ಅಂದು 10 ವರ್ಷದ ನಂತರ ಸೀಮಾ ಮತ್ತೆ ಅದೇ ಗಲ್ಲಿಯಲ್ಲಿ ಬಂದು ನಿಂತಿದ್ದಳು. ಇದೇ ಇಕ್ಕಟ್ಟಾದ ಓಣಿ ನಡುವೆ ಮುಂದೆ ಹೋದರೆ ಸಿಗುತ್ತಿತ್ತು ಅವಳು ವಾಸವಿದ್ದ ದೊಡ್ಡ ಬಂಗಲೆ. ಅಲ್ಲಿಯೇ ಅವಳ ಬಾಲ್ಯ ಕಳೆದದ್ದು, ಅವಳ ಕಿಶೋರಾಸ್ಥೆಯ ಮೊದಲ ಪ್ರೇಮ ಚಿಗುರಿ ಹೆಮ್ಮರವಾದದ್ದೂ…. ಅದು ಅವಳ ಮನಸ್ಸಿನಲ್ಲಿ ಆಳವಾಗಿ ಕೊರೆಯುತ್ತಿತ್ತು. ಅವಳ ಮನದಲ್ಲಿ ತೆರೆತೆರೆಯಾಗಿ ಅಂದಿನ ಘಟನೆಗಳು ಹಾದುಹೋದವು.

ಆ ನೆನಪುಗಳಿಂದ ಅವಳು ಬಂಧಿಯಾಗಿದ್ದಳು. ಅಲ್ಲಿಂದ ಹಾದು ಹೋಗುವಾಗ ಅವಳಿಗೆ ಮತ್ತೆ ಅದೇ ಹಳೆಯ ಪಾರ್ಕ್‌ ಕಾಣಿಸಿತು. ಸಣ್ಣ ಮಕ್ಕಳ ನಗು, ಕೇಕೆಯಿಂದ, ಅವರ ಆಟೋಟಗಳಿಂದ ಆ ಪಾರ್ಕು ಇಂದು ಶೋಭಾಯಮಾನವಾಗಿತ್ತು. ಪಾರ್ಕ್‌ ಹೊರಗೆ ಹಲವು ಫುಡ್‌ ಸ್ಟಾಲ್ ಇತ್ತು. ಹಿರಿಯರು ಮಕ್ಕಳಿಗೆ ಕೇಳಿದ್ದನ್ನು ಕೊಡಿಸುತ್ತಾ, ತಾವು ಸವಿಯುತ್ತಾ ಆನಂದವಾಗಿ ಹರಟುತ್ತಿದ್ದರು. ಇಂದಿನ ಹೆಂಗಸರು ಇಷ್ಟು ಸ್ವತಂತ್ರರಾಗಿ, ಹಾಯಾಗಿ ತಮಗೆ ಬೇಕಾದಂತೆ ಆರಾಮವಾಗಿ ಓಡಾಡಿಕೊಂಡಿದ್ದಾರೆ.

ಆದರೆ ತಾನು…. ಸದಾ ಅಮ್ಮ, ಅಜ್ಜಿ, ಅತ್ತೆ, ಚಿಕ್ಕಮಂದಿರ ಲಕ್ಷ್ಮಣರೇಖೆಯ ಸಂಪ್ರದಾಯಗಳನ್ನು ದಾಟಲಾರದೆ ಅಷ್ಟೇ ಚೌಕಟ್ಟಿನಲ್ಲಿ ತನ್ನ ಬದುಕನ್ನು ಕಂಡುಕೊಂಡಿದ್ದೆ ಎಂದು ಮಮ್ಮಲ ಮರುಗಿದಳು ಸೀಮಾ. ಸದಾ ಅಡುಗೆಮನೆಯ ಬಿಡುವಿಲ್ಲದ ಕೆಲಸಗಳು, ಪಾತ್ರೆ, ಬಟ್ಟೆ…. ಇಷ್ಟರ ಮಧ್ಯೆ ಅಲ್ಪಸ್ವಲ್ಪ ಬಿಡುವಾದರೆ ತಕ್ಷಣ ಅಜ್ಜಿ ಹಪ್ಪಳ, ಸಂಡಿಗೆ ಕೆಲಸ ಅಂಟಿಸುತ್ತಿದ್ದರು.

ಚಿಕ್ಕಮ್ಮಂದಿರು ಸದಾ ಅಮ್ಮನ ಹಿಂದೆ ಮುಂದೆ ಓಡಾಡಿಕೊಂಡಿರುತ್ತಿದ್ದರು. ಬಂದು ಹೋಗುವ ಸೋದರತ್ತೆಯರು ಏನಾದರೊಂದು ಡಿಮ್ಯಾಂಡ್‌ ಇಲ್ಲದೆ ಬರುತ್ತಿರಲಿಲ್ಲ. ತಮಗೂ ಈ ದುಡಿತದ ಮಧ್ಯೆ ಸ್ವಲ್ಪ ಬಿಡುವು ಬೇಕು ಎಂದು ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಅಜ್ಜಿಯ ಸರ್ವಾಧಿಕಾರಿ ಧೋರಣೆ ಎದುರು ಯಾವುದೂ ನಡೆಯುತ್ತಿರಲಿಲ್ಲ. ಅಜ್ಜಿಯ ಆರೋಪಗಳಿಗೆ ಸದಾ ಸೀಮಾ, ಅವಳ ತಾಯಿ ರತ್ನಮ್ಮ ಈಡಾಗುತ್ತಿದ್ದರು.

ನೆಂಟರಿಷ್ಟರು, ಎಲ್ಲರ ಮಧ್ಯೆ ಸೀಮಾಳ ಸೌಂದರ್ಯ ಹೊಗಳಿಕೆಗೆ ಪಾತ್ರವಾಗಿದ್ದರೆ ಅಜ್ಜಿಯ ದೃಷ್ಟಿಯಲ್ಲಿ ಮಾತ್ರ ಸದಾ ಹಿಡಿಶಾಪಕ್ಕೆ ಗುರಿಯಾಗುತ್ತಿದ್ದಳು. ಸೀಮಾ ಹೈಸ್ಕೂಲು ದಾಟುವವರೆಗೂ ಅವಳಣ್ಣ ಶಾಲೆಗೆ ನೆರಳಾಗಿ ಹಿಂಬಾಲಿಸಿಕೊಂಡು ಕರೆದುಕೊಂಡು ಹೋಗಿ ಬರುತ್ತಿದ್ದ. ಅವಳು ಲೇಡೀಸ್‌ ಕಾಲೇಜು ಸೇರಿದ ಮೇಲೆಯೇ ತುಸು ಬಿಡುಗಡೆ ಕಂಡದ್ದು.

ಆ ಮನೆಯ 7 ಜನ ಮೊಮ್ಮಕ್ಕಳಲ್ಲಿ ಇವಳೊಬ್ಬಳೇ ಹೆಣ್ಣು ಕೂಸು. ಎಲ್ಲರೂ ಇವಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ ಅಷ್ಟೇ ಕಟ್ಟುನಿಟ್ಟಾದ ನಿಯಮಗಳು. ಇವಳ ತಂದೆಯೇ ಆ ಮನೆಗೆ ಹಿರಿಯಣ್ಣ. ಮೂವರು ತಮ್ಮಂದಿರೊಡನೆ ಕುಟುಂಬದ ಬಟ್ಟೆ ವ್ಯಾಪಾರದ ಗಡಿಬಿಡಿ ಸುಧಾರಿಸುವುದರಲ್ಲಿ ಹೈರಾಣಾಗುತ್ತಿದ್ದರು. ಅಷ್ಟು ಮಂದಿ ಅಣ್ಣಂದಿರಲ್ಲಿ ಯಾರೋ ಒಬ್ಬರು ಇವಳಿಗೆ ಸದಾ ಬೆಂಗಾವಲಾಗಿ ಹಿಂದೆ ಬಂದು ಶಾಲಾ ಕಾಲೇಜು ಬಾಗಿಲು ಮುಟ್ಟಿಸುವರು.

ಪರೀಕ್ಷೆ ಮುಗಿದ ನಂತರ ಬೇಸಿಗೆಯ ರಜಾ ದಿನಗಳ ಬಿಡುವು ಸಿಕ್ಕಾಗ ಅವಳಿಗೆ ನೆಮ್ಮದಿ ಎನಿಸುತ್ತಿತ್ತು. ಆಗ ಅಮ್ಮ ತವರಿಗೆ ಹೊರಡುತ್ತಿದ್ದಳು. ಅಲ್ಲಿ ಸೀಮಾ, ಅವಳಣ್ಣ ಶೇಖರ್‌ ಹೆಚ್ಚಿನ ಕಟ್ಟುಪಾಡುಗಳಿಲ್ಲದೆ, ಸ್ವತಂತ್ರ ಹಕ್ಕಿಗಳಾಗಿ ಆಡಿ ನಲಿಯುತ್ತಿದ್ದರು.

ಆ ಸಂತೋಷ ಅವಳು ಮೈ ನೆರೆಯುವವರೆಗೆ ಮಾತ್ರ ಇತ್ತು. ಹೈಸ್ಕೂಲು ಮೊದಲ ವರ್ಷ ಮೂಲೆ ಹಿಡಿದು ಕುಳಿತವಳಿಗೆ ಅಜ್ಜಿ ಹೊಸ ಆಜ್ಞೆ ವಿಧಿಸಿದರು.

“ಸೀಮಾ ಈಗ ದೊಡ್ಡವಳಾಗಿದ್ದಾಳೆ. ಹಾಗೆಲ್ಲ ಅವಳನ್ನು ನೆಂಟರಿಷ್ಟರ ಮನೆಗೆ ಕಳುಹಿಸಲಾಗದು. ರತ್ನಾ ಮಗನ ಜೊತೆ ಬೇಕಾದರೆ ತವರಿಗೆ ಹೋಗಲಿ, ಸೀಮಾ ನಮ್ಮೊಂದಿಗೆ ಇಲ್ಲೇ ಇರಲಿ. ನಾಳೆ ಅಲ್ಲಿ ಏನಾದರೂ ಹೆಚ್ಚುಕಡಿಮೆ ಆಗಿಬಿಟ್ಟರೆ ಏನು ಗತಿ ಮುಂದೆ ಇವಳ ಕೈ ಹಿಡಿಯುವವರಾರು?” ಅಪ್ಪಾಜಿ ಅಜ್ಜಿಯ ಮಾತಿಗೆ ಎದುರು ಹೇಳಲಾರದೆ ಸುಮ್ಮನಾಗಿದ್ದರು.

ಇದ್ದ ಒಂದು ಸ್ವಾತಂತ್ರ್ಯ ಸುಖ ಹೋಯಿತೇ ಎಂದು ದುಃಖದಿಂದ ಕಣ್ಣೀರಿಟ್ಟಳು. ಅಷ್ಟು ಸಣ್ಣ ವಿಷಯಕ್ಕೆಲ್ಲ ತನಗೆ ಆಗ ಹೇಗೆ ಕಣ್ಣೀರು ಬರುತ್ತಿತ್ತೋ ತಿಳಿಯದು, ಈಗ ಎಂಥ ಗಂಡಾಂತರದ ವಿಷಯ ಕೇಳಿದರೂ ಜೀವ ಮರುಗಟ್ಟಿ ಹೋಗಿದೆ, ಕಣ್ಣೀರು ಪೂರ್ತಿ ಬತ್ತಿಹೋಗಿ ತಟಸ್ಥಾಗಿರುತ್ತಿದ್ದಳು ಸೀಮಾ.

ಅವಳು ಎಷ್ಟೋ ಅತ್ತು ಕರೆದರೂ ಮಾಮನ ಮನೆಗೆ ಹೋಗಲು ಅನುಮತಿ ಸಿಗಲಿಲ್ಲ. ಈ ನೆಪದಿಂದಾಗಿ ಅಮ್ಮನಿಗೆ ವರ್ಷಕ್ಕೊಮ್ಮೆ ತವರಿಗೆ ಹೋಗುವ ಸುಯೋಗ ತಪ್ಪಿತು. ತಾನೂ ಅಣ್ಣನಂತೆ ಗಂಡು ಹುಡುಗನಾಗಿದ್ದಿದ್ದರೆ, ಅಮ್ಮ ಇಂದು ಇಬ್ಬರು ಗಂಡು ಮಕ್ಕಳೊಡನೆ ಹಾಯಾಗಿ ತವರಿನಲ್ಲಿರುತ್ತಿದ್ದಳು ಎನಿಸಿ ದುಃಖ ಮತ್ತಷ್ಟು ಉಮ್ಮಳಿಸಿತು. ಯಾಕಾದರೂ ಹೆಣ್ಣಾಗಿ ಹುಟ್ಟಿದೆನೋ ಎಂದು ಮೊದಲ ಸಲ ಬಹಳ ದುಃಖವಾಯಿತು.

ಆ ದಿನ ಮಹಡಿಯಲ್ಲಿ ಕುಳಿತು ರಾಧಾ ಚಿಕ್ಕಮ್ಮನ ಮಿನಿ ಟ್ರಾನ್ಸಿಸ್ಟರ್‌ನಲ್ಲಿ ಹಾಡು ಕೇಳುತ್ತಿದ್ದಳು. ನೋವು, ದುಃಖ ತುಂಬಿದ ವೇದನಾಭರಿತ ಶೋಕಗೀತೆಗಳು. ಅದನ್ನು ಕೇಳಿಸಿಕೊಳ್ಳುತ್ತಾ ತನ್ನ ದುಃಖ ಮರೆಯಲು ಯತ್ನಿಸುತ್ತಿದ್ದಳು. ಆಗ ಇವರ ಮಹಡಿಯ ಗೋಡೆಗೆ ಅಂಟಿದ್ದ ಪಕ್ಕದ ಬಿಲ್ಡಿಂಗ್‌ ಕಡೆಯಿಂದ ಧ್ವನಿ ಕೇಳಿಸಿತು, “ಈ ಹಾಡುಗಳು ಚೆನ್ನಾಗಿವೆ.”

ಹಿಂತಿರುಗಿ ನೋಡಿದಾಗ ಒಬ್ಬ ಹ್ಯಾಂಡ್‌ಸಮ್ ತರುಣ ಇವಳ ಕಡೆ ಮಂದಹಾಸ ಬೀರುತ್ತಿದ್ದ. ಅವನು ಯಾರೆಂದು ತಿಳಿಯದೆ ಕಣ್ ಕಣ್‌ ಬಿಡುತ್ತಾ ನಿಂತಳು.

“ಹಾಯ್‌! ನಾನು ಸುಮಂತ್‌….. ನಾನು ನಮ್ಮ ಸೋದರತ್ತೆ  ಮನೆಗೆ ಬಂದಿದ್ದೇನೆ…. ನಿಮ್ಮ ಹೆಸರು?”

ಓಹೋ…. ಇವನು ಪಕ್ಕದ ಮನೆಯ ವೀಣಾ ಆಂಟಿಯ ಅಣ್ಣನ ಮಗ ಅಂತ ಅರ್ಥವಾಯಿತು. “ನನ್ನ ಹೆಸರು ತಿಳಿದು ನಿಮಗೇನಾಗಬೇಕು…. ಅಂಥ ಪರಿಚಯದ ಆಸೆ ಇಟ್ಟುಕೊಳ್ಳಬೇಡಿ,” ಎನ್ನುತ್ತಾ ಸೀಮಾ ಕೆಳಗೆ ಹೊರಟುಹೋದಳು.

ಅಲ್ಲಿಂದ ನಿಷ್ಠೂರವಾಗಿ ಮನೆಗೆ ಬಂದುಬಿಟ್ಟಳು. ಆದರೆ ಒಂದು ವಿಚಿತ್ರ ಅನುಭೂತಿ ಮೈಗೂಡಿದಂತಾಗಿತ್ತು. 17ರ ಹರೆಯಕ್ಕೆ ಕಾಲಿಟ್ಟಿದ್ದ ಅವಳು ಇದುವರೆಗೆ ಬೇರೆ ಹುಡುಗರ ಜೊತೆ ಮಾತನಾಡುವುದಿರಲಿ, ಸರಿಯಾಗಿ ಕಣ್ಣೆತ್ತಿಯೂ ನೋಡಿರಲಿಲ್ಲ. ಸದಾ ಗಾರ್ಡ್‌ ಆಗಿ ಅವಳ ಬೆಂಗಾಲಿಗೆ ಇರುತ್ತಿದ್ದ ಅಣ್ಣಂದಿರೇ ಅದಕ್ಕೆ ಕಾರಣ.

ಆ ದಿನ ಮೊದಲ ಬಾರಿಗೆ ಒಬ್ಬ ತರುಣ ಪ್ರಶಂಸಾಪೂರ್ವಕವಾಗಿ ಅವಳನ್ನು ಮಾತನಾಡಿಸಿದ್ದ. ಅವಳ ಸುಪ್ತ ಮನಸ್ಸಿನಲ್ಲಡಗಿದ್ದ ಪ್ರೇಮಭಾವವನ್ನು ಯಾರೋ ಎಚ್ಚರಗೊಳಿಸಿದಂತಾಗಿತ್ತು. ಆ ಮಾತ್ರದ ಭಾವನೆಯಿಂದಲೇ ಅವಳು ಭಯಭೀತಳಾಗಿದ್ದಳು. ಆ ಭಾವನೆ ಅವಳಲ್ಲಿ ಚಿಗುರೊಡೆದರೆ, ಮುಂದೆ ಅವಳ ತಾಯಿಯೂ ಆಪಾದನೆಯ ನಿಂದನೆಗೆ ಗುರಿಯಾಗಬೇಕಾಗುತ್ತದೆ ಎಂದು ಗೊತ್ತಿತ್ತು.

ಮಾರನೇ ದಿನ ಎಷ್ಟೇ ಬೇಡವೆಂದು ಮನಸ್ಸನ್ನು ಕಂಟ್ರೋಲ್ ಮಾಡುತ್ತಿದ್ದರೂ ಅವಳು ಅದೇ ಹೊತ್ತಿಗೆ ಮಹಡಿ ಮೇಲೆ ಹೋಗಿ ನಿಂತಿದ್ದಳು. ಮನಸ್ಸು ವಿವೇಕವನ್ನು ಗೆದ್ದಿತ್ತು. ಅವನು ಅಲ್ಲೇ ಇವಳ ಬರುವಿಕೆಗಾಗಿ ಎಂಬಂತೆ ಕಾದು ನಿಂತಿದ್ದ. ದಟ್ಟ ನೀಲಿ ಜೀನ್ಸ್ ಮೇಲೆ ನಿಂಬೆ ಹಳದಿ ಟೀ ಶರ್ಟ್‌ನಲ್ಲಿ  ಅವನು ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತಿದ್ದ. ಆಗ ವೀಣಾ ಆಂಟಿ ಸಹ ಜೊತೆಯಲ್ಲೇ ಇದ್ದರು. ಅಯ್ಯೋ, ಅವರೂ ಇದ್ದಾರಲ್ಲ ಎಂದು ಇವಳು ಹಿಂದೆ ಸರಿಯಲು ಯತ್ನಿಸಿದಳು. ಅಷ್ಟರಲ್ಲಿ ಅವರೇ ಮಾತನಾಡಿಸಿದರು.

“ಸೀಮಾ, ಈ ಸಲ ನೀನು ನಿನ್ನ ಸೋದರಮಾವನ ಮನೆಗೆ ಹೋಗಲಿಲ್ಲವೇ?”

“ಇಲ್ಲ ಆಂಟಿ…. ಅಮ್ಮನ ಆರೋಗ್ಯ ತುಸು ಚೆನ್ನಾಗಿಲ್ಲ. ಅದಕ್ಕೆ ಅಜ್ಜಿ ಇನ್ನೊಂದು ಸಲ ಹೋದರಾಯಿತು ಅಂದುಬಿಟ್ಟರು.”

“ಓ….. ಬಹಳ ದಿನ ಆಯಿತು ನಿಮ್ಮಮ್ಮನ ಜೊತೆ 4 ಮಾತನಾಡಿ. ಆಮೇಲೆ ಬಿಡುವು ಮಾಡಿಕೊಂಡು ಬರ್ತೀನಿ,” ಎಂದರು.

“ಹ್ಞೂಂ….. ಆಂಟಿ,” ದನಿಗೂಡಿಸಿದಳು ಸೀಮಾ.

“ಅರೆ ಸೀಮಾ….. ಇಲ್ಲಿ ನೋಡು, ಇವನು ಸುಮಂತ್‌. ನಮ್ಮಣ್ಣನ ಮಗ, ನಿನ್ನೆ ತಾನೇ ಮದ್ರಾಸ್‌ನಿಂದ ಬಂದಿದ್ದಾನೆ. ಅಲ್ಲಿ ಮೆಡಿಕಲ್ ಕಾಲೇಜ್‌ನಲ್ಲಿ ಕಲಿಯತ್ತಿದ್ದಾನೆ. 2 ವಾರಗಳ ಮಟ್ಟಿಗೆ ಅತ್ತೆಯನ್ನು ನೆನಪಿಸಿಕೊಂಡು ಬಂದಿದ್ದಾನೆ,” ನಸುನಗುತ್ತಾ ವೀಣಾ ಹೇಳಿದರು.

“ಅತ್ತೆ ಈ ಸಲ ಮೈಸೂರಿಗೆ ಬಂದು ಒಳ್ಳೆಯದನ್ನು ಮಾಡಿದೆ. ನಿಮ್ಮೂರಿನಲ್ಲಿ ಎಂತೆಂಥ ಬ್ಯೂಟಿ ಅಡಗಿದೆ ಅಂತ ಈಗ ಅರ್ಥವಾಗುತ್ತಿದೆ,” ಸುಮಂತ್‌ ಇವಳತ್ತ ನೋಡುತ್ತ ಹೇಳಿದ.

ಸೀಮಾ ನಾಚಿಕೆಯಿಂದ, ಪ್ರೇಮದಿಂದ, ಆನಂದದಿಂದ ಕೆನ್ನೆಗಳಲ್ಲಿ ಕೆಂಪು ತುಂಬಿಕೊಳ್ಳುತ್ತಿದ್ದಳು. ಆ ಕ್ಷಣ ಅವಳು ಅಲ್ಲಿ ಹೇಗೆ ನಿಂತಿದ್ದರೋ, ವೀಣಾ ಏನು ಹೇಳುತ್ತಿದ್ದಳೋ…. ಒಂದೂ ತಿಳಿಯಲಿಲ್ಲ. ಅವರು ಅಲ್ಲಿಂದ ಹೊರಟಾಗ, ಅವನಿನ್ನೂ ತನ್ನನ್ನೇ ಗಮನಿಸುತ್ತಿದ್ದಾನೆ ಎಂದು ಗೊತ್ತಿದ್ದರೂ, ಸೀಮಾ ದಡದಡನೆ ತನ್ನ ಕೋಣೆಗೆ ಓಡಿಹೋದಳು.

ಅವನ ಕಣ್ಣಲ್ಲಿದ್ದ ಪ್ರೇಮ ಪೂರ್ಣ ಸಂದೇಶ ಅದಾಗಲೇ ಅವಳ ಮನಸ್ಸನ್ನು ತಲುಪಿತ್ತು. ಮನಸ್ಸಿನ ಜೊತೆ ಈಗ ವಿವೇಕ ಬೆರೆತು ಅವನ ಸ್ನೇಹಕ್ಕೆ ಹಾತೊರೆಯತೊಡಗಿತ್ತು. ಇದನ್ನೇ ಮೊದಲ ನೋಟದ ಪ್ರೇಮ, ಲವ್ ಅಟ್‌ ಫಸ್ಟ್ ಸೈಟ್‌, ಅಂತಾರೆಯೇ? ಇದೆಂಥ ವಿಚಿತ್ರ ಅನುಭವ ಮನಸ್ಸಿನ ನೆಮ್ಮದಿ ಹಾರಿಹೋಗಿತ್ತು. ಅದೆಂಥದೋ ಅರಿಯದ ಭಾವ….. ದಾಹ, ಹಸಿವು ಎಲ್ಲಾ ಮರೆಯಾಗಿತ್ತು. ಮಾವನ ಮನೆಗೆ ಹೋಗದ್ದರಿಂದ ಸೀಮಾ ಬೇಸರಗೊಂಡಿದ್ದಾಳೆ, ಅದಕ್ಕೆ ಸದಾ ಮಹಡಿಯಲ್ಲಿ ಸುತ್ತಾಡುತ್ತಾಳೆ ಎಂದೇ ಮನೆಯವರು ಭಾವಿಸಿದರು. ಅವಳ ಮೇಲೆ ಕಣ್ಗಾವಲು ತುಸು ಕಡಿಮೆ ಆಯಿತು, ಅವಳಿಗೂ ಹಾಯಾಗಿತ್ತು.

ಸಂಜೆ ಹೊತ್ತು ಅವಳ ಅಣ್ಣಂದಿರು ಆಟಕ್ಕೆ ಓಡುವರು. ಅಮ್ಮ, ಚಿಕ್ಕಮ್ಮಂದಿರು ರಾತ್ರಿ ಅಡುಗೆ ತಯಾರಿಗೆ ಏನೋ ಒಂದು ಮಾಡುವುದರಲ್ಲಿ ಬಿಝಿ. ಅಜ್ಜಿ ಅಕ್ಕಪಕ್ಕದವರೊಂದಿಗೆ ಹರಟೆ. ಈ ಸಮಯ ನೋಡಿಕೊಂಡು ತಾನಾಗಿ ಅವಳ ಕಾಲುಗಳು ಮಹಡಿ ಕಡೆಗೆ ಹೋಗುತ್ತಿದ್ದವು. ಇವಳು ಅಂದುಕೊಂಡಂತೆಯೇ ಸುಮಂತ್‌ ಸೀಮಾಗಾಗಿ ಕಾಯುತ್ತಾ ಮಹಡಿಯಲ್ಲಿ ನಿಂತಿರುತ್ತಿದ್ದ. ಮೊದ ಮೊದಲು ಬಲು ಸಂಕೋಚದಿಂದ ಅವನ ಮಾತುಗಳಿಗೆ ಹ್ಞೂಂ, ಉಹ್ಞೂಂ…. ಎಂದಷ್ಟೇ ಹೇಳುತ್ತಿದ್ದಳು, ಕ್ರಮೇಣ ಅವನ ಸ್ವಾರಸ್ಯಕರ ಮಾತುಗಳಲ್ಲಿ ಉತ್ತರಿಸುವುದನ್ನು ಕಲಿತಳು. ಹೀಗೆ ಅವರ ಮಾತುಕಥೆ ದಿನೇದಿನೇ ಬೆಳೆಯತೊಡಗಿತು.

ಆ ದಿನ ಅಣ್ಣ ಕರೆದನೆಂದು ಮಾತಿನ ಮಧ್ಯದಲ್ಲೇ ಬಿಟ್ಟು ಕೆಳಗೆ ಓಡಿ ಬಂದಿದ್ದಳು. ಅವಳನ್ನು ಕಂಡವರೇ ಮನೆಯವರೆಲ್ಲ ತಲೆಗೊಂದು ಪ್ರಶ್ನೆ ಕೇಳತೊಡಗಿದರು.

“ಎಲ್ಲೇ ಹಾಳಾಗಿ ಹೋಗಿದ್ದೆ ಇಷ್ಟು ಹೊತ್ತು….? ಮಹಡಿಯ ಮೇಲೆ ಇಷ್ಟು ಹೊತ್ತಿನಲ್ಲಿ ನಿನಗೆ ಅಂಥ ಘನಂದಾರಿ ಕೆಲಸ ಏನು ಅಂತ? ನಿನಗೆ ತಲೆ ಗಿಲೆ ನೆಟ್ಟಗಿದೆ ತಾನೇ?”

ಅವರೆಲ್ಲರ ಮಾತುಗಳನ್ನೂ ಅಳುವ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದಳು. `ನೀವು ಹೆದರುತ್ತಿರುವಂತೆಯೇ ನಾನು ವಯಸ್ಸಿಗೆ ಬಂದ ಒಬ್ಬ ಹುಡುಗನೊಡನೆ ಮಾತುಕಥೆಯಲ್ಲಿ ತೇಲಿಹೋಗಿದ್ದೆ….. ಅವನ ಪ್ರೀತಿಪ್ರೇಮದಲ್ಲಿ ಮುಳುಗಿ ಹೋಗಿರುವೆ….. ಯಾವುದು ನಡೆಯಬಾರದೆಂದು ಅಜ್ಜಿ ಸದಾ ಅಣ್ಣಂದಿರನ್ನು ಕಾವಲಿಗೆ ಹಾಕುತ್ತಾಳೋ ಅದೇ ಈಗ ನಿಜವಾಗುತ್ತಿದೆ….’ ಇದನ್ನೆಲ್ಲ ಯಾವ ಧೈರ್ಯದಿಂದ ಅವಳು ತುಟಿ ಮೇಲೆ ತಂದು ಹೇಳಿಯಾಳು? ಬೈದು ಬೈದು ಸುಸ್ತಾದ ಮನೆಯವರು ಸುಮ್ಮನಾದಾಗ ಅವಳು ಮೌನವಾಗಿ ತನ್ನ ತಾಯಿಯ ಕೋಣೆ ಸೇರಿದಳು.

ಹೀಗೆ ಇವರಿಬ್ಬರ ಮೂಕ ಪ್ರೇಮ ಕದ್ದುಮುಚ್ಚಿ ನಡೆಯುತ್ತಿತ್ತು. ಅದೀಗ  ಇಬ್ಬರ ಮನದಲ್ಲೂ ಭದ್ರವಾಗಿ ಬೇರೂರಿತ್ತು. 2 ವಾರಗಳ ನಂತರ ಸುಮಂತ್‌ ತನ್ನ ಓದಿನ ಸಲುವಾಗಿ ಮದ್ರಾಸ್‌ಗೆ ಹೊರಟೆಬಿಟ್ಟ. ಆ ದಿನ ಅವಳು ಅವನ ಎದೆಗೆ ಒರಗಿ ಮೂಕವಾಗಿ ರೋದಿಸಿದಳು. ಅವನು ಎಷ್ಟೇ ಸಮಾಧಾನ ಹೇಳಿದರೂ ಅವಳಿಗೆ ಧೈರ್ಯ ಬರುತ್ತಿರಲಿಲ್ಲ. ಅವನು ಊರಿಗೆ ಹೊರಟು ಹೋದರೆ ತನ್ನನ್ನು ಮರೆತೇಬಿಡುತ್ತಾನೆ ಎಂಬುದೇ ಅವಳ ಭಯ. ತಮ್ಮಿಬ್ಬರದು ಅಮರ ಪ್ರೇಮ, ಹಾಗೆಲ್ಲ ನಂಬಿಸಿ ಮೋಸ ಮಾಡುವವನಲ್ಲ ಎಂದು ಅನೇಕ ಸಲ ಅವನು ಆಣೆ ಪ್ರಮಾಣ ಮಾಡಿದಾಗ ಅವಳಿಗೆ ತುಸು ಭರವಸೆ ಮೂಡಿತು.

“ಇದು ನನ್ನ ಕಾಲೇಜಿನ 2ನೇ ವರ್ಷವಾದ್ದರಿಂದ ನಾವು ಇನ್ನೂ ಸ್ವಲ್ಪ ಕಾಯಲೇಬೇಕು ಸೀಮಾ. ನಂತರವೇ ನಾನು ನಮ್ಮ ಮನೆಯವರ ಬಳಿ ಮಾತನಾಡಲು ಸಾಧ್ಯ!”

“ನಿನಗೆ ಅದು ಸಾಧ್ಯ….. ನನಗೆ ಆ ಧೈರ್ಯ ಇಲ್ಲ. ನನ್ನನ್ನು ಪಿಯುಸಿ ಲೇಡೀಸ್‌ ಕಾಲೇಜಿಗೆ ಕಳುಹಿಸಿರುವುದೇ ಹೆಚ್ಚು…. ನಮ್ಮ ಮನೆಯವರ ಬಗ್ಗೆ ಗೊತ್ತಲ್ಲ… ಅವರಿಗೇನಾದರೂ ಸಣ್ಣ ಸುಳಿವು ಸಿಕ್ಕಿದರೂ ನನ್ನನ್ನು ಹೊಡೆದು ಬಡಿದೂ ಮಾರನೇ ದಿನವೇ ಯಾವನಿಗೋ ಕೊಟ್ಟು ಮದುವೆ ಮಾಡಿಸಿಬಿಡುತ್ತಾರೆ. ಅದಾದ ಕೆಲವೇ ದಿನಗಳಲ್ಲಿ ನಾನು ಯಾವುದಾದರೂ ಬಾವಿಗೆ ಹಾರಿಕೊಳ್ಳುತ್ತೇನಷ್ಟೆ……”

“ಎಂಥ ಪುಕ್ಕಲಿಯನ್ನು ನಾನು ಪ್ರೀತಿಸಿದ್ದೇನೆ ಎಂದು ನನಗೆ ಚೆನ್ನಾಗಿ ಗೊತ್ತಿದೆ,” ಸುಮಂತ್‌ ವಿದಾಯ ಕೋರುತ್ತಾ ಹೇಳಿದಾಗ ಅವಳಿಗೂ ನಗು ಬಂತು.

ಹೀಗೆ ಮತ್ತಷ್ಟು ವರ್ಷ ಕಳೆದವು. ಪ್ರತಿಸಲ ಬೇಸಿಗೆ ರಜೆ ಬಂದಾಗೆಲ್ಲ ಸುಮಂತ್‌ ಅಲ್ಲಿಂದ ಅತ್ತೆ ಮನೆಗೆ ಮರೆಯದೆ ಓಡಿಬರುತ್ತಿದ್ದ. ಇವರಿಬ್ಬರ ಪ್ರೇಮದ ವ್ಯವಹಾರ ಕದ್ದುಮುಚ್ಚಿ ನಡೆಯುತ್ತಿತ್ತು. ಮೊಬೈಲ್ ಫೋನ್‌ ಮುಟ್ಟಲು ಅವಳಿಗೆ ಅವಕಾಶ ಕೊಟ್ಟಿರಲಿಲ್ಲ. ಮನೆಗೆ ಪತ್ರ ತರಿಸುವ ಧೈರ್ಯ ಮೊದಲೇ ಇಲ್ಲ. ಹೀಗಾಗಿ ಕಾಲೇಜಿನ ಸಹಪಾಠಿಗೆ ಹೇಳಿ, ಅವಳ ಮನೆ ವಿಳಾಸಕ್ಕೆ ಪತ್ರ ತರಿಸುತ್ತಿದ್ದಳು. ಅಪರೂಪಕ್ಕೆ ಗೆಳತಿಯ ಫೋನ್‌ನಲ್ಲಿ ಮಾತನಾಡುವಳು. ಇವಳ ಗೆಳತಿ ಶ್ರೇಯಾ ಎಲ್ಲಕ್ಕೂ ಸಹಾಯವಾಗಿ ನಿಂತಳು. ದುರಾದೃಷ್ಟಕ್ಕೆ ಅವಳ ತಂದೆಗೆ ವರ್ಗವಾಗಿ ಬೇರೆ ಊರಿಗೆ ಹೋದಾಗ, ಸುಮಂತ್‌ ಸೋದರತ್ತೆಗೆ ಶರಣು ಹೋದ. ವೀಣಾ ಆಂಟಿ ಇವರ ಪ್ರೇಮಕ್ಕೆ ನೀರೆರೆದು ಪತ್ರ ತರಿಸಿಕೊಡುವರು, ಫೋನಿನಲ್ಲಿ ಮಾತನಾಡಲು ಏಕಾಂತ ಕಲ್ಪಿಸಿಕೊಡುತ್ತಿದ್ದರು. ಅಣ್ಣನ ಸೊಸೆ ಎಂದರೆ ತನ್ನ ಸೊಸೆ ಎಂಬಂತೆ ವಿಶೇಷ ಅಕ್ಕರೆ ತೋರಿಸುತ್ತಿದ್ದರು.

ಇತ್ತ ಸೀಮಾ ಬಿ.ಕಾಂ ಮುಗಿಸುವಷ್ಟರಲ್ಲಿ ಸುಮಂತ್‌ ಡಾಕ್ಟರ್‌ ಆಗಿದ್ದ. ಎಂಡಿ ಮುಗಿಸುವುದಕ್ಕಾಗಿ ಅವನು ಮುಂಬೈ ಯೂನಿವರ್ಸಿಟಿ ಸೇರಿದ. ಅಷ್ಟರಲ್ಲಿ ಅಜ್ಜಿಗೆ ಯಾವಾಗ ಮೊಮ್ಮಗಳ ಡಿಗ್ರಿ ಮುಗಿಯುವುದೋ, ಯಾವಾಗ 3 ಗಂಟು ಹಾಕಿಸುವುದೋ ಎಂಬ ದೊಡ್ಡ ಚಿಂತೆ ಶುರುವಾಗಿತ್ತು. ಸದಾ ಹಿರಿ ಮಗನನ್ನು ಮಗಳಿಗೆ ಬೇಗ ವರ ನೋಡು, ವಾಲಗ ಊದಿಸು ಎಂದು ವರಾತ ಶುರು ಮಾಡಿದರು.

ಶಾಸ್ತ್ರಿಗಳನ್ನು ಕರೆಸುವುದು, ಜಾತಕ ಹೊಂದಾಣಿಕೆ, ಹುಡುಗನ ಅಂತಸ್ತು, ವರೋಪಚಾರ, ತಮ್ಮ ಕೈಗೆಟಕುವುದೇ….. ಇತ್ಯಾದಿಗಳಲ್ಲೇ ಎಷ್ಟೋ ದಿನ ಕಳೆಯಿತು. ಕೊನೆಗೆ ತಡೆಯಲಾರದೆ ಅವಳು ವೀಣಾ ಆಂಟಿಗೆ ಹೇಳಿ ತನ್ನ ತಾಯಿಯ ಬಳಿ ಸುಮಂತನ ಕುರಿತು ಪ್ರಸ್ತಾಪ ಮಾಡಲು ಹೇಳಿದಳು. ಇಲ್ಲದಿದ್ದರೆ ಅಜ್ಜಿ ತರಾತುರಿಯಲ್ಲಿ ಮದುವೆ ಮುಗಿಸುವರೇ!

ವೀಣಾ ಆಂಟಿ ಬಂದು ರತ್ಮಮ್ಮನಿಗೆ ಈ ವಿಷಯ ತಿಳಿಸಿದಾಗ ಅವರು ಮಗಳ ಧೈರ್ಯ ಕಂಡು ಬೆಚ್ಚಿಬಿದ್ದರು. ಇಷ್ಟೆಲ್ಲ ಸಂಕೋಲೆಗಳ ಮಧ್ಯೆ ಈ ಮಹಾತಾಯಿ ಯಾವಾಗ ಪಕ್ಕದ ಮನೆ ಹುಡುಗನನ್ನು ಪ್ರೇಮಿಸಿದಳು, ಅದೂ ಬೇರೆ ಜಾತಿ ಎಂದು ಗೊತ್ತಿರುವಾಗ ಎಂದು ಬೆರಗಾದರು.

ಅವರು ಹೋದ ನಂತರ ಮಗಳನ್ನು ತಮ್ಮ ಕೋಣೆಗೆ ದರದರ ಎಳೆದೊಯ್ದರು. ಇದೇನು ಇವತ್ತು ಇವರು ಹೀಗೆ….. ಎಂದು ಸೀಮಾ ಆಶ್ಚರ್ಯ ಪಡುವಂತಾಯಿತು.

“ಏನೇ ಇದು ನಿನ್ನ ವ್ಯವಹಾರ…..? ನಿಮ್ಮಜ್ಜಿಗೆ ಗೊತ್ತಾದರೆ ನಿನ್ನನ್ನು ಬದುಕಲು ಬಿಡ್ತಾರಾ…?”

“ಅಮ್ಮ….. ಅದೆಲ್ಲ ನನಗೆ ಗೊತ್ತಿಲ್ಲ. ನಾನು ಸುಮಂತ್‌ನನ್ನು 3 ವರ್ಷಗಳಿಂದ ಪ್ರೇಮಿಸುತ್ತಿದ್ದೇನೆ. ಮದುವೆ ಅಂತ ಆದರೆ ಅವನನ್ನೇ ಆಗೋದು! ಇಲ್ಲದಿದ್ರಿ ನಾನೇ ಎಲ್ಲಾದರೂ ಹೋಗಿ ಸಾಯ್ತೀನಿ.”

“ಅಯ್ಯೋ ಹಾಳಾದವಳೆ…. ಯಾಕೆ ಹಾಗೆಲ್ಲ ಮಾತನಾಡ್ತೀಯಾ? ಈ ಮನೆಯವರಿಗೆ ಗೊತ್ತಾಗಿ ಅವರು ನಿನ್ನ ಕಥೆ ಮುಗಿಸುವ ಬದಲು ನೀನಾಗಿ  ಸಾಯುವುದೇ ಮೇಲು! ಯಾಕಾದ್ರೂ ನನ್ನ ಹೊಟ್ಟೆಯಲ್ಲಿ ಹುಟ್ಟಿ ಕತ್ತು ಕೊಯ್ತಿದ್ದೀ……”

“ಅಯ್ಯೋ…… ಅಮ್ಮ……” ಇಬ್ಬರ ಗೋಳು ಹೇಳತೀರದು.

ಪ್ರೀತಿ ವಾತ್ಸಲ್ಯಕ್ಕೆ ಕಟ್ಟುಬಿದ್ದ ರತ್ನಮ್ಮ ಅಂದು ಮಗಳ ಕತ್ತು ಹಿಸುಕಿ ಕೊಲೆ ಮಾಡದಿದ್ದುದೇ ಹೆಚ್ಚು. ವಿಷಯ ಗೊತ್ತಾದ ತಕ್ಷಣ ಮಗಳನ್ನು ದಂಡಿಸುವುದಿರಲಿ, ಅವಳಿಗೆ ಅಂಥ ಅವಕಾಶ ಮಾಡಿಕೊಟ್ಟವಳು ಅಂತ ತನ್ನನ್ನು ಮೊದಲು ಇಲ್ಲ ಅನ್ನಿಸಿ ಬಿಡುವುದಿಲ್ಲವೇ? ಈ ಭಯ ಅವರನ್ನು ತತ್ತರಿಸುವಂತೆ ಮಾಡಿತು.

ಆ ದಿನ ಏನೂ ನಡೆದೇ ಇಲ್ಲ ಎನ್ನುವಂತೆ ಅತ್ತೆ ಜೊತೆ ಸೇರಿಕೊಂಡು ಮಗಳಿಗೆ ಬೇಗ ಬೇಗ ವರ ಹುಡುಕಲು ನೆರವಾಗತೊಡಗಿದರು. ಮಗಳಿಗೆ ಸಹಾಯ ಮಾಡುವ ಕಲ್ಪನೆಗೂ ಆಕೆ ಕೈ ಹಾಕಲಿಲ್ಲ. ಆ ಮನೆಯಲ್ಲಿ ಸೀಮಾಳಿಗೆ ನೆರವಾಗಬಹುದಿದ್ದ ಏಕೈಕ ಜೀವ ತನ್ನ ಕೈಬಿಟ್ಟಾಗ ಸೀಮಾ ನಡುಗಿಹೋದಳು. ಸುಮಂತನ ಉನ್ನತ ಶಿಕ್ಷಣದ ಪರೀಕ್ಷೆ ನಡೆಯಲಿತ್ತು. ಇತ್ತ ಇವಳ ಜೀವನದ ಅಗ್ನಿ ಪರೀಕ್ಷೆಯ ತಯಾರಿ ನಡೆದಿತ್ತು.

ಅವಳಿಗೀಗ ಇದ್ದದ್ದು ಒಂದೇ ಯೋಚನೆ….. `ಹೇಗಾದರೂ ಮಾಡಿ ಸುಮಂತನ ಬಳಿ ಓಡಿಹೋಗಲೇ ಅಥವಾ ಸಾಯಲೇ?’ `ಯಾವ ಧೈರ್ಯದಲ್ಲಿ ಅವನ ಬಳಿ ಓಡಿಹೋಗಲಿ? ಈ ನನ್ನ ಅಣ್ಣಂದಿರೆಲ್ಲ ಸೇರಿ ನಮ್ಮಿಬ್ಬರನ್ನೂ ಒಟ್ಟಿಗೆ ಕೊಂದು ಹಾಕಿದರೂ ಆಶ್ಚರ್ಯವಿಲ್ಲ. ಅನ್ಯಾಯವಾಗಿ ವೀಣಾ ಆಂಟಿಗೆ ಕೆಟ್ಟ ಹೆಸರು ಬಂದೀತು…. ಯಾಕಾದರೂ ಈ ಪ್ರೇಮ ಪ್ರಪಾತಕ್ಕೆ ಬಿದ್ದೆನೋ….’ ಎಂದು ಚಡಪಡಿಸಿದಳು.

ಇವಳ ಅಣ್ಣಂದಿರಿಗೆ ಮನೆಯವರ ಧನ ಬಲದಿಂದ ದುರಹಂಕಾರ ಬೆಳೆದಿತ್ತು. ಓದನ್ನು ಬಿಟ್ಟು ದಾದಾಗಿರಿ, ರಾಜಕೀಯಕ್ಕಿಳಿದಿದ್ದರು. ತನ್ನ ಈ ಅಂತರಂಗದ ಮಾತು ಹೇಳಿಕೊಳ್ಳಲು ಅವಳಿಗೆ ಹತ್ತಿರದ ಯಾವ ಗೆಳತಿಯೂ ಇರಲಿಲ್ಲ. ವೀಣಾ ಆಂಟಿಯನ್ನು ಮಾತನಾಡಿಸಲೇಬಾರದು ಎಂದು ರತ್ನಮ್ಮ ಮಗಳಿಂದ ಆಣೆ ಪ್ರಮಾಣ ಮಾಡಿಸಿದ್ದರು.

ಈಗಂತೂ ಅವನ ಫೋನ್‌, ಪತ್ರ…. ಗಗನಕುಸುಮವಾಗಿತ್ತು. ಅವಳು ಎಲ್ಲಿಗೆ ಹೋದಾಳು? ಏನು ಮಾಡಿಯಾಳು? ಇಲ್ಲಿ ಎಲ್ಲ ಅಜ್ಜಿಯ ಸರ್ಪಗಾವಲಿನಲ್ಲಿ ನಡೆಯುತ್ತಿತ್ತು.

ಅಂತೂ ಒಂದು ದಿನ ಅವಳ ಮದುವೆ ಫಿಕ್ಸ್ ಆಯ್ತು, ಎನ್‌ಆರ್‌ಐ ಹುಡುಗ, ಹಣ ಐಶ್ವರ್ಯ ಕೊಳ್ಳೆ ಹೋಗುವಂತಿತ್ತು. ಮತ್ತಿನ್ನೇನು? ಮನೆಯವರು ಲಗ್ನ ಕಟ್ಟಿಸಿಯೇಬಿಟ್ಟರು.

ಅವಳಂತೂ ಜೀವಂತ ಶವ ಆಗಿದ್ದಳು. ಮನೆಯವರು ಹೇಳಿದಂತೆ ಯಂತ್ರವತ್ತಾಗಿ ನಡೆದುಕೊಳ್ಳುತ್ತಿದ್ದಳು. ಅವಳ ಮನದಲ್ಲೂ ಭಾವನೆಗಳಿವೆ, ಅವಳೂ ಒಬ್ಬ ಮನುಷ್ಯಳೆಂದು ಅವರು ಗುರುತಿಸಲೇ ಇಲ್ಲ. ರತ್ನಮ್ಮ ಇಲ್ಲಿ ಮಗಳಿಗೆ ಯಾವ ಸಹಾಯವನ್ನೂ ಮಾಡುವಂತಿರಲಿಲ್ಲ. ಭಾವನೆಗಳಿಗೆ ಬೆಲೆ ಇಲ್ಲದ ಆ ಹೃದಯ ಶೂನ್ಯರೆದುರು ಅವಳು ಏನೆಂದು ತನ್ನ ಮನಸ್ಸಿನ ಹೊಯ್ದಾಟ ಹೇಳಿಕೊಳ್ಳಬಲ್ಲಳು? ಆ ಮನೆಯಲ್ಲಿ ಪ್ರೇಮ ಪ್ರೀತಿ ಅರ್ಥಹೀನ ಪದಗಳು, ದುಡ್ಡಿರುವ ಕಡೆ ದುಡ್ಡು ಸೇರುತ್ತದೆ, ಅಷ್ಟೇ ಗೊತ್ತಿತ್ತು. ಹಾಗಿರುವಾಗ ತನ್ನ ಪ್ರೇಮ ವಿವಾಹಕ್ಕೆ ಸಹಕರಿಸಿ ಎಂದು ಅಣ್ಣಂದಿರನ್ನು ಹೇಗೆ ತಾನೇ ಕೇಳಿಕೊಂಡಾಳು? ಅನೇಕ ಪ್ರೇಮಿಗಳ ಅಮರಕಥೆಗಳ ಬಗ್ಗೆ ಕಥೆ ಕಾದಂಬರಿ, ಸಿನಿಮಾ ಸೀರಿಯಲ್‌ಗಳಲ್ಲಿ ಕೇಳಿದ್ದಳು. ವಾಸ್ತವಿಕ ಜೀವನದಲ್ಲಿ ಇದು ನನಸಾಗುವಂತಿರಲಿಲ್ಲ.

ಈಗೇನಾದರೂ ಪವಾಡ ನಡೆದರೆ ಮಾತ್ರ ಅವಳ ಪ್ರೇಮ ಫಲಿಸುತ್ತಿತ್ತು. ಸುಖಾಂತ ಕೇವಲ ಕಲ್ಪನೆಯಲ್ಲಿ ಸಾಧ್ಯ. ವಿಧಿಯಿಲ್ಲದೆ ಅಡ್ಜಸ್ಟ್ ಮೆಂಟ್‌ ಒಂದೇ ವಾಸ್ತವಿಕ ಜೀವನ. ಮದುವೆ ಮಂಟಪಕ್ಕೆ ಬಂದಿದ್ದೂ ಆಯ್ತು. ಬಿಡದಿ ಮನೆ ಸಿಂಗಾರ, ನೆಂಟರಿಷ್ಟರ  ಬಂಧು ಬಳಗದ ಗೌಜು ಗದ್ದಲದ ನಡುವೆ ವರಪೂಜೆಯೂ ಮುಗಿಯಿತು. ಈ ಎಲ್ಲದರ ಮಧ್ಯೆ ಅವಳಿಗೊಂದು ಆಶಾಕಿರಣ ಇದ್ದೇ ಇತ್ತು. ಸಿನಿಮಾದಲ್ಲಿ ತೋರಿಸುವ ಹಾಗೆ ಸುಮಂತ್‌ ಯಾವ ಕ್ಷಣದಲ್ಲಿಯಾದರೂ ಬಂದು ತನ್ನನ್ನು ಆ ಧಾರೆ ಮಂಟಪದಿಂದ ಶಾಶ್ವತವಾಗಿ ಕರೆದೊಯ್ಯಬಹುದು ಅಂತ…. ಹಾಗೇನೂ ಆಗಲಿಲ್ಲ.

ಎಲ್ಲ ಯಾಂತ್ರಿಕವಾಗಿ ನಡೆಯುತ್ತಿತ್ತು. ಯಾರು ಏನು ಹೇಳಿದರೂ ಅದನ್ನು ಮಾಡುತ್ತಿದ್ದಳು. ಅಂತೂ ಅವಳ ಕುತ್ತಿಗೆಗೆ 3 ಗಂಟು ಬಿದ್ದು,  ಛತ್ರದಲ್ಲಿನ ಗಂಡಿನ ಕಡೆಯವರ ಮನೆಗೆ ಗೃಹಪ್ರವೇಶ ಮಾಡಿದ್ದೂ ಆಯ್ತು. ನಿಸ್ತೇಜವಾಗಿದ್ದ ಅವಳ ಮುಖದಲ್ಲಿ ಯಾವ ಜೀವಂತಿಕೆಯೂ ಇರಲಿಲ್ಲ. ವಧುವಿನ ಕಳೆ ಮೊದಲೇ ಇರಲಿಲ್ಲ.

ಅಮ್ಮನ ಮನೆಯವರಿಂದ ಬೀಳ್ಕೊಂಡು ಹೊರಡುವ ಹೊತ್ತು ಬಂದೇಬಿಟ್ಟಿತು. ಎಲ್ಲರಿಗೂ ಯಾಂತ್ರಿಕವಾಗಿ ನಮಸ್ಕಾರ ಮಾಡುತ್ತಾ ಹೊರಬಂದಳು. ತವರು ಬಿಟ್ಟು ಹೊರಡುತ್ತಿರುವ ದುಃಖ ಎಂದೇ ಎಲ್ಲರೂ ತಿಳಿದರು. ವೀಣಾ ಆಂಟಿಯನ್ನು ಬೀಳ್ಗೊಳ್ಳುತ್ತಾ ಪಿಸಪಿಸನೆ ಅವರ ಕಿವಿಯಲ್ಲಿ, “ನನ್ನ ಪ್ರೇಮದ ಬಲಿ ಆಗಿಹೋಯ್ತು. ಕೊನೆ ಘಳಿಗೆಯವರೆಗೂ ಸುಮಂತ್‌ ಬರುತ್ತಾರೆ ಎಂದೇ ಕಾದಿದ್ದೆ. ಆದರೆ ಅಲ್ಲಿ ಅವರು ಇದೇನೂ ಗೊತ್ತಿಲ್ಲದವರಾಗಿ ಇದ್ದಾರೆ. ಇತ್ತ ನಾನು ಪರಪುರುಷನಿಗೆ ಸತಿಯಾಗಿ ಹೊರಟಿದ್ದೇನೆ,” ಎಂದು ಕಂಬನಿ ಒರೆಸಿಕೊಂಡಳು.ರತ್ನಮ್ಮ

ಮಗಳನ್ನು ಸಂತೈಸಲು ಮುಂದಾದಾಗ, ಅವಳು ಅವರ ಬಳಿ ಬಲು ಮೆಲ್ಲಗೆ, “ಇಂದಿಗೆ ನನಗೆ ಈ ಮನೆಯ ಋಣ ಹರಿಯಿತಮ್ಮ. ಇನ್ನು ಎಂದೆಂದೂ ಇಲ್ಲಿಗೆ ವಾಪಸ್ಸು ಬರಲಾರೆ. ನನ್ನನ್ನು ನೀವೆಲ್ಲ ಪೂರ್ತಿ ಮರೆತುಬಿಡಿ,” ಎಂದು ಹೇಳುತ್ತಾ ಹಿಂದಿರುಗಿ ನೋಡದೆ ಅತ್ತೆ ಮನೆ ಪರಿವಾರದ ಜೊತೆ ಹೊರಟುಬಿಟ್ಟಳು. ತವರಿನವರು ಬಂದು ಮಗಳನ್ನು ಅತ್ತೆ ಮನೆಗೆ ಬಿಟ್ಟು ಬರುವುದು ವಾಡಿಕೆ, ಆದರೆ ಸೀಮಾ ಅದೆಲ್ಲ ಏನೂ ಬೇಡ ಎಂದು ಪತಿ ಇದ್ದ ಕಾರು ಏರಿದಳು. ಮೈಸೂರಿನಿಂದ ಕಾರು ಬೆಂಗಳೂರಿನತ್ತ ಹೊರಟಿತು.

ಹೇಮಂತ್‌ ಸೀಮಾಳನ್ನು ಮದುವೆ ಆದದ್ದು ನಿಜ, ಆದರೆ ಪತಿಯಾಗುವ ಪ್ರಯತ್ನ ಮಾಡಲೇ ಇಲ್ಲ. ಬಹುಶಃ ಅದು ತನ್ನ ನೀರಸ ವರ್ತನೆಯಿಂದ ಇರಬೇಕೆಂದೇ ಸೀಮಾ ಭಾವಿಸಿದ್ದಳು. ಆದರೆ ಅದರ ಮುಂದಿನ ವಾರ ಇವರು ಬೆಂಗಳೂರಿನಿಂದ ಅಮೆರಿಕಾಗೆ ಹೊರಟಾಗ, ಅಲ್ಲಿ ಅವಳಿಗೆ ಎಲ್ಲ ಅರ್ಥವಾಗಿತ್ತು. ಅಲ್ಲಿ ಹೇಮಂತನಿಗೆ ಈಗಾಗಲೇ ವಿದೇಶಿಯೊಬ್ಬಳೊಂದಿಗೆ ಮದುವೆ, ಮಗು ಎಲ್ಲಾ ಆಗಿತ್ತು. ಕಸಿನ್‌ ಎಂದಷ್ಟೇ ಇವಳನ್ನು ಅವಳಿಗೆ ಪರಿಚಯಿಸಿದ.

ಒಂದು ವಿಧದಲ್ಲಿ ಈ ಬಾಂಧವ್ಯಕ್ಕೆ ತಾನು ಅಂಟದಿದ್ದುದೇ ಒಳ್ಳೆಯದಾಯ್ತು ಎಂದು ಭಾವಿಸಿದಳು. ಕೇವಲ ತನ್ನ ಮನೆಯವರ ಸಮಾಧಾನಕ್ಕಾಗಿ ಅವಳನ್ನು ಮದುವೆಯಾಗಿ ನ್ಯೂಯಾರ್ಕ್‌ಗೆ ಕರೆತಂದಿದ್ದ.

ಸುಮಂತ್‌ನನ್ನೇ ಪತಿ ಎಂದು ಭಾವಿಸಿದ್ದ  ಸೀಮಾಳಿಗೆ ಈ ಮುರಿದ ಮದುವೆ ಯಾವ ಬೇಸರವನ್ನೂ ಮೂಡಿಸಲಿಲ್ಲ. ಆದರೆ ವಿಧಿಯಿಲ್ಲದೆ ಸೀಮಾ ಹೇಮಂತ್‌ನ ಮನೆಯಲ್ಲಿ ಒಲ್ಲದ ಅತಿಥಿಯಾಗಿ ಇರಬೇಕಾಯ್ತು. ಉನ್ನತ ವ್ಯಾಸಂಗಕ್ಕಾಗಿ ಅಲ್ಲಿಗೆ ಬಂದಿದ್ದಾಳೆಂದೇ ಅವನು ನ್ಯಾನ್ಸಿಗೆ ತಿಳಿಸಿದ. ಅಮಾಯಕಳಾದ ಅವಳು ಸೀಮಾಳನ್ನು ಆದರಿಸಿ, ಕೋಣೆಯಲ್ಲಿ ಬೇಕಾದ ಅನುಕೂಲ ಮಾಡಿಕೊಟ್ಟು, ತನ್ನ ಆಫೀಸ್‌ ಕೆಲಸಕ್ಕೆಂದು ಹೊರಟುಬಿಟ್ಟಳು.

ಸೀಮಾ ಹೇಮಂತ್‌ ಒಂದೇ ಸೂರಿನಡಿ ಅಪರಿಚಿತರಂತೆ ವರ್ತಿಸತೊಡಗಿದರು. ಅವಳು ಮುಂದಿನ ಓದಿಗೆ ಬೇಕಾದ ತಯಾರಿಯಲ್ಲೇ ಮಗ್ನಳಾದಳು.

ಅದಾದ 2 ವಾರಗಳಲ್ಲಿ ಅವನು ಸೀಮಾಳಿಗೆ ಆ ಪರಿಸ್ಥಿತಿಯಿಂದ ಮುಕ್ತಿ ನೀಡಲು ಅವಳಿಗೆ ಡೈವೋರ್ಸ್‌ ಕೊಡುತ್ತೇನೆಂದ. ಆಗ ಸೀಮಾ ಒಂದು ಷರತ್ತು ಒಡ್ಡಿದಳು, “ಡೈವೋರ್ಸ್‌ ಕೊಡಲು ನಾನು ರೆಡಿ. ನಾನು ಇನ್ನೂ 2 ವರ್ಷ ಇಲ್ಲೇ ಇದ್ದು, ನನ್ನ ಉನ್ನತ ವ್ಯಾಸಂಗ ಪೂರೈಸಲು ಸಹಾಯ ಮಾಡಿ. ಇದನ್ನು ಸಾಲ ಅಂತ ಕೊಡಿ. ಅದಾಗಿ ನನಗೆ ಕೆಲಸ ಸಿಕ್ಕಿದ ತಕ್ಷಣ ಎಲ್ಲಾ ಸಾಲ ತೀರಿಸುವೆ. ಬೆಂಗಳೂರಿಗೆ ಮತ್ತೆ ಹೋಗಲಾರೆ….. ಮುಂದಿನ ಬದುಕು ಇಲ್ಲೇ ಕಂಡುಕೊಳ್ಳುವೆ….” ಎಂದಳು.

ಅವನು ಒಪ್ಪಿದ ನಂತರ ಅವಳ ಜೀವನದ ಇನ್ನೊಂದು ಘಟ್ಟ ಶುರುವಾಯಿತು…. ಆದದೆಲ್ಲ ಒಳಿತೇ ಆಯಿತು ಎಂಬಂತೆ, ಯಾವ ಗೊಡವೆಯೂ ಇಲ್ಲದೆ ಅವಳು ಸಂಪೂರ್ಣ ಓದಿನ ಕಡೆ ಗಮನಹರಿಸಿ ಸಿ.ಎ ಮುಗಿಸಿದಳು. ಅಂದುಕೊಂಡಂತೆಯೇ ಅವಳಿಗೆ ಖ್ಯಾತ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆ ದೊರಕಿತು. ಕೆಲಸ ದೊರಕಿದ 6 ತಿಂಗಳಲ್ಲೇ ನ್ಯಾನ್ಸಿ ಹೇಮಂತ್‌ರ ಸಾಲ ಪೂರ್ತಿ ವಾಪಸ್ಸು ಮಾಡಿದಳು. ಕಷ್ಟಕಾಲದಲ್ಲಿ ಅವರು ಮಾಡಿದ ಸಹಾಯ ಮರೆಯುವಂತಿರಲಿಲ್ಲ. ನ್ಯಾನ್ಸಿ ಇವಳ ಬೆಸ್ಟ್ ಫ್ರೆಂಡ್‌ ಆಗಿಹೋಗಿದ್ದಳು. ಕೆಲಸ ಸಿಕ್ಕಿದ ಮೇಲೂ 6 ತಿಂಗಳು ಬಲವಂತದಿಂದ ಅವರ ಮನೆಯಲ್ಲೇ ಉಳಿಸಿಕೊಂಡಿದ್ದರು.

ಎಷ್ಟೋ ವರ್ಷಗಳ ನಂತರ, ಕಂಪನಿಯ ಕೆಲಸದ ಸಲುವಾಗಿ ಬೆಂಗಳೂರಿಗೆ ಬರಬೇಕಾಯಿತು. ಚಾಮುಂಡಿ ಬೆಟ್ಟ ನೆಪ ಮಾಡಿಕೊಂಡು ಮೈಸೂರಿಗೆ ಬಂದಳು. ಅಲ್ಲಿಂದ ತವರಿನ ಸರಸ್ವತಿಪುರಂ ಕಡೆಗೆ ಹೆಜ್ಜೆ ಹಾಕಿದಳು. ಎಷ್ಟೇ ಆದರೂ… ಯಾಕೋ ಮನಸ್ಸು ತಡೆಯದೆ ತನ್ನ ಹಿಂದಿನ ಪ್ರತಿಜ್ಞೆ ಮುರಿದು ಬಂದೇಬಿಟ್ಟಳು.

ಇದನ್ನೆಲ್ಲ ಯೋಚಿಸುತ್ತಾ ಬೇಕೆಂದೇ ದೂರದಿಂದ ನಡೆದುಕೊಂಡೇ ಮನೆ ಕಡೆ ಹೆಜ್ಜೆ ಹಾಕತೊಡಗಿದಳು. ಆಗ ತರಕಾರಿ ಕೊಳ್ಳಲೆಂದು ವೀಣಾ ಆಂಟಿ ಗಾಡಿಯವನ ಬಳಿ ವ್ಯಾಪಾರಕ್ಕೆ ನಿಂತಿದ್ದರು.

“ನೀನು… ನೀನು…. ಸೀಮಾ ಅಲ್ವೇ?! ಎಷ್ಟೊಂದು ಬದಲಾಗಿದ್ದಿ…. ಅತಿ ಸುಂದರವಾಗಿದ್ದಿ…. ಮೊದಲೇ ಸುಂದರವಾಗಿದ್ದಳು ಈಗ ಇನ್ನಷ್ಟು ಕಳೆಗೂಡಿದ್ದಿ!” ಆಶ್ಚರ್ಯದಲ್ಲಿ ಬಡಬಡಿಸುತ್ತಿದ್ದರು.

“ಹೌದು ಆಂಟಿ, ನಾನೇ ಸೀಮಾ….. ನೀವು ಹೇಗಿದ್ದೀರಿ?” ಅವರನ್ನು ಕಂಡು ತನಗೇನು ಖುಷಿಯಾಗಲಿಲ್ಲ ಎಂಬಂತೆ ಮುಖ ಮಾಡಿಕೊಂಡಳು. ಅದು ಅವರಿಗೆ ಸ್ಪಷ್ಟವಾಗಿ ಗುರುತಾಯಿತು.

“ಸೀಮಾ….. ನೀನು ಎಂದೂ ನನ್ನನ್ನು ಕ್ಷಮಿಸುವುದಿಲ್ಲವೆಂದು ಗೊತ್ತು. ನಿನ್ನ ಮದುವೆಯ ವಿಷಯ ನಾನು ಬೇಕೆಂದೇ ಸುಮಂತ್‌

ಗೆ ತಿಳಿಸಲಿಲ್ಲ. ನೀನು ಹೋದ ಮೇಲೆ ಒಮ್ಮೆ ಬಂದಿದ್ದ…. ವಿಷಯ ತಿಳಿಯುತ್ತಲೇ ಅಂದೇ ವಾಪಸ್ಸು ಹೋದವನು ಇದುವರೆಗೂ ಒಂದು ಸಲವೂ ನನಗೆ ಫೋನ್‌ ಮಾಡಿಲ್ಲ.

“ಸುಮಂತ್‌ನ ಪತ್ರ ನಿನಗಾಗಲಿ, ನಿನ್ನ ಪತ್ರ ಅವನಿಗಾಗಲಿ, ಮೆಸೇಜ್‌ ಆಗಲಿ ತಲುಪಿಸಬಾರದೆಂದು ನಿಮ್ಮಮ್ಮ ಬಂದು ನನ್ನ ತಾಳಿ ಮುಟ್ಟಿಸಿ ಪ್ರಮಾಣ ಮಾಡಿಸಿದರು. ಅವರ ಆತಂಕದ ಮುಂದೆ ನನ್ನದೇನೂ ನಡೆಯಲಿಲ್ಲ. ಹೀಗಾಗಿ ಸುಮಂತ್‌ ಸಕಾಲಕ್ಕೆ ನಿನ್ನ ಭೇಟಿ ಆಗಲೇ ಇಲ್ಲ…..”

“ಆಂಟಿ ಹೋಗಲಿ ಬಿಡಿ, ನಾನು ಕೇಳಿಕೊಂಡು ಬಂದದ್ದು ಇಷ್ಟೆ….. ಜೀವನ ಬಂದಂತೆ ಎದುರಿಸುತ್ತಿದ್ದೇನೆ.”

“ಅದು ಸರಿ ಸೀಮಾ….. ಇಷ್ಟು ವರ್ಷಗಳಾದ ಮೇಲೆ ನೀನಿಲ್ಲಿ?”

ಅಷ್ಟರಲ್ಲಿ ಸೀಮಾಳ ಹಿರಿ ಚಿಕ್ಕಮ್ಮ ರಾಧಾ ತರಕಾರಿ ಕೊಳ್ಳಲು ಅಲ್ಲಿಗೆ ಬಂದರು. ಸೀಮಾ ಅವರನ್ನು ಮಾತನಾಡಿಸುತ್ತಾ, “ನಮಸ್ತೆ ಚಿಕ್ಕಮ್ಮ…. ಹೇಗಿದ್ದೀರಿ? ಇದೇನು ತರಕಾರಿ ಕೊಳ್ಳಲು ನೀವೇ ಬಂದಿದ್ದೀರಿ….?” ಆಶ್ಚರ್ಯದಿಂದ ಕೇಳಿದಳು.

“ಈಗ ಎಲ್ಲಾ ಬದಲಾಗಿ ಹೋಯ್ತಮ್ಮ…. ನೀನು ಆ ಕಡೆ ಹೋಗಿದ್ದೇ ಬಂತು, ವರ್ಷದಲ್ಲಿ ಮನೆ 4 ಭಾಗವಾಗಿ ಅವರವರ ಪಾಲು ಪಡೆದುಕೊಂಡು, ಸ್ವತಂತ್ರ ಪೋರ್ಶನ್‌ ಮಾಡಿಕೊಂಡು ಎಲ್ಲರೂ ನೆಮ್ಮದಿಯಾಗಿದ್ದಾರೆ…. ನಿನ್ನ ಮದುವೆ ಮುರಿದ ವಿಷಯ ತಿಳಿದದ್ದೇ ರತ್ನಕ್ಕಾ ಹೃದಯಾಘಾತದಿಂದ ಹಾಸಿಗೆ ಹಿಡಿದುಬಿಟ್ಟಿದ್ದಾರೆ….. ಅಜ್ಜಿ ತಮ್ಮ ದರ್ಪ ಬಿಟ್ಟು ಮೂಲೆ ಸೇರಿದ್ದಾರೆ. ನಾವು, ಅವರು ನಿಮ್ಮಜ್ಜಿ ಮಾತ್ರ ಜೊತೆಗಿದ್ದೇವೆ. ನಿಮ್ಮಣ್ಣ ಮದುವೆ ಆಗಿ ಬೆಂಗಳೂರಿನಲ್ಲಿ ಸ್ವಂತ ಬಿಸ್‌ನೆಸ್‌ ನಡೆಸುತ್ತಿದ್ದಾನೆ….. ಈಗ ಆ ವೈಭವ, ದರ್ಪ ಏನೂ ಇಲ್ಲ ಬಿಡು…..” ಎಂದು ಚಿಕ್ಕಮ್ಮ ಹೇಳಿದಾಗ ಮನೆಯ ವಾತಾವರಣದ ಸ್ಪಷ್ಟ ಕಲ್ಪನೆ ಮೂಡಿತು. ವೀಣಾ ಆಂಟಿಗೆ ಔಪಚಾರಿಕವಾಗಿ, “ಆಮೇಲೆ ಬಂದು ನೋಡ್ತೀನಿ ಆಂಟಿ,” ಎಂದವಳೇ ಅಳುಕುತ್ತಲೇ ಚಿಕ್ಕಮ್ಮನ ಕೈಯಿಂದ ತರಕಾರಿ ಚೀಲ ತೆಗೆದುಕೊಳ್ಳುತ್ತಾ ಮನೆಯತ್ತ ಹೆಜ್ಜೆ ಹಾಕಿದಳು.

ಅವಳಿಗೆ ಮನಸ್ಸಿನಲ್ಲಿ ಒಳಗೊಳಗೆ ಅಳುಕು. ಏನೇ ಆದರೂ ತಾಯಿ ತಾಯಿಯೇ! ಅಮ್ಮನನ್ನು ತಾನು ಅಷ್ಟೊಂದು ವಿರೋಧಿಸಿ ಇಷ್ಟು ವರ್ಷಗಳ ಕಾಲ ಮಾತನಾಡಿಸದೇ ಇದ್ದದ್ದು ಬಹಳ ತಪ್ಪಾಯ್ತು ಎಂದು ಒಮ್ಮೆಲೇ ಅನ್ನಿಸಿತು. ಅಮ್ಮನನ್ನು ಹೇಗಾದರೂ ಕನ್ವೀನ್ಸ್ ಮಾಡಿಸಬೇಕು ಎಂದು ಯೋಚಿಸುತ್ತಲೇ ಮನೆಯೊಳಗೆ ಕಾಲಿರಿಸಿದಳು. ಇವಳ ತಂದೆಯ ಪೋರ್ಶನ್‌ ಗ್ರೌಂಡ್‌ ಪ್ಲೇರ್ ನಲ್ಲಿತ್ತು. ಒಳಗೆ ನುಗ್ಗಿದ ರಾಧಾ ಚಿಕ್ಕಮ್ಮ, “ಯಾರು ಬಂದಿದ್ದಾರೆ ನೋಡಿ!” ಎಂದು ಘೋಷಿಸಿದರು.

happy-ending-story2

ಇವಳ ತಂದೆ, ಚಿಕ್ಕಪ್ಪ, ಅವರ ಮಗ ಸೊಸೆ ಎಲ್ಲರೂ ಒಮ್ಮೆಲೇ ಹೊರಬಂದರು. ನಿಧಾನವಾಗಿ ನಡೆದು ಬಂದ ಅಜ್ಜಿ ಹತ್ತಿರ ಬಂದು ಅವಳ ಕೈ ಹಿಡಿದುಕೊಳ್ಳುತ್ತಾ, “ನಮ್ಮ ಸೀಮಾ ಪುಟ್ಟಿ ಅಲ್ಲವೇ…..?” ಎಂದು ಅತ್ತೇಬಿಟ್ಟರು. ಅಷ್ಟು ವರ್ಷಗಳಲ್ಲಿ ಅಜ್ಜಿ ಮೊದಲ ಬಾರಿಗೆ ತೋರಿದ ವಾತ್ಸಲ್ಯದಿಂದ ಅವಳು ಸಂಪೂರ್ಣ ಕರಗಿಹೋಗಿ ತವರಿನ ಮೇಲಿದ್ದ ಕೋಪವೆಲ್ಲ ದೂರವಾಯಿತು. ಹಿರಿಯರ ಪಾದ ಮುಟ್ಟಿ ನಮಸ್ಕರಿಸಿದಳು. ಎಲ್ಲರೂ ಕಳಕಳಿಯಿಂದ ಅವಳನ್ನು ವಿಚಾರಿಸುವರೇ! ಒಬ್ಬೊಬ್ಬರ ಪ್ರಶ್ನೆಗೂ ಉತ್ತರಿಸುತ್ತಾ ಅಪ್ಪಾಜಿ ಬಳಿ ಬಂದು ಅವರ ಕೈ ಹಿಡಿದುಕೊಂಡಳು.

“ಹೇಗಿದ್ದಿ ಮಗು…. ಚೆನ್ನಾಗಿದ್ದೀಯಾ? ನೀನೀಗ ದೊಡ್ಡ ಆಫೀಸರ್‌ ಅಂತೆ, ಹೀಗೆ ಸುದ್ದಿಗಳು ತಿಳಿಯುತ್ತಿರುತ್ತದೆ….” ಅವರ ಎದೆಗೆ ಒರಗಿ ಕಂಬನಿ ಮಿಡಿದಳು.

“ನನ್ನನ್ನು ಕ್ಷಮಿಸು ಸೀಮಾ…. ನಿನ್ನ ಮನಸ್ಸು ಅರ್ಥ ಮಾಡಿಕೊಳ್ಳದೆ ಬಹಳ ನೋಯಿಸಿಬಿಟ್ಟೆ,” ಅಜ್ಜಿ ಕಣ್ಣು ಒರೆಸಿಕೊಳ್ಳುತ್ತಾ ಹೇಳಿದಾಗ, ಓಡಿಹೋಗಿ ಅವರನ್ನು ಅಪ್ಪಿಕೊಂಡಳು. ಯಾರೋ ನೀರು ತಂದರು, ಯಾರೋ ಕಾಫಿ ಮಾಡಿ ಕೊಟ್ಟರು. ಅವಳು ಪ್ರತಿ ಮೂಲೆ ಗಮನಿಸಿದರೂ ಅಮ್ಮನ ಸುಳಿವಿಲ್ಲ.

“ಅಪ್ಪಾಜಿ, ಅಮ್ಮ …. ಎಲ್ಲಿ?”

“ನಿನ್ನ ನೆನಪಲ್ಲಿ ಎದೆ ಒಡೆದು ಹಾಸಿಗೆ ಹಿಡಿದುಬಿಟ್ಟಿದ್ದಾಳಮ್ಮ, ಸದಾ ರೂಮಲ್ಲಿ ಬಂಧಿ ಆಗಿರುತ್ತಾಳೆ. ಹೋಗಿ ಮಾತನಾಡಿಸು. ನೀನು ಬಂದ ದೆಸೆಯಿಂದಾದರೂ ಹುಷಾರಾಗಬಹುದು.”

ಎಲ್ಲರತ್ತ ಮುಗುಳ್ನಗುತ್ತಾ ನಿಧಾನವಾಗಿ ಬಚ್ಚಲ ಮನೆಗೆ ಹತ್ತಿರವಿದ್ದ ಅಮ್ಮನ ಕೋಣೆಗೆ ಹೋದಳು. ಮೂಲೆಯಲ್ಲಿ ಹಾಸಿದ ಹಾಸಿಗೆ ಮೇಲೆ ಅಮ್ಮ ಒರಗಿ ಕುಳಿತಿದ್ದರು. ಇವಳು ಬಂದ ಸಮಾಚಾರ, ಮಾತುಕಥೆ ಕೇಳಿಸಿಕೊಂಡು ಕಣ್ಣೀರು ಧಾರೆ ಹರಿದಿತ್ತು. ಮಗಳು ಬಂದಳೆಂಬ ಉತ್ಸಾಹಕ್ಕೆ ಎದ್ದು ಕೂರುವಷ್ಟು ಶಕ್ತಿ ಮೈಗೂಡಿತು.

ಏನೂ ಮಾತನಾಡದೆ ಅಮ್ಮನ ಮಡಿಲಿಗೊರಗಿ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು. ತಾಯಿ ಮಗಳನ್ನು ಸಮಾಧಾನಪಡಿಸಲು ಅಜ್ಜಿಯೇ ಬರಬೇಕಾಯಿತು.

“ನನ್ನಿಂದ ನಿನ್ನ ಜೀವನ ಹೀಗಾಗಿ ಹೋಯಿತು ಸೀಮಾ…. ನಿನಗೆ ಸ್ವಲ್ಪ ಸಹಾಯ ಮಾಡುವ ಧೈರ್ಯ ತೋರಿದ್ದರೆ ನೀನು ಹೀಗೆ ಪರದೇಶಿ ಹಾಗೆ 10 ವರ್ಷಗಳ ಕಾಲ ಎಲ್ಲೋ ದೂರ ದೇಶದಲ್ಲಿ ಒಬ್ಬಂಟಿಯಾಗಿ ಒದ್ದಾಡುವ ಅಗತ್ಯವಿರಲಿಲ್ಲ……”

“ಇರಲಿ ಬಿಡಮ್ಮ, ನಾನು ಕೇಳಿಕೊಂಡು ಬಂದದ್ದು,” ಎಂದು ಅಮ್ಮನನ್ನು ಸಮಾಧಾನಪಡಿಸಿ, ಒಳಗೆ ಹೋಗಿ ಒಂದಿಷ್ಟು ಅನ್ನ ಕಲಸಿಕೊಂಡು  ಬಂದು ಅಮ್ಮನಿಗೆ ತಿನ್ನಿಸಿದಳು. ಮಗಳು ಬಂದ ಗೆಲುವಿನಲ್ಲಿ ರತ್ನಮ್ಮ 2 ತುತ್ತು ಹೆಚ್ಚಾಗಿಯೇ ತಿಂದರು.

ಅವರನ್ನು ಸಮಾಧಾನಪಡಿಸಿ ಮಲಗಿಸಿದ ಮೇಲೆ ಹಾಲ್‌ಗೆ ಬಂದು ನೋಡುತ್ತಾಳೆ, ಮೇಲಿನ ಮಹಡಿ ಪೋರ್ಶನ್‌ನಲ್ಲಿದ್ದ ಉಳಿದ ಚಿಕ್ಕಮ್ಮ, ಚಿಕ್ಕಪ್ಪ, ಅಣ್ಣಂದಿರು, ಹೊಸ ಸೊಸೆಯರು ಎಲ್ಲರೂ ಅಮೆರಿಕಾದಿಂದ ಬಂದಿಳಿದ ತಮ್ಮ ಒಬ್ಬಳೇ ನಾದಿನಿಯನ್ನು ನೋಡಲು ಕುತೂಹಲಗೊಂಡಿದ್ದರು. ಎಲ್ಲರೊಂದಿಗೂ ಹಾರ್ದಿಕವಾಗಿ ಮಾತನಾಡಿದ ಅವಳು, ಅವಸರದಲ್ಲಿ ಹೊರಟು ಬಂದಿದ್ದರಿಂದ ಯಾರಿಗೂ ಏನೂ ಉಡುಗೊರೆ ತರಲಿಲ್ಲ, ಮುಂದಿನ ಸಲ ತರುವುದಾಗಿ ಹೇಳಿದಳು.

“ನೀನು ನಮ್ಮನ್ನು ನೋಡಲು ಬಂದಿದ್ದೇ ದೊಡ್ಡ  ಉಡುಗೊರೆ….” ಅಜ್ಜಿ ಬೊಚ್ಚು ಬಾಯಿ ಬಿಟ್ಟು ನಕ್ಕಾಗ ಎಲ್ಲರೂ ದನಿಗೂಡಿಸಿದರು. ಅಂದು ಎಲ್ಲರ ಜೊತೆ ತೃಪ್ತಿಯಾಗಿ ಊಟ ಮಾಡಿದ ಅವಳಿಗೆ, ಬಹಳ ದಿನಗಳ ನಂತರ ಕಣ್ತುಂಬಾ ನಿದ್ದೆ ಬಂತು. ಎಲ್ಲರ ಒತ್ತಾಯದ ಮೇರೆಗೆ ಹೋಟೆಲ್‌ನಲ್ಲಿ ತಂಗಿದ್ದವಳು, ಅಲ್ಲಿ ಖಾಲಿ ಮಾಡಿ ಅಮ್ಮನ ಕೋಣೆಗೆ ಲಗೇಜ್‌ತಂದಿರಿಸಿಕೊಂಡಳು.

2 ದಿನ ಹೋದದ್ದೇ ಗೊತ್ತಾಗಲಿಲ್ಲ. ತಾನು ಇದ್ದ ಮನೆಯ ವಾತಾವರಣ ಎಷ್ಟು ಬದಲಾಗಿದೆ, ಓದಿದ ಕಾಲೇಜು, ಸುತ್ತಲ ಪರಿಸರ ಎಲ್ಲಾ ಸುತ್ತಾಡಿ ಹಳೆಯ ಗೆಳತಿಯರನ್ನೂ ಭೇಟಿ ಮಾಡಿ ಬಂದಳು. ಅಭ್ಯಾಸ ಬಲದಿಂದ ಆ ಸಂಜೆ ಹಿಂದಿನದನ್ನು ನೆನಪಿಸಿಕೊಳ್ಳುತ್ತಾ ಮಹಡಿ ಹತ್ತಿ ಬಂದು ನೋಡುತ್ತಾಳೆ….. ವೀಣಾ ಆಂಟಿಯ ಆ ಬದಿ ಭಾಗದಲ್ಲಿ ಅದೇ ಸುಮಂತ್‌! ಈಗ ವಯೋಸಹಜವಾಗಿ ಮೈ ತುಂಬಿಕೊಂಡು, ಕನ್ನಡಕ ಧರಿಸಿ, ವೃತ್ತಿ ಧರ್ಮದಿಂದ ಗಂಭೀರನಾಗಿ ಕಾಣುತ್ತಿದ್ದ.

ಸೀಮಾ ಶಾಕ್‌ ಆಗಿ ಅವನನ್ನೇ ನೋಡುತ್ತಾ ನಿಂತಳು. ಹಿಂದಿನ ಹಾಗೆಯೇ ಕಾಂಪೌಂಡ್‌ ಗೋಡೆ ದಾಟಿ ಅವನು ಈ ಕಡೆ ಬಂದ.

“ಸುಮಂತ್‌…. ನೀನು…. ನೀವು …. ಇಲ್ಲಿ……” ಮಾತು ಹೊರಡದೆ ಸೀಮಾಳ ಕಂಠ ತುಂಬಿ ಬಂತು.

ಒಂದೇ ಕ್ಷಣದಲ್ಲಿ ಓಡಿ ಬಂದು ಅವಳನ್ನು ಅಪ್ಪಿ ತನ್ನ ಎದೆಗೆ ಆನಿಸಿಕೊಂಡ ಸುಮಂತ್‌, “ನಾನು ಮಾತ್ರ ನೀನಿಲ್ಲದೆ ನೆಮ್ಮದಿಯಾಗಿದ್ದೆ ಅಂದುಕೊಂಡೆಯಾ ಸೀಮಾ….” ಎಂದಾಗ ಸೀಮಾ ಮತ್ತಷ್ಟು ಬಿಕ್ಕಳಿಸಿದಳು.

“ಈ 10 ವರ್ಷಗಳಲ್ಲಿ ಏನೇನೋ ಆಗಿಹೋಯಿತು…..”

“ಏನಾದರೂ ಆಗಿರಲಿ, ನಮ್ಮಿಬ್ಬರ ಜೀವಗಳು ಮಾತ್ರ ಪರಸ್ಪರಿಗಾಗಿ ತುಡಿಯುತ್ತಾ ಹಾಗೇ ಉಳಿದಿವೆ…..” ಸುಮಂತ್‌ ಅವಳನ್ನು ಸಾಂತ್ವನಗೊಳಿಸಿದ.

“ಮತ್ತೆ ನಿನ್ನ ಮದುವೆ….”

“ನೀನಿಲ್ಲದೆ ನನಗೆ ಅದೆಲ್ಲ ಬೇಕಾಗುತ್ತದೆಯೇ….” ಅವಳು ಮತ್ತಷ್ಟು ಬಿಕ್ಕಿದಳು.

ಆಗ ಆ ಕಡೆಯಿಂದ ವೀಣಾ ಆಂಟಿ ಬಂದರು, “ನೀನು ಬಂದ ತಕ್ಷಣ ಫೋನ್‌ ಮಾಡಿ ವಿಷಯ ತಿಳಿಸಿದೆ ಸೀಮಾ, ಬೆಂಗಳೂರಿನಿಂದ ಈಗ ತಾನೇ ಬಂದಿಳಿದ…. ಅಬ್ಬಾ, ಕೊನೆಗೂ ನೀವು ಒಂದಾದಿರಲ್ಲ….. ಈಗ ನನ್ನ ಜೀವಕ್ಕೆ ನೆಮ್ಮದಿ,” ಎಂದರು.

ಅಷ್ಟರಲ್ಲಿ ಅವಳ ಮನೆಯವರೆಲ್ಲ ಮಹಡಿಗೆ ಬಂದು ಸೇರಿದ್ದರು. ಸಂಕೋಚದಿಂದ ದೂರ ನಿಂತಿದ್ದ ಇಬ್ಬರನ್ನೂ ಹತ್ತಿರ ನಿಲ್ಲಿಸಿ, ಅವರ ಕೈಗಳನ್ನು ಹಿಡಿಸಿದರು. ಎಲ್ಲರ ಮುಖದಲ್ಲೂ ಸಮ್ಮತಿಯ ನಗುವಿತ್ತು. ಸೀಮಾಳ ಪ್ರೇಮ ಕೊನೆಗೂ ಸಫಲಗೊಂಡಿತ್ತು!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ