“ಇಲ್ಲ….. ನನ್ನ ಇಷ್ಟಕ್ಕೆ ವಿರುದ್ಧವಾಗಿ….. ಮತ್ತೆ……”
“ಸರಿ, ಆಯ್ತು ಬಿಡಿ. ನಿಮಗೆ ಒಂದು ವಿಷಯ ತಿಳಿಸಬೇಕಿತ್ತು.”
“ಅದೇನದು….?”
“ನಾವಿಬ್ಬರೂ ಕೆಲವು ದಿನಗಳಾದರೂ ಫ್ರೆಂಡ್ಸ್ ತರಹ ಇರಲಾಗದೇ?”
“ಅಂದ್ರೆ….. ನೀನು ಹೇಳುವುದೇನು?”
“ವಿಷಯ ಇಷ್ಟೆ…. ಉನ್ನತ ಶಿಕ್ಷಣಕ್ಕಾಗಿ ನಾನು ಅಮೆರಿಕಾಗೆ ಅಪ್ಲೈ ಮಾಡಿದ್ದೀನಿ. 1 ತಿಂಗಳ ನಂತರ ನನಗೆ ಇಂಟರ್‌ವ್ಯೂ ಇದೆ. ಅದು ಓ.ಕೆ. ಆದ್ರೆ ನಾನು ನಮ್ಮ ಆಫೀಸ್ ಮುಖಾಂತರ ಅಲ್ಲಿನ ಕೋರ್ಸ್ ಸೇರಿ, ಹಾಗೆ ಅಮೆರಿಕಾ ಯೂನಿಟ್‌ನಲ್ಲೇ 5 ವರ್ಷ ಕೆಲಸ ಮಾಡಬೇಕಾಗುತ್ತೆ. ಇದು ಕಾಂಟ್ರಾಕ್ಟ್.
“ಇನ್ನೊಂದು ತಿಂಗಳು ಮುಗಿದ ನಂತರ ಹೇಗೂ ನಾನು ಹೊರಡುತ್ತೀನಿ, ಅಲ್ಲಿಯವರೆಗೂ ಮುಖ ತಿರುಗಿಸಿಕೊಂಡು ಜಗಳ ಆಡುವ ಬದಲು ನಾವೇಕೆ ಗೆಳೆತನ ಮುಂದುವರಿಸಬಾರದು?”
ಅನಿಕೇತನಿಗೆ ಈ ಐಡಿಯಾ ಓ.ಕೆ. ಅನಿಸಿತು. ಅದಾದ ಮೇಲೆ ಇಬ್ಬರೂ ನಿದ್ರಿಸಿಬಿಟ್ಟರು. ಮಾರನೇ ಬೆಳಗ್ಗೆ ಎಂದಿಗಿಂತ ಬೇಗ ಎದ್ದು ಅವಳು ಇಬ್ಬರಿಗೂ ಆಗುವಂತೆ ತಿಂಡಿ, ಊಟದ ಡಬ್ಬಿಗೆ ರೆಡಿ ಮಾಡಿಕೊಂಡಳು. ಇವಳು ರೆಡಿ ಆಗುವಷ್ಟರಲ್ಲಿ ಅನಿಕೇತ್ ಬೈ ಹೇಳಿ ಹೊರಟುಬಿಟ್ಟಿದ್ದ. ವನಜಾ ಮನೆಗೆಲಸ ಮುಗಿಸುವಷ್ಟರಲ್ಲಿ ಆಕಾಂಕ್ಷಾ ಆಫೀಸ್‌ಗೆ ಹೊರಡಲು ತಯಾರಾಗಿ ಕೈಲಿ ಬೀಗ ಹಿಡಿದು ಸಿದ್ಧಳಾಗಿದ್ದಳು.
ಹೀಗೆ ಹೊಸ ದಿನಚರಿ ಶುರುವಾಯಿತು. ಸಂಜೆ ಅವಳು 8 ಗಂಟೆಗೆ ಬಂದರೆ ಅವನು 9 ಗಂಟೆಗೆ ಬರುತ್ತಿದ್ದ. ಮೊದಲು ತುಸು ಟೀ ಕುಡಿದು, ಇಬ್ಬರೂ ನಂತರ ಊಟ ಮಾಡಿ, ಹಾರ್ದಿಕವಾಗಿ ಹರಟುತ್ತಿದ್ದರು. 11 ಗಂಟೆಗೆ ನಿದ್ದೆ, 5.30ಕ್ಕೆ ಅಲಾರಮ್.
ಶನಿವಾರ ಇಬ್ಬರಿಗೂ ಅರ್ಧ ದಿನ. ಮನೆಗೆ ಬಂದು ಊಟ ಮುಗಿಸಿ ವಿಶ್ರಾಂತಿ ಪಡೆದು, ಸಂಜೆ ಹೊರಗೆ ತಿರುಗಾಡಲು ಹೋಗುತ್ತಿದ್ದರು. ಒಮ್ಮೊಮ್ಮೆ ಪಾರ್ಕು, ಹೋಟೆಲ್, ಸಿನಿಮಾ, ಶಾಪಿಂಗ್ ಮಾಲ್….. ಹೀಗೆ ಎಲ್ಲಾದರೊಂದು ಕಡೆ. ಭಾನುವಾರ ಹಾಗೆ ಆಗುತ್ತಿತ್ತು. ಒಟ್ಟಾರೆ ಅವರ ಜೋಡಿ ಫ್ರೆಂಡ್ಸ್, ಪಾರ್ಟಿ ಎಂದು ಬೆಂಗಳೂರು ಪೂರ್ತಿ ಸುತ್ತಾಡಿತು. ಅವರಿಬ್ಬರನ್ನೂ ಜೊತೆ ಜೊತೆಗೆ ಕಂಡರು ಯಾರೋ ಯುವ ಪ್ರೇಮಿಗಳಿರಬೇಕು ಎಂದು ಭಾವಿಸುತ್ತಿದ್ದರೇ ಹೊರತು ಹೊಸದಾಗಿ ಮದುವೆಯಾದವರು ಎಂದು ಯಾರಿಗೂ ಅನಿಸುತ್ತಿರಲಿಲ್ಲ. ಅವರಿಬ್ಬರ ನಡುವೆ ಅಂಥ ಸಲುಗೆಯ ವರ್ತನೇ ಇರಲೇ ಇಲ್ಲ.
ಇದರಿಂದ ಅನಿಕೇತನಲ್ಲಿ ಕ್ರಮೇಣ ದೊಡ್ಡ ಬದಲಾವಣೆ ಆಗತೊಡಗಿತು. ಈಗ ಅವನ ಎಲ್ಲಾ ಕೆಲಸಗಳಿಗೂ ಅವಳ ನೆರವು ಬೇಕೇ ಬೇಕು. ಹಿಂದಿನ ತರಹ ಹೇಗೋ ಉಡಾಫೆಯಿಂದ ಇರಲು ಆಗುತ್ತಿರಲಿಲ್ಲ. ಅವಳ ಮಾತು, ನಗು, ಒಡನಾಟ ಅವನಿಗೀಗ ಹೊಸ ಸ್ಛೂರ್ತಿ ನೀಡುತ್ತಿತ್ತು ಅವಳಿಲ್ಲದೆ ತಾನೊಬ್ಬನೇ ಹೊರಗೆ ಸುತ್ತಾಡುವುದು ಅವನಿಗೆ ಕಷ್ಟವಾಗತೊಡಗಿತು. ಫ್ರೆಂಡ್ಸ್ ನ್ನು ಭೇಟಿಯಾಗಲು ಒಬ್ಬನೇ ಹೋದಾಗ, ಯಾಕೆ ಹೆಂಡತಿ ಬರಲಿಲ್ಲವೇ ಎಂಬ ಪ್ರಶ್ನೆಗೆ ಎಷ್ಟು ಸಲ ಸುಳ್ಳು ಹೇಳಲು ಸಾಧ್ಯ?
ಅದಲ್ಲದೆ, ಅವಳ ಕಂಪನಿ ಇಲ್ಲದೆ ಅವನಿಗೆ ಈಗೀಗ ಯಾವುದು ಬೇಡ ಎನಿಸಿಬಿಟ್ಟಿತ್ತು. ಚಿನಕುರುಳಿಯಂಥ ಅವಳ ಮಾತಿಗೆ ಉತ್ತರಿಸುತ್ತಾ ಈಗ ಅವನೂ ತನ್ನ ಮನದ ಭಾವನೆಗಳನ್ನೂ ತೋಡಿಕೊಳ್ಳುತ್ತಿದ್ದ. ಒಟ್ಟಿನಲ್ಲಿ ಕಲ್ಲು ವೀಣೆಯನ್ನು ಮೀಟಿ, ಅದನ್ನು ನುಡಿಸುವಂತೆ ಮಾಡುವಲ್ಲಿ ಆಕಾಂಕ್ಷಾ ಯಶಸ್ವಿಯಾಗಿದ್ದಳು
.ಹೀಗೆ ಒಂದು ಸಲ ಆಫೀಸ್‌ನಲ್ಲಿ ತಡವಾಗಿ ಅನಿಕೇತ್ ಮನೆಗೆ ಬರುವಷ್ಟರಲ್ಲಿ ರಾತ್ರಿ 10.30 ಆಗಿಹೋಗಿತ್ತು. ಅವನಿಗೆ ಅಂದು ಎಲ್ಲಿಲ್ಲದ ಹಸಿವು. ಇಂಟರ್‌ವ್ಯೂ ದಿನ ಹತ್ತಿರ ಬರುತ್ತಿದ್ದುದರಿಂದ ಅವಳು ತನ್ನ ಓದಿನಲ್ಲಿ ಸಂಪೂರ್ಣ ಮುಳುಗಿಹೋಗಿದ್ದಳು. ಅಂದು ಡೈನಿಂಗ್ ಟೇಬಲ್ ಭಣ ಭಣ ಖಾಲಿ ಇತ್ತು.
“ಓಹ್….. ಇವತ್ತು ಅಡುಗೆ ಆಗಲಿಲ್ಲವೇ…..?”
“ಸಾರಿ….. ಬಹಳ ಓದುವುದಿತ್ತು. ಟೈಂ ಹೋಗಿದ್ದೇ ಗೊತ್ತಾಗಲಿಲ್ಲ…..”
“ಅದು ಸರಿ, ಆದರೆ ಈಗ ಹೊಟ್ಟೆಗೇನು ಮಾಡುವುದು?”
“ಒಂದು ಕೆಲಸ ಮಾಡೋಣ,” ಆಕಾಂಕ್ಷಾಳಿಗೆ ಒಂದು ಉಪಾಯ ಹೊಳೆದಿತ್ತು,
“ಎಷ್ಟೋ ಫ್ಲೈಓರ್‌ಗಳ ಕೆಳಗೆ ರಾತ್ರಿ 12ರವರೆಗೆ ಇಡ್ಲಿ ದೋಸೆ, ಟೀ ಮಾರುತ್ತಿರುತ್ತಾರೆ. ಒಂದು ರೌಂಡ್ ಹೊರಗೆ ಹೋಗಿ ನಾವೇಕೆ ಟ್ರೈ ಮಾಡಬಾರದು?”
“ಹೌದಾ….? ಅದು ಚೆನ್ನಾಗಿರುತ್ತಾ?” ಅನಿಕೇತ್ ಆಶ್ಚರ್ಯದಿಂದ ಬಿಟ್ಟ ಬಾಯಿ ಮುಚ್ಚಲಿಲ್ಲ.
“ಹ್ಞೂಂ….. ಈ ಐಟಿ, ಬಿಟಿ ಕಂಪನಿಗಳು ಇಡೀ ರಾತ್ರಿ ಪೂರ್ತಿ ಕೆಲಸ ಮಾಡುವುದರಿಂದ ಹೀಗೆ ನಡುರಾತ್ರಿವರೆಗೂ ಊಟ ದೊರಕುವುದು ಮಾಮೂಲಿ ಆಗಿಬಿಟ್ಟಿದೆ. ಟ್ರೈ ಮಾಡಿ ನೋಡೋಣ, ಸರಿ ಹೋಗದಿದ್ದರೆ ಇನ್ನು ಮೇಲೆ ಬೇಡ.”
“ಸರಿ….. ಡ್ರೆಸ್ ಚೇಂಜ್ ಮಾಡು, ಹೊರಡೋಣ.”
“ಇರಲಿ ಬಿಡಿ, ಈ ಜೀನ್, ಟೀ ಶರ್ಟ್ ಬೇಕಾದಷ್ಟಾಯಿತು, ಅಲ್ಲಿ ನಮ್ಮ ಪರಿಚಿತರು ತಾನೇ ಯಾರಿರುತ್ತಾರೆ?”
ಅಂತೂ ಒಂದು ಹೊಸ ಅನುಭವದೊಂದಿಗೆ ಅವರು ಇಡ್ಲಿ ದೋಸೆ ಸವಿದರು. ಬಿಸಿಬಿಸಿಯಾಗಿ ಹೊಗೆಯಾಡುತ್ತಿದ್ದ ಆಹಾರ ಹಸಿವು ತಣಿಸಿತು. ನೆಮ್ಮದಿಯಾಗಿ ಮನೆಗೆ ಹೊರಟರು.
ಅಂತೂ ಆಕಾಂಕ್ಷಾ ಇಂಟರ್‌ವ್ಯೂಗೆ ಹೊರಡುವ ದಿನ ಬಂದೇಬಿಟ್ಟಿತು. ಅಂದು ಭಾನುವಾರ. ಬೆಳಗ್ಗೆ ಎಂದಿನಂತೆ ಬೇಗ ಎದ್ದು ಅವಳು ಕಾಫಿ, ತಿಂಡಿ ಸಿದ್ಧಪಡಿಸಿದಳು. 8 ಗಂಟೆಗೆ ಅವಳು ಎಲ್ಲಾ ಕೆಲಸ ಮುಗಿಸಿ ಹೋಗುವಾಗ ಅನಿಕೇತನಿಗೆ ಹೇಳಿ ತನ್ನ ಸ್ಕೂಟಿಯಲ್ಲಿ ಬೇಗ ಹೊರಟಳು. ಆಗಿನ್ನೂ ಅವನಿಗೆ ಸುಪ್ರಭಾತ.
ಅವಳಿಲ್ಲದೆ ತಾನೇ ಕಾಫಿ ಬಿಸಿ ಮಾಡಿಕೊಳ್ಳಬೇಕಲ್ಲ ಎಂದು ಹಲ್ಲುಜ್ಜಿ ಬಂದು, ಪೇಪರ್ ಹಿಡಿದು ಕಾಫಿ ಸವಿದ. 10 ಗಂಟೆ ಆಗುವಷ್ಟರಲ್ಲಿ ಅವನಿಗೆ ಮನೆ ಪೂರ್ತಿ ಖಾಲಿ ಖಾಲಿ ಅನಿಸಿ ಹೊತ್ತೇ ಹೋಗದಾಯಿತು. ಎಲ್ಲಿಗೂ ಹೋಗಲು ಮನಸ್ಸಿಲ್ಲದೆ, ಸ್ನಾನ ತಿಂಡಿ ಮುಗಿಸಿ, ಸೋಫಾ ಮೇಲೆ ಉರುಳಿ ಟಿವಿ ನೋಡತೊಡಗಿದ. ಅವಳಿಲ್ಲದ ಮನೆ ಅವನಿಗೆ ಬಿಕೋ ಎನಿಸಿತು.
ಆಕಾಂಕ್ಷಾ ಅಂದುಕೊಂಡಂತೆ ರಿಟರ್ನ್ ಟೆಸ್ಟ್, ಪರ್ಸನಲ್ ಇಂಟರ್ ವ್ಯೂ ಎರಡೂ ಭರ್ಜರಿಯಾಗಿ ನಡೆದಿತ್ತು. ಮಧ್ಯಾಹ್ನ 2 ಗಂಟೆಗೆ ರಿಸಲ್ಟ್ ಎಂದರು. ಇವಳಂತೆಯೇ 10-15 ಮಂದಿ ಕಾತರದಿಂದ ಫಲಿತಾಂಶಕ್ಕಾಗಿ ನಿರೀಕ್ಷಿಸತೊಡಗಿದರು. ಮಧ್ಯೆ ಬ್ರೇಕ್ ಬಂದದ್ದರಿಂದ ಕಾಫಿ ಟೀಗೆಂದು ಹೊರಟು ಹರಟುತ್ತಿದ್ದರು.
2 ಗಂಟೆಗೆ ಎಲ್ಲರನ್ನೂ ಒಳಗೆ ಕರೆದರು. ಅಮೆರಿಕಕ್ಕೆ ಹೊರಡಲಿರುವ ಕೇವಲ ನಾಲ್ವರ ಹೆಸರಲ್ಲಿ ಆಕಾಂಕ್ಷಾ ಒಬ್ಬಳೇ ಹುಡುಗಿ ಆಗಿದ್ದಳು! ಇವರ ನಾಲ್ವರ ಮುಖದಲ್ಲೂ ಆನಂದ ಉಕ್ಕಿ ಹರಿಯಿತು. ಬೇರೆಯವರು ಇವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ವರ್ಷ ಮತ್ತೆ ಪ್ರಯತ್ನಿಸುವುದಾಗಿ ಹೇಳಿ ಹೊರಟುಬಿಟ್ಟರು.
ಮುಂದಿನ 2 ವಾರದಲ್ಲಿ ಅಮೆರಿಕಾದ ವಾಷಿಂಗ್‌ಟನ್‌ಗೆ ಹೊರಡಲು ಆರ್ಡರ್ ನೀಡಿದರು. ಅವಳ ಬಳಿ ಪಾಸ್‌ಪೋರ್ಟ್ ರೆಡಿ ಇತ್ತು, ವೀಸಾ ಬರವುದಷ್ಟೇ ಬಾಕಿ.
ಅವಳು ಸಂತೋಷದಿಂದ ತನ್ನ ಇತರ ಡಾಕ್ಯುಮೆಂಟ್ಸ್ ಪಡೆದುಕೊಂಡು, ಮಹಡಿ ಇಳಿದು ಕೆಳಗೆ ಬಂದು ನೋಡುತ್ತಾಳೆ….. ಆಶ್ಚರ್ಯ! ಅನಿಕೇತ್ ಅವಳಿಗಾಗಿ ಗಾಡಿ ಸಮೇತ ಕಾದು ನಿಂತಿದ್ದ. ಅವಳ ನಗುಮುಖ ಗಮನಿಸುತ್ತಲೇ ಹೇಳಿದ, “ಕಂಗ್ರಾಜುಲೇಷನ್ಸ್… ನಿನ್ನ ಇಷ್ಟು ದಿನದ ಶ್ರಮ ಒಳ್ಳೆ ಫಲ ತಂದಿತು! ನಡಿ, ಮನೆಗೆ ಹೋಗೋಣ….. ನಿನ್ನ ಕರೆದೊಯ್ಯಲೆಂದೇ ಬಂದೆ ನಾನು…….”
“ಅದಕ್ಕೆ ಮುಂಚೆ ಈ ಖುಷಿ ಸೆಲೆಬ್ರೇಟ್ ಮಾಡಲು ನಾನು ನಿಮಗೆ ಪಾರ್ಟಿ ಕೊಡಿಸಬೇಕಿದೆ. ಯಾವ ಹೋಟೆಲ್‌ಗೆ ಊಟಕ್ಕೆ ಹೋಗೋಣ?” ಅವಳು ನಸುನಗುತ್ತಾ ಬೈಕ್ ಏರಿದಳು.
ಅವನ ಇಷ್ಟದ ಹೋಟೆಲ್‌ಗೆ ಹೋಗಿ, ಅವನಿಗೆ ಬೇಕಾದ್ದೆಲ್ಲ ಗೊತ್ತಿದ್ದ ಆಕಾಂಕ್ಷಾ ತಾನೇ ಆರ್ಡರ್ ಮಾಡಿದಳು. ಹೆಂಡತಿಯ ಮುಖ ನೋಡುತ್ತಾ, ಏನೋ ಹೇಳಬೇಕೆಂದುಕೊಂಡವನು ಹೇಳಲಾಗದೇ ಅನಿಕೇತ್ ಬಲವಂತವಾಗಿ ಅವಳ ಸಂತೋಷದಲ್ಲಿ ಪಾಲ್ಗೊಂಡ. ಇಬ್ಬರೂ ಹರಟುತ್ತಾ ಯಾವಾಗ ಊಟ ಮುಗಿಸಿದರೋ ಗೊತ್ತಾಗಲಿಲ್ಲ. ಕೊನೆಯಲ್ಲಿ ತಾನೇ ಅವನಿಗೆ ಜಾಮೂನು ತಿನ್ನಿಸಿದಳು. ರೋಮಾಂಚಿತನಾದ ಅವನೂ ಹಾಗೇ ಮಾಡಿದ. ವಿಭಿನ್ನ ಯೋಚನೆಗಳಲ್ಲಿ ಇಬ್ಬರೂ ಮನೆ ಕಡೆ ಹೊರಟರು.
ಮನೆಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ನಂತರ, ಅವನಿನ್ನೂ ಮಲಗಿರುವ ಹಾಗೆಯೇ ಅವಳು ಎದ್ದು ತನ್ನ ಬಟ್ಟೆಬರೆಗಳನ್ನು ಸೂಟ್‌ಕೇಸ್‌ಗೆ ಪ್ಯಾಕ್ ಮಾಡತೊಡಗಿದಳು. ಅವಳು ಮಧ್ಯೆ ಅಡುಗೆಮನೆಗೆ ಹೋಗಿ ಕಾಫಿ ಡಿಕಾಕ್ಷನ್ ಹಾಕಿಟ್ಟು, ರಾತ್ರಿ ಅಡುಗೆ ಸಾಕಾಗುತ್ತದೆ ತಾನೇ ಎಂದೆಲ್ಲ ಗಮನಿಸಿಕೊಂಡಳು.
ಅವಳ ಪ್ಯಾಕಿಂಗ್ ನಡೆದಿರುವಾಗಲೇ ಅವನು ಕಣ್ಣು ಉಜ್ಜುತ್ತಾ ಎದ್ದು ಬಂದ. “ಇದೇನು? ಪ್ಯಾಕಿಂಗ್ ನಡೆಯುತ್ತಿದೆಯಲ್ಲ….. ಎಲ್ಲಿಗಾದರೂ ಹೊರಡಬೇಕೇ?” ಅವನು ಮುಗ್ಧನಂತೆ ಪ್ರಶ್ನಿಸಿದ.
“ನಾನು ಅವತ್ತೇ ಹೇಳಿದ್ದೆನಲ್ಲ…. 1 ತಿಂಗಳು ನಮ್ಮ ಗೆಳೆತನ ಸುಸೂತ್ರವಾಗಿ ಮುಂದುವರಿಯಿತು. ಇನ್ನು ಮುಂದೆ ನೀವು ಸಂಪೂರ್ಣ ಸ್ವತಂತ್ರರು…. ಯು.ಎಸ್.ಗೆ ಹೊರಡಲು ಹೇಗೂ 2 ವಾರವಿದೆ. ಅಲ್ಲಿಯವರೆಗೂ 4 ದಿನ ಅಮ್ಮನ ಮನೆಯಲ್ಲಿರುತ್ತೇನೆ. ಅವರಂತೂ ಮುಂದೆ ನನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾರೆ.”
“ಅಂದ್ರೆ…. ಅಂದ್ರೆ…. ನೀನು ನನ್ನನ್ನು ಬಿಟ್ಟು ಹೊರಡಲೇಬೇಕು ಅಂತ ಡಿಸೈಡ್ ಮಾಡಿಬಿಟ್ಟೆಯಾ?” ಅವನ ಧ್ವನಿ ತುಸು ನಡುಗುತ್ತಿತ್ತು.
“ಈ ನಿರ್ಧಾರ ಖಂಡಿತಾ ನನ್ನದಲ್ಲ….. ಈ ಮದುವೆ ನಿಮಗೆ ಇಷ್ಟವೇ ಇರಲಿಲ್ಲ. ನನ್ನ ಮುಖ ಕಂಡರೂ ಮಾತನಾಡಿಸದೆ ಇರಲು ನಿಶ್ಚಯಿಸಿದಾಗ ನಾನೇ ಗೆಳೆತನ ಮುಂದುರಿಸುವ ಪ್ರಸ್ತಾಪವಿಟ್ಟೆ…. ನೀವೂ ಹ್ಞೂಂ ಅಂದ್ರಿ….. ಈಗ ಹೀಗೆ ಹೇಳಿದರೆ…”
“ಹೌದು ಆಕಾಂಕ್ಷಾ….. ಈ ವಿಷಯದಲ್ಲಿ ನಾನೇ ತಪ್ಪಿತಸ್ಥ ಅಂತ ನಿನ್ನ ಬಳಿ ಮತ್ತೆ ಮತ್ತೆ ಕ್ಷಮೆ ಕೇಳ್ತೀನಿ…… ನಾನು…. ನಾನು ಈಗ ನಿನ್ನಲ್ಲಿ ಒಂದು ಮನವಿ ಮಾಡಿಕೊಳ್ಳಬಹುದೇ…..?” ಭಾವುಕನಾಗಿ ಹೇಳಿದ.
“ಅದೇನು ಹೇಳಿ…..”
“ನಾವು 1 ತಿಂಗಳು ಗೆಳೆತನ ಮುಂದುರಿಸಿದೆವು. ಅದು ಶಾಶ್ವತಾಗಿ ಪ್ರೇಮವಾಗಿ, ಸುಖೀ ದಾಂಪತ್ಯವಾಗಿ ಬದಲಾಗಬಾರದೇ? ಒಂದು ತಿಂಗಳ ಈ ಅಂತರದಲ್ಲಿ ನಿನ್ನನ್ನು ಬಿಟ್ಟು ನಾನು ಇರಬಲ್ಲೆ ಎಂಬ ಧೈರ್ಯ ಖಂಡಿತಾ ಇಲ್ಲ….. ಯಾವುದೋ ಹಳೆಯ ಮಾತಿಗೆ ಕಟ್ಟುಬಿದ್ದು ನಮ್ಮ ಪ್ರಸ್ತುತ ಜೀವನ ವ್ಯರ್ಥವಾಗಬೇಕೇ?”
ಮದುವೆಯ ಮೊದಲ ದಿನದಿಂದ ಗಂಡನನ್ನೇ ಅಪಾರವಾಗಿ ಪ್ರೇಮಿಸುತ್ತಿದ್ದ ಅವಳು ಓಡಿ ಬಂದು ಅವನನ್ನು ತಬ್ಬಿಕೊಂಡಳು, ಅವನ ಎದೆಯಲ್ಲಿ ಮುಖ ಹುದುಗಿಸಿದಳು. ಅವನ ಕಣ್ಣಲ್ಲಿ ಆಗ ಆನಂದಭಾಷ್ಪವಿತ್ತು.
ಇಬ್ಬರೂ ಅಮೆರಿಕಾಗೆ ಮಧುಚಂದ್ರಕ್ಕೆ ಹೊರಟರೆಂದು ಹೇಳಬೇಕಿಲ್ಲ ಅಲ್ಲವೇ…….?