ಗೋಭಿ ಮಟರ್ ಕಬಾಬ್
ಕೋಫ್ತಾಗಾಗಿ ಸಾಮಗ್ರಿ : 3 ಕಪ್ ತುರಿದ ಹೂಕೋಸು, 1 ಕಪ್‌ಹಸಿ ಬಟಾಣಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಹಸಿ ಮೆಣಸು, ಪುದೀನಾ, ಶುಂಠಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂ ಮಸಾಲ, ಚಾಟ್ ಮಸಾಲ, ಅರಿಶಿನ. 1 ಕಪ್ ಕಡಲೆಹಿಟ್ಟು, ಕರಿಯಲು ಎಣ್ಣೆ.
ಮಸಾಲೆಗಾಗಿ ಸಾಮಗ್ರಿ : ತುಸು ಜೀರಿಗೆ ಸೋಂಪು, 1-2 ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಧನಿಯಾಪುಡಿ, ಗರಂ ಮಸಾಲ, 4 ಚಮಚ ತುಪ್ಪ, ತುಸು ಹೆಚ್ಚಿದ ಕೊ.ಸೊಪ್ಪು, ಅರ್ಧ ಕಪ್ ಮೊಸರು.
ವಿಧಾನ : 1 ನಾನ್‌ಸ್ಟಿಕ್ ಪ್ಯಾನಿನಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಹಸಿ ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ ಹಾಕಿ ಕೆದಕಿರಿ. ನಂತರ ಅರಿಶಿನ, ತುರಿದ ಹೂಕೋಸು, ಹಸಿ ಬಟಾಣಿ ಹಾಕಿ ಬಾಡಿಸಿ. ಇದಕ್ಕೆ ಉಪ್ಪು ಹಾಕಿ, ಮುಚ್ಚಳ ಮುಚ್ಚಿರಿಸಿ 5 ನಿಮಿಷ ಬೇಯಿಸಿ. ಇದಕ್ಕೆ ಉಳಿದ ಮಸಾಲೆ, ಕಡಲೆಹಿಟ್ಟು ಹಾಕಿ ಕೆದಕಿ ಕೆಳಗಿಳಿಸಿ. ಆರಿದ ನಂತರ ಈ ಮಿಶ್ರಣವನ್ನು ಪಕೋಡಾ ತರಹ ಕಲಸಿ, ಉಂಡೆ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಅದೇ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ಸೋಂಪು, ಜೀರಿಗೆ ಒಗ್ಗರಣೆ ಕೊಡಿ. ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಉಳಿದೆಲ್ಲ ಮಸಾಲೆ, ಉಪ್ಪು, ಖಾರ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ ಮೊಸರು ಬೆರೆಸಿ ಕೈಯಾಡಿಸಿ. ಅರ್ಧ ಲೋಟ ನೀರು ಬೆರೆಸಿ ಚೆನ್ನಾಗಿ ಕುದ್ದ ಮೇಲೆ ಕೋಫ್ತಾ ತೇಲಿಬಿಟ್ಟು ಎಲ್ಲಾ ಬೆರೆತುಕೊಳ್ಳುವಂತೆ ಮಾಡಿ. 5 ನಿಮಿಷ ಕುದ್ದ ನಂತರ ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.
ಸೋಯಾ ವೆಜ್ ಕೀಮಾ
ಸಾಮಗ್ರಿ : 1 ಕಪ್ ಸೋಯಾಬೀನ್ಸ್ ಗ್ರಾನ್ಯುಯೆಲ್ಸ್, 1 ಕಪ್ ಹಸಿ ಬಟಾಣಿ, ಅರ್ಧರ್ಧ ಕಪ್ ಈರುಳ್ಳಿ ಟೊಮೇಟೊ ಪೇಸ್ಟ್, 1-1 ಸಣ್ಣ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಮ್ಯಾಗಿ ಮಸಾಲ, ನಿಂಬೆರಸ, ಅರಿಶಿನ, ಒಂದಿಷ್ಟು ಕೊ.ಸೊಪ್ಪು.
ವಿಧಾನ : 3 ಕಪ್ ನೀರಿಗೆ ನಿಂಬೆರಸ, ಉಪ್ಪು ಬೆರೆಸಿ ಅದರಲ್ಲಿ ಸೋಯಾ ಗ್ರಾನ್ಯುಯೆಲ್ಸ್ ನ್ನು ಅರ್ಧ ಗಂಟೆ ಕಾಲ ನೆನೆ ಹಾಕಿಡಿ. ನಂತರ ನೀರನ್ನು ಬಸಿದಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದರಲ್ಲಿ ಈರುಳ್ಳಿ ಪೇಸ್ಟ್ ಹಾಕಿ ಬಾಡಿಸಿ, ಹಸಿ ಬಟಾಣಿ ಹಾಕಿ ನೀರು ಚಿಮುಕಿಸಿ ಬೇಯಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಿರಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕುತ್ತಾ ಟೊಮೇಟೊ ಪೇಸ್ಟ್ ಹಾಕಿ ಕೈಯಾಡಿಸಿ. ಆಮೇಲೆ ನೆನೆದ ಸೋಯಾ ಹಾಕಿ ಬೆರೆತುಕೊಳ್ಳುವಂತೆ ಮಾಡಿ. ತುಸು ನೀರು ಚಿಮುಕಿಸಿ ಬೇಯಿಸಿ. ಆಮೇಲೆ ಮ್ಯಾಗಿ ಮಸಾಲ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಮಂದ ಉರಿಯಲ್ಲಿ ಕೆದಕಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಉದುರಿಸಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.