ಗೋಭಿ ಮಟರ್‌ ಕಬಾಬ್‌

ಕೋಫ್ತಾಗಾಗಿ ಸಾಮಗ್ರಿ : 3 ಕಪ್‌ ತುರಿದ ಹೂಕೋಸು, 1 ಕಪ್‌ಹಸಿ ಬಟಾಣಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಹಸಿ ಮೆಣಸು, ಪುದೀನಾ, ಶುಂಠಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂ ಮಸಾಲ, ಚಾಟ್‌ ಮಸಾಲ, ಅರಿಶಿನ. 1 ಕಪ್ ಕಡಲೆಹಿಟ್ಟು, ಕರಿಯಲು ಎಣ್ಣೆ.

ಮಸಾಲೆಗಾಗಿ ಸಾಮಗ್ರಿ : ತುಸು ಜೀರಿಗೆ ಸೋಂಪು, 1-2 ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಧನಿಯಾಪುಡಿ, ಗರಂ ಮಸಾಲ, 4 ಚಮಚ ತುಪ್ಪ, ತುಸು ಹೆಚ್ಚಿದ ಕೊ.ಸೊಪ್ಪು, ಅರ್ಧ ಕಪ್‌ ಮೊಸರು.

ವಿಧಾನ : 1 ನಾನ್‌ಸ್ಟಿಕ್‌ ಪ್ಯಾನಿನಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಹಸಿ ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ ಹಾಕಿ ಕೆದಕಿರಿ. ನಂತರ ಅರಿಶಿನ, ತುರಿದ ಹೂಕೋಸು, ಹಸಿ ಬಟಾಣಿ ಹಾಕಿ ಬಾಡಿಸಿ. ಇದಕ್ಕೆ ಉಪ್ಪು ಹಾಕಿ, ಮುಚ್ಚಳ ಮುಚ್ಚಿರಿಸಿ 5 ನಿಮಿಷ ಬೇಯಿಸಿ. ಇದಕ್ಕೆ ಉಳಿದ ಮಸಾಲೆ, ಕಡಲೆಹಿಟ್ಟು ಹಾಕಿ ಕೆದಕಿ ಕೆಳಗಿಳಿಸಿ. ಆರಿದ ನಂತರ ಈ ಮಿಶ್ರಣವನ್ನು ಪಕೋಡಾ ತರಹ ಕಲಸಿ, ಉಂಡೆ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಅದೇ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ಸೋಂಪು, ಜೀರಿಗೆ ಒಗ್ಗರಣೆ ಕೊಡಿ. ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಉಳಿದೆಲ್ಲ ಮಸಾಲೆ,  ಉಪ್ಪು, ಖಾರ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ ಮೊಸರು ಬೆರೆಸಿ ಕೈಯಾಡಿಸಿ. ಅರ್ಧ ಲೋಟ ನೀರು ಬೆರೆಸಿ ಚೆನ್ನಾಗಿ ಕುದ್ದ ಮೇಲೆ ಕೋಫ್ತಾ ತೇಲಿಬಿಟ್ಟು ಎಲ್ಲಾ ಬೆರೆತುಕೊಳ್ಳುವಂತೆ ಮಾಡಿ. 5 ನಿಮಿಷ ಕುದ್ದ ನಂತರ ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.

ಸೋಯಾ ವೆಜ್‌ ಕೀಮಾ

vegitable-triet 2

ಸಾಮಗ್ರಿ : 1 ಕಪ್‌ ಸೋಯಾಬೀನ್ಸ್ ಗ್ರಾನ್ಯುಯೆಲ್ಸ್, 1 ಕಪ್‌ ಹಸಿ ಬಟಾಣಿ, ಅರ್ಧರ್ಧ ಕಪ್‌ ಈರುಳ್ಳಿ ಟೊಮೇಟೊ ಪೇಸ್ಟ್, 1-1 ಸಣ್ಣ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಮ್ಯಾಗಿ ಮಸಾಲ, ನಿಂಬೆರಸ, ಅರಿಶಿನ, ಒಂದಿಷ್ಟು ಕೊ.ಸೊಪ್ಪು.

ವಿಧಾನ : 3 ಕಪ್‌ ನೀರಿಗೆ ನಿಂಬೆರಸ, ಉಪ್ಪು ಬೆರೆಸಿ ಅದರಲ್ಲಿ ಸೋಯಾ ಗ್ರಾನ್ಯುಯೆಲ್ಸ್ ನ್ನು ಅರ್ಧ ಗಂಟೆ ಕಾಲ ನೆನೆ ಹಾಕಿಡಿ. ನಂತರ ನೀರನ್ನು ಬಸಿದಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದರಲ್ಲಿ ಈರುಳ್ಳಿ ಪೇಸ್ಟ್ ಹಾಕಿ ಬಾಡಿಸಿ, ಹಸಿ ಬಟಾಣಿ ಹಾಕಿ ನೀರು ಚಿಮುಕಿಸಿ ಬೇಯಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಿರಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕುತ್ತಾ ಟೊಮೇಟೊ ಪೇಸ್ಟ್ ಹಾಕಿ ಕೈಯಾಡಿಸಿ. ಆಮೇಲೆ ನೆನೆದ ಸೋಯಾ ಹಾಕಿ ಬೆರೆತುಕೊಳ್ಳುವಂತೆ ಮಾಡಿ. ತುಸು ನೀರು ಚಿಮುಕಿಸಿ ಬೇಯಿಸಿ. ಆಮೇಲೆ ಮ್ಯಾಗಿ ಮಸಾಲ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಮಂದ ಉರಿಯಲ್ಲಿ ಕೆದಕಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಉದುರಿಸಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಪಲ್ಯ

vegitable-triet-3

 

ಸಾಮಗ್ರಿ : 500 ಗ್ರಾಂ ಎಲೆಕೋಸು, 1 ಕಪ್‌ ತುಂಡರಿಸಿದ ಕ್ಯಾರೆಟ್‌, ಅರ್ಧ ಕಪ್‌ ಹಸಿ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು, ತುಂಡರಿಸಿದ ಒಣ ಮೆಣಸಿನಕಾಯಿ, ಕಾಳು ಮೆಣಸು, ಅರಿಶಿನ, ನಿಂಬೆರಸ, ಒಗ್ಗರಣೆಗೆ ಸಾಸುವೆ, ಜೀರಿಗೆ, ಮೆಂತ್ಯ, ಕೊಬ್ಬರಿ ಎಣ್ಣೆ, ಕರಿಬೇವು, 1 ಗಿಟಕು ತೆಂಗಿನ ತುರಿ, 2-3 ಈರುಳ್ಳಿ, ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕೊ.ಸೊಪ್ಪು.

ವಿಧಾನ : ಮೊದಲು ಹೆಚ್ಚಿದ ಎಲೆಕೋಸು, ಕ್ಯಾರೆಟ್‌ ಸೇರಿಸಿ 1 ಸೀಟಿ ಬರುವಂತೆ ಕುಕ್ಕರ್‌ನಲ್ಲಿ ಬೇಯಿಸಿ. ಬಾಣಲೆಯಲ್ಲಿ  ಕೊಬ್ಬರಿ ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ, ಮೆಂತ್ಯ, ಕರಿಬೇವಿನ ಒಗ್ಗರಣೆ ಕೊಡಿ. ನಂತರ ಶುಂಠಿ, ಬೆಳ್ಳುಳ್ಳಿ, ಕಾಳುಮೆಣಸು, ಒಣಮೆಣಸಿನಕಾಯಿ, ಹಸಿ ಮೆಣಸು ಎಲ್ಲಾ ಹಾಕಿ ಕೆದಕಬೇಕು. ಆಮೇಲೆ ಎಲೆಕೋಸು, ಕ್ಯಾರೆಟ್‌, ತೆಂಗಿನ ತುರಿ ಹಾಕಿ ಬಾಡಿಸಿ. ಇದಕ್ಕೆ ಉಪ್ಪು, ಅರಿಶಿನ, 2 ಚಿಟಕಿ ಸಕ್ಕರೆ ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಇದಕ್ಕೆ ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು ಉದುರಿಸಿ ಬಿಸಿಯಾದ ಅನ್ನ ತಿಳಿಸಾರಿನ ಜೊತೆ ಸವಿಯಲು ಕೊಡಿ.

ಪಾಲಕ್‌ ಕೋಫ್ತಾ ಕರೀ

vegitable-triet-4

ಕೋಫ್ತಾಗಾಗಿ ಸಾಮಗ್ರಿ : 2 ಕಂತೆ ತಾಜಾ ಪಾಲಕ್‌ ಸೊಪ್ಪು, 4-5 ಈರುಳ್ಳಿ, 1-1 ಚಮಚ ಹೆಚ್ಚಿದ ಶುಂಠಿ, ಹಸಿಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತರಿಯಾಗಿ ಕುಟ್ಟಿದ ಧನಿಯಾ, ಜೀರಿಗೆ, 2 ಕಪ್‌ ಕಡಲೆಹಿಟ್ಟು, ಕರಿಯಲು ಎಣ್ಣೆ.

ಕರೀ ಸಾಮಗ್ರಿ : 1 ದೊಡ್ಡ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲ, ಚಾಟ್‌ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಧನಿಯಾಪುಡಿ, ಅರ್ಧ ಕಪ್‌ ಟೊಮೇಟೊ ಪೇಸ್ಟ್, 2 ಚಮಚ ಗೋಡಂಬಿ ಪೇಸ್ಟ್, 1 ಚಮಚ ಗಸಗಸೆ ಪೇಸ್ಟ್, ಅರ್ಧ ಕಪ್ ತೆಂಗಿನ ಹಾಲು, ಅರ್ಧ ಸೌಟು ಬೆಣ್ಣೆ, ತುಸು ಕೊ.ಸೊಪ್ಪು.

ವಿಧಾನ : ಮೊದಲು ಪಾಲಕ್‌ ಸೊಪ್ಪು ಶುಚಿಗೊಳಿಸಿ ದಪ್ಪಗೆ ಹೆಚ್ಚಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಈರುಳ್ಳಿ ಉಳಿದೆಲ್ಲ ಪದಾರ್ಥ ಹಾಕಿ ಬಾಡಿಸಿ. ಇದಕ್ಕೆ ಸೊಪ್ಪು ಹಾಕಿ ಬಾಡಿಸಿದ ಮೇಲೆ ಕೆಳಗಿಳಿಸಿ. ಆರಿದ ನಂತರ ಮಿಕ್ಸಿಯಲ್ಲಿ ನೀರಿಲ್ಲದೆ ತಿರುವಿಕೊಳ್ಳಿ. ಇದಕ್ಕೆ ಕಡಲೆಹಿಟ್ಟು, ತುಸು ನೀರು ಚಿಮುಕಿಸಿ ಪಕೋಡ ಹಿಟ್ಟಿನಂತೆ ಕಲಸಿ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಅದೇ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಮಂದ ಉರಿಯಲ್ಲಿ ಒಂದೊಂದೇ ಮಸಾಲೆ ಪದಾರ್ಥ ಹಾಕಿ ಕೆದಕಬೇಕು. ತೆಂಗಿನ ಹಾಲು, ಟೊಮೇಟೊ ಪೇಸ್ಟ್ ಬೆರೆಸಿ ಕೆದಕಿದ ನಂತರ ಅರ್ಧ ಕಪ್‌ ನೀರು ಬೆರೆಸಿ ಗ್ರೇವಿ ಕುದಿಸಿರಿ. ಇದಕ್ಕೆ ಕರಿದ ಕೋಫ್ತಾ ತೇಲಿಬಿಟ್ಟು ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಮೇಲೆ ಕೊ.ಸೊಪ್ಪು ಉದುರಿಸಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಟರ್ನಿಪ್‌ ಪಲ್ಯ

vegitable-triet-5

ಸಾಮಗ್ರಿ : 500 ಗ್ರಾಂ ಟರ್ನಿಪ್‌ (ಕೆಂಪು ಮೂಲಂಗಿ), 4-5 ಹುಳಿ ಟೊಮೇಟೊ, 1 ಕಪ್‌ ಹಸಿ ಬಟಾಣಿ, 2 ಈರುಳ್ಳಿ, ತುಸು ಹೆಚ್ಚಿದ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ತೆಂಗಿನ ತುರಿ.

ವಿಧಾನ : ಮೊದಲು ಟರ್ನಿಪ್‌ ಶುಚಿಗೊಳಿಸಿ ನೀಟಾಗಿ ತುರಿದಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಒಗ್ಗರಣೆ ಕೊಟ್ಟು ಹೆಚ್ಚಿದ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ. ನಂತರ ಹಸಿ ಬಟಾಣಿ, ಟರ್ನಿಪ್‌ ತುರಿ, ಉಪ್ಪು ಹಾಕಿ ಬೇಯಲು ಬಿಡಿ. ಮಂದ ಉರಿಯಲ್ಲಿ ಕೆದಕುತ್ತಾ ತೆಂಗಿನ ತುರಿ ಹಾಕಿ ಹದನಾಗಿ ಬಾಡಿಸಿ. ನಂತರ ಖಾರ, ನಿಂಬೆರಸ, ಕೊ.ಸೊಪ್ಪು ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಈ ಪಲ್ಯ ರೊಟ್ಟಿ, ಚಪಾತಿ, ಅನ್ನಕ್ಕೂ ಹೊಂದುತ್ತದೆ.

ಮೂಲಂಗಿ ಮಸಾಲೆ ಪಲ್ಯ

vegitable-triet-6

ಸಾಮಗ್ರಿ : 2 ಕಂತೆ ಮೂಲಂಗಿ ಅದರ ಸೊಪ್ಪಿನ ಸಮೇತ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕ/ಉ ಬೇಳೆ, 1 ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ನಿಂಬೆರಸ, ಅರಿಶಿನ, ಓಮ, ಕೊ.ಸೊಪ್ಪು.

ವಿಧಾನ : ಮೊದಲು ಮೂಲಂಗಿ, ಅದರ ಸೊಪ್ಪನ್ನು ಶುಚಿಗೊಳಿಸಿ ಸಣ್ಣದಾಗಿ ಹಿಚ್ಚಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇಂಗಿನ ಸಮೇತ ಒಗ್ಗರಣೆ ಕೊಡಿ. ನಂತರ ಮೂಲಂಗಿ ಹಾಕಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ಅರ್ಧ ಬೆಂದಾಗ ಸೊಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಆಮೇಲೆ ತೆಂಗಿನ ತುರಿ, ಉಪ್ಪು, ಖಾರ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಕೆಳಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಬಿಸಿ ಬಿಸಿಯಾಗಿ ಅನ್ನ ಸಾಂಬಾರ್‌ ಜೊತೆ ಸವಿಯಲು ಕೊಡಿ.

ವೆಜಿಟೆಬಲ್ ಸೂಪ್

veg-clear-soup

ಸ್ಟಾಕ್‌ಗಾಗಿ ಸಾಮಗ್ರಿ : ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್‌, ಈರುಳ್ಳಿ ತೆನೆ (ತಲಾ 50 ಗ್ರಾಂ), 1 ಲವಂಗದೆಲೆ, ತುಸು ಉಪ್ಪು, ಕಾಳುಮೆಣಸು, ಅರ್ಧ ಲೀ., ವೆಜಿಟೆಬಲ್ ಸ್ಟಾಕ್‌ (ತರಕಾರಿ ಬೇಯಿಸಿ ಬಸಿದ ನೀರು).

ಸೂಪ್‌ಗಾಗಿ ಸಾಮಗ್ರಿ : ಸಣ್ಣಗೆ ಹೆಚ್ಚಿದ ಕ್ಯಾರೆಟ್‌, ಬೀನ್ಸ್, ಗ್ರೀನ್‌ ಝುಕೀನಿ, ಯೆಲ್ಲೋ ಝುಕೀನಿ, ಬ್ರೋಕ್ಲಿ, ಅಣಬೆ (ತಲಾ 25 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ನಿಂಬೆರಸ, ಫ್ರೆಶ್‌ ಕ್ರೀಂ, ತುಸು ಹೆಚ್ಚಿದ ಕೊ.ಸೊಪ್ಪು, ತುಪ್ಪ.

ವಿಧಾನ : ಮೊದಲು ತುಪ್ಪ ಬಿಸಿ ಮಾಡಿಕೊಂಡು ವೆಜ್‌ ಸ್ಟಾಕ್‌ ಬೆರೆಸಿ ಕುದಿಸಬೇಕು. ಇದಕ್ಕೆ ಸ್ಟಾಕ್‌ ಸಾಮಗ್ರಿ ಬೆರೆಸಿ ಹದನಾಗಿ ಬೇಯಿಸಿ ಕೆಳಗಿಳಿಸಿ ಸೋಸಿಕೊಳ್ಳಿ. ಈಗ ಇದರ ಸ್ಟಾಕ್‌ನ್ನು ಬೇರ್ಪಡಿಸಿ ಮತ್ತೆ ಒಲೆಯ ಮೇಲಿರಿಸಿ. ಇದಕ್ಕೆ ತುಪ್ಪ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ನಂತರ ಇದಕ್ಕೆ ಹೆಚ್ಚಿದ ತರಕಾರಿ ಹಾಕಿ ಹಾಫ್‌ ಬಾಯಿಲ್ ಆಗುವಂತೆ ಬೇಯಿಸಿ. ನಂತರ ಸ್ಟಾಕ್‌ನಲ್ಲಿ ಉಳಿದ ಬೆಂದ ತರಕಾರಿ, ಉಪ್ಪು, ಮೆಣಸು ಹಾಕಿ ಚೆನ್ನಾಗಿ ಕುದಿಸಿ ಕೆಳಗಿಳಿಸಿ. ಫ್ರೆಶ್‌ ಕ್ರೀಂ ತೇಲಿಬಿಟ್ಟು, ನಿಂಬೆರಸ ಹಿಂಡಿಕೊಂಡು ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ