ನಾನು ಒಂದು ಖಾಸಗಿ ಶಾಲೆಯಲ್ಲಿ ಟೀಚರ್. ಶಾಲೆಯ ವಾಹನದಲ್ಲೇ ಮಕ್ಕಳ ಜೊತೆ ಓಡಾಡುತ್ತೇವೆ. ಒಂದು ದಿನ ಬೇಗ ಮನೆಗೆ ಹೊರಡಬೇಕಿತ್ತು. ಒಬ್ಬ ಆಟೋ ರಿಕ್ಷಾದವನಿಗೆ ನನ್ನನ್ನು ಮನೆ ತಲುಪಿಸಲು ಹೇಳಿದಾಗ ಆತ 35/ ರೂ. ಕೊಡಲು ಹೇಳಿದ.
“ನಮ್ಮ ಮನೆ ದಾರಿ ವಿನಿಮವ್ ಆಗುತ್ತದೆ. 25/ ರೂ. ತಗೊಳಪ್ಪ,” ಅಂದೆ.
ಖಂಡಿತಾ ಆಗಲ್ಲ. ಬೆಲೆ ಏರಿಕೆಯ ಈ ದಿನಗಳಲ್ಲಿ 35/ ರೂ. ಇಲ್ಲದೆ ಬರೋದೇ ಇಲ್ಲ ಅಂದ. ಆಗ ನನಗೆ ಒಪ್ಪದೆ ಬೇರೆ ದಾರಿ ಇರಲಿಲ್ಲ. ಬೇಗ ಮನೆ ತಲುಪಿಸಲು ಹೇಳಿದೆ.
ಅವನು ದಾರಿ ಇಡೀ ಬೆಲೆ ಏರಿಕೆ ಹೆಚ್ಚಿಸುತ್ತಿರುವ ಸರ್ಕಾರವನ್ನು ಬಯ್ಯುತ್ತಾ ಹೇಳಿದ, “ಮನೆಯಲ್ಲಿ ಐದು ಮಕ್ಕಳಿದ್ದಾರೆ. 1 ಕಿಲೋ ಅಕ್ಕಿ ಬೇಯಿಸದೆ ಎಲ್ಲರಿಗೂ ಒಂದು ಹೊತ್ತಿನ ಊಟ ಆಗೋದಿಲ್ಲ. ದಿನಾ ದಿನಾ ತರಕಾರಿ ಏನು ತರುವುದು? ಮಕ್ಕಳಿಗೆ ತಿಂಡಿ ಏನು ಮಾಡುವುದು? ಶಾಲೆ ಖರ್ಚು ಹೇಗೆ ನಿಭಾಯಿಸುವುದು?”
ನಾನು ಗಮನವಿಟ್ಟು ಅವನ ಮಾತು ಕೇಳುತ್ತಿದ್ದೆ. ಅವನು ಅದೂ ಇದೂ ಬಡಬಡಿಸುತ್ತಲೇ ಇದ್ದ. ದಾರಿ ಮಧ್ಯೆ ಅಂಚೆ ಕಛೇರಿ ಕಂಡು ಥಟ್ಟನೆ ಏನೋ ನೆನಪಾಯ್ತು.
“5/ ರೂ. ಜಾಸ್ತಿ ಕೊಡ್ತೀನಿ. ಒಂದು ನಿಮಿಷ ಇಲ್ಲೇ ಇರಪ್ಪ ಅರ್ಜೆಂಟಾಗಿ ಪೋಸ್ಟ್ ಆಫೀಸ್‌ನಲ್ಲಿ ಏನೋ ತಗೋಬೇಕು,” ಎಂದು ಅವನನ್ನು ಒಪ್ಪಿಸಿ ಕಾಯಲು ಹೇಳಿ ನಾನು ಒಳಗೆ ಓಡಿದೆ.
ಅಲ್ಲಿನ ಕೆಲಸ ಮುಗಿಸಿ ಬರುವಾಗ, ಮನೆಗಾಗಿ ಸ್ವಲ್ಪ ಸಾಮಾನು ಕೊಂಡುಕೊಂಡೆ. ಏನೋ ನೆನಪಾಗಿ ಆತನಿಗಾಗಿ 40/ ರೂ.ಗಳ 1 ಕೆ.ಜಿ. ಅಕ್ಕಿ ಕೊಂಡುಕೊಂಡೆ. ಅಂತೂ ಆಟೋ ಮುಂದೆ ಹೊರಟಿತು. ಅವನು ಮತ್ತೆ ಶುರು ಮಾಡಿದ, “ಇಂಥ ದುಬಾರಿ ಆಗೋದ್ರೆ ದಿನಾ ಏನು ತಿನ್ನುವುದು? ಎಷ್ಟೋ ಸಲ ನುಚ್ಚಕ್ಕಿ ತಂದು ಜಾಸ್ತಿ ನೀರು, ಉಪ್ಪು ಹಾಕಿ ಗಂಜಿ ಮಾಡಿ ಕುಡಿಯುತ್ತೀವಿ ಅದೇ ಸಾಕಾಗುತ್ತೆ…..”
ಹೀಗೆ ನಮ್ಮ ಮನೆ ಮುಂದೆ ಇಳಿದಿದ್ದಾಯ್ತು. ಹೇಳಿದಂತೆ ನಾನು ಆತನಿಗೆ 40/ ರೂ. ದುಡ್ಡು ಕೊಟ್ಟು 1 ಕೆ.ಜಿ. ಅಕ್ಕಿ ಸಹ ಕೊಟ್ಟೆ. ಆದರೆ ಆತ ಅಕ್ಕಿ ಮುಟ್ಟಲೇ ಇಲ್ಲ. ಅಕ್ಕಿ ಬೇಡ ಎನ್ನುತ್ತಾ, “ಮೇಡಂ, ನಾನು ಕಷ್ಟಪಟ್ಟು ಸಂಪಾದಿಸದ ಈ ಅಕ್ಕಿ ಮೇಲೆ ನನಗೆ ಹಕ್ಕಿಲ್ಲ. ಬೇಡ…. ಥ್ಯಾಂಕ್ಸ್,” ಎಂದ.
ಆಗ ನಾನು, ನಾನೊಬ್ಬ ಟೀಚರ್. ನಿನ್ನ ಮಕ್ಕಳಿಗಾಗಿ ಅವರ ಟೀಚರ್ ಕಳುಹಿಸಿದ್ದಾರೆ ಎಂದು ಹೇಳು. ಮಕ್ಕಳು ಒಂದು ಹೊತ್ತು ನೆಮ್ಮದಿಯಾಗಿ ಊಟ ಮಾಡಲಿ ಎಂದು ಬಹಳ ಬಲವಂತ ಮಾಡಿ, ಏನೇನೋ ಹೇಳಿ ಒಪ್ಪಿಸಿದಾಗ ಆತ ಅದನ್ನು ತೆಗೆದುಕೊಂಡ.
ಮನೆಗೆ ಹೋಗಿ ಅದನ್ನೇ ಯೋಚಿಸುತ್ತಿದ್ದೆ. ಸುಶಿಕ್ಷಿತರಾದರೂ ಇಂದಿನ ನಾಗರಿಕರು ಲಂಚ, ಸ್ವಾರ್ಥಕ್ಕಾಗಿ ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸಾಮಾನ್ಯ ಜನರಿಗೆ ಎಷ್ಟೆಲ್ಲ ಮೋಸ ಮಾಡುತ್ತಾರೆ, ಆದರೆ ತನ್ನ ದುಡಿಮೆ ಅಲ್ಲದ ಅಕ್ಕಿ ಮುಟ್ಟಲ್ಲ ಎಂದು ಆತ ಹೇಳಿದನಲ್ಲ ಎಂದು ಆಟೋ ಡ್ರೈವರ್ ಬಗ್ಗೆ ಹೆಮ್ಮೆ ಎನಿಸಿತು. ಪ್ರತಿಯೊಬ್ಬರೂ ಹೀಗೆ ಆಲೋಚಿಸಿದರೆ ನಮ್ಮ ದೇಶದ ಎಷ್ಟೋ ಸಮಸ್ಯೆ ತಾನಾಗಿ ಕರಗುತ್ತದಲ್ಲವೇ ಎನಿಸಿತು.
– ಮಧುರಾ, ಬೆಂಗಳೂರು.