ವರ್ಷದಲ್ಲಿ ಒಂದು ಸಲ ಬರುವ ಪಿತೃಪಕ್ಷ ಎಂತಹ ಒಂದು ಅವಧಿಯೆಂದರೆ, ಹಿಂದೂ ಧರ್ಮದವರು ತಮ್ಮ ಪೂರ್ವಜರ ಗೌರವದ ಪ್ರಯುಕ್ತ ಒಂದು ಪದ್ಧತಿ ಅನುಸರಿಸುತ್ತಾರೆ. ಅದನ್ನೇ `ಶ್ರಾದ್ಧ’ ಎಂದು ಕರೆಯಲಾಗುತ್ತದೆ. ಅಂದಹಾಗೆ ಇದು ನಮ್ಮ ಪೂರ್ವಿಕರನ್ನು ನೆನಪಿಸಿಕೊಳ್ಳುವ ಒಂದು ಸಂದರ್ಭವಾಗಿರುತ್ತದೆ. ಆದರೆ, ಧರ್ಮದ ಗುತ್ತಿಗೆದಾರರು, ಪುರೋಹಿತರು ಪ್ರಾಚೀನ ಕಾಲದಿಂದಲೇ ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಪಿತೃಪಕ್ಷದ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಹಲವು ಬಗೆಯ ರುಚಿಕರ ಆಹಾರ ಪದಾರ್ಥಗಳು ತಯಾರಾಗುತ್ತಿದ್ದುದನ್ನು ನಾನು ಕಂಡಿದ್ದೇನೆ. ನಾವು ಆ ಆಹಾರ ಪದಾರ್ಥಗಳ ಒಂದಿಷ್ಟು ಭಾಗವನ್ನು ಹೊಲದಲ್ಲಿರುವ ಮರದ ಹತ್ತಿರ ಇಡುತ್ತಿದ್ದೆವು. ಆ ಆಹಾರವನ್ನು ಹಲವು ಕಾಗೆಗಳು ತಿಂದು ಮುಗಿಸುತ್ತಿದ್ದವು. ಆಗ ಅಪ್ಪ ನಮಗೆ ಹೇಳುತ್ತಿದ್ದುದು, “ಇವು ನಮ್ಮ ಹಿರಿಯರ ಆತ್ಮಶಾಂತಿಗೆ ಮಾಡಿದ ಪದಾರ್ಥಗಳು.”
ಅದೇ ರೀತಿ ಪಕ್ಕದ ಮನೆಯ ಶಶಿಧರ್ ಪಿತೃಪಕ್ಷದ ಸಂದರ್ಭದಲ್ಲಿ ತಮ್ಮ ಕಟ್ಟಡದ ಮೇಲ್ಭಾಗದಲ್ಲಿ ಒಂದು ಕಡೆ ವಿವಿಧ ತಿಂಡಿಗಳನ್ನು ಹಾಗೂ ನೀರಿನ ಪಾತ್ರೆಯೊಂದನ್ನು ಇಡುತ್ತಾರೆ. ಅವರ ಪ್ರಕಾರ, “ಈ ಅವಧಿಯಲ್ಲಿ ನಮ್ಮ ಪೂರ್ವಿಕರು ಭೂಮಿಗೆ ಬಂದು ಆಹಾರ ಸೇವಿಸಿ ಹೋಗುತ್ತಾರೆ. ಆಗಲೇ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ. ಹಾಗೊಮ್ಮೆ ನಾವು ಈ ಪದ್ಧತಿ ಅನುಸರಿಸದೇ ಇದ್ದರೆ, ಇಡೀ ವರ್ಷ ತೊಂದರೆಯಲ್ಲಿ ಕಳೆಯಬೇಕಾಗುತ್ತದೆ,” ಎಂದು ಹೇಳುತ್ತಾರೆ.
ಏನಿದು ಶ್ರಾದ್ಧ?
ನಮ್ಮ ಕುಟುಂಬ, ದೇವರು ಹಾಗೂ ವಂಶಪರಂಪರೆಗಳ ಬಗ್ಗೆ ಶ್ರದ್ಧೆ ವ್ಯಕ್ತಪಡಿಸುವುದನ್ನು `ಶ್ರಾದ್ಧ’ ಎಂದು ಕರೆಯುತ್ತೇವೆ. ಇದೊಂದು ರೀತಿಯಲ್ಲಿ ಪೂಜೆಯಾಗಿದೆ. ಇದರಲ್ಲಿ ಪಿತೃಗಳ ಆತ್ಮಶಾಂತಿಗೆ ಆಹಾರ ಮತ್ತು ಜಲವನ್ನು ಅರ್ಪಿಸಲಾಗುತ್ತದೆ. ಇದರ ಜೊತೆಗೆ ಬ್ರಾಹ್ಮಣರಿಗೆ ಭೋಜನ, ದಾನ ನೀಡುವುದು ಮತ್ತು ಪೂಜೆ ಪುನಸ್ಕಾರ ಮುಂತಾದವನ್ನು ಮಾಡಲಾಗುತ್ತದೆ.
ಬ್ರಹ್ಮ ಪುರಾಣದ ಪ್ರಕಾರ, ಒಂದು ಸೂಕ್ತ ಸಮಯದಲ್ಲಿ, ಸೂಕ್ತ ಸ್ಥಳದಲ್ಲಿ ನಮ್ಮ ಪೂರ್ವಿಕರಿಗೆ ವಿಧಿಪೂರ್ವಕವಾಗಿ ಯಾವ ಕರ್ಮ ಕೈಗೊಳ್ಳಲಾಗುತ್ತದೊ ಅದನ್ನು `ಶ್ರಾದ್ಧ’ ಎಂದು ಕರೆಯಲಾಗುತ್ತದೆ. ಸಾವಿನ ಬಳಿಕ ಮನುಷ್ಯನ ಆತ್ಮ ಸಾಯುವುದಿಲ್ಲ. ಕರ್ಮದ ಆಧಾರದ ಮೇಲೆ ಆತ್ಮಕ್ಕೆ ದೇವಯೋಗ ಇಲ್ಲವೇ ಮನುಷ್ಯ ಯೋಗ ಪ್ರಾಪ್ತವಾಗುತ್ತದೆ. ಒಳ್ಳೆಯ ಕರ್ಮ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುವ ಆತ್ಮ ಸ್ವರ್ಗ ಸೇರುತ್ತದೆ. ಆದರೆ ಕೆಲವು ಆತ್ಮಗಳು ತಮ್ಮದೇ ಇಚ್ಛೆಗಳ ಅಧೀನದಲ್ಲಿ ಸಿಲುಕಿಬಿಡುತ್ತವೆ. ಅದರಿಂದ ಹೊರಬರಲು ಅವುಗಳಿಗೆ ಸಾಕಷ್ಟು ಸಮಯ ತಗುಲುತ್ತದೆ. ಇದು ಎಂತಹ ಒಂದು ಸಮಯವಾಗಿರುತ್ತದೆ ಎಂದರೆ ಆ ಆತ್ಮ ವಾಯುರೂಪದಲ್ಲಿ ಭೂಮಿಯ ಮೇಲೆ ಅಲೆದಾಡುತ್ತಿರುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಶ್ರಾದ್ಧ ಮಾಡಲು ಆಗದೇ ಹೋದರೆ ಅವನಿಗೆ ಮುಕ್ತಿ ದೊರಕುವುದಿಲ್ಲ. ಹಿಂದೂ ಪುರಾಣದಲ್ಲಿ ಪಿತೃ ಋಣವನ್ನು ಅತಿ ದೊಡ್ಡ ಋಣವೆಂದು ಬಣ್ಣಿಸಲಾಗಿದೆ. ಅದರಿಂದ ಮುಕ್ತಿ ಕಂಡುಕೊಳ್ಳಲು `ಶ್ರಾದ್ಧ’ ಮಾಡಲಾಗುತ್ತದೆ.
ಧರ್ಮದ ಗುತ್ತಿಗೆದಾರರ ತರ್ಕ
ಪೂಜಾರಿ ಪುರೋಹಿತರು ಶತ ಶತಮಾನಗಳಿಂದ ತಮ್ಮ ಕುಟಿಲ ಬುದ್ಧಿ ತೋರಿಸಿಕೊಳ್ಳುತ್ತ ತಮ್ಮನ್ನು ದೇವತೆಗಳ ಅವತಾರವೆಂದು ಹೇಳಿಕೊಂಡು ಜನರಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದಾರೆ. ಅವರು ಹೇಳುವುದೇನೆಂದರೆ, ಪಿತೃಪಕ್ಷದ ಸಂದರ್ಭದಲ್ಲಿ ಯಮರಾಜ ಪಿತೃಗಳನ್ನು ಸ್ವತಂತ್ರಗೊಳಿಸುತ್ತಾನೆ. ಏಕೆಂದರೆ ಅವರು ತಮ್ಮರಿಂದ ಶ್ರಾದ್ಧವನ್ನು ಸ್ವೀಕರಿಸಲಿ ಎಂದು.
ಈ ಅವಧಿಯಲ್ಲಿ ಪಿತೃ ಜನರು ಬ್ರಾಹ್ಮಣರ ದೇಹದಲ್ಲಿ ವಾಯುರೂಪದಲ್ಲಿ ಪ್ರವೇಶಿಸುತ್ತಾರೆ. ಆಗ ಬ್ರಾಹ್ಮಣರಿಗೆ ಬಟ್ಟೆ, ಆಹಾರ ಮುಂತಾದವುಗಳನ್ನು ದಾನವಾಗಿ ಕೊಟ್ಟುಬಿಟ್ಟರೆ ಅವರು ಖುಷಿಗೊಳ್ಳುತ್ತಾರೆ. ತಮ್ಮ ವಂಶಜರ ಜೀವನವನ್ನು ಸಂತತಿ, ಸಂಪತ್ತು, ವಿದ್ಯೆ, ಸ್ವರ್ಗ, ಮೋಕ್ಷ ಮುಂತಾದ ಸುಖಗಳಿಂದ ಭರ್ತಿ ಮಾಡುತ್ತಾರೆ.
ಹೀಗೆ ಮಾಡದೇ ಇದ್ದರೆ ಪೂರ್ವಜರು ಅತೃಪ್ತರಾಗುತ್ತಾರೆ. ಆ ಕಾರಣದಿಂದ ಅವರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ವಿದ್ಯೆಯಲ್ಲಿ ವಿಫಲತೆ, ಧನಹಾನಿ, ಸಂತಾನ ಪ್ರಾಪ್ತಿಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರಗಳ ಮುಖಾಂತರ ಧರ್ಮಗುರುಗಳು ಹಾಗೂ ಬ್ರಾಹ್ಮಣರು ಸಾವಿರಾರು ವರ್ಷಗಳಿಂದ ಸಾಮಾನ್ಯರ ಮನಸ್ಸಿನಲ್ಲಿ ಭಯ, ಹೆದರಿಕೆ, ಹುಟ್ಟಿಸಿಬಿಟ್ಟಿದ್ದಾರೆ. ಅದರ ದುರ್ಲಾಭವನ್ನು ಸಾವಿರಾರು ವರ್ಷಗಳಿಂದ ಪಡೆಯುತ್ತ ಬಂದಿದ್ದಾರೆ.
ಜಾಗರೂಕತೆಯ ಕೊರತೆ
ಪೂರ್ವಜರಿಗೆ ಕೊಟ್ಟ ಆಹಾರ ನಿಜಕ್ಕೂ ಅವರಿಗೆ ತಲುಪುತ್ತಾ ಎಂಬುದನ್ನು ನಾವು ವಿಚಾರ ಮಾಡಲು ಹೋಗುವುದಿಲ್ಲ. ನಮ್ಮ ಪೂರ್ವಜರು ಸಾವಿನ ಬಳಿಕ ಎಲ್ಲಿ ಹುಟ್ಟಿದರು ಅಥವಾ ಬ್ರಾಹ್ಮಣರಿಗೆ ಹೊಟ್ಟೆ ತುಂಬ ಊಟ ಮಾಡಿಸಿದಾಗ ಅದು ನಮ್ಮ ಪೂರ್ವಿಕರ ಹೊಟ್ಟೆಯನ್ನು ಹೇಗೆ ತುಂಬಿಸುತ್ತದೆ ಎಂಬ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರ ದೊರಕುವುದಿಲ್ಲ. ಏಕೆಂದರೆ ಧಾರ್ಮಿಕ ಕರ್ಮಕಾಂಡಗಳಿಗೆ ಯಾವುದೇ ಆಧಾರ ಇಲ್ಲ. ವಿಜ್ಞಾನದ ಜೀವನ ರಚನೆ ಪಂಚತತ್ವ ಅಂದರೆ ಭೂಮಿ, ನೀರು, ಬೆಂಕಿ, ಆಕಾಶ ಮತ್ತು ಗಾಳಿ ಇವುಗಳಿಂದ ಆಗಿದೆ. ಸತ್ತ ಬಳಿಕ ವಾಪಸ್ಸು ತಮ್ಮ ತಮ್ಮದೇ ಆದ ರೂಪದಲ್ಲಿ ಸೇರಿಕೊಳ್ಳುತ್ತವೆ.
ಸ್ವರ್ಗ ನರಕ ಕೇವಲ ಕಲ್ಪನೆ ಮಾತ್ರ. ಹಿಂದೂ ಧರ್ಮದ ಪ್ರಕಾರ, ಪಿತೃಪಕ್ಷದ ಸಂದರ್ಭದಲ್ಲಿ ಯಾವುದೇ ಶುಭ ಕೆಲಸ ಮಾಡಬಾರದು, ಇಲ್ಲದಿದ್ದರೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ.
ಇದರ ಹಾನಿಯ ಹೆದರಿಕೆಯನ್ನು ಜನರ ಮನಸ್ಸಿನಲ್ಲಿ ಅದೆಷ್ಟು ಆಳವಾಗಿ ಬೇರೂರಿಸಲಾಗಿದೆ ಎಂದರೆ, ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಯಾರೂ ತಯಾರಿಲ್ಲ. ಅವರು ಯಾವುದೇ ವೈಜ್ಞಾನಿಕ ತರ್ಕವನ್ನು ಒಪ್ಪುವುದಿಲ್ಲ. ಒಂದೆಡೆ ಅಶುಭ ಆಗುವ ಭಯ ಇನ್ನೊಂದೆಡೆ ಸಾಂಸಾರಿಕ ಸುಖದ ಶೋಧದಲ್ಲಿ ತೋರಿಕೆಯ ಅಸ್ತ್ರವನ್ನು ಸಹಜವಾಗಿಯೇ ಅನುಸರಿಸುತ್ತಾರೆ. ಇದು ಕಾಗೆಗೆ ಆಹಾರ ಹಾಕುವುದೇ ಆಗಿರಬಹುದು ಅಥವಾ ಬ್ರಾಹ್ಮಣರ ದೇಹದಲ್ಲಿ ದೇವತೆಗಳ ಪ್ರವೇಶದ ಮಾತೇ ಆಗಿರಬಹುದು. ಜನರು ಪ್ರಶ್ನೆ ಹಾಗೂ ತರ್ಕ ಮಾಡುವ ಬದಲು ಹೇಗೆ ನಡೆಯುತ್ತಿದೆಯೋ ಹಾಗೆಯೇ ಸ್ವೀಕಾರ ಮಾಡುವುದು ಸೂಕ್ತ ಎಂದು ಭಾವಿಸುತ್ತಾರೆ. ಇದು ಒಂದು ರೀತಿಯ ಮೂರ್ಖತನ ಮತ್ತು ಮೂಢನಂಬಿಕೆ ಎಂದು ಹೇಳಬಹುದು.
ಮಹಾರಾಷ್ಟ್ರ ಮೂಢನಂಬಿಕೆ ನಿರ್ಮೂಲನಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಶೀಲಾ ಹೇಳುವುದು ಹೀಗೆ, “ಈ ಕರ್ಮಕಾಂಡಗಳ ಕಾರಣದಿಂದಾಗಿಯೇ ಧರ್ಮ ಹಾಗೂ ಧಾರ್ಮಿಕ ಸಂಗತಿಗಳು ಮಹತ್ವ ಪಡೆದುಕೊಳ್ಳುತ್ತಿವೆ. ಇದು ಶತ ಶತಮಾನಗಳಿಂದ ಹಾಗೆಯೇ ಮುಂದುವರಿಯುತ್ತಿದೆ. ಇವುಗಳಿಗೆ ನಿಶ್ಚಿತವಾಗಿ ಇಂಥವರೇ ಹೊಣೆ ಎಂದು ಹೇಳುವುದು ಕಷ್ಟ. ನಮ್ಮ ಮನೆ, ಶಾಲೆ, ಸಮಾಜ, ಸರ್ಕಾರ ಹಾಗೂ ನ್ಯಾಯ ವ್ಯವಸ್ಥೆ ಕಾರಣ.”
ಯಾದೇ ಒಂದು ಸಂಗತಿ ಬಗ್ಗೆ ಶ್ರದ್ಧೆ ವ್ಯಕ್ತಿಯೊಬ್ಬನ ವೈಯಕ್ತಿಕ ವಿಷಯ. ಆದರೆ ಮೂಢನಂಬಿಕೆ ಹಾಗೂ ಧರ್ಮದ ಹೆಸರಿನಲ್ಲಿ ಶೋಷಣೆ ಸಮಾಜವನ್ನು ಪ್ರಗತಿ ಪಥದಲ್ಲಿ ಸಾಗಲು ಬಿಡುವುದಿಲ್ಲ. ಪೂಜಾರಿ ಪುರೋಹಿತರು ನಿಸ್ಸಂತಾನದ ಪ್ರಕರಣಗಳಲ್ಲಿ ವಿಶೇಷವಾಗಿ ಪಿತೃದೋಷವನ್ನು ಹೊಣೆಗಾರ ಎಂದು ಭಾವಿಸುತ್ತಾರೆ. ಹಾಗೂ ಶ್ರಾದ್ಧ ಮಾಡುವ ನೆಪದಲ್ಲಿ ದಾನದ ರೂಪದಲ್ಲಿ ಭಾರಿ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಾರೆ. ಇದಕ್ಕೆಲ್ಲ ಮೂಲ ಇದರ ಬಗ್ಗೆ ಪ್ರಶ್ನೆ ಮಾಡದಿರುವುದು, ತರ್ಕ ಮಾಡದೇ ಇರುವುದು.
ವೈಜ್ಞಾನಿಕ ಸತ್ಯವನ್ನು ಅಲ್ಲಗಳೆಯುವಂಥ, ಮನುಷ್ಯ ಮನುಷ್ಯರ ನಡುವೆ ಭೇದಭಾವ ಹೆಚ್ಚಿಸುವ ಪರಂಪರೆಗಳನ್ನು ನಾವು ಬಹಿಷ್ಕರಿಸಬೇಕು.
– ರಂಜಿತಾ